ದೂತಿ : ಏನೇ ನೀನು ಯಾವಾಕಿ ? ಈಗರ ಒಂದು ಬಂದು ಏನೇನರ ಹೇಳಿ ಹೋತು.ಈಗ ನೀನು ಬಂದು ಹಾಗೆ ಮಾಡಿರಿ ! ಹೀಗೆ ಮಾಡಿರಿ ಅಂತಾ ಬಣ್ಣಾ ಸುರುವಾಕ ಹತ್ತೀದಿ.ಇಂತಾದನ್ನ ಹೇಳಿ ಯಾರನ್ನಾದರೂ ಗೊತ್ತಿಗೆ ಹಚ್ಚಬೇಕಂತ ಮಾಡಿರುವಿಯೇನು ?ಹೇಳು ಮೊದಲು.

ಅಕ್ಕಮಹಾದೇವಿ : ಎನ್ನವ್ವ, ನಿನ್ನ ಹೆಸರೇನು ?

ದೂತಿ : ಎನ್ನವ್ವ, ನನ್ನ ಹೆಸರು ದಾಸಿ, ಬೇಕಾದರ ದೂತಿ, ಇದರೊಳಗೆ ಬೇಕಾದ್ದು ಅನ್ನವ್ವಾ.

ಅಕ್ಕಮಹಾದೇವಿ : ಏನೇ, ನನ್ನ ಹೆಸರು, ಯೋಗಿ, ಶರಣಿ, ಸನ್ಯಾಸಿ, ಇದು ಅಲ್ಲದೆ ನಿನ್ನಂತೆ ನನಗೆ ಶರಣದಾಸಿ, ಶರಣದಾಸಿ ಅಂತಾ ಕರೀತಾರ ನೋಡವ್ವ.

ದೂತಿ : ಇದರೊಳಗೆ ನನಗೇನೂ ತಿಳಿಯಲಿಲ್ಲ.ನೆಟ್ಟಗೆ ತಿಳಿಯುವ ಹಾಗೆ ಹೇಳ ನನ್ನ ಮಗಳ.

ಅಕ್ಕಮಹಾದೇವಿ : ನೀನು ಬಹಳ ಪಂಡಿತಳಿದ್ದಾಂಗಾಯಿತು. ಬಿಡು, ನಿನಗೆ ತಿಳಿಯುವಂತೆ ಹೇಳುತ್ತೇನೆ ಕೇಳು.

(ಪದ) ಕೇಳವ್ವ ಎನ್ನವಾರ‌್ತೆ ಸರಸಾಗಿ ಪೇಳುವೆ
ಸರ‌್ವವ ತಿಳಿಸುವೆ ಶಿವಾನುಭವಿಗಳ ಕೂಡಿದೆ
ಶಿವಧ್ಯಾನ ಸಂಪಾದನೆ ಮಾಡಿ ಶಿವನ ಕೊಂಡಾಡಿ
ಶಿವನಪಾಡಿ ಶಿವನೊಳು ಕೂಡಿನಾ ಪೋಗುವೆ ॥

ಹೊಲಸು ದೋಷ ಸಂಸಾರ ಕಂಡು
ಚಲದಲ್ಲಿ ಅದನ್ನ ಬಿಟ್ಟೇನ ನಾನು
ಹೊಂದಿದೆ ಘನತರ ವೈರಾಗ್ಯವನಾ ॥

ಹುಟ್ಟು ಸಾವು ಎಂಬ ಕಲ್ಪನೆ ಹರಿದು
ಕೆಟ್ಟ ಮಾಯವ ಕುಟ್ಟಿ ಹೊಡೆದು
ಸೃಷ್ಟಿಕರ್ತನ ಶ್ರೇಷ್ಠ ಶರಣವೆ
ನಿಷ್ಠೆಯಿಂದ ಮನಮುಟ್ಟಿ ಭಜಿಸುವೆ ॥

(ಮಾತು) ಏನೇ ದಾಸಿ, ಈ ಮಾಯಾ ಸಂಸಾರದೊಳಗೆ ಏನು ಅದೆ ?ಕಣ್ಣಿಗೆ ಇದು ಬಹಳ ಚಂದ ಕಾಣುತ್ತದೆ.ಪರಂತು ಇದರೊಳಗೆ ಹೊಕ್ಕರೆ ಮಾತ್ರ ಸರ‌್ವನಾಶವಾಗುತ್ತದೆ. ಹ್ಯಾಗೆಂದರೆ ಅದು ಒಂದು ದೀಪ ಅಂತಾ ತಿಳಿ. ಹಣ್ಣೆಂದು ಭಾವಿಸಿ ಅದನ್ನು ತಿನ್ನಬೇಕೆಂದು ಹಾರ‌್ಯಾಡುವಹುಳುಗಳೆಲ್ಲ ಆ ದೀಪಕ್ಕೆ ಬಿದ್ದು ಸುಟ್ಟುಕೊಂಡು ಹೇಗೆ ಸಾಯುವವೋ, ಅದರಂತೆ ಸಂಸಾರ ಅನ್ನುವಂತೆ ದೀಪವು ಮಾನವ ಜನ್ಮಕ್ಕೆ ಚಂದಕಂಡು ಅದರೊಳಗೆ ಬಿದ್ದು ಜನ್ಮ ಜನ್ಮಾಂತರಗಳಲ್ಲಿ ಸಹ ಅಳತೆಗಟ್ಟು ತಾಪಹೊಂದಿ ಒದ್ದಾಡುತ್ತಾರೆ.ಇಷ್ಟಾದರೂ ಪಾಪ ತೀರುವುದಿಲ್ಲ.ಈ ಸಂಸಾರವನ್ನು ದಾಟಲಾಗುವುದಿಲ್ಲ. ಸಂಸಾರ ವ್ಯಾಮೋಹ ಎಲ್ಲರನ್ನೂ ಹಾಳುಮಾಡಿ ನುಗ್ಗು ಮಾಡಿಬಿಡುತ್ತದೆ. ಇದನ್ನೆಲ್ಲ ವಿಚಾರ ಮಾಡಿದರೆ ಇಡೀ ಪ್ರಪಂಚವೇ ಒಂದು ಕೆಟ್ಟ ದೀಪ ಇದರಲ್ಲಿ ಬಿದ್ದರೆ ನಮ್ಮ ಸ್ಥಿತಿ ನೆಟ್ಟಗಾಗುವುದಿಲ್ಲ.ಅಂತಾ ತಿಳಿದು ಈ ಸಂಸಾರವನ್ನು ದೂರಮಾಡಿ ಬಿಟ್ಟಿದ್ದೇನೆ.ಇದನ್ನು ಬಿಟ್ಟ ಕಾರಣ ವೈರಾಗ್ಯ ಹೊಂದಿ ವಿರಾಗಿಣಿ, ಸಂನ್ಯಾಸಿಯಾಗಿ ಶಿವನೇ ಗತಿ.ಶಿವನನ್ನು ಬಿಟ್ಟು ಯಾವುದೂ ಇಲ್ಲಾ ಅಂತಾ ತಿಳಿದು ಶಿವಧ್ಯಾನ ಪಡಕೊಂಡು, ನನ್ನ ಮನಸ್ಸನ್ನು ಶಿವನ ಪಾದದಲ್ಲಿ ಲೀನ ಮಾಡಿದ ಕಾರಣ ನನಗೆ ಶಿವಯೋಗಿ ಎನ್ನುತ್ತಾರೆ.ಇದುಅಲ್ಲದೇ ಶಿವಸ್ವರೂಪರಾದಂಥ ಶಿವಶರಣರು ಅದಾರಲ್ಲಾ ! ಅಂಥಾ ಶಿವಶರಣರ ಪಾದಸೇವಾ ಮಾಡುವ ಕಾರಣ ಅನುಕರಣೆ ಶರಣದಾಸಿ ಅಂತಾ ಕರೆಯುತ್ತಾರೆ.ಈ ಜನರು ನನಗೆ ಮಹಾದೇವಿ ಮಹಾದೇವಿ ಅಂತ ಕರೀತಾರ ನೋಡವ್ವ ದೂತಿ.

ದೂತಿ : ಏನs ನನ್ನ ಮಗಳs. ಮಹಾದೇವಿ ನಿನ್ನ ಬುಡ ಈಗ ಗೊತ್ತಾತು ಬಿಡು.ನೀನು ಸನ್ಯಾಸಿ ಅಂತೀದಿ ಹಾಗಾದರ ಮನೆಯಲ್ಲಿ ಏಕೆ ಇರುವೆ.? ಮೈತುಂಬ ಬೂದಿ ಬಡಕೊಂಡ, ಕೈಯಾಗ ಕುಂಬಳ ಸೊರಟಿ ಹಿಡಕೊಂಡು, ಕ್ಯಾವಿ ಅರವಿ ಹೂತಗೊಂಡು ಬಾವಾಗೋಳ ಹಿಂಡಿನ್ಯಾಗ ಕೂಡಿಕೊಂಡು ಜೈ ಸೀತಾರಾಮ ಅಂತಾ ಹೋಗಬಾರದs ಇಲ್ಲಿ ಯಾತಕ ಬಂದೀ ?

ಅಕ್ಕಮಹಾದೇವಿ : ಏನೇ, ಬೂದಿ ಬಡಕೊಂಡು, ಕ್ಯಾವಿ ಉಟಕೊಂಡು ಕುಂಬಳ ಸೊರಟಿ ಹಿಡಿದು ಸುಳ್ಳೇ ದೇಶ ದೇಶ ಸುತ್ತುವವರೆಲ್ಲಾ ಸಂನ್ಯಾಸಿಗಳಲ್ಲಾ.

ದೂತಿ : ಹಾಗಾದರೆ ಸಂನ್ಯಾಸಿಗಳೆಂದರೆ ಯಾರು ಹೇಳವ್ವ ಮಹಾದೇವಿ.

ಅಕ್ಕಮಹಾದೇವಿ : ಸಂನ್ಯಾಸಿಗಳು ಯಾರೆಂದರೆ.

(ಮಾತು) ಈ ಇಡೀ ಪ್ರಪಂಚದ ಪ್ರಾಣಿಗಳೆಂದರೆ ಇರುವೆ, ಕೀಟಕ, ಇಂಥ ಜೀವಿಗಳಲ್ಲಿ ಸಹಿತ ಕ್ಷುದ್ರ ಜೀವಿಗಳಲ್ಲಿ ಸಹಿತ ಸಂಸಾರ ಸುಖವನ್ನು ನೋಡಿದರೆ. ನರಕ ನೋಡಿದರೆ ಮನಸ್ಸಿಗೆ ಎಷ್ಟು ಅಸಹ್ಯವಾಗುತ್ತದೆಯೋ ಅಷ್ಟು ಅನರ್ಥವಾಗುತ್ತದೆ.ಅಷ್ಟು ಅಸಹ್ಯವೂ ಮೂಡಿ ಬಿಟ್ಟರೆ ವೈರಾಗ್ಯ ಬಂತೆಂದು ತಿಳಿಯಬೇಕು.ಇಂಥ ವೈರಾಗ್ಯ ಹೊಂದುವ ಶಕ್ತಿ ಯಾರಿಗೆ ಬರುತ್ತದೆಯೋ ಅವರಿಗಷ್ಟೇ ಸಂನ್ಯಾಸಿ ಅನ್ನಬೇಕು.ಅದರಂತೆ ನನ್ನಲ್ಲಿ ಅಂಥ ಶಕ್ತಿ ಇದ್ದಲ್ಲಿಯೇ ನನಗೆ ಸಂನ್ಯಾಸಿ ಅನ್ನುತ್ತಾರೆ.ನಾನು ಮನೆ ಹಿಡಕೊಂಡಿದ್ದರೂ ಸಂಸಾರಿಕಳಲ್ಲ ನೋಡು.

ದೂತಿ : ನೀನು ಸಂಸಾರಿಕಳಲ್ಲ ಅಂತೀದಿ. ಮನೆಯಲ್ಲಿ ನಿಮ್ಮ ಅಪ್ಪ ತಮ್ಮ ಅದಾರ. ನೀನೂ ಉಣತೀದಿ ಅಡ್ಡಾಡತಿ, ಕೆಲಸ : ಬೊಗಸಿ ಮಾಡತಿ.ಇಷ್ಟೆಲ್ಲಾ ಹೇಳಿದ್ದು ನೀನು ಬಾವಾನಂಗ ಯಾವಗಾಗತೀಯವ್ವಾ.

ಅಕ್ಕಮಹಾದೇವಿ : ಹಾಗಲ್ಲಾ ದೂತಿ.ಜನಕರಾಯನ ಕಥೆಯನ್ನು ಕೇಳಿರುವಿಯೋ ಇಲ್ಲವೋ.

ದೂತಿ : ಕೇಳಿಲ್ಲಾ, ಹೇಳವ್ವಾ.

ಅಕ್ಕಮಹಾದೇವಿ : ಅವನಿಗೆ ಸಾವಿರ ಹೆಂಡಂದಿರಿದ್ದರು. ಹೆಂಡಿರ ಸಂಗಡ ಪ್ರಪಂಚಮಾಡಿ ಋಷಿ ಅಂತ ಹೇಗೆ ಅನಿಸಿಕೊಂಡ? ಅದರಂತೆ ನಾನೂ ನೋಡು ನಿಮ್ಮಂಥವರಿಗೆ ಪ್ರಾಪಂಚಿಕಳ ಹಾಗೆ ಕಂಡರೂ ವಿರಕ್ತಳಿದ್ದೇನೆ ನೋಡವ್ವಾ.

ದೂತಿ : ಏನೇನೋ ಹೇಳತಿ, ಯಾವ ರಾಜನಂತೆ ಅವನಿಗೆ ಸಾವಿರ ಮಂದಿ ಹೆಂಡಂದಿರಿದ್ದರಂತೆ, ಮೇಲಾಗಿ ರಾಜಕಾರಭಾರವನ್ನೂ ಮಾಡುತ್ತಿದ್ದನಂತೆ.ಇಷ್ಟೆಲ್ಲಾ ಇದ್ದರೂ ಋಷಿ? ಅಂತ. ಅದೆಂತಾ ಋಷಿ. ಇಂಥ ಬಲಾಟಗಿರಿ ಯಾರ ಮುಂದೆ ಹೇಳತಿ? ತೆಗೆದು ಕಪಾಳಕ್ಕೆ ಹೊಡೆದೇನು. ಕರೇ ಕರೇ ಹೇಳವ್ವಾ.

ಅಕ್ಕಮಹಾದೇವಿ : ಏನೇ, ನಾನು ಸುಳ್ಳು ಹೇಳುವದಿಲ್ಲಾ. ಜನಕರಾಜನಿಗೆ ಸಾವಿರಮಂದಿ ಹೆಂಡಂದಿರಿದ್ದರು.ಅವನು ಅವರನ್ನು ಆಳುತ್ತಿದ್ದ. ರಾಜ್ಯಭಾರ ಮಾಡುತ್ತಿದ್ದ, ಅಂದ ಮೇಲೆ ಅವನು ಋಷಿ ಅಲ್ಲಾ ಅಂತೀಯಲ್ಲಾ.ಅವನು ಸಂಸಾರ ಮಾಡಿದರೇನಾಯಿತು.ಹಾಗೇನೂ ತಿಳಿದುಕೊಳ್ಳಬೇಡಾ. ಈಗ ನೋಡು, ರಾಡಿಯೊಳಗೆ ಒಂದು ಹುಳು ಅಡ್ಡಾಡುತ್ತಿರುವುದು.ಅದನ್ನು ಕುಂಬಾರ ಹುಳು ಎನ್ನುವರು.ನೋಡಿರುವಿಯೋ ಇಲ್ಲವೋ.

ದೂತಿ : ನೋಡಿದ್ದೇನೆ ಹೇಳವ್ವಾ.

ಅಕ್ಕಮಹಾದೇವಿ : ಹಾಗಾದರೆ ಅದು ಯಾವತ್ತೂ ಎಲ್ಲಿ ಓಡಾಡುತ್ತದೆ ಮತ್ತು ಎಲ್ಲಿ ಹೊರಳಾಡುತ್ತದೆ ಹೇಳು?

ದೂತಿ : ಅದು ಹೊರಳಾಡುವುದು ರಾತ್ರಿ : ಹಗಲು ಬರೇ ರಾಡಿಯೊಳಗೆ ನೋಡವ್ವಾ.

ಅಕ್ಕಮಹಾದೇವಿ : ಹಾಗಾದರೆ ಅದು ರಾಡಿಯನ್ನು ತನ್ನ ಮೈಗೆ ಸ್ವಲ್ಪಾದರೂ ಹಚ್ಚಿಕೊಳ್ಳತ್ತದೇನು?

ದೂತಿ : ಇಲ್ಲಾ ನೋಡು, ಅದು ಸ್ವಲ್ಪಾದರೂ ಮೈಗೆ ಹಚ್ಚಿಕೊಂಡಿರುವದಿಲ್ಲಾ.

ಅಕ್ಕಮಹಾದೇವಿ : ಹಾಗಾದರೆ ಅದರಂತೆ ನೋಡು ಆ ಜನಕರಾಜನು ಸಂಸಾರ ಎನ್ನುವ ರಾಡಿಯೊಳಗೆ ಹೊರಳಾಡಿ ತನ್ನ ಮೈಗೆ ಸ್ವಲ್ಪಾದರೂ ಹಚ್ಚಿಕೊಳ್ಳದೇ ರಾಜಋಷಿ ಅನಿಸಿಕೊಂಡ, ಮುಕ್ತಿ ಸಾಮ್ರಾಜ್ಯ ಹೊಂದಿ, ಅದರಂತೆ ನಾನಾದರೂ ಪ್ರಪಂಚದೊಳಗೆ ಇದ್ದರೂ ಒಂದಿಷ್ಟೂ ಹಚ್ಚಿಕೊಂಡಿಲ್ಲ ನೋಡವ್ವ.

ದೂತಿ : ಹೌದು ಬಿಡು ನಮ್ಮವ್ವ, ನೀನು ವಿರಕ್ತಳೆನ್ನುವುದು ಈಗ ತಿಳಿದಂಗಾತು.ಹೀಗೆ ಒಡೆದ ಹೇಳಿದರೆ ತಿಳಿದೀತವ್ವ, ಹಂಗ, ಓದಿಕಿ ಮಾಡಿದಂಗ, ಅರೆ ಅಲ್ಲಾ ಬಿಸಮಿಲ್ಲಾ ಅಂತ ಹೇಳಿದರೆ ನಮ್ಮಂಥ ಕೌದಿ ತಿನ್ನುವವರಿಗೆ ಹ್ಯಾಂಗ ತಿಳದೀತವ್ವ, ಇದೆಲ್ಲ ಇರಲಿ ಮನೀಬಿಟ್ಟು ಈ ಅಗಸಿ ತನಕ ಯಾಕ ಬಂದಿ ಹೇಳವ್ವಾ?

ಅಕ್ಕಮಹಾದೇವಿ : ಏನೇ ದೂತಿ, ಇಲ್ಲಿಗೆ ಯಾತಕ್ಕೆ ಬಂದನೆಂದರೆ ಹೇಳುತ್ತೇನೆ ಕೇಳು.

(ಪದ) ಬಾರನ್ಯಾಕೋ ಎನ್ನಯ ಸಹೋದರಾ ಶಂಕರಾ
ಅವನ ನೋಡಲಿಕ್ಕೆ ಬಂದೆ ನಾ ಕಾತುರಾ ಕೇಳೆನ್ನ ಮಜಕೂರಾ ॥ಪಲ್ಲ ॥

ದಿನಾದಿನಾ ಲಗುಬೇಗ ಬರುತ್ತಿದ್ದನವ್ವ
ಹುಡುಗಾ ಯಾಕೆ ಬರಲಿಲ್ಲಾ ಈಗ
ಮನದೊಳಗೆ ಬೆಂದು ಗಾಬರಿಯಾಗಿ
ಬಂದೆ ನಾನು ತಿಳಿನೀನು ಕೇಳೆನ್ನ ಮಜಕೂರಾ

(ಮಾತು) ಏನವ್ವ, ಇಲ್ಲಿಗೆ ಯಾತಕ್ಕೆ ಬಂದೆನೆಂದರೆ ನನ್ನ ತಮ್ಮ ಶಂಕರ ಎನ್ನುವ ಹುಡುಗನುಈಶ್ವರನ ಪೂಜೆಗೆ ಹೂವು ತರುತ್ತೇನೆಂದು ಹೋದವನು ಬಹಳ ಹೊತ್ತಾದರೂ ಬರಲಿಲ್ಲ.ದೇವರ ಪೂಜೆಗೆ ವೇಳೆಯು ಮೀರುತ್ತಬಂತು. ಹುಡುಗ ಏಕೆ ಬರಲಿಲ್ಲ ಅಂತಾ ಅವನನ್ನು ನೋಡುತ್ತ ಇಲ್ಲೀತನಕ ಬಂದೆ ನೋಡವ್ವಾ.

ದೂತಿ : ನಿಮ್ಮ ಹುಡುಗನನ್ನು ನೋಡಲಿಕ್ಕೆ ಬಂದೇನವ್ವಾ ಅದೆಂತಾ ದೈತೋ ನಮ್ಮವ್ವಾ,ಇಲ್ಲೇ ಎಲ್ಲರ ಬರತೈತೇನ ನೋಡತೀನಿ ತಡಿಯವ್ವಾ. (ನೋಡಿದಂತೆ ಮಾಡುವಳು).ಏನೇ ತಂಗಿ ಯಾವದೋ ಒಂದು ಗಿಡ್ಡಪುಠಾಣಿ ಬರಾಕ ಹತ್ತೈತಿ.ಅದೇ ಹೌದೇನು ನೋಡವ್ವ ?

ಅಕ್ಕಮಹಾದೇವಿ : ಯಾವ ಕಡೆ ಅದಾನ ದಾಸಿ.

ದೂತಿ : ಅದು ಅಲ್ಲೇ ಹಾಸಿ ಬರತೈತೆ ನೋಡು ನಮ್ಮವ್ವ.

ಅಕ್ಕಮಹಾದೇವಿ : ಹೌದು ದಾಸಿ, ಅವನೇ ನೋಡು.

ದೂತಿ : ಏನೇ ಅದು ನಿಮ್ಮ ತಮ್ಮ ಒಂದು ದೊಡ್ಡ ಓತಿಕಾಟ ಆಗೇತಿ.ಜೀವಾನಾರ ಎಲ್ಲಿ ಹಿಡದೈತ್ಯೆ ತಂಗಿ ?ಏನ ಆಕಾರ, ನಿಮ್ಮ ಅಪ್ಪ ಇದನ್ನು ನಿದ್ದಿಗಿದ್ದಿಗಣ್ಣಿನ್ಯಾಗ ಮಾಡಿದ್ನೇನು ?

ಅಕ್ಕಮಹಾದೇವಿ : ಏನೇ ಹುಚ್ಚಿ, ನನ್ನ ಕೂಡಾ ಚೇಷ್ಟೆ ಮಾಡುತ್ತೀಯಾ ? ಸಾಕು ಸುಮ್ಮನಿರು.

(ಶಂಕರನ ಪ್ರವೇಶ, ಅಕ್ಕಮಹಾದೇವಿಯನ್ನು ನೋಡಿ)

ಶಂಕರ : ಇಲ್ಲಿಗ್ಯಾಕ ಬಂದೆವ್ವ ಸಹೋದರಿ.

ಅಕ್ಕಮಹಾದೇವಿ : ಲಿಂಗಪೂಜೆ ಹೊತ್ತು ಮೀರುತ್ತ ಬಂತು.ಆದ್ದರಿಂದ ಇಲ್ಲಿಗೆ ಬಂದೆ ನಾನು.ಏನಪ್ಪಾ ನೀನು ಹೋದವನು ಅತ್ತ ಹೋದಿ.ನಿನ್ನ ನೋಡುತ್ತ ಇಲ್ಲೀತನಕ ಬಂದೆ ನೋಡಪ್ಪ.ಇಷ್ಟು ತಡ ಯಾಕೆ ಮಾಡಿದೆ ನೋಡಪ್ಪಾ, ಯಾರ ಕೂಡ ಹರಟಿ ಹೊಡಕೋತ ನಿಂತಿದ್ದಿ ?ದೇವರ ಪೂಜೆಯ ವೇಳೆ ಮೀರುತ್ತ ಬಂತು ನಿನಗೆ ಎಚ್ಚರ ಆಗಲಿಲ್ಲವೇನಪ್ಪ?

ಶಂಕರ : ಬಿಡವ್ವ, ನಿನ್ನ ಪೂಜಿಗಿಷ್ಟು ಬೆಂಕಿ ಹಚ್ಚಿತು.ನಾನು ಸತ್ತು ಹೋಗುತ್ತಿದ್ದೆ.ನಾನು ಬೆರಕಿ ಅಂತ ಪಾರಾಗಿ ಬಂದೆ ನೋಡಕ್ಕಾ.

ಅಕ್ಕಮಹಾದೇವಿ : ಅದೇನು ಆಯಿತಪ್ಪಾ ಅಂತಾದ್ದು.

ಶಂಕರ : ಏನೆಂದರ ದಾರಿಯಲ್ಲಿ ಬರುವಾಗ ಎರಡು ಓತಿಕಾಟ ಒಂದಕ್ಕೊಂದು ಕಡದಾಡಲಿಕ್ಕೆ ಹತ್ತಿದ್ದವು. ಅವುಗಳನ್ನು ಬಿಡಿಸಬೇಕೆಂತ ತುಸು ಬೆದರಿಸಿದೆನವ್ವಾ. ಅವೆರಡೂ ತಿರುಗಿ ನನ್ನನ್ನೇ ಬೆನ್ನು ಹತ್ತಬೇಕೆನವ್ವಾ ? ಅವು ನನ್ನನ್ನು ಬಿಡುವುದಿಲ್ಲ ಅಂತ ತಿಳಿದು ಹಿಂದಕ್ಕೆ ಹೊಳ್ಳಿದವನೇ ಓಡಿಹೋಗಿ ಒಂದು ಕಡ್ಲಿಗಿಡದ ಬುಡಕ ಅಡಗಿಕೊಂಡೆ. ಅವು ನನ್ನನ್ನು ಹುಡುಕಿ ಬೇಸತ್ತು ಅತ್ತ ಹೋದವು.ನಾನು ಮೆಲ್ಲಕೆ ಸಪ್ಪಳ ಮಾಡದೇ ಬಂದೆ ನೋಡು ಅಕ್ಕವ್ವಾ.

ಅಕ್ಕಮಹಾದೇವಿ : ಹೌದು ಬಿಡಪ್ಪ, ನೀನು ಬಂಟನಿದ್ದಾಂಗಾಯಿತು.ಇನ್ನು ಮನಿಗೆ ಹೋಗಿ ಪರಮಾತ್ಮನ ಪೂಜೆಗೆ ಕೂಡ್ರುವೆ ನಡೆಯಪ್ಪ.

ಶಂಕರ : ನಡೆಯಕ್ಕಾ ಹೋಗೋಣ.

ಅಕ್ಕಮಹಾದೇವಿ : ಪೂಜೆಯ ಸಾಮಗ್ರಿಗಳನ್ನು ತೆಗೆದುಕೊಂಡು ಬಾ.

ಶಂಕರ : ತಂದಿದೇನೆ ನಡೆಯಕ್ಕಾ.

(ಅಕ್ಕಮಹಾದೇವಿಯು ಈಶ್ವರನ ಪೂಜೆಗೆ ಕೂಡುವಳು).

ಅಕ್ಕಮಹಾದೇವಿ :

(ಪದ)

ಮುದದಿಂದ ರಕ್ಷಿಸು ಸರ‌್ವೇಶಾ
ಹಿಂದೆ ಮಹಾ ಮಹಾ ಋಷಿಗಳು ಸುಖಪಡದಾರೋ
ಈಗಿನ ಜನ ಪರಮಾತ್ಮನ ಮರೆತು
ಸುಖಾ ಬರಲೆಂತ ಆಶೆ ಪಡತಾರೋ
ದುಷ್ಟ ಕಾಲಕ ಮಳೆ ಬೆಳೆ ಹೋಗಿ
ಕಾಲರಾ, ಪ್ಲೇಗು ಬ್ಯಾನಿ ಹಬ್ಬತಾವೋ
ಕಾಲ ಬದಲಾತು ಜನರಿಗೆ ಬುದ್ಧಿ ಬರಲಿಲ್ಲೋ ॥

(ಮಾತು) ಆಹಾ ! ಈಶ್ವರ ಪೂಜೆಗಿಂತ ಹೆಚ್ಚಿನ ಸುಖ ಯಾವದೂ ಇಲ್ಲಾ.ಆದ್ದರಿಂದಲೇ ಹಿಂದೆ ಮಹಾನ್ ಮಹಾನ್ ಋಷಿಗಳು, ಸತ್ಪುರುಷರು ಸದಾ ಪರಮಾತ್ಮನನ್ನು ಪೂಜಿಸಿ, ಸುಖದೊಳಗೆ ಓಲಾಡುತ್ತಿದ್ದರು.ಈಗಿನ ಜನರ ನೋಡಿರಿ. ಒಂದು ದಿವಸ ಬಿಟ್ಟು ಎರಡು ದಿವಸ ಇರು ಎಂದರೆ ಇರುತ್ತಾರೆ. ಕರೆದು ದೇವರ ಪೂಜೆ ಮಾಡಂದರೆ ಜೀವ ಹೋಗುವಂತೆ ಮಾಡುತ್ತಾರೆ.ಅಂದಮೇಲೆ ಪರಮಾತ್ಮನು ಇವರಿಗೆ ಸುಖವನ್ನು ಕೊಡದೆ ಮಳೆ ಬೆಳೆ ಇಲ್ಲದೇ ಬರಗಾಲ ಬಿದ್ದು ಅನ್ನ ನೀರು ಅರಿವೆಗೂ ಪರಿಯಾಗಿ ಒದ್ದಾಡುತ್ತ, ಪ್ಲೇಗು ಕಾಲರಾ ಮುಂತಾದವುಗಳಿಂದ ಯಾವಾಗ ಬೇಕು ಅವಾಗ ಸಾಯುವ ಅವಸ್ಥೆಇಟ್ಟು ಬಿಟ್ಟಿದ್ದಾನೆ. ಇಷ್ಟಾದರೂ ಜನರಿಗೆ ಅರಿವು ಇಲ್ಲಾ, ಇದೆಲ್ಲಾ ಇರಲಿ. ಈಗ ನಾನು ಜೀವಾತ್ಮನನ್ನು ಪರಮಾತ್ಮನಲ್ಲಿ ಲೀನಗೊಳಿಸಿ ತದೇಕ ಚಿತ್ತದಿಂದ ಕುಳಿತುಕೊಳ್ಳುತ್ತೇನೆ.

(ಪರಬ್ರಹ್ಮ ಚಿಂತನೆಯಲ್ಲಿ ಮಗ್ನಳಾಗುವಳು)

(ಅಲ್ಲಿಗೆ ಅಲ್ಲಮಪ್ರಭುವಿನ ಆಗಮನ)

ಅಲ್ಲಮಪ್ರಭು :

(ಪದ) ಭಕ್ತೋದ್ಧಾರಕನಾಗಿರುವೆ, ಜಗವ ಪಾಲಿಸುವಾ
ನಿರಂಜನಸ್ವರೂಪ ನಾನಾಗಿರುವೆ
ಶಿವಭಕ್ತರನ ಉದ್ಧಾರಗೈಯುವ ಜಗದಿ
ಸಚ್ಚಿದಾನಂದ ಸ್ವರೂಪ ನಾನಾಗಿರುವೆ ॥

(ಹಾಡುತ್ತ ಬಂದ ಅಲ್ಲಮಪ್ರಭು ಅಕ್ಕಮಹಾದೇವಿಯನ್ನು ನೋಡಿ)

(ಮಾತು) ಓಹೋ ! ಈ ಮಹಾದೇವಿಯು ನನ್ನ ಸಚ್ಚಿದಾನಂದ ಸ್ವರೂಪನಾದ ಈಶ್ವರಲಿಂಗಧ್ಯಾನದೊಳಗೆ ಪದ್ಮಾಸನ ಹಾಕಿಕೊಂಡು ಯೋಗಸಮಾಧಿಯಲ್ಲಿ ಕುಳಿತುಬಿಟ್ಟಿರುವಳಲ್ಲಾ.ಶಹಭಾಷ್ !! ಶಹಭಾಷ್!! ಮಹಾದೇವಿ ಇದ್ದರೆ ಇಂಥ ಭಕ್ತಿವಾಸಿಯಿರಬೇಕು. ಕೇವಲ ಡಾಂಭಿಕ ಪೂಜೆ ಮಾಡುವವರನ್ನು ತೆಗೆದುಕೊಂಡು ಏನು ಮಾಡಬೇಕು? ಭಕ್ತಿ, ಜ್ಞಾನ, ವೈರಾಗ್ಯ ಇವು ಮೂರರಿಂದ ಯಾರು ಸಂಪನ್ನರಿರುತ್ತಾರೋ ಅಂತವರಿಗೆ ಸರ‌್ವೇಶನಾದ ನಾನು ಅವರ ಆಳಿನ ಆಳಾಗಿ ದುಡಿಯುತ್ತೇನೆ.ಆದುದರಿಂದಲೇ ಗುಡ್ಡವ್ವೆ ಎಂಬಾಕಿಗೆ ಮಣ್ಣು ಹೊರು ಎಂದು ರಾಜರ ಬುಟ್ಟಿ ಬಂದಾಗ, ನಾನು ಆಕೆಯಆಳಾಗಿ ಮಣ್ಣು ಹೊತ್ತು ಆಕೆಯ ಭಕ್ತಿಗೆ ತಕ್ಕ ಫಲವನ್ನು ಕೊಟ್ಟು ಬಂದೆನು.ಮತ್ತು ಸೌಂದರನೆಂಬ ಅಣ್ಣನ ಕೂಡ ಪರಿವೆ ಎಂಬ ಪಾತರದಾಕಿ ಮನೆಗೆ ಓಡ್ಯಾಡಿದೆನು.ಮತ್ತು ಕೈಯಲ್ಲಿ ಬಡಗಿ ಹಿಡಿದು ಬಾಣಾಸುರನ ಬಾಗಿಲ ಕಾಯ್ದೆನು. ಭಕ್ತರು ನನ್ನ ಜೀವ ಅಂತಾ ತಿಳಿದು ಅವರ ಸೇವೆ ಮಾಡುತ್ತೇನೆ.ಈಗ ಈ ಅಕ್ಕಮಹಾದೇವಿಗೆ ಪ್ರತ್ಯಕ್ಷವಾಗಬೇಕಂತ ಇಲ್ಲಿಗೆ ಬಂದಿರುವೆನು.ಈಗ ಎಲ್ಲಿ ಏನು ಮಾಡುತ್ತೇನೆಂದರೆ.

(ಪದ) ದೇವಿಯೇ ನೋಡವ್ವ ಜ್ಯೋತಿಯನ್ನ
ಭೇದಿಸಿ ಮಾಡುವೆನು ನಿರಂಜನನಾಗಿ
ತ್ವರಿತದಲಿ ಹಾನಿಯನ್ನು ಭಕ್ತಿಯೋಗ ಬಿಡಿಸಿ
ಶಿವಧ್ಯಾನವನ್ನು ಕೆಡಿಸಿ ಭ್ರಾಂತಿಯ ಮಾಡಿಸಿ
ನೋಡುವೆನು ಪರೀಕ್ಷಿಸಿ
ಬಡ ಜಂಗಮನೆಂದು ಕಷ್ಟವಾಗಿದೆಯೆಂದು
ಹೇಳುವೆನು ಸುಳ್ಳೊಂದು ಮಾಡುವೆ ಲೀಲೆಯಿಂದು ॥

(ಮಾತು) ಈ ಮಹಾದೇವಿಯು ನನ್ನ ನಿರ್ಗುಣ ಸ್ವರೂಪದೊಳಗೆ ಚಿತ್ತವೇಶಮಾಡಿಕೊಂಡು ಪರಂಜ್ಯೋತಿಯನ್ನು ನೋಡುತ್ತ ಕುಳಿತಿರುವಳು.ಇವಳ ಪರಂಜ್ಯೋತಿಯಲ್ಲಿ ನನ್ನ ಸಾಕಾರ ಸ್ವರೂಪವನ್ನು ಪ್ರಕಟಮಾಡುತ್ತೇನೆ.ಅಂದರೆ ಈಕೆಯ ಚಿತ್ತ ಚಂಚಲವಾಗಿ ನನ್ನ ಕಡೆಗೆ ಲಕ್ಷ್ಯವಾಗುವಂತೆ ಈಗಿಂದೀಗ ಇವಳ ಧ್ಯಾನದೊಳಗೆ ನನ್ನ ಮೂರ್ತಿಯನ್ನು ಪ್ರಕಟಮಾಡುತ್ತೇನೆ.

ಅಕ್ಕಮಹಾದೇವಿ : (ಸ್ವಗತ) ಓಹೋ ! ಇದೇನು ನಾನು ಪರಮಾತ್ಮನಲ್ಲಿ ಏಕನಿಷ್ಠೆಯಿಂದ ಚಿತ್ತೈಕ್ಯ ಮಾಡಿ ಯೋಗಸಮಾಧಿಯಲ್ಲಿ ಕುಳಿತ ಕಾಲಕ್ಕೆ ಒಬ್ಬ ಜಂಗಮ ಮೂರ್ತಿಯನ್ನು ಕಂಡಂತಾಯಿತಲ್ಲ ! ಇದೇನು ಚಮತ್ಕಾರವಾಗಿದೆ.ಅಂಥವರು ಯಾರು ಬಂದಿದ್ದಾರು ?ನನ್ನನ್ನು ಎಚ್ಚರಿಸಬೇಕೆಂದು ಹೀಗೆ ಪ್ರಕಟಮಾಡಿದ್ದಾರೇನು ? ಹೌದು ಇದು ಸತ್ಯ.ಅಂಥವರು ಯಾರು ಬಂದಿದ್ದಾರೋ ನೋಡಬೇಕು. (ಸುತ್ತಮುತ್ತ ನೋಡಿ) ಓಹೋ ಇಲ್ಲಿ ಯಾರೂ ಇಲ್ಲಾ.ಅಂದಮೇಲೆ ಆತ ಸದಾಶಿವನೆ.ನನ್ನ ಧ್ಯಾನದೊಳಗೆ ಹಾಗೇ ಕಂಡಿದ್ದಾನೇನು ? ಇದು ಏನೇ ಆಗಲಿ ಶಿವಧ್ಯಾನದೊಳಗೆ ಕುಳಿತುಬಿಡುತ್ತೇನೆ.

(ಅಕ್ಕಮಹಾದೇವಿಯು ಹಾಗೆಯೇ ಹಾಡುತ್ತ ಧ್ಯಾನಾಸಕ್ತಳಾಗುವಳು)

(ಪದ) ಶಿವಧ್ಯಾನವ ಮಾಡುವೆ, ಶಿವಪೂಜೆಯ ಮಾಡುವೆ
ಶಿವಯೋಗ ಮುದ್ರೆಯಿಂದ, ಶಿವತತ್ವಜ್ಞಾನದಿಂದಾ ಶಿವಮಯವಾಗಿ ॥

ವಿಷಯ ಸುಖಗಳ ಬಿಟ್ಟು, ದೋಷಗಳನ್ನೆಲ್ಲ ಸುಟ್ಟು
ಹೇಸಿಗುಣಗಳನ್ನೆಲ್ಲ ಬಿಟ್ಟು ಮೇದಿನಿಯೋಳು ಖ್ಯಾತಿ
ದೇವಗಿರಿಗ್ರಾಮದಾಗ ವಿಘ್ನೇಶ್ವರ ನೀನೇ ಗತಿಯೆಂದು ನಾ ॥

(ಧ್ಯಾನಮಗ್ನಳಾಗುವಳು)

ಅಲ್ಲಮಪ್ರಭು : ಅಕ್ಕಮಹಾದೇವಿಯು ಎಚ್ಚರವಾಗಿ ಹೊರಗೆ ಬಂದು ಹುಡುಕಾಡಿ ಹೋಗಿ ಮತ್ತೆ ಶಿವಧ್ಯಾನದೊಳಗೆ ಕುಳಿತು ಬಿಟ್ಟಳಲ್ಲ ! ಅವಳ ಜ್ಞಾನಕ್ಕೆ ವಿಘ್ನವೊಡ್ಡುತ್ತೇನೆ.

ಅಕ್ಕಮಹಾದೇವಿ : (ಎಚ್ಚೆತ್ತು) ! ಶಿವ ! ಶಿವ ! ಜಂಗಮ ಮೂರ್ತಿಯು ಮತ್ತೆ ನನ್ನ ಜ್ಞಾನದೊಳಗೆ ಕಂಡು ಮಾಯವಾಯಿತಲ್ಲ ! ಅವರು ಯಾರಾಗಿರಬಹುದು ! (ಸುತ್ತಮುತ್ತ ನೋಡಿ) ಓಹೋ ನನ್ನ ಜ್ಞಾನದಲ್ಲಿ ಕಂಡ ಪರಮಾತ್ಮನು ಇಲ್ಲಿಯೇ ಇರುವರಲ್ಲ.ಸ್ವಾಮಿ, ನಿಮಗೆ ನಮಸ್ಕರಿಸುತ್ತೇನೆ.

ಅಲ್ಲಮಪ್ರಭು : ಮಹಾದೇವಿ ನಿನಗೆ ಜಯವಾಗಲಿ !
ಹಾಯ್ ! ಹಾಯ್ ! ಶಂಕರಾ (ದುಃಖ ಮಾಡುವನು).

ಅಕ್ಕಮಹಾದೇವಿ : ಅಯ್ಯೋ ಸ್ವಾಮಿ ನೀವು ಹೀಗೇಕೆ ದುಃಖ ಮಾಡುವಿರಿ ?

ಅಲ್ಲಮಪ್ರಭು : ದೇವಿ, ನಮ್ಮಂಥ ಬಡ ಜಂಗಮರನ್ನು ಯಾರು ಕೇಳ ಬೇಕು ?ನನ್ನ ಕಷ್ಟ ಪರಮಾತ್ಮನಿಗೆ ಹೇಗೆ ಗೊತ್ತಾಗುತ್ತದೆ !

ಅಕ್ಕಮಹಾದೇವಿ : ಯಾಕೆ ಸ್ವಾಮಿ ?ನಿಮಗೇನು ಕಷ್ಟ ಆಗಿದೆ ತಿಳಿಸಿರಿ.

ಅಲ್ಲಮಪ್ರಭು : ದೇವಿ ಏನು ಮಾಡಲಿ? ಹೇಳುವೆ ಕೇಳು.

(ಪದ) ಹಿರಿಯರ ಪುಣ್ಯದಿಂದಲಿ ನಿಮ್ಮ ಬೇಟಿ ಆದೀತು
ನನ್ನ ಜೀವ ಉಳಿಯಿತು ॥ಪಲ್ಲ ॥

ರೀತಿ ನೀತಿ ಎಲ್ಲಾ ಬಿಟ್ಟು, ಯೋಗಿಜನರು ದಾರಿಬಿಟ್ಟು
ಹೇಳಲು ಸಿಟ್ಟು ಬಂದು, ನನ್ನನ್ನು ಹೊಡೆಯಲು ಬಂದರವ್ವಾ ॥

ಲಿಂಗವ ಧರಿಸದೇ, ವಿಭೂತಿ ಹಚ್ಚದೇ
ಅಡ್ಡಾಡುವ ಜಂಗಮ ಕುಲದ
ಬಾಧೆಗೆ ಗುರಿಯಾದೆನವ್ವಾ ॥ ॥

(ಮಾತು) ಏನೇ ಮಹಾದೇವಿ, ನಾನು ಶಿವಯೋಗಿ, ನಾನು ಪಟ್ಟದ ದೇವರು,ಅಂತಾ ದೊಡ್ಡ ದೊಡ್ಡ ಹೆಸರಿಟ್ಟುಕೊಂಡು, ಜ್ಞಾನವೊಂದಿದ್ದರೆ ತೀರಿತು ಕೊರಳೊಳಗೆ ಲಿಂಗಕಟ್ಟಿಕೊಳ್ಳುವುದು, ವಿಭೂತಿ ಹಚ್ಚಿಕೊಳ್ಳುವುದು, ರುದ್ರಾಕ್ಷಿ ಹಾಕಿಕೊಳ್ಳುವುದು ಇವೆಲ್ಲ ಬುದ್ಧಿಗೇಡಿಗಳ ಕೆಲಸವೆಂದು, ಕೊರಳೊಳಗೆ ಲಿಂಗ ಕಟ್ಟಿಕೊಳ್ಳದೇ ನಮ್ಮ ಸರಿ ಯಾರೂ ಇಲ್ಲಾ ಅಂತಾ ಅನೇಕ ಜಂಗಮರು ಕೋಣನ ಹಾಗೆ ಅಡ್ಡಾಡುತ್ತಾರೆ.ಅಂಥವರಿಗೆ ಏನು ಹೇಳಬೇಕು?

ಅಕ್ಕಮಹಾದೇವಿ : ಏನು ಹೇಳಿದ್ರಿ ಸ್ವಾಮಿ ?

ಅಲ್ಲಮಪ್ರಭು : ಇನ್ನು ಮುಂದೆ ಹಾಗೆ ನಡಿಯಬೇಡಿರಿ, ಲೆಕ್ಕಾಚಾರದಂತೆ ನಡೆಯಿರಿ ಅಂತಾ ನನ್ನ ಹುಚ್ಚುತನದಿಂದ ಹೇಳಲಿಕ್ಕೆ ಹೋಗಿ ಈ ಗತಿಯಾದೆನು, ನಮ್ಮ ಹಿಂದಿನ ಹಿರಿಯರ ಪುಣ್ಯ, ಜೀವದಿಂದಾ ಉಳಿದು ಪಾರಾಗಿ ಓಡಿ ಬಂದೆನು. ಈಗ ನನಗೆ ಅಳತೆಯಿಲ್ಲದಷ್ಟು ಸಂಕಟವಾಗುತ್ತಿದೆ.ನನ್ನನ್ನು ಸಂಕಟದಿಂದ ಪಾರುಮಾಡಿ ಉಳಿಸುವವರಾರು?ಹಾಯ್ ! ಹಾಯ್ ! ದೇವ ! ಶಂಕರಾ !!

ಅಕ್ಕಮಹಾದೇವಿ : ಸ್ವಾಮಿ ಹಿಂಗ್ಯಾಕ್ರಿ ? ಶಿವ ! ಶಿವ ! ನಿಮ್ಮಂಥ ಜಂಗಮರಿಗೆ ಕಷ್ಟವೇ ?ಲಿಂಗ ಕಟ್ಟಿಕೊಳ್ಳದವರ‌್ಯಾರು ? ನಿಮ್ಮನ್ನೇನು ಮಾಡಿದರು ?ಮತ್ತು ನಿಮಗೇನು ಕಷ್ಟವಾಗಿದೆ ?

ಅಲ್ಲಮಪ್ರಭು : ದೇವಿ ಸೊಲ್ಲಾಪುರದ ಸಿದ್ಧರಾಮ ಶಿವಯೋಗಿ ಇರುವನಲ್ಲ, ಅವನೇನು ಶಿವಯೋಗಿಯಂತೆ ! ದೊಡ್ಡ ಜ್ಞಾನಿಯಂತೆ ! ಬಹಳ ಪಂಡಿತನಂತೆ ! ಅದೆಂಥಾ ಪಂಡಿತ ?ಅವನ ದೊಡ್ಡ ದೊಡ್ಡ ಹೆಸರುಗಳನ್ನು ಕೇಳಿ ಅವನ ಭೆಟ್ಟಿಯಾಗಬೇಕೆಂದು ಹೋದೆನು.ಅವನ ಕೊರಳೊಳಗೆ ಲಿಂಗವಿಲ್ಲ, ರುದ್ರಾಕ್ಷಿ ಇಲ್ಲಾ.ಅವನನ್ನು ನೋಡಿ ನಾನು ಏನು ಅಂದೆನೆಂದರೆ ?

ಅಕ್ಕಮಹಾದೇವಿ : ಏನು ಅಂದಿರಿ ಸ್ವಾಮಿ ?

ಅಲ್ಲಮಪ್ರಭು : ಏನು ?ನೀನು ಶಿವಯೋಗಿ ಅನಿಸಿಕೊಂಡು ನಿನಗೆ ಲಿಂಗವಿಲ್ಲ. ರುದ್ರಾಕ್ಷಿಯಿಲ್ಲ, ಹಣೆಯ ಮೇಲೆ ವಿಭೂತಿಯಿಲ್ಲಾ ಹೀಗೇಕೆ ?ಅಂತ ಕೇಳಿದರೆ, ಭಕ್ತಿಜ್ಞಾನಗಳಿದ್ದರೆ ತೀರಿತು.ಈ ಕಲ್ಲಿನ ಲಿಂಗ ಮಾಡಿ ದನದ ಕೊರಳಲ್ಲಿ ಗುದ್ದಿ ಕಟ್ಟಿದಂಗ ಕಟ್ಟಿಕೊಂಡರೆ ಏನಾಗುವುದು ?ಅಂತ ಸಿಟ್ಟಿಗೆದ್ದು ಉತ್ತರಿಸಿದ.ಆಗ ನಾನು ಯಾವನ ಹಣೆಯ ಮೇಲೆ ಭಸ್ಮ, ಕೊರಳೊಳಗೆ ರುದ್ರಾಕ್ಷಿ ಇರುವುದಿಲ್ಲವೋ ಅಂಥವನು ಬೇಕಾದಷ್ಟು ದೊಡ್ಡ ಪಂಡಿತಜ್ಞಾನಿಯಾದರೂ ಕೂಡ ಅವನನ್ನು ಅಸ್ಪಶ್ಯನೆಂದು ತಿಳಿದು ಅವನನ್ನು ಮುಟ್ಟಿಸಿಕೊಳ್ಳಬಾರದು.ಅವನ ಮುಖ ನೋಡಿದರೆ ಪಕ್ಕಕ್ಕೆ ಹೊರಳಿ ಹೋಗಬೇಕೆಂದು ಶಾಸ್ತ್ರದಲ್ಲಿ ಹೇಳಿದೆ.ಅದರಂತೆ ನಿನಗೆ ಲಿಂಗವಿಲ್ಲ, ಭಸ್ಮವಿಲ್ಲ ಅಂದರೇ, ಆತನು ನನ್ನನ್ನು ಯಾರು ಕೇಳಬೇಕು ನೀನೇ ಅಸ್ಪಶ್ಯ ಎಂದು, ನಿನ್ನ ಮುಖ ಸಹ ನೋಡಲಾಗದು ಎಂದು ಸಿಟ್ಟಿಗೆದ್ದ, ನಾನು ತಿರುಗಿ ಬರಲಿಕ್ಕೆ ಹತ್ತಿದೆ.ಆಗ ಅವನು ನನ್ನನ್ನು ಏನು ಮಾಡಿದ ಗೊತ್ತೆ?

ಅಕ್ಕಮಹಾದೇವಿ : ಏನು ಮಾಡಿದನು ಸ್ವಾಮಿ ?

ಅಲ್ಲಮಪ್ರಭು : ಏನು ಮಾಡಿದನೆಂದರೆ ಹೇಳುತ್ತೇನೆ ಕೇಳು.

(ಪದ) ಶಿವಕೊಟ್ಟ ಉರಿಗಣ್ಣಿನಿಂದ ಎನ್ನ ನೋಡಿದಾಕ್ಷಣ
ಮಾಡಲಿಲ್ಲಾ ಅನುಮಾನ ಆದೀತೋ ಎನಗೆ ಕಠಿಣ ॥ಪಲ್ಲವಿ ॥

ಉರಿಗಣ್ಣಿನ ಜ್ವಾಲೆಯನ್ನು ತಾಳಲಾರದೆ ಓಡಿದೆನು ಅಂತಾ
ಕೊಟ್ಟಾ ಉರಿಗಣ್ಣು, ಶಿವನು ತಾನು ॥

ಶಿವನಿಗೆ ಎಳ್ಳಷ್ಟು ಬುದ್ಧಿ ಇಲ್ಲವೇನು
ಅವನದೇನು ನೋಡಿ ಕೊಟ್ಟ ತಾನು ॥

ಕಣ್ಣು ಆದೀತೋ ಎನಗೆ ಕಠಿಣ
ಕಂಡ ಕಂಡವನನು ಸುಡುತಲಿರುವುದು ॥

ಅದರಿಂದ ಬಳಲಿದೆ ಓಡುತ್ತಾ ಬಂದೆ
ಬಡವನನ್ನು ಸಡಗರದಿಂದ ರಕ್ಷಿಸು ತಿಳಿನೀನೆ ॥

(ಮಾತು) ಏನೇ ಮಹಾದೇವಿ ! ಆ ಸಿದ್ಧರಾಮನು ನನ್ನನ್ನೇನು ಮಾಡಿದನೆಂದರೆ, ಆ ಪರಮಾತ್ಮನು ಉರಿಗಣ್ಣನ್ನು ಕೊಟ್ಟಾನಲ್ಲಾ, ಆ ಉರಿಗಣ್ಣಿನಿಂದ ನೋಡಿದ.ನೋಡಿದ ಕೂಡಲೇ ನನಗೆ ಸಿಡಿಲು ಬಡಿದಂತಾಗಿ ಬ್ರಹ್ಮಾಂಡಕ್ಕೆಲ್ಲಾ ಬೆಂಕಿ ಹತ್ತಿ ನಾನು ಹಾಗೆ ಸತ್ತನೆಂದು ತಿಳಿದು ಅಂಜಿ ಇಲ್ಲಗೆ ಓಡಿ ಬಂದೆ.ನೀನು ಹೇಗಾದರೂ ಮಾಡಿ ನನ್ನನ್ನು ರಕ್ಷಿಸು, ನಾನು ಒಬ್ಬ ಬಡ ಜಂಗಮನಿದ್ದೇನೆ.ನನಗೆ ಯಾರೂ ಇಲ್ಲಾ.ನಾನು ಇಲ್ಲಿಯೇ ಬಿದ್ದು ಬಿಡುತ್ತೇನೆ.

ಅಕ್ಕಮಹಾದೇವಿ : (ಸ್ವಗತ) ಓಹೋ ! ಇವನೇನೂ ಬಡ ಜಂಗಮನಲ್ಲ ! ಈ ಸೋಗು ಹಾಕಿಕೊಂಡು ಏನೋ ಒಂದು ನೆಪಮಾಡಿಕೊಂಡು ಆ ನಿರಂಜನ ಅಲ್ಲಮಪ್ರಭುಗಳೇ ಬಂದಂತೆ ಕಾಣುತ್ತದೆ.ಮುಂದೇನು ಚಮತ್ಕಾರವಾಗುತ್ತದೆಯೋ ನೋಡೋಣ. (ಪಕ್ಕಕ್ಕೆ ಸರಿದು) ಸ್ವಾಮಿ ನನಗೆ ಏನು ಮಾಡೆಂದಿರಿ ?

ಅಲ್ಲಮಪ್ರಭು : ಮಹಾದೇವಿ ಏನು ಮಾಡಲಿ ?ಆ ಸಿದ್ಧರಾಮನ ಮೇಲೆ ಎಳ್ಳಷ್ಟೂ ಕೋಪವಿಲ್ಲಾ.ಅವನಿಗೆ ವಿಚಾರವಿಲ್ಲದೇ ಉರಿಗಣ್ಣನ್ನು ಕೊಟ್ಟ ಆ ಬೋಳ್ಯಾ ಶಂಕರನನ್ನು ಕಡಿದು ಹಾಕುವಷ್ಟು ಸಿಟ್ಟು ಬಂದಿದೆ.ಆದರೆ ಮಾಡಬೇಕೇನು? ನಿರ್ವಾಹಕವಿಲ್ಲ, ಶಿವಾ ಅಂದರೆ ತಾನೇ ಬಂಟನಾಗಿ ಮನಸ್ಸಿಗೆ ಬಂದಂತೆ ಮಾಡಿ ಈ ಲೋಕವನ್ನೆಲ್ಲ ಹಾಳು ಮಾಡಲಿಕ್ಕೆ ಹತ್ತಿದ್ದಾನೆ.ಅದಕ್ಕೆ ಶಿವನನ್ನು ನಂಬಬೇಡಾ, ಶಿವನು ಬಹಳ ನೀಚನಿದ್ದಾನೆ ತಿಳಿಯಿತಿಲ್ಲೊ ?

ಅಕ್ಕಮಹಾದೇವಿ : ಏನು ಸ್ವಾಮಿ ? ಆ ಸಿದ್ಧರಾಮಯೋಗಿಗೆ ಉರಿಗಣ್ಣು ಕೊಟ್ಟಿದ್ದರ ಸಲುವಾಗಿ ಪರಮಾತ್ಮನು ನೀಚನೆಂದು ನಿಮ್ಮ ಅಭಿಪ್ರಾಯವಿದ್ದಂತಿದೆ !

ಅಲ್ಲಮಪ್ರಭು : ದೇವಿ ಇದೊಂದರ ಸಲುವಾಗಿ ಯಾಕೇ, ಇಂಥ ಹತ್ತೆಂಟು ರೀತಿಯಿಂದ ಶಿವನು ಬಹಳ ಖೊಟ್ಟಿಯಿದ್ದಾನೆ ನೋಡು.

ಅಕ್ಕಮಹಾದೇವಿ : ಹಾಗಾದರೆ ಶಿವನು ಹತ್ತೆಂಟು ರೀತಿಯಿಂದ ಖೊಟ್ಟಿಯೇನ್ರಿ ?

ಅಲ್ಲಮಪ್ರಭು : ಅಹುದು ಶಿವ ಬಹಳ ಖೊಟ್ಟಿ.

ಅಕ್ಕಮಹಾದೇವಿ : ಹಾಗಾದರೆ ಹೇಳುತ್ತೇನೆ ಕೇಳ್ರಿ.

(ಪದ) ಖೊಟ್ಟಿ ಖೊಟ್ಟಿ ಯಾವನು
ಶಿವನು ಮೃತ್ಯುಲೋಕ ಹಿತಕಾಗಿ
ಕಾಲಕೂಟ ವಿಷವನಾ ಕುಡಿದಾ,
ಕಷ್ಟವಿಷವೆಂದರೆ ಶಿವನು ಕೇಳದಾದ
ಜಗವ ಸುಡುವುದೆಂದು ಅದನೆಲ್ಲಾ ತಾ ಕುಡಿದಾ
ಉಳಿಸಿದಾ ಲೋಕವನು ಶಿವನೊಳಗಿಲ್ಲ ಅಭಿಮಾನ ॥

ಆ ವಿಷದ ಜ್ವಾಲೆಗೆ ದೇವದಾನವರೆಲ್ಲ ಓಡಿದಾಗ ಕೆಟ್ಟು
ಎಷ್ಟು ಮಂದಿ ಸತ್ತುಹೋದರಾಗ ಸುಟ್ಟು
ಬ್ರಹ್ಮ ಓಡಿದಾ ಹರಿಯು ತಾ ಕ್ಷೀಣನಾದ
ವಿಷದ ಜ್ವಾಲೆ ಹಬ್ಬಿತು ಸರ‌್ವಲೋಕಕೆಲ್ಲ ॥

ಅಂಥ ವಿಷವನೆಲ್ಲ ಶಿವನು ಕುಡಿದು ಕುತ್ತಿಗೆಯಲ್ಲಿಟ್ಟುಕೊಂಡ
ಅಲ್ಲೆ ಇದ್ದ ವಿಷದಿಂದಾ ಅದಕ ನೀಲಕಂಠನೆಂಬ ಹೆಸರು
ಬಂದೀತು ಶಿವನಿಗೆ ಅದರಿಂದ ಎಲ್ಲರಿಗೂ
ಆದೀತು ರಕ್ಷಣ ಕೇಳ್ರೀ ನೀವೆಲ್ಲ ಶಿವನ ಲೀಲೆಯಾ ॥

(ಮಾತು) ಏನ್ರೀ, ಪರಮಾತ್ಮನು ಬಹಳ ಖೊಟ್ಟಿ ಅಲ್ಲ.ಹಿಂದಕ್ಕೆ ದೇವದಾನವರೆಲ್ಲಾ ಕೂಡಿ ಮಂದರ ಪರ್ವತವನ್ನು ಕಡಗೋಲಾಗಿ ಮಾಡಿ, ವಾಸುಕಿ ಎನ್ನುವಂಥ ಹಾವನ್ನು ಸುತ್ತಿ ಕ್ಷೀರಸಾಗರವನ್ನು ಕಡಿಯಲಿಕ್ಕೆ ಹತ್ತಿದ್ದರು.ಅಲ್ಲಿ ಕಾಳಕೂಟ ವಿಷವು ಹಬ್ಬಿ ಇಹಲೋಕದ ತುಂಬ ಹಬ್ಬಿತು.ಮತ್ತು ಎಲ್ಲ ಪ್ರಾಣಿಗಳನ್ನು ಕೊಲ್ಲ ಹತ್ತಿತ್ತು.ಆ ವಿಷದ ಜ್ವಾಲೆಗೆ ದೇವದಾನವರು ಅರಿವಿಲ್ಲದೇ ಬಿದ್ದರು.ಬ್ರಹ್ಮನು ಓಡಿಹೋದನು.ವಿಷ್ಣು ಅದರ ಪೆಟ್ಟಿಗೆ ಸಿಲುಕಿ ಬಂಗಾರದಂತವನು ಹೋಗಿ ಕರ‌್ರಗೆ ಆಗಿ ಕೃಷ್ಣನೆನಿಸಿಕೊಂಡ.ಇಷ್ಟೆಲ್ಲಾ ಗೋಳನ್ನು ಆ ಮಹಾದೇವನು ನೋಡಿ, ಈ ವಿಷವು ಈ ಜಗತ್ತನ್ನು ಸುಡದೇ ಬಿಡುವದಿಲ್ಲವೆಂದು ತಿಳಿದು ಅದನ್ನು ಬಿಡಕೂಡದೆಂದು ಅದನ್ನು ನುಂಗಿ ಕುತ್ತಿಗೆಯಲ್ಲಿ ಇಟ್ಟುಕೊಂಡನು.ಆ ವಿಷವೇ ಪರಮಾತ್ಮನ ಕೊರಳಿಗೆ ಕಸ್ತೂರಿಯಂತೆ ಕಪ್ಪಾಗಿ ಸುತ್ತಿಕೊಂಡಿತು.ಆಕಪ್ಪಿನ ಸಲುವಾಗಿ ಶಿವನಿಗೆ ನೀಲಕಂಠನೆಂದು ಹೆಸರು ಬಂದಿತು. ಇಷ್ಟಲ್ಲದೇ ಲೋಕೋದ್ಧಾರದ ಸಲುವಾಗಿ ಪರಮಾತ್ಮನು ಘೋರ ವಿಷವಾಗಿದ್ದರೂ ಲಕ್ಷಿಸದೇ ಕುಡಿದುಬಿಟ್ಟನು.ಅಂಥವನಿಗೆ ನೀವು ಖೊಟ್ಟಿ ಅನ್ನುತ್ತೀರಿ.ಶಿವನಂಥ ಸಂಪನ್ನರು ಯಾರೂ ಇಲ್ಲಾಂತ ತಿಳಿದುಬಿಡ್ರಿ.