ಕನ್ನಡದ ಓದುಬರಹಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗೆ ಎದುರಾಗುವ ಗೊಂದಲಗಳಲ್ಲಿ ಹ್ರಸ್ವ-ದೀರ್ಘಸ್ವರಗಳ ಉಚ್ಚಾರ, ಬಳಕೆಗಳನ್ನು ಸರಿಪಡಿಸಿಕೊಳ್ಳಬೇಕಾದ ಕಷ್ಟವೂ ಸೇರಿದೆ. ಕನ್ನಡದಲ್ಲಿ ನಾವು ಬಳಸುವ ಸ್ವರಾಕ್ಷರಗಳು ಒಟ್ಟು ಹದಿಮೂರು.

ಅವುಗಳೆಂದರೆ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಇವುಗಳಲ್ಲಿ ಅ-ಆ
ಉ-ಊ
ಎ-ಏ-ಐ
ಒ-ಓ-ಔ- ಇವು ನೋಡುವುದಕ್ಕೂ ಉಚ್ಚರಿಸುವುದಕ್ಕೂ ಸಾಮ್ಯತೆಯಿರುವ ಅಕ್ಷರಗಳು.

ಇ-ಈ ಇವು ಉಚ್ಚಾರಣೆಯಲ್ಲಿ ಮಾತ್ರ ಒಂದೇ ಬಗೆಯಾಗಿ ತೋರುವ ಅಕ್ಷರಗಳು.

ಅ-ಆ, ಇ-ಈ, ಉ-ಊ ಈ ಜೋಡಿ ಅಕ್ಷರಗಳನ್ನು ಸಂಸ್ಕೃತದಲ್ಲಿ ಸವರ್ಣಗಳೆಂದೂ ಕರೆಯುತ್ತಾರೆ. ಇವುಗಳ ಉಚ್ಚಾರಣೆಯಲ್ಲಿರುವ ಸಾಮ್ಯತೆಯೇ ಈ ಅಕ್ಷರಗಳ ಬಳಕೆಯಲ್ಲಿನ ಗೊಂದಲಕ್ಕೆ ಎಡೆಗೊಟ್ಟಿದೆ. ಅದರ ಎಂಬ ಪದವನ್ನು ಆದರ ಎಂದೂ, ಈಡು ಎಂಬುದನ್ನು ಇಡು ಎಂದೂ ಬರೆಯುವುದು ಸಾಮಾನ್ಯವಾಗಿ ಕಂಡುಬರುವ ತಪ್ಪುಗಳು.

ಅ ಎಂಬ ಅಕ್ಷರವನ್ನು ಬರೆಯುವ ರೀತಿಗೂ ಆ ಎಂಬುದನ್ನು ಬರೆಯುವ ರೀತಿಗೂ ವ್ಯತ್ಯಾಸವಿದ್ದೇ ಇದೆ. ಉಚ್ಚಾರಣೆಯಲ್ಲೂ ಗಮನಾರ್ಹವಾದ ವ್ಯತ್ಯಾಸವಿದೆ. ಓದುವ, ಬರೆಯುವ ಧಾವಂತದಲ್ಲಿ ನಾವು ಈ ಅಂತರಗಳನ್ನು ಅಲಕ್ಷಿಸುತ್ತಿದ್ದೇವೆ, ಅಷ್ಟೇ. ಅ ಎಂಬ ಅಕ್ಷರವನ್ನು ಉಚ್ಚರಿಸುವುದಕ್ಕೆ ಎಷ್ಟು ಸಮಯ ಬೇಕೋ ಅದರ ಎರಡರಷ್ಟು ಸಮಯ, ಆ ಎಂಬ ದೀರ್ಘಾಕ್ಷರವನ್ನು ಉಚ್ಚರಿಸಲು ಬೇಕು. ಅಕಾರದ ಉಚ್ಚಾರಣೆಗೆ ಒಂದು ಮಾತ್ರಾಕಾಲ ಸಾಕು; ಇದು ಹ್ರಸ್ವಸ್ವರ. ಇ,ಉ, ಋ, ಎ, ಒ ಕಾರಗಳೂ ಹ್ರಸ್ವಸ್ವರಗಳೇ. ಆಕಾರ ದೀರ್ಘಸ್ವರವಾಗಿದ್ದು, ಇದರಂತೆಯೇ ಈ, ಊ, ಏ, ಐ, ಔಕಾರಗಳೂ ದೀರ್ಘಸ್ವರಗಳು.
ನಮ್ಮ ಮಾತಿನಲ್ಲೂ ಬರೆಹದಲ್ಲೂ ಬಳಸಬೇಕಾದ ವಾಕ್ಯ, ಆ ವಾಕ್ಯದಲ್ಲಿ ಸೇರಿರುವ ಪದಗಳು ಹಾಗೂ ಆ ಪದಗಳೊಳಗಿನ ಅಕ್ಷರಗಳ ರೂಪ ಉಚ್ಚಾರಣೆಗಳು ನಿಖರವಾಗಿರಬೇಕು. ಹಾಗಿಲ್ಲವಾದರೆ, ನಮ್ಮ ಮಾತಿನ ಅಭಿಪ್ರಾಯ ಸರಿಯಾಗಿ ಸಂವಹನಗೊಳ್ಳುವುದಿಲ್ಲ. ಮಾತನಾಡುವಾಗಲೂ, ಬರೆಯುವಾಗಲೂ ಪದವೊಂದರಲ್ಲಿ ಬಳಸಬೇಕಾದ ಅಕ್ಷರವನ್ನು ಹೊರತುಪಡಿಸಿ ಇನ್ನೊಂದು ಅಕ್ಷರವನ್ನು ಬಳಸಿದರೆ ಮಾತಿನ ಅಭಿಪ್ರಾಯವೇ ಬದಲಾಗಿ ಬಿಡಬಹುದು. ಬಟ್ಟೆ ಒಗೆಯುವವನು ಎಂಬ ಅರ್ಥವುಳ್ಳ ಅಗಸ ಎಂಬ ಪದವನ್ನು ಹೇಳಬೇಕಾದಲ್ಲಿ ಅಕಾರದ ಬದಲು ಆಕಾರವನ್ನು ಬಳಸಿದರೆ ಆಗಸ (ಎಂದರೆ, ಆಕಾಶ) ಎಂಬ ಪದವು ಸೃಷ್ಟಿಯಾಗಿ ನಮ್ಮ ಮಾತು ಅರ್ಥವಾಗದೆ ಗಲಿಬಿಲಿಗೆ ಎಡೆಗೊಡುತ್ತದೆ. ಹೀಗೆ ಒಂದು ಸ್ವರದ ಬದಲಿಗೆ ಇನ್ನೊಂದು ಸ್ವರವನ್ನು ಬಳಸಿದರೆ ಆಗಬಹುದಾದ ಅರ್ಥವ್ಯತ್ಯಾಸಗಳಿಗೆ ಕೆಲವು ಉದಾಹರಣೆಗಳನ್ನು ಗಮನಿಸೋಣ:

ಅಡು (=ಅಡುಗೆಮಾಡು) ; ಆಡು (= ಮೇಕೆ)
ಅಗರ (=ಅಗ್ರಹಾರ) ; ಆಗರ( =ಮೂಲ, ಆಕರ)
ಅಣೆ (=ಅಣೆಕಟ್ಟು) ; ಆಣೆ ( = ಪ್ರಮಾಣ)
ಅಡಿಕೆ (=ತಾಂಬೂಲ ತಿನ್ನಲು ಬಳಸುವ ಕಾಯಿ); ಆಡಿಕೆ (=ಹೇಳಿಕೆ)
ಅಣಿ (=ಸಿದ್ಧತೆ) ; ಆಣಿ (=ಮೊಳೆ)
ಅದರ (= ಆ ವಸ್ತು/ವಿಷಯದ); ಆದರ (=ಗೌರವ)
ಅನು (ರೀತಿ) ; ಆನು ( = ಹೊಂದು)
ಅರವ (=ತಮಿಳು) ; ಆರವ (=ಶಬ್ದ)
ಅರಿ (= ಕತ್ತರಿಸು, ಶತ್ರು) ; ಆರಿ (=ಒಣಗಿ)
ಅವು (=ಅವುಗಳು) ; ಆವು (=ಹಸು)
ಅಳಿ (= ನಾಶಹೊಂದು) ; ಆಳಿ (=ಗುಂಪು, ಸಾಲು)
ಅಳು (= ದುಃಖ) ; ಆಳು (= ರಾಜ್ಯಭಾರ ಮಾಡು)
ಇಡು ( = ಇರಿಸು) ; ಈಡು (= ಗುರಿ)
ಉಡು ( = ಧರಿಸು) ; ಊಡು ( = ತಿನ್ನಿಸು)
ಉರು ( = ಕಂಠಪಾಠ ) ; ಊರು (= ಪಟ್ಟಣ)
ಉರಿ (= ಬಾಧೆ) ; ಊರಿ (= ಭದ್ರವಾಗಿ ನಿಲ್ಲಿಸಿ)
ಉರೆ ( ಅತಿಶಯ) ; ಊರೆ (= ಆಶ್ರಯ)
ಉಳು (= ನೇಗಿಲು ಹೂಡು) ಊಳು (=ಕೂಗು)
ಎಡ (= ವಾಮಭಾಗ); ಏಡ (= ಕಿವುಡ)
ಎವೆ (= ಕಣ್ಣುರೆಪ್ಪೆ) ; ಏವೆ (= ವ್ಯಥೆಪಡುವೆ)
ಒರೆ (= ಉಜ್ಜು) ; ಓರೆ (= ವಕ್ರ)
ಒಲೆ (= ಬೆಂಕಿ ಉರಿಸುವ ಎಡೆ) ; ಓಲೆ ( ಕಿವಿಯ ಆಭರಣ)

ಈ ಮೇಲೆ ಕೊಟ್ಟ ಉದಾಹರಣೆಗಳಲ್ಲಿ ಒಂದು ಸ್ವರದ ಬದಲಿಗೆ ಇನ್ನೊಂದು ಸ್ವರವನ್ನು ಬಳಸಿದರೆ ಆಗುವ ಅರ್ಥವೈಪರೀತ್ಯವನ್ನು ಗಮನಿಸಬಹುದು. ಪರಸ್ಪರ ಹೋಲಿಕೆಯಿರುವ ಸ್ವರಗಳನ್ನು ಒಂದರ ಸ್ಥಾನದಲ್ಲಿ ಮತ್ತೊಂದನ್ನು ಬಳಸುವುದರಿಂದ ನಮಗೇ ಅರಿವಿಲ್ಲದಂತೆ ಅರ್ಥವು ಕೆಡುವಂತಾಗುತ್ತದೆ. ಹೀಗಾಗಿ ಓದುವಾಗಲೂ ಬರೆಯುವಾಗಲೂ ಒಂದು ಸ್ವರದ ಬದಲು ಇನ್ನೊಂದು ನುಸುಳದಂತೆ ಎಚ್ಚರವಹಿಸಬೇಕಾದುದು ಅವಶ್ಯಕ.

ವ್ಯಂಜನಗಳೊಡನೆ ಸ್ವರ ಸೇರಿ ಗುಣಿತಾಕ್ಷರಗಳಾಗುವ ಕ್ರಮ ತಿಳಿದಿದೆಯಲ್ಲ. ಕ್+ಅ=ಕ, ಕ್+ಆ=ಕಾ, ಕ್+ಇ=ಕಿ, ಕ್+ಈ=ಕೀ ಇತ್ಯಾದಿ. ಸ್ವರಗಳ ಪಲ್ಲಟದಿಂದ ಆಗುವ ತೊಂದರೆಯೇ ಗುಣಿತಾಕ್ಷರಗಳ ಬದಲಿಕೆಯಿಂದಲೂ ಒದಗಬಹುದು. ಕರ ಎಂದರೆ ಕೈ. ಅದನ್ನು ಕಾರ ಎಂದರೆ ಹೇಗೆ? ಈ ವಾಕ್ಯಗಳನ್ನು ಗಮನಿಸಿ:

ಮಾರನು ಮರವನ್ನು ಏರಿದನು.
ಸಾಹುಕಾರನು ದನವನ್ನು ದಾನಕೊಟ್ಟನು.
ಹಾವು ಹರನ ಹಾರವಾಗಿದೆ.
ಸುಮತಿಗೆ ಮಾತಿನ ಭರದಲ್ಲಿ ಭಾರವನ್ನು ಹೊತ್ತ ಶ್ರಮವೂ ತಿಳಿಯಲಿಲ್ಲ.
ಈ ಮಾಲೆಗಾರ ಮಲೆನಾಡಿನಿಂದ ಬಂದವನು.
ಕೆರೆಯ ಹೂಳಿನಲ್ಲಿರುವ ಹುಳುಗಳನ್ನು ಪಕ್ಷಿಗಳು ತಿನ್ನುತ್ತಿವೆ.
ಮೇರೆಮೀರಿ ಮೆರೆಯಲು ಹೋದರೆ ಆಗುವುದೇ ಹೀಗೆ.

ಈ ಜೋಡುಪದಗಳ ಅರ್ಥವ್ಯತ್ಯಾಸವನ್ನು ಗುರುತಿಸಿ: ಕವಿ-ಕಾವಿ, ಕಿರು-ಕೀರು, ಕವಳ-ಕಾವಳ, ಕೊಳ-ಕೋಳ, ಗಡಿ-ಗಾಡಿ, ಗಳ-ಗಾಳ, ಚರ-ಚಾರ, ಜರ-ಜಾರ, ಜಗ-ಜಾಗ, ತಳ-ತಾಳ, ತೊರೆ-ತೋರೆ, ಮೊರೆ-ಮೋರೆ, ದೊರೆ-ದೋರೆ, ದರ-ದಾರ, ದಿನ-ದೀನ, ನಗ-ನಾಗ, ನಳ-ನಾಳ, ಪರ-ಪಾರ, ಪಡು-ಪಾಡು, ಪುರಿ-ಪೂರಿ, ಬಲೆ-ಬಾಲೆ, ಬಿಡು-ಬೀಡು, ಬರೆ-ಬಾರೆ, ಬೆಳೆ-ಬೇಳೆ, ಮನ-ಮಾನ, ಮುಡಿ-ಮೂಡಿ, ಮೊರೆ-ಮೋರೆ, ಯಮ-ಯಾಮ, ರಜ-ರಾಜ, ಮಲೆ-ಮಾಲೆ, ಮಡು-ಮಾಡು, ವರ-ವಾರ, ಶರೀರ-ಶಾರೀರ, ಶ್ರವಣ-ಶ್ರಾವಣ, ಸಮ-ಸಾಮ, ಸಲೆ-ಸಾಲೆ, ಸರಿ-ಸಾರಿ, ಹರಿ-ಹಾರಿ, ಹಿರಿ-ಹೀರಿ, ಹೆರು-ಹೇರು, ಹೊಗೆ-ಹೋಗೆ.

ಪುಸ್ತಕಗಳ ನಿರಂತರ ಓದಿನ ಮೂಲಕ ಪದಗಳ ಪರಿಚಯ ಬೆಳೆಸಿಕೊಳ್ಳುವ ಮೂಲಕ ಬರೆವಣಿಗೆಯ ತಪ್ಪುಗಳಾಗದಂತೆ ಎಚ್ಚರವಹಿಸಬಹುದು. ಹಾಗೆಯೇ ಹ್ರಸ್ವ-ದೀರ್ಘಸ್ವರಯುಕ್ತ ಪದಗಳನ್ನು ಒಟ್ಟೊಟ್ಟಾಗಿ ಓದುವ ಅಭ್ಯಾಸದಿಂದ ಉಚ್ಚಾರಣೆಯ ಶುದ್ಧಿಯನ್ನೂ ಶುದ್ಧರೂಪಗಳ ಬಗೆಗಿನ ತಿಳುವಳಿಕೆಯನ್ನೂ ಹೆಚ್ಚಿಸಿಕೊಳ್ಳಬಹುದಾಗಿದೆ. ಅಲ್ಲದೆ, ಕೆಲವು ಭಾಷಾಭ್ಯಾಸಗಳನ್ನು ಬರೆದು ಪ್ರಯತ್ನಿಸುವ ಮೂಲಕ ಹ್ರಸ್ವ-ದೀರ್ಘಸ್ವರಗಳ ಅದಲುಬದಲಿನ ಗೊಂದಲದಿಂದ ಪಾರಾಗಲು ಸಾಧ್ಯ. ಅಂತಹ ಕೆಲವು ಮಾದರಿ ಅಭ್ಯಾಸಗಳನ್ನು ಇಲ್ಲಿ ಕೊಟ್ಟಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದಲೂ ಈ ಅಭ್ಯಾಸಗಳು ಉಪಯುಕ್ತವೆನಿಸಬಹುದು. ಉತ್ತರಿಸಲು ಪ್ರಯತ್ನಿಸಿ ನೋಡಿ.

ಅ. ಈ ಪದ್ಯಭಾಗಗಳಲ್ಲಿರುವ ತಪ್ಪುಗಳನ್ನು ತಿದ್ದಿ ಬರೆಯಲು ಪ್ರಯತ್ನಿಸಿ:

1. ತೊರಮಣಿಕವೆಂದು ಪೀಡಿದಡೆ ಭುರಿಕೆಂಡವಿದಯಿತು.
2. ಹಚ್ಚೆವು ಕನ್ನಡದ ದಿಪ ಕಾರುನಡ ದಿಪ ಸೀರಿನುಡಿಯ ದಿಪ
3. ಜಯಾ ಭರತ ಜಾನನಿಯ ತಾನುಜತೆ ಜಾಯ ಹೆ ಕರ್ನಟಕ ಮತೆ
4. ಹುಲ್ಲಗು ಬೆಟ್ಟದಡಿ ಮಾನೆಗೆ ಮಾಲ್ಲಿಗೆಯಗು
5. ನೇನೆವುದೆನ್ನ ಮಾನಂ ಬನಾವಸಿದೆಶಮಂ

( ಉತ್ತರಗಳು: 1.ತೋರಮಾಣಿಕವೆಂದು ಪಿಡಿದಡೆ ಭೂರಿಕೆಂಡವಿದಾಯಿತು.
2. ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ
3. ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ
4. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
5. ನೆನೆವುದೆನ್ನ ಮನಂ ಬನವಾಸಿದೇಶಮಂ)

ಆ. ಬಿಟ್ಟ ಜಾಗದಲ್ಲಿ ಬರಬೇಕಾದ ಪದವನ್ನು ಆವರಣದೊಳಗೆ ಕೊಟ್ಟ ಪದಗಳಿಂದ ಆರಿಸಿ ಬರೆಯಿರಿ:
1. ಕರ್ನಾಟಕ —- (ಕವಿ/ಕಾವಿ)ಗಳ —- (ಬಿಡು/ಬೀಡು)
2. ಈ — (ಜಗ/ಜಾಗ)ವೇ ಒಂದು — (ರಣ/ರಾಣ) ರಂಗ.
3. —- (ಕರು/ಕಾರು) ಮಾವಿನ — (ಮರ/ಮಾರ)ದ ಕೆಳಗೆ ಮಲಗಿದೆ.
4. ಬೆಸ್ತನು — (ಬಲೆ/ಬಾಲೆ) —(ಬಿಸಿ/ಬೀಸಿ)— (ಮಿನು/ಮೀನು)ಗಳನ್ನು ಹಿಡಿಯುತ್ತಾನೆ.
5. ಕೋಳಿಯ — (ಮರಿ/ಮಾರಿ)ಗಳು — (ಕಳು/ಕಾಳು) ತಿನ್ನುತ್ತಿವೆ.

(ಉತ್ತರಗಳು:
1. ಕರ್ನಾಟಕ ಕವಿಗಳ ಬೀಡು.
2. ಈ ಜಗವೇ ಒಂದು ರಣರಂಗ.
3. ಕರು ಮಾವಿನಮರದ ಕೆಳಗೆ ಮಲಗಿದೆ.
4. ಬೆಸ್ತನು ಬಲೆಬೀಸಿ ಮೀನುಗಳನ್ನು ಹಿಡಿಯುತ್ತಾನೆ.
5. ಕೋಳಿಯ ಮರಿಗಳು ಕಾಳು ತಿನ್ನುತ್ತಿವೆ.)