Categories
ಕನ್ನಡ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ ಸಮಗ್ರ ಕಾವ್ಯ

ಅಂಧಕಾರ

ಅಂಧಕಾರ ಮುತ್ತುತಿದೆ
ಚಂದದ ಬೆಳಕಾರುತಿದೆ.

ಪಡುಗಡಲಿನ ನೀರಿನಲ್ಲಿ
ದಿನದ ವಿಭವವಳಿದಿದೆ
ಒಲವನೀವ ಬೆಳಕು ಹೋಗಿ
ಇರುಳು ತಿರೆಯ ತಬ್ಬಿದೆ.

ತೆರೆತೆರೆಗಳ ಕೆನ್ನೆಯಲ್ಲಿ
ಸಂಜೆಗೆಂಪುಮಾಯವಾಗಿ
ಕಸಿಯ ಛಾಯೆ ಸುಳಿದಿದೆ
ವಿರಹವೊಂದೆ ಬಲಿದಿದೆ.

ಹಕ್ಕಿಯುಲಿಗಳಡಗಿ ಹೋಗಿ
ಮರಗಳಲ್ಲಿ ಮಲಗಿವೆ
ತರಗೆಲೆಗಳು ಸರಸರವೆನೆ
ವಿಕಟನಾದಗೈದಿವೆ.

ಮೇಲೆ ನೀಲ ಬಾನ ಮೇಲೆ
ಕರಿಯ ಮುಗಿಲು ಮಾಲೆ ಮಾಲೆ
ಉರುಬಿ ತುರುಬಿ ನಿಂದಿದೆ
ಮನಕೆ ಭಯವ ಬಿತ್ತಿದೆ.
ಮೊರೆವ ಕಡಲ ತೆರೆಗಳಲ್ಲಿ
ಕಿರಿಯದೋಣಿ ನರಳಿದೆ ;
ಅಭಯವೀವ ತಾರೆಯೊಂದು
ಕಣ್ಗೆ ಕಾಣದಾಗಿದೆ.