ಹಿಂದೂಸ್ಥಾನಿ ಸಂಗೀತ ಪಿಟೀಲು ವಾದನದಲ್ಲಿ ’ಎ’ ಶ್ರೇಣಿ ಕಲಾವಿದರಾದ ಶ್ರೀಮತಿ ಅಕ್ಕಮಹಾದೇವಿ ಹಿರೇಮಠ ಅವರಿಗೆ ಸಂಗೀತದಲ್ಲಿ ಮೊದಲ ಮಾರ್ಗದರ್ಶನ ದೊರೆತದ್ದು ತಂದೆ ಪ್ರಖ್ಯಾತ ತಬಲಾ ವಾದಕರಾದ ಶ್ರೀ ಜಿ.ಎಸ್.ಹಿರೇಮಠ ಅವರಿಂದ. ನಂತರ ಪತಿ ಪಂಡಿತ್ ಬಿ.ಎಸ್.ಮಠ ಅವರಲ್ಲಿ ಪಿಟೀಲು ವಾದನದಲ್ಲಿ ಅಕ್ಕಮಹಾದೇವಿ ಅವರಿಗೆ ಪ್ರಬುದ್ಧ ಶಿಕ್ಷಣ ದೊರೆಯಿತು. ಮೂಲತಃ ಗ್ವಾಲಿಯರ್ ಮತ್ತು ಕಿರಾಣಾ ಘರಾಣಾ ಕಲಾವಿದರಾದ ಶ್ರೀಮತಿ ಅಕ್ಕಮಹಾದೇವಿಯವರು ಆಕಾಶವಾಣಿಯ ಪಣಜಿ ನಿಲಯದ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಖಯಾಲನ್ನು ಗಾಯಕಿ ಶೈಲಿಯಲ್ಲಿ ನುಡಿಸುವುದರಲ್ಲಿ ಅಕ್ಕಮಹಾದೇವಿಯವರು ವಿಶೇಷ ಪ್ರತಿಭೆಯನ್ನು ಹೊಂದಿದ್ದಾರೆ. ೧೯೭೯ರಲ್ಲಿ ದೆಹಲಿಯ ಕೇಂದ್ರ ಆಕಾಶವಾಣಿಯವರು ಆಯೋಜಿಸಿದ್ದ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರಿಂದ ಬಂಗಾರದ ಪದಕ ಸ್ವೀಕರಿಸಿದ ಹೆಗ್ಗಳಿಕೆ ಅಕ್ಕಮಹಾದೇವಿಯವರದು. ಆಕಾಶವಾಣಿಯ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಶ್ರೀಮತಿ ಅಕ್ಕಮಹಾದೇವಿಯವರು ತಮ್ಮ ಪತಿ ಶ್ರೀ ಬಿ.ಎಸ್.ಮಠ ಅವರೊಂದಿಗೆ ನಡೆಸಿಕೊಡುವ ದ್ವಂದ್ವ ಪಿಟೀಲು ವಾದನ ಕಾರ್ಯಕ್ರಮ ಅತ್ಯಂತ ಜನಮನ್ನಣೆ ಪಡೆದಿದೆ. ಬೆಂಗಳೂರಿನ ದರ್ಶನ ಲೈವ್ ಕ್ಯಾಸೆಟ್ ಕಂಪೆನಿ ಅಕ್ಕಮಹಾದೇವಿಯವರ ಸಂಗೀತದ ಎರಡು ಧ್ವನಿಸುರುಳಿಗಳನ್ನು ಹೊರತಂದಿದೆ.

ಶ್ರೀಮತಿ ಅಕ್ಕಮಹಾದೇವಿ ಹಿರೇಮಠ ಅವರ ಸಂಗೀತ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.