ತಂಪು ಗಾಳಿಯಂತೆ ಬಂದೆ
ಅಂದು ನನ್ನ ತೋಟಕೆ,
ಮುಗಿದ ಮೊಗ್ಗೆ ಕಣ್ದೆರೆದುವು
ನೀನು ಬಂದ ಮಾಟಕೆ.

ಒಳಗಿನಿಂದ ಹೊಸ ಸುಗಂಧ
ಘಮ್ಮೆಂದು ಹೊಮ್ಮಿತು.
ನನ್ನೊಳಗೇ ತಿಳಿಯಡಗಿ-
ದಂಥ ಹೊಸತು ಚಿಮ್ಮಿತು.

ಆಹಾ ಏನು ಸೊಗಸು ಇದರ
ಕಂಪು-ಎಂದರೆಲ್ಲರೂ.
ಇಷ್ಟು ದಿವಸ ಎಲ್ಲಿತ್ತಿದು
ಎಂದು ಬೆರಗುಗೊಂಡರು.

ನಾನು ಕೂಡ ಬೆರಗಾದೆನು
ನಿನ್ನ ದಿವ್ಯ ಮಂತ್ರಕೆ !
ಮಣಿದೆ ನಾನು ಮಣ್ಣಿನಿಂದ
ಗಂಧ ತಂದ ತಂತ್ರಕೆ !
ಆದರೇಕೆ ಇಂದು ನಡೆದೆ
ಬಿರುಗಾಳಿಯ ಭರದಲಿ !
ಹೂವ ಮುರಿದು ಹುಡಿಗೆ ಸುರಿದು
ನಿಷ್ಕರುಣಿಯ ತೆರದಲಿ !
‘ಏಕೆ?’ ಎಂದು ಕೇಳಲಾರೆ ;
ಬರಿಯ ಮೌನದುತ್ತರ !
ಅರಿಯೆ ನಾನು ನಿನ್ನಿಚ್ಛೆಯ
ಹೈಮಾಚಲದೆತ್ತರ !
ನಾನು ತಿಳಿವೆನೇನು ನಿನ್ನ
ಅರ್ಥಪೂರ್ಣ ಚೋದ್ಯವ ?
ಯಾವ ಶಿವದ ಸೃಷ್ಟಿಗಾಗಿ
ಇಂಥ ವಿಲಯ ವೈಭವ !