ಹಿತ್ತಿಲಲ್ಲಿ ಬೆಳೆದಿರುವ ಎಲ್ಲ ಹೂವುಗಳಿಗೂ ತನ್ನದೇ ಆದ ಸ್ಥಾನ ಮಾನ. ಮಲ್ಲಿಗೆ, ಸಂಪಿಗೆ, ಗುಲಾಬಿ, ದಾಸವಾಳ, ಸುಗಂಧರಾಜ, ಬಣ್ಣದಿಂದ, ಸುವಾಸನೆಯಿಂದ  ಮನಸೆಳೆದರೆ, ಹಾರಾಡುವ ಹಕ್ಕಿಯಂತೆ ಕಾಣುವ ‘ಬರ್ಡ್ ಆಫ್ ಪ್ಯಾರಡೈಸ್,’ ಬಾತುಕೋಳಿಯಂತೆ ಕಾಣುವ ಈಶ್ವರೀ ಬಳ್ಳಿಯ ಹೂಗಳು ಮನಮೋಹಕ. ಪುಟ್ಟ ಪುಟ್ಟ ಹೂಗಳ ಗೊಂಚಲಾದ ಜೆರೇನಿಯಂ, ಸ್ಟಾರ್ ಫ್ಲವರ್ ಹಾಗೂ ಪ್ರೇಯಿಂಗ್ ಮಾಂಕ್ (ಇದೊಂದು ಬಗೆಯ ಹೂವು.) ನೋಡುಗರ ಗಮನ ಸೆಳೆಯದೇ ಇರದು. ಇಷ್ಟೆಲ್ಲ ಇದ್ದರೂ ಒಂದು ಆರ್ಕಿಡ್ ಹೂವಿಲ್ಲದಿದ್ದರೆ ಹಿತ್ತಿಲ ಸೌಂದರ್ಯ ಅಪೂರ್ಣ.

ನೋಡಿದೊಡನೇ ಬೇರೆ ಅನ್ನಿಸುವದು, ನೋಡದೆ ಮುಂದೆಹೋಗಲು ಸಾಧ್ಯವಿಲ್ಲದೇ ಇರುವಂತಹ ಹೂವೇ ‘ಆರ್ಕಿಡ್’. ಹೂವಿನ ಒಂದು ದಳ(ರೇಕು) ಉಳಿದವಕ್ಕಿಂತ ಭಿನ್ನ, ಆಕರ್ಶಕ. ಈ ಎದ್ದು ಕಾಣುವ ದಳವೇ ಈ ಹೂವಿನ ಹೆಗ್ಗುರುತು. ಬೇರೆ ಬೇರೆ ಬಣ್ಣದ ಹೂವುಗಳಿದ್ದರೂ, ಎಲ್ಲದರಲ್ಲೂ ಇದೇ ಗುರುತು. ಇದರ ಇನ್ನೊಂದು ವಿಶೇಷತೆ ಎಂದರೆ ಮೇಲಿಂದ ಕೆಳಗೆ ಇಳಿಬೀಳುವ ‘ಏರಿಯಲ್ ರೂಟ್ಸ್’. ವಾತಾವರಣದಿಂದ ತೇವಾಂಶ, ಪೌಷ್ಟಿಕಾಂಶ  ಹೀರಿಕೊಳ್ಳಲು ಪ್ರಕೃತಿ ಇತ್ತ ವಿಶೇಷ ಕೊಡುಗೆ.

ಆರ್ಕಿಡೇಸಿ ಸಸ್ಯಕುಟುಂಬಕ್ಕೆ ಸೇರಿದ ಈ ಗಿಡದ ಹೂವುಗಳು ಎಷ್ಟೇ ದೊಡ್ಡದಾಗಿದ್ದರೂ ಬೀಜಗಳು ಬಹು ಸಣ್ಣ. ಹಾಗಾಗಿ ಸಸ್ಯಾಭಿವೃದ್ಧಿ ಕಾಂಡದಿಂದಲೇ. ಹೆಚ್ಚು ನೀರು ಬಯಸದೇ, ಬಿಸಿಲು ನೆರಳು ಎರೆಡರಲ್ಲೂ ಬೆಳೆಯುವಂತಹುದು. ಕೆಲವು ಗಿಡಗಳ ಎಲೆಗಳು ಮೇಣ ಹಚ್ಚಿದಂತೆ ಕಾಣುತ್ತದೆ ವೆನಿಲ್ಲ ಗಿಡದಂತೆ.(ವೆನಿಲ್ಲ ಸಹ ಆರ್ಕಿಡ್ ಗುಂಪಿಗೆ ಸೇರಿದೆ)  ಇದು ನೀರು ಬೇಗ ಆವಿಯಾಗದಂತಿರಲು ಪ್ರಕೃತಿ ಕಂಡು ಕೊಂಡ ಉಪಾಯ.

ಕೆಲವೊಂದು ಆರ್ಕಿಡ್ ಗಳಿಗೆ ಬೇರಿನ ಬಳಿ ಗೆಡ್ಡೆಯಾಗುತ್ತದೆ. ಗಿಡ ಒಣಗಿದರೂ ಮತ್ತೆ ಚಿಗುರಲು ಇದು ಸಹಾಯಕ. ಇಂತಹ ಗಿಡಗಳು ವರ್ಷದಲ್ಲಿ ೩-೪ ತಿಂಗಳು ‘ಸುಪ್ತಾವಸ್ಥೆ’ಗೆ ಹೋಗುತ್ತವೆ. ಸಮಯ ಬಂದಾಗ ತಾನಾಗಿಯೇ ಚಿಗುರುವುದು ಇದರ ಸ್ವಭಾವ. ಇನ್ನು ಕೆಲವು ಗಿಡಗಳಲ್ಲಿ ಹೂವು ಬಂದ ಕಾಂಡದಲ್ಲಿ ಹೊಸ ಗಿಡ ಶುರುವಾಗುತ್ತದೆ.  ಇದ್ದಿಲು, ಇಟ್ಟಿಗೆ ಚೂರುಗಳನ್ನು ಹಾಕಿ ಬೆಳೆದಾಗ, ಬೇರು ಹರಡಲು ಅನುಕೂಲ. ತೆಂಗಿನ ಜುಂಗಿರುವ ಸಿಪ್ಪೆಯೊಳಗೆ ಸಹ ಈ ಗಿಡ ಬೆಳೆಸ ಬಹುದು. ಆದರೆ ಎಲ್ಲರ ತೋಟಗಳಲ್ಲಿ ಈ ಗಿಡ ಕಾಣದೇ ಇರುವುದಕ್ಕೆ ಒಂದೇ ಕಾರಣ ಇದರ ದುಬಾರಿ ಬೆಲೆ. ೧೫೦ರಿಂದ ೫೦೦ ರೂಗಳ ವರೆಗೆ ಇದರ ಬೆಲೆ ಇದೆ.

ಇಷ್ಟಾದರೂ, ಮದುವೆ ಮನೆಗಳಲ್ಲಿ, ಅದ್ದೂರಿ ಸಮಾರಂಭಗಳಲ್ಲಿ, ಈ ಹೂಗಳ ಸಂಭ್ರಮ ಹೇಳ ತೀರದು. ಹೂಗುಚ್ಛಗಳಲ್ಲೂ ಇದಕ್ಕೆ ಪ್ರಥಮ ಸ್ಥಾನ. ಕಾರಣ ಇಷ್ಟೇ. ನೋಡಲು ಸುಂದರವಷ್ಟೇ ಅಲ್ಲ, ತಿಂಗಳಾದರೂ ಬಣ್ಣ ಸಹ ಮಾಸುವುದಿಲ್ಲ. ಹೂವು ಆಗಷ್ಟೇ ತಂದ ಹಾಗೇ ಇರುವುದು ಆರ್ಕಿಡ್ ನ ವಿಶೇಷ. ಒಮ್ಮೆ ಹಣಕೊಟ್ಟು ತಂದ ಗಿಡದಿಂದ ಹೊಸ ಗಿಡಗಳನ್ನು ಮಾಡಿಕೊಳ್ಳ ಬಹುದು.

ಗಿಡಗಳಿಗೆ ಹೆಚ್ಚು ಬೇಡಿಕೆ, ಬೆಲೆ ಎರೆಡೂ ಇರುವ ಕಾರಣ ಗಿಡಗಳ ಮಾರಾಟ ಒಂದು ಉದ್ಯೋಗವಾಗ ಬಹುದು. ಹೂವುಗಳಿಗೂ ಒಳ್ಳೆಯ ಬೆಲೆ ಸಿಗುವುದರಿಂದ  ಇದನ್ನು ಬೆಳೆಯುವುದು ಲಾಭಕರ. ಬಳ್ಳಿಯಾಕಾರದಲ್ಲಿ ಬಿಡುವ ಹೂವುಗಳಿಗೆ, ಕೆಂಪು ಹಳದಿ ಮಿಶ್ರ ಬಣ್ಣದ ಹೂವುಗಳಿಗೆ  ಯಾವಾಗಲೂ ‘ಡಿಮ್ಯಾಂಡ್’. ಬಿಳಿ ಮತ್ತು ಗುಲಾಬಿ ಬಣ್ಣದ ಹೂಗಳು ಹೂದಾನಿಯಲ್ಲಿಡಲು ಸೂಕ್ತ.

ತಾರಸಿಯಲ್ಲಿ ನೆರಳು ಮನೆ ನಿರ್ಮಿಸಿ ಬರೀ ಆರ್ಕಿಡ್ ಬೆಳೆದವರಿದ್ದಾರೆ. ನೆರಳುಮನೆಯ ಮಂದ ಬೆಳಕಿನಲ್ಲಿ ಒಂದು ರಮ್ಯ ಲೋಕವೇ ಸೃಷ್ಟಿಯಾದಂತೆ. ಅಷ್ಟು ಮಾಡಲು ಸಾಧ್ಯವಿಲ್ಲದಿದ್ದರೂ, ಒಂದೆರೆಡು ಗಿಡ ಬೆಳೆಯ ಬಹುದಲ್ಲವೇ? ಎರಡೇಕೆ? ಹತ್ತಾರು ಆರ್ಕಿಡ್ ಬೆಳೆದಿದ್ದಾರೆ ದೇಸಾಯಿಯವರು, ಅದೂ ಅವರ ಮನೆಯ ತಾರಸಿಯ ಮೇಲೆ. ಶೇಡ್ ನೆಟ್ ಕೆಳಗೆ ಅರಳಿರುವ ಹೂಗಳನ್ನು ನೋಡಿದವರು ಮಂತ್ರಮುಗ್ಧರಾಗ ಬೇಕು. ನೀರು ಹನಿಸಲು ಒಂದು ಪುಟ್ಟ ಪಂಪ್ ಬಳಸುತ್ತಾರೆ. ಸುಲಭವಾಗಿ ಬೆಳೆಯ ಬಹುದು ಅನ್ನುವ ದೇಸಾಯಿಅವರ ತಾರಸಿಯಲ್ಲಿ ಬೇರೆ ಬೇರೆ ಜಾತಿಯ ಆರ್ಕಿಡ್ ಗಳಿವೆ.   ಲಾಲ್ ಬಾಗ್ ನಲ್ಲಿ ನಡೆಯುವ ಮೇಳಗಳ ಸಮಯದಲ್ಲಿ ಗಿಡಗಳು ದೊರೆಯುತ್ತವೆ.  ಬೆಳೆದು ನೋಡಿ, ಆರ್ಕಿಡ್ ಹೂಬಿಟ್ಟಾಗ ಆಗುವ ಅನುಭವ ತಿಳಿಸಲು ಮರೆಯಬೇಡಿ ಎನ್ನುವ ದೇಸಾಯರ ಆರ್ಕಿಡ್ ಪ್ರೀತಿ ಅನನ್ಯ.

(ಚಿತ್ರಗಳು : ರಾಜಾರಾಂ)