ದೃಶ್ಯ

(ಎಲ್ಲರೂ ಶ್ರೀಶೈಲ ಪರ್ವತದಲ್ಲಿ ಕುಳಿತಿರುತ್ತಾರೆ).

ಅಲ್ಲಮಪ್ರಭು : ಎಲ್ಲರಿಗೂ ಮಂಗಲವಾಗಲಿ ! ಮಹಾದೇವಿ, ಕೌಶಿಕ ರಾಜನ ಗರ್ವಭಂಗಮಾಡಿ, ಸಂನ್ಯಾಸ ದೀಕ್ಷೆ ಕೊಟ್ಟಿರುವೆಯಲ್ಲ ತಾಯಿ. ನಿನ್ನ ಮಹಾಶಕ್ತಿಗೆ ಮೆಚ್ಚಿದೆ, ಮೆಚ್ಚಿದೆ.

ಅಕ್ಕಮಹಾದೇವಿ : ಜಗದ್ಗುರುವೆ, ಶಿವಸ್ವರೂಪರಾದಂಥಾ ತಾವು ಈ ಮಹಾರಾಜನಿಗೆ ಇಷ್ಟಲಿಂಗ ಧಾರಣ ಮಾಡಿರಿ. ನನ್ನ ಉಪದೇಶದಿಂದ ಸಕಲ ಭಾಗ್ಯ ಅರಸೊತ್ತಿಗೆ ತೊರೆದು ಸಂನ್ಯಾಸಿ ಆಗಿರುವನು. ಆತನಿಗೀಗ ಹಮ್ಮು : ಬಿಮ್ಮುಗಳ ಯಾವ ಬಾಧೆಯಿಲ್ಲ.

ಅಲ್ಲಮಪ್ರಭು : ದೇವಿ, ನನ್ನ ಅಭಿಲಾಷೆಯ ಪ್ರಕಾರ ಜಗತ್ತಿನಲ್ಲಿ ಶಿವಜ್ಞಾನವನ್ನು ಹೆಚ್ಚಿಸಿದಿ. ನಿನ್ನ ಕೀರ್ತಿ ಅಜರಾಮರವಾಗಿ ಉಳಿಯಲಿ ! ಇದೋ ಈ ಕೌಶಿಕ ಮಹಾರಾಜನಿಗೆ ಇಷ್ಟಲಿಂಗಧಾರಣೆ ಮಾಡುತ್ತೇನೆ.

(ಕೊರಳೊಳಗೆ ಕ್ಯಾವಿ ಅರಿವೆಯಲ್ಲಿ ಕಟ್ಟಿದ ಲಿಂಗ ಧಾರಣಮಾಡಿ, ರಾಜನ ಕಿವಿಯಲ್ಲಿ ಗೌಪ್ಯ ಮಂತ್ರೋಪದೇಶ ಮಾಡಬೇಕು).

ಈಗ ಕೌಶಿಕರಾಜ ಲಿಂಗಾಯತನಾಗಿದ್ದಾನೆ. ಅಂದರೆ ಲಿಂಗವನ್ನು ಆಯುತ ಮಾಡಿಕೊಂಡಿದ್ದಾನೆ. ಷಟ್‌ಸ್ಥಲ, ಅಷ್ಟಾವರಣಗಳನ್ನು ಪಾಲಿಸುತ್ತ ಸದ್‌ಬುದ್ಧಿವಂತ ನಾಗಲೆಂದು ಆಶೀರ್ವದಿಸಿದ್ದೇನೆ. ಅವನು ಸಂನ್ಯಾಸ ಬಿಟ್ಟು ತನ್ನ ರಾಜ್ಯವನ್ನು ಆಳಲಿ ಅವನಿಗೆ ನೀನೇ ಆಶೀರ್ವಾದ ಮಾಡು. ಮರಳಿ ಹೋಗಲಿ.

ಕೌಶಿಕ ಹೇ ಪ್ರಭುವೇ, ನನಗೆ ರಾಜ್ಯವು ಬೇಡಾ. ಹೆಂಡತಿಯು ಬೇಡಾ. ನಾನು ತಿಳಿಯದೇ, ಈ ಸಂಸಾರವು ಬಹಳೇ ಸುಲಭವೆಂದು ತಿಳಿದು ಈ ತಾಯಿಯನ್ನು ಬೇಕಾದಷ್ಟು ಕಾಡಿಕಾಡಿ ಪಶ್ಚಾತ್ತಾಪಪಟ್ಟು, ಈಗ ನಾನು ಮುಕ್ತಿ ಹೊಂದಬೇಕೆಂದು ನಿಮ್ಮ ದರ್ಶನಕ್ಕೆ ಬಂದಿರುವೆನು. ನಮ್ಮ ಪಾದಸೇವೆ ಮಾಡುತ್ತ ಇಲ್ಲಿಯೇ ಇರುವೆನು. ನಾನು ಮತ್ತೆಲ್ಲಿ ಹೋಗಲಾರೆ.

ಅಲ್ಲಮಪ್ರಭು : ಕೌಶಿಕಾ, ನೀನು ಹೀಗೆ ಅಜ್ಞಾನವನ್ನೆಲ್ಲಾ ಅಳಿದು ಸಂಸಾರ ನೀಗಿ ಸಂನ್ಯಾಸಿ ಆದರೆ ನಿನಗೆ ಮುಕ್ತಿ ಆಗಲಾರದು. ನಿನ್ನ ಹೆಂಡತಿ ಮಹಾಪತಿವ್ರತೆ, ಮಹಾಭಕ್ತಿವಾನಳು. ಆಕೆಯು ತನ್ನ ಪ್ರಾಣಕ್ಕಿಂತ ತನ್ನ ಗಂಡನೇ ಬೇಕೆಂದು ಪ್ರಾಣಬಿಡಲು ಸಿದ್ಧಳಾದವಳು. ಆಕೆಯ ಬಯಕೆಯನ್ನು ಬದಿಗಿಟ್ಟು, ನೀನು ಸಂನ್ಯಾಸಿಯಾಗಿ ಮುಕ್ತಿ ಪಡೆಯಬೇಕಾದರೆ ಅದು ಎಂದಿಗೂ ಸಾಧ್ಯವಿಲ್ಲ, ನೀನು ಸಂಸಾರ ಮಾಡಿ ರಾಜ್ಯ ಕಾರುಭಾರು ಮಾಡು. ಅಂದರೆ ನೀನು ಸಂನ್ಯಾಸಿಯಾದರಷ್ಟೇ ಮುಕ್ತಿ ಸಿಗುವುದು ಅಂತಾ ತಿಳಿಯಬೇಡಾ. ಸಂಸಾರದಲ್ಲಿ ಇದ್ದರೇನಾಯಿತು ? ಸ್ವಲ್ಪ ಕಾಲವಾದರೂ ಶಿವಶಿವಾ ಅಂತಾ ಶಿವ ಭಜನೆ ಮಾಡಿದರೆ ಎಲ್ಲರೂ ಮೋಕ್ಷ ಹೊಂದುತ್ತಾರೆ. ಆದ್ದರಿಂದ ನೀವು ಗಂಡ : ಹೆಂಡತಿಯರು ಸುಖದಿಂದ ರಾಜ್ಯ ಕಾರಭಾರ ಮಾಡಿ ಕೊನೆಗೆ ಮುಕ್ತಿ ಹೊಂದಿರಿ. ಹೋಗಿರಿನ್ನು ನಿಮಗೆ ಒಳ್ಳೆಯದಾಗಲಿ!

ಕೌಶಿಕ : ಆಗಲಿ ತಂದೇ, ನೀವು ಹೇಳಿದಂತೆಯೇ ಆಗಲಿ. ಆದರೆ ನಮ್ಮ ಮೇಲೆ ನಿಮ್ಮ ಅಂತಃಕರುಣವು ಸದಾ ಇರಲೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ.

ಅಲ್ಲಮಪ್ರಭು : ಯಾವತ್ತೂ ಮಾನವ ಕುಲಕೋಟಿಯನ್ನು ಉದ್ಧಾರ ಮಾಡುವುದರ ಸಲುವಾಗಿ ಸ್ವತಃ ನಾನೇ ನಿಂತಿರುವೆನು. ಹೋಗಿ ಬನ್ನಿರಿ.

ಕೌಶಿಕ,
ಚಾರುಮತಿ : (ಇಬ್ಬರೂ) ಮಹಾಪ್ರಭುವೆ ತಮಗೆ ನಮ್ಮ ಪ್ರಣಾಮಗಳು. ತಾಯಿ ಅಕ್ಕಮಹಾದೇವಿಯವರೇ ತಮಗೆ ನಮ್ಮ ಪ್ರಣಾಮಗಳು. ತಾವು ನಮಗೆ ಗುರುಪದೇಶ ಮಾಡಿ ಆಶೀರ್ವದಿಸಿರಿ.

(ಅಲ್ಲಮಪ್ರಭು, ಕೌಶಿಕ ಮತ್ತು ಚಾರುಮತಿ ದಂಪತಿಗಳಿಬ್ಬರಿಗೂ ಕಿವಿಯಲ್ಲಿ ಗುರುಪದೇಶ ಮಾಡಬೇಕು).

ಅಲ್ಲಮಪ್ರಭು : (ಅಕ್ಕಮಹಾದೇವಿ ಕುರಿತು) ದೇವಿ, ಇದುವರೆಗೂ ನಿನ್ನ ಶಾಪದಿಂದ ಗಂಡ ಹೆಂಡತಿಯರಿಬ್ಬರೂ ಅಗಲಿರುವರು. ಇವರಿಬ್ಬರಿಗೂ ಶಿವದೀಕ್ಷೆ ಕೊಟ್ಟು ಪುನರ್‌ವಿವಾಹ ಮಾಡೋಣ.

(ಕೌಶಿಕನು ರಾಜಪೋಷಾಕು ಧರಿಸಬೇಕು. ವಿವಾಹ ಸಂಭ್ರಮ).

ಕೌಶಿಕ ತಾಯೆ ಮಹಾದೇವಿ, ತಾವು ಕೈಲಾಸದಲ್ಲಿರುವ ಪಾರ್ವತಿಯೇ ಹೌದು. ಅಲ್ಲಮಪ್ರಭು ಸ್ವಾಮಿಯವರು ಸಾಕ್ಷಾತ್ ಮಲ್ಲಿಕಾರ್ಜುನನೇ ಆಗಿರುವುದು ಸತ್ಯ. ಯಾವತ್ತು ನರಲೋಕದ ಜನರು ಇದುವರೆಗೂ ಮಹಾಶಿವಶರಣೆ ಅಕ್ಕಮಹಾದೇವಿಯ ಕಥೆಯನ್ನು ಅರಿತವರಾಗಿದ್ದಾರೆ. ಈ ಜಗತ್ತಿನಲ್ಲಿ ಪಾತಿವ್ರತ್ಯವೇ ಮೇಲು ಎಂಬುದು ತಿಳಿದಿದೆ. ಆದ್ದರಿಂದ ಶಿವಭಕ್ತಿಯಿಂದ ನಡೆಯಿರೆಂದು ಲೋಕವಾಸಿಯಾದ ನಿಮ್ಮೆಲ್ಲರಿಗೆ ಶಿರಬಾಗಿ ಬೇಡುವೆನು. ಸಾಕ್ಷಾತ್ ದೇವನಿಧಿಯಾದ ಅಲ್ಲಮಪ್ರಭುಗಳನ್ನು, ಮಾತೆ ಮಹಾದೇವಿಯನ್ನು ಸ್ತುತಿಸಿ, ದುರ್ಗಾ ದೇವಿಯನ್ನು ಸ್ಮರಿಸಿ, ಶ್ರೀ ಮಲ್ಲಿಕಾರ್ಜುನನ ಕೃಪೆಯಿಂದ ನಾವೆಲ್ಲರೂ ಮಂಗಲ ಪಾಡುವಾ.

(ಮಂಗಳ ಪದ)

ಮುತ್ತಿನಾರತಿಯನ್ನು ಎತ್ತಿ ಬೆಳಗುವೆನೀಗ
ಸತ್ಯಮೂರ್ತಿ ಅಕ್ಕಮಹಾದೇವಿ ಪಾರ್ವತಿಗೆ ॥1 ॥

ಸತ್ಯ ನಿರ್ಮಲ ಸುಮತಿ ಗರ್ಭದಿ
ಸಾತ್ವಿಕ ಕಳೆ ಮೂರ್ತಿಗೊಳ್ಳುತೆ
ಪ್ರೀತಿಯಿಂದ ಧರೆಗಿಳಿದು ಬಂದಿಹ
ನಿತ್ಯ ನಿರ್ಮಲ ದೇವಿಗೆ ಪಾರ್ವತಿಗೆ ॥2 ॥

ದುಷ್ಟ ಕೌಶಿಕನೊಳಗೆ ಮೂಡಿದ
ಕೆಟ್ಟ ಕಾಮನ ಸುಟ್ಟು ಹಾಕುತ
ಶ್ರೇಷ್ಠ ಕಲ್ಯಾಣಕ್ಕೆ ಪೋಗುವೆ
ದೃಷ್ಟಿಯಿಂದ ಪ್ರಭು ಕಂಡ ಸತಿಗೆ ಪಾರ್ವತಿಗೆ ॥3 ॥

ಅಂಗ ಪತಿತಾ ಸತಿಯಳನು ತಾ
ಅಂಗ ಭೋಗವ ದೂರ ಮಾಡುತ
ಅಂಗಾಂಗ ಸಮರಸ ಪಡೆಯುತ
ಲಿಂಗದೊಳು ಬಯಲಾದ ದೇವಿಗೆ ಪಾರ್ವತಿಗೆ ॥4 ॥

ದೇವಗಿರಿ ಪುರದೊಳಗೆ ಮೆರೆವಾ
ಪುಟ್ಟರಾಜ ಕರುಣ ಕಂದಗೆ
ಶಿವಯೋಗಿ ಕುಮಾರನು ಪೊರೆದ
ಶಿವನ ಪರಮ ಜ್ಯೋತಿಗೆ ಪಾರ್ವತಿಗೆ ॥5 ॥

 

: ಸಮಾಪ್ತ –