ಎರಡು ಮಾತು

ಕರ್ನಾಟ ಕ ಸಂಗೀತ ನೃತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದ ದಿನದಿಂದ ಇಂದಿನವರೆಗೆ ತನ್ನ ವ್ಯಾಪ್ತಿಯಲ್ಲಿ ಬರುವ ಆರು ಪ್ರಕಾರಗಳು ಅಂದರೆ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾಕೀರ್ತನ ಹಾಗೂ ಗಮಕ ಕಲೆಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಕಲಾವಿದರನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವುದು ಸರ್ವವೇದ್ಯ. ಪ್ರತಿ ವರ್ಷವೂ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪ್ರಶಸ್ತಿ ವಿಜೇತರ ವಿವರವನ್ನು ಪ್ರಕಟಿಸುತ್ತ ಬಂದಿದೆ. ಆದರೆ ಇದು ಅಕಾಡೆಮಿಯಲ್ಲಿ ದಾಖಲೆಯಾಗಿ ಉಳಿದಿಲ್ಲ. ಹಾಗಾಗಿ ಅಕಾಡೆಮಿ ಈ ನಿಟ್ಟಿನಲ್ಲಿ ಒಂದು ಸಮಗ್ರ ಸಂಪುಟವನ್ನು ಹೊರ ತರುವ ಯೋಜನೆಯನ್ನು ಹಮ್ಮಿಕೊಂಡಿತ್ತು. ಇದಕ್ಕೆ ಒಂದು ಸಂಪಾದಕ ಮಂಡಲಿಯನ್ನು ರಚಿಸಿ ಅವರುಗಳ ಮುಖೇನ ಸಿದ್ದಲೇಖನಗಳನ್ನು ಪರಿಷ್ಕರಿಸಿ ಆದಷ್ಟು ಶೀಘ್ರವಾಗಿ ಸಂಪುಟವನ್ನು ಹೊರತರುವ ಕಾರ್ಯಕ್ಕೆ ಸಜ್ಜಾದರೂ ಕೆಲಸ ಸ್ವಲ್ಪ ಮಂದಗತಿಯಲ್ಲೇ ಸಾಗಿತೆಂಬುದು ವಿಷಾದದ ಸಂಗತಿ. ಕಾರಣ ಪರಿಷ್ಕರಣ ಕಾರ್ಯ ಒಪ್ಪಿಕೊಂಡ ಕೆಲವರು ನಿಗದಿತ ಸಮಯದಲ್ಲಿ ಲೇಖನ ನೀಡದೇ ಇದ್ದದು. ಇನ್ನು ಕೆಲವರು ಒಪ್ಪಿಕೊಂಡ ಕೆಲಸವನ್ನು ಮುಗಿಸದೆ ಅರ್ಧದಲ್ಲೇ ಕೈ ಬಿಟ್ಟದ್ದು. ಹೀಗಾಗಿ ಪರಿಷ್ಕರಣೆ, ಮುದ್ರಣ ಕಾರ್ಯ ವಿಳಂಬವಾದರೂ ಈಗ ನಮ್ಮ ಕನಸುನನಸಾಗಿ ಇದು ಓದುಗರ ಕೈಸೇರುತ್ತಿದೆ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿನ ಪ್ರಶಸ್ತಿ ವಿಜೇತರ ಬಗ್ಗೆ ಶ್ರೀಮತಿ ವಂಸತ ಮಾಧವಿ ಅವರೂ, ಹಿಂದೂಸ್ಥಾನಿ ಸಂಗೀತ ಕಲಾವಿದರ ಕುರಿತು ಶ್ರೀ ಸಿದ್ಧರಾಮಯ್ಯ ಮಠಪತಿ ಅವರೂ, ನೃತ್ಯದ ಬಗ್ಗೆ ಶ್ರೀ ಎಸ್.ಎನ್. ಚಂದ್ರಶೇಖರ್ ಅವರೂ ಹಾಗೂ ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಕಲಾವಿದರ ವಿವರಗಳನ್ನು ನಾನೇ ಸಂಗ್ರಹಿಸಿ ಬರೆಯಲಾಗಿದೆ. ಈ ಎಲ್ಲ ಕಾರ್ಯಗಳಿಗೆ ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ಪಂ. ಡಾ. ರಾಜಶೇಖರ ಮನ್ಸೂರ, ಇಂದಿನ ಅಧ್ಯಕ್ಷರಾಗಿರುವ ಡಾ. ಪಂ. ನರಸಿಂಹಲು ವಡವಾಟಿಯವರು ಹಾಗೂ ರಿಜಿಸ್ಟ್ರಾರ್ ಶ್ರೀ ಬಲವಂತರಾವ್ಪಾಟೀಲರು ಸರ್ವವಿಧದಲ್ಲೂ ಸಹಕಾರ ನೀಡಿ ಉತ್ತೇಜಿಸಿದ್ದಾರೆ. ಇವೆರೆಲ್ಲರಿಗೂ ಸಂಪಾದಕ ಮಂಡಲಿ ಪರವಾಗಿ ಕೃತಜ್ಞತೆ ಸಲ್ಲಿಸಲು ಸಂತೋಷವೆನಿಸುತ್ತದೆ. ಇಂಥ ಒಂದು ಯೋಜನೆಯನ್ನು ಹಮ್ಮಿಕೊಂಡು ಈ ರೀತಿಯ ಸಂಪುಟವನ್ನು ಹೊರ ತಂದಿರುವ ಅಕಾಡೆಮಿಯ ಕಾರ್ಯ ನಿಜಕ್ಕೂ ಅಭಿನಂದನೀಯ.

ಎಂ.. ಜಯರಾಮರಾವ್
ಸಂಪಾದಕ ಮಂಡಳಿ ಪರವಾಗಿ