ಕೌಶಿಕ ಮಾತೋ ಶ್ರೀ ನೀನು ಹೇಳಿದಂತೆ ಕೇಳುವೆನು.

ಅಕ್ಕಮಹಾದೇವಿ : ನಾನು ಹೇಳಿದ ಹಾಗೆ ಕೇಳುತ್ತೀಯಾ ?

ಕೌಶಿಕ : ಕೇಳುತ್ತೇನೆ.

ಅಕ್ಕಮಹಾದೇವಿ : ಹಾಗಾದರೆ ಶಿವದೀಕ್ಷೆಯನ್ನು ತೆಗೆದುಕೊಂಡು ಶಿವ ಭಕ್ತನಾಗು.

ಕೌಶಿಕ : ಯಾಕಾಗಲೊಲ್ಲದು ಆಗುತ್ತೇನೆ.ಮೊದಲು ನನ್ನ ಪ್ರಾಣ ಉಳಿಸು.

ಅಕ್ಕಮಹಾದೇವಿ : ಹಾಗಾದರೆ ನೀನು ಶಿವಭಕ್ತನಾಗುತ್ತೀಯಾ ?

ಕೌಶಿಕ :: ಶಿವನ ಸಾಕ್ಷಿಯಾಗಿ ಶಿವಭಕ್ತನಾಗುತ್ತೇನೆ.

ಅಕ್ಕಮಹಾದೇವಿ : ನಿನಗೆ ಶಾಂತವಾಗುವ ಹಾಗೆ ಮಾಡುತ್ತೇನೆ ನಿಲ್ಲು.(ಅವನ ಹಣೆಗೆ, ಮೈಗೆ ವಿಭೂತಿ ಧರಿಸುವಳು).

ಕೌಶಿಕ : (ಆನಂದದಿಂದ ಎದ್ದು) ಓಹೋ! ನನ್ನ ತಾಪವೆಲ್ಲಾ ಶಾಂತವಾಯಿತು.ಇದು ಏನೋ ಚಮತ್ಕಾರವಾಗಿರಬೇಕು,ಶಿವ ಶಿವಾ ಸ್ವಲ್ಪು ಭಸ್ಮ ಹಚ್ಚಿದ ಕೂಡಲೇ ಹೇಳಲಿಕ್ಕೆ ಅಸಾಧ್ಯವಾದ ಸಂಕಟಗಳೆಲ್ಲ ಹೋಗಿ, ಈಗ ನನಗೆ ಅಳತೆಯಿಲ್ಲದಷ್ಟು ಆನಂದವಾಯಿತು.ಇದು ಏನು ಭಸ್ಮದ ಪ್ರಭಾವವೋ ಮತ್ತು ಮಹಾದೇವಿಯ ಸತ್ವದ ಪ್ರಭಾವವೋ ! ಏನು ಶಿವಭಕ್ತಿಯ ಪ್ರಭಾವವೋ ಆಹಾ ತಿಳಿಯದು.ಈ ಮಾತೋಶ್ರೀ ಮಹಾದೇವಿಯ ಶಿವಭಕ್ತಿಯನ್ನು ಪಡೆಯುವುದರಸಲುವಾಗಿ ಆ ಶಿವಭಕ್ತಿಯ ಪ್ರಭಾವದಿಂದ ಇಷ್ಟೆಲ್ಲಾ ಆಯಿತು.ಧನ್ಯ ಧನ್ಯ. ಶಿವಭಕ್ತಿಯ ಪ್ರಭಾವದ ಮುಂದೆ ಯಾವುದೂ ಇಲ್ಲಾ.ಆದ್ದರಿಂದ ಹಿಂದಕ್ಕೆ ವರೆಸಿಷ್ಠ ಋಷಿಯನ್ನು ಕೊಲ್ಲಬೇಕೆಂದು ಆ ವಿಶ್ವಾಮಿತ್ರನು ಬೇಕದಾಷ್ಟು ಪ್ರಯತ್ನ ಮಾಡಿದನು. ಆ ವಸಿಷ್ಠ ಋಷಿಯು ಒಂದು ತೃಣ ಕಡ್ಡಿಯನ್ನು ಮಂತ್ರಿಸಿ ಮುಂದೆ ಇಟ್ಟುಕೊಂಡ್ಡಿದ್ದನು.ಆ ತೃಣ ಕಡ್ಡಿಯು ಆ ವಿಶ್ವಾಮಿತ್ರನ ಶಸ್ತ್ರಗಳನ್ನೆಲ್ಲಾ ನುಂಗಿ ಬಿಡುತ್ತಿತ್ತು.ಆ ವಿಶ್ವಾಮಿತ್ರನು ಇದನ್ನೆಲ್ಲಾ ನೋಡಿ ಶಿವಭಕ್ತಿಯ ಪ್ರಭಾವವಿದು.ಇದರ ಮುಂದೆ ಯಾರ ಆಟವೊ ನಡೆಯುವುದಿಲ್ಲ ಎಂದು ತಿಳಿದು, ತಾನು ಶಿವಭಕ್ತಿಯನ್ನು ಪಡೆಯಬೇಕಂತ ತನ್ನ ರಾಜ್ಯವನ್ನೆಲ್ಲಾ ಬಿಟ್ಟು ಕೊಟ್ಟು, ಸನ್ಯಾಸಿಯಾಗಿ ಎಷ್ಟೋ ವರ್ಷ ತಪಸ್ಸು ಮಾಡಿ ಋಷಿ ಎನಿಸಿಕೊಂಡು ಶಿವಭಕ್ತಿಯ ಪ್ರಭಾವದಿಂದ ತಾನು ಮುಂದೆ ಬೇಕಾದಷ್ಟು ಅಗಾಧ ಕೃತ್ಯ ಮಾಡಿದನು. ಅಂದರೆ ತ್ರಿಶಂಕು ಮಹಾರಾಜನಿಗೆ ಒಂದು ಸ್ವರ್ಗಲೋಕವನ್ನು ಸೃಷ್ಟಿಮಾಡಿ ಕೊಟ್ಟು ಬಿಟ್ಟಾ, ಅಂದಮೇಲೆ ಶಿವಭಕ್ತಿಯ ಪ್ರಭಾವ ಎಂಥದ್ದು ನೋಡಿರಿ, ನಾನು ಈಗೀಂದೀಗ ವಿಶ್ವಾಮಿತ್ರನಂತೆ ವೈರಾಗ್ಯ ಹೊಂದಿ, ಶಿವಭಕ್ತಿಯನ್ನು ಪಡೆಯುವೆ.ಮಾತೋ ಶ್ರೀ ನನ್ನ ಜನ್ಮವನ್ನು ಉದ್ಧಾರ ಮಾಡಿದಿ.ತಾಯಿ ನಾನು ಸಾವಿರಾರು ಜನ್ಮಗಳಲ್ಲಿ ನಿನ್ನ ಸೇವಾ ಮಾಡಿದರೂ ನೀವು ಮಾಡಿದ ಉಪಕಾರಕ್ಕೆ ನನ್ನ ಸೇವೆಯು ಎಳ್ಳಷ್ಟಾದರೂ ಸರಿಯಾಗಲಾರದು.ತಾಯೇ ನಿನ್ನ ಪಾದಕ್ಕೆ ಬಿದ್ದಿರುವೆನು ನನ್ನನ್ನು ಉದ್ಧಾರ ಮಾಡು.

ಅಕ್ಕಮಹಾದೇವಿ : ರಾಜಾ ಇನ್ನು ಮೇಲೆ ಶಿವಭಕ್ತನಾಗು ತಿಳಿಯಿತೆ ?

ಕೌಶಿಕ ತಾಯಿ ಅದೆಲ್ಲ ನನಗೇನು ಗೊತ್ತು ? ನೀನೇ ತಿಳಿಸು.

ಅಕ್ಕಮಹಾದೇವಿ : ಹಾಗಾದರೆ ತಗೋ ಈ ಭಸ್ಮಧಾರಣ ಮಾಡು.ಈ ರುದ್ರಾಕ್ಷಿಯನ್ನು ಧರಿಸು (ಕೊಡುವಳು).

ಕೌಶಿಕ : ಅವ್ವಾ ಈ ಬೂದಿಯನ್ನು ಮತ್ತು ಯಾವದೋ ಗಿಡದ ಬೀಜವನ್ನು ಧರಿಸಿದರೇನಾಗುತ್ತದೆ? ಇದೆಲ್ಲ ನನ್ನ ಮನಸ್ಸಿಗೆ ಬರುವುದಿಲ್ಲ ತಾಯೇ.

ಅಕ್ಕಮಹಾದೇವಿ : ಛೇ ! ಹುಚ್ಚಾ ಹಾಗೆ ಅನ್ನಬಾರದು.ರುದ್ರಾಕ್ಷಿ ಅಂದರೆ ಸಾಮಾನ್ಯವಲ್ಲಾ.ಈ ವಸ್ತುಗಳು ಅಷ್ಟಾವರಣ ವಸ್ತು ಇರುತ್ತವೆ ನೋಡಿ ಮಾತನಾಡು.

ಕೌಶಿಕ : ದೇವಿ ಅಷ್ಟಾವರಣ ಅಂದರೇನು ?

ಅಕ್ಕಮಹಾದೇವಿ : ಹೇಳಲಿಕ್ಕೆ ಬೇಕೇನು ?

ಕೌಶಿಕ : ಹೇಳಲಿಕ್ಕೇ ಬೇಕು.

ಅಕ್ಕಮಹಾದೇವಿ : ಹಾಗಾದರೆ ಹೇಳುತ್ತೇನೆ ಕೇಳು.

             (ಪದ)    ನಿನಗೆ ಹೇಳುವೆನು ಭೂಪಾಲಾ

ನಿನಗೆ ಅಷ್ಟಾವರಣ ಮಾಲಾ
ತಿಳಿಯಿದರ ನಿಜವೆಲ್ಲಾ ॥ಪಲ್ಲವಿ ॥

ಗುರು ಆದಿಯಿಂದಲೇ ಮಂತ್ರವೇ ಕಡೆಯಲ್ಲಿ
ಈ ಅಷ್ಟಾವರಣದಲ್ಲಿ ಶಿವನು ಮನೆ ಮಾಡಿ
ಅಲ್ಲೆ ಇರುವನು ನಿತ್ಯ ಕೇಳಲಿ ಸತ್ಯ ಮಾತಿದು
ಶಾಸ್ತ್ರ ಸಿದ್ಧಾಂತದಾ ಮಾತಾ ॥

ಮಾಟ ವಸ್ತುಗಳ ಸಾಧಿಸು ಬಹಳಾ
ಪಡೆದಂತಾ ಯತಿಗಳಾ ಹೊಲಸು ಸಂಸಾರ
ಆಗಿಹುದು ಪಾಪ ಹೋಗಿಹುದು
ಅವರು ಮುಕ್ತಿಯ ಪಡೆದರು ಮುಂದೆ ॥

(ಮಾತು) ರಾಜಾ, ಅಷ್ಟಾವರಣಗಳು ಯಾವುವೆಂದರೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರ ಇವೇ ಅಷ್ಟಾವರಣಗಳು.ವೀರಶೈವನಾದ ಮೇಲೆ ಇವನ್ನು ಪಾಲಿಸಬೇಕು.ಇವನ್ನು ಪಾಲಿಸಿದ ಎಷ್ಟೋ ಶಿವಯೋಗಿಗಳು ಈ ಹೊಲಸು ಸಂಸಾರದ ಮೋಹ ಜಾಲವನ್ನು ಬಿಟ್ಟು ಶಿವಸ್ವರೂಪರಾದರು ಕೇಳಿದೆಯಾ.

ಕೌಶಿಕ : ಅಷ್ಟಾವರ್ಣದ ಮೂಲವು ತಿಳಿಯುವಂತೆ ಸರಳ ರೀತಿಯಿಂದ ಹೇಳು.

ಅಕ್ಕಮಹಾದೇವಿ : ಕೌಶಿಕಾ, ಗುರು ಅಂದರೆ, ಆ ಪರಮಾತ್ಮನೇ, ಮಂತ್ರೋಪದೇಶ ಮಾಡುವುದರ ಸಲುವಾಗಿ ಗುರು ರೂಪಧಾರಣ ಮಾಡಿ ಸುರಲೋಕದೊಳಗೆ ಮಾಡಿ ಸುರಲೋಕದೊಳಗೆ ಬರುತ್ತಾನೆ.ಅಂಥಾ ಗುರುಸೇವೆ ಮಾಡಿ ಅವನಿಂದ ಶಿವತತ್ವವನ್ನು ಪಡೆಯಬೇಕು.ಮತ್ತು ಭಕ್ತರಿಂದ ಪೂಜೆಗೊಳ್ಳುವುದರ ಸಲುವಾಗಿ ಪರಮಾತ್ಮನೇ ಲಿಂಗಸ್ವರೂಪನಾಗಿರುತ್ತಾನೆ. ಅಂತಾ ಲಿಂಗವನ್ನು ಕೊರಳೊಳಗೆ ಧಾರಣಮಾಡಿ, ಈ ಹೊತ್ತು ಪೂಜಿಸಲಿಕ್ಕೇ ಬೇಕು.ಇದೂ ಅಲ್ಲದೇ ಧ್ಯಾನ ಪವಿತ್ರವಾದಂತೆ ಜಂಗಮ ಸ್ವರೂಪನಾದಂತಾ ಸದಾಶಿವನ ಪಾದತೀರ್ಥ ಎನಿಸಿದ್ದೆಲ್ಲ ಪಾದೋದಕ. ಆ ಪಾದೋದಕವನ್ನು ಸ್ವೀಕಾರಮಾಡಿ ಪವಿತ್ರವಾಗಬೇಕು. ಇನ್ನು ಗುರುಲಿಂಗ ಜಂಗಮಕ್ಕೆ ಅನ್ನ ವಸ್ತ್ರಾದಿ ನೈವೇದ್ಯ ಮಾಡಬೇಕು. ಹೀಗೆ ಅನ್ನ ಪ್ರಸಾದ ಮಾಡಿ ಆ ಪ್ರಸಾದವನ್ನು ಭಕ್ತಿಯಿಂದ ಊಟ ಮಾಡಬೇಕು. ಇನ್ನು ವಿಭೂತಿ ಅಂದರೆ, ಆಕಳ ಸಗಣಿಯನ್ನು ಸುಟ್ಟು ಪಾದೋದಕರಿಂದ ಪರಿಶುದ್ಧ ಮಾಡಬೇಕು.ಇದು ಭಸ್ಮವೆನಿಸುವುದು. ಅದು ಐಶ್ವರ‌್ಯವನ್ನು ಕೊಡುವಂಥದು.ಶಿವನ ಆನಂದಾಶ್ರುವಿನಿಂದ ರುದ್ರಾಕ್ಷಿ ಹುಟ್ಟಿತು.ಅಂಥಾ ರುದ್ರಾಕ್ಷಿ ಧರಿಸುವವರು ಸಾಕ್ಷಾತ್ ರುದ್ರಸ್ವರೂಪರು ಎಂದು ತಿಳಿಯಬೇಕು. ಇದು ಅಲ್ಲದೇ ಮಂತ್ರ ಅಂದರೆ ಶಿವನ ನಿಜಸ್ವರೂಪ ಇರುವುದಲ್ಲಾ. ಆ ಮಹಾ ಸ್ವರೂಪವನ್ನು ಗುರುತು ಮಾಡುವಂಥ ಸಾಧನವೇ ಪಂಚಾಕ್ಷರಿಯ ಮಂತ್ರ.ಆ ಮಂತ್ರವನ್ನು ಯಾವತ್ತಾದರೂ ಸಾಧ್ಯ ಮಾಡಬೇಕು.ವರ್ಣ ಎಂದರೆ ಮುಚ್ಚಣ ರೂಪ.ಪ್ರಸಂಗತಾ ಮುಖ್ಯ ವಿಷಯಗಳು ವಸ್ತುಸ್ಥಿತಿಯನ್ನು ಮುಟ್ಟಿ ಜಗತ್ತಿಗೆಲ್ಲ ಶಿವಮಂತ್ರವನ್ನು ತೋರಿಸುವಂಥಾ ಸಾಧುಗಳು ಅಷ್ಟೂ ಅಷ್ಟಾವರ್ಣಗಳಲ್ಲಿ ವಿಶ್ವಾಸ ಇಟ್ಟವನೇ ಶಿವಭಕ್ತನಾಗುತ್ತಾನೆ.ಇಂಥಾ ಶಿವಭಕ್ತರು ಪರಮಾತ್ಮನನ್ನು ಗೊಂಬೆಯಂತೆ ಕುಣಿಸ್ಯಾಡಿ ಬಿಡುತ್ತಾರೆ.ಕೌಶಿಕ ಅಷ್ಟಾವರಣದ ಪ್ರಭಾವವು ಇನ್ನಾದರೂತಿಳಿಯಿತೇ ? ಅಷ್ಟಾವರಣದಲ್ಲಿ ವಿಶ್ವಾಸವನ್ನಿಟ್ಟು ಶಿವಭಕ್ತನಾಗು. ಇದಕ್ಕೆ ಏನು ಅಂದಿ ?

ಕೌಶಿಕ : ಈ ಅಷ್ಟಾವರಣಗಳ ಪ್ರಭಾವದಿಂದ ಯಾರಾದರೂ ಆಶೀರ್ವಾದದಂಥ ಲೀಲಾ ಮಾಡಿರುವರೇನು ?

ಅಕ್ಕಮಹಾದೇವಿ : ಓಹೋ ! ಅಷ್ಟಾವರಣದಿಂದ ಮಹಾತ್ಮರು ಬೇಕಾದಷ್ಟು ಲೀಲೆ ಮಾಡಿದ್ದಾರೆ ನೋಡು.

ಕೌಶಿಕ :  ಹಾಗಾದರೆ ಯಾರ‌್ಯಾರು ಏನೇನು ಮಾಡಿರುವರು ?

ಅಕ್ಕಮಹಾದೇವಿ : ಯಾರ‌್ಯಾರು ಏನೇನು ಮಾಡಿರುವರೆಂದರೆ, ಹೇಳುತ್ತೇನೆ ಕೇಳು.

(ಪದ) ಗುರುವಿನಿಂದ ಗುರುಭಕ್ತರಿಂದ, ಕಲಿಗಣನಾಥಾ
ಜಂಗಮದಿಂದ ಕೇತಯ್ಯನೆಂಬ ಶರಣ ॥ಪಲ್ಲವಿ ॥

ಮೂವರಿವರು ಮಾಡಿದರೋ ಲೀಲೆಯನು
ಜಗದೊಳು ಅದ್ಭುತ ಕರ್ತವ್ಯದಿಂದ ॥

ಪಾದೋದಕ ಮಾಡಿ ಮಹಿಮೆಯಿಂದ ತ್ರಿಮೂರ‌್ತಿಗಳು
ಶಿಶುಗಳಾಗ ಹೊರಳಾಡಿದರು ಅನುಸೂಯಾಳ ಬಲೆಯಲ್ಲಿ
ಪ್ರಸಾದದಿಂದ ಚಾರರನ್ನು ವಿಭೂತಿಯಿಂದ ಭುಜಬಲ ರಾಮನಾ ॥

ರುದ್ರಾಕ್ಷಿಯಿಂದ ಸುಪ್ರದೀಪವೆಂಬುದು ಮಂತ್ರದಿಂದ
ಸಾನಂದ ಋಷಿಯವರು ಲೀಲೆ ತೋರಿಸಿ ಜಗದಲಿ ವಿಸ್ತರಿಸಿ
ಅಷ್ಟಾವರಣದ ಮಹಿಮೆ ತಿಳಿಸುವರೇ ಹೊಂದಿ ತಾನು ಮರ್ಮ ॥

(ಮಾತು) ಅರಸಾ, ಅಷ್ಟಾವರಣದ ಮಹಿಮೆಯಿಂದ ಯಾರ‌್ಯಾರು ಸಿದ್ಧಿಯನ್ನು ಪಡೆದೆನೆಂದರೆ, ಗುರುಭಕ್ತ ಎಂಬ ಒಬ್ಬ ಯೋಗಿ, ಗುರು ಸೇವೆಯೇ ನನ್ನ ಪ್ರಾಣ ಎಂದು ತಿಳಿದು, ಹಗಲೂ, ಇರುಳೂ ಗುರು ಸೇವಾ ಮಾಡುತ್ತಿದ್ದನು.ಅವನ ಗುರುಭಕ್ತಿಗೆ, ಆ ಗುರು ಮೆಚ್ಚಿ ಅವನನ್ನು ಬಹಳ ಪ್ರೀತಿ ಮಾಡುತ್ತಿದ್ದ.ಆಗ ಉಳಿದ ಶಿಷ್ಯರೆಲ್ಲಾ ಆ ಗುರುಭಕ್ತನ ಮೇಲೆ ಹೊಟ್ಟೆಕಿಚ್ಚು ಮಾಡಲಿಕ್ಕೆ ಹತ್ತಿದರು. ಆಗ ಗುರುವು ಶಿಷ್ಯರ ಇಂಗಿತವನ್ನು ತಿಳಿದು, ಆ ಭಕ್ತನ ಧೃಢಭಕ್ತಿಯನ್ನು ಅವರಿಗೆ ತೊರಿಸಬೇಕೆಂದು, ಅವನನ್ನು ಕರೆದುಕೊಂಡು, ಎಲೋ ಗುರುಭಕ್ತ ನೀನು ತ್ರಿಶೂಲದ ಮೇಲೆ ಕೂಡು ಅಂತಾ ಹೇಳಿದ. ಹೇಳಿದ ಕೂಡಲೇ ಆ ಗುರುಭಕ್ತನು ಗುರು ವಾಖ್ಯದಂತೆ ಅಲ್ಲಿ ಕಟ್ಟಿದಂತ ತ್ರಿಶೂಲದ ಮೇಲೆ ಕುಳಿತುಕೊಂಡನು. ಕೂಡಲೇ ತ್ರಿಶೂಲವು ಆತನ ಮೈಯೊಳಗೆ ನಟ್ಟು ತಲೆಯೊಳಗೆ ಸೀದಾ ಪಾರಾಗಿ ಹೋಯಿತು. ಅಷ್ಟಾದರೂ ಗುರುಕರುಣನಾದ ಅವನಿಗೇನೂ ಆಗಲಿಲ್ಲಾ. ಆಗ ಗುರುವು ಎಲೋ ಗುರುಭಕ್ತಾ ನೀನು ಇನ್ನು ಆ ತ್ರಿಶೂಲದಿಂದ ಇಳಿದು ಬಾ ಅಂದಕೂಡಲೇ ಆ ಗುರುಭಕ್ತನು ಆಗೀಂದಾಗಲೇ ತ್ರಿಶೂಲದಿಂದಾ ಜಿಗಿದು ಪಾರಾಗಿ ಬಿಟ್ಟನು. ಆಗ ಅವನ ಮೈಯೊಳಗೆ ಎಳ್ಳಷ್ಟೂ ಸಹ ತ್ರಾಸವಿಲ್ಲದೇ ವಜ್ರಶರೀರವಾಯಿತು. ಅದನ್ನೆಲ್ಲಾ ಉಳಿದ ಶಿಷ್ಯರು ನೋಡಿ ನಾಚಿ ಸುಮ್ಮನಾದರು. ಕೇಳಿದಿಲ್ಲೋ ಅರಸು, ಗುರುಪ್ರಭಾವವೆಂದರೆ ಏನೆಂದು?

ಕೌಶಿಕ : ಹೌದು ಹೌದು ಮುಂದೇನಾಯಿತು ?

ಅಕ್ಕಮಹಾದೇವಿ : ಕಲಿಗಣನಾಥನೆಂಬವನೊಬ್ಬ ಶರಣನು ಲಿಂಗವಿಲ್ಲದವರಿಗೆ, ಲಿಂಗ ಕಟ್ಟುತ್ತೇನೆಂದು ಅನ್ಯೋನ್ಯವಾದ ವೃತವನ್ನು ಹಿಡಿದಿದ್ದರು. ಆಗ ಸಾಕ್ಷಾತ್ ಶಿವನು ಲಿಂಗಧಾರಣ ಮಾಡದೇ ಅವರ ಹತ್ತಿರ ಬಂದನು. ಆಗ ಕಲಿಗಣನಾಥನು ಪರಮಾತ್ಮನಿಗೆ ಲಿಂಗಧಾರಣ ಮಾಡಿ ಆದರಿಂದ ಸಾಯುಜ್ಯ ಪದವಿಯನ್ನು ಪಡೆದನು. ಮತ್ತು ಯತೀಶ್ವರ ಕೇತಯ್ಯನೆಂಬ ಶರಣನು ತನ್ನ ಮನೆಯೊಳಗೆ ದನಗಳ ಕೊರಳೊಳಗೆ ಸಹಿತ ಲಿಂಗವನ್ನು ಕಟ್ಟಿದನು. ಒಂದು ದಿವಸ ತುಡುಗರು ಬಂದು ಆ ದನಗಳನ್ನೆಲ್ಲಾ ಬಿಟ್ಟುಕೊಂಡು ಹೋದರು. ಆ ದನದ ಕೊರಳೊಳಗಿನ ಲಿಂಗಗಳು ಯತೀಶ್ವರ ಕೇತಯ್ಯನ ಮನೆಯೊಳಗೆ ಬಂದು ಬಿದ್ದವು. ಮುಂದೆ ಆ ದನಗಳನ್ನು ತುಡುಗರು ಬೆನ್ನುಹತ್ತಿ ಹೋದರು, ಅನಂತರ ಏಳು ದಿವಸದ ತನಕ ತಮ್ಮ ಕೊರಳೊಳಗೆ ಲಿಂಗವಿಲ್ಲದ ಮೂಲಕ ಮೇವು ತಿನ್ನಲಿಲ್ಲ, ನೀರು ಕುಡಿಯಲಿಲ್ಲಾ, ಆಗ ಅವು ನಿತ್ರಾಣ ಆಗ ಸಾಯುವ ಹಾಗೆ ಆದವು. ಇಷ್ಟಾದ ಕೂಡಲೇ ಆ ತುಡುಗರು ಅವುಗಳನ್ನೆಲ್ಲ ಬಿಟ್ಟು ಬಿಟ್ಟರು. ಅವು ಬಿಟ್ಟ ಕೂಡಲೇ ಆ ಯತೀಶ್ವರ ಕೇತಯ್ಯನ ಮನೆಗೆ ಬಂದು ತಮ್ಮ ತಮ್ಮ ಜಾಗೆಗಳಿಗೆ ಬಂದು ನಿಂತು ಬಿಟ್ಟವು. ಅಷ್ಟಾದರೂ ದನಗಳು ಮೇವು ತಿನ್ನಲಿಲ್ಲ. ನೀರು ಕುಡಿಯಲಿಲ್ಲಾ.

ಕೌಶಿಕ : ಹೌದೇ ?

ಅಕ್ಕಮಹಾದೇವಿ : ಶರಣನು ಬಂದು ಅವುಗಳ ಕೊರಳೊಳಗೆ ಲಿಂಗ ಕಟ್ಟಿದ ಕೂಡಲೇ ಮೇವು ತಿಂದು, ನೀರು ಕುಡಿದವು. ನೋಡು ಇಂಥಾ ದನಗಳಾದರೂ ಲಿಂಗ ಅಂದರೆ ತಮ್ಮ ಜೀವಕ್ಕಿಂತಲೂ ಹೆಚ್ಚೆಂದು ತಿಳಿದು ಲಿಂಗದ ಮೇಲೆ ಭಕ್ತಿಯನ್ನಿಟ್ಟುಕೊಂಡು ಆ ಲಿಂಗ ಸ್ಮರಣೆಯನ್ನು ಮಾಡುತ್ತಿದ್ದವು.

ಕೌಶಿಕ : ಲಿಂಗದ ಮಹಿಮೆ ಇಷ್ಟು ದೊಡ್ಡದೆ ?

ಅಕ್ಕಮಹಾದೇವಿ : ಇನ್ನು ಜಂಗಮ ಭಕ್ತನು ಯಾರೆಂದರೆ, ಜೀವಾ ಕಳಕೊಳ್ಳುತ್ತಿದ್ದ ಭೋಗಯ್ಯ ಒಂದು ದಿವಸ, ಪರಮಾತ್ಮನು ಅವನ ಜಂಗಮ ನಿಷ್ಠತೆಯನ್ನು ಪರೀಕ್ಷೆ ಮಾಡಬೇಕೆಂದು ಹೊಲೆಯರವನ ವೇಷ ಹಾಕಿಕೊಂಡು ಆ ಕೆಂಭಾವಿ ಭೋಗಯ್ಯನ ಮನೆಗೆ ಹೋದಾ. ಆಗ ಭೋಗಯ್ಯನು ತನ್ನ ಮನೆಗೆ ಜಂಗಮ ಬಂದನೆಂದು ತಿಳಿದು ಭಕ್ತಿಯಿಂದ ಜಂಗಮನನ್ನು ಪೂಜೆಮಾಡಿ ಊಟಕ್ಕೆ ಬಡಿಸಿ, ತಾನೂ ಹೊಲೆಯರವನ ಸಂಗಡ ಊಟ ಮಾಡುತ್ತಿದ್ದ, ಆಗ ಊರವರೆಲ್ಲ ನೋಡಿ ಆ ಹೊಲೆಯರವನ ಸಂಗಡ ಊಟಮಾಡಿ ಭೋಗಯ್ಯನು ಕುಲಭ್ರಷ್ಟನಾದನೆಂದು ಅವನ ಮೇಲೆ ಸಿಟ್ಟಿಗೆದ್ದರು.

ಕೌಶಿಕ : ಇದು ಸರಿಯೇ ?

ಅಕ್ಕಮಹಾದೇವಿ : ಆಗ ಕೆಂಭಾವಿ ಭೋಗಯ್ಯನು ನಾನು ಈ ಊರೊಳಗೆ ಇರುವುದಿಲ್ಲೆಂದು ಊರನ್ನು ಬಿಟ್ಟು ಹೋಗಲಿಕ್ಕೆ ಹತ್ತಿದನು. ಆಗ ಊರೊಳಗಿನ ಲಿಂಗಾಂಗಿಗಳೆಲ್ಲ ಅವನ ಬೆನ್ನು ಹತ್ತಿ ಹೋಗಲಿಕ್ಕೆ ಹತ್ತಿದರು. ಆಗ ಊರೊಳಗೆ ಕೆಟ್ಟ ಅಪಶಕುನಗಳು ಆಗಲಿಕ್ಕೆ ಹತ್ತಿದವು. ಆಗ ಊರ ಜನರು ಅದನ್ನೆಲ್ಲ ನೊಡಿ ಅಂಜಿ, ಗಾಬರಿಯಾಗಿ ಓಡಿ ಬಂದು ಕೆಂಭಾವಿ ಭೋಗಯ್ಯನ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ ಅವನನ್ನು ಊರಿಗೆ ಕರೆದುಕೊಂಡು ಬಂದು ಎಲ್ಲರೂ ಅವನಿಗೆ ಭಕ್ತರಾದರು. ಕೇಳಿದೆಯಿಲ್ಲೋ ಜಂಗಮಕ್ಕೆ ಕುಂದಿಲ್ಲ.

ಕೌಶಿಕ : ನಿಜಕ್ಕೂ ಇದನ್ನೆಲ್ಲಾ ಕೇಳಿ ಆನಂದವಾಯಿತು.

ಅಕ್ಕಮಹಾದೇವಿ : ಇನ್ನು ಪಾದೋದಕವೆಂಬ ಜಂಗಮರ ಪಾದತೀರ್ಥದಿಂದ ಅನುಸೂಯಾ ದೇವಿಯು ಕಪಟ ವೇಷ ಧರಿಸಿಕೊಂಡು ಬಂದಂಥ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕೂಸುಗಳನ್ನಾಗಿ ಮಾಡಿ, ತನ್ನ ಮಕ್ಕಳನ್ನು ಮಾಡಿಕೊಂಡು ಬಿಟ್ಟಳು. ರಾಜಾ, ಈ ಪಾದೋದಕ ಮಹಿಮೆಯು ಎಂಥಾದ್ದು ನೋಡು. ಆ ಅಷ್ಟಾವರ್ಣದ ಸರಿಸಮಾನ ಈ ಜಗತ್ತಿನಲ್ಲಿ ಯಾವುದೂ ಇಲ್ಲವೆಂಬುದನ್ನು ತಿಳಿ.

ಕೌಶಿಕ :  ತಾಯಿ ಇದೆಲ್ಲ ನನಗೇನು ಗೊತ್ತು ? ಇಂಥ ಪವಿತ್ರವಾದಂಥ ಅಷ್ಟಾವರ್ಣದ ಪ್ರಭಾವವನ್ನು ತಿಳಿಯಲು ನಾನು ಹಿಂದಿನ ಜನ್ಮಗಳಲ್ಲಿ ಎಷ್ಟೂ ಪುಣ್ಯಮಾಡಿ ಬಂದಿಲ್ಲಾ. ಈಗ ಗುರುಸ್ವರೂಪಳಾದ ನಿನ್ನಿಂದಾ ಮೊದಲು ನಾಲ್ಕು ಅಂದರೆ ಗುರು, ಲಿಂಗ, ಜಂಗಮ, ಪಾದೋದಕ ಅನ್ನುವಂಥದರ ಪ್ರಭಾವ ಗೊತ್ತಾಯಿತು, ಇನ್ನು ಪ್ರಸಾದ,ವಿಭೂತಿ, ರುದ್ರಾಕ್ಷಿ, ಮಂತ್ರ ಅನ್ನುವುಗಳ ನಾಲ್ಕರ ಮಹಿಮೆಯನ್ನು ಹೇಳಿ ನನ್ನ ಅಜ್ಞಾನವನ್ನೆಲ್ಲಾ ನಾಶಮಾಡಿ ನನ್ನನ್ನು ಉದ್ಧಾರ ಮಾಡಬೇಕು. ಮಹಾತಾಯೇ.

ಅಕ್ಕಮಹಾದೇವಿ : ಅಪ್ಪಾ ರಾಜಾ, ನಿನ್ನನ್ನು ಉದ್ದಾರ ಮಾಡುವುದರ ಸಲುವಾಗಿಯೇ ಈ ಅಷ್ಟಾವರ್ಣದ ಪ್ರಭಾವವನ್ನು ಹೇಳುತ್ತಿದ್ದೇನೆ. ಇನ್ನು ಪ್ರಸಾದದ ಮಹಿಮೆಯನ್ನು ಹೇಳುತ್ತೇನೆ. ಚಿತ್ತಿವಿಟ್ಟು ಕೇಳು.

ಕೌಶಿಕ : ಹೇಳಿರಿ.

ಅಕ್ಕಮಹಾದೇವಿ : ಅದೇನೆಂದರೆ. ಒಬ್ಬ ವಾಚರನೆಂಬವನೊಬ್ಬ ಶರಣನು ಶಿವಸ್ವರೂಪನಾದಂಥವನು. ಆ ಶರಣನು ಊಟಮಾಡಿ ಚೆಲ್ಲಿದ ಮುಸುರೆಯನ್ನು ತೆಗೆದುಕೊಂಡು ಬಂದು, ಬಂಡಿಯ ಮೇಲೆ ಹೇರಿಕೊಂಡು ಬಂದು, ಆ ಪ್ರಸಾದದಿಂದ ತಾನು ತನ್ನ ಮನಿಯವರೆಲ್ಲರೂ ಸೇರಿ ಸಂರಕ್ಷಣೆ ಆಗುತ್ತಿದ್ದರು. ಆಗ ಆ ಊರ ಜನರು ಇವನು ಬಂಡಿಯ ಮೇಲೆ ಮುಸುರೆ ಹೇರಿಕೊಂಡು ಬಂದು ಈ ಊರನ್ನು ಅಶುದ್ಧ ಮಾಡುವನೆಂದು ತಿಳಿದು ಅವನನ್ನು ಬರಗೊಡಬಾರದೆಂದು ಬಂದು ಮಾಡಿದರು, ಆಗ ಆ ವಾಚರನು ಬಂಡಿಯ ಮೇಲೆ ಹೇರಿದ ಪ್ರಸಾದವನ್ನೆಲ್ಲಾ ಊರೊಳಗೆ ಚೆಲ್ಲಿಕ್ಕೆ ಹತ್ತಿದನು. ಆಗ ಪ್ರಸಾದವು ಬೆಂಕಿಯಾಗಿ ಊರನ್ನು ಸುಡಲಿಕ್ಕೆ ಹತ್ತಿತು. ಆಗ ಆ ಊರ ಜನರು ಅಂಜಿ ಓಡಿಬಂದು, ನಮ್ಮದು ತಪ್ಪಾಯಿತು. ಈ ಬೆಂಕಿಯನ್ನು ಶಾಂತಮಾಡಿ ಕಾಪಾಡಬೇಕೆಂದು ಅವನ ಚರಣಪಾದಗಳಿಗೆ ಎರಗಿದರು. ಆ ಶರಣನು ಪ್ರಸಾದ ತರಲಿಕ್ಕೆ ಹತ್ತಿದನು. ಅರಸನೇ ಕೇಳು ಇದನ್ನು, ಇದೇ ಈ ಪ್ರಸಾದದ ಮಹಿಮೆ. ಅಂತ ಪ್ರಸಾದಕ್ಕೆ ಮುಸುರೆ ಅಂದಕೂಡಲೇ ಬೆಂಕಿಯಾಗಿ ಬಿಟ್ಟಿತು. ಅದಕ್ಕೆ ಪ್ರಸಾದವನ್ನು ಯಾವಾಗಲೂ ಸದ್ಭಾವದಿಂದ ಸ್ವೀಕಾರ ಮಾಡಬೇಕೆಂದು ತಿಳಿದುಕೋ.

ಕೌಶಿಕ : ದೇವಿ ಪ್ರಸಾದದ ಲೀಲಾ ಕೇಳಿದೆನು. ಇನ್ನು ವಿಭೂತಿಯ ಲೀಲೆಯನ್ನು ವಿವರವಾಗಿ ಹೇಳಬೇಕು.

ಅಕ್ಕಮಹಾದೇವಿ : ವಿಭೂತಿಯ ಲೀಲೆ ಏನೆಂದರೆ, ಪೂರ್ವ ಕಾಲದಲ್ಲಿ ವಂಗದೇಶದಲ್ಲಿ ಭುಜಬಲ ಎಂಬ ಒಬ್ಬ ರಾಜನಿದ್ದ. ಅವನು ಒಂದು ಸಂಕ್ರಾಂತಿ ನಡೆದ ಕಾಲಕ್ಕೆ ಬ್ರಾಹ್ಮಣರಿಗೆ ದಾನಕೊಡಲಿಕ್ಕೆ ಹತ್ತಿದನು. ಆಗ ಅಲ್ಲಿಗೆ ವಿದರ್ಭ ದೇಶದ ಕುಶಾಲ ಎನ್ನುವ ಬ್ರಾಹ್ಮಣನು ಬಂದನು. ಆಗ ಅರಸನು ಎಲ್ಲಾ ಬ್ರಾಹ್ಮಣರಿಗೆ ದಾನ ಕೊಡುತ್ತ ಕುಶಾಲ ಎನ್ನುವಂಥ ಬ್ರಾಹ್ಮಣನಿಗೂ ದಾನ ಕೊಡಲಿಕ್ಕೆ ಬಂದನು. ಆಗ ಆ ಬ್ರಾಹ್ಮಣನು ಏನೆಂದನೆಂದರೆ, ನಿನ್ನ ಹಣೆಯ ಮೇಲೆ ವಿಭೂತಿಯಿಲ್ಲ ಅದಕ್ಕೆ ಹಣೆಯ ಮೇಲೆ ವಿಭೂತಿಯನ್ನು ಇಟ್ಟುಕೊಂಡು ದಾನವನ್ನು ಕೊಡು ಅಂದನು. ಆಗ ಅರಸನು ಅವನ ಮಾತಿಗೆ ತಿರಸ್ಕಾರ ಮಾಡಿ ಹಣೆಗೆ ವಿಭೂತಿಯನ್ನು ಹಚ್ಚಿಕೊಳ್ಳಲಿಲ್ಲಾ. ಆಗ ಬ್ರಾಹ್ಮಣನು ಸಿಟ್ಟಿಗೆದ್ದು, ನಿನ್ನ ದಾನ ನಮಗೆ ಬೇಕಾಗಿಲ್ಲ ಎಂದು ಹೋಗ ಹತ್ತಿದನು. ಆಗ ಅರಸನ ಹೆಂಡತಿಯು, ಹಾಗೇ ಹೋದರೆ ನಮಗೆ ಪಾಪವಾಗುತ್ತದೆ ಎಂದು ತಿಳಿದು ಸುಳ್ಳೇ ಒಂದು ಶೀತಳು. ಅ ಬ್ರಾಹ್ಮಣನು ಸುಮ್ಮನೆ ಹೋದ. ಆ ವಿಭೂತಿಯನ್ನು ತಿರಸ್ಕಾರ ಮಾಡಿದ್ದರಿಂದ ಭುಜಬಲ ರಾಜನ ಸೈನ್ಯವೆಲ್ಲ ರೋಗ ಬಂದು ಸತ್ತುಹೋಯಿತು, ಆಗ ವೈರಿಗಳು ಬಂದು, ಆ ಸೈನ್ಯವನ್ನು ಹೊರದಬ್ಬಿ ಅರಸನ ರಾಜ್ಯವನ್ನು ತೆಗೆದುಕೊಂಡರು. ಆಗ ಭುಜಬಲನು ಓಡಿಹೋಗಿ ಕಾಡಪಳುವನ್ನು ಸಾರಿ, ಹೊಟ್ಟೆಯ ಸಲುವಾಗಿ ತುಡುಗು ಮಾಡಲಿಕ್ಕೆ ಹತ್ತಿದನು. ಆಗ ತುಡುಗು ಮಾಡುವಾಗ ಒಬ್ಬನ ಕೈಯಲ್ಲಿ ಸಿಕ್ಕನು. ಆಗ ಅವರ ಕೈಕಾಲುಗಳನ್ನು ಕಡಿದರು. ಅವನಿಗೆ ಗತಿಯಿಲ್ಲದೆ ಊರೊಳಗೆ ಭಿಕ್ಷೆ ಬೇಡಲಿಕ್ಕೆ ಹತ್ತಿದನು. ಆಗ ಅವನ ಹೆಂಡತಿಯು ಸುಳ್ಳೇ ಏನೋ ನುಡಿದಿದ್ದಳು. ಅದರ ಸಲುವಾಗಿ ಆಕೆಯ ಮೂಗಿಗೆ ರೋಗ ಹತ್ತಿ ಮೂಗು ಕತ್ತರಿಸಿ ಹೋಯಿತು. ಈ ಪ್ರಕಾರ ಗಂಡ : ಹೆಂಡರು ಅಳತೆಗೆಟ್ಟು ಕಷ್ಟವನ್ನು ಅನುಭೋಗಿಸ ಹತ್ತಿದರು. ಮುಂದೆ ಅವರು ಭಿಕ್ಷೆ ಬೇಡುತ್ತ ವಿದರ್ಭ ದೇಶಕ್ಕೆ ಹೋದರು. ಸಶೀಲ ಬ್ರಾಹ್ಮಣನು ಅವರ ಗೋಳಾಟವನ್ನು ನೋಡಿ, ಅವರನ್ನೆಲ್ಲ ತಿಳಿದು ಇವರು ವಿಭೂತಿಯನ್ನು ಧಿಃಕ್ಕಾರ ಮಾಡಿದ ಸಲುವಾಗಿಯೇ ಹೀಗೆ ಆಗಿದ್ದಾರೆಂದು ತಿಳಿದು, ಅಲ್ಲಿಯೇ ಅವರಿಗೆ ವಿಭೂತಿಧಾರಣ ಮಾಡಿದ ಕೂಡಲೇ ಅವರ ಕೈಕಾಲು, ಕಿವಿ, ಮೂಗು ಆಗಿಂದಾಗ ಚಿಗಿತು ಮೊದಲಿನಂತೆ ಬಂದವು. ಇಷ್ಟೇ ಅಲ್ಲದೆ ಅವರಿಗೆ ಸಂಪೂರ್ಣ ಜ್ಞಾನವೂ ಬಂತು. ತಮ್ಮ ರಾಜ್ಯಕ್ಕೆ ಹೋಗಿ ವೈರಿಗಳನ್ನು ಕೊಂದು ತಮ್ಮ ರಾಜ್ಯವನ್ನು ತಿರುಗಿ ಪಡೆದುಕೊಂಡು, ರಾಜ್ಯವಾಳಿ ಎಷ್ಟೋ ದಿವಸಕ್ಕೆ ಕೈಲಾಸಕ್ಕೆ ಹೋದನು. ಕೌಶಿಕಾ ನೋಡು, ವಿಭೂತಿಯನ್ನು ಧಿಃಕ್ಕಾರ ಮಾಡಿದ್ದರಿಂದ ಅವನಿಗೆ ಹೀಗಾಯಿತು. ಆದ್ದರಿಂದ ಯಾವತ್ತೂ ಎಲ್ಲರೂ ವಿಭೂತಿಯನ್ನು ಧರಿಸಬೇಕು. ಇದರಿಂದ ಭೋಗ, ಮೋಕ್ಷ ಎರಡೂ ಸಾಧ್ಯವಾಗುತ್ತದೆಂದು ತಿಳಿದು ಬಿಡು.

ಕೌಶಿಕ : ದೇವಿಯವರೆ, ರುದ್ರಾಕ್ಷಿಯ ಮಹಿಮೆಯನ್ನು ಹೇಳಿ ನನ್ನನ್ನು ಈ ಭವದಿಂದ ಉದ್ಧಾರ ಮಾಡಿರಿ.

ಅಕ್ಕಮಹಾದೇವಿ : ಇನ್ನು ರುದ್ರಾಕ್ಷಿ ಮಹಿಮೆ ಏನೆಂದರೆ, ಸಮುದ್ರ ತೀರದಲ್ಲಿ ಯಾಚಕ ಎನ್ನುವಂಥ ಪುರದೊಳಗೆ ಸುಪ್ರದೀಪಕ ಎನ್ನುವಂಥ ಒಬ್ಬ ಬ್ರಾಹ್ಮಣನು ತಾನು ರುದ್ರಾಕ್ಷಿಯನ್ನು ಧರಿಸಿ, ತನ್ನ ಮನೆಯೊಳಗಿನ ಸಮಸ್ತರಿಗೆ, ಬೆಕ್ಕಿನ ಕೊರಳೊಳಗೆ ಸಹಿತ ರುದ್ರಾಕ್ಷಿ ಧಾರಣ ಮಾಡಿ, ರುದ್ರಾಕ್ಷಿಧಾರಣ ಮಾಡಿದವರಿಗೆ ಮಾತ್ರ ದಾನ ಕೊಡುತ್ತೆನೆಂದು ವ್ರತ ಹಿಡಿದಿದ್ದನು. ಆಗ ಅವರ ಸುದ್ದಿಯನ್ನು ಕೇಳಿದ ಯೋಗ ಎನ್ನುವಂಥ ಋಷಿಯು ರುದ್ರಾಕ್ಷಿಯನ್ನು ಧರಿಸದೇ ಅವನ ಮನೆಗೆ ಭಿಕ್ಷೆ ಬೇಡಲು ಹೋದನು, ಆಗ ಸಾಂಪ್ರದಾಯಿಕ ಬ್ರಾಹ್ಮಣನು ಅವನ ಲಿಂಗದಲ್ಲಿ ರುದ್ರಾಕ್ಷಿಯು ಇಲ್ಲದಿರುವುದನ್ನು ನೋಡಿ ನೀನು ರುದ್ರಾಕ್ಷಿಯನ್ನು ಧರಿಸಿಲ್ಲಾ, ನೀನು ನನ್ನ ಬಾಗಿಲ ಮುಂದೆ ನಿಲಬೇಡಾ. ನಿನಗೆ ಭಿಕ್ಷೆ ನೀಡುವುದಿಲ್ಲವೆಂದು ಬೆದರಿಸಿದನು. ಆಗ ಅವನ ಮಕ್ಕಳು ಬಡಿಗೆ ತೆಗೆದುಕೊಂಡು ಅವನನ್ನು ನೂಕಿ ಹೊರಗೆ ಹಾಕಿದರು. ಆಗ ಅವನು ಸಿಟ್ಟಿಗೆದ್ದು ಹೋಗಿ, ಆ ಊರ ಅರಸನಾದ ಸಾಲಂಕ ಎನ್ನುವ ರಾಜನ ಬಳಿಗೆ ಹೋದನು. ಆಗ ಅರಸನು ಬ್ರಾಹ್ಮಣನನ್ನು ಕರಿಸಿ, ಈ ಋಷಿಯನ್ನು ಯಾಕೆ ಮಾನಗೇಡು ಮಾಡಿದಿ ಅಂತಾ ಕೇಳಿದನು. ಆಗ ಕೇಳಿದ ಕೂಡಲೇ, ರುದ್ರಾಕ್ಷಿ ಇಲ್ಲದಿರುವವರಿಗೆ ನಾನು ದಾನವನ್ನು ಕೊಡುವುದಿಲ್ಲಾ. ರುದ್ರಾಕ್ಷಿ ಇಲ್ಲದಿರುವವರನ್ನು ನಮ್ಮ ಮನೆಯೊಳಗೆ ಹೋಗಗೊಡುವುದಿಲ್ಲೆಂದು ನನ್ನ ವಚನವಿದೆ. ಹೀಗೆ ನಮ್ಮ ನೇಮವಿದೆ, ಅದರಂತೆ ಈ ಋಷಿಯು ರುದ್ರಾಕ್ಷಿ ಇಲ್ಲದೆ ಹಾಗೆ ಬಂದನು. ಬಂದ ಕೂಡಲೇ ನಮ್ಮ ಮನೆಯ ಮುಂದೆ ನಿಲ್ಲಬೇಡೆಂದು ಬೆದರಿಸಿದೆನು. ಇದರೊಳಗೆ ನನ್ನದೇನು ತಪ್ಪಿಲ್ಲ ಅಂದನು. ಆಗ ಆ ಋಷಿಯು ಸಿಟ್ಟಿಗೆದ್ದು ರುದ್ರಾಕ್ಷಿಯೊಳಗೆ ಏನು ಹುರುಳು ಅದೆ. ಅದೊಂದು ಗಿಡದ ಬೀಜವು. ಅಂಥ ಬೀಜಗಳನ್ನು ಸರಮಾಡಿಕೊಂಡು, ಕೊರಳೊಳಗೆ ಹಾಕಿಕೊಂಡರೆ ಆಗುವುದೇನು? ಇಂಥಾ ಹುಚ್ಚುತನವನ್ನೆಲ್ಲಾ ಬಿಟ್ಟುಬಿಡು ಅಂದನು. ಆಗ ಸುಪ್ರದೀಪಕ ಬ್ರಾಹ್ಮಣನು ರುದ್ರಾಕ್ಷಿಯ ಮಹಿಮೆಯು ಗೊತ್ತಿಲ್ಲದೇ ಯಾಕೆ ಮಾತನಾಡುವಿ? ನಿನಗೆ ಬೇಕಾದಂಥ ಶಕ್ತಿಯಿದ್ದರೂ ರುದ್ರಾಕ್ಷಿ ಧರಿಸಿದವರ ಸರಿ ನೀನು ಎಂದೂ ಆಗುವುದಿಲ್ಲಾ ಎಂದು ಎನ್ನಲು ಆಗ ಗಂಗಾಮುನಿಯು ನಾನು ಸ್ವರ್ಗಕ್ಕೆ ಹೋಗಿ ಕಲ್ಪವೃಕ್ಷದ ಹೂವನ್ನು ತರುತ್ತೇನೆ ನೋಡೆಂದು ಯೋಗಬಲದಿಂದ ಸ್ವರ್ಗಕ್ಕೆ ಹೋಗಿ ಆ ಹೂವನ್ನು ತೆಗೆದುಕೊಂಡು ಬಂದನು. ಆಗ ಸುಪ್ರದೀಪಕ ಬ್ರಾಹ್ಮಣನು ಇದೇನು ಆಶ್ಚರ್ಯವಲ್ಲ ನಾನು ಬೆಕ್ಕಿನ ಮರಿಯ ಸಂಗಡ ತರಿಸುವೆನೆಂದು ಹೇಳಿ, ತನ್ನ ಮನಿಯೊಳಗಿನ ಬೆಕ್ಕಿನ ಮರಿಯನ್ನು ತರಿಸಿ, ಅದರ ಕೊರಳೊಳಗೆ ರುದ್ರಾಕ್ಷಿ ಮಾಲೆಯನ್ನು ಹಾಕಿ, ಅದನ್ನು ಮೇಲಕ್ಕೆ ಹಾರಿಸಿದನು. ರುದ್ರಾಕ್ಷಿ ಧಾರಣ ಮಾಡಿದ ಪ್ರಭಾವದಿಂದ ಅದು ಸ್ವರ್ಗಕ್ಕೆ ಹೋಯಿತು. ಆಗ ಅಲ್ಲಿ ದೇವೇಂದ್ರನು ಆ ಬೆಕ್ಕಿನ ಮರಿಯ ಕೂಡ ಕಲ್ಪವೃಕ್ಷದ ಹೂವನ್ನು ಕಳಿಸಿದನು. ಆ ಬೆಕ್ಕಿನ ಮರಿಯು ಕಲ್ಪವೃಕ್ಷದ ಹೂವನ್ನು ತಂದು ಇವರ ಮುಂದೆ ಇಟ್ಟು ಅದು ಸುಪ್ರದೀಪಕ ಬ್ರಾಹ್ಮನನನ್ನು ಪ್ರದಕ್ಷಿಣೆ ಮಾಡಿ, ನಮಸ್ಕಾರ ಮಾಡಿ ನಿಂತಿತು. ಆಗ ಆ ಗಂಗಾ ಋಷಿಯು ಅದನ್ನೆಲ್ಲಾ ನೋಡಿ, ರುದ್ರಾಕ್ಷಿ ಧಾರಣ ಫಲವು ಹೆಚ್ಚೆಂದು ತಿಳಿದು, ತಾನು ಆ ಬ್ರಾಹ್ಮಣನಿಗೆ ನಮಸ್ಕಾರ ಮಾಡಿ, ಅವರಿಂದಾ ತಾನು ರುದ್ರಾಕ್ಷಿಧಾರಣ ಮಾಡಿಸಿಕೊಂಡು ಹೋದನು. ಕೇಳೋ ರಾಜೇಂದ್ರ, ಯಾವ ಮನುಷ್ಯನು ರುದ್ರಾಕ್ಷಿ ಧಾರಣ ಮಾಡುವನೋ ಅವನು ಬ್ರಾಹ್ಮಣನಿಗಿಂತ ಹೆಚ್ಚೆಂದು ತಿಳಿದು ಬಿಡು.

ಕೌಶಿಕ : ಅವ್ವಾ, ಈ ಪುರಾಣ ಪ್ರಸಿದ್ಧವಾದ ಚರಿತ್ರೆಯನ್ನು ಕೇಳಿ ನನ್ನ ಪಾಪವೆಲ್ಲ ಸುಟ್ಟು ಹೋಯಿತು. ಇನ್ನು ಮಂತ್ರ ಅಂದರೇನು ? ಅದರ ಪ್ರಭಾವದಿಂದ ಏನೇನು ಲೀಲೆಗಳಾಗುತತವೆ ಅದನ್ನಿಷ್ಟು ಹೇಳು ತಾಯೆ.

ಅಕ್ಕಮಹಾದೇವಿ : ರಾಜಾ ಮಂತ್ರ ಅಂದರೆ ಪಂಚಾಕ್ಷರಿ ಮಂತ್ರ. ಇದರ ಮಹತ್ವವನ್ನು ಹೇಳುತ್ತೇನೆ ಕೇಳು. ಆ ಪಂಚಾಕ್ಷರಿಯ ಮಹತ್ವವೆಂದರೆ, ಪೂರ್ವದಲ್ಲಿ ಸಾನಂದ ಋಷಿಯು ಸ್ವದೇಶ ಸಂಚಾರ ಮಾಡುತ್ತ ಯಮಲೋಕಕ್ಕೆ ಹೋದನು. ಅಲ್ಲಿಗೆ ಹೋದ ಕೂಡಲೇ ಕೋಟ್ಯಾನುಕೋಟಿ ಪ್ರಾಣಿಗಳೆಲ್ಲ ನರಕದೊಳಗೆ ಬಿದ್ದು ಕಷ್ಟದಿಂದ ಒದ್ದಾಡುವದನ್ನು ನೋಡಿ ಶಿವ ! ಶಿವಾ !! ಪ್ರಾಣಿಗಳು ಎಂಥ ಘೋರ ತಮವಾದ ನರಕದೊಳಗೆ ಬಿದ್ದು, ನೋಡಬಾರದಂಥ ಕಷ್ಟವನ್ನು ಅನುಭೋಗಿಸಲಿಕ್ಕೆ ಹತ್ತಿರುವವಲ್ಲಾ. ಈ ಪ್ರಾಣಿಗಳ ದುಃಖವನ್ನು ನಾನು ಹ್ಯಾಗೆ ನೋಡಲಿ. ನೋಡದ ಹಾಗೆ ಸುಮ್ಮನೇ ಹೋಗುವುದು ಹೋಗ್ಯವಲ್ಲಾ ಎಂದು ವಿಚಾರಿಸಿ, ಕಷ್ಟದಿಂದ ಪ್ರಾಣಿಗಳನ್ನು ಉದ್ದಾರ ಮಾಡಬೇಕೆಂದು ಆ ಸಾನಂದ ಋಷಿಯು ಆ ನರಕದೊಳಗಿನ ಪ್ರಾಣಿಗಳಿಗೆಲ್ಲ ಕೇಳಿಸುವಂತೆ ಶಿವ ಪಂಚಾಕ್ಷರಿ ಮಂತ್ರವನ್ನು ನಮಃ ಶಿವಾಯ ಅಂತಾ ಪಠಣ ಮಾಡಿದ. ಕೂಡಲೇ ಆ ನರಕದೊಳಗಿನ ಪ್ರಾಣಿಗಳೆಲ್ಲ ಅದನ್ನು ಕೇಳಿದ ಕೂಡಲೇ ನರಕದೊಳಗಿಂದ ಮುಕ್ತಿಯನ್ನು ಹೊಂದಿದವು. ಇನ್ನಾದರೂ ಈ ಮಂತ್ರದ ಮಹತ್ವವನ್ನು ತಿಳಿದುಕೋ. ಈ ಮಂತ್ರವು ಸಾವಿರ ಮುಖದ ಆದಿಶೇಷನಿಗೂ ಸಹ ವರ್ಣನೆ ಮಾಡುವುದು ಅಸಾಧ್ಯವಿರುತ್ತದೆ. ನಾನು ಹೇಳಿದಂಥ ಅಷ್ಟಾವರಣಗಳಲ್ಲಿ ವಿಶ್ವಾಸವನ್ನಿಟ್ಟು, ಅದನ್ನು ಧಾರಣಮಾಡಿ, ಶಿವಭಕ್ತನಾಗು, ಅಂದರೆ ಸಾಕ್ಷಾತ್ ಸದಾಶಿವನ ಸ್ವರೂಪನಾಗುತ್ತೀ ಯಾಕೆ ಕೌಶಿಕ ರಾಜಾ ನಿನ್ನ ಮನಸ್ಸಿನಲ್ಲಿ ಇನ್ನು ಏನಾದರೂ ಕೇಳುವ ಆಶೆ ಇದ್ದರೆ ಕೇಳು.

ಕೌಶಿಕ : (ಪದ)

ಮತ್ತೆ ಯಾತರ ಆಶೆತಾಯೇ ಸೌಖ್ಯದಾಯೇ
ಅಷ್ಟಾವರಣದ ಮಹಿಮೆ ಕೇಳಿ ಹೊಂದಿದೆ ಪುಣ್ಯ ॥ಪಲ್ಲ ॥

ಶಿವಭಕ್ತನಾಗಿ ಹೆಮ್ಮೆ ಪಡಿಯುವೆನವ್ವಾ
ಧರ್ಮ ಮಾತೆ ಎನ್ನಮಾಡು ಶಿವಭಕ್ತನನ್ನಾಗಿ
ನಿನ್ನ ನಂಬಿದೆನವ್ವಾ ನಾನು ಪ್ರತ್ಯಕ್ಷ ಮಹಾಮಾಯೆ ॥1 ॥

ವಿಭೂತಿ ಹಚ್ಚುವೆ ರುದ್ರಾಕ್ಷಿ ಧರಿಸುವೆ
ಶಿವಮಂತ್ರ ಭಜಿಸುವೆ ಲಿಂಗವ ಧರಿಸುವೆ
ಕೊಡು ಎನಗೆ ಲಿಂಗವನ್ನು ತಾಯೇ ಮಹಾದೇವಿ ಗುರುನೀನಾ ॥2 ॥

(ಮಾತು) ಅವ್ವಾ, ಈ ಅಷ್ಟಾವರ್ಣದ ಪ್ರಭಾವ ಕೇಳಿ ಸಂತುಷ್ಟನಾದೆನು. ಆದ್ದರಿಂದ ನನಗೆ ವಿಭೂತಿ, ರುದ್ರಾಕ್ಷಿ ಧಾರಣಮಾಡಿ, ನನ್ನನ್ನು ಶಿವಭಕ್ತನನ್ನಾಗಿ ಮಾಡು ತಾಯೇ.

ಅಕ್ಕಮಹಾದೇವಿ : ಅಪ್ಪಾ ಕೌಶಿಕಾ, ಶಿವಭಕ್ತನಾಗುವದೆಂದರೆ, ಸುಮ್ಮನೆ ಅಲ್ಲಾ. ಸಂಸಾರದ ಮೇಲೆ ಎಷ್ಟು ಮೋಹವಿರುವುದೋ ಇದರ ಹತ್ತುಪಾಲು ಮೋಹವು ಶಿವನಲ್ಲಿ ಇದ್ದರೆ ಆಗುತ್ತದೆ. ಅದಕ್ಕೆ ನೀನು ರಾಜನಿರುವಿ. ಆದರಿಂದ ಸಂಸಾರದ ಮೇಲೆ ಮೋಹವನ್ನು ಬಿಡುವುದು ಬಹಳ ಕಠಿಣವಿದೆ. ಅದರಿಂದ ನೀನು ಬಹಳ ಎಚ್ಚರದಿಂದ ನಡೆಯುಬೇಕು ನೋಡು ರಾಜಾ.

ಕೌಶಿಕ : (ಪದ)
ಸಂಸಾರ ನೀಗಿದೆ ಮಮಜನನಿ ಬಹು ಧ್ಯಾನಿ
ಎನ್ನ ಕರುಣಿಸು ನೀ ಶಿವನ ಧ್ಯಾನಿ
ನಿಜ ಸುಖ ಸಂಪನ್ನಿ ಈ ರಾಜ ಕಿರೀಟ
ಯಾತಕ್ಕೆ ಬೇಕು ಎನಗೆ ಬಿಟ್ಟೆ ಚೆಲುವೆನೀಗ
ಒಗಿಯುವೆ ವಸ್ತ್ರವ ಸೀಳಿ ಒಗೆಯುವೆನು
ಎನಗೆ ಬೇಕು ನಿನ್ನ ರಾಜ ಚಿನ್ನಗಳನ್ನೆಲ್ಲಾ
ತೆಗೆಯುವೆನು ನಿಜಸುಖ ಸಂಪನ್ನೆ ॥

(ಮಾತು) ಅವ್ವಾ, ಈಗ ನಾನು ಈ ರಾಜ ಪೋಷಾಕುಗಳನ್ನೆಲ್ಲಾ ತೆಗೆದು ಒಗೆದು ದೇವಿ ನಿನ್ನ ಪಾದ ಕೃಪೆಯಿಂದ ಈ ಭವಸಾಗರವನ್ನು ದಾಟಿ ಪಾರಾದೆನು. ನಮಗೆ ಶಿವದೀಕ್ಷೆಯನ್ನು ಕೊಟ್ಟು ಶಿವಭಕ್ತನನ್ನಾಗಿ ಮಾಡಬೇಕೆಂದು ಬೇಡಿಕೊಳ್ಳುತ್ತೇನೆ.

(ಅಷ್ಟರಲ್ಲಿ ತನ್ನನ್ನು ತಾನೇ ನೋಡಿಕೊಂಡು)

ಆಹಾ ! ನಾನು ಶಿವಭಕ್ತನಾಗಬೇಕೆಂದು ಹವಣಿಸುವುದರೊಳಗಾಗಿ ತನ್ನಿಂದ ತಾನೇ ಕಪನಿ ಅಂಗಿ ಆಯಿತಲ್ಲಾ, ಇನ್ನು ಮೇಲೆ ಎನಗೆ ಶಿವದೀಕ್ಷೆ ಕೊಟ್ಟು, ಈ ಲಿಂಗವನ್ನು ಕಟ್ಟಿ ಮಂತ್ರೋಪದೇಶ ಮಾಡಿ ನನ್ನನ್ನು ವೀರಶೈವನೆಂದು ಮಾಡು ತಾಯೇ.

ಅಕ್ಕಮಹಾದೇವಿ : ಶಷಭಾಷ್ ಕೌಶಿಕಾ, ಇಂದಿಗೆ ನೀನು ಶಿವಭಕ್ತನಾದೆ. ಭವಪಾಶದಿಂದ ಮುಕ್ತನಾದಿ. ಇಗೋ ಹಿಡಿ ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸು. ಕಮಂಡಲ, ಕೃಷ್ಣಾಜಿನಗಳನ್ನು ತೆಗೆದುಕೊಳ್ಳು (ಕೊಡುವಳು)