ಚಂದ್ರಸೇನ : (ಪದ)

ಏನೆಂದು ಹೇಳಲಿ ಕೌಶಿಕಾ ಅವರನ್ನು ನಂಬಿ
ನೀ ಆದೀಯಲ್ಲೋ ಮೂರ್ಖಾ
ಆ ತರುಣಿ ಮಹಾದೇವಿ ಜಗದೊಳು ಮುರುಕು
ಶಾಸ್ತ್ರವ ಬೋಧಿಸುತಲಿ
ಈ ನರರನೆಲ್ಲಾ ಈ ನರಕದಲ್ಲಿ ತಿರುಗಾಡಿಸಿ ಕೆಟ್ಟು ಬಾ
ಹೋಮದ ತಂತ್ರವ ಬಲ್ಲೆನು ಸೋಗ
ಸಂಗೊಳಿಸುವ ಮಾಯೆ
ನಿದ್ರೆಯಲ್ಲಿ ಮಲಗಿ ಮಹೇಂದ್ರ ಜಾಲವನ್ನು ಒಗೆದು
ಸಾಧಿಸಿ ಮೆರೆಯುವಳು ತಾನು ॥

(ಮಾತು) ಕೌಶಿಕಾ, ಮಹಾದೇವಿಯು ಯಾವತ್ತೂ ಜನರನ್ನೆಲ್ಲಾ ಮರುಳು ಮಾಡುವಂತಾ ಮಾಯಗಾರತಿ ಇರುವಳು ಬಲ್ಲೆಯೋ, ಆಕೆಯು ಜನನ : ಮರಣ, ಜಲಸ್ತಂಬ, ಅಗ್ನಿಸ್ತಂಬ ಇತಿಂಥಾ ಸಿದ್ದಿಗಳನ್ನು ಪಡೆದು, ಆ ಸಿದ್ದಿಗಳ ಬಲದಿಂದ ಈ ಜಗತ್ತನ್ನು ಮೋಸ ಮಾಡುತ್ತಿರುವಳು. ಬಳ್ಳೆಗಾಂವಿ ಪುರದೊಳಗೆ ಅಲ್ಲಮಪ್ರಭು ಎನ್ನುವ ಒಬ್ಬ ವಿರಕ್ತನು ಇರುವನಂತೆ, ಅವನ ಸುದ್ಧಿಯನ್ನು ಕೇಳಿಲ್ಲವೇನು ? ಮಹಾದೇವಿಯು ಕಥೆಯನ್ನೂ ಕೇಳಿಲ್ಲವೇನು ? ಅಲ್ಲಮನಿಗೂ ಆ ಮಹಾದೇವಿಗೂ ಬಹಳೇ ವೈವಾಟ ಇದೆ. ಅಲ್ಲಿಂದಾ ಅವರಿಬ್ಬರೂ ಮೇಲಿಂದ ಮೇಲೆ ಜನರಿಗೆ ಹುಚ್ಚು ಹಚ್ಚಲಿಕ್ಕೆ ಹತ್ತಿರುವರು. ಅವರ ಉಪದೇಶಕ್ಕೆ ಮರುಳಾಗುವಿಯೇನು ? ನಿನಗೆ ಬುದ್ಧಿ ಎಲ್ಲಿರುವುದು? ಸುಮ್ಮನೆ ನನ್ನ ಮಾತು ಕೇಳಿ ಮನೆಗೆ ಹೋಗು.

ಕೌಶಿಕ ಚಂದ್ರಸೇನಾ, ಮಹಾದೇವಿ, ಅಲ್ಲಮಪ್ರಭುಗಳ ಸತ್ವ ತಿಳಿಯದೇ ಕತ್ತೆಯ ಹಾಗೆ ಎತ್ತ ಒದರುತ್ತೀ. ಇನ್ನೊಮ್ಮೆ ಅವರನ್ನು ನಿಂದೆ ಮಾಡಿದರೆ ನಿನ್ನ ನಾಲಿಗೆಯನ್ನು ಕಿತ್ತೇನು? ಥೂ ಪಾಪಿಷ್ಟಾ, ಚಂಡಾಲನೇ ನಿನ್ನ ಕೂಡ ಮಾತನಾಡುವುದು ಸಾಕು.

ಚಂದ್ರಸೇನ : ಶಹಭಾಷ್ ಕೌಶಿಕಾ, ನಾನು ಪಾಪಿಷ್ಠಾ, ನೀನು ಪುಣ್ಯವಂತಾ ಬಲ್ಲೆಯಾ. ಅಂದಲ್ಲಿಯೇ ಹೆಂಡರು, ಮಕ್ಕಳು ಎಲ್ಲಾ ಬಿಟ್ಟು ಕೊಟ್ಟು, ಮೈತುಂಬ ಬೂದಿ ಬಡಕೊಂಡು, ಮನೆಮಾರು ಬಿಟ್ಟು ಗುಡ್ಡಾ ಸೇರಿದಿ. ಮಹಾದೇವಿಯನ್ನು ನಂಬಬೇಡಾ. ಅದರಿಂದ ಎಂದಿಗೂ ಸದ್ಗತಿ ಹೊಂದಲಿಕ್ಕಿಲ್ಲಾ. ಸಮೀಪದಲ್ಲಿ ಬದರಿಕಾಶ್ರಮದಲ್ಲಿ ಕ್ಯಾತಯ್ಯ ಎನ್ನುವ ಋಷಿಗಳು ಇರುತ್ತಾರೆ. ಅವರನ್ನಾದರೂ ಕೇಳಿ, ಆ ಮಹಾದೇವಿಯ ಮೇಲಿನ ಆಶೆ ಬಿಟ್ಟು ಬಿಡು. ತಿಳಿಯಿತಿಲ್ಲೊ, ನಾನು ಹೋಗುತ್ತೇನೆ.

ಕೌಶಿಕ ಏನು ಚಂದ್ರಸೇನಾ, ಇಲ್ಲಿ ಸಮೀಪದಲ್ಲಿ ಯಾವ ಋಷಿಗಳು ಇರುತ್ತಾರೆ ?

ಚಂದ್ರಸೇನ : ಕ್ಯಾತಯ್ಯ ಮಹಾಋಷಿಗಳಿರುತ್ತಾರೆ ನೋಡು.

ಕೌಶಿಕ ಅವರು ಎಂಥವರಿರುವರು ?

ಚಂದ್ರಸೇನ : ಅವರು ಜಗತ್ಪ್ರಸಿದ್ದರಾದಂಥಾ ಋಷಿಗಳು. ಅವರ ಮಹಾತ್ಮ್ಯವು ಹರಿಹರ ಬ್ರಹ್ಮಾದಿಗಳಿಗೂ ಸಹಿತ ತಿಳಿಯದು. ಅವರನ್ನು ನೀನು ದರ್ಶನ ಮಾಡಿದರೆ ನಿನ್ನ ಜನ್ಮ ಉದ್ದಾರವಾಯಿತೆಂದು ತಿಳಿ. ಅವರ ಪಾದದರ್ಶನದಿಂದ ಸದ್ಗತಿಯಾಗುತ್ತದೆ. ಅವರ ದರ್ಶನ ಇಚ್ಛೆ ನಿನಗಿದ್ದರೆ, ನೀನು ಹೀಗೆಯೇ ಅರ್ಧ ಮೈಲು ಹೋಗು ! ಅಲ್ಲಿಂದ ಪೂರ್ವಕ್ಕೆ ಹೋದರೆ, ಅಲ್ಲಿ ಒಂದು ವಟವೃಕ್ಷದ ಬಳಿಯಲ್ಲಿ ಯೋಗ ಸಮಾಧಿಯಲ್ಲಿ ಕುಳಿತು ಬಿಟ್ಟಿರುತ್ತಾರೆ ತಿಳಿಯಿತಿಲ್ಲೋ. ಬೇಕಾದರೆ ಹೋಗು ಬೇಡವಾದರ ಬಿಡು. ಯಾಕೆ ಏನಂತಿ ? ಹೋಗುತ್ತೀಯೋ ಇಲ್ಲವೋ ?

ಕೌಶಿಕ ಋಷಿಗಳ ಪಾದದರ್ಶನಕ್ಕೆ ಹೋಗದೆ ಏನು ಮಾಡಲಿ ? ಅಕಸ್ಮಾತ ಇಲ್ಲಿಗೆ ಬಂದೆನು. ಅವರು ನಮ್ಮಂಥವರ ಕೂಡ ಮಾತನಾಡುವರೇನು ?

ಚಂದ್ರಸೇನ : ಏನು, ಕೌಶಿಕಾ ಮಾತಾಡದೇನು ಮಾಡ್ಯಾರು. ಎರಡನೇಯವರ ಉಪಚಾರ ಮಾಡುವುದರಲ್ಲಿ ಅವರಂಥವರು ಈ ಪೃಥ್ವಿಯ ಮೇಲೆ ಯಾರೂ ಇಲ್ಲಾ. ಅವರು ತ್ರಿಕಾಲಜ್ಞಾನಿಗಳು ಇರುತ್ತಾರೆ. ನಿಮ್ಮಂಥವರು ಹೋದ ಕೂಡಲೇ ಭೂತ, ಭವಿಷ್ಯ, ವರ್ತಮಾನ ಕಾಲಗಳನ್ನೆಲ್ಲ ನೀವು ಕೇಳದಿದ್ದರೂ ಮುಂಚಿತವಾಗಿಯೇ ಹೇಳುತ್ತಾರೆ. ಇದು ಹಿತಾ, ಇದು ಅಹಿತಾ ಅನ್ನುವುದನ್ನು ತಿಳಿಸಿಕೊಡುತ್ತಾರೆ. ಕೇಳಿದೆಯಾ ಇವನ್ನೆಲ್ಲಾ. ನೀನು ವಿಪರೀತ ಮಾಡಿಕೊಂಡಿರುವಿ. ನನಗೆ ಬಹಳ ಹೇಳಿಯಾಯಿತು. ನಾನು ಇನ್ನು ಬೇಟೆಯಾಗುತ್ತ ನನ್ನ ಊರ ಹಾದಿ ಹಿಡಿಯುತ್ತೇನೆ.

ಕೌಶಿಕ ಒಳ್ಳೆಯದು ಹೋಗುವಂಥವನಾಗು.

ಚಂದ್ರಸೇನ : (ಸ್ವಗತ) ನಾನೀಗ ಋಷಿವೇಷ ಧರಿಸಿ ಅವನು ಬರುವಲ್ಲಿ ಕೂಡ್ರುವೆನು.

ದೃಶ್ಯ
(ಚಾರುಮತಿಯು ಋಷಿಯ ವೇಷ ಧರಿಸಿ ಕೂಡ್ರುವಳು)
ಕೌಶಿಕ : ಸ್ವಾಮಿ ಪ್ರಣಾಮಗಳು. ನೀವು ಇಲ್ಲಿ ವಾಸಮಾಡಿ ಎಷ್ಟು ವರ್ಷಗಳಾದವು ?

ಋಷಿ : ನಾನು ವಾಸಮಾಡಿ ಸರಾಸರಿ ಐದುನೂರು ವರ್ಷ ಆಯಿತು.

ಕೌಶಿಕ ಏನು ಸ್ವಾಮಿ ಮನುಷ್ಯ ಜನ್ಮಕ್ಕೆ ನೂರುವರ್ಷ ಆಯುಷ್ಯ ಎಂದು ಹೇಳುತ್ತಾರೆ. ಹೀಗಿದ್ದೂ ನಿವು ಐದುನೂರು ವರ್ಷಗಳವರೆಗೆ ಹೇಗೆ ಬಾಳಿದಿರಿ ಸ್ವಾಮಿ ತಿಳಿಸಿ ಹೇಳಿ.

ಋಷಿ : ಎಲವೋ ತಪಸ್ಸಿನ ಶಕ್ತಿಯೆಂದರೆ ಎಂಥಾದ್ದೆಂದು ತಿಳಿದಿರುವಿ? ಅಂತಾ ತಪಸ್ಸಿನ ಬಲದಿಂದ ನಾನು ಇನ್ನು ಸಾವಿರ ವರ್ಷವಾದರೂ ಹೀಗೆಯೇ ಇರುತ್ತೇನೆ ನೋಡು. ಏನೋ ನೀನು ನನಗೆ ಗುರುಗಳೆಂದು ಅಂದೆಯಲ್ಲಾ ನಾನು ಇನ್ನೂ ಗುರುಸ್ವರೂಪವನ್ನು ಹೊಂದಿಲ್ಲಾ ಆದ್ದರಿಂದ ಹಾಗೆ ಅನ್ನಲಾಗದು.

ಕೌಶಿಕ ಸ್ವಾಮಿ, ಇಂಥ ತಪೋಶಕ್ತಿಯನ್ನು ಪಡೆದಂಥ ನೀವು ಹೀಗಿದ್ದೂ ಗುರುಸ್ವರೂಪವ ಹೊಂದಿಲ್ಲವೆಂದು ಅನ್ನುವಿರಲ್ಲಾ ?

ಋಷಿ : ಎನೋ ನೀನು ಕೇವಲ ಅಯುಷ್ಯವನ್ನು ನೋಡಿ ಗುರು ಎಂದು ಕರೆಯುತ್ತೀಯಲ್ಲಾ. ಗುರುಸ್ವರೂಪವೆಂದರೆ ಸಾಧಾರಣವಲ್ಲಾ. ನನ್ನೇನು ಮಾಡುತ್ತೀ? ಲಕ್ಷಾಂತರ ಸಂವತ್ಸರಗಳು ಕಳೆದುಹೋದರೂ ಎಂದೂ ಮುಪ್ಪು ಆಗದಂಥಾ ಎಷ್ಟೋ ಮುನಿಗಳು ಹಾಗೇ ಇದ್ದಾರೆ. ಅಂಥವರು ಸಹಿತ ಗುರು ಎನಿಸಿಕೊಳ್ಳಲಿಕ್ಕೆ ಹೆದರಿದರು. ಅಂದ ಮೇಲೆ ನನ್ನಂಥವನ ಪಾಡೇನು ? ನಾನು ಇನ್ನು ಹ್ಯಾಗೆ ಗುರುವಾಗುವೆ ಎನ್ನುವುದನ್ನು ತಿಳಿ.

ಕೌಶಿಕ ಸ್ವಾಮಿ, ನನಗೆ ನೀವು ಹಾಗೆ ಮಾತಾಡುವುದರ ಸಲುವಾಗಿ ಹೀಗೆ ಹೇಳುತ್ತಲಿರುವಿರಿ. ಈಗ ಸದ್ಯಕ್ಕೆ ಈ ಜಗತ್ತಿನಲ್ಲಿ ನಿಮ್ಮಂಥಾ ಗುರುಗಳು ಇಲ್ಲವೆಂದು ತಿಳಿದು ಬಿಡಿರಿ.

ಋಷಿ : (ಪದ)

ಹಾಗಾದರೆ ಗುರು ಎನ್ನತಿದ್ದಿ ಎನಗಾಗಿ
ತಪಃಶಕ್ತಿಯಿಂದ ಎನ್ನಯ ವಯಸ್ಸು ಬೆಳೆಯುವುದು
ಎನ್ನ ತಪಃಶಕ್ತಿಯ ಮಹಿಮೆಯ ನೀನು ಅರಿತಿಲ್ಲವೋ
ಗುರುವೆಂಬ ವಾರ‌್ತೆಯ ಕೇಳಿ ನಾನು ಸರಸಾಗಿ
ಹೇಳುವೆನೀಗ ನೀ ಅರಸನೇ ॥1 ॥

ಅರಣ್ಯವಾಸಿಗೆ ಈಗ ಗುರುವೆಂತಿದಿಯೋಗಿ ಅರಸು
ಬಕದಾಲ್ಯ ಋಷಿ ಎಂಬವನು
ಎಷ್ಟೋ ಯುಗದಿ ತಪದಲ್ಲಿಹನು ಗುರು
ಎನಿಸಿ ಮರೆಯಲು ಅವನಿಗೆ ಸರಿಬಾರದು
ಕೇಳು ಅವನ ಮನ ॥

(ಮಾತು) ಎಲೋ ನೀನು ಆಯುಷ್ಯ ಬೆಳೆದವರಿಗೆ ಗುರು ಎಂದು ಅನ್ನುತ್ತೀಯಲ್ಲಾ! ಬಕದಾಲ್ಯ ಋಷಿಯ ಚರಿತ್ರೆಯನ್ನು ಕೇಳಿಲ್ಲವೇನು ? ಅವನ ಆಯುಷ್ಯವು ಅಷ್ಟು ಇಷ್ಟು ಅಂತಾ ಗೊತ್ತು ಹತ್ತೀತೇನು? ಲಕ್ಷ ವರುಷ ಕಳೆದರೆ ಒಂದು ಯುಗ ಆಗುತ್ತದೆ. ಇಂಥಾ ಸಾವಿರಾರು ಯುಗಗಳು ಎಂದು ತಿರುಗುತ್ತವೆಯೋ ಅಂದಿಗೆ ಚತುರ್ಮುಖ ಬ್ರಹ್ಮನಿಗೆ ಹಗಲು ಹೋಗಿ ರಾತ್ರಿ ಬರುತ್ತದೆ. ಈ ಮಾತಿನ ಮೇಲಿಂದಲೇ ನೂರಾರು ವರ್ಷ ಆದ ಮೇಲೆ ಒಬ್ಬ ಬ್ರಹ್ಮನು ಲಯವಾಗುತ್ತಾನೆ. ಇಂಥ ಬ್ರಹ್ಮರು, ಇಪ್ಪತ್ತು ಮಂದಿ ಲಯವಾದರೂ ಆ ಬಕದಾಲ್ಯ ಋಷಿಯು ಹಾಗೆ ಕುಳಿತುಕೊಂಡು ತಪಸ್ಸು ಮಾಡುತ್ತಿದ್ದನಂತೆ. ಇಷ್ಟು ಮಂದಿ ಬ್ರಹ್ಮರನ್ನು ತನ್ನ ಕಣ್ಮುಟ್ಟ ಲಯವಾಗಿ ಹೋದುದನ್ನು ನೋಡಿದರೂ ತಮಗೆ ಇನ್ನೂ ಗುರುಪದವಿ ಗುರುತ್ವ ಬಂದಿಲ್ಲವೆಂದು ತಿಳಿದು ಸ್ವತಃ ತನ್ನ ಬಾಯಿಯಿಂದಾ ಅನ್ನುತ್ತಿರುವನು. ನೋಡು ಅರಸಾ, ಆಂಥವನೇ ಹಾಗೆ ಅಂದಮೇಲೆ ನನ್ನಂತವನ ಪಾಡೇನು ಇದನ್ನೆಲ್ಲ ತಿಳಿದು ನನಗೆ ನಮಸ್ಕಾರ ಮಾಡಬೇಡಾ. ನಾನೂ ನಿನ್ನಂತೆಯೇ ಇರುತ್ತೇನೆ. ಕೇಳಿದೆಯಾ ಇನ್ನು ಮೇಲೆ ದೂರ ನಿಂತು ಮಾತನಾಡು.

ಕೌಶಿಕ ಹಾಗಾದರೆ ಈ ಭೂಮಿಯ ಮೇಲೆ ಗುರು ಅನಿಸಿಕೊಂಡವರು ಯಾರಿದ್ದಾರಂತಿರಿ ?

ಋಷಿ : ಹಿಮಾಲಯ ಪರ್ವತದೊಳಗೆ ಚಿದಂಬಕಾಶ್ರಯ ಅನ್ನುವಂಥ ಪುಣ್ಯಸ್ಥಾನವಿರುವುದು. ಈ ಪುಣ್ಯಸ್ಥಾನದಲ್ಲಿ ಸಚ್ಚಿದಾನಂದ ಅನ್ನುವಂಥ ಒಬ್ಬ ಋಷಿಯಿರುವನು. ಅವರನ್ನು ಬಿಟ್ಟು ಈ ಭೂಮಿಯ ಮೇಲೆ ಯಾರೂ ಇಲ್ಲವೆಂದು ತಿಳಿದುಬಿಡು. ಮತ್ತು ನೀನು ಗುರುಸೇವೆ ಮಾಡಬೇಕೆಂದು ಯಾರದೋ ಮಾತನ್ನು ಕೇಳಿ ತಯ್ಯರಾಗಿ ಹೊರಟು ಬಂದಿರುವೆಯಲ್ಲಾ. ನಿನಗೆ ಉಪದೇಶ ಮಾಡಿದರೆ ಮುಂದೆ ನಿನಗೆ ಗುರುಗಳಾಗುವುರೇನು? ಮತ್ತು ಅವರು ಎಂಥವರಿರುವರೆಂದರೆ, ಜನರನ್ನೆಲ್ಲ ಬೆಲ್ಲದಂತಾ ಮಾತಿನಿಂದ ಮರುಳು ಮಾಡಿ ಘಾತಮಾಡಲಿಕ್ಕೆ ಹತ್ತಿಸುವಂಥವರು. ತಿಳಿಯಿತೇ. ನಾನೇನೂ ಸುಳ್ಳು ಹೇಳುವುದಿಲ್ಲ. ತಿಳಿದು ಬಿಡು.

ಕೌಶಿಕ (ಸ್ವಗತ) ಶಿವ ! ಶಿವಾ !! ಆ ಮಹಾದೇವಿಯ ಉಪದೇಶದಿಂದ ಅಲ್ಲಮಪ್ರಭುಗಳ ಕಡೆಗೆ ಹೋಗಬೇಕೆಂದು ಹೊರಟು ಬಂದೆನು. ಇಷ್ಟರೊಳಗಾಗಿ ಈ ಋಷಿಗಳು ಅದನ್ನು ತಿಳಿದುಕೊಂಡು ಬಿಟ್ಟರು. ಇರಲಿ ನಾನುಮತ್ತೆಲ್ಲಿಯೂ ಹೋಗಬಾರದು ಇಲ್ಲಿಯೇ ನಿಮ್ಮ ದರ್ಶನಕ್ಕೆ ಬಂದಿರುವೆನೆಂದು ಸುಳ್ಳು ಹೇಳಿ ಅವರನ್ನು ಚೆನ್ನಾಗಿ ಪರೀಕ್ಷೆ ಮಾಡುತ್ತೇನೆ. (ಪ್ರಕಟ) ಸ್ವಾಮಿ ನಾನು ಮತ್ತೆಲ್ಲಿಯೂ ಹೋಗುವದರ ಸಲುವಾಗಿ ಬಂದಿಲ್ಲ. ನಿಮ್ಮ ಕೀರ್ತಿಯನ್ನು ಕೇಳಿ ನಿಮ್ಮ ದರ್ಶನಕ್ಕೆ ಬಂದಿರುವೆನು.

ಋಷಿ : ಛೇ ದುಷ್ಟಾ ನೀನು ನನ್ನ ಮುಂದೆ ಸುಳ್ಳು ಹೇಳುತ್ತೀಯಾ ಭ್ರಷ್ಟಾ. ಈಗ ಸದ್ಯಕ್ಕೆ ಸುಳ್ಳು ಹೇಳಲಿಕ್ಕೆ ಹತ್ತಿರುವೆ. ಮತ್ತು ಬಾಯಿಂದ ಸುಳ್ಳು ಹೇಳುವುದಿಲ್ಲ ಅನ್ನುತ್ತಿರುವೆ. ನಾನು ಯಾರೆಂದು ತಿಳಿದಿರುವೆ ? ನಿಮ್ಮ ಅಪ್ಪನ ಬಿಟ್ಟು ನಿಮ್ಮ ಮುತ್ತಜ್ಜನ ಸುದ್ದಿಯನ್ನು ನಾನು ಬಲ್ಲೆನು. ಕೇಳಿದೆಯಾ ನನ್ನಂಥಾ ತ್ರಿಕಾಲ ಜ್ಞಾನಿಯ ಮುಂದೆ ಸುಳ್ಳು ಹೇಳಿದರೆ ಎಲ್ಲಿ ನಾಟಬೇಕು? ನಾನು ತ್ರಿಕಾಲ ಜ್ಞಾನಿಯು, ಪರಲೋಕವೆಂಬ ಪ್ರದೇಶಕ್ಕೆ ಈಗ ದೂರದರ್ಶನ ಇದೆ. ತಿಳಿಯಿತೇ. ನೀನು ಉಡುತಡಿ ಪಟ್ಟಣದ ಅರಸು ಕೌಶಿಕ, ನೀನು ಓರ್ವ ಮಹಾದೇವಿಯು ಉಪದೇಶಕ್ಕೆ ಮರುಳಾಗಿ ಮನೆ ಬಿಟ್ಟು ಅಲ್ಲಮಪ್ರಭುವಿನ ಹತ್ತಿರ ಹೋಗಬೇಕೆಂದು ಹೊರಟು ಬಂದಿರುವೆ. ಈ ಮಹಾದೇವಿಯು ಇಲ್ಲೇ ನಿನ್ನ ಸಮೀಪದಲ್ಲಿ ಬಂದಿರುವಳು. ಯಾಕೆ ಇದು ಸುಳ್ಳೋ ಅಥವಾ ನಿಜವೋ ? ಇದನ್ನು ಸುಳ್ಳು ಅಂದರೆ ನಿನ್ನ ಹಲ್ಲು ಉಚ್ಚ್ಯಾವು ಜೋಕೆ. ನಿಜ ಹೇಳು.

ಕೌಶಿಕ : ಹೇ ಸ್ವಾಮಿ ನೀವು ಹೇಳಿದುದು ಎಲ್ಲವೂ ನಿಜ.

ಋಷಿ : ಹಾಗಾದರೆ ಸುಳ್ಳು ಯಾಕೆ ಹೇಳಿದಿ.

ಕೌಶಿಕ ಸ್ವಾಮಿ ನಿಮ್ಮನ್ನು ಪರೀಕ್ಷೆ ಮಾಡಬೇಕೆಂದು ಇಷ್ಟೆಲ್ಲಾ ಸುಳ್ಳು ಮಾತನಾಡಿದೆ ಕ್ಷಮಿಸಬೇಕು.

ಋಷಿ : ನನ್ನನ್ನು ಪರೀಕ್ಷೆ ಮಾಡಲು ಬಂದಿರುವೆಯಾ. ಹರಿಹರ ಬ್ರಹ್ಮರುಗಳಿಗೂ ಸಹಿತ ನನ್ನನ್ನು ಪರೀಕ್ಷೆ ಮಾಡಲು ಸಾಮರ್ಥ್ಯ ಬರಲಿಲ್ಲ. ಎಂದ ಮೇಲೆ ನಿನ್ನಂಥಾ ಕುನ್ನಿಯಿಂದ ಆಗುವುದೇನು? ನನ್ನನ್ನು ಪರೀಕ್ಷೆ ಮಾಡುವಷ್ಟು ಬುದ್ಧಿಯು ನಿನಗಿದ್ದರೆ, ನೀನ್ಯಾಕೆ ಆ ಮಹಾದೇವಿಯ ಉಪದೇಶಕ್ಕೆ ಮರುಳಾಗಿ ಆ ತುಡುಗ ಅಲ್ಲಮನ ಹತ್ತಿರ ಹೋಗಲಿಕ್ಕೆ ಯಾತಕ್ಕೆ ಬಂದಿರುವಿ? ಮತ್ತೆಲ್ಲಿಯಾದರೂ ನಿಜವಾದ ಸಾಧುಗಳ ಸೇವೆ ಮಾಡಿದರೆ ಉದ್ಧಾರವಾಗುತ್ತೀ. ಈಗ ನೀನು ದೊಡ್ಡದೊಂದು ಕಟ್ಟು ಕಟ್ಟಿಕೊಂಡು ಮಡುವಿನಲ್ಲಿ ಬೀಳಲಿಕ್ಕೆ ಹತ್ತಿರುವೆ, ನೀನು ನಮ್ಮನ್ನು ಪರೀಕ್ಷೆ ಮಾಡುತ್ತೀಯಾ.? ಛೇ ಮೂರ್ಖಾ ಅತ್ತ ನಡೆ.

ಕೌಶಿಕ : ಏನು ಸ್ವಾಮಿ ನನಗೆ ಆ ಮಹಾದೇವಿಯು ಉಪದೇಶ ಮಾಡಿದಂದಿನಿಂದ ಅಲ್ಲಮಪ್ರಭುಗಳ ಸೇವೆ ಮಾಡುವ ಬಯಕೆಯಿಂದ ಇಲ್ಲಿಗೆ ಬಂದದ್ದು ಕಲ್ಲು ಕಟ್ಟಿಕೊಂಡು ಮಡುವಿನಲ್ಲಿ ಬಿದ್ದಂತೆ ಆಯಿತೇನು ?

ಋಷಿ : ಹೌದು ಮಡುವಿನಲ್ಲಿ ಬಿದ್ದಂತೆ ಆಯಿತು ನೋಡು ರಾಜಾ !

ಕೌಶಿಕ ಹಾಗಾದರೆ ಆ ಮಹಾದೇವಿ ಮತ್ತು ಅಲ್ಲಮಪ್ರಭುಗಳು ಎಂದರೆ ಬಹಳೇ ಕನಿಷ್ಠರೇನು?

ಋಷಿ : ಕನಿಷ್ಠ ಎನ್ನುವುದೇಕೆ ? ಅವರು ಲೋಕದ ತುಡುಗರು. ಇಷ್ಟೇ ಅಲ್ಲಾ, ಜಗತ್ತಿಗೆಲ್ಲಾ ಹುಚ್ಚು ಹಿಡಿಸಿ, ಮೋಜು ಮಾಡುವವರು. ನಿಮ್ಮಂಥಾ ರಾಜಾಧಿರಾಜರನ್ನು ದೇಶಕೋಶಗಳನ್ನೆಲ್ಲಾ ಬಿಡಿಸಿ, ದಿಕ್ಕಿಲ್ಲದ ಪರದೇಶಿಯಂತೆ ಮಾಡಿ ಬೇಗನೆ ಗೊತ್ತಿಗೆ ಹಚ್ಚಿಬಿಡುವರು ಕೇಳಿದೆಯಾ ! ನೀನು ಅಂಥವರನ್ನು ಬೆನ್ನು ಹತ್ತಿರುವೆಯೆಂದಮೇಲೆ ನೀನು ಯಾವ ಮಾರ್ಗಕ್ಕೂ ಹತ್ತುವುದಿಲ್ಲ. ನಡೆ ಅತ್ತಕಡೆ. ನನ್ನ ಮುಂದೆ ನಿಲ್ಲಬೇಡಾ, ಅವರ ಮಾತು ಕೇಳಿ ಎಲ್ಲಿಯಾದರೂ ಹಾಳಾಗಿ ಹೋಗು. ಹೊರಬೀಳು ಮೊದಲು ನನ್ನ ಆಶ್ರಮವನ್ನು ಬಿಟ್ಟು.

ಕೌಶಿಕ ಅಂಥ ಮಹಾತ್ಮರಿಗೆ ಕಂಡ ಕಂಡ ಹಾಗೆ ಮಾತಾಡಿಬಿಟ್ಟಿರಲ್ಲಾ, ಅವರು ಜ್ಞಾನಿಗಳಲ್ಲವೆ?

ಋಷಿ : ನಿಜವಾದ ಜ್ಞಾನಿಗಳು ಯಾರೆಂದರೆ : ಆತ್ಮ ಸಾಕ್ಷಾತ್ಕಾರ ಮಾಡಿಕೊಂಡವರು. ಸುಳ್ಳು ಜ್ಞಾನಿಗಳೆಂದರೆ : ಕೇವಲ ಡಾಂಭಿಕತನ ಹೇಳುವವರು.

ಕೌಶಿಕ ಇದನ್ನೆಲ್ಲಾ ನಾನು ಮೊದಲೇ ಪರೀಕ್ಷೆ ಮಾಡಿಯೇ ಅವರ ಪಾದಕ್ಕೆ ಹೋಗಿ ಬಿದ್ದಿರುವೆನೆಂದು ತಿಳಿದು ಬಿಡು.

ಋಷಿ : ಏನೋ, ನೀನು ಬಹಳೇ ತಿಳಿದವರಂತೆ ಮಾತನಾಡುತ್ತೀಯಲ್ಲ? ಆದರೆ ಅವರ ಮಹಾತ್ಮ್ಯವು ನಿನಗೆ ಹೇಗೆ ತಿಳಿಯಿತು ಹೇಳು ?

ಕೌಶಿಕ : (ಪದ)

ನಾನು ಪರೀಕ್ಷೆಯನು ಮಾಡಿರುವೆ
ಅವರ ಸತ್ವವೆಲ್ಲವ ನೋಡಿರುವೆ (ಪಲ್ಲ)
ಶಿವಜ್ಞಾನಿಗಳೇ ತಾನಹುದು
ಶಿವಶರಣರೆಂಬ ಪ್ರಖ್ಯಾತಿ ತಾನಹುದು ಕೀರ್ತಿ !

(ಮಾತು) ಛೀ, ಹಾಗೆನ್ನಬಾರದು ಸ್ವಾಮಿ. ಅದನ್ನೆಲ್ಲ ಪರೀಕ್ಷೆಮಾಡಿ ಸಂತುಷ್ಟಗೊಂಡು, ಅನುಭವ ಮಾಡಿಕೊಂಡು ಹೋಗಿ ಅವರ ಪಾದಕ್ಕೆ ಬಿದ್ದಿರುವೆನು.

ಋಷಿ : ನೀವು ಅವರಲ್ಲಿ ಏನು ಪರೀಕ್ಷೆ ಮಾಡಿರುವಿ ? ನಿನಗೇನು ತಿಳಿಯುತ್ತದೆ ? ಇರಲಿ ! ಅವರಿಂದ ಸದ್ಗತಿ ದೊರೆಯುವುದೋ !

ಕೌಶಿಕ ಸ್ವಾಮಿ, ಅಲ್ಲಮಪ್ರಭು ಮತ್ತು ಮಹಾದೇವಿಯವರನ್ನು ನಂಬಿದರೆ ಅಗತ್ಯವಾಗಿ ಸದ್ಗತಿ ದೊರೆಯುವುದು.

ಋಷಿ : ಕೌಶಿಕಾ, ಅವರಿಂದ ಏನಾದರೂ ಆಗುವುದೆಂದು ತಿಳಿದಿರುವೆಯಾ, ಕೆಲವರು ಬರೇ ಬಂಗಾಲಿ ವಿದ್ಯೆಯಿಂದ ಪಂಡಿತರೆನಿಸಿರುತ್ತಾರೆ. ಅಂಥವರು ಜನರನ್ನು ಮರುಳು ಮಾಡಿ, ಬೆಳಕಿಕೆ ಬಂದಿರುತ್ತಾರೆ. ಇಂಥಾದ್ದೆಲ್ಲಾ ನಿನಗೇನು ಗೊತ್ತು ? ಬಂಗಾಲಿ ವಿದ್ಯೆ ಅಂದರೆ ಏನೆಂದು ತಿಳಿದಿರುವಿ ? ಗಾಳಿ ಗಂಟು ಅಡವಿ ಪಾಲು ಅಂದಮೇಲೆ ಅವರಿಂದ ಎಲ್ಲಿ ಸದ್ಗತಿಯಾಗಬೇಕು ? ಎಂದೂ ಆಗುವುದಿಲ್ಲಾ ಅಂತಾ ತಿಳಿದು ಬಿಡು.

ಕೌಶಿಕ (ಸ್ವಗತ) ಆಹಾ ! ಇವರು ಪ್ರಭುಸ್ವಾಮಿ ಮತ್ತು ಮಹಾದೇವಿಯವರ ವಿಷಯಕ್ಕೆ ನನಗೆ ಸಂಪೂರ್ಣ ಸಂಶಯ ಹುಟ್ಟಿಸಿದರಲ್ಲಾ !! ಅವರು ಇಂದ್ರಜಾಲ, ಮಹೇಂದ್ರ ಜಾಲದಿಂದ ಈ ಜಗತ್ತಿನಲ್ಲಿ ಪ್ರಭಾವಕ್ಕೆ ಬಂದಿರುತ್ತಾರೆಂದು ಈ ಯತಿಗಳು ಎಳ್ಳಷ್ಟೂ ಅಂಜಿಕೆ ಇಲ್ಲದೆ ಹೇಳುತ್ತಾರೆ. ಹೀಗೇ ಏಕೆ ಆಗಬಾರದು ? ಜನವಶ, ರಾಜವಶ, ಸ್ತ್ರೀವಶ, ಜಲಸ್ತಂಬನ, ಅಗ್ನಿಸ್ತಂಬನ ಎಂಬ ಕಪಟ ಕೃತಿಗಳಿಂದ ಅನೇಕ ಜನರು ಅನೇಕ ಲೀಲೆಗಳನ್ನು ಮಾಡುತ್ತಾರೆಂದು ನಾನು ಬಲ್ಲವರಿಂದ ಕೇಳಿ ತಿಳಿದಿದ್ದೇನೆ ಮತ್ತು ಅನೇಕ ಗ್ರಂಥಗಳನ್ನು ಓದಿದ್ದೇನೆ. ಅಂದಮೇಲೆ ಇವರು ಅವರೇ ಯಾಕಾಗಿರಬಾರದು ?

ಋಷಿ : ಈ ವಾರ್ತೆಯನ್ನು ಕೇಳಿ, ಅವರನ್ನು ಪರೀಕ್ಷೆ ಮಾಡಬೇಕೆಂದು ಹೋಗಿ, ಪರಕಾಯ ಪ್ರವೇಶ ಸಾಧನದಿಂದ ಅವರ ದೇಹದೊಳಗೆ ಹೊಕ್ಕು ಅವರ ಅಂತರಂಗವನ್ನೆಲ್ಲಾ ಪರೀಕ್ಷೆ ಮಾಡಿ, ಅವರಲ್ಲಿ ಏನೂ ಹುರುಳಿಲ್ಲವೆಂದು ತಿಳಿದು ಹೊರಗೆ ಬಂದೆನು. ಅಂದಮೇಲೆ ಅಂಥವರನ್ನು ನೀನು ನಂಬಿರುವೆ. ಅವರಿಂದ ನಿನಗೆ ಸದ್ಗತಿಯು ದೊರಕುವುದಿಲ್ಲ, ನನ್ನಲ್ಲಿ ನೀನು ಬಂದದ್ದರಿಂದ ನಿನ್ನನ್ನು ವ್ಯರ್ಥವಾಗಿ ಕೆಡಿಸಬಾರದೆಂದು ಹೇಳಿದೆನು. ಇನ್ನು ಮೇಲೆ ನನ್ನ ಮಾತು ನಂಬು, ಇಲ್ಲಾ ಬಿಡು. ಬೇಕಾದ್ದು ಮಾಡಿಕೋ ನಡೆ.

ಕೌಶಿಕ (ಸ್ವಗತ) ಶಿವ ಶಿವಾ ! ಅಲ್ಲಮಪ್ರಭು, ಮಹಾದೇವಿಯರು ಶಿವಶರಣರೆಂದರೆ ಇವರು ಎಳ್ಳಷ್ಟೂ ಸೋಲಲೊಲ್ಲರಲ್ಲಾ ! ಅವರು ಡಾಂಭಿಕರೆಂದು ಸ್ಪಷ್ಟವಾಗಿ ಹೇಳುತ್ತಾರಲ್ಲಾ! ಇದೇನು ಚಮತ್ಕಾರಾ ! ಅವರಿಗೆ ನಾನು ಡಾಂಭಿಕರೆಂದು ಹೇಗೆ ಅನ್ನಲಿ ? ಆ ಮಹಾದೇವಿಯು ನನಗೆ ಸಿಟ್ಟಿನಿಂದ ಸುಟ್ಟು ಹೋಗೆಂದು ಶಾಪ ಕೊಡಲು ಕ್ಷಣದಲ್ಲೇ ನನ್ನ ಹೊಟ್ಟೆಯೊಳಗೆ ಬೆಂಕಿಯನ್ನು ಇಟ್ಟಂತೆ ಆಗಿ, ಬ್ರಹ್ಮಾಂಡಕ್ಕೆ ಬೆಂಕಿ ಹತ್ತಿದಂತೆ ಆಗಿ ನನಗೆ ಬಹಳೇ ಸಂಕಟವಾಯಿತು. ನನಗಾದ ಅಂಥಾ ಸಂಕಟವನ್ನು ತಾನು ವಿಭೂತಿಯನ್ನು ಹಚ್ಚಿ ಕಳೆದುಬಿಟ್ಟಳು ಅಂದಮೇಲೆ ಅವಳಿಗೆ ಸುಳ್ಳು ಅಂತಾ ಹ್ಯಾಗೆ ಅನ್ನಲಿ ! ಈಗ ಈ ಯತಿವರ್ಯರು ನನಗೆ ಅದರ ವಿಸ್ತಾರವನ್ನೆಲ್ಲ ಕಂಡವರ ಹಾಗೆ ಹೇಳುತ್ತಿರುವರಲ್ಲಾ ! ಇವರಿಗಂತೂ ನಾನೇ ಸುಳ್ಳು ಹೇಳುವನೆಂದಾಗಿದೆ.

(ಪ್ರಕಟ) ಮಹಾಋಷಿಗಳೇ, ನೀವು ಏನೇ ಹೇಳಿದರೂ, ನಾನಂತೂ ಮಹಾಶಿವಭಕ್ತೆ ಮಹಾದೇವಿಯ ತಪೋಶಕ್ತಿಗೆ ತಲೆ ಬಾಗಿರುವೆನು. ಅವಳ ಉಪದೇಶದಂತೆ ಶೂನ್ಯ ಸಿಂಹಾಸನಾಧೀಶ್ವರ ಮಹಾಜ್ಞಾನಿ ಅಲ್ಲಮಪ್ರಭುಗಳನ್ನು ಕಂಡು ಅವರಿಂದ ಲಿಂಗಧಾರಣ ಮಾಡಿಸಿಕೊಂಡು ಮುಕ್ತಿಮಾರ್ಗ ಕಂಡುಕೊಳ್ಳಬೇಕೆಂಬ ಅಚಲ ನಿಷ್ಠೆಯುಳ್ಳವ ನಾಗಿರುವೆನು. ಕಾರಣ ತಮ್ಮ ಯಾವ ಉಪದೇಶವೂ ನನಗೆ ಬೇಕಿಲ್ಲ. ತಾವಿನ್ನು ಹೊರಡಬಹುದು.

ಋಷಿ : ಎಲ್ಲವೋ ಮೂರ್ಖ ರಾಜನೇ, ಈವರೆಗೆ ನಿನಗೆ ಹೇಳಿದ ಉಪದೇಶವೆಲ್ಲ ಭೋರ‌್ಗಲ್ಲ ಮೇಲೆ ಮಳೆ ಸುರಿದಂತಾಯಿತು. ಮೂರ್ಖನಿಗೆ ತತ್ವವಿಚಾರ ತಿಳಿಸಿ ಹೇಳಲು ಹೋಗಿ ನಾನೂ ಮೂರ್ಖನಾದೆ. ಹೋಗು ಹೋಗು ಕೆಟ್ಟ ಮೇಲೆ ಬುದ್ಧಿ ಬಂದರೆ ಏನು ಫಲವು ಹೋಗುತ್ತೇನೆ.

(ಸ್ವಗತ) ಹೇ ಶಿವಶಿವಾ ! ಪತಿಯನ್ನು ಕಳೆದುಕೊಂಡು ನಾನು ಹೇಗೆ ಬದಕಲಿ ! ದಾಸಿಯ ಮಾತನ್ನು ಕೇಳಿ ರಾಜಕುಮಾರನಾದೆ, ಋಷಿಯಾದೆ. ಎಲ್ಲ ತಿಳಿಹೇಳಿ ಸೋತು ಹೋದೆನು. ಅಯ್ಯೋ ಆ ನನ್ನ ಕಪಟತನಕ್ಕೆ ತಕ್ಕ ಪ್ರಾಯಶ್ಚಿತ್ತವೂ ಆಯಿತು. ನನ್ನ ಪತಿ ಇಲ್ಲದೇ ಬದುಕಲಾರೆ. ನನ್ನ ಪತಿವ್ರತ ಧರ್ಮದಿಂದ ನನ್ನ ಪತಿಯನ್ನು ಮರಳಿ ಪಡೆಯಲು ದೇವರಲ್ಲಿ ಪ್ರಾರ್ಥಿಸುವೆ.

(ಹೋಗುವಳು)

ದೃಶ್ಯ
(ಸಂನ್ಯಾಸಿ ವೇಷದ ಕೌಶಿಕನ ಪ್ರವೇಶ)

ಕೌಶಿಕ : (ಸ್ವಗತ) ಶಿವಶಿವಾ ! ತಾಯಿ ಮಹಾದೇವಿ ನೀನಿನ್ನೂ ನನ್ನೊಡನೆ ಬರಲೇ ಇಲ್ಲ. ಶ್ರೀಶೈಲ ಇನ್ನೆಷ್ಟು ದೂರವಿರುವುದೋ ಏನೋ. ನನಗಂತೂ ಈ ಕಾನನದಲ್ಲಿ ನಡೆದು ನಡೆದು ಸಾಕಾಗಿ ಹೋಗಿರುವುದು. ದೇವಾ ಮಲ್ಲಿಕಾರ್ಜುನಸ್ವಾಮಿ, ಬೇಗ ಅಲ್ಲಮ ಪ್ರಭುಗಳನ್ನು ದರ್ಶನ ಮಾಡಿಸು ತಂದೆ. (ಹೋಗವನು).

(ಚಾರುಮತಿಯ ಪ್ರವೇಶ)

ಚಾರುಮತಿ : (ಸ್ವಗತ) ಹೇ ತಂದೆ ಮಲ್ಲಿಕಾರ್ಜುನಾ. ನನಗೆ ನನ್ನ ಪತಿಯನ್ನ ದೊರಕಿಸು ತಂದೆ. ನನ್ನ ಪತಿದೇವರ ಪಾದಪೂಜೆ ಮಾಡಿ ಆ ಪಾದೋದಕವನ್ನು ಸ್ವೀಕರಿಸುವತನಕ ಒಂದು ಹನಿ ನೀರನ್ನು ಕುಡಿಯುವುದಿಲ್ಲ. ಅನ್ನದ ಅಗಳು ಮುಟ್ಟುವುದಿಲ್ಲ. ಕೆದರಿದ ಜಡೆ ಹಾಗೇ ಇರಲಿ. ನನ್ನ ಪ್ರಾಣ ಹೋದರೂ ಹೋಗಲಿ. ನನ್ನ ಪತಿ ಕೌಶಿಕ ಮಹಾರಾಜನನ್ನು ನನಗೆ ಕೊಡು ದೇವಾ.

(ಕಣ್ಣು ಮುಚ್ಚಿ ಪ್ರಾರ್ಥಿಸುತ್ತ ಕೂಡ್ರುವಳು)

ಅಲ್ಲಮಪ್ರಭು : (ತೆರೆಯ ಮರೆಯಲ್ಲಿ ಇಣಕಿ ನೋಡಿ) ಆಹಾಹಾ !! ಭಕ್ತರಿದ್ದರೆ ಹೀಗಿರಬೇಕು. ಹೆಂಡತಿ ಇದ್ದರೆ ಪತಿವ್ರತಾ ಚಾರುಮತಿಯಂತವರಿರಬೇಕು.

ಚಾರುಮತಿ : ದೇವಾ !! ನನ್ನ ಶಕ್ತಿಯಲ್ಲಾ ಎಲ್ಲಿ ಹೋಯಿತು. ದೇಹವು ಕ್ಷೀಣವಾಯಿತು. ಇನ್ನು ತಾಳಲಾರೆನು. ಪ್ರಾಣೇಶ್ವರಾ ನಿನ್ನನ್ನು ಕಣ್ತುಂಬಾ ನೋಡಿ ಪ್ರಾಣ ಬಿಡಬೇಕೆಂಬ ಆಶೆ ಈಡೇರಲಿಲ್ಲ. ಪ್ರಾಣೇಶ್ವರಾ, ಪ್ರಾಣೇಶ್ವರಾ !

(ಮೂರ್ಛೆ ಹೋಗಿ ಬೀಳುತ್ತಾಳೆ)

(ಅಲ್ಲಮಪ್ರಭುವಿನ ಪ್ರವೇಶ)

ಅಲ್ಲಮಪ್ರಭು : ತಾಯಿ ಮೆಚ್ಚಿದೆ, ನಿನ್ನ ಪತಿಭಕ್ತಿಗೆ ಮೆಚ್ಚಿದೆ. ನಿನ್ನ ಪ್ರಾಣಕ್ಕಿಂತಲೂ ನಿನ್ನ ಪತಿಯೇ ಹೆಚ್ಚೆಂದು ನಂಬಿರುವ ನಿನ್ನ ಕಷ್ಟವನ್ನು ಇದೀಗ ಪರಿಹರಿಸುತ್ತೇನೆ, ಇದೋ ನಿನಗೆ ಪ್ರತ್ಯಕ್ಷವಾಗಿದ್ದೇನೆ. ನಿನ್ನ ಇಷ್ಟವೇನಿರುವುದು ಕೇಳಿಕೋ. ಬೇಗನೇ ಪರಿಹರಿಸುತ್ತೇನೆ.

(ಕೈಯಿಂದ ಅಭಯ ಹಸ್ತ ತೋರಿಸುತ್ತಲೇ ಆಕೆ ಮೂರ್ಛೆಯಿಂದ ಎಚ್ಚರವಾಗುತ್ತಾಳೆ).

ಚಾರುಮತಿ : ಧನ್ಯಳಾದೆ ತಂದೆ, ಧನ್ಯಳಾದೆ (ನಮಸ್ಕರಿಸುವಳು).

ಅಲ್ಲಮಪ್ರಭು : ಏಳು ಮಗಳೇ ನಿನಗೆ ಕಲ್ಯಾಣವಾಗಲಿ ! ನಿನ್ನ ಇಷ್ಟವೇನಿರುವುದು ಕೇಳಿಕೋ.

ಚಾರುಮತಿ : ತಂದೆ, ಮಹಾಪ್ರಭು, ಯಾವ ಜನ್ಮಾಂತರದ ಪುಣ್ಯ ವಿಶೇಷವೋ ನನಗೆ ತಮ್ಮ ದಿವ್ಯದರ್ಶನವಾಯಿತು. ತಂದೆ, ನಾನು ತಮ್ಮಲ್ಲಿ ಎರಡು ವರಗಳನ್ನು ಕೇಳಬೇಕೆಂದು ಅಶಿಸಿರುವೆನು. ಕೃಪೆ ಮಾಡಬೇಕು ಪ್ರಭುವೆ.

ಅಲ್ಲಮಪ್ರಭು : ಕೇಳು ಮಗಳೇ.

ಚಾರುಮತಿ : ದೇವಾ, ನನ್ನ ಪತಿಯು ಸಂಸಾರ ಬಿಟ್ಟು ಸಂನ್ಯಾಸಿಯಾಗಿರುವನು. ಅವರು ಸಂನ್ಯಾಸಿ ವೇಷ ತೊರೆದು ನನ್ನ ಪತಿಯು ನನಗೆ ದೊರಕಬೇಕು. ಇನ್ನೊಂದು ಬೇಡಿಕೆಯೆಂದರೆ, ನಮ್ಮ ರಾಜ್ಯವು ನಮಗೆ ದೊರೆತು. ಮೊದಲಿನಂತೆ ನನ್ನ ಪತಿ ಕೌಶಿಕ ಮಹಾರಾಜನಾಗಿ ರಾಜ್ಯವಾಳಬೇಕು. ಈ ಎರಡು ವರಗಳನ್ನು ಕೊಟ್ಟ ನನ್ನನ್ನು ಉದ್ಧಾರ ಮಾಡು ತಂದೆ. ನಿಮಗೆ ಶಿರಬಾಗಿ ಬೇಡುವೆ. ದಯಪಾಲಿಸು ಪ್ರಭುವೆ.

ಅಲ್ಲಮಪ್ರಭು : ತಥಾಸ್ತು. ನೀ ಕೇಳಿದಂತೆ ಹಾಗೇ ಆಗಲಿ ! ಈ ಕೌಶಿಕ ರಾಜನು ಸಂನ್ಯಾಸ ದೀಕ್ಷೆ ತೊಟ್ಟು ನನ್ನನ್ನು ಕಾಣಲು ಶ್ರೀಶೈಲದ ಕಡೆಗೇ ಬರುತ್ತಿರುವನು. ನಡೆ ತಾಯಿ ಶ್ರೀಶೈಲಕ್ಕೆ ಹೋಗೋಣ.

ಚಾರುಮತಿ : ದೇವಾ, ಅವರು ಸುರಕ್ಷಿತವಾಗಿದ್ದಾರೆಯೇ ? ದೇವಾ ಅವರ ಮೇಲೆ ಕರುಣಿಯಿರಲಿ.

ಅಲ್ಲಮಪ್ರಭು : ಹೌದು. ಕಾಯಾ ವಾಚಾ ಮನಸಾ ಈ ಎಲ್ಲದರಿಂದಲೂ ಶುದ್ಧವಾಗಿದ್ದಾನೆ. ಮಹಾಶಿವಶರಣೆ ಅಕ್ಕಮಹಾದೇವಿಯ ನಿರೂಪದಂತೆ ನನ್ನನ್ನು ಭೆಟ್ಟಿಯಾಗಲೆಂದೇ ಬರುತ್ತಿರುವನು. ಆತನಿಗೆ ಇಷ್ಟ ಲಿಂಗಧಾರಣ ಮಾಡಿ, ಮಂತ್ರೋಪದೇಶ ಮಾಡುತ್ತೇನೆ. ನಾವಿಬ್ಬರೂ ಶ್ರೀಶೈಲಕ್ಕೆ ಹೋಗೋಣ. ತಾಯಿ ಅಕ್ಕಮಹಾದೇವಿ ಮತ್ತು ಕೌಶಿಕ ಇಬ್ಬರೂ ಅಲ್ಲೇ ಬರುವರು. ಆಗ ಅಲ್ಲಿ ಎಲ್ಲ ಶಿವಶರಣರೂ ಕೂಡುವರು. ಅಲ್ಲಿಯೇ ಎಲ್ಲರಿಗೂ ಮುಕ್ತಿ ಕೊಡುವೆ, ನಡೆಯಿರಿ.