ಜಾನಪದ ಅಧ್ಯಯನವೆಂದರೆ ನಮ್ಮ ಸಂಸ್ಕೃತಿಯ ವಿಶ್ಲೇಷಣೆಯೇ ಆಗಿದೆ. ಜನವಾಣಿಯ ಬಹುಮುಖತೆಯ ದಾಖಲು ಕ್ರಮ ಎಷ್ಟು ಮಹತ್ವದ್ದೋ, ಅಷ್ಟೇ ಶ್ರಮದ್ದು ಕೂಡ. ಶಿಷ್ಟ ಸಾಹಿತ್ಯದ ಏಕತಾನತೆಗೆ ದನಿ ಮತ್ತು ಸಂವೇದನೆ ಜೋಡಿಸಿದ್ದು ಜಾನಪದ ಸಾಹಿತ್ಯ. ಹಾಗಾಗಿಯೇ ಜನವಾಣಿ ಬೇರು; ಕವಿವಾಣಿ ಹೂ ಎಂಬ ಮಾತಿದೆ.

ಇಷ್ಟು ಮಹತ್ವವುಳ್ಳ ಈ ಸಾಹಿತ್ಯದ ಸಂಗ್ರಹ, ದಾಖಲು, ಪ್ರಕಟಣೆಗೆ ಅಗತ್ಯವಾದ ಜನರ ಸಹಕಾರದಂತೆಯೇ ಪ್ರಭುತ್ವದ ಆಸರೆ ಬೇಕು. ಆ ದಿಸೆಯಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಮಗ್ರ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ ಸಂಪುಟದ ಪ್ರಕಟಣೆಯಂತಹ ಮಹತ್ವದ ಕಾರ್ಯ ಕೈಗೊಂಡಿದೆ. ಈ ಯೋಜನೆ ಅಡಿಯಲ್ಲಿ ೯೦ ಸಂಪುಟ ಹೊರತರಲು ತೀರ್ಮಾನಿಸಲಾಗಿದೆ.

ಕರ್ನಾಟಕ ಜಾನಪದ ಅಕಾಡೆಮಿಯು ಈ ಗುರುತರ ಜವಾಬ್ದಾರಿಯ ಮುಖ್ಯ ಪಾಲನ್ನು ಹೊತ್ತು ಈ ಕಾರ್ಯವನ್ನು ನಿರ್ವಹಿಸಿದೆ. ಸಮೃದ್ಧ ಜಾನಪದ ಸಾಹಿತ್ಯದ ಪರಂಪರೆ-ಇತಿಹಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಂಪುಟಗಳು ರೂಪುಗೊಳ್ಳುವಂತೆ ನೋಡಿಕೊಳ್ಳಲಾಗಿದೆ.

ನಾಡಿನ ಉದ್ದಾಮ ಜಾನಪದ ತಜ್ಞರು ಈ ಸಂಪುಟಗಳನ್ನು ಸಿದ್ಧಗೊಳಿಸಿದ್ದಾರೆ. ಸಂಪಾದಕರು ಅತ್ಯಂತ ಶ್ರಮವಹಿಸಿ ಈ ಸಂಪುಟಗಳನ್ನು ರೂಪುಗೊಳಿಸಿರುತ್ತಾರೆ. ಹೀಗೆ ಈ ಬೃಹತ್ ಯೋಜನೆಗೆ ಸಹಕರಿಸಿದ, ಕೈ ಜೋಡಿಸಿದ ಎಲ್ಲ ಮಹನೀಯರನ್ನೂ ನೆನೆಯುವುದು ಸಂತಸದ ಸಂಗತಿಯಾಗಿದೆ.

ಈ ಕಾರ್ಯದಲ್ಲಿ ತೊಡಗಿಕೊಂಡ ಸಂಪಾದಕ ಸಮಿತಿ ಅಧ್ಯಕ್ಷರಾದ ಡಾ. ಹಿ.ಶಿ. ರಾಮಚಂದ್ರೇಗೌಡ ಮತ್ತು ಸಂಪಾದಕ ಮಂಡಳಿ ಸದಸ್ಯರಿಗೆ ವಿಶೇಷ ವಂದನೆಗಳು.

ತಮ್ಮ ವಿದ್ವತ್ ನುಡಿಗಳೊಂದಿಗೆ ಕೃತಿಯ ಮೌಲ್ಯ ಹೆಚ್ಚಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಬಿ.ಆರ್. ಜಯರಾಮರಾಜೇ ಅರಸು, ನಿರ್ದೇಶಕರಾದ ಶ್ರೀ ಮನು ಬಳಿಗಾರ್, ಸಂಚಾಲಕರಾದ ಶ್ರೀ ಕಾ.ತ. ಚಿಕ್ಕಣ್ಣ, ಶ್ರೀ ಎಚ್. ಶಂಕರಪ್ಪನವರು ಈ ಯೋಜನೆಯ ನಿರ್ವಹಣೆಯಲ್ಲಿ ಅಪಾರ ಸಹಕಾರ ತೋರಿದ್ದಾರೆ, ಅವರಿಗೆ ಹಾಗೂ ಈ ಮಹತ್ವದ ಯೋಜನೆಯನ್ನು ತಮ್ಮದೆಂದು ಭಾವಿಸಿ, ನಿರ್ವಹಿಸಿದ ಕರ್ನಾಟಕ ಜಾನಪದ ಅಕಾಡೆಮಿಯ ಸಿಬ್ಬಂದಿಗೆ ವಂದನೆಗಳು.

(ಗೊ.ರು. ಚನ್ನಬಸಪ್ಪ)
ಅಧ್ಯಕ್ಷ
ಕರ್ನಾಟಕ ಜಾನಪದ ಅಕಾಡೆಮಿ
ಬೆಂಗಳೂರು