ಕನ್ನಡನಾಡಿನ ಮಲೆನಾಡು ಸೀಮೆಯ ಒಂದು ಜಿಲ್ಲೆ ಶಿವಮೊಗ್ಗ. ಆ ಜಿಲ್ಲೆಯ ಷಿಕಾರಿಪುರ ತಾಲೂಕಿನ ಒಂದು ಚಿಕ್ಕ ಗ್ರಾಮ ಉಡುತಡಿ. ಸುಮಾರು ಎಂಟುನೂರು ವರ್ಷಗಳ ಹಿಂದೆ ಉಡುತಡಿಯಲ್ಲಿ ಹುಟ್ಟಿ ತನ್ನ ಭಕ್ತಿ, ಶೀಲ, ಚಾರಿತ್ಯ್ರಗಳಿಂದ ಆದರ್ಶ ಮಹಿಳೆ ಎನ್ನಿಸಿಕೊಂಡು, ಮಲ್ಲಿಕಾರ್ಜುನನನ್ನೆ ಗಂಡನೆಂದು ಸ್ವೀಕರಿಸಿ ಕೀರ್ತಿವಂತಳಾದ ಅಕ್ಕಮಹಾದೇವಿಯ ಕಥೆ ಇದು.

ಕ್ರಾಂತಿಯ ಕಾಲ

ಅಕ್ಕ ಹುಟ್ಟಿದ ಹನ್ನೆರಡನೆಯ ಶತಮಾನ ಕನ್ನಡನಾಡಿನ ಚರಿತ್ರೆಯಲ್ಲಿ ತುಂಬ ಮಹತ್ವದ ಕಾಲ. ಅಂದಿನ ಜೀವನ ಎಲ್ಲ ಕ್ಷೇತ್ರಗಳಲ್ಲಿಯೂ ಜಡ್ಡುಗಟ್ಟಿಹೋಗಿತ್ತು. ಜನರ ನುಡಿಗೂ ನಡೆಗೂ ಹೊಂದಾಣಿಕೆ ಇರಲಿಲ್ಲ. ಕುರುಡು ಸಂಪ್ರದಾಯ ಆಚರಣೆಗಳು ಬದುಕನ್ನು ತುಂಬಿದ್ದವು. ಮನುಷ್ಯ ಮನುಷ್ಯರಲ್ಲೆ ಬಗೆಬಗೆಯ ವ್ಯತ್ಯಾಸಗಳಿಂದ ಪ್ರೀತಿ-ವಿಶ್ವಾಸಗಳು ಮರೆಯಾಗಿದ್ದವು.

ಹೀಗೆ ಅವ್ಯವಸ್ಥೆಯಿಂದ ಕೂಡಿದ್ದ ಸಮಾಜವನ್ನು ವ್ಯವಸ್ಥೆಗೊಳಿಸಿ, ಹೊಸ ಸಮಾಜವೊಂದನ್ನು ಕಟ್ಟುವ ಕೆಲಸ ಆ ಕಾಲದಲ್ಲಿ ನಡೆದು, ಅದು ಕ್ರಾಂತಿಯ ಕಾಲ ಎನಿಸಿಕೊಂಡಿತು. ಬಸವಣ್ಣನವರ ನೇತೃತ್ವದಲ್ಲಿ ಕ್ರಾಂತಿಯ ಕಹಳೆ ಮೊಳಗಿತು. ಜನತೆಯಲ್ಲಿ ಮೇಲು ಕೀಳು ಎಂಬ ಭಾವ ದೂರವಾಗಿ, ಎಲ್ಲರೂ ಸಮಾನರು ಎಂಬ ತತ್ವ ಪ್ರಚಾರಕ್ಕೆ ಬಂತು. ‘ಕಾಯಕವೇ ಕೈಲಾಸ, ಮನುಷ್ಯ ಜೀವನೋಪಾಯಕ್ಕೆ ಯಾವ ಪ್ರಾಮಾಣಿಕ ವೃತ್ತಿಯನ್ನು ಅನುಸರಿಸಿದರೂ ಅದನ್ನು ಶ್ರದ್ಧೆಯಿಂದ ಮಾಡಬೇಕು’ ಎಂಬ ಮಾತು ಆಚರಣೆಗೆ ಬಂತು. ಜಾತಿಮತಗಳ ಗೋಡೆಗಳು ಕಳಚಿ ಬೀಳುವಂತಾಯಿತು. ಕೇವಲ ಕೆಲವರ ಸ್ವತ್ತಾಗಿದ್ದ ಧರ್ಮ ರಹಸ್ಯವನ್ನು ಎಲ್ಲರೂ ತಿಳಿಯುವಂತಾಯಿತು.

ಇಂಥ ಮಹಾ ಕೆಲಸವನ್ನು ನಿರ್ವಹಿಸುವಲ್ಲಿ ಬಸವಣ್ಣನವರಿಗೆ ಭಕ್ತರ, ಜ್ಞಾನಿಗಳ, ಕರ್ಮಯೋಗಿಗಳ ಒಂದು ದೊಡ್ಡ ತಂಡವೇ ನೆರವಾಯಿತು.ಇವರೆಲ್ಲರಶಕ್ತಿಯ ಫಲದಿಂದಾಗಿ ಬಸವಣ್ಣನವರ ಬೆಳಕು ಇಂದಿಗೂ ಆರದೆ ಇದೆ. ಈ ಸಂದರ್ಭದಲ್ಲಿ ನೆನಯಬೇಕಾದ ದೊಡ್ಡ ಹೆಸರುಗಳೆಂದರೆ ಅಲ್ಲಮಪ್ರಭು, ಸಿದ್ಧರಾಮ, ಚೆನ್ನಬಸವಣ್ಣ ಮೊದಲಾದವರು. ಇವರ ಸಾಲಿಗೆ ಸೇರುವವಳು ಅಕ್ಕಮಹಾದೇವಿ. ಇವರೆಲ್ಲರೂ ಅನುಭಾವಿಗಳು. (ನಾವು ಸಾಮಾನ್ಯವಾಗಿ ತಿಳಿವಳಿಕೆ ಪಡೆಯುವುದು, ಹೊರಗಿನ ಜಗತ್ತಿನ ವಿಷಯ ತಿಳಿದುಕೊಳ್ಳುವುದು ಕೈ, ಕಣ್ಣು, ಕಿವಿ ಮೊದಲಾದ ಇಂದ್ರಿಯಗಳ ಸಹಾಯದಿಂದ ಮತ್ತು ಬುದ್ಧಿ ಶಕ್ತಿಯಿಂದ. ಅನುಭಾವಿಯಾದವನಿಗೆ ಇಂದ್ರಿಯಗಳನ್ನು ಮೀರಿದ ಆತ್ಮಾನುಭವ ಆಗುತ್ತದೆ. ಈ ವಿಶಿಷ್ಟ ಅನುಭವದಿಂದ ಅವನು ಮನುಷ್ಯ-ದೇವರು ಪ್ರಪಂಚ ಎಲ್ಲದರ ವಿಷಯ ತಿಳಿದುಕೊಳ್ಳುತ್ತಾನೆ.) ಅವರ ಮನೋಭಾವನೆ, ಅಂತರಂಗದ ತುಮುಲ, ಬೋಧನೆಗಳು ಮಾತಿನ ರೂಪದಲ್ಲಿ ಸಾಹಿತ್ಯವಾಗಿ ಮಾರ್ಪಟ್ಟವು. ಈ ಸಾಹಿತ್ಯವನ್ನು ನಾವು ವಚನ ಸಾಹಿತ್ಯ ಎಂದು ಕರೆಯುತ್ತೇವೆ.

ಮೊರೆ ಹಾಡಾಗಿ ಹರಿಯಿತು

ಕನ್ನಡ ಸಾಹಿತ್ಯದಲ್ಲಿ ವಚನ ವಿಶಿಷ್ಟವಾದ ಸಾಹಿತ್ಯ ಪ್ರಕಾರ. ಅದು ಪದ್ಯವಲ್ಲ; ಗದ್ಯವೂ ಅಲ್ಲ. ಅದಕ್ಕೆ ಛಂದಸ್ಸಿನ ನಿಯಮವಿಲ್ಲ; ಹಾಗೆಂದು ಗದ್ಯದ ಪೂರ್ಣ ಸ್ವಾತಂತ್ರ್ಯವನ್ನೂ ಪಡೆದಿಲ್ಲ. ಈ ಗದ್ಯಗೀತೆಗಳು ಹೃದಯದಿಂದ ಹೊರಟು ಹೃದಯವನ್ನು ಮುಟ್ಟುತ್ತವೆ; ಜೀವಕಳೆಯಿಂದ ಇಂದಿಗೂ ಕಂಗೊಳಿಸುತ್ತವೆ. ವಚನ ಸಾಹಿತ್ಯ ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ತಿರುವನ್ನು ತಂದಿತು. ಪಂಡಿತ ಮಾನ್ಯವಾಗಿದ್ದ ಸಾಹಿತ್ಯ ಜನಸಾಮಾನ್ಯರ ಪ್ರೀತಿಯನ್ನೂ ಗಳಿಸಿತು. ಸಂಸ್ಕೃತ ಮಯವಾಗಿದ್ದ ಸಾಹಿತ್ಯ ಕನ್ನಡತನವನ್ನು ತೋರುವಂತಾಯಿತು. ವಚನಗಳು ನೆಲದ ಹೂವಾಗಿ ಅರಳಿದವು. ಆಡುವವರ ಉಸಿರನ್ನು ಕೇಳಿಸಿದವು. ಆದುದರಿಂದ ಬಸವಣ್ಣನವರೂ ಅವರ ಅನುಯಾಯಿಗಳೂ ಕೇವಲ ಸಮಾಜ ಸುಧಾರಕರಾಗದೆ, ಕೇವಲ ಧರ್ಮ ಬೋಧಕರಾಗದೆ ಕವಿ ಜೀವಿಗಳೂ ಆಗಿದ್ದಾರೆ.

ವಚನಕಾರರಲ್ಲಿ ಅಕ್ಕಮಹಾದೇವಿಗೆ ಅವಳದೇ ಆದ ಒಂದು ಸ್ಥಾನವಿದೆ. ನಮಗೆಲ್ಲ ತಿಳಿದ ಹಾಗೆ, ದುಃಖವಾದಾಗ ಅಳು ಬರುತ್ತದೆ. ಅತ್ತು ದುಃಖವನ್ನು ಹಗುರ ಮಾಡಿಕೊಳ್ಳುವುದು ಒಂದು ವಿಧಾನ; ಮಾತನಾಡಿ ದುಃಖವನ್ನು ಇಳಿಸಿಕೊಳ್ಳುವುದು ಇನ್ನೊಂದು ವಿಧಾನ. ಈ ಮಾತು ಹಾಡಾಗಿ ರೂಪುಗೊಳ್ಳಬಹುದು, ಪ್ರಾರ್ಥನೆಯಾಗಿ ಮೊರೆಯಬಹುದು.

ಅಕ್ಕಮಹಾದೇವಿಯ ಜೀವನ ಕಷ್ಟದಿಂದ ಕೂಡಿದ್ದು, ಸಂಕಟಮಯವಾದದ್ದು. ಅವಳು ಸದಾ ಚೆನ್ನಮಲ್ಲಿಕಾರ್ಜೂನನಲ್ಲಿ ಮೊರೆ ಇಟ್ಟವಳು. ಆ ಮೊರೆ ಹಾಡಾಗಿ ಹರಿಯಿತು. ಆ ಹಾಡು ಅವಳಿಗೆ ಮನಸ್ಸಿನ ಸಮಾಧಾನವನ್ನೂ ಶಾಂತಿಯನ್ನೂ ತಂದಿತು ಹಾಗೂ ಸಹನೆ-ತಾಳ್ಮೆಗಳನ್ನು ಕಲಿಸಿತು. ಮಲ್ಲಿಕಾರ್ಜುನನ ಸಾಕ್ಷಾತ್ಕಾರಕ್ಕೂ ಕಾರಣವಾಯಿತು. ಅದು ಇಂದಿಗೂ ತನ್ನ ಚೆಲುವನ್ನು ಕಳೆದುಕೊಂಡಿಲ್ಲ. ಶಿವಭಕ್ತಳಾಗಿ ಮಹಾದೇವಿಯ ಸಾಧನೆ ಇಂದು ಕಥೆಯಾದರೆ, ಅವಳ ವಚನಗಳ ಆರ್ತತೆ- ಆರ್ದ್ರತೆಗಳು ಓದುಗರ ಅಂತಃಕರಣದ ಕವಾಟವನ್ನು ತೆರೆಯುತ್ತವೆ.

ಕವಯಿತ್ರಿಯೂ ಹೌದು

ಅವಳ ಕಾಲದಲ್ಲಿಯೇ ಚೆನ್ನ ಬಸವಣ್ಣನೆಂಬ ಮಹಾಜ್ಞಾನಿ ಅವಳ ವಚನಗಳನ್ನು ಕುರಿತು ಹೀಗೆ ಹೇಳಿದ್ದ: ‘ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ; ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ; ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ; ಅಜಗಣ್ಣನ ಐದು ವಚನಕ್ಕೆ ಮಹಾದೇವಿಯಕ್ಕಳ ಒಂದು ವಚನ’ (ಇಲ್ಲಿ ಹೆಸರಿಸಿದವರೆಲ್ಲ ಬಹು ಹಿರಿಯ ಭಕ್ತರು, ಜ್ಞಾನಿಗಳು.) ಈ ಮಾತು ಅವಳ ವಚನಗಳ ಮಹತ್ವವನ್ನು ಸಾರುತ್ತದೆ.

‘ನುಡಿದರೆ ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿರಬೇಕು, ಸ್ಫಟಿಕದ ಸಲಾಕೆಯಂತಿರಬೇಕು, ಲಿಂಗ ಮೆಚ್ಚು ಅಹದೆನಬೇಕು’ ಎಂದು ಬಸವಣ್ಣನವರು ಹೇಳಿದ ಮಾತಿಗೆ ಅಕ್ಕಮಹಾದೇವಿಯ ವಚನಗಳು ಉದಾಹರಣೆಯಾಗಿವೆ. ಅಕ್ಕ ಮುತ್ತಿನಂಥ ಮಾತುಗಳನ್ನು ಆಡಿದಳು. ಅದರಲ್ಲಿನ ಪ್ರತಿಭೆ ಮಾಣಿಕ್ಯದ ಪ್ರಭೆ. ಅದರ ಸ್ವರೂಪ ಸ್ಫಟಿಕ ಶುಭ್ರ. ಅವಳ ಮಾತುಗಳನ್ನು ಕೇಳಿ ಮಲ್ಲಿಕಾರ್ಜುನನೇ ಅಹುದೆಂದು ತಲೆದೂಗಿದ.

ಅಕ್ಕಮಹಾದೇವಿ ಶಿವಭಕ್ತಳಾಗಿ ಅಷ್ಟೇ ಅಲ್ಲ, ಕವಯಿತ್ರಿಯಾಗಿಯೂ ನಾಡವರ ನೆನಪಿನಲ್ಲಿ ಚಿರವಾಗಿದ್ದಾಳೆ. ಅವಳ ನಡೆ-ನುಡಿ ಎಲ್ಲರ ಗೌರವಕ್ಕೂ ಪಾತ್ರವಾಗಿವೆ.

ಅಕ್ಕನ ಜೀವನವನ್ನು ಕುರಿತು ನಮಗಿರುವ ಆಧಾರಗಳೆಂದರೆ ಹರಿಹರನ ‘ಮಹಾದೇವಿಯಕ್ಕನ ರಗಳೆ’ ಸಿದ್ಧವೀರಣ್ಣೊಡೆಯರ ‘ಶೂನ್ಯ ಸಂಪಾದನೆ’, ಚೆನ್ನಬಸವಾಂಕನ ‘ಮಹಾದೇವಿಯಕ್ಕನ ಪುರಾಣ’, ಚಾಮರಸನ ‘ಪ್ರಭುಲಿಂಗ ಲೀಲೆ’, ವಿರೂಪಾಕ್ಷ ಪಂಡಿತನ ‘ಚೆನ್ನಬಸವ ಪುರಾಣ’ ಮತ್ತು ರಾಚಯ್ಯನ ‘ಅಕ್ಕನ ಸಾಂಗತ್ಯ’ ಎಂಬ ಹಳೆಯ ಕೃತಿಗಳು. ಇವುಗಳಲ್ಲೆಲ್ಲ ಕತೆ ಒಂದೇ ರೀತಿಯಾಗಿಲ್ಲ. ಆದರೆ ಅಕ್ಕನ ವಚನಗಳಲ್ಲಿಯೇ ನಾವು ಅವಳ ಜೀವನದ ಹೊರರೇಖೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಹರಿಹರ, ಅಕ್ಕನ ಕಾಲಕ್ಕೆ ತೀರ ಹತ್ತಿರದವನಾದುದರಿಂದ ಅವನ ನಿರೂಪಣೆ ಉಳಿದ ಎಲ್ಲರಿಗಿಂತ ಹೆಚ್ಚಿನ ವಿಶ್ವಾಸಕ್ಕೆ ಅರ್ಹವಾದದು ಎಂದು ಭಾವಿಸಬಹುದು.

ತಂದೆ ತಾಯಿಯ ಕಣ್ಮಣಿ

ಉಡುತಡಿಯಲ್ಲಿ ಹಲವು ಜನ ಶಿವಭಕ್ತರು ವಾಸ ಮಾಡಿಕೊಂಡಿದ್ದರು. ಅವರಲ್ಲಿ ನಿರ್ಮಲ ಎಂಬವನು ಗಣ್ಯನಾಗಿದ್ದನು. ಅವನ ಹೆಂಡತಿ ಸುಮತಿ. ಅವಳೂ ಶಿವಭಕ್ತೆ. ಪರಸ್ಪರ ಅಚ್ಚುಮೆಚ್ಚಿನವರಾಗಿದ್ದ ಈ ಗಂಡ ಹೆಂಡರಿಗೆ ಅವರ ಹೆಸರು ಅನ್ವರ್ಥವಾಗಿತ್ತು. ನಿರ್ಮಲ ತನ್ನ ವ್ಯವಹಾರದಲ್ಲಿ ನೇರವಾಗಿದ್ದ; ಸುಮತಿ ಬುದ್ಧಿವಂತೆ ಯಾಗಿದ್ದಳು. ಇಬ್ಬರೂ ಪರಮಭಕ್ತರು. ಅವರ ಭಕ್ತಿಯಲ್ಲಿ ಯಾವ ಕೊರತೆಯೂ ಇರಲಿಲ್ಲ. ತಮ್ಮ ದಿನದ ಎಲ್ಲ ಚಟುವಟಿಕೆಗಳ್ಲಲಿಯೂ ಅವರು ಶಿವನನ್ನೇ ಕಾಣುತ್ತಿದ್ದರು.

ನಿರ್ಮಲ ಸುಮತಿಯರಿಗೆ ಮಕ್ಕಳಿಲ್ಲದ ಕೊರತೆಯೊಂದು ಮಾತ್ರಕಾಡುತ್ತಿತ್ತು. ಊರ ಮಲ್ಲಿಕಾರ್ಜುನ ದೇವಾಲಯದಲ್ಲಿ ಅವರು ಹೆಣ್ಣು ಮಗುವಿಗಾಗಿ ಸತತ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಒಂದು ಸಲ ಅವರು ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಪಾರ್ವತಿಯ ಮುಡಿಯಿಂದ ಪ್ರಸಾದವಾಯಿತು. ಆ ಹೂವನ್ನು ಎತ್ತಕೊಂಡು, ತಮ್ಮ ಬಯಕೆ ಫಲಿಸಿತೆಂದು ದಂಪತಿಗಳು ಕುಣಿದಾಡಿದರು. ಕೆಲವು ತಿಂಗಳ ನಂತರ ಸುಮತಿ ಹೆಣ್ಣು ಕೂಸನ್ನು ಹೆತ್ತಳು.

ಗಂಡ ಹೆಂಡಿರಿಗೆ, ಪಾರ್ವತಿಯೇ ತಮ್ಮ ಮನೆಯಲ್ಲಿ ಅವತರಿಸಿದ ಅನುಭವವಾಯಿತು; ಆನಂದವಾಯಿತು. ಮಗು ತುಂಬ ಮುದ್ದಾಗಿತ್ತು. ನೋಡಿದವರ ಕಣ್ಣು ತುಂಬುತ್ತಿತ್ತು. ತಂದೆ ತಾಯಿಗಳ ಸಂತೋಷದಲ್ಲಿ ಊರವರೆಲ್ಲರೂ ಭಾಗಿಗಳಾದರು. ಬಂಧು ಬಳಗದವರೆಲ್ಲ ಸೇರಿ ಮನೆಯಲ್ಲಿ ನಿತ್ಯವೂ ಹಬ್ಬವಾಯಿತು. ಮಗುವನ್ನು ನೋಡಬಂದವರೆಲ್ಲ ಸಕ್ಕರೆಯನ್ನು ಕೊಂಡುಹೋದರು.

ಮಲ್ಲಿಕಾರ್ಜುನನೆ ಪ್ರಾಣ

ದಿನಕಳೆದಂತೆಲ್ಲ ಶುಕ್ಲ ಪಕ್ಷದ ಚಂದ್ರನ ಹಾಗೆ ಮಯ ಕೈ ತುಂಬಿಕೊಂಡು ಮಗು ಮುದ್ದಾಗಿ ಬೆಳೆಯಲಾರಂಭಿಸಿತು. ನಿರ್ಮಲ ಸುಮತಿಯರು ಶಿವಲಿಂಗ ಪ್ರಸಾದವೆಂದು ಪ್ರೀತಿಯಿಂದ ಮಗುವನ್ನು ಬೆಳೆಸಿದರು. ಮಗುವಿನ ನಡೆ-ನುಡಿಗಳು, ಆಟ-ಪಾಠಗಳು ಅವರನ್ನು ಸಂತೋಷ ಸಾಗರದಲ್ಲಿ ಮುಳುಗಿಸಿದವು. ಪಾರ್ವತಿಯ ವಾರಪ್ರಸಾದ ದಿಂದ ಜನಿಸಿದ ಮಗುವಿಗೆ ಮಹಾದೇವಿ ಎಂದು ಹೆಸರಿಟ್ಟರು. ಮಗು ಮಹಾದೇವಿ ‘ಶಿವ’ ಎಂಬ ಮಾತು ಕಿವಿಯ  ಮೇಲೆ ಬಿದ್ದೊಡನೆ ಕಣ್ಣರಳಿಸುತ್ತಿತ್ತಂತೆ, ಕಿಲ ಕಿಲನೆ ನಗುತ್ತಿತ್ತಂತೆ! ಅದಕ್ಕೆ ಸ್ವಲ್ಪ ವಯಸ್ಸಾದೊಡೆನೆಯೇ ಊರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗಲಾರಂಭಿಸಿತು. ಮಲ್ಲಿಕಾರ್ಜುನನ ದರ್ಶನ ಮಾಡುವುದರಲ್ಲಿ ಮಗುವಿಗೆ ಹೆಚ್ಚಿನ ಆಸಕ್ತಿ. ಜೊತೆಯ ಮಕ್ಕಳೊಡನೆ ಮಲ್ಲಿಕಾರ್ಜುನನನ್ನು ಪೂಜಿಸುವ ಆಟವಾಡುತ್ತಿತ್ತು. ಮನೆಗೆ ಬಂದಾಗ ಕಣ್ಣುಮುಚ್ಚಿ ಮಲ್ಲಿಕಾರ್ಜುನನನ್ನು ಧ್ಯಾನಿಸುವುದು ಅದರ ಪದ್ಧತಿಯಾಯಿತು.

ತಂದೆತಾಯಿಯರ ಎಲ್ಲ ಒಳ್ಳೆಯ ಗುಣಗಳನ್ನೂ ಮೈಗೂಡಿಸಿಕೊಂಡು ಮಗು ಮಹಾದೇವಿ ಊರವರೆಲ್ಲರ  ಪ್ರೀತಿಗೆ ಪಾತ್ರವಾಯಿತು. ಮಗುವಿನ ಶಿವಮಯ ದಿನಚರಿಯನ್ನು ಗಮನಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟರು. ಮಗುವಿನ ಶಿವಭಕ್ತಿ, ಶ್ರದ್ಧೆಗಳು ದೊಡ್ಡವರಿಗೂ ಆದರ್ಶವೆನಿಸಿದವು. ತನ್ನ ಓರಗೆಯವರಿಗೆಲ್ಲ ಅವಳು ಮಾದರಿಯಾಗಿ ಅವರೆಲ್ಲರ ‘ಅಕ್ಕ’ ಆದಳು. ಮಗು ಮಹಾದೇವಿ, ಅಕ್ಕಮಹಾದೇವಿಯಾಗಿ ಹರಯದ ಹೆಣ್ಣಾಗಿ ಬೆಳೆದಳು. ಬಂಗಾರದ ಹೂವಿಗೆ ಪರಿಮಳ ಕೂಡಿದಂತೆ, ಅಕ್ಕನ ಚೆಲುವಿಗೆ ಯೌವನ ಸೇರಿತು. ಗುಣ ರೂಪಗಳಲ್ಲಿ ಅವಳನ್ನು ಮೀರಿಸುವವರು ಆ ಊರಲ್ಲಿ ಮತ್ತೊಬ್ಬರಿರಲಿಲ್ಲ.

ಕೌಶಿಕರಾಜ

ಮಹಾದೇವಿಗೆ ವಯಸ್ಸಾಗುತ್ತಾ ಬಂದಂತೆಲ್ಲಾ ನಿರ್ಮಲ ಸುಮುತಿಯರಿಗೆ, ಎಲ್ಲ ತಂದೆತಾಯಿಯರ ಹಾಗೆ ಮಗಳ ಮದುವೆಯ ಯೋಚನೆ ಕಾಡಿತು. ಬಹು ಲಾವಣ್ಯವತಿಯಾದ ತಮ್ಮ ಮಗಳಿಗೆ ತಕ್ಕ ವರನನ್ನು ಎಲ್ಲಿ ಹುಡುಕೋಣ ಎಂದು ಅವರು ಆಲೋಚಿಸಿದರು. ಅವರ ಆಲೋಚನೆಗೆ ಪೂರ್ಣವಿರಾಮ ಹಾಕುವ ಪ್ರಸಂಗವೊಂದು ನಡೆಯಿತು.

ಉಡುತಡಿ ಗ್ರಾಮದ ದೊರೆ ಕೌಶಿಕ. ಅವನು ಯುವಕ, ಚೆಲುವ. ಒಂದು ದಿನ ಅವನು ತನ್ನ ಪರಿವಾರದೊಡನೆ ಬೇಟೆಗೆ ಹೋಗಿದ್ದ. ಬೇಟೆಯನ್ನು ಮುಗಿಸಿ ಸಂಜೆ ಹಿಂದಿರುಗುವಾಗ ಊರಿನ ಮುಖ್ಯ ಬೀದಿಗಳಲ್ಲಿ ಅವನು ಮೆರವಣಿಗೆಯಲ್ಲಿ ಬಂದ. ಮಂಗಳವಾದ್ಯಗಳು ಮೊಳಗುತ್ತಿದ್ದ, ಸೇನಾತುಕಡಿಗಳಿಂದ ಕೂಡಿದ್ದ, ಕವಿ, ಗಮಕಿ, ಭಟ್ಟಂಗಿಗಳ ಪರಾಕು ಮಾರ್ನಉಡಿಯುತ್ತಿದ್ದು, ಆನೆಯ ಮೇಲೆ ಅಂಬಾರಿಯಲ್ಲಿ ಅರಸನು ಕುಳಿತಿದ್ದ. ಆ ಮೆರವಣಿಗೆ ಊರವರೆಲ್ಲರನ್ನೂ ಆಕರ್ಷಿಸಿತು. ಜನರೆಲ್ಲ ಬೀದಿಗೆ ನುಗ್ಗಿದರು; ಕೆಲವರು ಬಾಗಿಲಲ್ಲಿ ನಿಂತರು; ಕೆಲವರು ಮನೆಗಳ ಮಾಡು ಏರಿದರು.

ಅಕ್ಕಮಹಾದೇವಿಯೂ ತನ್ನ ಗೆಳತಿಯರೊಡನೆ ಮೆರವಣಿಗೆಯನ್ನು ನೋಡಲು ಮುಂಬಾಲಿಗೆ ಓಡಿ ಬಂದಳು. ಸಹಜ ಕುತೂಹಲದಿಂದ ರಾಜನನ್ನು ನೋಡುತ್ತ ನಿಂತಿದ್ದ ಚೆಲುವೆ ರಾಜನ ಕಣ್ಣಿಗೆ ಬಿದ್ದಳು. ಮೊದಲ ನೋಟಕ್ಕೇ ರಾಜನಿಗೆ ಅವಳಲ್ಲಿ ಪ್ರೇಮ ಅಂಕುರಿಸಿತು. ಅಕ್ಕಮಹಾದೇವಿಯೇನೋ ರಾಜನನ್ನು ನೋಡಿ ಮನೆಯೊಳಗೆ ಹೋದಳು. ಆದರೆ ರಾಜನು ಮಾತ್ರ ಅವಳಿಂದ ತನ್ನ ‘ಕಣ್ಣ’ನ್ನು ಕೀಳಲಾರದವನಾದ. ಅವಳ ಚೆಲುವಿಗೆ ಅವನು ಬೆರಗಾದ, ಮಾರುಹೋದ. ಅರಸನ ದೇಹ ಅರಮನೆಗೆ ಹೋಯಿತು; ಅವನ ಮನಸ್ಸು ಮಾತ್ರ ಅಕ್ಕನ ಮನೆಯಲ್ಲೇ ಉಳಿಯಿತು. ತಾನು ಮಹಾದೇವಿಯನ್ನು ಮದುವೆಯಾಗಬೇಕೆಂದು ಅವನು ಆ ಕ್ಷಣದಲ್ಲಿ ನಿರ್ಧರಿಸಿಕೊಂಡ.

ಅರಮನೆಗೆ ಬಂದ ಅರಸನ ಮನಸ್ಸನ್ನು ಮಹಾದೇವಿ ತುಂಬಿಕೊಂಡಿದ್ದಳು. ಅವನಿಗೆ ಊಟ ತಿಂಡಿಗಳೊಂದೂ ಸೇರಲಿಲ್ಲ; ಯಾರೊಡನೆಯೂ ಮಾತನಾಡುವುದು ಬೇಕಾಗಲಿಲ್ಲ. ತನ್ನ ಕೋಣೆಯನ್ನು ಸೇರಿ ಮಲಗಿಬಿಟ್ಟ. ಬೆಳಕು ಹರಿದು ದಿನ ಕಳೆದರೂ ರಾಜನು ತನ್ನ ದಿನದ ಕಾರ್ಯಗಳಲ್ಲಿ ಯಾವ ಆಸಕ್ತಿಯನ್ನೂ ತೋರಲಿಲ್ಲ. ಅವನನ್ನು ಯಾವುದೋ ಮಂಕು ಕವಿದಿತ್ತು; ದುಃಖ ಆವರಿಸಿತ್ತು. ಅರಮನೆಯಲ್ಲಿ ಗುಸುಗುಸು ಆರಂಭವಾಯಿತು. ಮಂತ್ರಿಗಲು ದಿಕ್ಕುಕಾನದಾದರು.

ಮದುವೆಯ ಪ್ರಯತ್ನಗಳು

‘ಮಹಾದೇವಿಯನ್ನು ಕಾಣದೆ ನಾನು ಉಳಿಯಲಾರೆ’ ಎಂದು ಅರಸನು ದುಃಖಪಡುತ್ತಿದ್ದುದರಿಂದ, ಮಂತ್ರಿಗಳು ಸಮಾಲೋಚನೆ ಮಾಡಿ ವಸಂತಕ ಎಂಬ ದೂತನನ್ನು ಸುಮತಿ ನಿರ್ಮಲರ ಬಳಿಗೆ ಕಳಿಸಿದರು. ವಸಂತಕನು ಬಂದು ಅರಸನ ಅಪೇಕ್ಷೆಯನ್ನು ವಿವರಿಸಿದನು. “ಮಹಾದೇವಿ ತುಂಬ ಅದೃಷ್ಟವಂತೆ. ಅವಳು ಮಹಾರಾಣಿಯಾಗುತ್ತಾಳೆ” ಎಂದು ಹೊಗಳಿದನು. ಇದರಿಂದ ನಿರ್ಮಲ ಸುಮತಿಯರು ಸಂತೋಷಕ್ಕೆ ಬದಲಾಗಿ ದುಃಖಪಡುವಂತಾಯಿತು. ಯಾವ ತಂದೆ-ತಾಯಿಗಳಿಗೆ ಇಂಥ ಸಂಬಂಧ ಬೇಡವೆನ್ನಿಸುತ್ತದೆ? ಆದರೆ ಈ ಮದುವೆಗೆ ಎರಡು ಅಡ್ಡಿಗಳಿದ್ದವು. ಮಹಾದೇವಿ ಎಳೆತನದಿಂದಲೂ ‘ಮಲ್ಲಿಕಾರ್ಜುನನೇ ನನ್ನ ಗಂಡ’ ಎಂದು ಹೇಳಿಕೊಂಡು ಬಂದ ಶಿವಭಕ್ತೆಯಾಗಿದ್ದಳು. ಜೊತೆಗೆ ಕೌಶಿಕ ಮಹಾರಾಜ ಶಿವಭಕ್ತನಾಗಿರಲಿಲ್ಲ. ಆದುದರಿಂದ ಈ ಮದುವೆ ಹೇಗೆ ಸಾಧ್ಯ ಎಂದು ಅವರು ದುಃಖಿಸಿದರು. ಅರಸನು ಅತಿಕೋಪಿಯೂ ನಿಷ್ಠುರನೂ ಆಗಿದ್ದನೆಂಬುದನ್ನು ತಿಳಿದು ಬೇರೆ ದಿಕ್ಕುಕಾಣದೆ ಮಹಾದೇವಿಯ ಮನ ಒಲಿಸಲು ಅವರು ಯತ್ನಿಸಿದರು. “ನೀವು ಏನು ಹೇಳಿದರೂ ನಾನು ಶಿವಭಕ್ತನಲ್ಲದವನನ್ನು ಒಲ್ಲೆ. ಬೆಳಕು ಕತ್ತಲನ್ನು ಹೇಗೆ ಕೂಡುತ್ತದೆ?” ಎಂದು ಅವಳು ಹಠ ಮಾಡಿದಳು.

ಮಹಾದೇವಿಯ ತೇಜಸ್ಸು, ಗಾಂಭೀರ್ಯಗಳ ಎದುರು ವಸಂತಕನ ದೌತ್ಯ ಫಲಿಸಲಿಲ್ಲ. ಅವನು ಹಿಂದಿರುಗಿ ಬಂದು ಮಂತ್ರಿಗಳಿಗೆ ಮಹಾದೇವಿಯ ಭಕ್ತಿ, ನಿಷ್ಠೆಗಳನ್ನೆಲ್ಲ ವಿವರಿಸಿದ. ಮಂತ್ರಿಗಳು ರಾಜನಲ್ಲಿಗೆ ಬಂದು ವಿನಯದಿಂದ, “ಪ್ರಭೂ, ಮಹಾದೇವಿ ಶಿವಭಕ್ತಿ ನಿಷ್ಠಾನಿರತೆ. ಅವಳು ವೈರಾಗ್ಯವಂತಳು. ಈ ಮದುವೆ ಸಾಧ್ಯವಾಗದು. ಅವಳನ್ನು ಮರೆಯುವುದೇ ಸೂಕ್ತ” ಎಂದು ವಿನಂತಿಸಿಕೊಂಡರು. ರಾಜನು ಈ ಮಾತುಗಳನ್ನು ಕೇಳಲು ಸಿದ್ಧನಿರಲಿಲ್ಲ. “ಹೇಗಾದರೂ ಮಾಡಿ ಮಹಾದೇವಿಯನ್ನು ತರಲೇಬೇಕು” ಎಂದು ಆಜ್ಞೆ ಮಾಡಿದನು. ಮಂತ್ರಿಗಳಿಗೆ ಬೇರೆ ದಾರಿ ಉಳಿಯಲಿಲ್ಲ. ಅವರೆಲ್ಲರೂ ಮಹಾದೇವಿಯ ಮನೆಗೆ ಬಂದರು.

 

‘ನಿಮ್ಮ ಅರಸನನ್ನು ಮದುವೆಯಾಗುತ್ತೇನೆ. ಆದರೆ ಅವನು ನಾನು ಹೇಳಿದಂತೆ ಕೇಳಬೇಕು.’

ಮಲ್ಲಿಕಾರ್ಜುನ ನನ್ನ ಗಂಡ

 

ಈ ಬಲಾತ್ಕಾರದ ಮಾರ್ಗವನ್ನು ಮಹಾದೇವಿ ಸಹಿಸಲಿಲ್ಲ. “ಮಲ್ಲಿಕಾರ್ಜುನ ನನ್ನ ಗಂಡ. ಅವನಿಗೆ ಹುಟ್ಟು ಸಾವುಗಳಿಲ್ಲ; ಜಾತಿ ಕುಲಗಳ ಕಟ್ಟಿಲ್ಲ. ಅವನಿಗೆ ಯಾವ ಭಯವೂ ಇಲ್ಲ. ಅಂಥ ಚೆಲುವನಾದ ಗಂಡನನ್ನು ನಾನು ಒಲಿದಿದ್ದೇನೆ. ಈ ಹುಟ್ಟಿ ಸತ್ತು ಕೆಟ್ಟುಹೋಗುವ ಗಂಡಂದಿರು ನನಗೆ ಬೇಡ. ಅವರನ್ನು ಒಲೆಗೆ ಹಾಕಿ” ಎಂದು ಅವಳು ಕೋಪದಿಂದ ನುಡಿದಳು. ಇದನ್ನು ಕೇಳಿ ತಂದೆತಾಯಿಗಳೂ ಮಂತ್ರಿಗಳೂ ಮೂಕರಾದರು. ಏನಾದರೇನು? ಅರಸನ ಆಜ್ಞೆ ನಡೆಯಲೇಬೇಕು. ಮಂತ್ರಿಗಳು ನಿರ್ಮಲ ಸುಮತಿಯರನ್ನು ಕರೆದು ಹೇಳಿದರು: “ದೊರೆಗೆ ನಿಮ್ಮ ಮಗಳನ್ನು ಕೊಡದಿದ್ದರೆ ನಿಮ್ಮನ್ನು ಕೊಲ್ಲಬೇಕೆಂದು ರಾಜಾಜ್ಞೆಯಾಗಿದೆ.”

ಇದನ್ನು ಕೇಳಿ ನಿರ್ಮಲ ಸುಮತಿಯರು ಭೂಮಿ ಗಿಳಿದು ಹೋದರು. ಜೀವನವನ್ನು ಯಾರು ಪ್ರೀತಿಸುವುದಿಲ್ಲ? ಅವರು ಮಗಳ ಮನಸ್ಸನ್ನು ಒಲಿಸಲು ಪ್ರಯತ್ನಿಸಿದರು. “ಮಗಳೆ, ನಿನ್ನಿಂದ ನಮಗೆ ಈ ಮುಪ್ಪಿನಲ್ಲಿ ದುರ್ಮರಣ ಲಭಿಸುವಂತಾಯಿತು. ನಿನ್ನ ಭಕ್ತಿ ನಮಗೆ ಸಂಕಟವನ್ನು ತಂದಿದೆ. ಶಿವಭಕ್ತರಲ್ಲದವರೊಡನೆ ಬಾಳುವೆ ಮಾಡುವುದು ಅಷ್ಟು ಕಠಿಣವೆ? ಈ ಮೊದಲ ಎಷ್ಟು ಜನ ಶಿಭಕ್ತರು ಹಾಗೆ ಮದುವೆಯಾಗಿಲ್ಲ? ಕರಿಕಾಲೆಮ್ಮೆ, ಹೇರೂರ ಹೆಂಗೂಸು, ವೈಜಕ್ಕವೆ, ಮಾಂಗಾಯಕ್ಕ ಇವರೆಲ್ಲ ಶಿವಭಕ್ತರಲ್ಲದ ಭವಿಗಳನ್ನು ಮದುವೆಯಾದ ನಿದರ್ಶನಗಳಿಲ್ಲವೆ? ನೀನು ಅವರೆಲ್ಲಗಿಂತಲೂ ಬುದ್ಧಿವಂತೆಯಾಗಿಬಿಟ್ಟೆಯಾ?” ಎಂದು ಕಣ್ಣೀರು ಹಾಕಿದರು.

ಮೂರು ತಪ್ಪುಗಳಾದರೆ

ಇಳಿ ವಯಸ್ಸಿನ ತನ್ನ ಪ್ರೀತಿಯ ತಂದೆತಾಯಿಗಳ ದುಃಖವನ್ನು ಮಹಾದೇವಿ ಸಹಿಸದಾದಳು. ಅವರ ಹಿತಕ್ಕಾಗಿ ತನ್ನ ನಿಷ್ಠೆಯನ್ನು ಸಡಲಿಸಲು ಅವಳು ಸಿದ್ಧಳಾದಳು. ತಾನು ನಂಬಿದ ಮಲ್ಲಿಕಾರ್ಜುನ ದೇವರು ತನ್ನನ್ನು ಕೈಬಿಡಲಾರನೆಂದು ನಂಬಿ ಅವಳು ಮಂತ್ರಿಗಳಿಗೆ ಹೇಳಿದಳು: “ನಿಮ್ಮ ಅರಸನನ್ನು ನಾನು ಮದುವೆಯಾಗುತ್ತೇನೆ, ಆದರೆ ಅವನು ನಾನು ಹೇಳಿದಂತೆ ಕೇಳಬೇಕು.” ಮಂತ್ರಿಗಳಿಗೆ ಬಹಳ ಸಂತೋಷವಾಯಿತು. ತಾವು ಬಂದ ಕೆಲಸ ಇಷ್ಟು ಸುಲಭವಾಗುತ್ತದೆಂದು ಅವರು ನಿರೀಕ್ಷೆ ಮಾಡಿರಲಿಲ್ಲ. ಅಕ್ಕ ಜಾಣೆ. ತನ್ನ ಷರತ್ತಿಗೆ ಅರಸ ಒಪ್ಪದೇ ಹೋಗಬಹುದು ಎಂದು ಒಂದು ಯೋಚನೆ. ಒಂದು ವೇಳೆ ಒಪ್ಪಿದರೂ ಕ್ರಮವಾಗಿ ಅವನನ್ನು ಶಿವಭಕ್ತನನ್ನಾಗಿ ಪರಿವರ್ತಿಸಬಹುದು ಎಂದು ಇನ್ನೊಂದು ಆಲೋಚನೆ. “ದೊರೆಯನ್ನು ಮದುವೆಯಾಗಲು ಅಡ್ಡಿಯಿಲ್ಲ. ಮದುವೆಯಾದ ಮೇಲೂ ಶಿವಪೂಜೆ ಮಾಡುತ್ತೇನೆ; ಗುರುಲಿಂಗ ಜಂಗಮರ ಪೂಜೆಯನ್ನೂ ಮಾಡುತ್ತೇನೆ. ಪುರಾಣ ಶ್ರವಣ ತತ್ವೋಪದೇಶಗಳಲ್ಲಿ ತೊಡಗುತ್ತೇನೆ. ಕೌಶಿಕರಾಜ ಇದಕ್ಕೆ ಅಡ್ಡಿಯಾಗಬಾರದು. ಒಂದು ಅಡ್ಡಿಯನ್ನು ನಾನು ಒಂದು ತಪ್ಪು ಎಂದು ತಿಳಿಯುತ್ತೇನೆ. ಇಂಥ ಮೂರು ತಪ್ಪುಗಳನ್ನು ಅವನು ಮಾಡಿದರೆ ಅವನನ್ನು ಬಿಟ್ಟು ಹೋಗುತ್ತೇನೆ.” ಎಂದು ಮಹಾದೇವಿ ಕರಾರು ಹಾಕಿದಳು.ಮಂತ್ರಿಗಳು ಯಾವುದನ್ನೂ ಯೋಚಿಸಿದೆ ಒಪ್ಪಿ ಬರೆದುಕೊಟ್ಟು ಅವರಸರವಸರವಾಗಿ ಅರಮನೆಗೆ ಧಾವಿಸಿದರು.

 

‘ವನವೆಲ್ಲ ನೀವೆ. ವನದೊಳಗಣ ದೇವತರುವೆಲ್ಲ ನೀವೆ... ಸರ್ವಭರಿತನಾಗಿ ಮುಖ ತೋರಿಸಿ.’


 

ಮಂತ್ರಿಗಳ ಯಶಸ್ವಿಯಾದ ರಾಯಭಾರವನ್ನು ರಾಜ ಸಂತೋಷದಿಂದ ಮೆಚ್ಚಿದ. ಅವನ ಸಂತೋಷಕ್ಕೆ ಮೇರೆಯೇ ಇರಲಿಲ್ಲ. ಮದುವೆಯಾದ ಮೇಲೆ ತಾನೆ ಕಾರಾರಿನ ಪಾಲನೆ ಎಂದು ಅವನು ಲಘುವಾಗಿ ಭಾವಿಸಿದ. ನಿರ್ಮಲ ಸುಮತಿಯರಿಗೆ , ಬಂಧು, ಬಾಂಧವರಿಗೆ ಅರಸನು ಬೆಲೆಬಾಳುವ ಉಡುಗೊರೆಗಳನ್ನು ಕಳಿಸಿದ.

ಕೆಲವು ದಿನಗಳಲ್ಲಿಯೇ ಬಹಳ ಸಂಭ್ರಮದಿಂದ ಮದುವೆ ನಡೆದುಹೋಯಿತು. ಮಹಾದೇವಿ ಕೌಶಿಕನ ಅರಮನೆ ಸೇರಿದಳು. “ರೇಷ್ಮೆಯ ಹುಳು ತನ್ನ ನೂಲಿನಲ್ಲಿ ಮನೆಯಮಾಡಿ ತನ್ನ ನೂಲೆ ಸುತ್ತಿ ಸಾಯುವ ಹಾಗೆ ಮನ ಬಂದುದ ಬಯಸಿ ಬೇಯುತ್ತಿದ್ದೇನೆ. ಮನದ ನಿರಾಶೆಯ ನಿವಾರಿಸು” ಎಂದು ಶಿವನಲ್ಲಿ ಮೊರೆಯಿಡುತ್ತ ಇಡುತ್ತ ಅಕ್ಕ ಸಂಸಾರದಲ್ಲಿ ತೊಡಗಿದಳು.

ಅರಮನೆಯಲ್ಲಿ ಭಕ್ತಿಯ ಮೂರ್ತಿ

ಅರಮನೆಯನ್ನು ಸೇರಿದ ಮಹಾದೇವಿ ಮೊದಲಿಗಿಂತ ನೂರು ಮಡಿ ಹೆಚ್ಚಾಗಿ ಶಿವಪೂಜೆಯಲ್ಲಿ ಮಗ್ನಳಾದಳು. ಹೊತ್ತಿಗೆ ಮುಂಚೆ ಎದ್ದು, ಸ್ನಾನ ಮಾಡಿ ಮಡಿಯುಟ್ಟು, ಹೂ ಮುಡಿದು, ರತ್ನಾಭರಣಗಳನ್ನು ತೊಟ್ಟು, ಬಂಗಾರದ ಪಾದುಕೆಗಳನ್ನು ಮೆಟ್ಟಿ, ಸಖಿಯರೊಡನೆ ಪೂಜಾಮಂದಿರ ಸೇರಿ ನಡೆಸುವ ಪೂಜೆಯ ವೈಭವವನ್ನು ಹರಿಹರ ಕವಿ ವಿವರವಾಗಿ ವರ್ಣಿಸಿದ್ದಾನೆ. ಪರಿಮಳದಿಂದ ಕೂಡಿದ ತಿಳಿ ಜಲದಲ್ಲಿ ಶಿವಲಿಂಗಕ್ಕೆ ಸ್ನಾನ ಮಾಡಿಸಿ ಬಗೆಬಗೆಯ ರೀತಿಯಿಂದ ಅಲಂಕಾರ ಮಾಡಿ ಪೂಜಿಸುತ್ತಾ ಪೂಜಿಸುತ್ತಾ ರೋಮಾಂಚನಗೊಂಡು ಮೈಮರೆಯುವ ಭಕ್ತೆ ಮಹಾದೇವಿಯ ಚಿತ್ರ ಅಪೂರ್ವವಾದುದು. ‘ಗುರುವೆ ಬಾರ ಪರವೆ ಬಾರ ವರವೆ ಬಾರ’ ಎಂಬ ಅವಳ ಕರೆ ಅರಮನೆಯನ್ನು ಮಾತ್ರವಲ್ಲ, ಅರಮನೆಯಲ್ಲಿರುವವರ ಹೃದಯಗಳಲ್ಲಿಯೂ ತುಂಬುವಂತಾಯಿತು. ಅವಳು ಯಾವಾಗಲೂ ಶಿವಪೂಜೆಯಲ್ಲಿ, ಗುರು ಜಂಗಮರ ಸೇವೆಯಲ್ಲಿ ನಿರತಳಾಗಿರುತ್ತಿದ್ದಳು. ರಾಜನ ಬೊಕ್ಕಸದ ಹಣ ಸಾಕಷ್ಟು ಅವಳ ಅತಿಥಿ ಪೂಜೆ, ದಾಸೋಹಗಳಿಗಾಗಿ ಖರ್ಚಾಗುತ್ತಿತ್ತು. ಅರಮನೆ ನಿಧಾನವಾಗಿ ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿತು.

ಕೌಶಿಕರಾಜ ಇದನ್ನೆಲ್ಲ ಸಹಿಸಲಾರದವನಾದ. ಚೆಲುವೆಯೊಡನೆ ಸರಸವಾಡಲು ಬಯಸಿದ್ದ ತರುಣ ರಾಜನಿಗೆ ಶಿವಪೂಜೆಯ ವೈಭವ ಬೇಸರ ತರುವಂತೆ ಆಯಿತು. ಮಹಾದೇವಿಯನ್ನು ನೋಡಿದಾಗಲೆಲ್ಲ ಅವನು ‘ಅವಳು ನನಗೆ ಎಷ್ಟು ಹತ್ತಿರ. ಆದರೂ ಎಷ್ಟೂ ದೂರ!’ಎಂದು ಕೊರಗುತ್ತಿದ್ದ. ಒಂದು ಸಲ ಅವನು ತನ್ನ ಮನದ ಅಳಲನ್ನು ಮಹಾದೇವಿಯೊಂದಿಗೆ ತೋಡಿಕೊಂಡ. ಅವಳು ಹೇಳಿದಳು: “ಗಂಡಿನ ಮುಂದೆ ಹೆಣ್ಣು ಮಾಯೆಯಾಗಿ ಕಾಡುತ್ತದೆ; ಹೆಣ್ಣಿನ ಮುಂದೆ ಗಂಡು ಮಾಯೆಯಾಗಿ ಕಾಡುತ್ತದೆ. ಹೆಣ್ಣು ಗಂಡುಗಳ ಮೋಹದ ಮಾಯೆಗೆ ಸಿಕ್ಕಿ ನಾವು ಮೋಸ ಹೋಗಬಾರದು.”

ಬೇರೆಯವರನ್ನು ಬಯಸುವುದಿಲ್ಲ

ಕೌಶಿಕನಿಗೆ ಈ ಉಪದೇಶ ಬೇಕಾಗಿರಲಿಲ್ಲ. ಅವನು ನಿರಾಶೆಗೊಳ್ಳಲಿಲ್ಲ. ಮಹಾದೇವಿಯ ಮನಸ್ಸನ್ನು ಗೆದ್ದು ತನ್ನಲ್ಲಿ ಅನುರಕ್ತಳಾಗುವಂತೆ ಮಾಡಲು ಅವನು ನಾನು ಪರಿಯಲ್ಲಿ ಯತ್ನಿಸಿದ. ಅರಮನೆಯ ಸಖಿಯರನ್ನು ಈ ಕೆಲಸಕ್ಕಾಗಿ ನಿಯೋಜಿಸಿದ. ಅವರೆಲ್ಲ ಮೂರು ಹೊತ್ತೂ ಮಹಾದೇವಿಯನ್ನು ಮುತ್ತಿಕೊಂಡು ರಾಜನ ಗುಣಗಾನ ಮಾಡತೊಡಗಿದರು. ಅವನ ಸೌಂದರ್ಯ-ಔದಾರ್ಯಗಳನ್ನು ಹೊಗಳಿ ಹಾಡಿದರು. ಇದು ಮಹಾದೇವಿಗೆ ಬೇಸರವನ್ನು ಮಾಡುತ್ತಿತ್ತು. “ಬೆಟ್ಟದ ಮೇಲೆ ಒಂದು ಮನೆಯ ಮಾಡಿ ಮೃಗಗಳಿಗೆ ಅಂಜಿದರೆ ಹೇಗೆ? ಸಮುದ್ರದ ತಡಿಯೊಳಗೆ ಒಂದು ಮನೆಯ ಮಾಡಿ ನೊರೆತೆರೆಗಳಿಗೆ ಅಂಜಿದರೆ ಹೇಗೆ? ಸಂತೆಯೋಲಗೆ ಒಂದು ಮನೆಯ ಮಾಡಿ ಶಬ್ದಕ್ಕೆ ನಾಚಿದರೆ ಹೇಗೆ? ಲೋಕದಲ್ಲಿ ಹುಟ್ಟಿ ಸುತ್ತಿ, ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು” ಎಂದು ಹೇಳಿಕೊಂಡು ಅವಳು ತನ್ನ ದಿನಚರಿಯಲ್ಲಿ ತಾನು ಮಗ್ನಳಾಗಿರುತ್ತಿದ್ದಳು. ತನ್ನ ಯೋಚನೆಗಳಲ್ಲಿಯೇ ತಾನು ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಳು.

ಅವಳ ಮನಸ್ಸು ಸಖಿಯರಿಗೆ ಅರ್ಥವಾಗುತ್ತಿರಲಿಲ್ಲ. ರಾಜನ ಪರವಾದ ಅವರ ರಾಯಭಾರ ಒಂದೇ ಸಮನೆ ನಡೆಯಿತು. ಒಂದು ಸಲ ಅಕ್ಕ ಅವರಿಗೆ ತನ್ನ ನಿಲುವನ್ನು ಹೀಗೆ ವಿವರಿಸಿದಳು: “ಗಿರಿಯಲ್ಲದೆ ಹುಲು ಮೊರಡಿ ಯಲ್ಲಿ ನವಿಲು ಆಡುತ್ತದೆಯೆ? ಕೊಳವನ್ನಲ್ಲದೆ ಕಿರಿಉ ಹಳ್ಳವನ್ನು ಹಂಸ ಅಪೇಕ್ಷಿಸುತ್ತದೆಯೆ? ಮಾವಿನಮರ ಚಿಗುರಿದಲ್ಲದೆ ಕೋಗಿಲೆ ಹಾಡುತ್ತದೆಯೆ? ಪರಿಮಳ ವಿಲ್ಲದ ಹೂವಿಗೆ ದುಂಬಿ ಆಶಿಸುತ್ತದೆಯೆ? ಗೆಳತಿಯರಿರಾ, ಹೀಗೆಯೇ ನನ್ನ ಮನಸ್ಸೂ ನನ್ನ ದೇವರಾದ ಚೆನ್ನಮಲ್ಲಿಕಾರ್ಜುನನನ್ನಲ್ಲದೆ, ಬೇರೆಯವರನ್ನು ಬಯಸುವುದಿಲ್ಲ.”

ನನ್ನ ಬಿನ್ನಹವನ್ನು ಆಲಿಸು

ಈ ಮಾತು ಎಷ್ಟು ಜನರಿಗೆ ಅರ್ಥವಾಯಿತೊ? ಕೆಲವರಿಗಂತೂ ವಿಚಿತ್ರವಾಗಿ ತೋರಿತು. ರಕ್ತಮಾಂಸಗಳ ಮನುಷ್ಯಳನ್ನು ಮಹಾದೇವ ವರಿಸುತ್ತಾನೆಯೇ ಎಂದು ನಕ್ಕರು. ಇಂಥ ಹೀಯಾಳಿಕೆಯಿಂದ ಅಕ್ಕ ವಿಚಲಿತಳಾಗಲಿಲ್ಲ. “ಬಂಜೆಗೆ ಹೆರಿಗೆಯ ನೋವು ತಿಳಿಯುವುದಿಲ್ಲ; ಮಲತಾಯಿಗೆ ಪ್ರೀತಿ ತಿಳಿಯುವುದಿಲ್ಲ. ನೋಯುವವರ ನೋವು ನೋಯದವರಿಗೆ ಹೇಗೆ ತಿಳಿದೀತು? ಮಲ್ಲಿಕಾರ್ಜುನನ ಅಗಲಿಕೆಯಿಂದ ನನಗೆ ಎದೆಗೆ ಕತ್ತಿಯನ್ನು ಚುಚ್ಚಿ ತಿರುಪಿದರೆ ಉಂಟಾಗುವ ನೋವು ಆಗಿದೆ. ತಾಯಿಯರೇ, ಆ ನೋವನ್ನು ನೀವು ಹೇಗೆ ಬಲ್ಲಿರಿ?” ಎಂದುಅ ವರ ಅವರ ಬಾಯಿ ಮುಚ್ಚಿಸಿದಳು. ಆದರೇನು? ಅವಳ ಕಷ್ಟಗಳು ಪರಿಹಾರವಾಗಲಿಲ್ಲ. “ಸಂಸಾರ ಬೆನ್ನುಬಿಡದೆ ಕಾಡುತ್ತಿದೆ. ಅಂದಿನಂದಿನ ಕಷ್ಟಕ್ಕೆ ಏನು ಮಾಡಲಿ? ಕಷ್ಟದಿಂದ ಬೇಯುತ್ತಿರುವ ಒಡಲನ್ನು ನಾನು ಕಾಪಾಡಿಕೊಳ್ಳಲಾರೆ. ಕೊಲ್ಲುವುದು, ಕಾಪಾಡುವುದು ನಿನಗೆ ಸೇರಿದ್ದು” ಎಂದು ಗೋಗರೆದಳು. “ನನ್ನ ಬಿನ್ನಹವನ್ನು ಆಲಿಸು, ಲಾಲಿಸು, ಪಾಲಿಸು” ಎಂದು ಮಲ್ಲಿಕಾರ್ಜುನನಲ್ಲಿ ಮೊರೆಯಿಟ್ಟಳು.

ಅಕ್ಕನ ಶಿವಾಚಾರವನ್ನು ಭವಿಯಾದ (ಶಿವಭಕ್ತನಲ್ಲದ) ಕೌಶಿಕ ಸಹಿಸದೆ ಹೋದ. ತರುಣನಾದ ಅವನು ಅಕ್ಕನೊಂದಿಗೆ ಸಂತೋಷವಾಗಿ ಸಂಸಾರ ಮಾಡಲು ಆಸೆಪಡುತ್ತಿದ್ದ. ಆದರೆ ಕೊಟ್ಟ ಮಾತು ಅವನಿಗೆ ಬೇಲಿಯಾಗಿತ್ತು. ಈ ಬೇಲಿಯೂ ಬಹಳ ಕಾಲ ಉಳಿಯಲಿಲ್ಲ.

ಎರಡು ತಪ್ಪುಗಳು

ಒಂದು ಸಲ ಶಿವಭಕ್ತರ ತಂಡವೊಂದು ಅಕ್ಕನನ್ನು ನೋಡಲು ಬಂದಿತು. ಅದನ್ನು ತಿಳಿಯುತ್ತಲೇ ದೊರೆಗೆ ಕೋಪ ಬಂತು. ಈ ಭಕ್ತರ ಹಾವಳಿಯಿಂದಲೇ ಮಹಾದೇವಿ ತನನ್ನು ದೂರ ಮಾಡಿದ್ದಾಳೆ. ಇವರಿಗೆ ಸರಿಯಾದ ಪಾಠ ಕಲಿಸಬೇಕು ಎಂದುಕೊಂಡ. ಅಕ್ಕನನ್ನು ನೋಡಲು ಅವನು ಶಿವಭಕ್ತರಿಗೆ ಅವಕಾಶ ಕೊಡಲಿಲ್ಲ. ಇದು ಅಕ್ಕನಿಗೆ ತಿಳಿಯಿತು. ಮಹಾ ಪ್ರಮಾದವಾಯಿತೆಂದು ಅವಳಿಗೆ ದುಃಖವಾಯಿತು. ಕೋಪದಿಂದ ದೊರೆಯ ಹತ್ತಿರ ಬಂದು ಕೂಗಿದಳು; “ಸುಡು, ಸುಡು ಪಾತಕಿಯೇ, ನಾನು ಕಟ್ಟೆ, ನಿನ್ನ ದೆಸೆಯಿಂದ ಶಿವಭಕ್ತರ ನಿಂದೆಯನ್ನು ಕೇಳುವಂತಾಯಿತು.” ಅವಳ ತೇಜಸ್ಸು, ಉದ್ವೇಗಗಳ ಎದುರಿನಲ್ಲಿ ಕೌಶಿಕ ಮಹಾರಾಜ ಕುಸಿದುಹೋದ. ಅವಳ ಕಾಲಿಗೆ ಬಿದ್ದು, “ಒಂದು ಅಪರಾಧವಾಯಿತು. ಕ್ಷಮಿಸಬೇಕು” ಎಂದು ಕೇಳಿಕೊಂಡ. ಮಹಾದೇವಿ. “ಆಯಿತು, ಕ್ಷಮಿಸಿದ್ದೇನೆ. ಮೂರು ತಪ್ಪುಗಳಲ್ಲಿ ಒಂದು ಮುಗಿಯಿತು” ಎಂದು ಹೇಳಿ, ಶಿವಭಕ್ತರನ್ನು ಕರೆದು ಆದರಿಸಿ ನಮಸ್ಕರಿಸಿದಳು.

ಒಮ್ಮೆ ಮಾಹೇರ್ಶವರರ ಆರಾಧನೆಗೆ ಹತ್ತು ಸಾವಿರ ಹೊನ್ನುಗಳು ಬೇಕೆಂದು ಬೊಕ್ಕಸದ ಅಧಿಕಾರಿಗೆ ಹೇಳಿ ಕಳುಹಿಸಿದಳು, ಮಹಾದೇವಿ, ದೊರೆ ಆಗ ಪಟ್ಟಣದಲ್ಲಿರಲಿಲ್ಲ. ದೊರೆಯ ಅಪ್ಪಣೆಯಿಲ್ಲದೆ ಹಣ ಕೊಡುವುದು ತನಗೆ ಸಾಧ್ಯವಾಗುವುದಿಲ್ಲವೆಂದು ಅಧಿಖಾರಿ ತಿಳಿಸಿದ. ಮನೆಗೆ ಬಂದ ಭಕ್ತರಿಗೆ ಸತ್ಕರಿಸಲು ನನಗೆ ಅವಕಾಶವಿಲ್ಲದಿದ್ದರೆ ನಾನೇಕೆ ಈ ಭೂಮಿಯ ಮೇಲಿರಬೇಕು ಎಂದು ದುಃಖಿಸುತ್ತಾ ಅವಳು ತನ್ನ ಮೈಮೇಲಿನ ಒಡವೆಗಳನ್ನೇ ತೆಗೆದುಕೊಟ್ಟಳು. ಅಷ್ಟರಲ್ಲಿ ದೊರೆ ಹಿಂದಿರುಗಿದ. ವಿಷಯವನ್ನೆಲ್ಲ ತಿಳಿದು ಅವನು ಅಧಿಕಾರಿಯನ್ನು ಆಕ್ಷೇಪಿಸಿ ಅಕ್ಕನಿಗೆ ಅಗತ್ಯವಾದ ಹೊನ್ನುಗಳನ್ನೂ ಒಡವೆಗಳನ್ನೂ ಕೊಡಿಸಿದ. ಏನಾದರೂ ಆಗಲಿ ಮಹಾದೇವಿ ಒಲಿದರೆ ಸಾಕೆಂದು ರಾಜ ತನ್ನ ಕೈಲಾದುದನ್ನೆಲ್ಲ ಮಾಡಿದ.

ಒಂದು ಸಲ ಲಿಂಗಪೂಜೆಯಲ್ಲಿ ಮೈಮರೆತ ಮಹಾದೇವಿಯನ್ನು ಕೌಶಿಕ ಕಂಡ. ಅವಳ ಚೆಲವು ಅವನನ್ನು ಹುಚ್ಚನನ್ನಾಗಿಸಿತು. ಮನಸ್ಸಿನ ಭಾವನೆಗಳನ್ನು ಹತ್ತಿಕ್ಕಲಾರದೆ ಅವನು ಮಹಾದೇವಿಯ ಕೈಗಳನ್ನು ಹಿಡಿದುಕೊಂಡ. ಅವಳ ಧಾನ್ಯ ಭಂಗವಾಯಿತು. ಕಣ್ಣು ತೆರೆದಳು. ಎದುರಿಗೆ ಕೌಶಿಕ ನಿಂತಿದ್ದಾನೆ. ಅವಳಿಗೆ ಸಂಕಟವಾಯಿತು, ಕೋಪ ಬಂತು. “ಎಲೈ ಭವಿಯೆ, ಶಿವಪೂಜೆಯ ಸಮಯದಲ್ಲಿ ನೀನು ನನ್ನನ್ನು ಮುಟ್ಟಬಹುದೆ? ಎಂಥ ಅವಿವೇಕ ಮಾಡಿದೆ. ನಿನ್ನ ಎರಡನೆಯ ತಪ್ಪು ಮುಗಿದು ಹೋಯಿತು. ಇನ್ನು ಮುಂದಾದರೂ ನೀನು ಎಚ್ಚರದಿಂದಿರು” ಎಂದು ಗದರಿದಳು. ಉಪಾಯವಿಲ್ಲದೆ ಕೌಶಿಕ ದೂರ ಸರಿದ. ಹೀಗೆ ಅಕ್ಕ ಏಕಕಾಲದಲ್ಲಿಯೇ ಲಿಂಗ ಪೂಜೆಯ ಸುಖವನ್ನೂ, ಭವಿಯನ್ನು ಸೇರಿದ ದುಃಖವನ್ನೂ ಅನುಭವಿಸುತ್ತಿದ್ದಳು.

ನಾನಿನ್ನು ಸ್ವತಂತ್ರಳು

ಇನ್ನೊಂದು ಸಲ ಹೀಗಾಯಿತು: ಶರಣರ ಪೂಜೆಯಲ್ಲಿ ಮಹಾದೇವಿ ತೊಡಗಿದ್ದಾಗ ಅವಳನ್ನು ನೋಡಲು ರಾಜ ಬಂದ. ಮಹಾದೇವಿ ಅವನ ಕಡೆ ಗಮನ ಕೊಡಲಿಲ್ಲ. ತನ್ನ ಗುರುವಿನ ಪಾದಪೂಜೆಯಲ್ಲಿ ಅವಳು ಮಗ್ನಳಾಗಿದ್ದಳು. ನಾಡಿಗೇ ದೊರೆಯಾದ ತನಗೆ ಇದು ಅಪಮಾನವೆಂದು ರಾಜ ಭಾವಿಸಿದ. “ಸಾಕು ನಿಲ್ಲಿಸು ನಿನ್ನ ಪೂಜೆಯನ್ನು” ಎಂದು ಗರ್ಜಿಸಿದ. “ನಿನ್ನ ಗಂಡನನ್ನು ಕಣೆತ್ತಿ ನೋಡದ ನಿನಗೆ ಈ ಅರಮನೆ, ಈ ವೈಭವಗಳೇಕೆ ಬೇಕು?” ಎಂದೂ ಪ್ರಶ್ನಿಸಿದ. ಇದಕ್ಕೆಲ್ಲ ಕಾರಣರಾದ ಶರಣರ ಮೇಲೂ ಅವನ ಕೋಪ ಉಕ್ಕಿತು. ಅವರನ್ನೂ ತರಾಟೆಗೆ ತೆಗೆದುಕೊಂಡ; ತನ್ನ ಸಂಸಾರ ಜೀವನವನ್ನು ಹಾಳು ಮಾಡಿದ ದುರುಳರೆಂದು ಜರಿದ. ಮಹಾದೇವಿ ತನ್ನ ಎದುರು ಜಂಗಮರಿಗಾದ ಈ ಅವಮಾನವನ್ನು ಸಹಿಸಲಿಲ್ಲ. “ಶರಣರ ಚಾರಿತ್ಯ್ರ ನಿನಗೇನು ಗೊತ್ತು? ಅವರ ಸಂಗಸುಖವನ್ನು ನೀನು ಹೇಗೆ ತಿಳಿಯುತ್ತಿ? ನಿನ್ನ ಮೂರು ತಪ್ಪುಗಳು ಇಲ್ಲಿಗೆ ಮುಗಿದುಹೋದುವು. ನೀನು ಕೊಟ್ಟ ವಸ್ತ್ರ, ಒಡವೆಗಳನ್ನು ನೀನೆ ಇಟ್ಟುಕೋ. ನಿನ್ನದೆಂಬುದು ನನಗೆ ಇನ್ನೇನೂ ಬೇಡ. ನಿನ್ನದಾರಿ ನಿನಗೆ, ನನ್ನ ದಾರಿ ನನಗೆ. ನಾನಿನ್ನು ಸ್ವತಂತ್ರಳು. ಇನ್ನು ಮುಂದೆ ನಾನು ಇಲ್ಲಿರಲಾರೆ” ಎನ್ನುತ್ತಾ ತನ್ನ ಮೈಮೇಲಿದ್ದ ವೈಭವದ ಒಡವೆ, ವಸ್ತ್ರಗಳನ್ನು ಕಳಚಿ ಹೇಗಿದ್ದಳೋ ಹಾಗೆಯೇ ಅರಮನೆಯಿಂದ ಹೊರ ಬಂದಳು. ಕೌಶಿಕ ರಾಜನೂ ಸೇರಿದಂತೆ ಸುತ್ತಲಿದ್ದವರೆಲ್ಲ ಗರಬಡಿದವರಂತೆ ನಿಂತರು. ಯಾರಿಗೂ ಏನು ಮಾಡಬೇಕೆಂದು ತೋಚಲಿಲ್ಲ.

ಚೆನ್ನಮಲ್ಲಿಕಾರ್ಜುನನಿಗೆ ಮುಡಿಪು

ಮಹಾದೇವಿ ಅರಮನೆಯನ್ನು ತ್ಯಜಿಸಿದ ಸುದ್ದಿ ಕ್ಷಣಮಾತ್ರದಲ್ಲಿ ಊರನ್ನು ತುಂಬಿತು. ಅಕ್ಕನ ತಂದೆ ತಾಯಿಯರು, ಬಂಧು ಬಳಗದವರು, ಗೆಳತಿಯರು ಅವಳನ್ನು ಸಮಾಧಾನಪಡಿಸಲು ಓಡೋಡಿ ಬಂದರು. ತಮ್ಮ ಪ್ರೀತಿಯ ಅಕ್ಕ ಹೀಗೆ ಕಾಡಿನ ಹಾದಿಹಿಡಿದು ಹೋಗುವುದನ್ನು ಅವರು ಯಾರೂ ಸಹಿಸರು. ‘ಎಲ್ಲಿ ಹೋಗುತ್ತಿ? ಏನು ತಿನ್ನುತ್ತಿ? ನಿನ್ನ ಜೊತೆ ಧೈರ್ಯಕ್ಕೆ ಯಾರು?‘ ಎಂದು ಬಗೆಬಗೆಯಾಗಿ ಪ್ರಶ್ನಿಸಿದರು. ಅಕ್ಕ ಹೇಳಿದರು: “ಹಸಿವಾದರೆ ಭಿಕ್ಷಾನ್ನಗಳುಂಟು. ಬಾಯಾರಿದರೆ ಕೆರೆ ಹಳ್ಳ ಬಾವಿಗಳುಂಟು. ಮಲಗಲು ಹಾಳು ದೇವಾಲಯಗಳುಂಟು. ಜೊತೆಗೆ ಚೆನ್ನಮಲ್ಲಿಕಾರ್ಜುನನಿದ್ದಾನೆ.” ಮತ್ತೂ ಅವಳು ಹೇಳಿದಳು: “ಜೊತೆಯಲ್ಲಿ ಯಾರೂ ಇಲ್ಲವೆಂದು ಚಿಂತಿಸಬೇಡಿ. ಏನೂ ಮಾಡಿದರೂ ನಾನು ಅಂಜುವವಳಲ್ಲ. ಒಣಗಿದ ಎಲೆಯನ್ನು ತಿಂದು ನಾನಿರಬಲ್ಲೆ, ಕತ್ತಿಯ ಮೇಲೆ ಮಲಗಿ ನಾನಿರಬಲ್ಲೆ, ದೇಹ ಜೀವಗಳನ್ನು ಚೆನ್ನಮಲ್ಲಿಕಾರ್ಜುನನಿಗೆ ಒಪ್ಪಿಸಿ ಶುದ್ಧಳಾಗುತ್ತೇನೆ. ಸಿಡಿಲು ಮಿಂಚುಗಳಾದರೆ ಹಸಿವು ಬಾಯಾರಿಕೆ ಹೋಯಿತು ಎಂದುಕೊಳ್ಳುತ್ತೇನೆ. ಮಳೆ ಹೊಯ್ದರೆ ಸ್ನಾನವಾಯಿತು ಎಂದುಕೊಳ್ಳುತ್ತೇನೆ. ಬೆಟ್ಟ ಮೈಮೇಲೆ ಬಿದ್ದರೆಹೂವು ಬಿತ್ತು ಎಂದುಕೊಳ್ಳುತ್ತೇನೆ. ತಲೆ ತುಂಡಾಗಿ ಬಿದ್ದರೆ ಈ ಪ್ರಾಣ ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿತವಾಯಿತು ಎಂದುಕೊಳ್ಳುತ್ತೇನೆ.” ಅಕ್ಕನ ಸಂಕಲ್ಪದ ಮುಂದೆ ಯಾರ ಮಾತೂ ನಡೆಯುವಂತಿರಲಿಲ್ಲ. ಅವಳ ಮಾತುಗಳು ಎಲ್ಲರನ್ನೂ ತಲೆದೂಗುವಂತೆ ಮಾಡಿದವು.

ಆಡಿದ್ದು ಸಾಹಿತ್ಯವಾಯಿತು

ಅಕ್ಕನ ಮಾತುಗಳು ನೇರ, ಸರಳ. ಅವು ಎಲ್ಲರಿಗೂ ತಿಳಿಯುತ್ತವೆ. ಅವುಗಳನ್ನು ಆಡಿದ ಹೃದಯ ಬುದ್ಧಿಗಳ ಹಿಂದಿನ ತ್ಯಾಗ, ವೈರಾಗ್ಯ ಧೈರ್ಯಗಳು ಅಪೂರ್ವವಾದವು. ಇವನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಅರ್ಥವಾದರೆ ಅಕ್ಕನ ವ್ಯಕ್ತಿತ್ವದ ಕಳೆ ಏರುತ್ತದೆ. ಆ ಬೆಳಕಿನಿಂದ ನಮ್ಮ ಹಾದಿ ಸ್ಪಷ್ಟವಾಗುತ್ತದೆ. ನಮಗೂ ಧೈರ್ಯ ನೆಮ್ಮದಿಗಳುಂಟಾಗುತ್ತದೆ. ತನ್ನ ಜೀವನದ ಕಷ್ಟ ಪ್ರಸಂಗಗಳಲ್ಲಿ, ತೊಳಲಾಟದಲ್ಲಿ, ಚೆನ್ನಮಲ್ಲಿಕಾರ್ಜುನ ನೊಡನೆ ಐಕ್ಯವಾಗಬೇಕೆಂಬ ಕಾತರದಲ್ಲಿ ಅವಳು ಆಡಿದ ಇಂಥ ಮಾತುಗಳು ಇಂದು ವಚನಗಳಾಗಿ ಉಳಿದಿವೆ. ಅವಳ ಕಾಲದ ಇತರ ಶರಶ್ರೇಷ್ಠರ ಈ ಬಗೆಯ ಮಾತುಗಳೂ ಹೀಗೆಯೇ. ಮಹಾದೇವಿ ಹೆಣ್ಣಾದುದರಿಂದ ಅವಳ ಅನುಭವ ವಿಶೇಷಗಳು ಅವಳಿಗೇ ಪ್ರತ್ಯೇಕವಾದವು. ಚೆನ್ನಮಲ್ಲಿಕಾರ್ಜುನನನ್ನು ಕುರಿತು ಅವಳ ಭಕ್ತಿ ಪ್ರೇಮದ ಸ್ವರೂಪ ತಾಳಿತು. ಮಲ್ಲಿಕಾರ್ಜುನನ ಪ್ರೇಯಸಿ ಅವಳಾಗಿದ್ದಳು. ಅವಳ ಆತ್ಮದ ಅಭಿವ್ಯಕ್ತಿಯ ಮಾತು ಪ್ರಿಯೆ ಪ್ರಿಯನನ್ನು ಸಂಬೋಧಿಸಿದ ಮಾತಾಯಿತು. ಆದುದರಿಂದ ಸಹಜವಾಗಿಯೇ ಅದರಲ್ಲಿ ಹೆಚ್ಚಿನ ಆಕರ್ಷಣೆ ಇದೆ; ವಿಶೇಷವಾದ ಕಲಾವಂತಿಕೆ, ಸಾಹಿತ್ಯ ಗುಣಗಳಿವೆ.

ಕೌಶಿಕನೊಡನೆ ಮಹಾದೇವಿಗೆ ಮದುವೆಯಾಗಿತ್ತೆ ಎಂಬ ವಿಷಯವಾಗಿ ಚರ್ಚೆ ನಡೆದಿದೆ. ಮದುವೆಯಾಗಿದ್ದರೆ ಅವಳ ವ್ಯಕ್ತಿತ್ವಕ್ಕೆ ಕೊರೆ ಬರುತ್ತದೆ ಎಂದು ಕೆಲವರು ಭಾವಿಸುವಂತೆ ತೋರುತ್ತದೆ. ಆದರೆ ನಾವು ಹಾಗೆ ಭಾವಿಸಬೇಕಾಗಿಲ್ಲ. ಮದುವೆಯಾಗಿದ್ದರೂ ಯೌವನದ ಕಾಲದಲ್ಲಿ ಅರಮನೆಯ ವೈಭವಗಳನ್ನು ತ್ಯಜಿಸಿ ಹೋದಳೆಂಬುದರಿಂದಲೇ ಮಹಾದೇವಿಯ ತ್ಯಾಗ-ವೈರಾಗ್ಯಗಳ ಬೆಲೆ ಹೆಚ್ಚುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅಕ್ಕನಂಥವರ ಜೀವನದಲ್ಲಿ ಮದುವೆಯಾಗದೆ ಇರುವುದು ದೊಡ್ಡ ಮಾತಲ್ಲ. ಮದುವೆಯಾಗಿ ಅದರಿಂದ ಹೊರಬರುವುದು ವಿಶೇಷ. ಇದನ್ನು ನಾವು ಮರೆಯಬಾರದು.

ಅಲ್ಲಮನೊಡನೆ ವಾದ

ಅರಮನೆಯಿಂದ ಹೊರಟ ಮಹಾದೇವಿ ನೇರವಾಗಿ ಶ್ರೀಶೈಲಕ್ಕೆ ನಡೆದಳೆಂದು ಹರಿಹರ ಹೇಳುತ್ತಾನೆ. ಮಾರ್ಗಮಧ್ಯದಲ್ಲಿ ಅವಳು ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣನವರನ್ನು ಸಂದರ್ಶಿಸಿದ ಪ್ರಸಂಗ ಬೇರೆ ಕಡೆ ಉಲ್ಲೇಖಿತವಾಗಿದೆ. (ಕಲ್ಯಾಣಪಟ್ಟಣದಲ್ಲಿ ಬಸವಣ್ಣ ಸ್ಥಾಪಿಸಿದ ತತ್ವಜಿಜ್ಞಾ ಸಂಸ್ಥೆ ಅನುಭವ ಮಂಟಪ. ಜ್ಞಾನಿಗಳಾದ ಭಕ್ತರು ಇಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುತ್ತಿದ್ದರು) ಅಕ್ಕನ ಜೀವನ ವಿಕಾಸವನ್ನು ನೋಡಿದರೆ ಈ ಎರಡನೆಯ ವಿವರಣೆಯೇ ಸರಿಯಾದುದೆಂದೂ ಸಹಜವಾದುದೆಂದೂ ತೋರುತ್ತದೆ. ಅನುಭವ ಮಂಪದಲ್ಲಿ ಚರ್ಚೆಯಲ್ಲಿ ಅವಳು ಭಾಗವಹಿಸಿದ್ದು ಅವಳ ಬದುಕಿನಲ್ಲಿ ಒಂದು ಮಹತ್ವದ ಘಟನೆ.

ಅಕ್ಕ ಕಲ್ಯಾಣನಗರಕ್ಕೆ ಹೋಗಿ ತನ್ನ ಅನುಭಾವ ಸಹಜತೆಯನ್ನು ಪ್ರದರ್ಶಿಸಿ, ಅಲ್ಲಮ, ಬಸವ, ಚೆನ್ನಬಸವ, ಸಿದ್ದರಾಮ, ಮುಕ್ತಾಯಕ್ಕ ಮೊದಲಾದ ಹಿರಿಯ ಶರಣರ ಸಹವಾಸದಲ್ಲಿ ಕೆಲವು ಕಾಲ ಇದ್ದು ಆದ್ಯಾತ್ಮ ವಿದ್ಯೆಯನ್ನು ಹೆಚ್ಚಾಗಿ ಅರಿತುಕೊಂಡಳು. ಬಸವಣ್ಣನನ್ನು ಅವಳು ತನ್ನ ಗುರುವೆಂದು ಸ್ವೀಕರಿಸಿದಳು. ಅನುಭವ ಮಂಟಪಕ್ಕೆ ಸೇರಿಸಿಕೊಳ್ಳುವಾಗ ಈ ಹಿರಿಯರು ಅವಳನ್ನು, ಅವಳ ದೃಢ ಭಕ್ತಿಯನ್ನು ಚೆನ್ನಾಗಿ ಪರೀಕ್ಷಿಸಿದರು. ಯೌವನ ತುಂಬಿದ ಏಕಾಕಿ ಹೆಣ್ಣಾದ ಅಕ್ಕ ಮಾರ್ಗಮಧ್ಯದ ಎಲ್ಲ ಕಷ್ಟಗಳನ್ನೂ ಕಳೆದುಕೊಂಡಳು; ಎಲ್ಲ ಪರೀಕ್ಷೆಗಳಿಂದಲೂ ಪಾರಾದಳು. ಶಿವಾನುಭವ ಮಂಟಪದಲ್ಲಿ ಅಲ್ಲಮನಿಗೂ ಅಕ್ಕನಿಗೂ, ಭಕ್ತಿ, ಜ್ಞಾನ, ವೈರಾಗ್ಯಗಳ ವಿಚಾರದಲ್ಲಿ ನಡೆದ ಚರ್ಚೆ ‘ಶೂನ್ಯ ಸಂಪಾದನೆ’ ಎಂಬ ಗ್ರಂಥದಲ್ಲಿ ನಿರೂಪಿತವಾಗಿದೆ. ಈ ವಾದ ಅದ್ಭುತವಾಗಿದ್ದು, ನಮ್ಮ ಸಾಹಿತ್ಯದ ಒಂದು ಅತ್ಯುತ್ತಮ ಪ್ರಸಂಗವಾಗಿದೆ.

ಅಕ್ಕನನ್ನು ಅಲ್ಲಮ ಕೇಳುತ್ತಾಣೆ: “ನೀನು ಇಲ್ಲಿಗೇಕೆ ಬಂದೆ? ಹೆಣ್ಣೆಂದರೆ ನಮ್ಮ ಶರಣರು ಮುನಿಯುತ್ತಾರೆ. ನಿನ್ನ ಗಂಡನ ಗುರುತು ಹೇಳಿ ಮಂಟಪದಲ್ಲಿ ಬಂದು ಕೂರು.”

ಅಕ್ಕ ಹೇಳುತ್ತಾಳೆ: “ಚೆನ್ನಮಲ್ಲಿಕಾರ್ಜುನನೆ ಗಂಡ ನನಗೆ. ಮಿಕ್ಕ ಲೋಕದ ಗಂಡರೊಡನೆ ನನಗೆ ಸಂಬಂಧವಿಲ್ಲ”

“ನೀನು ವಿರಕ್ತಳಾಗಿದ್ದರೂ ದೇಹದ ಮೇಲಿನ ಮೋಹ ಮರೆತಂತೆ ತೋರುವುದಿಲ್ಲ.”

 

‘ಅಂತರಂಗ ಶುದ್ಧವಾದ ಬಳಿಕ ಮಲ್ಲಿಕಾರ್ಜುನ ಒಲಿದ ಕಾಯ ಹೇಗಿದ್ದರೇನಯ್ಯ?’


 

“ಕಾಯ ಕರ‍್ರನೆ ಕಂದಿದರೇನು? ಮಿರ‍್ರನೆ ಮಿಂಚಿದರೇನು? ಅಂತರಂಗ ಶುದ್ಧವಾದ ಬಳಿಕ, ಮಲ್ಲಿಕಾರ್ಜುನ ಒಲಿತ ಕಾಯ ಹೇಗಿದ್ದರೇನಯ್ಯ?” ಅಲ್ಲಮಪ್ರಭು ಇನ್ನೂ ಕೆಣಕುತ್ತಾನೆ: “ನಿನ್ನ ಭಾವ ಶುದ್ಧವಾಗಿದ್ದರೆ ದೇಹವನ್ನು ಕೂದಲಲ್ಲಿ ಏಕೆ ಮುಚ್ಚಿಕೊಂಡಿರುವೆ? ಅದು ಅಂತರಂಗದ ನಾಚಿಕೆ, ಹೊರಗೆ ತೋರಿಸಿಕೊಂಡಿತ್ತು. ಇದನ್ನು ಶಿವ ಮೆಚ್ಚಲಾರ.” ಇದಕ್ಕೆ ಅಕ್ಕನ ಉತ್ತರ ತೀಕ್ಷ್ಣವಾಗಿಯೇ ಇದೆ. ಅವಳೆನ್ನುತ್ತಾಳೆ; “ಫಲ ಒಳಗೆ ಪಕ್ವವಾಗಿದೆಯಲ್ಲದೆ, ಹೊರಗಣ ಸಿಪ್ಪೆ ಒಪ್ಪಗೆಡದು. ದೇಹ ಕಂಡು ನಿಮಗೆ ನೋವಾದೀತೆಂದು ಮುಚ್ಚಿದೆ. ಇದಕ್ಕೇಕೆ ಬೇಸರ? ಚೆನ್ನಮಲ್ಲಿಕಾರ್ಜುನ ದೇವನ ಒಳಗಾದವಳನ್ನು ಕಾಡಬೇಡ”

ಮತ್ತು ಮುಂದುವರಿದು ಅಲ್ಲಮ ಹೇಳುತ್ತಾನೆ: “ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗುತ್ತದೆ. ಅದು ಶಿವಾರ್ಪಣೆಗೆ ಯೋಗ್ಯವಲ್ಲ.”

“ನೀವು ಹೇಳುವ ಮಾತು ಸಾಮಾನ್ಯ ಹಣ್ಣುಗಳ ವಿಷಯದಲ್ಲಿ ನಿಜ. ಅರಿಷಡ್ವರ್ಗಗಳನ್ನು ಗೆದ್ದವರ ವಿಷಯದಲ್ಲಿ ನಿಜವಲ್ಲ” ಎನ್ನುವುದು ಅಕ್ಕನ ಉತ್ತರ.

ಹೀಗೆಯೇ ಈ ಪ್ರಶ್ನೋತ್ತರಗಳು ಮುಮದುವರಿಯುತ್ತವೆ. ಪ್ರಭುದೇವರು ಅಕ್ಕನ ಅನುಭವ, ಜಾಣ್ಮೆಗಳನ್ನು ಮೆಚ್ಚುತ್ತಾರೆ. ಸುತ್ತಲಿನ ಶರಣ ಸಮೂಹ ಅಕ್ಕನನ್ನು ಗೌರವದಿಂದ ಕಂಡು ತಲೆದೂಗುತ್ತದೆ.

ಈ ವಾದವಿವಾದಗಳು ಅಕ್ಕನ ದೃಷ್ಟಿ, ದಿಗಂತಗಳನ್ನು ವಿಸ್ತರಿಸಿದವು. “ಮರ ಮರವನ್ನು ಮಥನಿಸಿ ಬೆಂಕಿ ಹುಟ್ಟಿ ಸುತ್ತಲಿನ ಗಿಡಮರಗಳನ್ನು ಸುಡುತ್ತದೆ. ಹಾಗೆಯೆ ಆತ್ಮ ಆತ್ಮ ಮಥನಿಸಿ ಅನುಭಾವ ಹುಟ್ಟಿ ತನುವಿನ ಗುಣಗಳನ್ನು ಸುಡುತ್ತವೆ” ಎನ್ನುವುದು ಅಕ್ಕನದೇ ಒಂದು ಮಾತು. ಒಟ್ಟಿನಲ್ಲಿ ಅವಳು ಬಸವಣ್ಣನಿಂದ ಭಕ್ತಿರ್ಮಾವನ್ನು ಕಂಡಳು; ಅಲ್ಲಮನಿಂದ ಜ್ಞಾನಮಾರ್ಗವನ್ನು ಕಂಡಳು. ಶರಣರ ಸಂಗದಿಂದ ಅವಳಿಗೆ ಸತ್ಯದ ಸಾಕ್ಷಾತ್ಕಾರ ವಾಯಿತು. ಲಿಂಗಾಂಗ ಸಾಮರಸ್ಯದ ರಹಸ್ಯ ಸ್ಪಷ್ಟವಾಯಿತು. ತನ್ನ ಹೃದಯದಲ್ಲಿಯೇ ನೆಲೆಸಿದ ಮಲ್ಲಿಕಾರ್ಜುನನನ್ನು ತಾನು ಅರಿಯುವಂತಾಯಿತು. “ನೆಲದಲ್ಲಿ ಅಡಗಿರುವ ಸಂಪತ್ತಿನಂತೆ, ಹಣ್ಣಿನಲ್ಲಿ ಅಡಗಿರುವ ರುಚಿಯಂತೆ, ಶಿಲೆಯಲ್ಲಿ ಅಡಗಿರುವ ಚಿನ್ನದಂತೆ, ಎಳ್ಳಿನಲ್ಲಿ ಅಡಗಿರುವ ಎಣ್ಣೆಯಂತೆ, ಚೆನ್ನಮಲ್ಲಿಕಾರ್ಜುನ ಭಾವದ ಮರೆಯ ಬ್ರಹ್ಮವಾಗಿದ್ದಾನೆ. ಅವನ ನಿಲುವು ಯಾರಿಗೆ ತಿಳಿಯುತ್ತದೆ?” ಎಂದು ಅವಳು ಹಾಡಿಕೊಂಡಳು.

ಶ್ರೀ ಶೈಲಕ್ಕೆ

ಇನ್ನು ಹೆಚ್ಚು ಕಾಲ ಕಲ್ಯಾಣದಲ್ಲಿಯೇ ಉಳಿಯುವುದು ಅವಳಿಗೆ ಸರಿಯೆಂದು ತೋರಲಿಲ್ಲ. ಚೆನ್ನಮಲ್ಲಿಕಾರ್ಜುನನ ಪರಮ ಪ್ರೀತಿಗಾಗಿ ತಾನು ಏಕಾಂತದಲ್ಲಿ ಸಾಧಿಸಬೇಕಾದುದು ಇನ್ನೂ ಇದೆ ಎಂದು ಅವಳು ಚಡಪಡಿಸಿದಳು. ಕಲ್ಯಾಣವನ್ನೂ ಕಲ್ಯಾಣದ ಶರಣ ಸಮೂಹವನ್ನೂ ಬಿಟ್ಟು ಹೋಗುವುದು ಅವಳಿಗೆ ವ್ಯಥೆಯ ಸಂಗತಿಯೇ ಆದರೆ ಕರ್ತವ್ಯವನ್ನು ಕಡೆಗಣಿಸಲು ಬರುವುದಿಲ್ಲ. ಅಂತೂ ಅವಳು ಶ್ರೀಶೈಲದತ್ತ ಹೊರಟಳು. ಎಲ್ಲರೂ ಸೇರಿ ಅವಳನ್ನು ಬೀಳ್ಕೊಟ್ರು. ಹೊರಡುವ ಮೊದಲು ಅವಳು ಬಸವಣ್ಣ ಮೊದಲಾದವರನ್ನು ಕೃತಜ್ಞತೆಯ ಕಣ್ಣೀರಿನಿಂದ ಸ್ಮರಿಸಿದಳು. ತನ್ನ ಶೀಲ-ನಡತೆಗಳಿಂದ ಅವರ ಘನತೆಗೆ ತಕ್ಕಂತೆ ತಾನು ಕೀರ್ತಿಯನ್ನು ಗಳಿಸುವುದಾಗಿ ಆಶ್ವಾಸನೆ ನೀಡಿದಳು. ಬಹುಶಃ ಈ ಸಂದರ್ಭದಲ್ಲಿಯೇ ಹಾಡಿರಬಹುದಾದ ಒಂದು ವಚನದಲ್ಲಿ, “ನಿಮ್ಮ ಮಂಡೆಗೆ ಹೂವ ತರುವೆನಲ್ಲದೆ ಹುಲ್ಲತಾರೆನು” ಎಂದೂ ಹೇಳಿ ಕೊಂಡಿದ್ದಾಳೆ.

ಬೆಳಗು ಬೆಳಗನ್ನು ಕೂಡಿತು

ಅಕ್ಕ ಶ್ರೀಶೈಲದ ಉತ್ತುಂಗ ಶಿಖರವನ್ನೇರಿದಳು. ಶ್ರೀಶೈಲ ಸುಂದರ ಕ್ಷೇತ್ರ. ಕಣ್ಣು ಹಾಯಿಸಿದ ಕಡೆ ಗಿಡ ಮರ ಬಳ್ಳಿಗಳು ಹೂ ಬಿಟ್ಟ ಅವುಗಳ ಚೆಲವು ದೃಷ್ಟಿಯನ್ನು ಅಲುಗಿಸಲು ಆಸ್ಪದ ಕೊಡುತ್ತಿರಲಿಲ್ಲ. ಹುಲ್ಲುಗಾವಲಿನ ಹಸುರು ಎಂಥ ಪ್ರಕ್ಷುಬ್ಧ ಮನಸ್ಸಿಗಾದರೂ ನೆಮ್ಮದಿಯನ್ನು ನೀಡುತ್ತಿತ್ತು. ಹಕ್ಕಿಗಳ ಹಾಡು ನಿರ್ಝರಗಳ ನಿನಾದದೊಡನೆ ಬೆರೆತು ಅಪೂರ್ವ ಸ್ವರಮೇಳದ ಸೃಷ್ಟಿಯಾಗಿತ್ತು. ಇದೇ ಚೆನ್ನಮಲ್ಲಿಕಾರ್ಜುನನ ಖಚಿತವಾದ ನೆಲೆ ಎಂದು ಮಹಾದೇವಿಗೆ ಭಾಸವಾಯಿತು. ಎಲ್ಲ ಕಡೆಯೂ ಅವನಿರುವಂತೆ ತೋರಿತು. “ವನವೆಲ್ಲ ನೀವೆ, ಮನದೊಳಗಣ ದೇವ ತರುವೆಲ್ಲ ನೀವೆ. ತರವಿನೊಳಗಾಡುವ ಖಗಮೃಗವೆಲ್ಲನೀವೆ. ಸರ್ವಭರಿತನಾಗಿ ನನಗೆ ಮುಖತೋರಿಸಿ” ಎಂದು ಅವಳು ಮಲ್ಲಿಕಾರ್ಜುನನನ್ನು ಪ್ರಾರ್ಥಿಸಿದಳು. ಅವನ ದರ್ಶನಕ್ಕಾಗಿ ಹಾತೊರೆದಳು. ಚಿಲಿಮಿಲಿ ಎಂದೋಡುವ ಗಿಳಿಗಳನ್ನೂ ಸ್ವರವೆತ್ತಿ ಹಾಡುವ ಕೋಗಿಲೆಗಳನ್ನೂ ಎರಗಿ ಬಂದು ಆಡುವ ದುಂಬಿಗಳನ್ನೂ ಕೊಳದ ತಡಿಯೊಳಗಾಡುವ ಹಂಸಗಳನ್ನೂ ಗಿರಿಗಹ್ವರದೊಳಗಾಡುವ ನವಿಲುಗಳನ್ನೂ ಅವಳು ಆರ್ತಳಾಗಿ ವಿಚಾರಿಸಿದಳು: “ಚೆನ್ನಮಲ್ಲಿಕಾರ್ಜುನನನ್ನು ನೀವು ಕಂಡಿಲ್ಲವೆ? ಅವನೆಲ್ಲಿದ್ದಾನೆ? ಹೇಳಿ” ಎಂದು ಧೈನ್ಯದಿಂದ ಕೇಳಿದಳು.

ಬಹಳ ಕಾಲ ಅಕ್ಕ ತನ್ನ ಹೃದಯವನ್ನು ಹರಿದು, ಕರುಳನ್ನು ಕತ್ತರಿಸಿ ಹಾಡಬೇಕಾಗಿ ಬರಲಿಲ್ಲ. ಕೆಂಪಾದ ಹೊಳೆಯುವ ಜಡೆಗಳ, ರತ್ನಖಚಿತ ಕಿರೀಟಧಾರಿಯಾದ, ಬೆಳಗುವ ಹಲ್ಲುಗಳ, ನಗೆ ಮೊಗದ, ಕಾಂತಿಯಿಂದ ತುಂಬಿದ ಕಣ್ಣುಗಳ, ಇವೆಲ್ಲದರಿಂದ ಹದಿನಾಲ್ಕು ಲೋಕಗಳನ್ನೂ ಬೆಳಗುವ ದಿವ್ಯ ಸ್ವರೂಪವನ್ನು ಅವಳು ಬಹುಬೇಗನೆ ಕಂಡಳು. ಇಂದಿಗೆ ನನ್ನ ಕಣ್ಣಿನ ಬರ ತೀರಿತು ಎಂದು ತೃಪ್ತಿಯಿಂದ ಹೇಳಿದಳು. ಲೋಕದ ಮಹಾಶಕ್ತ ರೆನಿಸಿದವರೆಲ್ಲ ತಲೆಬಾಗುವ ಶ್ರೇಷ್ಠಮೂರ್ತಿಯ ದರ್ಶನ ಅವಳಿಗಾಯಿತು. ಆದಿಶಕ್ತಿಯೊಡನೆ ಕೂಡಿರುವ ಪರಮ ಗುರು ಚೆನ್ನಮಲ್ಲಿಕಾರ್ಜುನನ ನಿಲುವನ್ನು ಕಂಡು ಬದುಕಿದೆ ಎಂದು ಅಕ್ಕ ಹೇಳಿಕೊಂಡಳು. ಈ ದಿವ್ಯ ದರ್ಶನದಿಂದ ಅಕ್ಕ ಉರಿಹತ್ತಿದ ಕರ್ಪೂರವಾದಳು. ಬೆಳಗು ಬೆಳಗನ್ನು ಕೂಡಿತು. ಬಯಲು ಬಯಲನ್ನು ಸೇರಿತು.