ಭಾಗ

ಕಾರ್ಯಾಗಾರದ ವಿಧಾನ

[1]

ಕಾರ್ಯಾಗಾರವನ್ನು ನಾಲ್ಕು ಗೋಷ್ಠಿಗಳಾಗಿ ವಿಂಗಡಿಸಿಕೊಂಡು ನಡೆಸಲಾಯಿತು. ಮೊದಲ ಗೋಷ್ಠಿ, ಅಂಗನವಾಡಿ ಕಾರ್ಯಕತೆಯರು ಕೆಲಸ ಮಾಡುವ ಪರಿಸರವನ್ನು ಹೇಗೆ ಅಥಮಾಡಿಕೊಂಡಿದ್ದಾರೆ ಎಂಬುದನ್ನು ಕುರಿತು ಚರ್ಚಿಸ ಲಾಯಿತು; ಇದರಲ್ಲಿ ಪ್ರಮುಖವಾಗಿ ಮೂರು ವಿಷಯಗಳನ್ನು ಕುರಿತು ಚರ್ಚಿಸ ಲಾಯಿತು. ಒಂದು, ಮಾಜಿಕ ಪರಿಸರಕ್ಕೆ ಸಂಬಂಧಿಸಿದ-ಜಾತಿ, ಧರ್ಮ, ಶಿಕ್ಷಣ ಇತ್ಯಾದಿಗಳನ್ನು ಕುರಿತು.  ಹಾಗೆಯೇ ಸಾಮಾಜಿಕ ಪರಿಸರ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ನಡುವಿನ ಸಂಬಂಧ ಅಂದರೆ, ಯಾವ ಜಾತಿ ಜನರು ಇವರ ಸೇವೆಯನ್ನು ಅಥವಾ ಪೌಷ್ಟಿಕ ಆಹಾರವನ್ನು ಹೆಚ್ಚು ಅವಲಂಬಿ ಸಿದ್ದಾರೆ? ಮತ್ತು ಯಾಕೆ?,  ಜಾತಿ/ಧರ್ಮ ಮತ್ತು ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಬಳಸುವುದರ ನಡುವೆ ಏನಾದರು ಸಂಬಂಧ ಇದೆಯೆ? ಮತ್ತು ಶಿಕ್ಷಣ ಮತ್ತು ಇವರ ಸೇವೆ ನಡುವೆ ಯಾವರೀತಿಯ ಸಂಬಂಧ ಇದೆ? ಎನ್ನುವುದರ ಕುರಿತದ್ದಾಗಿತ್ತು.

ಎರಡು, ಆರ್ಥಿಕ ಪರಿಸರ ಕುರಿತು-ಬಡವರು ಮತ್ತು ಮಧ್ಯಮ ವರ್ಗದವರು ಹಾಗೂ ಶ್ರೀಮಂತ ಕುಟುಂಬಗಳ ಆರ್ಥಿಕ ಪರಿಸರ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ನಡುವಿನ ಸಂಬಂಧ. ಉದಾಹರಣೆಗೆ-ಯಾವ ವರ್ಗದ ಜನರು ಇವರ ಸೇವೆಯನ್ನು ಹೆಚ್ಚು ಅವಲಂಬಿಸಿದ್ದಾರೆ? ಮತ್ತು ಯಾಕೆ? ಅವಲಂಬಿತರ ಆರೋಗ್ಯ/ಪೌಷ್ಟಿಕ ಆಹಾರದಂತಹ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಿದೆಯೆ? ಇಲ್ಲವಾದರೆ ಯಾಕೆ? ಇತ್ಯಾದಿಗಳನ್ನು ಕುರಿತದ್ದಾಗಿತ್ತು.

ಮೂರು, ರಾಜಕೀಯ ಪರಿಸರ ಕುರಿತು-ವಿವಿಧ ರಾಜಕೀಯ ಒಲವುಗಳು, ರಾಜಕೀಯ ಪ್ರಕ್ರಿಯೆ ಇತ್ಯಾದಿಗಳು ರಾಜಕೀಯ ಪರಿಸರ ಮತ್ತು ಅಂಗನವಾಡಿ ಕಾರ್ಯಕರ್ತೆಯರ ನಡುವಿನ ಸಂಬಂಧ ಅಂದರೆ, ಅಂಗನವಾಡಿ ಕೇಂದ್ರ ಮತ್ತು ಗ್ರಾಮಪಂಚಾಯ್ತಿಗೆ ಇರುವ ಸಂಬಂಧ, ಸ್ಥಳೀಯ ಪ್ರಭಾವಿಗಳು ಕೇಂದ್ರದ ಕಾರ್ಯ ವೈಖರಿಯನ್ನು ಪ್ರಭಾವಿಸುತ್ತಾರೆಯೆ? ಗ್ರಾಮೀಣ ರಾಜಕೀಯವು ಕೇಂದ್ರದ ಸೇವೆಗೆ ತೊಡಕಾಗಿದೆಯೆ? ಇತ್ಯಾದಿಗಳನ್ನು ಕುರಿತದ್ದಾಗಿತ್ತು.

ಗೋಷ್ಠಿ೨ರಲ್ಲಿ, ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯಗಳು ಮತ್ತು ಜವಾಬ್ದಾರಿ ಕುರಿತ ಚರ್ಚೆಯನ್ನು ನಡೆಸಲಾಯಿತು; ಗ್ರಾಮೀಣ ಮಕ್ಕಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗೆ ಸಂಬಂಧಿಸಿದಂತೆ ಇರುವ ಕರ್ತವ್ಯಗಳು. ಈ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ಕಾರ್ಯಕರ್ತೆಯರು ಎದುರಿಸುವ ಪ್ರಮುಖ ಸಮಸ್ಯೆಗಳು-ಇವುಗಳನ್ನು ಪ್ರಮುಖವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿ ಕೊಳ್ಳಲಾಗಿದೆ. ಒಂದು, ಸ್ಥಳಿಯ ಪರಿಸರದ ಸಮಸ್ಯೆಗಳು ಅಂದರೆ, ಜನರು ಸಹಕರಿಸದಿರುವುದು, ಸಲಹೆಗಳನ್ನು ಅನುಸರಿಸದಿರುವುದು ಇತ್ಯಾದಿ. ಎರಡನೆಯದು, ಆರೋಗ್ಯ ಸವಲತ್ತು ಪೂರೈಕೆಯ ಸಮಸ್ಯೆಗಳಾದ-ಮದ್ದಿನ ಕೊರತೆ, ವಾಹನ ಕೊರತೆ, ಕಟ್ಟಡದ ಕೊರತೆ, ಉಪಕರಣಗಳ ಕೊರತೆ, ನುರಿತ ತಜ್ಞರ ಕೊರತೆ, ಇತ್ಯಾದಿಗಳು. ಮೂರು, ನಿರ್ವಹಣಾ ಸಮಸ್ಯೆಗಳಾದ-ಸಂಬಂಧಪಟ್ಟವರು ನಿಗಾವಹಿಸ ದಿರುವುದು, ಸಾಮಗ್ರಿಗಳ ಪೂರೈಕೆ ಮಾಡದಿರುವುದು, ಗಮನ ಹರಿಸದಿರುವುದು. ಇನ್ನಿತರೆ ವಿಷಯಗಳನ್ನು ಚರ್ಚಿಸಲಾಯಿತು.

ಗೋಷ್ಠಿ೩ರಲ್ಲ್ಲಿ, ಸ್ತ್ರೀಶಕ್ತಿ ಯೋಜನೆಯು ಅಂಗನವಾಡಿ ಕೇಂದ್ರಗಳ ಮೂಲಕ ನಡೆಯುವುದು ಎಷ್ಟು ಸೂಕ್ತ? ಇದರ ಸಾಧಕ ಬಾಧಕಗಳೇನು? ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಅಗತ್ಯವಿರುವ ಹಣಕಾಸಿನ ನೆರವನ್ನು ಇಲ್ಲಿ ಪಡೆಯಲು ಸಾಧ್ಯವಾಗಿದೆಯೆ? ಎನ್ನುವುದರ ಜೊತೆಗೆ ಸ್ತ್ರೀಶಕ್ತಿ ಗುಂಪುಗಳ ರಚನೆ ಮತ್ತು ಅವುಗಳ ನಿರ್ವಹಣೆಯನ್ನು ಕುರಿತು ಚರ್ಚಿಸಲಾಯಿತು. ಅಲ್ಲದೇ, ಸ್ತ್ರೀಶಕ್ತಿ ಗುಂಪುಗಳು ಮಕ್ಕಳ ಪಾಲನೆ-ಪೋಷಣೆಗೆ ಸಂಬಂಧಿಸಿದಂತೆ ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಯಿತು

ಗೋಷ್ಠಿ೪ರಲ್ಲಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇತರರ (ಆರೋಗ್ಯ ಕೇಂದ್ರ, ಗ್ರಾಮ ಪಂಚಾಯ್ತಿ, ಸ್ತ್ರೀಶಕ್ತಿ ಗುಂಪು, ಸ್ಥಳೀಯ ಅಧಿಕಾರಿಗಳು, ಪೋಷಕರು, ಜನಸಾಮಾನ್ಯರು, ಜನಪ್ರತಿನಿಧಿಗಳು ಮುಂತಾದವರು) ನಡುವಿನ ಸಂಬಂಧಗಳನ್ನು ಕುರಿತು ಚರ್ಚೆ ಮಾಡಲಾಗಿದೆ.

ಈ ಕಾರ್ಯಾಗಾರವನ್ನು ಸಹಭಾಗಿತ್ವ ಮಾದರಿಯಲ್ಲಿ ನಡೆಸಲಾಯಿತು. ಅಂದರೆ ಭಾಗವಹಿಸುವ ಎಲ್ಲಾ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ದಾಖಲಿಸುವ, ಹೇಳುವ, ಮಂಡನೆಮಾಡುವ ಪರಿಸರವನ್ನು ನಿರ್ಮಾಣಮಾಡಲಾಗಿತ್ತು. ಭಾಗವಹಿಸಿದ ಶಿಭಿರಾರ್ಥಿಗಳೆಲ್ಲರನ್ನು ಒಟ್ಟಿಗೆ ಸೇರಿಸಿ ಅವರ ಅನಿಸಿಕೆಗಳನ್ನು ಕೇಳಬೇಕೆಂದಾದರೆ ಯಾರೋ ಕೆಲವರೇ ಎಲ್ಲಾ ಪ್ರಶ್ನೆಗಳಿಗೆ ಮತ್ತು ಸಮಸ್ಯೆಗಳಿಗೆ ಉತ್ತರಿಸುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಕಾರ್ಯಾಗಾರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳನ್ನು ಅಗತ್ಯಕ್ಕನುಸಾರ ಚಿಕ್ಕ ಚಿಕ್ಕ ಗುಂಪುಗಳನ್ನಾಗಿ ಮಾಡಿ, ಎಲ್ಲರಿಗೂ ಮಾತನಾಡಲು ಅವಕಾಶ ನೀಡುವ ಮೂಲಕ, ಅವರಲ್ಲಿರುವ ಮಾಹಿತಿಯನ್ನು ಕ್ರೊಢೀಕರಿಸುವುದಾಗಿತ್ತು. ಯಾಕೆಂದರೆ ಒಂದು ಗ್ರಾಮದ ಅಂಗನವಾಡಿ ಸಮಸ್ಯೆ, ಮತ್ತೊಂದು ಗ್ರಾಮದ ಅಂಗನವಾಡಿಯಲ್ಲಿ ಇರುವಸಾಧ್ಯತೆ ಕಡಿಮೆ. ಪ್ರತಿಯೊಂದು ಅಂಗನವಾಡಿಗಳ ಸ್ಥಿತಿ ಮತ್ತು ಅವುಗಳ ಕಾರ್ಯವೈಖರಿ ಬೇರೆ ಬೇರೆಯದೇ ಆಗಿರುತ್ತದೆ. ಇವುಗಳನ್ನು ನಿಖರವಾಗಿ ಗುರುತಿಸುವ ಸಲುವಾಗಿ ಇದ್ದ ಐವತ್ತಾರು ಜನ ಕಾರ್ಯಕರ್ತೆಯರನ್ನು  ಐದು ಗುಂಪುಗಳನ್ನಾಗಿ ಮಾಡಲಾಯಿತು. ಪ್ರತಿ ಗುಂಪಿನಲ್ಲಿ ಕೇವಲ ಹನ್ನೊಂದು ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಇದ್ದರು. ಈ ಹನ್ನೊಂದು ಜನರನ್ನು ನಿಯಂತ್ರಿಸಲು ಒಬ್ಬರು ಸಂಪನ್ಮೂಲ ವ್ಯಕ್ತಿ ಯನ್ನು ನಿಯೋಜನೆಗೊಳಿಸಲಾಗಿತ್ತು. ಇವರು ಈಗಾಗಲೇ ಸಿದ್ಧಪಡಿಸಿದ್ದ ಪ್ರಶ್ನಾವಳಿ ಮಾದರಿಯ ಟಿಪ್ಪಣಿ ಮುಖಾಂತರ ಕಾರ್ಯಕರ್ತೆಯರನ್ನು ಪ್ರಶ್ನಿಸಿ ಚರ್ಚೆಗೆ ಆಸ್ಪದ ನೀಡಲಾಯಿತು. ಒಂದೇ ಪ್ರಶ್ನೆಯನ್ನು ಎಲ್ಲರೂ ಅವರವರ ಕೇಂದ್ರದ ವ್ಯಾಪ್ತಿಗನುಸಾರವಾಗಿ ಅವರ ಅನುಭವದ ಹಿನ್ನೆಲೆಯಲ್ಲಿ ನೀಡಿದ ಉತ್ತರ ಇಲ್ಲವೇ ಅನಿಸಿಕೆಗಳನ್ನು ಪಡೆಯಲು ಸುಲಭವಾಯಿತು.

ಆಯಾ ಗುಂಪುಗಳಲ್ಲಿ ಚರ್ಚಿತವಾದ ವಿಚಾರಗಳನ್ನು ಆ ಗುಂಪಿನಲ್ಲಿಯ ಯಾರಾದರೊಬ್ಬರು ಪೂರ್ಣವಾಗಿ ದಾಖಲಿಸಿಕೊಳ್ಳುವಂತೆ ಕ್ರಮವಹಿಸಲಾಯಿತು.  ಆ ಭಾಗದ ಚರ್ಚೆ ಮುಗಿದ ಬಳಿಕ ಎಲ್ಲಾ ಗುಂಪಿನವರು (ಐದು) ಒಂದುಕಡೆ ಸೇರಿ ಆಯಾಗುಂಪಿನಲ್ಲಿ ನಡೆದ ಚರ್ಚೆಯ ಸಾರಾಂಶವನ್ನು ಆಯಾ ಗುಂಪು ಚರ್ಚೆಯ ಸಂದರ್ಭದಲ್ಲಿ ದಾಖಲಿಸಿಕೊಂಡವರು ಎಲ್ಲರ ಸಮ್ಮುಖದಲ್ಲಿ ಮಂಡಿ ಸಿದರು. ಇಲ್ಲಿ ಮತ್ತೊಮ್ಮೆ ಚರ್ಚೆಗೆ ಅವಕಾಶವಿತ್ತು. ಏನಾದರೂ ಸಂಶಯಗಳಿದ್ದರೆ ಕೇಳುವ ಅಥವಾ ಚರ್ಚಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಹೀಗೆ ಎಲ್ಲಾ ಗುಂಪಿನವರು ತಮ್ಮ ತಮ್ಮ ಗುಂಪಿನಲ್ಲಿ ನಡೆದ ಚರ್ಚೆಯ ಸಾರಾಂಶವನ್ನು ಮಂಡಿಸಿದ ನಂತರ ಸಮಗ್ರವಾಗಿ ವಿಷಯ ಮಂಥನವನ್ನು ನಡೆಸಲಾಯಿತು. ಇದಾದ ನಂತರ ಮತ್ತೊಂದು ಭಾಗದ ಚರ್ಚೆಗೆ ತೆರಳಲಾಯಿತು. ಮತ್ತೆ ಅದೇ ರೀತಿಯಲ್ಲಿ ಪ್ರತಿ ವಿಭಾಗದ ಬೇರೆ ಬೇರೆ ವಿಷಯದ ಬಗ್ಗೆ ಸುಮಾರು ಎರಡು ಗಂಟೆಗಳಕಾಲ ಸುದೀರ್ಘ ಚರ್ಚೆ ಮುಂದುವರೆಸಿ ಬಂದ ಸಾರಾಂಶವನ್ನು ಎಲ್ಲರ ಸಮ್ಮುಖದಲ್ಲಿ ಮಂಡಿಸುವುದು, ಒಟ್ಟಾರೆ ಅಭಿಪ್ರಾಯ ಸಂಗ್ರಹಿಸುವುದು ಮತ್ತೆ ಬೇರೆ ವಿಭಾಗದ ವಿಚಾರಕ್ಕೆ ತೆರಳಿ ಯಥಾಪ್ರಕಾರ ಮುಂದುವರೆಸಲಾಯಿತು. ಒಟ್ಟಾರೆ ಈ ರೀತಿಯ ಕಾರ್ಯಾಗಾರದಿಂದ ಅಂಗನವಾಡಿ ಕೇಂದ್ರದ ಸಂಪೂರ್ಣ ಚಿತ್ರಣವನ್ನು ಮತ್ತು ಕಾರ್ಯಕ್ಷಮತೆಯನ್ನು ಅರಿಯುವ ಪ್ರಯತ್ನವನ್ನು ಮಾಡಲಾಯಿತು.

 

ಕಾರ್ಯಾಗಾರದ ವರದಿ 

ಗೋಷ್ಠಿ

ಅಂಗನವಾಡಿ ಕಾರ್ಯಕತೆಯರು ತಾವು ಕೆಲಸ ಮಾಡುವ ಪರಿಸರವನ್ನು ಹೇಗೆ ಅಥಮಾಡಿಕೊಂಡಿದ್ದಾರೆ ಎಂಬುದನ್ನು ಕುರಿತು ಚರ್ಚಿಸಲಾಯಿತು. ಅಂದರೆ ಯಾವುದೇ ಅಧಿಕಾರಿಯಾದರೂ ತನ್ನ ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿಯ ಪೂರ್ಣ ಪರಿಚಯ ಇದ್ದರೆ ಆಡಳಿತ ಮತ್ತು ಅಭಿವೃದ್ಧಿ ಕೆಲಸಕ್ಕೆ ಸಹಕಾರಿಯಾಗುತ್ತದೆ ಎನ್ನುವ ಉದ್ದೇಶದಿಂದ ಪರಿಸರದ ಪರಿಚಯಕ್ಕೆ ಒತ್ತು ಕೊಡಲಾಯಿತು. ಇದು ಅಗತ್ಯವೂ ಕೂಡ. ಮೇಲಾಗಿ ಅಂಗನವಾಡಿ ಕಾರ್ಯಕರ್ತೆಯರು ಸಾಮಾನ್ಯವಾಗಿ ಅದೇ ಊರಿನವರಾಗಿರುವುದರಿಂದ ಅವರ ಊರಿನ ಬಗ್ಗೆ ಎಷ್ಟು ಗೊತ್ತಿದೆ ಅನ್ನು ವುದು ಮತ್ತು ಯಾವ ಯಾವ ವಿಚಾರಗಳು ಎಷ್ಟು ಮುಖ್ಯ ಅನ್ನುವುದನ್ನು ಮನವರಿಕೆ ಮಾಡಿಸುವ ಸಲುವಾಗಿ ಊರಿನ ಪರಿಸರಕ್ಕೆ ಸಂಬಂಧಿಸಿದ- ಜಾತಿ, ಧರ್ಮ, ಶಿಕ್ಷಣ ಇತ್ಯಾದಿಗಳನ್ನು ಕುರಿತು ಚರ್ಚಿಸಲಾಯಿತು. ಇದರಲ್ಲಿ ಪ್ರತಿ ಗುಂಪಿನಲ್ಲಿಯೂ ಆಯಾಯ ಗ್ರಾಮಗಳ ವಸ್ತುಸ್ಥಿತಿಯನ್ನು ಅವರವರ ತಿಳುವಳಿಕೆಯ ಹಿನ್ನೆಲೆಯಲ್ಲಿ ತಿಳಿಸಿರುತ್ತಾರೆ.

ಈ ಪ್ರಕಾರವಾಗಿ ಆಗಮಿಸಿದ್ದ ೫೬ ಅಂಗನವಾಡಿಗಳ ಪ್ರದೇಶದಲ್ಲಿ ಸರಿ ಸುಮಾರು ಅರ್ಧಕ್ಕಿಂತಲೂ ಹೆಚ್ಚು ಭಾಗದಲ್ಲಿ ವಾಲ್ಮೀಕಿ ನಾಯಕರು ಹೆಚ್ಚಿರು ವುದಾಗಿಯೂ, ಉಳಿದಂತೆ ಲಿಂಗಾಯತರು ಮತ್ತು ಕುರುಬರು ಕೆಲವುಕಡೆ ಹೆಚ್ಚಿರು ವುದಾಗಿ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಅಲ್ಪಸಂಖ್ಯಾತರು ಇರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಭಾಗದಲ್ಲಿ ದಲಿತರ ಕೇರಿಗಳು ಊರಿನ ಆಚೆ ಇರುವುದಾಗಿಯೂ ಮತ್ತು ಇವರಿಗೆ ಪ್ರತ್ಯೇಕವಾದ ನೀರಿನ ವ್ಯವಸ್ಥೆ ಇರುವುದಾಗಿ ತಿಳಿಸಿರುತ್ತಾರೆ. ಶೈಕ್ಷಣಿಕವಾಗಿ ಲಿಂಗಾಯತರು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿರುವುದಾಗಿಯೂ, ಉಳಿದ ಜಾತಿ ಜನವರ್ಗದವರು ಇತ್ತೀಚೆಗೆ ಆಸಕ್ತಿಯನ್ನು ಹೊಂದಿರುವುದಾಗಿ ತಿಳಿಸಿರುತ್ತಾರೆ. ಬ್ರಾಹ್ಮಣ ಮತ್ತು ಲಿಂಗಾಯತ ಜಾತಿಗೆ ಸೇರಿದವರು ಸರಕಾರಿ ಉದ್ಯೋಗದಲ್ಲಿ ಹೆಚ್ಚು ಇರುವುದಾಗಿ, ಉಳಿದ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜಾತಿಗಳವರು ಅಲ್ಪಪ್ರಮಾಣದಲ್ಲಿ ಉದ್ಯೋಗವನ್ನು ಪಡೆದಿರುವುದಾಗಿಯೂ, ಹಾಗೂ ಪ.ಜಾತಿ ಮತ್ತು ಪಂಗಡದವರು ತೀರಾ ಕಡಿಮೆ ಪ್ರಮಾಣದಲ್ಲಿ ಸರಕಾರಿ ಉದ್ಯೋಗ ಪಡೆದಿರುವುದಾಗಿ ತಿಳಿಸಿರುತ್ತಾರೆ. ಶೈಕ್ಷಣಿಕವಾಗಿ ಮುಂದುವರೆದ ಜಾತಿಗಳಾದ ಲಿಂಗಾಯತ, ಬ್ರಾಹ್ಮಣರು ಮೇಲುಗೈ ಸಾಧಿಸಿದ್ದು ಇತರೆ ಹಿಂದುಳಿದ ಜಾತಿಗಳವರು ನಂತರದ ಸ್ಥಾನದಲ್ಲಿಯೂ ಇರುವುದಾಗಿ ತಿಳಿಸಿದ್ದಾರೆ. ಹಾಗೆಯೇ ಕೆಲವು ಮುಸ್ಲಿಂ ಸಮುದಾಯ ಹೆಚ್ಚಿರುವ ಕಡೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡದಿರುವುದಾಗಿ ಅವರು ಸೈಕಲ್ ರಿಪೇರಿ ಇಲ್ಲವೇ ಮತ್ತಾವುದೋ ಕೆಲಸಕ್ಕೆ ಕಳುಹಿಸುವುದರಲ್ಲಿ ಆಸಕ್ತಿ ಹೆಚ್ಚಿರುತ್ತದೆ ಎಂದಿರುತ್ತಾರೆ. ಜೊತೆಗೆ ಲಂಬಾಣಿ ತಾಂಡಾಗಳಲ್ಲಿಯೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ದೊಡ್ಡಮಕ್ಕಳು ಶಾಲೆಯನ್ನು ಬಿಡುತ್ತಾರೆ ಎನ್ನುವ ಅಭಿಪ್ರಾಯ ಹಲವು ಕೇಂದ್ರಗಳ ವ್ಯಾಪ್ತಿಯಲ್ಲಿ ಮೂಡಿಬಂತು.

ಹಾಗೆಯೇ ಇನ್ನಿತರೆ ಪ್ರಶ್ನೆಗಳಾದ ಊರಿನಲ್ಲಿ ಇರುವ ಒಟ್ಟು ಜನಸಂಖ್ಯೆ, ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಂಖ್ಯೆ, ಭೂಹಿಡುವಳಿಯ ಬಗ್ಗೆ, ಬೆಳೆಗಳ ಬಗ್ಗೆ, ಊರಿನಲ್ಲಿ ಇರುವ ಶಾಲೆ/ಕಾಲೇಜು ಮತ್ತು ಅವುಗಳ ಸ್ಥಿತಿ ಗತಿ ಕುರಿತು, ಗ್ರಾಮದ ಆರೋಗ್ಯ ಕೇಂದ್ರ/ಉಪಕೇಂದ್ರ ಮತ್ತು ಅವುಗಳ ಕರ್ತವ್ಯದ ಬಗ್ಗೆ ಹಾಗೂ ಊರಿನ ಮೂಲಭೂತ ಸೌಲಭ್ಯಗಳಾದ ನೀರು, ರಸ್ತೆ, ವಿದ್ಯುತ್, ನೈರ್ಮಲ್ಯಕುರಿತ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಇವೆಲ್ಲದಕ್ಕೂ ಅವರವರ ತಿಳುವಳಿಕೆಗೆ ಅನುಸಾರವಾಗಿ ಉತ್ತರಗಳನ್ನು ನೀಡಿರುತ್ತಾರೆ. ಹೆಚ್ಚಿನ ಕಡೆ ನೈರ್ಮಲ್ಯದ ಕೊರತೆ, ವಿದ್ಯುತ್ ಕೊರತೆ, ರಸ್ತೆಗಳ ದುರಸ್ತಿಯ ಕೊರತೆ ಹಾಗೂ ಶುದ್ಧ ಕುಡಿಯು ನಿರಿನ ಕೊರತೆಯನ್ನು ಎದುರಿಸುತ್ತಿರುವುದಾಗಿ ತಿಳಿಸಿರುತ್ತಾರೆ.

ಹಾಗೆಯೇ ಸಾಮಾಜಿಕ ಪರಿಸರ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ನಡುವಿನ ಸಂಬಂಧ ಅಂದರೆ-ಯಾವ ಜಾತಿ ಜನರು ಇವರ ಸೇವೆಯನ್ನು ಅಥವಾ ಪೌಷ್ಟಿಕ ಆಹಾರವನ್ನು ಹೆಚ್ಚು ಅವಲಂಬಿಸಿದ್ದಾರೆ? ಮತ್ತು ಯಾಕೆ? ಜಾತಿ ಅಥವಾ ಧರ್ಮ ಮತ್ತು ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಬಳಸುವುದರ ನಡುವೆ ಏನಾದರು ಸಂಬಂಧ ಇದೆಯೆ? ಮತ್ತು ಶಿಕ್ಷಣ ಮತ್ತು ಇವರ ಸೇವೆಯ ನಡುವೆ ಸಂಬಂಧ ಇದೆಯೆ? ಎನ್ನುವ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಉತ್ತರವಾಗಿ ಜನರು ಯಾವುದೇ ಸಮಯದಲ್ಲಿ ಸೇವೆ ಪಡೆಯಲು ಜಾತಿ ಅಡ್ಡ ಬರುವುದಿಲ್ಲ. ಊರಿನ ಆರೋಗ್ಯ ಶಿಬಿರ ಅಥವಾ ಇನ್ನಿತರ ತಾಯಿ ಮತ್ತು ಮಗುವಿನ ಆರೋಗ್ಯ ಇಲ್ಲವೇ ಪೌಷ್ಟಿಕಾಂಶದ ವಿಚಾರವಾಗಿ ನಡೆಯುವ ಶಿಬಿರಗಳಲ್ಲಿ ಎಲ್ಲ ಜಾತಿ ಜನರು ಪಾಲ್ಗೊಳ್ಳುತ್ತಾರೆ. ಈ ಮೊದಲು ಹಿಂದುಳಿದ ಜಾತಿಯವರು ಶಿಬಿರಗಳಿಗೆ ಬರಲು ಅಥವಾ ಶಿಬಿರಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದರು. ಆದರೆ ಈಗ ಎಲ್ಲರೂ ಬರುತ್ತಾರೆ. ಮೊದಲು ಪರಿಶಿಷ್ಟ ಜಾತಿಯವರು ಚುಚ್ಚುಮದ್ದಿನ ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ. ಆದರೀಗ ಜನ ಬದಲಾಗಿದ್ದಾರೆ. ಇವರಲ್ಲೂ ತಿಳುವಳಿಕೆ ಮೂಡಿದೆ. ಸಾಮಾಜಿಕ ಬದಲಾವಣೆ ಆಗಿದೆ ಎಂದು ಹಲವರ ಅಭಿಪ್ರಾಯವಾದರೆ ಮತ್ತೆ ಕೆಲವರು ನಮ್ಮಲ್ಲಿ ತಳಸಮುದಾಯದ ಅಂದರೆ ಪ.ಜಾತಿ ಮತ್ತು ಪ.ಪಂಗಡದವರು ಹಾಗೂ ಇತರೆ ಹಿಂದುಳಿದ ವರ್ಗದ ಬಡವರು ಬಹುಪಾಲು ಈ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಅವರಿಗೆ ನೀಡುವ ಪೌಷ್ಟಿಕ ಆಹಾರ ಅಥವಾ ರೋಗ ಬಂದಾಗ ಔಷಧಿಯನ್ನು ತಕ್ಷಣಕ್ಕೆ ನಮ್ಮನ್ನೇ ಅವಲಂಬಿ ಸಿದ್ದಾರೆ ಎಂದು ತಿಳಿಸಿರುತ್ತಾರೆ.

ಕೆಲವು ಅಂಗನವಾಡಿ ಕಾರ್ಯಕರ್ತೆಯರು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಏಕೆಂದರೆ ಇವರಲ್ಲಿ ಬಹಳಷ್ಟು ಜನರು ಕೂಲಿಗೆ ಹೋಗುವವರಾಗಿರುತ್ತಾರೆ. ಇವರಲ್ಲಿ ತಿಳುವಳಿಕೆ ಮೂಡಿಸುವ ಸಲುವಾಗಿ ಇವರು ಮನೆಯಲ್ಲಿ ಇರುವ ಸಂದರ್ಭದಲ್ಲಿ ಹೋಗಿ ಅವರಿಗೆ ಅಗತ್ಯ ಮಾಹಿತಿ ಅಂದರೆ ಮಕ್ಕಳ ಪೌಷ್ಟಿಕತೆ, ಆರೊಗ್ಯ ತಪಾಸಣೆ, ಚುಚ್ಚು ಮದ್ದು, ಸ್ವಚ್ಚತೆ ಇವುಗಳ ಬಗ್ಗೆ ತಿಳುವಳಿಕೆ ನೀಡುವುದಾಗಿ ತಿಳಿಸಿರುತ್ತಾರೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದವರಿಗೂ ಅಂಗನವಾಡಿ ಕಾರ್ಯಕರ್ತೆಯರು ಆದ್ಯತೆ ನೀಡುತ್ತಿರುವುದಾಗಿ ಅಭಿಪ್ರಾಯ ಮೂಡಿದೆ.

ಊರಿನ ಎಲ್ಲರು ಮಕ್ಕಳ ಪೌಷ್ಟಿಕ ಆಹಾರಕ್ಕೆ ಅವಲಂಬಿತರಾಗಿದ್ದಾರೆ. ಟೇಕ್ ಹೋಮ್ ಫುಡ್-೬ ತಿಂಗಳಿನಿಂದ ೩ವರ್ಷದ ವರೆಗಿನ ಮಕ್ಕಳಿಗೆ ಎ.ಆರ್.ಎಫ್ (ಅಮೈಲ್ಯಾಸ್ ರಿಚ್ ಎನರ್ಜಿ ಫುಡ್) ಪೌಷ್ಟಿಕ ಆಹಾರವನ್ನು ಮನೆಗೇ ನೀಡಬೇಕೆಂಬ ಸರಕಾರದ ಕಾರ್ಯಕ್ರಮವಿರುವುದರಿಂದ ಇದನ್ನು ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಕೇಳಿ ಪಡೆದುಕೊಳ್ಳುವುದಾಗಿ ಅಭಿಪ್ರಾಯಿಸಿದ್ದಾರೆ. ೩-೬ ವರ್ಷದ ಮಕ್ಕಳಿಗೆ ವಾರದಲ್ಲಿ ಈ ಆಹಾರವನ್ನು ಎರಡು ಬಾರಿ ನಿಡುವುದಾಗಿ, ಗರ್ಭಿಣಿ ಮತ್ತು ಬಾಣಂತಿ ಹಾಗೂ ಕಿಶೋರಿಯರಿಗೆ ೧೫ ದಿನಕ್ಕೆ ಒಂದುಸಾರಿ ೧೦೦೦ ಗ್ರಾಂ. ತೂಕದ ಒಂದು ಎ.ಆರ್.ಎಫ್ ಪೊಟ್ಟಣವನ್ನು ವಿತರಿಸುವುದಾಗಿ ಹೇಳಿದ್ದಾರೆ. ಕೆಲವರು ಈ ಆಹಾರವನ್ನು ನಿರಾಕರಿಸುತ್ತಾರೆ. ಇದನ್ನು ತಿಂದರೆ ಹೊಟ್ಟೆನೋವು ಇಲ್ಲವೇ ಭೇದಿಯಾಗುತ್ತದೆ ಎನ್ನುವ ಕಾರಣಕ್ಕೆ. ಆಗ ಅವರಿಗೆ ಈ ಆಹಾರದ ಮಹತ್ವ, ಇದರ ಪೌಷ್ಟಿಕಾಂಶ, ಇದನ್ನು ಬಳಸುವ ವಿಧಾನದ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ ಎಂದಿದ್ದಾರೆ.

ಸರ್ಕಾರದ ಸೌಲಭ್ಯ ಪಡೆಯಲು ಈಗ ಎಲ್ಲರೂ ಉತ್ಸುಕರಾಗಿದ್ದಾರೆ. ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ನೀಡುವ ಪೌಷ್ಟಿಕಾಂಶದ ಬಗ್ಗೆ ಮಾಹಿತಿ ನೀಡಲು ನಡೆಸುವ ಪೌಷ್ಟಿಕಾಂಶದ ಶಿಬಿರ, ತಾಯಂದಿರ ಶಿಬಿರ-ಹೀಗೆ ಎಲ್ಲದಕ್ಕೂ ಎಲ್ಲ ಜಾತಿಯ, ವಿವಿಧ ವರ್ಗಗಳ ಜನ ಬರುತ್ತಾರೆ. ಜೊತೆಗೆ ಶಿಬಿರದಲ್ಲಿ ಹೇಳಿದ್ದನ್ನು ಸಹ ಪಾಲಿಸುತ್ತಾರೆ. ಅಲ್ಲದೆ ಮನೆಗೆ  ಆಹಾರ ಕೊಡುವ ಸಂದರ್ಭದಲ್ಲಿ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಚುಚ್ಚುಮದ್ದು ಹಾಕಿಸಲಾಗಿದೆಯೇ ಎಂಬುದನ್ನು ಕಾರ್ಯಕರ್ತೆಯರು ಕಾರ್ಡನ್ನು ಪರಿಶೀಲಿಸುವುದರಿಂದ ಎಲ್ಲರೂ ಮಕ್ಕಳಿಗೆ ಚುಚ್ಚುಮದ್ದನ್ನು ಸರಿಯಾಗಿ ಹಾಕಿಸುತ್ತಾರೆ. ಭಾಗ್ಯಲಕ್ಷ್ಮಿ, ಜನನಿ ಸುರಕ್ಷಾ ಯೋಜನೆ ಯಂತಹ ಕಾರ‍್ಯಕ್ರಮಗಳ ಪ್ರಯೋಜನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ ಮತ್ತು ಇವುಗಳ ಸದುಪಯೋಗವನ್ನು ಎಲ್ಲರೂ ಪಡೆಯುತ್ತಿರುವುದಾಗಿ ತಿಳಿಸಿರುತ್ತಾರೆ. ಆಸ್ಪತ್ರೆಗಳ ಹೆರಿಗೆ ಸುರಕ್ಷಿತ ಎಂಬುದು ಗೊತ್ತಾಗಿರುವುದರಿಂದ ಈಗ ಎಲ್ಲಾ ಹೆರಿಗೆಗಳು ಆಸ್ಪತ್ರೆಯಲ್ಲಿಯೇ ಆಗುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿರುತ್ತದೆ.

ಅಂಗನವಾಡಿಯಲ್ಲಿ ಮಕ್ಕಳ ಸಣ್ಣಪುಟ್ಟ ಗಾಯಗಳಾದ ನೆಗಡಿ, ಜ್ವರ ಕೆಮ್ಮು ವಾಂತಿ ಭೇದಿ ಮುಂತಾದ ಸಾಮಾನ್ಯ ಖಾಯಿಲೆಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ. ಕ್ಷಯ ರೋಗಿಗಳು ಅಂಗನವಾಡಿಗೆ ಬಂದು ಕಾರ್ಯಕರ್ತೆಯರ ಸಮಕ್ಷಮದಲ್ಲಿಯೇ ಮಾತ್ರೆ ನುಂಗುವುದು ಕಡ್ಡಾಯವಾಗಿದೆ. ಇದರಿಂದ ಅವರು ಮಾತ್ರೆ ತಪ್ಪದೆ ನುಂಗುತ್ತಾರೆ ಎಂಬುದನ್ನು ಕಾರ್ಯಕರ್ತೆಯರು ಖಾತ್ರಿ ಮಾಡಿಕೊಳ್ಳುತ್ತಾರೆ. ಖಾಯಿಲೆ ಗಂಭೀರ ಸ್ವರೂಪದ್ದಾಗಿದ್ದರೆ ಅವರನ್ನು ಬೇರೆ ವೈದ್ಯರಿಗೆ ರೆಫರ್ ಮಾಡಲಾಗುತ್ತದೆ.

ರಾಜಕೀಯದ ಪ್ರಭಾವ ಕುರಿತು ನಡೆದ ಚರ್ಚೆಯಲ್ಲಿ, ರಾಜಕೀಯದವರು ಪ್ರೋತ್ಸಾಹ ನೀಡುತ್ತಾರೆ. ಗ್ರಾಮ ಪಂಚಾಯ್ತಿ ಸದಸ್ಯರು ಬಾಲ ವಿಕಾಸ ಸಲಹಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇದರಿಂದ ಅಂಗನವಾಡಿಗೆ ಬೇಕಾದ ಅಗತ್ಯ ಸಲಕರಣೆ ಕೊಡಿಸಲು, ಸೌಲಭ್ಯ ಕೊಡಿಸಲು ಸಹಕಾರಿಯಾಗುವುದಾಗಿ ಹೆಚ್ಚಿನವರು ತಿಳಿಸಿರುತ್ತಾರೆ. ಎನ್‌ಆರ್‌ಎಚ್‌ಎಂ, ಅಕ್ಷರ ವಿಜಯ, ಮುಂತಾದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸುವಾಗ ಇವರು ಬೇಕಾಗುತ್ತದೆ.  ಹೆಚ್ಚಿನ ಸಂದರ್ಭದಲ್ಲಿ ಇವರು ಸಭೆಗಳಿಗೆ ಬರುವುದಿಲ್ಲ, ಕೆಲವೊಮ್ಮೆ ಕೆಲಸ ಮಾಡದೆ ಕೇವಲ ಆಶ್ವಾಸನೆ ಕೊಡುತ್ತಾರೆ ಎನ್ನುವ ಅಭಿಪ್ರಾಯವೂ ಮೂಡಿಬಂದಿರುತ್ತದೆ.

ಇಷ್ಟೆಲ್ಲಾ ಕೆಲಸದ ಹೊರೆ ಇರುವಾಗಲೂ ಈ ನಿಮ್ಮ ಕೆಲಸ ಇಷ್ಟವಾಗಿದೆಯೆ? ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಸರಿ ಸುಮಾರು ಎಲ್ಲರ ಅಭಿಪ್ರಾಯ ಕೆಲಸ ಹೆಚ್ಚು, ಗೌರವ ಧನ ಕಡಿಮೆ. ಆದ್ದರಿಂದ ಅಂಗನವಾಡಿ ಕಾರ್ಯಕತೆಯರು ತಮ್ಮ ಕೆಲಸದ ಬಗ್ಗೆ ಅಸಮಾಧಾನ ಹೊಂದಿರುವುದಾಗಿ ತಿಳಿಸಿರುತ್ತಾರೆ. ಗ್ರಾಮದ ಎಲ್ಲ ಮಾಹಿತಿಯನ್ನು ಸರಕಾರದ ಎಲ್ಲಾ ಇಲಾಖೆಗಳಿಗೆ  ನೀಡಬೇಕಾಗುತ್ತದೆ. ಊರಿನ ಯಾವುದೇ ಮಾಹಿತಿ ಯಾರು ಕೇಳಿದರೂ ಅಂಗನವಾಡಿಕಡೆಗೆ ತೋರಿ ಸುತ್ತಾರೆ. ಜೊತೆಗೆ ಎಲೆಕ್ಷನ್ ಕೆಲಸ, ಪಲ್ಸ್ ಪೋಲಿಯೋ, ಜಾನುವಾರು ಗಣತಿ, ಬಿಪಿಎಲ್ ಗಣತಿ, ಮಸ್ಕಿಟೋ ಗಣತಿ, ದೇವದಾಸಿಯರ ಗಣತಿಯಂತಹವುಗಳು ಹೆಚ್ಚಿನ ಹೊರೆಯಾಗಿವೆ. ಇವೆಲ್ಲದಕ್ಕೂ ಪದೇ ಪದೇ ತಾಲ್ಲೂಕು ಕಚೇರಿಗೆ ಓಡಾಡ ಬೇಕು. ಇಷ್ಟೆಲ್ಲ ಮಾಡಿದರೂ ಅದಕ್ಕೆ ಗೌರವ ಧನ ಮಾತ್ರ ನೀಡುವುದಿಲ್ಲ. ಆದರೆ ಆಯಾ ಇಲಾಖೆಯಿಂದ ಯಾವುದೇ ಲೋಪದೋಷಗಳಿದ್ದಾಗ ಅಂಗನವಾಡಿ ಕಾರ್ಯಕರ್ತರೇ ಜವಾಬ್ದಾರರಾಗುತ್ತಾರೆ. ಜೊತೆಗೆ ಸ್ತ್ರೀಶಕ್ತಿ ಗುಂಪುರಚನೆ ಮತ್ತೊಂದು ಹೆಚ್ಚಿನ ಹೊರೆಯಾಗಿದೆ. ಇದನ್ನೂ ನೋಡಿಕೊಳ್ಳಬೇಕು. ಆದರೂ ಇವರು ಮಕ್ಕಳೊಂದಿಗೆ ಬೆರೆಯುವುದು, ದಿನನಿತ್ಯದ ಶಾಲಾ ಕೆಲಸ, ಸ್ತ್ರೀಯರೊಂದಿಗೆ ಕಷ್ಟ ಸುಖದ ಹಂಚಿಕೆ ಇವನ್ನು ಇಷ್ಟ ಪಡುತ್ತಾರೆ. ಹೊಸ ವಿಷಯಗಳನ್ನು ತಮ್ಮ ಕೆಲಸದ ಮೂಲಕ ಅರಿಯಬಹುದ್ದಾದ್ದರಿಂದ ತಮ್ಮ ಕೆಲಸದ ಬಗ್ಗೆ ಆಸಕ್ತಿ ಇದೆ. ಅಂಗನವಾಡಿ ಕೆಲಸ ಕಷ್ಟ ಆಗುವುದಿಲ್ಲ. ಆದರೆ ಅದರ ಹೊರತಾಗಿ ಇರುವ ಕೆಲಸ ಮಾಡುವುದು ಕಷ್ಟವಾಗುತ್ತದೆ. ತಮ್ಮ ಊರನ್ನು ಅಭಿವೃದ್ಧಿ ಪಡಿಸುವ ಉತ್ಸಾಹವಿದೆ. ಊರ ಜನರ ಪ್ರೋತ್ಸಾಹವೂ ಇದೆ. ಹಾಗಾಗಿ ನಮಗೆ ಕೆಲಸ ಮಾಡಲು ಇಷ್ಠ ವಾಗುತ್ತದೆ ಎನ್ನುವ ಅಭಿಪ್ರಾಯವನ್ನು ಕೊನೆಗೆ ನೀಡಿರುತ್ತಾರೆ.

ಊರಲ್ಲಿ ಸಾಮಾನ್ಯವಾಗಿ ಕಾಣುವ ಖಾಯಿಲೆಗಳು ಯಾವುವು ಎಂಬ ಪ್ರಶ್ನೆಗೆ,  ಬಾಣಂತಿ ಹಾಗೂ ಗರ್ಭಿಣಿಗಳಲ್ಲಿ ರಕ್ತಹೀನತೆ ಸಾಮಾನ್ಯವಾಗಿದೆ. ಜನರಲ್ಲಿ ನೆಗಡಿ, ಕೆಮ್ಮು, ವಾಂತಿ ಭೇದಿ, ಚಿಕೂನ್‌ಗುನ್ಯಾ ಜ್ವರ, ಮಡ್ರಾಸ್ ಐ ಇವು ಸಾಮಾನ್ಯವಾಗಿ ಕಾಣುತ್ತವೆ. ಇದಕ್ಕೆ ಓಆರ್‌ಎಸ್., ಪ್ಯಾರಾಸಿಟಮಾಲ್ ಮುಂತಾದ ಸಾಮಾನ್ಯ ಮಾತ್ರೆಗಳನ್ನು ಕೊಡುವುದಾಗಿ ತಿಳಿಸಿದ್ದಾರೆ. ಏಕೆಂದರೆ ಇವರಲ್ಲಿ ಲಭ್ಯವಿರುವ ಔಷಧಿಗಳು ಇವೆ. ಮಡಿಲು ಕಿಟ್, ಜೆಎಸ್‌ವೈ (ಜನನಿ ಸುರಕ್ಷಾ ಯೋಜನೆ)ತಿಳುವಳಿಕೆಯಿಂದ ಆಸ್ಪತ್ರೆಗಳಲ್ಲಿ ಈಗ ಹೆರಿಗೆ ಜಾಸ್ತಿಯಾಗುತ್ತಿದೆ. ದಾದಿಯರು ಸಹ ಕೇವಲ ಸುಲಭದಲ್ಲಿ ಆಗುವ ಆರೋಗ್ಯವಂತ ಗರ್ಭಿಣಿಯರಿಗೆ ಮಾತ್ರ ಹೆರಿಗೆ ಮಾಡಿಸುತ್ತಿದ್ದಾರೆ. ಇಲ್ಲದ್ದಿದ್ದರೆ ಅವರೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಸೂಚಿಸುತ್ತಾರೆ. ಎನ್ನುವ ವಿಚಾರವನ್ನು ಹೊರಹಾಕಿದ್ದಾರೆ.

ಗೋಷ್ಠಿ

ಗ್ರಾಮೀಣ ತಾಯಂದಿರ ಆರೋಗ್ಯ ಸುಧಾರಣೆಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯಗಳೇನು? ಎನ್ನುವ ಸಾಮಾನ್ಯ ಪ್ರಶ್ನೆಗೆ ಅವರ ಜವಾಬ್ದಾರಿ ಯುತ ಉತ್ತರ ಮಹತ್ವವಾಗಿತ್ತು. ತಾಯಂದಿರ ಸಭೆ ನಡೆಸಿ- ಸ್ವಚ್ಛತೆ, ಚುಚ್ಚು ಮದ್ದು, ಬಾಲ್ಯವಿವಾಹ, ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು, ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ, ಮಕ್ಕಳ ಗ್ರೇಡ್ ಬಗ್ಗೆ, ಸ್ತನ್ಯ ಪಾನ, ಅಂತರದ ಹೆರಿಗೆ, ಆಸ್ಪತ್ರೆ ಹೆರಿಗೆ, ದೇವದಾಸಿ ಪದ್ಧತಿ, ವರದಕ್ಷಿಣೆ, ಕುಡಿತದ ವಿರುದ್ಧ, ಪೌಷ್ಟಿಕ ಆಹಾರದ ಬಗ್ಗೆ, ಸ್ತ್ರೀಯರ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವುದು ನಮ್ಮ ಕರ್ತವ್ಯವಾಗಿದೆ. ಜೊತೆಗೆ ಪಲ್ಸ್ ಪೋಲಿಯೋ ಮತ್ತು ಯಾವುದೇ ಚುಚ್ಚುಮದ್ದಿನ ಕಾರ‍್ಯಕ್ರಮ, ಜನನ ಮರಣ, ತಾಯಂದಿರ ಸಭೆ, ಪೌಷ್ಟಿಕ ಆಹಾರ ಶಿಬಿರ- ಇಂಥ ಕಾರ‍್ಯಕ್ರಮಗಳಲ್ಲಿ ಅಂಗನವಾಡಿಯವರು ಎ.ಎನ್.ಎಂ.ಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ, ಉತ್ತಮ ಸೌಹಾರ್ದಯುತವಾದ ಸಂಬಂಧದಿಂದ ಪ್ರತೀ ಗುರುವಾರ ಆರೋಗ್ಯ ಕಾರ್ಯಕರ್ತೆಯರು ಅಂಗನವಾಡಿಗೆ ಬಂದು ಮಕ್ಕಳಿಗೆ ಚುಚ್ಚುಮದ್ದು ನೀಡುತ್ತಿರುವುದಾಗಿ, ಇದಕ್ಕೆ ಸಹಕರಿಸುವುದಾಗಿಯೂ ತಿಳಿಸಿದ್ದಾರೆ. ಮೇಲಿನ ಕೆಲಸ ಮತ್ತು ಜವಾಬ್ದಾರಿಯನ್ನು ನೋಡಿದಾಗ  ಅಂಗನವಾಡಿ ಕಾರ್ಯಕತೆಯರ ಜವಾಬ್ದಾರಿ ಜಾಸ್ತಿಯಿರುವುದು ತಿಳಿಯುತ್ತದೆ. ಇದನ್ನು ಕಡಿಮೆ ಮಾಡುವುದು ಹೇಗೆ ಅನ್ನುವುದನ್ನು ಗಮನಿಸಬೇಕಾಗುತ್ತದೆ. ಏಕೆಂದರೆ ಹೆಚ್ಚು ಜವಾಬ್ದಾರಿ ಕಡಿಮೆ ಸಮಯ ಹಾಗೂ ಕಡಿಮೆ ಸಂಭಾವನೆ ಎಂದಾಗ ಗುಣಮಟ್ಟ ಅಥವಾ ಕೆಲಸಲದಲ್ಲಿ ನಿಖರತೆ ಇವು ಗಳನ್ನು ನಿರೀಕ್ಷಿಸುವುದು ಕಷ್ಟವಾಗುತ್ತದೆ. ಹಾಗೆಯೇ ಈ ರೀತಿಯ ಕೆಲಸಗಳನ್ನೇ ಮಾಡುತ್ತಿರುವ ಕಿರಿಯ ಆರೋಗ್ಯ ಸಹಾಯಕಿಯರು(ಎ.ಎನ್.ಎಂ) ಹಾಗೂ ಹನ್ನೊಂದನೇ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಗ್ರಾಮಗಳಿಗೆ ನಿಯೋಜನೆಗೊಂಡಿರುವ ಆಶಾ(ಅಕ್ರೆಡಿಟೆಡ್ ಸೋಶಿಯಲ್ ಹೆಲ್ತ್ ಆಕ್ಟಿವಿಸ್ಟ್) ಅಂದರೆ ನೋಂದಾಯಿತ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರ ಕೆಲಸವೂ ಒಂದೇ ಆಗಿದೆ. ಅವರನ್ನು ಕೇಳಿದರೂ ಇವೇ ಜವಾಬ್ದಾರಿಯನ್ನು ಹೇಳುತ್ತಾರೆ. ಹಾಗಾಗಿ ಇವರ ಕೆಲಸವನ್ನು ನಿರ್ಧಿಷ್ಟಗೊಳಿಸಿ ಕೆಲಸವನ್ನು ಕಡಿಮೆಮಾಡಿ ನಿಖರತೆ ಯನ್ನು ಸರಕಾರವು ಸಾಧಿಸಬಹುದಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವುದಾಗಿ, ಇದನ್ನು ಕಥೆಗಳ ಮೂಲಕ, ಹಾಡು, ಗೋಡೆ ಬರಹ, ಚಿತ್ರ ಬರಹ, ಅಭಿನಯ ಗೀತೆ, ಮುಂತಾದ ವಿಧಾನಗಳಿಂದ ಅನೌಪಚಾರಿಕ ಶಿಕ್ಷಣವನ್ನು ನೀಡುವುದಾಗಿ ಅಭಿಪ್ರಾಯಿಸಿದ್ದಾರೆ. ಇವರು ವಿಷಯ ಪ್ರಧಾನ ಪದ್ಧತಿ ಮೂಲಕ ಉದಾಹರಣೆಗೆ, ಒಂದು ವಾರ ಸಾಕು ಪ್ರಾಣಿ ಬಗ್ಗೆ ವಿಷಯ ತೆಗೆದುಕೊಂಡು ಎಲ್ಲ ಚಟುವಟಿಕೆಗಳು ಆ ವಿಷಯದ ಸುತ್ತ ಕೇಂದ್ರೀಕೃತವಾಗುವಂತೆ ಗಮನ ಹರಿಸುತ್ತಾರೆ. ಈ ರೀತಿ ಮಾಡುವುದರಿಂದ ಮಗು ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ ಅನ್ನುವುದು ಅವರ ಅಭಿಪ್ರಾಯ. ಈ ರೀತಿಯ ಕಲಿಸುವಿಕೆಯ ಮೂಲಕ ಸೃಜನಕ್ರಿಯೆಗೆ ಒತ್ತು ನೀಡುತ್ತಿದ್ದೇವೆ ಎಂದಿರುತ್ತಾರೆ. ಮರುಕ್ಷಣದಲ್ಲಿ ಸಂಪನ್ಮೂಲ ವ್ಯಕ್ತಿಯೊಬ್ಬರು ಅಂಗನವಾಡಿಗಳಿಗೆ ಸರಿಯಾದ ಕಟ್ಟಡಗಳಿಲ್ಲ. ದೇವಸ್ಥಾನ ಇಲ್ಲವೇ ಮಸಿದಿಗಳಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಅಡಿಗೆ ಕೋಣೆ ಇಲ್ಲ ಎಂದೆಲ್ಲಾ ಹೇಳಿರುತ್ತೀರಿ. ಹಾಗೇಯೇ ಮೇಲಿನವುಗಳನ್ನೂ ಕೂಡ ವ್ಯವಸ್ಥಿತವಾಗಿ ನಡೆಸುತ್ತಿರುವುದಾಗಿ ಹೇಳುತ್ತೀರಿ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ ಸರಕಾರದ ನಿಯಮ ಮತ್ತು ನಮ್ಮ ತರಬೇತಿಯಲ್ಲಿ ಈರಿತಿಯ ಕಡ್ಡಾಯ ಬೋಧನೆ ಇರುವುದರಿಂದ ನಾವು ಮಾಡಲೇ ಬೇಕಾಗಿದೆ ಹಾಗೆಯೇ ಮಾಡುತ್ತಿದ್ದೇವೆ ಎಂದು ತಿಳಿಸಿರುತ್ತಾರೆ.

ಊರಿನ ಜನರು ಮಕ್ಕಳ ಕಾಯಿಲೆಗೆ ಅಂಗನವಾಡಿಯವರು ನೀಡುವ ಉಪಚಾರ ವನ್ನು ಪಾಲಿಸುತ್ತಾರೆ. ಆದರೆ ಮಕ್ಕಳಿಗೆ ದಡಾರ ಬಂದಾಗ ನೀಡುವ ಸಲಹೆಗಳನ್ನು ಪಾಲಿಸುವುದಿಲ್ಲ. ಒಂದು ಕಡೆ ಜ್ವರ ಬಂದಾಗ ನೀರು ಹಾಕಬಾರದು ಎಂದು ಹೇಳಿದರೂ ನೀರು ಹಾಕಿ ಮಗು ಸಾವನ್ನಪ್ಪಿದ ಉದಾಹರಣೆಯಿದೆ. ಆದ್ದರಿಂದ ನಿಮ್ಮ ಧರ್ಮಾಚರಣೆಯೊಂದಿಗೆ ನಮ್ಮ ಸಲಹೆಗಳನ್ನೂ ಪಾಲಿಸಿ ಎಂದು ಜನರಿಗೆ ಕಾರ್ಯಕರ್ತರು ತಿಳಿಸುವ ಪದ್ಧತಿ ಇದೆ. ಕೆಲವೊಮ್ಮೆ ಕೇಂದ್ರದಲ್ಲಿ ಔಷಧಿ ಮುಗಿದ ಸಂದರ್ಭದಲ್ಲಿ ಎಎನ್‌ಎಂಗಳಿಂದ ಆ ಔಷಧಿಗಳನ್ನು ಪಡೆಯುವ ಪದ್ಧತಿ ಇದೆ. ಅವರ ಬಳಿಯೂ ಇಲ್ಲದಿದ್ದರೆ ರೋಗಿಗಳನ್ನು ಆರೋಗ್ಯ ಕೇಂದ್ರಕ್ಕೆ ಕಳುಹಿಸುವ ವಾಡಿಕೆ ಇದೆ. ಇವುಗಳನ್ನು ತಮ್ಮ ಮಾಹಿತಿ ಸೇವೆ ಪುಸ್ತಕದಲ್ಲಿ ದಾಖಲಿಸಲಾಗುವುದು. ವರ್ಷಕೊಮ್ಮೆ ಔಷಧಿಯ ಕಿಟ್ ಇಲಾಖೆಯಿಂದ ಅಂಗನ ವಾಡಿಗೆ ದೊರೆಯುತ್ತದೆ. ಔಷಧಿ ತಯಾರಿಸಿದ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕವನ್ನು ನೋಡಿಯೇ ರೋಗಿಗಳಿಗೆ ಔಷಧ ನೀಡುವುದರಿಂದ ರೋಗಿಗೆ ಅಡ್ಡಪರಿಣಾಮ ಆಗುವುದನ್ನು ತಡೆಯಲಾಗುತ್ತಿದೆ ಎಂದಿರುತ್ತಾರೆ.

ಊರಿನ ಗ್ರಾಮಪಂಚಾಯ್ತಿಗಳ ಸಹಕಾರದ ವಿಚಾರವಾಗಿ ಚರ್ಚಿಸಿದಾಗ ಬಹುತೇಕ ಗ್ರಾಮ ಪಂಚಾಯ್ತಿಗಳು ಅಂಗನವಾಡಿ ಕೇಂದ್ರಗಳನ್ನು ನಮ್ಮದು, ಇವುಗಳ ಜವಾಬ್ದಾರಿ ನಮ್ಮದು ಎನ್ನುವ ಭಾವನೆಯನ್ನು ಹೊಂದಿಲ್ಲ. ಈ ಕೇಂದ್ರಗಳಿಗೆ ಅನೇಕ ಕಡೆ ಪ್ರೋತ್ಸಾಹ ಕೂಡ ದೊರೆಯುತ್ತಿಲ್ಲ. ಈ ಕೇಂದ್ರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದವಾಗಿವೆ. ಇವುಗಳ ಪೂರ್ಣಜವಾಬ್ದಾರಿ ಆ ಇಲಾಖೆಯದು ಎಂದು ಗ್ರಾಮಪಂಚಾಯತಿಗಳು ತಿಳಿದುಕೊಂಡಿವೆ. ಈ ತಪ್ಪುತಿಳುವಳಿಕೆಯಿಂದ ಅನೇಕ ಕಡೆ ಸರಿಯಾದ ಪ್ರೋತ್ಸಾಹ ಸಿಕ್ಕದಿರುವುದನ್ನು ವರದಿ ಮಾಡಿರುತ್ತಾರೆ. ಊರಿನ ಭವಿಷ್ಯದ ಪ್ರಜೆಗಳ ಉತ್ತಮ ಬೆಳವಣಿಗೆಗೆ ಊರಿನವರೂ ಹಾಗೂ ಪಂಚಾಯ್ತಿ ಅವರು ಅಂಗನವಾಡಿಗೆ ಮಕ್ಕಳನ್ನು ಪ್ರತಿದಿನ ಕಳುಹಿಸುವುದು, ಅಲ್ಲಿ ಅಗತ್ಯವಿರುವ ನೀರು, ನೈರ್ಮಲ್ಯ, ಪಾಠೋಪಕರಣ ಇನ್ನಿತರೆ ಸಂದರ್ಭಗಳಲ್ಲಿ ಸಹಕರಿಸಬೇಕಾಗುತ್ತದೆ. ಆದರೆ ಇವಕ್ಕೆ ಯಾರೂ ಗಮನಹರಿಸುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದವು.

ಕರ್ತವ್ಯ ಮಾಡುವಲ್ಲಿಯ ತೊಂದರೆಗಳು ಮತ್ತು ಲೋಪದೋಷಗಳನ್ನು ಕುರಿತು ನಡೆದ ಚರ್ಚೆಗೆ ಸಂಬಂಧಿಸಿದಂತೆ ಗುಂಪಿನಲ್ಲಿಯ ಕೆಲವು ಅಂಗನವಾಡಿಗಳಿಗೆ  ಸ್ವಂತ ಕಟ್ಟಡ ಇಲ್ಲದಿರುವುದಾಗಿಯೂ, ಇದ್ದ ಕಟ್ಟಡಗಳಿಗೆ ಒಂದು ಸರಿಯಾದ ವಿನ್ಯಾಸ ಇಲ್ಲದಿರುವುದಾಗಿಯೂ ತಿಳಿಸಿದ್ದಾರೆ. ಅನೇಕ ಕಡೆ ಕೇಂದ್ರವನ್ನು ದೇವಸ್ಥಾನದಲ್ಲಿ, ಬಾಡಿಗೆ ಕೊಠಡಿಗಳಲ್ಲಿ, ಪ್ರಾಥಮಿಕ ಶಾಲೆಗಳಲ್ಲಿ, ಪಂಚಾಯ್ತಿ ಕಟ್ಟಡದಲ್ಲಿ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ದೇವಸ್ಥಾನದಲ್ಲಿ ಬಯಲಿರು ವುದರಿಂದ ಮಕ್ಕಳಿಗೆ ಕುಣಿದು ತೋರಿಸಿ ಕಲಿಸಲು ಕಾರ್ಯಕರ್ತರಿಗೆ ಮುಜುಗರ ವಾಗುತ್ತದೆ. ಅಲ್ಲದೆ ಮಕ್ಕಳು ಕಲಿಯಲು ಏಕಾಗ್ರತೆಗೆ ಭಂಗವಾಗುತ್ತದೆ. ಹೀಗಿರುವಾಗ ಮಕ್ಕಳ ಮನಸ್ಸನ್ನು ಒಂದೆಡೆ ಹಿಡಿದಿಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದುಕಡೆ ದೇವಸ್ಥಾನದವರಿಗೆ ಬಾಡಿಗೆಯನ್ನು ಇಲಾಖೆಯವರು ಸರಿಯಾದ ಸಮಯಕ್ಕೆ ನೀಡುವುದಿಲ್ಲವಾದ್ದರಿಂದ ಪೂಜಾರಿಗಳು ಕಿರುಕುಳ ನೀಡುತ್ತಾರೆ. ದೇವಸ್ಥಾನದವರೂ ಮತ್ತು ಪೂಜಾರಿಗಳೂ ಲಾಭ ನಿರೀಕ್ಷಿಸುತ್ತಾರೆ. ಇಲಾಖೆಯವರು ಐದುನೂರು ರೂಪಾಯಿಗಳ ವರೆಗೆ ಬಾಡಿಗೆಯನ್ನು ನೀಡುತ್ತಾರೆ. ಆದರೆ ಅದನ್ನು ಸರಿಯಾದ ಸಮಯಕ್ಕೆ ನೀಡುವುದಿಲ್ಲ. ಖಾಸಗಿ ಕೊಠಡಿಯನ್ನು ಬಾಡಿಗೆ ಪಡೆಯಬೇಕೆಂದರೆ ಅವರು ಅಡ್ವಾನ್ಸ್ ಕೇಳುತ್ತಾರೆ. ಅಲ್ಲದೆ ಬಾಡಿಗೆ ದರವೂ ಹೆಚ್ಚು. ಅದೇರೀತಿ, ಪ್ರೈಮರಿ ಶಾಲೆಗಳಲ್ಲಿ ಕೊಠಡಿ ಪಡೆದರೆ ಅಂಗನವಾಡಿ ಮಕ್ಕಳಿಂದ ಗಲಾಟೆಯಾಗುತ್ತದೆ. ಆದ್ದರಿಂದ ಬೇರೆಡೆಗೆ ಹೋಗಿ ಎಂದು ಶಾಲೆಯವರು ಹೇಳುತ್ತಿರುತ್ತಾರೆ. ಇದು ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ. ಬಹುತೇಕ ಕೇಂದ್ರಗಳಲ್ಲಿ ಅಡುಗೆ ಕೋಣೆ ಪ್ರತ್ಯೇಕವಿಲ್ಲ. ಇದ್ದರೂ ಕೋಣೆ ಬಳಸುವಂತಿರುವುದಿಲ್ಲ. ಹೊಗೆ ಹೋಗಲು ಅವಕಾಶವಿಲ್ಲದೆ ಮಕ್ಕಳಿಗೆ ಹೊಗೆ ವಾತಾವರಣದಿಂದ ತೊಂದರೆಯಾಗುತ್ತದೆ ಎಂದಿರುತ್ತಾರೆ. ಮಕ್ಕಳಿಗೆ ಮೇಲಿನ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾದ್ದು ತುರ್ತು ಮತ್ತು ಅಗತ್ಯವಾಗಬೇಕು. ಹಾಗಾದಾಗ ಮಾತ್ರ ಮಕ್ಕಳು ರೋಗಮುಕ್ತರಾಗಿ ಮತ್ತು ಆಸಕ್ತಿಯಿಂದ ವಿದ್ಯೆ ಕಲಿಯಲು ಸಾಧ್ಯವಾಗುತ್ತದೆ.

ಹಾಗೆಯೇ, ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲ.  ಅನೇಕಕಡೆ ಮನೆಯಿಂದ ಕಾರ್ಯಕರ್ತೆಯರೇ ಚಾಪೆಯನ್ನು ತರುವುದಾಗಿಯೂ ತಿಳಿಸಿದ್ದಾರೆ. ಶೌಚಾಲಯ, ನೀರು, ಆಟದ ಸಾಮಗ್ರಿಗಳು, ಪ್ರಥಮಚಿಕಿತ್ಸೆ ಕಿಟ್ಟು, ತೂಕದ ಯಂತ್ರ ಮುಂತಾದವುಗಳು ವ್ಯವಸ್ಥಿತವಾಗಿ ಇಲ್ಲದಿರುವುದನ್ನು ಚರ್ಚಿಸಲಾಯಿತು. ಸಲಕರಣೆಗಳು ಇದ್ದರೂ ಅವು ಉಪಯೋಗಿಸಲು ಆಗದಂತೆ ಇರುವುದು ಹೆಚ್ಚು ಎಂಬುದು ಕಂಡುಬಂತು. ಜೊತೆಗೆ ಕೇಂದ್ರಗಳಲ್ಲಿ ದಾಖಲೆ(ರೆಜಿಸ್ಟರ್)ಗಳನ್ನು ಇರಿಸಲು ಸುರಕ್ಷಿತ ವ್ಯವಸ್ಥೆ ಅಂದರೆ ಅಲಮಾರು ಇಲ್ಲದಿರುವುದನ್ನು ತಿಳಿಸಿದರು. ಸಾಕಷ್ಟು ಕಡೆ ಕಾರ್ಯಕರ್ತರು ಕೂರಲು ಮೇಜು ಕುರ್ಚಿಯಿಲ್ಲದಿರುವುದನ್ನು ತಿಳಿಸಿದ್ದಾರೆ. ತಿಂಗಳಿಗೊಮ್ಮೆ ಆರೋಗ್ಯ ತಜ್ಞರು ಬಂದು ಅಂಗನವಾಡಿ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕೆಂಬ ನಿಯಮವಿದ್ದರೂ ಅವರು ಬರುವುದಿಲ್ಲ. ಮಕ್ಕಳ ಮತ್ತು ಮಹಿಳೆಯರ ರೊಗನಿರೋಧಕ ಚುಚ್ಚು ಮದ್ದು ಕಾರ್ಯಕ್ರಮವನ್ನು ನಿಗದಿತ ದಿನಾಂಕದಂದು ನಿಗದಿತ ಸಮಯಕ್ಕೆ ನಡೆಸುವುದಿಲ್ಲ. ವೈದ್ಯರು ಕೇಂದ್ರಕ್ಕೆ ಬಂದರೂ ತಪಾಸಣೆ ಮಾಡುವುದಿಲ್ಲ. ಆಸ್ಪತ್ರೆಗೆ ಕಳುಹಿಸಿ ಎಂದು ಹೇಳಿ ಹೋಗುತ್ತಾರೆ. ಹಳ್ಳಿಗಳಲ್ಲಿಯೂ ಸಹ ತಜ್ಞರ ಕೊರತೆಯಿದೆ. ಇದರಿಂದ ಅನೇಕಸಂದರ್ಭದಲ್ಲಿ ಮಕ್ಕಳಿಗೆ ತೊಂದರೆ ಯಾಗಿದೆ ಎನ್ನುವ ಮಾತು ಕೇಳಿಬಂದಿರುತ್ತದೆ. ಒಬ್ಬ ಕಾರ್ಯಕರ್ತೆಯ ಪ್ರಕಾರ ನನ್ನ ೨೨ ವರ್ಷಗಳ ಸೇವಾ ಸಂದರ್ಭದಲ್ಲಿ ಯಾವುದೇ ವೈದ್ಯ ಬಂದು ಮಕ್ಕಳನ್ನು ತಪಾಸಣೆ ಮಾಡಿಲ್ಲಎಂದಿರುತ್ತಾರೆ. ಈ ಮಾತು ಮಕ್ಕಳ ಆರೋಗ್ಯ ಸಂಬಂಧವಾಗಿ ಸರಕಾರ ತೋರುವ ಕಾಳಜಿ ಯಾವರೀತಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಹಾಗೆಯೇ ಕೇಂದ್ರಗಳಲ್ಲಿ  ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ಆಟದ ಮೈದಾನ ಇಂತವುಗಳು ಸಮರ್ಪಕವಾಗಿಲ್ಲ ಎನ್ನುವ ಉತ್ತರ ಬಂದಿದೆ.

ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣುವ ಖಾಯಿಲೆಗಳನ್ನು ಪ್ರಶ್ನಿಸಿದಾಗ- ನೆಗಡಿ, ಕೆಮ್ಮು, ವಾಂತಿ, ಭೇದಿ, ದಡಾರ, ಜ್ವರ ಹೆಚ್ಚಾಗಿ ಕಂಡುಬರುತ್ತವೆ. ಇದಕ್ಕೆ ಅಂಗನ ವಾಡಿ ಕಾರ್ಯಕರ್ತರು ನೀಡುವ ಆರೋಗ್ಯ ಸಲಹೆ ಸೂಚನೆಗಳನ್ನು ಜನರು ಪಾಲಿಸುತ್ತಾರೆ. ವಾಸಿಯಾಗುವುದಿಲ್ಲ ಎನ್ನುವ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಹೋಗಲು ತಿಳಿಸಿದಾಗ, ಜನ ಸಾಲ ಮಾಡಿಯಾದರೂ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಸರಕಾರಿ ಆಸ್ಪತ್ರೆಗೆ ಹೋಗುವುದಿಲ್ಲ. ಖಾಸಗೀ ವೈದ್ಯರ ವ್ಯಾಮೋಹ ಅತಿಯಾಗಿದೆ ಎಂದಿರುತ್ತಾರೆ.  ನಿಮ್ಮ ಪ್ರಕಾರ ಯಾಕೆ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಜನ ಹೋಗುವುದಿಲ್ಲ ಎಂದು ಕೇಳಿದಾಗ, ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಮತ್ತು ವೈದ್ಯಕೀಯ ಪರೀಕ್ಷೆಯ ಬಗ್ಗೆ ಜನರಲ್ಲಿ ನಂಬಿಕೆಯಿಲ್ಲದಿರುವುದು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯರು ಸಿಗದಿರುವುದರಿಂದ ಅಲ್ಲಿಗೆ ಹೋಗುವುದಿಲ್ಲ ಎಂದಿರುತ್ತಾರೆ.  ಅಂಗನವಾಡಿ ಕಾರ್ಯಕರ್ತರು ಪ್ಯಾರಸಿಟಮಾಲ್ ಗುಳಿಗೆ, ಕಣ್ಣಿನ ಡ್ರಾಪ್ಸ್, ಕಿವಿಯ ಡ್ರಾಪ್ಸ್, ಜಂತು ಹುಳುವಿನ ಮಾತ್ರೆ, ಓಆರ್‌ಎಸ್ ಪೊಟ್ಟಣ, ಗಾಯಕ್ಕೆ ಟಿಂಕ್ಚರ್, ಕಜ್ಜಿಗೆ ಮುಲಾಮು, ಸುಟ್ಟಗಾಯಕ್ಕೆ ಪ್ರಥಮ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿರುತ್ತಾರೆ.

ಕೆಲವೊಮ್ಮೆ ಕೇಂದ್ರಗಳಲ್ಲಿ ಮೇಲಿನ ಔಷಧಗಳು ಮುಗಿದಾಗ ತೊಂದರೆ ಅನುಭವಿಸಬೇಕಾಗುತ್ತದೆ. ಜನ ಔಷಧಿ ಮುಗಿದಿದೆಯೆಂದರೆ ನಂಬುವುದಿಲ್ಲ. ಇದ್ದರೂ ಕೊಡುವುದಿಲ್ಲ ಎಂದು ಕಾರ್ಯಕರ್ತೆಯರ ಮೇಲೆ ಕೋಪ ಮಾಡಿಕೊಳ್ಳುವ ಸಂದರ್ಭವೇ ಹೆಚ್ಚು. ಕೆಲವು ವೇಳೆ ಜಗಳ ಮಾಡುವುದು ಉಂಟು ಎಂದಿರುತ್ತಾರೆ.  ವಿಟಮಿನ್ ಎ ಡ್ರಾಪ್ಸ್ ಹಾಕಿದಾಗ ಸಾಮಾನ್ಯವಾಗಿ ಮಕ್ಕಳು ವಾಂತಿ ಮಾಡಿಕೊಳ್ಳುವುದು ಸಹಜ. ಆ ಸಂದರ್ಭದಲ್ಲಿ ಮಕ್ಕಳ ಪೋಷಕರು ಕಾರ್ಯಕರ್ತೆ ಯರನ್ನು ಗುಮಾನಿಯಿಂದ ನೋಡುತ್ತಾರೆ. ಡಿಪಿಟಿ ಚುಚ್ಚುಮದ್ದು ಹಾಕಿದಾಗ ಆ ಜಾಗವನ್ನು ಚೆನ್ನಾಗಿ ಉಜ್ಜದಿದ್ದರೆ ಅಲ್ಲಿ ಔಷಧ ಶೇಖರಣೆಯಾಗಿ ಸಣ್ಣ ಗಡ್ಡೆ ಆಗುತ್ತದೆ. ಆಗಲೂ ಪೋಷಕರು ಕಾರ್ಯಕರ್ತೆಯರನ್ನು ದೂಷಿಸುವುದಾಗಿ ತಿಳಿಸಿರುತ್ತಾರೆ.

ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಐರನ್ ಮತ್ತು ಫೋಲಿಕ್ ಮಾತ್ರೆಗಳು ಅಗತ್ಯವಾಗಿವೆ. ಆದರೆ ಇವುಗಳ ಸರಬರಾಜು ಅಗತ್ಯಕ್ಕೆ ತಕ್ಕಂತೆ ನೀಡುತ್ತಿಲ್ಲ. ಇವುಗಳ ಕೊರತೆ ಅಂಗನವಾಡಿ ಕೇಂದ್ರಗಳಲ್ಲಿ ಇದೆ. ಇವನ್ನು ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗೆ, ಬಾಣಂತಿಯರಿಗೆ, ಕಿಶೋರಿಯರಿಗೆ ನೀಡಬೇಕು. ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರೆ ಸ್ಟಾಕ್ ಇಲ್ಲ ಎಂಬ ಉತ್ತರ ಬರುತ್ತದೆ. ಈ ರೀತಿಯ ಕೊರತೆ ಸಾಮಾನ್ಯವಾಗಿರುತ್ತದೆ ಎಂದಿರುತ್ತಾರೆ. ಅನುಕೂಲಸ್ಥರು ಔಷಧಿ ಅಂಗಡಿಗಳಿಂದ ಬೇಕಾದವನ್ನು ಕೊಳ್ಳುತ್ತಾರೆ. ಬಡವರಿಗೆ ಇಂತಹ ಸಂದರ್ಭಗಳಲ್ಲಿ ತೊಂದರೆಯಾಗುತ್ತದೆ.

ಮೇಲಿನ ಅಧಿಕಾರಿಗಳಿಗೆ ಅಂಗನವಾಡಿ ಕಾರ್ಯಕರ್ತರು ರವಾನಿಸುವ ಪ್ರಮುಖ ಅಂಕಿ-ಅಂಶಗಳು ಯಾವುವು ಎಂದು ಕೇಳಿದ ವಿಚಾರವಾಗಿ, ಮಾಸಿಕ ಪ್ರಗತಿ ವರದಿ(ಮಂತ್ಲಿ ಪ್ರೊಗ್ರೆಸ್ ರಿಪೋರ್ಟ್); ತ್ರೈಮಾಸಿಕ ವರದಿ; ಜನಸಂಖ್ಯೆಗೆ ಸಂಬಂಧಿಸಿದ ದಾಖಲೆ (ಜನನ, ಮರಣ, ವಲಸಿಗರು, ಊರು ಬಿಟ್ಟು ಹೋದವರು); ಜಾತಿವಾರು ಮಕ್ಕಳ ಗಣತಿ ದಾಖಲೆ; ಹಾಜರಿ ದಾಖಲೆ; ಜಾತಿವಾರು ಗರ್ಭಿಣಿ, ಬಾಣಂತಿಯರ ದಾಖಲೆ; ಜಾತಿವಾರು ಕಿಶೋರಿಯರ ದಾಖಲೆ; ಮಕ್ಕಳ ದರ್ಜೆ (ಗ್ರೇಡ್)-ನಾರ್ಮಲ್, ಗ್ರೇಡ್ ೧, ಗ್ರೇಡ್ ೨, ಗ್ರೇಡ್ ೩; ಪ್ರತಿ ತಿಂಗಳ ಚುಚ್ಚುಮದ್ದಿನ (ಬಿಸಿಜಿ, ಡಿಪಿಟಿ, ಪೋಲಿಯೋ, ಮೀಸಲ್ಸ್, ಟಿಟಿ, ಎಚ್‌ಪಿಬಿ, ಜಾಂಡೀಸ್) ದಾಖಲೆ; ಭಾಗ್ಯಲಕ್ಷ್ಮಿಗೆ ಒಳಗಾಗುವವರ ದಾಖಲೆ; ತಾಯಂದಿರ ಸಭೆ; ಮನೆ ಭೇಟಿ; ಸಲಹಾ ಸಮಿತಿ ಸಭೆ; ಪೌಷ್ಟಿಕ ಆಹಾರ ಶಿಬಿರ; ಮಾಹಿತಿ ಸೇವೆ; ಶಿಶು ಮರಣ; ಜನಿಸುವಾಗಲೇ ಸತ್ತಿರುವ ಮಕ್ಕಳ ದಾಖಲೆ; ಶಾಲಾಪೂರ್ವ ಶಿಕ್ಷಣ (ದಾಖಲಾತಿ, ಹಾಜರಾತಿ ಸರ್ವೆ); ಎಎನ್‌ಎಂ ಭೇಟಿ ಮಾಡಿದ ವರದಿ, ಸಿಬ್ಬಂದಿ ಭೇಟಿ ವರದಿ; ಇತರರು ಭೇಟಿ ಮಾಡಿದ ವರದಿ, ಸಂತಾನ ಹರಣ ಶಸ್ತ್ರ ಚಿಕಿತ್ಸೆ ಪಡೆದವರ ಅಂಕಿ ಅಂಶ; ಸ್ತ್ರೀ ಶಕ್ತಿ ಸಂಘದ ದಾಖಲಾತಿ ಹೀಗೆ ಸುಮಾರು ೨೬ ದಾಖಲೆಗಳನ್ನು ನಿರ್ವಹಿಸುತ್ತಿರುವುದಾಗಿ ಅಂಗನವಾಡಿ ಕಾರ್ಯಕರ್ತರು ತಿಳಿಸಿರುತ್ತಾರೆ. ಈ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವುದರಲ್ಲಿ ಬಹುಪಾಲು ಸಮಯ ವ್ಯಯವಾಗುವುದಾಗಿ ತಿಳಿಸಿರುತ್ತಾರೆ.

ಎಲ್ಲ ಮಾಹಿತಿಗಳನ್ನು ತಾವೇ ಖುದ್ದಾಗಿ ಸಂಗ್ರಹಿಸುತ್ತಾರೆ. ಇದ್ದೂರಲ್ಲಿ ಮಾಹಿತಿ ಸಿಗುವುದು ಕಷ್ಟ ಆಗುವುದಿಲ್ಲ. ಜನರು ತಾವೇ ಮುಂದೆ ಬಂದು ಮಾಹಿತಿಯನ್ನು ದಾಖಲಿಸುತ್ತಾರೆ. ಅಲ್ಲದೆ ಮನೆ ಭೇಟಿಯು ಆಗಾಗ ಮಾಡುವುದರಿಂದ ಹಾಗೂ ಸಹಾಯಕರಿಂದಲೂ ಮಾಹಿತಿ ಸಿಗುತ್ತದೆ. ಆದರೆ ಕಾರ್ಯ ವ್ಯಾಪ್ತಿ ವಿಸ್ತಾರವಾದಾಗ ಮಾಹಿತಿ ಸಂಗ್ರಹಣೆಗೆ ತೊಂದರೆಯಾಗುತ್ತದೆ. ಆಗ ಇತರರ ಸಹಾಯ ಅಂದರೆ ಎಎನ್‌ಎಂಗಳ ಸಹಾಯ ಪಡೆಯುವುದಾಗಿ ತಿಳಿಸಿರುತ್ತಾರೆ.

ಎಎನ್‌ಎಂ, ಅಂಗನವಾಡಿ ಕಾರ್ಯಕರ್ತರು ಹಾಗೂ ವಿಲೇಜ್ ಅಕೌಂಟೆಂಟ್ (ಗ್ರಾಮ ಲೆಕ್ಕಾಧಿಕಾರಿ) ಇವರ ಬಳಿ ಎಲ್ಲಾ ಅಂಕಿ ಅಂಶಗಳು ಸರಿಯಿರುತ್ತವೆ. ಆದರೆ ವ್ಯತ್ಯಾಸ ಆಗುವುದು ಪ್ರೈಮರಿ ಸ್ಕೂಲುಗಳಲ್ಲಿ. ಅಲ್ಲಿ ಜನ್ಮ ದಿನಾಂಕ ಬದಲಾಗುತ್ತದೆ ಎನ್ನುವುದನ್ನು ತಿಳಿಸಿರುತ್ತಾರೆ.

ಮೇಲಿನ ಮಾಹಿತಿಯನ್ನು ಗಮನಿಸಿದರೆ ಸರಕಾರದ ಯೋಜನೆಗಳು ಸದುದ್ದೇಶ ಉಳ್ಳವಾಗಿರುತ್ತವೆ. ಆದರೆ ಅವುಗಳ ನಿರ್ವಹಣೆಯಲ್ಲಿ ದೋಷವಿರುವುದು ತಿಳಿ ಯುತ್ತದೆ. ಹಾಗೆಯೇ ತಳಮಟ್ಟದ ಕಾರ್ಯಕರ್ತೆಯರಿಗೆ ಹೆಚ್ಚಿನ ಜವಾಬ್ದಾರಿ ನೀಡಿರುವುದು ಗೊತ್ತಾಗುತ್ತದೆ. ಅವರ ಅರ್ಹತೆಗೆ ತಕ್ಕಂತೆ ಜವಾಬ್ದಾರಿ ನೀಡುವ ಮತ್ತು ಒಬ್ಬ ವ್ಯಕ್ತಿ ಎಷ್ಟು ಕೆಲಸ ಮಾಡಬಲ್ಲ ಎನ್ನುವುದನ್ನು ಅರಿತು ಜವಾಬ್ದಾರಿ ನೀಡುವುದು ಸೂಕ್ತವೆಂಬ ಅಭಿಪ್ರಾಯಕ್ಕೆ ಬರಬಹುದು.

ಗೋಷ್ಠಿ

ಅಂಗನವಾಡಿ ಕಾರ್ಯಕರ್ತೆಯರ ಮತ್ತೊಂದು ಜವಾಬ್ದಾರಿಯಾದ ಸ್ತ್ರೀಶಕ್ತಿ ಗುಂಪು ರಚನೆಯ ಕೆಲಸವನ್ನು ಕುರಿತು ಈ ಗೋಷ್ಠಿಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಮೊದಲು ಈ ಸ್ತ್ರೀಶಕ್ತಿ ಗುಂಪುಗಳ ಬಗ್ಗೆ ತಿಳಿಯುವುದು ಸೂಕ್ತವೆನಿಸುತ್ತದೆ. ಸರಕಾರವು ಮಹತ್ವದ ನಾಲ್ಕು ಉದ್ದೇಶವನ್ನಿಟ್ಟುಕೊಂಡು ಈ ಸ್ತ್ರೀಶಕ್ತಿ ಗುಂಪು ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಅವು

೧. ಗ್ರಾಮೀಣ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುವ ಮಹಿಳೆಯರಿಗೆ ಆರ್ಥಿಕ ಪ್ರಗತಿಯನ್ನು ಸಾಧಿಸುವಂತಹ ಹಾಗೂ ಸಾಮಾಜಿಕ ಬದಲಾವಣೆಗೆ ಸೂಕ್ತ ವಾತಾವರಣವನ್ನು ಮೂಡಿಸುವಂತಹ ಪ್ರಕ್ರಿಯೆಯನ್ನು ಬಲಪಡಿಸುವುದು.

೨. ರಾಜ್ಯದಲ್ಲಿ ೧.೨೦ ಲಕ್ಷ ಸ್ವಸಹಾಯ ಗುಂಪುಗಳನ್ನು ರಚಿಸಿ ೨೦ ಲಕ್ಷ ಮಹಿಳೆಯರನ್ನು ಸಂಘಟಿಸುವುದರ ಮುಖಾಂತರ ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಮೂಡಿಸಿ ಸಂಪನ್ಮೂಲಗಳ ಹತೋಟಿ, ಸಂಪನ್ಮೂಲಗಳಿಗೆ ದಾರಿ ಮತ್ತು ಹತೋಟಿ ಸಾಧಿಸುವಂತೆ ಮಾಡುವುದು.

೩. ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಮಹಿಳೆಯರನ್ನು ತೊಡಗಿಸುವುದರ ಮೂಲಕ ಬಡ ಮಹಿಳೆಯರ ಆದಾಯವನ್ನು ಹೆಚ್ಚಿಸಿ, ಅವರಲ್ಲಿ ಆರ್ಥಿಕ ಸ್ಥಿರತೆಯನ್ನು ಮೂಡಿಸುವುದು ತನ್ಮೂಲಕ ಬಡತನ ನಿವಾರಣೆ ಮಾಡುವುದು.

೪. ವಿವಿಧ ಇಲಾಖೆಗಳ ಸೇವೆಗಳನ್ನು ಒಮ್ಮುಖಗೊಳಿಸುವುದರ ಮೂಲಕ ಮಹಿಳಾ ಗುಂಪಿನ ಸದಸ್ಯರುಗಳಿಗೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯ ದೊರೆಯುವಂತೆ ಅವಕಾಶ ಕಲ್ಪಿಸುವುದು ಹಾಗೂ ಸಾಲ ನೀಡುವಂತಹ ಸಂಸ್ಥೆಗಳೊಡನೆ ಸಂಪರ್ಕ ಕಲ್ಪಿಸಿ ಈ ಮಹಿಳೆಯರಿಗೆ ಸಾಲ ದೊರೆಯುವಂತೆ ಕ್ರಮಕೈಗೊಳ್ಳುವುದು ಆಗಿದೆ.

ಈ ಗುಂಪುಗಳಿಗೆ ಅರ್ಹರಿರುವ ಮಹಿಳೆಯರೆಂದರೆ ಬಡತನ ರೇಖೆಗಿಂತ ಕಡಿಮೆ ಆದಾಯ ಇರುವ ಕುಟುಂಬಗಳ ಮಹಿಳೆಯರು, ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿದ ಮಹಿಳೆಯರು, ಭೂರಹಿತ ಕೃಷಿ ಕಾರ್ಮಿಕರು, ಸಮಾನ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯುಳ್ಳ ಹಾಗೂ ಸಮಾನ ಮನಸ್ಸಿನ ಮಹಿಳೆಯರು ಅರ್ಹರಿರುತ್ತಾರೆ. ಈ ಎಲ್ಲಾ ಸ್ವಸಹಾಯ ಗುಂಪುಗಳಿಗೆ ಐದುಸಾವಿರ ರೂಪಾಯಿಗಳ ಸುತ್ತುನಿಧಿಯನ್ನು ನೀಡಲಾಗುತ್ತಿದೆ. ಹಾಗೆಯೇ ಹೆಚ್ಚು ಉಳಿತಾಯ ಮಾಡುವ ಗುಂಪುಗಳಿಗೆ ಸರಕಾರ ಪ್ರೋತ್ಸಾಹ ಧನವನ್ನು ನಗದು ರೂಪದಲ್ಲಿ ನೀಡಲಾಗುತ್ತಿದೆ. ರೂ. ೭೫೦೦೦/-ದಿಂದ ೧ ಲಕ್ಷ ರೂಪಾಯಿಗಳವರೆಗಿನ ಉಳಿತಾಯಕ್ಕೆ ರೂ. ೧೫೦೦೦/-ಗಳ ಪ್ರೋತ್ಸಾಹ ಧನವನ್ನೂ, ಒಂದು ಲಕ್ಷಕ್ಕೂ ಹೆಚ್ಚಿನ ಉಳಿತಾಯಕ್ಕೆ ರೂ. ೨೦೦೦೦/-ಗಳ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಈ ಪ್ರಕಾರವಾಗಿ ೩೧.೩.೦೭ರ ವೇಳೆಗೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ೪೩೭೦ ಸ್ತ್ರೀಶಕ್ತಿ ಗುಂಪುಗಳಿದ್ದು, ಇದರಲ್ಲಿ ೬೭೪೫೬ಸದಸ್ಯರು ಇರುತ್ತಾರೆ. ಹಾಗೆಯೇ ೧೩೧೮.೦೬ ಸಾವಿರಗಳನ್ನು ಸಂಗ್ರಹಿಸಿ ಬ್ಯಾಂಕ್ ಖಾತೆಯಲ್ಲಿ ಇರಿಸಿರುತ್ತಾರೆ. ಇವುಗಳಿಗೆ ಸರಕಾರದಿಂದ ಬಿಡುಗಡೆಯಾದ ಸುತ್ತುನಿಧಿ ೧೮೩.೦ ಸಾವಿರಗಳಾಗಿವೆ(ಬಳ್ಳಾರಿ ಜಿಲ್ಲಾ ಅಂಕಿಅಂಶಗಳ ನೋಟ-೨೦೦೬-೦೭).

ಸರಕಾರದ ನಿಯಮಗಳ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರು ಹಳ್ಳಿಗಳಲ್ಲಿ ಸ್ತ್ರೀ ಶಕ್ತಿ ಗುಂಪು ರಚಿಸುವುದು ಕಡ್ಡಾಯವಾಗಿದ್ದು ಟಾರ್ಗೆಟ್  ನಿಗದಿಯಾಗಿರುತ್ತದೆ. ಅಂದರೆ ಪ್ರತಿಯೊಬ್ಬರೂ ಕನಿಷ್ಠ ಮೂರು ಗುಂಪುಗಳನ್ನಾದರೂ ಮಾಡಬೇಕಾಗಿದೆ. ಇಲ್ಲಿ ಒಬ್ಬೊಬ್ಬ ಕಾರ್ಯಕರ್ತೆ ಒಂದರಿಂದ ಒಂಭತ್ತು ಸ್ತ್ರೀಶಕ್ತಿ ಗುಂಪುಗಳನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. ಸ್ತ್ರೀಶಕ್ತಿ ಗುಂಪುಗಳ ಕೆಲಸ ಅನಿವಾರ್ಯವಾಗಿರು ವುದರಿಂದ ಕಾರ್ಯಕರ್ತೆಯರ ಜವಾಬ್ದಾರಿಯೂ ಜಾಸ್ತಿಯಾಗಿದೆ. ಇದು ಇವರಿಗೆ ಹೊರೆಯಾಗಿ ಕಂಡರೂ ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಅಂಗನವಾಡಿಯ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಲ್ಲ ಕೆಲಸಗಳಿಗೆ ಸಹಕಾರ ನೀಡುವುದ ರಿಂದ ಒಂದು ವಿಧದಲ್ಲಿ ಅನುಕೂಲವಾಗಿರುವುದಾಗಿ ಚರ್ಚೆಯಲ್ಲಿ ತಿಳಿಸಿದ್ದಾರೆ.

ಸ್ತ್ರೀ ಶಕ್ತಿ ಗುಂಪುಗಳ ಸಭೆ ವಾರಕ್ಕೊಮ್ಮೆ ಇರುತ್ತದೆ. ಹಳ್ಳಿಗಳಲ್ಲಿ ಕೆಲಸಕ್ಕೆ ಹೋಗುವವರು ಸಂಜೆ ಕೆಲಸದಿಂದ ಹಿಂದಿರುಗಿದ ನಂತರ ಸಭೆ ನಡೆಸುತ್ತಾರೆ. ನಗರ ಪ್ರದೇಶದವರು ಮಧ್ಯಾಹ್ನ ೩ ರಿಂದ ೪ರ ವರೆಗೆ ವಾರದಲ್ಲಿ ಒಮ್ಮೆ ಸಭೆ ನಡೆಸುತ್ತಾರೆ. ಸದಸ್ಯರ ಒಪ್ಪಿಗೆ ಮೇರೆಗೆ ಸ್ತ್ರೀಶಕ್ತಿಯಲ್ಲಿ ಒಂದು ವಾರಕ್ಕೆ ೧೦ ರೂಪಾಯಿ ಅಥವಾ ಒಂದು ತಿಂಗಳಿಗೆ ೧೦೦ ರೂಪಾಯಿಗಳನ್ನು ಸಂಗ್ರಹಿಸುತ್ತಾರೆ. ಪ್ರಾರಂಭದ ಹಂತದಲ್ಲಿ ಬ್ಯಾಂಕಿನಲ್ಲಿ ಯಾವ ಡೆಪಾಸಿಟ್ಟನ್ನೂ ಇಡಬೇಕಾಗಿಲ್ಲ. ಆರು ತಿಂಗಳ ಉಳಿತಾಯದ ನಂತರ ಸ್ತ್ರೀಶಕ್ತಿ ಗುಂಪಿಗೆ ಸಾಲ ನೀಡುತ್ತಾರೆ. ಸ್ತ್ರೀಶಕ್ತಿಯಿಂದ ಎಲ್ಲ ಸದಸ್ಯರಿಗೂ ಅನುಕೂಲ ಪಡೆದಿರುತ್ತಾರೆ. ಕೂಲಿ ಕೆಲಸಕ್ಕೆ ಹೋಗುವವರು ಹಣ ಸ್ವಲ್ಪ ತಡವಾಗಿ ಕೊಡುತ್ತಾರೆ. ಈ ವ್ಯವಹಾರವನ್ನು ಸಾಮಾನ್ಯ ವಾಗಿ ಸದಸ್ಯರೇ ನಿರ್ವಹಿಸುವುದಾಗಿ ತಿಳಿಸಿರುತ್ತಾರೆ

ಸುಮಾರು ೭೫ ರಿಂದ ೧ ಲಕ್ಷ ರೂಪಾಯಿಯವರೆಗೆ  ಉಳಿತಾಯ ಮಾಡಿದ ಗುಂಪಿಗೆ  ಸರಕಾರದಿಂದ ಸುತ್ತು ನಿಧಿ, ಪ್ರೋತ್ಸಾಹ ಧನ ಎಂದು ೧೫ ರಿಂದ ೨೦ ಸಾವಿರದವರೆಗೆ ನೀಡುತ್ತಾರೆ. ಆದಾಯ ಉತ್ಪನ್ನ ಚಟುವಟಿಕೆಗೆ ೫ ಸಾವಿರ, ತಾಲ್ಲೂಕು ಪಂಚಾಯಿತಿಯವರು ಸುತ್ತುನಿಧಿಗೆ ೫ ಸಾವಿರ – ಹೀಗೆ ಸ್ತ್ರೀ ಶಕ್ತಿ ಗುಂಪಿಗೆ ಹಣ ಹರಿದು ಬರುತ್ತದೆ. ಉತ್ತಮ ಸಾಧನೆ ತೋರಿಸಿದ ಗುಂಪಿಗೆ ತಾಲ್ಲೂಕು ಪಂಚಾಯ್ತಿಯವರು ಬ್ಯಾಂಕಿನ ಮೂಲಕ ಸಬ್ಸಿಡಿಯಲ್ಲಿ ಸಾಲ ಕೊಡುವ ವ್ಯವಸ್ಥೆ ಇದೆ. ಸಾಮಾನ್ಯವಾಗಿ ಈ ವ್ಯವಹಾರವನ್ನು ಹೊಸಪೇಟೆಯ ಪ್ರಗತಿ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬಿಡಿಸಿಸಿ ಬ್ಯಾಂಕುಗಳಲ್ಲಿ  ಹಣಕಾಸಿನ ವ್ಯವಹಾರ ನಡೆಸುತ್ತಿರುವುದಾಗಿ ವ್ಯಕ್ತವಾಗಿದೆ.

ಬ್ಯಾಂಕ್‌ಗಳಲ್ಲಿ ಕೆಲವೊಮ್ಮೆ ಗುಂಪಿನ ಸದಸ್ಯರಿಗೆ ಸಹಕರಿಸುವುದಿಲ್ಲ. ಸ್ತ್ರೀಶಕ್ತಿ ಗುಂಪಿನವರು ಸೂಪರ್‌ವೈಸರ್ ಅಥವಾ ಮೇಲಧಿಕಾರಿಗಳನ್ನು ಕರೆದುಕೊಂಡು ಹೋಗಬೇಕಾಗುತ್ತದೆ. ಓದು ಬರಹ ಬಾರದ ಸ್ತ್ರೀ ಶಕ್ತಿ ಗುಂಪಿನ ಸದಸ್ಯರಿಗೆ ಅರ್ಜಿ ಅಥವಾ ಫಾರಂಗಳನ್ನು ತುಂಬಲು ಕಷ್ಟ ಆಗುತ್ತದೆ. ಹೀಗಾಗಿ ಅವರು ಅಂಗನವಾಡಿ ಕಾರ್ಯಕತೆಯರನ್ನು ವಿಧಿಯಿಲ್ಲದೆ ಅವಲಂಬಿಸಬೇಕಾಗುತ್ತದೆ.

ಮೇಲಿನ ಅಂಶಗಳನ್ನು ಗಮನಿಸಿದಾಗ ಮಹಿಳೆಯರ ಆರ್ಥಿಕ ಭದ್ರತೆ ಮತ್ತು ಸಬಲೀಕರಣಕ್ಕೆ ಈ ಸ್ತ್ರೀಶಕ್ತಿ ಯೋಜನೆಗಳು ಸಹಕಾರಿಯಾಗುತ್ತಿರುವುದು ಕಂಡು ಬರುತ್ತದೆ. ಅನಕ್ಷರಸ್ಥರೂ ಕೂಡ ತಮ್ಮ ಗಳಿಕೆಯಲ್ಲಿ ಉಳಿತಾಯ ಮಾಡುವ ಹಾಗೂ ಈ ಹಣದಿಂದ ಮತ್ತೊಬ್ಬರ ಸಂಕಷ್ಟಕ್ಕೆ ಆಸರೆಯಾಗಿರುವುದು ಗೊತ್ತಾಗುತ್ತದೆ. ಜೊತೆಗೆ ಸರಕಾರದ ಸಹಾಯವನ್ನು ಪಡೆಯುವ ಅವಕಾಶವನ್ನು ಗಿಟ್ಟಿಸಿಕೊಂಡಿ ರುವುದು ಪ್ರಮುಖವಾಗಿದೆ.

ಕೊನೆಯದಾಗಿ ಈ ಅಂಗನವಾಡಿ ಕೇಂದ್ರಗಳು ಸಮಗ್ರ ಗ್ರಾಮೀಣ ಆರೋಗ್ಯಕ್ಕಾಗಿ ಉತ್ತಮ ಸೇವೆಗೆ ಯಾವರೀತಿ ಸೌಕರ್ಯಗಳು ಬೇಕಾಗಬಹುದು ಎನ್ನುವ ಪ್ರಶ್ನೆಗೆ ಸಾಕಷ್ಟು ಉತ್ತಮ ಅಂಶಗಳನ್ನು ಸಲಹೆಯಾಗಿ ನೀಡಿರುತ್ತಾರೆ ಅವುಗಳು

  • ಹೆರಿಗೆ ಸಂದರ್ಭಗಳಲ್ಲಿ ಎಎನ್‌ಎಂಗಳು ತಮ್ಮ ನಿಗದಿತ ವಸತಿ ಗೃಹಗಳಲ್ಲಿಯೇ ಇರುವಂತಾಗಬೇಕು. ಅವರ ವಸತಿ ಊರ ಮಧ್ಯೆ ಇದ್ದು ಇತರ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದರೂ ಎಎನ್‌ಎಂಗಳು ಅಲ್ಲಿ ನೆಲೆಸುವುದಿಲ್ಲ. ವೈದ್ಯರು ಕೂಡ ತಮ್ಮ ವಸತಿಗೃಹದಲ್ಲಿ ನೆಲೆಸುವುದಿಲ್ಲ. ಇದರಿಂದ ರೋಗಿಯ ತುರ್ತು ಸಮಯಕ್ಕೆ ಸರಿಯಾಗಿ ಸೇವೆ ಸಿಗುವುದಿಲ್ಲ. ರಾತ್ರಿ ವೇಳೆಯ ಹೆರಿಗೆ ಅಥವಾ ಇನ್ನಿತರೆ ಸಂದರ್ಭಗಳಲ್ಲಿ ತೊಂದರೆಯಾಗುತ್ತದೆ. ಆಗ ಅಂಗನವಾಡಿ ಕಾರ್ಯಕರ್ತೆಯರು ಏನೂ ಮಾಡಲಾಗದ ಅಸಹಾಯಕರಾಗುತ್ತಾರೆ.
  • ಸಾಂಕ್ರಾಮಿಕ ಖಾಯಿಲೆ ಹರಡದಂತೆ ಮುನ್ನೆಚ್ಚರಿಕೆಯಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡಿಸಲು ಹಾಗೂ ಹೆರಿಗೆ ಸಂದರ್ಭಕ್ಕಾಗಿ ಎಎನ್‌ಎಂ ಮತ್ತು ಅಂಗನವಾಡಿ ಕಾರ್ಯಕರ್ತರ ಹೆಸರಿನಲ್ಲಿ ಜಂಟಿಯಾಗಿ ೧೦,೦೦೦ ರೂಪಾಯಿ ಗಳನ್ನು ಇಡಲಾಗಿದೆ.  ಪ್ರತಿ ಹೆರಿಗೆ ಸಂದರ್ಭಕ್ಕೆ ಅಗತ್ಯವಾದ ಸ್ವಚ್ಚತೆಗೆಗಾಗಿ ರೂ. ೨೦೦.೦ರವರೆಗೆ ಹಣವನ್ನು ಬಳಸಿಕೊಳ್ಳಬಹುದು. ಅಥವಾ ಸರಳ ಹೆರಿಗೆಯಲ್ಲದಿದ್ದ ಸಂದರ್ಭದಲ್ಲಿ ದೂರದ ಆಸ್ಪತ್ರೆಗೆ ಗರ್ಭಿಣಿಯನ್ನು ಸಾಗಿಸಲು ಹಣವನ್ನು ಬಳಸುವ ಅವಕಾಶವಿದೆ. ಇದನ್ನು ಜನರು ಬಳಸಿಕೊಳ್ಳಬೇಕು. ಮನೆಯಲ್ಲಿ ಹೆರಿಗೆಯನ್ನು ತಪ್ಪಿಸಬೇಕು ಎಂದಿರುತ್ತಾರೆ.
  • ಆರೋಗ್ಯ ಕಾರ್ಯಕರ್ತೆಯರು ಸುರಕ್ಷಿತ ಹೆರಿಗೆ ವ್ಯವಸ್ಥೆಗಾಗಿ ಮನೆ ಭೇಟಿ-
    ಬಾಣಂತಿ, ಗರ್ಭಿಣಿಯರಿಗೆ ಹೆಲ್ತ್ ಕ್ಯಾಂಪ್ ನಡೆಸಬೇಕು. ೩ನೇ ಮತ್ತು ೪ನೇ ಗ್ರೇಡ್ ಮಕ್ಕಳಿಗೆ ಔಷಧೋಪಚಾರ ಮತ್ತು ಪೌಷ್ಟಿಕ ಆಹಾರವನ್ನು ಹೆಚ್ಚು ನೀಡಬೇಕು; ಕಿಶೋರಿಯರಿಗೆ ಋತುಚಕ್ರದ ಬಗ್ಗೆ ಮಾಹಿತಿ ನೀಡಬೇಕು. ಜನರಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಬೇಕು. ಆಪರೇಶನ್ ಮೂಲಕ ಮಗು ಪಡೆ ದವರು ಮನೆಗೆ ತೆರಳಿದ ನಂತರ ಫಾಲೋ-ಅಪ್‌ಗೆ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆಸ್ಪತ್ರೆಗೂ ಮನೆಗೂ ಬಹಳ ಅಂತರವಿದ್ದಾಗ ತೊಂದರೆಯಾಗುತ್ತದೆ. ಆದ್ದರಿಂದ ಈ ವ್ಯವಸ್ಥೆಯನ್ನು ಎಎನ್‌ಎಂಗಳು ಮಾಡುವಂತಾಗಬೇಕು.
  • ಕ್ಷಯರೋಗಿಗೆ ಮಾತ್ರೆ ವಿತರಣೆ ಮತ್ತು ತಪಾಸಣೆಯನ್ನು ಅಂಗನವಾಡಿ ಕಾರ್ಯರ್ತರೇ ಮಾಡಬೇಕಾಗಿದೆ. ಆದರೆ ಎಎನ್‌ಎಂಗಳು ಆರೋಗ್ಯಕ್ಕೆ ಸಂಬಂಧಿಸಿ ದಂತೆ ನೇರ ಸಂಪರ್ಕ ಹೊಂದಿರುವುದರಿಂದ,  ಕ್ಷಯ ರೋಗಿಗಳ ಜವಾಬ್ದಾರಿಯನ್ನು ಎಎನ್‌ಎಂಗಳಿಗೆ ನೀಡಬೇಕು. ಆಗ ಎಲ್ಲಾ ಮಾಹಿತಿಯೂ ಒಂದೇಕಡೆ ಇರುತ್ತದೆ.
  • ಗ್ರಾಮಲೆಕ್ಕಾಧಿಕಾರಿ, ಪಟ್ಟಣ ಪಂಚಾಯ್ತಿ, ವಾರ್ಡ್ ಕೌನ್ಸಿಲರ್, ಗ್ರಾಮ ಪಂಚಾಯ್ತಿ ಸಿಬ್ಬಂದಿ, ವೈದ್ಯಾಧಿಕಾರಿಗಳು-ಇವರೊಂದಿಗೆ ನಾವು ಸಂಪರ್ಕದಲ್ಲಿರ ಬೇಕಾಗುತ್ತದೆ. ಅದೇರೀತಿ ಇದ್ದೇವೆ. ಇದು ತೊಂದರೆಯಿಲ್ಲ ಎಂದು ತಿಳಿಸಿರುತ್ತಾರೆ.

ಅದೇರೀತಿ ಸ್ತ್ರೀಶಕ್ತಿ ಗುಂಪಿನ ಸದಸ್ಯರೊಂದಿಗೆ ಸಂಪರ್ಕದಲ್ಲಿರಬೇಕಾಗಿದೆ. ಪ್ರತಿ ಕಾರ್ಯಕ್ರಮಗಳಿಗೆ ಅವರನ್ನು ಆಮಂತ್ರಿಸಿ, ಕಾರ್ಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಿ ಅತ್ತ ಗಮನ ಹರಿಸುವಂತೆ ಮಾಡಬೇಕಾಗಿದೆ. ಇದನ್ನೂ ಮಾಡುತ್ತಿದ್ದೇವೆ ಎಂದಿರುತ್ತಾರೆ.

ಇನ್ನು ವೈಯಕ್ತಿಕ ಸಂಬಂಧ ಮತ್ತು ಅನುಕೂಲತೆಗಳ ಕುರಿತು ಕೇಳಿದ ಪ್ರಶ್ನೆಗಳಿಗೆ-ಮೇಲಧಿಕಾರಿಗಳೊಂದಿಗೆ ನಮ್ಮ ಸಂಬಂಧ ಪ್ರಜಾಪ್ರಭುತ್ವ ಮಾದರಿಯಲ್ಲಿದೆ. ಬೇಧಭಾವ, ಮೇಲು ಕೀಳು ಇಲ್ಲ. ಸಮಾನತೆ ಇದೆ ಎಂದಿರುತ್ತಾರೆ. ಸಮಯಕ್ಕೆ ಸರಿಯಾಗಿ ಸಂಬಳ ಆಗುತ್ತಿಲ್ಲ. ಇದನ್ನು ತಿಂಗಳಿಗೆ ಸರಿಯಾಗಿ ನೀಡಬೇಕು ಮತ್ತು ಸಂಬಳ ಹೆಚ್ಚು ಮಾಡಬೇಕು ಅನ್ನುವ ಒತ್ತಾಯ ಬಂದಿರುತ್ತದೆ.

ಐದು ವರ್ಷಗಳಿಗೊಮ್ಮೆ ಇನ್‌ಕ್ರಿಮೆಂಟ್ ಇದೆ. ಅದು ಕೇವಲ ಕೆಲಸಕ್ಕೆ ಸೇರಿ ಹತ್ತು ವರ್ಷಗಳವರೆಗೆ ಮಾತ್ರ ಇದೆ. ಆನಂತರ ಇನ್‌ಕ್ರಿಮೆಂಟ್ ಮೊತ್ತ ಕೇವಲ ೨೫ ರೂಪಾಯಿಗಳು. ಇದನ್ನು ಹೆಚ್ಚಿಸಬೇಕು. ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕು. ಪರಸ್ಪರ ವರ್ಗಾವಣೆಗೆ ಅವಕಾಶ ಇದೆ. ಆದರೆ ಇದಕ್ಕೆ ಲಂಚವನ್ನು ನೀಡಬೇಕಾಗುತ್ತದೆ ಎಂದಿರುತ್ತಾರೆ.  ನೌಕರರ ಸಂಘಟನೆ ಇದೆ. ಇದರಿಂದ ನಮ್ಮ ಎಲ್ಲಾ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂಬ ಆತ್ಮ ವಿಶ್ವಾಸ ಹೊಂದಿರುತ್ತಾರೆ.

ಈ ಎರಡು ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅವರ ಕರ್ತವ್ಯ, ತೊಂದರೆಗಳು, ಲೋಪಗಳು, ಒತ್ತಡಗಳು, ಅನಾನುಕೂಲಗಳು ಮತ್ತು ಇನ್ನಿತರೆ ಅನೇಕ ವಿಚಾರಗಳನ್ನು ಚರ್ಚಿಸಲಾಯಿತು. ಒಟ್ಟಾರೆ ಅರ್ಥಪೂರ್ಣವಾಗಿ ನಡೆದ ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಕೆಲವು ಒಮ್ಮತದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಇದನ್ನು ಸಂಬಂಧಿಸಿದ ಸರಕಾರಿ ಇಲಾಖೆಗೆ ಮತ್ತು ಮಂತ್ರಿಗಳಿಗೆ ರವಾನಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ.

೧. ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲಸದ ಜವಾಬ್ದಾರಿ ಮತ್ತು ಒತ್ತಡ ಹೆಚ್ಚಾಗಿದೆ. ಇವರು ಸುಮಾರು ೨೬ ವಿವಿಧ ಮಾಹಿತಿಯುಳ್ಳ ದಾಖಲೆಗಳನ್ನು ನಿರ್ವಹಿಸುತ್ತಿರುವುದರ ಜೊತೆಗೆ ಕಾಲಕಾಲಕ್ಕೆ ಬರುವ ಜನಗಣತಿ, ಮಸ್ಕಿಟೋ ಸರ್ವೆ, ಚಿಕೂನ್‌ಗುನ್ಯಾ ಸರ್ವೆ ಮತ್ತಿತರ ಹೆಚ್ಚಿನ ಕೆಲಸದ ಹೊರೆ ಅವರ ಮೇಲಿದೆ. ಇದರಿಂದ ಅವರಿಗೆ ನಿಗದಿತ ಕೆಲಸ ಅನ್ನುವುದೇ ಇಲ್ಲ. ಇದನ್ನು ಆದಷ್ಟು ಕಡಿಮೆಗೊಳಿಸಿ ನಿಗದಿತ ಕೆಲಸವನ್ನು ಮಾತ್ರ ಮಾಡಲು ಕ್ರಮವಹಿಸ ಬೇಕೆಂದು ಈ ಕಾರ್ಯಾಗಾರವು ಸರಕಾರವನ್ನು ಒತ್ತಾಯಿಸುತ್ತದೆ.

೨. ಬಹುತೇಕ ಗ್ರಾಮ ಪಂಚಾಯ್ತಿಗಳು ಅಂಗನವಾಡಿ ಕೇಂದ್ರಗಳನ್ನು ನಮ್ಮವು, ಇವುಗಳ ಜವಾಬ್ದಾರಿ ನಮ್ಮದು ಎನ್ನುವ ಭಾವನೆಯನ್ನು ಹೊಂದಿಲ್ಲ. ಈ ಕೇಂದ್ರಗಳಿಗೆ ಅನೇಕ ಕಡೆ ಪ್ರೋತ್ಸಾಹ ಕೂಡ ದೊರೆಯುತ್ತಿಲ್ಲ. ಈ ಕೇಂದ್ರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದವಾಗಿವೆ. ಇವುಗಳ ಪೂರ್ಣ ಜವಾಬ್ದಾರಿ ಆ ಇಲಾಖೆಯದು ಎಂದು ಗ್ರಾಮಪಂಚಾಯತಿಗಳು ಪರಿಭಾವಿಸಿಕೊಂಡಿವೆ. ಈ ರೀತಿಯ ನಿಲುವನ್ನು ಪಂಚಾಯ್ತಿಗಳು ತಳೆಯ ಬಾರದು. ಊರಿನ ಮಹಿಳೆಯರ, ಗರ್ಭಿಣಿ ಬಾಣಂತಿಯರ ಮತ್ತು ಮಕ್ಕಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಅಂಗನವಾಡಿಗಳ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್‌ಗಳು ವಹಿಸಿಕೊಳ್ಳಬೇಕೆಂದು ಈ ಕಾರ್ಯಾಗಾರವು ಒಮ್ಮತದಿಂದ ನಿರ್ಣಯಿಸುತ್ತದೆ.

೩. ಒಟ್ಟು ಜನಸಂಖ್ಯೆಯ ಸುಮಾರು ಶೇ. ೬೫ರಷ್ಟು ಇರುವ ಮಹಿಳೆಯರು ಮತ್ತು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ಮತ್ತು ಸರಕಾರದ ಅನೇಕ ಕಾರ್ಯಕ್ರಮಗಳನ್ನು ಉದಾಹರಣೆಗೆ, ಸ್ತ್ರೀಶಕ್ತಿ ಗುಂಪುಗಳ ಸಂಘಟನೆ, ರೋಗನಿರೋಧಕ ಚುಚ್ಚುಮದ್ದು ಕಾರ್ಯಕ್ರಮ, ಪೌಷ್ಟಿಕ ಆಹಾರ, ತಾಯಂದಿರ ಸಂಘಟನೆ ಮುಂತಾದವನ್ನು ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಳನ್ನು ಖಾಯಂ ಗೊಳಿಸಬೇಕೆಂದು ಈ ಕಾರ್ಯಾಗಾರವು ಸರಕಾರವನ್ನು ಒತ್ತಾಯಿಸುತ್ತದೆ.

೪. ಪ್ರಸ್ತುತ ಪ್ರತಿಯೊಂದು ಅಂಗನವಾಡಿಗಳು ಸೀಮಿತ ಪ್ರಮಾಣದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಅನೇಕ ಅನುಕೂಲಗಳನ್ನು ಒದಗಿಸಿಕೊಡುತ್ತಿವೆ. ಆದರೆ ಈ ಸೌಲಭ್ಯಗಳು ಎಲ್ಲಾ ಗರ್ಭಿಣಿ ಬಾಣಂತಿಯರಿಗೂ ದೊರೆಯುತ್ತಿಲ್ಲ. ಇದರಿಂದ ಅನೇಕ ಕುಟುಂಬಗಳ ಗರ್ಭಿಣಿ ಮತ್ತು ಬಾಣಂತಿಯರು ಸರಕಾರದ ನೆರವಿನಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ಎಲ್ಲಾ ವರ್ಗದ ಗರ್ಭಿಣಿ ಮತ್ತು ಬಾಣಂತಿಯರಿಗೆ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಸರಕಾರಿ ಸೌಲಭ್ಯಗಳನ್ನು ಒದಗಿಸಬೇಕೆಂದು ಈ ಕಾರ್ಯಾಗಾರವು ನಿರ್ಣಯಿಸುತ್ತದೆ.

೫. ಪ್ರಸ್ತುತ ಅಂಗನವಾಡಿ ಕಟ್ಟಡಗಳಿಗೆ ಒಂದು ನಿರ್ಧಿಷ್ಟ ವಿನ್ಯಾಸವಿಲ್ಲ. ಮತ್ತು ಸ್ವಂತ ಕಟ್ಟಡಗಳು ಕೂಡ ಅತ್ಯಂತ ಕಡಿಮೆ ಪ್ರಮಾಣದಲ್ಲಿವೆ. ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲ ಬಗೆಯ ಸೌಲಭ್ಯಗಳು ಉದಾಹರಣೆ, ಶೌಚಾಲಯ, ಕುಡಿಯುವ ನೀರು, ಆಟದ ಸಾಮಗ್ರಿಗಳು, ಪ್ರಥಮ ಚಿಕಿತ್ಸೆಯ ಕಿಟ್ಟು, ತೂಕದ ಯಂತ್ರ ಮುಂತಾದವುಗಳನ್ನು ವ್ಯವಸ್ಥಿತ ರೀತಿಯಲ್ಲಿ ಒದಗಿಸಬೇಕೆಂದು ಈ ಕಾರ್ಯಾಗಾರವು ಸರಕಾರವನ್ನು ಒತ್ತಾಯಿಸುತ್ತದೆ.

೬. ಸ್ತ್ರೀಶಕ್ತಿ ಗುಂಪುಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅವುಗಳ ವ್ಯವಹಾರದ ಪ್ರಮಾಣವೂ ಕೂಡ ವೇಗವಾಗಿ ವಿಸ್ತರಿಸುತ್ತಿದೆ. ಈ ದಿಶೆಯಲ್ಲಿ ಬ್ಯಾಂಕುಗಳ ಕಾಣಿಕೆ ಅಪಾರ ವಾಗಿದೆ. ಅನೇಕ ಕಾರಣಗಳಿಂದಾಗಿ ಸ್ತ್ರೀಶಕ್ತಿ ಗುಂಪುಗಳು ಬ್ಯಾಂಕುಗಳ ಜೊತೆಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಆದುದರಿಂದ ಮೊದಲನೆಯದಾಗಿ, ತಾಲ್ಲೂಕು ಮಟ್ಟದಲ್ಲಿ ಸ್ತ್ರೀಶಕ್ತಿ ಗುಂಪುಗಳ ವ್ಯವಹಾರ ನಿರ್ವಹಣೆಗಾಗಿ ಪ್ರತ್ಯೇಕ ಬ್ಯಾಂಕೊಂದನ್ನು ಸ್ಥಾಪಿಸಬೇಕೆಂದು ಇದು ಸಾಧ್ಯವಾಗದಿದ್ದರೆ, ಈಗಿರುವ ಬ್ಯಾಂಕ್ ಶಾಖೆಗಳಲ್ಲಿ ಸ್ತ್ರೀಶಕ್ತಿಗುಂಪುಗಳ ವ್ಯವಹಾರಕ್ಕಾಗಿ ಪ್ರತ್ಯೇಕ ವಿಭಾಗವೊಂದನ್ನು ಸ್ಥಾಪಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಾಗಾರವು ಸರಕಾರವನ್ನು ಒತ್ತಾಯಿಸುತ್ತದೆ.

೭. ಆರೋಗ್ಯ ಇಲಾಖೆ ಮತ್ತು ಅಂಗನವಾಡಿ ಕೇಂದ್ರಗಳ ನಡುವಣ ಸಂಬಂಧ ಹೇಳಿಕೊಳ್ಳುವಷ್ಟು ಸೌಹಾರ್ದಯುತವಾಗಿಲ್ಲ. ಆರೋಗ್ಯ ಇಲಾಖೆ ನಿಯಮಿತವಾಗಿ ಅಂಗನವಾಡಿ ಕೇಂದ್ರಗಳ, ಮಕ್ಕಳ ಮತ್ತು ತಾಯಂದಿರ ಆರೋಗ್ಯ ತಪಾಸಣೆ ಯನ್ನು ನಡೆಸಬೇಕು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಬೇಕಾಗಿರುತ್ತದೆ. ಅನೇಕ ಕಾರಣಗಳಿಂದಾಗಿ ಇದು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ದಿಶೆಯಲ್ಲಿ ಆರೋಗ್ಯ ಇಲಾಖೆ ಗಮನಹರಿಸಿ ನಿಯಮಿತವಾಗಿ ಅಂಗನವಾಡಿಗಳಲ್ಲಿ ಆರೋಗ್ಯ ತಪಾಸಣೆ ನಡೆಸುವ ವ್ಯವಸ್ಥೆ ಮಾಡಬೇಕೆಂದು ಕಾರ್ಯಾಗಾರವು ಸರಕಾರವನ್ನು ಒತ್ತಾಯಿಸುತ್ತದೆ.

ಭಾಗ

ಮೇಲಿನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ೫೬ ಅಂಗನವಾಡಿ ಕಾರ್ಯಕರ್ತೆ ಯರಿಗೆ ನಿಗದಿತ ನಮೂನೆಯ ಪ್ರಶ್ನಾವಳಿಯನ್ನು ತಯಾರಿಸಿ ಅವನ್ನು ತುಂಬಿಕೊಡಲು ಕೋರಲಾಗಿತ್ತು. ಈ ಪ್ರಶ್ನಾವಳಿಯಲ್ಲಿ ನಾಲ್ಕು ಭಾಗ ಮಾಡಿಕೊಳ್ಳಲಾಗಿತ್ತು.  ಮೊದಲ ಭಾಗದಲ್ಲಿ ಸಾಮಾನ್ಯ ಮಾಹಿತಿಯನ್ನು, ಎರಡನೆಯ ಭಾಗದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು, ಮೂರನೆಯ ಭಾಗದಲ್ಲಿ, ಮಕ್ಕಳ ಪೌಷ್ಠಿಕ ಆಹಾರ ಮತ್ತು ಆರೋಗ್ಯ ತಪಾಸಣೆಯನ್ನು ಮತ್ತು ನಾಲ್ಕನೆಯ ಭಾಗದಲ್ಲಿ ಸ್ತ್ರೀಶಕ್ತಿ ಗುಂಪುಗಳ ಬಗ್ಗೆ ಪ್ರಶ್ನೆಗಳನ್ನು ರೂಪಿಸಲಾಗಿತ್ತು. ಈ ಪ್ರಶ್ನಾವಳಿಯಲ್ಲಿ ತುಂಬಿರುವ ಪ್ರಮುಖ ಮಾಹಿತಿಯನ್ನು ಕೋಷ್ಟಕ ರೀತಿಯಲ್ಲಿ ನೀಡಲಾಗಿದೆ. ಇದನ್ನು ಗಮನಿಸಿದಾಗ ಭಾಗ ಮೂರರಲ್ಲಿ ನೀಡಿರುವ ಗುಂಪು ಚರ್ಚೆಯ ಮಾಹಿತಿಗೂ ಈ ಕೋಷ್ಠಕಕ್ಕೂ ಅನೇಕ ಸಂದರ್ಭದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅಂದರೆ ಗುಂಪಿನಲ್ಲಿ ಬರುವ ಉತ್ತರಕ್ಕೂ ಬಿಡಿಬಿಡಿಯಾಗಿ ಬರುವ ಉತ್ತರಕ್ಕೂ ವ್ಯತ್ಯಾಸವಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಭಾಗ-೧ರಲ್ಲಿ ಕಾರ್ಯಕರ್ತೆಯರಿಗೆ ಸಂಬಂಧಿಸಿದ ಹೆಸರು, ವಿದ್ಯಾರ್ಹತೆ, ವೈವಾಹಿಕತೆ, ಹುದ್ದೆ, ಜಾತಿ, ಧರ್ಮ, ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ, ತರಬೇತಿ, ಊರಿನ ಜನಸಂಖ್ಯೆ, ಭೂಹಿಡುವಳಿ, ಗ್ರಾಮದ ಇನ್ನಿತರ ಸವಲತ್ತುಗಳ ಬಗ್ಗೆ ಸಾಮಾನ್ಯ ಮಾಹಿತಿಯನ್ನು ಕೇಳಲಾಗಿತ್ತು. ಇದರಲ್ಲಿ ಮುಖ್ಯವಾದವು ಮತ್ತು ನಿಖರವಾದ ಮಾಹಿತಿಯುಳ್ಳವನ್ನು ಕೋಷ್ಠಕ ರೂಪದಲ್ಲಿ ನೀಡಲಾಗಿದೆ.

ಕೋಷ್ಠಕ೧ ಅಂಗನವಾಡಿ ಕಾರ್ಯಕರ್ತೆಯರ ವಿದ್ಯಾರ್ಹತೆ :

ವಿದ್ಯಾರ್ಹತೆ ಸಂಖ್ಯೆ ಶೇಕಡಾ ಪ್ರಮಾಣ
ಎಸ್.ಎಸ್.ಎಲ್.ಸಿ ೩೫ ೫೬.೫
ಪಿ.ಯು.ಸಿ ೧೫ ೨೬.೮
ಬಿ.ಎ. ೧೦.೭
ಒಟ್ಟು ೫೬ ೧೦೦.೦೦

ಮೇಲಿನ ಕೋಷ್ಟಕದಲ್ಲಿ ಅಂಗನವಾಡಿ ಕಾರ್ಯರ್ತೆಯರ ವಿದ್ಯಾರ್ಹತೆಯನ್ನು ನೀಡಲಾಗಿದೆ. ಇದನ್ನು ಗಮನಿಸಿದರೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರುವವರ ಸಂಖ್ಯೆ ಶೇ. ೫೬.೫ರಷ್ಟಿದ್ದು, ಪಿಯುಸಿಯನ್ನು ಶೇ. ೨೬.೮ರಷ್ಟು,  ಮತ್ತು ಡಿಗ್ರಿಯನ್ನು ಶೇ. ೧೦.೭ರಷ್ಟನ್ನು ಹೊಂದಿರುತ್ತಾರೆ. ಹೆಚ್ಚಿನವರು ಕಡಿಮೆ ವಿದ್ಯಾರ್ಹತೆಯನ್ನು ಹೊಂದಿದವರಾಗಿರುತ್ತಾರೆ. ಇವರು ಮಕ್ಕಳ ಮನಸ್ಸನ್ನು ಅರಿತು ಅವರ ಪಠ್ಯವನ್ನು ಅರ್ಥವಾಗುವಂತೆ ತಿಳಿಹೇಳುವ ಅಥವಾ ಸರಕಾರಕ್ಕೆ ನೀಡಬೇಕಾದ ಮಾಹಿತಿಯ ನಮೂನೆಗಳನ್ನು ತುಂಬಲು ಕಷ್ಟವಾಗಬಹುದು. ಆದ್ದರಿಂದ ಇವರಿಗೆ ಹೆಚ್ಚಿನ ತರಬೇತಿ ನೀಡಬೇಕಾಗುತ್ತದೆ. ಉಳಿದ ಅಲ್ಪಪ್ರಮಾಣದ ಕಾರ್ಯಕರ್ತೆಯರು ಮಾತ್ರ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿರುವುದನ್ನು ಕಾಣಬಹುದು.

ಕೋಷ್ಠಕ೨ ಕಾರ್ಯಕರ್ತೆಯರ ಜಾತೀವಾರು ಸಂಖ್ಯೆ :

ಜಾತಿಗಳು ಸಂಖ್ಯೆ ಶೇಕಡಾ ಪ್ರಮಾಣ
ಪ.ಜಾತಿ ೧೦.೭೨
ಪ.ಪಂಗಡ ೧೩ ೨೩.೨೨
ಲಿಂಗಾಯಿತ ೧೫ ೨೬.೭೮
ಬ್ರಾಹ್ಮಣ ೮.೯೨
ಮುಸ್ಲೀಂ ೭.೧೪
ಇತರೆ ೧೩ ೨೩.೨೨
ಒಟ್ಟು ೫೬ ೧೦೦.೦೦

ಮೇಲಿನ ಕೋಷ್ಠಕದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಉದ್ಯೋಗವನ್ನು ಲಿಂಗಾಯತ  (ಶೇ. ೨೬.೭೮) ಸಮುದಾಯವು ಪಡೆದಿರುತ್ತದೆ. ಎರಡನೆಯ ಸ್ಥಾನದಲ್ಲಿ ಪರಿಶಿಷ್ಟ ಪಂಗಡ(ಶೇ. ೨೩.೨೨) ಸಮುದಾಯದವರು ಹೊಂದಿರುತ್ತಾರೆ. ನಾಯಕ ಸಮುದಾಯ ಹೆಚ್ಚಿರುವುದರಿಂದ ಹೆಚ್ಚಿನ ಪಾಲನ್ನು ಪಡೆದಿರಬಹುದು ಅನ್ನಿಸುತ್ತದೆ. ಪರಿಶಿಷ್ಟ ಜಾತಿ ಸಮುದಾಯದವರು ಶೇ. ೧೦.೭೨ರಷ್ಟು ಉದ್ಯೋಗವನ್ನು ಪಡೆದಿರು ವುದಾಗಿಯೂ, ಉಳಿದ ಬ್ರಾಹಣ ಸಮುದಾಯದವರು ಶೇ. ೮.೯೨ರಷ್ಟನ್ನು  ಮತ್ತು ಮುಸ್ಲಿಂ ಸಮುದಾಯದವರು ಶೇ. ೭.೧೪ರಷ್ಟನ್ನು ಹಾಗೆಯೇ ಇತರೆ ಸಮುದಾಯ ದವರು (ಶೆಟ್ಟಿ, ಗಂಗಮತಸ್ಥರು, ಕುರುಬರು, ಕಬ್ಬೇರ) ಶೇ. ೨೩.೨೨ರಷ್ಟು ಪ್ರಮಾಣದ ಉದ್ಯೋಗವನ್ನು ಪಡೆದುಕೊಂಡಿರುವುದಾಗಿ ತಿಳಿದುಬರುತ್ತದೆ.


[1]     ಕಾರ್ಯಾಗಾರದ ವಿಧಾನ : ಅಭಿವೃದ್ಧಿ ಅಧ್ಯಯನ ವಿಭಾಗವು ಬಹಳ ಹಿಂದಿನಿಂದಲೂ ಅಳವಡಿಸಿಕೊಂಡು ಬಂದಿರುತ್ತದೆ. ಮೊದಲಿಗೆ ಈ ವಿಧಾನವನ್ನು ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು ಪ್ರಾಯೋಗಿಕವಾಗಿ ಆರಂಭಿಸಿದರು. ತದನಂತರದಲ್ಲಿ ಈ ವಿಧಾನ ಉತ್ತಮ ಮತ್ತು ಪರಿಣಾಮಕಾರಿಯಾಗಿದೆ ಎಂದು ಶಿಬಿರಾರ್ಥಿಗಳು ಹಾಗೂ ವಿದ್ವಾಂಸರು ಮೆಚ್ಚಿದ ಹಿನ್ನೆಲೆಯಲ್ಲಿ ಈ ವಿಧಾನವನ್ನು ಅನುಸರಿಸಿಕೊಂಡು ಬರಲಾಯಿತು. ಹೆಚ್ಚಿನ ಮಾಹಿತಿಗಾಗಿ ಎಂ. ಚಂದ್ರಪೂಜಾರಿ ಅವರ ಸಮಾಜ ಸಂಶೋಧನೆ ಪುಸ್ತಕವನ್ನು ನೋಡಬಹುದು.