ಕನಸನ್ನೂ ಮೀರಿಸಿದ ಸಾಧನೆಭವರ್ಲಾಲ್ ಜೈನ್ ಎಪ್ಪತ್ತರ ಯುವಕ. ಬಾಲ್ಯದಲ್ಲೇ ಕೃಷಿ ಆಸಕ್ತಿ. ಜಲಗಾಂವ್ ಜಿಲ್ಲೆಯ ಆಮ್ನೀರ್ ವಾಕೋಡ್ನಲ್ಲಿ ವಾಸ್ತವ್ಯ. ಇಲ್ಲೇ ಪ್ರಾಥಮಿಕ ಅಭ್ಯಾಸ. ಜಲಗಾಂವ್ನಲ್ಲಿ ಮೆಟ್ರಿಕ್. ಮುಂಬಯಿಯಲ್ಲಿ  ವಾಣಿಜ್ಯ ಮತ್ತು ಕಾನೂನು ಪದವಿ. ಕೈಗೆ ಬಂದ ಬಿಳಿ ಕಾಲರ್ ಹುದ್ದೆಯನ್ನು ಬಿಟ್ಟು ಸಮಾಜಕ್ಕಾಗಿ ಏನಾದರೂ ಮಾಡುವತುಡಿತ. ಅಮ್ಮನಿಂದ ಪಡೆದ ಸಣ್ಣ ಮೊತ್ತದಿಂದ ಸೀಮೆಎಣ್ಣೆ ವ್ಯಾಪಾರ. ಈಗ ಪ್ರತಿಷ್ಠಿತ ಜೈನ್ ಇರಿಗೇಶನ್ಸಂಸ್ಥೆಯ ಒಡೆಯ. ಹನಿ ನೀರಾವರಿ ಘಟಕಕ್ಕೆ ಒಳಸುರಿ ಸರಬರಾಜು ಮಾಡಬೇಕಾಗಿದ್ದ ಕಂಪೆನಿ, ಸಕಾಲಕ್ಕೆ ಅದನ್ನು ಮಾಡದಿದ್ದುದಕ್ಕೆ ಮುನಿಸು. ತನ್ನದೇ ಫ್ಯಾಕ್ಟರಿ ಶುರು. ಅದಕ್ಕೀಗ ವಿಶ್ವದಲ್ಲೇ ಎರಡನೆ ಸ್ಥಾನ!

ಹಣ್ಣುಗಳ ಸಂಸ್ಕರಣೆ, ಹನಿತುಂತುರು ನೀರಾವರಿ ಉಪಕರಣ, ಅಂಗಾಂಶ ಬಾಳೆ, ಪ್ಲಾಸ್ಟಿಕ್ ಶೀಟ್, ಸೋಲಾರ್ ಸಿಸ್ಟಮ್, ಶಿಕ್ಷಣ ಸಂಸ್ಥೆಗಳನ್ನು ಹೊಂದಿದ ಜೈನ್ ಸಂಸ್ಥೆಬಹುಶಃ ಭಾವೂ ಅವರ ಕನಸನ್ನೂ ??ಮೀರಿ ಮುನ್ನಡೆದಿದೆ. ಈಗ ಇವರ ಮಕ್ಕಳು  ಜವಾಬ್ದಾರಿ ಹೊತ್ತಿದ್ದಾರೆ. ಇಳಿವಯಸ್ಸಲ್ಲೂ ತಾನು ನೆಚ್ಚಿನ ಗುರುಕುಲಕ್ಕೆ ಪ್ರತಿನಿತ್ಯ ಭೇಟಿ. ಪದ್ಮಶ್ರೀಯೂ ಸೇರಿದಂತೆ ನೂರಾರು ಪ್ರಶಸ್ತಿಗಳ ಮಳೆ.

ನಲುವತ್ತೈದು ವರ್ಷ ಹಿಂದಿನ ಘಟನೆ. ಮಹಾರಾಷ್ಟ್ರ ಸರಕಾರದ ನಾಗರಿಕ ಸೇವೆಗೆ ಆಯ್ಕೆಯಾದರೂ ಭವರ್‌ಲಾಲ್ ಜೈನ್ ಎಂಬ ತರುಣ ನಿರ್ಧರಿಸಿದ್ದು ‘ನನ್ನ ಭವಿಷ್ಯದ ಉದ್ಯೋಗ ಕೃಷಿ’  ಅಂತ! ಸ್ವಂತಕ್ಕಿಂತ ಸಮಾಜದ ಚಿಂತನೆ.

ಕಲಿಕೆ ಮುಗಿಸಿ ತಮ್ಮ ವಾಕೋಡ್ ಹೊಲದಲ್ಲಿ ನಿಂತಾಗ ಕಂಡದ್ದು ಭಣಭಣ ಭೂಮಿ. ರೈತರು ಹೈಬ್ರಿಡ್ ಹತ್ತಿ, ಖಾರ ಮೆಣಸಿನಕಾಯಿ, ಜೋಳ ಬೆಳೆಯುತ್ತಿದ್ದರು. ಒಣಭೂಮಿ, ಮಿತ ಮಳೆ. ನೀರಿಗಾಗಿ ಪರದಾಟ. ಕೈಗೆ ಬಂದರೆ ಬಾಯಿಗಿಲ್ಲ. ಒಳಸುರಿಗಳು ಸರಿಯಾಗಿ ಸಿಗದೆ ರೈತರು ಕಂಗಾಲು. ಈ ಸ್ಥಿತಿಯನ್ನು ಬದಲಾಯಿಸುವುದು ಕಷ್ಟವಿತ್ತು. ಆದರೂ, ಅದನ್ನೊಂದು ಸವಾಲು ಅಂತ ಸ್ವೀಕರಿಸಿದರು ಜೈನ್.

ಬೀಳುವ ಮಳೆ ೬೫೦-೭೫೦ ಮಿಲ್ಲಿಮೀಟರ್. ತಾಪಮಾನ ೭-೪೫ ಡಿಗ್ರಿ ಸೆಲ್ಸಿಯಸ್. ಕೊಳವೆಬಾವಿಗಳು ಸಾವಿರ ಅಡಿ ಇಳಿದರೂ ಗಂಗೆ ನಾಪತ್ತೆ. ಈಗಿರುವ ಹತ್ತಿ, ಜೋಳಗಳ ಬದಲು ವಾಣಿಜ್ಯ ಆಹಾರ ಬೆಳೆ ಬೆಳೆಯುವುದು, ಮಳೆನೀರನ್ನು ಹಿಡಿದಿಟ್ಟು ಮಿತವಾಗಿ ಬಳಸುವುದು ಮತ್ತು ಭೂಒಡಲಿಗೆ ಮಳೆಯ ಮರುಪೂರಣ – ಇವಿಷ್ಟು ಭಾವು  (ಇದು ಇವರ ಹೃಸ್ವನಾಮ) ಇವರ ಮನದಲ್ಲಿದ್ದ ಅಜೆಂಡಾ.

ಎಂಭತ್ತರ ದಶಕದಲ್ಲಿ ಕೃಷಿಯಲ್ಲಿ ಹನಿ ನೀರಾವರಿ ವ್ಯವಸ್ಥೆಗಾಗಿ ಭಾವು ಖಾಂದೇಶ್‌ನಲ್ಲಿ ಘಟಕ ಹೊಂದಿದ್ದರು. ಇದರ ಜ್ಞಾನ, ಪ್ರಯೋಜನದ ಅರಿವನ್ನು ರೈತರಿಗೆ ತಲುಪಿಸುವುದು ಹೇಗೆ? ಸಾಂಪ್ರದಾಯಿಕ ನೀರಾವರಿಯ ಕೃಷಿಯಲ್ಲಿ ತೊಡಗಿದ ರೈತರು ಫಕ್ಕನೆ ಹೊಸ ನೀರಾವರಿ ಪದ್ದತಿಯನ್ನು ಒಪ್ಪರು. ಅದಕ್ಕೊಂದು ‘ಪ್ರಾಕ್ಟಿಕಲ್’ ಮಾದರಿ ಬೇಕಾಗಿತ್ತು. ‘ಅಗತ್ಯವೇ ಆವಿಷ್ಕಾರಕ್ಕೆ ಕಾರಣ’ ಎಂದು ನಂಬಿದ ಭಾವು ಹೊಸ ಯೋಜನೆ ಹಾಕಿದರು.

ಕಲ್ಪನೆಯ ಸಾಕಾರ

ಜಲಗಾಂವ್ – ಮಹಾರಾಷ್ಟ್ರದ ಗಡಿಯಿಂದ ಮಧ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲಾ ಕೇಂದ್ರ. ಜನಸಂಖ್ಯೆ ನಾಲ್ಕು ಲಕ್ಷದ ಹತ್ತಿರ. ಬಹುತೇಕ ಗ್ರಾಮೀಣ ಪ್ರದೇಶ. ದಕ್ಷಿಣಕ್ಕೆ ಶಿರ್ಸೋಳಿ ಹಳ್ಳಿ.

ಮನದ ಆಲೋಚನೆಯ ಮೂರ್ತತೆಗಾಗಿ ಭಾವು ಆಯ್ದುಕೊಂಡುದು – ಮನುಷ್ಯ ಸಂಚಾರವಿಲ್ಲದ, ‘ಯಾವುದಕ್ಕೂ ಪ್ರಯೋಜನವಿಲ್ಲ’ದ ಶಿರ್ಸೋಳಿಯ ಗುಡ್ಡ ಪ್ರದೇಶ! ಇಲ್ಲಿರುವ ಮೇಲ್ಮಣ್ಣು ಅಬ್ಬಬ್ಬಾ ಎಂದರೆ ೨-೩ ಅಡಿ ಮಾತ್ರ. ಮತ್ತೆಲ್ಲಾ ಬಂಡೆ-ಕಲ್ಲು. ‘ವ್ಯವಸಾಯ ಸಾಧ್ಯವಾಗದ ಒಣಭೂಮಿ’ ಎಂದು ಕಂದಾಯ ದಾಖಲೆಗಳಲ್ಲಿ ನಮೂದಾದ ಜಾಗ.

“ಈ ಸ್ಥಳವನ್ನು ಆಯ್ಕೆ ಮಾಡಿದಾಗ ಅನೇಕರು ಗೇಲಿ ಮಾಡಿದರು. ತಲೆ ಕೆಟ್ಟಿದೆ ಅಂದರು. ಆದರೆ ನನ್ನ ನಿರೀಕ್ಷೆಯ ಸಫಲತೆಗೆ ಈ ಭೂಮಿಯೇ ಸೂಕ್ತವಾಗಿತ್ತು. ನಾನು ಯಾರಿಗೂ ಏನೂ ಉತ್ತರ ಕೊಡಲಿಲ್ಲ.’ ಆ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ ಭಾವು.

ನೆಲ ಮಟ್ಟದಿಂದ ಗುಡ್ಡದ ತುದಿಗೆ ಸುಮಾರು ಸಾವಿರ ಅಡಿ. ಗುಡ್ಡದ ಕಲ್ಲುಗಳನ್ನು ಕಣಿವೆ, ಕಂದಕಗಳಿಗೆ ಮುಚ್ಚಿ ಅಲ್ಲಲ್ಲೇ ಸಮತಟ್ಟು ಮಾಡುವುದು ಮೊದಲ ಕೆಲಸ. ಜತೆಗೆ ತಪ್ಪಲಿನಿಂದ ಗುಡ್ಡದ ತುದಿ ತನಕ ಕಚ್ಚಾ ಮಾರ್ಗ. ಎತ್ತಿನ ಗಾಡಿ ಹೋಗುವಷ್ಟು. ಮಾನವ ಶ್ರಮದೊಂದಿಗೆ ಮಣ್ಣುಮಾಂದಿ ಯಂತ್ರಕ್ಕೆ ಬಿಡುವಿರದ ಕೆಲಸ.

ಅಂತರ್ಜಲ ಸರ್ವೆ ಮತ್ತು ಅಭಿವೃದ್ಧಿ ಏಜೆನ್ಸಿಯವರೊಂದಿಗೆ ಸಮಾಲೋಚನೆ. ‘ಈ ಜಾಗವನ್ನು ಮೊದಲೇ ಸರ್ವೆ ಮಾಡಿದ್ದೇವೆ. ಅಂತರ್ಜಲ ಬಿಲ್‌ಕುಲ್ ಇಲ್ಲ’ ಎನ್ನುತ್ತಾ ಕೈಚೆಲ್ಲಿದ ಇಂಜಿನಿಯರ್ ‘ಕೃಷಿಹೊಂಡ ಮಾಡಬಹುದು’ ಎಂದು ಸಲಹೆ ಕೊಟ್ಟರು.

ಗುಡ್ಡದ ತುದಿಯಲ್ಲಿ ಮೊದಲ ಕೃಷಿಹೊಂಡ. ೮೯ ರ ಆ ಮಳೆಗಾಲದಲ್ಲಿ ನೀರು ತುಂಬಿತು. ಜತೆಗೆ ಪ್ಲಾಸ್ಟಿಕ್ ಹಾಸಿದ ಮತ್ತೊಂದು ಕೃಷಿಹೊಂಡ. ಕೃಷಿಹೊಂಡದಲ್ಲಿ ಮಳೆನೀರು ಪೂರ್ತಿ ಇಂಗಿದರೆ, ಪ್ಲಾಸ್ಟಿಕ್ ಹಾಸಿದ ಹೊಂಡದಲ್ಲಿ ತುಂಬಿಕೊಂಡಿತು. ಆದರೆ ಪ್ಲಾಸ್ಟಿಕ್ ಹಾಳೆ ತೂತಾಗಿಯೋ ಏನೋ ನೀರು ನಿಲ್ಲದೆ ಕಾಡಿಸಿತು.

ನೀರು ಸರಾಗ ಹರಿದುಹೋಗುವ ತಪ್ಪಲಿನಲ್ಲಿ – ಇದೀಗ ಜೈನ್ ವ್ಯಾಲಿ – ಕೊಳವೆಬಾವಿ ಕೊರೆತ. ೩೩೦ ಅಡಿಯಲ್ಲಿ ನೀರು. ‘ಮೇಲೆ ನೀರು ಇಂಗಿಸಿದ್ದರಿಂದ ನಿಧಾನಕ್ಕಾದರೂ ಕೊಳವೆ ಬಾವಿಗೆ ಮರುಪೂರಣವಾಗಬಹುದು’ ಎನ್ನುವುದು ಭಾವೂ ದೂರದೃಷ್ಟಿ. ಪಂಪು ಚಾಲೂ ಮಾಡಿ ನೀರೆತ್ತಿ ಸಂಗ್ರಹಿಸಬಹುದು. ‘ಇದು ತಾತ್ಕಾಲಿಕ ವ್ಯವಸ್ಥೆ. ಶಾಶ್ವತ ವ್ಯವಸ್ಥೆಯಾಗಲೇ ಬೇಕು’.

ಭಾವೂ ಮುಂದೆ ಎರಡು ದಾರಿಗಳಿದ್ದುವು. ಐದು ಕಿಲೋಮೀಟರ್ ದೂರದ ನಾಗ್ಝರಿ ಗ್ರಾಮದಲ್ಲಿ ಗಿರಾಣ ನದಿ. ಇದು ವರ್ಷಪೂರ್ತಿ ಹರಿಯುತ್ತಿರಲಿಲ್ಲ. ಇದ್ದಷ್ಟು ದಿನ ನೀರು ಪಡೆಯಬಹುದಲ್ಲಾ? ಅಷ್ಟು ದೂರಕ್ಕೆ ಪೈಪ್ ಜೋಡಣೆ. ನದಿ ದಡದಲ್ಲಿ ಪಂಪ್‌ಹೌಸ್. ತಂದ ನೀರು ಜೈನ್ ವ್ಯಾಲಿಯ ಕೊಳದಲ್ಲಿ ಸಂಗ್ರಹ.

ಗುಡ್ಡದ ಮೇಲೆ ಮೂರೂಕಾಲು ಲಕ್ಷ ಲೀಟರಿನ ಟ್ಯಾಂಕ್ ರಚನೆ. ಕೊಳದಲ್ಲಿ ತುಂಬಿಸಿದ ನದಿ ನೀರು ಪಂಪ್ ಮೂಲಕ ಮೇಲಿನ ಟ್ಯಾಂಕಿಗೆ.

ಗುಡ್ಡಕ್ಕೆ ಯಾವಾಗ ನೀರು ಬಂತೋ, ಮುಂದಿನ ಕೆಲಸಗಳು ಹಗುರ. ಇಳಿಜಾರಿನಲ್ಲಿ ಸಮತಳ ಅಗಳು (ಕಂಟೂರ್ ಟ್ರೆಂಚ್) ರಚನೆಗೆ ಚಾಲನೆ. ಮಾವು, ನಿಂಬೆ, ದಾಳಿಂಬೆ ಗಿಡ ನಾಟಿ. ಜತೆಗೆ ಕಹಿಬೇವು ಮುಂತಾದ ಅರಣ್ಯ ಗಿಡಗಳು. ಕಚ್ಚಾ ದಾರಿಯ ಎರಡೂ ಬದಿಗಳಲ್ಲಿ ತೆಂಗು.

ಸಂಗ್ರಹ ಟ್ಯಾಂಕ್‌ನಿಂದ ಗುರುತ್ವಾಕರ್ಶಣೆಯ ಮೂಲಕ ಹನಿ ನೀರಾವರಿ ವ್ಯವಸ್ಥೆ. ‘‘ಅಗಳು ಮಾಡಿದ್ದರಿಂದ ಮುಂದಿನ ಮಳೆಗಾಲದಲ್ಲಿ ಮಣ್ಣು ಸವಕಳಿ ಹೇಳುವಷ್ಟು ಇರಲಿಲ್ಲ’’.

ಶಾಶ್ವತ ವ್ಯವಸ್ಥೆ

ನದಿ ನೀರು ಬತ್ತಿದರೆ? ಮುಂದೆ ಸರಕಾರ ಪರವಾನಿಗೆ ಕೊಡದಿದ್ದರೆ? ಪರ್ಯಾಯ ದಾರಿಗಳ ಹುಡುಕಾಟ. ತಜ್ಞರ ಸಲಹೆಯಂತೆ ೯೩ರಲ್ಲಿ ಜೈನ್ ವ್ಯಾಲಿಯಲ್ಲಿ ಹನ್ನೆರಡೂವರೆ ಕೋಟಿ ಲೀಟರಿನ ದೊಡ್ಡ ಇಂಗುಕೊಳ ರಚನೆ. ಇದು ‘ಜೈನ್ ಸಾಗರ್’. ಇಳಿದು ಬರುವ ಮಳೆನೀರು ಇಲ್ಲಿ ಸಂಗ್ರಹವಾಗಬೇಕೆನ್ನುವುದು ಲಕ್ಷ್ಯ. ಈ ನೀರು ಗುಡ್ಡದ ತುದಿಯ ಟ್ಯಾಂಕ್‌ಗೆ ಪಂಪಿಂಗ್. ‘ನದಿ ನೀರಿನ ಹಂಗಿಲ್ಲವಲ್ಲಾ’!

ಮಿಕ್ಕಿದ ನೀರು ಹರಿದುಹೋಗುವ ತೂಬಿನ ಬಳಿ ತೆರೆದ ಬಾವಿ ರಚನೆ. ಐವತ್ತೈದು ಅಡಿಯಲ್ಲೇ ನೀರು! ‘‘ಇದೆಲ್ಲದರಿಂದಾಗಿ ೨೦೦೧-೦೨ರ ಬರದಲ್ಲೂ ಈ ಬಾವಿ ಆರಲಿಲ್ಲ. ನೀರ ನೆಮ್ಮದಿ ಸಿಕ್ಕಿತು’’ ಗುಡ್ಡದ ನೀರಿನ ಇಂU??ವ ಎಡೆ ನೋಡಿ ೯೭-೯೮ರಲ್ಲಿ ಮತ್ತೆ ನಾಲ್ಕು ಬಾವಿ ನಿರ್ಮಾಣ.

‘ಈ ರೀತಿ ನೀರಿನ ಮೂಲಗಳ ವಿಸ್ತಾರದಿಂದಾಗಿ – ಮಳೆಕೊಯ್ಲು, ಜಲಸಂರಕ್ಷಣೆ ಮತ್ತು ಮರುಪೂರಣ – ಏಕಕಾಲದಲ್ಲಿ ಆದಂತಾಗುತ್ತದೆ’ ಎನ್ನುತ್ತಾರೆ ಭಾವೂ. ನೀರು ಸಮೃದ್ಧವಾದ ಮೇಲೆ ಸುತ್ತಲಿನ ಮತ್ತಷ್ಟು ಪಾಳುಭೂಮಿ ಖರೀದಿ! ಸಂಪತ್ತು ವೃದ್ಧಿಗಲ್ಲ, ನೀರು ಹಿಡಿದಿಡಲು!

ಧೂಳು ಹಾರುತ್ತಿದ್ದ ಒಣಭೂಮಿ ಹಸಿರಾದ ಸುದ್ದಿ ನಾಲ್ದೆಸೆ ಹಬ್ಬಿತು. ಭಾವೂ ಕನಸಿನಲ್ಲಿದ್ದ  ‘ಡೆಮೋ ಪ್ಲಾಟ್’ ಸಿದ್ಧವಾಗಿತ್ತು! ಕೃಷಿಕರು ವೀಕ್ಷಣೆಗೆ ಬರಲಾಂಭಿಸಿದರು. ‘ಇದೊಂದು ಪವಾಡ’ ಎನ್ನುವವರೇ ಅಧಿಕ.

ಪ್ರತ್ಯಕ್ಷ ಪ್ರಾತ್ಯಕ್ಷಿಕೆ

ಜೈನ್ ವ್ಯಾಲಿ ‘ಹನಿ ನೀರಾವರಿ ಪಾಠ’ಕ್ಕೆ ತೆರೆದುಕೊಂಡಿತು. ಮಾಹಿತಿಯ ಹಸಿವಿದ್ದ ಕೃಷಿಕರಿಂದ ‘ಕಲಿಸಿಕೊಡುವಂತೆ’ ಬೇಡಿಕೆ. ಸರಕಾರಿ ತಜ್ಞರೊಂದಿಗೆ ಸಮಾಲೋಚನೆ. ಮಾಹಿತಿ ಮತ್ತು ತರಬೇತಿ ಕೇಂದ್ರ ಸ್ಥಾಪನೆ. ಅದಕ್ಕಾಗಿ ‘ಜೈನ್ ಗುರುಕುಲ್’ ಕಟ್ಟಡ ರಚನೆಯಾಯಿತು.

‘೧೯೯೫ರ ಸುಮಾರಿಗೆಲ್ಲಾ ಬೇಸಿಗೆಯಲ್ಲಿ ನಾವು ಯಾರಿಗೂ ಆಮಂತ್ರಣ ನೀಡುವ ಸ್ಥಿತಿಯಲ್ಲಿರಲಿಲ್ಲ’ ಜತೆಯಲ್ಲಿದ್ದ ಜೈನ್ ಸಂಸ್ಥೆಯ ಕರ್ನಾಟಕದ ಮುಖ್ಯಸ್ಥ ಚಿದಂಬರ.ವಿ.ಜೋಶಿ ದನಿಗೂಡಿಸಿದರು.

ಈ ಮಧ್ಯೆ ಸಮತಳು ಬದು, ಬಾಂದಾರ ರಚನೆ. ದೂರದಿಂದ ನೋಡಿದರೆ ಗುಡ್ಡ ಪೂರ್ತಿ ಮೆಟ್ಟಿಲು ತಟ್ಟು. ಹಸಿರು ಹೊದೆಸಿದಂತೆ ಕಾಣುತ್ತದೆ. ಸುರಿವ ಮಳೆನೀರು ಇಂಗಿ, ಮಿಕ್ಕುಳಿದದ್ದು  ಇಳಿದು ಕೆಳಗಿನ ಕೊಳ ಸೇರಬೇಕು.

ಕಣಿವೆಯಂತಹ ಪ್ರದೇಶದಲ್ಲಿ, ಸಮತಟ್ಟು ಅಥವಾ ಮೆಟ್ಟಿಲು ತಟ್ಟು ರಚನೆ ಸಾಧ್ಯವಿಲ್ಲ ಎನ್ನುವಲ್ಲಿ ಅಡ್ಡಲಾಗಿ ‘ಕಟ್ಟ’ದಂತಹ ಒಡ್ಡು. ಮಳೆನೀರು ಅಲ್ಲೇ ನಿಂತು ಇಂಗಲು ಅನುವು ಮಾಡಿಕೊಡುತ್ತದೆ.

ಜೈನ್ ಹಿಲ್‌ನಲ್ಲಿ ಮೆಟ್ಟಿಲು ತಟ್ಟುಗಳು ನೀರು ಹಿಡಿದಿಡುತ್ತವೆ. ಇಲ್ಲೆಲ್ಲಾ ಮಾವು, ಪೇರಳೆ, ಹುಣಸೆ, ಸೀತಾಫಲಗಳು ಎದ್ದಿವೆ. ‘ಮೇಲ್ಮಣ್ಣು ತೀರಾ ಕಡಿಮೆ. ಈಗ ಮಣ್ಣಿನ ಸವಕಳಿ ಪೂರ್ತಿ ನಿಂತಿದೆ. ಬಿದ್ದ ಮಳೆನೀರೆಲ್ಲವೂ ಹರಿದು ಹೋಗದೆ ಇಂಗುತ್ತದೆ’.

ಗುರುಕುಲದ ಸ್ನಾನದ ನೀರು, ಕೈತೊಳೆವ ನೀರನ್ನು ಸಂಗ್ರಹಿಸಿ, ಸೋಸಿ, ಸಂಸ್ಕರಿಸಿ ಜೈನ್ ಗುಡ್ಡದ ಮೇಲೆ ಸಂಗ್ರಹಿಸಲಾಗುತ್ತದೆ. ಇದಕ್ಕೆ ಪ್ರತ್ಯೇಕ ಟ್ಯಾಂಕ್ ಮತ್ತು ಕೊಳವೆ ಮಾರ್ಗ. ಮತ್ತೆ ಎರಡನೆಯ ಬಳಕೆ – ಗಿಡಗಳಿಗೆ ಉಣಿಕೆ.

ವ್ಯಾಲಿಯಲ್ಲಿರುವ ‘ಜೈನ್ ಸಾಗರ್’ ಕೊಳ ಈಗ ಮೇಯಲ್ಲೂ ಬತ್ತುವುದಿಲ್ಲ. ಅದರ ಅಂಚಿನಲ್ಲೇ ಇರುವ ಕಣಿಯಲ್ಲಿ ನೀರ ಹರಿವು ವರ್ಷದುದ್ದಕ್ಕೂ ಇದೆ!

ಗುಡ್ಡದ ತುತ್ತತುದಿಯಲ್ಲಿ ಆರಂಭದಲ್ಲೇ ಸಮತಟ್ಟು ಮಾಡಿದ್ದರು. ಈ ಜಾಗದಲ್ಲೀಗ ಪೂರ್ತಿ ಕಸಿ ಮಾವಿನ ತೋಟ. ಮೂವತ್ತು ಸಾವಿರಕ್ಕೂ ಹೆಚ್ಚು ಗಿಡ. ಇಳುವರಿ ಆರಂಭವಾಗಿವೆ. ಫಸಲೆಲ್ಲಾ ಇವರ ಹಣ್ಣು ಸಂಸ್ಕರಣ ಘಟಕಕ್ಕೆ.

ಹಸಿರೆಬ್ಬಿಸುವ ಪ್ರಕ್ರಿಯೆಯಿಂದ ಸಾವಿರ ಎಕ್ರೆ ವಿಸ್ತಾರದ ಜೈನ್ ಹಿಲ್ಲಿನ ಮಣ್ಣು ಮರುಜೀವ ಪಡೆದಿದೆ. ಹಸಿರೆಲೆ ಗೊಬ್ಬರ ಮತ್ತು ಸಾವಯವ ಕೃಷಿ ಫಲವತ್ತತೆ ತಂದಿದೆ. ‘ಎಲ್ಲೆಲ್ಲಿ ಗಿಡಗಳನ್ನು ನೆಡಬಹುದೋ ಅಲ್ಲೆಲ್ಲಾ ಸಮತಟ್ಟು ಮಾಡಿ ನೆಟ್ಟಿದ್ದೇವೆ. ಸಾಧ್ಯವೇ ಇಲ್ಲ ಎನ್ನುವಲ್ಲಿ ನೀರಿಂಗುವ ರಚನೆಯನ್ನು ಮಾಡಿದ್ದೇವೆ’ ಜೈನ್ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕುಲಕರ್ಣಿ ಹೇಳುತ್ತಾರೆ. ಹದಿನೈದು ವರುಷದ ಹಿಂದೆ ಗೇಲಿ ಮಾಡುತ್ತಿದ್ದ ಜನರೀಗ ವಿಸ್ಮಯದಿಂದ ಮೂಕ ಮೆಚ್ಚುಗೆಗಾರರು.

ಇಲ್ಲಿ ಭಾವೂ  ಕನಸು ನೀರನೆಮ್ಮದಿ ತಂದರೆ, ಸುತ್ತಲಿನ ಜಾಗಗಳಲ್ಲಿ ಸಾವಿರ ಅಡಿ ಕೊರೆದರೂ ನೀರಿಲ್ಲ!