ತನ್ನ ಮನದ ತೊಳಾಟವನ್ನೆಲ್ಲ ಬಸವಣ್ಣನಿಂದ ಹೇಗೆ ಪರಿಹರಿಸಿಕೊಂಡೆ ಎಂಬುದನ್ನು ಒಂದು ವಚನದಲ್ಲಿ ನೆನಪಿಸಿಕೊಳ್ಳುತ್ತಾಳೆ,

ಕಾಯದ ಕಾರ್ಪಣ್ಯವಂತಿತ್ತು, ಕರಣಂಗಳ ಕಳವಳವಳಿದಿತ್ತು
ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು
ಇನ್ನೇವೆನಿನ್ನೇವೆನಯ್ಯಾ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ
ಬಯಕೆ ಬಯಲಾಗದು,
ಇನ್ನೇವೆನಿನ್ನೇವೆನಯ್ಯಾ ಚೆನ್ನಮಲ್ಲಿಕಾರ್ಕುನ

ಶರೀರ ಕೃಷವಾಗಿ ದುರ್ಬಲವಾಗುತ್ತಿತ್ತು. ಇಂದ್ರಿಯಗಳೆಲ್ಲವೂ ಗೊಂದಲದಲ್ಲಿದ್ದವು, ಮನಸ್ಸು ತನ್ನ ವೈಯಕ್ತಿಕವಾದ ಪರಿಶೀಲನೆಯಿಂದ ಏರುಪೇರಾಗಿ ಏನು ಮಾಡಬೇಕೆಂದು ದಾರಿ ಕಾಣದಾಗಿದ್ದೆನು. ಆಗ ಮಲ್ಲಿಕಾರ್ಜುನ ನಿಮ್ಮ ಶರಣ ಬಸವಣ್ಣನ ಚರಣ ದರ್ಶನ ಪಡೆದಿದ್ದರಿಂದ ಎಲ್ಲ ಬಯಕೆಗಳು ನಿರಾಕಾರವಾಗಿ ಪರಿಶುದ್ಧಳಾದೆನು. ಅಣ್ಣನ ದರ್ಶನದಿಂದಲೇ ತನ್ನಲ್ಲಾದ ಬದಲಾವಣೆಗಳನ್ನು ಸುಂದರವಾಗಿ ಚಿತ್ರಿಸಿದ್ದಾಳೆ. ಬಸವಣ್ಣನು ಆಕೆಗೆ ಸರ್ವರೀತಿಯಲ್ಲೂ ಆಧ್ಯಾತ್ಮಿಕತೆಯ ಅಮೃತವನ್ನು ಧಾರೆ ಎರೆದಿದ್ದಾನೆ. ಅದರಿಂದ ಆಕೆಗೆ ಅಣ್ಣನನ್ನು ಕಂಡರೆ ಪೂಜನೀಯ ಭಾವನೆ ಮೈದಳೆದಿದೆ. ತನ್ನಲಾಗುತ್ತಿರುವ ಪ್ರತಿ ಬದಲಾವಣೆಗಳನ್ನು ಅಕ್ಕ ಗುರುತಿಸುತ್ತಾ, ಅದಕ್ಕೆ ಬಸವಣ್ಣ ಹೇಗೆ ನೆರವಾದನೆಂದು ವಚನಗಳಲ್ಲಿ ಸೆರೆಹಿಡಿದಿಡುತ್ತಾ ಸಾಗುತ್ತಾಳೆ.

ಪೃಥ್ವಿಯ ಗೆಲಿದೆ ಏಲೇಶ್ವರನ ಕಂಡೆ
ಭಾವಭಮೆಯ ಗೆಲಿದೆ ಬ್ರಹ್ಮೇಶ್ವರನ ಕಂಡೆ,
ಸತ್ವರಜ ತಮ ತ್ರಿವಿಧವ ಗೆಲಿದೆ ತ್ರಿಪುರಾಂತಕನ ಕಂಡೆ,
ಅಂತರಂಗದ ಆತ್ಮಜ್ಞಾನದಿಂದ ಜ್ಯೋತಿ ಸಿದ್ಧಯ್ನ ಕಂಡೆ,
ಇವರೆಲ್ಲರ ಮಧ್ಯಮ ಸ್ಥಾನ ಪ್ರಾಣಲಿಂಗ ಜಂಗಮವೆಂದು
ಸುಜ್ಞಾನದಲ್ಲಿ ತೋರಿದ ಬಸವಣ್ಣ
ಬಸವಣ್ಣ ಪ್ರಸಾದದಿಂದ ಶ್ರೀ ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯ.

ಬಸವಣ್ಣ ಹೇಗೆ ತನ್ನನ್ನು ಉದ್ಧರಿಸಿ ಶಿವನ ದರ್ಶನ ಭಾಗ್ಯ ಕರುಣಿಸಿದ ಎಂದು ಅಕ್ಕ ಈ ವಚನದಲ್ಲಿ ಹೇಳಿದ್ದಾಳೆ. ಈ ಭೂಮಿಯನ್ನೆಲ್ಲ ಗೆದ್ದಿದ್ದರು ಫಲವಾಗಿ ಏಲ್ಲೇಶ್ವರನ ದರ್ಶನವಾಯಿತು. ಮನಸ್ಸನ್ನು ಗೆದ್ದು ಹತೋಟಿಯಲ್ಲಿಟ್ಟುಕೊಂಡಿದ್ದರಿಂದ ಬ್ರಹ್ಮೇಶ್ವರನ ಕಾಣುವಂತಾದೆನು. ತ್ರಿವಿಧ ಗುಣಗಳಾದ ಸತ್ವ, ರಜ, ತಮೋಗಳ ಮೇಲೆ ವಿಜಯಶಾಲಿಯಾಗಿದ್ದರಿಂದ ಶಿವನನ್ನು ಕಂಡೆನು. ನನ್ನ ಮನದೊಳಗಿನ ಆತ್ಮಜ್ಞಾನದ ಪ್ರಭಾವದಿಂದ ಜ್ಯೋತಿ ಸಿದ್ದಯ್ಯನನ್ನು ಒಲಿಸಿಕೊಂಡೆನು. ನನ್ನ ಗುರು ಬಸವಣ್ಣನು ಇವರೆಲ್ಲರ ಕೇಂದ್ರ ಬಿಂದುವಾಗಿರುವ ಪ್ರಾಣಲಿಂಗವೇ ಜಂಗಮ ಎಂದು ತನ್ನ ಅನುಭವ ಜ್ಞಾನಮಾರ್ಗದಿಂದ ತೋರಿಸಿಕೊಟ್ಟನು. ಅಣ್ಣನು ತೋರಿಸಿದ ಆ ದಾರಿಯಲ್ಲಿ ನಾನು ಸಾಗಿದ್ದರಿಂದ ಚೆನ್ನಮಲ್ಲಿಕಾರ್ಜುನನ್ನು ಕಾಣಲು ಸಾಧ್ಯವಾಯಿತೆಂದು ಅಣ್ಣನಿಂದ ತಾನು ಪಡೆದ ಜ್ಞಾನ ಮಾರ್ಗದ ಬಗ್ಗೆ ವಿವರಿಸಿದ್ದಾಳೆ.

ಗುರುಗಳೆಂದರೆ ಯಾರು? ಗುರುಗಳಲ್ಲಿರಬೇಕಾದ ಗುಣಗಳು ಯಾವುವು? ಎಂಬುದನ್ನು ಅಕ್ಕ ಚೆನ್ನಾಗಿ ಅರಿತಿದ್ದಾಳೆ. ತನ್ನ ಗುರುಬಸವಣ್ಣ ಅವುಗಳನ್ನೆಲ್ಲ ಕರಗತ ಮಾಡಿಕೊಂಡಿದ್ದಾನೆಂದು ಸ್ಪಷ್ಟಪಡಿಸುತ್ತಾಳೆ.

ರವಿ ಕಾಳಗವ ಗೆಲಿದು, ಒಂಭತ್ತು ಬಾಗಿಲ ಮುರಿದು,
ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ
ಅಲ್ಲಅಹುದು, ಉಂಟುಇಲ್ಲ, ಬೇಕುಬೇಡೆಂಬ
ಅರಿತಾತನೆ ಗುರು ತಾನೆ ಬೇರಿಲ್ಲ
ದ್ಪಯಕಮಳದಲ್ಲಿ ಉದಯವಾದ ಚೆನ್ನಲ್ಲಿಕಾರ್ಜುನಯ್ಯ
ನಿಮ್ಮ ಶರಣ ಸಂಗನಬಸವಣ್ಣನ ಶ್ರೀ ಪಾದಕ್ಕೆ
ನಮೋ ನಮೋ ಎನುತಿರ್ದೆನು

ಚಿದಾದಿತ್ಯ ಸ್ವರೂಪವಾದ ಚಿದ್‌ಘನಲಿಂಗವನ್ನು ಸಿದ್ಧಿಸಿಕೊಂಡವರು, ಶರೀರದ ನವದ್ವಾರಗಳ ಮೇಲೆ ಹತೋಟಿಯನ್ನು ಸ್ಥಾಪಿಸಿದವರು, ಎಂಟು ಮದಗಳನ್ನೆಲ್ಲ ಸುಟ್ಟು ಭಸ್ಮ ಮಾಡಿದವರು, ಆಧ್ಯಾತ್ಮ ಜ್ಞಾನದಲ್ಲಿ ಉನ್ನತಕ್ಕೇರಿದವರು, ಹೌದು-ಅಲ್ಲ, ಇದೆ-ಇಲ್ಲ, ಬೇಕು-ಬೇಡಗಳೆಲ್ಲವನ್ನು ತಿಳಿದುಕೊಂಡವರು ಮಾತ್ರ ಗುರುಗಳು; ಉಳಿದವರಾರು ಗುರುಗಳಲ್ಲ ಎಂದು ಅಕ್ಕ ಹೇಳುತ್ತಾಳೆ. ಜೊತೆ ಕಮಲದಲ್ಲಿ ಉದ್ಭವಿಸಿದ ಚೆನ್ನಮಲ್ಲಿಕಾರ್ಜುನ ಈ ಎಲ್ಲ ಗುಣಗಳನ್ನು ಹೊಂದಿರುವ ವಿಶ್ವಗುರುವಾದ ಬಸವಣ್ಣನ ಪಾದಕ್ಕೆ ನನ್ನ ಅನಂತ ಅನಂತ ವಂದನೆಗಳು ಎಂದು ಅಣ್ಣನನ್ನು ವಿಶ್ವಗುರುತ್ವ ಸ್ಥಾನಕ್ಕೇರಿಸಿದ್ದಾಳೆ.

ಅಕ್ಕ ಬಸವಣ್ಣನ ವ್ಯಕ್ತಿತ್ವವನ್ನು ತನ್ನ ವಚನಗಳಲ್ಲಿ ವಸ್ತುನಿಷ್ಠವಾಗಿ ಚಿತ್ರಿಸಿದ್ದಾಳೆ. ಅಣ್ಣನ ಆಚಾರಸಂಪನ್ನತೆ, ಗುಣಸಂಪನ್ನತೆ, ಶೀಲಸಂಪನ್ನತೆಯನ್ನು ಮೆಚ್ಚಿ ಅಭಿಮಾನದಿಂದ ಬಸವಣ್ಣನ ವ್ಯಕ್ತಿತ್ವವನ್ನು ಕೊಂಡಾಡಿದ್ದಾಳೆ. ಎನ್ನ ಭಕ್ತಿ ಬಸವಣ್ಣನ ಧರ್ಮ ಎಂದು ಒಂದೆಡೆ ಹೇಳಿದರೆ, ಬಸವಣ್ಣನ ಭಕ್ತಿಕರುಣ ಪ್ರಸಾದದಿಂದ ಬದುಕಿದೆನು ಎಂದು ಇನ್ನೊಂದೆಡೆ ನುಡಿಯುತ್ತಾಳೆ. ಹಾಗೆಯೇ ಬಸವನ ಭಕ್ತಿಯು ಭತ್ತವನ್ನು ಕುಟ್ಟುವ ಆಶ್ರಯ ತಾಣವಾಗಿದೆ. ಅಂದರೆ ಬಸವನ ಭಕ್ತಿ ಎಲ್ಲ ಕಲ್ಮಶಗಳಿಂದ ದೂರಾಗಿದೆ ಎನ್ನುವ ಅರ್ಥದಲ್ಲಿ ಈ ಮಾತು ಆಡಿದ್ದಾಳೆ. ಬಸವಣ್ಣ ನನಗೆ ಭಕ್ತಿಮಾರ್ಗ ತೋರಿದ್ದರಿಂದ ನಾನು ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿತವಾಗಲು ಸಾಧ್ಯವಾಯಿತು ಎಂದು ಅಣ್ಣನಿಂದ ಪಡೆದ ಭಕ್ತಿಮಾರ್ಗದ ಬಗ್ಗೆ ಹೇಳಿದ್ದಾಳೆ. ಬಸವಣ್ಣ ಮಹಾಶರಣನೆಮದು ಅಕ್ಕ ತಿಳಿದಿದ್ದಳು. ಅದಕ್ಕಾಗಿ ಅಣ್ಣ ಎಂತಹ ಶರಣ ಎಂದು ತನ್ನ ಒಂದು ವಚನದಲ್ಲಿ,

ಇಹ ಪರವ ಬಲ್ಲ ಶರನ
ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ
ಒಡಲ ಬಿಟ್ಟ ಶರಣನಲ್ಲದೆ
ಉಳಿದ ಪ್ರಾಣಘಾತಕ ಪಾತಕರಿವರೆತ್ತಲು
ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ಶರಣ ಬಸವಣ್ಣ.

ಈ ಲೋಕ, ಪರಲೋಕಗಳ ಬಗ್ಗೆ ಹಾಗೂ ಭವಿಷ್ಯತ್‌ನ ಬಗ್ಗೆ ತಿಳಿದಿರುವವನು ಶರಣ. ಐದು ಇಂದ್ರಿಯಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಬಲ್ಲವನು ಶರಣನು. ತನುಗುಣವ ಬಿಟ್ಟವನು ಶರಣನಲ್ಲದೆ, ಪ್ರಾಣ ತೆಗೆವಂಥ ಪಾತಕರು ಶರಣರಾಗಲು ಸಾಧ್ಯವೇ? ಚೆನ್ನಮಲ್ಲಿಕಾರ್ಜುನ ನಿಮ್ಮ ಶರಣ ಬಸವಣ್ಣ ಎಂದು ನುಡಿಯುತ್ತಾಳೆ. ಶರಣತತ್ವ ಪಾಲಿಸಿ ಇತರರು ಅನುಸರಿಸುವಂತೆ ಮಾಡುವಲ್ಲಿ ಬಸವಣ್ಣ ಪಾತ್ರ ಹಿರಿದು ಎಂಬುದನ್ನು ಅಕ್ಕ ಗುರುತಿಸಿದ್ದಾಳೆ. ಕೆಲವರು ನಾವು ಶರಣರೆಂದು ಶಿವಾಚಾರಿಗಳೆಂದು ಸುಳ್ಳು ಹೇಳುತ್ತಿರುವುವವರನ್ನು ಗಮನಿಸಿ ಅಕ್ಕ ಅವರ ವಿರುದ್ಧ ಕಿಡಿಕಾರಿದ್ದಾಳೆ. ಅಂತಹ ಆಡಂಬರದ ಜನರನ್ನು ಬಸವಣ್ಣ ಮೆಚ್ಚುವುದಿಲ್ಲ ಎಂದು ತಿಳಿಹೇಳುತ್ತಾಳೆ.

ಭವಿಯಾಚಾರವ ಬಿಡದೆ ಭಯಾಗರವ ಹೋಗದೆ
ಶಿವಾಚಾರದಲ್ಲಿ ನಡೆದ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ
ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ,
ಶಿವಾಚಾರವ ಮಾರ್ಗವನು, ಶಿವಾಚಾರದ ಮರ್ಮವನು
ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ
ಉದರದ ಹೊರವ ವೇಷಧಾರಿಗಳೆತ್ತ ಬಲ್ಲರಯ್ಯಾ?

ನಿಜವಾದ ಭಕ್ತನಲ್ಲದವನು, ಶರಣ ಮಾರ್ಗಗಳನ್ನು ಅನುಸರಿಸದವನು, ಆಚಾರಗಳನ್ನು ಸಮರ್ಪಕವಾಗಿ ಆಚರಿಸಿದೆ, ದೈವಕ್ಕೆ ಹೆದರಿಯೋ ಅಥವಾ ಕಾಟಾಚರದಲ್ಲಿ ನಡೆವಮತ ಜನರನ್ನು ಅಕ್ಕ ನಾಯಿಗಳು ಎಂದು ಜರಿಯುತ್ತಾಳೆ. ಅಲ್ಲದೆ ಅವರು ಶಿವಾಚಾರಿಗಳೆಂದರೆ ಶರಣ ಬಸವಣ್ಣ ಮೆಚ್ಚುವುದಿಲ್ಲ. ಶಿವಾಚಾರದ ಸಾಧನೆಯ ಹಾದಿಯನ್ನು, ಅರ್ಥವನ್ನು, ಆಳವನ್ನೆಲ್ಲ ಬಸವಣ್ಣ ಚೆನ್ನಾಗಿ ಅರಿತಿದ್ದಾನೆ. ಅದೆನ್ನು ಬಿಟ್ಟು ಹೊಟ್ಟೆಪಾಡಿಗಾಗಿ ತೋರಿಕೆಗಾಗಿ ಬಣ್ಣ ಬಳಿದುಕೊಂಡವರು ಶಿವಾಚಾರದ ಕುರಿತಾಗಿ ಎಳ್ಳಷ್ಟು ಜ್ಞಾನ ಸಂಪಾದಿಸಿಲ್ಲ ಎಂದು ಹೇಳುತ್ತಾಳೆ. ಶಿವಾಚಾರದಲ್ಲಿ ಕೂಡಾ ಬಸವಣ್ಣ ಅತ್ಯುನ್ನತ ಸ್ಥಾನದಲ್ಲಿದ್ದಾನೆಂದು ಆಕೆ ಪ್ರತಿಪಾದಿಸಿದ್ದಾಳೆ.

ಮೂವತ್ತೆರಡು ನೆಲೆಕಲೆಗಳನ್ನು ಸದ್ಗುರು ಮುಖದಿಂದ ತಿಳಿದ ಬಸವ ಮೊದಲಾದ ಸಮಸ್ತ ಗಣಗಳೆಲ್ಲ ಪ್ರಮಥ ನಿರಾಭಾರಿ ವೀರಶೈವ ಸನ್ಮಾರ್ಗವಿಡಿದು ಆಚರಿಸಿದರು. ಹೀಗೆ ಪ್ರಮಥ ಗಣವು ಆಚರಿಸಿದ ಸತ್ಯ ಸನ್ಮಾರ್ಗವನ್ನು ತಿಳಿಯದ ಮೂಢ ಅಧಮರನ್ನು ಹೇಗೆ ಶಿವಶಕ್ತಿ, ಶಿವಭಕ್ತ, ಶಿವಜಂಗಮವೆನ್ನಲಿ? ಎಂದು ಮಹಾದೇವಿ ಅಕ್ಕ ಪ್ರಶ್ನೆ ಮಾಡುತ್ತಾಳೆ. ಆ ಮೂವತ್ತೆರಡು ಕಲೆಗಳಲ್ಲಿ ಬಸವಣ್ಣ ಜ್ಞಾನಹೊಂದಿ ಅವುಗಳನ್ನು ಆಚರಿಸುತ್ತಿದ್ದನು ಎಂದು ಅಕ್ಕ ನಮಗೆ ಪರಿಚಯಿಸುತ್ತಾಳೆ. ಅಂದಮೇಲೆ ಆತನ ಮೇಲಿದ್ದ ಆಕೆಯ ಉನ್ನತ ಭಕ್ತಿಯನ್ನು ಗಮನಿಸಬಹುದು. ಹಾಗಾಗಿ ಬಸವಣ್ಣ ಸಾಮಾನ್ಯ ವ್ಯಕ್ತಿಯಲ್ಲ ಆತ ದೈವಾಂಶ ಸಂಭೂತ ಎಂಬುದು ಅಕ್ಕನ ನಂಬಿಕೆ ಅದಕ್ಕೆ,

ಆದಿ ಅನಾದಿಗಳಿಂದತ್ತಲಯ್ಯಾ ಬಸವಣ್ಣನು
ಮೂದೇವರ ಮೂಲಸ್ಥಾನವಯ್ಯ ಬಸವಣ್ಣ
ನಾದ ಬಿಂದು ಕಳಾತೀತ ಆದಿ ನಿರಂಜನನಯ್ಯ ಬಸವಣ್ಣನು
ನಾದ ಸ್ವರೂಪವೇ ಬಸವಣ್ಣನಾದ ಕಾರಣ
ಬಸವಣ್ಣ ಶ್ರೀ ಪಾದಕ್ಕೆ ನಮೋ ನಮೋ ಎನುತಿರ್ದೆನು.
ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.

ಎಂದು ಬಸವಣ್ಣ ಕುರಿತು ಕೊಂಡಾಡಿದ್ದಾಳೆ. ಆದಿ, ಅನಾದಿಗಳನ್ನು ನಮ್ಮ ಬಸವಣ್ಣ ಮೀರಿ ನಿಂತಿದ್ದಾನೆ, ಜೊತೆಗೆ ತ್ರಿಮೂರ್ತಿಗಳ ಮೂಲಸ್ಥಾನವು ಆಗಿದ್ದಾನೆ. ಶಿವ, ಶಕ್ತಿ, ಶಿವಶಕ್ತಿಯರ ಸಂಯೋಗಗಳಿಂದ ಅತೀತನಾಗಿದ್ದಾನೆ. ಮೂಲ ರಂಜನೆ ಇಲ್ಲದ ಓಂಕಾರ ರೂಪಿ ನಮ್ಮ ಬಸವಣ್ಣನಾಗಿರುವುದರಿಂದ ಆತನ ಪಾದಕೆ ನನ್ನ ನಮನಗಳನ್ನು ಸಲ್ಲಿಸುತ್ತಿದ್ದೇನೆ ನೋಡು ಚೆನ್ನಮಲ್ಲಿಕಾರ್ಜುನ ಎಂದು ಬಸವಣ್ಣನ್ನು ದೇವರಿಗಿಂತ ಮೇಲಕ್ಕೆ ಕೊಂಡೊಯ್ದಿದ್ದಾಳೆ. ಅಣ್ಣನು ತನಗೆ ಮಾತ್ರವಲ್ಲದೇ ಇಡೀ ಪ್ರಪಂಚಕ್ಕೆ ದೇವರಾಗಿದ್ದಾರೆ ಎಂದು ಅಕ್ಕ ಕಲ್ಪಿಸಿಕೊಂಡಿದ್ದಾಳೆ ಅದಕ್ಕಾಗಿ ಆತನನ್ನು,

ದೇವಲೋಕದವರಿಗೂ ಬಸವಣ್ಣನೆ ದೇವರು,
ಮರ್ತ್ಯಲೋಕದವರೆಗೂ ಬಸವಣ್ಣನೆ ದೇವರು,
ನಾಗಲೋಕದವರೆಗೂ ಬಸವಣ್ಣನೆ ದೇವರು
ಮೇರುಗಿರಿ ಮಂದರ ಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು.
ಚೆನ್ನಮಲ್ಲಿಕಾರ್ಜುನಯ್ಯ,
ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ದೇವರು

ಎಂಬ ಈ ವಚನ ಅಕ್ಕನ ದೃಷ್ಟಿಯಲ್ಲಿ ಬಸವಣ್ಣ ಹೇಗೆ ಕಂಡಿದ್ದಾನೆ ಎಂಬುದನ್ನು ನಾವು ತಿಳಿಯಬಹುದು ದೇವಲೋಕಕದ ದೇವತೆಗಳೆಲ್ಲರಿಗೂ ಬಸವಣ್ಣ ದೇವರು. ಈ ಭೂಲೋಕ ಜನರೆಲ್ಲರಿಗೂ ಬಸವಣ್ಣನೇ ದೇವರು, ನಾಗಲೋಕದವರಿಗೂ ಬಸವಣ್ಣೇ ದೇವರಾಗಿದ್ದಾನೆ. ಮೇರುಗಿರಿ, ಮಂದರಗಿರಿ ಸೇರಿದಂತೆ ಸಮಸ್ತ ಪ್ರಕೃತಿಗೆಲ್ಲ ಬಸವಣ್ಣನೇ ದೈವಾಗಿದ್ದಾನೆ. ಅಕ್ಕನಿಗೆ ತನ್ನ ಆರಾಧ್ಯ ದೈವಕ್ಕಿಂತ ಬಸವಣ್ಣನೇ ಹೆಚ್ಚೆಂದು ತಿಳಿದಿದ್ದಂತೆ ಕಂಡುಬರುತ್ತದೆ. ಅದಕ್ಕೆ ಆಕೆ ಚೆನ್ನಮಲ್ಲಿಕಾರ್ಜುನ ನಿನಗೂ, ನನಗೂ, ಸಕಲ ಶರಣರೆಲ್ಲರಿಗೂ ಬಸವಣ್ಣನೇ ದೇವರು ಎಂದು ನುಡಿಯುತ್ತಾಳೆ. ಅಂದ ಮೇಲೆ ಅಕ್ಕನು ಬಸವಣ್ಣನಿಂದ ಎಷ್ಟು ಪ್ರಭಾವಿತಳಾಗಿದ್ದಳು ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಅದಕ್ಕಾಗಿ ಆಕೆ ನಿನ್ನ ಕರುಣದ ಶಿಶು ನಾನು ಕಾಣ ಸಂಗನ ಬಸವಣ್ಣ ಎನ್ನುತ್ತಾ, ಬಸವಣ್ಣನ ಮನೆಯ ಮಗಳಾಗಿ ಬದುಕಿದೆನು ಎಂದು ಅಣ್ಣನನ್ನು ಪೂಜ್ಯ ಸ್ಥಾನದಲ್ಲಿರಿಸಿ ಪೂಜಿಸಿ ಗೌರವಿಸಿದ್ದಾಳೆ. ಉಳಿದೆಲ್ಲ ಶರಣರಿಗಿಂತ ಆಕೆ ಬಸವಣ್ಣನನ್ನೆ ಹೆಚ್ಚು ನೆಚ್ಚಿಕೊಂಡಿರುವುದಾಗಿ ಕಂಡುಬರುತ್ತದೆ. ಅದಕ್ಕೆ ಅಣ್ಣನ ವ್ಯಕ್ತಿತ್ತವೇ ಕಾರಣ. ಅಕ್ಕಮಹಾದೇವಿಯು ಅಣ್ಣನ ಸಂಪೂರ್ಣ ವ್ಯಕ್ತಿತ್ವವನ್ನು ಒಂದು ವಚನದಲ್ಲಿ ಸೆರೆ ಹಿಡಿದಿಡಲು ಪ್ರಯತ್ನಿಸಿದ್ದಾಳೆ. ಅದು ಬಸವಣ್ಣನವರಲ್ಲಿದ್ದ ಗುಣಗಳಿಗೆ ಕನ್ನಡಿಯಂತಿದೆ.

ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ, ಕಾಲ, ಕಾಮ
ದಕ್ಷ, ದೇವ ದಾನವ ಮಾನವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು.
ಪರಿಯಲ್ಲಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು
ಜಗದ್ದಿತಾರ್ಥವಾಗಿ ಮರ್ತ್ಯಕ್ಕೆ ಅವತಿರಿಸಿ
ವೀರಶೈವ ಮಾರ್ಗವನರುಪುವುದಕ್ಕೆ
ಬಾವನ್ನ ವಿವರವನ್ನೊಳಗೊಂಡು ಚರಿಸಿದನದೆಂತೆಂದಡೆ,
ಗುರುಕಾರುಣ್ಯವೇದ್ಯನು, ವಿಭೂತಿ ರುದ್ರಾಕ್ಷಿಧಾರಕನು,
ಪಂಚಾಕ್ಷರೀ ಭಾಷಾ ಸಮೇತನು, ಲಿಂಗಾಂಗ ಸಂಬಂಧಿ
ನಿತ್ಯ ಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ
ಪಾದೋದಕ ಪ್ರಸಾದಗ್ರಾಹಕನು, ಗುರುಭಕ್ತಿ ಸಂಪನ್ನನು,
ಏಕಲಿಂಗ ನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣ ಸಂಗಮೇಶ್ವರನು, ತ್ರಿವಿಧಕ್ಕಾಯತನು
ತ್ರಿಕರಣ ಶುದ್ದನು, ತ್ರಿವಿಧ ಲಿಂಗಾಂಗ ಸಂಬಂಧಿ
ಅನ್ಯದೈವ ಸ್ಮರಣೆಯ ಹೊದ್ದ, ಭವಿಸಂಗವ ಮಾಡ,
ಭವಿಪಾಕವ ಕೊಳ್ಳ, ಪರಸತಿಯ ಬೆರಸ,
ಪರಧನವನೊಲ್ಲ, ಪರನಿಂದೆಯನಾಡ, ಅನೃತವ ನುಡಿಯ,
ಹಿಂಸೆಯ ಮಾಡ, ತಾಮಸಭಕ್ತ ಸಂಗವ ಮಾಡ,
ಗುರುಲಿಂಗ ಜಂಗಮಕ್ಕೆ ಅರ್ಥ ಪ್ರಾಣಾಭಿಮಾನ
ಮುಂತಾದವೆಲ್ಲವ ಸಮರ್ಪಿಸಿ
ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದೆಯ ಸೈರಿಸ,
ಪ್ರಸಾದ ನಿಂದೆಯ ಕೇಳ, ಅನ್ಯರನಾಸೆಗೆಯ್ಯ,
ಪಾತ್ರಾ ಪಾತ್ರವನರಿದೀವ, ಚರ್ತುರ್ವಿಧ ಪದವಿಯ ಹಾರ,
ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ
ದ್ವೆತಾ ದ್ವೈತವ ನುಡಿವನಲ್ಲ, ಸಂಕಲ್ಪ ವಿಕಲ್ಪವ ಮಾಡುವನಲ್ಲ,
ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್ಸ್ಥಲಭರಿತ,
ಸರ್ವಾಂಗಲಿಂಗಿ, ದಾಸೋಹ ಸಂಪನ್ನ
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ
ಮೆರೆದ ನಮ್ಮ ಬಸವಣ್ಣನು
ಬಸವಣ್ಣನ ಶ್ರೀ ಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣ, ಚೆನ್ನಮಲ್ಲಿಕಾರ್ಜುನಾ!

ಬಹುದೀರ್ಘವಾದ ಈ ರಚನೆಯಲ್ಲಿ ಅಣ್ಣನ ಕುರಿತಾಗಿ ಅಕ್ಕ ತಾನು ಕಂಡಿದ್ದನ್ನೆಲ್ಲಾ ಹೇಳುತ್ತಾ ಸಾಗುತ್ತಾಳೆ. ದೇವ, ದಾನವ, ಮಾನವರೆಲ್ಲರೂ ಕತ್ತಲೆಯಿಂದ ಅಜ್ಞಾನದಲ್ಲಿದ್ದರು. ಆಗ ಅವರಿಗೆಲ್ಲ ಆಶಾಕಿರಣವಾಗಿ ಉದ್ದರಿಸುವ ಸಲುವಾಗಿ ಬಸವಣ್ಣ ಭೂಮಿಗೆ ಅವತರಿಸಿಬಂದನು. ವೀರಶೈವ ಮಾರ್ಗಗಳನ್ನೆಲ್ಲ ತಾನು ಆಚರಿಸುತ್ತಾ ಇತರರಿಗೆ ಮಾರ್ಗದರ್ಶನ ಮಾಡಿದನು. ಬಸವಣ್ಣನು ಗುರುವಿನ ಕರುಣೆಯಿಂದ ದೇಹದ ಮೇಲೆ ಲಿಂಗಧರಿಸಿ ಅರಿತು ನಡೆವವನು. ವಿಭೂತಿ, ರುದ್ರಾಕ್ಷಿಗಳನ್ನು ಧರಿಸಿದ್ದಾನೆ. ನಮಃ ಶಿವಾಯ ಪಂಚಾಕ್ಷರಿ ಮಂತ್ರ ಅರ್ಥ ತಿಳಿಸಿಕೊಟ್ಟವನು. ದೇಹದ ಮೇಲೆ ಸದಾ ಲಿಂಗವನ್ನು ಹಾಕಿಕೊಂಡಿರುತ್ತಾನೆ. ದಿನವೂ ತಪ್ಪದೆ ಲಿಂಗ ಪೂಜೆ ಮಾಡುತ್ತಾನೆ. ಅರ್ಪಿತದಲ್ಲಿ ಅವಧಾನಿಯೂ ಆಗಿದ್ದಾನೆ. ಪಾದೋದಕ, ಪ್ರಸಾದಗಳ ಆಪೇಕ್ಷಿಸಿಸುವವನು, ಗುರುಭಕ್ತಿಯನ್ನು ಗಳಿಸಿಕೊಂಡವನಾಗಿದ್ದಾನೆ. ಒಂದೇ ಲಿಂಗಾರಾಧಕನು, ಜಂಗಮ ಲೋಲುಪ್ಪನು, ಶರಣ ಸಂಗಮೇಶ್ವರನು ಆಗಿದ್ದಾನೆ. ತ್ರಿವಿಧಕ್ಕಾಯತನು ಅಲ್ಲದೆ ಮನ-ವಚನ-ಕಾಯಗಳನ್ನು ಶುದ್ದವಿರಿಸಿಕೊಂಡವನು. ಇಷ್ಟ, ಪ್ರಾಣ, ಭಾವಲಿಂಗಗಳ ಬಂಧುವಾಗಿದ್ದು ಬೇರೆ ದೇವರ ಪೂಜೆಯನ್ನು ಉಪೇಕ್ಷಿಸುವನಲ್ಲ. ಭಕ್ತನಲ್ಲದವರೊಡನೆ ಎಂದೂ ಸ್ನೇಹವನ್ನು ಮಾಡುವುದಿಲ್ಲ. ಭಕ್ತನಲ್ಲದವರಿಂದ ಏನನ್ನು ನಿರೀಕ್ಷಿಸುವುದಿಲ್ಲ.

ಬೇರೆಯವರ ಪತ್ನಿಯನ್ನು ಕಣ್ಣೆತ್ತಿಯೂ ನೋಡುವವನಲ್ಲ. ಇನ್ನೊಬ್ಬರ ಹಣಕ್ಕೆ ಆಶಿಸಲಾರ ಹಾಗೂ ಬೇರೆಯವರನ್ನೆಂದು ನಿಂದೆ ಮಾಡುವವನಲ್ಲ. ಸುಳ್ಳನ್ನು ಎಂದೂ ಆಡುವವನಲ್ಲ. ಜೊತೆಗೆ ಯಾವರೀತಿಯ ಹಿಂಸೆಯನ್ನು ಮಾಡುವನಲ್ಲ. ಅಜ್ಞಾನದ ಭಕ್ತರ ಜೊತೆ ಇರುವವನಲ್ಲ ಮತ್ತು ನಿತ್ಯ ನಿರಂಜನ ಪರಂಜ್ಯೋತಿ ವಸ್ತುವಿಗೆ ತನ್ನದೆಲ್ಲವನ್ನು ಅರ್ಪಿಸಿದ ಬಳಿದ ಪ್ರಸಾದ ಮುಂತಾದವನ್ನು ಸೇವಿಸುವಂತವನು. ಪಂಕ್ತಿಭೇದವನೆಂದು ಒಪ್ಪಿಕೊಳ್ಳುವನಲ್ಲ. ಪ್ರಸಾದ ನಿಂದೆಯನ್ನು ಸಹಿಸದವನಾಗಿದ್ದಾನೆ. ಬೇರೆಯವರನ್ನೆಂದು ಅಪಹಾಸ್ಯಕ್ಕೆ ಗುರಿ ಮಾಡುವುದಿಲ್ಲ ಅಲ್ಲದೆ ತನ್ನ ಪಾತ್ರದ ಬಗ್ಗೆ ಸ್ಪಷ್ಟ ಅರಿವುಳ್ಳವನಾಗಿದ್ದಾನೆ. ಸಾಲೋಕ್ಯ, ಸಾಮೀಪ್ಯ, ಸರೋಪ್ಯ, ಸಯುಜ್ಯ ಎಂಬ ನಾಲ್ಕು ತೆರೆನಾದ ಮುಕ್ತಿಗಳನ್ನು ಗಳಿಸಿದವನು. ಅರಿಷಡ್ವರ್ಗಗಳನ್ನು ಗೆದ್ದಿದ್ದಾನೆ ಮತ್ತು ಕುಲಗಳ ಬಗ್ಗೆ ಅಹಂಕಾರವನ್ನು ಇಷ್ಟಪಡುವನಲ್ಲ. ದ್ವೈತಾದ್ವೈತವ ಎಂದು ಮಾತಾಡಲಾರ ಹಾಗೂ ಸಂಕಲ್ಪ ವಿಕಲ್ಪಗಳನ್ನು ಮಾಡುವನಲ್ಲ. ಕಾಲದ ಮಹಿಮೆಯನ್ನು ಚೆನ್ನಾಗಿ ಅರಿತವನಾಗಿದ್ದಾನೆ. ಷಟ್‌ಸ್ಥಲವನ್ನು ಸರಿಯಾದ ಮಾರ್ಗದಲ್ಲೆ ಆಚರಿಸುತ್ತಾನೆ. ದೇಹವನ್ನೆ ಲಿಂಗವನ್ನಾಗಿಸಿದ ಮಹಾಪುರುಷನು, ದಾಸೋಹಕ್ಕೆ ಸದಾ ಪ್ರೇರಣೆ ನೀಡುವವನು. ಈ ರೀತಿ ೫೨ ಆಚಾರಗಳನ್ನು (ಆದರೆ ವಚನದಲ್ಲಿ ೩೭ ಆಚಾರಗಳು ಮಾತ್ರ ಇವೆ) ಹೊಂದಿರುವ ಆ ನನ್ನ ಬಸವಣ್ಣನ ವ್ಯಕ್ತಿ ವೈಶಿಷ್ಟ್ಯತೆಗೆ ನನ್ನ ಅನಂತ ಅನಂತ ನಮಸ್ಕಾರಗಳನ್ನು ಸಲ್ಲಿಸಿದ್ದರಿಂದ ನಾನು ಬದುಕಿದೆನೆಂದು ಚೆನ್ನಮಲ್ಲಿಕಾರ್ಜುನನಿಗೆ ಹೇಳುತ್ತಾಳೆ. ಅಂದಮೇಲೆ ಬಸವಣ್ಣನನ್ನು ಕುರಿತು ಮತ್ತೇನು ಹೇಳವುದನ್ನು ಆಕೆ ಬಿಟ್ಟಂತೆ ನಮಗೆ ಅನಿಸುವುದಿಲ್ಲ. ಇದರ ಮೇಲೆ ಆಕೆಗೆ ಬಸವಣ್ಣನ ಮೇಲಿದ್ದ ಭಕ್ತಿ, ಗೌರವ… ಎಲ್ಲವನ್ನು ನಾವು ಅರಿತುಕೊಳ್ಳಬಹುದು.

ಇಷ್ಟು ವಿವರವಾಗಿ ಹೇಳುವಲ್ಲಿ ಅಕ್ಕನು ಬಸವಣ್ಣ ಮನೆಯ ಮಗಳಾಗಿ, ಅವರಲ್ಲಿ ಕೆಲವು ಕಾಲವಿದ್ದುದ್ದರಿಂದ ಅವರಲ್ಲಿನ ಸಕಲ ಗುಣಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ. ಒಟ್ಟಾರೆಯಾಗಿ ಬಸವಣ್ಣನವರು ಅಕ್ಕನಿಗೆ ಅಣ್ಣ, ತಂದೆ, ಗುರು, ದೈವ ಸಕಲವೂ ಆಗಿದ್ದರು ಎಂಬುದುರ ಬಗ್ಗೆ ಎರಡು ಮಾತಿಲ್ಲ, ಅದಕ್ಕಾಗಿ ಆಕೆ “ಬಸವಣ್ಣ ಮೆಚ್ಚಲು ಕೂಡಿಬಾಳುವೆ ಮಾಡುವೆ ಚೆನ್ನಮಲ್ಲಿಕಾರ್ಜುನನ ಕೈ ಹಿಡಿದು ನಿಮ್ಮ ತಲೆಗೆ ಹೂವತರುವೆನೆ ಹೊರೆತು ಹುಲ್ಲತಾರೆನು” ಎನ್ನುತ್ತಾಳೆ. ಈ ರೀತಿ ಅಕ್ಕನಿಗೆ ಬಸವಣ್ಣನು ಒಂದು ರೀತಿಯಾಗಿ ಗೋಚರಿಸದೆ ಸರ್ವರೂಪಿಯಾಗಿ ಕಾಣಿಸುತ್ತಾನೆ. ಅದರಿಂದ ತಾನು ಪರಿಪಕ್ವವಾದೆನೆಂದು ಭಾವಿಸಿಕೊಂಡಿದ್ದಳು. ಮಹಾದೇವಿಯ ಆಧ್ಯಾತ್ಮದ ಎಲ್ಲ ಬಾಗಿಲುಗಳನ್ನು ಅಣ್ಣ ಮುಕ್ತಗೊಳಿಸಿದ್ದರಿಂದ ಉಳಿದ ಶಿವಶರಣರಿಗಿಂತ ಬಸವಣ್ಣನ ಕುರಿತು ಮನದುಂಬಿಕೊಂಡಾಡಿರುವುದು ಯಾರಿಗೂ ಅಚ್ಚರಿಯಂದೇನು ಅನ್ನಿಸುವುದಿಲ್ಲ. ಮಹಾದೇವಿ ಅಕ್ಕನು ತನ್ನ ಜೀವನದ ಕೊನೆಯ ಘಟ್ಟದಲ್ಲ ಇ ಶ್ರೀಶೈಲ ಗಿರಿ ಕಡೆಗೆ ಸಾಗಿ ಚೆನ್ನಮಲ್ಲಿಕಾರ್ಜುನನ್ನು ಹುಡುಕುತ್ತಾ ಕದಳಿಯ ಬನದಲ್ಲಿ ಐಕ್ಯವಾಗುತ್ತಾಳೆ.