ಹನ್ನೆರಡನೆಯ ಶತಮಾನದಷ್ಟು ಹಿಂದೆಯೆ ಕನ್ನಡನಾಡಿನ ಪರಿಸರದಲ್ಲಿ ತನ್ನ ವೈಚಾರಿಕತೆ ಹಾಗೂ ಆತ್ಮಪ್ರತ್ಯಯದ ಮೂಲಕ ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಅಕ್ಕಮಹಾದೇವಿ, ಅಂದು ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ರೂಪುಗೊಂಡ ಶರಣ ಚಳುವಳಿಯ ಮೇಲೆ ಹಾದುಹೋದ ಒಂದು ಉಜ್ವಲವಾದ ಮಿಂಚಿನ ಗೆರೆಯಂತೆ ತೋರುತ್ತಾಳೆ. ಈ ಹೊತ್ತು ನಾವು ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ಹನ್ನೆರಡನೆಯ ಶತಮಾನದ ಸಾಮಾಜಿಕ ಧಾರ್ಮಿಕ ಸ್ವರೂಪದ ವಚನ ಚಳುವಳಿಯೊಂದಿಗೆ ಗುರುತಿಸುತ್ತೇವೆಯಾದರೂ, ಆಕೆಗೂ ಈ ಚಳುವಳಿಗೂ ಇದ್ದ ಸಂಬಂಧ ಕೇವಲ ಆಗಂತುಕವೂ ತಾತ್ಕಾಲಿಕವೂ ಆದದ್ದೆಂಬುದು ಮಾತ್ರ ನಿಜ. ಹಾಗೆ ನೋಡಿದರೆ ಈ ಸಂದರ್ಭದ ಮಹಾ ಅನುಭಾವಿಯಾದ ಅಲ್ಲಮನ ಸಂಬಂಧ ಕೂಡಾ, ಈ ಚಳುವಳಿಯೊಂದಿಗೆ, ಇದೇ ಸ್ವರೂಪದ್ದೇ. ಆದರೆ ಅಲ್ಲಮ ಈ ಚಳುವಳಿಯಲ್ಲಿ ವಹಿಸಿದ ಪಾತ್ರ, ಅಕ್ಕನದಕ್ಕಿಂತ ಭಿನ್ನವಾದದ್ದು ಹಾಗೂ ಮಹತ್ವದ್ದು. ಆತ ‘ಅನುಭವ ಮಂಟಪ’ದ ಅಧ್ಯಕ್ಷನಾಗಿ, ಗುರುವಾಗಿ, ಮಾರ್ಗದರ್ಶಕನಾಗಿ, ವಿಮರ್ಶಕನಾಗಿ ‘ಪ್ರಭು’ ಎನ್ನುವ ಗೌರವಕ್ಕೆ ಪಾತ್ರನಾಗಿ, ಈ ಚಳುವಳಿಯೊಂದಿಗೆ ಹೆಚ್ಚು ಗಾಢವಾದ ಸಂಬಂಧವನ್ನು ಹೊಂದಿ ಕೆಲವು ಕಾಲವಾದರೂ ಜತೆಗೆ ಇದ್ದವನು. ಆದರೆ ಮಹಾದೇವಿ ಉಡುತಡಿಯಿಂದ ಶ್ರೀಶೈಲ ಶಿಖರಕ್ಕೆ ಬಿಟ್ಟ ಬೆಳಕಿನ ಬಾಣದಂತೆ ನೇರವಾಗಿ ಹೊರಟ ಹಾದಿಯಲ್ಲಿ, ಕಲ್ಯಾಣದ ಈ ಶರಣಕಿರಣ ಕೇಂದ್ರದಿಂದ ಆಕರ್ಷಿತಳಾಗಿ ಸ್ವಲ್ಪ ಕಾಲ ನಿಂತವಳು. ತನ್ನ ವ್ಯಕ್ತಿತ್ವ ಹಾಗೂ ಅನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿದವಳು. ತನ್ನ ವೈರಾಗ್ಯ ಮತ್ತು ವೈಚಾರಿಕತೆಯ ಪರಿಣತಿಯಿಂದ ‘ಅಕ್ಕ’ ಎಂದು ಕರೆಯಿಸಿಕೊಳ್ಳುವ ಗೌರವಕ್ಕೆ ಪಾತ್ರಳಾದವಳು;[1] ತನ್ನ ಆಧ್ಯಾತ್ಮಿಕ ಸಂವಾದದಿಂದ ಶರಣ ಚಳುವಳಿಯ ಪ್ರಮುಖರ ಪ್ರಶಂಸೆಯನ್ನು ಗಳಿಸಿಕೊಂಡವಳು.[2]

ಆದರೆ ಅಕ್ಕಮಹಾದೇವಿ ಕಲ್ಯಾಣಕ್ಕೆ ಬರುವ ಮುನ್ನವೇ ಅವಳ ತಾತ್ವಿಕ ನಿಲುವುಗಳೂ ಹಾಗೂ ಜೀವನ ವಿಧಾನದ ಪರಿಕಲ್ಪನೆಗಳೂ ಬಹುಮಟ್ಟಿಗೆ ಸಿದ್ಧವಾಗಿದ್ದವು; ಮತ್ತು ಆಕೆ ತನ್ನ ವೈಚಾರಿಕತೆ ಹಾಗೂ ನಿರ್ಭಯವಾದ ನಿಲುವು ಮತ್ತು ನಡವಳಿಕೆಗಳಿಂದಾಗಿ ಸಾಕಷ್ಟು ಹೆಸರಾಗಿದ್ದಳೆಂದು ತೋರುತ್ತದೆ. ತನ್ನ ಪಯಣದ ಹಾದಿಯಲ್ಲಿ ಶರಣ ಚಳುವಳಿಯೊಳಕ್ಕೆ ಬಂದ ಈಕೆ, ಇಲ್ಲಿ ಎಷ್ಟು ಕಾಲ ಇದ್ದಳೆಂಬ ಬಗ್ಗೆ ಖಚಿತವಾಗಿ ಹೇಳಲುಬಾರದು. ಆದರೆ ಆಕೆ ಇಲ್ಲಿದ್ದದ್ದು ಕೆಲವೇ ಕಾಲದ ಮಟ್ಟಿಗೆ ಎಂಬುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಅವಳ ನಿಲುಗಡೆ ಕಲ್ಯಾಣವಲ್ಲ; ಶ್ರೀಶೈಲ. ಸ್ವತಂತ್ರವಾಗಿ ತನ್ನ ದಾರಿ ಹಾಗೂ ಗುರಿಗಳನ್ನು ಸ್ಪಷ್ಟವಾಗಿ ಕಂಡುಕೊಂಡ ಈಕೆ ತಾತ್ವಿಕವಾಗಿ ಹಾಗೂ ವೈಚಾರಿಕವಾಗಿ ವಚನ ಚಳುವಳಿಗೆ ಋಣಿಯಾಗಿರುವುದು ತೀರಾ ಕಡಿಮೆ ಎಂದೇ ತೋರುತ್ತದೆ. ಈ ಚಳುವಳಿಯ ಅನೇಕ ಶರಣ ಶರಣೆಯರ ವ್ಯಕ್ತಿತ್ವ ಹಾಗೂ ಆಲೋಚನಾ ವಿಧಾನ ಮತ್ತು ಅವರವರ ಅಭಿವ್ಯಕ್ತಿಯ ಕ್ರಮಗಳು ರೂಪುಗೊಂಡದ್ದು ಕಲ್ಯಾಣ ಕೇಂದ್ರಿತ ವಚನ ಚಳುವಳಿಯಿಂದಲೆ. ಆದರೆ ಮಹಾದೇವಿಯಕ್ಕನ ವಿಚಾರದಲ್ಲಿ ಈ ಮಾತನ್ನು ಹೇಳುವ ಹಾಗಿಲ್ಲ. ಹಾಗೆಂದರೆ ಎತ್ತರದ ನಿಲುವನ್ನು ಗಳಿಸಿಕೊಂಡ ಅಂದಿನ ಶರಣ ಚಳುವಳಿಯ ವ್ಯಕ್ತಿತ್ವಗಳ ಪ್ರಭಾವ ಆಕೆಯ ಮೇಲೆ ಆಗಲಿಲ್ಲ ಎಂದಾಗಲಿ, ವಚನಕಾರರನೇಕರ ಸಹವಾಸ ಹಾಗೂ ಸಂವಾದ ಅವಳ ಅಭಿವ್ಯಕ್ತಿಗೆ ನೆರವಾಗಲಿಲ್ಲವೆಂದಾಗಲೀ ಈ ಮಾತಿನ ಅರ್ಥವಲ್ಲ. ಆದರೆ ಅಕ್ಕ ಈ ಶರಣ ಸಮುದಾಯಕ್ಕೆ ಬರುವ ವೇಳೆಗಾಗಲೇ ಶರಣ ಧರ್ಮದ ತಾತ್ವಿಕ ನಿಲುವುಗಳೂ, ಸಾಮಾಜಿಕ ದೃಷ್ಟಿಕೋನಗಳೂ ಒಂದು ರೀತಿಯಲ್ಲಿ ಸಿದ್ಧವಾಗಿದ್ದು, ಇದರ ಚೌಕಟ್ಟಿನೊಳಗಿನ ಎಷ್ಟೋ ಸಂಗತಿಗಳೊಂದಿಗೆ ಆಕೆಯ ಅಭಿಪ್ರಾಯಗಳು ಸಂಗತವಾಗದೆ ಹೋದವೆಂಬುದು ಗುರುತಿಸಿಕೊಳ್ಳಬೇಕಾದ ಅಂಶವಾಗಿದೆ. ಈ ದೃಷ್ಟಿಯಿಂದ ಅಕ್ಕಮಹಾದೇವಿಯು ಈ ವಚನ ಚಳುವಳಿಯಲ್ಲಿ ಇತರರಿಗಿಂತ ಬೇರೆಯೇ ಆಗಿ ನಿಲ್ಲುತ್ತಾಳೆ, ಮತ್ತು ವೈಯಕ್ತಿಕ ನೆಲೆಯಲ್ಲಿ ಈ ಚಳುವಳಿಗೆ ಆಕೆ ತೋರುವ ಪ್ರತಿಕ್ರಿಯೆಗಳು ಗಮನಾರ್ಹವಾಗಿವೆ.

ಭಗವತ್ಪರವಾದ ವ್ಯಾಕುಲತೆ, ಎಲ್ಲ ಅನುಭಾವಿಗಳಂತೆ ಪುಸ್ತಕ ಹಾಗೂ ಶಾಸ್ತ್ರಜ್ಞಾನಗಳ  ಬಗ್ಗೆ ಅವಳಿಗಿದ್ದ ತಿರಸ್ಕಾರ, ಪರಂಪರಾಗತವಾದ ಜಾತಿ ಹಾಗೂ ವರ್ಣಭೇದಗಳನ್ನು ಪ್ರತಿಪಾದಿಸುತ್ತಿದ್ದ ವೇದ-ಪುರಾಣ-ಆಗಮಗಳ ನಿರಾಕರಣೆ ಇತ್ಯಾದಿಗಳ ವಿಚಾರದಲ್ಲಿ ಅವಳಿಗೆ ವಚನ ಚಳುವಳಿಯೊಂದಿಗೆ ಸಹಮತವಿದ್ದರೂ, ಮಾಯೆಯನ್ನು ಕುರಿತು ಅವಳ ವ್ಯಾಖ್ಯಾನ ಮಾತ್ರ ತೀರಾ ವಿಶಿಷ್ಟವಾದುದಾಗಿದೆ. ಹಾಗೆ ನೋಡಿದರೆ ಭಾರತೀಯ ತತ್ವಜ್ಞಾನದ ಪ್ರಕಾರ ‘ಮಾಯೆ’ ಎಂದರೆ ಸತ್ಯವಲ್ಲದ, ಆದರೆ ಸತ್ಯದ ಹಾಗೆ ಭಾಸವಾಗುವ ಈ ಜಗತ್ತಿನ ತೋರಿಕೆ; ಮತ್ತು ಅನೇಕ ವಿಧವಾದ ಆಸೆ-ಆಮಿಷಗಳಿಂದ ಜಗತ್ತಿನೊಂದಿಗೆ ಜೀವನನ್ನು ಬಂಧಿಸುವ ಒಂದು ಅವಿದ್ಯೆಯ ಉಪಕರಣ. ಹೀಗೆ ಮನುಷ್ಯನನ್ನು ಹಿಡಿದು ಕಟ್ಟುವ ಈ ಮಾಯೆಯನ್ನು ‘ಹೆಣ್ಣು-ಹೊನ್ನು-ಮಣ್ಣು’ ಎಂದು ವರ್ಣಿಸಲಾಗಿದೆ. ಸ್ವಲ್ಪ ವಿಚಾರ ಮಾಡಿ ನೋಡಿದರೆ, ಈ ವ್ಯಾಖ್ಯಾನ ಮುಖ್ಯವಾಗಿ ಸಾಧಕನಾದ ಹಾಗೂ ಮುಮುಕ್ಷುವಾದ ಪುರುಷನ ದೃಷ್ಟಿಕೋನದಿಂದ ಹುಟ್ಟಿಕೊಂಡದ್ದು. ಆದರೆ ಅಕ್ಕಮಹಾದೇವಿ ಈ ಪರಿಕಲ್ಪನೆಯನ್ನು ಮೊಟ್ಟಮೊದಲಿಗೆ ಸ್ತ್ರೀಪರವಾಗಿ ವ್ಯಾಖ್ಯಾನಿಸಿರುವ ಕ್ರಮವು ತೀರಾ ವಿಶಿಷ್ಟವಾದುದಾಗಿದೆ. ಆಕೆ ಹೇಳುತ್ತಾಳೆ-

ಪುರುಷನ ಮುಂದೆ ಮಾಯೆ
ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ
[3]
………………………………………
ಹೆಣ್ಣಿಗೆ ಗಂಡು ಮಾಯೆ
ಗಂಡಿಗೆ ಹೆಣ್ಣು ಮಾಯೆ
[4]

ಈ ಮಾತುಗಳಲ್ಲಿ, ಹೆಣ್ಣು ಗಂಡಿನ ಪಾಲಿಗೆ ‘ಮಾಯೆ’ ಯಾಗುವುದಾದರೆ, ಗಂಡು ಹೆಣ್ಣಿನ ಪಾಲಿಗೆ ಯಾಕೆ ಮಾಯೆ ಅಲ್ಲ?- ಎಂಬ ದೃಷ್ಟಿಕೋನ, ಮಹಿಳಾಪರವಾದ ಒಂದು ಪ್ರತಿಕ್ರಿಯೆಯಾಗಿದೆ. ಹಾಗೆಯೆ ಕಟ್ಟಿಕೊಂಡ ಹೆಂಡತಿಯನ್ನು ಗಂಡ ಆಧ್ಯಾತ್ಮಸಾಧನೆಯ ನೆಪದಿಂದ ಬಿಟ್ಟು ಹೋಗುವುದೂ ‘ವೈರಾಗ್ಯ’ದ ಲಕ್ಷಣವಾಗುವುದಾದರೆ, ಕಟ್ಟಿಕೊಂಡ ಗಂಡನನ್ನು ತನ್ನ ಆಧ್ಯಾತ್ಮಸಾಧನೆಗಾಗಿ ಹೆಣ್ಣು ಬಿಟ್ಟು ಹೋಗುವುದೂ ವೈರಾಗ್ಯ ಯಾಕೆ ಆಗುವುದಿಲ್ಲ ಎನ್ನುವುದನ್ನು,  ಆಕೆ ಕೌಶಿಕನನ್ನು ಬಿಟ್ಟು ಹೊರಟ ಸಂದರ್ಭವು ಸಾಂಕೇತಿಸುತ್ತದೆ ಎಂದು ಭಾವಿಸುವುದು ತಪ್ಪೇನೂ ಆಗುವುದಿಲ್ಲ.

ವಚನ ಚಳುವಳಿಯ ಶರಣಧರ್ಮದೊಂದಿಗೆ ಸಂಗತವಾಗಲಾರದ ಆಕೆಯ ದೃಷ್ಟಿಕೋನಗಳೂ, ವಿಚಾರಗಳೂ ಸ್ವಾರಸ್ಯವಾಗಿವೆ:

ವಚನ ಚಳುವಳಿ ಲೌಕಿಕ ದಾಂಪತ್ಯ ಜೀವನವನ್ನು ಆಧ್ಯಾತ್ಮ ಸಾಧನೆಯ ನೆಲೆಗಟ್ಟನ್ನಾಗಿ ಒಪ್ಪಿಕೊಂಡಿತ್ತು. ಹಾಗೆಯೆ ಈ ಲೋಕಜೀವನವನ್ನೂ ಒಪ್ಪಿಕೊಂಡಿತ್ತು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ಜೇಡರ ದಾಸಿಮಯ್ಯನ ಮಾತೂ, ‘ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ’ ಎಂಬ ಬಸವಣ್ಣನವರ ಮಾತೂ, ಈ ನಿಲುವಿಗೊಂದು ನೆಲೆಗಟ್ಟನ್ನು ಹಾಕಿದ್ದವು. ಸಂಸಾರದಲ್ಲಿದ್ದೂ ಶಿವಯೋಗವನ್ನು ಸಾಧಿಸಬಹುದು ಎಂಬ ಈ ಧರ್ಮಸೂತ್ರವೇ ಬಹುಶಃ ಬಹುಜನರನ್ನು ಈ ಚಳುವಳಿಯೊಳಕ್ಕೆ ಆಕರ್ಷಿಸಿರಬಹುದು. ಹಾಗೆ ನೋಡಿದರೆ ಈ ಶರಣ ಧರ್ಮದ ಚಳುವಳಿಯಲ್ಲಿ ಪಾಲುಗೊಂಡವರೆಲ್ಲ ಬಸವಣ್ಣನವರಿಂದ ಮೊದಲುಗೊಂಡು, ಸಂಸಾರಿಗಳೇ, ಗೃಹಸ್ಥರೇ ಮತ್ತು ಗೃಹಸ್ಥರಲ್ಲದ ಇತರ ಹಿರಿಯರು ಯಾರೂ ಗೃಹಸ್ಥನಾಗಿರುವುದು ಆಧ್ಯಾತ್ಮ ಸಾಧನೆಗೆ ಒಂದು ಆತಂಕ ಎಂಬ ಮಾತನ್ನು ಹೇಳಿದವರಲ್ಲ. ಹೀಗಿರುವಾಗ ಲೌಕಿಕ ದಾಂಪತ್ಯದ ಮೂಲವಾದ ಮದುವೆಯ ಕಲ್ಪನೆಯನ್ನೇ ಮಹಾದೇವಿ ಪ್ರಶ್ನಿಸಿದಳು: ಮತ್ತು ಸಂದರ್ಭದ ಒತ್ತಡದಿಂದ ತಾನು ಮದುವೆಯಾಗಬೇಕಾಗಿ ಬಂದ ಗಂಡನನ್ನೇ ಬಿಟ್ಟು ಬಂದ ಈ ಹೆಣ್ಣು ಮಗಳ ನಡವಳಿಕೆ, ಲೌಕಿಕ ದಾಂಪತ್ಯವನ್ನು ಮೂಲಮಾನವಾಗಿ ಒಪ್ಪಿಕೊಂಡ ವಚನ ಚಳುವಳಿಯ ನಿಲುವಿಗೆ ವಿರೋಧವಾಗುವುದಿಲ್ಲವೆ- ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೆ ಉದ್ಭವಿಸುತ್ತದೆಯಲ್ಲದೆ, ಅಕ್ಕನ ಈ ನಡವಳಿಕೆ ಈ ವಚನ ಚಳುವಳಿಯಲ್ಲಿ ಪಾಲುಗೊಂಡ ಮಹಿಳೆಯರಿಗೆ ಹೇಗೆ ಮಾದರಿಯಾದೀತು ಎಂಬ ಸಂಶಯಕ್ಕೆ ಅವಕಾಶ ಮಾಡಿಕೊಡುತ್ತದೆ. ಆದರೂ ಅಕ್ಕನ ನಿಲುವನ್ನು ಅಂದಿನ ಶರಣರು ಒಪ್ಪಿಕೊಂಡರು, ಗೌರವಿಸಿದರು. ಅವಳನ್ನು ‘ಅಕ್ಕ’ ಎಂಬ ಪೂಜ್ಯಭಾವದಿಂದ ಹೊಗಳಿದರು. ಯಾಕೆ?

ಯಾಕೆಂದರೆ, ಅಕ್ಕ ‘ಮದುವೆ’ಯನ್ನು ನಿರಾಕರಿಸಿದವಳಲ್ಲ; ಮದುವೆ ಎಂಬ ವ್ಯವಸ್ಥೆಯನ್ನು ಪ್ರಶ್ನಿಸಿದಳು, ಪ್ರತಿಭಟಿಸಿದಳು; ‘ಮದುವೆ’ಯಲ್ಲಿ ಹೆಣ್ಣಿನ ಆಯ್ಕೆಯ ಸ್ವಾತಂತ್ರ್ಯವನ್ನು ತಿರಸ್ಕರಿಸುವ  ಪ್ರವೃತ್ತಿಯನ್ನು ವಿರೋಧಿಸಿದಳು. ಅಲ್ಲದೆ ಅವಳ ಮದುವೆಯ ಕಲ್ಪನೆ ಲೌಕಿಕವಾದದ್ದಲ್ಲ; ಅನುಭಾವಿಕವಾದದ್ದು. ಅಂದರೆ ತಾನು ‘ಹೆಣ್ಣು’, ತನ್ನ ಬದುಕಿನ ಗಮ್ಯವಾದ ಆ ದೈವ ‘ಗಂಡು’ ಎನ್ನುವ ಭಾವನೆ ಅದು. ವೀರಶೈವ ಪರಿಭಾಷೆಯಲ್ಲಿ ಹೇಳುವುದಾದರೆ ‘ಶರಣಸತಿ ಲಿಂಗಪತಿ’. ವೈಷ್ಣವ ಪರಿಭಾಷೆಯಲ್ಲಿ ಹೇಳುವುದಾದರೆ ‘ಮಧುರ ಭಾವ.’

ಈ ಭಾವ ಹೆಣ್ಣಿಗೆ ಸಹಜವಾದಷ್ಟು, ಅನುಕೂಲವಾದಷ್ಟು, ಗಂಡಿನ ವಿಚಾರಕ್ಕೆ ಹೊಂದಲಾರದು. ಅಂದರೆ ಶರಣರೆಲ್ಲರೂ, ಅವರು ಗಂಡಾಗಲಿ ಹೆಣ್ಣಾಗಲೀ ತಾವೆಲ್ಲ ಸತಿಯರು, ಆ ದೇವರು ಅಥವಾ ಶಿವನೊಬ್ಬನೇ ನಿಜವಾದ ಗಂಡು ಎಂಬ ಈ ‘ಶರಣಸತಿ ಲಿಂಗ ಪತಿ’ ಎಂಬ ಕಲ್ಪನೆಯು, ಲೌಕಿಕ ದಾಂಪತ್ಯ ಜೀವನವನ್ನು ಮೌಲಿಕವಾದ ಒಂದು ನೆಲೆ ಎಂದು ಅಂಗೀಕರಿಸಿದ ವೀರಶೈವ ಧರ್ಮದ ಆಚರಣೆಯಲ್ಲಿ ಎಷ್ಟರಮಟ್ಟಿಗೆ ಒಂದು ತಾತ್ವಿಕ ನಿಲುವಾಗಿ ಸಲ್ಲಬಲ್ಲದೋ ಎಂಬ ಬಗ್ಗೆ ನನಗೆ ತೀರಾ ಅನುಮಾನಗಳಿವೆ.[5] ಅದರ ಬದಲು ಭಕ್ತ ಭಗವಂತ ಅಥವಾ ಶರಣ ಮತ್ತು ಲಿಂಗ ಈ ಸಂಬಂಧವೆ ಇಲ್ಲಿ ಹೆಚ್ಚು ಸುಗಮವಾಗುವಂತೆ ತೋರುತ್ತದೆ. ಆದರೂ ಪ್ರಾಸಂಗಿಕವಾಗಿ ಭಕ್ತನಾದವನು ಸತಿ ಭಾವವನ್ನು ಆರೋಪಿಸಿಕೊಂಡು ಸಾಧನೆಯಲ್ಲಿ ತೊಡಗಿದ ನಿದರ್ಶನಗಳು ಉಂಟು. ಬಸವಣ್ಣನವರಲ್ಲಿಯೂ ಅವರು ಈ ಭಾವದಲ್ಲಿ ನಿಂದ ಮನಃಸ್ಥಿತಿಯನ್ನು ಉಲ್ಲೇಖಿಸುವ ಒಂದೆರಡು ವಚನಗಳುಂಟು;[6] ಉರಿಲಿಂಗದೇವ, ಗಜೇಶ ಮಸಣಯ್ಯ ಇಂಥ ಕೆಲವರೂ, ‘ಶರಣಸತಿ ಲಿಂಗಪತಿ’ ಭಾವದಲ್ಲಿಯೆ ತಮ್ಮ ವ್ಯಕ್ತಿತ್ವವನ್ನು ನಿಲ್ಲಿಸಿಕೊಂಡು ಬರೆದ ವಚನಗಳೂ ಇವೆ. ಆದರೆ ವಾಸ್ತವವಾಗಿ ‘ಶರಣಸತಿ ಲಿಂಗಪತಿ’ ಎಂಬ ನಿಲುವು ಈಗಾಗಲೇ ಹೇಳಿದಂತೆ ಹೆಣ್ಣಿನ ವ್ಯಕ್ತಿತ್ವ ಹಾಗೂ ಮನಃಸ್ಥಿತಿಗೆ ಹೆಚ್ಚು ಅನುಕೂಲಕರವಾದದ್ದು. ಈ ದೃಷ್ಟಿಯಿಂದ ಅಕ್ಕ ಮಹಾದೇವಿಗೆ ಈ ನಿಲುವು ಸಹಜವಾಗಿದೆ; ಅನೇಕ ಶಿವ ಶರಣೆಯರ ನಡುವೆ ಈಕೆಯೊಬ್ಬಳೆ ತಾನು ಸತಿ, ಲಿಂಗವೆ ಪತಿ ಎಂಬ ಭಾವದಲ್ಲಿ ನಿಂದವಳು. ಇದು ಅವಳ ಅನುಭಾವಕ್ಕೆ ಉಚಿತವಾಗಿದೆ. ಯಾಕೆಂದರೆ ಲೌಕಿಕ ದಾಂಪತ್ಯದ ಕಲ್ಪನೆಯನ್ನು ನಿರಾಕರಿಸಿ ತನ್ನ ಅನುಭಾವದ ಗಮ್ಯವಾದ ‘ಗಂಡನ’ ಅನ್ವೇಷಣೆಯಲ್ಲಿ ಹೊರಟವಳು ಅವಳು. ಇದರಿಂದಾಗಿ ತನ್ನ ಹಾಗೂ ಚೆನ್ನಮಲ್ಲಿಕಾರ್ಜುನನ ಸಂಬಂಧವೇ ಅವಳ ಅನುಭಾವದ ಮೂಲ ನೆಲೆಯಾಗಿದೆ. ಈ ಸಂಬಂಧ ಈ ಹೊತ್ತಿನದಲ್ಲ, ನಿನ್ನೆಯದಲ್ಲ, ಅನಂತ ಕಾಲದ್ದು. ಇದು ‘ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತ ಕಾಲ ತಪಸಿದ್ದೆ ನೋಡಾ’ ಎಂಬ ಅವಳ ಉಕ್ತಿಯಲ್ಲಿ ಸೂಚಿತವಾಗಿದೆ. ತಾತ್ವಿಕವಾಗಿ ನೋಡಿದರೆ, ಜೀವ ಹಾಗೂ ದೇವರ ಸಂಬಂಧ ಸನಾತನವಾದದ್ದು. ಅಕ್ಕ ಈ ತಾತ್ವಿಕ ನೆಲೆಯ ಜೀವಂತ ವ್ಯಾಖ್ಯಾನದಂತೆ ಇದ್ದಾಳೆ. ಈ ದೃಷ್ಟಿಯಿಂದ ಮಹಾದೇವಿ ಹರನ ಸನಾತನ ಸಂಗಾತಿಯ ಪ್ರತೀಕವಾಗಿದ್ದಾಳೆ. ಯಾವಾಗ ಈಕೆ ತನ್ನ ಹಾಗೂ ತನ್ನ ದೇವಪತಿಯ ಸನಾತನ ಸಂಬಂಧವನ್ನು ಗುರುತಿಸಿಕೊಳ್ಳುತ್ತಾಳೆಯೋ ಆಗ ಸಹಜವಾಗಿಯೆ ಈ ಲೋಕದ ಸಾಂಪ್ರದಾಯಿಕ ವೈವಾಹಿಕ ಸಂಬಂಧದ ಮೂಲಕ ಏರ್ಪಡುವ ದಾಂಪತ್ಯ ಅರ್ಥಹೀನವಾಗುತ್ತದೆ. ‘ಇಹಕ್ಕೊಬ್ಬ ಗಂಡನೆ, ಪರಕ್ಕೊಬ್ಬ ಗಂಡನೆ?’ (ವ. ೯೧) ಎಂಬ ಅವಳ ಪ್ರಶ್ನೆ ಈ ನಿಲುವಿಗೆ ಸಹಜವಾಗಿಯೇ ಇದೆ. ಈ ಲೋಕದ ಗಂಡರು ‘ಸಾವ ಕೆಡುವ’ ಗಂಡರಾಗಿ ಕಾಣುತ್ತಾರೆ. ಇದಕ್ಕೆ ಬದಲಾಗಿ ಆಕೆ ತನ್ನ ಸನಾತನ ಪತಿಯಾದ ‘ಸಾವಿಲ್ಲದ ಕೇಡಿಲ್ಲದ’ ಪುರುಷನಿಗಾಗಿ ಹಂಬಲಿಸುತ್ತಾಳೆ. ಆದ ಕಾರಣವೆ ಸಂದರ್ಭದ ಬಲದಿಂದ ಕೌಶಿಕನೊಂದಿಗೆ ಒದಗಿದ ಅವಳ ಒಲ್ಲದ ಮದುವೆ, ಅವಳ ಪಾಲಿಗೆ ಹರಿಹರನು ವರ್ಣಿಸುವಂತೆ ‘ವಿಷಮ ಸುಖ ಸಂಪತ್ ಸಂಯೋಗ ಸನ್ನಿಧಿ’ಯಾಗಿ, ಮುರಿದುಬಿತ್ತು.[7]

ಅಕ್ಕ ತನ್ನ ಹಲವಾರು ವಚನಗಳಲ್ಲಿ ಅನುಭಾವಿಕ ನೆಲೆಯಲ್ಲಿ ತನಗೆ ಆಗಲೇ ಮದುವೆಯಾಗಿರುವ ಸಂಗತಿಯನ್ನು ಹೇಳಿಕೊಂಡಿದ್ದಾಳೆ[8] ಚೆನ್ನಮಲ್ಲಿಕಾರ್ಜುನನೆಂಬ ಗಂಡನೊಡನೆ ಎಂದೋ ಮದುವೆಯಾದ ಈ ಹೆಣ್ಣು, ಈ ಭವದ ಹಾದಿಯಲ್ಲಿ ತನ್ನ ಗಂಡನನ್ನು ಹುಡುಕಿಕೊಂಡು ಆತನಿರುವಲ್ಲಿಗೆ ಹೊರಟಿದ್ದಾಳೆ. ತಾನು ಅನಂತಕಾಲದಿಂದ ಒಲಿದ ಹಾಗೂ ಮದುವೆಯಾದ ಗಂಡನನ್ನು ಹುಡುಕಿಕೊಂಡು ಹೊರಟ ರೀತಿಯೆ ಅಕ್ಕನ ಅನುಭಾವಿಕ ಅನ್ವೇಷಣೆಯ ಒಂದು ಪ್ರತೀಕವಾಗಿದೆ. ಪರಿಸ್ಥಿತಿ ಹೀಗಿರುವಾಗ ಆಕೆ ದಾಂಪತ್ಯ ಜೀವನದ ಲೌಕಿಕ ಕಲ್ಪನೆಯನ್ನು ನಿರಾಕರಿಸಿದ್ದು ತೀರಾ ಸಹಜವಾಗಿದೆ. ಆದರೆ ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುತ್ತ, ಲೌಕಿಕ ದಾಂಪತ್ಯ ಜೀವನವನ್ನು ಆಧ್ಯಾತ್ಮ ಸಾಧನೆಗೆ ವಿರೋಧವಲ್ಲವೆಂದು ಒಪ್ಪಿಕೊಂಡ ಅಂದಿನ ಶರಣ ಧರ್ಮದ ಸಾಮಾಜಿಕ ನಿಲುವಿಗೆ ಅಕ್ಕನ ಈ ನಿಲುವು, ಒಂದು ವ್ಯಕ್ತಿನಿಷ್ಠವಾದ ಪ್ರತಿಕ್ರಿಯೆಯೋ ಎಂಬಂತೆ, ಪ್ರತ್ಯೇಕವಾಗಿಯೆ ಎದ್ದು ಕಾಣುತ್ತದೆ. ಆದರೆ ಆ ಕಾರಣಕ್ಕೆ ಅಕ್ಕ ಲೌಕಿಕ ಸಾಂಸಾರಿಕ ಜೀವನ ವಿಧಾನವನ್ನು, ಹಗುರವಾಗಿ ನೋಡುವುದಿಲ್ಲ. ಆಕೆ ಹೇಳುತ್ತಾಳೆ-

ಹಾವಿನ ಬಾಯ ಹಲ್ಲ ಕಳೆದು
ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯಾ
………………………………….
ಚೆನ್ನಮಲ್ಲಿಕಾರ್ಜುನ ನೀನೊಲಿದವರು
ಕಾಯಗೊಂಡಿದ್ದರೆನಬೇಡ       (ವ. ೧೫೭ : ಡಾ.ಎಲ್. ಬಸವರಾಜು)

ಎಂದರೆ ಸಂಸಾರ ಎನ್ನುವುದು ತ್ಯಾಜ್ಯವೇನಲ್ಲ. ಆದರೆ ಅದು ವಿಷದ ಹಲ್ಲುಗಳಿರುವ ಸರ್ಪವೆಂಬ ಅರಿವಿರಬೇಕು. ಈ ಹಾವಿನ ಬಾಯ ಹಲ್ಲುಗಳನ್ನು- ಅಂದರೆ ಕಾಮ ಕ್ರೋಧಾದಿಗಳನ್ನು- ಕಿತ್ತು ಹಾಕಿ ಬದುಕುವುದಾದರೆ ಹಾವಿನ ಸಂಗವೇ ಲೇಸು. ಆದರೆ ಸಂಸಾರವನ್ನು ಹೀಗೆ ಗೆದ್ದು ಬದುಕಲು ಚೆನ್ನಮಲ್ಲಿಕಾರ್ಜುನನ ಒಲುಮೆ ಅಗತ್ಯ. ಆದ ಕಾರಣ ನಿಜವಾದ ಭಕ್ತರಾಗಿ ಸಂಸಾರದಲ್ಲಿ ಬದುಕುವವರೂ ಗೌರವಾರ್ಹರೇ ಎಂಬುದು ಅಕ್ಕನ ನಿಲುವು; ಮತ್ತು ತನ್ನ ದಾರಿಯೇ ಬೇರೆ ಎಂಬುದನ್ನು ಕಂಡುಕೊಂಡ ಅಕ್ಕ, ತಾನು ಹಿಡಿದ ದಾರಿಯೇ ಸರಿ, ಆದಕಾರಣ ಉಳಿದವರು ಅದನ್ನು ಅನುಸರಿಸಬೇಕೆಂದು ಎಂದೂ ಹೇಳಲಿಲ್ಲ. ಯಾಕೆಂದರೆ ಆಧ್ಯಾತ್ಮ ಸಾಧನೆ ಎಂಬುದು ಮೂಲತಃ ವೈಯಕ್ತಿಕವಾದದ್ದು.

ತನ್ನ ಇಷ್ಟ ದೈವವನ್ನು ತನ್ನ ಗಂಡನೆಂದು ಭಾವಿಸಿದ ಅಕ್ಕನ ದೈವದ ಕಲ್ಪನೆ ಅಂದಿನ ವೀರಶೈವ ಧರ್ಮದ ದೇವರ ಕಲ್ಪನೆಯಿಂದ ಭಿನ್ನವಾಗಿದೆ. ಆಕೆಯ ದೈವವಾದ ಮಲ್ಲಿಕಾರ್ಜುನ ಪರಮ ಸಾಕಾರ ಸುಂದರಮೂರ್ತಿ. ಅಕ್ಕ ಆಗಾಗ ‘ರೂಹಿಲ್ಲದ ಚೆಲುವ’ನೆಂದು ಅವನನ್ನು ವರ್ಣಿಸಿದರೂ, ಅವಳ ಕಣ್ಣಿಗೆ ಮುಖ್ಯವಾಗಿ ಆತ ಸೌಂದರ್ಯದ ಮೂರ್ತಿಯೆ ಹೊರತು, ವೀರಶೈವದ ‘ಇಷ್ಟಲಿಂಗ’ ಪ್ರತಿನಿಧಿಸುವ ನಿರಾಕಾರಕ್ಕೆ ಸಮೀಪವಾದ ಸಂಕೇತವಲ್ಲ. ಯಾಕೆಂದರೆ ದೈವವನ್ನು ಗಂಡೆಂದು ಅಥವಾ ಗಂಡನೆಂದು ಕಲ್ಪಿಸಿಕೊಂಡ ಅಕ್ಕನ ಕಣ್ಣಿಗೆ, ಆತ ಸರ್ವೇಂದ್ರಿಯ ಸಾಕಾರ ಸುಂದರನಾಗಿಯೆ ಕಾಣುತ್ತಾನೆ.[9] ಆತನೊಂದಿಗೆ ಈಕೆ ಒಂದಾಗುವ ಸ್ಥಿತಿ ಕೇವಲ ‘ಬಯಲ’ ಅಥವಾ ಬೆಳಕಿನ ಅಥವಾ ಕೇವಲ ಜ್ಯೋತಿಯ ಸ್ಥಿತಿ ಮಾತ್ರವಾಗದೆ ಅದು ಉತ್ಕಟವಾದ ಪ್ರಣಯಾನುಭವವಾಗಿದ್ದು, ಶೃಂಗಾರದ ರೂಪಕಗಳ ಮೂಲಕವಾಗಿಯೆ ವರ್ಣಿತವಾಗಿದೆ.

ಅಕ್ಕನ ಅನುಭಾವ ಚೆನ್ನಮಲ್ಲಿಕಾರ್ಜುನನನ್ನು ಕುರಿತ ಕನಸು-ಹಂಬಲ ಹಾಗೂ ತಳಮಳಗಳ ರೂಪದ ಅನ್ವೇಷಣೆಯ ಸ್ವಿತಿಯಾಗಿರುವುದರಿಂದ, ಮುಖ್ಯವಾಗಿ ಅದು ಗಾಢವಾದ ಅಂತರ್ಮುಖ ಪ್ರವೃತ್ತಿಯಾಗಿದೆ. ಬಸವಣ್ಣನವರದು ಮುಖ್ಯವಾಗಿ ಸಮಾಜ ಕ್ಷೇಮ ಕಾತರವಾದ ಬಹಿರ್ಮುಖ ಪ್ರವೃತ್ತಿ; ಅಲ್ಲಮನದಾದರೋ ಇದ್ದೂ ಇಲ್ಲದಂತಹ ನೆಲೆಯಲ್ಲಿ ಸಂಚರಿಸುತ್ತಾ, ಈ ಎಲ್ಲವನ್ನೂ ಮೀರಿದ ಒಂದು ಊರ್ಧ್ವಮುಖ ಪ್ರವೃತ್ತಿ. ಅಕ್ಕನದು ಅಂತರ್ಮುಖ ಪ್ರವೃತ್ತಿಯಾದುದರಿಂದ ಸಮಾಜ ಸುಧಾರಣಾ ಪರವಾದ ಕಾಳಜಿಗಳು ಅವಳಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಆಕೆ ತನ್ನೊಂದಿಗೆ ತಾನು ಮಾತನಾಡಿಕೊಂಡಿದ್ದೆಲ್ಲ ಅದ್ಭುತವಾದ ಭಾವಗೀತೆಯ ಗುಣವನ್ನು ಪ್ರಕಟಿಸುತ್ತದೆ. ಆಗಾಗ ಆಕೆ ಲೋಕದೊಂದಿಗೆ ಮಾತನಾಡಿದರೂ ಅದು ತನ್ನ ಧೈರ್ಯಕ್ಕೆ, ಸಮಾಧಾನಕ್ಕೆ ಹಾಗೂ ತನ್ನ ನಡವಳಿಕೆಯ ಸಮರ್ಥನೆಗೆ. ತಾನೊಲಿದ ಗಂಡನೊಂದಿಗೆ ತನಗೆ ಒದಗಿದ ವಿರಹ ಹಾಗೂ ಆತನೊಂದಿಗೆ ತಾನು ಒಂದಾಗುವ ಉತ್ಕಟವಾದ ಹಂಬಲದ ಪ್ರಯಾಣದ ಉದ್ದಕ್ಕೂ ಅವಳು ಆಡುವ ಮಾತೆಲ್ಲ ಭಾರತೀಯ ಪ್ರೇಮಕಾವ್ಯದ ವಿರಹಗೀತೆಗಳ ಮಾದರಿಗಳಂತಿವೆ.[10] ಅವಳ ವಚನಗಳಲ್ಲಿ ಉತ್ಕಟವಾದ ಶೃಂಗಾರ ಭಾವದ ಅನೇಕ ಕ್ಷಣಗಳು ದಾಖಲಾಗಿವೆ. ಈ ಅರ್ಥದಲ್ಲಿ ಅಕ್ಕಮಹಾದೇವಿ ಕನ್ನಡದ ಮೊದಲ ಹಾಗೂ ಮೊದಲ ದರ್ಜೆಯ ಕವಯಿತ್ರಿಯಾಗಿದ್ದಾಳೆ.

ಅಕ್ಕ ಏಕಾಂಗಿಯಾದ, ಆದರೆ ನಿಜವಾಗಿಯೂ ಧೀರಳಾದ ಹೆಣ್ಣು.[11] ಲೋಕದ ನಿಂದೆ, ಅಪವಾದ ಇತ್ಯಾದಿಗಳ ಬಗ್ಗೆ ಒಂದಿಷ್ಟೂ ತಲೆಕೆಡಿಸಿಕೊಂಡವಳಲ್ಲ. ನಿಜವಾದ ಆಧ್ಯಾತ್ಮ ಸಾಧಕರಲ್ಲಿ ಕಂಡು ಬರುವ ನಿರ್ಭಯತೆ ಆಕೆಯ ವ್ಯಕ್ತಿತ್ವದ ಲಕ್ಷಣವಾಗಿದೆ. ಆದರೆ ಆಕೆಯ ಈ ಧೈರ್ಯ ಲೋಕದ ಲಜ್ಜೆಯ ಗಡಿಯನ್ನೂ ದಾಟುವ ದಿಗಂಬರತ್ವ ಅಥವಾ ಬತ್ತಲೆತನವನ್ನು ಕೈಕೊಳ್ಳುವಷ್ಟು ಮುಂದುವರಿದಿತ್ತೆ ಅಥವಾ ಬೇರೆ ಮಾತಿನಲ್ಲಿ ಹೇಳುವುದಾದರೆ,ಅನೇಕರು ಭಾವಿಸಿರುವಂತೆ ಅಕ್ಕ ಬಟ್ಟೆಯ ಹಂಗನ್ನು ಕಿತ್ತೊಗೆದು, ಕೇಶರಾಶಿಯಿಂದ ತನ್ನ ದಿಗಂಬರತ್ವವನ್ನು ಮರೆಮಾಡಿಕೊಂಡು ಸಂಚರಿಸಿದಳೆ ಎನ್ನುವ ಸಂಗತಿ ತುಂಬ ವಿಲಕ್ಷಣವಾಗಿದೆ. ನಮ್ಮ ಮಟ್ಟಿಗೆ   ಹೇಳುವುದಾದರೆ ಇದೊಂದು ತೀರಾ ಅಸಂಭಾವ್ಯವೂ, ಅಸಂಬದ್ಧವೂ ಆದ ಕಲ್ಪನೆಯಾಗಿದೆ. ಹನ್ನೆರಡನೆಯ ಶತಮಾನದಷ್ಟು ಹಿಂದಿನ ಆ ಪರಿಸರದಲ್ಲಿ ಹೆಣ್ಣೊಬ್ಬಳು, ಅವಳೆಂಥ ಅನುಭಾವಿ- ಯಾಗಿದ್ದರೂ, ಬೆತ್ತಲೆಯಾಗಿ ಕೂದಲನ್ನು ಮರೆಮಾಡಿಕೊಂಡು ಸಂಚರಿಸಿದಳೆಂಬುದು, ಅತ್ಯಂತ ಅಸಂಗತವೂ ಅನುಚಿತವೂ ಆದ ಭ್ರಮಾಕಲ್ಪನೆಯಾಗಿ ಮಾತ್ರ ತೋರುತ್ತದೆ. ಈ ನಡವಳಿಕೆ ವೀರಶೈವ ಧರ್ಮಕ್ಕೆ ಸಂಪೂರ್ಣ ವಿರುದ್ಧ ಮಾತ್ರವಲ್ಲ; ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕೂಡ ಹೆಣ್ಣಿಗೆ ಕ್ಷೇಮಕರವಾದದ್ದಲ್ಲ.

ಈ ಕುರಿತು ಮೊದಲು ನಾವು ಗಮನಕ್ಕೆ ತೆಗೆದುಕೊಳ್ಳಬೇಕಾದದ್ದು ಅಂದಿನ ಸಮಕಾಲೀನ ವಚನಕಾರ್ತಿಯರ ಪ್ರತಿಕ್ರಿಯೆಗಳನ್ನು. ಅಕ್ಕನ ಸಮಕಾಲೀನರಾದ ಯಾವ ವಚನಕಾರ್ತಿಯರ ಯಾವ ವಚನಗಳಲ್ಲಿಯೂ ಈ ಕುರಿತು ಒಂದಾದರೂ ಪ್ರತಿಕ್ರಿಯೆ ದಾಖಲಾಗಿಲ್ಲವಲ್ಲ! ಹಾಗೆಯೇ ಇತರ ಅನೇಕ ವಚನಕಾರರ ವಚನಗಳಲ್ಲಿ ಅಕ್ಕನ ಬತ್ತಲೆತನದ ಬಗ್ಗೆ ಒಂದಾದರೂ ಉಲ್ಲೇಖಗಳಿಲ್ಲವಲ್ಲ.[12]

ಅಕ್ಕನ ಸಮಕಾಲೀನರಾದ ಪ್ರಮುಖ ವಚನಕಾರರ ಹಾಗೂ ವಚನಕಾರ್ತಿಯರ ಅನಂತರ, ಅಕ್ಕನ ಬದುಕನ್ನು ಕುರಿತು ಮೊಟ್ಟ ಮೊದಲು ‘ಮಹಾದೇವಿಯಕ್ಕಗಳ ರಗಳೆ’ ಎಂಬ ಕಾವ್ಯವನ್ನು ಬರೆದ ಹರಿಹರನು ಕೂಡ ಆಕೆ ಬತ್ತಲೆಯಾಗಿ ನಡೆದಳೆಂದು ಹೇಳಿಲ್ಲ. ಆದರೆ ಹರಿಹರನೊಬ್ಬನ ಹೊರತು ಮುಂದಿನವರೆಲ್ಲರೂ ಆಕೆ ದಿಗಂಬರಗಳಾಗಿದ್ದಳೆಂದೂ, ಕೂದಲಿನಿಂದ ತನ್ನ ಮೈಯ್ಯುನ್ನು ಮರೆಮಾಡಿಕೊಂಡಿದ್ದಳೆಂದೂ ವರ್ಣಿಸಿದ್ದಾರೆ. ಆದರೆ ಈ ಸಂಗತಿಯನ್ನು  ಕುರಿತ ಹರಿಹರನ ಕಾವ್ಯದ ಸಂದರ್ಭವೆ ಈ ಬಗೆಯ ತಪ್ಪು ಗ್ರಹಿಕೆಗೆ ಆಸ್ಪದವನ್ನು ಕಲ್ಪಿಸುವಷ್ಟು ಸಂದಿಗ್ಧವಾಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಅಕ್ಕ ಮೂರು ಷರತ್ತುಗಳ ಮೇರೆಗೆ ಕೌಶಿಕನನ್ನು ಮದುವೆಯಾಗಿ, ಅವನೊಡನೆ ಅರಮನೆಯಲ್ಲಿ ಕೆಲವು ಕಾಲ ಇದ್ದಳೆಂದು ಚಿತ್ರಿಸುವ ಹರಿಹರ, ಮೂರು ಷರತ್ತುಗಳನ್ನೂ ಉಲ್ಲಂಘಿಸಿದ ಕೌಶಿಕನ ಸಹವಾಸವನ್ನು ಮಹಾದೇವಿ ಬಿಟ್ಟು ಹೊರಟ ಸಂದರ್ಭವನ್ನು ಕುರಿತು ಹೀಗೆ ವರ್ಣಿಸಿದ್ದಾನೆ : ಒಂದು ದಿನ ಅರಮನೆಗೆ ಮಹಾದೇವಿಯ ಆರಾಧ್ಯ ದೇವರಾದ ಗುರುಗಳು ಬಂದಾಗ, ಸೆಜ್ಜೆ ಮನೆಯಿಂದ ಸಂಭ್ರಮದಿಂದ ನಮಸ್ಕರಿಸಲು ಧಾವಿಸಿದ ಮಹಾದೇವಿಗೆ ಗುರುಗಳು ‘ಮಗಳೆ ದುಕೂಲಮಂ ಬಾಸಣಿಸಿಕೊಳ್’ (ಮಗಳೆ ಬಟ್ಟೆಯನ್ನುಟ್ಟುಕೋ) ಎನ್ನಲಾಗಿ, ಆಕೆ ತನ್ನ ವಸ್ತ್ರಗಳ ಕಡೆ ಕೈಚಾಚಿದಾಗ ಕೌಶಿಕನು ‘ತೆಗೆ ತೆಗೆ ನಿನಗೇನ್ ಅತ್ಯಂತ ಭಕ್ತೆಗೆ, ಮೀರಿದ ವಿರಕ್ತೆಗೆ ಸೀರೆಯೇಕೆಂದು ಕೈಯ್ಯ ದುಕೂಲಮಂ ಸೆಳೆಯಲು, ಹಾ ಮೂರು ತಪ್ಪು ತೀರ್ದುದು ಎನ್ನಿಚ್ಛೆ ಸಾರ್ದುದು ಭವಿ ಸಂಗವೊಳಸೋರ್ದುದು ವಿರಕ್ತಿ ನಿಮಿರ್ದುದು ನಿಷ್ಠೆಯುಳಿದುದು ಬರ್ದುಂಕಿದೆನ್ ಎನ್ನುತ್ತೆ ಆಶಾರಹಿತೆ ಕೇಶಾಂಬರಿಯಾಗಿ ತಿರುಗಿ ಬಂದು ಧವಳಾರದೊಳಗಿರ್ದ ಚೆನ್ನಮಲ್ಲಿಕಾರ್ಜುನನ ಕರಸ್ಥಳದೊಳ್ ಬಿಜಯಂಗೆಯ್ಸಿಕೊಂಡು….. ಮಹಾದೇವಿ ಪುರಮಂ ಪೊರಮಟ್ಟು ಶ್ರೀಪರ್ವತಾಭಿ- ಮುಖಿಯಾದಳ್.’[13]

ಹರಿಹರನ ಅನಂತರ ಶರಣರ ವಚನಗಳ ಆಧಾರದಿಂದ ಶೂನ್ಯ ಸಂಪಾದನೆಯನ್ನು ಕಟ್ಟುವ ಅದ್ಭುತ ನಾಟಕೀಯ ತಂತ್ರವನ್ನು ಆವಿಷ್ಕಾರ ಮಾಡಿದ, ಮೊದಲ ‘ಶೂನ್ಯ ಸಂಪಾದನಕಾರ’ನಾದ ಶಿವಗಣ ಪ್ರಸಾದಿ ಮಹಾದೇವಯ್ಯನು (ಸು. ೧೪೬೦) ಅಕ್ಕಮಹಾದೇವಿಯು ಕಲ್ಯಾಣಕ್ಕೆ ಬಂದ ಸಂದರ್ಭವನ್ನು ಚಿತ್ರಿಸುತ್ತ-

‘ದಿಗಂಬರದುಡಿಗೆಯನುಟ್ಟು ಕೇಶವೆಂಬ ಅಂಬರವಂ ಮುಸುಕಿಟ್ಟು
ಕರಸ್ಥಲದೊಳಿರ್ಪ ಇಷ್ಟಲಿಂಗದೊಳ್ ದೃಷ್ಟಿನಟ್ಟು, ಭಾವಕಱಿ
ಗೊಂಡು ಲೌಕಿಕದ ಲಜ್ಜಾಭಿಮಾನಮಂ ತೊಱೆದು
ಭವಸಾಗರಮಂ ದಾಂಟಿ ಚೆನ್ನಮಲ್ಲಿಕಾರ್ಜುನನ
ವಿಕಳಾವಸ್ಥೆಯೊಳು ತನ್ನ ಮಱೆದು’
[14]

ಎಂದು ವರ್ಣಿಸುತ್ತಾನೆ. ಹರಿಹರನಲ್ಲಿ ಆಕೆ ಶಯ್ಯಾಗೃಹದಲ್ಲಿ ಬೆತ್ತಲೆಯಾಗಿದ್ದುದು, ಅನಂತರ ಕೌಶಿಕ ‘ತೆಗೆ ತೆಗೆ ನಿನಗೆ ಸೀರೆಯೇಕೆ’ ಎಂದದ್ದು, ಆಮೇಲೆ ಆಕೆ ಕೇಶಾಂಬರಿಯಾಗಿ ತಿರುಗಿ ಬಂದು’ ಇಷ್ಟಲಿಂಗವನ್ನು ಕೈಗೆತ್ತಿಕೊಂಡು ಪುರವನ್ನು ಬಿಟ್ಟು ಶ್ರೀಶೈಲಾಭಿಮುಖವಾಗಿ ಹೊರಟದ್ದು, ಇದೆಲ್ಲವೂ ಶಿವಗಣ ಪ್ರಸಾದಿ ಮಹಾದೇವಯ್ಯನ ಗ್ರಹಿಕೆಯಲ್ಲಿ ತಪ್ಪಾಗಿ ಭಾವಿತವಾಗಿ, ಅಕ್ಕ ‘ದಿಗಂಬರದುಡಿಗೆಯನುಟ್ಟು ಕೇಶವೆಂಬ ಅಂಬರಮಂ ಮುಸುಕಿಟ್ಟು’ ಬಂದಳೆಂಬ ವರ್ಣನೆಯಾಗಿ ಮಾರ್ಪಟ್ಟು ಮುಂದಿನ ಕೃತಿಕಾರರನ್ನು ದಾರಿ ತಪ್ಪಿಸಿತೆಂದು ತೋರುತ್ತದೆ. ಮುಂದಿನ ಎಲ್ಲರೂ ಅಕ್ಕ ದಿಗಂಬರೆಯಾಗಿ, ಕೇಶವನ್ನು ಮುಸುಕಿಟ್ಟು ಸಂಚರಿಸಿದಳೆಂದೇ ಚಿತ್ರಿಸಿದರು. ಮುಂದಿನ ಶೂನ್ಯ ಸಂಪಾದನಕಾರರು ಕಲ್ಯಾಣದ ಅನುಭವ ಮಂಟಪಕ್ಕೆ ಹೀಗೆ ದಿಗಂಬರೆಯೂ ಕೇಶಾಂಬರೆಯೂ ಆಗಿ ಬಂದ ಅಕ್ಕನನ್ನು, ಪ್ರಭುವು ನಾನಾ ಬಗೆಯಲ್ಲಿ ಪ್ರಶ್ನೆ ಮಾಡಿ, ನೀನು ನಿಜವಾಗಿಯೂ ಅನುಭಾವಿಯಾದ ಪಕ್ಷದಲ್ಲಿ ಹೀಗೆ ಕೂದಲನ್ನು ಯಾಕೆ ಮರೆಮಾಡಿದ್ದೀಯೆ ಎಂದು ಕೇಳಿದಂತೆಯೂ, ಅದಕ್ಕೆ ಅಕ್ಕ ಸಮರ್ಪಕವಾದ ಉತ್ತರವನ್ನು ಕೊಟ್ಟಂತೆಯೂ ಅದ್ಭುತವಾದ ನಾಟ್ಯಮಯ ಸಂದರ್ಭವನ್ನು ಚಿತ್ರಿಸಿದ್ದಾರೆ.[15] ಮುಂದೆ ಜನಮನದಲ್ಲಿ ಅಕ್ಕನನ್ನು ಕುರಿತು ಈ ‘ಕೇಶಾಂಬರೆ’ ಯಾದ ಚಿತ್ರವೇ ಸ್ಥಾಯಿಯಾಗಿ ಉಳಿದು ಬಂದಿದೆ; ಚಿತ್ರಕಾರರು ಅಕ್ಕಮಹಾದೇವಿಯನ್ನು ಹೀಗೆಯೇ ಚಿತ್ರಿಸಿದ್ದಾರೆ. ಆದರೆ, ಹೆಣ್ಣೊಬ್ಬಳು ಈ ಬಗೆಯ ‘ಅವಸ್ಥೆ’ಯಲ್ಲಿ ಇದ್ದಳೆಂಬುದು ಎಷ್ಟು ಸಂಭಾವ್ಯ ಹಾಗೂ ಉಚಿತ ಎಂಬುದರ ಬಗ್ಗೆ ಬಹು ಜನ ಗಂಭೀರವಾಗಿ ವಿಚಾರ ಮಾಡಿದಂತೆ ತೋರುವುದಿಲ್ಲ.

ಈ ಹಿನ್ನೆಲೆಯಲ್ಲಿ ದಿವಂಗತ ಶ್ರೀ ಎಚ್. ದೇವೀರಪ್ಪನವರು ಕೆಲವು ವರ್ಷಗಳ ಹಿಂದೆ ಬರೆದ ‘ಕೇಶಾಂಬರೆಯೆ ದಿಗಂಬರೆಯೆ’ ಎಂಬ ಸಂಶೋಧನ ಬರೆಹವೊಂದರ ವಿಚಾರ ಸರಣಿಯನ್ನು ಗಮನಿಸುವುದು ಅಗತ್ಯವಾಗಿದೆ.[16] ಅವರು ಮುಖ್ಯವಾಗಿ ಹರಿಹರನಲ್ಲಿ ಬರುವ ‘ಕೇಶಾಂಬರೆ’ ಎಂಬ ಮಾತನ್ನು ಅರ್ಥೈಸಿರುವ ಕ್ರಮವು ತರ್ಕಬದ್ಧವಾಗಿದೆ ಎಂಬುದು ನಮ್ಮ ಅಭಿಪ್ರಾಯ ಕೂಡ. ಅಕ್ಕಮಹಾದೇವಿ ಕೌಶಿಕನ ಅರಮನೆಯನ್ನು ಬಿಟ್ಟು ಹೋಗುವಾಗ ‘ಕೇಶಾಂಬರೆಯಾಗಿ ತಿರುಗಿ ಬಂದು….. ಪರ್ವತಾಭಿಮುಖಿಯಾಗಿ ನಡೆತಂದಳ್’ ಎಂಬ ವರ್ಣನೆಯಿದೆಯಷ್ಟೆ. ಕೌಶಿಕನನ್ನು ಕೊಟ್ಟಕೊನೆಯದಾಗಿ ತಿರಸ್ಕರಿಸಿದಾಗ, ಆಕೆ ‘ಕೇಶಾಂಬರೆಯಾಗಿ ತಿರುಗಿ ಬಂದು’ (ಅಂದರೆ ಅರಮನೆಯ ಒಂದು ಭಾಗದಿಂದ ಕೇಶಾಂಬರೆಯಾಗಿ ಹಿಂದಕ್ಕೆ ಪೂಜಾ ಗೃಹಕ್ಕೆ ಬಂದು) ‘ಚೆನ್ನಮಲ್ಲಿಕಾರ್ಜುನನಂ ಕರಸ್ಥಲದೊಳ್ ಬಿಜಯಂಗೈಯ್ಸಿಕೊಂಡು’ ಪುರವನ್ನು ಬಿಟ್ಟು ಹೊರಟಳೆಂಬುದು ಇಲ್ಲಿನ ಉಲ್ಲೇಖವಾಗಿದೆ. “ಕೇಶಾಂಬರೆ ಎಂಬ ಪದಕ್ಕೆ ಕೇಶದಿಂದ ಮಾಡಿದ ಬಟ್ಟೆಯನ್ನು ಧರಿಸಿದವಳು ಎಂದು ಅರ್ಥ ಮಾಡಬೇಕಾಗುತ್ತದೆ” ಎನ್ನುತ್ತಾರೆ ದೇವೀರಪ್ಪನವರು. ಈ ಸಂದರ್ಭದಲ್ಲಿ ಇದೇ ಪದವನ್ನು ಬಳಸಲಾದ ಇನ್ನೂ ಒಂದೆರಡು ಉಲ್ಲೇಖಗಳ ಕಡೆ ಅವರು ಗಮನವನ್ನು ಸೆಳೆದಿದ್ದಾರೆ. ಹರಿಹರನ ‘ಅಕ್ಕಮಹಾದೇವಿಯ ರಗಳೆ’ಯಲ್ಲಿಯೆ, ಏಳನೆಯ ಸ್ಥಳದಲ್ಲಿ-

ಬರುತಿರ್ದಳತಿ ಭಕ್ತೆಯುಡುತಡಿಯ ಮಹಾದೇವಿ
ಪರಮ ವೈರಾಗ್ಯ ರಸವೆಯ್ದೆ ತನುವಂ ತೀವಿ
ನಿಷ್ಠೆ ಪಾದದ ರಕ್ಷೆಯಾಗುತಿರೆ ನಡೆಯುತುಂ
ಉಟ್ಟ ಕೇಶಾಂಬರಂ ದಟ್ಟಯಿಸಿ ಮೆರೆಯುತುಂ

ಎಂಬಲ್ಲಿ ‘ಉಟ್ಟ ಕೇಶಾಂಬರಂ’ ಎಂಬ ಮಾತನ್ನು ಗಮನಿಸಬೇಕು. ಹಾಗೆಯೇ ಹರಿಹರನ ‘ಕೇಶಿರಾಜದಂಡನಾಯಕನ ರಗಳೆ’ಯಲ್ಲಿಯೂ ಆತ ಮಂತ್ರಿ ಪದವಿಯನ್ನು ತ್ಯಜಿಸಿ ಹೊರಟ ಸಂದರ್ಭವನ್ನು ಚಿತ್ರಿಸುವಾಗ-

ಆಸೆಗೆಡೆಗೊಡದೆ ತನ್ನಯ ವಸ್ತ್ರಮಂ ಬಿಟ್ಟು
ಆಶಾಂಬರನ ಸುತಂ ಕೇಶಾಂಬರವನುಟ್ಟು

ಎಂಬ ವರ್ಣನೆಯಿದೆ. ಈ ಎರಡು ಸಂದರ್ಭಗಳಲ್ಲಿಯೂ ‘ಕೇಶಾಂಬರ’ ಎಂದರೆ ಕೇಶದಿಂದ ಅಂದರೆ, ಉಣ್ಣೆಯ ನೂಲಿನಿಂದ ಮಾಡಿದ ಬಟ್ಟೆ ಅಥವಾ ಗೊಂಗಡಿ ಅಥವಾ ಕರಿಯ ಕಂಬಳಿಯ ನಿಲುವಂಗಿ ಎಂದು ಅರ್ಥವೇ ಹೊರತು, ಕೂದಲನ್ನು ಮರೆ ಮಾಡಿಕೊಂಡ ಬೆತ್ತಲೆಯ ಸ್ಥಿತಿ ಎಂದು ಅರ್ಥವಾಗುವುದಿಲ್ಲವೆಂದು ದೇವೀರಪ್ಪನವರು ವ್ಯಾಖ್ಯಾನಿಸುತ್ತಾರೆ. ಈಗಲೂ ಹಿಮಾಲಯದ ಪರಿಸರದಲ್ಲಿ ಕರಿಯ ಕಂಬಳಿಯ ನಿಲುವಂಗಿ ತೊಟ್ಟ ಸಾಧುಗಳಿದ್ದಾರೆ. ‘ಕಾಲಿ ಕಂಬಳಿವಾಲಾ’ ಅನ್ನುವ ಸನ್ಯಾಸಿಯ ಹೆಸರು ಇಂದಿಗೂ ಪ್ರಸಿದ್ಧವಾಗಿದೆ. ಈ ಹಿನ್ನೆಲೆಯಿಂದ ನೋಡಿದಾಗ ‘ತೆಗೆ ತೆಗೆ ನಿನಗೇನು? ಅತ್ಯಂತ ಭಕ್ತೆಗೆ ಮೀರಿದ ವಿರಕ್ತೆಗೆ ಸೀರೆಯೇಕೆ’ ಎಂದು ಕೌಶಿಕನು ವ್ಯಂಗ್ಯವಾಗಿ ಮೂದಲಿಸಿದಾಗ, ಆಕೆಗೆ ಎಲ್ಲ ವಸ್ತ್ರಗಳ ಬಗೆಗೂ ಜುಗುಪ್ಸೆಯುಂಟಾಗಿ ‘ಕೇಶಾಂಬರ’ವನ್ನು, ಅಂದರೆ ಕರಿಯ ಕಂಬಳಿಯಿಂದ ಮಾಡಿದ ಉಡುಗೆಯನ್ನು ಧರಿಸಿ[17] ಅರಮನೆ ಹಾಗೂ ನಗರವನ್ನು ಬಿಟ್ಟು ಹೊರಟಿರಬೇಕು. ಆದಕಾರಣ ಅಕ್ಕಮಹಾದೇವಿ ‘ಕೇಶಾಂಬರೆ’ ಯಾಗಿದ್ದಳೆಂದರೆ ತನ್ನ ತಲೆ ಕೂದಲನ್ನು ಮರೆಮಾಡಿಕೊಂಡು ಬೆತ್ತಲೆಯ ಸ್ಥಿತಿಯಲ್ಲಿದ್ದಳೆಂದು ಅರ್ಥಮಾಡುವುದು ತೀರಾ ಅಸಂಗತವಾದ ಕಲ್ಪನೆ ಎನ್ನುವುದರಲ್ಲಿ ಸಂದೇಹವಿಲ್ಲ ಮತ್ತು ‘ಬೆತ್ತಲೆ’ ಎಂದರೆ ಕೇವಲ ಶಾರೀರಿಕವಾದ ಒಂದು ವಸ್ತ್ರಹೀನ ಸ್ಥಿತಿ ಎಂದು ವಾಚ್ಯವಾಗಿ ಭಾವಿಸುವುದಕ್ಕಿಂತ, ಎಲ್ಲ ಬಗೆಯ ಆವರಣಗಳನ್ನೂ ಕಳಚಿಕೊಂಡ ವ್ಯಕ್ತಿತ್ವದ ಒಂದು ನಿಲುವು ಎಂದು ಸಾಂಕೇತಿಕವಾಗಿ ಗ್ರಹಿಸುವುದೂ ಅಗತ್ಯವಾಗಿದೆ.

‘ಎಳೆಯಂದಿನಲ್ಲಿ ತಂದೆ ತಾಯಂದಿರ, ಯೌವನದಲ್ಲಿ ಕೈಹಿಡಿದ ಗಂಡನ, ಮುಪ್ಪಿನಲ್ಲಿ ಮಕ್ಕಳ ರಕ್ಷಣೆಯಲ್ಲಿ ಇರಬೇಕಾದ ಹೆಣ್ಣು, ಸ್ವಾತಂತ್ರ್ಯಕ್ಕೆ ಅರ್ಹಳಲ್ಲ’ ಎಂಬ ಮನು ಧರ್ಮ ಸೂತ್ರವು ನಿಯಂತ್ರಿಸಿದ ಸಾಂಸಾರಿಕ ಚೌಕಟ್ಟನ್ನು ದಾಟಿ, ಹೆಣ್ಣಿಗೆ ಇದರಿಂದಾಚೆಯ ಬೇರೊಂದು ಅಸ್ತಿತ್ವವೂ ವ್ಯಕ್ತಿತ್ವವೂ ಉಂಟು ಎಂಬುದನ್ನು ತನ್ನ ವೈಚಾರಿಕತೆ ಹಾಗೂ ದಿಟ್ಟತನದ ನಡವಳಿಕೆಯ ಮೂಲಕ ಸಾಧಿಸಿ ತೋರಿಸಿದ ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದ ಶರಣ ಚಳುವಳಿಯ ನಡುವೆ ಒಂದು ವಿಶಿಷ್ಟವೂ ಭಿನ್ನವೂ ಆದ ನಿಲುವಿನಿಂದ ಹೆಣ್ತನದ ಘನತೆ ಗೌರವಗಳ ಪ್ರತೀಕವಾಗಿದ್ದಾಳೆ.

(೧೯೯೨)

* * *


[1] ಅಜಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೆ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೆ?
ನಡುಮುರಿದು ಗುಡುಗೂರಿ ತಲೆ ನಡುಗಿದವರೆಲ್ಲರೂ ಹಿರಿಯರೆ?
ನೆರೆತೆರೆ ಹೆಚ್ಚಿ ಒಂದನಾಡಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲ ಹಿರಿಯರೆ?
ಅರಿವರಿತು ಘನವ ಬೆರಸಿ ಹಿರಿದು ಕಿರಿದೆಂಬ ಭೇದವ ಮರೆತು
ಕೂಡಲಸಂಗಯ್ಯನಲ್ಲಿ ಬೆರಸಿ ಬೇರಿಲ್ಲದಿಪ್ಪ ಹಿರಿಯತನ ನಮ್ಮ ಮಹದೇವಿಯಕ್ಕಂಗಾಯಿತ್ತು     (ವ. ೩೪೦).

[2] ಆದ್ಯರ ಅರುವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ ಕೂಡಲಚೆನ್ನಸಂಗಯ್ಯನಲ್ಲಿ
ಮಹದೇವಿಯಕ್ಕಗಳ ಒಂದು ವಚನ ನಿರ್ವಚನ ಕಾಣಾ…… (ವ. ೫೪೬)
(ಚೆನ್ನಬಸವಣ್ಣನವರ ವಚನಗಳು : ಸಂ. ಡಾ.ಆರ್.ಸಿ. ಹಿರೇಮಠ, ಕ.ವಿ.ವಿ., ಧಾರವಾಡ)

[3] ಡಾ.ಎಲ್. ಬಸವರಾಜು : ಅಕ್ಕನ ವಚನಗಳು (೧೯೭೨) ವ. ೧೪೭.

[4] ಅಲ್ಲೇ. ವ. ೨೨೭.

[5] ‘ಶರಣಸತಿ ಲಿಂಗಪತಿ’ ಎಂಬ ಈ ಮಾತು ವೀರಶೈವ ಧರ್ಮದ ಭಕ್ತಿಯ ಸ್ವರೂಪವನ್ನು  ಹೇಳುವ ಆಲಂಕಾರಿಕವಾದ ಉಕ್ತಿಯಾಗುವುದಾದರೆ ತೊಂದರೆಯಿಲ್ಲ. ಆದರೆ ಎಲ್ಲ ಶರಣರೂ- ಗಂಡಾಗಲಿ-ಹೆಣ್ಣಾಗಲಿ-ತಾವೆಲ್ಲ ಸತಿಯರೇ ಎಂಬ ಭಾವದಲ್ಲಿ ನಿಲ್ಲುವುದು ಮುಖ್ಯ ಎಂಬ ಅಭಿಪ್ರಾಯವನ್ನು ಇದು ಸೂಚಿಸುವುದಾದರೆ ಸ್ವಲ್ಪ ಗೊಂದಲಕ್ಕೆ ಕಾರಣವಾಗುತ್ತದೆ. ಈ ನುಡಿಗಟ್ಟು ವಚನ ವಾಙ್ಮಯದಲ್ಲಿ ಎಷ್ಟು ಸಲ ಬರುತ್ತದೆ ಎಂಬುದನ್ನು ಲೆಕ್ಕ ಹಾಕಿದರೆ, ಇದು ವಾಸ್ತವವಾಗಿ ಈ ಧರ್ಮದ ಮುಖ್ಯ ತಾತ್ವಿಕ ನಿಲುವು ಹೌದೆ ಅಲ್ಲವೆ ಎಂಬುದು ತಿಳಿಯುತ್ತದೆ. ಅಕ್ಕನ ವಚನಗಳಲ್ಲಿಯೇ ಕಾಣಿಸುವ ‘ಶರಣಸತಿ ಲಿಂಗಪತಿ’ ಎಂಬ ಮಾತು (ವಚನ ಸಂಖ್ಯೆ ೪೭; ೧೧೧: ಎಲ್. ಬಸವರಾಜು; ವಚನ ಸಂಖ್ಯೆ ೨೪೪. ಡಾ. ಆರ್. ಸಿ. ಹಿರೇಮಠ), ಇರುವ ವಚನಗಳೆಲ್ಲ ಶೂನ್ಯ ಸಂಪಾದನೆಯಿಂದ, ಲಿಂಗಚಿದಮೃತ ಬೋಧೆ ಇತ್ಯಾದಿಗಳಿಂದ ಎತ್ತಿಕೊಂಡವು. ಇನ್ನು ನಾನು ಸುಮ್ಮನೆ ಕಣ್ಣಾsಡಿಸಿದಾಗ ಶಿವಶರಣೆಯರ ವಚನಗಳಲ್ಲಿ (ಅಕ್ಕ ನಾಗಮ್ಮನ ಒಂದು ವಚನವನ್ನು ಬಿಟ್ಟರೆ-ವ ೧೬೦ ಡಾ. ಆರ್. ಸಿ.ಹಿರೇಮಠ) ಈ ನುಡಿಗಟ್ಟು ನನಗೆ ದೊರೆಯಲಿಲ್ಲ. ಸತಿಪತಿಭಾವವನ್ನು ಸ್ಥಾಯಿಯನ್ನಾಗಿಸಿಕೊಂಡ ಉರಿಲಿಂಗ ದೇವನಲ್ಲೂ ಇಲ್ಲ. ಆದರೆ ಬಸವಣ್ಣನವರ ವಚನ ಸಂಖ್ಯೆ ೫೦೪ ಮತ್ತು ೭೦೪ರಲ್ಲಿ (ಶಿ.ಶಿ. ಬಸವನಾಳ) ಮತ್ತು ಚೆನ್ನಬಸವಣ್ಣನವರ ವಚನ ಸಂಖ್ಯೆ ೩೧೯, ೩೩೨, ೧೦೬೧, ೧೧೪೬, ೧೨೪೨, ೧೨೫೩, (ಡಾ. ಆರ್.ಸಿ. ಹಿರೇಮಠ) ಇವುಗಳಲ್ಲಿ ‘ಶರಣ ಸತಿ ಲಿಂಗಪತಿ’ ಎಂಬ ನುಡಿಗಟ್ಟು ಕಾಣುತ್ತದೆ.

[6] ೧. ಅರಿಸಿನವನೆ ಮಿಂದು
ಹೊಂದೊಡಿಗೆಯನೆ ತೊಟ್ಟು
ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯ.            (ವ. ೨೬೯)

೨. ಗಿಳಿಯ ಹಂಜರವಿಕ್ಕಿ
ಸೊಡರಿಂಗೆಣ್ಣೆಯನೆರೆದು
ಬರವ ಹಾರೈಸುತಿದ್ದೆನೆಲಗವ್ವಾ
ತರಗೆಲೆ ಗಿರುಕೆನಲು ಹೊರಗನಾಲಿಸುವೆ
ಅಗಲಿದನೆಂದೆನ್ನ ಮನ ಧಿಗಿಲೆಂದಿತ್ತೆಲಗವ್ವಾ.     (೩೭೪)
(ಡಾ. ಆರ್.ಸಿ. ಹಿರೇಮಠ)

[7] ಮಹಾದೇವಿಗೆ ಮದುವೆಯಾಯಿತೆ ಅಥವಾ ಇಲ್ಲವೆ ಎನ್ನುವ ಬಗ್ಗೆ ಅವಳನ್ನು ಕುರಿತು ಬಂದ ಬರೆಹಗಳಲ್ಲಿ ಭಿನ್ನವಾದ ನಿಲುವುಗಳಿವೆ. ಅಕ್ಕನನ್ನು ಕುರಿತ ಮೊದಲ ಕೃತಿ ಹರಿಹರನದು. ಆತ ಮಹದೇವಿಗೆ ಮದುವೆಯಾಯಿತೆಂದೇ ಹೇಳುತ್ತಾನೆ- ಅದು ಕೌಶಿಕನು ಮೂರು ಷರತ್ತುಗಳನ್ನು ಪಾಲಿಸಬೇಕೆಂಬ ಆಕೆಯ ಮಾತಿನ ಮೇರೆಗೆ. ಕೌಶಿಕ ಈ ಷರತ್ತನ್ನು ಮುರಿದಾಗ ಆಕೆ ಆತನನ್ನು ಬಿಟ್ಟು ಹೋಗುತ್ತಾಳೆ. ಚೆನ್ನಬಸವಾಂಕ, ಕೆಂಚವೀರಣ್ಣೊಡೆಯರ ಶೂನ್ಯ ಸಂಪಾದನೆಗಳು ಇದನ್ನೆ ಹೇಳುತ್ತವೆ.

ಆದರೆ ಚಾಮರಸನ ‘ಪ್ರಭುಲಿಂಗ ಲೀಲೆ’ಯಿಂದ ಮೊದಲುಗೊಂಡು, ವಿರೂಪಾಕ್ಷ ಪಂಡಿತ, ಎಳಂದೂರು ಹರೀಶ್ವರ, ಪಾಲ್ಕುರಿಕೆ ಸೋಮನಾಥ, ಹಲಗೆಯದೇವ ಹಾಗೂ ಗೂಳೂರು ಸಿದ್ಧ ವೀರಣ್ಣೊಡೆಯರ ಶೂನ್ಯ ಸಂಪಾದನೆಗಳು- ಆಕೆಗೆ ಮದುವೆಯಾಗಲಿಲ್ಲವೆಂದು ಹೇಳುತ್ತವೆ.

ಈ ಎರಡೂ ಪಕ್ಷಗಳಿಗೆ ಸಮಾನವಾದ ಸಂಗತಿಯೆಂದರೆ, ಆಕೆ ಕೆಲವು ಕಾಲವಾದರೂ ಬಲವಂತದಿಂದ ಕೌಶಿಕನ ಅರಮನೆಯಲ್ಲಿದ್ದಳು ಎನ್ನುವುದು. ನಮ್ಮ ಮಟ್ಟಿಗೆ ಆಕೆಗೆ ಮದುವೆಯಾಯಿತೆ ಇಲ್ಲವೆ ಎಂಬುದು ಮುಖ್ಯವಾದ ಸಮಸ್ಯೆಯೆ ಅಲ್ಲ. ಅವಳು ಮದುವೆಯಾದಳೋ ಬಿಟ್ಟಳೋ ಎಂಬುದು ಅವಳ ವ್ಯಕ್ತಿತ್ವದ ಮಹತ್ತನ್ನು ಗುರುತಿಸಲು ಮಾನದಂಡವೇನಲ್ಲ.

[8] ೧.  ಪಚ್ಚೆಯ ನೆಲೆಗಟ್ಟು ಕನಕದ ತೋರಣ
ವಜ್ರದ ಕಂಬ ಪವಳದ ಚಪ್ಪರವನಿಕ್ಕಿ ಮದುವೆಯ ಮಾಡಿದರು
ನಮ್ಮವರೆನ್ನ ಮದುವೆಯ ಮಾಡಿದರು
ಕಂಕಣ ಕೈದಾರಗಟ್ಟಿ ಸ್ಥಿರ ಸೇಸೆಯನಿಟ್ಟು
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರು.   (ವ. ೭೬ ಬ.)

೨.  ಚೆನ್ನಮಲ್ಲಿಕಾರ್ಜುನಯ್ಯನೆ ಗಂಡ, ಆನು ಚೆನ್ನಮಲ್ಲಿಕಾರ್ಜುನಂಗೆ ಮದವಳಿಗೆ
(ವ.೭೮)

೩.  ಕಂಗಳೊಳಗೆ ತೊಳಗಿ ಬೆಳಗುವ ದಿವ್ಯರೂಪನ ಕಂಡು ಮೈ ಮರೆದೆನವ್ವ
ಇಂತಾಗಿ ಚೆನ್ನಮಲ್ಲಿಕಾರ್ಜುನೆನ್ನ ಮದುವಣಿಗ
ಆನು ಮದುವಣುಗಿ ಕೇಳಾ ತಾಯೆ           (ವ. ೧೦೧ ಬ.)

೪.  ಗುರುವೆ ತೆತ್ತಿಗನಾದ ಲಿಂಗವೆ ಮದುವಳಿಗನಾದ
ನಾನು ಮದುವಳಿಗೆಯಾದೆನು. ಇದು ಕಾರಣ ಚೆನ್ನಮಲ್ಲಿಕಾರ್ಜುನ
ಗಂಡನಾದ ಬಳಿಕ ಮಿಕ್ಕಿನ ಲೋಕದ ಗಂಡರ ಸಂಬಂಧ
ಎನಗಿಲ್ಲವಯ್ಯಾ       (ವ. ೨೫೮ ಬ.)

[9] ೧.  ಹೊಳೆವ ಕೆಂಜೆಡೆಗಳ ಮೇಲೆ ಎಳೆವೆಳುದಿಂಗಳು
ಫಣಿಮಣಿ ಕರ್ಣಕುಂಡಲದವನು ನೋಡವ್ವಾ
ರುಂಡಮಾಲೆಯ ಕೊರಳವನ ಕಂಡರೆ ಒಮ್ಮೆ ಬರಹೇಳವ್ವಾ        (ವ. ೮೬ ಬ)

೨.  ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲಗೊರವನು
ಭಿಕ್ಷಕ್ಕೆ ಬಂದುದ ಕಂಡೆ            (ವ. ೮೭ ಬ)

೩.  ಕಂಗಳೊಳಗೆ ತೊಳಗಿ ಬೆಳಗುವ ದಿವ್ಯರೂಪನ ಕಂಡು ಮೈ ಮರೆದೆನವ್ವ.
ಮಣಿಮಕುಟದ ಫಣಿಕಂಕಣದ ನಗೆಮೊಗದ
ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವಾ.        (ವ. ೧೦೧ ಬ)

೪.  ಹೊಳೆವ ಕೆಂಜಡೆಗಳ ಮಣಿಮಕುಟದ
ಒಪ್ಪುವ ಸುಲಿಪಲ್ಲ ನಗೆಮೊಗದ
ಕಂಗಳ ಕಾಂತಿಯಿಂ ಈರೇಳು ಭುವನಮಂ ಬೆಳಗುವ
ದಿವ್ಯ ಸ್ವರೂಪನ ಕಂಡೆ ನಾನು
ಕಂಡೆನ್ನ ಕಂಗಳ ಬರ ಹಿಂಗಿತ್ತು.  (ವ. ೬೮ ಬ)

[10] ೧.  ಚಿಲಿಪಿಲಿ ಎಂದೋದುವ ಗಿಳಿಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೆ, ನೀವು ಕಾಣಿರೆ
ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೆ ನೀವು ಕಾಣಿರೆ     (ವ. ೭೩)

೨.  ಅಳಿಸಂಕುಳವೇ ಮಾಮರನೇ ಬೆಳುದಿಂಗಳೇ
ನಿಮ್ಮೆಲ್ಲರನು ಒಂದು ಬೇಡುವೆ
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವ ಕಂಡರೆ ಕರೆದು ತೋರಿರೆ  (ವ. ೭೪)

೩.  ಕಳವಳದ ಮನವು ತಲೆಕೆಳಗಾದುದವ್ವಾ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬಿಸಿಲು ಬೆಳುದಿಂಗಳಾಯಿತ್ತು ಕೆಳದಿ          (ವ. ೩೨೧)

೪.  ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂಧ್ಯವ ನೆನೆವಂತೆ
ನೆನೆವೆನಯ್ಯ          (ವ. ೩೧೩)

೫.  ಕಿಚ್ಚಲ್ಲದ ಬೇಗೆಯಲ್ಲಿ ಬೆಂದೆನವ್ವ
ಏರಿಲ್ಲದ ಗಾಯದಲ್ಲಿ ನೊಂದೆನವ್ವ            (ವ. ೬೮)
(ಅಕ್ಕನ ವಚನಗಳು : ಡಾ. ಎಲ್. ಬಸವರಾಜು)

[11] ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು
ಶಯನಕ್ಕೆ ಹಾಳು ದೇಗುಲ ಉಂಟು,
ಚೆನ್ನಮಲ್ಲಿಕಾರ್ಜುನಾ ಆತ್ಮ ಸಂಗಾತಕ್ಕೆ ನೀನೆನಗುಂಟು.    (ವ. ೨೨೬)
ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡಯ್ಯ
ಏನ ಮಾಡಿದರೂ ನಾನಂಜುವವಳಲ್ಲ.
ತರಗೆಲೆಯಮೇಲೊರಗಿ ನಾನಿಹೆನು
ಸುರಗಿಯ ಮೇಲೊರಗಿ ನಾನಿಹೆನು.   (ವ. ೬೪)

[12] ಅಕ್ಕನ ಬತ್ತಲೆತನದ ಉಲ್ಲೇಖ ಮಾಡುವ ಇತ್ತೀಚಿನ ವಚನಗಳ ಬಗ್ಗೆ ಮುಂದೆ ಚರ್ಚಿಸಲಾಗಿದೆ. ಅಷ್ಟೇ ಅಲ್ಲ, ಅಕ್ಕನ ವಚನಗಳಲ್ಲಿಯೆ ತನ್ನ ಬತ್ತಲೆತನದ ಬಗೆಗೆ ಉಲ್ಲೇಖಗಳಿಲ್ಲ (ನೋಡಿ-ವ. ೧೨೪, ೨೧೫ ಮತ್ತು ೨೮೨. ಡಾ. ಎಲ್. ಬಸವರಾಜು)

[13] ಮಹದೇವಿಯಕ್ಕನ ರಗಳೆ. ಹರಿಹರನ ನೂತನ ಪುರಾತನರ ರಗಳೆಗಳು. ಸಂ.ಡಾ. ಎಂ. ಎಸ್. ಸುಂಕಾಪುರ (ಕ.ವಿ.ವಿ. ಧಾರವಾಡ) ಪು. ೧೩೮-೧೩೯.

[14] ಪ್ರಭುದೇವರ ಶೂನ್ಯ ಸಂಪಾದನೆ: ಸಂಪುಟ ೧: ಸಂ. ಡಾ. ಎಲ್. ಬಸವರಾಜು (೧೯೬೯) ಪು. ೧೫೯. ಪ್ರ: ಶ್ರೀ ಬೃಹನ್ಮಠ ಸಂಸ್ಥಾನ, ಚಿತ್ರದುರ್ಗ.

[15] ಅಕ್ಕನ ದಿಗಂಬರತ್ವವನ್ನು ಕುರಿತ ಚರ್ಚೆ-ಪ್ರತಿ ಚರ್ಚೆಯನ್ನು ಬೆಳೆಯಿಸಿದ ‘ಶೂನ್ಯ ಸಂಪಾದನೆ’ಗಳಲ್ಲಿ  ಬಂದಿರುವ ಅಲ್ಲಮನ ಹಾಗೂ ಅಕ್ಕನ ಉಕ್ತಿಗಳು (ವಚನಗಳು) ಈ ಸಂದರ್ಭದ ನಾಟ್ಯಮಯತೆಗಾಗಿ ನಿರ್ಮಿತಿಯಾದವುಗಳೆ ಹೊರತು, ಅವು ಅಲ್ಲಮ ಹಾಗೂ ಅಕ್ಕನ ‘ಮೂಲ ವಚನ’ಗಳಾಗಿರಲಾರವು. ಶೂನ್ಯ ಸಂಪಾದನೆಯೇ ಮೂಲತಃ ವಚನ ವಾಙ್ಮಯದಿಂದ ಆದ ಅನುಸೃಷ್ಟಿ. ಶಿವಗಣ ಪ್ರಸಾದಿ ಮಹಾದೇವಯ್ಯನೇ ಮೊದಲ ಶೂನ್ಯ ಸಂಪಾದನೆಯಲ್ಲಿ ಹೇಳಿಕೊಂಡಿರುವಂತೆ ಅಲ್ಲಮ ಪ್ರಭುದೇವರು, ಬಸವರಾಜದೇವರು ಮುಖ್ಯವಾದ ಅಸಂಖ್ಯಾತ  ಮಹಾಗಣಂಗಳೊಡನೆ ಮಹಾನುಭಾವ ಪ್ರಸಂಗಮಂ ಮಾಡಿ ಶೂನ್ಯ ಸಂಪಾದನೆಯ ಸದ್ಗೋಷ್ಠಿ ಕಥಾ ಪ್ರಸಂಗಮಂ ಮುಕ್ತಕಮಾಗಿರ್ದ ಶಿವಾದ್ವೆ ತ ವಚನಂಗಳನು ಉತ್ತರ-ಪ್ರತ್ಯುತ್ತರವಾಗಿ ಸೇರಿಸಿ……. ಸಮರ್ಪಿಸಿದ’ ಒಂದು ಕೃತಿ. ಆದರೆ ಹೀಗೆ ಉತ್ತರ-ಪ್ರತ್ಯುತ್ತರವಾದ ನಾಟ್ಯಮಯ ಸಂದರ್ಭ ನಿರ್ಮಾಣದಲ್ಲಿ ‘ಕೊಂಡಿ’ಯಾಗಿ ಅನೇಕ ವಚನಗಳನ್ನು ಶೂನ್ಯ ಸಂಪಾದನಕಾರರು ಸೃಷ್ಟಿಸಿರುವ ಸಾಧ್ಯತೆಯಿದೆ. ಹೀಗೆ ಸೃಷ್ಟಿಯಾಗಿ ಸೇರಿಕೊಂಡ ಇಂಥ ವಚನಗಳೂ ಎಷ್ಟು ಸೃಜನ ಶೀಲವಾಗಿವೆಯೆಂದರೆ, ಅವು ಆಯಾ ಸಂದರ್ಭದ ವ್ಯಕ್ತಿತ್ವದೊಂದಿಗೆ ಸಲೀಸಾಗಿ ಹೊಂದಿಕೊಳ್ಳುತ್ತವೆ. ಈ ದೃಷ್ಟಿಯಿಂದ ಶೂನ್ಯ ಸಂಪಾದನಕಾರರ ‘ಅನುಸೃಷ್ಟಿ ಪ್ರತಿಭೆ’ ಅದ್ಭುತವಾದದ್ದು.

[16] ಎಚ್. ದೇವೀರಪ್ಪ : ಕೇಶಾಂಬರೆಯೆ, ದಿಗಂಬರೆಯೆ? ‘ಸಂಶೋಧನ ಸಂಪುಟ’ (೧೯೮೪) ಪು. ೪೪೯-೪೫೨. ಶಿವಕುಮಾರ ಪ್ರಕಾಶನ, ವಿಜಯನಗರ, ಬೆಂಗಳೂರು-೪೦.

[17] ಮಹಾದೇವಿಯಕ್ಕನ ಹಾಗೂ ಕೊಂಡಗುಳಿ ಕೇಶಿರಾಜನ ರಗಳೆಗಳಲ್ಲಿ ಬರುವ ‘ಉಟ್ಟ ಕೇಶಾಂಬರಂ ದಟ್ಟಯಿಸಿ ಮೆರೆವುತಂ’ ‘ಆಶಾಂಬರನ ಸುತಂ ಕೇಶಾಂಬರವನುಟ್ಟು’ ಎಂಬ ಈ ಎರಡು ಪ್ರಯೋಗಗಳಲ್ಲಿಯೂ, ಕೇಶಾಂಬರವನ್ನು ‘ಉಟ್ಟ’ ‘ಉಟ್ಟು’ ಎಂಬ ಪ್ರಯೋಗಗಳೂ ವಸ್ತ್ರ ವಿಶೇಷವನ್ನೆ ನಿರ್ದೇಶಿಸುತ್ತವೆ.