ಹೆಸರು:ಭಾರತಿ
ಊರು: ಹಿರಿಯೂರು

 

ಪ್ರಶ್ನೆ: ನನ್ನ ನಾದಿನಿ ಅಂದರೆ ಗಂಡನ ತಂಗಿ ಅವಳಿಗೆ ಮದುವೆ ಆಗಿ ಒಂದು ವರ್ಷ ಆಯಿತು. ಅವಳಿಗೆ ಮದುವೆಯ ನಂತರ ತಿಂಗಳು ಮುಟ್ಟು ಸರಿಯಾಗಿಯೇ ಆದಳು. ನಂತರ ಅವಳು ತಿಂಗಳಿಗೊಮ್ಮೆ ತಿಂಗಳಿಗೊಮ್ಮೆ ಹೀಗೆ ಮುಟ್ಟು ಸರಿಯಾಗಿ ಆಗುವುದಿಲ್ಲ. ನಮಗೆ ಅದರ ಬಗ್ಗೆ ಗರ್ಭಿಣಿ ಎಂದು ಹೇಳುತ್ತಿದ್ದರು. ನಂತರ ಡಾಕ್ಟರ್ ಹತ್ತಿರ ಚೆಕಪ್ಗೆ ಹೋದಾಗ ಅವಳು ಗರ್ಭಿಣಿ ಅಲ್ಲ ಅವಳಿಗೆ ಹಾರ್ಮೋನ್ ವ್ಯತ್ಯಾಸ ಇದೆ ಎಂದು ಮಾತ್ರೆಗಳನ್ನು ಕೊಟ್ಟರು. ಆದರೂ ಅವಳು ಮುಟ್ಟು ಆಗಲ್ಲಿಲ್ಲ ಅದಕ್ಕೆ ನಮಗೆ ಗಾಬರಿ ಆಗಿದೆ. ಇದು ಏನು ಸಮಸ್ಯೆ ಎಂದು ತಿಳಿಯುತ್ತಿಲ್ಲ. ರೀತಿ ತೊಂದರೆ ಇದ್ದರೆ ಮುಂದೆ ಮಕ್ಕಳು ಆಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಅವಳಿಗೆ ಈಗ ೧೯ ವರ್ಷ ಇದಕ್ಕೆ ಬೇಗ ಉತ್ತರ ತಿಳಿಸುತ್ತೀರಾ ಎಂದು ನಂಬಿ ಕಾಯುತಿತ್ತೇನೆ.

ಉತ್ತರ: ೨, ೩ ತಿಂಗಳವರೆಗೂ ಮುಟ್ಟು ಆಗದಿರುವುದಕ್ಕೆ ಕುಂಠಿತ ಋತುಚಕ್ರ(Oligomenorrhoea) ಎಂದು ಹೆಸರು. ಇದಕ್ಕೆ ಬಹುಮುಖ್ಯವಾದ ಕಾರಣ ಆಂಡಾಶಯದ ನೀರ್ಗಂಟುಗಳ (P.C.O.D)ಕಾಯಿಲೆ. ಈ ಕಾಯಿಲೆಯಲ್ಲಿ ಹಾರ್ಮೋನ್‌ವ್ಯತ್ಯಾಸ ಕಂಡುಬರುತ್ತದೆ. ಕೀಳ್ಗೂಳಿ ಸ್ಕ್ಯಾನಿಂಗ್ (Pelvic Scanning)ಮಾಡುವ ಮುಖಾಂತರ ಈ ಕಾಯಿಲೆಯನ್ನು ಕಂಡುಹಿಡಿಯಬಹುದು. ಹಾರ್ಮೋನ್ ವ್ಯತ್ಯಾಸವನ್ನು(FSH, LH) ರಕ್ತ ಪರೀಕ್ಷೆಯ ಮುಖಂತರ ಕಂಡುಹಿಡಿಯಬಹುದು.

PREMARIN ಎರಡು ಮಾತ್ರೆ ಮತ್ತು DEVIRY ಒಂದು ಮಾತ್ರೆ ಈ ೩ ಮಾತ್ರೆಗಳನ್ನು ಪ್ರತಿ ನಿತ್ಯ ರಾತ್ರಿ ಹೊತ್ತು ೧೫ ದಿನ ಕೊಡಿ. ಮಾತ್ರೆ ಮುಗಿದ ೧೫ ದಿನಗಳ ಒಳಗೆ ಮುಟ್ಟು ಆಗುತ್ತದೆ. ನಂತರ ಮತ್ತೇ ಇದೇ ಮಾತ್ರೆಗಳನ್ನು ಕ್ರಮಬದ್ಧವಾಗಿ ಸೇವಿಸಿದರೆ ತೊಂದರೆ ನಿವಾರಣೆಯಾಗುತ್ತದೆ. ಹೀಗೆ ಆರು ತಿಂಗಳು ಮಾತ್ರೆಗಳನ್ನು ತೆಗೆದುಕೊಂಡರೆ ಸಮಸ್ಯೆ ಸರಿ ಹೋಗುತ್ತದೆ. ಸ್ಕ್ಯಾನಿಂಗ್ ಅಥವಾ ಹಾರ್ಮೋನ್ ಪರೀಕ್ಷೆಗಳನ್ನು ಮಾಡಿಸಿಕೊಂಡು ಅವುಗಳ ವರದಿಗಳ ಜೆರಾಕ್ಸ್ ಪ್ರತಿಗಳನ್ನು ನಮಗೆ ಕಳುಹಿಸಿಕೊಡಿ.