ಬಯಲಾಟವು ಸಾಮೂಹಿಕ ಚಟುವಟಿಕೆ. ನಟರು, ಹಾಡುವವರು, ತಾಳಮದ್ದಳೆ, ಮುಖವೀಣೆ ನುಡಿಸುವವರು. ವೇಷಭೂಷಣಗಳನ್ನು ತೊಡಿಸಿ, ಭುಜಕೀರ್ತಿ ಉದ್ದಂಡಿ ಕಿರೀಟ, ವೀರಗಾಸೆ ಕಟ್ಟಿ ಬಣ್ಣ ಬಳಿದು ಕುಣಿಸುವವರು. ಚಪ್ಪಾಳೆ ತಟ್ಟಿ ಭೇಷ್! ವಾರೆವ್ಹಾ! ಒನ್ಸ್‌ಮೋರ್ ಎಂದು ಪ್ರೋತ್ಸಾಹಿಸುವವರು ಹೀಗೆ ಹತ್ತು ಹಲವು ಕಲಾವಿದರ ಕೌಶಲ್ಯಪೂರ್ಣ ಸಂಯೋಜನೆ. ಅದೇನು ಅಷ್ಟು ಸುಲಭದ ಮಾತಲ್ಲ. ಇಂತಹುದೊಂದು ಸಾಮೂಹಿಕ ಪ್ರದರ್ಶನ ಕಲೆಯನ್ನು, ಅದರ ಸೊಬಗು-ಸೊಗಡುಗಳನ್ನು ಹತ್ತಾರು ತಲೆಮಾರುಗಳಿಂದಲೂ ಯಾವುದೇ ಪದವಿ ಪುರಸ್ಕಾರಗಳ ಫಲಾಪೇಕ್ಷೆ ಇಲ್ಲದೆ ಕೇವಲ ಪಂಜು-ದೀವಟಿಗೆಗಳ ಬೆಳಕಿನಲ್ಲಿ, ಗಾಡಿ ಚಿಕ್ಕಡಿಗಳ ನೆರವಿನಿಂದ ಕಾಯ್ದುಕೊಂಡು ಬಂದ ಕಲಾಚೇತನಗಳ ನಿಷ್ಠೆ, ಅರ್ಪಣಾ ಮನೋಭಾವವನ್ನು ಎಷ್ಟು ಹೊಗಳಿದರೂ ಸಾಲದು. ಅಬೋಧರು, ಅನಕ್ಷರಸ್ಥರು, ಅವಿದ್ಯಾವಂತರು ಎನಿಸಿಕೊಂಡಿದ್ದವರ ಅರಿವು-ತಿಳಿವಳಿಕೆಗಳು, ಬದುಕಿನ ಏರಿಳಿತಗಳೊಂದಿಗೆ ಸ್ಪಂದಿಸಿದ ರೀತಿ-ನೀತಿಗಳು, ನೆಲ-ಮುಗಿಲುಗಳ ನಡುವೆ ಎದೆ ತೆರೆದು ಪದ ಹಾಡಿ ಬೈಗು ಬೆಳಗುಗಳನ್ನು ತುಂಬಿಸಿದವರು, ಅವರ ಸಿರಿದನಿಗಳು, ಬಾಂಧವ್ಯಗಳನ್ನು ಪಲ್ಲವಿಸಿದ ಪದಗಳ ವೈವಿಧ್ಯಗಳು, ಆತ್ಮತೃಪ್ತಿಗಾಗಿ ಮಣಭಾರದ ವೇಷಭೂಷಣಗಳನ್ನು ಹೊತ್ತು ದಣಿವಿಲ್ಲದೆ ಕುಣಿದವರು, ಒಂದೇ ಎರಡೆ!

ಯಕ್ಷಗಾನ ಬಯಲಾಟವು ಇಂದು-ನಿನ್ನೆಯದಲ್ಲ. ತಲೆ ತಲೆಮಾರುಗಳು ದುಡಿದ ಪರಂಪರೆ ಇದರ ಬೆನ್ನ ಹಿಂದಿದೆ. ಐದು ಶತಮಾನಗಳಿಗೂ ಹೆಚ್ಚು ಇತಿಹಾಸವಿರುವ ರಂಗಪ್ರಕಾರವಿದು. ಈ ಪ್ರಕಾರದ ಆದ್ಯರು ಜೀರಿಗೆ ಕೆಂಪಯ್ಯನ ಮೊಮ್ಮಗ ಓದೋ ಕೆಂಪಣ್ಣಗೌಡ, ವೀರನಗೆರೆ ಪುಟ್ಟಣ್ಣ, ಭಾಳಾಕ್ಷ ಮೊದಲಾದವರು. ಕನ್ನಡ ಜನಪದ ರಂಗಭೂಮಿ ಪರಂಪರೆಯಲ್ಲಿ ಅತ್ಯಂತ ವಿಶಿಷ್ಟ ದೃಶ್ಯಕಲಾ ಪ್ರಕಾರವಾದ ಮೂಡಲಪಾಯ ಯಕ್ಷಗಾನವು, ಸಾಹಿತ್ಯ-ಹಾಡುಗಾರಿಕೆ-ಮಾತುಗಾರಿಕೆ- ಬಣ್ಣಗಾರಿಕೆ-ಅಭಿನಯ-ಕುಣಿತ-ವೇಷಭೂಷಗಳು ಮುಂತಾದ ಅಂಶಗಳನ್ನು ಒಳಗೊಂಡ ಗ್ರಾಮೀಣ ಮನರಂಜನಾ ಮಾಧ್ಯಮ.

ಗ್ರಾಮೀಣ ಪ್ರದೇಶಗಳಲ್ಲಿ ಬಯಲಾಟವನ್ನು ಆಡುವ ಮುನ್ನ ಊರ ಹಿರಿಯರು ಸಭೆ ಸೇರಿ ಯಾವ ಪ್ರಸಂಗವನ್ನು ಕಲಿಯಬೇಕೆಂಬುದನ್ನು ನಿರ್ಧರಿಸುತ್ತಿದ್ದರು. ದಿನ ನಿಗದಿಪಡಿಸುತ್ತಿದ್ದರು. ಸೂಕ್ತ ಗುರುವನ್ನು ಪ್ರಸಂಗ ಕಲಿಸಲು ಆಹ್ವಾನಿಸುತ್ತಿದ್ದರು. ಈ ಗುರುವನ್ನು ಭಾಗವತ ಎಂದು ಕರೆಯುತ್ತಿದ್ದರು. ಪ್ರಸಂಗದಲ್ಲಿ ಬರುವ ಪಾತ್ರಗಳಿಗೆ ಒಪ್ಪುವಂಥವರನ್ನು ಆರಿಸುವುದು ಗುರುವಿನ ಕೆಲಸವಾಗಿತ್ತು. ಭಾಗವತರ ಬಳಿ ಪ್ರಸಂಗದ ಕೈಬರಹದ ಕಾಗದದ ಹಸ್ತಪ್ರತಿಗಳು ಇಲ್ಲವೆ ಓಲೆಗರಿಯ ಪ್ರತಿಗಳಿರುತ್ತಿದ್ದವು. ಸಾಮಾನ್ಯವಾಗಿ ಒಬ್ಬೊಬ್ಬ ಭಾಗವತರ ಬಳಿಯೂ ಇಂತಹ ಹತ್ತಾರು ಪ್ರತಿಗಳಿರುತ್ತಿದ್ದವು. ಈ ಪ್ರತಿಗಳು ಗದ್ಯ-ಪದ್ಯದಿಂದ ಕೂಡಿದ್ದು, ಪದ್ಯಗಳಿಗೆ ರಾಗ-ತಾಳಗಳನ್ನು ಗುರುತಿಸಿಟ್ಟಿರುತ್ತಿದ್ದರು. ಭಾಗವತರಲ್ಲಿ ಅಕ್ಷರ ಕಲಿತವರು ಮತ್ತು ಅಕ್ಷರ ಬಾರದವರು ಇಬ್ಬರೂ ಇದ್ದರು. ಅಕ್ಷರ ಬಾರದ ಭಾಗವತರು ವಾಗ್ರೂಢಿಯ ಮೇಲೆ ಪ್ರಸಂಗಗಳನ್ನು ಕಲಿಸುತ್ತಿದ್ದರು. ಭಾಗವತರ ಪ್ರಧಾನವೃತ್ತಿ ಭಾಗವತಿಕೆ, ಎಂದರೆ ಹಾಡುವುದು. ಈ ಭಾಗವತರು ಬಹುತೇಕ ಸಂಚಾರೀ ಕಲಾವಿದರು, ಊರಿಂದೂರಿಗೆ ಸಂಚರಿಸುತ್ತಾ ಪ್ರಸಂಗಗಳನ್ನು ಕಲಿಸುತ್ತಾ ಹೋಗುವವರು. ಇವರಲ್ಲಿ ಸಂಗೀತ ಜ್ಞಾನವನ್ನುಳ್ಳ ನುರಿತ ಭಾಗವತರುಗಳೂ ಇರುತ್ತಿದ್ದರು. ಇವರು ಪುರಾಣಗಳನ್ನು ಬಲ್ಲ ಸಾಹಿತ್ಯಾಸಕ್ತರಾಗಿದ್ದರು.

ಭಾಗವತರು ಪ್ರಸಂಗಕ್ಕೆ  ತಕ್ಕ ಪಾತ್ರಧಾರಿಗಳನ್ನು ಆಯ್ಕೆ ಮಾಡಿದ ಮೇಲೆ ಕಲಿಯಬೇಕಾಗಿರುವ ಪ್ರಸಂಗದ ಪ್ರತಿಗೆ ಮೊದಲ ಪೂಜೆ ಸಲ್ಲುತ್ತಿತ್ತು. ಪಾತ್ರಗಳ ಹಂಚಿಕೆಯಾದ ಮೇಲೆ ದಿನನಿತ್ಯ ಸಂಜೆಯಿಂದ ರಾತ್ರಿಯವರೆಗೆ ನಿರಂತರ ಅಭ್ಯಾಸ ನಡೆಸುತ್ತಿದ್ದರು. ಪ್ರಸಂಗವನ್ನು ಕಲಿಸುವಾಗ ಭಾಗವತ ಒಬ್ಬನೇ ಇದ್ದು ಹಾರ‌್ಮೋನಿಯಂ ಇಲ್ಲವೆ ಮದ್ದಳೆಯ ನೆರವನ್ನು ಪಡೆದುಕೊಳ್ಳುತ್ತಿದ್ದನು. ಆಟ ನಡೆಯುವ ದಿನವಂತೂ ಇಡೀ ಊರಿಗೆ ಊರೇ ಹಬ್ಬ ಸಂಭ್ರಮವನ್ನು ಆಚರಿಸುತ್ತಿತ್ತು. ಪಾತ್ರಧಾರಿಗಳ ಮನೆಗಳಲ್ಲಿ  ಅಂದು ರಾತ್ರಿ ವಿಶೇಷ ಸಿಹಿ ಅಡುಗೆ. ನೆಂಟರಿಷ್ಟರಿಗೆಲ್ಲಾ ಕರೆ ಹೋಗುತ್ತಿತ್ತು. ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ಹೆಣ್ಣು ಮಕ್ಕಳೆಲ್ಲಾ ತವರಿಗೆ ಹಿಂದಿರುತ್ತಿದ್ದರು. ಆಟ ನಡೆಯುವ ಹಿಂದಿನ ದಿನವೇ ವೇಷಭೂಷಣಗಳು ಮತ್ತು ಅಲಂಕರಣಗಳ ಸಿದ್ಧತೆ ನಡೆಯುತ್ತಿತ್ತು. ಪಾತ್ರಧಾರಿಗಳು ಕೆಂಪು, ಹಳದಿ ಬಣ್ಣ, ಅಂಟುವಾಳದ ಕಾಯಿ, ಬಳಪದ ಕಲ್ಲು, ಬಿಳಿಯ ನಾಮದುಂಡೆ, ಅರಗು, ಇಂಗದಾಳ, ಇದ್ದಿಲು, ಸೆಣಬು, ಕುರಿಯ ತುಪ್ಪಟ, ಭೂತಾಳೆಪಟ್ಟಿ ಮುಂತಾದ ಪರಿಕರಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದರು. ಭಾಗವತರು, ಹಿಮ್ಮೇಳದವರು ಮತ್ತು ಪಾತ್ರಧಾರಿಗಳು ಗಂಟಲು ಕೆಡದಂತೆ ನೋಡಿಕೊಳ್ಳಲು ಹುರುಳಿ ಕಟ್ಟಿನ ಸಾರು, ಮೆಣಸು, ಶುಂಠಿಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುತ್ತಿದ್ದರು.

ಸಾಮಾನ್ಯವಾಗಿ ಊರ ಮುಂದಿನ ಗ್ರಾಮದೇವತೆಯ ಗುಡಿಯ ಮುಂದಿರುವ ಬಯಲೇ ಬಯಲಾಟದ ಪ್ರದರ್ಶನ ವೇದಿಕೆಯಾಗಿರುತ್ತಿತ್ತು. ಊರ ಹಿರಿಯರು ಮಹೂರ್ತ ನೋಡಿ ಕಂಭ ಸ್ಥಾಪನೆ ಮಾಡುತ್ತಿದ್ದರು. ಅರಿಶಿಣದ ಬಟ್ಟೆಯಲ್ಲಿ ನವಧಾನ್ಯಗಳನ್ನು ಹೊನ್ನೆಸಳು ಮಾಡಿ ಮುಡಿಪು ಕಟ್ಟಿ ದೇವಮೂಲೆ ಅಂದರೆ ಈಶಾನ್ಯ ದಿಕ್ಕಿನಲ್ಲಿ ಹಳ್ಳ ತೆಗೆದು ಹೊನ್ನೆಸಳನ್ನು ಭೂಮಿಯ ಒಳಗಿಟ್ಟು ಮೊದಲ ಕಂಭ ನೆಡುತ್ತಿದ್ದರು. ನಾಲ್ಕು ಮೂಲೆಗಳಿಗೂ ನಾಲ್ಕು ಕಂಭಗಳನ್ನು ನೆಟ್ಟ ಮೇಲೆ ತೆಂಗಿನ ಗರಿಗಳನ್ನು ಹೆಣೆದು ಚಪ್ಪರ ಹಾಕುತ್ತಿದ್ದರು. ಅದರ ಮೇಲುಭಾಗಕ್ಕೆ ಹೊಂಗೆಸೊಪ್ಪನ್ನು ಹರಡುತ್ತಿದ್ದರು. ಕಂಭಗಳಿಗೆ ಬಾಳೆದಿಂಡು, ಮಾವಿನ ಸೊಪ್ಪಿನ ತೋರಣದ ಅಲಂಕಾರ ಇರುತ್ತಿತ್ತು. ಮುಂಭಾಗವು ತೆರೆದಿದ್ದು ಹಿಂಬದಿಗೆ ತಡಿಕೆ ಕಟ್ಟುತ್ತಿದ್ದರು. ಅದರ ಮುಂದೆ ಬಿಳಿಯ ಬಟ್ಟೆಯ ಪರದೆ ಕಟ್ಟುತ್ತಿದ್ದರು. ರಂಗಕ್ಕೆ ಕೆಟ್ಟ ಕಣ್ಣು ತಾಗದಿರಲೆಂದು ಹಳೆಯ ಚಪ್ಪಲಿ ಕಟ್ಟುತ್ತಿದ್ದರು. ಚಪ್ಪರದ ಒಳಭಾಗದಲ್ಲಿ ಬಲ ಬದಿಯಲ್ಲಿ ಭಾಗವತರು ತಮ್ಮ ಮೇಳದೊಂದಿಗೆ ನಿಂತುಕೊಳ್ಳಲು ಅವಕಾಶವಿರುತ್ತಿತ್ತು. ಭಾಗವತರ ಬಲಪಕ್ಕದಲ್ಲಿ ಮುಖವೀಣೆ ನುಡಿಸುವವರು, ಎಡಪಕ್ಕದಲ್ಲಿ ಮದ್ದಳೆ ಬಾರಿಸುವವರು, ಹಿಂಬದಿಯಲ್ಲಿ ತಾಳ ನುಡಿಸುವವರು ಮತ್ತು ಹಿಮ್ಮೇಳದವರು ನಿಲ್ಲುತ್ತಿದ್ದರು.

ನಾಲ್ಕು ದಿಕ್ಕುಗಳಿಗೆ ನೆಟ್ಟ ಕಂಭಗಳ ತಳಭಾಗದಿಂದ ಸುಮಾರು ಒಂದು ಅಡಿ ಮೇಲಕ್ಕೆ ಬಲವಾದ ಹಲಗೆಗಳನ್ನು ಜೋಡಿಸಿ ಬಿಗಿಯುತ್ತಿದ್ದರು. ಹೀಗೆ ತಳಭಾಗಕ್ಕೆ ಹಲಗೆಗಳನ್ನು ಜೋಡಿಸಿ ಅಟ್ಟವನ್ನು ನಿರ‌್ಮಾಣ ಮಾಡುತ್ತಿದ್ದುದರಿಂದ ಬಯಲಾಟಕ್ಕೆ ಅಟ್ಟದ ಆಟ ಎಂಬ ಹೆಸರು ಬಂದಿರಬಹುದು. ಅಟ್ಟದ ನಿರ‌್ಮಾಣದ ಉದ್ದೇಶ ಎರಡು ಕಾರಣಗಳಿಂದ ಕೂಡಿದ್ದಿತು. ಪ್ರಸಂಗದ ದೃಶ್ಯಾವಳಿಯು ರಂಗದ ಎದುರು ಕುಳಿತ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣಿಸಲಿ ಎಂಬುದು ಒಂದು ಉದ್ದೇಶವಾದರೆ, ಪಾತ್ರಧಾರಿಗಳ ಕುಣಿತಕ್ಕೆ ಹಲಗೆಯ ಅಟ್ಟವು ಹುಮ್ಮಸ್ಸನ್ನು ತಂದುಕೊಡಲೆಂಬುದು ಮತ್ತೊಂದು ಉದ್ದೇಶವಾಗಿದ್ದಿತು. ಪಾತ್ರಧಾರಿಗಳ ಕುಣಿತದ ತೀವ್ರತೆ ಮತ್ತು ರಭಸವನ್ನು ಹಲಗೆಯ ಸದ್ದು ದ್ವಿಗುಣಗೊಳಿಸುತ್ತಿತ್ತು. ಪಾತ್ರಧಾರಿಗಳು ಇದರಿಂದ ಮತ್ತಷ್ಟು ಉತ್ತೇಜಿತರಾಗಿ ಹಲಗೆ ಮುರಿಯುವಷ್ಟರ ಮಟ್ಟಿಗೆ ಕುಣಿಯುತ್ತಿದ್ದರು.

ವೇದಿಕೆಯಲ್ಲಿ ಕೆಲವೊಮ್ಮೆ ಎರಡು ಚಪ್ಪರಗಳನ್ನು ಒಂದರ ಮೇಲೊಂದರಂತೆ ನಿರ‌್ಮಾಣ ಮಾಡುತ್ತಿದ್ದರು. ಎರಡು ಚಪ್ಪರಗಳಿಗೂ ಸಂಪರ್ಕ ಕಲ್ಪಿಸಲು ಮೆಟ್ಟಿಲುಗಳನ್ನು ಕಟ್ಟುತ್ತಿದ್ದರು. ಇದನ್ನು ಕಾಲಾವಧಿ ಮೇರವೆ ಎಂದು ಕರೆಯುತ್ತಿದ್ದರು. ಐರಾವತ ಅಥವಾ ಗಜಗೌರಿ ಪ್ರಸಂಗದಲ್ಲಿ, ಕೆಳಗಿನ ಚಪ್ಪರದಲ್ಲಿ ಭೂಲೋಕದ ದೃಶ್ಯಗಳು, ಮೇಲಿನ ಚಪ್ಪರದಲ್ಲಿ ದೇವಲೋಕದ ದೃಶ್ಯಗಳು ಏಕಕಾಲಕ್ಕೆ ಪ್ರದರ್ಶನಗೊಳ್ಳುತ್ತಿದ್ದವು. ಭೂಲೋಕದಲ್ಲಿರುವ ಪಾಂಡವರ ಇಂದ್ರಪ್ರಸ್ಥದ ಗಜಗೌರಿ ವ್ರತ ಮಂಟಪಕ್ಕೆ ಮೇಲಿನ ಚಪ್ಪರದಿಂದ ಮೇರವೆಯ ಮೂಲಕ ಐರಾವತದೊಂದಿಗೆ ರಂಭೆ, ಊರ್ವಶಿ, ಮೇನಕೆ ಮತ್ತು ಶಚಿದೇವಿಯರ ಸಮೇತ ದೇವೇಂದ್ರನು ಇಳಿದು ಬರುವ ದೃಶ್ಯವಂತೂ ಜನಪದರ ಬಯಲುವೇದಿಕೆ ನಿರ‌್ಮಾಣ ತಂತ್ರಜ್ಞಾನಕ್ಕೆ ಅತ್ಯುತ್ತಮ ನಿದರ್ಶನವಾಗಿದ್ದಿತು. ಒಟ್ಟಿನಲ್ಲಿ ಮೂಡಲಪಾಯ ಯಕ್ಷಗಾನದ ವೇದಿಕೆಯು closed theatre ಅಲ್ಲ open theatre ಆಗಿದ್ದಿತು.

ಪಾತ್ರಧಾರಿಗಳು ಬಣ್ಣ ಹಚ್ಚಿಕೊಳ್ಳುವ ಮತ್ತು ವೇಷಭೂಷಣ ಧರಿಸುವ ಬಣ್ಣದ ಮನೆಯು ವೇದಿಕೆಯಿಂದ ತುಸು ದೂರದಲ್ಲಿರುತ್ತಿತ್ತು. ಪಾತ್ರಗಳ ಪ್ರವೇಶ ಮತ್ತು ಬಣ್ಣದ ವೇಷಗಳ ಕುಣಿತಕ್ಕೆ ಇದು ಸಹಕಾರಿಯಾಗುವಂತಿರುತ್ತಿತ್ತು. ಪ್ರಸಂಗದ ಕಥಾರಂಭವು ರಂಗಸ್ಥಳದ ಮೇಲೆ ನಡೆಯುತ್ತದೆಯಾದರೂ ಅದರ ನಾಂದೀಭಾಗವು ಬಣ್ಣದ ಮನೆಯಿಂದಲೇ ಆರಂಭವಾಗುತ್ತದೆ. ಬಣ್ಣದ ಮನೆಯಲ್ಲಿ ಆಯುಧಗಳು, ವಾದ್ಯ ಪರಿಕರಗಳು, ವೇಷಭೂಷಣಗಳನ್ನು ಸಾಲಾಗಿ ಜೋಡಿಸಿಟ್ಟು ಗಣಪತಿಗೆ ಪೂಜೆ ಸಲ್ಲಿಸಿ ಭಾಗವತರಿಗೆ ನಮಸ್ಕರಿಸಿ ನಂತರ ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಬೆಳಕಿನ ವ್ಯವಸ್ಥೆಗಾಗಿ ಭೂತಾಳೆ ಗಿಡದ ಬುಡಗಳನ್ನು ಕತ್ತರಿಸಿ ತಂದು ರಂಗದ ಎದುರಿಗೆ ಎರಡೂ ಬದಿಗಳಲ್ಲಿ ಭದ್ರವಾಗಿ ನೆಟ್ಟು, ಅದರ ಮೇಲೆ ಹಸುವಿನ ಸಗಣಿ ತಟ್ಟಿ ಮಟ್ಟ ಮಾಡಿದ ಮೇಲೆ, ಹಳೆಯ ಅಗಲವಾದ ಮಡಿಕೆ ಚೂರುಗಳು ಇಲ್ಲವೆ ಬೋಗುಣಿಗಳನ್ನು ಇಡುತ್ತಿದ್ದರು. ಈ ಬೋಗುಣಿಗಳಲ್ಲಿ ಬೇವಿನ ಎಣ್ಣೆ, ಹಿಪ್ಪೆ ಎಣ್ಣೆ, ಹೊಂಗೆ ಎಣ್ಣೆ, ಎಳ್ಳೆಣ್ಣೆ ಇಲ್ಲವೆ ಗಾಣದ ಎಣ್ಣೆ ಬೀಜಗಳ ಹಿಂಡಿಯಲ್ಲಿ ಚನ್ನಾಗಿ ನೆನೆಯಿಸಿದ ನೂಲಿನ ದಪ್ಪ ಬತ್ತಿಗಳನ್ನಿಟ್ಟು ಉರಿಸುತ್ತಿದ್ದರು. ಇಡೀ ರಾತ್ರಿ ಈ ದೀಪಗಳು ಆರದಂತೆ, ಬೆಳಕು ಪ್ರಜ್ವಲಿಸುವಂತೆ, ದೇದೀಪ್ಯಮಾನವಾಗಿ ಬೆಳಗುವಂತೆ ನೋಡಿಕೊಳ್ಳಲು ಎಣ್ಣೆ ಹೊಯ್ಯುತ್ತಾ ಕೂರುವ ಸಲುವಾಗಿ ಒಬ್ಬನನ್ನು ನೇಮಕ ಮಾಡುತ್ತಿದ್ದರು.

ಮೂಡಲಪಾಯ ಯಕ್ಷಗಾನದ ಬಣ್ಣಗಾರಿಕೆಯು ಕರಾವಳಿಯ ಯಕ್ಷಗಾನದ ಅಲಂಕರಣ ಕ್ರಿಯೆಯಷ್ಟು ಶಾಸ್ತ್ರೀಯವಾದುದಾಗಲಿ, ನಾಜೂಕಿನಿಂದ ಕೂಡಿದ್ದಾಗಲಿ ಅಲ್ಲ. ರಾಜ ಪಾತ್ರಗಳಿಗೆ ಅರದಾಳವನ್ನು ಘೋರ ಪಾತ್ರಗಳಿಗೆ ಕೆಂಪು, ಹಸಿರು, ಮುಂತಾದ ಕಟುವಾದ ಬಣ್ಣಗಳನ್ನು ಬಳಸುತ್ತಿದ್ದರು. ರಾಕ್ಷಸ ಪಾತ್ರಗಳಿಗೆ ಮೊದಲು ಕೆಂಪು ಬಣ್ಣ ಬಳಿದು, ಕಣ್ಣು ಮತ್ತು ಗಲ್ಲದ ಭಾಗಕ್ಕೆ ಕಪ್ಪು ಬಣ್ಣವನ್ನು ಬಳಿಯುವರು. ಈ ಕಪ್ಪು ಬಣ್ಣದ ಸುತ್ತಲೂ ಬಿಳಿಯ ಚುಕ್ಕೆಗಳನ್ನು ಇಡುವರು. ಇದರಿಂದಾಗಿ ಕಣ್ಣು ಇರುವುದಕ್ಕಿಂತ ದೊಡ್ಡದಾದಂತೆ ಕಂಡುಬರುತ್ತದೆ. ಗಲ್ಲದ ಮೇಲೆ ಬಿಳಿಯ ಚುಕ್ಕೆಗಳನ್ನು ಇಡುವುದರಿಂದ ಬಾಯಿ ಗಲ್ಲದ ಭಾಗಕ್ಕೆ ಜಾರಿದಂತೆ ವಿಕಾರವಾಗಿ, ಅಗಲವಾಗಿ ಭಯಂಕರವಾಗಿ ಕಾಣುವಂತೆ ಭಾಸವಾಗುತ್ತದೆ.

ವೇಷಭೂಷಣಗಳಂತೂ ಅತ್ಯಂತ ಶ್ರೀಮಂತವಾದವುಗಳು. ಪ್ರತಿಯೊಂದರಲ್ಲಿಯೂ ವೈವಿಧ್ಯತೆ ಇದ್ದು ಸೊಬಗು ಸೌಂದರ‌್ಯಗಳು ತುಳುಕುತ್ತವೆ. ಘೋರ ಪಾತ್ರಗಳಲ್ಲಂತೂ ರೌದ್ರತೆ ವಿಜೃಂಭಿಸುತ್ತದೆ. ಮೂಡಲಪಾಯದ ವೇಷಭೂಷಣಗಳು ಪ್ರಧಾನವಾಗಿ ಐದು ಅಂಗಗಳನ್ನು ಒಳಗೊಂಡಿದೆ. 1) ಕಿರೀಟ 2) ಭುಜಕೀರ್ತಿ 3) ಎದೆಹಾರ 4) ನಡುಪಟ್ಟಿ 5) ವೀರಗಾಸೆ. ಈ ಪ್ರಧಾನ ಅಂಗಗಳ ಜತೆಗೆ ಕೈಕಟ್ಟುಗಳು, ಕಾಲುಗೆಜ್ಜೆ, ಕಡಗಗಳು ಸೇರುತ್ತವೆ. ವಾಸ್ತವವಾಗಿ ಈ ವೇಷಭೂಷಣಗಳು ಕೇವಲ ಅಲಂಕಾರ ಸಾಧನಗಳಲ್ಲ; ಬದಲಿಗೆ ದೇಹದ ಮುಖ್ಯ ಅಂಗಗಳನ್ನು ಸಂರಕ್ಷಿಸುವ ವೀರ ಪೋಷಾಕುಗಳು.

ಮೂಡಲಪಾಯದ ಕಿರೀಟವು ವಿಶಿಷ್ಟ ಆಕಾರವನ್ನುಳ್ಳದ್ದು. ಕಿರೀಟಕ್ಕೆ ಹೊಂದಿಕೊಂಡಂತೆ  ಕರ್ಣಕುಂಡಲಗಳಿರುತ್ತವೆ. ಭುಜಕೀರ್ತಿಗಳು ಹಕ್ಕಿಗಳ ರೆಕ್ಕೆಗಳಂತೆ ಹರಡಿಕೊಂಡಿದ್ದು ರಮಣೀಯವಾಗಿರುತ್ತವೆ. ಎದೆಹಾರವು ಪೂರ್ಣವಾಗಿ ಎದೆಯ ಭಾಗವನ್ನು ಮುಚ್ಚಿದ್ದು ಕಾಣಲು ಶೋಭಾಯಮಾನವಾಗಿರುತ್ತದೆ. ವೀರಗಾಸೆಯು ಸೊಂಟದಿಂದ ಕಣಕಾಲಿನವರೆಗೂ ನೇತು ಬಿದ್ದಿದ್ದ ಅದರ ಕೆಳತುದಿಯು ಚೂಪಾಗಿರುತ್ತದೆ. ಈ ಎಲ್ಲಾ ಆಭರಣಗಳನ್ನು ಹಗುರವಾದ ಆಲೆಮರ ಇಲ್ಲವೆ ಹಾಲಿವಾಣದ ಮರದಿಂದ ಸೂಕ್ಷ್ಮವಾಗಿ ಕೆತ್ತಿ ಸಿದ್ಧಪಡಿಸುತ್ತಿದ್ದರು. ಕೆತ್ತನೆಯ ಕೆಲಸವು ತುಂಬಾ ಸೂಕ್ಷ್ಮ, ನವಿರು, ಕುಸುರಿತನದಿಂದ ಕೂಡಿರುತ್ತಿತ್ತು. ಈ ಕೆತ್ತನೆಗೆ ಹೊಂದಿಕೆಯಾಗುವಂತೆ ಬಣ್ಣ ಬಳಿಯುತ್ತಿದ್ದರು. ಕನ್ನಡಿಯ ಚೂರುಗಳು, ನಕ್ಕಿ, ಹೊಳಪಿನ ಬಿಲ್ಲೆಗಳು, ಜರತಾರಿಯ ಎಳೆಗಳನ್ನು ಕೂರಿಸುತ್ತಿದ್ದರು. ಹಸಿರು ಬಣ್ಣದ ಸ್ಥಾನದಲ್ಲಿ ಜೀರಿಂಬೆಯ ರೆಕ್ಕೆಗಳನ್ನು ಹಚ್ಚುತ್ತಿದ್ದರು. ಕಿರೀಟದ ಅಂಚುಗಳಿಗೆ ಮೇಣ ಬಳಿದು ಅದಕ್ಕೆ ಮಿಂಚುಹುಳುಗಳನ್ನು ಅಂಟಿಸಿಕೊಳ್ಳುತ್ತಿದ್ದರು. ರಾಜಪಾತ್ರಗಳು ಕುರಿ ತುಪ್ಪಟದಿಂದ ತಯಾರಿಸಿದ ದಪ್ಪನಾದ ಮೀಸೆ, ತಲೆಗೆ ಕುಚ್ಚುಕೂದಲಿನ ಟೋಫನ್, ಬೆನ್ನ ಹಿಂಬದಿಗೆ ನೆಲಕ್ಕೆ ಇಳಿ ಬೀಳುವಂತೆ ಭುಜಗಳಿಗೆ ಕಟ್ಟಿದ ಬಣ್ಣದ ಬಟ್ಟೆ, ರೇಷಿಮೆ ಅಥವಾ ಬಿಳಿಯ ಅಂಗಿ, ಕೈಕಟ್ಟು, ಕೊರಳಿಗೆ ಹೊಳೆಯುವ ಮಣಿ ಸರಗಳು, ಬಣ್ಣದ ಸೀರೆಗಳಿಂದ ಹಾಕಿದ ಕಚ್ಚೆ ಅಥವಾ ಚಲ್ಲಣ, ಸೊಂಟಕ್ಕೆ ಅಡ್ಡಲಾಗಿ ಸುತ್ತಿದ ವಸ್ತ್ರ ಧರಿಸುತ್ತಿದ್ದವು. ಸ್ತ್ರೀ ಪಾತ್ರಗಳು ನೆತ್ತಿಯಲ್ಲೊಂದು ತೆಳ್ಳನೆಯ ಕಿರೀಟ, ಸೊಂಟಕ್ಕೆ ಬೆಳ್ಳಿಯ ಡಾಬು, ಕಂಠೀಹಾರ, ಬಳೆ, ಕಡಗ ಧರಿಸುತ್ತಿದ್ದವು. ಸಾಧು, ಸಂತ, ಋಷಿ ಪಾತ್ರಗಳು ಬಿಳಿಯ ನಾರಿನ ಉದ್ದದ ಗಡ್ಡ, ಮೀಸೆ, ಕೇಸರಿ ಬಣ್ಣದ ನಿಲುವಂಗಿ, ಕೊರಳು, ತೋಳು, ಮುಂಗೈಗಳಿಗೆ ರುದ್ರಾಕ್ಷಿ ಮಣಿಸರ ಧರಿಸುತ್ತಿದ್ದವು. ಹನುಮನಾಯಕನು ಬಣ್ಣಬಣ್ಣದ ಅಂಗಿ ಮತ್ತು ಚಲ್ಲಣ, ತಲೆಗೆ ಅಡ್ಡಾದಿಡ್ಡಿ ಸುತ್ತಿದ ರುಮಾಲು ಇಲ್ಲವೆ ಕೋಡಂಗಿ ಟೋಪಿ, ಮುಖದ ಮೇಲೆ ಕಪ್ಪು-ಬಿಳಿಯ ಬಣ್ಣದ ಪಟ್ಟೆಗಳ ವಿಚಿತ್ರ ವಿನ್ಯಾಸ, ನಡುವಿನ ವಸ್ತ್ರಧರಿಸಿ ಕೈಯಲ್ಲೊಂದು ದೊಣ್ಣೆ ಹಿಡಿದಿರುತ್ತಿದ್ದನು.

ಮೂಡಲಪಾಯದ ದೈತ್ಯಪಾತ್ರಗಳಲ್ಲಿ ಸ್ತ್ರೀಪಾತ್ರವು ಕುತೂಹಲಕಾರಿಯಾದುದು. ರಾಕ್ಷಸಿ ಪಾತ್ರದ ಕಿರೀಟಕ್ಕೆ ಉದ್ದಂಡಿ ಕಿರೀಟ ಎಂದು ಕರೆಯುತ್ತಾರೆ. ಕುಂದಲಿಗೆ ಆಕಾರವನ್ನುಳ್ಳ ಈ ಕಿರೀಟವು ಮೇಲೆ ಅಗಲವಾಗಿದ್ದು, ಕೆಳಭಾಗದಲ್ಲಿ ತಲೆಯ ಗಾತ್ರಕ್ಕೆ ಸಮನಾಗಿರುತ್ತದೆ. ಎದೆಯು ಉಬ್ಬಿದಂತೆ ಕಾಣಲು ತೋರ ಗಾತ್ರದ ಎರಡು ಮರದ ಕುಚಗಳನ್ನು ಅಳವಡಿಸಿರುತ್ತಾರೆ. ಮೊಳಕಾಲಿನವರೆಗೆ ಬಣ್ಣದ ಲಂಗ ಧರಿಸಿದ್ದು ಅದರ ಮೇಲೆ ಸೀರೆಯ ಮಡಿಕೆಗಳನ್ನು ತೆರೆಗಳಂತೆ ಸುತ್ತಲೂ ಇಳಿಬಿಟ್ಟಿರುತ್ತಾರೆ. ಹಿಂಬದಿಯು ಉಬ್ಬಿದಂತೆ ಇರಲು ಮೊರಗಳು ಇಲ್ಲವೆ ಬುಟ್ಟಿಗಳನ್ನು ಕಟ್ಟಿಕೊಳ್ಳುತ್ತಾರೆ. ಘೋರ ಪಾತ್ರದ ವೇಷಭೂಷಣಗಳು, ಪ್ರವೇಶ, ಕುಣಿತ ಎಲ್ಲವೂ ಮೂಡಲಪಾಯದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಮೆರೆದಿವೆ.

ಬಣ್ಣ ಬಳಿದು ವೇಷಭೂಷಣಗಳನ್ನು ಧರಿಸಿ ಸಿದ್ಧವಾದ ಪಾತ್ರಗಳು ಒಮ್ಮಿಂದೊಮ್ಮೆಲೇ ರಂಗಪ್ರವೇಶ ಮಾಡುವುದಿಲ್ಲ. ಬಣ್ಣದ ಮನೆಯಿಂದ ಅಡ್ಡ ತೆರೆ ಹಿಡಿದು ರಂಗದ ಮುಂಭಾಗಕ್ಕೆ ಕರೆತರುತ್ತಾರೆ. ರಂಗದ ಮುಂದೆ ಬಂದ ಪಾತ್ರಧಾರಿಗಳು ಅರ್ಧಚಂದ್ರಾಕೃತಿಯಲ್ಲಿ ಕುಣಿಯುತ್ತಾ ರಂಗಪ್ರವೇಶ ಮಾಡಿ ಅಭಿನಯಿಸಲು ಆರಂಭಿಸುತ್ತವೆ.

ಮೂಡಲಪಾಯ ಯಕ್ಷಗಾನದ ಕುಣಿತದಲ್ಲಿ ಒಂದ್ಹೆಜ್ಜೆ, ಎರಡ್ಹೆಜ್ಜೆ, ಮೂರ‌್ಹೆಜ್ಜೆ, ಕತ್ತರಿಗುಣಿತ, ಉಡಂಗ್, ಕುಕ್ಕರುಗಾಲು ಕುಣಿತ ಮೊದಲಾದ ವರಸೆಗಳು ಕಂಡುಬರುತ್ತವೆ. ಇಲ್ಲಿ ಯಾವ ವೇಷ ಹಾಕುತ್ತೀಯ ಎಂದು ಕೇಳುವುದಕ್ಕಿಂತ, ಯಾವ ಪಾತ್ರ ಕುಣಿಯುತ್ತೀಯ ಎಂದು ಕೇಳುವುದೇ ರೂಢಿ. ಆದ್ದರಿಂದ ಮೂಡಲಪಾಯವು ಕುಣಿತ ಪ್ರಧಾನವಾದುದು. ವೇಷ ಧರಿಸಿ ಪಾತ್ರದ ಮಹತ್ವವನ್ನು ಅರಿತು ಅಭಿನಯಿಸುವುದಕ್ಕಿಂತ ಕುಣಿಯುವುದೇ ಹೆಚ್ಚು. ಸಿಟ್ಟಿಗೆದ್ದರೆ ರಾಮನೂ ಸಹ ಕುಣಿತದಲ್ಲಿ ರಾವಣನನ್ನು ಮೀರಿಸುತ್ತಾನೆ.

ಹಲಗೆ ಮುರಿಯುವಂತಹ ದಿಟ್ಟ ಹೆಜ್ಜೆಗಳ ಕುಣಿತವಿರುವಂತೆಯೇ ಅತ್ಯಂತ ಲಾಲಿತ್ಯಮಯವಾದ, ಮೋಹಕವಾದ ಕುಣಿತಗಳೂ ಇವೆ. ಪಾತ್ರಗಳು ಎಲ್ಲಾ ತಾಳಗಳಿಗೂ ನರ್ತಿಸುತ್ತವೆ. ಉದಾಹರಣೆಗೆ :

1)                  ತಾ ತಾ ಧಿತ್ತೊ ತಕ ತಕ ತಕ ತಕ ತಾಂ ಧಿತ್ತೊ

2)         ತಕಡ್ ದದ್ದಿನ ಧಿಂ ತಕ ತಾ ರಾಮಾ
            ತಕಡ್ ದದ್ದಿನ ಧಿಂ ತಕ ತಂ ರಾಮಾ

3)         ತದ್ಧಿತಾಂ ಜಣ
            ತಕ ತಕ ಥೈ ತಕ ತಕ ಧಾಂ
            ತಕ ತಕ ಥೈ

4)         ತೈ ಜಣ ಜಣ ತಾಂ ಜಣ ಜಣ
            ತೈ ಜಣ ಜಣ ತಾಂ ಜಣ ಜಣ

5)         ತೈ ಥೈ ತಾಧಿನ್ನ ಧತ್ತಾ
            ತಕ ತಕ ಥಾಂ, ತೋಂ
            ತಾಂ ತಾಂ ತಾಂ

ಇತ್ಯಾದಿ ಹೆಜ್ಜೆ ತಾಳಗಳಿವೆ. ಒಂದೊಂದು ರಾಗ ಮತ್ತು ತಾಳಕ್ಕೂ ಒಂದೊಂದು ತೆರನಾದ ಕುಣಿತಗಳಿವೆ. ಕಾಳಗದ ಸಂದರ್ಭದಲ್ಲಿ, ವೀರಾವೇಶದಲ್ಲಿ ಕುಣಿತದ ಗತಿಯು ತೀವ್ರತೆಯದ್ದಾಗಿದ್ದರೆ, ಶೋಕ-ಕರುಣ ಸನ್ನಿವೇಶದಲ್ಲಿ ಕುಣಿತಕ್ಕೆ ಬದಲಾಗಿ ಕೇವಲ ಮೂಕಾಭಿನಯವಿದ್ದು ರಸಭಾವಕ್ಕೆ ಪೋಷಣೆ ಒದಗಿಸುತ್ತದೆ.

ಮೂಡಲಪಾಯ ಯಕ್ಷಗಾನದ ಕುಣಿತಗಳು ನಾಜೂಕಿನವುಗಳಲ್ಲ; ರೂಕ್ಷ ಕುಣಿತಗಳು, ಪುರುಷ ಪಾತ್ರಗಳ ಕುಣಿತಗಳಂತೂ ರೌದ್ರ, ಅಟ್ಟಹಾಸ, ಆಡಂಬರಗಳಿಗೆ ತಕ್ಕಂತೆ ಬೆಳೆದು ಬಂದಿವೆ. ಆದರೆ ಸ್ತ್ರೀ ಪಾತ್ರಗಳ ಕುಣಿತಗಳು ಬಹುಮಟ್ಟಿಗೆ ಲಾಸ್ಯದಿಂದ ಕೂಡಿವೆ. ಮೇಲೆ, ಕೆಳಗೆ ಬಾಗುವುದು, ಬಳುಕುವುದು, ನಡುವಿನ ಮೇಲೆ ಕೈ ಇರಿಸಿ ಒಯ್ಯರ, ಒನಪುಗಳನ್ನು ಪ್ರದರ್ಶಿಸುವುದು, ಹಿಂದೆ ಮುಂದೆ ಸರಿದಾಡುತ್ತಾ ಕೈಗಳ ಮೂಲಕ ಸರಳ ಮುದ್ರೆಗಳನ್ನು ಅಭಿವ್ಯಕ್ತಿಸುವುದು ಕಂಡುಬರುತ್ತದೆ.

ಮೂಡಲಪಾಯದ ಮುಮ್ಮೇಳದಲ್ಲಿ ಭಾಗವತರು ಹಾಡಿದರೆ, ಹಿಮ್ಮೇಳದಲ್ಲಿ ಕಂಠತ್ರಾಣ ಇರುವ ಎಷ್ಟು ಜನ ಬೇಕಾದರೂ ಸೇರಿಕೊಳ್ಳಬಹುದಾಗಿತ್ತು. ಕೆಲವೊಮ್ಮೆ ಪ್ರಸಂಗದಲ್ಲಿ ಆಗೊಮ್ಮೆ, ಈಗೊಮ್ಮೆ ಬಂದು ಹೋಗುವ ನಟರೂ ಸಹ ತಮ್ಮ ಕೆಲಸ ಮುಗಿಸಿ ಬಂದು ಹಿಮ್ಮೇಳದಲ್ಲಿ ಸೇರಿಕೊಳ್ಳುತ್ತಿದ್ದರು. ಈ ಪರಂಪರೆಯಲ್ಲಿ ಪ್ರಧಾನವಾಗಿ ಬಳಸುವ ವಾದ್ಯಗಳೆಂದರೆ, ತಾಳ, ಮೃದಂಗ, ಮುಖವೀಣೆ, ಹಾರ‌್ಮೋನಿಯಂ. ಹಿಂದೆ ಶ್ರುತಿಗಾಗಿ ಉಪ್ಪಂಗದ ಬುರುಡೆ, ನಾರಳೆಗೆಡ್ಡೆ, ಸೋರೆಬುರುಡೆ ತಂದು ಅದಕ್ಕೆ ಮೂರ್ತಳ್ಳಿವಾಡೆ ಕಟ್ಟಿ  ಊದುತ್ತಿದ್ದರು. ಶ್ರುತಿಯ ನಾದವು ಇದರಿಂದ ತುಂಬಿಕೊಂಡು ಬರುತ್ತಿದ್ದು ಸದ್ಯ ಶ್ರುತಿ ಪೆಟ್ಟಿಗೆಯ ಕೆಲಸವನ್ನು ಹಾರ‌್ಮೋನಿಯಂ ನಿರ್ವಹಿಸುತ್ತಿದೆ. ಮುಖವೀಣೆಯಂತೂ ಅತ್ಯದ್ಭುತವಾದ ವಾದ್ಯ. ಗೇಣುದ್ದದ ಈ ಉಸಿರುವಾದ್ಯವು ಹಾಡುಗಾರಿಕೆಗೆ ಅಧಿಕವಾದ ಮೆರುಗು ತಂದುಕೊಡುವುದಲ್ಲದೆ ರಂಗದಲ್ಲಿ ಉತ್ತಮ ಸಂಗೀತದ ಆವರಣವನ್ನು ನಿರ‌್ಮಾಣಮಾಡುತ್ತದೆ. ಮುಖವೀಣೆಯಿಂದ ಹೊರಡುವ ನಾದವು ಬಹುದೂರದವರೆಗೂ ತರಂಗದೋಪಾದಿಯಲ್ಲಿ ಪ್ರವಹಿಸುತ್ತದೆ. ಪಡುವಲಪಾಯ ಯಕ್ಷಗಾನದಲ್ಲಿ ಬಳಕೆಯಲ್ಲಿರುವ ಚಂಡೆ ಎಂಬ ವಾದ್ಯವು ತುಂಬಿಕೊಡುವ ಸತ್ವವನ್ನು ಮೂಡಲಪಾಯದಲ್ಲಿ ಮುಖವೀಣೆಯು ತುಂಬಿಕೊಡುತ್ತದೆ. ಮೃದಂಗದವರು ರಾಗಿ ಹಸಿಹಿಟ್ಟನ್ನು ನೀರಿನಲ್ಲಿ ಚನ್ನಾಗಿ ಕಲೆಸಿ ಅರೆದು ಮೇಣದಂತೆ ಮಾಡಿಕೊಂಡು ಮದ್ದಳೆಯ ಎರಡೂ ಭಾಗಗಳಿಗೆ ಬಳಿದು ಶ್ರುತಿಯನ್ನು ಸರಿಪಡಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಭಾಗವತರೇ ಮದ್ದಳೆಕಾರರೂ ಹೌದು. ಸೊಂಟದ ಭಾಗಕ್ಕೆ ಮದ್ದಳೆಯನ್ನು ಕಟ್ಟಿಕೊಂಡು ನುಡಿಸುತ್ತಿದ್ದರು. ಇಡೀ ರಾತ್ರಿ ಭಾಗವತರು ನಿಂತುಕೊಂಡೇ ಪ್ರಸಂಗವನ್ನು ನಡೆಸಿಕೊಡುತ್ತಿದ್ದರು. ಹಾಡುವುದು ಮತ್ತು  ಮದ್ದಳೆ ನಡೆಸುವುದು ಎರಡನ್ನೂ ಒಟ್ಟಿಗೇ ನಿರ್ವಹಿಸುವುದು ತ್ರಾಸದಾಯಕವಾದ ಕೆಲಸವಾಗಿತ್ತು. ಕ್ರಮೇಣ ಭಾಗವತರು ತಾವು ನಿಲ್ಲುವ ಜಾಗದ ಮುಂಬದಿಯಲ್ಲಿ ಎರಡು ಅಥವಾ ಮೂರು ಅಡಿ ಎತ್ತರದ ಕವೆ ಕಂಭಗಳನ್ನು x ಆಕಾರದಲ್ಲಿ ನೆಟ್ಟು ಅದರ ಮೇಲೆ ಮೃದಂಗವನ್ನು ಇರಿಸಿಕೊಂಡು ನುಡಿಸಲಾರಂಭಿಸಿದರು.

ಮೂಡಲಪಾಯ ಯಕ್ಷಗಾನದ ಹಾಡುಗಾರಿಕೆಯು ಅತ್ಯಂತ ವೈವಿಧ್ಯಮಯವಾದುದು. ರಾಗ-ತಾಳ-ಮದ್ದಳೆ ಸಮನ್ವಿತವಾದ ಸಂಕೀರ್ಣ ವ್ಯವಸ್ಥೆ. ಇಲ್ಲಿ ರಾಗ-ತಾಳಗಳೆರಡೂ ಒಟ್ಟಿಗೇ ಹುಟ್ಟುತ್ತವೆ ಮತ್ತು ಪ್ರಸಂಗದ ಸನ್ನಿವೇಶಗಳಿಗೆ ತಕ್ಕಂತೆ ರಸವಾಗಿ ಪರಿಣಮಿಸುತ್ತದೆ. ಅಲ್ಲದೆ ಮೂಡಲಪಾಯ ಸಂಗೀತದಲ್ಲಿನ ಹಾಡುಗಾರಿಕೆಯು ಯಾವುದೇ ಸಿದ್ಧ ಪಠ್ಯವೊಂದರ ವಾಚನಕ್ಕೆ ಹುಟ್ಟಿದಂಥದ್ದಲ್ಲ. ಸ್ವತಂತ್ರವಾಗಿ ಬೆಳೆದುಬಂದ ಹಾಡುಗಾರಿಕೆಯ ಪದ್ಧತಿ. ನಮ್ಮ ಭಾಗವತರುಗಳೂ ಸಹ ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡಿದವರೇನಲ್ಲ. ಗುರುಮುಖೇನ ವಾಚಿಕ ಪರಂಪರೆಯಲ್ಲಿ ಕರಗತ ಮಾಡಿಕೊಂಡವರು. ಸಂಗೀತಶಾಸ್ತ್ರದ ಹಿನ್ನೆಲೆಯಲ್ಲಿ ಪರಿಭಾವಿಸಿದಾಗ ಮೂಡಲಪಾಯ ಸಂಗೀತ ದಕ್ಷಿಣಾದಿ ಸಂಗೀತ ಪದ್ಧತಿಗೆ ಸೇರಿದ್ದು, ಪ್ರಾದೇಶಿಕ ವೈಶಿಷ್ಟ್ಯಗಳಿಂದಾಗಿ ಮೂಡಲಪಾಯ ಸಂಗೀತ ಶೈಲಿಯು ರೂಪುಗೊಂಡಿರುವುದು ಗೋಚರಿಸುತ್ತದೆ. ಈ ಬಗ್ಗೆ ನಮ್ಮ ಯಾವುದೇ ಭಾಗವತರನ್ನು ವಿಚಾರಿಸಿದರೂ ಅವರುಗಳಿಂದ ಯಾವುದೇ ಸ್ಪಷ್ಟ ನಿಲುವು ತಿಳಿದುಬರುವುದಿಲ್ಲ. ಆದಾಗ್ಯೂ ಮೂಡಲಪಾಯದಲ್ಲಿ ಅತ್ಯುತ್ತಮ ಸಂಗೀತಜ್ಞಾನವನ್ನುಳ್ಳ ಭಾಗವತರುಗಳಿದ್ದಾರೆಂಬುದಂತೂ ಸತ್ಯ. ರಾಗಗಳನ್ನು ಅರಿಯುವ ಗೋಜಿಗೆ ಹೋಗದಿದ್ದರೂ ಸಾಂಪ್ರದಾಯಿಕ ಧಾಟಿಗಳನ್ನು ಮಾತ್ರ ಗುರುತಿಸಬಲ್ಲವರು. ನಾಟಿ, ಕಲ್ಯಾಣಿ, ಶಂಕರಾಭರಣ, ರೇಗುಪ್ತಿ, ಸಾವೇರಿ, ಕಾಂಬೋಧಿ, ಮುಖಾರಿ, ಆರವಿ, ಕಾನಡ, ಗೌಳ, ಕೇದಾರಗೌಳ, ಸೌರಾಷ್ಟ್ರ, ತೋಡಿ, ನಾದನಾಮಕ್ರಿಯೆ, ಭೈರವಿ, ಆನಂದಭೈರವಿ, ಪೂರ್ವಕಲ್ಯಾಣಿ, ಅಠಾಣ, ಮೋಹನ, ಬಿಲಹರಿ, ಬೇಗಡೆ, ಧನ್ಯಾಸಿ, ನೀಲಾಂಬರಿ, ಸುರವಿ, ವಿಜಯನಾಗರಿ, ಬೇಹಾಗ್, ಭೂಪಾಳಿ, ಮಧ್ಯಮಾವತಿ, ಜಂಜೂಟಿ, ಮಲಹರಿ ಮುಂತಾದ ಬತ್ತೀಸ ರಾಗಗಳನ್ನು ಯಕ್ಷಗಾನದ ಭಾಗವತರು ಹಿಂದೆ ಬಳಸುತ್ತಿದ್ದರು. ಇವುಗಳಲ್ಲಿ ನಾಟಿ ರಾಗವು ಪ್ರಸಿದ್ಧವಾದುದು. ಪ್ರಸಂಗದ ಆರಂಭದಲ್ಲಿ ನಾಟಿ ರಾಗವು ಬರಲೇಬೇಕು. ಮೂಡಲಪಾಯ ಯಕ್ಷಗಾನದ ಭಾಗವತರು ಮೇಲೆ ಹೇಳಿದ ಎಲ್ಲಾ ರಾಗಗಳನ್ನು ಬಲ್ಲವರೇನಲ್ಲ. ಕೆಲವರಂತೂ ಕೇವಲ ಆರೇಳು ರಾಗಗಳಲ್ಲಿ ತಮ್ಮ ಇಡೀ ಪ್ರಸಂಗವನ್ನು ಮುಗಿಸಿಬಿಡುತ್ತಾರೆ. ಇಂದ್ರಜಿತು ವಧೆಯನ್ನು ಶಂಕರಾಭರಣದಲ್ಲಿ, ಪಂಚವಟಿ ರಾಮಾಯಣವನ್ನು ಮಧ್ಯಮಾವತಿಯಲ್ಲಿ, ಕುಶಲವರ ಕಥೆಯನ್ನು ಆನಂದಭೈರವಿಯಲ್ಲಿ, ಕರಿಭಂಟನ ಕಥೆಯನ್ನು ಗೌಳದಲ್ಲಿ, ಭಕ್ತಮಾರ್ಕಂಡೇಯ ಕಥೆಯನ್ನು ಸೌರಾಷ್ಟ್ರದಲ್ಲಿ ನಡೆಸಿಕೊಡುವ ಭಾಗವತರುಗಳೂ ಇದ್ದಾರೆ.

ಮೂಡಲಪಾಯ ಯಕ್ಷಗಾನದ ಭಾಗವತರು ಸಾಹಿತ್ಯ-ಸಂಗೀತ-ತಾಳಜ್ಞಾನ ಉಳ್ಳವರಾಗಿದ್ದರು. ಹಾಡುಗಾರಿಕೆ, ಕುಣಿತ, ಮಾತುಗಾರಿಕೆಯ ಮೂಲಕ ಪ್ರಸಂಗವನ್ನು ಮುನ್ನಡೆಸುತ್ತಿದ್ದರು. ಸನ್ನಿವೇಶ ಮತ್ತು ಸಂದರ್ಭಗಳಿಗೆ ತಕ್ಕಂತೆ ವೀರ, ರೌದ್ರ, ಕರುಣ, ಶೋಕ ರಸಗಳನ್ನು ಅಭಿವ್ಯಕ್ತಿಸುತ್ತಾ, ವಿಶಿಷ್ಟವಾದ ಲಯಪ್ರಧಾನವಾದ ದೇಶೀಯ ಶೈಲಿಯಲ್ಲಿ ಪ್ರಸಂಗದ ಕಥೆಯನ್ನು ನಿರ್ವಹಿಸುತ್ತಿದ್ದರು. ಭಾಗವತರ ಲಯಬದ್ಧವಾದ ಹಾಡುಗಾರಿಕೆಗೆ ಮದ್ದಳೆ ಮತ್ತು ಮುಖವೀಣೆಗಳು ಅತ್ಯುತ್ತಮವಾದ ಸಾಥ್ ನೀಡುತ್ತಿದ್ದವು. ಪರಿಣಾಮವಾಗಿ ಪಾತ್ರಧಾರಿಗಳಿಗೆ ಹುಮ್ಮಸ್ಸು ತುಂಬುತ್ತಿತ್ತು : ಕೇಳುಗರನ್ನು ಆಕರ್ಷಿಸುತ್ತಿತ್ತು. ಭಾಗವತರೊಂದಿಗಿನ ಹಿಮ್ಮೇಳವು ಹಾಡುಗಳನ್ನು ತಾರಕಸ್ವರದಲ್ಲಿ ಎಳೆದೆಳೆದು ಹಾಡುವುದರಿಂದ ವೀರರಸ ಪ್ರತಿಪಾದನೆಗೆ ಪೋಷಕವಾಗಿ ಕೂಡಿಕೊಂಡು ಬರುತ್ತಿತ್ತು. ಕಾಳಗದ ಸನ್ನಿವೇಶಗಳಲ್ಲಂತೂ ಪಾತ್ರಧಾರಿಗಳ ಆರ್ಭಟ, ಮದ್ದಳೆ-ಮುಖವೀಣೆಗಳ ಉಕ್ಕುವ ಸುಮಧುರ ನಿನಾದ, ಭಾಗವತರ ತಾರಕಕ್ಕೇರಿದ ಹಾಡುಗಾರಿಕೆ, ಹಾಡುವ ರೀತಿಯಲ್ಲಿ ಏರು ಮತ್ತು ಇಳುವು ಎಲ್ಲವೂ ಸೇರಿ ಮಲಗಿದ್ದವರನ್ನು ಬಡಿದೆಬ್ಬಿಸುತ್ತಿದ್ದವು.

ಮೂಡಲಪಾಯದಲ್ಲಿ ಭಾಗವತರಿಗೆ ಸಹಾಯಕನಾಗಿ ಬರುವ ಹನುಮನಾಯಕನ ಪಾತ್ರವು ಅತ್ಯಂತ ಪ್ರಮುಖವಾದುದು. ಸಂಸ್ಕೃತ ನಾಟಕದ ವಿದೂಷಕ, ಪಡುವಲಪಾಯ ಯಕ್ಷಗಾನದ ಕೋಡಂಗಿ, ದೊಡ್ಡಾಟದ ಸಾರಥಿ, ಮೂಡಲಪಾಯದಲ್ಲಿ ಹನುಮನಾಯಕನಾಗಿದ್ದಾನೆ. ಲವಲವಿಕೆಯಿಂದ ಕೂಡಿದ ಪಾತ್ರವಿದು. ತನ್ನ ವಿಶಿಷ್ಟ ವೇಷಭೂಷಣಗಳು, ವಕ್ರ ನಡವಳಿಕೆ, ಚಮತ್ಕಾರಯುತ ಮಾತುಗಾರಿಕೆಯಿಂದಾಗಿ ಹನುಮನಾಯಕ ಪ್ರೇಕ್ಷಕರ ಗಮನ ಸೆಳೆಯುತ್ತಾನೆ. ರಂಗಕ್ಕೆ ಬರುವ ಪಾತ್ರಗಳನ್ನು ಮಾಡನಾಡಿಸುವ, ಕಿಛಾಯಿಸುವ, ಛೇಡಿಸುವ, ಟೀಕಿಸುವ, ಹೊಗಳುವ, ವಿಡಂಬಿಸುವ, ಸಿಟ್ಟಿಗೆಬ್ಬಿಸುವ, ಚೈತನ್ಯ ತುಂಬುವ ಹೀಗೆ ಎಲ್ಲಾ ಬಗೆಯ ಕೆಲಸಗಳನ್ನು ಈ ಪಾತ್ರವು ನಿರ್ವಹಿಸುತ್ತದೆ. ರಂಗಕ್ಕೆ ಬರುವ ಪಾತ್ರಗಳೂ ಸಹ ಅಷ್ಟೆ. ತಮ್ಮೆಲ್ಲಾ ನೋವು-ನಲಿವು, ಸುಖ-ದುಃಖ, ರೋಷ-ದ್ವೇಷ, ಪ್ರೀತಿ-ಪ್ರೇಮ, ವಿರಹ, ಕಾಯಾಸಕ್ತಿ ಎಲ್ಲವನ್ನೂ ಹನುಮನಾಯಕನೊಂದಿಗೆ ಹಂಚಿಕೊಳ್ಳುತ್ತವೆ. ಪ್ರಸಂಗದ ಕಥಾಭಾಗಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವುದು. ಪ್ರೇಕ್ಷಕರ ಬೇಸರ ನೀಗಿಸುವ ಸಲುವಾಗಿ ರಂಜನೀಯ ಹಾಸ್ಯದಿಂದ ಅವರನ್ನು ಉಲ್ಲಸಿತಗೊಳಿಸುವುದು, ಪ್ರೇಕ್ಷಕರೊಂದಿಗೆ ಸಂವಾದ ನಡೆಸುವುದು, ಮಾತಿನ ಚಟಾಕಿಯಿಂದ ಖುಷಿಪಡಿಸುವುದು. ಹಾಡುಗಳನ್ನು ಹೇಳುವುದು. ಪಾತ್ರಧಾರಿಗಳನ್ನು ರಂಗಕ್ಕೆ ಕರೆ ತರುವುದು. ಕಳುಹಿಸುವುದು, ಅಕಸ್ಮಾತ್ ಪಾತ್ರಧಾರಿಗಳು ರಂಗದ ಮೇಲೆ ಬಿಟ್ಟು ಹೋದ ಸರ, ಬಿಲ್ಲು-ಬಾಣಗಳನ್ನು ಎತ್ತಿಕೊಡುವುದು, ಪ್ರಾಸಬದ್ಧ ಮಾತುಗಳಿಂದ ಚುರುಕಾಗಿ ರಂಗದ ತುಂಬಾ ಓಡಾಡುತ್ತಾ ಪ್ರಸಂಗವನ್ನು ಕಳೆಗಟ್ಟಿಸುವುದು, ಈ ಎಲ್ಲಾ ದೃಷ್ಟಿಗಳಿಂದಲೂ ಹನುಮನಾಯಕನ ಪಾತ್ರವು ಮೂಡಲಪಾಯ ಯಕ್ಷಗಾನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಹನುಮನಾಯಕ, ಪ್ರಸಂಗದಲ್ಲಿನ ಇತರ ಪಾತ್ರಧಾರಿಗಳಂತೆ ನಮಗೆ ದೂರದವನಲ್ಲ : ಆದರ್ಶ ಪುರುಷನಲ್ಲ : ಮಾದರಿಯಾಗಲಿ ಅಲ್ಲ. ಅವನ ಅಭಿವ್ಯಕ್ತಿ ಎಲ್ಲವೂ ಕವಿನಿರ‌್ಮಿತವಲ್ಲ. ನಮ್ಮದೇ ಅಭಿವ್ಯಕ್ತಿ. ಪ್ರಸಂಗ ವೀಕ್ಷಣೆ ಸಂದರ್ಭದಲ್ಲಿ ನಾವೇ ಅವನಾಗಿರುತ್ತೇವೆ, ಅಷ್ಟೆ.

ಮೂಡಲಪಾಯ ಯಕ್ಷಗಾನದ ಮತ್ತೊಂದು ವೈಶಿಷ್ಟ್ಯವೆಂದರೆ, ನಡುರಾತ್ರಿಯ ನಂತರ ದೈತ್ಯ ಪಾತ್ರಗಳು ರಂಗವನ್ನು ಪ್ರವೇಶಿಸುವುದು. ನಡುರಾತ್ರಿಯ ವೇಳೆಗಾಗಲೇ ಪ್ರೇಕ್ಷಕರಲ್ಲಿ ಆಲಸ್ಯ. ತೂಕಡಿಕೆಗಳು ಮರುಕಳಿಸಿ ನಿದ್ರೆಗೆ ಶರಣಾಗುತ್ತಿರುತ್ತಾರೆ. ಈ ವೇಳೆಗೆ ಸರಿಯಾಗಿ ದೈತ್ಯ ಪಾತ್ರಗಳು ಪಂಜಿನ ಬೆಳಕಿನಲ್ಲಿ ಕಾಕು ಹೊಡೆಯುತ್ತಾ ಆರ್ಭಟಿಸಿಕೊಂಡು ರಂಗಪ್ರವೇಶ ಮಾಡುತ್ತಿದ್ದಂತೆ ಪ್ರೇಕ್ಷಕರ ನಿದ್ರೆ ಹಾರಿಹೋಗುತ್ತದೆ. ರಂಗದ ಹೊರಗಿನಿಂದ ಬರುವ ಈ ಘೋರಪಾತ್ರಗಳು ಆರ್ಭಟಿಸುತ್ತಾ ಬರುತ್ತವೆ. ತಮಟೆ, ನಗಾರಿ, ಹರೆ ವಾದ್ಯಗಳ ಸದ್ದು ಕಿವಿಗಡಚಿಕ್ಕುತ್ತದೆ. ಪಂಜುಗಳ ಬೆಂಕಿಯ ಮೇಲೆ ಗುಗ್ಗುಳವನ್ನು ಎರಚಿದಾಗ ಉರಿಯು ಧಗ್ ಎಂದು ಪ್ರಜ್ವಲಿಸುತ್ತದೆ. ಘೋರ ಪಾತ್ರಗಳ ಹಿಂದೆ ಮರದ ಕೊಂಬೆಗಳನ್ನು ಹಿಡಿದ ರಾಕ್ಷಸ ಅನುಚರರು ಕಾಕು ಹೊಡೆಯುತ್ತಾ ಕುಣಿಯುತ್ತಾ ಬರುತ್ತಾರೆ. ಮಲಗಿದ್ದವರು, ತೂಕಡಿಸುತ್ತಿದ್ದವರೆಲ್ಲಾ ಒಮ್ಮೆಗೇ ಎದ್ದುಕೂರುತ್ತಾರೆ. ದೈತ್ಯ ಪಾತ್ರವು ರಂಗಪ್ರವೇಶ ಮಾಡುತ್ತಿದ್ದಂತೆ ಭಾಗವತರು ತಾವು ಕಲಿತ ವಿದ್ಯೆಯನ್ನೆಲ್ಲಾ ಖರ್ಚುಮಾಡಿ ನಾನಾ ಗತ್ತುಗಳಲ್ಲಿ ಕುಣಿಸುತ್ತಾರೆ. ಪ್ರಸಂಗಕ್ಕೆ ಹೊಸ ಕಳೆ ಬರುತ್ತದೆ. ಪ್ರೇಕ್ಷಕರು ಪುಲಕಿತರಾಗಿ ರೋಮಾಂಚನವನ್ನು ಅನುಭವಿಸುತ್ತಾ ತದೇಕಚಿತ್ತರಾಗಿ ಪ್ರಸಂಗವನ್ನು ಆಸ್ವಾದಿಸುತ್ತಾರೆ. ಹೀಗೆ ಬೈಗಿನಿಂದ ಬೆಳಗಿನವರೆಗೂ ಕದಲದೆ ಪ್ರಸಂಗವನ್ನು ವೀಕ್ಷಿಸುವ ಪ್ರೇಕ್ಷಕರು ಪಾತ್ರಗಳೊಡನೆ ಒಂದಾಗುತ್ತಾರೆ. ಪ್ರಸಂಗ ಮಧ್ಯದಲ್ಲಿ ಎದ್ದು ಹೋಗಿ ತಮಗೆ ಇಷ್ಟವಾದ ಪಾತ್ರಧಾರಿಗಳಿಗೆ ಮೆಚ್ಚುಗೆ-ಆಹೇರುಗಳನ್ನು ಅರ್ಪಿಸುತ್ತಾರೆ. ಭಾಗವತರಿಗೂ ಸಹ ಇವು ಸಲ್ಲುತ್ತವೆ. ಆಟ ಮುಗಿಯುವವರೆಗೂ ಇಂತಹ ಮುಯ್ಯಿಗಳು ನಡೆಯುತ್ತಲೇ ಇರುತ್ತವೆ. ಬೆಳಗಿನ ಜಾವದ ವೇಳೆಗೆ ಮಂಗಳದೊಂದಿಗೆ ಪ್ರಸಂಗ ಮುಕ್ತಾಯಗೊಳ್ಳುತ್ತದೆ.

  * * *

ನಮ್ಮಲ್ಲಿ ಯಾವುದೇ ಕಲೆಯ ಉಗಮಕ್ಕೂ ಭರತನ ನಾಟ್ಯಶಾಸ್ತ್ರವೇ ಮೂಲ ಎಂದು ಗಂಟು ಹಾಕುವುದು ವಿದ್ವಾಂಸರಲ್ಲಿ ಬೆಳೆದು ಬಂದ ಪರಿಪಾಠ. ಭರತನ ನಾಟ್ಯಶಾಸ್ತ್ರವು ಪ್ರಾಚೀನವಾದುದು ಎನ್ನುವುದು ನಿಜವಾದರೂ, ಎಲ್ಲಾ ಲಲಿತಕಲೆಗಳಿಗೂ ಅದೇ ಮೂಲ ಎನ್ನವಂಥದ್ದು ನಿರಾಧಾರವಾದುದು. ಬಯಲಾಟದಂತಹ ಜನಪದ ಕಲೆಯ ಜನ ಸಮ್ಮುಖವಾದುದು. ಜನರಿಂದ ಜನರಿಗಾಗಿ ಜನರಿಗೋಸ್ಕರ ಹುಟ್ಟಿಕೊಂಡ ಜನಸಾಮಾನ್ಯರ ಕಲೆ. ಜನಸಾಮಾನ್ಯರೇ ಇದರ ವಾರಸುದಾರರು : ಹಕ್ಕುದಾರರು. ಅವರದೇ ಬಳುವಳಿ. ಪೋಷಕರು, ಪ್ರೇಕ್ಷಕರು, ಆಶ್ರಯದಾತರು ಎಲ್ಲರೂ ಅವರೇ. ಸರ್ಕಾರ ಸಂಘ ಸಂಸ್ಥೆಗಳಿಂದ ಪೋಷಿತವಾದುದಲ್ಲ.

ಯಾವುದೇ ಪುರಾತನ ಕಲೆ, ಸಂಸ್ಕೃತಿ, ಶಾಸ್ತ್ರಗಳಿದ್ದರೂ ಅವಕ್ಕೆಲ್ಲ ಅಪೌರುಷೇಯವಾದ ಮೂಲವನ್ನು ಆರೋಪಿಸುವುದು ಸ್ವಭಾವವಾಗಿ ಬಂದಿದೆ. ಒಳ್ಳೆಯದೆಲ್ಲ ದೇವರಿಂದಲೋ ಋಷಿಗಳಿಂದಲೋ ಬಂದಿರಲೇಬೇಕೆಂಬ ನಂಬಿಕೆ ಇತಿಹಾಸಿಕ ಪರಿಜ್ಞಾನಕ್ಕೆ ತೊಡರನ್ನು ತರುವಂಥದು.

(ಶಿವರಾಮ ಕಾರಂತ).

ಆದಿಮ ಮನುಷ್ಯನಿಗೆ ಮಾತು ಬರುವ ಮುನ್ನವೇ ಕುಣಿತ ಗೊತ್ತಿತ್ತು. ನಿಸರ್ಗದ ವೈಚಿತ್ರ್ಯಗಳಿಗೆ ಒಳಗಾಗಿ ಸದಾ ಆತಂಕ ಮತ್ತು ಆಹ್ಲಾದಗಳ ಮಧ್ಯೆ ಬದುಕುತ್ತಿದ್ದ ಆದಿಮನು ತನ್ನನ್ನು ಆತಂಕಕ್ಕೀಡು ಮಾಡುವ ನಿಸರ್ಗವನ್ನು ಹಿಡಿತದಲ್ಲಿರಿಸಿಕೊಳ್ಳಲು ಮಾಂತ್ರಿಕ ವಿದ್ಯೆಯನ್ನು ಕಲಿತನು : ನಿಸರ್ಗದ ಮೇಲೆ ಪ್ರಯೋಗಿಸಿದನು. ಇದಕ್ಕೆ ಜಗ್ಗದಿದ್ದಾಗ ನಿಸರ್ಗವನ್ನು ಆರಾಧಿಸುವುದನ್ನು ರೂಢಿಸಿಕೊಂಡನು. ಆರಾಧನೆಯ ಅಂಗವಾಗಿ ಕುಣಿತವು ಹುಟ್ಟಿಕೊಂಡಿತು. ಕುಣಿತದಲ್ಲಿ ಮನುಷ್ಯನ ಹಾವಭಾವಗಳು, ಭಯ ಭಕ್ತಿಗಳು, ಸಂಜ್ಞೆ ಸಂಕೇತಗಳು, ಕಾಕುಗಳು ಅಭಿವ್ಯಕ್ತಿಯನ್ನು ಪಡೆದುಕೊಂಡವು. ಮಾತು ದಕ್ಕಿದ ಮೇಲೆ ಕುಣಿತಕ್ಕೆ ಸಂಭಾಷಣೆ ಸೇರಿತು, ಅಲಂಕರಣ ಬಂದಿತು. ಹಾಡು ಒಂದಾಯಿತು. ಬಣ್ಣ ಬೆರೆಯಿತು. ವೇಷಭೂಷಣಗಳು ಜತೆಯಾದವು. ಆರಾಧನೆಯು ಇವೆಲ್ಲವನ್ನೂ ತನ್ನಲ್ಲಿ ಅಡಗಿಸಿಕೊಂಡು ದೈವೀ ಆರಾಧನೆಯ ಆಟವಾಗಿ ಪರಿಣಮಿಸಿತು. ಕ್ರಮೇಣ ಈ ಆಟವು ವೈವಿಧ್ಯತೆಯನ್ನು ಪಡೆದುಕೊಂಡು ಹತ್ತು ಹಲವು ಪ್ರಕಾರಗಳಾಗಿ ಪ್ರದರ್ಶನಗೊಳ್ಳಲಾರಂಭಿಸಿತು. ಕರಪಾಲ, ಗೊಂದಲಿಗರಾಟ, ಕೋಲೇ ಬಸವನಾಟ, ಜೋಗೇರಾಟ, ಸೋಮನ ಕುಣಿತ, ವೀರಗಾಸೆ, ಭೂತದ ಕೋಲ, ನಾಗಮಂಡಲ ಹೀಗೆ ಪ್ರಾದೇಶಿಕವಾಗಿ ಜನಾಂಗೀಯವಾಗಿ ಹಲವಾರು ಸ್ಥಿತ್ಯಂತರಗಳನ್ನು ಪಡೆದುಕೊಂಡಿತು. ಆದರೆ ಇವೆಲ್ಲವುಗಳ ಮೂಲ ಉದ್ದೇಶ ಅಗೋಚರವಾದ, ಅತೀತವಾದ ಶಕ್ತಿಯೊಂದನ್ನು ಓಲೈಸುವುದೇ ಆಗಿದ್ದಿತು. ಮತ್ತು ಈ ಎಲ್ಲಾ ಆರಾಧನೆಯ ಪ್ರಕ್ರಿಯೆಗಳು ಬಯಲಿನಲ್ಲಿಯೇ ಜರುಗುತ್ತಿದ್ದವು. ಇದರಿಂದಾಗಿ ಬಯಲಿನಲ್ಲಿ ನಡೆಯುವ ಆಟವು ಬಯಲಾಟವಾಗಿ, ಬಯಲು ನಾಟಕವಾಗಿ ರೂಪಾಂತರಗೊಂಡಿತು. ಜನಪದ ನಾಟಕಗಳ ಬೀಜರೂಪವು ಕುಡಿ ಒಡೆದ ಇತಿಹಾಸ ಕಥನವೇ ಈ ತೆರನಾದದ್ದು. ಕರಪಾಲ, ಗೊಂದಲಿಗರಾಟ, ಕೋಲೇ ಬಸವನಾಟ, ಜೋಗೇರಾಟ, ಸೋಮನ ಕುಣಿತ, ಮಾರಮ್ಮನ ಕುಣಿತ, ಗೊರವರ ಗೊರವಟಿಗೆಯಾಟ, ಗೊಂದಲಿಗರ ಗೋಂಧಳಿಗಳಲ್ಲಿ ಬಯಲು ನಾಟಕಗಳ ಬೀಜಗಳು ಅಡಗಿದ್ದವು.

ಜನಪದ ಕುಣಿತ ಪ್ರಕಾರಗಳೆಲ್ಲವೂ ಸಾಹಿತ್ಯ, ಸಂಗೀತ, ವಾದ್ಯಮೇಳ, ಕುಣಿತ, ವರ್ಣರಂಜಿತ ವೇಷಭೂಷಣಗಳನ್ನು ಒಳಗೊಂಡಿದ್ದು ಗೀತೆ, ಕಥೆ, ಸಂಭಾಷಣೆ ಎಲ್ಲವನ್ನು ತಮ್ಮಲ್ಲಿ ಅಂತರ್ಗತಿಸಿಕೊಂಡಿವೆ. ಕರಪಾಲ ಮೇಳವಂತೂ ನಾಟಕವೊಂದರೆ ಸುಸ್ಪಷ್ಟ ರೂಪವೇ ಆಗಿದೆ. ಕರಪಾಲ ಮೇಳವು ಪ್ರಧಾನವಾಗಿ ಕಥಾಪ್ರಸಂಗವನ್ನು ಹೊಂದಿದ್ದು, ಅದಕ್ಕೆ ಪೋಷಕವಾಗಿ ಸಂಗೀತ, ಇವೆರಡಕ್ಕೂ ಮೆರುಗು ನೀಡುವಂತೆ ಕುಣಿತವನ್ನು ಒಳಗೊಂಡಿದೆ. ಕರಪಾಲ ಮೇಳದಲ್ಲಿ ಪ್ರಧಾನ ನಿರೂಪಕನಿದ್ದು, ಇಬ್ಬರು ಸಹಾಯಕರು ಹಿಮ್ಮೇಳದವರು ಇದ್ದರೆ ಸಾಕು ನಾಟಕ ಸಿದ್ಧವಾದಂತೆ. ಪ್ರತ್ಯೇಕವಾದ ವೇದಿಕೆಯಾಗಲಿ, ರಂಗಸಜ್ಜಿಕೆಯಾಗಲಿ ಬೇಕಿಲ್ಲ. ಕರಪಾಲದಲ್ಲಿ ಕಂಡುಬರುವ ನಾಟಕೀಯ ಸನ್ನಿವೇಶಗಳು, ಸಂಭಾಷಣೆ, ಗೀತ, ನೃತ್ಯ, ಹಿಮ್ಮೇಳ ಎಲ್ಲವೂ ರಂಗ ಪರಿಕರಗಳೇ ಸರಿ. ವೇಷಭೂಷಣಗಳಂತೂ ವಿಶಿಷ್ಟವಾದವುಗಳು. ಪ್ರತಿಯೊಂದು ಜನಪದ ಕುಣಿತವು ತನ್ನಲ್ಲಿರುವ ಒಂದೊಂದು ಅಂಶವನ್ನು ಬಯಲಾಟಕ್ಕೆ ಧಾರೆ ಎರೆದು ಬಯಲಾಟವನ್ನು ಸ್ವತಂತ್ರ ಹಾಗೂ ಸಂಮಿಶ್ರ ಕಲೆಯಾಗಿ ಬೆಳೆಸಿವೆ. ಸಾರ್ವತ್ರಿಕವಾಗಿ ಮತ್ತು ಸಾಮೂಹಿಕವಾಗಿ ಬಯಲಾಟ ಎನ್ನುವಂಥದ್ದು ಶತಶತಮಾನಗಳಿಂದಲೂ ಹತ್ತು ಹಲವು ಸ್ಥಿತ್ಯಂತರಗಳಿಗೆ ಒಳಗಾಗುತ್ತಾ ಬಂದಿರುತ್ತದೆ.

ಈ ಹಿನ್ನಲೆಯಲ್ಲಿ ಚಿಂತನೆ ನಡೆಸಿದಾಗ, ಬಯಲಾಟದ ಉಗಮಕ್ಕೆ ಸಂಬಂಧಿಸಿದಂತೆ ಯಾವುದೇ ಅಪೌರುಷೇಯವಾದ ಸಂಬಂಧಗಳಿರುವುದಿಲ್ಲ. ಬಯಲಾಟವು ಯಕ್ಷಗಂಧರ್ವರಿಂದ ಹುಟ್ಟಿತೆಂಬುದಕ್ಕಾಗಲಿ, ಶಿವತಾಂಡವದಿಂದ ಜನಿಸಿತೆನ್ನುವ ಕಥೆಗಾಗಲಿ ಪುರಾವೆಗಳಿಲ್ಲ. ಭರತನ ನಾಟ್ಯಶಾಸ್ತ್ರವೇ ಜನಪದರ ನಾಟಕ ಕಲ್ಪನೆಗೆ ಮೂಲ ಎಂಬ ಭ್ರಮೆ ಬೇಕಿಲ್ಲ. ಮನುಷ್ಯನ ಸಾಂಸ್ಕೃತಿಕ ವಿಕಾಸದ ಹಾದಿಯಲ್ಲಿ ಮಾಂತ್ರಿಕ ವಶೀಕರಣ ಕ್ರಿಯೆ ಮತ್ತು ಆರಾಧನೆಗಳು ಈ ದಿಸೆಯಲ್ಲಿ ಸಾಕಷ್ಟು ಕಾರ್ಯನಿರ್ವಹಿಸಿವೆ. ಬಯಲಾಟದ ಬೀಜರೂಪವು ಅಡಗಿದ್ದುದು ಮನುಷ್ಯನು ಸ್ವಯಂ ಸೃಷ್ಟಿಸಿಕೊಂಡ ಜನಪದ ಕುಣಿತಗಳಲ್ಲಿ ಮತ್ತು ಅವುಗಳಿಂದ ಪ್ರೇರಣೆ ಪಡೆದ ಗೊಂಬೆಯಾಟದಲ್ಲಿ ಎಂಬುದ ನಿರ್ವಿವಾದ.  ಜನಪದ ರಂಗಭೂಮಿಯು ಅನಕ್ಷರಸ್ಥರ ಗ್ರಾಮೀಣ ಬಳುವಳಿ. ಸಮಾಜದ ಬಹುಸಂಖ್ಯಾತರಾದ ಕೆಳವರ್ಗದವರ ಸೃಜನಶೀಲತೆಯ, ರಸಿಕತೆಯ ಸ್ವಾಭಿಮಾನದ ಸಂಕೇತ. ಜನಸಾಮಾನ್ಯರು ತಮ್ಮ ಅಂತರಂಗದ ಅನಿಸಿಕೆಗಳನ್ನು ಬಹಿರಂಗಗೊಳಿಸುವ ಸಲುವಾಗಿ ರೂಪಿಸಿಕೊಂಡದ್ದು ಬಯಲಾಟ. ಅಲ್ಲಿ ಅವರ ಬದುಕು ಪ್ರತಿಬಿಂಬಿಸಿತು.