ಹಬ್ಬ, ಹರಿದಿನಗಳು, ವ್ರತಗಳು ಇವನ್ನು ಆಚರಿಸಿದರೆ ಮನೆಯಲ್ಲಿ ಎಲ್ಲರಿಗೂ ಸಂಭ್ರಮ. ದೇವರ ಪೂಜೆ, ಹಬ್ಬಗಳ ಆಚರಣೆ, ವ್ರತಗಳ ಆಚರಣೆ ಇವುಗಳಿಂದ ಬಹುಪುಣ್ಯ ಬರುತ್ತದೆ ಎಂದು ನಮ್ಮ ಹಿರಿಯರ ಅಭಿಪ್ರಾಯ.

ಏಕಾದಶಿ ವ್ರತ

ಒಂದು ತಿಂಗಳಿಗೆ ಎರಡು ಪಕ್ಷ. ಶುಕ್ಲ ಪಕ್ಷ, ಕೃಷ್ಣಪಕ್ಷ. ಅಮಾವಾಸ್ಯೆಯ ಮರುದಿನದ ಪಾಡ್ಯದಿಂದ ಹುಣ್ಣಿಮೆಯ ಪೂರ್ತ ಶುಕ್ಲ ಪಕ್ಷ. ಹುಣ್ಣಿಮೆಯ ನಂತರ ಅಮಾವಾಸ್ಯೆ ಪೂರ್ತ ಕೃಷ್ಣ ಪಕ್ಷ. ಒಂದು ಪಕ್ಷವೆಂದರೆ ಹದಿನೈದು ದಿವಸಗಳು. ‘ವ್ರತ’ವೆಂದರೆ ನಿಯಮ. ಪ್ರತಿ ಪಕ್ಷದ ಹನ್ನೊಂದನೆಯ ದಿವಸವನ್ನು ‘ಏಕಾದಶಿ’ ಎಂದು ಕರೆಯುತ್ತಾರೆ. ಇದೊಮದು ದೊಡ್ಡ ವ್ರತ. ಇದನ್ನು ‘ಹರಿವಾಸರ’ವೆಂದೂ ಕರೆಯುವುದುಂಟು. ಈ ವ್ರತವನ್ನು ಮಾಡುವ ಹಿರಿಯರು ಪೂರ್ತಿಯಾಗಿ ಉಪವಾಸ ಮಾಡುತ್ತಾರೆ. ಕೆಲವರು ಏನಾದರೂ ಉಪಾಹಾರ ಮಾಡುತ್ತಾರೆ. ಆ ದಿನ ಪೂರ್ತ ದೇವರ ಧ್ಯಾನ, ಭಜನೆ ಇವುಗಳಲ್ಲಿ ಕಳೆಯುತ್ತಾರೆ. ಮಾರನೇ ದಿವಸ ದ್ವಾದಶಿ, ಸ್ನಾನ ಮಾಡಿ ದೇವರ ಪೂಜೆ ಮುಗಿಸಿ ಅತಿಥಿಗಳನ್ನು ಕರೆದು ಅವರಿಗೆ ಊಟ ಮಾಡಿಸಿ ಅನಂತರ ತಾವು ಊಟ ಮಾಡುತ್ತಾರೆ. ಇಲ್ಲಿ ಈ ಏಕಾದಶಿ ವ್ರತ ಮುಗಿಯುತ್ತದೆ.

ಹದಿನೈದು ದಿನಗಳಿಗೆ ಒಂದು ದಿನ ಹೀಗೆ ಉಪವಾಸ ಮಾಡಿ ಇಡ ಈ ದಿನವನ್ನು ಧ್ಯಾನದಲ್ಲಿ ಕಳೆಯುವುದು ದೇಹಕ್ಕೂ ಮನಸ್ಸಿಗೂ ಶುದ್ಧಿ. ದೇಹದ ಮೇಲೆ ನಾವು ಹತೋಟಿ ಇಟ್ಟುಕೊಂಡಂತೆ ಆಗುತ್ತದೆ. ಪ್ರತಿ ನಿತ್ಯವೂ ನಮ್ಮ ಮನಸ್ಸಿಗೆ ಏನಾದರೂ ಯೋಚನೆ ಇದ್ದೇ ಇರುತ್ತದೆ. ಬೇಡವೆಂದರೂ ಕೆಟ್ಟ ಯೋಚನೆಗಳು ಬರುತ್ತವೆ. ಏಕಾದಶಿ ವ್ರತ ಮಾಡಿದರೆ ಒಂದು ದಿನವಾದರೂ ಬೇರೆ ಬೇಸರ-ತೊಂದರೆಗಳಿಲ್ಲದೆ, ದೇವರಲ್ಲಿಯೆ ಮನಸ್ಸನ್ನು ನಿಲ್ಲಿಸಿದಂತಾಗುತ್ತದೆ. ಏಕಾದಶಿ ವ್ರತ ಮಾಡುವವರು ಇಡೀ ದಿನವನ್ನು ದೇವರ ಯೋಚನೆ ಮಾಡುತ್ತ ದೇವರನ್ನು ಭಜಿಸುತ್ತ, ಭಗವಂತನ ಭಕ್ತರ ಸಹವಾಸದಲ್ಲಿಯೆ ಕಳೆಯುತ್ತಾರೆ. ಹೀಗೆ ಮನಸ್ಸು ನಿರ್ಮಲವಾಗುತ್ತದೆ, ಶಾಂತಿ ಕಾಣುತ್ತದೆ.

ಏಕಾದಶಿ ಉಪವಾಸವನ್ನೂ ಭಜನೆಯನ್ನೂ ‘ವ್ರತ’ ಎಂದು ಮಾಡುವವರು ಇದರಿಂದ ದೇವರಿಗೆ ಸಂತೋಷವಾಗುತ್ತದೆ, ಮಾಡಿದವರಿಗೆ ಪುಣ್ಯ ಬರುತ್ತದೆ ಎಂದು ನಂಬುತ್ತಾರೆ. ಇಂತಹವರಿಗೆ ಕಷ್ಟ ಬಂದಾಗ ದೇವರು ಸಹಾಯಕ್ಕೆ ಬರುತ್ತಾನೆ ಎಂದು ನಂಬುತ್ತಾರೆ. ಏಕಾದಶಿ ವ್ರತವನ್ನು ನಿಷ್ಠೆಯಿಂದ ಆಚರಿಸಿ, ಭಗವಂತನ ರಕ್ಷಣೆ ಪಡೆದ ಒಬ್ಬ ಮಹಾತ್ಮನ ಕಥೆ ಅಂಬರೀಷನ ಕಥೆ.

ಏನೇ ಮಾಡಲಿ ಶ್ರದ್ಧೆ ಮುಖ್ಯ. ಅಂಬರೀಷನ ಕಥೆ ಶ್ರದ್ಧೆಯ ಕಥೆ.

ವಿದ್ಯೆಗೆ ಮುಡಿಪಾದ ನಾಭಾಗ

ಅಯೋಧ್ಯಾ ಪಟ್ಟಣದ ಹೆಸರು ಕೇಳಿದ್ದೀರಲ್ಲವೆ? ಆ ಪಟ್ಟಣದ ಬಳಿ ಸರಯೂ ನದಿ ಹರಿಯುತ್ತದೆ. ಇಲ್ಲಿ ಅನೇಕ ದೊಡ್ಡ ದೊಡ್ಡ ರಾಜಮಹಾರಾಜರು ರಾಜ್ಯವಾಳುತ್ತಿದ್ದರು.

ನಭಗ ಎಂಬ ಮನುಪುತ್ರನೂ ಇಲ್ಲಿಯ ರಾಜನಾಗಿದ್ದ. ಇವನು ಅತ್ಯಂತ ಒಳ್ಳೆಯ ಗುಣಗಳಿಂದ ಕೂಡಿದ ರಾಜನಾಗಿದ್ದ. ಇವನಿಗೆ ಅನೇಕ ಮಕ್ಕಳಿದ್ದರು. ಇವರಲ್ಲಿ ನಾಭಾಗ ಅತ್ಯಂತ ಚಿಕ್ಕವನು.

ನಾಭಾಗನಿಗೆ ಚಿಕ್ಕ ವಯಸ್ಸಿನಿಂದಲೇ ಓದುವುದು ಎಂದರೆ ತುಂಬಾ ಇಷ್ಟ. ಸದಾ ವಿದ್ಯಾಭ್ಯಾಸದಲ್ಲೇ ನಿರತನಾಗಿರುತ್ತಿದ್ದ.

ಆಗಿನ ಕಾಲದಲ್ಲಿ ವಿದ್ಯಾಭ್ಯಾಸ ಗುರುಕುಲಗಳಲ್ಲಿ ನಡೆಯುತ್ತಿತ್ತು. ವಿದ್ಯಾಭ್ಯಾಸ ಮಾಡುವವನು ‘ವಿದ್ಯಾರ್ಥಿ’, ಅಲ್ಲವೆ? ‘ವಿದ್ಯಾರ್ಥಿ’ ಎಂದರೆ ವಿದ್ಯೆ ಬೇಕು ಎಂದು ಆಸೆಪಡುವವನು., ವಿದ್ಯೆಯನ್ನು ಹುಡುಕಿಕೊಂಡು ಹೋಗುವವನು. ಹಿಂದಿನ ಕಾಲದಲ್ಲಿ ಹುಡುಗರು ವಿದ್ಯೆಗಾಗಿ ತಂದೆತಾಯಿಯರನ್ನು ಬಿಟ್ಟು ಹೋಗುತ್ತಿದ್ದರು; ವೈಭವ, ಸುಖ ಎಲ್ಲ ಬಿಟ್ಟು ಸರಳವಾದ ಜೀವನ ನಡೆಸಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕಾಗಿತ್ತು. ವಿದ್ಯಾಭ್ಯಾಸಕ್ಕೆ ಮಕ್ಕಳು ಒಬ್ಬ ಗುರುವಿನ ಆಶ್ರಮಕ್ಕೆ ಹೋಗುತ್ತಿದ್ದರು, ಅಲ್ಲಿಯೇ ವಾಸ ಮಾಡುತ್ತಿದ್ದರು. ರಾಜಕುಮಾರರಾದರೂ ಹಾಗೆಯೇ ಗುರುವಿನ ಆಶ್ರಮಕ್ಕೆ ಹೋಗಿ ವಿದ್ಯೆ ಕಲಿಯಬೇಕು. ನಾಭಾಗನೂ ವಿದ್ಯೆ ಕಲಿಯಲು ಗುರುಗಳ ಆಶ್ರಮಕ್ಕೆ ಹೋದ. ಅಲ್ಲಿ ಶಾಂತವಾದ ವಾತಾವರಣ. ಹೆಚ್ಚು ಸದ್ದುಗದ್ದಲವಿಲ್ಲದೆ, ಜಗಳವಿಲ್ಲದೆ, ಸಂತೋಷವಾಗಿ ಸ್ನೇಹವಾಗಿ ಬದುಕುವ ಜನ ಮಮತೆಯಿಂದ ಪಾಠ ಹೇಳಿಕೊಡುವ, ಬಹು ಜ್ಞಾನಿಗಳಾದ ಗುರುಗಳು, ಪ್ರತಿದಿನವೂ ಹೊಸ ವಿಷಯಗಳನ್ನು ಕಲಿಯಲು ಅವಕಾಶ, ದಿನದಿನವೂ ಹೊಸ ವಿಷಯಗಳನ್ನು ಕಲಿತ ಸಂತೋಷ. ಗುರುಕುಲವಾಸ ಅವನಿಗೆ ತುಂಬ ಪ್ರಿಯವಾಯಿತು. ಕಲಿಯುವುದಕ್ಕೆ ಮಿತಿ ಇದೆಯೆ! ಓದುತ್ತಲೇ ಉಳಿದ ಗುರುಕುಲದಲ್ಲಿ.

ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಹೋದ ನಾಭಾಗ ಎಷ್ಟು ದಿವಸವಾದರೂ ತನ್ನ ಅರಮನೆಗೆ ಹಿಂತಿರುಗಿ ಬರಲೇ ಇಲ್ಲ.

ಪಾಲು ಕೊಡಲು ಮರೆತು ಹೋಯಿತು’!

ನಭಗನಿಗೆ ವಯಸ್ಸಾಯಿತು. ರಾಜ್ಯಭಾರ ಸಾಕು ಎನ್ನಿಸಿತು. ರಾಜ್ಯವನ್ನು ಮಕ್ಕಳಿಗೆ ಒಪ್ಪಿಸಿ ತಪಸ್ಸಿಗೆಂದು ಕಾಡಿಗೆ ಹೊರಟುಹೋದ. ಆಗ ನಾಭಾಗ ಇನ್ನೂ ಗುರುಕುಲದಲ್ಲಿಯೇ ಇದ್ದ. ನಾಭಾಗನಿಗೆ ರಾಜ್ಯದಲ್ಲಿ ಇಷ್ಟವಿಲ್ಲವೆಂದು ಯೋಚಿಸಿ ಅವನ ಅಣ್ಣಂದಿರು ರಾಜ್ಯವನ್ನು ತಮ್ಮ ತಮ್ಲಲ್ಲೇ ಹಂಚಿಕೊಂಡರು.

ನಾಭಾಗ ಗುರುಕುಲದಿಂದ ತನ್ನ ವಿದ್ಯಾಭ್ಯಾಸ ಮುಗಿಸಿ ಹಿಂದಕ್ಕೆ ಬಂದ. ತನ್ನ ರಾಜ್ಯದ ಸ್ಥಿತಿಯನ್ನು ನೋಡಿದ. ತುಂಬಾ ಯೋಚನೆಯಾಯಿತು.

“ನನಗೂ ರಾಜ್ಯದಲ್ಲಿ ಭಾಗ ಕೊಡಿ” ಎಂದು ಅಣ್ಣಂದಿರನ್ನು ಕೇಳಿದ.

“ನಿನಗೆ ಪಾಲು ಕೊಡಬೇಕೆಂಬುದು ಮರೆತೇ ಹೋಯಿತು. ಈಗ ಏನು ಮಾಡುವುದು? ನಿನ್ನ ಪಾಲಿಗೆ ತಂದೆಯೇ ಇದ್ದಾನೆ ಎಂದುಕೊಂಡು ಹೋಗಿ ಕೇಳು” ಎಂದುಬಿಟ್ಟರು ಅವರು.

ತಂದೆಯ ಆಶೀರ್ವಾದ

ನಾಭಾಗನಿಗೆ ನಿರಾಶೆಯಾಯಿತು, ದುಃಖವಾಯಿತು. ಕಾಡಿನಲ್ಲಿದ್ದ ತಂದೆಯನ್ನು ಹುಡುಕಿಕೊಂಡು ಹೊರಟ.

ತಂದೆ ಇದ್ದ ಸ್ಥಳ ಸಿಕ್ಕಿತು. ತಂದೆಯ ಬಳಿಗೆ ಹೋಗಿ ನಮಸ್ಕಾರ ಮಾಡಿದ.

ಬಹುಕಾಲದ ಮೇಲೆ ಬಂದ ಮಗನನ್ನು ಕಂಡು ತಂದೆಗೆ ತುಂಬಾ ಸಂತೋಷವಾಯಿತು. “ದೀರ್ಘಾಯುವಾಗು, ನಿನಗೆ ಒಳ್ಳೆಯದಾಗಲಿ” ಎಂದು ಆಶೀರ್ವಾದ ಮಾಡಿದ. ವಿದ್ಯಾಭ್ಯಾಸ ಮುಗಿಯಿತೆ?” ಎಂದು ಕೇಳಿದ.

ನಾಭಾಗ ತಂದೆಗೆ ತನ್ನ ಸ್ಥಿತಿಯನ್ನು ಹೇಳಿಕೊಂಡ. “ಅಪ್ಪಾ, ನಾನು ವಿದ್ಯಾಭ್ಯಾಸವನ್ನೆಲ್ಲ ಸಾಂಗವಾಗಿ ಮುಗಿಸಿಕೊಂಡು ಬಂದೆ. ಆದರೆ ರಾಜ್ಯಕ್ಕೆ ಬಂದು ನೋಡಿದರೆ, ನನ್ನ ಅಣ್ಣಂದಿರು ರಾಜ್ಯವನ್ನೆಲ್ಲ ಹಂಚಿಕೊಂಡು ಬಿಟ್ಟಿದ್ದಾರೆ. ನನಗೆ ಭಾಗ ಕೊಡುವುದಕ್ಕೆ ಅವರಿಗೆ ಇಷ್ಟವಿಲ್ಲ.  ಅವರೆಲ್ಲ ಒಂದು, ನಾನೊಬ್ಬನೇ ಒಂದು. ಏನು ಮಾಡಲಿ?” ಎಂದ.

ತಂದೆಗೆ ವ್ಯಸನವಾಯಿತು. ಚೆನ್ನಾಗಿ ವಿದ್ಯೆ ಕಲಿತ ಮಗ ಇವನೇ, ಇವನಿಗೇ ಹೀಗಾಯಿತೆ ಎಂದು ಮರುಗಿದ. “ನಿನಗೆ ಪಾಲು ಕೊಡಬೇಕೆಂಬುದು ಮರೆತು ಹೋಯಿತು” ಎಂದು ನಾಭಾಗನ ಅಣ್ಣಂದಿರು ಹೇಳಿದ್ದು ಕುಂಟು ನೆಪ, ಅವನಿಗೆ ಪಾಲು ಕೊಡಲು ಅವರಿಗೆ ಇಷ್ಟವಿಲ್ಲ ಎಂದು ನಭಗನಿಗೆ ಅರ್ಥವಾಯಿತು. ತಾನು ಕಾಡಿನಲ್ಲಿರುವವನು, ಏನು ಮಾಡಬಹುದು? ಸರಿ, ಈ ಮಗ ವಿದ್ಯೆಯಿಂದಲೇ ಮುಂದೆ ಬರಲಿ ಎಂದು ತೀರ್ಮಾನಿಸಿದ.

“ನಾಭಾಗ, ನಿನ್ನ ಅಣ್ಣಂದಿರು ಮೋಸದಿಂದ ಹಂಚಿಕೊಂಡಿರುವ ರಾಜ್ಯ ನಿನಗೆ ಬೇಡ. ದುರಾಸೆಪಟ್ಟರೆ ಸುಖವಿಲ್ಲ. ಜೀವನ ನಡೆಸಲು ನಿನಗೊಂದು ಉಪಾಯ ಹೇಳುತ್ತೇನೆ. ಇಲ್ಲಿಗೆ ಸಮೀಪದಲ್ಲೇ ಆಂಗೀರಸ ಮಹರ್ಷಿಯ ಆಶ್ರಮವಿದೆ. ಆ ಮಹಾಮುನಿ ಹನ್ನೆರಡು ದಿವಸಗಳ ‘ಸತ್ರಯಾಗ’ ಎಂಬುದನ್ನು ಮಾಡುತ್ತಿದ್ದಾರೆ. ಅವರು ದೊಡ್ಡ ವಿದ್ವಾಂಸರು. ಎಲ್ಲವನ್ನೂ ಅರಿತಿದ್ದಾರೆ. ಆದರೂ ಯಾಗದ ಆರನೆಯ ದಿವಸ ಮಾಡಬೇಕಾದ ಕಾರ್ಯವನ್ನು ತಿಳಿಯದೆ ಕಷ್ಟಪಡುತ್ತಿದ್ದಾರೆ. ಆ ಕಾರ್ಯದಲ್ಲಿ ಹೇಳಬೇಕಾದ ಎರಡು ವೇದಮಂತ್ರಗಳನ್ನು ನಿನಗೆ ಉಪದೇಶಿಸುತ್ತೇನೆ.  ನೀನು ಅಲ್ಲಿಗೆ ಹೋಗಿ ಆ ಸಂದರ್ಭದಲ್ಲಿ ಈ ಮಂತ್ರಗಳನ್ನು ಹೇಳು. ಇದರಿಂದ ಆಂಗೀರಸ ಮಹರ್ಷಿ ಸಂತೋಷಪಡುತ್ತಾರೆ. ಮುಂದೆ ನಿನಗೆ ಒಳ್ಳೆಯದೇ ಆಗುತ್ತದೆ. ಅಂಗೀರಸರ ಯಾಗ ಈ ಎರಡು ಮಂತ್ರಗಳಿಂದ ಸಫಲವಾಗುತ್ತದೆ” ಎಂದು ಹೇಳಿದ. ಮಗನಿಗೆ ಎರಡು ಮಂತ್ರಗಳನ್ನೂ ಉಪದೇಶಿಸಿ ಆಶೀರ್ವದಿಸಿ ಕಳುಹಿಸಿಕೊಟ್ಟ.

ಐಶ್ವರ್ಯ ಸಿಕ್ಕಿತು

ತಂದೆಯ ಆಜ್ಞೆಯಂತೆ ನಾಭಾಗ ಆಂಗೀರಸರ ಯಾಗಶಾಲೆಗೆ ಬಂದ. ಅನೇಕ ಋತ್ವಿಕರಿಂದ ಕೂಡಿದ ಯಾಗಶಾಲೆ ನೋಡಲು ತುಂಬಾ ಚೆನ್ನಾಗಿತ್ತು. ಬಹು ಸಂಭ್ರಮದಿಂದ ಯಾಗ ನಡೆಯುತ್ತಿತ್ತು. ನಾಭಾಗವನ್ನು ಆಂಗೀರಸರು ಗೌರವದಿಂದ ಬರಮಾಡಿಕೊಂಡರು. ನಾಭಾಗ ಯಾಗವನ್ನು ನೋಡುತ್ತಿದ್ದ.

ಯಜ್ಞದ ಆರನೇ ದಿವಸ ಬಂತು. ತಂದೆ ತನಗೆ ಉಪದೇಶಿಸಿದ ಎರಡು ಸೂಕ್ತಗಳನ್ನು ನಾಭಾಗ ಸರಿಯಾದ ಸಮಯದಲ್ಲಿ ಅಂಗೀರಸ ಮಹರ್ಷಿಗೆ ಉಪದೇಶಿಸಿದ. ಯಜ್ಞ ಸಾಂಗವಾಗಿ ಮುಕ್ತಾಯವಾಯಿತು. ಮಹರ್ಷಿಗೆ ತುಂಬಾ ಸಂತೋಷವಾಯಿತು. ಯಜ್ಞ ಮುಗಿದಾಗ ಹೇರಳವಾದ ಧನ-ಧಾನ್ಯ, ಆಭರಣಗಳು ಉಳಿದಿದ್ದುವು. ಅವೆಲ್ಲವನ್ನೂ ನಾಭಾಗನಿಗೆ ಆಂಗೀರಸರು ಕೊಟ್ಟು ಕಳುಹಿಸಿದರು. ಇದರಿಂದ ನಾಭಾಗನಿಗೆ ಬಹು ಸಂತೋಷವಾಯಿತು. ತಂದೆಯ ಆಶೀರ್ವಾದಕ್ಕಾಗಿ ವಂದಿಸಿದನು.

ನಾ ಭಾಗ, ಇದು ತಪ್ಪು

ಈ ಧನವನ್ನು ಸಾಗಿಸುತ್ತಾ ಬರುತ್ತಿರುವಾಗ ಕಪ್ಪು ರೂಪದ ಒಂದು ಆಕೃತಿ ಕಾಣಿಸಿಕೊಂಡಿತು. ಆ ಪುರುಷನು ನಾಭಾಗನಿಗೆ ಅಡ್ಡಲಾಗಿ ಬಂದು ನಿಂತ. ಅವನು ರುದ್ರ. ಯಾಗದಲ್ಲಿ ಉಳಿದದ್ದು ಅವನಿಗೆ ಸೇರಬೇಕು ಎಂದು ಹಿಂದೆ ಋಷಿಗಳು ತೀರ್ಮಾನ ಮಾಡಿದ್ದರು. ಆದುದರಿಂದ ಅವನು ನಾಭಾಗನ್ನು ತಡೆದ.

“ನಾಭಾಗ , ಈ ಯಾಗದಲ್ಲಿ ಉಳಿದ ಧನ ನನಗೆ ಸೇರಬೇಕು. ನೀನು ತೆಗೆದುಕೊಂಡು ಹೋಗುತ್ತಿರುವುದು ತಪ್ಪು” ಎಂದು ಪುರುಷ ಹೇಳಿದ.

ಅದಕ್ಕೆ ನಾಭಾಗ, “ಎಲೈ ಪುರುಷನೇ , ಆಂಗೀರಸ ಋಷಿ ನನಗೆ ಕೊಟ್ಟಿರುವುದರಿಂದ ಇದು ನನಗೆ ಸೇರಿದ್ದು” ಎಂದ.

ಇಬ್ಬರಿಗೂ ವಾದ ವಿವಾದ ಆರಂಭವಾಯಿತು.

ಕೊನೆಗೆ ರುದ್ರನು, “ನಾಭಾಗ, ನಿನ್ನ ತಂದೆಯನ್ನೇ ಕೇಳಿ ಈ ವಿಚಾರವನ್ನು ತೀರ್ಮಾನ ಮಾಡೋಣ ನಡೆ” ಎಂದ.

ನಭಗನ ಬಳಿ ಇಬ್ಬರೂ ಬಂದು ನಡೆದ ವಿಷಯವನ್ನು ತಿಳಿಸಿದರು. ಅದಕ್ಕೆ ನಭಗನು, “ಕುಮಾರ, ಈ ಧನ ರುದ್ರನಿಗೆ ಸೇರಬೇಕಾದುದು ನ್ಯಾಯ. ಹಿಂದೆ ದಕ್ಷಯಾಗದಲ್ಲಿ ಮಿಕ್ಕಿದ್ದ ಧನವು ರುದ್ರನಿಗೆ ಸೇರಬೇಕೆಂದು ಋಷಿಗಳೆಲ್ಲರೂ ತೀರ್ಮಾನಿಸಿದ್ದಾರೆ. ಆದ್ದರಿಂದ ಇದನ್ನು ರುದ್ರನಿಗೆ ಕೊಟ್ಟು ಅವನಲ್ಲಿ ಕ್ಷಮೆ ಕೇಳು’’ ಎಂದು ತಿಳಿಸಿದ.

ರುದ್ರನಿಂದ ವರ ಸಿಕ್ಕಿತು

ತಂದೆಯ ಮಾತಿನಂತೆ ನಾಭಾಗ ರುದ್ರನಲ್ಲಿ ಕ್ಷಮೆ ಕೇಳಿ ತಾನು ತಂದಿದ್ದ ಧನವನ್ನು ರುದ್ರನಿಗೆ ಒಪ್ಪಿಸಿಬಿಟ್ಟ.

ಇದರಿಂದ ರುದ್ರನಿಗೆ ತುಂಬಾ ಸಂತೋಷವಾಯಿತು. ತೃಪ್ತಿಯೂ ಆಯಿತು.

ರುದ್ರನಿಗೆ ನಡೆದ ಸಂಗತಿಗಳೂ ಅರ್ಥವಾದುವು. ನಭಗನು ನ್ಯಾಯವೇ ಮುಖ್ಯ ಎಂದು ಭಾವಿಸಿ, ಮಗನಿಗೇ ಅನುಕೂಲವಿಲ್ಲದ ತೀರ್ಮಾನ ಕೊಟ್ಟ ಎಂದು ಮೆಚ್ಚಿದ; ಜೊತೆಗೆ, ನಾಭಾಗನಿಗೆ ರಾಜ್ಯದಲ್ಲಿ ಭಾಗ ಸಿಕ್ಕದೆ ಹೋಯಿತು, ಈಗ ತಂದೆಯ ತೀರ್ಮಾನದಿಂದ ಆಂಗೀರಸರು ಕೊಟ್ಟಿದ್ದ ಹಣವೂ ಕೈ ಬಿಟ್ಟಿತು ಎಂದು ಕರುಣೆಯುಂಟಾಯಿತು.

“ನಾಭಾಗ, ನಿನ್ನ ಗುಣಕ್ಕೆ ಮೆಚ್ಚಿಗೆ, ನಿನಗೆ ಎಲ್ಲಾ ದೊಡ್ಡ ದೊಡ್ಡ ಮಂತ್ರಗಳನ್ನು ಉಪದೇಶಿಸುತ್ತೇನೆ.ಸತ್ಯವನ್ನು ಬಿಡಬೇಡ. ಸತ್ಯದಿಂದಲೇ ಒಳ್ಳೆಯದಾಗುತ್ತದೆ. ನಿನ್ನ ತಂದೆಯೂ ಧರ್ಮಬುದ್ಧಿಯುಳ್ಳವನು. ಅವನಂತೆ ನೀನೂ ಆಗು . ಈ ಧನವನ್ನೆಲ್ಲಾ ನೀನೇ ಇಟ್ಟುಕೊಂಡು ಸುಖವಾಗಿ ಬಾಳಿ ಬದುಕು ” ಎಂದು ವರಕೊಟ್ಟು ಹೊರಟು ಹೋದನು.

ಅಂಬರೀಷ ಗುರುಕುಲದಲ್ಲಿ

ರುದ್ರನಿಂದಲೇ ಉಪದೇಶ ಪಡೆದ ನಾಭಾಗ ಬಹುದೊಡ್ಡ ವಿದ್ವಾಂಸನಾದ. ಇವನಿಗೆ ಒಬ್ಬ ಮಗ. ಇವನೇ ಮಹಾಮಹಿಮ ಅಂಬರೀಷ. ತಂದೆಯ ಎಲ್ಲಾ ಒಳ್ಳೆಯ ಗುಣಗಳೂ ಮಗನಿಗೆ ಬಂದುವು.

ಅಂಬರೀಷನಿಗೆ ಚಿಕ್ಕ ವಯಸ್ಸಿನಿಂದಲೇ ದೇವರಲ್ಲಿ ಭಕ್ತಿ ಆರಂಭವಾಯಿತು. ಸದಾ ದೇವರ ಧ್ಯಾನ, ಭಜನೆ, ಒಳ್ಳೆಯ ಪುಸ್ತಕಗಳನ್ನು ಓದುವುದು ಇದೇ ಅಂಬರೀಷನ ಅಭ್ಯಾಸವಾಯಿತು.

ಕ್ರಮದಂತೆ ಅಂಬರೀಷ ಗುರುಕುಲ ಸೇರಿದ. ಎಲ್ಲ ವಿದ್ಯೆಗಳನ್ನೂ ಬೇಗನೆ ಕಲಿತುಬಿಟ್ಟ. ಇವನಿಗೆ ವಿದ್ಯೆಯಲ್ಲಿ ತುಂಬಾ ಆಸಕ್ತಿ. ಇದರಿಂದ ವಿದ್ಯೆ ಸುಲಭವಾಗಿ ಬಂತು.

ವಿದ್ಯೆಯಿಂದ ವಿನಯ ಬರುತ್ತದೆ. ತನ್ನ ಹಿರಿಯರಲ್ಲಿ ಹೇಗೆ ನಡೆದುಕೊಳ್ಳಬೇಕು, ಇತರರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂದು ಅಂಬರೀಷ ತಿಳಿದುಕೊಂಡು ಯಾರ ಮನಸ್ಸನ್ನೂ ನೋಯಿಸುವಂತೆ ನಡೆಯುತ್ತಿರಲಿಲ್ಲ. ಎಂತಹ ಕಷ್ಟಕಾಲದಲ್ಲೂ ಸುಳ್ಳು ಹೇಳುತ್ತಿರಲಿಲ್ಲ. ಸತ್ಯವೇ ಬಾಯಲ್ಲಿ ಬರುತ್ತಿತ್ತು.

ರಾಜ ಅಂಬರೀಷ

ಈ ರೀತಿಯ ಒಳ್ಳೆಯ ಗುಣಗಳು ಇದ್ದ ಅಂಬರೀಷ ಬಹು ದೊಡ್ಡ ರಾಜನಾದ. ಪ್ರಜೆಗಳಿಗೆ ಒಳ್ಳೆಯದಾಗಬೇಕು ಎಂಬುದೇ ಅವನ ಗುರಿ. ಹೊರಗಿನಿಂದ ಶತ್ರುಗಳು ಮೇಲೆ ಬೀಳದಂತೆ ಎಚ್ಚರಿಕೆಯಿಂದ ಇದ್ದ. ದೇಶದಲ್ಲಿ ಶಾಂತಿ ಇರುವಂತೆ ಆಳಿದ. ಅಂಬರೀಷನಿಗೆ ದೇವರಲ್ಲಿ ತುಂಬ ಭಕ್ತಿ. ಎಲ್ಲ ಕೆಲಸವನ್ನೂ, ದೇವರಿಗೆ ಒಪ್ಪಿಗೆಯಾಗಲಿ, ದೇವರು ಮೆಚ್ಚುವಂತೆ ಆಗಲಿ ಎಂದು ಶುದ್ಧವಾದ ಮನಸ್ಸಿನಿಂದ ಮಾಡುವನು.

‘ರಾಜ ಹೇಗಿದ್ದರೆ ಪ್ರಜೆಗಳೂ ಹಾಗಿರುತ್ತಾರೆ’ (‘ಯಥಾ ರಾಜ ತಥಾ ಪ್ರಜಾ’) ಎನ್ನುವುದುಂಟು. ಆಳುವವರು ಹೇಗಿದ್ದರೆ ಪ್ರಜೆಗಳೂ ಹಾಗೆಯೇ ಇರುತ್ತಾರೆ. ಆಳುವವರು ಪ್ರಜೆಗಳಿಗೆ ಮೇಲ್ಪಂಕ್ತಿ; ಪ್ರಜೆಗಳು ಅವರನ್ನೆ ಅನುಕರಿಸುತ್ತಾರೆ, ಅವರು ನಡೆದುಕೊಂಡ ಹಾಗೆಯೇ ತಾವೂ ನಡೆದುಕೊಳ್ಳುತ್ತಾರೆ. ಅಂಬರೀಷನಿಗೆ ದೇವರಲ್ಲಿ ಭಕ್ತಿ, ಅವನು ಯಾವಾಗಲೂ ಸತ್ಯವನ್ನೆ ಆಡುವವನು. ಇದರಿಂದ ಪ್ರಜೆಗಳಿಗೂ ದೇವರಲ್ಲಿ ಭಕ್ತಿ ಬೆಳೆಯಿತು. ಅವರು ಧರ್ಮವನ್ನೆ ಅನುಸರಿಸಲು ಕಲಿತರು.

ವ್ರತನಿಷ್ಠ

ದಿನಗಳು ಕಳೆದಂತೆ ಅಂಬರೀಷನಿಗೆ ತನ್ನ ಹೆಂಡತಿ, ಮಕ್ಕಳು, ರಾಜ್ಯ ಎಲ್ಲಿದರಲ್ಲಿಯೂ ಆಸಕ್ತಿ ಹೋಯಿತು. ಸದಾ ದೇವರ ಧ್ಯಾನ, ಅನೇಕ ವ್ರತಗಳನ್ನು ಆಚರಿಸುವನು. ಸದಾ ಒಳ್ಳೆಯ ಯೋಚನೆಗಳನ್ನು ಮಾಡುವನು, ಒಳ್ಳೆಯ ಕೆಲಸಗಳಲ್ಲಿ ಕಾಲ ಕಳೆಯುವನು. ಶ್ರೀ ವಿಷ್ಣುವನ್ನು ಆರಾಧಿಸುವನು.

ಇಷ್ಟು ಒಳ್ಳೆಯ ಜೀವನ ನಡೆಸುತ್ತಿದ್ದ ಅಂಬರೀಷನನ್ನು ಶ್ರೀ ವಿಷ್ಣುವೂ ಮೆಚ್ಚಿದ. ಶ್ರೀ ವಿಷ್ಣುವಿನ ಆಯುಧಗಳಲ್ಲಿ ಸುದರ್ಶನ ಚಕ್ರ ಒಂದು. ಸುದರ್ಶನ ಚಕ್ರ ಎಂದರೆ ವಿಷ್ಣುವಿಗೆ ಬಹು ಪ್ರೀತಿ. ತನ್ನ ಈ ಪ್ರೀತಿಯ ಚಕ್ರವನ್ನೇ ಅಂಬರೀಷನಿಗೆ ಪೂಜಿಸಲು ಕೊಟ್ಟ. ಅಂಬರೀಷನಿಗೆ ಬಹಳ ಸಂತೋಷವಾಯಿತು. ಶ್ರದ್ಧೆಯಿಂದ, ಭಕ್ತಿಯಿಂದ ಸುದರ್ಶನ ಚಕ್ರವನ್ನು ಪೂಜಿಸುತ್ತಿದ್ದ.

ಒಂದು ಏಕಾದಶಿ

ಅಂಬರೀಷನು ಹಲವು ವ್ರತಗಳನ್ನು ಆಚರಿಸುತ್ತಿದ್ದ. ಇವುಗಳಲ್ಲಿ ಏಕಾದಶಿ ವ್ರತವನ್ನು ತನ್ನ ಹೆಂಡತಿಯೊಡನೆ ಆಚರಿಸುತ್ತಿದ್ದ. ತುಂಬಾ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುತ್ತಿದ್ದ. ಗಂಡ ಹೆಂಡತಿ ಇಬ್ಬರೂ ಏಕಾದಶಿ ಇಡೀ ದಿನ ಉಪವಾಸ ಮಾಡುವರು. ಭಗವಂತನ ಧ್ಯಾನ ಮತ್ತು ಭಜನೆಗಳಲ್ಲಿ ದಿನವನ್ನು ಕಳೆಯುವರು. ರಾತ್ರಿಯೆಲ್ಲ ನಿದ್ರೆ ಮಾಡದೆ ದೇವರ ಧ್ಯಾನ ಮತ್ತು ಭಜನೆ ಮಾಡುವರು. ಮರುದಿನ ದ್ವಾದಶಿ. ಅಂದು ದೇವರ ಧ್ಯಾನ ಮಾಡಿ, ಅತಿಥಿಗಳ ಜೊತೆಗೆ ಊಟ ಮಾಡುವರು. (ಇದಕ್ಕೆ ಪಾರಣೆ ಎಂದು ಹೆಸರು) ಅಲ್ಲಿಗೆ ಏಕಾದಶಿ ವ್ರತ ಮುಗಿದಂತೆ. ಅಂಬರೀಷ ಪ್ರತೀ ಏಕಾದಶಿ ದಿನದಂದು ಹೀಗೆ ನಿಷ್ಠೆಯಿಂದ ವ್ರತ ಮಾಡುತ್ತಿದ್ದನು.

‘ಪೂಜ್ಯರು ನನ್ನ ಆತಿಥ್ಯವನ್ನು ಸ್ವೀಕರಿಸಬೇಕು’.

 ಒಂದು ಬಾರಿ ಅಂಬರೀಷ ಒಂದು ವರ್ಷ ಏಕಾದಶಿ ದ್ವಾದಶಿಯ ವ್ರತವನ್ನು ಮಾಡಿ ಕಡೆಯಲ್ಲಿ ವಿಶೇಷವಾಗಿ ಉಪವಾಸ. ಪಾರಣೆ ಮಾಡುವುದು ಎಂದು ತೀರ್ಮಾನಿಸಿದ. ವ್ರತದ ಕೊನೆಯಲ್ಲಿ ಕಾರ್ತೀಕ ಮಾಸ ಬಂದಿತು. ಕಾರ್ತೀಕ ಮಾಸದಲ್ಲಿ ದ್ವಾದಶಿಗೆ ಮೊದಲು ಮೂರು ದಿನಗಳು ಉಪವಾಸ ಮಾಡಿದ. ರಾತ್ರಿಯನ್ನೆಲ್ಲ ದೇವರ ಧ್ಯಾನ, ಪೂಜೆ ಇವುಗಳಲ್ಲಿ ಕಳೆದ. ನಾಲ್ಕನೆಯ ದಿನವೇ ದ್ವಾದಶಿ. ಅಂದು ಯಮುನಾ ನದಿಯಲ್ಲಿ ಸ್ನಾನ ಮಾಡಿದ,ದೇವರ ಪೂಜೆ ಮಾಡಿದ.

ಇಂತಹ ದಿನಗಳಲ್ಲಿ ಅತಿಥಿಗಳು ಬರಬೇಕು ಎಂದು ರಾಜನಿಗೆ ಆಸೆ. ಜ್ಞಾನಿಗಳು, ಪುಣ್ಯಜೀವಿಗಳು, ಹಿರಿಯರು ಬಂದರೆ ಅವರನ್ನು ಸತ್ಕರಿಸಿ ಅವರ ಜೊತೆಗೆ ಊಟ ಮಾಡಿ ಅವರ ಆಶೀರ್ವಾದ ಪಡೆಯಬೇಕು ಎಂದು ಅವನ ಅಂಬಲ. ಆದುದರಿಂದ ದ್ವಾದಶಿಯ ದಿನ ಅತಿಥಿಗಳು ಬಂದಾರೇ ಎಂದು ಕಾದಿರುತ್ತಿದ್ದ.

ದುರ್ವಾಸರೇ ಅತಿಥಿಗಳು

ಅಷ್ಟು ಹೊತ್ತಿಗೆ ದುರ್ವಾಸರು ಬಂದರು. ಅವರು ದೊಡ್ಡ ಋಷಿಗಳು. ತಪಸ್ಸು ಮಾಡಿದವರು. ಆದರೆ ತುಂಬಾ ಕೋಪ ಅವರಿಗೆ.

ದುರ್ವಾಸ ಮುನಿಗಳು ಅಂಬರೀಷನ ಅರಮನೆಗೆ ಬಂದಿಳಿದರು. ಇಂತಹ ತಪಸ್ವಿಗಳು ದ್ವಾದಶಿಯಂದು ಬಂದರು ಎಂದು ಅಂಬರೀಷನಿಗೆ ಆದ ಆನಂದ ಅಷ್ಟಿಷ್ಟಲ್ಲ. ಅವರನ್ನು ಸ್ವಾಗತಿಸಿ ಒಳ್ಳೆಯ ಪೀಠದಲ್ಲಿ ಕುಳ್ಳಿರಿಸಿದ. ನಮಸ್ಕಾರ ಮಾಡಿದ. “ತಾವು ಕ್ಷೇಮವೇ? ತಪಸ್ಸು ತೊಂದರೆ ಇಲ್ಲದೆ ನಡೆಯುತ್ತಿದೆಯ?” ಎಂದು ಪ್ರಶ್ನಿಸಿದ. ಅನಂತರ, “ತಮ್ಮಂತಹ ಹಿರಿಯರು ಅರಮನೆಗೆ ಬಂದದ್ದು ನನ್ನ ಭಾಗ್ಯ. ಇಂದು ದ್ವಾದಶಿಯ ಪಾರಣೆ. ಪೂಜ್ಯರು ನನ್ನ ಆತಿಥ್ಯ ಸ್ವೀಕರಿಸಬೇಕು. ಅರಮನೆಯಲ್ಲಿಯೆ ಊಟ ಮಾಡಬೇಕು” ಎಂದು ಪ್ರಾರ್ಥಿಸಿದ.

ದುರ್ವಾಸರು, “ಅಂಬರೀಷ, ನಿನ್ನ ಆತಿಥ್ಯವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ನದಿಗೆ ಹೋಗಿ ಸ್ನಾನ, ಪೂಜೆ ಎಲ್ಲ ಮುಗಿಸಿ ಬರುತ್ತೇನೆ” ಎಂದರು. ರಾಜ ಒಪ್ಪಿದ.

ದುರ್ವಾಸ ಮುನಿ ನದಿಗೆ ಹೊರಟರು. ಅಂಬರೀಷನು ಅವರು ಬರುವುದನ್ನೆ ನಿರೀಕ್ಷಿಸುತ್ತಾ ಕುಳಿತುಕೊಂಡ. 

‘ಅಂಬರೀಷ ನೀನೇ ನನ್ನನ್ನು ಕಾಪಾಡಬೇಕು’.

 ದುರ್ವಾಸರು ಬರಲಿಲ್ಲವಲ್ಲ!

ಋಷಿ ನದಿಯಲ್ಲಿ ಸ್ನಾನ ಮಾಡಿದರು. ಅನಂತರ ದೇವರ ಧ್ಯಾನಕ್ಕೆ ಕುಳಿತರು. ಇಡೀ ಪ್ರಪಂಚವನ್ನೇ ಮರೆತರು. ಎಷ್ಟು ಹೊತ್ತಾಯಿತು ಎಂದೇ ಅವರಿಗೆ ತಿಳಿಯಲಿಲ್ಲ. ದೇವರಲ್ಲಿ ಮನಸ್ಸನ್ನು ನಿಲ್ಲಿಸಿ ಮೈಮರೆತರು.

ಮಧ್ಯಾಹ್ನ ಕಳೆಯಿತು. ಸಾಯಂಕಾಲ ಆಯಿತು.

ಆದರೂ ದುರ್ವಾಸ ಮುನಿ ತಮ್ಮ ಪೂಜೆಯನ್ನು ಮುಗಿಸಿಕೊಂಡು ನದಿಯಿಂದ ಬರಲೇ ಇಲ್ಲ.

ಅಂಬರೀಷನಿಗೆ ತುಂಬ ಯೋಚನೆಯಾಯಿತು. ಇನ್ನೇನು, ದ್ವಾದಶಿಯ ದಿವಸ ಮುಗಿಯುತ್ತಾ ಬಂದಿದೆ. ಈಗ ಏನೂ ಊಟ ಮಾಡದಿದ್ದರೆ ತಾನು ಮಾಡಿದ ವ್ರತ ವ್ಯರ್ಥವಾಗುತ್ತದೆ. ಏನಾದರೂ ತೆಗೆದುಕೊಂಡರೆ ಬಂದ ಅತಿಥಿಯನ್ನು ಬಿಟ್ಟು ಊಟ ಮಾಡಿದ ಪಾಪ ಬರುತ್ತದೆ. ದುರ್ವಾಸ ಮುನಿಗಳಿಗೆ ಬಹು ಕೋಪ ಬೇರೆ. ಈ ಉಭಯ ಸಂಕಟದಲ್ಲಿ ಸಿಕ್ಕಿಕೊಂಡು ತುಂಬಾ ದುಃಖ ಪಡುತ್ತಿದ್ದ ರಾಜ ಅಂಬರೀಷ.

ಕಡೆಗೆ ತನ್ನ ಆಸ್ಥಾನದ ಜ್ಞಾನಿಗಳಾದ ಬ್ರಾಹ್ಮಣರನ್ನು ಈ ವಿಷಯದ ಬಗ್ಗೆ ಕೇಳಿದ. ಅದಕ್ಕೆ ಅವರು “ರಾಜ, ಭಗವಂತನನ್ನು ಆರಾಧಿಸಿದ ತೀರ್ಥವನ್ನು ಸ್ವೀಕರಿಸಿ. ಇದರಿಂದ ವ್ರತಭಂಗವಾಗುವುದಿಲ್ಲ” ಎಂದರು.

ಅಂಬರೀಷ ಬ್ರಾಹ್ಮಣರ ಮಾತಿನಂತೆ ದೇವರ ತೀರ್ಥ ಸ್ವೀಕಾರ ಮಾಡಿದ. ದುರ್ವಾಸ ಮುನಿಯ ಆಗಮನಕ್ಕಾಗಿ ಕಾದು ನಿಂತ.

ದುರ್ವಾಸರು ಬಂದರು, ಆದರೆ!

ಎಷ್ಟೋ ಗಂಟೆಗಳಾದ ಮೇಲೆ ದುರ್ವಾಸರ ಧ್ಯಾನ ಮುಗಿಯಿತು. ಎದ್ದು ತನ್ನ ಪೂಜೆಯನ್ನು ಮುಗಿಸಿಕೊಂಡು ಅರಮನೆಗೆ ಬಂದರು. ಅಂಬರೀಷನು ತಮ್ಮನ್ನು ಬಿಟ್ಟು ತೀರ್ಥ ಸ್ವೀಕಾರ ಮಾಡಿದ ಎಂದು ಜ್ಞಾನದೃಷ್ಟಿಯಿಂದ ತಿಳಿಯಿತು.

ದುರ್ವಾಸ ಮುನಿಗಳಿಗೆ ಕೋಪ ಬಂತು. ಮೈ ನಡುಗಿತು. ಕಣ್ಣು ಕೆಂಪಗಾಯಿತು. ಹುಬ್ಬು ಗಂಟಾಯಿತು.

ಅಂಬರೀಷ ಬಹು ವಿನಯ, ಭಕ್ತಿಗಳಿಂದ ಋಷಿಗೆ ನಮಸ್ಕರಿಸಿ, “ದಯಮಾಡಿ, ತಮಗಾಗಿಯೇ ಕಾಯುತ್ತಿರುವೆನು” ಎಂದು ವಿಜ್ಞಾಪಿಸಿಕೊಂಡನು.

ಅದಕ್ಕೆ ದುರ್ವಾಸ ಮುನಿ “ಅಂಬರೀಷ, ನೀನು ನನ್ನ ಐಶ್ವರ್ಯದಿಂದ ಅವಿವೇಕಿಯಾಗಿದ್ದೀಯೆ. ಅಹಂಕಾರ ತುಂಬಿ ತುಳುಕಾಡುತ್ತಿದೆ. ನಿನ್ನ ಅರಮನೆಗೆ ನಾನಾಗಿ ಬಂದೆ, ನಾನು ನಿನ್ನ ಅತಿಥಿ. ನನ್ನನ್ನು ಪಾರಣೆಗೆ ನಿಲ್ಲಿ ಎಂದು ಕರೆದೆ. ನನ್ನನ್ನು ಬಿಟ್ಟು ನೀನು ಪಾರಣೆ ಮಾಡಿದ್ದೀಯೆ. ಅದಕ್ಕಾಗಿ ತಕ್ಕ ಫಲವನ್ನು ಈಗಲೇ ಅನುಭವಿಸುತ್ತೀಯೆ” ಎಂದರು.

ಅಂಬರೀಷನು. “ಪೂಜ್ಯರು ಮನ್ನಿಸಬೇಕು. ಏಕಾದಶಿ ವ್ರತ ಮಾಡಿದ ನಂತರ ದ್ವಾದಶಿ ಮುಗಿಯುವ ಮೊದಲು ಏನನ್ನಾದರೂ ಸ್ವೀಕರಿಸಬೇಕು. ಇಲ್ಲದಿದ್ದರೆ ವ್ರತ ಕೆಡತ್ತದೆ. ದ್ವಾದಶಿ ಇನ್ನೇನು ಮುಗಿಯುತ್ತದೆ ಎನ್ನುವವರೆಗೆ ತಮಗಾಗಿ ಕಾದೆ. ತಾವು ಬರಲಿಲ್ಲ. ನಾನು ದೇವರ ತೀರ್ಥವನ್ನು ಮಾತ್ರ ತೆಗೆದುಕೊಂಡಿದ್ದೇನೆ. ಅಡುಗೆ ಸಿದ್ಧವಾಗಿದೆ. ತಾವು ಊಟಕ್ಕೆ ಏಳಬೇಕು. ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು” ಎಂದು ವಿನಯದಿಂದ ಹೇಳಿದನು.

ದುರ್ವಾಸರ ಕೋಪ ಆರಲಿಲ್ಲ. ಅವರು ಅಂಬರೀಷನನ್ನು ಕೊಲ್ಲಲು ಒಂದು ಕ್ರೂರ ರೂಪದ ಶಕ್ತಿ ದೇವತೆಯನ್ನು ತಮ್ಮ ಮಂತ್ರಶಕ್ತಿಯಿಂದ ಸೃಷ್ಟಿಸಿದರು.

ಸುದರ್ಶನ ಚಕ್ರ ಹೊರಟಿತು

ಆ ಶಕ್ತಿದೇವತೆ ನೆಲ ನಡುಗುವಂತೆ ಗರ್ಜಿಸುತ್ತಾ ಕೈಯಲ್ಲಿ ತ್ರಿಶೂಲ ಹಿಡಿದು ಅಂಬರೀಷನ ಮುಂದೆ ನಿಂತಿತು.

ಅಂಬರೀಷನ ಪರಿವಾರದವರೆಲ್ಲ ನಡುಗಿದರು. “ಇನ್ನು ರಾಜನ ಗತಿ ಏನು? ಯಾವ ತಪ್ಪೂ ಮಾಡದಿದ್ದರೂ ರಾಜನ ಉಳಿಯುವ ಆಸೆಯೇ ಇಲ್ಲ” ಎಂದು ಕಣ್ಣೀರಿಟ್ಟರು.

ಅಂಬರೀಷನು ಸ್ವಲ್ಪವೂ ಹೆದರಲಿಲ್ಲ. ಮನಸ್ಸಿನಲ್ಲಿ ಶ್ರೀಹರಿಯ ಧ್ಯಾನ ಮಾಡುತ್ತಾ ಕೈಮುಗಿದು ನಿಂತಿದ್ದನು. ತನ್ನ ಭಕ್ತನ ಈ ಕಷ್ಟಸ್ಥಿತಿಯನ್ನು ನೋಡಿ ಶ್ರೀಮನ್ನಾರಾಯಣನು ತನ್ನ ಸುದರ್ಶನ ಚಕ್ರವನ್ನು ಪ್ರೇರೇಪಿಸಿ ದುರ್ವಾಸರು ಸೃಷ್ಟಿಸಿದ ಶಕ್ತಿದೇವತೆಯಿಂದ ಭಕ್ತನ ರಕ್ಷಣೆಯಾಗುವಂತೆ ಕಳುಹಿಸಿಕೊಟ್ಟನು.

ಆಶ್ಚರ್ಯ! ಒಂದು ಕ್ಷಣದಲ್ಲಿ ಸುದರ್ಶನ ಚಕ್ರ ದೊಡ್ಡ ಜ್ವಾಲೆಯೊಡನೆ ಹೊರಟು ಶಕ್ತಿ ದೇವತೆಯನ್ನು ಅದೇ ಸ್ಥಳದಲ್ಲಿ ಸಂಹರಿಸಿಬಿಟ್ಟಿತು. ಅನಂತರ ದುರ್ವಾಸರನ್ನು ಕೊಲ್ಲಲು ಅವರನ್ನು ಅಟ್ಟಿಸಿಕೊಂಡು ಹೊರಟಿತು.

ದುರ್ವಾಸರಿಗೆ ಭಯವಾಯಿತು. ತಪ್ಪಿಸಿಕೊಳ್ಳಲು ಓಡಿದರು.

ವಿಷ್ಣುವಿನ ಸುದರ್ಶನ ಚಕ್ರವು ಅಗ್ನಿ ಜ್ವಾಲೆಯನ್ನು ಕಾರುತ್ತಾ ಭಯಂಕರವಾದ ಶಬ್ದ ಮಾಡುತ್ತಾ ದುರ್ವಾಸ ಮುನಿಯನ್ನು ಅಟ್ಟಿಸಿಕೊಂಡು ಹೋಯಿತು.

ದುರ್ವಾಸರೂ ತಪಸ್ವಿ, ಅವರ ಶಕ್ತಿಯೂ ಕಡಿಮೆಯಲ್ಲ. ಆದರೆ ವಿಷ್ಣುವಿನ ಚಕ್ರದ ಮುಂದೆ ಅವರು ಏನೂ ಮಾಡುವಂತಿರಲಿಲ್ಲ.

ಲೋಕದಿಂದ ಲೋಕಕ್ಕೆ

ತಮ್ಮ ಕಡೆ ನುಗ್ಗಿದ ಚಕ್ರವನ್ನು ಕಂಡು ದುರ್ವಾಸರು ಬೆದರಿದರು. ನಿಲ್ಲದೆ ಓಡಿದರು. ಚಕ್ರ ಅವರ ಬೆನ್ನಟ್ಟಿತು. ಋಷಿಯು ಅದರಿಂದ ತಪ್ಪಿಸಿಕೊಳ್ಳಬೇಕೆಂದು ಮೇರು ಪರ್ವತದ ಗುಹೆಯನ್ನು ಹೊಕ್ಕರು, ಚಕ್ರ ಅವರ ಹಿಂದೆಯೇ ನುಗ್ಗಿತು. ಋಷಿ ಸ್ವರ್ಗಕ್ಕೆ ಓಡಿದರು. ಹಿಂದೆಯೇ ಸುದರ್ಶನ ಚಕ್ರ, ಬೆಟ್ಟ, ಕಣಿವೆ, ಕಾಡು – ಎಲ್ಲಿ ಹೋದರೂ ಬಿಡದು ಚಕ್ರ. ಭೂಲೋಕ, ಸ್ವರ್ಗ ಹೀಗೆ ಲೋಕಲೋಕಗಳಲ್ಲಿ ಅಲೆದರು ಋಷಿ. ಹಿಂದೆಯೇ ಸಾಗಿತು ಸುದರ್ಶನ ಚಕ್ರ. ಋಷಿ ಬಳಲಿದರು, ದಿಕ್ಕುಗೆಟ್ಟರು. ಕಡೆಗೆ ಬ್ರಹ್ಮನ ಸತ್ಯಲೋಕದತ್ತ ತಿರುಗಿದರ.

ದುರ್ವಾಸ ಮುನಿ ಬ್ರಹ್ಮನ ಬಳಿಗೆ ಹೋದರು.

“ಈ ಸುದರ್ಶನ ಚಕ್ರ ನನ್ನನ್ನು ಕಾಡುತ್ತಿದೆ. ದಯಾಮಾಡಿ ಇದನ್ನು ತಡೆದು ನನ್ನನ್ನು ಕಾಪಾಡು” ಎಂದು ಬೇಡಿಕೊಂಡರು. ಅದಕ್ಕೆ ಬ್ರಹ್ಮನು, “ಸುದರ್ಶನ ಚಕ್ರವನ್ನು ತಡೆಯುವ ಶಕ್ತಿ ನನ್ನಲ್ಲಿಲ್ಲ. ಆ ವಿಷ್ಣುವೇ ನಿನ್ನನ್ನು ಕಾಪಾಡಬೇಕು, ವಿಷ್ಣುವನ್ನು ಹೋಗಿ ಪ್ರಾರ್ಥಿಸು” ಎಂದು ಬಿಟ್ಟ.

ಅಲ್ಲಿಂದ ದುರ್ವಾಸರು ಶಂಕರನ ಬಳಿಗೆ ಬಂದರು. “ಸುದರ್ಶನ ಚಕ್ರದಿಂದ ನನ್ನನ್ನು ಕಾಪಾಡು” ಎಂದು ಪ್ರಾರ್ಥಿಸಿದರು. “ಇದು ವಿಷ್ಣುವಿನ ಚಕ್ರ, ವಿಷ್ಣುವನ್ನೇ ಪ್ರಾರ್ಥಿಸು” ಎಂದ ಶಂಕರ.

ತಾವು ಮಾಡಿದುದು ತಪ್ಪು, ಅಂಬರೀಷನದು ತಪ್ಪಿಲ್ಲ ಎಂದು ದುರ್ವಾಸರಿಗೆ ಈಗ ಅರ್ಥವಾಯಿತು. ವ್ರತವನ್ನು ಕಾಪಾಡಿಕೊಳ್ಳಲು ಅಂಬರೀಷ ತೀರ್ಥವನ್ನು ಸೇವಿಸಿದ, ಅಹಂಕಾರದಿಂದ ಅಲ್ಲ. ಅವನು ವಿನಯದಿಂದಲೇ ನಡೆದುಕೊಂಡ. ಅವನನ್ನು ಕೊಲ್ಲಲು ಶಕ್ತಿಯನ್ನು ಕಳುಹಿಸಿದ್ದು ತಮ್ಮ ತಪ್ಪು, ತಾವು ಅಷ್ಟು ಕೋಪ ಮಾಡಿಕೊಂಡದ್ದೇ ಎಲ್ಲ ಅನರ್ಥಕ್ಕೆ ಕಾರಣ ಎಂದು ತಿಳಿಯಿತು.

ದುರ್ವಾಸ ಮುನಿ ವಿಷ್ಣುವಿನ ಹತ್ತಿರ ಹೋದರು. “ಎಲೈ ಶಂಖಚಕ್ರಗದಾಧರ, ನನ್ನನ್ನು ಕಾಪಾಡು. ನಿನ್ನನ್ನು ಬಿಟ್ಟು ಬೇರೆ ರಕ್ಷಿಸುವವರಿಲ್ಲ. ನಾನು ಮಾಡಿದ ತಪ್ಪನ್ನು ಕ್ಷಮಿಸು. ನಿನ್ನ ಸುದರ್ಶನ ಚಕ್ರವನ್ನು ತಡೆದು ನನ್ನ ಪ್ರಾಣವನ್ನು ಉಳಿಸು” ಎಂದು ಅನೇಕ ವಿಧಗಳಲ್ಲಿ ಪ್ರಾರ್ಥಿಸಿದರು.

ಅಂಬರೀಷನನ್ನೇ ಆಶ್ರಯಿಸು

ಮಹಾವಿಷ್ಣುವು ನಗುತ್ತಾ, “ದುರ್ವಾಸ ಮುನಿ, ಇದು ನನ್ನಿಂದ ಸಾಧ್ಯವಿಲ್ಲ. ನನಗೆ ನೀನು ಅಪರಾಧ ಮಾಡಿದರೂ ಸಹಿಸುತ್ತೇನೆ. ಆದರೆ ನನ್ನ ಭಕ್ತರಲ್ಲಿ ನೀನು ತಪ್ಪು ಮಾಡಿದರೆ ಅದಕ್ಕೆ ಕ್ಷಮೆಯೇ ಇಲ್ಲ. ನಾನು ಭಕ್ತರ ಅಧೀನ. ಅವರು ಕರೆದಾಗ ಹೋಗಿ ಸಹಾಯ ಮಾಡುವುದು ನನ್ನ ಕರ್ತವ್ಯ. ನಾನು ಈಗ ಏನೂ ಮಾಡಲೂ ಸಾಧ್ಯವಿಲ್ಲ. ದುರ್ವಾಸ, ತಪಸ್ಸು ಮತ್ತು ವಿದ್ಯೆಗಳಿಂದ ಶಕ್ತಿ ಬರುತ್ತದೆ. ಅದನ್ನು ಇತರರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಉಪಯೋಗಿಸಬೇಕು. ಅದನ್ನು ತಪ್ಪಾಗಿ, ತನ್ನ ಜಂಬಕ್ಕೆ ಅಥವಾ ಇತರರಿಗೆ ಕೆಡುಕನ್ನು ಮಾಡುವುದಕ್ಕೆ ಉಪಯೋಗಿಸಿದರೆ, ಹಾಗೆ ಉಪಯೋಗಿಸಿದವನಿಗೇ ಕೆಡುಕು. ನೀನು ಅಂಬರೀಷನನ್ನೇ ಆಶ್ರಯಿಸು. ಅವನು ನಿನ್ನನ್ನು ಕಾಪಾಡಿದರೆ ಮಾತ್ರ ನೀನು ಉಳಿಯುತ್ತೀಯೆ” ಎಂದ.

ಅಂಬರೀಷನ ಬಳಿಗೆ

ದುರ್ವಾಸರಿಗೆ ತುಂಬಾ ದುಃಖವಾಯಿತು. ಸುದರ್ಶನ ಚಕ್ರ ಇನ್ನೂ ಅವರ ಹಿಂದೆಯೇ ಬರುತ್ತಿತ್ತು. ಬ್ರಹ್ಮ, ವಿಷ್ಣು, ಈಶ್ವರ – ತ್ರಿಮೂರ್ತಿಗಳೂ ಅವರನ್ನು ರಕ್ಷಿಸುವುದು ಸಾಧ್ಯವಿಲ್ಲ ಎಂದುಬಿಟ್ಟರು. ಅಂಬರೀಷನಲ್ಲಿಗೆ ಓಡಿಬಂದು ಅವನ ಕಾಲು ಮುಟ್ಟಿ ನಮಸ್ಕರಿಸಿದರು.

ಇಷ್ಟೆಲ್ಲ ನಡೆಯುವ ಹೊತ್ತಿಗೆ ಎಷ್ಟೋ ದಿನಗಳು ಕಳೆದುಹೋಗಿದ್ದವು. ದುರ್ವಾಸರು ಸತ್ಯಲೋಕ, ಕೈಲಾಸ, ವೈಕುಂಠಗಳನ್ನೆಲ್ಲ ತಿರುಗಿಕೊಂಡು ಬಂದರಲ್ಲವೆ! ಅಲ್ಲಿಯವರೆಗೆ ಅಂಬರೀಷನು ತನ್ನ ಅತಿಥಿ ದುರ್ವಾಸರು ಊಟ ಮಾಡಿಲ್ಲ ಎಂದು ಉಪವಾಸವೇ ಇದ್ದನು.

ದುರ್ವಾಸರು ಅವನನ್ನು ಕುರಿತು, “ಭಕ್ತ ಶ್ರೇಷ್ಠ ಅಂಬರೀಷ ಮಹಾರಾಜ! ನನ್ನನ್ನು ರಕ್ಷಿಸಲು ತ್ರಿಮೂರ್ತಿಗಳಿಗೂ ಸಾಧ್ಯವಾಗಲಿಲ್ಲ. ನಿನ್ನ್ನೇ ಕೇಳು ಎಂದುಬಿಟ್ಟರು. ತಪ್ಪನ್ನೇ ಮಾಡದ ನಿನ್ನ ಮೇಲೆ ನಾನು ಕೋಪ ಮಾಡಿಕೊಂಡೆ. ನಿನ್ನನ್ನು ಕೊಲ್ಲಲು ಪ್ರಯತ್ನಿಸಿದೆ. ಎಲ್ಲವನ್ನೂ ಮರೆತುಬಿಡು. ಈ ಸುದರ್ಶನ ಚಕ್ರದಿಂದ ನೀನೇ ನನ್ನನ್ನು ಕಾಪಾಡಬೇಕು” ಎಂದು ಪ್ರಾರ್ಥಿಸಿದರು.

‘ದುರ್ವಾಸ ಮುನಿ, ನೀನು ಅಂಬರೀಷನನ್ನೇ ಆಶ್ರಯಿಸು.’

 ಚಕ್ರರಾಜನೇ,ದುರ್ವಾಸ ಮುನಿಯನ್ನು ರಕ್ಷಿಸು

 

ಅಂಬರೀಷನದು ಬಹು ಒಳ್ಳೆಯ ಸ್ವಭಾವ. ದುರ್ವಾಸರು ತಪಸ್ವಿಗಳು ಎಂದು ಅವನಿಗೆ ಇನ್ನೂ ಅವರಲ್ಲಿ ಪೂಜ್ಯಭಾವ ಇದ್ದಿತು. ಅವರ ಸ್ಥಿತಿಯನ್ನು ನೋಡಿ ‘ಅಯ್ಯೋ ಪಾಪ’ ಎನ್ನಿಸಿತು. ಅಲ್ಲದೆ ಇಂತಹ ಋಷಿ ತನ್ನ ಕಾಲನ್ನು ಮುಟ್ಟಿದರಲ್ಲಾ ಎಂದು ಸಂಕೋಚವಾಯಿತು. ದುರ್ವಾಸ ಮುನಿಯನ್ನು ಬೆನ್ನಟ್ಟಿ ಬಂದ ಸುದರ್ಶನ ಚಕ್ರವನ್ನು ಈ ರೀತಿಯಾಗಿ ಪ್ರಾರ್ಥಿಸತೊಡಗಿದನು: “ಎಲೈ ತೇಜೋರೂಪಿಯಾದ ಚಕ್ರರಾಜನೇ! ನೀನೇ ಅಗ್ನಿಯು, ಸೂರ್ಯನೂ ನೀನೇ, ನಕ್ಷತ್ರಗಳಿಗೆ ಸ್ವಾಮಿಯಾದ ಚಂದ್ರನೂ ನೀನೆ, ನೀನೇ ಧರ್ಮವು, ನೀನೇ ಧೈರ್ಯವು. ಅಧರ್ಮಶೀಲರಾದ ಕ್ರೂರನನ್ನು ಸಂಹರಿಸಿ, ಸಾಧುಸಂತರನ್ನು ರಕ್ಷಿಸುತ್ತಿರುವೆ. ನಿನಗೆ ಯಾರೂ ಎದುರಿಲ್ಲ. ನೀನು ಯಾವ ಅದ್ಭುತ ಕಾರ್ಯವನ್ನಾದರೂ ಮಾಡಬಲ್ಲೆ, ನೀನು ಕರುಣಿಸಿದರೆ ಯಾವುದು ತಾನೇ ಅಸಾಧ್ಯ? ಆದ್ದರಿಂದ ನಾನು ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ದುರ್ವಾಸರನ್ನು ರಕ್ಷಿಸು”. ಹೀಗೆ ಅಂಬರೀಷನು ಚಕ್ರವನ್ನು ನಿರ್ಮಲ ಮನಸ್ಸಿನಿಂದ ಪ್ರಾರ್ಥನೆ ಮಾಡಿದ.

ದುರ್ವಾಸರೇನೋ ಅಂಬರೀಷನನ್ನು ಕೊಲ್ಲಲು ಹೋದರು. ತಪ್ಪು ಮಾಡದ ಅಂಬರೀಷನನ್ನು ಕಾಡಿದರು. ಆದರೆ ಅಂಬರೀಷ ಅದೊಂದನ್ನೂ ಮನಸ್ಸಿನಲ್ಲಿಡಲಿಲ್ಲ. “ನೀವು ಹೀಗೆ ಮಾಡಿದಿರಿ” ಎಂದು ಆಕ್ಷೇಪಣೆಯನ್ನೂ ಮಾಡಲಿಲ್ಲ. ಶರಣಾಗತರಾದ ದುರ್ವಾಸ ಮುನಿಗಾಗಿ ಸುದರ್ಶನ ಚಕ್ರಕ್ಕೆ ಪ್ರಾರ್ಥನೆ ಮಾಡಿದ.

ಸುದರ್ಶನ ಚಕ್ರ ಕಾಪಾಡಿತು

ಅಂಬರೀಷನ ಪ್ರಾರ್ಥನೆಯಂತೆ ಸುದರ್ಶನ ಚಕ್ರದ ರಾಜನು ದಿವ್ಯರೂಪದಿಂದ ಪ್ರತ್ಯಕ್ಷನಾದನು.ಒಳ್ಳೆಯ ಕಾಂತಿಯ ಶರೀರ,ಹದಿನಾರು ತೋಳುಗಳು, ಹದಿನಾರು ಕೈಗಳು. ಈ ದಿವ್ಯದರ್ಶನವನ್ನು ಅಂಬರೀಷನು ಪಡೆದು ತುಂಬಾ ಆನಂದಪಟ್ಟನು. ಮತ್ತೊಮ್ಮೆ ದುರ್ವಾಸ ಮುನಿಯನ್ನು ಕಾಪಾಡುವಂತೆ ಚಕ್ರರಾಜನನ್ನು ಭಕ್ತಿಯಿಂದ ಪ್ರಾರ್ಥಿಸಿದನು.

ಅಂಬರೀಷನ ಪ್ರಾರ್ಥನೆಯಂತೆ ಚಕ್ರರಾಜನು ದುರ್ವಾಸ ಮುನಿಯನ್ನು ಕಾಪಾಡುವೆನೆಂದು ಅಭಯಕೊಟ್ಟನು. ಇದರಿಂದ ಅಂಬರೀಷನಿಗೆ ಆದ ಆನಂದ ಅಷ್ಟಿಷ್ಟಲ್ಲ. ಅಂತೂ ಮಹಿಮೆಯಿಂದ ದುರ್ವಾಸರು ಉಳಿದಂತಾಯಿತು.

ಇದಾದ ನಂತರ ಚಕ್ರ ರಾಜನು ದುರ್ವಾಸ ಮುನಿಯನ್ನು ಕುರಿತು, “ಎಲೈ ಋಷಿ! ಬ್ರಾಹ್ಮಣನೆಂದರೆ ಕೋಪ, ಆಸೆ ಇಲ್ಲದಿರುವವನು. ಅವನು ಸದಾ ದಯಾಶೀಲನಾಗಿರಬೇಕು. ಆಚಾರನಿಷ್ಠನಾಗಿರಬೇಕು, ವಿಷ್ಣು ಭಕ್ತರಲ್ಲಿ ಸದಾ ಪ್ರೀತಿಯಿಂದಿರಬೇಕು. ಕೋಪ ಮನುಷ್ಯನಿಗೆ ತುಂಬಾ ಕೆಟ್ಟದ್ದು. ಕೋಪಿಷ್ಟನು ತಂದೆ ತಾಯಿಯನ್ನು ಬೇಕಾದರೂ ಕೊಲ್ಲಬಲ್ಲನು. ಭಗವಂತನಲ್ಲಿ ಭಕ್ತಿ ಇಟ್ಟಿರುವ ನಿರಪರಾಧಿಯಾದ ಅಂಬರೀಷನನ್ನು ಸಂಹರಿಸಬಹುದೇ? ನಿನ್ನ ತಪಸ್ಸು, ಹೋಮ, ಯಾಗ ಎಲ್ಲಾ ವ್ಯರ್ಥವಲ್ಲವೆ? ನೀನು ಮಾಡಿರುವ ತಪ್ಪಿಗೆ ಕ್ಷಮೆಯೇ ಇಲ್ಲ. ಆದರೂ ಭಾಗವತೋತ್ತಮನಾದ ಅಂಬರೀಷನ ಪ್ರಾರ್ಥನೆಯಿಂದ ನೀನು ಬದುಕಿಕೊಂಡಿದ್ದೀಯೆ! ಮುಂದೆ ಈ ರೀತಿ ನಡೆದುಕೊಳ್ಳಬೇಡ” ಎಂದು ಹೇಳಿ ಅಂತರ್ಧಾನನಾದನು.

ಅಂಬರೀಷನ ಹಿರಿ

ಮಾಡಿದರೆ ಅವನು ಎಂದಿಗೂ ಕಾಪಾಡುವುದಿಲ್ಲ ಎಂದು ಈಗ ತಿಳಿಯಿತು. ನೀನಾದರೋ ದೇವರನ್ನೇ ಸ್ವಾಧೀನಪಡಿಸಿಕೊಂಡಿರುವೆ. ನಿನ್ನಂತಹ ಮಹಾತ್ಮನಿಗೆ ಅಸಾಧ್ಯವಾಗಿರುವ ಕಾರ್ಯ ಯಾವುದಿದೆ? ನಿನ್ನ ಗುಣದಿಂದ ದೇವತೆಗಳು ಪ್ರಸನ್ನರಾಗಿದ್ದಾರೆ”

ವ್ರತ ಮುಗಿಯಿತು

ದುರ್ವಾಸ ಮುನಿ ಹೀಗೆ ಹೊಗಳಿದುದನ್ನು ಕೇಳಿ ಅಂಬರೀಷನಿಗೆ ತುಂಬ ಸಂಕೋಚವಾಯಿತು.

“ಮಹರ್ಷಿಗಳೆ, “ಅವನು ವಿನಯದಿಂದ ಕೈಮುಗಿದು ಹೇಳಿದ, “ನನ್ನನ್ನು ನೀವು ಹೀಗೆ ಹೊಗಳುವುದು ನನಗೆ ಅನುಗ್ರಹ ಮಾಡಿದ ಹಾಗೆ. ಆದರೆ ಇದೆಲ್ಲ ಭಗವಂತನ ಕೃಪೆ. ನಡೆಸುವವನು ಅವನು, ಅವನು ದಾರಿ ತೋರಿಸಿದ ಹಾಗೆ ನಡೆಯುವವನು ನಾನು, ಅಷ್ಟೆ. ತಾವು ಬಳಲಿದ್ದೀರಿ. ನನ್ನಿಂದ ತಮಗೆ ಇಷ್ಟು ಆಯಾಸವಾಯಿತು. ಕ್ಷಮಿಸಬೇಕು. ತಾವೂ ಏಕಾದಶಿ ಉಪವಾಸ ಮಾಡಿದವರು. ಪಾರಣೆ ಇಲ್ಲ. ಆದುದನ್ನು ಮರೆತು, ಈಗಲೂ ನನ್ನ ಆತಿಥ್ಯವನ್ನು  ಸ್ವೀಕರಿಸಬೇಕು. ಇಲ್ಲಿಯೆ ಪಾರಣೆ ಮಾಡುವ ಅನುಗ್ರಹ ಮಾಡಬೇಕು” ಹೀಗೆ ಹೇಳಿ ಅಂಬರೀಷ ದುರ್ವಾಸರ ಪಾದಗಳಿಗೆ ನಮಸ್ಕರಿಸಿದ.

ಆಗ ದುರ್ವಾಸ ಮುನಿಗೇ ಸಂಕೋಚವಾಯಿತು. ಅಂಬರೀಷನಿಗೆ ಕೇಡು ಬಯಸಿದ ತಮ್ಮ ವಿಷಯದಲ್ಲೂ ಅವನು ಇಷ್ಟು ವಿನಯದಿಂದ, ಪ್ರೀತಿಪುರಸ್ಸರವಾಗಿ ಪ್ರಾರ್ಥಿಸುತ್ತಿರುವುದನ್ನು ಕಂಡು ತುಂಬಾ ಸಂತೋಷವೂ ಆಯಿತು. ಪಾರಣೆ ಮುಗಿಯಿತು. ಆಮೇಲೆ ಅಂಬರೀಷನೂ ಊಟ ಮುಗಿಸಿದನು.

ದುರ್ವಾಸ ಋಷಿ ಅಂಬರೀಷನನ್ನು ಆಶೀರ್ವದಿಸಿ ಹೊರಟರು.

ಇನ್ನೊಂದು ಕಥೆ

ಅಂಬರೀಷನ ಬಗ್ಗೆ ಮತ್ತೊಂದು ಕಥೆಯುಂಟು. ಅವನಿಗೆ ಒಬ್ಬ ಮಗಳು, ಶ್ರೀಮತಿ ಎಂದು ಅವಳ ಹೆಸರು. ಒಂದು ಬಾರಿ ಇಬ್ಬರು ಮುನಿಗಳು ಅವನ ಆಸ್ಥಾನಕ್ಕೆ ಬಂದರು. ನಾರದ ಮತ್ತು ಪರ್ವತ ಎಮದು ಅವರ ಹೆಸರು. ಅಂಬರೀಷನು ಇಬ್ಬರನ್ನೂ ಗೌರವದಿಂದ ಬರಮಾಡಿಕೊಂಡು ಸತ್ಕರಿಸಿದ. ಇಬ್ಬರೂ ತಪಸ್ಸು ಮಾಡಿದವರು. ಋಷಿಗಳು. ಆದರೂ ವಿಚಿತ್ರ! ಇಬ್ಬರಿಗೂ ಶ್ರೀಮತಿಯನ್ನು ಮದುವೆಯಾಗಬೇಕು ಎಂದು ಆಸೆಯಾಯಿತು. ತಾವು ಸುಖಗಳನ್ನೆಲ್ಲ ಬಿಟ್ಟು ಭಗವಂತನ ಧ್ಯಾನದಲ್ಲಿ ಕಾಲ ಕಳೆಯುವವರು. ಸುಖವಾಗಿ ಬೆಳೆದ ಈ ರಾಜಕುಮಾರಿ ತಮ್ಮನ್ನು ಮದುವೆಯಾದರೆ ಅವಳಿಗೆ ಎಷ್ಟು ಕಷ್ಟ ಎಂದು ಯೋಚಿಸಲಿಲ್ಲ. ಇಬ್ಬರೂ ಒಬ್ಬರಿನ್ನೊಬ್ಬರಿಗೆ ತಿಳಿಯದ ಹಾಗೆ ಅಂಬರೀಷನನ್ನು ಕಂಡರು, “ನನಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು” ಎಂದು ಕೇಳಿದರು.

ರಾಜನಿಗೆ ತನ್ನ ಮಗಳನ್ನು ಇಬ್ಬರಲ್ಲಿ ಯಾರಿಗೂ ಕೊಟ್ಟು ಮದುವೆ ಮಾಡಲು ಇಷ್ಟವಿರಲಿಲ್ಲ. ಆದರೆ ಇಬ್ಬರೂ ಋಷಿಗಳು, ತಪಸ್ವಿಗಳು. ಅವರ ಮಾತನ್ನು ತಳ್ಳಿ ಹಾಕುವ ಹಾಗಿಲ್ಲ. ಅಲ್ಲದೆ ಇಬ್ಬರೂ ಶ್ರೀಮತಿಯನ್ನು ಮದುವೆಯಾಗಬೇಕು ಎನ್ನುತ್ತಾರೆ. ರಾಜ ಪೇಚಾಟಕ್ಕೆ ಸಿಕ್ಕ. ಕಡೆಗೆ, “ಪೂಜ್ಯರೆ, ನೀವಿಬ್ಬರೂ ಶ್ರೀಮತಿಯನ್ನು ಮದುವೆಯಾಗಬೇಕು ಎಂದು ಆಸೆ ಪಡುತ್ತೀರಿ. ತೀರ್ಮಾನವನ್ನು ಅವಳೇ ಮಾಡಲಿ. ಸ್ವಯಂವರವನ್ನು ಏರ್ಪಡಿಸುತ್ತೇನೆ. ನೀವು ಬನ್ನಿ. ಶ್ರೀಮತಿಯೇ ತನಗೆ ಒಪ್ಪಿಗೆಯಾದವರನ್ನು ಆರಿಸಿಕೊಳ್ಳಲಿ” ಎಂದು ಹೇಳಿದ.

ಇದು ನ್ಯಾಯ ಎಂದು ಋಷಿಗಳಿಗೂ ಕಂಡಿತು. ಒಪ್ಪಿದರು.

ಆದರೆ ಇಬ್ಬರಿಗೂ ಮನಸ್ಸಿನಲ್ಲಿಯೇ ಅಳುಕು “ಶ್ರೀಮತಿ ನನ್ನನ್ನು ಒಪ್ಪದೆ ಅವನನ್ನು ಒಪ್ಪಿದರೆ!” ಎಂದು ಯೋಚನೆ.

ಇಬ್ಬರೂ ವಿಷ್ಣುವಿನ ಹತ್ತಿರ

ನಾರದರು ವಿಷ್ಣುವಿನ ಬಳಿಗೆ ಹೋದರು. “ದೇವಾ, ನನಗೆ ಅಂಬರೀಷನ ಮಗಳು ಶ್ರೀಮತಿಯನ್ನು ಮದುವೆಯಾಗಬೇಕು ಎಂದು ಆಸೆಯಾಗಿದೆ. ಆದರೆ ಪರ್ವತನೂ ಅವಳನ್ನೇ ಮದುವೆಯಾಗಬೇಕು ಎಂದು ಆಸೆ ಪಡುತ್ತಾನೆ. ಅಂಬರೀಷ ಶ್ರೀಮತಿಯೇ ತನ್ನ ಗಂಡನನ್ನು ಆರಿಸಿಕೊಳ್ಳಲಿ ಎಂದುಬಿಟ್ಟ. ಅದಕ್ಕಾಗಿ ಸ್ವಯಂವರವನ್ನು ಏರ್ಪಡಿಸುತ್ತಾನೆ. ಸ್ವಯಂವರದ ಕಾಲದಲ್ಲಿ ಪರ್ವತನ ಮುಖ ಶ್ರೀಮತಿಗೆ ಮಂಗನ ಮುಖದಂತೆ ಕಾಣುವ ಹಾಗೆ ಮಾಡು. ಆಗ ಅವಳು ನನ್ನನ್ನೇ ಒಪ್ಪುವಳು. ಅವಳು ಒಬ್ಬಳಿಗೆ ಮಾತ್ರ ಪರ್ವತನ ಮುಖ ಕೋತಿಯ ಮುಖದಂತೆ ಕಾಣಲಿ” ಎಂದು ನಮಸ್ಕಾರ ಮಾಡಿದರು.

ತಪಸ್ವಿಗಳಾಗಿದ್ದ ನಾರದರ ಹುಚ್ಚನ್ನು ನೋಡಿ ವಿಷ್ಣುವಿಗೆ ನಗು ಬಂದಿತು. ನಸುನಕ್ಕು ಅವನು, “ಹಾಗೆಯೇ ಆಗಲಿ” ಎಂದ.

ನಾರಾದರು ವಿಷ್ಣುವಿನ ಬಳಿಗೆ ಹೋದ ಸಂಗತಿ ಪರ್ವತರಿಗೆ ತಿಳಿಯದು. ಅವರೂ ವಿಷ್ಣುವಿನ ಹತ್ತಿರ ಹೋಗಿ, ಶ್ರೀಮತಿಯನ್ನು ಮದುವೆಯಾಗಬೇಕೆಂದು ತಮಗೆ ಆಸೆ ಎಂದು ಹೇಳಿಕೊಂಡರು, “ಸ್ವಯಂವರದ ಕಾಲದಲ್ಲಿ ಶ್ರೀಮತಿಗೆ ನಾರದನ ಮುಖ ಕರಡಿಯ ಮುಖದಂತೆ ಕಾಣುವ ಹಾಗೆ ಮಾಡು, ಉಳಿದವರಿಗೆ ಅವನ ಮುಖ ಯಾವಾಗಲೂ ಕಾಣುವಂತೆಯೆ ಕಾಣಲಿ” ಎಂದು ಬೇಡಿಕೊಂಡರು.

ಪರ್ವತರೂ ದೊಡ್ಡ ತಪಸ್ವಿಗಳೇ. ವಿಷ್ಣು ನಸುನಕ್ಕು “ಆಗಲಿ” ಎಂದ.

ಸ್ವಯಂವರ ಆಯಿತು!

ಅಂಬರೀಷ ಸ್ವಯಂವರವನ್ನು ಏರ್ಪಡಿಸಿದ. ನಾರದರೂ ಪರ್ವತರೂ ಸಂಭ್ರಮದಿಂದ ಸ್ವಯಂವರಕ್ಕೆ ಬಂದರು . “ಪರ್ವತನ ಮುಖ ಕೋತಿಯ ಮುಖದಂತೆ ಶ್ರೀಮತಿಗೆ ಕಾಣುತ್ತಿದೆ, ಅವನನ್ನು ಹೇಗೆ ಮೆಚ್ಚುತ್ತಾಳೆ, ನನ್ನನೆ ಕೈಹಿಡಿಯುತ್ತಾಳೆ” ಎಂದು ನಾರದರಿಗೆ ವಿಶ್ವಾಸ; “ನಾರದನ ಕರಡಿಯ ಮುಖವನ್ನು ನೋಡಿ ಶ್ರೀಮತಿ ಹೆದರಿ ಬಿಡುತ್ತಾಳೆ, ನನ್ನನ್ನೆ ಮದುವೆಯಾಗುತ್ತಾಳೆ” ಎಂದು ಪರ್ವತರಿಗೆ ಹಿಗ್ಗು.

ಅಂಬರೀಷನ ಮಗಳನ್ನು ಸ್ವಯಂವರಕ್ಕೆ ಕರೆತಂದ. ಅವಳ ಕೈಯಲ್ಲಿ ಒಂದು ಸೊಗಸಾದ ಪುಷ್ಟಮಾಲೆ; ಅವಳಿಗೆ ಯಾರು ಒಪ್ಪಿಗೆಯಾದರೆ ಅವರ ಕೊರಳಿಗೆ ಮಾಲೆ ಹಾಕುವಳು.

ರಾಜನಿಗೆ ಋಷಿಗಳ ಸ್ವರೂಪದಲ್ಲಿ ಏನೂ ವ್ಯತ್ಯಾಸ ಕಾಣಲಿಲ್ಲ. ಅಂಬರೀಷ ಶ್ರೀಮತಿಗೆ ಹೇಳಿದ: “ಮಗಳೇ, ಈ ಪೂಜ್ಯ ಋಷಿಗಳಿಬ್ಬರನ್ನೂ ನೋಡು, ಇಬ್ಬರೂ ನಿನ್ನನ್ನು ಮದುವೆಯಾಗಬೇಕೆಂದು ಬಂದಿದ್ದಾರೆ. ನಿನಗೆ ಒಪ್ಪಿಗೆಯಾದವರನ್ನು ಆರಿಸಿಕೊ”.

ಶ್ರೀಮತಿ ನೋಡಿದಳು. ಅವಳಿಗೆ ಆಶ್ಚರ್ಯವಾಯಿತು. “ಅಪ್ಪಾ, ಇಲ್ಲಿ ನನಗೆ ಋಷಿಗಳು ಕಾಣುತ್ತಿಲ್ಲ. ಇಬ್ಬರಲ್ಲಿ ಒಬ್ಬರಿಗೆ ಕರಡಿಯ ಮುಖವಿದೆ., ಮತ್ತೊಬ್ಬರಿಗೆ ಕೋತಿಯ ಮುಖವಿದೆ, ನಾನೇನು ಮಾಡಲಿ?” ಎಂದಳು.

ಅವಳ ಮಾತುಗಳನ್ನು ಕೇಳಿ ಇಬ್ಬರು ಋಷಿಗಳಿಗೂ ಆಶ್ಚರ್ಯವಾಯಿತು. ನಾರದರು, “ಪರ್ವತನ ಮುಖ ಕೋತಿಯ ಮುಖವಾಗಿ ಕಾಣುತ್ತದೆ, ಅದು ವಿಷ್ಣುವಿನ ಕೆಲಸ. ಆದರೆ ನನ್ನ ಮುಖ ಕರಡಿಯ ಮುಖ ಎಂದೇಕೆ ಹೇಳುತ್ತಾಳೆ ಇವಳು?” ಎಂದು ಯೋಚಿಸಿದರು. ಪರ್ವತರು “ವಿಷ್ಣು ನನಗೆ ಕೊಟ್ಟ ವರದಂತೆ ನಾರದರ ಮುಖ ಕರಡಿಯ ಮುಖವಾಗಿದೆ. ಆದರೆ ನನ್ನ ಮುಖ ಏಕೆ ಮಂಗನ ಮೂತಿಯಾಗಿ ಕಾಣುತ್ತದೆ?” ಎಂದು ಬೆರಗಾದರು.

ಕಡೆಗೆ ನಾರದರು, “ಅಂಬರೀಷ, ನಿನಗೆ ಶ್ರೀಮತಿಯನ್ನು ನಮ್ಮಿಬ್ಬರಲ್ಲಿ ಯಾರಿಗೂ ಕೊಟ್ಟು ಮದುವೆ ಮಾಡಲು ಇಷ್ಟವಿಲ್ಲ ಎಂದು ಕಾಣುತ್ತದೆ. ಏನೋ ಮೋಸ ಮಾಡಿದ್ದೀಯೆ” ಎಂದರು.

ಮಗಳ ಮಾತನ್ನು ಕೇಳಿಯೇ ಅಂಬರೀಷ ದಿಗ್ಭ್ರಮೆಯಾಗಿದ್ದ. ನಾರದರ ಮಾತುಗಳಿಂದಲೂ ಇಬ್ಬರು ಋಷಿಗಳ ಮುಖಗಳಲ್ಲಿ ಅವರು ಕಂಡ ಕೋಪದಿಂದಲೂ ಅವನಿಗೆ ಇನ್ನೂ ದಿಕ್ಕು ತೋರದಾಯಿತು. ಎಲ್ಲಿ ಋಷಿಗಳು ಶಾಪಕೊಡುವರೊ ಎಂಬ ಭಯ ಅವನಿಗೆ. “ಪೂಜ್ಯರೆ, ತಾಳ್ಮೆ ತಂದುಕೊಳ್ಳಿ. ಏನು ನಡೆಯುತ್ತಿದೆ ಎಂದೇ ನನಗೆ ಅರ್ಥವಾಗುತ್ತಿಲ್ಲ” ಎಂದನು.

ದಿವ್ಯ ಪುರುಷ

ಶ್ರೀಮತಿಗೂ ಹೆದರಿಕೆಯಾಯಿತು-ತಂದೆಗೆ ಋಷಿಗಳು ಶಾಪ ಕೊಡಬಹುದು ಎಂದು. ಋಷಿಗಳ ಮಧ್ಯೆ ಅವಳಿಗೆ ಸುಂದರನಾದ ತೇಜಸ್ವಿಯಾದ ಪುರುಷನೊಬ್ಬ ಕಾಣಿಸಿದ. ಅವನೇ ಮಹಾವಿಷ್ಣು. ಆದರೆ ಶ್ರೀಮತಿಗೆ ಇದು ತಿಳಿಯಲಿಲ್ಲ. ಅವಳು ಮಹಾವಿಷ್ಣುವನ್ನು ಮನಸ್ಸಿನಲ್ಲಿ ಧ್ಯಾನಿಸಿ, “ದೇವರ ಇಚ್ಛೆಯಂತಾಗಲಿ” ಎಂದು ಕೈಯಲ್ಲಿದ್ದ ಹಾರವನ್ನು ಬೀಸಿದಳು. ಅದು ಆ ದಿವ್ಯ ಪುರುಷನ ಕೊರಳಿಗೆ ಬಿದ್ದಿತು. ವಿಷ್ಣುವು ಶ್ರೀಮತಿಯನ್ನು ಕರೆದುಕೊಂಡು ಮಾಯವಾದನು.

ಸ್ವತಃ ಜ್ಞಾನಿಗಳೇ ಆದ ಪರ್ವತರು ಮತ್ತು ನಾರದರಿಗೆ ಏನಾಯಿತೆಂಬುದು ಅರ್ಥವಾಯಿತು. ಅವರಿಗೆ ನಾಚಿಕೆಯೂ ಆಯಿತು.

ತನಗೆ ಬಂದಿದ್ದ ವಿಪತ್ತನ್ನು ಪರಿಹರಿಸಿದುದಕ್ಕಾಗಿ ಅಂಬರೀಷನು ಶ್ರೀವಿಷ್ಣುವನ್ನು ಭಜಿಸಿ ಕೊಂಡಾಡಿದ. ಬಹಳ ಕಾಲ ಪ್ರಜೆಗಳನ್ನು ಚೆನ್ನಾಗಿ ಪಾಲಿಸುತ್ತ ರಾಜ್ಯವಾಳಿದ. ದೇವರ ಧ್ಯಾನ, ಪೂಜೆ ಇವನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದ. ತನಗೆ ಮುಪ್ಪು ಬಂದಾಗ ರಾಜ್ಯವನ್ನು ಮಕ್ಕಳಿಗೆ ಒಪ್ಪಿಸಿ, ತಪಸ್ಸಿಗೆ ಹೊರಟು ಹೋದ.

ಅವಿವೇಕ ಮುಸುಕಿದರೆ

ತಪಸ್ವಿಗಳು, ಜ್ಞಾನಿಗಳು ಆದವರಿಗೂ ಒಮ್ಮೆಮ್ಮೆ ಅವಿವೇಕ ಮುಸುಕುತ್ತದೆ. ಎಂತಹ ಮನುಷ್ಯನೇ ಆಗಲಿ ಸದಾ ಜಾಗೃತನಾಗಿರಬೇಕು. ಒಮ್ಮೆ ಅವಿವೇಕ ಮೂಡಿತೆಂದರೆ, ಎಂತಹ ತಪ್ಪನ್ನಾದರೂ ಮಾಡಬಹುದು. ನಾರದರೂ ಪರ್ವತರೂ ಋಷಿಗಳು, ಜ್ಞಾನಿಗಳು. ಅಂತಹವರೂ ಆಸೆಗೆ ಒಳಗಾಗಿ ಒಬ್ಬರಿಗೆ ಇನ್ನೊಬ್ಬರು ಮೋಸ ಮಾಡಲು, ಅಪಮಾನ ಮಾಡಲು ಹೊರಟರು. ಇಬ್ಬರಿಗೂ ಅಪಮಾನವಾಯಿತು. ಅಂತಹ ಮಹರ್ಷಿಗಳೇ ಯೋಚನೆ ಮಾಡದೆ ಇನ್ನೊಬ್ಬರಿಗೆ ಅಪಕಾರ ಮಾಡಲು ಪ್ರಯತ್ನಿಸಿದರು. ಮನುಷ್ಯ ಸದಾ ಜಾಗೃತನಾಗಿ, ಮನಸ್ಸಿಗೆ ಕಡಿವಾಣ ಹಾಕಿ, ಯೋಚನೆ ಮಾಡಿ ಕೆಲಸ ಮಾಡಬೇಕು, ಅಲ್ಲವೆ?

ಶುದ್ಧ ಮನಸ್ಸು, ಹಿಡಿದ ದಾರಿಯಲ್ಲಿ ನಿಶ್ಚಲ ನಂಬಿಕೆ ಇವುಗಳಿಂದ ಅಂಬರೀಷ ಶ್ರೇಷ್ಠ ಎನಿಸಿಕೊಂಡ. ವಿಷ್ಣುವು ದುರ್ವಾಸರಿಗೆ ಹೇಳಲಿದ ಮಾತುಗಳು ನೆನಪಿದೆಯೆ? “ತಪಸ್ಸು ಮತ್ತು ವಿದ್ಯೆಗಳಿಂದ ಶಕ್ತಿ ಬರುತ್ತದೆ. ಅದನ್ನು ಇತರರಿಗೆ ಒಳ್ಳೆಯದನ್ನು ಮಾಡಲು ಉಪಯೋಗಿಸಬೇಕು. ಅದನ್ನು ತಪ್ಪಾಗಿ, ತನ್ನ ಜಂಬಕ್ಕೆ ಅಥವಾ ಇತರರಿಗೆ ಕೆಡುಕನ್ನು ಮಾಡುವುದಕ್ಕೆ ಉಪಯೋಗಿಸಿದರೆ, ಹಾಗೆ ಉಪಯೋಗಿಸಿದವನಿಗೇ ಕೆಡುಕು”. ದುರ್ವಾಸರೇನು ಕಡಿಮೆಯೆ? ಕಥೆಯೇ ತೋರಿಸುವಂತೆ, ಅವರ ತಪಸ್ಸು, ಅವರ ಶಕ್ತಿಗಳು ನಾವು ಬೆರಗಾಗುವಂತಹವು. ಆದರೆ ಮಹಾತಪಸ್ವಿಯಾದ ದುರ್ವಾಸರೂ ಆತುರಪಟ್ಟು ಕೋಪ ಮಾಡಿಕೊಂಡುದರಿಂದ ಕಷ್ಟಪಡಬೇಕಾಯಿತು, ಕಡೆಗೆ ಅಂಬರೀಷನಿಂದಲೇ ಉಳಿಯಬೇಕಾಯಿತು. ಇಷ್ಟಾದರೂ ಕೋಪ, ದ್ವೇಷ ಇಲ್ಲದ ನಿರ್ಮಲ ಮನಸ್ಸು ಅಂಬರೀಷನದು. ಅಂಬರೀಷನ ಕಥೆಯಲ್ಲಿ ಹೀಗೆ ಅವನ ದೈವಭಕ್ತಿ, ನಿರ್ಮಲ ಮನಸ್ಸು, ನಿಷ್ಠೆ ಬೆಳಗಿವೆ.