ಪ್ರಪಂಚದ ಇತಿಹಾಸವನ್ನು ಅವಲೋಕಿಸಿದಾಗ ೧೨ನೇ ಶತಮಾನದಲ್ಲಿಯೇ ವಿಶ್ವಮಾನವ ಸಂದೇಶವನ್ನು ಸಾರಿದ ಹೆಮ್ಮ ಕನ್ನಡ ನಾಡಿನದು. ಆ ಕಾಲವನ್ನು ಅವಿಸ್ಮರಣೀಯವಾಗಿ ಮಾಡಿದವರು ಬಸವಾದಿ ಶರಣರು. ಕೆಲವೆ ವರ್ಷಗಳಲ್ಲಿ ನೂರಾರು ಶಿವಶರಣರು ಧರೆಗೆ ಅವತರಿಸಿ, ಜೀವನದ ಎಲ್ಲ ರಂಗಗಳ ಕುರಿತು ಅರ್ಥಪೂರ್ಣ ಚಿಂತನೆ ನಡೆಸಿದ ಕಾಲಘಟ್ಟವದು. ಅವರೆಲ್ಲರ ಪ್ರಮುಖ ಉದ್ದೇಶ ಮಾನವ ಕಲ್ಯಾಣವಾಗಿತ್ತು. ಅಂದಿನ ದಿನಗಳಲ್ಲಿ ಅದು ಅತ್ಯಂತ ಅವಶ್ಯಕವೂ ಆಗಿತ್ತು. ತಮ್ಮ ಕಾರ್ಯಸಾಧನೆಗೆ ಶರಣರು ಬಳಸಿಕೊಂಡ ವೇದಿಕೆ ಅನುಭವಮಂಟಪ. ಅಲ್ಲಿಂದ ಅಂದು ಹೊರಟ ವಚನ ಕಿರಣ ಇಂದು ಭರತಖಂಡದಲ್ಲೆಲ್ಲಾ ವ್ಯಾಪಿಸಿ ವಿಶ್ವದೆಡೆಗೆ ಸಾಗುತ್ತ ವಿಶ್ವಶಾಂತಿಗೆ ಮುನ್ನುಡಿಯಾಗುತ್ತಿದೆ.

ಆ ಶಿವಶರಣರೆಲ್ಲ ಒಂದೆ ಹಿನ್ನೆಲೆಯಿಂದ ಬಂದವರೇನು ಅಲ್ಲ. ವಿವಿಧ ವರ್ಗ, ಜಾತಿ, ಪಂಗಡ, ಧರ್ಮಗಳಿಂದಲ್ಲದೆ, ಅರಮನೆ, ಗುರುಮನೆ, ಹಿರಿಮನೆ, ಕಿರಿಮನೆ, ಗುಡಿಸಲು ಮುಂತಾದವುಗಳಿಂದ ಬಂದವರಾಗಿದ್ದರು. ಸಾಮಾನ್ಯ ಜನರ ಎಲ್ಲ ನೋವು ಸಂಕಷ್ಟಗಳನ್ನು ಅರಿತು ಉಂಡು ಮೇಲೆದ್ದವರಾಗಿದ್ದರು. ಹಾಗಾಗಿ ಅವರವರ ಆಲೋಚನೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ, ಅವರೆಲ್ಲರೂ ಸಮಾನತೆ ತಂದು ಸಕಲ ಜೀವಿಗಳಿಗೆ ಲೇಸಾಗಬೇಕೆಂಬ ಸುಂದರ ಕನಸನ್ನು ಹೊಂದಿದ್ದರು.

ಎಲ್ಲ ಜೀವಿಗಳಿಗೆ ಶುಭವನ್ನು ಬಯಸಿ ಅದರ ಕಡೆ ಸಾಗಿ, ಇತರರು ಸಾಗುವಂತೆ ಬಾಳನ್ನು ಸವೆಸಿದ ಶರಣರು ಇಂದು ನಮಗೆ ಆದರ್ಶವಾಗಿದ್ದಾರೆ. ಅಹಂಕಾರ ನಿರಸನದಿಂದ ಆತ್ಮಸಾಧನೆಗೆ ತೊಡಗಿ ಸಮರ್ಪಣ ಭಾವವೆಂದರೇನೆಂದು ತೋರಿಸಿ ಕೊಟ್ಟಿದ್ದಾರೆ. ಸತ್ಯ, ದಯೆ, ಸಮಾನತೆ, ಬಂಧುತ್ವ, ಕಾಯಕ ತತ್ವಗಳನ್ನು ರೂಢಿಸಿಕೊಂಡು ಬಾಳಿದ ಶರಣರ ಜೀವನಪಥವು ತೇಜೋಮಯವಾಗಿತ್ತು. ವ್ಯಕ್ತಿಯ ವಿಕಾಸವು ವಿಶ್ವಾತ್ಮನ ಶಕ್ತಿಯೊಂದಿಗೆ ಸಮ್ಮಿಳಿತವಾಗುವ ದಾರಿ ತೋರಿಸಿದ್ದಾರೆ. ಹಾಗಾಗಿ ಶರಣರ ಜೀವನ ಲೌಕಿಕವಾಗಿಯೂ, ಪಾರಮಾರ್ಥಿಕವಾಗಿಯೂ ಸಫಲತೆಯನ್ನು ಪಡೆಯಿತು.

ಶರಣರು ನಮ್ಮೊಡನೆ ಇಂದು ಜೀವಂತವಾಗಿರುವುದು ವಚನಗಳಿಂದ. ವಚನ ಎಂದರೆ ಮಾತು ಅಥವಾ ಭಾಷೆ ಎನ್ನಬಹುದಾದರೂ ವಿಶೇಷಾರ್ಥವಾಗಿ ಸತ್ಯದ ಮಾತಾಗಿ ಕಾಣಿಸಿಕೊಳ್ಳುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವಚನಗಳು ತಮ್ಮದೇ ಆದ ಸ್ಥಾನವನ್ನು ಪಡೆದಿದೆ. ವಚನವು ಪದ್ಯದಷ್ಟು ಬಿಗಿಯೂ ಅಲ್ಲ, ಸಾಮಾನ್ಯ ಗದ್ಯದಷ್ಟು ಸಡಿಲವೂ ಅಲ್ಲ ಎನ್ನಬಹುದು. ಆದರೆ ಸರಿಯಾಗಿ ಗಮನಿಸಿದರೆ ಅವು ಪದ್ಯ-ಗದ್ಯದ ನಡುವಿನ ಒಂದು ಮಾದರಿ ಎಂದು ತಿಳಿಯಬಹುದು. ವಚನಗಳು ಜನರ ಆಡುಭಾಷೆಗೆ ಹತ್ತಿರವಿರುವುದಲ್ಲದೆ ಪವಿತ್ರವೂ ಆಗಿವೆ. ಶರಣರು ತಾವು ಕಂಡಿದ್ದನ್ನು ಕೇಳಿದ್ದನ್ನು, ಒಪ್ಪಿದ್ದನ್ನು, ಒಪ್ಪದಿರುವುದನ್ನೆಲ್ಲ ವಚನಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಶರಣರ ವಚನಗಳಿಗೂ ಅವರು ಜೀವಿಸಿದ ರೀತಿಗೂ ಸಾಮ್ಯತೆಯನ್ನು ನಾವು ಗಮನಿಸಲೇಬೇಕು. ಅವರು ಸಾತ್ವಿಕ ಜೀವನವನ್ನು ನಡೆಸಿ, ಲಿಂಗದ ನುಡಿಗಳನ್ನು ಆಡಿ, ಸಮಾನತೆ ಬೀಜ ಬಿತ್ತುತ್ತ ಶಿವವಿಚಾರಗಳನ್ನು ಜನತೆಯ ಮುಂದಿಟ್ಟರು.

ಪರಿಪೂರ್ಣತೆಯತ್ತ ಸಾಗುವುದು ಬಾಳಿನ ಪರಮಗುರಿ ಎಂಬುದನ್ನು ವಚನಗಳಲ್ಲಿ ಶರಣರು ತೋರಿಸಿಕೊಟ್ಟಿದ್ದಾರೆ. ಶರಣರ ಅನುಭವ ಸಾಹಿತ್ಯದಲ್ಲಿ ಸಾರ್ವಕಾಲಿಕ ಮಾನವ ಧರ್ಮವು ಮೂಡಿಬಂದಿದೆ. ವಿಶ್ವದ ಮನ್ನಣೆ ಪಡೆಯಬಲ್ಲ ವಿಚಾರ ಭಾವನೆಗಳ ಸಾಗರ ಅವುಗಳಲ್ಲಿದೆ. ಸೀಮಿತ ಪ್ರದೇಶಕ್ಕೆ ಮಾತ್ರ ಅನ್ವಯಿಸುತ್ತಾ, ಪಾರಿಭಾಷಿಕ ಪದಗಳಿಂದ ಕೂಡಿರುವ ಕನ್ನಡ ಭಾಷೆಯಲ್ಲಿ ಹುದುಗಿರುವ ವಚನಗಳು ವಿಶ್ವಮಾನ್ಯ ವಿಚಾರಧಾರೆಗಳಾಗಿ ಬೆಳೆಯಬೇಕಿವೆ.

ವಚನಗಳಲ್ಲಿ ಅಚ್ಚಗನ್ನಡವನ್ನೇ ಬಳಸಬೇಕೆಂಬ ಆಸೆಯಾಗಲಿ, ಸಂಸ್ಕೃತದ ಆಡಂಬರ ಶೈಲಿ ಇದ್ದರೆ ಮಾತ್ರ ಹಿರಿಮೆ ಬರುವುದೆಂಬ ಧೋರಣೆ ವಚನಕಾರರಲ್ಲಿರಲಿಲ್ಲ. ಸಂಸ್ಕೃತ-ಕನ್ನಡ ಪದಗಳ ಹದವರಿತು ಬಳಸುವುದರ ಮೂಲಕ ಭಾಷೆ ಸಾಮಾನ್ಯರಿಗೂ ಅರ್ಥವಾಗುವಂತೆ ಮಾಡಿದ್ದಾರೆ. ಅವಶ್ಯ ಬಂದಲ್ಲಿ ಸಂಸ್ಕೃತದ ಪೋಷಕ ವಾಕ್ಯಗಳನ್ನು ಬಳಸಿ, ಜನರ ಆಡುನುಡಿಗೆ ತೀರ ಸಮೀಪಕ್ಕೆ ಗಹನವಾದ ಧಾರ್ಮಿಕ ವಿಚಾರ ನಿರೂಪಿಸಿರುವುದು ಇವರ ಹಿರಿಮೆ. ಇವರ ವಚನಗಳಲ್ಲಿ ಕಾಣುವ ಬಂಧದ ಬಿಗಿ ಗಮನಿಸಬೇಕಾದಂಶ. ಒಂದೊಂದು ವಾಕ್ಯ ಒಂದೊಂದು ಅವಿಭಾಜ್ಯ ಅಂಗವೆನ್ನುವಷ್ಟು ವಿಚಾರಗಳನ್ನು ತುಂಬಲಾಗಿದೆ. ವಾಕ್ಯಗಳ ಜೋಡಣೆಯಲ್ಲಿ ತರ್ಕಬದ್ಧತೆಯ ಸಂಬಂಧವನ್ನು ಕಾಣುತ್ತೇವೆ. ಶರಣರ ವಚನಗಳು ಅರ್ಥ ಗರ್ಭಿತವೂ ವೈವಿದ್ಯಮಯವೂ ಆಗಿದ್ದು, ಉನ್ನತಮಟ್ಟದಲ್ಲಿವೆ. ಹಾಗಾಗಿ ಇವು ಮುಂದಿನ ವಚನಕಾರರಿಗೆ ದಾರಿದೀಪವಾದವು. ದಾಸ ಸಾಹಿತ್ಯದಲ್ಲೂ ವಚನಗಳ ಪ್ರಭಾವವನ್ನು ಕಾಣಬಹುದಾಗಿದೆ.

ಶರಣರ ಒಡನಾಟದಲ್ಲಿ ಚಿಂತನ-ಮಂಥನ ರೂಢಿಸಿಕೊಂಡ ಅನೇಕ ಶರಣೆಯರು ಶ್ರೇಷ್ಠ ಅನುಭಾವಿಗಳಾಗಿ, ಚಿಂತಕರಾಗಿ ವಚನಗಳನ್ನು ರಚಿಸಿ ಕನ್ನಡ ನಾಡಿನ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿಗೆ ಸತ್ವಪೂರ್ಣ ಬುನಾದಿಯನ್ನು ಹಾಕಿದರು. ಪುರಾತನ ಕಾಲದಿಂದ ಸಾಹಿತ್ಯ ರಚನೆ ಪುರುಷರ ಹಕ್ಕು ಎಂಬ ಸ್ಥಾಪಿತ ಕಲ್ಪನೆಯನ್ನು ಶರಣೆಯರು ಸುಳ್ಳಾಗಿಸಿದರು. ಆ ರಂಗದಲ್ಲಿ ಸಂಪೂರ್ಣವಾಗಿ ವಂಚಿತಳಾಗಿದ್ದ ಮಹಿಳೆ ಆ ಸಮಯದಲ್ಲಿ ಸಮಾನ ವೇದಿಕೆಯ ಮೇಲೆ ನಿಲ್ಲುವಂತಾಯಿತು. ತಮ್ಮ ಅನುಭವಗಳನ್ನು ವಚನಗಳ ಮೂಲಕ ಸಮರ್ಥವಾಗಿ ಪ್ರಚುರಪಡಿಸಿದರು. ಅವಕಾಶಕೊಟ್ಟರೆ ಸ್ತ್ರೀಯು ಎಂಥಾ ಉತ್ಕೃಷ್ಟ ಸಾಹಿತ್ಯ ರಚಿಸಬಲ್ಲಳು ಎಂಬುದನ್ನು ಜಗತ್ತಿಗೆ ಶರಣೆಯರು ತೋರಿಸಿಕೊಟ್ಟಿದ್ದಾರೆ. ಸ್ವಾನುಭವ ಸಾಧಕಿಯರಾದ ಮಹಾದೇವಿ ಅಕ್ಕ, ಅಕ್ಕನಾಗಮ್ಮ, ಲಿಂಗಮ್ಮ, ಲಕ್ಕಮ್ಮ, ಅಕ್ಕಮ್ಮ ಮೊದಲಾದ ೨೨ ಜನ ಶರಣೆಯರು ಸ್ತ್ರೀಸತ್ವದ ಮಾದರಿಗಳಾಗಿದ್ದಾರೆ.

ಸ್ತ್ರೀಯರು ನಾಲ್ಕು ಗೋಡೆ ಒಳಗೆ ಬಂಧಿಯಾಗಿದ್ದ ಅಂದಿನ ಪರಿಸ್ಥಿತಿಯಲ್ಲಿ ಶಿವಶರಣೆಯರು ಪುರುಷನಿಷ್ಠವಾಗಿದ್ದ ಸಂಗತಿಗಳ ಕುರಿತು ಅವಲೋಕಿಸಿದ್ದಾರೆ. ಧರ್ಮ, ಆಧ್ಯಾತ್ಮ, ಅನುಭವ, ಆತ್ಮ ಪರಮಾತ್ಮ ಮುಂತಾದವುಗಳ ಮೇಲೆ ತಮ್ಮ ಅಭಿಪ್ರಾಯ ಅಭಿವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿನ ತಾರತಮ್ಯಗಳನ್ನು ಪ್ರಶ್ನಿಸುವ, ಸರಿ-ತಪ್ಪುಗಳನ್ನು ಎತ್ತಿ ತೋರಿಸುವಲ್ಲಿ ತಮ್ಮ ಪ್ರಬುದ್ಧತೆ, ಎದೆಗಾರಿಕೆಯನ್ನು ಪ್ರದರ್ಶಿಸಿದ್ದಾರೆ. ಆ ಶರಣೆಯರು ಅಂದು ತೋರಿದ ಸ್ವಂತಿಕೆ, ಸ್ವವಿಮರ್ಶೆ, ಆತ್ಮ ಸಮರ್ಥನೆ, ವಿವೇಚನೆ, ವಿಮರ್ಶಾತ್ಮಕ ಗುಣಗಳಿಂದ ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ.

ಆ ಶತಮಾನದ ಶಿವಶರಣ-ಶರಣೆಯರ ತಾರಾಗಣದಲ್ಲಿ ಅಕ್ಕಮಹಾದೇವಿಯ ಅಪೂರ್ವ ಕಾಂತಿ ಎಂತಹವರ ಕಣ್ಣನ್ನಾದರೂ ಆಕರ್ಷಿಸುತ್ತದೆ. ಬಸವ, ಅಲ್ಲಮ, ಚನ್ನಬಸವಣ್ಣರಂಥ ಸೂರ್ಯ ಶ್ರೇಣಿಯ ಜ್ಯೋತಿಗಳೊಡನೆ ಹೋಲಿಸಿಕೊಂಡಾಗಲೂ ಆಕೆಯ ಆಧ್ಯಾತ್ಮ ಪ್ರಖರತೆ, ವರ್ಚಸ್ಸು ಸ್ವಲ್ಪವೂ ಕುಂದುವುದಿಲ್ಲ. ಹಾಗಾಗಿ ಅಕ್ಕಶರಣರಲ್ಲೆ ಒಂದು ಹೆಜ್ಜೆ ಎಲ್ಲದರಲ್ಲೂ ಮುಂದಿದ್ದಳು ಎಂದರೆ ತಪ್ಪಾಗಲಿಕ್ಕಿಲ್ಲ.

ಆಯ್ಕೆ ನಿರ್ಣಯದ ಅವಕಾಶಗಳು ಹೆಣ್ಣಿಗೆ ಸಂಬಂಧಿಸಿಲ್ಲ ಎಂಬ ಕ್ಲಿಷ್ಟ ಸಮಯದಲ್ಲಿಯೇ ಮಹಾದೇವಿ ತನ್ನಿಷ್ಟದಂತೆ ನುಡಿದು ನಡೆದಿದ್ದಾಳೆ. ತನ್ನ ವಿಚಾರಗಳನ್ನು ವಿರೋಧಿಸಿದ ರಾಜಪ್ರಭುತ್ವ-ಪುರುಷ ಪ್ರಭುತ್ವಗಳೆರಡನ್ನು ಒಂದೇ ಸಮಯಕ್ಕೆ ಪ್ರತಿಭಟಿಸುವ ಕೆಚ್ಚೆದೆಯ ಧ್ವನಿಯೂ ಆಗಿದ್ದಾಳೆ. ಸಾವಕೆಡುವ ಲೋಕದ ಗಂಡರ ಸಂಬಂಧವನ್ನು ತಿರಸ್ಕರಿಸಿದ ಆಕೆಯ ಲೋಕವಿರೋಧಿ ವ್ಯಕ್ತಿತ್ವ ಎಲ್ಲಾ ಕಾಲಕ್ಕೂ, ಆಧ್ಯಾತ್ಮ ಪ್ರಪಂಚಕ್ಕೂ ಒಂದು ಸವಾಲಾಗಿ ವಿಸ್ಮಯ ಹುಟ್ಟಿಸಿದೆ. ಅರಿಷಡ್ವರ್ಗಗಳನ್ನೆಲ್ಲಾ ಕಟ್ಟಿ ನಿಲ್ಲಿಸಿದ ಅಕ್ಕ ಸ್ತ್ರೀ ಸಂಬಂಧಿತ ಎಲ್ಲಾ ನಿಷೇಧಗಳನ್ನು ಧೈರ್ಯವಾಗಿ ಉಲ್ಲಂಘಿಸಿ ವೀರ ವಿರಾಗಿಣಿಯಾಗಿ ಮೆರೆದಿದ್ದಾಳೆ.

ಮಹಾದೇವಿ ಸ್ವಂತಿಕೆ ಸತ್ವದಿಂದಲೇ ಬೆಳೆದುದ್ದಲ್ಲದೇ, ಆಕೆಯಲ್ಲಿ ತನ್ನ ಉದ್ದೇಶ ಮತ್ತು ಸಾಧನೆ ಮಾರ್ಗದ ಬಗ್ಗೆ ಸ್ಪಷ್ಟವಾದ ಕಲ್ಪನೆ ಹಾಗೂ ಉನ್ನತ ನಿಷ್ಠೆ ಇರುವುದನ್ನು ಕಾಣುತ್ತೇವೆ. ಅವುಗಳ ಇತಿ-ಮಿತಿ, ಪರಿಣಾಮ-ಪ್ರತಿಕ್ರಿಯೆಗಳ ನಿಷ್ಠುರತೆಗಳನ್ನು ಆಕೆ ಮೊದಲೇ ಊಹಿಸಿಕೊಂಡಿದ್ದಳು. ಅದಕ್ಕಾಗಿ ತನ್ನನ್ನು ಕಟ್ಟಿ ಹಾಕಲೆತ್ನಿಸಿದ ಸಮಾಜದ ಎಲ್ಲಾ ಕಟ್ಟುಪಾಡುಗಳ ವಿರುದ್ಧ ಪ್ರಬಲವಾಗಿ ವಿರೋಧಿಸುತ್ತಾಳೆ. ತನ್ನ ಸದಾಚಾರ ಶಿವ ಬದುಕಿಗೆ ಹೊಂದಲೊಲ್ಲದ ಕೌಶಿಕನನ್ನು ಧಿಕ್ಕರಿಸಿ ನಿಲ್ಲುವ ಅಕ್ಕ ಹೆಣ್ಣಿಗೆ ವಿವಾಹದಿಂದಲೇ ಮೋಕ್ಷ ಎಂಬುದಕ್ಕೆ ಅಪವಾದವಾಗಿ, ವೈರಾಗ್ಯದ ಹಾದಿಯನ್ನು ಹಿಡಿದು ಎಲ್ಲರಿಗೂ ಸವಾಲಾಗಿ ಬೆಳೆಯುತ್ತಾಳೆ. ಮಹಾದೇವಿಯು ಅಸಾಧ್ಯವಾದುದನ್ನು ಸಾಧ್ಯವಾಗಿಸಿ ಜಗತ್ತಿನ ಪ್ರಥಮ ಸ್ತ್ರೀವಾದಿ ಚಿಂತಕಿ, ಪ್ರಗತಿಪರ ವಿಚಾರವಾದಿಯಾಗಿ ಗೋಚರಿಸುತ್ತಾಳೆ.

ಆಕೆ ದಿಟ್ಟತನ ಹೆಸರಿನಲ್ಲಿ ಉದ್ದಟತನ ಬೆಳೆಸಿಕೊಳ್ಳದೆ, ಸ್ವಾತಂತ್ಯ್ರದ ಕೂಗಿನಲ್ಲಿ ಸ್ವೇಚ್ಛೆಗೆ ಬಲಿಯಾಗದೆ, ಸ್ವಾಭಿಮಾನದ ಸೋಗಿನಲ್ಲಿ ಅಹಂಭಾವಕ್ಕೆ ವಶವಾಗದೆ, ವಿಧೇಯಕವಾಗಿ ಆಂತರಿಕ ಬೆಳವಣಿಗೆಯೊಂದಿಗೆ ಆಧ್ಯಾತ್ಮ ಶಿಖರವೇರಿದ ಅಕ್ಕನ ವ್ಯಕ್ತಿತ್ವ ಉನ್ನತವಾದುದು ಹಾಗಾಗಿ ನಮಗೆ ಅಕ್ಕನು ಮಹಿಳಾತತ್ವಕ್ಕೆ ಹೊಸ ವ್ಯಾಖ್ಯಾನವನ್ನು ಹುಟ್ಟುಹಾಕಿದ ಮಹಾತತ್ವಶಾಲಿ. ಎಲ್ಲಾ ಮಾನವ ಸಂಬಂಧಗಳ ಆಕರ್ಷಣೆ ಮೀರಿ ನಿಂತುದ್ದಲ್ಲದೆ ಸ್ತುತಿ, ನಿಂದೆ, ಮಾನಾಪಮಾನಗಳಿಗೆ ಸಮಾಧಾನಿಯಾಗುತ್ತಲೆ ತನ್ನ ಆಸೆಯ ಗುರಿಸಾಧನೆಗೆ ವಿರಕ್ತಿ ದಾರಿಯಲ್ಲಿ ಹೋಗುತ್ತಾಳೆ. ಈ ಶರಣೆಯ ತೀವ್ರವೈರಾಗ್ಯ, ಉತ್ಕಟ ದೈವೀ ಅನುರಕ್ತಿ ಕಂಡು ಕಲ್ಯಾಣದ ಶರಣರೇ ವಿಸ್ಮಿತರಾಗಿದ್ದಾರೆ. ಕ್ರಾಂತಿಕಾರಿ ಚಿಂತಕರನ್ನೆ ಚಕಿತಗೊಳಿಸಿದ ಈಕೆ ಅಂದಿನ ಸಮಾಜದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾಳೆ. ಅದರ ಪರಿಣಾಮದಿಂದಾಗಿ ಆ ಸಂದರ್ಭದಲ್ಲಿ ಎಬ್ಬಿಸಿದ ಆತಂಕ ತಲ್ಲಣಗಳನ್ನು ಇಲ್ಲವಾಗಿಸಲು ಕಲ್ಯಾಣದ ಅನುಭವಮಂಟಪದಲ್ಲಿ ಅಲ್ಲಮರು ಅಕ್ಕನನ್ನು ಪರೀಕ್ಷಿಸುವ ಪ್ರಸಂಗ ಬರುತ್ತದೆ. ಅಕ್ಕನ ಭಕ್ತಿ, ವೈರಾಗ್ಯಗಳ ಸ್ವರೂಪ ಶರಣರಿಗೆ ತಿಳಿಯಲೆಂದು ಅವಳಿಗೆ ಅನೇಕ ಪ್ರಶ್ನೆಗಳನ್ನು ಕೇಳಿದಾಗ ಅದಕ್ಕೆ ಪ್ರಪಂಚವನ್ನೆ ಬೆರಗಾಗಿಸಿ ಮೆಚ್ಚುವಂತೆ ಆಕೆ ಉತ್ತರಿಸುತ್ತಾಳೆ. ಅದಕ್ಕಾಗಿ ಅಕ್ಕ ಇಲ್ಲದ ಅನುಭವಮಂಟಪ ಅಪೂರ್ಣವೆಂದು ಅರಿತ ಶರಣರು ಆಕೆಗೆ ಅಲ್ಲಿ ಹಿರಿಯಸ್ಥಾನ ನೀಡಿ ಗೌರವಿಸಿದರು. ತನಗೆ ಎದುರಾದ ಎಲ್ಲಾ ನಿರ್ಬಂಧಗಳಿಂದ ಹೊರಬಂದ ಅಕ್ಕ ತನ್ನ ವಿಶಿಷ್ಟ ಸಾಧನೆಯ ಹಾದಿಯಿಂದ ಅದಮ್ಯ ಚೇತನಳಾಗಿದ್ದಾಳೆ.

ಅಕ್ಕನವರು ಕೇವಲ ಸಾಧಕಜೀವಿ ಮಾತ್ರ ಅಲ್ಲ. ಸಮಾಜ ಸುಧಾರಕಳೂ ಹೌದು. ಆಕೆಯ ವಚನಗಳಲ್ಲಿ ಸಾಧನ ಮಾರ್ಗದ ವಿವರಣೆ ಇದೆ. ಧಾರ್ಮಿಕ ಆಚಾರ-ವಿಚಾರಗಳ ನಿರೂಪಣೆ ಇದೆ. ಲೋಕದ ಅಂಕುಡೊಂಕುಗಳ ಕುರಿತು ಕಟುಟೀಕೆಯಿದೆ. ನೀತಿ ಬೋಧನೆ ಹಾಗೂ ಸ್ವ ವಿಮರ್ಶೆಯೂ ಇದೆ. ತನ್ನ ಮನದ ಸಂಕಟಗಳನ್ನು ಮುಚ್ಚುಮರೆಯಿಲ್ಲದೆ ಹೊರಗೆಡಹಿದ್ದಾಳೆ. ಸಾಧಕನ ಗುಣಗಳನ್ನು ನಿರೂಪಿಸುತ್ತಾಳೆ. ಪರಮಾತ್ಮನೇ ಸರ್ವಸ್ವ ಅವನಿಗೆ ಎಲ್ಲವನ್ನು ಅರ್ಪಿಸಿ ಎಂಬ ಭಕ್ತಿ ಪ್ರತಿಪಾದನೆ ಮಾಡಿದ್ದಾಳೆ.

ಕಲ್ಯಾಣದ ಎಲ್ಲ ಶರಣರಿಂದ ಆತ್ಮೀಯವಾಗಿ ಅಕ್ಕನೆಂದು ಕರೆಯಿಸಿಕೊಂಡಿರುವ ಮಹಾದೇವಿ ವಿಶ್ವಸ್ತ್ರೀ ಕುಲದ ಸ್ವಾತಂತ್ಯ್ರ, ಸ್ವಾಭಿಮಾನ, ನಿಷ್ಠುರತೆ, ಸತ್ಯಸಂಧತೆ, ಸದಾಚಾರ, ಸದ್ಭಕ್ತಿ ಮುಂತಾದ ಶ್ರೇಷ್ಠ ಮೌಲ್ಯಗಳ ಪ್ರತಿನಿಧಿಯಂತೆ ಕಂಡುಬರುತ್ತಾಳೆ. ಶರಣರೆಲ್ಲರೂ ಅಕ್ಕನ ಮಹೋನ್ನತ ಸಾಹಿತ್ಯಗಳನ್ನೆಲ್ಲಾ ಮೆಚ್ಚಿ ಗೌರವಿಸಿದ್ದಾರೆ. ವಯಸ್ಸಿನಲ್ಲಿ ಚಿಕ್ಕವಳಾದರೂ ಅಕ್ಕ ಎಂದು ಕರೆಯಿಸಿಕೊಂಡ ಹಿರಿತನ ಅವಳದು. ಅಕ್ಕನ ಹಿರಿತನದ ಹಾದಿಯನ್ನು ಚೆನ್ನಬಸವಣ್ಣ ಒಂದೆಡೆ ಹೇಳಿದ ಪರಿ,

ತನುವಿನೊಳಗಿದ್ದು ತನುವಗೆದ್ದಳು,
ಮನದೊಳಗಿದ್ದು ಮನವಗೆದ್ದಳು,
ವಿಷಯದೊಳಗಿದ್ದು ವಿಷಯಂಗಳ ಗೆದ್ದಳು,
ಅಂಗಸಂಗವ ತೊರೆದು ಭವವಗೆದ್ದಳು,
ಕೂಡಲ ಚೆನ್ನಸಂಗಯ್ಯನ ಹೃದಯ ಕಮಲವ ಹೊಕ್ಕು,
ನಿಜಪದವೆಯ್ಯಿದ ಮಹಾದೇವಿಯಕ್ಕನ ಶ್ರೀಪಾದಕೆ ನಮೋ ನಮೋ
ಎನುತಿರ್ದೆನು.

ಈ ಒಂದು ವಚನ ಅಕ್ಕನ ಗುಣವಿಶೇಷತೆಯನ್ನು ಪರಿಚಯಿಸುತ್ತದೆ. ಇದೇ ರೀತಿ ಅಣ್ಣ ಬಸವಣ್ಣ ಅವರು ಅಕ್ಕನ ಕುರಿತು ಅಪಾರ ಅಭಿಮಾನ ಹೊಂದಿದವರು. ಅಕ್ಕನ ಸಾಧನೆ ಹಾದಿಯನ್ನು ಕಂಡು ಹೆಮ್ಮೆ ಪಟ್ಟವರು. ತಮ್ಮದೊಂದು ವಚನದಲ್ಲಿ ಮಹಾದೇವಿ ಅಕ್ಕನನ್ನು ನನ್ನ ಹೆತ್ತ ತಾಯಿಯೆಂದು ಗೌರವಿಸುತ್ತಾರೆ.

ಕಾಯದ ಲಜ್ಜೆಯ ಕಲ್ಪಿತವ ಕಳೆದು
ಜೀವದ ಲಜ್ಜೆಯ ಮೋಹವನಳಿದು
ಮನದ ಲಜ್ಜೆಯ ನೆನಹ ಸುಟ್ಟು
ಭಾವದ ಕೂಟ ಬತ್ತಲೆ ಎಂದರಿದು
ತವಕದ ಸ್ನೇಹ ವ್ಯವಹಾರಕ್ಕೆ ಹೋಗದು!
ಕೂಡಲಸಂಗಮದೇವಯ್ಯ, ಎನ್ನ ಹೆತ್ತ ತಾಯಿ
ಮಹಾದೇವಿಯಕ್ಕನ ನಿಲವ ನೋಡಯ್ಯ ಪ್ರಭುವೆ

ಎಂದು ವಚನದಲ್ಲಿ ಅಕ್ಕನ ವ್ಯಕ್ತಿತ್ವವನ್ನು ಮನಸಾರೆ ಪ್ರಶಂಸಿಸಿದ್ದಾರೆ. ಹಾಗೆಯೇ ಅಕ್ಕನ ಭಕ್ತಿಯನ್ನು ಕಂಡು ತಮ್ಮದೊಂದು ವಚನದಲ್ಲಿ ಕೊಂಡಾಡುತ್ತಾ ಹೇಳಿದ ರೀತಿ.

ರೂಹಿಲ್ಲವವಂಗೆ ಒಲಿದವರಿಗೆ ತನುವಿನ ಹಂಗುಂಟೆ?
ಮಾನವಿಲ್ಲದವಗೆ ಮೆಚ್ಚಿದವರಿಗೆ ಅಭಿಮಾನದ ಹಂಗುಂಟೆ?
ದಿಗಂಬರಿನಿಗೆ ಒಲಿದವರಿಗೆ ಕೌಪೀನದ ಹಂಗುಂಟೆ?
ಕೂಡಲಸಂಗಮದೇವಯ್ಯ. ಮಹಾದೇವಿಯಕ್ಕನೆಂಬ ಭಕ್ತೆಗೆ
ಆವ ಹೊರೆಯೂ ಇಲ್ಲ ನೋಡಾ, ಪ್ರಭುವೆ!

ಮಹಾದೇವಿ ಅಕ್ಕ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದನ್ನು ಗಮನಿಸಿದ ಬಸವಣ್ಣರು, ಆಕೆಯ ಆಧ್ಯಾತ್ಮದ ಉನ್ನತ ಶ್ರೇಣಿಯನ್ನು ಮುಕ್ತಕಂಠದಿಂದ ಹೊಗಳುತ್ತಾರೆ. ಅದರ ಜೊತೆಯಲ್ಲಿ ಬಸವಣ್ಣರು ಕಂಡ ಕನಸಿನ ಸ್ತ್ರೀಸಮಾನತೆಗೆ ಅಕ್ಕ ಭದ್ರ ಬುನಾದಿ ಹಾಕಿದಳು. ಅದಕ್ಕೆ ಅಣ್ಣನವರು ಒಂದು ಸಾರಿ ಅನುಭವ ಮಂಟಪದಲ್ಲಿ ಹೇಳಿದ ಮಾತೆಂದರೆ, “ಶತಶತಮಾನಗಳಿಂದ ಧರ್ಮವು ಅಪಚಾರವೊಂದನ್ನು ಮಾಡುತ್ತಾ ಬಂದಿದೆ. ಸ್ತ್ರೀಯನ್ನು ಸ್ವಾಭಾವಿಕವಾಗಿ ಅಜ್ಞಾನಿ, ಅಹಂಕಾರಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸ್ವರೂಪಳು, ಅಷ್ಟ ಮದಗಳ ಗಟ್ಟಿ, ಪ್ರಾಣಪೀತಳು, ಇಂದ್ರಿಯ ದೌರ್ಬಲ್ಯ-ಮನೋವಿಕಾರದ ತವರು; ಎಂದೆಲ್ಲಾ ಹಳಿದು ಅವರಲ್ಲಿ ಅಡಗಿದ್ದ ಪ್ರತಿಭೆಗಳನ್ನು ನಾಶಪಡಿಸಲಾಗಿದೆ. ಮಾನವನು ಶರೀರವನ್ನು ಹೊತ್ತಮೇಲೆ ಇವಿರುವುದು ಸಹಜ. ಆದರೆ ಸ್ತ್ರೀಯತ್ತಲೇ ಬೆರಳು ಮಾಡಿ ಹಳಿಯುತ್ತ ಧರ್ಮ ಸಂಸ್ಕಾರವನ್ನು ಸಹ ಕೊಡುತ್ತಿರಲಿಲ್ಲ. ಪುರುಷಪ್ರಧಾನದ ಮತ್ತು ಧರ್ಮಶಾಸ್ತ್ರಗಳ ದೌರ್ಜನ್ಯವನ್ನು ಪ್ರತಿಭಟಿಸಿ ನಾನು ಮನೆ ತೊರೆದಿದ್ದೇನೆ. ಅದಕ್ಕಾಗಿ ಧರ್ಮಸಮಾನತೆ ಸಾರುವತ್ತ ನಮ್ಮ ಪ್ರಯತ್ನ ಸಾಗುತ್ತಿದೆ.

ಈ ಸಮಾನ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಮಹಾತಾಯಿ ಮಹಾದೇವಿ ಅಕ್ಕ ನಮಗೆಲ್ಲರಿಗೂ ಅಲ್ಲದೇ ನಮ್ಮ ಧರ್ಮ-ಸಾಹಿತ್ಯಗಳಿಗೂ ಕೀರ್ತಿ ತಂದಿದ್ದಾಳೆ. ನಾವುಗಳು ತಾತ್ವಿಕವಾಗಿ ಯೋಚಿಸಿದ್ದನ್ನು, ಸಾಧಿಸಿ ನಿರೂಪಿಸಿದ್ದಾಳೆ. ಸ್ತ್ರೀಯರನ್ನು ಕೀಳಾಗಿ ಕಾಣುವವರಿಗೆ ಮಾರ್ಗದರ್ಶಕಳಾಗಿದ್ದಾಳೆ. ಮನುಷ್ಯಳಾಗಿ ಹುಟ್ಟಿದರೂ ಶರೀರ ಗುಣಗಳನ್ನು ಮೆಟ್ಟಿ, ನಿರ್ಲಿಪ್ತ ನಿರ್ವಾಣದ ಪದವಿ ಪಡೆದು, ಮಹಿಳಾ ಕುಲಕ್ಕೆ ಮಾದರಿಯಾಗಿದ್ದಾಳೆ. ಇಂತಹ ತಾಯಿಗೆ ಹೃದಯ ತುಂಬಿ ಪ್ರಣಾಮ ಸಲ್ಲಿಸುವೆ”. ಎಂದು ಹೇಳಿ ಮತ್ತೊಂದು ವಚನವನ್ನು ಹೇಳುತ್ತಾರೆ,

ಅಜ್ಞಾನ ಹಿಂಗಿತ್ತು, ಅಹಂಕಾರವಡಗಿತ್ತು,
ಅರಿಷಡ್ವರ್ಗಂಗಳು ಹರಿಹಂಚಾದವು,
ಅಷ್ಟಮದಂಗಳು ಪಟ್ಟ ಪರಿಯಾದವು,
ದಶವಾಯುಗಳು ವಶಪರ್ತಿಯಾದವು,
ಇಂದ್ರಿಯಂಗಳು ಬಂಧನವಡೆದವು, ಮನೋವಿಕಾರ ನಿಂತಿತ್ತು.
ಕೂಡಲಸಂಗಮದೇವಾ, ನಿಮ್ಮಲ್ಲಿ ನಮ್ಮ ಮಹಾದೇವಿಯಕ್ಕಗಳ
ನಿರ್ವಾಣದ ಸಹಜ ನಿಲವ ಕಂಡು
ನಮೋ ನಮೋ ಎನುತಿರ್ದೆನಯ್ಯಾ ಪ್ರಭುವೆ.

ಇದು ಅಣ್ಣ ಬಸವಣ್ಣರು ಅಕ್ಕನನ್ನು ಪ್ರಶಂಸಿಸಿದ ರೀತಿಯಾದರೆ, ಇನ್ನು ಶೂನ್ಯ ಪೀಠವನ್ನು ಅಲಂಕರಿಸಿದ್ದ ಅಲ್ಲಮರೂ ಅಕ್ಕನ ಗುಣಗಳನ್ನು ಮನತುಂಬಿ ವಚನಗಳಲ್ಲಿ ಹೇಳಿದ್ದಾರೆ. ಅಕ್ಕ ಅನುಭವಮಂಟಪ ಪ್ರವೇಶಿಸಿದಾಗ ಆಕೆಯನ್ನು ನಾನಾ ರೀತಿಯಲ್ಲಿ ಪ್ರಶ್ನಿಸುತ್ತಾರೆ. ಅವರ ಉದ್ದೇಶ ಆಕೆಯನ್ನು ಪರೀಕ್ಷಿಸುವುದಾಗಿರದೇ, ಅಕ್ಕನ ವ್ಯಕ್ತಿತ್ವವನ್ನು ಲೋಕಕ್ಕೆ ಸಾರುವ ಹಿನ್ನೆಲೆಯಲ್ಲಿ ಸವಾಳುಗಳನ್ನು ಹಾಕುತ್ತಾ, ಅವಕ್ಕೆ ಅಕ್ಕ ಕೊಡುವ ಜವಾಬುಗಳನ್ನು ಕಂಡು ಉಲ್ಲಸಿತರಾಗುತ್ತಾರೆ, ಅಂತಿಮವಾಗಿ ಅವರು ಅಕ್ಕನ ಕುರಿತು ಹೇಳಿದ ಮಾತುಗಳೆಂದರೆ “ತಾಯಿ, ಅಂಗವು ಅಂಗನೆಯ ರೂಪದಿಂದ ಇದೆ. ಆದರೆ ಮನಸ್ಸು-ಭಾವಗಳು ಪರಿಪಕ್ವಗೊಂಡು, ಲಿಂಗ ಪ್ರಸಾದವಾಗಿದೆ. ಇಂತಹ ಕಠಿಣತಮ ಪರೀಕ್ಷೆಯಲ್ಲಿ ಕಳಾಯುಕ್ತಳಾಗಿ ಹೊರಬಂದ ನೀನು ನನ್ನ ಅಕ್ಕ! ಗುಹೇಶ್ವರ ಲಿಂಗದಲ್ಲಿ ಹೆಣ್ಣು-ಗಂಡೆಂಬ ಉಭಯನಾಮಾವಳಿಯ, ನಿರ್ಲಿಪ್ತ ನಿಲುವನ್ನು ಮುಟ್ಟಿದ ಎನ್ನ ಅಕ್ಕ ನೀನು” ಎಂದು ಹೇಳಿದ ವಚನವು,

ಅಂಗ ಅಂಗನೆಯ ರೂಪವಲ್ಲದೆ,
ಮನ ವಸ್ತು ಭಾವದಲ್ಲಿ ಬೆಚ್ಚಂತಿರ್ಪುದು;
ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ, ಅಕ್ಕ!
ಗುಹೇಶ್ವರಲಿಂಗದಲ್ಲಿ ಉಭಯನಾಮವಳಿದ ಎನ್ನಕ್ಕಾ!

ಹಾಗೆಯೇ ಇನ್ನೊಂದು ವಚನದಲ್ಲಿ,

ಆದಿ ಶಕ್ತಿ ಅನಾದಿ ಶಕ್ತಿ ಎಂಬರು, ಅದನಾರು ಬಲ್ಲರಯ್ಯಾ?
ಆದಿ ಎಂದರೆ ಕುರುಹಿಂಗೆ ಬಂದಿತ್ತು, ಅನಾದಿ ಎಂದರೆ ನಾಮಕ್ಕೆ ಬಂದಿತ್ತು.
ಆದಿಯಲ್ಲ ಅನಾದಿಯಲ್ಲ, ನಾಮವಿಲ್ಲದ ಸೀಮೆಯಿಲ್ಲದ
ನಿಜಶಕ್ತಿ ಬಿಚ್ಚಕ್ತಿಯಾಯಿತ್ತ ನೋಡಾ!
ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ,
ಗುಹೇಶ್ವರ ಲಿಂಗದಲ್ಲಿ ಸಂದಿಲ್ಲದಿಪ್ಪ
ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.

ಅಲ್ಲಮಪ್ರಭುವಿನಂತೆ ಜೊತೆಗೆ ಅವರ ಅಣತಿಯಂತೆ ಅಕ್ಕನನ್ನು ಕಲ್ಯಾಣ ಪ್ರವೇಶಕ್ಕೆ ಮುಂಚಿತವಾಗಿ ಕಿನ್ನರಿಬೊಮ್ಮಯ್ಯನು ಆಸೆ-ಆಮಿಷಗಳನ್ನು ಒಡ್ಡುತ್ತಾನೆ. ಆದರೆ ಅಕ್ಕ ಅವುಗಳನ್ನು ತುಚ್ಛವಾಗಿ ಕಾಣುತ್ತಾ ತಿರಸ್ಕರಿಸುತ್ತಾಳೆ. ಆಗ ಬೊಮ್ಮಯ್ಯನು ವಯಸ್ಸಿಗಿಂತ ಹಿರಿದಾದ ಅಕ್ಕನ ಜ್ಞಾನಕ್ಕೆ, ವೈರಾಗ್ಯಕ್ಕೆ ಶರಣಾಗುತ್ತಾನೆ. ಅದಕ್ಕೆ ಅಕ್ಕನಲ್ಲಿ ಕ್ಷಮೆಕೋರುತ್ತಾ ಹೃದಯತುಂಬಿ ವಚನದಲ್ಲಿ ಹಾಡುತ್ತಾನೆ,

ಶರಣಾರ್ಥಿ ಶರಣಾರ್ಥಿ ಎಲೆ ತಾಯಿ ನಮ್ಮವ್ವ
ಶರಣಾರ್ಥಿ ಶರಣಾರ್ಥಿ ಕರುಣಸಾಗರದ ನಿಧಿಯೆ
ದಯಾಮೂರ್ತಿತಾಯೆ ಶರಣಾರ್ಥಿ ಶರಣಾರ್ಥಿ
ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕ
ನೀವು ಬಿಡಿಸಿದಿರಾಗಿ ನಿಮ್ಮ ದಯದಿಂದ
ನಾನು ಹುಲಿ ನೆಕ್ಕಿ ಬದುಕುದೆನು
ಶರಣಾರ್ಥಿ ತಾಯೆ………..

ಇನ್ನು ಅಕ್ಕನ ವಚನಗಳನ್ನು ಗಮನಿಸಿದರೆ ಆಕೆಯ ವ್ಯಕ್ತಿತ್ವ ತಿಳಿಯುತ್ತದೆ. ಅಕ್ಕ ದೇಹದ ಮೇಲಿನ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾಳೆ. ಅದು ನಶ್ವರ ಎಂಬುದನ್ನು ವಿಭಿನ್ನವಾಗಿ ಸಾರುತ್ತಾಳೆ. ಆಕೆಯ ಒಂದು ವಚನ,

ಅಮೇಧ್ಯದ ಮಡಕೆ, ಮೂತ್ರದ ಕುಡಿಕೆ;
ಎಲುವಿನ ತಡಿಕೆ, ಕೀವಿನ ಹಿಡಿಕೆ!
ಸುಡಲೀ ದೇಹವ!
ಒಡಲವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನರಿ ಮರುಳೆ!

ಈ ವಚನವು ಆಕೆ ದೇಹದ ಮೇಲೆ ಹೊಂದಿದ್ದ ಅಸಹ್ಯ, ತಿರಸ್ಕಾರದಿಂದ ತ್ಯಜಿಸುವ ಕುರಿತು ತನ್ನ ಅಭಿಪ್ರಾಯ ಮಂಡಿಸುತ್ತಾಳೆ. ದೇಹವೆನ್ನುವುದು ನಶ್ವರ ಹಾಗಾಗಿ ಅದನ್ನು ನಂಬಿಕೊಳ್ಳುವುದು ನಮ್ಮ ಮೂರ್ಖತನ. ಅದನ್ನು ಬಿಟ್ಟು ಆತ್ಮದ ಸೆಳೆತದ ಕಡೆಗೆ ಹೆಚ್ಚು ಪ್ರಭಾವಿತರಾಗಬೇಕು. ಆಕೆ ಚೆನ್ನಮಲ್ಲಿಕಾರ್ಜುನನ್ನು ಅಮರತೆಯ ಸಂಕೇತವಾಗಿ ಕಾಣುತ್ತಾಳೆ. ಆತನ ಕುರಿತು ಹೆಚ್ಚು ಸೆಳೆತವಿದೆ. ಇಂದು ಇದ್ದು ನಾಳೆ ಹಾಳಾಗಿ ಹೋಗುವ ಮತ್ತು ಬದುಕಿನ ನೋವನ್ನು ತೊರೆದು ಅಮರತೆಯತ್ತ ಸಾಗಬೇಕು ಎಂದು ಆಕೆಯ ಖಚಿತ ನಿಲುವು. ಅಕ್ಕನು ದೇಹವನ್ನು ವಾಹಕವಾಗಿ ಮಾತ್ರ ಪರಿಗಣಿಸಿ, ಬೇರೆಲ್ಲ ರೀತಿಯಿಂದಲೂ ದೂರವಿಡುತ್ತಾಳೆ. ಆ ಮೂಲಕ ಸಂಸಾರಿಕ ಚೌಕಟ್ಟನ್ನು ಮೀರುತ್ತಾಳೆ. ಮೀರಿ ಆಕೆಯೇನು ಸ್ವೇಚ್ಛಾಚಾರಿಯಾಗುವುದಿಲ್ಲ. ದೇಹವನ್ನು ನಿರಾಕರಿಸಿ ಕಾಮನನ್ನು ಗೆಲ್ಲುತ್ತಾಳೆ. ದೇಹವನ್ನು ನಿರಾಕರಿಸುತ್ತಾ ಕಾಮದ ವಿಚಾರವನ್ನೂ ಸ್ಪಷ್ಟಪಡಿಸಿದ್ದಾಳೆ.

ನೋಡುವ ಕಣ್ಣಿಂಗೆ ರೂಪಿಂಬಾಗಿಲು ನೀವು ಮನನಾಚಿ ಬಂದಿರಣ್ಣಾ
ಕೇಳಿದ ಶೋತೃ ಸೊಗಸಿಗೆ ನೀವು ಮರುಳಾಗಿ ಬಂದಿರಣ್ಣ
ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣ
ಮೂತ್ರದ ಬಿಂದು ಒರಸುವ ನಾಳವೆಂದು ಕಂಗಾಣದೆ ಮುದಗೆಟ್ಟು ಬಂದಿರಣ್ಣ
ಬುದ್ಧಗೇಡಿತನದಿಂದ ಪರಮಾರ್ಥದ ಸುಖವ ಹೋಗಲಾಡಿಸಿಕೊಂಡು
ಇದಾವೆ ಕಾರಣವೆಂದರಿಯದೆ ನೀವು ನರಕ ಗೆಡುವೆಮದರಿತು
ಮನಹೇಸದೆ ಬಂದಿರಣ್ಣ
ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕ ಪುರುಷರೆನಗೆ ಸಹೋದದರು
ಹೋಗಾ ಮರುಳೆ.

ಅಕ್ಕನ ಮನದಾಳದ ಮಾತುಗಳನ್ನು ಇದರಲ್ಲಿ ಕಾಣುತ್ತೇವೆ, ಪುರುಷ ಪ್ರಧಾನತೆಯನ್ನು, ಕಾಮವನ್ನು ವಿಡಂಭನೆ ಮಾಡುತ್ತಾ, ಅವರ ಮನಪರಿವರ್ತಿಸುವಂಥ ವಚನವಿದು. ಅಕ್ಕನಿಗೆ ತಾನು ಸಾಮಾನ್ಯಳಲ್ಲ ಎಂಬುದನ್ನು ಕಂಡುಕೊಂಡಿದ್ದಳು. ಅದಕ್ಕೆ ತನ್ನ ಕುರಿತು,

ಬಟ್ಟ ಮೊಲೆಯ ಭರದ ಜವ್ವನದ ಚೆಲುವ ಕಂಡು ಬಂದಿರಣ್ಣ
ಅಣ್ಣಾ ನಾನು ಹೆಂಗಸಲ್ಲ, ಅಣ್ಣಾ ನಾನು ಸೂಳೆಯಲ್ಲ

ಎಂದು ತನ್ನ ಕುರಿತು ನಿಷ್ಠುರವಾಗಿ ಹೇಳುವ ಪರಿ ಮೆಚ್ಚುವಂತಹದ್ದು. ಕಾಮವನ್ನು ತೊರೆದಿದ್ದೇನೆ ಎನ್ನುತ್ತಾ, ಚೆನ್ನಮಲ್ಲಿಕಾರ್ಜುನನ ಜೊತೆ ಹಾದರವಾಡುವೆ ಎಂಬ ಆಕೆಯ ಚಿಂತನೆ ಕಗ್ಗಂಟಾಗಿ ಮನದಲ್ಲಿ ನಿಲ್ಲುತ್ತದೆ. ಜೀವನದ ಆರಂಭ ಘಟ್ಟದಲ್ಲಿಯೇ ಆಕೆ ವೈವಾಹಿಕ ಜೀವನದಿಂದ ದೂರವಾದಳು. ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದರೂ ಇಂತಹ ನಿಲುವು ತಾಳಿದ್ದು ಅಚ್ಚರಿ. ಅದರ ಜೊತೆಗೆ ಮೇಲೆ ಚರ್ಚಿಸಿದಂತೆ ತನ್ನ ದೈಹಿಕ ಕಾಮನೆಗಳನ್ನು ಬದಿಗಿಟ್ಟು ಲೌಕಿಕದ ಗಂಡರು ನನಗೆ ಅನ್ಯರು ಎನ್ನುವುದು ಆಕೆಯ ಗಟ್ಟಿತನ ತೋರಿಸುತ್ತದೆ. ಅದರಿಂದ ಸಮಾಜದಲ್ಲಿನ ಕುಟುಂಬ, ಮದುವೆ ಎಂಬ ಕಟ್ಟುಪಾಡುಗಳ ಬಂಧನವನ್ನು ಹರಿದು ಹೊರಬರುತ್ತಾಳೆ.

ಅತ್ತೆ ಮಾಯೆ, ಮಾವ ಸಂಸಾರಿ
ಮೂವರು ಮೈದುನರು ಹುಲಿಯಿಂಥವರು
ನಾಲ್ವರು ನೆಗೆವೆಣ್ಣು ಕೇಳು ಕೆಳದಿ
ಐವರು ಭಾವದಿರನೊಯ್ವ ದೈವವಿಲ್ಲ
ಆರು ಪ್ರಜೆಯತ್ತಿಗೆಯರು ಮೀರಲಾರೆನು ತಾಯೆ

ಹೇಳುವಡೆ ಏಳು ಪ್ರಜೆ ತೊತ್ತಿರ ಕಾವಲು
ಕರ್ಮವೆಂಬ ಗಂಡನ ಬಾಯ ಟೊಣೆದು ಹಾದರವಾಡುವೆನು
ಹರನ ಕೂಡೆ
ಮನವೆಂಬ ಸಖಿಯ ಪ್ರಸಾದದಿಂದ ಅನುಭವ ಕಲಿತೆನು ಶಿವನೊಡನೆ
ಕರಚೆಲುವ ಶ್ರೀಶೈಲ ಮಲ್ಲಿಕಾರ್ಜುನ ಸಜ್ಜನದ ಗಂಡನ ಮಾಡಿಕೊಂಡೆನು

ಅಕ್ಕ ಸ್ತ್ರೀಯರ ಕೌಟುಂಬಿಕ ಬಂಧನದ ಪರಿ ಹೇಳುತ್ತಾಳೆ. ಅದರ ಜೊತೆಗೆ ಅದನ್ನು ಮೀರುವ ವಿಧಾನವನ್ನು ಪರಿಚಯಿಸುತ್ತಾಳೆ. ಆಕೆಯ ಆ ಧೈರ್ಯ ನಮ್ಮ ಎಣಿಕೆಗೆ ನಿಲುಕದ್ದಾಗಿದೆ. ನನಗೆ ಈ ಲೋಕದ ಕರ್ಮದ ಗಂಡ ಬೇಡ ಎಂದು ತಿರಸ್ಕರಿಸುತ್ತಾ, ಹರನ ಜೊತೆ ಹಾದರವಾಡುವೆ ಎಂದು ನಿರ್ಭಯದಿಂದ ಹೇಳಿಕೊಳ್ಳುತ್ತಾಳೆ. ಅದರಿಂದ ಅನುಭವವು ಎತ್ತರಕ್ಕೆ ಕೊಂಡೊಯ್ಯುತ್ತದೆ. ಅದರ ಮೂಲಕ ನನ್ನ ಪತಿ ಸಜ್ಜನದ ಗಂಡನಾಗುತ್ತಾನೆ ಎಂದು ಹೇಳುತ್ತಾಳೆ.

ಈ ವಚನಗಳ ಹಿನ್ನೆಲೆಯಲ್ಲಿ ಅಕ್ಕನಿಗೆ ದೇಹದ ಸಂಪೂರ್ಣ ಅರಿವಿತ್ತು ಅದಕ್ಕೆ ಆಕೆ ಒಂದು ಕಡೆ “ಮೊಲೆ ಮುಡಿ ಇದ್ದರೇನು ಮೂಗಿಲ್ಲದವಳಿಂಗೆ?” ಎಂದು ಹೇಳುವುದನ್ನು ಗಮನಿಸಬಹುದು. ಜೊತೆಗೆ “ಕಂಗಳು ಕಳೆದು ಕರುಳ ಕಿತ್ತು… ಭಂಗದ ಬಟ್ಟೆಯ ಭವ ಗೆಲಿದವಳಿಗಂಗವೆಲ್ಲಿಯದಾ ಹೇಳಾ” ಎಂದು ಪ್ರಶ್ನಿಸುತ್ತಾಳೆ. ದೈಹಿಕ ಕಾಮನೆ ಕುರಿತಾಗಿ “ಒಮ್ಮೆ ಕಾಮನ ಕಾಲ ಹಿಡಿವೆ, ಮತ್ತೊಮ್ಮೆ ಚಂದ್ರಮಂಗೆ ಸೆರೆಯೊಡ್ಡಿ ಬೇಡುವೆ” ಎಂದು ವಿನಮ್ರಳಾದರೆ, ಇನ್ನೊಂದೆಡೆ “ಕಾಮನ ತಲೆಯ ಕೊರೆದು ಕಾಲನ ಕಣ್ಣ ಕಳೆದು, ಸೋಮ ಸೂರ್ಯರ ಹುರಿದು ಹುಡಿಮಾಡಿ ತಿಂಬುವಳಿಗೆ ನಾಮವ ನೀಡಬಲ್ಲವರಾರು…” ಎಂದು ಧೈರ್ಯದಿಂದ ಮುನ್ನುಗ್ಗುತ್ತಾಳೆ.

ಇಂದ್ರಿಯ ಬಿಟ್ಟು ಕಾಯವಿರದು
ಕಾಯುವ ಬಿಟ್ಟು ಇಂದ್ರಿಯವಿರದು
ಎಂತು ನಿಃ ಕಾಮಿಯೆಂಬೆ, ಎಂತು ನಿರ್ದೋಷಿಯೆಂಬೆ?…
ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು.
ಕಾನಲೆಂದು ಬಂದ ದುಃಖ ಕಂಡಲ್ಲದೆ ಹರಿಯದು

ಅಕ್ಕ ಲೈಂಗಿಕತೆ ಕುರಿತು ಮುಕ್ತವಾಗಿ ತನ್ನ ಆಲೋಚನೆಗಳನ್ನು ಹರಿಬಿಡುತ್ತಾಳೆ. ಪ್ರಸ್ತುತ ದಿನಗಳಲ್ಲಿ ನಾವು ಮೂಗುಮುರಿಯುತ್ತಿರುವಾಗ, ಅಂದು ಅಕ್ಕ ಯಾವ ಭಯವಿಲ್ಲದೆ, ಕಸಿವಿಸಿಗೊಳ್ಳದೆ ವಿಭಿನ್ನವಾದರೂ ವಿಶೇಷ ಎಂಬಂತೆ ಸಂದೇಶ ನೀಡುತ್ತಾಳೆ.

ನಾಡಿನ ಖ್ಯಾತ ವಿದ್ವಾಂಸರಾದ ಡಾ. ರಹಮತ್‌ ತರೀಕೆರೆ ಅವರು ಅಕ್ಕನ ಕುರಿತು ಹೇಳಿದ ಮಾತುಗಳು ಹೆಚ್ಚು ಅರ್ಥಪೂರ್ಣವಾಗಿವೆ. “ಮಹಾದೇವಿ ಅಕ್ಕನ ಹಲವಾರು ವಚನಗಳು, ಆಕೆಯ ಜೀವನವನ್ನು ಪರಿಚಯಿಸುವ ಕೃತಿಗಳು, ಐತಿಹ್ಯಗಳು, ನಂಬಿಕೆಗಳು, ವಿಮರ್ಶೆಗಳು ನಮ್ಮ ಜನಮನದಲ್ಲಿ ಸಾಕಷ್ಟು ವಾದ-ವಿವಾದವನ್ನು ಹುಟ್ಟಿಸಿವೆ. ಅಕ್ಕ ಅಂದಿನ ದಿನದಲ್ಲಿ ಯಾರಿಗೂ ನಿಲುಕದ ನಕ್ಷತ್ರವಾಗಿ ಬೆಳಗಿದ್ದಾಳೆ. ಅದನ್ನು ಅಲ್ಲಮರು, ಬಸವಣ್ಣ ಮುಂತಾದವರು ಹೇಳಿದ್ದಾರೆ, ಅನಂತರದ ಶೂನ್ಯ ಸಂಪಾದಕರಿಗೂ ಅಕ್ಕ ಒಗಟಾಗಿದ್ದಾಳೆ, ಪ್ರಸ್ತುತ ಈ ಸಮಯದಲ್ಲೂ ಅಕ್ಕ ಕನ್ನಡಿಯೊಳಗಿನ ಗಂಟಾಗಿ ಕಾಣುತ್ತಾಳೆ. ಮಹಿಳಾಪರ ಹೋರಾಟಗಾರರಿಗೆ ಆಕೆ ನಾಯಕಿಯಂತೆ ಗೋಚರಿಸುತ್ತಳೇ. ಜನಪದ ಸಾಹಿತ್ಯದಲ್ಲೂ ಕಾಣಿಸಿಕೊಂಡಿದ್ದಾಳೆ. ಅಕ್ಕನ ಕುರಿತು ಅನೇಕ ಕವನಗಳು, ಕಾದಂಬರಿಗಳು, ನಾಟಕಗಳು ಜನರಲ್ಲಿ ಮನೆಮಾತಾಗಿವೆ. ಆಕೆಯ ವಚನಗಳಲು ಸಂಗೀತಕಾರರಿಗೆ ಅಮೂಲ್ಯ ರತ್ನಗಳಾಗಿವೆ. ಅಕ್ಕನ ಚಿತ್ರವನ್ನು ಅನೇಕರು ಮನೆಗಳಲ್ಲಿ ಪೂಜಿಸುತ್ತಾರೆ. ಅಕ್ಕನನ್ನು ತಿಳಿದುಕೊಳ್ಳುವುದು ಇನ್ನು ನಿಂತಿಲ್ಲ. ಜೊತೆಗೆ ನಿಲ್ಲಲೂಬಾರದು. ಸಮುದ್ರದ ಆಳಕ್ಕೆ ಹೋದಂತೆ ಅಮೂಲ್ಯರತ್ನಗಳು ಸಿಗುವಂತೆ ಆಕೆಯ ಕುರಿತು ಜ್ಞಾನ ಪಡೆಯುತ್ತಾ ಸಾಗಿದಂತೆ ಸಾರ್ಥಕ ಜೀವನದ ಪರಿ ಗೋಚರಿಸುತ್ತದೆ” ಎನ್ನುತ್ತಾರೆ.

ಅಕ್ಕನ ೩೫೫ ವಚನಗಳು ನಮಗೆ ಇದುವರೆಗೂ ಲಭ್ಯವಾಗಿದೆ. ಜೊತೆಗೆ ೧೭ ಹಾಡುಗಳು ಮತ್ತು ಯೋಗಾಂಗತ್ರಿವಿಧ ಎಂಬ ಅನರ್ಘ್ಯ ಕೃತಿಯನ್ನು ನೀಡಿ ಕನ್ನಡ ಸಾರಸ್ವತ ಲೋಕವನ್ನು ಬೆಳಗಿದ್ದಾಳೆ. ಆಕೆಯ ರಚನೆಯಲ್ಲಿ ಪ್ರಮುಖವಾಗಿ ಆತ್ಮ, ಜಿಜ್ಞಾಸೆ, ಕನಸು, ವೈರಾಗ್ಯ, ವಿರಹ, ಚಿಂತೆ, ವೇದಾಂತ, ವೀರಶೈವತತ್ವ (ಅಷ್ಠಾವರಣ), ಪಂಚಾಚಾರಗಳು, ಷಟ್‌ಸ್ಥಲಗಳ ಪ್ರಮುಖ ಅಂಶಗಳನ್ನು ಕಾಣುತ್ತೇವೆ.

ಅಕ್ಕನ ವಚನಗಳಲ್ಲಿ ಬುದ್ಧಿಗಿಂತ ಭಾವಕ್ಕೆ ಪ್ರಧಾನತೆ ಇದೆ. ಮಾತಿಗಿಂತ ಕೃತಿಗೆ ಮಹತ್ವವಿದೆ. ಮನಸು ಕಟ್ಟುವ ಕೆಲಸದ ಜೊತೆಗೆ ಹೊಸ ಭಾವನೆಗಳನ್ನು ಹುಟ್ಟುಹಾಕುವ ಕ್ರಿಯೆ ಅಕ್ಕನ ವಚನಗಳಲ್ಲಿ ಕಾಣಬಹುದು. ಅಕ್ಕನ ವಚನಗಳಲ್ಲಿ ಆಧ್ಯಾತ್ಮವೇ ಪ್ರಮುಖವಾದರೂ ಹೃದಯವಂತಿಕೆಯನ್ನು ಆಕೆ ಮರೆತಿಲ್ಲ. ವಚನಗಳಲ್ಲಿ ವಿಶೇಷವಾಗಿ ಇದನ್ನು ಗುರುತಿಸಬಹುದು. ಆಕೆಯ ವಚನಗಳಲ್ಲಿ ಜನಪದ ಗರತಿಯ ಹೃದಯ ಮಿಡಿತ-ತುಡಿತದೊಂದಿಗೆ ಸಂಪ್ರದಾಯವನ್ನು ಕೊತ್ತೊಗೆದು ಹೋರಾಟದ ಮನೋಭಾವವೂ ಇದೆ. ವಚನಗಳಲ್ಲಿ ಸುಂದರ ಕನಸುಗಳಿಲ್ಲ, ಹುಚ್ಚು ಭ್ರಮೆಗಳಿಲ್ಲ. ಬದಲಾಗಿ ಬದುಕನ್ನು ಅರ್ಥಮಾಡಿಕೊಳ್ಳುವ ಅಂಶಗಳಿವೆ. ತನ್ನ ಅನುಭವಕ್ಕೆ ಬಂದಿರುವುದನ್ನೆಲ್ಲಾ ವಚನರೂಪದಲ್ಲಿ ನೀಡುತ್ತಾ ಹೋಗಿದ್ದಾಳೆ. ಅವುಗಳಲ್ಲಿ ಆವೇಶಕ್ಕಿಂತ ತಣ್ಣನೆಯ ಸ್ಫೋಟವಿದೆ. ಹೆಣ್ಣಿನ ಮೇಲಿನ ಶತಶತಮಾನಗಳ ಶೋಷಣೆಯನ್ನು ವಚನಗಳಲ್ಲಿ ಹೂವಾಗಿ ಅರಳಿಸಿದ್ದಾಳೆ. ಇಂದಿನ ಅನೇಕ ಜ್ವಲಂತ ಸಮಸ್ಯೆಗಳಿಗೂ ಅಕ್ಕನ ವಚನಗಳಲ್ಲಿ ಅರ್ಥಪೂರ್ಣ ಉತ್ತರಗಳಿರುವುದರಿಂದ ಅಕ್ಕ ಈ ವರ್ತಮಾನಕ್ಕೂ ಜೀವಂತವಾಗಿ ನಮ್ಮೊಡನೆ ಇರುವಂತೆ ನಮಗೆ ಭಾಸವಾಗುತ್ತದೆ.

ತಾತ್ವಿಕ ವಿಚಾರಗಳನ್ನು ಕಾವ್ಯವಾಗಿಸುವ ಕಲೆ ಅಕ್ಕನಿಗೆ ಹಿರಿದಾಗಿ ಸಿದ್ಧಿಸಿದೆ. ಸಂಗೀತದಲ್ಲಿ ಒಳ್ಳೆ ಜ್ಞಾನವುಳ್ಳವಳಾಗಿದ್ದರಿಂದ ಆಕೆಯ ಗೀತೆಗಳು ರಾಗಬದ್ದವಾಗಿವೆ. ಮಹಾದೇವಿಯ ವಚನಗಳ ಕಾವ್ಯಾತ್ಮಕ ಶಿಲ್ಪ, ಭಾವತೀವ್ರತೆ, ತನ್ಮಯತೆ, ವಿಚಾರ ಶ್ರೀಮಂತಿಕೆ, ಶ್ರೇಷ್ಠತೆಗಳ ಪ್ರಖರತೆಗಳನ್ನು ಶರಣರೆಲ್ಲ ಕೊಂಡಾಡಿರುವುದು ಆಕೆಯ ಜ್ಞಾನಕ್ಕೆ ಸಂದ ಗೌರವವೆನ್ನಬಹುದು.

ಅಕ್ಕನ ವಚನಗಳೆಲ್ಲ ಮುಕ್ತ ಛಂದಸ್ಸಿಗೆ ಸೇರಿವೆ. ಅನೇಕ ವಚನಗಳಲ್ಲಿ ಸುಂದರ ಪ್ರಾಸವನ್ನು ಕಾಣಬಹುದು. ಪ್ರಕೃತಿಯ ಬಗ್ಗೆ ಅಕ್ಕನಲ್ಲಿರುವ ಪ್ರೀತಿ ಅವುಗಳಲ್ಲಿ ವ್ಯಕ್ತವಾಗಿದೆ. ಆಕೆಯ ವಚನಗಳು ಕ್ಲಿಷ್ಟವಾಗಿರದೇ ಸುಲಭ ಗ್ರಹಿಕೆಗೆ ಉದಾಹರಣೆಗಳನ್ನು ಹೆಚ್ಚಾಗಿ ಬಳಸಿರುವುದನ್ನು ಕಾಣಬಹುದು. ಸಾಮಾನ್ಯರಿಗೂ ಸರಳ ಅರ್ಥವಾಗುವ ಆಕೆಯ ವಚನಶೈಲಿಯಲ್ಲಿ ಗದ್ಯತನ ಹೆಚ್ಚು ಕಂಡುಬರದೆ ಕಾವ್ಯಮಯವನ್ನು ನೋಡುತ್ತೇವೆ. ಅನೇಕ ವಚನಗಳಲ್ಲಿ ನುಡಿ ಚಿತ್ರಗಳಿದ್ದರೆ, ಕೆಲವೆಡೆ ಸಣ್ಣ ಸಣ್ಣ ಕಥೆಗಳು ಇರುವುದನ್ನು ನೋಡಬಹುದು.