ಬಯಲಾಟ ಎನ್ನವಂಥದ್ದು ನಮ್ಮ ಜನಪದರ ಪಾಲಿಗೆ ಕೇವಲ ಮನರಂಜನೆಯ ಸಾಧನವಾಗಿರಲಿಲ್ಲ. ಅದು ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಆ ಮೂಲಕ ತಮ್ಮ ಬದುಕಿನ ಆದರ್ಶಗಳು, ಮೌಲ್ಯಗಳು, ಮಾದರಿಗಳನ್ನು ಕಂಡುಕೊಳ್ಳುತ್ತಿದ್ದರು. ಬಯಲಾಟವು ಅಖಂಡ ನಾಟಕವಾಗಿದ್ದಿತು. ಅದನ್ನು ವಿಭಜಿಸಿದಾಗ ಹಾಡು, ಕುಣಿತ, ಅಭಿನಯ, ಪ್ರಸಾಧನ, ಚಿತ್ರ, ಗೀತ, ಸಂಗೀತ ಮೊದಲಾದ ವೈವಿಧ್ಯಮಯ ರೂಪಗಳು ಗೋಚರಿಸುತ್ತಿದ್ದವು. ಅಖಂಡ ಬಯಲಾಟದಲ್ಲಿ ಜನಪದ ಸಮುದಾಯದ ಬಣ್ಣಗಳು, ಶ್ರುತಿ-ಗತಿಗಳು, ಚಲನೆಗಳು, ಸಾಮಾಜಿಕ ಅಭಿನಯ ವೈವಿಧ್ಯಗಳಿದ್ದವು. ಅಭಿನಯ, ಸಾಹಿತ್ಯ, ಸಂಗೀತ ಮತ್ತು ಅಲಂಕರಣಗಳ ಸಂಯೋಜನೆಯೇ ಆಟ. ಈ ಆಟವು ಬಯಲಿಗೆ ಬಿದ್ದಾಗ ಬಯಲಾಟವಾಯಿತು. ಬಯಲಾಟವು ಜನಪದರ ಅತ್ಯುನ್ನತ ಮೌಲ್ಯದ ಪ್ರದರ್ಶನ. ಪ್ರತೀ ಪ್ರದರ್ಶನದಲ್ಲೂ ಇಂತಹ ಉನ್ನತ ಮೌಲ್ಯದ ಕಲಾ ಮಾಧ್ಯಮವಿದ್ದೇ ಇರುತ್ತದೆ. ಇದು ಆಯಾ ಜನಪದದ ಸಮರ್ಥನೆಯೂ ಹೌದು; ಬೆಳವಣಿಗೆಯನ್ನು ಪರೀಕ್ಷಿಸುವ ಮಾನದಂಡವೂ ಹೌದು. ಬಯಲಾಟವು ಭಾರತೀಯ ಮನಸ್ಸನ್ನು ಒಂದು ಯೋಜಿತ ಬದ್ಧತೆಗೆ ತರುವ ರಕ್ಷಣಾ ತಂತ್ರವಾಗಿದೆ. ತನ್ಮೂಲಕವೇ ಭಾರತೀಯ ಸಮಗ್ರತೆ ಮತ್ತು ಪ್ರಗತಿಯನ್ನು ವೀಕ್ಷಿಸುವುದಾಗಿದೆ. ಇವತ್ತಿನ ಭಾರತದ ಕೇಂದ್ರೀಕೃತ, ಸಾಮಾಜಿಕ ಅದರ ಪ್ರತಿಪಾದನೆಗೂ, ಬಯಲಾಟದ ವಸ್ತುವಿನ ಮೂಲಕ ಪ್ರಚೋದಿತವಾಗುವ ಸಾಮಾಜಿಕ-ಆರ್ಥಿಕ ಪ್ರತಿಪಾದನೆಗೂ ರಚನಾತ್ಮಕ ಸಂಬಂಧವಿದೆ. ಬಯಲಾಟವು ಎಲ್ಲವನ್ನೂ ತನ್ನ ಸಂಸ್ಕೃತಿಯ ಒಳಗೆ ಸೆಳೆದು ಇರಿಸಿಕೊಳ್ಳುವ ಶಕ್ತಿ ಮತ್ತು ಉದ್ದೇಶವನ್ನು ಹೊಂದಿದೆ (ಹಿ.ಶಿ. ರಾಮಚಂದ್ರೇಗೌಡ).

ಬಯಲಾಟವನ್ನು ಆಟ, ಅಟ್ಟದಾಟ, ಬೈಲುಕಥೆ, ಬಯಲು ನಾಟಕ, ಯಕ್ಷಗಾನ ಬಯಲಾಟ. ಮೇಳ ಎಂದೆಲ್ಲಾ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಯಕ್ಷಗಾನ ಎನ್ನವಂಥದ್ದು ಅತ್ಯಂತ ಪ್ರಾಚೀನವಾದ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ಹೊತ್ತಿಗೂ ಹೆಚ್ಚು ಜನಪ್ರಿಯವಾಗಿರುವ ಸಂಗೀತ ಶೈಲಿ. ಈ ಹೆಸರು ಹೇಗೆ ಬಂತೆಂದು ಹೇಳಲು ಇದುವರೆಗೂ ನಮಗೆ ಯಾವುದೇ ಚಾರಿತ್ರಿಕ ಆಧಾರಗಳಾಗಲಿ, ಪ್ರಾಚೀನ ಗ್ರಂಥಗಳ ಉಲ್ಲೇಖಗಳಾಗಲಿ ಲಭ್ಯ ಇರುವುದಿಲ್ಲ. ಅಪೌರುಷೇಯವಾದ – ಸಿದ್ಧಾಂತಗಳನ್ನು ಹೊರತುಪಡಿಸಿ ನೋಡಿದಾಗಲೂ ನಮ್ಮಲ್ಲಿ ಬಹು ಹಿಂದಿನಿಂದಲೂ ದೇಸೀ ರಾಗ ಪದ್ಧತಿಗಳಿದ್ದವು ಎನ್ನುವುದು ಸ್ಪಷ್ಟ. ಈ ದೇಸೀ ಸಂಗೀತ ಶೈಲಿಯನ್ನು ಒಳಗೊಂಡ ಯಕ್ಷಗಾನ ಬಯಲಾಟವು ಕರ್ನಾಟಕ ಜನಪದ ರಂಗಭೂಮಿಯಲ್ಲಿ ಸಮೃದ್ಧವಾದುದು ಮತ್ತು ವ್ಯಾಪಕವಾದುದು ಹಾಗೂ ಜನಪ್ರಿಯವಾದುದಾಗಿದೆ. ಕರ್ನಾಟಕದ ತುತ್ತ ತುದಿಯ ಬೀದರ್‌ನಿಂದ ಮೊದಲುಗೊಂಡು ಕರಾವಳಿಯವರೆಗೂ ಯಕ್ಷಗಾನವು ವ್ಯಾಪಿಸಿರುವುದರಿಂದ ಪ್ರಾದೇಶಿಕವಾಗಿ ನಾನಾ ಪ್ರಭೇದಗಳು ಕಂಡುಬರುತ್ತವೆ.

ಯಕ್ಷಗಾನ ಬಯಲಾಟವನ್ನು ಅಧ್ಯಯನ ಸೌಕರ‌್ಯಕ್ಕಾಗಿ ವಿಭಜಿಸಿ ನೋಡಿದಾಗ ಎರಡು ಹೆದ್ದೊರೆಗಳು ಹಿಂದಿನಿಂದಲೂ ಜೀವಂತವಾಗಿ ಹರಿದು ಬಂದಿರುವುದು ಕಂಡುಬರುತ್ತದೆ. ಈ ಎರಡೂ ಹೆದ್ದೊರೆಗಳು ಕ್ರಮೇಣ ಕವಲುಗಳಾಗಿ ಬೆಳವಣಿಗೆ ಸಾಧಿಸಿವೆ. ಈ ಬೆಳವಣಿಗೆಯನ್ನು ಕೆಳಕಂಡಂತೆ ಗುರುತಿಸಬಹುದಾಗಿದೆ. ಆದರೆ ದೇಶದ ಉದ್ದಗಲಕ್ಕೂ ಹರಡಿರುವ ಜಾನಪದ ನಾಟಕಗಳು ಪ್ರಾದೇಶಿಕ ಭಿನ್ನತೆಗಳನ್ನು ಒಳಗೊಂಡು ಎಷ್ಟೇ ವಿಭಿನ್ನವಾಗಿ ಕಂಡರೂ ಅವುಗಳನ್ನು ಬಂಧಿಸಿರುವ ಅಂತರಂಗದ ಸೂತ್ರ ಮಾತ್ರ ಒಂದೇ ಆಗಿದೆ. ಅದು ಭಾರತೀಯ ಪುಣ್ಯ ಸಂಸ್ಕೃತಿ.

ಯಕ್ಷಗಾನ ಬಯಲಾಟ

ಮೂಡಲಪಾಯ

ಪಡುವಲಪಾಯ

ಉತ್ತರ ಕರ್ನಾಟಕದ
ಸಂಪ್ರದಾಯ
ದೊಡ್ಡಾಟ

ದಕ್ಷಿಣ ಕರ್ನಾಟಕದ
ಸಂಪ್ರದಾಯ
ಮೂಡಲಪಾಯ
ತೆಂಕು ತಿಟ್ಟು ಬಡಗುತಿಟ್ಟು ಉತ್ತರ ಕನ್ನಡ
ಸಂಪ್ರದಾಯ

ಸಣ್ಣಾಟ

ಘಟ್ಟದ ಕೋರೆ

ಶೈವ ವೈಷ್ಣವ ಸಾಮಾಜಿಕ ಕೃಷ್ಣ ಪಾರಿ
ಜಾತ

ಜನಪ್ರಿಯತೆ, ವ್ಯಾಪಕತೆ, ಸತ್ವ ಇವು ಮೂರನ್ನು ಒಳಗೊಂಡಿರುವ ಯಕ್ಷಗಾನವನ್ನು ಕುರಿತಾದಂತೆ  ಕರ್ನಾಟಕದ ನಾನಾ ವಿದ್ವಾಂಸರು ಅಧ್ಯಯನ ನಡೆಸಿರುತ್ತಾರೆ. ಡಾ॥ಎಚ್.ಕೆ. ರಂಗನಾಥ್, ಡಾ. ಶಿವರಾಮ ಕಾರಂತ, ಡಾ. ಚಂದ್ರಶೇಖರ ಕಂಬಾರ, ಡಾ. ಜೀ.ಶಂ. ಪರಮಶಿವಯ್ಯ, ಡಾ. ಡಿ.ಕೆ. ರಾಜೇಂದ್ರ, ಡಾ. ಬಸವರಾಜ ಮಲಶೆಟ್ಟಿ, ಡಾ. ಎಂ.ಟಿ. ಧೂಪದ್, ಎಂ. ಪ್ರಭಾಕರ ಜೋಷಿ, ಡಾ. ಹಿ.ಶಿ. ರಾಮಚಂದ್ರೇ ಗೌಡ, ಡಾ. ಕೆ. ಚಿನ್ನಪ್ಪಗೌಡ, ರಾಘವ ನಂಬಿಯಾರ್, ಎಂ. ಪ್ರಭಾಕರ ಜೋಶಿ ಮುಂತಾದ ವಿದ್ವಾಂಸರು ಯಕ್ಷಗಾನ ಮೂಲದ ಜೊತೆಗೆ ವಿವಿಧ ಅಂಗಗಳನ್ನು ಕುರಿತು ವಿವರವಾಗಿ ಕೆಲಸ ಮಾಡಿರುತ್ತಾರೆ. ಯಕ್ಷಗಾನವನ್ನು ಎಷ್ಟರಮಟ್ಟಿಗೆ ಒಡೆದು ನೋಡಬಹುದೋ ಅಷ್ಟೂ ನಡೆದಿದೆ. ಅದರಲ್ಲಿಯೂ ಕರಾವಳಿ ಯಕ್ಷಗಾನವನ್ನಂತೂ ಕೋಳಿಯ ರೆಕ್ಕೆ ಪುಕ್ಕ ತರಿದಂತೆ ಒಂದೊಂದೇ ಅಂಗವನ್ನು ವಿಭಜಿಸಿ ಅಧ್ಯಯನಿಸಿರುತ್ತಾರೆ.

ವಾಸ್ತವವಾಗಿ ಯಕ್ಷಗಾನ ಎಂಬ ಪದವು ಬಯಲುಸೀಮೆಯಲ್ಲೆಲ್ಲೂ ಕೇಳಿ ಬರುವುದಿಲ್ಲ. ಇಲ್ಲಿರುವುದೇನಿದ್ದರೂ ಅಟ್ಟದಾಟ, ಬಯಲಾಟ, ಬಯಲು ನಾಟಕ, ಬಯಲು ಕಥೆ ಎಂಬ ಪದಗಳಷ್ಟೇ ರೂಢಿಯಲ್ಲಿರುವುದು. ಮೂಡಲಪಾಯ-ಪಡುವಲಪಾಯ- ದೊಡ್ಡಾಟ ಇವೆಲ್ಲವೂ ವಿದ್ವಾಂಸರು ರಂಗಭೂಮಿ ವಿಂಗಡಣೆಯ ಸೌಲಭ್ಯಕ್ಕಾಗಿ ರೂಢಿಸಿಕೊಂಡ ಪದಗಳಾಗಿವೆ. ಮೊದಲಿಗೆ ಕಥೆಯಾಗಿ, ಅನಂತರ ಆಟವಾಗಿ ಕ್ರಮೇಣ ನಾಟಕವಾಗಿ ರೂಪುಗೊಂಡಿರುವ ರಂಗಭೂಮಿಯ ಇತಿಹಾಸದ ಕಥನವನ್ನು ನಮ್ಮ ಹಳ್ಳಿಗಾಡಿನ ಜನರು ನಿರ್ದೇಶಿಸುವ ಪದಗಳು ಸಂಕೇತಿಸುತ್ತವೆ.

ಬಯಲಾಟದ ಅತ್ಯಂತ ಭವ್ಯ ಪ್ರಕಾರಗಳಲ್ಲಿ ಒಂದಾದ ಮೂಡಲಪಾಯ ಯಕ್ಷಗಾನವು ಸಾಹಿತ್ಯ, ಸಂಗೀತ, ಅಭಿನಯ, ವಾದ್ಯಮೇಳ, ವೇಷಭೂಷಣ, ಹಾಡುಗಾರಿಕೆ, ಅಲಂಕರಣ ಮೊದಲಾದ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಮೂಡಲಪಾಯ ಯಕ್ಷಗಾನಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಒಂದು ಕಾಲಕ್ಕೆ ಮೈಸೂರು ಜಿಲ್ಲೆಯ ದಕ್ಷಿಣದ ತುದಿಯಿಂದ ಬೀದರ್ ಜಿಲ್ಲೆಯ ಉತ್ತರದ ತುದಿಯವರೆಗೂ ಸುಮಾರು 15 ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿದ್ದ ಗ್ರಾಮೀಣ ಮನರಂಜನಾ ಮಾಧ್ಯಮವಿದು.

ಮೂಡಲಪಾಯದ ಕುಣಿತದಲ್ಲಾಗಲಿ, ವೇಷಭೂಷಣಗಳಲ್ಲಾಗಲಿ, ವಾದ್ಯ ವಿಶೇಷದಲ್ಲಾಗಲಿ ಇದುವರೆಗೂ ಯಾವುದೇ ಬಗೆಯ ಬದಲಾವಣೆಗಳಿಗಾಗಲಿ, ಪರಿಷ್ಕರಣೆಗಾಗಲಿ ಒಳಗಾಗಿಲ್ಲ. ಒರಟುತನ,  ಸೂಕ್ಷ್ಮತೆಗಳನ್ನಿನ್ನು ಹಾಗೆಯೇ ಉಳಿಸಿಕೊಂಡಿದೆ. ಯಾವುದೇ ಪ್ರಚಾರ-ಪ್ರಭಾವಗಳಿಗೆ ಒಳಗಾಗದೆ ಅನಕ್ಷರಸ್ಥ ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದಿದ್ದು ತನ್ನ ಮೂಲರೂಪವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಬಂದಿದೆ. ಮೂಡಲಪಾಯದಲ್ಲಿ ಗೋಚರಿಸುವ ರಂಗ ಪರಿಕರಗಳು, ತಾಂತ್ರಿಕ ಅಂಶಗಳನ್ನು ಗಮನಿಸಿದಾಗ ಇದು ಸ್ಪಷ್ಪವಾಗುತ್ತದೆ. ವೇಷಕಟ್ಟುವ ಕ್ರಮ, ಬಣ್ಣದ ವೇಷ, ಪಾತ್ರಧಾರಿಗಳು ರಂಗಸ್ಥಳವನ್ನು ಪ್ರವೇಶಿಸುವ ಮತ್ತು ನಿರ್ಗಮಿಸುವ ರೀತಿ, ಕುಣಿತ, ನಿಲುವು, ನೋಟ, ಹಸ್ತ ಪಾದಗಳ ಚಲನೆ, ಆಂಗಿಕ ಅಭಿನಯವ ತಾಳಕ್ಕೆ ತಕ್ಕಂತೆ ಪದವಿನ್ಯಾಸವನ್ನು ಮೆರೆಯುತ್ತಾ ಹೋಗುವುದು ಎಲ್ಲವೂ ಮೂಡಲಪಾಯದಲ್ಲಿ ವಿಶಿಷ್ಟ ರೀತಿಯಲ್ಲಿದೆ.

ಯಕ್ಷಗಾನ ಪ್ರಸಂಗಗಳಿಗೆ ಭಾರತೀಯ ಮಹಾಕಾವ್ಯಗಳಿಂದ ಕಥಾವಸ್ತುವನ್ನು ಆರಿಸಿಕೊಳ್ಳುವುದು ರೂಢಿ. ಆದರೆ ವಾಸ್ತವವಾಗಿ ಈ ಮಹಾಕಾವ್ಯಗಳಾದ ರಾಮಾಯಣ-ಮಹಾಭಾರತ ಭಾಗವತಗಳು ವಾಚಿಕ ಪರಂಪರೆಯಲ್ಲಿ ಹರಿದು ಬಂದು ಕಾಲಾನಂತರದಲ್ಲಿ ಅಕ್ಷರ ರೂಪಕ್ಕೆ ಇಳಿದ ಕೃತಿಗಳು. ಜನಪದ ಕಥೆ, ಕಾವ್ಯ, ಹಾಡ್ಗತೆಗಳ ರೂಪದಲ್ಲಿ ಜನಪದರ ಬಾಯಿಯಲ್ಲಿದ್ದ ಇವು ಸಂಕಲನ-ವ್ಯವಕಲನ ಕ್ರಿಯೆಗೆ ಸಿಲುಕಿ ಪ್ರಕ್ಷೇಪಗಳೊಂದಿಗೆ ಬೆಳೆದುಬಂದು ಅಕ್ಷರ ಪರಂಪರೆಗೆ ಅಖಂಡವಾಗಿ ಸೇರ್ಪಡೆಯಾದವುಗಳು. ಇವುಗಳಿಗೂ ಹೊರತಾಗಿ ಜನಪದ ಕಥೆಗಳನ್ನು ಪ್ರಸಂಗಗಳನ್ನಾಗಿ ಆರಿಸಿಕೊಂಡು ಅಭಿನಯಿಸುತ್ತಿದ್ದುದು ಮೂಡಲಪಾಯದಲ್ಲಿ ಕಂಡುಬರುತ್ತದೆ. ಕರೇಭಂಟನ ಕಾಳಗ, ಕುಮಾರರಾಮ, ಸಾರಂಗಧರ ಮೊದಲಾದವು ಮೂಲತಃ ಜನಪದ ಕಥೆಗಳಾಗಿದ್ದು ಹಿಂದಿನಿಂದಲೂ ಅಭಿನಯಿಸುತ್ತಾ ಬಂದಿರುವಂಥವು. ಕರೇಭಂಟನ ಕಾಳಗವಂತೂ ಮೂಡಲಪಾಯದ ಅತ್ಯಂತ ಪ್ರಾಚೀನವಾದ ಮತ್ತು ಜನಪ್ರಿಯವಾದ ಪ್ರಸಂಗ. ಇದು ಪಡುವಲಪಾಯದಲ್ಲಿ ಕಂಡುಬರುವುದಿಲ್ಲ.

ಮೂಡಲಪಾಯ ಯಕ್ಷಗಾನವು ಗ್ರಾಮೀಣ ಪ್ರದೇಶಗಳಲ್ಲಿ ಕೋಮು ಸಾಮರಸ್ಯಕ್ಕೆ ಹೆಸರಾದ ನಾಟಕ ಪರಂಪರೆ. ಈ ಸಂಪ್ರದಾಯದ ಭಾಗವತರುಗಳಲ್ಲಿ ಮೇಲುವರ್ಗ-ಕೆಳವರ್ಗ ಎನ್ನದೆ ಎಲ್ಲಾ ಜಾತಿ ಜನಾಂಗಗಳಿಗೆ ಸೇರಿದವರಿದ್ದರು. ಪಾತ್ರಧಾರಿಗಳಲ್ಲೂ ಅಷ್ಟೆ. ಗಾಣಿಗರು, ಕುಂಬಾರರು, ಅಕ್ಕಸಾಲಿಗರು, ಕ್ಷೌರಿಕರು, ಮುಸಲ್ಮಾನರು ಇತ್ಯಾದಿ ಶೂದ್ರಾತಿಶೂದ್ರ ಸಮುದಾಯಗಳಿಗೆ ಸೇರಿದ ಜನವರ್ಗವೇ ಹೆಚ್ಚು. ಬೈಗಿನಿಂದ ಬೆಳಗಿನವರೆಗೂ ಭಾರವಾದ ವೇಷಭೂಷಣಗಳನ್ನು ಹೊತ್ತು ದಣಿವಿಲ್ಲದೆ ಕುಣಿಯುವ ತಾಕತ್ತು ಈ ಜನರಿಗಿದ್ದಿತು. ಆದರೆ ಇವರೆಲ್ಲರೂ ಅಕ್ಷರ ಗೊತ್ತಿಲ್ಲದವರು. ಓದು ಬರಹ  ತಿಳಿಯದ ಇವರು ಯಕ್ಷಗಾನದ ಪದಗಳನ್ನು, ಮಾತುಗಳನ್ನು ಹೇಗೆ ಕಲಿಯುತ್ತಿದ್ದರು. ಹೇಗೆ ಪ್ರದರ್ಶನ ನೀಡುತ್ತಿದ್ದರು. ಅವರ ಪ್ರದರ್ಶನದ ತಾಂತ್ರಿಕ ನೆಲೆಗಳು ಯಾವುದು ಎಂಬುದೇ ವಿಸ್ಮಯಕಾರಿಯಾದ ಅಂಶ. ವಾಸ್ತವವಾಗಿ ಬಯಲಾಟದ ಬಗ್ಗೆ ಮೇಲುವರ್ಗದವರಲ್ಲಿ ಸದಭಿಪ್ರಾಯವಿರಲಿಲ್ಲ. ಬಯಲಾಟ ಕಲಿಯುವವರನ್ನು ಬದುಕಲು ಬಾರದವ :ಕೆಟ್ಟು ಕೆರ ಹಿಡಿದ್ಹೋದ ಎಂದು ಹಂಗಿಸುತ್ತಿದ್ದ ಕಾಲ. ಇದರಿಂದಾಗಿ ಆ ಕಾಲದ ಸಾಮಾಜಿಕ ಮೌಲ್ಯಗಳ ನಿರ್ಣಾಯಕ ಶಕ್ತಿಗಳಾಗಿದ್ದ ಮೇಲುವರ್ಗದ ಪುರೋಹಿತಷಾಹಿಯು ಈ ಪರಂಪರೆಯನ್ನು ದೂರವಿಟ್ಟಿದ್ದಿತು; ಅಲಕ್ಷ್ಯದಿಂದ ಕಾಣುತ್ತಿತ್ತು.

ಭಾಗವತರು ಮತ್ತು ಪಾತ್ರಧಾರಿಗಳು ಪದಗಳು ಮತ್ತು ಮಾತುಗಳನ್ನು ತಲೆಮಾರುಗಳಿಂದಲೂ ವಾಗ್ರೂಢಿಯಲ್ಲಿ ಉಳಿಸಿಕೊಂಡು ಬಂದವರು. ಪದಗಳನ್ನು ಭಾಗವತರು ಹಾಡಿದರೆ, ಮಾತುಗಳನ್ನು ಪಾತ್ರಧಾರಿಗಳು ಆಡುತ್ತಿದ್ದರು. ಹಿಂದಿನವರು ಹಾಡುತ್ತಿದ್ದುದರ, ಮಾತನಾಡುತ್ತಿದ್ದುದರ ಅನುಕರಣೆ ಇದು. ಮೂಡಲಪಾಯದಲ್ಲಿ ಮಾತು-ಪದಗಳೆರಡನ್ನು ಕಟ್ಟಿದವರು ಒಬ್ಬರೇ. ಪದ್ಯವೇ ಇರಲಿ, ಗದ್ಯವೇ ಇರಲಿ, ಏಕಕವಿ ನಿರ‌್ಮಿತವಾದುದು. ಪಡುವಲಪಾಯದಲ್ಲಿ ಪದ್ಯದ ಕವಿಯೇ ಬೇರೆ : ಸಂಭಾಷಣೆಯ ಕವಿಯೇ ಬೇರೆ. ಮೂಡಲಪಾಯದ ಪಾತ್ರಧಾರಿಗಳು ಪಡುವಲಪಾಯದಲ್ಲಿ ಕಂಡುಬರುವಂತೆ ಆಶುಕವಿಗಳಲ್ಲ. ಪದಗಳನ್ನು ಅನುಸರಿಸಿಕೊಂಡು ಇಲ್ಲಿ ಸಂಭಾಷಣೆ ಬೆಳೆಯುತ್ತದೆ. ಹಾಡುಗಳ ಬಾಹುಳ್ಯ ಹೆಚ್ಚು. ಸಂಭಾಷಣೆ ಗಡುಸು. ಪ್ರಾಸ-ಅನುಪ್ರಾಸ, ಹಳಗನ್ನಡ, ಸಂಸ್ಕೃತ ಭೂಯಿಷ್ಠವಾದ ಮಾತುಗಳನ್ನು ಪಾತ್ರಧಾರಿಗಳು ನಾಲಿಗೆ ತಿರುಗದಿದ್ದರೂ ಸಹ ಕಷ್ಟಪಟ್ಟು ಕಂಠಪಾಠ ಮಾಡಿ ಹೊರಹಾಕುತ್ತಾರೆ. ಮೂಡಲಪಾಯವು ವೀರ-ರೌದ್ರ ರಸ ಪ್ರಧಾನವಾದುದರಿಂದ ಗಡುಸಾದ ಸಂಭಾಷಣೆಯು ರಸಾಭಿವ್ಯಕ್ತಿಗೆ ಪೂರಕವಾಗಿರುತ್ತದೆ. ಉದಾಹರಣೆಗೆ ಪ್ರಮೀಳಾರ್ಜುನೀಯ ಪ್ರಸಂಗದಲ್ಲಿ ಪ್ರಮೀಳೆ ಅರ್ಜುನನಿಗೆ ಹೇಳುವ ಮಾತುಗಳನ್ನು ಗಮನಿಸಿ : ಈ ಮಂಡಲಕ್ಕೆ ಗಂಡನೆಂದು ಕೊಂಡಿಸಿಕೊಳ್ಳುವ ಭಂಡನೆ ನನಗೊಬ್ಬಳಿಗೆ ಗಂಡನಾಗೆಂದು ಅಂಡಲೆದರೆ ಕೆಂಡ ಕಾರುತ್ತ ಗಂಡ ಸತ್ತ ರಂಡ ಮುಂಡಿಯರಂತೆ ನನ್ನನ್ನು ಕಂಡು ತುಂಡಾಗಿ ನಿಲ್ಲುವಿಯಲ್ಲೊ ಭಂಡ. ಈ ಮೂರೂ ಮಂಡಲದ ಹಿಂಡು ರಾಜರಲ್ಲಿ ಪುಂಡನೆನಿಸಿಕೊಳ್ಳಲಿಕ್ಕೆ ನೀನು ಗಂಡಸೇ. ನೀವು ಈ ಸಂಭಾಷಣೆಯಲ್ಲಿ ಅರ್ಥ ಸ್ವಾರಸ್ಯಗಳನ್ನು ಹುಡುಕುವಂತಿಲ್ಲ. ಏನಿದ್ದರೂ ಕಿವಿಯ ಮೇಲೆ ಫಡಫಡ ಎಂದು ಅಪ್ಪಳಿಸುವ ಬಿರುಸು ಮಾತುಗಳಿವು. ಪ್ರಾಸಾನುಪ್ರಾಸಗಳನ್ನು ಉದ್ದೇಶಪೂರ್ವಕವಾಗಿ ಬಳಸುವುದರ ಮೂಲಕ ಮಾತಿನ ಆಟ ಕಟ್ಟುವುದು. ಒಂದರ್ಥದಲ್ಲಿ ಮೂಡಲಪಾಯದ ಸಂಭಾಷಣೆ ಎನ್ನುವಂಥದ್ದು ಕವಿಗಳ ಮಾತುಗಾರಿಕೆಯ ಆಡುಂಬೊಲ. ಆದರೆ ವಾಸ್ತವ ಸಂಗತಿ ಎಂದರೆ ಇಂತಹ ಸಂಭಾಷಣೆಯು ಪಾತ್ರಧಾರಿಗೆ ಕಡಿವಾಣ ಹಾಕುತ್ತದೆ. ಪೂರ್ವಸಿದ್ಧವಾದ ಈ ಸಂಭಾಷಣೆಯನ್ನು ನಟನು ಕಂಠಪಾಠ ಮಾಡಿಕೊಂಡು ರಂಗದ ಮೇಲೆ ಗಿಳಿಪಾಠ ಒಪ್ಪಿಸುತ್ತಾ ಹೋಗುತ್ತಾನೆ. ಅಭಿನಯ ಶೂನ್ಯವಾಗುತ್ತದೆ. ಕೆಲವೊಮ್ಮೆ ಅಂತ್ಯಪ್ರಾಸದ ಮೋಹದಿಂದ ಕೂಡಿದ ಈ ಸಂಭಾಷಣೆಯು ಕೃತಕವೆನಿಸಿ ಅರ್ಥಕಳೆದುಕೊಳ್ಳುತ್ತದೆ. ಪಡುವಲಪಾಯದಲ್ಲಿ ಸಂಭಾಷಣೆಯು ಕವಿ ನಿರ‌್ಮಿತವಾದುದಲ್ಲ. ಪಾತ್ರಧಾರಿಯ ಪ್ರತಿಭೆ, ಅನುಭವ, ವಾಕ್ಚಾತುರ್ಯಗಳಿಂದ ಕೂಡಿದ್ದು ಸೊಗಸು ತರುತ್ತದೆ. ಸೃಜನಶೀಲವಾಗಿರುತ್ತದೆ.

ಅಂದ ಹಾಗೆ, ಯಕ್ಷಗಾನ ಪ್ರಸಂಗಗಳ ಬಹುತೇಕ ವಸ್ತುಗಳನ್ನು ಗಮನಿಸಿದಾಗ ಎಲ್ಲವೂ ವಿಷ್ಣು ಪಾರಮ್ಯ, ವೈದಿಕ ಮೂಲದ ಕಥಾವಸ್ತುಗಳೇ ಹೆಚ್ಚು. ತ್ರಿಪುರ ಸಂಹಾರ, ದೇವಿಮಹಾತ್ಮೆ, ಮಾರ್ಕಂಡೇಯ ಚರಿತ್ರೆ ಮೊದಲಾದ ಪ್ರಸಂಗಗಳನ್ನು ಹೊರತಪಡಿಸಿದರೆ ಉಳಿದಂತೆ ಶಿವಪರವಾದ ಕಥೆಗಳು ಕಂಡುಬರುವುದಿಲ್ಲ. ದ್ರಾವಿಡರ ಬಳುವಳಿಯಾದ ಮೂಡಲಪಾಯ ಯಕ್ಷಗಾನ ಪರಂಪರೆಯಲ್ಲಿ ದ್ರಾವಿಡರ ಅಧಿದೇವತೆಯಾದ ಪರಶಿವನನ್ನು ಮೂಲೆಗೆ ತಳ್ಳಿ ವಲಸೆ ಬಂದ ಆಕ್ರಮಣಕಾರಿಗಳ ದೇವತೆಯಾದ ವಿಷ್ಣು ವಿಜೃಂಭಿಸಿರುವುದನ್ನು ಗಮನಿಸಿದಾಗ ಈ ಬಯಲಾಟ ಪರಂಪರೆಯ ಮೇಲಾಗಿರುವ ಸಂಸ್ಕೃತಿಯ ಅನ್ಯಾಕ್ರಮಣ ಆಸಕ್ತಿ, ಧೋರಣೆಗಳು ಒಡೆದು ಕಾಣುತ್ತವೆ. ಪುರೋಹಿತಷಾಹಿಯ ಪ್ರಭುತ್ವದೊಂದಿಗೆ ಕೈಜೋಡಿಸಿ ನಡೆಸಿದ ಸಂಚಿನ ಫಲವಾಗಿ ವೈದಿಕ ಹಿತಾಸಕ್ತಿಗಳು ಕೆಲಸ ಮಾಡಿರುವುದರ ಪರಿಣಾಮವಿದು. ಕರೇಭಂಟ, ಸಾರಂಗಧರ, ಕುಮಾರರಾಮರಂತಹ ಪ್ರಸಂಗಗಳನ್ನು ಹೊರತುಪಡಿಸಿ ಉಳಿದಂತೆ ಕರ್ನಾಟಕ ಸಂದರ್ಭದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು, ಚಳುವಳಿಗಳನ್ನು ಹುಟ್ಟುಹಾಕಿದ ಮಾದೇಶ್ವರ, ಮಂಟೇಸ್ವಾಮಿ, ಮೈಲಾರಲಿಂಗ, ಜಂಜಪ್ಪ, ಎಲ್ಲಮ್ಮ ಮುಂತಾದವರು ಬಯಲಾಟದ ವಸ್ತುಗಳಾಗಿ ಏಕೆ ರೂಪುಗೊಳ್ಳಲಿಲ್ಲ ಎಂಬ ಪ್ರಶ್ನೆ ಎದುರಾಗುತ್ತದೆ.

ಸಾಮಾನ್ಯವಾಗಿ ಮೂಡಲಪಾಯ ಯಕ್ಷಗಾನವು ರಾತ್ರಿಯಲ್ಲಿ ಪ್ರದರ್ಶನಗೊಳ್ಳುತ್ತದೆ. ಪಂಜಿನ ಬೆಳಕಿನಲ್ಲಿ ವರ್ಣರಂಜಿತ ವೇಷಭೂಷಣಗಳು, ಬಣ್ಣಗಾರಿಕೆ, ಕುಣಿತ, ಅಭಿನಯ, ಭಾಗವಂತಿಕೆ ಇವೆಲ್ಲದರ ಒಳಗೆ ವಸ್ತುವಿನ ಭ್ರಾಮಕತೆ ಇವಿಷ್ಟೂ ಕತ್ತಲಿನಲ್ಲಿ ಅನಾವರಣಗೊಳ್ಳುತ್ತಿದ್ದವು. ಈ ಪ್ರಸಂಗಗಳಲ್ಲಿ ಖಳನಾಯಕರ‌್ಯಾರೂ ಖಳನಾಯಕರಾಗಿ ಗೋಚರಿಸುತ್ತಿರಲಿಲ್ಲ. ಪ್ರತಿನಾಯಕರಾಗಿ ಕಂಗೊಳಿಸುತ್ತಿದ್ದರು. ಅವರುಗಳ ಹೆಸರಿನಿಂದಲೇ ಪ್ರಸಂಗಗಳು ಜನಪ್ರಿಯವಾಗುತ್ತಿದ್ದವೆಂಬುದು ಗಮನಿಸಬೇಕಾದ ಅಂಶ. ಉದಾಹರಣೆಗೆ : ಜರಾಸಂಧವಧೆ, ಕೌಂಡ್ಲೀಕ ಸಂಹಾರ, ದುಶ್ಶಾಸನವಧೆ, ಕರ್ಣಾವಸಾನ ಇತ್ಯಾದಿ. ಹೀಗಿದ್ದು ಸಹ ಮೂಡಲಪಾಯ ಯಕ್ಷಗಾನದಲ್ಲಿ ಗೋಚರಿಸುವ ಮತ್ತೊಂದು ವಿಪರ್ಯಾಸವೆಂದರೆ ಈ ಎಲ್ಲಾ ಖಳನಾಯಕ ಪಾತ್ರಗಳು ರಂಗವನ್ನು ಹೊರಗಿನಿಂದ ಪ್ರವೇಶಿಸುವಂಥದ್ದು. ಉಳಿದೆಲ್ಲಾ ಪಾತ್ರಗಳೂ ರಂಗದ ಒಳಗಿನಿಂದ ಅಂದರೆ ಬಣ್ಣದ ಚೌಕಿಮನೆಯಿಂದ ರಂಗಪ್ರವೇಶ ಮಾಡಿದರೆ, ಘೋರಪಾತ್ರಗಳು, ರಾಕ್ಷಸಪಾತ್ರಗಳು ಹೊರಗಿನಿಂದ, ಪ್ರೇಕ್ಷಕರ ಮಧ್ಯದಿಂದ ರಂಗಪ್ರವೇಶ ಮಾಡುವುದರ ಉದ್ದೇಶ ಏನಿತ್ತು? ರಾಕ್ಷಸರು ಸ್ಥಳೀಯ ಸಂಸ್ಕೃತಿಗೆ ಸೇರಿದವರು. ದ್ರಾವಿಡ ಬುಡಕಟ್ಟು ಜನವರ್ಗದವರು. ಹೊರಗಿನಿಂದ ಆಕ್ರಮಣ ಮಾಡಿದ ವಿಷ್ಣು ಸಂಸ್ಕೃತಿಯನ್ನು ಎದುರಿಸಿ ನಿಂತವರು. ಆಕ್ರಮಣಕೋರ ಆರ‌್ಯರ ಸಾಂಸ್ಕೃತಿಕ ಹೇರುವಿಕೆ ಪ್ರಕ್ರಿಯೆಯನ್ನು ಪ್ರತಿಭಟಿಸಿದ ಸ್ಥಳೀಯ ನಾಯಕರುಗಳನ್ನು ರಾಕ್ಷಸರುಗಳನ್ನಾಗಿ ಚಿತ್ರಿಸಿ ಅವರನ್ನು ಹೊರಗಿಡುವ ಅಂದರೆ ರಂಗಕ್ಕೆ ಹೊರಗಿನಿಂದ ಬರುವ ತಂತ್ರವನ್ನು ರೂಢಿಸಿದ ಹುನ್ನಾರ ಇದು. ಹಿ.ಚಿ. ಬೋರಲಿಂಗಯ್ಯನವರು ಈ ಹುನ್ನಾರವನ್ನು ಸಮರ್ಥವಾಗಿ ಅರ್ಥಯಿಸಿರುತ್ತಾರೆ. ರಾಮನ ಸೇವಕ, ಕಿಂಕರ ಹಾಗೂ ಭಕ್ತಾನುಭಕ್ತನಾದ ಹನುಮನೂ ಹೊರಗಿ ನಿಂದಲೇ ಯಾಕೆ ರಂಗಪ್ರವೇಶ ಮಾಡುತ್ತಾನೆ. ಬಹುತೇಕ ಶೂದ್ರರೇ ಅಭಿನಯಿಸುವ ಮೂಡಲಪಾಯ ಬಯಲಾಟದಲ್ಲಿ ಅವರ ಪ್ರತೀಕಗಳಾದ ಶೂದ್ರಪಾತ್ರಗಳು ಹೊರಗಿನಿಂದ ಬರುವ ಪರಿಪಾಠ. ಜನರ ನಡುವಿನಿಂದ ಈ ರಾಕ್ಷಸಪಾತ್ರಗಳು ಬರುತ್ತವಾದ್ದರಿಂದ ಅವೆಲ್ಲ ಅಲ್ಲಿ ಕುಂತ ಜನರ ನಡುವಿನ ಪ್ರತಿನಿಧಿಗಳೇ ಎಂದು ಅರ್ಥೈಸಬೇಕಾಗುತ್ತದೆ. ಅಂದರೆ ಅವೆಲ್ಲ ಶೂದ್ರಜೀವಗಳು. ರಂಗದ ಮೇಲಿನ ಪಾತ್ರಗಳು ಸಂಪೂರ್ಣವಾಗಿ ಮೇಲ್ವರ್ಗದ ಜನರನ್ನು ಪ್ರತಿನಿಧಿಸುವಂಥವು. ಶೂದ್ರರು ಮತ್ತು ಅತಿ ಶೂದ್ರರೇ ಅಭಿನಯಿಸುವ ಈ ನಾಟಕದೊಳಗಿನ ನಾಟಕ ಎಷ್ಟು ಚಮತ್ಕಾರವಾಗುತ್ತದೆ ನೋಡಿ. ಇದು ನಮ್ಮ ಸಾಂಸ್ಕೃತಿಕ ದಾಸ್ಯ ಎನ್ನದೆ ವಿಧಿ ಇಲ್ಲ. (ಕಾಡು, ಕಾಂಕ್ರಿಟ್ ಜಾನಪದ :ಪು. 89).

  * * *

ಮೊದಲಿಗೆ, ಯಕ್ಷಗಾನ ಪ್ರಸಂಗಗಳು ಗ್ರಾಮೀಣ ಭಾಗವತರ ನೆನಪಿನ ಕೋಶದಲ್ಲಿ ಭದ್ರವಾಗಿದ್ದವು. ಇಡೀ ರಾತ್ರಿ ಭಾಗವತರು ತಮ್ಮ ನೆನಪಿನಲ್ಲಿರುವ ಕಥಾ ಪ್ರಸಂಗಗಳನ್ನು ಯಾವುದೇ ಎಡರು ತೊಡರುಗಳಿಲ್ಲದೆ ನಿರರ್ಗಳವಾಗಿ ಹಾಡುತ್ತಿದ್ದರು. ವರ್ಷಪೂರ್ತಿ ಒಂದಲ್ಲಾ ಒಂದು ಊರಿನಲ್ಲಿ, ಒಂದಲ್ಲಾ ಒಂದು ಪ್ರಸಂಗವನ್ನು ಕಲಿಸುತ್ತಲೇ ಇದ್ದುದರಿಂದ ಇವರ ನೆನಪಿನಲ್ಲಿದ್ದ ಪಠ್ಯಗಳು ಪ್ರತೀ ಬಾರಿಯೂ ಹೊಸ ಹೊಸ ಸೃಜನಶೀಲ ಪಠ್ಯಗಳಾಗಿದ್ದು ನವ ನವೋನ್ಮೇಷಶಾಲಿನಿಯಾಗಿರುತ್ತಿದ್ದವು. ದಿನಗಳೆದಂತೆ ಬದುಕು ಬದಲಾಗುತ್ತಾ ಬಂದಿತು. ಜನರ ಅಭಿರುಚಿ-ಮನೋಧರ‌್ಮಗಳು ಬದಲಾದವು. ಭಾಗವತರು ಬದುಕಿಗಾಗಿ ಬೇರೆ ವೃತ್ತಿಯೆಡೆಗೆ ಗಮನ ಹರಿಸಬೇಕಾಗಿ ಬಂತು. ಸಾಮಾಜಿಕ ಪರಿವರ್ತನೆಯು ಮನುಷ್ಯನ ಶ್ರಮ ಮತ್ತು ನೆನಪಿನ ಮೇಲೆ ವಿಪರೀತ ಪರಿಣಾಮಗಳನ್ನುಂಟು ಮಾಡಿತು. ಆಧುನಿಕತೆಯು ಮನುಷ್ಯ ಶ್ರಮವನ್ನು ಮಿತಗೊಳಿಸಿತು. ಆಲಸ್ಯವನ್ನು ಹೆಚ್ಚಿಸಿತು. ಆಧುನಿಕ ಯಂತ್ರೋಪಕರಣಗಳ ಪ್ರವೇಶವೂ ಸಹ ಇದಕ್ಕೆ ಕಾರಣವಾಗಿ ಸೋಮಾರಿತನ ಹೆಚ್ಚಿತು. ಬಯಲಾಟಗಳಲ್ಲಿದ್ದ ನಿಷ್ಠೆ ಸಡಿಲಿಸಿ ಲಕ್ಷ್ಯಗಳು ವಿವಿಧೆಡೆಗೆ ಹರಿದವು. ಅಖಂಡವಾಗಿದ್ದ ನೆನಪಿನ ಕೋಶದಲ್ಲಿ ಬಿರುಕು ಮಾಡಿ ಪಠ್ಯಗಳ ವ್ಯವಕಲನ ಕ್ರಿಯೆ ಜರುಗಲಾರಂಭಿಸಿತು. ನಿರರ್ಗಳವಾದ ಹಾಡುಗಾರಿಕೆಯಲ್ಲಿ ಅಡ್ಡಿಗಳು, ಸಡಿಲತೆ ತಲೆದೋರಿದವು. ಪರಿಣಾಮವಾಗಿ ಭಾಗವತರು ಮೂಡಲಪಾಯದ ಪಠ್ಯಗಳನ್ನು ಬರೆದಿಡುವ, ಮತ್ತು ಬರೆಸಿಡುವ ಪ್ರವೃತ್ತಿಯನ್ನು ಬೆಳೆಸಿಕೊಂಡರು. ಹೀಗೆ ವಾಚಿಕ ಪರಂಪರೆಯಲ್ಲಿದ್ದ ಬಯಲಾಟಗಳು ಅಕ್ಷರ ಪರಂಪರೆಗಿಳಿದವು. ಅಲ್ಲದೆ, ಹಿ.ಶಿ. ರಾಮಚಂದ್ರೇಗೌಡರು ಹೇಳುವಂತೆ, ಬಯಲಾಟದ ಹಾಡುಗಾರಿಕೆ ಹೆಚ್ಚಿನ ಪ್ರೇಕ್ಷಕರನ್ನು ಕಳೆದುಕೊಂಡಾಗ, ಅದು ದಿನನಿತ್ಯದ ಹವ್ಯಾಸವಾಗದಿದ್ದಾಗ, ಕೆಲವು ಸಂದರ್ಭಕ್ಕೆ ಮಾತ್ರ ಸಂಕುಚಿತಗೊಂಡಾಗ ಅವು ಪಠ್ಯರೂಪಕ್ಕೆ ಬಂದಿರಲು ಸಾಧ್ಯ. ನೆನಪಿನ ಶಕ್ತಿ ಕಡಿಮೆಯಾಗುವುದು ಒಂದು ಕಾರಣವಾದರೂ ಅದು ಪ್ರಬಲ ಕಾರಣವಲ್ಲ. ಒಂದು ಜಾನಪದ ಸಾಮೂಹಿಕತೆ ಜನಜನಿತವಾಗಿದ್ದಾಗ, ಅದಕ್ಕೆ ಅಕ್ಷರ ಪರಂಪರೆ ಇಲ್ಲದಿದ್ದಾಗ ಎಲ್ಲವೂ ಜ್ಞಾಪಕ ಶಕ್ತಿಯಲ್ಲಿ ಉಳಿದಿರುತ್ತದೆ. ಆಧುನಿಕರು ಹೇಳುವಂತೆ ಹೊಸ ಹೊಸ ವಿಷಯಗಳು ವಿಚಾರಗಳು ಬಂದಂತೆ ಜ್ಞಾಪಕಶಕ್ತಿ ಕಡಿಮೆಯಾಗುತ್ತದೆ ಎಂಬುದೂ ಇಲ್ಲಿ ಪ್ರಸ್ತುತವಲ್ಲ. ಆಗ ನೆನಪಿನ ಶಕ್ತಿ ಹೆಚ್ಚಾಗುತ್ತಲೇ ಹೋಗಬೇಕು. ಬರೆದಿಡುವ ಸೋಮಾರಿತನವೆ ನೆನಪಿಡುವ ಮತ್ತು ಚಿಂತಿಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. (ಜಾನಪದ ಅಂತರಂಗ : ಪು. 38).

ನಾನಾ ಕಾರಣಗಳಿಗಾಗಿ ಕಂಠಸ್ಥ ಪರಂಪರೆಯಲ್ಲಿದ್ದ ಯಕ್ಷಗಾನ ಸಾಹಿತ್ಯವು ಅಕ್ಷರ ಪರಂಪರೆಗಿಳಿಯಿತು. ಕಳೆದ ನೂರಾರು ವರ್ಷಗಳಿಂದಲೂ ಕರ್ನಾಟಕದಲ್ಲಿ ಸಮೃದ್ಧವಾಗಿ ಬೆಳೆಯಿತು. ಆದರೆ, ಯಕ್ಷಗಾನ ಬಯಲಾಟದ ಬಗೆಗಿದ್ದ ಸಾಂಪ್ರದಾಯಿಕ ಅವಜ್ಞೆಯಿಂದಾಗಿ ಸಾಹಿತ್ಯ ಚರಿತ್ರಕಾರರಿಂದ  ವಂಚಿತವಾಗಿರುವುದಂತೂ ದುರದೃಷ್ಟಕರ ಸಂಗತಿ. ಯಕ್ಷಗಾನ ಕವಿಗಳು ಶಿಷ್ಟ ಕವಿಗಳಂತೆ ಎಲ್ಲಿಯೂ ತಮ್ಮ ಊರು, ಕಾಲ, ದೇಶ, ಅಂಕಿತ ಪ್ರವರಗಳನ್ನು ಹೇಳಿಕೊಂಡವರಲ್ಲ. ಹೇಳಿಕೊಂಡಿರುವ ಕೆಲವರು ತಮ್ಮ ಹೆಸರು, ಊರು, ಇಷ್ಟದೈವಗಳ ಅಂಕಿತಗಳನ್ನು ದಾಖಲಿಸಿದ್ದಾರಾದರೂ, ಯಕ್ಷಗಾನ ಕೃತಿಗಳು ಸಂಚಾರೀಗುಣವನ್ನು ಹೊಂದಿದವುಗಳಾದ್ದರಿಂದ ಈ ಅಂಕಿತ ವಿವರಗಳು ಊರಿಂದೂರಿಗೆ ಬದಲಾಗುತ್ತಿದ್ದು ಕವಿ ಚರಿತೆಯ ನಿರ್ಣಯಕ್ಕೆ ನಿಗಾ ವಹಿಸುವುದು ಅವಶ್ಯಕ. ಸರಸ್ವತಿಯ ಭಂಡಾರದ ಮುದ್ರೆಯನ್ನು ಒಡೆದೆವೆಂಬ ಹಮ್ಮು ತೋರಿದವರಲ್ಲ. ನಾವು ಹೊಸದೇನನ್ನು ಹೇಳುತ್ತಿಲ್ಲ. ಈಗಾಗಲೇ ಪೂರ್ವಸೂರಿಗಳು ಏನು ಹೇಳಿದ್ದಾರೊ, ಪುರಾಣಗಳು ಏನು ಸಾರಿವೆಯೋ ಅದನ್ನೇ ನಾವು ಯಕ್ಷಗಾನದಲ್ಲಿ ಅಭಿವ್ಯಕ್ತಿಸುತ್ತಿದ್ದೇವೆಂಬ ವಿನಯ ತೋರಿದವರು. ಪದವಿಟ್ಟಳುಪದೊಂದಗ್ಗಳಿಕೆ ಎಂಬ ಬಿಂಕ ತೋರದೆ, ನಾವು ಬಲ್ಲವರಲ್ಲ, ನಾವು ತಿಳಿದವರಲ್ಲ, ಯಾವ ತಪ್ಪಿದ್ದರೂ ತಿದ್ದಿಕೊಳ್ಳಬೇಕು ಎಂದು ತಿದ್ದುವ ಅಧಿಕಾರವನ್ನು ಬಲ್ಲಿದರಿಗೆ ಬಿಟ್ಟುಕೊಟ್ಟು ಸಜ್ಜನಿಕೆ ಮೆರೆದ ಸರಳ ಸಾತ್ವಿಕ ವಿನಯಶೀಲರು.

ಯಕ್ಷಗಾನದ ಕವಿಗಳು ಸ್ವತಃ ಭಾಗವತರು ಅಷ್ಟಿಷ್ಟು ಓದು ಬರಹ ಬಲ್ಲವರು, ಸಾಹಿತ್ಯ ಮತ್ತು ಸಂಗೀತ ಜ್ಞಾನ ಉಳ್ಳವರು, ಪುರಾಣಗಳ ಅರಿವಿದ್ದವರು. ರಾಮಾಯಣ-ಮಹಾಭಾರತಗಳನ್ನು ಬಲ್ಲವರು. ಹಳಗನ್ನಡ ಸಾಹಿತ್ಯ-ಸಂಸ್ಕೃತ ನಾಟಕಗಳನ್ನು ಓದಿಕೊಂಡವರು. ಗದುಗಿನ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇವರ ಅಚ್ಚುಮೆಚ್ಚಿನ ಕಾವ್ಯಗಳಾಗಿದ್ದವು. ಕುಮಾರವ್ಯಾಸ, ತೊರವೆ ಮತ್ತು ಜೈಮಿನಿ ಕವಿಗಳ ಸಂಪೂರ್ಣ ಪ್ರಭಾವಕ್ಕೆ ಒಳಗಾಗಿದ್ದವರು. ಹೊಸಗನ್ನಡದ ಅರುಣೋದಯ ಕಾಲದಲ್ಲಿನ್ನು ಹಳಗನ್ನಡ ಪ್ರೀತಿ ಮಾಸಿರಲಿಲ್ಲ. ಬಹುತೇಕ ಭಾಗವತರು ಓಚಯ್ಯಗಳು ಮತ್ತು ಪ್ರಾಥಮಿಕ ಶಾಲಾ ಮಾಸ್ತರರುಗಳಾಗಿದ್ದರು. ಇವರಲ್ಲಿ ಪಾಂಡಿತ್ಯ ಪ್ರದರ್ಶನದ ಉತ್ಕಟೇಚ್ಛೆ ಇದ್ದಿತು. ಹಳಗನ್ನಡ ಕಾವ್ಯಗಳ ಮೇಲಿನ ಮೋಹದಿಂದಾಗಿ ಶಬ್ದಾಡಂಬರ. ಪ್ರಾಸಾನುಪ್ರಾಸ, ಪದಗಳ ಅತಿಯಾದ ಬಳಕೆಯ ಬಗ್ಗೆ ವ್ಯಾಮೋಹ ಇದ್ದಿತು. ಇದಕ್ಕೆ ತಕ್ಕುದಾಗಿ ಅವರಿಗೆ ದೊರೆತದ್ದು ಯಕ್ಷಗಾನ ಕೃತಿರಚನೆ. ಗದುಗು, ತೊರವೆ, ಜೈಮಿನಿ, ರಾಮಾಯಣ-ಭಾರತ-ಭಾಗವತಗಳಿಂದ ಆಯ್ದ ಕಥಾ ಪ್ರಸಂಗಗಳನ್ನು ಯಕ್ಷಗಾನ ನಾಟಕಗಳನ್ನಾಗಿ ಪರಿವರ್ತಿಸುವಾಗ ತಮ್ಮೆಲ್ಲಾ ಪ್ರತಿಭಾಶಕ್ತಿಯನ್ನು ಅವುಗಳಲ್ಲಿ ಧಾರೆ ಎರೆದರು. ಪದ್ಯಗಳ ಬಗ್ಗೆ ಅಷ್ಟಾಗಿ ಒಲವು ತೋರದ ಈ ಕವಿಗಳು ಗದ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಹಳಗನ್ನಡ ಮತ್ತು ಸಂಸ್ಕೃತಭೂಯಿಷ್ಟವಾದ ಪದಗಳನ್ನು ಪ್ರಾಸಬದ್ಧವಾಗಿ, ಚಮತ್ಕಾರದಿಂದ ಕೂಡಿದ ಸಂಭಾಷಣೆಗಳನ್ನಾಗಿ ರೂಪಿಸಿದರು. ತಮ್ಮ ಅತಿಯಾದ ಮಾತುಗಾರಿಕೆಗೆ  ಆಡುಂಬೊಲವನ್ನಾಗಿಸಿ ಕೊಂಡರು. ಪರಿಣಾಮವಾಗಿ ಆಡುಮಾತುಗಳನ್ನು ಕತ್ತರಿಸಿ ಹೊಸೆದ ಪದ್ಯಗಳು  ಬಡಕಲಾದವು. ಪ್ರಾಸಬದ್ಧ ಮತ್ತು ಆಲಂಕಾರಿಕ ಮಾತುಗಳಿಂದ ಕೂಡಿದ ಸಂಭಾಷಣೆ ಮೇಲುಗೈ ಪಡೆಯಿತು.

ಪರಂಪರೆ ಮತ್ತು ಸಂಪ್ರದಾಯಗಳ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದ ಯಕ್ಷಗಾನ ಕವಿಗಳು ಆಯ್ಕೆ ಮಾಡಿಕೊಂಡ ವಸ್ತು ದುಷ್ಟಶಿಕ್ಷೆ : ಶಿಷ್ಟರಕ್ಷೆ ಎಂಬ ಸ್ಥಾಯೀ ಭಾವವನ್ನುಳ್ಳದ್ದು. ಭಗವಂತನ ಔನ್ನತ್ಯವನ್ನು ಸಾರುವಂಥದ್ದು; ದೈವಾರಾಧನೆಗೆ ಮೀಸಲಾದದ್ದು. ಅವರು ರಚಿಸಿದ್ದು, ರಚಿಸಿಕೊಂಡದ್ದು ಪಾಮರರಿಗೆ : ಪಂಡಿತ ಮಂಡಳಿಗಲ್ಲ. ಸೃಷ್ಟಿ ಏನಿದ್ದರೂ ಪ್ರದರ್ಶನಕ್ಕೆ ಮೀಸಲಾಗಿದೆ. ಯಕ್ಷಗಾನ ಕವಿ ಕಾವ್ಯ ರಚಿಸುವ ಶಬ್ದ ಸಂಪತ್ತಿನೊಂದಿಗೆ ಸಂಗೀತಜ್ಞಾನ ಉಳ್ಳವರೆಂದು ಧಾರಾಳವಾಗಿ ಹೇಳಬಹುದು. ಪದರಚನೆಯಲ್ಲೇ ಯಕ್ಷಗಾನದ ತಾಳ ಲಯ ರಾಗಕ್ಕೆ ಹೊಂದಿಸಿ ಬರೆದಿದ್ದಾರೆ. ಹಾಡುಗಾರಿಕೆಗೆ ಒಗ್ಗುವ ಛಂದಸ್ಸಿನಲ್ಲಿದೆ. ಪ್ರಾರಂಭಕ್ಕೆ ನಾಟಿ, ಬೆಳಗಿನ ಜಾವಕ್ಕೆ ಭೂಪಾಲ, ಮಂಗಳಕ್ಕೆ ಮಧ್ಯಮಾವತಿ, ದುಃಖಕ್ಕೆ ತೋಡಿ, ಕಲ್ಯಾಣಕ್ಕೆ ಕಲ್ಯಾಣಿ ಹೀಗೆ ಒಂದೊಂದು ರಾಗವನ್ನು ಬಳಸಿದ್ದಾರೆ. ಹಸ್ತಪ್ರತಿಯ ಕಾವ್ಯದ ಎಲ್ಲ ಪದ್ಯಗಳ ಮೇಲು ಅಲ್ಲಲ್ಲಿ ರಾಗ, ದರು, ಮಟ್ಟು ಎಂದು ಗುರುತು ಹಾಕಿ  ರಾಗದ ಹೆಸರನ್ನು ಸೂಚಿಸಿದ್ದಾರೆ. (ಜಯಚಂದ್ರರಾಜ ಅರಸು  : 1995) ಈ ಕವಿಗಳು ತಮ್ಮ ಪ್ರಸಂಗಗಳಲ್ಲಿ ಪ್ರಯೋಗಿಸಿರುವ ದ್ವಿಪದಿ, ತ್ರಿಪದಿ, ಸಾಂಗತ್ಯ, ಕಂದ, ಷಟ್ಪದಿ, ವೃತ್ತ ಮುಂತಾದ ದೇಶೀ ಛಂದೋ ಪ್ರಕಾರಗಳನ್ನು ಗಮನಿಸಿದರೆ ಇವರು ಪ್ರಾಚೀನ ಭಾಗವತ ಕವಿಗಳ ಪ್ರಭಾವಕ್ಕೆ ಒಳಗಾಗಿದ್ದರೆಂಬುದು ಸ್ಪಷ್ಟವಾಗುತ್ತದೆ.

ಪ್ರಸಂಗ ಎನ್ನವಂಥದ್ದು ಮೂಲಕಥೆಯಿಂದ ಆಯ್ದುಕೊಂಡ ಒಂದು ಸನ್ನಿವೇಶ ಇಲ್ಲವೆ ಕಥಾಭಾಗ. ಇದು ಸಾದ್ಯಂತವಾದುದಲ್ಲ. ಪೌರಾಣಿಕ ಕಥನ ಮಾಲಿಕೆಯಲ್ಲಿ ಯಾವುದೇ ಒಂದು ಸಂದರ್ಭ ಇಲ್ಲವೆ ಘಟನೆಯೊಂದನ್ನು ಕೇಂದ್ರವಾಗಿರಿಸಿಕೊಂಡು ಅದರ ವೃತ್ತಾಂತವನ್ನು ಹೇಳಲು ಹೊರಟಂತಹ ರೂಪಕ. ಅಂದರೆ ಕಿರಿದಾದ ಕಥಾವಸ್ತುವನ್ನು ಒಂದು ನಾಟಕೀಯ ಚೌಕಟ್ಟಿಗೆ ಅಳವಡಿಸುವ ಪ್ರಯತ್ನವನ್ನು ಯಕ್ಷಗಾನ ಕವಿಗಳು ಸಮರ್ಥವಾಗಿ ಕೈಗೊಂಡಿದ್ದಾರೆ. ಪ್ರಸಂಗ ಕೃತಿ ಮೂಲತಃ ಒಂದು ಗೀತರೂಪಕ. ಆದರೆ ಉದ್ದೇಶ ಸರಸ ಸಂಭಾಷಣೆಯಿಂದ ಕೂಡಿದ ಸೊಗಸಾದ ರಂಗಪ್ರದರ್ಶನವನ್ನು ಏರ್ಪಡಿಸುವುದು. ಕಥಾವಸ್ತು ಕಿರಿದಾದರೂ ಅದನ್ನು ವಿವರವಾಗಿ ನೋಡುವ ಯತ್ನವೂ ಇಲ್ಲಿದೆ. ಸಾಮಾನ್ಯ ಸಂಬಾರವಸ್ತುಗಳನ್ನು ಬಳಸಿಯೂ ಅದ್ಭುತ ಅಡುಗೆ ಸಿದ್ಧಮಾಡಿ ಸೊಗಸಾಗಿ ಬಡಿಸಬಲ್ಲ ಮಾತಿನ ಚತುರ ಬಾಣಸಿಗರು ಈ ಯಕ್ಷಗಾನ ಕವಿಗಳು. ಆದ್ದರಿಂದಲೇ ಇಲ್ಲಿ ಜನರ ನಿತ್ಯ ಮಾತುಕತೆಯ ಚತುರೋಕ್ತಿಗಳು, ಗಾದೆ ಮಾತುಗಳೂ ಪದದ ಚರಣಗಳಾಗುತ್ತವೆ. ಯಾವುದೇ ಕ್ಷಣದ ಉದ್ಗಾರಕ್ಕೂ ಎತ್ತುಗಡೆ ಮಾಡಬಹುದಾದ ಸೊಲ್ಲುಗಳು ಯಕ್ಷಗಾನ ಪ್ರಸಂಗಗಳಲ್ಲಿ ಧಾರಾಳ ಇವೆ. (ಡಾ. ರಾಘವ ನಂಬಿಯಾರ್).

ಲಭ್ಯವಿರುವ ಹಸ್ತಪ್ರತಿಗಳನ್ನು ಗಮನಿಸಿದಾಗ ಮೂಡಲಪಾಯ ಯಕ್ಷಗಾನದ ಕವಿಗಳು ಕ್ರಿ.ಶ. 1850 ರಿಂದೀಚೆಗೆ ಹೆಚ್ಚಾಗಿ ಕಂಡುಬರುತ್ತಾರೆ. ವಾಗ್ರೂಢಿಯಲ್ಲಿದ್ದ ಪ್ರಸಂಗಗಳು ಅಕ್ಷರರೂಪಕ್ಕಿಳಿದ ಕಾಲ ಇದಾಗಿದ್ದಿರಬಹುದೆಂದು ಊಹಿಸಬಹುದಾಗಿದೆ. ಕೆಂಪಣ್ಣಗೌಡನಿಂದ ಹಿಡಿದು ಅಳಿಯ ಲಿಂಗರಾಜ, ಪಾರ್ತಿಸುಬ್ಬ, ಮುದ್ದಣ್ಣ ಮೊದಲಾದವರವರೆಗೆ ಪ್ರಮುಖ ಕವಿಗಳು ಯಕ್ಷಗಾನ ರಚನೆ ಮಾಡಿರುವುದು ಕಂಡುಬರುತ್ತದೆ. ಇತ್ತೀಚಿನ ಯಕ್ಷಗಾನಗಳನ್ನು ಬಿಟ್ಟರೆ ಪ್ರಾಚೀನ ಪರಂಪರೆಗೆ ಸೇರುವ  ಯಕ್ಷಗಾನಗಳೇ 500ಕ್ಕೂ ಹೆಚ್ಚಾಗಿ ಆಗಬಹುದು. ಮೂಡಲಪಾಯ ಕ್ಷೇತ್ರದಲ್ಲಿ ನೂರಾರು ಕಾಗದದ ಹಸ್ತಪ್ರತಿಗಳು, ವಿರಳವಾಗಿ ಓಲೆಗರಿಯ ಗ್ರಂಥಗಳೂ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಲಭ್ಯವಾಗುತ್ತವೆ. ತುಂಬ ಹಳೆಯ ಹಸ್ತಪ್ರತಿಗಳು ಕರಾವಳಿಯ ಪಠ್ಯಗಳಂತೆಯೇ ಶುದ್ಧ ಹಾಡುಗಬ್ಬಗಳು. ಆದರೆ ಬಹುಮಟ್ಟಿನ ಹಸ್ತಪ್ರತಿಗಳಲ್ಲಿ ಸಂಭಾಷಣೆಯನ್ನು ಸೇರಿಸಿ ನಾಟಕಗಳನ್ನಾಗಿ ಪರಿವರ್ತಿಸಿಕೊಂಡಿರುವುದನ್ನು ವಿಶೇಷವಾಗಿ ಕಾಣಬಹುದು. ಪಾತ್ರಧಾರಿ ಅವಿದ್ಯಾವಂತನಾಗಿದ್ದುದರಿಂದ ಈ ಮಾತುಗಳನ್ನು ಕಂಠಪಾಠ ಮಾಡಿಕೊಂಡು ಮಾತಾಡುವ ಪರಿಸ್ಥಿತಿ ಇಲ್ಲಿ ಉಳಿದು ಬಂತು. ಈ ಕಾವ್ಯಗಳ ಪ್ರಾಚೀನತೆ ಎಷ್ಟು ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೆ ಈಗ ಉಪಲಬ್ಧವಿರುವ ಕೆಂಪಣ್ಣಗೌಡನ ಯಕ್ಷಗಾನ ಕಾವ್ಯಗಳೇ ಹೆಚ್ಚು ಪ್ರಾಚೀನ ಎಂಬುದನ್ನು ವಿದ್ವಾಂಸರು ಸಾಧಿಸಿ ತೋರಿಸಿದ್ದಾರೆ. (ಜೀ.ಶಂ. ಪರಮಶಿವಯ್ಯ).

ಕರಾವಳಿ ಯಕ್ಷಗಾನ ಪ್ರಸಂಗಗಳನ್ನು ಉಡುಪಿಯ ಶ್ರೀಕೃಷ್ಣ ಛಾಪಖಾನೆ ಮತ್ತು ಬೆಂಗಳೂರು ಹಾಗೂ ಬಳ್ಳಾರಿ ಪ್ರಕಾಶಕರು ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಚ್ಚುಮಾಡಿ ಓದುಗರು, ಯಕ್ಷಗಾನ ಪ್ರಿಯರುಗಳಿಗೆ ಉಳಿಸಿಕೊಟ್ಟಿದ್ದಾರೆ. ಆದರೆ ಓದು ಬರಹ ಬಲ್ಲ ಗ್ರಾಮೀಣ ಭಾಗವತರು ಬರೆದಿಟ್ಟ ಮೂಡಲಪಾಯ ಯಕ್ಷಗಾನ ಪ್ರಸಂಗಗಳು ಯಾವುದೇ ಮಠ-ಮಾನ್ಯಗಳನ್ನಾಗಲಿ, ದೇಗುಲಗಳ ಭಂಡಾರವನ್ನಾಗಲಿ, ಮೇಲುವರ್ಗದವರ ಸಂಗ್ರಹವನ್ನಾಗಲಿ ಸೇರುವ ಸಾಧ್ಯತೆಗಳಿಂದ ವಂಚಿತವಾದುದರಿಂದ ಭಾಗವತರ ಮನೆಗಳ ಅಟ್ಟಗಳಲ್ಲಿ ಅಡಗಿ ಕುಳಿತವು. ಜೀರ್ಣಗೊಂಡವು. ಹಸಿದ ಒಲೆಗಳಿಗೆ ಆಹಾರವಾದವು. ಗ್ರಾಮಾಂತರ ಪ್ರದೇಶಗಳಲ್ಲಿ ಇವುಗಳ ಮಹತ್ವದ ಅರಿವಿಲ್ಲದ ಕಾರಣ ಸಂರಕ್ಷಣೆ ಸಾಧ್ಯವಿಲ್ಲದೆ ನೂರಾರು ಪ್ರಸಂಗಗಳು ಕಣ್ಮರೆಯಾಗಿ ಹೋದವು. ಇತ್ತೀಚೆಗೆ, ಪ್ರೊ. ಜೀ.ಶಂ. ಪರಮಶಿವಯ್ಯನವರ ಪ್ರಯತ್ನದ ಫಲವಾಗಿ ಒಂದಿಷ್ಟು ಹಸ್ತಪ್ರತಿಗಳು, ಓಲೆಗರಿ ಪ್ರತಿಗಳ ಸಂಗ್ರಹಣೆ ಸಾಧ್ಯವಾಗಿದೆಯಾದರೂ ಅಚ್ಚಿನ ಮುಖ ಕಂಡಿರುವುದಿಲ್ಲ.

ಕನ್ನಡದಲ್ಲಿ ಉಪಲಬ್ಧವಿರುವ ಯಕ್ಷಗಾನ ಹಸ್ತಪ್ರತಿಗಳಿಗೆ ಸಂಬಂಧಿಸಿದಂತೆ ಕರಿರಾಯ ಚರಿತ್ರೆ ಅತ್ಯಂತ ಪ್ರಾಚೀನವಾದ ಹಸ್ತಪ್ರತಿ. ಇದನ್ನು ಓಲೆಯಲ್ಲಿ ಬರೆಯಲಾಗಿದೆ. ಕರಿರಾಯ ಚರಿತ್ರೆಯನ್ನು ಬರೆದ ಕವಿ  ಕೆಂಪಣ್ಣಗೌಡ ಎಂಬುವನು. ಕರಿರಾಯ ಚರಿತ್ರೆಯ ಕೊನೆಯಲ್ಲಿ ದುರ್ಮತಿ ಸಂವತ್ಸರದ ಜೇಷ್ಠ ಬಹುಳ ಬುಧವಾರ ಮಧ್ಯಾಹ್ನದ ಕಾಲದ ವಳಗೆ ಸಂಪೂರ್ಣ ಎಂದಿದೆ. ಇದು ಕ್ರಿ.ಶ. 1480ಕ್ಕೆ ಸರಿಹೊಂದುತ್ತದೆ. ಈ ಕಾಲದ ಉಲ್ಲೇಖ ಹಸ್ತಪ್ರತಿಯ ಕೊನೆಯ ಗದ್ಯದಲ್ಲಿ ಇರುವುದರಿಂದ, ಇದು ಯಾವನೇ ಲಿಪಿಕಾರ ಕರಿರಾಯ ಚರಿತ್ರೆಯನ್ನು ಪ್ರತಿಮಾಡಿ ಮುಗಿಸಿದ ಕಾಲ ಎಂಬುದರಲ್ಲಿ ಸಂಶಯವಿಲ್ಲ. ಆದುದರಿಂದ ಕೆಂಪಣ್ಣಗೌಡನ ಕರಿರಾಯ ಚರಿತ್ರೆ 1480ರ ಹೊತ್ತಿಗೆ ರಚಿತವಾಗಿ ಜನಪ್ರಿಯವಾಗಿತ್ತೆಂದು ತಿಳಿಯಬಹುದಾಗಿದೆ. ಇದರಿಂದ ಕೆಂಪಣ್ಣಗೌಡ 15ನೆಯ ಶತಮಾನದ ಕವಿ ಎಂಬುದು ಖಚಿತವಾಗುತ್ತದೆ (ಹ.ಕ. ರಾಜೇಗೌಡ).

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಲೋಕಪಾವನಿ ನದಿಯ ದಡದಲ್ಲಿರುವ ಅಂದೇನಹಳ್ಳಿಯ ಜೀರಿಗೆ ಕೆಂಪಯ್ಯನವರ ಮಗ ಓದೋ ಕೆಂಪಯ್ಯ ಮತ್ತು ತಿಮ್ಮಾಂಬೆಯ ಮಗ ಕೆಂಪಣ್ಣಗೌಡ ಕರಿರಾಯ ಚರಿತ್ರೆಯ ಜೊತೆಗೆ ನಳ ಚರಿತ್ರೆ ಮತ್ತು ಶನಿಮಹಾತ್ಮೆ ಎಂಬ ಮತ್ತೆರಡು ಯಕ್ಷಗಾನ ಕಾವ್ಯಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾನೆ. ಹರ-ಹರಿ ಮತ್ತು ಶನಿಯ ಕೃಪೆಯಿಂದ ಈ ಕಾವ್ಯಗಳನ್ನು ರಚಿಸಿದನೆಂದು ಹೇಳಿಕೊಳ್ಳುವ ಪರಮ ದೈವಭಕ್ತ ಕೆಂಪಣ್ಣಗೌಡನ ಈ ಮೂರು ಯಕ್ಷಗಾನ ಕಾವ್ಯಗಳನ್ನುಳಿದು ಕನ್ನಡದಲ್ಲಿ ಮತ್ತಾವ ಯಕ್ಷಗಾನ ಕಾವ್ಯಗಳೂ ದೊರೆತಿಲ್ಲವೆಂದು ಸಂಶೋಧಕರಾದ ಶ್ರೀ ಹ.ಕ. ರಾಜೇಗೌಡರು ಸ್ಪಷ್ಟಪಡಿಸಿದ್ದಾರೆ. ಕೆಂಪಣ್ಣಗೌಡನ ಕರಿರಾಯ ಚರಿತ್ರೆ ಕಾವ್ಯವನ್ನು ವೀರನಗೆರೆಯ ಪುಟ್ಟಣ್ಣ ಕರೇಭಂಟನ ಕಾಳಗ ಎಂಬ ಹೆಸರಿನಲ್ಲಿ ಯಕ್ಷಗಾನ ನಾಟಕವನ್ನಾಗಿ ರೂಪಾಂತರಿಸಿದನು. ಈ ಯಕ್ಷಗಾನ ಪ್ರಸಂಗವು ಎಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿತೆಂದರೆ ಮುಂದೆ ಬಂದ ಸುಮಾರು 18ಕ್ಕೂ ಹೆಚ್ಚು ಮಂದಿ ಯಕ್ಷಗಾನ ಕವಿಗಳು ಕರಿರಾಯ ಚರಿತ್ರೆಯನ್ನು ಪ್ರಸಂಗವನ್ನಾಗಿ ರೂಪಾಂತರಿಸಿರುತ್ತಾರೆ.

ಕೆಂಪಣ್ಣಗೌಡನ ನಂತರ ಕಂಡುಬರುವ ಮತ್ತೋರ್ವ ಮೂಡಲಪಾಯ ಯಕ್ಷಗಾನ ಕವಿ ಕಸ್ತೂರಿ ಸಿದ್ಧ. ಕ್ರಿ.ಶ. 1600 ಕ್ಕಿಂತಲೂ ಹಿಂದಿನದೆಂದು ಊಹಿಸಬಹುದಾದ ಚೋರಕಥೆ ಅಥವಾ ಸೋಮಶೇಖರ ಯಕ್ಷಗಾನದ ಕರ್ತೃ. ತಂದೆ ಕಸ್ತೂರಿ ನಾಗಣ್ಣ ಮತ್ತು ತಾಯಿ ಗುರುವಮ್ಮ. ಮಲ್ಲಿಕಾರ್ಜುನರಾಯನೆಂಬ ಕವಿಯು ಕಸ್ತೂರಿಸಿದ್ಧನ ಚೋರಕಥೆಯ ವಸ್ತುವನ್ನು ಬಳಸಿಕೊಂಡು ಕ್ರಿ.ಶ. 1600ರಲ್ಲಿ  ತ್ರಿಪದಿ ಛಂದೋರೂಪದಲ್ಲಿ ಚೋರಕಥೆ ಎಂಬ ಕಾವ್ಯವನ್ನು ರಚಿಸಿದ್ದಾನೆ. 17ನೆಯ ಶತಮಾನದಲ್ಲಿ ಕೆಳದಿಯ ರಾಜರ ಆಶ್ರಯದಲ್ಲಿ ಬಾಳಿ ಬದುಕಿದ್ದ ಕೆಳದಿಯ ಲಿಂಗಣ್ಣ ಕವಿಯು ಶಿವಕಲ್ಯಾಣ ಎಂಬ ಯಕ್ಷಗಾನ ಕಾವ್ಯವನ್ನು, ಲಿಂಗಣ್ಣ ಕವಿಯ ಮೊಮ್ಮಗನಾದ ಕೆಳದಿಯ ಸುಬ್ಬ (ಕ್ರಿ.ಶ. 1760) ರುಕ್ಮಿಣೀ ಸ್ವಯಂವರ, ಪಾರಿಜಾತ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ರಚಿಸಿರುತ್ತಾರೆ. ಇದೇ ಅವಧಿಯಲ್ಲಿ ಎಂದರೆ ಕ್ರಿ.ಶ. 1797ರಲ್ಲಿದ್ದ ಕಾಸರಗೋಡು ತಾಲ್ಲೂಕಿನ ಕುಂಬಳೆ ಗ್ರಾಮದ ಪಾರ್ತಿಸುಬ್ಬನದು ಕರಾವಳಿ ಯಕ್ಷಗಾನ ಚರಿತ್ರೆಯಲ್ಲಿ ಗಣನೀಯವಾದ ಹೆಸರು. ತುಳು ನಾಡಿನಲ್ಲಿ ಯಕ್ಷಗಾನವನ್ನು ಪರಿಚಯಿಸಿದ, ಪ್ರಯೋಗಿಸಿದ, ಪ್ರಚುರಪಡಿಸಿದ ಯಶಸ್ಸು ಪಾರ್ತಿಸುಬ್ಬನಿಗೆ ಸಲ್ಲುತ್ತದೆ. ಭಾಗವತ ಪರಂಪರೆಗೆ ಸೇರಿದ ಸುಬ್ಬ ಸಭಾಲಕ್ಷಣವೆಂಬ ಯಕ್ಷಗಾನ ಲಾಕ್ಷಣಿಕ ಗ್ರಂಥವನ್ನು ರಚಿಸಿರುವುದಲ್ಲದೆ ಐರಾವತ, ಪುತ್ರಕಾಮೇಷ್ಟಿ, ವಾಲಿ ಸುಗ್ರೀವರ ಕಾಳಗ, ಸೇತು ಬಂಧನ, ಅಂಗದ ಸಂಧಾನ, ಕುಶಲವರ ಕಾಳಗ ಇವೇ ಮೊದಲಾದ ಯಕ್ಷಗಾನ ಪ್ರಸಂಗಗಳನ್ನು ರಚಿಸಿರುತ್ತಾನೆ. ಕ್ರಿ.ಶ. 1823-74ರ ಅವಧಿಯಲ್ಲಿ ಅಳಿಯ ಲಿಂಗರಾಜನು ಸೋಮಶೇಖರ-ಚಿತ್ರಶೇಖರ ಕಥೆ ಎಂಬ ಯಕ್ಷಗಾನ ಪ್ರಸಂಗವನ್ನು ರಚಿಸಿರುತ್ತಾನೆ. ಲಿಂಗರಾಜನ ನಂತರ ಮೂಡಲಪಾಯ ಯಕ್ಷಗಾನದಲ್ಲಿ ನೂರಾರು ಮಂದಿ ಕವಿಗಳು ಆಗಿಹೋಗಿದ್ದಾರೆ.

18ನೆಯ ಶತಮಾನದಲ್ಲಿದ್ದ ಭಾಳಾಕ್ಷ, ಸಂಕಯ್ಯ ಭಾಗವತ (ಕ್ರಿ.ಶ. 1880) ಸಗರ ಕುಂಟಾರಾಮಾಚಾರ‌್ಯ ಸಿಂಗಾ ಜೋಯಿಸ್ (ಸು. 1880) ಬಾಗೇವಾಡಿ ವೀರಭದ್ರಶಾಸ್ತ್ರಿ (ಸು. 1885-1977) ನೇಸರಗಿ ಬಸವಣ್ಣೆಪ್ಪ (1891-1971) ಕಂಪ್ಲಿ ಗುರುಸಿದ್ಧ, ನಲವಡಿ ಶ್ರೀಕಂಠಶಾಸ್ತ್ರಿ (1887-1972) ಕುರಗೋಡು ದೊಡ್ಡಯ್ಯ (ಸು. 1900) ದೊಡ್ಡಬಳ್ಳಾಪುರದ ತಿರುವೆಂಗಡ ಜೀಯರ್ (1943) ಎಚ್.ಎಸ್. ಸುಬ್ಬರಾಯಪ್ಪ ಪುಂಡಿ ಗುರುಶಾಂತಪ್ಪ (1970) ಸಾಲಂಕಿ ಮಠದ ಗುರುಬಸವಯ್ಯ (1890-1974), ಗೋವಿಂದದಾಸ, ಅಣ್ಣಿಗೇರಿ ವೀರಬಸಪ್ಪ, ಹಲುವಾಗಲು ದೇವೇಂದ್ರಪ್ಪ (1922) ಕಲಘಟಗಿ ಶಿವಪ್ಪಸೆಟ್ಟಿ (1910) ಹೀಗೆ ಅನೇಕಾನೇಕ ಮೂಡಲಪಾಯ ದೊಡ್ಡಾಟದ ಯಕ್ಷಗಾನ ಕವಿಗಳಿದ್ದಾರೆ. ಆದರೆ ಸಮರ್ಪಕ ದಾಖಲಾತಿಯ ಕೊರತೆಯಿಂದಾಗಿ ಕವಿಗಳ ವಿವರಗಳು ಲಭ್ಯವಾಗುವುದಿಲ್ಲ. ಅಲ್ಲದೆ ಯಕ್ಷಗಾನ ಕೃತಿಗಳಲ್ಲಿಯೂ ಸಹ ಕಾಲ, ದೇಶ, ಅಂಕಿತಗಳಿಲ್ಲದೆ ಕವಿ ಅಜ್ಞಾತವಾಗಿ ಉಳಿದುಹೋಗಿದ್ದಾನೆ. ಯಕ್ಷಗಾನ ಕಾವ್ಯಗಳು ಓದಲು ಅನರ್ಹವಾದವುಗಳೆಂಬ ತಿರಸ್ಕಾರ ಭಾವನೆ ಪಂಡಿತ ಕವಿಗಳಲ್ಲಿ ಮನೆ ಮಾಡಿದ್ದುದರಿಂದ ಮುಂದೆ ಬಂದ ಯಾರೊಬ್ಬರೂ ತಮ್ಮ ಕೃತಿಗಳಲ್ಲಿ ಯಕ್ಷಗಾನ ಕವಿಗಳನ್ನು ಹೆಸರಿಸದಿರುವುದೂ ಸಹ ದಾಖಲಾತಿಯ ಕೊರತೆಗೆ ಕಾರಣವಾಗಿರುತ್ತದೆ. ಸಾಹಿತ್ಯ ಚರಿತ್ರೆಕಾರರೂ ಸಹ ಇದೇ ನಿರ್ಲಕ್ಷ್ಯವನ್ನು ಮುಂದುವರಿಸಿದರು. ಸಮಾಧಾನಕರ ಸಂಗತಿ ಎಂದರೆ ಕರಾವಳಿ ಯಕ್ಷಗಾನ ಚರಿತ್ರೆಯಲ್ಲಿ ಇದು ಸಂಭವಿಸಿರುವುದಿಲ್ಲ. ಅಲ್ಲಿನ ಕವಿಗಳ ಹೆಸರು ಬಹುಮಟ್ಟಿಗೆ ಲಭ್ಯವಿದೆ.

ದಕ್ಷಿಣ ಕರ್ನಾಟಕದ ಮೂಡಲಪಾಯ ಯಕ್ಷಗಾನ ಪ್ರಸಂಗಗಳಲ್ಲಿ ಮುಖ್ಯವಾದವುಗಳನ್ನು ಕೆಳಕಂಡಂತೆ ಪಟ್ಟಿ ಮಾಡಬಹುದು :

1.    ಕರ್ಣಾರ್ಜುನರ ಕಾಳಗ
2.    ಲವಕುಶರ ಕಾಳಗ
3.    ಕರೆಬಂಟನ ಕಾಳಗ
4.    ಬಭ್ರುವಾಹನ ಕಾಳಗ
5.    ಅರ್ಜುನ ತಾಮ್ರಧ್ವಜರ ಕಾಳಗ
6.    ಕೃಷ್ಣಾರ್ಜುನರ ಕಾಳಗ
7.    ಸುಧನ್ವ ಕಾಳಗ
8.    ಅಭಿಮನ್ಯು ಕಾಳಗ
9.    ದುಶ್ಯಾಸನ ಕಾಳಗ
10.    ಘತೋತ್ಕಚನ ಕಾಳಗ
11.    ಇಂದ್ರಜಿತು ಕಾಳಗ
12.    ಜಲಂಧರನ ಕಾಳಗ
13.    ಅಹಿರಾವಣ ಮಹಿರಾವಣ ಕಾಳಗ
14.    ಕಂಸವಧೆ
15.    ಜರಾಸಂಧ ವಧೆ
16.    ಸುದರ್ವಣ ವಧೆ
17.    ತ್ರಿಪುರ ಸಂಹಾರ
18.    ರಕ್ತಬೀಜಾಸುರ ಸಂಹಾರ
19.    ಸುಭದ್ರಾ ಪರಿಣಯ
20.    ಸುವರ್ಣಾದೇವಿ ಪರಿಣಯ
21.    ಸ್ವಾಹಾದೇವಿ ಪರಿಣಯ
22.    ರತಿ ಕಲ್ಯಾಣ
23.    ರತ್ನಾವತಿ ಕಲ್ಯಾಣ
24.    ಗಿರಿಜಾ ಕಲ್ಯಾಣ
25.    ದ್ರೌಪದೀ ಸ್ವಯಂವರ
26.    ಸೀತಾ ಸ್ವಯಂವರ
27.    ರುಕ್ಮಿಣಿ ಕಲ್ಯಾಣ
28.    ವಿರಾಟ ಪರ್ವ
29.    ಕರ್ಣ ಪರ್ವ
30.    ಕೃಷ್ಣ ಸಂಧಾನ
31.    ಭೀಷ್ಮ ವಿಜಯ
32.    ಗದಾ ಪರ್ವ
33.    ಶಲ್ಯ ಪರ್ವ
34.    ಪಾಂಡವ ವಿಜಯ
35.    ರಾಜಸೂಯ
36.    ಸುಂದರಕಾಂಡ
37.    ಹನುಮದ್ವಿಜಯ
38.    ಸೀತಾ ವಿಜಯ
39.    ಐರಾವತ
40.    ಬಾಣಾಸುರ ಕಥೆ
41.    ಮೈರಾವಣ ಕಥೆ
42.    ಚೋರಕಥೆ
43.    ಕುಮಾರರಾಮನ ಕಥೆ
44.    ಸಾರಂಗಧರ
45.    ಪ್ರಹ್ಲಾದ ಚರಿತ್ರೆ
46.    ಸೇತುಬಂಧನ
47.    ದೈವ ಚರಿತ್ರೆ

ಈ ಪಟ್ಟಿಯು ಇನ್ನೂ ಬೆಳೆಯುತ್ತಾ ಹೋಗುತ್ತಾದಾದರೂ, ಜನಪ್ರಿಯವಾಗಿದ್ದು ಮೇಲಿಂದ ಮೇಲೆ ಪ್ರದರ್ಶಿಸುವಂತಹ ಪ್ರಸಂಗಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ.

  * * *