ಭಾರತೀಯ ಕಲೆಗಳಲ್ಲಿ ಒಂದು ವಿಶೇಷತೆಯಿದೆ. ಪ್ರದರ್ಶನ, ಪ್ರಶಂಸನ ಅದರ ಮುಖ್ಯ ಉದ್ದೇಶಗಳಲ್ಲಿ ಒಂದಾದರೂ, ಕಲೆಯು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಕಲೆಯಿಂದ ಜೀವನ ಸಮೃದ್ಧವಾಗುತ್ತಿದ್ದಂತೆ, ಜೀವನದಿಂದ ಕಲೆಯು ಬೆಳೆಯುತ್ತದೆ. ಹೀಗೆ ಜೀವನ-ಕಲೆಗಳು ಪ್ರದರ್ಶಿಸುವ ಕಲಾವಿದನಿಗೆ ಮಾತ್ರ ಸೀಮಿತವಾಗದೆ, ಸಹೃದಯನಿಗೂ ಅನ್ವಯಿಸುತ್ತದೆ. ನಿತ್ಯ ಜೀವನವು ಸುಶೀಲವಾಗಬೇಕಾದರೆ ಕಲೆಯು ಅತ್ಯಗತ್ಯವೆಂದು ತಿಳಿದಿರುವವರು ನಾವು ಭಾರತೀಯರು. ನಮ್ಮ ಈ ದೃಷ್ಟಿಕೋನ ಮತ್ತು ಆಚರಣೆಗಳನ್ನು ಇತರ ಸಂಸ್ಕೃತಿಯ ಜನರು ಕಂಡು ಮೆಚ್ಚಿದ್ದಾರೆ. ಅಷ್ಟೇ ಅಲ್ಲದೆ, ಬಂದು ಕಲಿತು ಸುಶೀಲರಾಗಿದ್ದಾರೆ.

ಹೀಗೆ ಹೇಳಿದಾಕ್ಷಣವೇ, ನಾವು ಮತ್ತು ನಮ್ಮ ಕಲೆಯ ಬೆಳವಣಿಗೆ ಅತ್ಯಂತ ಮಹತ್ತರವಾಗಿ ಎಂದೆಂದು ಕುಂದಿಲ್ಲದೆ ಕೇಡಿಲ್ಲದೆ ಬೆಳೆದು ನಿಂತಿದೆ, ಜಗತ್ತಿನಲ್ಲಿ ನಮಗೆ ಸರಿಸಾಟಿ ಇನ್ನಾರೂ ಇನ್ನಾವುದೂ ಇಲ್ಲ, ಎಂದಲ್ಲ. ಕಾಲಕಾಲಕ್ಕೆ ನಮ್ಮಲ್ಲೂ ಕಂದಾಚಾರಗಳು, ಮೂಢನಂಬಿಕೆಗಳು, ಅಪವಾದಗಳು ಅತ್ಯಂತವಾಗಿ ಬೆಳೆದು ನಮ್ಮ ಜೀವನಕ್ರಮದಲ್ಲಿ, ಕಲೆಯ ಆರಾಧನೆಯಲ್ಲಿ ತುಂಬ ಅಡಚಣೆಗಳು, ಸಂಶಯಗಳು, ಗೊಂದಲಗಳು, ಉಂಟಾಗಿದ್ದು ಇಂದಿಗೂ ಈ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಉಳಿದುಬಂದಿದೆ. ಇದಕ್ಕೆ ನಮಗೆ ನಮ್ಮದು ಎಂಬುವ ಹೆಮ್ಮೆ ಮತ್ತು ಆಸೆ ಇಲ್ಲದಿರುವುದು ಮುಖ್ಯಕಾರಣ. ನಮ್ಮ ಸಂಸ್ಕೃತಿಯ ಭವ್ಯಪರಂಪರೆಯನ್ನು ತಿಳಿಯದೆ, ಅದರ ತಿರುಳನ್ನು ಶ್ರದ್ಧೆಯಿಂದ ಕಲಿಯದೆ, ಅರಿಯದೆ, ಪರಕೀಯ ಸಂಸ್ಕೃತಿಯ ಅಬ್ಬರದ ಆಡಂಬರದ ಡಂಭಾಚಾರಕ್ಕೆ ಮರುಳಾಗಿ, ನಮ್ಮದನ್ನೇ ಹೀಯಾಳಿಸುತ್ತಾ, ಪರರನ್ನು ಅನುಕರಿಸುತ್ತಾ, ನಮ್ಮದೂ ಅಲ್ಲದ ಅವರದಾಗಿಯೂ ಮಾರ್ಪಾಡಾಗದ ತ್ರಿಶಂಕುವಿನ ಸ್ಥಿತಿ ನಮ್ಮ ಯುವಜನಾಂಗಕ್ಕೆ ಇಂದು ಒದಗಿದೆ.

ಇವೆಲ್ಲರದ ಪರಿಹಾರಕ್ಕೆ ಉಪಾಯಮಾರ್ಗವೆಂದರೆ, ನಮ್ಮ ಕಲೆಗಳ ಅಭ್ಯಾಸ, ಸಾಧನೆ. ನಮ್ಮ ಭವ್ಯ ಸಂಸ್ಕೃತಿಯ ಇತಿಹಾಸದ ಅಧ್ಯಯನ ಅಧ್ಯಾಪನ. ಭಾರತೀಯ ಸಂಸ್ಕೃತಿಯನ್ನು ಉಳಿಸಿಬೆಳೆಸಿದ ಮಹಾನ್‌ಚೇತನಗಳ ಜೀವನಚರಿತ್ರೆಯನ್ನು ಒಮ್ಮೆಯಾದರೂ ತಿಳಿದುಕೊಳ್ಳುವುದು ನಮ್ಮ ಜೀವನವಿಧಾನಕ್ಕೆ ಒಂದು ದಾರಿದೀಪವಾಗುವುದು.

ಭರತನಾಟ್ಯವೆಂದರೆ ಕೇವಲ ಒಂದು ಕುಣಿತದ ಕಲೆಯಲ್ಲ. ಅದೊಂದು ದಿವ್ಯವಾದ ಸಮಗ್ರ ಅಭಿವ್ಯಕ್ತಿ. ಸೌಂದರ್ಯದ ಹುಡುಕಾಟ ಅದರ ಮುಖ್ಯ ಧ್ಯೇಯ-ಉದ್ದೇಶ. ಅದರ ಮಾಧ್ಯಮವು ಪ್ರಕೃತಿಯ ಸಹಜ ದೇವಾಲಯವೆಂದು ಹೇಳಬಹುದಾದ ಈ ಮಾನವ ದೇಹ. “ದೇಹೋದೇವಾಲಯ ಪ್ರೋಕ್ತಃ” ಎಂದಿದ್ದಾರೆ. ನಮ್ಮ ಹಿರಿಯರು. ನಮ್ಮ ದೇವಾಲಯಕ್ಕೆ ಇರುವಂತೆ ನಮ್ಮ ದೇಹಕ್ಕೂ ಒಂದು ಸಮತೋಲನದ “ಆಯ”ವಿದೆ. ಆಯವೆಂದರೆ ಯಾವಯಾವ ಅಂಗ-ಪ್ರತ್ಯಂಗಗಳು ಎಷ್ಟು ಎಷ್ಟು ಪ್ರಮಾಣದಲ್ಲಿ ಏನೇನು ಉಪಯೋಗಗಳಿಗೆ ಇರಬೇಕು ಎಂದು ತಿಳಿಸುವ ಮಾಪನವಿಧಾನ. ದೇವಾಲಯಕ್ಕೊಂದು ವಾಸ್ತು ಇರುವಂತೆ ನಮ್ಮ ದೇಹಕ್ಕೂ ಒಂದು ಪ್ರಮಾಣವಿದೆ. ವ್ಯಕ್ತಿಯಿಂದ ವ್ಯಕ್ತಿಗೆ ದೇಹ ಗುಣಧರ್ಮಪ್ರಮಾಣ ಪ್ರಕೃತಿಗಳು ಬೇರೆಬೇರೆಯಾಗಿದ್ದರೂ ಅಂಗ-ಉಪಾಂಗಗಳೆಲ್ಲವೂ ಎಲ್ಲರಿಗೂ ಇರುವಂತಹುದೇ ತಾನೇ. ಆದುದರಿಂದ ಈ ಸಮಾನಾಂತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಋಷಿ-ಮುನಿಗಳು, ಹಿರಿಯರು ಕೆಲವು ಸಾಧನಾಮಾರ್ಗಗಳನ್ನು ಸೂಚಿಸಿದ್ದಾರೆ. ಅದರ ಬಗೆಗೆ ನಾನು ಕೆಲವು ಮಾತುಗಳನ್ನು ಪ್ರಸುತ್ತಪಡಿಸುತ್ತೇನೆ.

ಭರತನಾಟ್ಯವನ್ನು ಅಷ್ಟಾಂಗಯೋಗಕ್ಕೆ ಹೋಲಿಸಬಹುದು. ಎಂಟು ಮೆಟ್ಟಿಲುಗಳನ್ನು ಉಳ್ಳ ಅಷ್ಟಾಂಗಯೋಗದ ಬಗೆಗೆ (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ) ನೀವು ಕೇಳಿರಬಹುದು. ಇದು ಕೇವಲ “ಯೋಗ”ಕ್ಕೆ ಮಾತ್ರವಲ್ಲದೆ ಭರತನಾಟ್ಯ ಕಲೆಗೂ ಅನ್ವಯವಾಗುತ್ತದೆ. ಭರತನಾಟ್ಯಕ್ಕಾಗಿ ಮಾಡುವ ಅಂಗಸಾಧನೆಗೆ ಈ ಎಂಟು ಮೆಟ್ಟಿಲುಗಳೂ ಬೇಕೇಬೇಕು. ನಾಟ್ಯಸಿದ್ಧಿಗೆ ಅದರ ಮಾಧ್ಯಮವಾದ ಈ ದೇಹ ಶುದ್ಧವಾಗಬೇಕು, ಆರೋಗ್ಯದ ಪಟುತ್ವ ಉಂಟಾಗಬೇಕು, ಶಕ್ತಿ ತುಂಬಿ ಸಾತ್ವಿಕ ಸರ್ವಾಂಗಸುಂದರವಾಗಬೇಕು – ಲಾಘವದಿಂದಿರಬೇಕು. ಇದನ್ನು ಸಾಧಿಸಲು ನಾವು ಅಂಗಸಾಧನೆಯನ್ನು ಮಾಡಬೇಕು.

ಅಂಗಗಳು ಎಂದರೆ : ಶಿರಸ್ಸು, ಹಸ್ತಗಳು, ಉರಸ್, ಪಾಶ್ವಗಳು, ಕಟಿ, ಪಾದಗಳು.

ಒಂದು ಭರತನಾಟ್ಯ ಪ್ರಸ್ತುತಿಯಲ್ಲಿ ಈ ಕೆಲವನ್ನು ನೀವು ಕಂಡಿರಬಹುದು.

  • ಸಂಯುತ (೨೪) ಆಸಂಯುತ ಹಸ್ತಗಳು (೨೮) ನೃತ್ತ ಹಸ್ತಗಳು (೩೦) ಹಸ್ತಕರಣಗಳು (೪)
  • ಶಿರೋಭೇದಗಳು (೧೩)
  • ಕಟಿ ಬೇಧಗಳು (೫)
  • ಉರಸ್ (೫), ಪಾಶ್ವ (೫)
  • ಪಾದಭೇದಗಳು (೫)
  • ಚಲನೆಗೆ ಅವಶ್ಯಕವಿರುವ : ಭೂಮಿಚಾರಿ (೧೬) ಆಕಾಶಚಾರಿ (೧೬)
  • ಭಂಗಿಗಳು (ಸಮ, ದ್ವಿ-ತ್ರಿಭಂಗಿಗಳು) ಇತ್ಯಾದಿ
  • ಸ್ಥಾನಕಗಳು : ಪುರುಷ ಸ್ಥಾನಕ ಮತ್ತು ಸ್ತ್ರೀ ಸ್ಥಾನಕಗಳು

ಇವಿಷ್ಟೇ ಅಲ್ಲದೆ ಉಪಾಂಗಗಳ ಚಲನೆ ಅಂದರೆ, ನೇತ್ರ, ಭ್ರೂ, ನಾಸ, ಅಧರ, ಕಪೋಲ ಮತ್ತು ಚಿಬುಕ (ಗಲ್ಲ) ಇವುಗಳೇ ಅಲ್ಲದೆ, ಪ್ರತ್ಯಂಗಗಳು : ಜಠರ (೩ ವಿಧ) ಜಂಘ (೩ ವಿಧ) ಜಾನು (೫ ವಿಧಗಳು) ಇವುಗಳ ಎಲ್ಲ ಪ್ರಭೇದಗಳ ಅಂಗಸಾಧನೆ ದೈನಂದಿನ ಕಲಾಸಾಧನೆಗೆ ಅವಶ್ಯಕವಾದುದು.

ಇವೆಲ್ಲವೂ ಭರತನಾಟ್ಯ ಕಛೇರಿಯಲ್ಲಿ ಒಂದಾದ ಮೇಲೊಂದರಂತೆ ಸಮನ್ವಯವಾಗುತ್ತ ಪ್ರದರ್ಶನವಾಗುತ್ತಲೇ ಇರುತ್ತದೆ. ಇವೆಲ್ಲವೂ ಅದರದರ ಪ್ರಮಾಣಗಳಲ್ಲಿ ಶುದ್ಧವಾಗಿ ಸುಂದರವಾಗಿ ನೋಡುವವರಿಗೆ ತ್ರಾಸವಾಗದಂತೆ ಪ್ರದರ್ಶನಮಾಡುವ ಜವಾಬ್ದಾರಿ ಕಲೆಗಾರರದು. ಇದನ್ನು ಸಾಧಿಸಲು ಅವರು ಕೆಲವು ಅಂಗಸಾಧನೆಯನ್ನು ಶಿಸ್ತಾಗಿ ಮಾಡಲೇಬೇಕು.

ಹಾಗಾದರೆ ಈ ಶಿಸ್ತಿನ ವಿಧಿವಿಧಾನಗಳೇನು?

ಈ ಹಿಂದೆಯೇ ನಿಮಗೆ ತಿಳಿಸಿರುವಂತೆ “ಅಷ್ಟಾಂಗಯೋಗ”ದ ಎಂಟು ಸೋಪಾನಗಳು.

ಯಮ: ಯಮ ಎಂದರೆ ನಾಟ್ಯದ ಕಲಿಕೆ-ಪ್ರದರ್ಶನಕ್ಕೆ ಮುಂಚಿತವಾಗಿ ನಾವು ಮಾಡಿಕೊಳ್ಳಬೇಕಾದ ಏರ್ಪಾಡು. ನಮ್ಮ ದೇಹವನ್ನು ಅದು ಹೇಗೆ ಭರತನಾಟ್ಯದ ವಿವಿಧಭಾವಭಂಗಿಗಳಿಗೆ ಅಳವಡಿಸಿಕೊಳ್ಳಬೇಕು, ಸಹಜ ಸೌಂದರ್ಯವನ್ನು ರೂಢಿಸಿಕೊಳ್ಳಬೇಕು, ಆರೋಗ್ಯವನ್ನು ಶಕ್ತಿಯನ್ನೂ ಸಂಪಾದಿಸಿಕೊಳ್ಳಬೇಕು ಎಂದು ತಿಳಿಸಿ ಸಾಧನೆಯಿಂದ ಸಾಧ್ಯವಾಗಿಸುವ ವಿಧಾನ. ಅಭ್ಯಂಗ, ಎಂದರೆ, ಸ್ನಾನವೂ ಇದರ ಮುಖ್ಯಾಂಶಗಳಲ್ಲಿ ಒಂದು. ನಾವೆಲ್ಲ ತಿಳಿದಿರುವಂತೆ ಸ್ನಾನವು ಕೇವಲ “ಮೈತೊಳೆದುಕೊಳ್ಳುವುದು” ಎಂದು ಮಾತ್ರವಲ್ಲ. ಈ ಅಭ್ಯಂಗದಿಂದ ಆರೋಗ್ಯ ಸಂಪಾದನೆಯಾಗುತ್ತದೆ ಮತ್ತು ದೇಹಕ್ಕೆ ಲಾಘವ ಉಂಟಾಗುತ್ತದೆ. ತೈಲ ಮಾರ್ಜನ, ಎಂದರೆ, ವಾತ-ಪಿತ್ಥ-ಕಫವೆಂಬ ತ್ರಿದೋಷನ್ನು ನಿವಾರಣೆಮಾಡುವಂತಹ (ಆಯುರ್ವೇದ ವೈದ್ಯರಿಂದ ಇದನ್ನು ತಿಳಿದುಕೊಳ್ಳಬಹುದು) ಸೂಕ್ತ ತೈಲವನ್ನು ಹದವಾಗಿ ದೇಹಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ಅಂಗಮರ್ದನ ಎನ್ನುತ್ತಾರೆ. ಇದಕ್ಕಾಗಿ ಪಲ್ಲವ (ಪ್ರದರ್ಶನ), ಮೃದುಮುಷ್ಠಿತಾಡನ (ಪ್ರ-) ಅಂಗುಲಿತಾಡನ (ಪ್ರ-) ಇತ್ಯಾದಿಗಳನ್ನು ಬಳಸಬಹುದು. (ಇದರ ಹೆಚ್ಚಿನ ಮಾಹಿತಿಯನ್ನು ಮಲ್ಲಾಡಿಹಳ್ಳಿಯ ಮಹಾನ್‌ಯೋಗಿ ರಾಘವೇಂದ್ರಸ್ವಾಮೀಜಿಯವರು ಬರೆದಿರುವ “ಅಂಗಮರ್ದನ” ಎಂಬ ಪುಸ್ತಕವನ್ನು ನೋಡಬಹುದು) ಹೀಗೆ, ಹಿತವಾಗಿ ಅಂಗಮರ್ದನವಾದಮೇಲೆ ಅತಿ ಉಷ್ಣವಲ್ಲದ ಅತಿ ಶೀತವಲ್ಲದ ನೀರಿನಿಂದ ಸರ್ವಾಂಗಸ್ನಾನ. ನನಗೆ ಪರಿಚಯವಿರುವ ಖ್ಯಾತ ಆಯುರ್ವೇದ ಪಂಡಿತರೊಬ್ಬರು ಹೇಳುವುದನ್ನು ಕೇಳಿದ್ದೇನೆ ; ನೆತ್ತಿ ಮತ್ತು ತಲೆಯ ಮುಖ್ಯಭಾಗಗಳಿಗೆ ತಣ್ಣೀರೇ ಸೂಕ್ತ ಮತ್ತು ದೇಹದ ಇತರಭಾಗಗಳಿಗೆ ಉಷ್ಣೋದಕ ಬಳಸಬಹುದು! ಇವೆಲ್ಲವನ್ನೂ ಬೆಳಗಿನ ಝಾವದಲ್ಲೇ ಮಾಡಿದರೆ ಉತ್ತಮ. ಕಲೆಗಾಗಿ ಸಾಧನೆಮಾಡುವವರಿಗೆ ಬ್ರಾಹ್ಮೀಮುಹೂರ್ತಕ್ಕಿಂತಲೂ ಉತ್ತಮ ವೇಳೆ ಇನ್ನೊಂದಿಲ್ಲ.

ಇದಾದಮೇಲೆ, ಕಲಾರಾಧನೆಗಾಗಿ ಮಾಡುವ ಎಲ್ಲಕರ್ಮಗಳೂ ಸಿದ್ದಿಸಲೆಂದು ದೇವತಾಪ್ರಾರ್ಥನೆಯನ್ನು ಸ್ವಲ್ಪವಾದರೂ ಮಾಡಬೇಕು. ಅವರವರ ಭಾವಕ್ಕೆ ಅವರವರ ಪೂಜೆ.

ನಿಯಮ: ನಿಯಮವೆಂದರೆ ಯಾವಯಾವಾಗ ಏನೇನು ಮಾಡಬೇಕು ಎನ್ನುವುದು. ಮಾನವನು ಸಹಜವಾಗಿಯೇ ಅಭ್ಯಾಸಶೀಲ (Man is creature of habit) ನಿಯತ ಕಾಲಕ್ಕೆ ತಕ್ಕಂತೆ ನಮ್ಮ ಕಲಾರಾಧನೆಯ ವಿವಿಧ ಸಾಧನೆಗಳನ್ನು ರೂಪಿಸಿಕೊಳ್ಳುವುದು ಅಂಗಸಾಧನೆಗೆ ಅತಿಮುಖ್ಯ. ಮಟಮಟ ಮಧ್ಯಾಹ್ನದಲ್ಲಿ ಚೆನ್ನಾಗಿ ತಿಂಡಿ ತೀರ್ಥಗಳನ್ನು ತಿಂದು-ತೇಗಾಡಿ ಅಂಗಸಾಧನೆಯನ್ನು ಮಾಡಲಾಗುತ್ತದೆಯೇ ? ದಿನ ವಿವಿಧ ವೇಳೆಗಳಲ್ಲಿ ನಾಟ್ಯಾಭ್ಯಾಸಕ್ಕಾಗಿ ವಿವಿಧ ಅಂಗಸಾಧನೆಗಳನ್ನು ರೂಪಿಸಿಕೊಳ್ಳಬೇಕು. ಇಲ್ಲಿ ಒಂದು ಕಿವಿಮಾತು ; ವಿವಿಧ ಋತುಮಾನಗಳಲ್ಲಿ ದಿನದಿನದ ಛಾಯೆಗಳು ಬದಲಾಗುವಂತೆ ನಮ್ಮ ಅಂಗಸಾಧನೆಯ ನಿಯಮಗಳನ್ನು ಆಯಾ ಋತುಮಾನಗಳಿಗೆ ತಕ್ಕಂತೆ ರೂಪಿಸಿಕೊಳ್ಳಬೇಕು. ಉದಾಹರಣೆಗೆ ಬೇಸಿಗೆಯಲ್ಲಿ ಹೆಚ್ಚಾಗಿ ಬೆಳಗಿನ ಝಾವದ ತರುಣದಲ್ಲಿಯೇ ಯೋಗಾಸನಗಳನ್ನು ಮಾಡುವುದು ಮತ್ತು ಚಳಿಗಾಲದಲ್ಲಿ ಹೆಚ್ಚಾಗಿ ವ್ಯಾಯಾಮಪರವಾದ ಸೂರ್ಯನಮಸ್ಕಾರಾದಿಗಳನ್ನು ಮಾಡುವುದು ಹೆಚ್ಚು ಸೂಕ್ತವೆನಿಸುತ್ತದೆ. ಏಕೆಂದರೆ ವಿವಿಧ ಋತುಗಳಿಗೆ ತಕ್ಕಂತೆ ದೇಹವೂ ಪ್ರತಿಸ್ಪಂದಿಸುತ್ತದೆ. ದೇಹದ ಶೀತ ಉಷ್ಣಗಳಲ್ಲಿ ಆಯಾಕಾಲಕ್ಕೆ ತಕ್ಕಂತೆ ಏರುಪೇರಾಗುತ್ತದೆ. ಇದಕ್ಕೆ ತಕ್ಕಂತೆ ನಮ್ಮ ಅಂಗಸಾಧನೆಯನ್ನು ರೂಪಿಸಿಕೊಳ್ಳಬೇಕು. ಉದಾಹರಣೆಗೆ, ಜಾಯಸೇನಾಪತಿ ತನ್ನ ನೃತ್ತರತ್ನಾವಳಿ ಗ್ರಂಥದಲ್ಲಿ ಹೇಳಿರುವಂತೆ ದಂಡವನ್ನು ಹಿಡಿದು ಅಭ್ಯಾಸಮಾಡಿದರೆ, ನಮ್ಮ ನಿಲುವು ನೇರವಿದ್ದು ಭಾವಭಂಗಿಗಳ ಅಂಗರೇಖೆಯ ಸೌಂದರ್ಯವು ಶುದ್ಧವಾಗಿರುತ್ತದೆ. ಮಧ್ಯಾಹ್ನಗಳು ಮತ್ತು ಸಂಜೆಯ ಏರುಹೊತ್ತುಗಳು ಶಾಸ್ತ್ರಗಳ ಮತ್ತು ಇತರ ಅಧ್ಯಯನಕ್ಕಾಗಿ ಉಪಯೋಗವಾಗಬೇಕು. ಬೆಳಿಗ್ಗೆ ಹೆಚ್ಚಾಗಿ ನೃತ್ತವಿಧಿಗಳಿಗೆ ಮತ್ತು ಸಂಜೆ ಮತ್ತು ಮುಸ್ಸುಂಜೆಯು ಅಭಿನಯ ಇತ್ಯಾದಿ ನಾಟ್ಯವಿಧಿಗಳಿಗೆ ಮೀಸಲಾಗಬೇಕು.

ಆಸನ: ಆಸನವೆಂದರೆ ನಿಲ್ಲುವ ಭಂಗಿ. ಒಂದೆಡೆ ಕೂರುವುದು ಎಂದು ಮಾತ್ರವಲ್ಲ. ಹೀಗಾಗಿ ನಾಟ್ಯಭಂಗಿಭಾವಗಳೆಲ್ಲವೂ ಈ ಆಸನಗಳೇ ಎಂದರೆ ತಪ್ಪಾಗುವುದಿಲ್ಲ. ಈ ನಾಟ್ಯ ಭಂಗಿಗಳಲ್ಲಿ ಶುದ್ಧಸೌಂದರ್ಯವನ್ನು ಸಾಧಿಸಲು ನಾವು ಕೆಲವು ಯೋಗಾಸನಗಳನ್ನು ಮಾಡಬೇಕು. ನಾಟ್ಯಕ್ಕೆ ಉಪಯುಕ್ತವಾದ ಭಂಗಿಗಳನ್ನು ನಾವು ಹೀಗೆ ಏರ್ಪಡಿಸಿಕೊಳ್ಳಬಹುದು.

೧. ತಲೆಯಿಂದ ಹಿಡಿದು ಹಿಂದೆ ಬಾಗುವಿಕೆ.

೨.  ತಲೆ-ಭುಜಗಳನ್ನು ಒಳಗೊಂಡು ಕಟಿಯನ್ನು ಬಳಸಿ ಹಿಂದೆ ಮುಂದು ಬಾಗುವಿಕೆ ಮತ್ತು ಬಳುಕುವಿಕೆ.

೩.  ಕಟಿಯವರೆಗಿನ ದೇಹವನ್ನು ಒಟ್ಟಾಗಿಯೂ ವಿವಿಧವಾಗಿಯೂ ಬಹುವಿಧವಾಗಿ ಕಾಲುಗಳ ವಿವಿಧ ಕೋನಗಳಿಗೆ ಅನುಗುಣವಾಗಿ ಬಾಗುವಿಕೆ ಮತ್ತು ಬಳಕುವಿಕೆ.

೪. ಇವೆಲ್ಲಕ್ಕೂ ಸೇರಿಕೊಂಡಂತೆ ದೇಹದ ಮುಖ್ಯ ಪ್ರತ್ಯಂಗಗಳಾದ ಹಸ್ತ, ಬಾಹು, ಪಾದಗಳನ್ನು ವಿವಿಧರೀತಿಯಲ್ಲಿ ಬಳಸುವಿಕೆ.

ಮೇಲ್ಕಂಡ ಎಲ್ಲಕ್ಕೂ ಒಂದೊಂದರಂತೆ ಹಲವು ಆಸನಗಳನ್ನು ನಮ್ಮ ಹಿರಿಯರು ರೂಪಿಸಿದ್ದಾರೆ. ಇವೆಲ್ಲವನ್ನೂ ಪದ್ಮಾಸನಾದಿ ಐದು ಸ್ಥಿತ ಹಾಗೂ ಧ್ಯಾನಯೋಗ ಆಸನಗಳು ಮತ್ತು ಅವುಗಳ ಪ್ರಭೇದಗಳು, ಮುಂಬಾಗುವಿಕೆ ಬಳಸುವ ಹಸ್ತಪಾದಾಸನ, ಉತ್ಥಿತ ಹಸ್ತಪಾದಾಸನ ಇತ್ಯಾದಿಗಳು, ಹಿಂಬಾಗುವಿಕೆಗೆ ಉಪಯೋಗವಾಗುವ ಶಲಬಾಸನ, ಡೋಲಾಸನ, ಊಧ್ವಾಸನ ಇತ್ಯಾದಿಗಳು, ಅಕ್ಕಪಕ್ಕಗಳಲ್ಲಿ ಬಾಗುವಂತೆ ತ್ರಿಕೋಣಾಸನ, ಉತ್ಥಿತ ತ್ರಿಕೋಣಾಸನ, ಪಶ್ವತ್ರಿಕೋಣಾಸನ ಇತ್ಯಾದಿಗಳು, ಅಲ್ಲದೆ ನಿಂತ ಭಂಗಿ ಅಲುಗದಂತೆ ಲಾಘವವನ್ನು ಅಭ್ಯಾಸಮಾಡಿಸುವ ಉತ್ಥಿತ ಏಕಪಾದಾಸನ, ವೃಕ್ಷಾಸನ, ಊರ್ಧ್ವಜಾನು ಆಸನ ಇತ್ಯಾದಿಗಳು. ಎಲ್ಲದಕ್ಕಿಂತಲೂ ಮುಖ್ಯವಾಗಿ ಡೊಳ್ಳು ಹೊಟ್ಟೆಯನ್ನು ಸುಲಭವಾಗಿ ಕರಗಿಸಲು ಮಾಡಲೇಬೇಕಾದ ಆಸನಗಳು, ಮುಖದ ಬೊಜ್ಜು ಕರಗಿಸಲು ಮಾಡುವ ವಿವಿಧ ವ್ಯಾಯಾಮಗಳು, ಪ್ರತ್ಯಂಗಗಳನ್ನು ವಿಶೇಷವಾಗಿ ಬಳಸಿ ಅವುಗಳಿಗೂ ಉತ್ತಮ ವ್ಯಾಯಾಮಗಳನ್ನು ಕೊಡುವ ಆಸನ ವಿಧಿಗಳು, ಸರ್ವಾಂಗಸುಂದರವ್ಯಾಯಾಮವಾಗಬಲ್ಲ ಸೂರ್ಯನಮಸ್ಕಾರ, ಗುರುನಮಸ್ಕಾರಗಳು, ಇವೆಲ್ಲಕ್ಕೂ ಕಳಶವಿಟ್ಟಂತೆ ಶೀರ್ಷಾಸನ ಮತ್ತು ಅದರ ವಿವಿಧ ಪ್ರಭೇದಗಳು ಮತ್ತು ಕಡೆಯದಾಗಿ ಮಾಡಲೇಬೇಕಾದ ಶವಾಸನ. ಇವೆಲ್ಲವೂ ಎಲ್ಲ ಋತುಗಳಲ್ಲಿಯೂ ಆಯಾಕಾಲಗಳಿಗೆ ತಕ್ಕಂತೆ ಮಾಡಲೇಬೇಕಾದ ಅಂಗಸಾಧನೆ. ಇವೆಲ್ಲವೂ ಭರತನಾಟ್ಯದ ವಿವಿಧ ಅಂಗಭಂಗಿಗಳಿಗೆ ಅತ್ಯಂತ ಪೂರಕವಾಗಿವೆ.

ಇತ್ತೀಚಿನ ದಿನಗಳಲ್ಲಿ ಈ ವಿವಿಧ ಆಸನಗಳ ಬಗೆಗೆ ಯೋಗಪಟುಗಳೂ, ಖ್ಯಾತ ಭರತನಾಟ್ಯ ಪಟುಗಳೂ ಅತ್ಯಂತ ವಿಸ್ಮಯಕಾರಿಯಾದ ಹಾಗೂ ಅದ್ಭುತಭಾವವನ್ನು ಉಂಟುಮಾಡುವ, ದೇಹವನ್ನು ರಬ್ಬರಿನಂತೆ ತಿರುಚಿ ಎಳೆದಾಡುವಂತೆ ಕಾಣುವ ಯೋಗಾಸನಭಂಗಿಗಳನ್ನೂ ಪ್ರದರ್ಶನಗಳಲ್ಲಿ ಬಳಸಿರುವುದನ್ನು ನೀವು ಕಂಡಿರಬಹುದು. ಭರತನಾಟ್ಯದ ಅಂಗಭಂಗಿಗಳಿಗೆ ಸೌಂದರ್ಯವನ್ನು ಉಂಟುಮಾಡುವುದು ದೇಹದ ಸಹಜ ಆರೋಗ್ಯ ಮತ್ತು ಇದರಿಂದ ಉಂಟಾಗುವ ಮಧುರಭಾವ. ಅತಿಯಾದ ಬಳಕು ತಳುಕುಗಳು ಭರತನಾಟ್ಯ ಪ್ರಸ್ತುತಿಗೆ ಅಸಹಜ. ಹೀಗೆ ಅತಿಯಾದ ಯೋಗಾಸನಗಳನ್ನು ಸಾಧಿಸಿಯೇ ತೀರಿಸಿದ ಕೆಲವು ಹುಡುಗರು ಹೆಣ್ಣಿನಂತೆ ಬಾಗಿಬಳುಕುವುದನ್ನೂ ಕೆಲವು ಹುಡುಗಿಯರು ಗಂಡಿನಂತೆ ಸ್ಥಿರವಾಗಿ ಸೆಟೆದು ನಿಂತಿರುವುದನ್ನೂ ನಾವು ಇಂದು ಕಾಣುತ್ತೇವೆ. ಮೇಲಾಗಿ ದಿನನಿತ್ಯದ ಆರೋಗ್ಯಕ್ಕೆ ಬೇಕಾಗಿರುವುದು ಕೇವಲ ಕೆಲವೇ ಆಸನಗಳು ಮತ್ತು ಅವುಗಳನ್ನು ನಿಯಮದಂತೆ ಮಾಡುವುದರಿಂದ ಬರುತ್ತದೆ. ಉಲ್ಲಾಸ ಮತ್ತು ಶಕ್ತಿ.

ಪ್ರಾಣಾಯಾಮ: ಪ್ರಾಣಾಯಾಮವೆಂದರೆ ನಮ್ಮಲ್ಲಿನ ಪ್ರಾಣಶಕ್ತಿಯನ್ನು ಉತ್ಕರ್ಷನಗೊಳಿಸುವುದು ಎಂದು ಅರ್ಥ. ವಿವಿಧ ಆಸನಗಳಲ್ಲಿ ನಿಂತು ಶಿಸ್ತಿಗೆ ಒಳಪಡಿಸಿ ಪ್ರಯೋಗಮಾಡುವುದು. ಇದರಿಂದ ದೇಹಕ್ಕೆ ಬೇಕಾದ ಎಲ್ಲ ಶಕ್ತಿಪ್ರೇರಣೆಗಳು ನಮ್ಮ ಹಿಡಿತಕ್ಕೆ ಬರುವಂತಾಗುತ್ತದೆ. ಈ ಪ್ರಾಣಾಯಾಮ ಭರತನಾಟ್ಯದ ಅಂಗಸಾಧನೆಗೆ ಅತ್ಯಂತ ಮುಖ್ಯವಾದುದು. ಇದರಿಂದ ಭರತನಾಟ್ಯ ಪ್ರಸ್ತುತಿಯಲ್ಲಿ ಕಲಾವಿದರಿಗೆ ಎಂದೆಂದೂ ಶಕ್ತಿಯು ಕುಂದದೆ, ಏದುಬ್ಬಸ ಬರದೆ, ಅತಿಯಾಗಿ ಬೆವರದೆ ದೇಹವು ಹದವಾಗಿ ಇರುವುದು. ಇಲ್ಲಿ ಇಂದು ಮಾತನ್ನು ಗಮನಿಸಿ: ಪ್ರಾಣಾಯಾಮವೆಂದರೆ ಕೇವಲ ಮೂಗಿನಿಂದಲೋ ಬಾಯಿಯಿಂದಲೇ ಉಸಿರನ್ನು ಹಿಡಿದೆಳೆದು ಬಿಡುವ ವಿಧಿವಿಧಾನಗಳು ಎಂದು ಮಾತ್ರವಲ್ಲ. ಹೀಗೆ ಮೂಗು ಬಾಯಿಗಳಿಂದ ತೆಗೆದುಕೊಳ್ಳುವ ಉಸಿರು ಕೇವಲ ೨೫ ರಿಂದ ೩೦ ಭಾಗಗಳು ಮಾತ್ರ ! ಉಳಿದೆಲ್ಲವುಗಳನ್ನೂ ದೇಹದ ಇತರ ಭಾಗಗಳಿಂದ ಚರ್ಮಮೂಲಕವಾಗಿ ಉಸಿರಾಡುತ್ತದೆ ನಮ್ಮ ದೇಹ ! ಹೀಗಾಗಿ, ನಾವು ಭರತನಾಟ್ಯ ಅಂಗಸಾಧನೆಗಾಗಿ ಮಾಡುವ ಎಲ್ಲ ಪ್ರಾಣಾಯಾಮವನ್ನು ನಾಟ್ಯದ ವಿವಿಧ ಭಂಗಿಗಳಲ್ಲಿ ಸಾಧನೆಮಾಡಿದರಂತೂ ಇನ್ನೂ ಉತ್ತಮ. (ಕೆಲವು ಉದಾಹರಣೆಗಳನ್ನು ಕೊಡುವುದಾದರೆ-ನಾಡೀಶುದ್ಧಿ ಪ್ರಾಣಾಯಾಮವನ್ನು ವಿವಿಧ ಸ್ಥಾನಕಗಳಲ್ಲಿ ಮಾಡುವುದು. ಅನುಲೋಮವಿಲೋಮ ಪ್ರಾಣಾಯಾಮವನ್ನು ಕೆಲವು ಕರಣಅಂಗಹಾರಗಳನ್ನು ಮಾಡುವ ಸಮಯದಲ್ಲಿ ಅವುಗಳಲ್ಲಿ ಯಾವುದಾದರೊಂದು ಪ್ರಮುಖಭಂಗಿಯಲ್ಲಿ ಸ್ವಲ್ಪಕಾಲನಿಂತು ಮಾಡಿ ನಂತರ ಕರಣ-ಅಂಗಹಾರದ ಮುಂದಿನ ಭಾಗವನ್ನು ಮಾಡುವುದು, ನಾಡೀಬಂಧ ಪ್ರಾಣಾಯಾಮಗಳನ್ನು ಕಟಿಬಂಧಗಳನ್ನು ಮಾಡುವಾಗ ಇತ್ಯಾದಿ) ಇದಲ್ಲದಿದ್ದರೆ, ಮೇಲೆ ಹೇಳಿದ ಪದ್ಮಾಸನಾದಿ ಪಮಚ ಆಸನಗಳಲ್ಲಿಯೂ ಮಾಡಬಹುದು.

ಪ್ರತ್ಯಾಹಾರ : ಪ್ರತ್ಯಾಹಾರವೆಂದರೆ ಭರತನಾಟ್ಯ ಅಂಗಸಾಧನೆಗಾಗಿ ನಾವು ಮಾಡಬಹುದಾದ ಆಹಾರವಿಧಿ Dieting! ಡಯೆಟ್‌ ಎಂದರೆ ಏನನ್ನು ಯಾವಾಗಲೂ ತಿನ್ನದೆ ಕುಡಿಯದೆ ನಿತ್ಯ ಏಕಾದಶಿ ಮಾಡುವುದು ಎಂದರ್ಥವಲ್ಲ. ನಾವು ಬಳಸಿ ವ್ಯಯಿಸಿರುವ ದೇಹಶಕ್ತಿಗೆ ತಕ್ಕಂತ ಸೂಕ್ತವಾದ ಪುಷ್ಠಿಕಾರಕವಾದ ಆಹಾರವನ್ನು ಸೇವಿಸುವುದು ಎಂದರ್ಥ. ಸಾವಿರಾರು ರೂಪಾಯಿಗಳನ್ನು ನಮ್ಮಿಂದ ಕಸಿದುಕೊಂಡು ನಮಗೇ ಈ ಗುಟ್ಟನ್ನು ನಮ್ಮ ನಾಡಿನಲ್ಲಿ ಇತ್ತೀಚೆಗೆ ಹಲವಾರು ಅಂತರರಾಷ್ಟ್ರೀಯ ಬೊಜ್ಜು ಕರಗಿಸುವ ಸಂಸ್ಥೆಗಳು ತಿಳಿಸುತ್ತಿವೆ. ಆದರೆ ನಮ್ಮ ಭರತನಾಟ್ಯ ಅಂಗಸಾಧನೆಯಲ್ಲಿ ಇವೆಲ್ಲದರ ತಿರುಳು ಹಾಸುಹೊಕ್ಕಾಗಿದೆ. ಇವನ್ನು ನಿಯತಕಾಲದಲ್ಲಿ ಮಾಡಿದರೆ ಸಾಕು. ದೇಹಕ್ಕೆ ಸಾಕಷ್ಟು ಆಯಾಮವ್ಯಾಯಾಮಗಳು ದೊರೆತರೆ, ದೇಹವು ತಾನು ಸೇವಿಸುವ ಆಹಾರದಲ್ಲಿಯೇ ತನಗೆ ಬೇಕಾಗಿರುವುದೆಲ್ಲವನ್ನೂ ಕರಗಿಸಿ ಅರಗಿಸಿಕೊಳ್ಳುತ್ತದೆಂಬುದನ್ನು ಮರೆಯಬೇಡಿ. ದಿನನಿತ್ಯದಂತೆ ನಾವು ಸೇವಿಸುವ ಆಹಾರದಲ್ಲಿ ಎಲ್ಲ ಪೌಷ್ಠಿಕಾಂಶಗಳೂ ಇವೆ. ಅಲ್ಲದೆ ಹಬ್ಬಹರಿದಿನಗಳಲ್ಲಿ ನಾವು ತಯಾರುಮಾಡುವ ತಿಂಡಿ ತೀರ್ಥಗಳಲ್ಲೂ ಸಮತೂಕದ ಆಹಾರವಿದೆ.

ಧ್ಯಾನ: ಧ್ಯಾನವೆಂದರೆ ಚಿತ್ತೈಕಾಗ್ರತೆ. ನಮ್ಮ ಚಿತ್ತವನ್ನು ಏಕಾಗ್ರವಾಗಿ ನಾವು ಮಾಡುತ್ತಿರುವ ನಾಟ್ಯವಿಧಿಯಲ್ಲಿ-ಅಂಗಸಾಧನೆಯಲ್ಲಿ ಇಡುವುದು ಎಂದರ್ಥ. ದೇಹವು ಹದವಾಗಿದ್ದರೆ (ಮೇಲೆ ಹೇಳಿದ ರೀತಿಯಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರಗಳನ್ನು ಮಾಡಿದ್ದರ ಕಾರಣದಿಂದ) ಮನಸ್ಸು ಹರ್ಷವಾಗಿರುತ್ತದೆ. ಶಾಂತವಾಗಿರುತ್ತದೆ. ಹೀಗಾಗಿ, ನಮ್ಮ ಚಿತ್ತವನ್ನು ಏಕಾಗ್ರಗೊಳಿಸುವುದು ಏನೇನೂ ಕಷ್ಟವಾಗುವುದಿಲ್ಲ.

ಧಾರಣ: ಧಾರಣವೆಂದರೆ ಹೀಗೆ ಅಭ್ಯಾಸಮಾಡಿರುವುದನ್ನು ಸ್ಥಿರವಾಗಿ ಹಿಡಿದಿಟ್ಟುಕೊಳ್ಳುವುದು ಎಂದು ನಾವು ಸ್ಥೂಲವಾಗಿ ತಿಳಿಯಬಹುದು. ಧಾರಣ ಎಂಬ ಪದಕ್ಕೆ ಅತ್ಯಂತ ಸಮಗ್ರವಾದ ಹಾಗೂ ಸೂಕ್ಷ್ಮಾತಿಸೂಕ್ಷ್ಮವಾದ ಅರ್ಥಗಳು ಇವೆ. ಆದರೆ, ನಮ್ಮ ದೈನಂದಿನ ಅಭ್ಯಾಸಕ್ಕೆ ಇಷ್ಟೇ ಸಾಕು. ಏಕೆಂದರೆ, ಇಷ್ಟು ಕಷ್ಟಪಟ್ಟು ಸಾಧಿಸಿ ಕಲಿತಿದ್ದನ್ನು ಯಶಸ್ವಿಯಾಗಿ ಪ್ರಯೋಗಿಸಲು ಧಾರಣ ತುಂಬ ಮುಖ್ಯ. ಅಲ್ಲದೆ, ಧಾರಣವು ನಮ್ಮ ಸಾಧನೆ ನಿರಂತರವಾಗಿ ನಡೆಯಲು ಅತ್ಯಂತ ಅವಶ್ಯಕ.

ಸಮಾಧಿ: ಸಮಾಧಿ ಎಂದಾಕ್ಷಣ ನಿಮ್ಮ ಮನಸ್ಸಿನಲ್ಲಿ ಮೂಡುವುದು ದೈವಸಾಕ್ಷಾತ್ಕಾರವಾದ ಯೋಗಿಯ ಚಿತ್ರ. ಇದು ಹಾಗಲ್ಲ ಸಮಾಧಿಯೆಂದರೆ ಈ ಎಲ್ಲ ಸಾಧನೆಗಳಿಂದ ಏರ್ಪಟ್ಟಿರುವ ಜೀವನ ವಿಧಿ. ಇದೇ ಸುಶೀಲವಾದ ಜೀವನವಿಧಿ.

ಭರತನಾಟ್ಯ ಅಂಗಸಾಧನೆ ಒಂದು ರೀತಿಯಾದ ಯೋಗಸಾಧನೆಯೇ ಇದಕ್ಕೆ ಸಂಶಯವಿಲ್ಲ. ಯಾವುದರಿಂದ ತ್ರಿಕರಣ ಶುದ್ಧವಾಗುತ್ತದೆಯೋ, ಜೀವನವಿಧಿ ಸುಶೀಲವಾಗುತ್ತದೆಯೋ, ಜೀವ ಸಂತೃಪ್ತಿಯಾಗುತ್ತದೆಯೋ, ಇದೇ ಅಲ್ಲವೇ ಯೋಗಸಾಧನೆ ! ಭರತನಾಟ್ಯ ಅಂಗಸಾಧನೆಯು ಈ ಯೋಗಮಾರ್ಗದಲ್ಲಿ ಕಲಾವಿದರಿಗೂ ಸಹೃದಯರಿಗೂ ಅತ್ಯಂತ ಸುಲಭ ಹಾಗೂ ಆರೋಗ್ಯಕರಮಾರ್ಗ. ಇದರಿಂದ ಕಲಾಜೀವನವೂ ಸಾರ್ಥಕವಾಗುತ್ತದೆ, ಕಲಾವಿದನ ಜೀವನವೂ ಸಾರ್ಥಕವಾಗುತ್ತದೆ.