ಅಭಿವೃದ್ಧಿ ಅಧ್ಯಯನ ವಿಭಾಗವು ಕಳೆದ ಐದಾರು ವರ್ಷಗಳಿಂದ ಸಹಭಾಗಿತ್ವವಾದಿ ಅಭಿವೃದ್ಧಿ ನೀತಿ ನಿರೂಪಣೆ ಹಾಗೂ ಅನುಷ್ಠಾನ ಕುರಿತಂತೆ ತರಬೇತಿ, ಕಮ್ಮಟ, ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿದೆ. ತಳಮಟ್ಟದ ಅಭಿವೃದ್ಧಿ ಅಧಿಕಾರಿ ಗಳಿಗೆ, ಜನಪ್ರತಿನಿಧಿಗಳಿಗೆ ಮತ್ತು ಜನಸಾಮಾನ್ಯರಿಗೆ ಅಭಿವೃದ್ಧಿ ನೀತಿ ನಿರೂಪಣೆ ಮತ್ತು ಅನುಷ್ಠಾನ ಕುರಿತಂತೆ ಇರುವ ಗೊಂದಲಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ಅದಕ್ಕೆ ಬೇಕಾಗುವ ಕಾರ್ಯತಂತ್ರಗಳನ್ನು ಕಂಡುಕೊಳ್ಳುವಂತೆ ಮಾಡುವುದು  ಇಂತಹ ಕಮ್ಮಟಗಳ ಪ್ರಮುಖ ಉದ್ದೇಶ. ಈ ಹಿನ್ನೆಲೆಯಲ್ಲಿ ವಿಭಾಗವು ದಿನಾಂಕ: ೧೭ ಮತ್ತು ೧೮ ಮಾರ್ಚ್ ೨೦೦೯ರಂದು ಹೊಸಪೇಟೆ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ದಿನಗಳ ಕಾಲ ಅಂಗನವಾಡಿ ಕೇಂದ್ರಗಳು ಮತ್ತು ಗ್ರಾಮೀಣ ಅಭಿವೃದ್ಧಿ ಎನ್ನುವ ವಿಷಯ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಗಾರದಲ್ಲಿ ಹೊಸಪೇಟೆ ತಾಲ್ಲೂಕಿನ ಆಯ್ದ ಸುಮಾರು ಐವತ್ತಾರು ಅಂಗನವಾಡಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಐವತ್ತಾರು ಕಾರ್ಯಕರ್ತರು ಭಾಗ ವಹಿಸಿದ್ದರು.

ಗ್ರಾಮೀಣ ಭಾಗದಲ್ಲಿ ಮಗು ಜನಿಸಿದ ಆರಂಭದಿಂದ ಅದರ ಬೆಳವಣಿಗೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವವರು ಅಂಗನವಾಡಿ ಕಾರ್ಯಕರ್ತೆಯರು. ಆರು ತಿಂಗಳಿಂದ ಆರು ವರ್ಷದವರೆಗಿನ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪ್ರೋಟಿನ್‌ಯುಕ್ತ ಪೌಷ್ಟಿಕ ಆಹಾರವನ್ನು ವಿತರಿಸುವುದರ ಜೊತೆಗೆ ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಮಕ್ಕಳಿಗೆ ರೋಗನಿರೋಧಕ ಚುಚ್ಚುಮದ್ದು ಸೇವೆ, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ಆರೋಗ್ಯ ಮತ್ತು ಪೌಷ್ಟಿಕತೆ ಹಾಗೂ ಶಿಕ್ಷಣದ ಸೇವೆಯಂತಹ ಜವಾಬ್ದಾರಿಯುತ ಕೆಲಸಗಳನ್ನು ಗ್ರಾಮ ಮಟ್ಟದಲ್ಲಿ ನಿರ್ವಹಿಸುತ್ತಾ ಬರುತ್ತಿದ್ದಾರೆ. ಈ ರೀತಿಯ ಸೇವಾ ಸಂದರ್ಭ ದಲ್ಲಿಯ ಇವರ ಕಾರ್ಯಕ್ಷಮತೆಯನ್ನು ಮತ್ತು ಇವರು ಎದುರಿಸುತ್ತಿರುವ ತೊಂದರೆಗಳು, ತೊಡಕುಗಳನ್ನು ಅಭ್ಯಸಿಸುವ ಉದ್ದೇಶಕ್ಕಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳ ಲಾಗಿತ್ತು. ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಚರ್ಚಿತವಾದ ಪ್ರಮುಖ ಅಂಶಗಳನ್ನು ಈ ಹೊತ್ತಿಗೆಯಲ್ಲಿ ನೀಡಲಾಗಿದೆ.

ಈ ಲೇಖನವನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಂಡು ವಿಶ್ಲೇಷಿಸಲಾಗಿದೆ. ಮೊದಲ ಭಾಗದಲ್ಲಿ ಅಂಗನವಾಡಿ ಕೇಂದ್ರಗಳ ಆರಂಭದ ಹಿನ್ನೆಲೆ, ಅವುಗಳ ಕರ್ತವ್ಯ, ಸಾಧನೆ, ಉಪಯುಕ್ತತೆ ಕುರಿತ ಪ್ರಾಸ್ತಾವಿಕ ವಿಚಾರವನ್ನು ಮಂಡಿಸಲಾಗಿದೆ. ಎರಡನೆ ಭಾಗದಲ್ಲಿ ಕಾರ್ಯಾಗಾರದ ವಿಧಾನ ಮತ್ತು  ವರದಿಯನ್ನು ನೀಡಲಾಗಿದೆ. ಮೂರನೆಯ ಭಾಗದಲ್ಲಿ ಪ್ರಶ್ನಾವಳಿಯಿಂದ ಹೊರಬಂದಿರುವ ಮಾಹಿತಿಯ ಕೋಷ್ಟಕ ಗಳನ್ನು ನೀಡಲಾಗಿದೆ.

ಭಾಗ

ಮಾನವ ಅಭಿವೃದ್ಧಿಯ

[1] ದೃಷ್ಟಿಯಿಂದ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳು ಮತ್ತು ಅವುಗಳ ಕಾರ್ಯವ್ಯಾಪ್ತಿ ಕುರಿತು ಚರ್ಚಿಸುವುದು ಇಂದು ಬಹಳ ಮುಖ್ಯವಾಗಿದೆ ಮತ್ತು ಪ್ರಸ್ತುತವಾಗಿದೆ. ಏಕೆಂದರೆ ಅಂಗನವಾಡಿಗಳು ಗ್ರಾಮೀಣ ಭಾಗದ ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಮತ್ತು ಪೌಷ್ಟಿಕತೆಯ  ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಸ್ಥಾನವನ್ನು ಇಂದು ಪಡೆದಿವೆ.  ಆಂಗನವಾಡಿ ಕೇಂದ್ರಗಳು ಕೇವಲ ಶಿಕ್ಷಣ ಕೇಂದ್ರಗಳಲ್ಲದೆ, ಇವು ಆರೋಗ್ಯ ಕೇಂದ್ರಗಳಾಗಿ; ಪೌಷ್ಟಿಕ ಆಹಾರದ ಕೇಂದ್ರಗಳಾಗಿ; ಸ್ತ್ರೀ-ಶಕ್ತಿ ಸಂಘಟನೆ ಮತ್ತು ನಿರ್ವಹಣೆಯ ಕೇಂದ್ರಗಳಾಗಿ; ಗ್ರಾಮದ ಒಟ್ಟಾರೆ ಅಭಿವೃದ್ಧಿಗೆ ಹಲವು ರೀತಿಯ ಮಾಹಿತಿಯನ್ನು ನೀಡುವ ಮತ್ತು ಮಾಹಿತಿಯನ್ನು ಪಡೆಯುವ ಕೇಂದ್ರಗಳಾಗಿ ಕೆಲಸ ನಿರ್ವಹಿಸು ತ್ತಿರುವುದು ವಿಶೇಷವಾಗಿದೆ.

ಈ ಅಂಗನವಾಡಿ ಅಥವಾ ಬಾಲವಾಡಿ ಅಥವಾ ಕಿಂಡರ‍್ಸ್‌ಗಾರ್ಡನ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಕೇಂದ್ರವು ವಿಶೇಷವಾದುದಾಗಿದೆ. ಕಿಂಡರಗಾರ್ಟನ್ ಎಂಬ ಜರ್ಮನ್ ಶಬ್ದಕ್ಕೆ ಮಕ್ಕಳ ತೋಟ ಎನ್ನುವ ಅರ್ಥ. ಶಾಲೆಯೇ ತೋಟ, ಮಕ್ಕಳೇ ಅದರಲ್ಲಿ ಬೆಳೆಯುವ ಸಸಿಗಳು. ಉಪಾಧ್ಯಾಯನೇ ತೋಟಗಾರನು ಎಂದು ಜರ್ಮನಿಯ ಪ್ರೊಬೆಲ(೧೭೮೨-೧೮೫೨) ಅವರು ಕಲ್ಪಿಸಿ ಈ ವಿಶೇಷವಾದ ಹೆಸರನ್ನು ಸಣ್ಣ ಮಕ್ಕಳ ಶಾಲೆಗಳಿಗೆ ಕೊಟ್ಟಿರುತ್ತಾನೆ. ಮಕ್ಕಳನ್ನು ಬೀಜ, ಮೊಳಕೆ, ಸಸಿಗಳಿಗೆ ಹೋಲಿಸಿ ಇವುಗಳ ಉತ್ತಮ ಬೆಳವಣಿಗೆಗೆ ಅಶ್ರಯವಾದ ನೆಲವನ್ನು ಹದಗೊಳಿಸಿ ಬಿಸಿಲು, ಗಾಳಿ, ನೀರು ಚೆನ್ನಾಗಿ ಸಸಿಗಳಿಗೆ ಸಿಗುವಂತೆ ಏರ್ಪಡಿಸಿ, ಅವಕ್ಕೆ ಸರಿಯಾದ ಗೊಬ್ಬರವನ್ನಿಟ್ಟರೆ ಮುಂದೆ ಆ ಸಸಿಗಳು ಹುಲುಸಾಗಿ ಬೆಳೆದು ಒಳ್ಳೆಯ ಹೂವನ್ನು, ಫಸಲನ್ನೂ ಕೊಡುತ್ತವೆ. ಹಾಗೆಯೇ ಮಕ್ಕಳಲ್ಲಿ ಸ್ವಾಭಾವಿಕವಾದ ಶಕ್ತಿಗಳಿಗೆ ತಕ್ಕ ವ್ಯವಸಾಯ ಮಾಡಿ ಅವು ಸ್ಪೂರ್ತಿಗೆ ಬರುವಂತೆ ಮಾಡಿದರೆ  ಮಾತ್ರ  ಮುಂದೆ ಅವು ತಾವಾಗಿಯೇ ಜ್ಞಾನಾರ್ಜನೆ ಮಾಡಲು ಶಕ್ತರಾಗುವವು ಎಂಬುದು ಪ್ರೊಬೆಲನ ಅಭಿಮತವಾಗಿರುತ್ತದೆ. ಈ ಅಭಿಮತಕ್ಕನುಸಾರವಾಗಿ ಶಿಕ್ಷಣ ಒದಗಿಸುವ ಶಾಲೆಗಳಿಗೂ ಮುಂದೆ ಅಲ್ಲಿ ಕಲಿಸುವ ಕ್ರಮಕ್ಕೂ ಕಿಂಡರಗಾರ್ಟನ್ ಎಂಬ ಹೆಸರು ಬಂದಿರುತ್ತದೆ. ಇವನ್ನು ಭಾರತದಲ್ಲಿ ಅಂಗನವಾಡಿ ಅಥವಾ ಬಾಲವಾಡಿಗಳೆಂದು ಕರೆಯಲಾಗುತ್ತಿದೆ.

೧೯೩೪ರಿಂದ ೧೯೩೯ರವರೆಗೆ ನಡೆದ ಎರಡನೆಯ ಮಹಾಯುದ್ಧ ಜಗತ್ತಿನ ಎಲ್ಲೆಡೆ ದುರಂತಗಳ ಸರಮಾಲೆಯನ್ನೇ ಸೃಷ್ಟಿಸಿತ್ತು. ರೋಗಗಳ ಬಾದೆ, ನಿರಾಶ್ರಿತರು, ಹಸಿವು, ರಕ್ಷಣೆಯಿಲ್ಲದ ಮಕ್ಕಳು. ಈ ರೀತಿಯ ಅನೇಕ ಸಮಸ್ಯೆಗಳು, ತೊಂದರೆಗಳು ಹೆಚ್ಚಾಗಿದ್ದವು. ಬಡರಾಷ್ಟ್ರಗಳಿರಲಿ, ಮುಂದುವರೆದ ರಾಷ್ಟ್ರಗಳಲ್ಲೇ ಮಕ್ಕಳ ಬದುಕಿನ ಬಗ್ಗೆ ಆತಂಕ ಸೃಷ್ಟಿಯಾಗಿರುತ್ತದೆ. ಅಂಥ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಯುನೈಟೆಡ್ ನೇಶನ್ಸ್ ಇಂಟರ್ ನ್ಯಾಷನಲ್ ಚಿಲ್ಡ್ರನ್ಸ್ ಎಮರ್ಜೆನ್ಸಿ ಫಂಡ್(ಮಕ್ಕಳಿಗಾಗಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ತುರ್ತುನಿಧಿ)ಅನ್ನು ಸ್ಥಾಪಿಸಿತು. ಆ ಮುಖಾಂತರ ಜಗತ್ತಿನಾದ್ಯಂತ ಅಭಿವೃದ್ಧಿಶೀಲ ರಾಷ್ಟ್ರಗಳ ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿಗೆ ಸಹಾಯ ನೀಡಲು ಮುಂದಾಯಿತು.

ಯೂರೋಪಿನ ರಾಷ್ಟ್ರಗಳಿಗೆ ಅಂದಿನಿಂದಲೇ ಸಹಕಾರ ನೀಡುತ್ತಾ ಬಂದ ಈ ಯುನಿಸೆಫ್, ಭಾರತ ಸರಕಾರದ ಜೊತೆಗೂಡಿ ೧೯೭೫ರ ಮಾರ್ಚ್ ತಿಂಗಳಲ್ಲಿ ಐಸಿಡಿಎಸ್ (ಇಂಟಿಗ್ರೇಟೆಡ್ ಚೈಲ್ಡ್ ಡೆವಲಂಪ್‌ಮೆಂಟ್ ಸ್ಕೀಮ್) ಎಂಬ ಕಾರ್ಯಕ್ರಮ ವನ್ನು ಅಂಗನವಾಡಿಗಳ ಮೂಲಕ ಜಾರಿಗೆ ತಂದಿತು. ಆ ಮೂಲಕ ಅಪೌಷ್ಟಿಕತೆಯ ಕಾರಣದಿಂದ ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಮತ್ತು ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಿಗೆ ಬೇಕಾಗುವ ಪೌಷ್ಟಿಕಾಂಶವುಳ್ಳ ಆಹಾರವನ್ನು ಪೂರೈಸುವ ಕೆಲಸ ಆರಂಭಿಸಲಾಯಿತು. ಇಷ್ಟು ವರ್ಷ ಕಳೆದರೂ ಇವತ್ತಿಗೂ ಕೂಡ ಗ್ರಾಮೀಣ ಭಾಗದ ಶೇ. ೪೦ಕ್ಕಿಂತ ಹೆಚ್ಚು ಜನರು ಆಹಾರ ಅಭದ್ರತೆಯಿಂದ ನರಳುತ್ತಿದ್ದಾರೆ. ಅವರು ಅರೆ-ಬರೆಹೊಟ್ಟೆಯಲ್ಲಿ ಜೀವಿಸುತ್ತಿದ್ದಾರೆ (ಎಂ. ನಾರಾಯಣ-೨೦೦೭). ಬಹುತೇಕ ಗ್ರಾಮೀಣ ಭಾರತೀಯರು ಆಹಾರದ ಕೊರತೆ, ಅನಕ್ಷರತೆ ಮತ್ತು ಅಪೌಷ್ಟಿಕಾಂಶ ಅಥವಾ ಸಮತೋಲನ ಆಹಾರದ ಪರಿಕಲ್ಪನೆಯಿಲ್ಲದೆ ನ್ಯೂನ ಪೋಷಣೆಗ ಒಳಗಾಗಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ. ೬೦ರಷ್ಟು ಶಾಲಾ ಪೂರ್ವ ಮಕ್ಕಳು ನ್ಯೂನಪೋಷಣೆಯಿಂದ ನರಳುತ್ತಿದ್ದಾರೆ. ಭಾರತದಲ್ಲಿ ಪ್ರತಿಶತ ೩೩ ಮಕ್ಕಳು ಜನಿಸಿದಾಗ ೨೫೦೦ಗ್ರಾಂಗಿಂತ ಕಡಿಮೆ ತೂಕವನ್ನು ಹೊಂದಿದ್ದು, ಇದು ನಂತರದ ಬೌದ್ಧಿಕ, ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುತ್ತದೆ(ಯು.ನಿ.ಸೆ.ಫ್-೨೦೦೭). ಹೀಗಾಗಿ ಜನಿಸಿದ ನಂತರ ಹಾಗೂ ಆರು ವರ್ಷಗಳವರೆಗೆ ಮಕ್ಕಳಿಗೆ ಸಾಕಷ್ಟು ಸಮತೂಕದ ಪೌಷ್ಟಿಕ ಆಹಾರ ಒದಗಿಸ ಬೇಕಾಗುತ್ತದೆ.

ಎಳೆಯ ಮಕ್ಕಳ ಪ್ರಮಾಣ

೧೯೯೧ರ ಜನಗಣತಿ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ ೪೪೯.೭೭ ಲಕ್ಷಗಳಿದ್ದಾಗ ಇದರಲ್ಲಿ ೦-೬ ವಯೋಮಾನದ ಮಕ್ಕಳ ಸಂಖ್ಯೆ ೭೪.೭೭ ಲಕ್ಷಗಳಾಗಿತ್ತು. ಅಂದರೆ ಸಾಪೇಕ್ಷವಾಗಿ ಅದು ಶೇ. ೧೬.೬೩ರಷ್ಟಾಗಿತ್ತು. ಜನಸಂಖ್ಯೆಯಲ್ಲಿ ೦-೧೫ ವಯೋಮಾನದ ಮಕ್ಕಳನ್ನು ತೆಗೆದುಕೊಂಡರೆ ಅವರ ಪ್ರಮಾಣವು ಶೇ. ೩೬.೦೧ರಷ್ಟಿದೆ. ಅದೇ ಪ್ರಕಾರವಾಗಿ ೨೦೦೧ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆ ೫೨೭.೩೪ ಲಕ್ಷಗಳು. ಇದರಲ್ಲಿ ಎಳೆಯ[2] ಮಕ್ಕಳ ಸಂಖ್ಯೆ (೦-೬) ೬೮.೨೬ ಲಕ್ಷ. ಅಂದರೆ ಸಾಪೇಕ್ಷವಾಗಿ ಅದು ಶೇ. ೧೨.೯೪ರಷ್ಟಿದೆ. ಅಂದರೆ ೧೯೯೧ರಿಂದ ೨೦೦೧ರ ಅವಧಿಯಲ್ಲಿ ಎಳೆಯ ಮಕ್ಕಳ ಪ್ರಮಾಣವು ಶೇ. ೧೬.೬೩ ರಿಂದ ಶೇ. ೧೨.೯೪ಕ್ಕೆ ಇಳಿದಿದೆ. ಅಭಿವೃದ್ಧಿಶೀಲ ದೇಶಗಳಲ್ಲಿನ ಜನಸಂಖ್ಯೆಯಲ್ಲಿ ಎಳೆಯ ವಯಸ್ಸಿನ ಮಕ್ಕಳ ಪ್ರಮಾಣ ಸಾಪೇಕ್ಷವಾಗಿ ಅಧಿಕವಾಗಿರುತ್ತದೆ. ಜನಸಂಖ್ಯೆ ವೇಗವಾಗಿ ಬೆಳೆಯುವಾಗ ಇದು ಸಹಜ. ಮುಂದುವರೆದ ದೇಶಗಳಲ್ಲಿಯ ಜನಸಂಖ್ಯೆ ಯಲ್ಲಿ ೧೫ ವರ್ಷದೊಳಗಿನ ಮಕ್ಕಳ ಪ್ರಮಾಣ ಸುಮಾರು ಶೇ. ೧೦ ರಷ್ಟಿರುತ್ತದೆ. ಆದರೆ ಅಭಿವೃದ್ಧಿಶೀಲ ದೇಶಗಳಲ್ಲಿನ ಜನಸಂಖ್ಯೆಯಲ್ಲಿ ಎಳೆಯ ವಯಸ್ಸಿನ ಮಕ್ಕಳ ಪ್ರಮಾಣವು ಶೇ. ೩೦ರಿಂದ ಶೇ. ೪೦ರಷ್ಟಿರುತ್ತದೆ (ಚಂದ್ರಶೇಖರ ಟಿ.ಆರ್-೨೦೦೩). ಈ ಅತಿಯಾದ ಮಕ್ಕಳನ್ನು ವಯೋಮಾನಕ್ಕನುಗುಣವಾಗಿ ವಯಸ್ಸಿಗೆ ತಕ್ಕ ತೂಕ, ವಯಸ್ಸಿಗೆ ತಕ್ಕ ಎತ್ತರ, ಎತ್ತರಕ್ಕೆ ತಕ್ಕ ತೂಕ (ಇದನ್ನು ಬಾಡಿ ಮಾಸ್ ಇಂಡೆಕ್ಸ್ ಎಂದು ಕರೆಯುತ್ತಾರೆ) ಇರುವಂತೆ ಸಾಕುವುದು ಜವಾಬ್ದಾರಿಯುತ ಕರ್ತವ್ಯವಾಗಿದೆ.

ಅದೇ ಪ್ರಕಾರವಾಗಿ ನಮ್ಮ ದೇಶದಲ್ಲಿ ಒಬ್ಬ ಮನುಷ್ಯನಿಗೆ ಪ್ರತಿದಿನ ಅವಶ್ಯವಿರುವ ೨೭೦೦ ಕ್ಯಾಲೋರಿ ಆಹಾರದ ಬದಲು, ೧೮೦೦ ಕ್ಯಾಲೋರಿ ಆಹಾರ ಸೇವಿಸುತ್ತಿದ್ದಾರೆ. ಈ ಪ್ರಮಾಣವು ಹಳ್ಳಿಗಳಲ್ಲಿ ಇನ್ನೂ ಕಡಿಮೆ. ಇದಕ್ಕಾಗಿ ಪೌಷ್ಟಿಕ ಆಹಾರ ಯೋಜನೆ ಎ.ಎನ್.ಪಿ. (ಅಪ್ಲೈಡ್ ನ್ಯೂಟ್ರಿಶನ್ ಪ್ರೋಗ್ರಾಂ) ಎಂಬ ಅಂತರಾಷ್ಟ್ರೀಯ ಮಕ್ಕಳ ಶೈಕ್ಷಣಿಕ ನಿಧಿಯ ಸಹಯೋಗದಿಂದ ಕೇಂದ್ರ ಸರಕಾರವು ಪೌಷ್ಟಿಕ ಆಹಾರ ಕಾರ್ಯಕ್ರಮವನ್ನು ೧೯೭೫ರಂದು ಜಾರಿಗೆ ತಂದಿತು. ಕರ್ನಾಟಕದಲ್ಲಿ ೧೯೭೫ರ ಅಕ್ಟೋಬರ್ ೨ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಒಂದು ಪ್ರಮುಖ ಯೋಜನೆಯಾಗಿ ಇದನ್ನು ಆರಂಭಿಸ ಲಾಯಿತು. ಇದು ವಿವಿದೋದ್ದೇಶ ಕಾರ್ಯಕ್ರಮವಾಗಿದ್ದು ೦-೬ ವಯೋಮಾನದ ಮಕ್ಕಳ, ಗರ್ಭಿಣಿ ಮಹಿಳೆಯರ ಹಾಗೂ ಹಾಲುಣಿಸುತ್ತಿರುವ ತಾಯಂದಿರ ಪೌಷ್ಟಿಕತಾ ಮಟ್ಟ ಮತ್ತು ಆರೋಗ್ಯವನ್ನು ಉತ್ತಮಪಡಿಸುವುದು ಇದರ ಉದ್ದೇಶ ವಾಗಿರುತ್ತದೆ. ಈ ಯೋಜನೆಯು ಪ್ರಸ್ತುತ ರಾಜ್ಯದಲ್ಲಿ ೧೭೫ ತಾಲ್ಲೂಕುಗಳಿಂದ ೧೬೬ ಗ್ರಾಮೀಣ ಪ್ರದೇಶಗಳು, ೯ ಬುಡಕಟ್ಟು ಮತ್ತು ೧೦ ನಗರ ಪ್ರದೇಶಗಳಿಗೆ ವಿಸ್ತರಣೆಗೊಂಡಿದೆ. ಇದರಡಿ ೫೧೬೧೪ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ (ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ವರದಿ, ೧೯೯೯-೧೪೩ ಮತ್ತು ೨೦೦೫-೧೫೭).

ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಾನಂತರ ಕರ್ನಾಟಕದಲ್ಲಿ ಆರೋಗ್ಯ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅನೇಕ ಮಹತ್ತರವಾದ ಸಾಧನೆಗಳನ್ನು ಮಾಡಲಾಗಿದೆ. ಅದು ೧೯೫೧ ಮತ್ತು ೨೦೦೧ರ ನಡುವೆ ಪುರುಷ ಮತ್ತು ಮಹಿಳೆಯರ ಆಯುರ್ನಿರೀಕ್ಷೆಯು ಕ್ರಮವಾಗಿ ೩೭.೧೫ ವರ್ಷಗಳಿಂದ ೬೫.೬ ವರ್ಷಗಳಿಗೆ ಹಾಗೂ ೩೬.೧ ವರ್ಷಗಳಿಂದ ೬೬.೬ ವರ್ಷಗಳಿಗೆ ಏರಿಕೆಯಾಗಿದೆ. ಮಾನವ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಮಾನವ ಬಹಳ ವರ್ಷ ಆರೋಗ್ಯಯುತ ಜೀವನ ನಡೆಸಿದರೆ ಹೆಚ್ಚು ದುಡಿಯುವ ಶಕ್ತಿಯನ್ನು ಹೊಂದಬಲ್ಲ. ಆ ಮುಖಾಂತರ ರಾಷ್ಟ್ರಾದಾಯ ಹೆಚ್ಚಾಗಬಲ್ಲದು, ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಯಾಗಬಲ್ಲದು ಎಂದಿರುತ್ತದೆ. ೬೦ ವರ್ಷಗಳ ಹಿಂದಿನ ಒಬ್ಬ ವ್ಯಕ್ತಿಯ ಆಯಸ್ಸಿಗೆ ಈಗಿನ ಆಯಸ್ಸನ್ನು ಹೋಲಿಸಿದರೆ ಮುಂದುವರೆದ ರಾಷ್ಟ್ರಗಳಿಗೆ ಸಮಾನವಾಗಿ ಯಲ್ಲದಿದ್ದರೂ ಉತ್ತಮ ಜೀವಿತಾವಧಿಯನ್ನು ಹೊಂದಿದ ಮಟ್ಟವನ್ನು ತಲುಪಿದ್ದೇವೆ ಅನ್ನಿಸುತ್ತದೆ. ಅದೇ ರೀತಿ ಶಿಶುಮರಣ ಪ್ರಮಾಣವು (ಐ.ಎಂ.ಆರ್) ೧೯೫೧ರಲ್ಲಿ ೧೦೦೦ ಜೀವಂತ ಜನನಗಳಿಗೆ ೧೪೮ರಷ್ಟಿದ್ದುದು ೧೯೯೧ರಲ್ಲಿ ೬೯ಕ್ಕೆ ಇಳಿದಿದೆ. ಮತ್ತು ೨೦೦೩ರ ವೇಳೆಗೆ ೫೨ಕ್ಕೆ ಮತ್ತಷ್ಟು ಇಳಿದಿದೆ (ಎಸ್.ಆರ್.ಎಸ್., ೨೦೦೦; ಕರ್ನಾಟಕ ಮಾನವ ಅಭಿವೃದ್ಧಿ ವರದಿ ೨೦೦೫-೧೪೫). ಕಚ್ಚಾ ಜನನಪ್ರಮಾಣವು ೧೯೫೧ರಲ್ಲಿ ಒಂದು ಸಾವಿರಕ್ಕೆ ೪೦.೮ರಿಂದ ೨೦೦೨ರಲ್ಲಿ ೨೨.೧೦ಗೆ ಇಳಿದಿದೆ. ಕಚ್ಚಾ ಜನನದ ಸಂದರ್ಭದಲ್ಲಾಗುವ ತಾಯಂದಿರ ಮರಣ ಪ್ರಮಾಣವು ೧೯೫೧ರಲ್ಲಿ ೨೫.೧ರಷ್ಟಿದ್ದುದು, ೨೦೦೦ ಇಸವಿಯ ವೇಳೆಗೆ ೭.೮ಕ್ಕೆ ಇಳಿದಿರುತ್ತದೆ.  ಶಿಶುಮರಣ ಪ್ರಮಾಣವು ಸಾವಿರಕ್ಕೆ ೧೯೫೧ರಲ್ಲಿ ೧೪೮ ಇದ್ದದು ೨೦೦೦ ಇಸವಿಯ ವೇಳೆಗೆ ೫೬ಕ್ಕೆ ಇಳಿದಿರುವುದು ಗಮನಾರ್ಹವಾಗಿದೆ(ಕರ್ನಾಟಕ ರಾಜ್ಯ ಸಮಗ್ರ ಆರೋಗ್ಯ ನೀತಿ-೨೦೦೪).

ಇದೇ ಸಂದರ್ಭದಲ್ಲಿ ೨೦೦೧ರ ಜನಗಣತಿಯ ಪ್ರಕಾರ ಮಕ್ಕಳ ಮರಣ ಪ್ರಮಾಣ ಪ್ರತಿ ೧೦೦೦ಕ್ಕೆ ಕರ್ನಾಟಕದಲ್ಲಿ ಒಟ್ಟು ೫೫ ಇದೆ. ಇದರಲ್ಲಿ ಗ್ರಾಮೀಣ ೬೫ ಆದರೆ, ನಗರದಲ್ಲಿ ಇದು ೨೫ ಇರುವುದು ಕಂಡುಬರುತ್ತದೆ.  ಇದರಲ್ಲಿಯ ವ್ಯತ್ಯಾಸವನ್ನು ಗಮನಿಸಿದರೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸೌಲಭ್ಯಗಳ ದೊರೆಯುವಿಕೆ ಮನವರಿಕೆಯಾಗುತ್ತದೆ.  ಇದಲ್ಲದೆ ಪ್ರತಿ ಒಂದು ಲಕ್ಷ ಜೀವಂತ ಹೆರಿಗೆಗೆ ೧೯೫ ತಾಯಂದಿರು ಅಸುನೀಗುತ್ತಿದ್ದಾರೆ. ಪ್ರತಿ ಸಾವಿರ ಜೀವಂತ ಹುಟ್ಟಿದ ಮಕ್ಕಳು ಒಂದು ವಾರದ ಸಮಯದಲ್ಲಿ ೪೭.೮ ಮರಣವನ್ನಪ್ಪುತ್ತಿವೆ, ಒಂದು ವರ್ಷದೊಳಗಿನ ಶಿಶು ಮರಣವು ಪ್ರತಿ ಸಾವಿರಕ್ಕೆ ೫೧.೫ ಇರುತ್ತದೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಹುಟ್ಟಿದ ಮಕ್ಕಳು ಬದುಕುಳಿಯುತ್ತವೆ ಎಂಬ ಭರವಸೆ ತಳೆಯುವುದು ಕಷ್ಟವಾಗುತ್ತದೆ. ಅದೇ ರೀತಿ, ಶೇ. ೩೫ರಷ್ಟು ನವಜಾತ ಶಿಶುಗಳು ಅತಿ ಕಡಿಮೆ ಜನ್ಮತೂಕ (೨.೫ಕಿ. ಗ್ರಾಂಗಿಂತ ಕಡಿಮೆ) ಹೊಂದಿದ್ದು, ೬-೩೫ ತಿಂಗಳ ವಯೋಮಿತಿಯಲ್ಲಿರುವ ಮಕ್ಕಳಲ್ಲಿ ಶೇ. ೭೦.೬ರಷ್ಟು ರಕ್ತಹೀನತೆ, ೧-೬ ವಯಸ್ಸಿನ ಮಕ್ಕಳಲ್ಲಿ ಶೇ. ೪೮.೪ರಷ್ಟು ಅಪೌಷ್ಠಿಕತೆಯಿರುವುದು ಕಂಡುಬರುತ್ತದೆ. (ಆಧಾರ: ಕರ್ನಾಟಕ ರಾಜ್ಯ ಮಕ್ಕಳ ಕ್ರಿಯಾಯೋಜನೆ. ೨೦೦೩-೨೦೧೦, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ, ಕರ್ನಾಟಕ ಸರಕಾರ, ೨೦೦೪). ಇದು ಪ್ರಪಂಚದ ಇತರೆ ರಾಷ್ಟ್ರಗಳಲ್ಲಿ ಹೇಗಿದೆ ಎನ್ನುವುದನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ. ಯುಎನ್‌ಡಿಪಿಯ ಹ್ಯೂಮನ್ ಡೆವೆಲಪ್‌ಮೆಂಟ್ ರಿಪೋರ್ಟ್-೨೦೦೩ರ ಪ್ರಕಾರ                                                  

ರಾಷ್ಟ್ರಗಳು

ಮಕ್ಕಳ ಮರಣ ಪ್ರಮಾಣ ೧೦೦೦  ಮಕ್ಕಳಿಗೆ

ತಾಯಂದಿರ ಮರಣ ಪ್ರಮಾಣ ೧ ಲಕ್ಷ  ಜನನದ ಸಂದರ್ಭಕ್ಕೆ

ಸರಾಸರಿ ಜೀವಿತಾವಧಿ ವರ್ಷಗಳಲ್ಲಿ

ನಾರ್ವೆ

೦೪

೦೬

೭೮.೭

ಆಸ್ಟ್ರೇಲಿಯಾ

೦೬

೭೯.೦

ಯುಎಸ್‌ಎ

೦೭

೦೮

೭೬.೯

ಕೆನಡಾ

೦೫

೭೯.೨

ಯುಕೆ

೦೬

೦೭

೭೭.೯

ಫ್ರಾನ್ಸ್

೦೪

೧೦

೭೮.೭

ಶ್ರೀಲಂಕಾ

೧೭

೯೦

೭೨.೩

ಚೀನಾ

೩೧

೫೫

೭೦.೬

ಭಾರತ

೬೭

೫೪೦

೬೩.೩

ಬಾಂಗ್ಲಾದೇಶ

೫೧

೪೦೦

೬೦.೫

ನೇಪಾಳ

೬೬

೫೪೦

೫೯.೧

ಪಾಕಿಸ್ತಾನ

೮೪

೬೦.೪

ಮೂಲ : ವಿಮೆನ್ ಅಂಡ್ ಮೆನ್ ಇನ್ ಇಂಡಿಯಾ ೨೦೦೪, ಗೌರ‍್ನಮೆಂಟ್ ಆಫ್ ಇಂಡಿಯಾ, ಮಿನಿಸ್ಟ್ರಿ ಆಫ್ ಸ್ಟ್ಯಾಟಿಸ್ಟಿಕ್ಸ್ ಅಂಡ್ ಪ್ರೋಗ್ರಾಮ್ ಇಂಪ್ಲಿಮೆಂಟೇಷನ್, ನ್ಯೂ ಡೆಲ್ಲಿ.

ಮೇಲಿನ ಕೋಷ್ಟಕವನ್ನು ಗಮನಿಸಿದರೆ ಮುಂದುವರೆದ ರಾಷ್ಟ್ರಗಳಾದ ನಾರ್ವೆ, ಫ್ರಾನ್ಸ್, ಕೆನಡಾ ರಾಷ್ಟ್ರಗಳಲ್ಲಿ ಮಕ್ಕಳ ಮರಣ ಪ್ರಮಾಣ ಕೇವಲ ಐದು ಮತ್ತು ಐದಕ್ಕಿಂತ ಕಡಿಮೆ ಇರುವುದು ಗೊತ್ತಾಗುತ್ತದೆ. ಅದೇರೀತಿ ಯುಕೆ, ಆಸ್ಟ್ರೇಲಿಯಾ, ಯು.ಎಸ್.ಎ ರಾಷ್ಟ್ರಗಳಲ್ಲಿ ಮಕ್ಕಳ ಮರಣ ಪ್ರಮಾಣ ಆರು ಮತ್ತು ಏಳು ಇರುವುದು ಗೊತ್ತಾಗುತ್ತದೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳ ರಾಷ್ಟ್ರಗಳನ್ನು ಗಮನಿಸಿದಾಗ ಸರಾಸರಿ ೧೦ರಿಂದ ೧೫ಪಟ್ಟು ಹೆಚ್ಚಾಗಿದ್ದು ತುಂಬಾ ವ್ಯತ್ಯಾಸದಿಂದ ಕೂಡಿರುವುದು ಗೊತ್ತಾಗುತ್ತದೆ. ಮುಂದುವರೆದ ರಾಷ್ಟ್ರಗಳಲ್ಲಿ ಮಹಿಳೆಯರ ಮರಣ ಪ್ರಮಾಣವೂ ತುಂಬಾ ಕಡಿಮೆಯಿರುವುದು ವೇದ್ಯವಾಗುತ್ತದೆ. ಅದೇರೀತಿ ಜೀವಿತಾವಧಿ ಕೂಡ ಹೆಚ್ಚಿರುವುದನ್ನು ಕಾಣಬಹುದಾಗಿದೆ. ಈ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ರಾಷ್ಟ್ರ ಮತ್ತು ರಾಜ್ಯದ ಸ್ಥಾನ ತೀರಾ ತಳಮಟ್ಟದಲ್ಲಿರುವುದು ತಿಳಿಯುತ್ತದೆ. ಈ ಮಟ್ಟವನ್ನು ತಲಪುವುದು ಯಾವಾಗ? ಆ ರಾಷ್ಟ್ರಗಳ ಸಾಲಿಗೆ ಸೇರಬೇಕಾದರೆ ಎಷ್ಟು ಶ್ರಮಿಸಬೇಕು? ಇದಕ್ಕಿರುವ ಕೊರತೆಗಳೇನು? ಎನ್ನುವುದು ಮೂಲ ಪ್ರಶ್ನೆಯಾಗಿದೆ.

ಅದೇರೀತಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ನ್ಯಾಶನಲ್ ಫ್ಯಾಮಿಲಿ ಹೆಲ್ತ್ ಸರ್ವೆ-೩; ೨೦೦೫-೦೬)ಯ ಪ್ರಕಾರ ಭಾರತದಲ್ಲಿ ೧೫ ದಿಂದ ೪೯ ವರ್ಷ ವಯಸ್ಸಿನ ಅನಿಮಿಯಾಕ್ಕೊಳಗಾದ ಮಹಿಳೆಯರ ಪ್ರಮಾಣ ಶೇ. ೫೫.೩ರಷ್ಟಿರುವುದು ಕಂಡುಬರುತ್ತದೆ. ಕರ್ನಾಟಕದಲ್ಲಿ ಇದು ಶೇ. ೫೧.೫ರಷ್ಟಿದ್ದು, ಪಕ್ಕದ ಕೇರಳ ರಾಜ್ಯದಲ್ಲಿ ಇದು ಶೇ. ೩೨.೮ರಷ್ಟಿರುವುದನ್ನು ವರದಿ ಮಾಡಿರುತ್ತದೆ. ಭಾರತಕ್ಕೆ ಹೋಲಿಸಿದರೆ ಕರ್ನಾಟಕದ ಸ್ಥಿತಿಯು ಸ್ವಲ್ಪ ಸಮಾಧಾನ ತರುವಂತಿದೆ. ಆದರೆ ಪಕ್ಕದ ರಾಜ್ಯ ಕೇರಳಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಶೇ. ೧೮.೭ ಅಂಶಗಳಷ್ಟು  ಕಡಿಮೆಯಿರುವುದು ಗೊತ್ತಾಗುತ್ತದೆ. ೧೫ರಿಂದ ೪೯ ವಯೋಮಾನದ ಮಹಿಳೆಯರು ಸಂತಾನೋತ್ಪತ್ತಿ ವಯೋಮಾನದವರಾಗಿರುತ್ತಾರೆ ಮತ್ತು ಅದು ಹೆಚ್ಚು ದುಡಿಯಬಲ್ಲ ವಯಸ್ಸಾಗಿರುತ್ತದೆ. ಆದರೆ ಇವರಲ್ಲಿ ಶೇ. ೫೧.೫ರಷ್ಟು ಮಹಿಳೆಯರು ಅನಿಮಿಕ್ ಇಲ್ಲವೇ ಕಬ್ಬಿಣಾಂಶದ ಕೊರತೆಗೆ ಒಳಗಾಗಿರುವುದಾಗಿ ತಿಳಿಸಿದೆ. ಇದೇ ವರದಿಯ ಪ್ರಕಾರ ಹುಟ್ಟಿದ ಮಕ್ಕಳನ್ನು ತೂಕ ಮಾಡಿಸಿ ದಾಖಲಿಸಿಕೊಂಡು ಎನ್.ಎಫ್.ಎಚ್. ಎಸ್. ಕುಟುಂಬ ಸರ್ವೆ ಸಮಯದಲ್ಲಿ ಉತ್ತರಿಸಿರುವವರ ಕುಟುಂಬಗಳ ಪ್ರಮಾಣ ಭಾರತದಲ್ಲಿ ಕೇವಲ ಶೇ. ೩೪.೧ರಷ್ಟು ಮಾತ್ರ. ಇದು ಕರ್ನಾಟಕದಲ್ಲಿ ಶೇ. ೬೨.೯ ರಷ್ಟು ಇರುವುದಾಗಿಯೂ, ಕೇರಳದಲ್ಲಿ ಶೇ. ೯೭.೦ರಷ್ಟು ಇರುವುದಾಗಿ ವರದಿಯಾಗಿದೆ. ಅಂದರೆ ಕೇರಳದಲ್ಲಿ ಹುಟ್ಟಿದ ಮಕ್ಕಳ ತೂಕ ತಿಳಿಯುವುದು ಎಷ್ಟು ಮಹತ್ವದ್ದು ಅನ್ನುವುದು ಅಲ್ಲಿಯ ಜನರಿಗೆ ಮನವರಿಕೆಯಾಗಿದೆ. ಏಕೆಂದರೆ ಹುಟ್ಟಿದ ಮಗು ೨೫೦೦ಗ್ರಾಂಗಿಂತ ಕಡಿಮೆ ತೂಕವಿದ್ದರೆ ಬದುಕುಳಿಯುವುದು ಕಷ್ಟ. ಇಂತಹ ಸಂದರ್ಭದಲ್ಲಿ ಮಗುವಿಗೆ ಹೆಚ್ಚಿನ ಆರೈಕೆ ಅಗತ್ಯವಾಗುತ್ತದೆ. ಇದಕ್ಕಾಗಿ ಮಕ್ಕಳ ತೂಕ ಪ್ರತಿ ತಿಂಗಳು ನೋಡುವುದು ಅಗತ್ಯ. ಪ್ರತಿ ತಿಂಗಳು ಮಗುವಿನ ತೂಕ ಹೆಚ್ಚಾಗಬೇಕು. ಇಲ್ಲದಿದ್ದರೆ ಮಗುವಿಗೆ ಆರೋಗ್ಯದ ಕೊರತೆಯಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ರೀತಿಯ ಪ್ರಜ್ಞೆ ಕರ್ನಾಟಕದ ಬಹುಪಾಲು ಜನರಲ್ಲಿ ಮೂಡಬೇಕಾಗಿದೆ. ಭಾರತದ ಸಂದರ್ಭದಲ್ಲಿ ಅನೇಕ ರಾಜ್ಯಗಳು ಈ ವಿಷಯದಲ್