ಅಕ್ಕನ ವಚನದ ಮಹತ್ವವನ್ನು ಅಂದೇ ಕಂಡುಕೊಂಡು ಮಹಾಜ್ಞಾನಿ ಚೆನ್ನಬಸವಣ್ಣ ಒಂದು ಕಡೆ,

ಆದ್ಯರ ಅರವತ್ತು ವಚನಕ್ಕೆ
ದಣ್ಣಾಯಕರ ಇಪ್ಪತ್ತು ವಚನ,
ದಣ್ನಾಯಕರ ಇಪ್ಪತ್ತು ವಚನಕ್ಕೆ
ಪ್ರಭುದೇವರ ಹತ್ತು ವಚನ,
ಪ್ರಭುದೇವರ ಹತ್ತು ವಚನಕ್ಕೆ
ಅಜಗಣ್ಣನ ಐದು ವಚನ,
ಅಜಗಣ್ಣನ ಐದು ವಚನಕ್ಕೆ
ಕೂಡಲ ಚೆನ್ನಸಂಗಯ್ಯನಲ್ಲಿ
ಮಹಾದೇವಿಯಕ್ಕಗಳ ಒಂದು ವಚನ ನಿರ್ವಚನ

ಎಂದು ನುಡಿದಿದ್ದಾನೆ. ಇದರ ಮೇಲೆ ಅಕ್ಕನ ವಚನ ಪ್ರಭುತ್ವವನ್ನು ನಾವು ಅರ್ಥಮಾಡಿಕೊಳ್ಳಬಹುದು.

ಸ್ವಸಾಮರ್ಥ್ಯದಿಂದಲೇ ಸಿದ್ಧಿಯ ಶಿಖರಗಳನ್ನೇರಿದ ಅಕ್ಕನ ಬದುಕಿನಲ್ಲಿ ಶರಣರ ಪ್ರವೇಶವಾದುದು ಆಕೆಯ ಸಾಧನೆಯ ಕೊನೆಯ ಘಟ್ಟದಲ್ಲಿ, ಶರಣರು ಅಕ್ಕ ಆಯ್ಕೆಮಾಡಿಕೊಂಡು ಜೀವನ ಮಾರ್ಗವನ್ನು ನಿಷ್ಕಳಂಕವಾಗಿಸಿದಲ್ಲದೆ, ಆಕೆಯ ಭಕ್ತಿ, ಜ್ಞಾನ, ವೈರಾಗ್ಯದ ಸಾಧನೆಯನ್ನು ಹೊರಪ್ರಪಂಚಕ್ಕೆ ತೋರಿಸಿದ್ದಾರೆ. ಮಹಾದೇವಿಯ ಬದುಕನ್ನು ಲೋಕ ಒಪ್ಪುವಂತೆ ಮಾಡಿದ ಶರಣರ ಬಗೆಗೆ ಅಕ್ಕನಿಗೆ ವಿಶೇಷ ಪ್ರೀತಿ ಆದರಗಳಿವೆ.

ಶತಮಾನಗಳ ಅಂಧಕಾರದ ಬದುಕಿಗೆ ಜ್ಞಾನಕಿರಣ ಮೂಡಿಸಿದ ಶರಣರನ್ನು ಅಕ್ಕನ ಗುರುಗಳೆಂದು ಪೂಜ್ಯ ಭಾವನೆಯಿಂದ ಕಾಣುತ್ತ ಭಕ್ತಿ ಸಮರ್ಪಿಸಿದ್ದಾಳೆ. ಶರಣರ ಸ್ವಾನುಭವ ಸಂಪತ್ತು, ವೈಚಾರಿಕತೆ, ಜೀವಪರತೆ, ಪರಶುದ್ಧ ಚಾರಿತ್ಯ್ರದಿಂದ ತಾನು ಪ್ರೇರಿತಳಾದುದನ್ನು ಆಕೆ ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತಾಳೆ. ಶರಣರ ಸಾಮಾಜಿಕ, ಧಾರ್ಮಿಕ ಆಂದೋಲನದ ವೈಚಾರಿಕ-ತಾತ್ವಿಕ ಚೌಕಟ್ಟಿಗೆ ಬದ್ಧಳಾಗುತ್ತಾಳೆ. ಜೊತೆಗೆ ಆತ್ಮಶೋಧನೆಗೆ ತನ್ನದೇ ಸ್ವತಂತ್ರ ದಾರಿಗಳನ್ನು ಹುಡುಕಿಕೊಳ್ಳುತ್ತಾ ಆಂದೋಲನದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುತ್ತಾಳೆ. ಈಕೆ ಶರಣರ ಕ್ರಾಂತಿಯಲ್ಲಿ ಪಾಲ್ಗೊಂಡಿದ್ದರಿಂದ ಚಳುವಳಿಯ ನೆಲೆಗಳು ಹೆಚ್ಚು ಹೆಚ್ಚು ವಿಸ್ತಾರವನ್ನು ಕಾಣುವಂತಾದವು.

ಪಾರಮಾರ್ಥಿಕ ಸಾಧನೆಗೆ ಪರಿಶುದ್ಧ ಲೌಕಿಕ ಬದುಕನ್ನು ಮೊದಲು ಆದರ್ಶವಾಗಿ ಒಪ್ಪಿಕೊಂಡ ಅಕ್ಕನ ಆಲೋಚನೆ, ಅಭಿವ್ಯಕ್ತಿ, ತಾತ್ವಿಕತೆಯಲ್ಲಿ ಹಿರಿಯ ಶರಣರ ಪ್ರಭಾವ ದಟ್ಟವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಉನ್ನತ ಆದರ್ಶಗಳನ್ನು ಅಳವಡಿಸಿಕೊಳ್ಳುವಲ್ಲಿ ಮಹಾದೇವಿ-ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣರಂಥ ಹಿರಿಯ ಶರಣರನ್ನು ಅನುಸರಿಸಿ ಮಾದರಿಯಾಗಿಸಿಕೊಂಡಿದ್ದಾಳೇ. ಆಕೆಯ ಚಿಂತನೆ-ಧೋರಣೆಗಳಲ್ಲಿ ಶರಣರ ಅನುಕರಣೆಗಳನ್ನು ಕಂಡರೂ ಅವು ಪುನರುಕ್ತಿಯಾಗದಂತೆ ಪುನಃಸೃಷ್ಟಿಯ ಸೃಜನಶೀಲತೆ ಆಕೆಯಲ್ಲಿರುವುದನ್ನು ಗುರುತಿಸಲೇಬೇಕು. ಅಕ್ಕನ ಜೀವನ-ಬರಹಗಳನ್ನು ಅರ್ಥಮಾಡಿಕೊಂಡರೆ ಶರಣರನ್ನು ಮಾರ್ಗದರ್ಶಕ ಶಕ್ತಿಗಳಾಗಿ ಸ್ವೀಕರಸಿರುವುದು ಗೋಚರಿಸುತ್ತದೆ. ತನ್ನ ಆಳವಾದ ಚಿಂತನೆ-ವ್ಯಕ್ತಿತ್ವ ಸಿದ್ಧಿಯಿಂದ ಅಂದಿನ ಶರಣ ಸಮುದಾಯದಲ್ಲಿ ವಿಶಿಷ್ಟ ಮನ್ನಣೆಗೆ ಅಕ್ಕ ಪಾತ್ರಳಾಗಿದ್ದಾಳೇ.

ಅಕ್ಕ ನಡೆವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಜ್ಞಾನ ಸಂಪಾದಿಸುತ್ತಾ ಪರಿಪೂರ್ಣತೆಯತ್ತ ಸಾಗುವುದನ್ನು ನಾವು ಕಾಣುತ್ತೇವೆ. ಅದಕ್ಕೊಂದು ನಿರ್ದಶನ ವೆಂದರೆ, ವಸವಾದಿ ಶರಣರ ಕಾಣುವ ತವಕದಲ್ಲಿ ಕಲ್ಯಾಣಪಟ್ಟಣ ಸಮೀಪಿಸುವಷ್ಟರಲ್ಲಿಯೇ ಈ ಹಿಂದೆ ಗಮನಿಸಿದಂತೆ ಕಿನ್ನರಿಬೊಮ್ಮಯ್ಯನ ಪ್ರಸಂಗವೊಂದು ಸಂಭವಿಸುತ್ತದೆ. ಇದು ಅಕ್ಕನ ಆಧ್ಯಾತ್ಮ ಹಾದಿಯಲ್ಲಿ ನಡೆದ ಮಹತ್ವದ ಅಗ್ನಪರೀಕ್ಷೆ ಯಾಗಿದೆ. ಆಕೆಯ ವೈರಾಗ್ಯ ಒರೆದು ನೋಡುವ ಪ್ರಸಂಗ ಇದಾಗಿದೆ.. ಅಕ್ಕ ಅದರಲ್ಲಿ ಯಶಸ್ಸು ಗಳಿಸುತ್ತಾಳೆ. ಅವಳ ವೈರಾಗ್ಯಕ್ಕೆ ಮಣಿದು ಕಿನ್ನರ ಬ್ರಹ್ಮಯ್ಯನು “ಮಹಾದೇವಿ ಯಕ್ಕನ ನಿಲವನರಿಯದೆ ಅಳುಪಿ ಕೆಟ್ಟೆನು” ಎಂದು ಪಶ್ಚಾತ್ತಾಪ ಪಡುತ್ತಾನೆ. ಆತನನ್ನು ಸಹೋದರನೆಂದು ತಿಳಿದು ಕಿನ್ನರಯ್ಯನನ್ನು ಸಂತೈಸುವಾಗ ಅವಳಲ್ಲಿದ್ದ ತಾಳ್ಮೆ, ಕ್ಷಮೆ ಮತ್ತು ಅನುಪಮ ವೈರಾಗ್ಯಗಳಿಂದಾಗಿ ಉಳಿದ ಶರಣರಿಗಿಂತ ಮೇಲಾಗಿ ನಮಗೆ ಗೋಚರಿಸುತ್ತಾಳೆ.

ದೇಹವನ್ನೇ ದೇಗುಲವನ್ನಾಗಿ ಮಾಡಿಕೊಂಡ ಬಸವಣ್ಣ ಹಾಗೂ ಇನ್ನುಳಿದ ಅಸಂಖ್ಯಾ ಶರಣರು ನೆಲೆಸಿದ ಕ್ಷೇತ್ರವೇ ಅಕ್ಕನಿಗೆ ಪವಿತ್ರ ಸ್ಥಳವಾಗಿರುವುದರಿಂದ ಕಲ್ಯಾಣದ ಮಾಹಿತಿಯನ್ನು ಮತ್ತು ಶರಣರ ಮಹಿಮೆಯನ್ನು ಕುರಿತು ಅನೇಕ ಸಲ ಕೊಂಡಾಡಿದ್ದಾಳೆ. ಅದರಲ್ಲೊಂದು,

ಆಸೆ ಆಮಿಷವನಳಿದವಂಗಲ್ಲದೆ
ಕಲ್ಯಾಣದತ್ತಲಡಿಯಿಡವಾರದು,
ಒಳಹೊರಗೂ ಶುದ್ಧವಾದವರಿಗಲ್ಲದೆ
ಕಲ್ಯಾಣವ ಹೋಗಬಾರದು,
ನಿನಾನೆಂಬುದ ಹರಿದವಂಗಲ್ಲದೆ ಕಲ್ಯಾಣವ ಹೋಗಬಾರದು
ಒಳಗೂ, ತಿಳಿದು, ಚೆನ್ನಮಲ್ಲಿಕಾರ್ಜುನಂಗೊಲಿದು
ಉಭಯ ಲಜ್ಜೆಯಳಿದೆನಾಗಿ, ಕಲ್ಯಾಣವ ಕಂಡು
ನಮೋ ನಮೋ ಎನುತಿರ್ಪೆನು.

ಎಂದು ಹೇಳುವ ಈ ವಚನದಲ್ಲಿ, ಜಾತಿ-ವರ್ಣ-ಲಿಂಗಭೇದ ಮಾಡಬಾರದು. ಆಶೆ ಆಮಿಷವನಳಿದವರು ಕಲ್ಯಾಣವನ್ನು ಪ್ರವೇಶಿಸಬಹುದು. ಅವರು ಒಳ-ಹೊರಗೂ ಶುದ್ಧವಾದವರಾಗಿದ್ದು, ನಾನೆಂಬುವ ಅಹಂ ಹರಿದು, ತನ್ನ ತಾನು ತಿಳಿದುಕೊಂಡವರಾಗಿರಬೇಕು. ಇಲ್ಲದಿದ್ದರೆ ಅಂತಹವರು ಕಲ್ಯಾಣಕ್ಕೆ ಹೋಗಬಾರದು ಅದು ಅಸಾಧ್ಯವು ಎಂದು ನುಡಿಯುತ್ತಾಳೆ. ಇದರಲ್ಲಿ ಕಲ್ಯಾಣದ ಹಾಗೂ ಶರಣರ ಮಹತ್ವವನ್ನು ಒಮ್ಮೆಗೆ ಸಾರಿದ್ದಾಳೆ. ಬಸವಣ್ಣ ಕಲ್ಯಾಣದಲ್ಲಿದ್ದಾರೆಂದು ತಿಳಿದಿದ್ದರಿಂದಲೇ ಅಕ್ಕ ನೇರವಾಗಿ ಉಡುತಡಿಯಿಂದ ಕಲ್ಯಾಣಕ್ಕೆ ಬರುತ್ತಾಳೆ. ಕಲ್ಯಾಣ ಕೈಲಾಸದಂತಿದೆ ಎಂಬ ಮಾತನ್ನು ಆಕೆ ಕೇಳಿರಬೇಕು. ಅದಕ್ಕೆ,

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು.
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ
ಇದರಂತುವನಾರು ಬಲ್ಲರಯ್ಯ?
ನಿಮ್ಮ ಸತ್ಯಶರಣರ ಸುಳುಹು ತೋರುತ್ತಿದೆಯಯ್ಯಾ.
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನ್ನಗಾಯಿತ್ತು.
ಕೇಳಾ ಚೆನ್ನಮಲ್ಲಿಕಾರ್ಜುನಾ.

ಒಂದು ಕಡೆ ಕಾಯಕ-ಶರೀರ ಸಂಸ್ಕಾರ, ಮತ್ತೊಂದು ಕಡೆ ಅಧ್ಯಯನ-ಮನಕ್ಕೆ ಸಂಸ್ಕಾರ, ಇನ್ನೊಂದು ಕಡೆ ಅನುಭವ-ಆತ್ಮನಿಗೆ ಸಂಸ್ಕಾರ ಹೀಗಾಗಿ ಕೈಲಾಸದಂತಿದೆ. ಅಂತೆಯೇ ಆ ನುಡಿ ಹಸನಾಗಿದೆ ಎಂದಿರುವಳು. ಕಲ್ಯಾಣವನ್ನು ಒಳಹೊಕ್ಕು ನಂತರವೇ ಒಳಗೂ ಕಲ್ಯಾಣ ಹೊರಗೂ ಕಲ್ಯಾಣ ಎಂದಿದ್ದಾಳೆ. ಕಲ್ಯಾಣ ದೈವಿ ಸಾಮ್ರಾಜ್ಯದ ಪ್ರತೀಕ ಅದನ್ನು ಪ್ರವೇಶಿಸಬೇಕಾದರೆ ಆರಿಷಡ್ವರ್ಗಗಳನ್ನು ಗೆದ್ದಿರಬೇಕು. ಒಳ ಹೊರಗೂ ಶುದ್ಧವಾಗಿ ನೀ-ನಾ ಎಂಬ ಭೇದಭಾವವನ್ನು ಬರಿದು ಮಾಡಿರಬೇಕು. ನಾನು ಚೆನ್ನಮಲ್ಲಿಕಾರ್ಜುನನಿಗೆ ಒಲಿದ ಕಾರಣ ಗಂಡು-ಹೆಣ್ಣು ಎಂಬ ಭೇದ ಇಲ್ಲದ ಕಾರಣ ಇಂಥ ಪವಿತ್ರ ನೆಲವನ್ನು ಕಾಣುವಮಥ ಅರ್ಹತೆ ಹೊಂದಿದ್ದೇನೆ. ನಂತರ ಅಲ್ಲಿ ಅನೇಕ ಶರಣರ ಸುಳುಹು ಕಂಡಾಗ ಅಣ್ಣ ಬಸವಣ್ಣನನ್ನು ಕಾಣಬೇಕೆಂಬ ತವಕ ಎನಗಾಯಿತ್ತು ಎಂದು ಅಕ್ಕ ಹೇಳುವಲ್ಲಿ ಅವರಲ್ಲಿದ್ದ ಭಕ್ತಿ ಗೌರವ ಎದ್ದು ಕಾಣುತ್ತದೆ. ಅಂದರೆ ಸತ್ಯನುಡಿದು ಅದರಂತೆ ನಡೆದುದಲ್ಲದೆ, ವೀರಶೈವ ತತ್ವಗಳನ್ನು ತಾವು ಆಚರಿಸಿ ಇತರರಿಗೂ ಆ ಮಾರ್ಗವನ್ನು ಆಚರಿಸುವಂತೆ ದಾರಿ ತೋರಿಸಿಕೊಟ್ಟಿದ್ದಾರೆ ಎಂಬುದು ಅಕ್ಕ ಮಹಾದೇವಿಯ ಮರ್ಮವಾಗಿದೆ. ಅಕ್ಕನಿಗೆ ಬಸವಣ್ಣನ ಜೀವನದ ಆದರ್ಶ ಕಲ್ಯಾಣದಲ್ಲಿ ಜ್ವಲಂತವಾಗಿ ಮೂಡಿದೆ ಎಂದೆನಿಸಿದೆ. ಅಣ್ಣ ಏನು ವಚನಗಳಲ್ಲಿ ನುಡಿಯುತ್ತಾನೋ ಅವಕ್ಕೆ ತನ್ನ ಜೀವನದ ಸಾಧನೆಗಳಿಂದ ಜೀವಂತ ಭಾಷ್ಯವನ್ನು ಬರೆಯುತ್ತಿರುವಂತೆ ಭಾವಿಸುತ್ತಾಳೆ. ಆತ ತನ್ನ ಉದ್ಧಾರಕ್ಕಾಗಿ ಭಕ್ತಿ ಭಂಡಾರಿಯಾಗಿದ್ದರೆ, ಜಗತ್ತಿನ ಉದ್ಧಾರಕ್ಕೆ ಕರ್ಮಯೋಗಿಯಾಗಿದ್ದಾನೆಂದು ಆಕೆ ತಿಳಿಯುತ್ತಾಳೆ.

ಅದಕ್ಕಾಗಿ ಕಲ್ಯಾಣದಲ್ಲಿ ಎಲ್ಲಿ ನೋಡಿದರಲ್ಲಿ ಬಸವಾಕ್ಷರತ್ರಯಗಳನ್ನು ಕಾಣುತ್ತಿದ್ದೇನೆ ಎನ್ನುತ್ತಾಳೆ. ಬಸವಣ್ಣನವರಿಂದ ಆ ಕ್ಷೇತ್ರವೇ ಕಲ್ಯಾಣವಾಯಿತು ಎಂದು ಪ್ರಶಂಸಿಸಿದ್ದಾಳೆ. ಅದರ ಕುರಿತು ಇನ್ನೊಂದು ವಚನದಲ್ಲಿ,

ಅಯ್ಯ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯ
ಅಯ್ಯ, ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯ
ಅಯ್ಯ ನಿಮ್ಮ ಶರಣರು ನಿಂದುದೆ ನಿಜ ನಿವಾಸವಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ
ಆನು ಸಂಗನ ಬಸವಣ್ಣನ ಶ್ರೀ ಪಾದಕ್ಕೆ
ನಮೋ ನಮೋ ಎನುತಿರ್ದೆನು.

ಈ ವಚನ ಮುಖಾಂತರ ಕಲ್ಯಾಣದ ಮಹತ್ವವನ್ನು ಎತ್ತಿಹಿಡಿಯುತ್ತಾಳೆ. ನಿಮ್ಮ ಶಿವಭಕ್ತರು ನಡೆದಾಡಿದರಿಂದ ಈ ಭೂಮಿ ಪಾವನವಾಯಿತು. ಅಂತಹ ಶರಣರಿರುವಂತಹ ಕಲ್ಯಾಣವೇ ಕೈಲಾಸವಾಗಿದೆ. ಶರಣರು ಎಲ್ಲಿ ವಾಸಿಸುವರೋ ಅದೇ ಜ್ಞಾನದ ನಿಜವಾದ ಮನೆಯಾಗುತ್ತದೆ. ಚೆನ್ನಮಲ್ಲಿಕಾರ್ಜುನ ನಿನ್ನ ಪ್ರೀತಿಯ ಭಕ್ತ ಬಸವಣ್ಣನ ಜ್ಞಾನ, ಭಕ್ತಿ, ಕ್ರಿಯೆಗಳ ಸಂಗಮವಾಗಿ ಈ ಕ್ಷೇತ್ರಪುಣ್ಯಕ್ಷೇತ್ರವಾಗಿದೆ. ಈ ಕಲ್ಯಾಣವನ್ನು ಪವಿತ್ರ ಸ್ಥಳ ಮಾಡಿದ ಬಸವಣ್ಣನ ಪಾದಕ್ಕೆ ಹೃತ್ಪೂರ್ವಕವಾಗಿ ನಮಿಸುವೆ ಎನ್ನುತ್ತಾಳೆ. ಅಂದರೆ ಅಣ್ಣನಿಂದ ಆ ಸಮಯದಲ್ಲಿಯೇ ಕಲ್ಯಾಣ ಎಷ್ಟು ಪ್ರಖ್ಯಾತಿ ಪಡೆದಿತ್ತು ಎಂಬುದನ್ನು ಅಕ್ಕ ನಮಗೆ ಮನವರಿಕೆ ಮಾಡಿಕೊಡುತ್ತಾಳೆ.

ಕಲ್ಯಾಣದಲ್ಲಿದ್ದ ಅವಧಿಯಲ್ಲಿ ಮಹಾದೇವಿ ಅನೇಕ ಶಿವಶರಣರ ನಡುವೆ ಚರ್ಚಿಸಿ ಅವರಿಂದ ಪಡೆದ ಜ್ಞಾನ ಹಾಗೂ ಅವರನ್ನು ಕುರಿತು ತನ್ನ ಅನೇಕ ವಚನಗಳಲ್ಲಿ ಗುಣಗಾನ ಮಾಡಿದ್ದಾಳೆ. ಶರಣರ ಒಡನಾಟದಿಂದ ನನಗೆ ಆಧ್ಯಾತ್ಮದ ಗುರಿ ಮುಟ್ಟಲು ಸಹಾಯಕವಾಯಿತೆಂದು ಆಕೆ ತಿಳಿದಿದ್ದಾಳೆ. ಅದಕ್ಕೆ ಒಂದು ಕಡೆ ವಚನದಲ್ಲಿ,

ಅಯ್ಯ, ನಿಮ್ಮ ಸಜ್ಜನ ಸದ್ಭಕ್ತರ ಕಂಡೆನಾಗಿ
ಎನ್ನ ಕಂಗಳ ಪಟಲಹರಿಯುತ್ತಿಂದು
ಅಯ್ಯಾ ನಿಮ್ಮ ಸಜ್ಜನ ಸದ್ಭಕ್ತರ ಶ್ರೀ ಚರಣಕ್ಕೆರಗಿದೆನಾಗಿ
ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದು
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣ ಸಂಗನ ಬಸವಣ್ಣನ ಪಾದವ ಕಂಡು
ಮುಗೆ ಮಿಗೆ ನಮೋ ನಮೋ ಎನುತಿರ್ದೆನಯ್ಯಾ

ಎಂದು ಹೇಳುತ್ತಾಳೆ. ಹೇ ಚೆನ್ನಮಲ್ಲಿಕಾರ್ಜುನ ದೇವ, ನಿಮ್ಮ ನಿಜವಾದ ಸದ್ಭಕ್ತರನ್ನು ಕಂಡು ನನ್ನ ಕಣ್ಣು ತೆರೆಯಿತು. ಆ ಶ್ರೇಷ್ಠ ಶರಣರ ಕಾಲುಗಳಿಗೆ ನಮಸ್ಕರಿಸಿದ್ದರಿಂದ ನನ್ನ ಹಣೆ ಬರಹವೇ ಬದಲಾಗಿ ಹೋಯಿತು. ನಿಮ್ಮ ಮೆಚ್ಚಿನ ಶರಣ ಬಸವಣ್ಣನ ಕಂಡು ಮತ್ತೆ ಮತ್ತೆ ನಮಸ್ಕರಿಸುತ್ತಿದ್ದೇನೆ. ಆ ಮಹಾನುಭಾವ ಶರಣನ ದರ್ಶನದಿಂದ ಎನಗೆ ಸರಿಯಾದ ಮಾರ್ಗದರ್ಶನ ಸಿಕ್ಕಿತೆಂದು ಅಕ್ಕ ಶರಣರನ್ನು, ಬಸವಣ್ಣನನ್ನು ಹೋಗುತ್ತಾಳೆ. ಇನ್ನೊಂದು ಕಡೆ,

ಅಯ್ಯಾ, ನಿಮ್ಮ ಅನುಭವಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತು.
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ.
ಎನ್ನ ಮನ ಶುದ್ಧವಾಯಿತು.
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಪ್ರಾಣ ಶುದ್ಧವಾಯಿತು.
ಅಯ್ಯಾ, ನಿಮ್ಮ ಅನುಭವಿಗಳು
ಎನ್ನ ಒರೆದೊರೆದು ಆಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ
ನಿಮಗಾಣು ತೊಡಿಗೆಯಾದೆನು.

ಅಂದರೆ ಶರಣರ ಒಡನಾಟ, ನಡೆಸುವ ಗೋಷ್ಠಿಗಳಿಂದ, ಚರ್ಚೆಗಳಿಂದ, ಮಾರ್ಗದರ್ಶನದಿಂದ ಎನ್ನ ದೇಹವೆಲ್ಲ ಪರಿಶುದ್ಧವಾಯಿತು. ನನ್ನ ಮನಸ್ಸು ನಿರ್ಮಲವಾಯಿತು. ನನ್ನ ಪ್ರಾಣ ಸ್ವಚ್ಛವಾಯಿತು. ಚೆನ್ನಮಲ್ಲಿಕಾರ್ಜುನ ಶರಣರು ನನ್ನನ್ನು ಪ್ರತಿ ಹೆಜ್ಜೆಯಲ್ಲು ಪರೀಕ್ಷಿಸಿ ದೋಷಗಳನ್ನು ಸರಿಪಡಿಸಿದ್ದರಿಂದ ನಿಮಗೆ ನಾನು ಆಭರಣವಾಗಲು ಸಾಧ್ಯವಾಯಿತು ಎನ್ನುತ್ತಾಳೆ. ಅಂದರೆ ಅಕ್ಕ ತನ್ನ ಎಲ್ಲ ಸಾಧನೆಯ ಹಿಂದೆ ಶರಣರ ಪ್ರೇರಕ ಶಕ್ತಿ, ಪ್ರಭಾವಗಳಿರುವುದನ್ನು ಮನಪೂರ್ವಕವಾಗಿ ಒಪ್ಪಿಕೊಳ್ಳುತ್ತಾಳೆ.

ಅಕ್ಕ ಉಳಿದ ಎಲ್ಲ ಶರಣರಿಗಿಂತ ಬಸವಣ್ಣನವರನ್ನು ಕುರಿತು ಹೆಚ್ಚಿನ ವಚನಗಳಲ್ಲಿ ಸ್ತುತಿ ಮಾಡಿರುವುದು ಕಾಣಬಹುದು. ಇದನ್ನು ಗಮನಿಸಿದಾಗ ಅಕ್ಕ ಬಸವಣ್ಣನವರನ್ನು ಕಲ್ಯಾಣದಲ್ಲಿ ಕಾಣುವ ಮೊದಲೇ ಅವರ ಉತ್ತಮ ಗುಣಗಳ ಬಗ್ಗೆ, ಶ್ರೇಷ್ಠ ನಡವಳಿಕೆಯ ಬಗ್ಗೆ ಪರಿಪೂರ್ಣವಾಗಿ ಅರಿತುಕೊಂಡಿದ್ದಂತೆ ಕಂಡುಬರುತ್ತದೆ. ಶರಣರ ಅಗ್ರಜನಾದ ಬಸವಣ್ಣನನ್ನು ಕುರಿತು ಎಷ್ಟು ಹೊಗಳಿದರೂ ಅಕ್ಕನಿಗೆ ಸಾಕಾಗುವುದಿಲ್ಲ. ಅಕ್ಕ ಬಸವಣ್ಣನನ್ನು ಆದಿ-ಅನಾದಿ ಮೂಲನೆಂದು, ಪರಮಗುರುವೆಂದು, ಭಕ್ತಿಪರ್ವತವೆಂದು, ಮಹಾಪ್ರಸಾದಿಯೆಂದು ವಚನಗಳಲ್ಲಿ ಹೇಳಿದ್ದಾಳೆ. ಬಸವಣ್ಣನ ಕೃಪೆಯಿಂದಲೇ ತಾನು ಬದುಕಿದೆನೆಂಬ ಭಾವವನ್ನು, ಅಣ್ಣನಿಂದಲೇ ತನ್ನ ಬದುಕು ಸಾರ್ಥಕವಾಯಿತೆಂದು ವಿನಮ್ರಳಾಗಿ ನುಡಿಯುತ್ತಾಳೆ. ಬಸವಣ್ಣ ಲಿಂಗಾಂಗ ಸಾಮರಸ್ಯದ ಅನುಭವ ಎತ್ತರವನ್ನು ಪ್ರಶಂಸಿಸಿದ್ದಾಳೆ.

ಅಕ್ಕನು ಬಸವಣ್ಣನ ಒಡನಾಡಿಯಾಗಿದ್ದು, ಅವರು ಹುಟ್ಟು ಹಾಕಿದ ಶರಣ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಲ್ಲದೆ ಅವರನ್ನು ಸಮೀಪದಿಂದ ಗಮನಿಸಿದ್ದಾಳೆ. ಅಣ್ಣನೊಂದಿಗೆ ಆಕೆ ಪರಸ್ಪರ ಸ್ನೇಹ, ಗೌರವ, ಪ್ರೀತಿ, ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಬೆಳೆದಿದ್ದಾಳೆ. ಅದರಿಂದಾಗಿ ಅಣ್ಣನು ಆಕೆಗೆ ಗುರುವಾಗಿ, ತಂದೆಯಾಗಿ, ಪೂಜ್ಯ ವ್ಯಕ್ತಿಯಾಗಿ, ಭೂಲೋಕದ ಕರ್ತಾರನಾಗಿ, ಲೋಕೋದ್ಧಾರಕನಾಗಿ, ಮತಸಂಸ್ಥಾಪಕನಾಗಿ, ಶಿವಭಕ್ತನಾಗಿ, ಅನುಭವಿಯಾಗಿ, ದಾಸೋಹಿಯಾಗಿ, ಆಧ್ಯಾತ್ಮ ಜೀವಿಯಾಗಿ, ತತ್ವಜ್ಞಾನಿಯಾಗಿ ಸೇರಿದಂತೆ ಅನೇಕ ರೂಪಗಳಲ್ಲಿ ಕಾಣಿಸಿಕೊಂಡಿದ್ದಾನೆ.

ಅಕ್ಕ ಬಸವಣ್ಣನನ್ನು ತೀರಾ ಹತ್ತಿರದಿಂದ ಕಂಡಿರುವುದರಿಂದ ಆಕೆಗೆ ಅಣ್ಣನು ಐತಿಹಾಸಿಕ ವ್ಯಕ್ತಿಯಾಗಿ ಕಾಣಿಸದೆ, ಇತಿಹಾಸ ನಿರ್ಮಿಸಿದ ಶರಣನಾಗಿ ಕಾಣಿಸುತ್ತಾನೆ. ಬಸವಣ್ಣನ ಅಂತರಂಗ-ಬಹಿರಮಗ ಸಾಧನೆಗಳನ್ನು ಗುರುತಿಸಿದ ಅಕ್ಕನಿಗೆ ಆತ ದೇವರಾಗಿ ಕಾಣುವುದರ ಜೊತೆಗೆ ಮಹಾಮಾನವನಾಗಿ ಕಾಣುತ್ತಾನೆ. ಅಕ್ಕ ಬಸವಣ್ಣನವರ ಜೊತೆಗಿರುವಾಗ ತನಗಾದ ಎಲ್ಲ ಅನುಭವಗಳನ್ನು ವಚನ ರೂಪಕ್ಕಿಳಿಸಿದ್ದಾಳೆ. ಮಾನವ-ದೇವರಾಗುವ, ವ್ಯಕ್ತಿ-ಶಕ್ತಿಯಾಗುವ, ಭಕ್ತ-ಗುರುವಾಗುವ, ಜಂಗಮ-ಲಿಂಗವಾಗುವ ಸಾಧ್ಯತೆಗಳನ್ನು ಭಾವ ತುಂಬಿ ಮನದುಂಬಿ ವಚನಗಳಲ್ಲಿ ಹಾಡಿದ್ದಾಳೆ. ತನಗೂ ಅಣ್ಣನಿಗೂ ಇರುವ ಬೌದ್ಧಿಕ, ತಾತ್ವಿಕ, ವೈಚಾರಿಕ ಹಾಗೂ ಭಾವನಾತ್ಮಕ ಸಂಬಂಧದ ಅನುಭವಗಳನ್ನು ವಚನಗಳಲ್ಲಿ ಬಿಚ್ಚಿಟ್ಟಿದ್ದಾಳೆ. ಪ್ರಾರಂಭದಲ್ಲಿ ಬಸವಣ್ಣನನ್ನು ಕಾಣಲು ಆಕೆ ಪಟ್ಟ ತಪವನ್ನು ಒಂದು ವಚನದಲ್ಲಿ ಈ ರೀತಿ ಬರೆದಿದ್ದಾಳೆ.

ಅರಸಿ ತೊಳಲಿದಡಿಲ್ಲ ಹರಿಸಿ ಬಳಲಿದಡಿಲ್ಲ.
ಬಯಸಿ ಹೊಕ್ಕಡಿಲ್ಲ ತಪಸ್ಸು ಮಾಡಿದಡಿಲ್ಲ.
ಅದು ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು.
ಶಿವನೊಲಿದಲ್ಲದೆ ಕೈಗೂಡದು.
ಚೆನ್ನಮಲ್ಲಿಕಾರ್ಜುನನೆ ಗೊಲಿದನಾಗಿ
ನಾನು ಸಂಗನ ಬಸವಣ್ಣನ ಶ್ರೀ ಪಾದವ ಕಂಡು ಬದುಕಿದೆನು.

ಅಣ್ಣನ ದರ್ಶನ ಒಲುಮೆಯಿಂದಲೇ ಎಲ್ಲಾ ಕಾರ್ಯಗಳು ಆಗುತ್ತವೆ. ಆ ದರ್ಶನಕ್ಕಾಗಿ ಹುಡುಕುತ್ತಾ ಸುತ್ತಾಡಿದರೆ ಅದು ಸಿಗುವುದಿಲ್ಲ. ಅರಸುತ್ತಾ ದಣಿವಾದರೂ ಆಗುವುದಿಲ್ಲ. ಆಸೆಪಟ್ಟು ಕಾಡು ಸೇರಿದರೂ ಪ್ರಯೋಜನವಿಲ್ಲ. ತಪಸ್ಸು ಆಚರಿಸಿದರೂ ಉಪಯೋಗವಿಲ್ಲ. ಅದು ಯಾವಕಾಲಕ್ಕೆ ಆಗಬೇಕೋ ಆ ಕಾಲಕ್ಕೆ ಹಾಗೆಯೇ ತೀರುತ್ತದೆ. ಆದರೆ ಶಿವನ ಒಲುಮೆ ಅತ್ಯಗತ್ಯ ಎನ್ನುತ್ತಾಳೆ. ನನಗೆ ಆ ಚೆನ್ನಮಲ್ಲಿಕಾರ್ಜುನ ಒಲಿದಿದ್ದರ ಫಲವಾಗಿ ಅಣ್ಣ ಬಸವಣ್ಣನ ಪಾದದರ್ಶನ ಕಂಡು ಬದುಕಿದೆನು. ಈ ರೀತಿ ಅಣ್ಣನನ್ನು ದೈವತ್ವಕ್ಕೆ ಏರಿಸುತ್ತಾ ಆತನನ್ನು ಕಾಣುವುದಕ್ಕೆ ಅರ್ಥವಿಲ್ಲದ ದೇಹದಂಡನೆಯ ಅವಶ್ಯಕತೆಯಿಲ್ಲ, ಭಕ್ತಿ ಮಾರ್ಗದಿಂದ ಕಾಣಲು ಸಾಧ್ಯ ಎಂದು ಬಸವಣ್ಣನನ್ನು ಶ್ರೇಷ್ಠವ್ಯಕ್ತಿಯನ್ನಾಗಿಸಿದ್ದಾಳೆ.

ಅಣ್ಣನಿಂದ ಆಕೆ ಸಾಕಷ್ಟು ಆಧ್ಯಾತ್ಮಿಕ ಅಂಶಗಳನ್ನು ಕಲಿತಂತೆ ಕಾಣುತ್ತದೆ. ಅದಕ್ಕೆ ಅಕ್ಕ ಬಸವಣ್ಣನವರೇ ತನ್ನ ಗುರುವಾಗಿರುವುದರಿಂದ ತಾನು ಧನ್ಯಳೆಂದು ತೃಪ್ತಿಗೊಂಡ ಭಾವ ಅವಳ ಅನೇಕ ಗುರು ಸ್ತೋತ್ರ ವಚನಗಳಲ್ಲಿ ಕಾಣಬಹುದು. “ನರ ಜನ್ಮ ತೊಡೆದು ಹರಜನ್ಮವ ಮಾಡಿದ ಗುರುವೇ… ಮಲ್ಲಿಕಾರ್ಜುನನನ್ನು ತಂದು ನನ್ನ ಕೈವಶ ಮಾಡಿಕೊಟ್ಟ ಗುರುವೇ ಶರಣು” ಎನ್ನುವಲ್ಲಿ ಬಸವಣ್ಣನವರು ಬಗೆಗಿನ ಆಕೆಯಲ್ಲಿರುವ ಪೂಜ್ಯಭಾವನೆ ಕಂಡು ಬರುತ್ತದೆ. ಅನೇಕ ವಚನಗಳಲ್ಲಿ ತಾನು ಬಸವಣ್ಣನಿಂದ ಏನನ್ನು ಕಲಿತೆ ಎಂಬುದನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋಗುತ್ತಾಳೆ.

ಬಸವಣ್ಣಾ, ನಿಮ್ಮಂಗದಾಚಾರವ ಕಂಡು
ಎನಗೆ ಲಿಂಗ ಸಂಗವಾಯಿತ್ತಯ್ಯ
ಬಸವಣ್ಣ, ನಿಮ್ಮ ಮನದ ಸುಜ್ಞಾನವಕಂಡು
ಎನಗೆ ಜಂಗಮ ಸಂಬಂಧವಾಯಿತ್ತಯ್ಯ
ಬಸವಣ್ಣ, ನಿಮ್ಮ ಸದ್ಭಕ್ತಿಯ ತಿಳಿದು
ಎನಗೆ ನಿಜವು ಸಾಧ್ಯವಾಯಿತ್ತಯ್ಯ,
ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು
ನೀವಾದ ಕಾರಣ ನಿಮ್ಮ ಶ್ರೀ ಪಾದಕ್ಕೆ
ನಮೋ ನಮೋ ಎನುತಿರ್ದೆನು
ಕಾಣ ಸಂಗನಬಸವಣ್ಣಾ.

ಬಸವ ತಂದೆ, ನಿನ್ನ ವಿನಯವನ್ನು ಕಂಡು ನನ್ನ ಹೃದಯ ಮೂಕವಾಗಿದೆ. ನನ್ನಲ್ಲೇನಾದರೂ ಅಲ್ಪಸ್ವಲ್ಪ ವ್ಯಕ್ತಿತ್ವ ರೂಪಗೊಂಡಿದ್ದರೆ ಅದು ನಿನ್ನಿಂದ, ನಿಮ್ಮ ನಡತೆ, ಸದಾಚಾರವನ್ನು ಕಂಡು ಪ್ರಭಾವಿತಳಾಗಿದ್ದೇನೆ. ಅದಕ್ಕೆ ಆ ಶಿವನಿಗೆ ಹತ್ತಿರವಾಗಲು ಸಾಧ್ಯವಾಯಿತು. ನಿನ್ನ ತತ್ವ, ಸುಜ್ಞಾನಗಳನ್ನು ನೋಡಿದ್ದರಿಂದ ನನಗೆ ಸ್ವಾನುಭಾವಿಯಾಗಿ ಜಂಗಮ ಸಂಬಂಧ ಪಡೆಯಲು ಅನುಕೂಲವಾಯಿತು. ಮೂಢನಂಬಿಕೆಗಳನ್ನು, ಆಡಂಬರವ ಖಂಡಿಸಿ ನಿಜಭಕ್ತಿಯನ್ನು ನಿನ್ನಿಂದ ಅರಿತು ಧರ್ಮಕ್ಕೆ ಮಾರುಹೋಗಿ ಪರಮಾತ್ಮನ ಸ್ವರೂಪ ತಿಳಿದೆನು. ವಿಶ್ವಮೌಲ್ಯ ತತ್ವಗಳನ್ನು ಬೋಧಿಸಲು ವಿಶ್ವಗುರುವಾಗು ಎಂದು ಚೆನ್ನ ಮಲ್ಲಿಕಾರ್ಜುನ ನಿನ್ನನು ಕಳುಹಿಸಿದ್ದಾನೆ. ಅದಕ್ಕಾಗಿ ನಿಮ್ಮ ಚರಣಕ್ಕೆ ನನ್ನ ವಂದನೆಗಳು. ಬಸವಣ್ಣನಿಂದ ತನಗೆ ಯಾವರೀತಿಯ ಉಪಕಾರವಾಯಿತೆಂದು ಈ ವಚನದಲ್ಲಿ ಅಕ್ಕಮಹಾದೇವಿ ಹೇಳಿದ್ದಾಳೆ. ಅಣ್ಣನ ಕೃಪೆಯಿಂದ ಲಿಂಗಾಂಗ ಸಾಮರಸ್ಯವನ್ನು ಕಂಡುಕೊಂಡಿರುವುದಾಗಿ ಹೇಳಿರುವಳು. ಜೊತೆಗೆ ತನಗೆ ಏನೇನು ಬೋಧಿಸಿದ ಎಂಬುದನ್ನು ಇನ್ನೊಂದು ವಚನದಲ್ಲಿ ಈ ರೀತಿ ದಾಖಲಿಸಿದ್ದಾಳೆ,

ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯ ಬಸವಣ್ಣನು,
ಆಚಾರವನ ಲಿಂಗವೆಂದರುಹಿದನಯ್ಯ ಬಸವಣ್ಣನು,
ಎನ್ನ ಪ್ರಾಣದಲ್ಲಿ ಅರಿವ ತೋರಿದವನಯ್ಯ ಬಸವಣ್ಣನು,
ಅರಿವೆ ಜಂಗಮ ವೆಂದರೂಹಿದನಯ್ಯ ಬಸವಣ್ಣನು,
ಎನ್ನ ಹೆತ್ತ ತಂದೆ ಸಂಗನ ಬಸವಣ್ಣನು
ಎನಗೀ ಕ್ರಮವ ನರುಹಿದನಯ್ಯ ಪ್ರಭವೇ.

ಈ ವಚನದಲ್ಲಿ ಅಕ್ಕನು, ನಾನು ಒಳ್ಳೆಯ ನಡೆತೆಯಲ್ಲಿ ಸಾಗುವ ದಾರಿಯನ್ನು ಬಸವಣ್ಣ ತೋರಿಸಿದನು. ಆ ಒಳ್ಳೆಯ ನಡೆತೆಯು ಮುಕ್ತಿಗೆ ದಾರಿ ಎಂದು ಬೋಧಿಸಿದನು. ನನ್ನ ಪ್ರಾಣದಲ್ಲಿ ಜ್ಞಾನದ ಮಾಹಿತಿಯನ್ನೆಲ್ಲ ಮಾರ್ಗದರ್ಶಿಸಿದ್ದಾನೆ ಬಸವಣ್ಣ. ಆ ಜ್ಞಾನವೇ ವಿರಕ್ತ ದಾರಿಯಲ್ಲಿ ಸಾಗುತ್ತದೆ ಎಂದು ಬಸವಣ್ಣ ನನಗೆ ಉಪದೇಶಿಸಿದ್ದಾನೆ. ನನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನ ಕೇಳು ಆ ಬಸವಣ್ಣನೆ ನನಗೆ ಆಜ್ಞಾನದಿಂದ ಸುಜ್ಞಾನ ಕಡೆಗೆ ಸಾಗುವ ದಾರಿ ತೋರಿಸಿ ತಂದೆಯಾಗಿದ್ದಾನೆ, ಎಂದು ಆತನಿಂದ ತಾನು ಪಡೆದ ಅರಿವನ್ನು ಅರುಹಿದ್ದಾಳೆ. ಬಸವಣ್ಣನೇ ತನಗೆ ಲಿಂಗೈಕ್ಯದ ಪದವಿ ದೊರಕಿಸಿ ಕೊಟ್ಟಿದ್ದು ಹಾಗಾಗಿ ಆತನಿಂದ ನಾನು ಕೃತಾರ್ಥಳಾದೆನು ಎನ್ನುತ್ತಾಳೆ. ಈ ಅಂಶ ಕುರಿತು ತನ್ನದೊಂದು ವಚನದಲ್ಲಿ,

ಲಿಂಗದೊಳಗೆ ಅಂಗವಾಗಿ ಅಂಗದ ಲಿಂಗೈಕ್ಯಮಾಡಿದೆ.
ಮನದೊಳಗೆ ಮನವಾಗಿ ಮನವ ಲಿಂಗೈಕ್ಯವಮಾಡಿದೆ.
ಭಾವದೊಳಗೆ ಭಾವವಾಗಿ ಭಾವದ ಲಿಂಗೈಕ್ಯವಮಾಡಿದ,
ಅರಿವಿನೊಳಗೆ ಅರಿವಾಗಿ ಅರಿವ ಲಿಂಗೈಕ್ಯತವಮಾಡಿದೆ.
ಜ್ಞಾನದೊಳಗೆ ಜ್ಞಾನವಾಗಿ ಜ್ಞಾನವ ಲಿಂಗೈಕ್ಯವಮಾಡಿದೆ.
ಶ್ರೀಗಳೆಲ್ಲವ ನಿಲ್ಲಿಸಿ ನಿಃಕ್ರಿಯಾತೀತನಾಗಿ
ನಿಃಪತಿ ಲಿಂಗೈಕ್ಯವ ಮಾಡಿದೆ
ಚೆನ್ನಮಲ್ಲಿಕಾರ್ಜುನನೊಳಗೆ ನಾನಳಿದೆನಾಗಿ
ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು ಕಾಣಾ ಸಂಗನಬಸವಣ್ಣಾ.

ಸಂಗನ ಬಸವಣ್ಣ ಲಿಂಗದ ಒಳಗಡೆ ಶರೀರವಾಗಿ ದೇಹವನ್ನು ಲಿಂಗದೊಡನೆ ಬೆರೆಸುವ ಮಾರ್ಗ ತಿಳಿಸಿದೆ. ಮನಸ್ಸಿನೊಳಗಡೆ ಮನವಾಗಿ ಮನವನ್ನು ಲಿಂಗದೊಡನೆ ಒಂದಾಗಿಸುವ ಕಲೆ ಕಲಿಸಿದೆ. ಭಾವನೆಯ ಒಳಗೆ ಚಿತ್ತವಾಗಿ ಭಾವನೆಯನ್ನು ನಿರೂಪ ಮಾಡುವುದು ಹೇಗೆಂದು ತೋರಿಸಿದೆ. ತಿಳುವಳಿಕೆಯೊಳಗಡೆ ಅರಿವಾಗಿ ಆ ಅರಿವನ್ನು ಲಿಂಗದೊಡನೆ ಬೆರೆಸುವುದನ್ನು ಹೇಳಿಕೊಟ್ಟೆ. ಜ್ಞಾನದೊಳಗಡೆ ಜ್ಞಾನವಾಗಿ ಸುಜ್ಞಾನವನ್ನು ಲಿಂಗದೊಡನೆ ಒಂದಾಗಿಸುವುದರ ಬಗ್ಗೆ ಮಾಹಿತಿ ನೀಡಿದೆ. ಸಿರಿ ಸಂಪತ್ತುಗಳಿಖಂದ ದೂರವಾಗಿಸಿ, ಕ್ರಿಯೆಗಳನ್ನೆಲ್ಲ ಮೀರಿ ಪರಿಪೂರ್ಣವಾಗುವಂತೆ ನನ್ನನ್ನು ಮಾಡಿದೆ. ಹಾಗಾಗಿ ನಾನು ಚೆನ್ನಮಲ್ಲಿಕಾರ್ಜುನನಲ್ಲಿ ಒಂದಾಗಲು ಸಾಧ್ಯವಾಯಿತು. ಆಗ ಲಿಂಗವೆನ್ನುವ ಪರಮಾತ್ಮನು ನನ್ನಲ್ಲಿ ಅಳಿದಿತ್ತು ನೋಡು ಬಸವಣ್ಣ ಎಂದು ಆತನಿಂದ ತಾನು ಪಡೆದುದನ್ನು, ಜೊತೆಗೆ ಅದರಿಂದಾದ ಪರಿಣಾಮವನ್ನು ಆತನಿಗೆ ನಿವೇದಿಸುತ್ತಾಳೆ.

ಈ ರೀತಿ ಅಕ್ಕ ಬಸವಣ್ಣನಿಂದ ತನ್ನ ಜೀವನದ ಪರಮ ಗುರಿಗಳನ್ನು ಕಂಡುಕೊಂಡು-ಸೇರಿರುವುದಾಗಿ ಹೇಳಿಕೊಳ್ಳುತ್ತಾಳೆ. ಬಸವಣ್ಣನ ಪ್ರಸಾದದಿಂದ ಚೆನ್ನಮಲ್ಲಿಕಾರ್ಜುನನ್ನು ಕಾಣುವಂತಾಯಿತು ಎಂದು ಹೇಳುತ್ತಾಳೆ. ಒಂದು ಕಡೆ ಅಣ್ಣನ ಪ್ರಸಾದವ ಕಂಡುಕೊಂಡಿದ್ದರಿಂದ ನಾನು ಭಕ್ತಿ ಸಂಪನ್ನೆನಾದೆನು ಎಂದರೆ, ಇನ್ನೊಂದೆಡೆ ಬಸವಣ್ಣನ ಪಾದದ ದರ್ಶನಭಾಗ್ಯದಿಂದ ಎನ್ನ ದೇಹ ನಾಸ್ತಿಯಾಯಿತು ಎನ್ನುತ್ತಾಳೆ. ಬಸವಣ್ಣನೇ ನಾನು ಕಣ್ಣು ತೆರೆಯಲು ಕಾರಣ ಎಂದು ಹೇಳುತ್ತಾಳೆ.

ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯ
ನಿಮ್ಮ ಶರಣ ಬಸವಣ್ಣತೇಜದೊಳಗಲ್ಲದೆ.
ನಿನ್ನೆಂದು ಕಾಂಬೆನು ಹೇಳಾ ಚೆನ್ನಮಲ್ಲಿಕಾರ್ಜುನ

ಎಂದು ಅಣ್ಣನ ಜ್ಞಾನ ಜ್ಯೋತಿಯ ಬಗ್ಗೆ ಹೇಳುತ್ತಾಳೆ. ಅಂದರೆ ನಾನು ಅಜ್ಞಾನವೆಂಬ ಕತ್ತಲೆಯಲ್ಲಿ ಅನ್ಯಾಯ, ಅಧರ್ಮಗಳನ್ನೆಲ್ಲ ಕಂಡು ಕಸಿವಿಸಿಕೊಂಡಿದ್ದೆನು. ಆ ಶಿವಭಕ್ತ ಬಸವಣ್ಣನ ಜ್ಞಾನಾಗ್ನಿಯ ಬೆಳಕಿನಲ್ಲಿ ಅವುಗಳಿಂದ ವಿಮುಕ್ತಳಾದೆನು. ಇನ್ನೂ ಮುಂದೆ ಅವನ್ನೆಂದು ಕಾಣಲು ಸಾಧ್ಯವಿಲ್ಲ. ಅಣ್ಣನ ಜ್ಞಾನ ಪ್ರಖರತೆ ಎಷ್ಟು ಪ್ರಭಾವದ್ದೆನ್ನುತ್ತಾ ಬಸವಣ್ಣನ ಸ್ಥಾನವನ್ನು ಉನ್ನತೀಕರಿಸಿದ್ದಾಳೆ. ಬಸವನ ಕೃಪೆಯಿಂದ ತಾನು ಮತ್ತೇನೆನನ್ನು ಗಳಿಸಿದೆ ಎಂಬುದನ್ನು ಮತ್ತೊಂದು ತನ್ನ ವಚನದಲ್ಲಿ ಈ ರೀತಿ ಹೇಳುತ್ತಾಳೆ,

ಕಾಮಾಗಾರಿಯ ಗೆಲಿದೆನು ಬಸವಾ ನಿಮ್ಮಿಮದ
ಸೋಮಧರನ ಹಿಡಿ ತಪ್ಪೆನು ಬಸವ ನಿಮ್ಮ ಕೃಪೆಯಿಂದ,
ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು?
ಭಾವಿಸಲು ಗಂಡ ರೂಪ ಬಸವ ನಿಮ್ಮ ದಯದಿಂದ
ಅತಿಕಾಮಿ ಚೆನ್ನಮಲ್ಲಿಕಾರ್ಜುನನಂಗೆ ತೊಡರಿಕ್ಕ
ಎರಡು ವರಿಯದ ಕೂಡೆದೆನು ಬಸವಾ ನಿಮ್ಮ ಕೃಪೆಯಿಂದ

ಬಸವಣ್ಣ ನಿಮ್ಮಿಂದ ಕಲಿತ ವಿದ್ಯೆಯಿಂದ ಮನ್ಮಥನನ್ನು (ಕಾಮವನ್ನು) ಗೆಲ್ಲಲು ಸಾಧ್ಯವಾಯಿತು. ನಿಮ್ಮಗಳ ಕೃಪೆಯಿಂದ ಶಿವನೊಡನೆ ಬಿಡಿಸಿಕೊಳ್ಳಲಾರದಷ್ಟು ನೆಂಟತನ ಬೆಳೆಸಿಕೊಳ್ಳುವಂತಾಯಿತು. ಹೆಣ್ಣು ಮಗುವಿನ ಹೆಸರಿರುವುದರಿಂದ ಮಹಿಳೆಯೆಂದು ನನ್ನನ್ನು ಗುರುತಿಸಿದರೇನಾಯಿತು? ನಿಮ್ಮ ದಯದಿಂದ ಭಾವಿಸಿಕೊಳ್ಳಲು ಗಂಡು ರೂಪವನ್ನು ಪಡೆದಿದ್ದೇನೆ. ಅಂದರೆ ತಾನು ಪುರುಷರ ಸರಿಸಮಾನವಾಗಿ ಆಧ್ಯಾತ್ಮ ಕ್ಷೇತ್ರದಲ್ಲಿ ಬೆಳೆದಿದ್ದೇನೆ ಎಂಬುದನ್ನು ಸೂಚಿಸುತ್ತಾಳೆ. ನನ್ನ ಆ ಆರಾಧ್ಯ ದೈವ ಚೆನ್ನ ಮಲ್ಲಿಕಾರ್ಜುನನಿಗೆ ಸಮಸ್ಯೆಯೊಡ್ಡಿ ಬೇಡಿಕೊಂಡು ಅಭೇದ ರೂಪದಲ್ಲಿ ಕೂಡಿಕೊಳ್ಳಲು, ನೀವು ತೋರಿದ ಹಾದಿಯಿಂದ ಎಂದು ಅಣ್ಣನಿಂದ ತಾನು ಪಡೆದ ಮಾರ್ಗದರ್ಶನದ ಬಗ್ಗೆ ವಿವರಿಸುತ್ತಾಳೆ. ಅಕ್ಕನ ತನ್ನ ಸಾಧ್ಯತೆಗಳಿಗೆ ಬಸವಣ್ಣನ ಕೃಪೆಯೇ ಕಾರಣವೆನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾಳೆ.