ಗಾಂಧಿ ಹೇಳಿದರು : ತೆರೆದಿಡುತ್ತೇನೆ, ಈ
ನನ್ನ ಮನೆಯ ಕಿಟಕಿ ಬಾಗಿಲುಗಳನು
ಅಗಲವಾಗಿ,
ಬರಲಿ ಈ ಇದರೊಳಕ್ಕೆ ಜಗತ್ತಿನೆಲ್ಲಾ
ಗಾಳಿ-ಬೆಳಕುಗಳು ನಿರಾತಂಕವಾಗಿ.
ನಾನಾದರೋ ಯಾವ ಗಾಳಿಗಳ ದಾಳಿಗೂ
ಹೊಯ್ದಾಡದಂತೆ ಕಾಲೂರಿ ನಿಲ್ಲುತ್ತೇನೆ
ಈ ನೆಲದಲ್ಲಿ ಸುಭದ್ರವಾಗಿ.

ಈ ಹೊತ್ತಿನಾಡಳಿತ ಸೂತ್ರಗಳ ಹಿಡಿದವರು
ಹೇಳುತ್ತಾರೆ : ತೆರೆದಿಡುತ್ತೇವೆ, ಈ
ಸ್ವತಂತ್ರ ಭಾರತದ ಬಾಗಿಲುಗಳನು
ಉದಾರವಾಗಿ.
ಬಂದು ನುಗ್ಗಲಿ ಬಿಡಿ ಜಗತ್ತಿನೆಲ್ಲಾ
ಪಿಡುಗುಗಳೂ ಧಾರಾಳವಾಗಿ.
ಹತ್ತೂ ಕಡೆಯ ಬಂಡವಾಳದ ತೊಂಡು
ಗೂಳಿಗಳು ಬಂದಿಲ್ಲಿ ಮೇಯುತ್ತ,
ಹಾಕುವಂಥಾ ಸಂಪದ್‌ಭರಿತ ಸಗಣಿ
ಗೊಬ್ಬರದಿಂದ ಫಲವತ್ತಾಗುವುದು
ಈ ನಮ್ಮ ನಾಡು
ಕಾದು ನೋಡು.