ಮೂಡಲಪಾಯ ಯಕ್ಷಗಾನವು ಕೇವಲ ಮನರಂಜನಾ ಪ್ರಕಾರವಾಗಿರದೆ ಜನಪದರ ಬದುಕಿನ ಅವಿಭಾಜ್ಯ ಅಂಗವಾಗಿದ್ದಿತು. ಆ ಮೂಲಕ ಜನಪದರು ತಮ್ಮ ಬದುಕಿನ ಆದರ್ಶಗಳನ್ನು, ಮೌಲ್ಯಗಳನ್ನು ನಿರೀಕ್ಷಿಸುತ್ತಿದ್ದರು. ಆದರೆ, ಆಧುನಿಕತೆ ಬೆಳೆದಂತೆಲ್ಲಾ ಗ್ರಾಮೀಣರ ಅಭಿರುಚಿಗಳು ಬದಲಾಗುತ್ತಾ ಬಂದವು. ಆಶ್ರಯವಿತ್ತು ಪ್ರೋತ್ಸಾಹಿಸಿ, ಪೋಷಿಸಿದ ಜನರೇ ಕಡೆಗಣಿಸುತ್ತಾ ಬಂದರು. ಪರಿಣಾಮವಾಗಿ ಕರ್ನಾಟಕದ ಹದಿನೈದು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬಿ ಹರಡಿದ ಈ ಭವ್ಯ ಹಾಗೂ ಪ್ರಾಚೀನ ಬಯಲಾಟ ಪರಂಪರೆಯು ನಶಿಸುತ್ತಾ ಬಂದಿತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ, ಮೈಸೂರು ಜಿಲ್ಲೆಯ ಹಳೇಬೀಡು, ಗುಂಡ್ಲುಪೇಟೆ, ದೇವನೂರು, ಕೊಳ್ಳೇಗಾಲ, ಮಂಡ್ಯ ಜಿಲ್ಲೆಯ ಹೊಸಹೊಳಲು, ಅಗಚಹಳ್ಳಿ, ಬೆಳ್ಳಾಳೆ, ಮೂಡನಕೊಪ್ಪಲು, ದೊಡ್ಡೇನಹಳ್ಳಿ, ಬೆಳ್ಳೂರು, ನೆಲ್ಲೀಗೆರೆ, ಹಾಸನ ಜಿಲ್ಲೆಯ ಕಿತ್ತನಕೆರೆ, ಬೂದಾಳುಮಠ, ತುಮಕೂರು ಜಿಲ್ಲೆಯ ಕರೀಕೆರೆ, ದಂಡಿನಶಿವರ, ಮುನಿಯೂರು, ಅರಳಗುಪ್ಪೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗವಾರ, ಸುರಧೇನುಪುರ, ದೊಡ್ಡಬಳ್ಳಾಪುರ ಮುಂತಾದ ಕಡೆಗಳಲ್ಲಿದ್ದ ಮೂಡಲಪಾಯ ಯಕ್ಷಗಾನ ತಂಡಗಳು ಸೂಕ್ತ ಪ್ರೋತ್ಸಾಹವಾಗಲಿ, ಪ್ರಚಾರವಾಗಲಿ ಇಲ್ಲದೆ ಉಸಿರುಕಟ್ಟಿ ಒದ್ದಾಡುವ ಸ್ಥಿತಿ ಬಂದೊದಗಿತು. ಅತ್ಯುತ್ತಮ ಸಂಗೀತ ಜ್ಞಾನವನ್ನು ಹೊಂದಿದ್ದ ಭಾಗವತರುಗಳಾದ ಅರಳಗುಪ್ಪೆ ಸಿದ್ಧಲಿಂಗಪ್ಪ, ಕೊನೇಹಳ್ಳಿ ನಾರಸಪ್ಪ, ಕೇಳಿಕೆ ಮುನಿಯಪ್ಪ, ನೇರಲಗುಡ್ಡದ ಗೋವಿಂದಪ್ಪ, ಅರಳಗುಪ್ಪೆಯ ಚನ್ನಬಸವಯ್ಯ, ನಂಜಪ್ಪ, ಮುನಿಯೂರಿನ ದಾಸಾಚಾರ್, ಪಾಲ್ಕುರಿಕೆಯ ರಾಘವೇಂದ್ರರಾವ್, ಶೆಟ್ಟಿಕೆರೆಯ ಕೆಂಪರಾಜಯ್ಯ, ಬೊಮ್ಮೇನಹಳ್ಳಿಯ ತಿಮ್ಮೇಗೌಡ, ರಾಮಲಿಂಗೇಗೌಡ, ಯದ್ಲಳ್ಳಿ ಪಾಪಣ್ಣ, ಸುರಧೇನುಪುರದ ದೊಡ್ಡಮುನಿಯಪ್ಪ, ನೆಲ್ಲೀಗೆರೆ ತಿಮ್ಮಪ್ಪಾಚಾರ್, ಬೆಳ್ಳೂರು ಪುಟ್ಟಶಾಮಾಚಾರ್ ಮೊದಲಾದವರು ಮೂಡಲಪಾಯಕ್ಕೆ ಒದಗಿದ ದುರ್ಗತಿಗೆ ಮರುಗಲಾರಂಭಿಸಿದರು.

ಇಂತಹ ಸಂದರ್ಭದಲ್ಲಿ ಮೂಡಲಪಾಯವನ್ನು ಮತ್ತೆ  ಪ್ರವರ್ಧಮಾನಕ್ಕೆ ತಂದ ಯಶಸ್ಸು ಜಾನಪದ ಜಂಗಮ ಡಾ. ಜೀ.ಶಂ. ಪರಮಶಿವಯ್ಯನವರದು. ಅಲ್ಲಲ್ಲಿ ಕುಟುಕು ಜೀವ ಹಿಡಿದು ಉಸಿರಾಡುತ್ತಿದ್ದ ತಂಡಗಳನ್ನು ಹುಡುಕಿ, ಹುರಿದುಂಬಿಸಿ ಸರಾಗವಾಗಿ ಉಸಿರಾಡುವಂತೆ ಜೀವದ್ರವ್ಯವನ್ನೂಡಿದರು. ತಿಪಟೂರು ತಾಲ್ಲೂಕು ಕೊನೇಹಳ್ಳಿಯಲ್ಲಿ ಶ್ರೀ ಬಿದರೆಯಮ್ಮ ಯಕ್ಷಗಾನ ಮಂಡಳಿ ಹೆಸರಿನಲ್ಲಿ ಮೂಡಲಪಾಯದ ಟ್ರಸ್ಟ್ ಸ್ಥಾಪಿಸಿದರು. ಮೂಡಲಪಾಯ ಯಕ್ಷಗಾನ ರಂಗಮಂದಿರದ ನಿರ‌್ಮಾಣಕ್ಕೆ ಕಾರಣರಾದರು. ಮೂಡಲಪಾಯ ಯಕ್ಷಗಾನ ತರಬೇತಿ ಕೇಂದ್ರವನ್ನು ತೆರೆದರು. ಮೂಡಲಪಾಯ ತಂಡಗಳನ್ನು ಸಂಘಟಿಸಿ ಮೂಡಲಪಾಯ ಯಕ್ಷಗಾನ ಮಹೋತ್ಸವವನ್ನು ನಡೆಸಿದರು. ಭಾಗವತರು- ಪಾತ್ರಧಾರಿಗಳು-ವಿದ್ವಾಂಸರು ಒಂದೆಡೆ ಕುಳಿತು ಮೂಡಲಪಾಯದ ಅಳಿವು-ಉಳಿವಿನ ಬಗ್ಗೆ ಗಂಭೀರವಾದ ಚಿಂತನೆ ನಡೆಸಿದರು. ಪಟೇಲ್ ನಾರಸಪ್ಪ ಮತ್ತು ಕೊನೇಹಳ್ಳಿಯ ನಂಜುಂಡಪ್ಪ ಮೊದಲಾದ ಮೂಡಲಪಾಯ ದಿಗ್ಗಜರು ಜೀಶಂಪ ಅವರೊಂದಿಗೆ ಕೈಜೋಡಿಸಿದರು. ಜೀಶಂಪ ಅವರ ಪ್ರಯತ್ನದ ಫಲವಾಗಿ ನಾಗೇಗೌಡರು ಜಾನಪದ ಲೋಕದಲ್ಲಿ ಮೂಡಲಪಾಯ ಸಂಗೀತವನ್ನು ಕುರಿತು ರಾಜ್ಯಮಟ್ಟದ ಸಮಾವೇಶ ನಡೆಸಿದರು. ಆದರೆ ಜೀಶಂಪ ಅವರ ಅಕಾಲಿಕ ಸಾವಿನೊಂದಿಗೆ ಅವರ ಪ್ರಯತ್ನಗಳೂ ನಿಷ್ಫಲವಾದವು. ಕೊನೆಹಳ್ಳಿಯಲ್ಲಿ ಅವರು ಸ್ಥಾಪಿಸಿದ ಮೂಡಲಪಾಯ ಯಕ್ಷಗಾನ ತರಬೇತಿ ಕೇಂದ್ರವು ಚುಕ್ಕಾಣಿ ಕಳೆದುಕೊಂಡಿತು.

ಜಾಗತೀಕರಣವು ಜನಪದ ಸಂಸ್ಕೃತಿಯ ಮೇಲೆ ನಡೆಸುತ್ತಿರುವ ಸಾಂಸ್ಕೃತಿಕ ಧಾಳಿಯನ್ನು ತಡೆಗಟ್ಟಲು ನಾವಿಂದು, ಮತ್ತೆ ನಮ್ಮ ಎಲ್ಲಾ ಕಲಾ ಪ್ರಕಾರಗಳನ್ನು ಪುನಶ್ಚೇತನಗೊಳಿಸಿಕೊಳ್ಳಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಕೋಮು ಸೌಹಾರ್ದತೆಗೆ ಹೆಸರಾದ, ಆದರ್ಶಪ್ರಾಯವಾದ ಮೂಡಲಪಾಯ ಯಕ್ಷಗಾನ ಬಯಲಾಟವನ್ನು ಊರ್ಜಿತಗೊಳಿಸಬೇಕಾಗಿದೆ. ನಶಿಸಿಹೋಗುತ್ತಿರುವ ಈ ಕಲೆಯನ್ನು ಉಳಿಸಿ ಬೆಳೆಸಲು ಸಂಘಟಿತ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಮೂಡಲಪಾಯ ಯಕ್ಷಗಾನ ಉತ್ಸವ, ದಾಖಲಾತಿ, ಹಸ್ತಪ್ರತಿಗಳ ಸಂಗ್ರಹಣೆ ಮತ್ತು ಪ್ರಕಟಣೆ ಕೆಲಸ ಜರೂರಾಗಿ ನಡೆಯಬೇಕಾಗಿದೆ.

ಡಾ. ಶಿವರಾಮಕಾರಂತರು ಕರಾವಳಿ ಯಕ್ಷಗಾನವನ್ನು ಜನಪ್ರಿಯಗೊಳಿಸಿದಂತೆ, ಮೂಡಲಪಾಯವನ್ನು ಜನಪ್ರಿಯಗೊಳಿಸಬೇಕಾಗಿದೆ. ಗ್ರಾಮೀಣರ ತೆಕ್ಕೆಯಲ್ಲಿರುವ ಮೂಡಲಪಾಯಕ್ಕೆ ವಿದ್ಯಾವಂತರ ಪ್ರವೇಶ ತುರ್ತಾಗಿ ಆಗಬೇಕಿದೆ. ಯಥಾಸ್ಥಿತಿವಾದಿತ್ವವನ್ನು ಕಾಯ್ದುಕೊಂಡಿರುವ ಇದರ ಸ್ವರೂಪವನ್ನು ಪರಿಷ್ಕರಿಸಬೇಕಾಗಿದೆ. ಬದಲಾಗುತ್ತಿರುವ ಅಭಿರುಚಿ-ಮನೋಧರ‌್ಮಗಳಿಗೆ ತಕ್ಕಂತೆ ಈ ಪರಿಷ್ಕರಣಾಕಾರ್ಯ ನಡೆಯಬೇಕಿದೆ. ರಂಗಕ್ಕೆ ಪಾತ್ರಗಳ ಆಗಮನ, ನಿರ್ಗಮನ, ರಂಗದಲ್ಲಿ ಪಾತ್ರಗಳ ಚಲನೆ-ವೇಷಗಳನ್ನು ಕಟ್ಟುವುದು-ಮುಖವರ್ಣಿಕೆ-ಅನವಶ್ಯಕ ಹಾಡುಗಾರಿಕೆಯನ್ನು ಮಿತಗೊಳಿಸುವುದು-ಕುಣಿತಗಳು ಮತ್ತು ಮುದ್ರೆಗಳಲ್ಲಿ ಭಾವಾಭಿವ್ಯಕ್ತಿ-ಭಾರವಾದ ಕಿರೀಟ, ಭುಜಕೀರ್ತಿ, ಎದೆಹಾರ ಇತ್ಯಾದಿಗಳನ್ನು ಹಗುರಗೊಳಿಸುವುದು, ವಾದ್ಯಗಳ ಹದವಾದ ಬಳಕೆ-ಸಂಭಾಷಣೆಯಲ್ಲಿ ಸ್ಪಷ್ಟತೆ ಮತ್ತು ಪುನರುಕ್ತಿ ದೋಷ ನಿವಾರಣೆ – ಮುಖವೀಣೆಯ ಪರಮಾವಧಿ ಬಳಕೆ ಈ ಎಲ್ಲಾ ಅಂಶಗಳ ಬಗ್ಗೆ ಈ ಕ್ಷೇತ್ರದಲ್ಲಿ ಇನ್ನೂ ಉಳಿದಿರುವ ಭಾಗವತರು-ಪಾತ್ರಧಾರಿಗಳೊಂದಿಗೆ ಗಂಭೀರವಾಗಿ ಸಮಾಲೋಚಿಸಿ ಕಾರ್ಯರೂಪಕ್ಕೆ ತಂದಲ್ಲಿ ಮೂಡಲಪಾಯ ಯಕ್ಷಗಾನಕ್ಕೆ ಉತ್ತಮ ಭವಿಷ್ಯ ಲಭಿಸುತ್ತದೆ. ಶತಶತಮಾನಗಳಿಂದ ತಗಲಿಕೊಂಡಿರುವ ಸಾಂಸ್ಕೃತಿಕ ದಾಸ್ಯತ್ವವನ್ನು ತೊಲಗಿಸಿ ಆಧುನಿಕ ರಂಗಭೂಮಿಯ ಹೊಸ ಸಾಧ್ಯತೆಗಳ ಕಡೆಗೆ ದುಡಿಸಿಕೊಳ್ಳಬೇಕಾಗಿದೆ. ಮೂಡಲಪಾಯದ ಭಾಗವತರು ಮತ್ತು ಕಲಾವಿದರು ಬದಲಾದ ಸಂದರ್ಭವನ್ನು ಅರಿತುಕೊಂಡು ತಮ್ಮ ಸಾಂಪ್ರದಾಯಿಕ ಮಡಿವಂತಿಕೆಯನ್ನು ಬದಿಗಿರಿಸಿ ಮುಕ್ತ ಮನಸ್ಸನ್ನು ಬೆಳೆಸಿಕೊಳ್ಳಬೇಕಾಗಿದೆ. ವಿದ್ವಾಂಸರು, ಕಲಾವಿದರು, ರಂಗಭೂಮಿ ತಜ್ಞರು, ವಿನ್ಯಾಸಕಾರರು ಎಲ್ಲರೂ ಒಟ್ಟಾಗಿ ಕುಳಿತು ಈ ಬಗ್ಗೆ ಸಮಾಲೋಚನೆ ನಡೆಸಿ ಕಾರ್ಯಪ್ರವೃತ್ತರಾಗಬೇಕಾದ ಜರೂರು ನಮ್ಮ ಮುಂದಿದೆ.

  * * *

ಮೂಲತಃ ನೃತ್ಯ ನಾಟಕವಾದ ಯಕ್ಷಗಾನ ಬಯಲಾಟದಲ್ಲಿ ಅದರ ಸಾಹಿತ್ಯದ ಭಾಗ ಬಹು ಮುಖ್ಯವಾದುದು ಮತ್ತು ರಸವತ್ತಾದುದು. ಮೂಡಲಪಾಯ ಯಕ್ಷಗಾನದಲ್ಲಿ ಪ್ರಧಾನವಾಗಿ ಕಂಡುಬರುವಂಥದ್ದು ಕಾಳಗ ಮತ್ತು ಪರಿಣಯಗಳಿಗೆ ಸಂಬಂಧಿಸಿದ ಕಥಾವಸ್ತು. ಇದಕ್ಕೆ ಸಾಂಸ್ಕೃತಿಕ ಕಾರಣವಿದೆ. ಹೊರಗಿನಿಂದ ಬಂದ ಸಂಸ್ಕೃತಿಯು ಸ್ಥಳೀಯ ಸಂಸ್ಕೃತಿಯ ಮೇಲೆ ಆಕ್ರಮಣ ನಡೆಸಿದಾಗ ಸ್ಥಳೀಯರ ಭೂಮಿ ಮತ್ತು ಹೆಣ್ಣು ಎರಡರ ಮೇಲೂ ತನ್ನ ಆಧಿಪತ್ಯವನ್ನು ಸ್ಥಾಪಿಸಲು ಹವಣಿಸಿತು. ಇದನ್ನು ವಿರೋಧಿಸಿ ನಿಂತ ಸ್ಥಳೀಯ ಸಮುದಾಯಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ, ನೆಲ ಮತ್ತು ಹೆಣ್ಣನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಆಕ್ರಮಣಕಾರಿ ಸಂಸ್ಕೃತಿಯ ವಿರುದ್ಧ ಹೋರಾಟ ನಡೆಸಿದವು. ಈ ಹೋರಾಟವು ಇಂದು-ನಿನ್ನೆಯದಲ್ಲ. ಪರಂಪರೆಯಿಂದ ನಡೆದುಬಂದಿರುವ ಹೋರಾಟ. ಕಾಲ ಉರುಳಿದಂತೆ ಸ್ಥಳೀಯ ಮತ್ತು ವಲಸೆ ಸಂಸ್ಕೃತಿಗಳ ನಡುವಣ ಸಾಂಸ್ಕೃತಿಕ ಸಂಘರ್ಷವು ಸಾಂಸ್ಕೃತಿಕ ಹೊಂದಾಣಿಕೆಯಾಗಿ ಮಾರ್ಪಟ್ಟಿತು. ಇದರ ಫಲವೇ ಸಮುದಾಯದ ಪ್ರದರ್ಶಕ ಕಲೆಗಳಲ್ಲಿ ಕಂಡುಬರುವ ರಾಜಿ-ಕಬೂಲಿ ಕ್ರಿಯೆ. ಬಯಲಾಟವು ಈ ಹೋರಾಟ ಮತ್ತು ಹೊಂದಾಣಿಕೆಗಳೆರಡನ್ನು ತನ್ನಲ್ಲಿ ಅಳವಡಿಸಿಕೊಂಡಿದ್ದರ ಪರಿಣಾಮವಾಗಿ ಕಾಳಗ ಸಂಬಂಧಿ ಮತ್ತು ಪರಿಣಯ ಸಂಬಂಧಿ ಪ್ರಸಂಗಗಳು ರೂಪು ತಳೆದವು. ಕ್ರಮೇಣ ಅವುಗಳೇ ಪ್ರಧಾನ ಕಥನಗಳಾಗಿ ಬೆಳೆದು ಬಂದವು.

ಮೂಡಲಪಾಯದ ಕಾಳಗ ಸಂಬಂಧಿ ಕಥನಗಳು ಪೂರ್ವೀಕರ ಕೆಚ್ಚು, ಹೋರಾಟದ ಛಲ, ಅಭಿಮಾನ, ಸ್ವಾಭಿಮಾನಗಳನ್ನು ಅಭಿವ್ಯಕ್ತಿಸುತ್ತವೆ. ವೀರ ಮತ್ತು ರೌದ್ರ ರಸಗಳು ಈ ಅಭಿವ್ಯಕ್ತಿಗೆ ಪೋಷಣೆಯನ್ನು ಒದಗಿಸಿವೆ. ಪ್ರದರ್ಶನದ ಬೆಡಗು, ಆರ್ಭಟ ಮತ್ತು ಸಂಭಾಷಣೆಯಲ್ಲಿನ ಗಡುಸುಗಾರಿಕೆಯು ಅದ್ಭುತ ಹೋರಾಟವೊಂದರ ಕಲ್ಪನೆಯನ್ನು ಕಟ್ಟಿಕೊಡುವಲ್ಲಿ ಯಶಸ್ಸನ್ನು ಪಡೆದಿವೆ.

ಪ್ರಸ್ತುತ ಸಂಪುಟವು ಇಂತಹ ಏಳು ಕಾಳಗ ಪ್ರಸಂಗಗಳ ಸಾಹಿತ್ಯವನ್ನು ಒಳಗೊಂಡಿದೆ. ಅವುಗಳ ವಿವರಗಳು ಕೆಳಕಂಡಂತಿವೆ;

1) ಕರಿಬಂಟನ ಕಾಳಗ                  4) ಲವಕುಶರ ಕಾಳಗ

2)   ಕೃಷ್ಣಾರ್ಜುನರ ಕಾಳಗ            5) ಅಭಿಮನ್ಯು ಕಾಳಗ

3) ಕರ್ಣಾರ್ಜುನರ ಕಾಳಗ             6) ಕಂಸವಧೆ ಮತ್ತು                       7) ದುಶ್ಶಾಸನ ವಧೆ

ಮೇಲ್ಕಂಡ ಏಳೂ ಪ್ರಸಂಗಗಳ ಕಥಾವಸ್ತು ಕೆಳಕಂಡಂತಿದೆ;

1)   ಕರಿಬಂಟನ ಕಾಳಗ  : ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಲೋಕಪಾವನಿ ನದಿ ತೀರದಲ್ಲಿರುವ ಅಂದೇನಹಳ್ಳಿಯ ಜೀರಿಗೆ ಕೆಂಪಯ್ಯನ ಕುಮಾರ ಓದೋ ಕೆಂಪಯ್ಯನ ಮಗ ಕೆಂಪಣ್ಣಗೌಡ ಕರಿಯ ಚರಿತ್ರೆಯನ್ನು ಬರೆದ ಕನ್ನಡದ ಮೊತ್ತಮೊದಲ ಯಕ್ಷಗಾನಕವಿ. ಈತನ ಕಾಲ ಕ್ರಿ.ಶ. 15ನೆಯ ಶತಮಾನ. ಈ ಕಾವ್ಯವನ್ನು ಆಧರಿಸಿ ಸುಮಾರು 18ಕ್ಕೂ ಹೆಚ್ಚು ಮಂದಿ ಕವಿಗಳು ಯಕ್ಷಗಾನ ನಾಟಕವನ್ನಾಗಿ ಪ್ರಸಂಗ ಸಾಹಿತ್ಯವನ್ನು ರಚಿಸಿದ್ದಾರೆ. ರಾಮಾಯಣ, ಮಹಾಭಾರತ, ಭಾಗವತ ಈ ಯಾವುದೇ ಸಂಪ್ರದಾಯಕ್ಕೆ ಸೇರದೆ, ಜನಪದ ಮೂಲದಿಂದ ಹರಿದು ಬಂದ ಈ ಲೌಕಿಕ ಕಥೆಯನ್ನು ಯಕ್ಷಗಾನ ನಾಟಕವನ್ನಾಗಿ ಜನಪ್ರಿಯಗೊಳಿಸಿದವರು ವೀರನಗೆರೆ ಪುಟ್ಟಣ್ಣ ಮತ್ತು ಭಾಳಾಕ್ಷ ಮೊದಲಾದವರು.

ಪ್ರಸ್ತುತ ಸಂಗ್ರಹದಲ್ಲಿರುವ ಪ್ರಸಂಗ ಸಾಹಿತ್ಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ದೊಡ್ಡಬಳ್ಳಾಪುರದ ವೀರಭದ್ರಪ್ಪನ ಪೇಟೆಯ ಮನೆ ನಂ. 448ರಲ್ಲಿ ವಾಸವಾಗಿದ್ದ ಎನ್. ಚಿಕ್ಕವೆಂಕಟಪ್ಪನವರದು. ಇವರ ಸಾಹಿತ್ಯವನ್ನು ತಾ16.02.1984ರಂದು ಅದೇ ಊರಿನ ಶಾಲಾ ಶಿಕ್ಷಕರಾದ ಶ್ರೀ ಮಂಜುನಾಥ್ ಪ್ರತಿ ಮಾಡಿಕೊಂಡಿರುತ್ತಾರೆ.

ಧಾರಾಪುರಿಯ ಅರಸುಕುಮಾರ ಕರಿರಾಜ ಹಳೇಬೀಡಿನ ರಾಜಕುಮಾರಿ ಭುವನ ಮೋಹಿನಿಯನ್ನು ಲಗ್ನವಾಗುವ ಸಲುವಾಗಿ ಪಯಣ ಬೆಳೆಸುತ್ತಾನೆ. ಹಾದಿಯಲ್ಲಿ ಎದುರಾದ ಹುಲಿಯ ಕಾರಣದಿಂದಾಗಿ, ಬೇಟೆಯಾಡಲು ಹುಲಿಯ ಬೆನ್ನು ಹತ್ತಿದ ಕರಿರಾಜ ತನ್ನ ಕಡೆಯವರಿಂದ ಬೇರಾಗುತ್ತಾನೆ. ಅರಣ್ಯಮಾರ್ಗದಲ್ಲಿ ಉದ್ದಂಡಿ ರಾಕ್ಷಸಿಯ ಪುತ್ರಿ ಪುಂಡರೀಕಾಕ್ಷಿಯ ಭೇಟಿಯಾಗುತ್ತದೆ. ಕುಂಭಿಣೀ ದೇವತೆಯ ಕೃಪೆಯಿಂದ ಈರ್ವರೂ ಒಂದಾಗುತ್ತಾರೆ. ತನ್ನ ಮಗಳನ್ನು ತಮ್ಮನಾದ ಬೊಮ್ಮರಕ್ಕಸನಿಗೆ ಕೊಟ್ಟು ವಿವಾಹ ಮಾಡಬೇಕೆಂಬ ಉದ್ದೇಶವನ್ನು ಹೊಂದಿದ್ದ ಉದ್ದಂಡಿ ರಾಕ್ಷಸಿಗೆ ಇದರಿಂದ ಕರಿರಾಜನ ಮೇಲೆ ಅಸಾಧ್ಯ ಕೋಪಬರುತ್ತದೆ. ಬೊಮ್ಮರಕ್ಕಸ ಮತ್ತು ಕರಿರಾಜ ಕಾಳಗದಲ್ಲಿ ಮುಖಾಮುಖಿಯಾಗುತ್ತಾರೆ. ಪುಂಡರೀಕಾಕ್ಷಿಯ ಬುದ್ಧಿವಂತಿಕೆಯಿಂದ ಬೊಮ್ಮರಕ್ಕಸ ಕೊಲೆಯಾಗುತ್ತಾನೆ. ತಮ್ಮನ ಮರಣದಿಂದ ಕೆರಳಿದ ಉದ್ದಂಡಿ ಮಗಳು-ಅಳಿಯ ಇಬ್ಬರನ್ನು ಬೆನ್ನಟ್ಟಿ ಬಂದು ಮೋಸದಿಂದ ಕರಿರಾಜನನ್ನು ಕೊಲ್ಲುತ್ತಾಳೆ. ಕರಿರಾಜನನ್ನು ಕಾಪಾಡುತ್ತೇವೆಂದು ಮಾತು ಕೊಟ್ಟಿದ್ದ ಏಳು ಮಂದಿ ಗೌಡರು ಮಾತಿಗೆ ತಪ್ಪಿದ್ದಕ್ಕಾಗಿ ಪ್ರಾಯಶ್ಚಿತ್ತವೆಂದು ಕೆಂಡಕೊಂಡವಾಗುತ್ತಾರೆ. ಭುವನ ಮೋಹಿನಿ ಮತ್ತು ಪುಂಡರೀಕಾಕ್ಷಿ ಸತಿ ಹೋಗುತ್ತಾರೆ.

2)   ಕೃಷ್ಣಾರ್ಜುನರ ಕಾಳಗ : 1891-1971ರ ಅವಧಿಯಲ್ಲಿ ಬಾಳಿ ಬದುಕಿದ ನೇಸರಗಿ ಬಸವಣ್ಣೆಪ್ಪನವರು ಮತ್ತು 1910ರಲ್ಲಿ ಕಲಘಟಗಿ ಶಿವಪ್ಪಸೆಟ್ಟಿಯವರು ರಚಿಸಿದ್ದೆಂದು ಹೇಳಲಾದ ಕೃಷ್ಣಾರ್ಜುನರ ಕಾಳಗವು ಭಾಗವತ ಪುರಾಣದಿಂದ ಆಯ್ದುಕೊಂಡ ಕಥಾವಸ್ತುವನ್ನು ಒಳಗೊಂಡ ಪ್ರಸಂಗ : ಮೊರೆ ಹೊಕ್ಕು ಬಂದವರ ಕಾಯ್ವುದೇ ಬಿರುದು ಎಂಬ ಮೌಲ್ಯವನ್ನು ಸಾರುವ ಯಕ್ಷಗಾನ ಪ್ರಸಂಗವನ್ನು, 1936 ಧಾತು ಸಂವತ್ಸರದಲ್ಲಿ ಮೂಲ ಪ್ರತಿಯಿಂದ ನೇರಲಗುಡ್ಡದ ಬಿ. ಗೋವಿಂದಪ್ಪನವರು 1979 ಜನವರಿ 25ರಂದು ಕಾಳಾಯುಕ್ತಿ ಸಂವತ್ಸರದ ಪುಷ್ಯ ಬಹುಳ ಏಕಾದಶಿಯಲ್ಲಿ ಪ್ರತಿ ಮಾಡಿಕೊಂಡಿರುತ್ತಾರೆ. ಗೋವಿಂದಪ್ಪನವರು ಮೂಡಲಪಾಯ ಯಕ್ಷಗಾನ ಭಾಗವತರು. ಉತ್ತಮ ಸಂಗೀತ ಜ್ಞಾನವನ್ನುಳ್ಳವರು. ಶರಪುರದ ಶ್ರೀ ರಂಗಧಾಮನ ಅಂಕಿತದಲ್ಲಿ ಕೃತಿ ರಚನೆಯಾಗಿದೆ.

ಪರಶಿವನ ಪ್ರಾಣಸಖನಾದ ಕುಬೇರನ ಪುತ್ರ ಗಯಕುಮಾರನು ಆಕಾಶಮಾರ್ಗದಲ್ಲಿ ಸಂಚರಿಸುತ್ತಿರುವಾಗ ಆತನ ಕುದುರೆಯ ಬಾಯಿಯಿಂದ ಹೊರಬಿದ್ದ ಎಂಜಲ ನೊರೆಯು, ಭೂಲೋಕದಲ್ಲಿ ಸೂರ್ಯನಿಗೆ ಅರ್ಘ್ಯ ನೀಡುತ್ತಿದ್ದ ಕೃಷ್ಣನ ಕರದಲ್ಲಿನ ಅಗ್ಘವಣಿಯೊಳಕ್ಕೆ ಬಿದ್ದಿತು. ಕೆರಳಿದ ಕೃಷ್ಣನು, ನನ್ನ ನೇಮವನ್ನು ಭಂಗಪಡಿಸಿದವನನ್ನು ಇನ್ನು ಎಂಟು ದಿನಗಳ ಒಳಗಾಗಿ ಕೊಲ್ಲುತ್ತೇನೆಂದು ಶಪಥ ಮಾಡಿದನು. ನಾರದನಿಂದ ವಿಷಯ ತಿಳಿದ ಗಯಕುಮಾರನಿಗೆ ವಿಪರೀತವಾದ ಭಯವುಂಟಾಗಿ, ಅರ್ಜುನನ ಮೊರೆ ಹೊಕ್ಕನು. ಕಾಮ್ಯಕವನದಲ್ಲಿದ್ದ ಅರ್ಜುನನಿಂದ ಅಭಯವನ್ನು ಪಡೆದನು. ವಿಷಯ ತಿಳಿದ ಕೃಷ್ಣನು ಗಯನನ್ನು ಒಪ್ಪಿಸುವಂತೆ ಅರ್ಜುನನಿಗೆ ಸಂದೇಶ ಕಳುಹಿಸಿದನು. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಕೃಷ್ಣನಲ್ಲಿ ವೈರವು ಥರವಲ್ಲ ಎಂದು ಸುಭದ್ರೆಯ ಉಪದೇಶ. ಧರ‌್ಮಪಾಲನೆಗಿಂತಲೂ ಅಧಿಕವಾದ ಕಾರ್ಯ ಎಂಬುದಿಲ್ಲ. ಕೃಷ್ಣನಿಗೆ ಹೆದರಿ ಸ್ವಧರ‌್ಮವನ್ನು ಬಿಡುವುದು ಸಲ್ಲ ಎಂದು ಅರ್ಜುನನು ನೇರವಾಗಿ ಉತ್ತರಿಸಿದನು. ಮಾಡಿದ ಉಪಕಾರವನ್ನು ಮರೆತು ನೀಚರಾದ ಪಾಂಡವರು ನನ್ನ ಶತ್ರುವಿಗೆ ಆಶ್ರಯ ನೀಡಿದ್ದಾರೆಂದು ವ್ಯಗ್ರನಾದ ಕೃಷ್ಣನು ಯುದ್ಧಕ್ಕೆ ಮುಂದಾದನು. ನಿನ್ನ ಹಗೆ ಎಂಬುದನ್ನರಿಯದೆ, ಶರಣಾಗಿ ಬಂದವರನ್ನು ರಕ್ಷಿಸುವ ಭಾಷೆ ಕೊಟ್ಟಿದ್ದಾರೆ. ಅಪರಾಧವನ್ನು ಮನ್ನಿಸಿ ಕರುಣೆಯಿಂದ ಪೊರೆ ಎಂದು ಸುಭದ್ರಾನಂದನನಾದ ಅಭಿಮನ್ಯುವಿನ ಪ್ರಾರ್ಥನೆಗೆ ಕೃಷ್ಣನ ನಿರಾಕರಣೆ. ಕೃಷ್ಣಾರ್ಜುನರ ಭೀಕರವಾದ ಕಾಳಗ. ಅಸಹಾಯ ಶೂರರಾದ ಈರ್ವರಲ್ಲಿ ಯಾರೂ ಸೋಲನ್ನಪ್ಪುವುದಿಲ್ಲ. ಕೊನೆಗೆ ಪರಶಿವನು ಪ್ರತ್ಯಕ್ಷನಾಗಿ ಈರ್ವರನ್ನು ಸಮಾಧಾನಪಡಿಸಿ, ಕೃಷ್ಣಾರ್ಜುನರ ಶಪಥವನ್ನು ಕಾಯ್ದುಕೊಳ್ಳುವ ಸಲುವಾಗಿ ಉಪಾಯ ಹೇಳುತ್ತಾನೆ. ಗಯಕುಮಾರನ ಶಿರಕ್ಕೆ ಬದಲು, ಶಿರದಲ್ಲಿ ಧರಿಸಿದ ಕಿರೀಟವನ್ನು ಕೃಷ್ಣ ಉರುಳಿಸುತ್ತಾನೆ. ಶಿರ ಉರುಳಿಸಿದ ಕೃಷ್ಣ ಪ್ರತಿಜ್ಞೆಯು ಈಡೇರುತ್ತದೆ. ಶಿರವನ್ನು ಉಳಿಸಿದ ಅರ್ಜುನನ ಶಪಥವೂ ಈಡೇರುತ್ತದೆ. ಕೃಷ್ಣಾರ್ಜುನರ ಕಾಳಗವು ಸುಖಾಂತದಲ್ಲಿ ಮುಕ್ತಾಯಗೊಳ್ಳುತ್ತದೆ.

3)   ಕರ್ಣಾರ್ಜುನರ ಕಾಳಗ : ನೇಸರಗಿ ಬಸವಣ್ಣೆಪ್ಪನವರು (1891-1971) ರಚಿಸಿದ್ದೆಂದು ಹೇಳಲಾಗುವ ಈ ಯಕ್ಷಗಾನ ಪ್ರಸಂಗದ ಲಭ್ಯ ಹಸ್ತಪ್ರತಿಯಲ್ಲಿ ಕವಿ-ಕಾಲಗಳ ಸುಳಿವಿಲ್ಲ. ಕೊನೆಗೆ ಪ್ರತಿಕಾರರ ಹೆಸರಾಗಲಿ, ಪ್ರತಿಮಾಡಿಕೊಂಡ ಕಾಲವಾಗಲಿ ಕೂಡಾ ತಿಳಿದುಬರುವುದಿಲ್ಲ.

ಭಾರತೀಯ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಕಂಡುಬರುವ ಕರ್ಣನ ಪಾತ್ರವು ಅಸದೃಶವಾದುದು. ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನೊಂದೆ ಚಿತ್ತದಿಂ ನೆನೆವಿರಾದೊಡೆ ಕರ್ಣನಂ ನೆನೆ ಎಂದು ಆದಿಕವಿ ಪಂಪನೇ ಸಾರಿದ್ದಾನೆ. ಕರ್ಣ ದಾನಕ್ಕೆ, ವೀರತ್ವಕ್ಕೆ ಹೆಸರಾದವನು. ವಿಧಿಯ ವಂಚನೆಗೀಡಾದವನು. ಸೂರ್ಯಕೃಪೆಯಿಂದ ಜನಿಸಿ ಕೂಡಾ ಸೂತಪುತ್ರನೆಂಬ ಜನನಿಂದೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋದವನು. ಹಸ್ತಿನಾವತಿಯ ಅರಸು ಕೌರವನನ್ನು ತನ್ನ ಗೆಳೆಯನೆಂದು ನಂಬಿದವನು. ಆದರೆ ಭಾರತದ ರಾಜಕಾರಣದ ಆಟದಲ್ಲಿ ಕೌರವನು ಕರ್ಣನನ್ನು ದಾಳವನ್ನಾಗಿ ಬಳಸಿಕೊಂಡನು. ಹದಿನೆಂಟು ದಿನಗಳ ಕಾಲ ಕುರುಕ್ಷೇತ್ರದಲ್ಲಿ ನಡೆದ ಮಹಾಯುದ್ಧದಲ್ಲಿ ಕೃಷ್ಣನ ಕುತಂತ್ರಕ್ಕೆ ಕರ್ಣನು ಬಲಿಯಾದ ಪ್ರಸಂಗವೇ ಕರ್ಣಾರ್ಜುನರ ಕಾಳಗದ ಕಥಾವಸ್ತು.

4)   ಲವಕುಶರ ಕಾಳಗ : ಗಂದಿಗವಾಡ ಬಾಳಂಭಟ್ಟ (ಕ್ರಿ.. ಸುಮಾರು 1880-1948) ನೇಸರಗಿ ಬಸವಣ್ಣೆಪ್ಪ (1891-1971) ಕುರಗೋಡು ದೊಡ್ಡಯ್ಯ (ಕ್ರಿ.. ಸುಮಾರು 1900) ಮೊದಲಾದವರು ರಚಿಸಿರುವ ಯಕ್ಷಗಾನ ಪ್ರಸಂಗವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಎಲೆಪೇಟೆ ಆರ್. ತಮ್ಮಯ್ಯನವರು ತಾ25.09.1949ರಲ್ಲಿ ಪ್ರತಿಮಾಡಿರುತ್ತಾರೆ.

ಲವಕುಶರ ಕಾಳಗ ಪ್ರಸಂಗವನ್ನು ರಾಮಾಯಣದ ಕಥೆಯಿಂದ ಆಯ್ದುಕೊಳ್ಳಲಾಗಿದೆ. ರಾವಣ ವಧೆಯ ನಂತರ ಅಯೋಧ್ಯೆಗೆ ಹಿಂತಿರುಗಿದ ರಾಮನು, ಅಗಸನೊಬ್ಬನ ಮಾತಿಗೆ ಹೆದರಿ ಮತ್ತೆ ಸೀತೆಯನ್ನು ಪರಿತ್ಯಜಿಸುತ್ತಾನೆ. ರಾವಣಾಸುರನ ವಸತಿವರ್ತಿಯಲ್ಲಿದ್ದ ಸೀತಾದೇವಿಯನ್ನು ಕೂಡಿದ ರಾಮಚಂದ್ರನ ಹಾಗೆ ಅಗಲಿದ ಸತಿಯಳನ್ನು ಕೂಡಿ ಈ ಜಗದೊಳಗೆ ನಾನು ಅಪಕೀರ್ತಿಯನ್ನು ಪಡೆಯುವವನಲ್ಲ. ಸರ್ವಥಾ ಈ ನಲ್ಲೆಯನ್ನು ನಾನೊಲ್ಲೆನೈ ಮಾವಾ ಬಿಡು ಬಿಡು ಎಂದು ತವರಿನಿಂದ ಹಿಂದಿರುಗಿದ ಹೆಂಡತಿಯನ್ನು ನಿರಾಕರಿಸಿದ ರಜಕನ ಮಾತೇ ಲವಕುಶರ ಕಾಳಗಕ್ಕೆ ನಾಂದಿ ಹಾಡುತ್ತದೆ. ಅಣ್ಣನ ಆಜ್ಞೆಯನ್ನು ಮೀರಲಾರದೆ ಲಕ್ಷ್ಮಣನು ಸೀತೆಯನ್ನು ಕಾಡಿನಲ್ಲಿ ಬಿಟ್ಟುಬರುತ್ತಾನೆ. ತುಂಬಿದ ಬಸುರಿಯಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆದೊಯ್ದು ಸಂರಕ್ಷಿಸುತ್ತಾರೆ. ಅಲ್ಲಿ ಲವ-ಕುಶರ ಜನನವಾಗುತ್ತದೆ. ಆಶ್ರಮದ ವಾತಾವರಣಕ್ಕನುಗುಣವಾಗಿ ಬೆಳೆಯುತ್ತಾರಾದರೂ ಸಹಜ ವೀರತ್ವ ಅವರಲ್ಲಿ ಬಾಲ್ಯದಲ್ಲೇ ಸಿದ್ಧಿಸಿರುತ್ತದೆ. ಈ ವೇಳೆಗೆ ಅಯೋಧ್ಯಾರಾಮ ಅಶ್ವಮೇಧಯಾಗವನ್ನು ಪೂರೈಸಿ, ಯಜ್ಞದ ಕುದುರೆಯನ್ನು ದೇಶದ ಮೇಲೆ ಕಳುಹಿಸುತ್ತಾನೆ. ವಾಲ್ಮೀಕಿ ಆಶ್ರಮದ ಬಳಿ ಬಂದ ಅಶ್ವಮೇಧದ ಕುದುರೆಯನ್ನು ಲವನು ಕಟ್ಟುತ್ತಾನೆ. ಲವ ಮತ್ತು ಕುದುರೆಯ ರಕ್ಷಣೆಗೆ ಬಂದ ಶತ್ರುಘ್ನರ ನಡುವೆ ಕಾಳಗ ನಡೆಯುತ್ತದೆ. ಶತ್ರುಘ್ನ, ಭರತ, ಲಕ್ಷ್ಮಣ ಕೊನೆಗೆ ಆಂಜನೇಯನೂ ಸಹ ಬಾಲಕರಾದ ಲವಕುಶರ ಪರಾಕ್ರಮದ ಇದಿರು ನಿಲ್ಲಲಾರದೆ ಸೋಲನ್ನಪ್ಪುತ್ತಾರೆ. ರಣರಂಗಕ್ಕೆ ಬಂದ ವಾಲ್ಮೀಕಿ ಮತ್ತು ಸೀತೆಯರುಗಳಿಂದ ನಿಜಸಂಗತಿ ತಿಳಿದ ರಾಮ ತನ್ನ ಮಕ್ಕಳನ್ನು ಆದರಿಸುತ್ತಾನೆ. ಲವಕುಶರ ಕಾಳಗವು ಸುಖಾಂತಗೊಳ್ಳುತ್ತದೆ.

5)   ಅಭಿಮನ್ಯು ಕಾಳಗ : ಮಹಾಭಾರತದ ಕಥಾಗುಚ್ಛದಿಂದ ಆಯ್ದುಕೊಂಡ ಯಕ್ಷಗಾನ ಪ್ರಸಂಗವನ್ನು ನೇಸರಗಿಯ ಬಸವಣ್ಣೆಪ್ಪ ಕಾಡಣ್ಣವರ ಅವರು ವೀರ ಅಭಿಮನ್ಯು ಎಂಬ ಹೆಸರಿನಲ್ಲಿ ಯಕ್ಷಗಾನ ನಾಟಕವನ್ನಾಗಿ ರೂಪಾಂತರಿಸಿದ್ದಾರೆ. ಮೂಡಲಪಾಯ ಯಕ್ಷಗಾನ ಭಾಗವತರಾದ ಸಿದ್ದೇಗೌಡರು 14.10.1942ರಲ್ಲಿ ರಚಿಸಿದ ಪ್ರಸಂಗದ ಕಥೆ ಇಲ್ಲಿದೆ.

ಕುರುಕ್ಷೇತ್ರ ರಣಾಂಗಣದಲ್ಲಿ ಪಾಂಡವರನ್ನು ಮೆಟ್ಟಿ ನಿಲ್ಲುವ ಸಲುವಾಗಿ ಹಸ್ತಿನಾವತಿ ಪುರದರಸು ದುರ‌್ಯೋಧನನ ಒತ್ತಾಯದ ಮೇರೆಗೆ ಗುರುದ್ರೋಣಾಚಾರ‌್ಯರು ಚಕ್ರವ್ಯೆಹವನ್ನು ರಚಿಸುತ್ತಾರೆ. ಈ ಚಕ್ರವ್ಯೆಹವನ್ನು ಭೇದಿಸಿ ಜಯಶಾಲಿಯಾಗಿ ಹೊರಬರುವ ಶಕ್ತಿ ಮತ್ತು ವಿದ್ಯೆಯ ಅರಿವು ಇದ್ದದ್ದು ದ್ರೋಣಾಚಾರ್ಯರ ಪ್ರಿಯ ಶಿಷ್ಯ ಅರ್ಜುನ ಒಬ್ಬನಿಗೆ ಮಾತ್ರ. ಆದರೆ ಆ ದಿನ ಅರ್ಜುನನನ್ನು ಚಕ್ರವ್ಯೆಹದತ್ತ ಬರದಂತೆ ಶತ್ರುಗಳು ತಡೆದು ನಿಲ್ಲಿಸುತ್ತಾರೆ. ಅರ್ಜುನನ ಮಗ ಅಭಿಮನ್ಯು ಚಕ್ರವ್ಯೆಹವನ್ನು ಪ್ರವೇಶಿಸಲು ನಿರ್ಧರಿಸುತ್ತಾನೆ. ದೊಡ್ಡಪ್ಪ ಧರ‌್ಮರಾಯನನ್ನು ಸಮಾಧಾನಪಡಿಸಿ, ತಾಯಿ ಸುಭದ್ರೆಯನ್ನು ಸಾಂತ್ವನಗೊಳಿಸಿ ಚಕ್ರವ್ಯೆಹವನ್ನು ಭೇದಿಸಿ ಪರಾಕ್ರಮದಿಂದ ಕಾದಾಡಿ ಮಡಿಯುತ್ತಾನೆ. ಅಯ್ಯ ಅಕಟಕಟಾ, ಕೌರವನು ಅಭಿಮನ್ಯುವನ್ನು ಕೊಲ್ಲಿಸಿದ್ದು ಹ್ಯಾಗಾಯಿತೆಂದರೆ ಮದವೇರಿದ ಸಾವಿರಾರು ಆನೆಗಳು ಒಂದಾಗಿ ಮೊಲೆಯನ್ನು ಕುಡಿಯುವ ಸಿಂಹದ ಮರಿಯನ್ನು ಕೊಂದಂತೆಯೂ, ವಿಷಪುಂಜದಿಂದಿರುವ ಸಾವಿರಾರು ಘಟಸರ್ಪಗಳು ವಂದಾಗಿ ಗರುಡನ ಮರಿಯನ್ನು ಕೊಂದಂತೆಯಾಯ್ತು ಎಂದು ಕವಿ ಅಭಿಮನ್ಯುವಿನ ಸಾವಿಗೆ ಅತೀವವಾದ ಶೋಕವನ್ನು ವ್ಯಕ್ತಪಡಿಸುತ್ತಾನೆ. ಸೈಂಧವ ವಧೆಯೊಂದಿಗೆ ಪ್ರಸಂಗವು ಮುಕ್ತಾಯಗೊಳ್ಳತ್ತದೆ.

6)   ಕಂಸವಧೆ : ಜನಪದ ರಂಗಭೂಮಿಯ ವಿಶಿಷ್ಟ ಪ್ರಕಾರವಾದ ಕೇಳಿಕೆಯ ಉತ್ತಮ ಭಾಗವತರುಗಳಲ್ಲಿ ಒಬ್ಬರಾದ ದೊಡ್ಡಬಳ್ಳಾಪುರದ ಮುನಿಯಪ್ಪನವರು ರಚಿಸಿರುವ ಕಂಸವಧೆಯು ಭಾಗವತ ಪುರಾಣದಿಂದ ಆಯ್ದುಕೊಂಡ ಕಥಾ ಪ್ರಸಂಗ.

ಮಧುರೆಯ ರಾಜ ಕಂಸನಿಗೆ, ತನ್ನ ತಂಗಿ ದೇವಕಿಯ ಗರ್ಭದಲ್ಲಿ ಜನಿಸಿದ ಶಿಶುವಿನಿಂದ ತನ್ನ ಮರಣ ಎಂಬುದು ತಿಳಿದು ತಂಗಿ ಮತ್ತು ಆತನ ಗಂಡ ವಸುದೇವನನ್ನು ಸೆರೆಯಲ್ಲಿರಿಸಿ, ಆಕೆಯಲ್ಲಿ ಜನಿಸುವ ಮಕ್ಕಳನ್ನು ಕೊಲೆ ಮಾಡುತ್ತಾನೆ. ಆದರೆ ವಿಧಿಯ ಆಶಯವೇ ಬೇರೆ ಇರುತ್ತದೆ. ಕಂಸನಿಗರಿವಿಲ್ಲದಂತೆ, ಕ್ರೂರಿಯ ಸೆರೆಯಿಂದ ತಪ್ಪಿಸಿಕೊಂಡು ಗೋಕುಲದಲ್ಲಿ ಬೆಳೆದ ದೇವಕಿ ನಂದನ ಕೃಷ್ಣ ಮಧುರೆಯಲ್ಲಿ ನಡೆದ ಬಿಲ್ಲುಹಬ್ಬದ ಸಂದರ್ಭದಲ್ಲಿ ಕಂಸನನ್ನು ಕೆಣಕಿ ಆತನನ್ನು ಸಂಹರಿಸುತ್ತಾನೆ.

7)   ದುಶ್ಶಾಸನ ವಧೆ : ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಪೇಟೆಯಲ್ಲಿರುವ ಶ್ರೀಮದ್ ವೀರಶೈವರ ಚನ್ನಬಸವಯ್ಯನವರ ಕುಮಾರ ಮಿಠಾಯಿ ಅಂಗಡಿ ಕೆಂಪಣ್ಣನವರು ರಚಿಸಿದ ದುಶ್ಶಾಸನ ವಧೆಯ ಪ್ರಸಂಗವನ್ನು ಮಹಾಭಾರತ ಕಥಾವಸ್ತುವಿನಿಂದ ಆಯ್ದುಕೊಳ್ಳಲಾಗಿದೆ. ಕೆಂಪಣ್ಣನವರು ಈ ಕೃತಿಯನ್ನು ರಚಿಸಿದ ಕಾಲವನ್ನು ಹಸ್ತಪ್ರತಿಯಲ್ಲೆಲ್ಲೂ ದಾಖಲು ಮಾಡಿಲ್ಲವಾದ್ದರಿಂದ, ಕಾಲದ ವಿವರವು ತಿಳಿದು ಬರುವುದಿಲ್ಲ. ವಿಭವ ಸಂವತ್ಸರದ ಪುಷ್ಯ ಬಹುಳ ಮಂಗಳವಾರದ ದಿನ ಪ್ರಥಮ ಗಣಪತಿಯನ್ನು ಧ್ಯಾನಿಸುತ್ತಾ, ಗಣನಾಥನ ಅಂಕಿತದಲ್ಲಿ ಈ ಪ್ರಸಂಗವನ್ನು ರಚಿಸಿರುತ್ತಾರೆ. ಕಥೆ ಬರೆಯುವಲ್ಲಿ ಕೈತಪ್ಪು, ಬಾಯಿತಪ್ಪುಗಳೇನಾದರೂ ಇದ್ದಲ್ಲಿ ಹಿರಿಯರಾದಂಥವರು ತಿದ್ದಿ ಸರಿಪಡಿಸಬೇಕಾಗಿ ವಿನಯದಿಂದ ಕೇಳಿಕೊಂಡಿದ್ದಾರೆ.

ಪ್ರಸಂಗವು ದ್ಯೂತ ಪ್ರಸಂಗದಿಂದ ಪ್ರಾರಂಭವಾಗುತ್ತದೆ. ಕೌರವನು ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಎಳೆತರಿಸಿ ಅವಮಾನಕ್ಕೆ ಗುರಿಪಡಿಸುತ್ತಾನೆ. ಇದರಿಂದ ಕೆರಳಿದ ಭೀಮನು ದುಶ್ಶಾಸನನನ್ನು ಸಂಹರಿಸಿ ಆತನ ಬಿಸಿ ನೆತ್ತರಿನಿಂದ ದ್ರೌಪದಿಯ ಮುಡಿ ಕಟ್ಟುತ್ತೇನೆಂದು ಶಪಥಗೈಯ್ಯುತ್ತಾನೆ. ಕುರುಕ್ಷೇತ್ರದಲ್ಲಿ ದುಶ್ಶಾಸನನನ್ನು ವಧೆ ಮಾಡಿ ತನ್ನ ಶಪಥವನ್ನು ಈಡೇರಿಸಿಕೊಳ್ಳುತ್ತಾನೆ.

ಈ ಸಂಪುಟದಲ್ಲಿರುವ ಯಕ್ಷಗಾನ ಪ್ರಸಂಗಗಳಲ್ಲಿ ವಿವಿಧ ಛಂದಸ್ಸುಗಳಲ್ಲಿ ಹಾಡುಗಳು ರೂಪುದಳೆದಿವೆ. ಷಟ್ಪದಿ, ಚೂರ್ಣಿಕ, ಶ್ಲೋಕ, ವೃತ್ತ ಮೊದಲಾದ ಶಿಷ್ಟ ಛಂದೋ ಪ್ರಕಾರಗಳೊಂದಿಗೆ  ತಿವುಡೆ, ಜಂಪೆ, ತಾಳ, ಏಳೆಗಳಂತಹ ಜನಪದ ಛಂದೋಪ್ರಕಾರಗಳೂ ಬಳಕೆಯಾಗಿವೆ. ಭಾಷೆಯು ಜನಪದದಿಂದ ಶಿಷ್ಟಕ್ಕೆ, ಶಿಷ್ಯದಿಂದ ಜನಪದಕ್ಕೆ ಸಹಜವಾಗಿ ಪ್ರಯಾಣ ಮಾಡಿದೆ. ಗ್ರಾಮೀಣ ಭಾಷೆಯ ಸಹಜ ಸೊಗಡು ಪಡಿಮೂಡಿದೆ : ರಮ್ಯ ಅಭಿವ್ಯಕ್ತಿಯನ್ನು ಸಾಧಿಸಿದೆ. ಈ ಯಕ್ಷಗಾನ ಪ್ರಸಂಗಗಳ ಕರ್ತೃಗಳು ಯಾವುದೇ ಛಂದೋಬಂಧದಲ್ಲೂ ನಿರಾಯಾಸವಾಗಿ, ನಿರರ್ಗಳವಾಗಿ ಬರೆಯಬಲ್ಲವ ರಾಗಿದ್ದಾರೆ. ಭಾಷೆಯಲ್ಲಿ ಕ್ಲಿಷ್ಟತೆ ಎನಿಸಿದರೂ ಜೀವಂತಿಕೆ ಮತ್ತು ಲವಲವಿಕೆಗಳು ಮೈದುಂಬಿಕೊಂಡಿವೆ.

ಯಕ್ಷಗಾನ ಪ್ರಸಂಗ ರಚನಕಾರರು ತಮ್ಮ ಕೃತಿಯಲ್ಲಿ ಸಾಹಿತ್ಯದ ಮತ್ಯಾವ ಗಣನೀಯ ಅಂಶಗಳನ್ನು ಗಮನಿಸದೇ ಹೋದರೂ ರಸ, ಭಾವಗಳನ್ನು ನೇರವಾಗಿ ಸ್ಪರ್ಶಚಿತ್ತವಾಗುವಂತೆ ಚಿತ್ರಿಸುವಲ್ಲಿ ಹೆಸರಾದವರು. ಉಳಿದ ಸಾಹಿತ್ಯದ ಪರಿಕರಗಳ ಬಗ್ಗೆ ಅವರು ಅಷ್ಟಾಗಿ ಗಮನ ಹರಿಸಿದವರಲ್ಲ. ಆ ಸಂದರ್ಭದಲ್ಲಿ ಬರುವ ಕೋಪವೋ, ದುಃಖವೋ, ವಿರಹವೋ ಯಾವುದನ್ನೇ ಆಗಲಿ ತಮ್ಮ ಭಾಷೆಯಲ್ಲಿ ಆದಷ್ಟು ಪರಿಣಾಮಕಾರಿಯಾಗಿ ಚಿತ್ರಿಸುವ ಶೈಲಿ ಗಮನಾರ್ಹ. ಆ ಸಾಹಿತ್ಯದಲ್ಲಿ ಹೆಚ್ಚಿನ ಪ್ರೌಢಿಮೆಯನ್ನು, ಕಾವ್ಯ ಶ್ರೀಮಂತಿಕೆಯನ್ನು ಸಾಹಿತ್ಯ ಪ್ರತಿಭೆಯನ್ನು ಕಾಣದಿದ್ದರೂ, ಆ ಒಂದು ಚೌಕಟ್ಟಿನಲ್ಲಿ ಅದು ಸಾರ್ಥಕತೆಯನ್ನು ಹೊಂದಿರುತ್ತದೆ. ಪರಿಪೂರ್ಣಗೊಂಡಿರುತ್ತದೆ (ಡಿ.ಕೆ. ರಾಜೇಂದ್ರ : 1980).

ನಮ್ಮ ಯಕ್ಷಗಾನ ಕವಿಗಳು ಪಂಡಿತರಲ್ಲವಾದರೂ, ಲೋಕಜ್ಞಾನವುಳ್ಳವರು. ಭಾಗವತರು ವೃತ್ತಿಪರರು : ವೃತ್ತಿಗೆ ಬೇಕಾದ ಕೌಶಲ್ಯ ಅವರಲ್ಲಿತ್ತು. ಕಲಾ ಪ್ರತಿಭೆ ಇದ್ದಿತು. ಅಕ್ಷರಜ್ಞಾನದಿಂದ ವಂಚಿತರಾದ ಭಾಗವತರುಗಳೂ ಇದ್ದರು. ಮೌಖಿಕ ಪರಂಪರೆಯಲ್ಲಿ ಎಲ್ಲವೂ ಇವರಿಗೆ ಕರಗತವಾಗಿದ್ದಿತು. ಯಾವ ಪ್ರಸಂಗವನ್ನು ಬೇಕಾದರೂ ತಮ್ಮ ನೆನಪಿನಲ್ಲಿರಿಸಿಕೊಂಡು ಅದನ್ನು ಇತರರಿಗೆ ಕಲಿಸಿ ಆಡಿಸಬಲ್ಲವರಾಗಿದ್ದರು. ಕಳೆದ ನೂರಿನ್ನೂರು ವರ್ಷಗಳಿಂದಲೂ ಈ ಭಾಗವತರು ಮೂಡಲಪಾಯ ಯಕ್ಷಗಾನ ಸಂಪ್ರದಾಯದಂತಹ ಅಮೂಲ್ಯ ರಂಗಪ್ರಕಾರವನ್ನು ಉಳಿಸಿ ಬೆಳೆಸಿಕೊಂಡು ಬಂದವರು. ಸಾಮಾಜಿಕ ಅವಜ್ಞೆಗೆ ಗುರಿಯಾಗಿಯೂ ಸಹ ಅಮೂಲ್ಯ ಬಯಲಾಟ ಪ್ರಕಾರವೊಂದನ್ನು ನಿಧಿಯಂತೆ ಕಾಯ್ದುಕೊಂಡು ಬಂದ ಅಜ್ಞಾತ ಭಾಗವತರು ಮತ್ತು ಕವಿಗಳು ಪ್ರಾತಃಸ್ಮರಣೀಯರು. ಕರ್ನಾಟಕ ಜಾನಪದ ರಂಗಭೂಮಿ ಆಸಕ್ತರೆಲ್ಲರೂ ಇವರುಗಳಿಗೆ ಸದಾ ಋಣಿಯಾಗಿರಬೇಕು.

ಡಾ. ಚಕ್ಕೆರೆ ಶಿವಶಂಕರ್