ನನಗೆ ಹತ್ತೊಂಬತ್ತು ವರ್ಷ. ಹುಟ್ಟಿದ್ದು ಬೆಳೆದಿದ್ದು ಹಣವಂತರ ಮನೆಯಲ್ಲಿ ನನಗೆ ಏನೂ ಕಡಿಮೆಯಿಲ್ಲ. ಆದರೂ ನನ್ನಲ್ಲಿ ನೆಮ್ಮದಿಯಿಲ್ಲ. ನಾನು ಮೊದಲು ನನ್ನದೇ ದೃಷ್ಟಿಯಿಂದ ಎಲ್ಲವನ್ನೂ ನೋಡುತ್ತಿದ್ದೆ. ಎಲ್ಲ ಸುಂದರವಾಗಿ ಕಾಣಿಸಿತು. ಅವಾಗ ನಾನು ಕೆಲಸು ಸಲ ಹೇಳುತ್ತಿದ್ದೆ, ಅದೃಷ್ಟ ಮಾಡಿರಬೇಕು ನಮ್ಮ ಮನೆಯಲ್ಲಿ ಹುಟ್ಟಲು ಎಂದು. ಆವಾಗ ನಾನು ಓದುತ್ತಿದ್ದೆ. ನನಗೆ ಓದಲು ಇಷ್ಟ. ಆದರೆ ಮನೆಯಲ್ಲಿ ಓದಿಸಲಿಲ್ಲ. ಆವಾಗ ನಾನು ತಂದೆ -ತಾಯಿಗಳ ಜೊತೆ ಸಂಬಂಧಿಕರ ಮನೆಗೆ ಹೋಗುತ್ತಿದ್ದೆ. ಅಲ್ಲಿ ಅವರ ನಡವಳಿಕೆ ಮಾತು ಕೇಳಿದಾಗ ಅಳು ಬಂತು. ಕೆಲವು ಸಲ ನಿದ್ದೆ ಊಟವಿಲ್ಲದೆ ಜ್ವರದಿಂದ ನರಳುತ್ತಿದ್ದೇನೆ. ಕಾರಣ ಈ ಆಸ್ತಿ ಒಂದು ರೀತಿ ಮೋಸದಿಂದ ಕೂಡಿದೆ. ಬಡವರು ಏನು ಹೇಳಿದರೂ ಕೇಳಿಸೋಲ್ಲ. ಇದನ್ನೆಲ್ಲ ಕೇಳಿದಾಗ ಜೀವನದಲ್ಲಿ ಬೇಸರವಾಯಿತು. ಮೊದಲಿನ ನಗು, ಮಾತು ಎಲ್ಲ ದೂರವಾಗಿ ಒಂಟಿ ಇರಲು ಇಷ್ಟಪಡುತ್ತೇನೆ. ನನಗೆ ಮೊದಲಿನಿಂದಲೂ ನೀರು, ಬೆಟ್ಟ ಹೂವು, ಗಿಡಗಳ ಬಗ್ಗೆ ತುಂಬ ಆಸೆ, ಒಂಟಿತನ ಇಷ್ಟ. ಗಲಾಟೆ ಆಗೋಲ್ಲ. ಆದರೆ ಇವೆಲ್ಲ ವಿರುದ್ಧ ನಮ್ಮ ಮನೆಯಲ್ಲಿ. ಇದರಿಂದ ನನಗೆ ತುಂಬಾ ಬೇಸರ, ಯಾವುದರ ಬಗ್ಗೆಯೂ ಮನಸ್ಸು ಒಪ್ಪಲ್ಲ, ಕೆಲವು ಸಲ ಬೇರೆಯವರನ್ನು ಹೋಲಿಸಿ ನೋಡಿದಾಗ ನಾನು ಏಕೆ ನೆಮ್ಮದಿಯಿಂದ ಇವರ ಹಾಗೆ ಬಾಳಲು ಆಗಲ್ಲ ಎನ್ನುವ ಪ್ರಶ್ನೆ ಕಾಡುತ್ತದೆ. ನನ್ನ ಆಸೆಗಳಿಗೆ ತುಂಬಾ ಗಾಯ ಮಾಡಿದ್ದಾರೆ. ನಾನು ನೆಮ್ಮದಿಯಿಂದ ಇರಲು ಇಷ್ಟಪಡ್ತೀನಿ. ನಾನು ಏನು ಮಾಡಬೇಕು? ಎರಡು ವರ್ಷದಿಂದ ನಾನು ಹೀಗೆ ನರಳುತ್ತಿದ್ದೇನೆ.

ನಮ್ಮೆಲ್ಲರ ವ್ಯಕ್ತಿತ್ವ ನಮ್ಮ ನಮ್ಮ ಬಾಲ್ಯ ಪರಿಸರ, ತಂದೆ – ತಾಯಿಗಳು ನಮಗಿತ್ತ ಮಾದರಿ, ನಾವು ಬೆಳೆದ ವಾತಾವರಣ, ಕಲಿತ ಶಾಲೆ, ಒಡನಾಡಿದ ಸಹಪಾಠಿಗಳು, ವಿದ್ಯಾಭ್ಯಾಸ ನೀಡಿದ ಶಿಕ್ಷಕರು, ಆಡಿದ ಆಟ, ಮಾಡಿದ ಜಗಳ ಈ ರೀತಿಯ ಹಲವಾರು ಘಟನೆಗಳ ಮೇಲೆ ಅವಲಂಬಿತವಾಗಿರುತ್ತದೆ.  ನಮ್ಮ ಮನಸ್ಸಿಗೆ ಇಷ್ಟವಾದ ರೀತಿಯಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ನಾವು ತಿಳಿದಷ್ಟು ಸುಲಭವಲ್ಲ ಎಂಬುದನ್ನು ಮನವರಿಕೆ ಮಾಡಿಸಲು ಈ ಪೀಠಿಕೆಯನ್ನು ನೀಡಿದ್ದೇನೆ. ಮೇಲಾಗಿ ನಮ್ಮ ನಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಅನುವಂಶಿಕತೆಯ ಪಾತ್ರವೂ ಹಿರಿಯದು. ನಿಮ್ಮ ಈ ಏಕಾಂಗಿತನದ ಅಂತರ್ಮುಖಿ ಸ್ಥಿತಿಯನ್ನು ನಾವು ಸ್ಕಿಝಾಯಡ್ ಪರ್ಸಾನಾಲಿಟಿ ಎಂದು ಕರೆಯುತ್ತೇವೆ. ಇದು ಕಾಯಿಲೆಯೇನಲ್ಲ. ಆದರೆ ಮುಂದೆ ತೀವ್ರ ಮಾನಸಿಕ ಆಘಾತಕರ ಸನ್ನಿವೇಶಗಳು ಎದುರಾದಾಗ ಇಚ್ಛಿತ್ತ ವಿಕಲತೆಯಿಂದ ನರಳುವ ಸಾಧ್ಯತೆಯುಂಟು. ಆದ್ದರಿಂದ ಈ ನಿಮ್ಮ ಅಂತರ್ಮುಖಿ ವ್ಯಕ್ತಿತ್ವದಿಂದ ಹೊರಬನ್ನಿ.

ಪರಿಪೂರ್ಣ ವ್ಯಕ್ತಿತ್ವದ ಮಾದರಿಯೆಂದರೆ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ, ಪ್ರತಿಯೊಂದು ಸನ್ನಿವೇಶಕ್ಕೂ ಸಹಜವಾಗಿ, ಸರಳವಾಗಿ ಸ್ಪಂದಿಸುವ ಕಲೆ, ಯಾವುದೇ ವಿಷಯದ ಬಗ್ಗೆ ವಿಚಾರಪೂರಕವಾಗಿ ಯೋಚಿಸುವ ಸಾಧ್ಯತೆ. ಯಾವುದೇ ನಿರ್ದಿಷ್ಟ ಉದ್ದೇಶಗಳನ್ನಿಟ್ಟುಕೊಂಡು ಕಾರ್ಯಪ್ರವೃತ್ತರಾಗುವ ಸಿದ್ಧತೆ ಮತ್ತು ಕೊಟ್ಟ ಯಾವುದೇ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಾಮರ್ಥ್ಯ ವ್ಯಕ್ತಿಯನ್ನು ಪರಿಪೂರ್ಣತೆಯೆಡೆಗೆ ಸಾಗಿಸುತ್ತದೆ. ಮತ್ತು ನಮ್ಮ ನಡುವಳಿಕೆಯನ್ನು ಗುರಿಯತ್ತ ಸಾಗಿಸುವ ನಡುವಳಿಕೆಯಾಗಿಸುತ್ತದೆ. (ಗೋಲ್ ಓರಿಯಂಟೆಡ್ ಬಿಹೇವಿಯರ‍್) ನೀವು ಅಥ್ಲೆಟಿಕ್ಸ್ ಪಂದ್ಯಗಳಲ್ಲಿ ಗಮನಿಸಬಹುದು. ಓಟ ಪ್ರಾರಂಭಿಸುವ ಮುನ್ನ ಗೆಟ್‌ಸೆಟ್ ಅಂಡ್ ಗೋ ಎಂದು ರೆಫ್ರಿ ಸೂಚನೆ ನೀಡುತ್ತಾನೆ. ಇದರ ಅರ್ಥ ಗುರಿಯನ್ನು ಗುರುತಿಸು, ಅದರಲ್ಲಿ ಏಕಾಗ್ರ ಚಿತ್ತನಾಗು ಹಾಗೂ ಮುಂದುವರಿ ಎಂದು. ಅದೇ ರೀತಿ ನಾವು ನಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿಯೂ ಗುರಿಗಳನ್ನು ಗುರುತಿಸಿಕೊಂಡು, ದೈಹಿಕ ಮಾನಸಿಕ ಬಂಡವಾಳವನ್ನು ಅದಕ್ಕೆ ಮೀಸಲಾಗಿಟ್ಟು, ಜವಾಬ್ದಾರಿಯಿಂದ ಮುಂದುವರೆದರೆ ಯಶಸ್ಸು ಖಂಡಿತ. ಎಲ್ಲಾ ರೀತಿಯ ಪ್ರತಿಕ್ರಿಯೆಗಳಿಗೂ ಸ್ಪಂದಿಸುವುದರಿಂದ ನಮ್ಮ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ ಮತ್ತು ವಿಕಾಸಗೊಂಡು ಮನಸ್ಸಿನ ಎಲ್ಲಾ ಚಟುವಟಿಕೆಗಳು ಹೆಚ್ಚು ಅರ್ಥ ಪೂರ್ಣವಾಗಿ ಆತ್ಮಸ್ಥೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಆದ್ದರಿಂದ ನಿಮ್ಮ ಒಳಿತಿಗಾಗಿಯೇ ನೀಡುವ ಕೆಲವು ಸಲಹೆಗಳೆಂದರೆ ಹೆಚ್ಚೆಚ್ಚು ಜನರೊಂದಿಗೆ ಮಾತನಾಡಿ, ತುಂಬಾ ಸ್ನೇಹಿತರನ್ನು ಮಾಡಿಕೊಳ್ಳಿರಿ. ಕನಿಷ್ಠ ದಿನದಲ್ಲಿ ಒಂದು ಗಂಟೆಯಾದರೂ ಗುಂಪು ಚಟುವಟಿಕೆ ಹಾಗೂ ಕ್ರೀಡೆಗಳಿಗೆ ಮೀಸಲಾಗಿಡಿ, ತರಕಾರಿ ಬೆಳೆಸುವುದು, ಸಂಗೀತ ಕೇಳುವುದು, ಸ್ಟಾಂಪ್ ಕಲೆಕ್ಷನ್ ಮುಂತಾದ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ, ನಿಮ್ಮ ವ್ಯಕ್ತಿತ್ವಕ್ಕೆ ಇತರರು ಕಾರಣವೆಂದು ದೂಷಿಸಬೇಡಿ. ಇದಕ್ಕೆ ನಿಮ್ಮ ವರ್ತನೆಯೂ ಕಾರಣ ಎಂಬ ಒಳನೋಟ ನಿಮಗಿರಲಿ.