ಹನ್ನೆರಡನೇ ಶತಮಾನ ಕನ್ನಡನಾಡು ಕಂಡ ಅಪೂರ್ವ ಕ್ರಾಂತಿಯ ಅನನ್ಯ ಯುಗ. ಅಂದು ಕಲ್ಯಾಣದ ಕ್ರಾಂತಿಕಾರರು ನಡೆಸಿದ ಸಮಾಜೋ-ಧಾರ್ಮಿಕ ಸಾಂಸ್ಕೃತಿಕ ಚಳುವಳಿ ಸರ್ವರ ಬದುಕಿಗೆ ಹೊಸ ಅರ್ಥ, ಆವಿಷ್ಕಾರಗಳನ್ನು ಕೊಡುಗೆಯಾಗಿ ನೀಡಿತು. ಈ ಚಳುವಳಿಗೆ ಮಾಧ್ಯಮವಾದ ವಚನ ಕನ್ನಡದ ವಿನೂತನ ಸಾಹಿತ್ಯ ಲೋಕವನ್ನೇ ತೆರೆಯಿತು.

ಆ ಶರಣರ ಚಳುವಳಿಯಲ್ಲಿ ಅನೇಕ ತಾರೆಗಳು ಪ್ರಜ್ವಲಿಸಿದವು. ಅವರಲ್ಲಿ ನನ್ನನ್ನು ಹೆಚ್ಚು ಸೆಳೆದವರೆಂದರೆ ಬಸವಣ್ಣ ಮತ್ತು ಅಕ್ಕಮಹಾದೇವಿ. ಅಕ್ಕನ ಬದಕೇ ರೋಚಕವಾದದ್ದು. ಅಕ್ಕನ ವಚನಗಳು ಎಷ್ಟು ಭಾವನಾತ್ಮಕ ಮತ್ತು ತೀಕ್ಷ್ಣವೋ, ಅಷ್ಟೆ ವೈರುಧ್ಯದ ಮತ್ತು ವೈವಿಧ್ಯದ ನೆಲೆಗಳನ್ನು ಗುರುತಿಸುತ್ತಾ ಹೋಗಬಹುದು. ಆಕೆ ತನ್ನ ಅನೇಕ ವಚನಗಳಲ್ಲಿ ಶರಣರ ಕುರಿತ ಖಚಿತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ. ಅದರಲ್ಲಿ ಹೆಚ್ಚಾಗಿ ಬಸವಣ್ಣನವರನ್ನು ತನ್ನ ಗುರು, ದೈವ…… ಇತ್ಯಾದಿಯಾಗಿ ಗೋಚರಿಸಿರುವುದನ್ನು ಒಪ್ಪಿಕೊಳ್ಳುತ್ತಾಳೆ. ಅಣ್ಣನು ಇತಿಹಾಸದ ವ್ಯಕ್ತಿಯಾಗಿ ಕಾಣದೇ ಇತಿಹಾಸವನ್ನು ನಿರ್ಮಿಸಿದ ವ್ಯಕ್ತಿಯಾಗಿ ಕಾಣುತ್ತಾರೆ. ಹಾಗಾಗಿ ಅಕ್ಕ ಬಸವಣ್ಣನವರ ಕುರಿತು ಭಾವತುಂಬಿ, ಮನದುಂಬಿ ವಚನದಲ್ಲಿ ಬರೆಯುತ್ತಾ ಹಾಡಿದ್ದಾಳೆ.

ಈ ತರಹದ ವಚನಗಳಲ್ಲಿ ಅಕ್ಕನಿಗೆ ಬಸವಣ್ಣ ಯಾವ ಯಾವ ರೀತಿಯಾಗಿ ಕಾಣಿಸಿದ್ದಾರೆ, ಅವರ ವ್ಯಕ್ತಿತ್ವ-ಗುಣಗಳ ಬಗ್ಗೆ ಇರುವ ವಚನಗಳನ್ನು ಕೇಂದ್ರೀಕರಿಸಿ ಈ ಕಿರುಹೊತ್ತಿಗೆಯಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡಿದ್ದೇನೆ. ಅಕ್ಕನ ಬಗೆಗಿನ ನನ್ನ ಪ್ರೀತಿ ಇಲ್ಲಿ ಮೇರೆ ಮೀರಿದ್ದರೆ ಕ್ಷಮಿಸಬೇಕೆಂದು ವಿನಂತಿಸುತ್ತೇನೆ. ಅಕ್ಕನ ಕುರಿತು ಈ ವಿಷಯದ ಮೇಲೆ ಬರೆದ ಲೇಖನಗಳನ್ನು ಪ್ರಕಟಿಸಿದ ಬಸವಪಥ, ಕರ್ಮವೀರ, ಈ ನಮ್ಮ ಕನ್ನಡನಾಡು ಪತ್ರಿಕೆಯವರಿಗೆ ನಾನು ಋಣಿ.

ಈ ಕಿರುಹೊತ್ತಿಗೆ ಹೊರಬರಲು ಕಾರಣರಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎ. ಮುರಿಗೆಪ್ಪ, ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಪ್ರಸಾರಾಂಗದ ನಿರ್ದೇಶಕರಾದ ಡಾ. ಮೋಹನ ಕುಂಟಾರ್ ಮತ್ತು ಸಲಹೆ-ಮಾರ್ಗದರ್ಶನ ನೀಡಿದ ಡಾ. ಎಸ್‌.ಎಂ. ಸಾವಿತ್ರಿಯವರಿಗೆ ಅನಂತ ಕೃತಜ್ಞತೆಗಳು.

ಪರಮೇಶ್ವರಯ್ಯ ಸೊಪ್ಪಿಮಠ