ಅಕ್ಕಮಹಾದೇವಿ : ಸ್ವಾಮಿ ತೀರಿತು.ಆದರೆ ನಿಮ್ಮ ಅಂತಃಕರಣವು ಯಾವಾಗಲೂ ನನ್ನ ಮೇಲೆ ಇರಬೇಕೆಂದು ಬೇಡಿಕೊಳ್ಳುತ್ತೇನೆ.

ಅಲ್ಲಮಪ್ರಭು : ದೇವಿ ನಿನ್ನ ಮೇಲೆ ನನ್ನ ಅಂತಃಕರುಣವು ಯಾವಾಗಲೂ ಇದೆ. ನೀ ಇರುವಲ್ಲಿಗೆ ಸ್ವತಃ ನಾನೇ ಬಂದು ಆಶೀರ್ವಾದ ಮಾಡುತ್ತೇನೆ. ಇಷ್ಟೇ ಅಲ್ಲ, ಪರಿಶುದ್ಧ ದೇವಗಿರಿಯಲ್ಲಿ ಬಸವಣ್ಣನು ಬಂದು ನಿನಗೆ ಬಂದಂಥ ವಿಘ್ನಗಳನ್ನು ಸಂಹಾರ ಮಾಡುವುದರ ಸಲುವಾಗಿ ಆಯುಧಪಾಣಿಯಾಗಿ ಟೊಂಕಕಟ್ಟಿ ನಿಂತಿದ್ದಾನೆ.ಶಿವಭಕ್ತಿ ಪ್ರಭಾವವನ್ನು ಈ ಜಗತ್ತಿನ ತುಂಬಾ ಹಬ್ಬಿಸು, ತಿಳಿಯಿತೋ, ಇನ್ನು ನನಗೆ ಹೋಗಲು ಅಪ್ಪಣೆ ಕೊಡು.

ಅಕ್ಕಮಹಾದೇವಿ : ಧನ್ಯಳಾದೆನು ಶಿವಶರಣರ ಪೂಜಿಸಿ, ನಮಸ್ಕಾರ ಹೋಗಿ ಬರ‌್ರಿ.

(ಇಬ್ಬರೂ ಹೋಗುವರು).

* * *

ಅಂಕ – 2
 (ನಿರ್ಮಲಶೆಟ್ಟಿ ಕುಬುಸದ ಕಣಗಳನ್ನು ಮಾರುತ್ತ ರಂಗಕ್ಕೆ ಪ್ರವೇಶ)

ನಿರ್ಮಲಶೆಟ್ಟಿ : ಕುಬಸದಾ ಖಣಾ ತಗೋತೀರೇನವಾss ಕುಬಸಾss. ನನ್ನದೇನು ಹಣೆಬರಹ ಬೆಳಗಿನಿಂದ ಬಂದೇನಿ.ಈ ಊರನ್ನ ಬಾಳಸಾರೆ ಗಣಗಣ ತಿರುಗಿ ಹಲುಬಿದರೂ ಒಬ್ಬರಾದರೂ ಮಾತನಾಡಿಸಬಾರದೇ?ನಾನು ಕುಬಸಾ ತಗೋತೀರೇನವ್ವಾಂತ ಹಲುಬಿ ಸಾಕಾಯಿತು.ಮೊದಲೇ ಬಿಸಿಲು, ಆ ಮೇಲೆ ಉಪವಾಸ ಇರುವುದೊಂದು ಮತ್ತು ಈ ಗಂಟು ಹೊತ್ತು ತಿರುಗುವುದೊಂದು, ಹೀಗಾಗಿ ನನ್ನಕೈಕಾಲುಗಳೇ ಸೋತುಬಿಟ್ಟವು.ಇಷ್ಟಾದರೂ ಒಂದು ಖಣಾನೂ ಖರ್ಚಾಗಬಾರದೇ?ನನ್ನ ನಸೀಬಾ ಆ ಶಿವನೆ ಬಲ್ಲಾ.ನನಗೆ ಈಚಿಂತಿ ಇರುವಾಗಲೇ ಈಗೊಂದು ತಿಂಗಳ ಹಿಂದೆ ನನ್ನ ಹೆಂಡತಿ ಬಸಲಿಂಗಿ ದುರಗವ್ವನ ಬೇನ್ಯಾಗ ಸತ್ತುಹೋಗಿ ನನಗೆ ಎಂಥಾ ಪೇಚ ಹಾಕಿ ಬಿಟ್ಟಳು. ಪ್ರಪಂಚದ ಗೋಳಾಟ ಏನ್ ಹೇಳಬೇಕ್ರಪಾ ? ಮನುಷ್ಯ ಜನ್ಮಕ್ಕೆ ನೋಡ್ರಿ ಇಂಥಾ ದರಿದ್ರತನ ಬರಬಾರದು.ಬಂತೆಂದರ ಚಿಂತೆ ಮಾಡಾಕ ಹಚ್ಚಿ ಗಂಡಸ್ತನ ಕಳೆದು ಬಿಡುತ್ತದೆ.ಈ ಸೂರೀ ಏನಹೇಳಲಿ ?ಈ ಊರಿನ ರಾಜಾ ಕೌಶಿಕನ ಉರದಾಟ ಬಹಳ ನಡದೈತಿ.ಅವಗ ನಾವಂದ್ರ ಏನಾಗೇತೋ ಏನೋ ?ಒಂಥರಾ ಮಾಡತಾನ. ಎಲ್ಲಾದಕ್ಕೂ ದೇವರು ಅದಾನ.ಇಂಥ ಬರಗಾಲದೊಳಗೆ ಮಗಳು ಮಹಾದೇವಿಯಂತು ಲಿಂಗಪೂಜೆ, ಲಿಂಗಪೂಜೆ ಎಂದು ಹಗಲಿರುಳೂ ದೇವರ ಮುಂದ ಕುಳಿತಿರತಾಳ.ಅಡಗಿ ಮನಿಯಂದರ ಅಕಿ ಹುಟ್ಟಿದ ಮ್ಯಾಲ ಹಣಕಿ ಹಾಕಿಲ್ಲಾ.ನೋಡಿಲ್ಲಾ, ನಾನು ಸಿಟ್ಟಿಗೆದ್ದು ಆಕೆಯನ್ನು ಊಟಕ್ಕೆ ಕರೆಯದೇ ಹೋದರೆ, ಆಕೆಯು ಏಳು : ಎಂಟು ದಿವಸ ಉಪವಾಸ ಇರತಾಳ. ಏನೋ ಶಿವಯೋಗದೊಳಗ ಕುಳಿತಿರುತಾಳಂತ. ಅದೆಂಥಾ ಸುಡಗಾಡ ಶಿವಯೋಗವೋ, ಎಲ್ಲಿ ಕಲ್ತಾಳೋ ಏನೋ! ನಾನು ಹಾಗ್ಯಾಕೆ ಮಾಡುತ್ತೀ ಅಂತ ಕೇಳಿದರೆ, ನಾನು ಕೈಲಾಸಕ್ಕೆ ಹೋಗುತೀನಿ ಅಂತಾ ಅನ್ನುತ್ತಾಳೆ. ಇದು ಹ್ಯಾಗಾದರೂ ಇರಲಿ! ಇನ್ನೂ ಒಂದು ಹೆಚ್ಚಿನ ಪ್ರಸಂಗಾ ಆದ ನೋಡ್ರಪ್ಪಾ, ಏನೆಂದರೆ ಈಊರ ಅರಸ ಕೌಶಿಕರಾಜಾ ಅದಾನಲ್ಲಾ, ಅವಾ ಬಂದು ನಿನ್ನಮಗಳನ್ನ ನನಗೆ ಲಗ್ನ ಮಾಡಿಕೊಡು ಎಂದು ಹಗಲೆಲ್ಲ ಉಪದ್ರವ ಕೊಡುತ್ತಾನೆ. ಅವಾ ನೋಡಿದರೆ ಕ್ಷತ್ರಿಯವ ನಾವು ನೋಡಿದರೆ ವೀರಶೈವರು.ಅವರಿಗೂ ನಮಗೂ ಬಳಕೆ ಹೇಗೆ ಸಾಧ್ಯ ಅಂತ ಕೇಳಿದರೆ, ಈ ಊರೊಳಗೆ ಇರಬೇಕಂತಿಯೋ ಇಲ್ಲಾ, ಊರು ಬಿಟ್ಟು ಹೋಗಬೇಕಂತಿಯೋ ಅನ್ನುತ್ತಾನೆ.ಅದರ ಸಲುವಾಗಿ ಸರಿರಾತ್ರ್ಯಾಗ ನನ್ನ ಮಗಳನ್ನ ಕರಕೊಂಡು ಎಲ್ಲಾದರೂ ದೂರ ಹೋಗಬೇಕಂದರ ನನ್ನ ಮಗಳು ಅನ್ನುತ್ತಾಳೆ : ಛೇ, ಆನೆಯ ಮೇಲೆ ಕುಳಿತವರುಶ್ವಾನಕ್ಕೆ ಹೆದರಬೇಕೇ?ತಾನು ಆನೆಯ ಮೇಲೆ ಕುಳಿತವಳಂತೆ, ಆ ರಾಜ ಶ್ವಾನನಂತೆ. ಇದೆಂಥಾ ಸಮಜೂತು.ಏನರ ಇರಲಿ, ಆ ರಾಜ ನನ್ನ ಮನಿಮಟ ಬಂದರೆ ಬರಲಿ. ಅವನನ್ನು ಕಡಿದು ಹಾಕಿ ಓಡುತ್ತೇನೆ.ಏನ್ರಪಾ ಈ ಓಣಿಯೊಳಗ ವ್ಯಾಪಾರ ಆಗಲಿಲ್ಲಾ.ಮುಂದಿನಓಣಿಗಾದರೂ ಹೋಗುತ್ತೇನೆ.ಕುಬಸಾ ಬೇಕೇನ್ರವ್ವಾ ಕುಬಸಾSS

ದೃಶ್ಯ
(ಕೌಶಿಕ ರಾಜನ ಪ್ರವೇಶ)
ಕೌಶಿಕ : (ಪದ)

ಸುಂದರಾಂಗಿ ಮಾದೇವಿ ನಾನು ಎಂದು ಕೂಡುವೆನುಮಂದಗಮನೆ ಇಂದು ಮುಖಿಯೇ ಎಂದು ನೋಡುವೆನು ॥ಪಲ್ಲವಿ॥

ಮದನಪ್ರಿಯಳನ್ನು ಚಾರು ಚಿಲ್ವಿಕೆ ನಾರಿಮಣಿಯ
ಬಯಸಿ ನಾನು ಅಪಾರ ಕೊರಗಿದೆ ॥

ಬಾಲೆ ಮಾಲೆ ಶ್ಯಾಲೆ ಮದನ ಲೋಲೆ ಬಂದೆನುಹಾಲು ಸಕ್ಕರೆ ಕುಡಿದಂತೆ ಮೇಲೆ ಸೌಖ್ಯವು ॥
ಸುಂದರಾಂಗಿ ಮಾದೇವಿ ನಾನು ಎಂದು ಕೂಡುವೆನು ॥

(ಮಾತು) (ಸ್ವಗತ) ಓಹೋ ! ಆ ಮಹಾದೇವಿಯಂಥ ಚೆಲುವೆ ! ಅನುಪಮ ಲಾವಣ್ಯ ಒಯ್ಯರಗಳನ್ನು ನೋಡಿದಾಗಿನಿಂದ ಆಕೆಯನ್ನು ಯಾವಾಗ ಲಗ್ನವಾದೇನೆಂದು ನನ್ನ ಮನಸ್ಸು ಕುಣಿಯುತ್ತಿದೆ.ಆದರೆ ಮಾಡಬೇಕೇನು ?ಅವಳು ವೀರಶೈವ ಧರ್ಮದವಳು.ನಾನು ಕ್ಷತ್ರಿಯ ವಂಶದವನು.ಅಂದ ಮೇಲೆ ನನಗೆ ಹೆಂಡತಿಯಾಗಲಿಕ್ಕೆಅವಳು ಸ್ವಲ್ಪು ಹಿಂದೆ ಮುಂದೆ ನೋಡಲಿಕ್ಕೆ ಹತ್ತಿರುವಳು.ಆಕೆಯಮನಸ್ಸೇನು ನನ್ನ ಮೇಲೆ ಸಂಪೂರ್ಣವಿದೆ.ಅಂದಲ್ಲಿ ಎರಡನೇಯವರನ್ನು ಲಗ್ನವಾಗಬಾರದೆಂದು, ಇದೊಂದು ಜಾತಿಬೇಧದ ಸಲುವಾಗಿನಾನು ಸಂನ್ಯಾಸಿ ಇದ್ದೇನೆ.ಲಗ್ನವಾಗುವುದಿಲ್ಲವೆಂದು ಮದುವೆಯ ಆಶೆ ಬಿಟ್ಟು ಕುಳಿತಿದ್ದಾಳೆ.ಇದಕ್ಕೆ ಇನ್ನೇನು ಮಾಡಬೇಕು.ಆ ಮಹಾದೇವಿಯು ತಾನಾಗಿ ನನ್ನ ವಶವಾಗುವತನಕ ನನ್ನ ಮನಸ್ಸಿಗಂತೂ ಎಳ್ಳಷ್ಟೂ ಸಮಾಧಾನವಿಲ್ಲ.ನಾನೇ ಆಕೆ ಇದ್ದಲ್ಲಿಗೆಹೋಗಿ ಆಕೆಯನ್ನು ಜೋರಿನಿಂದ ಕೊಡಬೇಕೆಂದರೆ, ನಾನು ಈ ಊರ ಅರಸನಾಗಿ ಹಾಗೆ ಅಲ್ಲದ ಕೆಲಸ ಮಾಡಲಿಕ್ಕೆ ಹತ್ತಿದರ ಆ ಮೇಲೆ ಜನರು ಹಿಂದೆ ಮುಂದೆ ಹಾಸ್ಯ ಮಾಡುತ್ತಾರೆ.ಅಲ್ಲದೇ ಅವರು ಹಾದಿಯನ್ನು ಬಿಟ್ಟು ಬಿಡುತ್ತಾರೆ.ಇಷ್ಟರ ಸಲುವಾಗಿ ಎಷ್ಟು ದಿವಸ ಸುಮ್ಮನಿರಬೇಕಾಯಿತು.ನಾನು ಇನ್ನೇನು ತಡೆಯುವದಿಲ್ಲ. ಏನು ಮಾಡುತ್ತೇನೆಂದರೆ, ಆ ಮಹಾದೇವಿಯ ತಂದೆಗೆ ಮಾತಿನಲ್ಲಿ ಸಿಲುಕಿಸಿ ಇರುಕು ಹಾಕುತ್ತೇನೆ.ಅವನ ಕಡೆಯಿಂದ ಆಕೆಯನ್ನು ಒಪ್ಪಿಸುತ್ತೇನೆ. ಅಂದರೆ ಅವಳು ನಿರ್ವಾಹವಿಲ್ಲದೇ ತಾನೇ ಬಂದು ನನ್ನ ವಶವಾಗುತ್ತಾಳೆ.ಇಷ್ಟರ ಸಲುವಾಗಿ ಸುಮ್ಮನೆ ಹತ್ತೆಂಟು ಆಲೋಚನೆ ಮಾಡುವ ಕಾರಣಯಿಲ್ಲ. ಈಗೀಂದೀಗ ನಿರ್ಮಳನ್ನು ಕರೆಯಲು ಕಳಿಸುತ್ತೇನೆ.(ಪ್ರಕಟ) ಎಲೋ ಒಳಗೆ ಯಾರು ಇರುವಿರಿ ?

(ದೂತಿಯ ಪ್ರವೇಶ)

ದೂತಿ : ಯಾಕ್ರಿ ? ನಾನು ದೂತಿ ನೀವು ಯಾರು ?

ಕೌಶಿಕ : ಯಾಕೆ ? ನಾನು ರಾಜಾ.

ದೂತಿ : ಎಂಥ ರಾಜಾ ? ಕುಂಬಳ ರಾಜಾನೋ ಕಳಾವರ ರಾಜಾನೋ !

ಕೌಶಿಕ : ಈ ಉಡತಡಿ ಪಟ್ಟಣವನ್ನಾಳುವಂಥ ಕೌಶಿಕ ಬಹಾದ್ದೂರ ಇದ್ದೇನಿ ನೋಡು.

ದೂತಿ : (ಪರೀಕ್ಷೆ ಮಾಡಿ ನೋಡಿ) ಓಹೋ ! ಕೌಶಿಕ ಮಹಾರಾಜರೇನ್ರೀ ಯಾಕ್ರೀ ನನ್ನ ಕಣ್ಣ ಕಾಣಿಸುದಿಲ್ಲರಿ. ಯಾಕ್ರಿ ಬಹಳ ಚಿಂತ್ಯಾಗ ಕೂಂತಂಗ ಕಾಣಸತೈತೆ.

ಕೌಶಿಕ : ದೂತಿ ಅದನ್ನೆಲ್ಲಾ ತೆಗೆದುಕೊಂಡು ಏನು ಮಾಡುತ್ತೀ? ಆ ಚಿಂತಿ ಬಿಡಿಸುವವರ ಮುಂದೆ ಹೇಳಿದರೆ, ಏನಾದರೂ ಆದೀತು.ನಿನ್ನಂತವಳ ಮುಂದೆ ಹೇಳಿದರೆ ಏನು ಫಲವು?ಅದರಿಂದ ನೀನು ಸುಮ್ಮನೆ ಹೋಗು.

ದೂತಿ : ಆ ! ಅಂದ್ರ ನಾನು ನಿಮಗ ಹಾಗೆ ಕಾಣಿಸುತ್ತಿನೋ, ರಾಜಾ ಅದರ ನಿನ್ನ ನಾಳಿಗೆ ನೋಡೇನು.ನಾನು ಎಂಥಾಕಿ, ಗಾಳಿಗೆ ಗಾಳಿ ಗಂಟು ಹಾಕುವಂಥ ಮಾಯಕಾರತಿ.ಅದೇನ್ರೀ ನಿಮ್ಮದು ಮೊದಲು ಹೇಳ್ರೀ.ಅದನ್ನು ಮಾಡಿದಾಗರ ಬಹಾದ್ದೂರ ದೂತಿ ಅಂತೀರಲ್ಲೋ ?

ಕೌಶಿಕ : ದಾಸಿ ನಿನ್ನ ಹತ್ತಿರ ಅಂಥ ಶಕ್ತಿ ಇರುವುದೇನು ?

ದೂತಿ : ಇರದೇನು ಮಾಡೀತು?

ಕೌಶಿಕ : ಹಾಗಾದರೆ ನಾ ಬೇಡಿದ್ದನ್ನು ತಂದು ಕೊಡುತ್ತೀಯೇನು ?

ದೂತಿ : ನನಗೆ ಆಗದಂತಾದ್ದು ಈ ಭೂಮಿಯ ಮೇಲೆ ಏನೂ ಇಲ್ಲಂತ ತಿಳಿದು ಬಿಡ್ರಿ.

ಕೌಶಿಕ : ಅಲ್ಲ ದೂತಿ ಹಾಗಲ್ಲಾ, ಈಗ ನನಗೆ ಒಂದು ಹಣ್ಣು ಬೇಕಾಗಿದೆ ಅಂತಾ ತಿಳಿ.ಆ ಹಣ್ಣು ಮರದ ತುದಿಯಲ್ಲಿ ಬಹಳ ದೂರ ಇದ್ದಲ್ಲಿ ಅದು ಕಲ್ಲಿಗೆ ಬೀಳುವ ಹಾಗಿಲ್ಲ.ಮತ್ತುಆ ಮರಕ್ಕೆ ಮುಳ್ಳುಗಳು ಬಹಳವಿದ್ದುದರಿಂದ ಆ ಮರವೇ ಹತ್ತಲಿಕ್ಕೆ ಬರುವಂತಿಲ್ಲಾ.ಇದಕ್ಕೆಏನು ಮಾಡಬೇಕಂತ ಚಿಂತಿ ಮಾಡುತ್ತಿರುವೆ.ಇದಕ್ಕೆ ಏನು ಯುಕ್ತಿ ಮಾಡಬೇಕು ಹೇಳು ನೋಡೋಣ.

ದೂತಿ : ಇದಕ್ಕೆ ಏನು ಮಾಡಬೇಕೆಂದರೆ,ಆ ಹಣ್ಣು ಬೇಕಾದರೆ ಮರದ ಮುಳ್ಳುಗಳನ್ನು ಸವರಿಕೊಂತ ಹತ್ತಬೇಕು.ಅದು ಆಗದಿದ್ದರೆ, ಮರದ ಬೊಡ್ಡೆಯನ್ನು ಕಡಿದು ಉರುಳಿಸಿದರೆ, ಆಗಲಾದರೂ ಹಣ್ಣು ಸಿಕ್ಕೀತಿಲ್ಲೋ?

ಕೌಶಿಕ : ಹಾಗಾದರೆ ಇದರಂತೆ ಬೇತಮಾಡಿ, ನನಗೆ ಆ ವಸ್ತು ತಂದು ಕೊಟ್ಟರೆ ಭಲೇ ದೂತಿ ಅನ್ನುತ್ತೇನೆ.

ದೂತಿ : ನಿಜವಾಗಿಯೂ ತಂದು ಕೊಡುತ್ತೇನೆ.ಆ ವಸ್ತು ಯಾವುದು ?

ದೂತಿ : (ಪದ)

ಮೂರುಲೋಕ ಜಯಿಸುವ ರೂಪವಂತಿ
ಇರುವಳೋ ಆ ಕಾಂತಿ ಮೀರಿದ ಮತಿವಂತಿ
ಬೇಕೆನಗೆ ಆ ರೂಪವಂತೆ ಕಾಂತಿ ॥

ಅಪರೂಪದ ಹೆಣ್ಣು ಸುಲಕ್ಷಣ ಸಂಪನ್ನಿ
ಮೈ ಬಣ್ಣ ಲಿಂಬಿಹಣ್ಣ ಬಳಕುವ ನಡಸಣ್ಣ
ಕಮಲ ಪೂರ್ವದ ಹೆಣ್ಣ ॥

ಬೆರಗಾಗಿ ನಿಂತೆನು ನೋಡಿ ಅವಳ ಚೆಲ್ವಿಕೆಯ
ರತಿದೇವಿ ಇರುವಳೋ ಸುದ್ದತಾನ
ಕರತಂದು ಕೊಡು ಆ ಚೆಲ್ವಿಕೆಯ ॥

(ಮಾತು) ಏನೇ ದಾಸಿ ಸ್ವರ್ಗ ಮರ್ತ್ಸ ಪಾತಾಳ ಈ ಮೂರೂ ಲೋಕಗಳಲ್ಲಿ ಎಲ್ಲಿ ಹುಡುಕಿದರೂ ಸಿಗದಂತ ಒಂದು ಅಪರೂಪ ಆದಂತಾ ಹೆಣ್ಣು ನೋಡಿ ಬಂದಿರುವನು. ಅವಳ ಚೆಲುವಿಕೆ, ಹಾವ ಭಾವ, ಒಯ್ಯರವನ್ನು ವಿಚಾರ ಮಾಡಿನೋಡಿದರೆ ಕಾಮರಾಜನ ಹೆಂಡತಿ ರತಿದೇವಿಯೂ ಸಹ ಈಕೆಯ ಮುಂದೆ ನಾಚಬೇಕು. ಆಕೆಗೂ ಸಹ ಇಂಥಾ ಮೈಬಣ್ಣ ಇರಲಿಲ್ಲಾ.ದೂತಿ, ಆಕೆಯ ಚೆಲ್ವಿಕೆಯನ್ನು ಎಷ್ಟು ಹೇಳಿದರೂ ತೀರದು.ಅವಳೇನು ಸಾಮಾನ್ಯ ಹೆಣ್ಣಲ್ಲ. ಈ ಜಗತ್ತನ್ನು ವಶಮಾಡುವುದರ ಸಲುವಾಗಿ ಸ್ತ್ರೀ ಲಾವಣ್ಯ, ಅಭಿಮಾನ ಇವು ದೇವತೆಯೇ ಜಗನ್ಮೋಹಿನಿಯ ರೂಪ ತೊಟ್ಟು ಬಂದಂತೆ ತೋರುತ್ತದೆ.ಅವಳು ಸರಸ್ವತಿಯೋ, ಲಕ್ಷ್ಮೀಯೋ ಅಥವಾ ಪಾರ್ವತಿಯೋ, ಎಂತೆಂಥ ಕವಿಗಳು ಆಕೆಯ ವರ್ಣನೆಯನ್ನು ಮಾಡಲು ಆಗದೆ ಸೋತು ಹೋಗಿದ್ದಾರೆ.ಆ ನಾರಿಮಣಿಯನ್ನು ಹುಟ್ಟಿಸಿದ ಬ್ರಹ್ಮನ ಜಾಣತನವನ್ನು ಎಷ್ಟಂತ ಹೇಳಲಿ ? ದೂತಿ ಥೇಟ್ ಲಿಂಬಿಹಣ್ಣಿನಂತೆ ಮೈಬಣ್ಣ.ಆ ಹೆಣ್ಣು ನೋಡಿದ ಕೂಡಲೆ ಹೆಂಗ ಆಯಿತೆಂದರೆ ಕೋಲ್ ಮಿಂಚು ಹೊಡೆದಂತಾಗಿ ಬುದ್ದಿಗೆಟ್ಟು ಹುಚ್ಚನಾಗಿ ನಿಂತುಬಿಟ್ಟಿದ್ದೇನೆ.

ದೂತಿ : ಛೇ ಅದೆಂಥಾ ಹೆಣ್ಣು ನೋಡಿ ಬಂದಿರುವಿರಿ.ನಿಮ್ಮ ಪಟ್ಟದ ಹೆಂಡತಿ ಸುಮಾರು ಅದಾಳೇನ್ರೀ? ಚೆಂಗಳಿಕೆವ್ವ ನೋಡಿದಾಂಗಾಗತೈತಿ, ದೂರದ ಗುಡ್ಡ ಕಣ್ಣಿಗೆ ನುಣ್ಣಗೆ ಕಾಣತೈತೆ.ಎಲ್ಲೋ ದೂರದ ಕಳ್ಳಕಿಂಡ್ಯಾಗ ಹಣಕಿ ನೋಡಿದಾಂಗ ಕಾಣತೈತಿ.ಆಕಿ ಯಾವಾಕಿ ನಿನ್ನ ಮನಸ್ಸಿಗೆ ಒಳ್ಳೆ ಬಂದಾಂಗ ಕಾಣತೈತಿ.ಆ ಹುಚ್ಚಿಗೆ ಹೋಗಬ್ಯಾಡ್ರಿ ಮನಿಯೊಳಗಿನ ಹೆಂಡತಿ ಚೆಲ್ವಿಕಿಯಂಥಾದ್ದು.ಈ ಭೂಮಿಯ ಮೇಲೆ ಯಾವಾಕಿ ಇದ್ದಾಳು. ಅಂಥವರು ಯಾರೂ ಇಲ್ಲಾ ತಿಳಿದು ಬಿಡ್ರಿ.

ಕೌಶಿಕ : ಈ ಜಗತ್ತಿಗೆ ಕಣ್ಣು ಆದಂತಾ ಸೂರ್ಯನ ಬೆಳಕಿನ ಮುಂದೆ ಆ ರಾಡಿಯ ಮಿನುಕು ಹುಳುಗಳ ಬೆಳಕು ಸರಿಯಾದೀತೇ? ಎಂದಿಗೂ ಸರಿಯಾಗಲಿಕ್ಕೆ ಸಾಧ್ಯವಿಲ್ಲಾ. ನಾನು ನೋಡಿದ ಹೆಣ್ಣಿನ ಚೆಲ್ವಿಕೆ ಶೃಂಗಾರಗಳು ನನ್ನ ಹೆಂಡತಿ ಚಾರುಮತಿಗೆ ಇಲ್ಲಾ ಅಷ್ಟೇ. ಯಾಕೆ ಆ ಪೃಥ್ವಿಯ ಮೇಲೆ ಆಕೆಯಂಥಾ ಚೆಲುವಿ ಯಾರೂ ಇಲ್ಲಾ ಹೇಳುತ್ತೇನೆ ಕೇಳು.

ಪದ

ಪೂರ್ಣಚಂದ್ರನ ಸರಿ ಕೋಮಲಾಂಗಿಯ ಮಾರಿ
ಮಲ್ಲಿಗೆಯ ಮಗ್ಗಿನಂತೆ ಒಪ್ಪುವಂತೆ ಆ ಸ್ತ್ರೀಯಳು
ಇರುವಳೋ ರತಿಚೆಲ್ವಿಕೆ ಇರುವಳೋ ಆ ಕಾಂತೆ
ಮಂದಹಾಸ ಆ ನಾರಿ ಇರುವಳೋ ಆ ವೈಯಾರಿ ॥

(ಮಾತು) ದಾಸಿ ಆ ಹೆಣ್ಣಿನ ರೂಪ ಸೌಭಾಗ್ಯವನ್ನು ಎಷ್ಟಂತ ಹೇಳ್ಲಿ? ಈ ಹೆಣ್ಣಿನ ಮುಖವು ಹುಣ್ಣಿಮೆಯ ಚಂದ್ರನಂತೆ ತಿಳಿದು ಅದನ್ನು ನುಂಗಬೇಕೆಂದು ಭಾವಿಸಿ,ಆಕೆಯ ತಲೆಯ ಕೂದಲು ಎನ್ನುವಂಥ ಯೌವನ ಸಿರಿಯು ಆಕೆಯ ಮುಖವನ್ನು ನುಂಗಲಿಕ್ಕೆ ಹತ್ತಿದಂತೆ,ಆಕೆಯ ಹಣೆಯ ಸುತ್ತಲೂ ಮುಂಗುರುಳುಗಳು ಹರಡಿ ಬಹಳೇ ಸುಂದರವಾಗಿ ಕಾಣುತ್ತದೆ.ಆಕೆಯ ಮುಖ, ನಗುವಾಗ ಆಕೆಯ ಹಲ್ಲು ಥೇಟ್ ಮಲ್ಲಿಗೆಯ ಮೊಗ್ಗಿನಂತೆ ಆಕೆಯ ಮಂದಹಾಸಕ್ಕೆ ಮತ್ತಷ್ಟು ಉತ್ತೇಜನ ಕೊಡುತ್ತದೆ.ಇದೂ ಅಲ್ಲದೇ ಆಕೆಯ ನೆಟ್ಟನ ಮೂಗು ಥೇಟ್ ಸಂಪಿಗೆಯ ತೆನಿಯಂತೆ, ತಳ ತಳ ಹೊಳೆಯುವ ಗಲ್ಲ, ಕಾಮನ ಬಿಲ್ಲನ್ನು ಹೋಲುವಂಥ ನವಿರಾದ ಹುಬ್ಬು, ಇಂಥ ಲಾವಣ್ಯ ಸಿರಿಯಾದ ಹೆಣ್ಣು, ಗಂಡಸರ ಮನಸ್ಸೆಂಬ ಮೃಗಗಳ ಬೇಟೆಯಾಡಿ ಒಲಿಸುವುದರ ಸಲುವಾಗಿ ಈ ನರಲೋಕದಲ್ಲಿ ಅವತಾರ ಮಾಡಿ ನನ್ನ ಮನಸ್ಸನ್ನು ತನ್ನ ಕಡೆಗೆ ಎಳೆದುಬಿಟ್ಟಿದ್ದಾಳೆ.ಆದ್ದರಿಂದ ನನಗೆ ಸಮಾಧಾನವಿಲ್ಲಾ ನೋಡು.

ದೂತಿ : ಏನ್ರೀ, ಆಕಿ ಚೆಲುವಿಕಿ ಹೇಳಬೇಕಾದರೆ ಆಕಿ ನಿಮಗೆ ಸಲ್ಲುವಂಥಾಕೇನ್ರಿ ?

ಕೌಶಿಕ : ಹೌದು ನಮಗೆ ಸಲ್ಲುವಂತಾಕಿ ಇದ್ದಾಳೆಂದೇ ತಿಳಿದು ಇಷ್ಟು ಮನಸ್ಸು ಹಾಕಿರುವೆನು.ಆಕೆ ನನಗೆ ಹೆಂಡತಿಯಾದರೆ ಹೇಗಾಗುತ್ತದೆ ಎಂದರೆ, ರತ್ನಕ್ಕೆ ಕುಂದಣ ಹಚ್ಚಿದರೆ ಎಷ್ಟು ಸುಂದರವಾಗಿ ಕಾಣಿಸುತ್ತದೆಯೋ ಅಷ್ಟು ನನ್ನ ಐಶ್ವರ‌್ಯಕ್ಕೆ ಶೋಭೆ ಉಂಟಾಗುತ್ತದೆ.ಅದಕ್ಕೇ ನೀನು ಏನಾದರೂ ಮಾಡಿ ಆಕೆಯನ್ನು ತಂದು ಕೊಡುತ್ತೇನೆಂದು ಹೇಳು.

ದೂತಿ : ಏನ್ರೀ, ಆಕೆಯನ್ನು ನಿಜವಾಗಿಯೂ ತಂದುಕೊಡುತ್ತೇನೆ.ಆಕೆಯು ಯಾವ ಪ್ರಾಂತದೊಳಗೆ, ಯಾವ ಊರೊಳಗೆ ಇರುವಳು ?ಅದನ್ನು ಹೇಳ್ರೀ, ಅಂದರೆ ಹೂಡಿಕಿಕೊಂಡು ಬರ್ತೇನಿ.

ಕೌಶಿಕ : ಏನೇ, ಎಲ್ಲಿ ಹುಡುಕಾಡುತ್ತೀ? ಕಸ್ತೂರಿ ಮೃಗಗಳ್ನು ತನ್ನ ಕಂಕುಳದಲ್ಲಿಟ್ಟುಕೊಂಡು, ಸುಳ್ಳೇ ಗುಡ್ಡ ಗುಡ್ಡ ತಿರುಗಿದರೆ ಅದು ಸಿಗಬಹುದೇನು ?ಅದರಂತೆ ನಾನು ಬೇಡಿದ ವಸ್ತುವು ಈ ಉಡತಡಿ ಪಟ್ಟಣದಲ್ಲಿಯೇ ಇಟ್ಟುಕೊಂಡು ಎರಡನೇ ಊರು ತಿರುಗುತ್ತ ಹೋದರೆ ನಿನಗೆಲ್ಲಿ ಸಿಗಬೇಕು ?ಆ ಹೆಣ್ಣು ಏನೂ ದೂರವಿಲ್ಲಾ ನೋಡು.

ದೂತಿ : ಹಾಗಾದರೆ ಆಕೆ ನಮ್ಮ ಊರಲ್ಲಿಯೇ ಅದಾಳೇನ್ರಿ ?

ಕೌಶಿಕ : ಹೌದು ನಮ್ಮ ಊರಲ್ಲಿಯೇ ಇರುವಳು ನೋಡು.

ದೂತಿ : ನಮ್ಮ ಊರಾಗ ಎಲ್ಲಿ ಅದಾಳ್ರೀ ?

ಕೌಶಿಕ : (ಪದ)

ನಿರ್ಮಳನ ಮನಿಯಲಿ ಇರುವಳೋ ಬಾಲಿ
ಜಗದಲಿ ಬಹು ಖ್ಯಾತಿ ಹೊಂದಿದ ಸತ್ವಮತಿ
ಸದ್ಗುಣಿ ಎನಿಸಿದಳು ಆ ಕಾಂತೆ
ದೇವಗಿರಿ ಈಶನ ಪೂಜಿಸುತಲಿ ಬಾಲಿ
ಅನುದಿನ ಮೆರೆಯುವಳೋ ಆ ಜಾಣಿ ಸುಖವಾಣಿ.

(ಮಾತು) ದೂತಿ ಆ ಕಾಂತಾಮಣಿಯು ಬಜಾರದಲ್ಲಿ ನಿರ್ಮಳ ಎನ್ನುವಂಥ ಜಂಗಮನ ಇರುವನಲ್ಲ ! ಅವನ ಮನೆಯೊಳಗೆ ಇದ್ದಾಳೆ.ಆಕಾಶದೊಳಗಿನ ಚಂದ್ರನ ಪ್ರಕಾಶವು ಭೂಮಿಯ ಮೇಲೆ ಬಿದ್ದು ಭೂಮಿಯ ತುಂಬ ಬೆಳಕು ಹೇಗೆ ಬೀಳುವುದೋ.ಅಂತೆಯೇ ಆಕೆಯು ತನ್ನ ಮನೆಯೊಳಗೆ ಬೆಳೆದು, ಕೀರ್ತಿ ಎನ್ನುವಂಥಾ ಪ್ರಕಾಶದಿಂದ ಜಗತ್ತಿನ ತುಂಬ ಪ್ರಸಿದ್ಧಳಾಗಿದ್ದಾಳೆ.ಅಂಥ ಸುರೇಖವಾದ ಹೆಣ್ಣು ಈ ಭೂಮಿಯ ಮೇಲೆ ಎಲ್ಲಿಯೂ ಇಲ್ಲ ನೋಡು.

ದೂತಿ : ಅಂಥಾ ಹೆಣ್ಣು ಐತೇನ್ರಿ.ಆಕೆಯ ಹೆಸರೇನು ಹೇಳ್ರಿ ?

ಕೌಶಿಕ : ಮಹಾದೇವಿ ಅಂಥಾ.

ದೂತಿ : ಅದs ಸಂನ್ಯಾಸಿ ಮಹಾದೇವಿ ಹೌದೇನ್ರಿ ? ಆಕೆಯ ಇತಿಹಾಸನೆಲ್ಲಾ ಬಲ್ಲೆ ನಾನು.ನೀನು ಮೊದಲೇ ಹೇಳಬಾರದ? ಆಕೀ ಸುದ್ದಿ ಮೊದಲೇ ತಿಳೀದೈತಿ.ಈ ಊರನ್ನೇ ಅಳುಗಾಡಿಸುತ್ತೀನಿ ಅಂದಬಿಟ್ಟ ಮಗಳು ಅವಳು.

ಕೌಶಿಕ : ಆಕೆಯನ್ನು ನನಗೆ ತಂದು ಕೊಡಲಿಕ್ಕೇ ಬೇಕು.

ದೂತಿ : ಅದೇನು ಮಣ್ಣು ಬಾವಾ. ಅದಕ್ಕ ಪ್ರಪಂಚದ ಆಶೆ ಐತೋ ಇಲ್ಲೋ ? ಯಾವತ್ತೂ ಕೋಣ್ಯಾಗ ಗಂಡಲಿಂಗಪ್ಪನ ಹಿಡಿದುಕೊಂಡು ಹೋಗಿ ಹಂಗs ಕೂತು ಬಿಡತೈತಿ. ಅದು ಎಲ್ಲೆರ ಬಾಳೇವು ಮಾಡತೈತೇನ್ರೀ?ಯಾರರ ಹೋಗಿ ಹೆಣ್ಣು ಜಂಗಮಳು ಗಂಡು ಜಂಗಮನನ್ನು ಮದುವೆ ಮಾಡಿಕೊಂಡು ಪ್ರಪಂಚಮಾಡಿ ಗಂಡನಿಂದ ಸುಖವಾಗಿರಬೇಕೆಂದು ಹೇಳಿದರ ಕವಕ್ಕನೇ ಏನಾದರೂ ಅಂದು ಬಿಡತೈತಿ. ಅದನ್ನೇನು ಸುಡತೀರಿ? ಸುಮ್ಮನೆ ರಾಜಾರಾಗಿ ಇರ‌್ರಿ.

ಕೌಶಿಕ : ಏನೇ, ಆಕೆ ಲಗ್ನವನ್ನು ಒಲ್ಲೆ ಅಂತಾಳಲ್ಲಾ,ಆ ಮಾತಿನ ಮೇಲಿಂದ ರಾಜನನ್ನು ಲಗ್ನವಾಗಬೇಕು ಇಲ್ಲದಿದ್ದರೆ ಇಲ್ಲಾ ಅಂತಾ ತರ್ಕವನ್ನು ಮಾಡಿದ್ದೇನೆ.

ದೂತಿ : ಅಲಲss ! ! ರಾಜನ ತರ್ಕ ! ಕಿವುಡಾ ಕಿಚಡಿ ಬೇಡಿದರ ಗೌಡಾ ಹಚಡ ಬೇಡಿದಂತೆ ಇದು ಆಟ.ಆಕಿ ಸಂಸಾರದೊಳಗ ಏನೂ ಹುರುಳಿಲ್ಲಾಂತ ತಿಳಿದು ಈ ಪ್ರಪಂಚದ ಆಶೆಯನ್ನು ಮರೆತು ಬಿಟ್ಟಿದ್ದಾಳೆ.ಆಕೆಯು ಗಂಡನನ್ನು ಮಾಡಿಕೊಳ್ಳಬಾರದಂತಾ ಬಿಟ್ಟಾಳ.

ಕೌಶಿಕ : ದೂತಿ ಹಾಗಾದರೆ ನನ್ನದೇನು ಗತಿ? ಆಕೆಯು ನನಗೆ ವಶವಾಗಲಿಕ್ಕಿಲ್ಲವೇನು ?

ದೂತಿ : ಎಂದೂ ಆಗುವುದಿಲ್ಲಾ ನೋಡು.

ಕೌಶಿಕ : ದೂತಿ ಹಾಗಾದರೆ ಇದಕ್ಕೆ ಏನು ಮಾಡಬೇಕು ?

ದೂತಿ : (ಸ್ವ) ಹಿತ್ತಲದಾಗ ಗಜಮ್ ನಿಲ್ಲಬೇಕು ನೋಡ್ರಿ.

(ಪ್ರ) ನಿಮಗೆ ದೇವರೇ ಗತಿ.

ಕೌಶಿಕ : ದೂತಿ, ಹಿಂಗ ಅಂದ್ರ ನನ್ನ ಗತಿ? ಮತ್ತು ಹೇಳುತ್ತೇನೆ ಕೇಳುವಂಥವಳಾಗು.

(ಪದ) ಕರೆತಂದು ಕೊಡು ತುರ್ತ
ಮಾನಿನಿ ಮಣಿಯನು ಮಾಡಿ ಬೇತ ॥ಪಲ್ಲವಿ ॥

ದೇವಿಯ ಕೂಡದೇ ಸೈರಿಸದೆನ್ನಮನ
ಹಲುಬಿ ಹಂಬಲಿಸಿ ಬಿಡುವೆನು ಪ್ರಾಣ
ಕರುಣಿಸಿ ನೀವಿನ್ನ ಕರೆತಾ ಅವಳನ್ನ
ಕಾಂಚನದೋರಣ ಕೋಮಲಾಂಗಿಯ
ಮಾಯ ಮಂತ್ರದಿ ಅವಳ ಮನವೊಲಿಸಿ
ಬೇಡಿದ್ದ ಕೊಡುವೆನು ನೀ ತಿಳಿಸಿ
ಸವಿಮಾತನ್ನು ಬಳಿಸಿ ನೀ
ಪರಿಪರಿ ಬೋಧಿಸಿ ಅವಳನ್ನ
ಬರುವಂತೆ ಮಾಡವ್ವ ನೀ ದೂತಿ ॥

(ಮಾತು) ಏನೇ ದೂತಿ, ಮಹಾದೇವಿಯನ್ನು ತಂದುಕೊಟ್ಟರೆ, ನನ್ನ ಪ್ರಾಣ ಉಳಿಯುತ್ತದೆ.ಇಲ್ಲದಿದ್ದರೆ ನಾನು ಜೀವದಿಂದಿರುವುದಿಲ್ಲ. ನಿನ್ನಕಡೆಯಿಂದ ಆಗದಿದ್ದರೆ ಸ್ವತಃ ನಾನೇ ಹೋಗಿ, ಆಕೆಗೆ ಹಾಗೆ ಹೀಗೆ ಹೇಳಿ, ಮನವೊಲಿಸಿ ನನಗೆ ಹೆಂಡತಿಯಾಗುವ ಹಾಗೆ ಮಾಡುತ್ತೇನೆ.ಆಕೆಯನ್ನು ಯಾವಾಗ ನೋಡೇನೆಂದು ನನ್ನ ಮನಸ್ಸು ಕುಣಿದಾಡುತ್ತಿದೆ.ಅದಕ್ಕೆ ನೀನು ದಯಮಾಡಿ ಆಕೆಯನ್ನು ಕರೆದುಕೊಂಡು ಬರಲಿಕ್ಕೇ ಬೇಕು ನೋಡವ್ವ.

ದೂತಿ : ನಾನು ಮಹಾದೇವಿಯನ್ನು ಕರೆದುಕೊಂಡು ಬರದಿದ್ದರ ಜೀವಾ ಇಡುವದಿಲ್ಲವೇನ್ರಿ ?

ಕೌಶಿಕ : ಇಡುವುದಿಲ್ಲ ನೋಡು.

ದೂತಿ : ಆಕೆಯನ್ನು ತಂದುಕೊಟ್ಟರೆ ನನಗೆ ಏನು ಕೊಡುತ್ತೀರಿ ?

ಕೌಶಿಕ : ನೀನು ಬೇಡಿದನ್ನು ತಂದು ಕೊಡುತ್ತೇನೆ ನೋಡು.

ದೂತಿ : ನಿಮ್ಮ ರಾಜಮುದ್ರೆಯ ಪೈಕಿ ಏನಾದರೂ ಕೊಡುತ್ತೀರೇನ್ರಿ ?

ಕೌಶಿಕ : ಮತ್ತೇನು ಬೇಕು ಹೇಳು ?

ದೂತಿ : ನಿಮ್ಮ ಅಂಗಿಯನ್ನು, ನಿಮ್ಮ ತಲೆಯ ಮೇಲಿನ ಕಿರೀಟವನ್ನು ಕೊಡ್ರಿ, ಅಂದರೆ ಕೆಲಸ ಮಾಡಿಕೊಂಡು ಬರುತ್ತೇನೆ.

ಕೌಶಿಕ : ಏನು ದಾಸಿ,ಈ ರಾಜ್ಯ ಪೋಷಾಕುಗಳನ್ನು ಕೊಡಬೇಕೇನು ?

ದೂತಿ : ಇವನ್ನೆಲ್ಲ ಕೊಡಬೇಕು ನೋಡ್ರಿ.

ದೂತಿ : ನಿನ್ನ ಮನಸ್ಸಿನಂತೆ ಯಾಕಾಗಲೊಲ್ಲದು ಕೊಡುತ್ತೇನೆ.

ಪದ

ತೆಗೆದು ಕೊಡುವೆ ಡ್ರೇಸ್
ತವಕದೀ ಮಾಡೆ ನೀ ಸಹಾಯ
ತಳ ತಳ ಹೊಳೆಯುವಂಥ
ವಜ್ರ ಮಾಣಿಕ್ಯಗಳ ಕೆಚ್ಚಿದ
ಈ ರಾಜಕಿರೀಟವನ್ನು ಮಾಡದೇ
ಅನುಮಾನ ಕೊಡುವೆನಾ ನಿನಗಿನ್ನಾ
ಹಿಡಿಯವ್ವಾ ಎಲ್ಲಾ ಬಿಟ್ಟ ಸಂಶಯನಾ ॥

(ಮಾತು) ಏನೇ, ನೀನು ಬೇಡಿದಂತಾ ಎಲ್ಲಾ ಪೋಷಾಕು ಕೊಟ್ಟಿರುವೆನು.ಇನ್ನಾದರೂ ತೀರಿತಿಲ್ಲೋ ನಿನ್ನಾಶೆ.

ದೂತಿ : ತೀರಿತು ಹೋಗುವೆನು.

ಕೌಶಿಕ : ಏನೇ, ಇವನ್ನೆಲ್ಲಾ ಮುಚ್ಚಿಕೊಂಡು ಹೋಗು, ಈ ಊರವರು ನೋಡಿದರೆ ರಾಣಿಯಾದ ಚಾರುಮತಿಯ ಮುಂದೆ ಹೇಳಿ ನಮ್ಮಿಬ್ಬರನ್ನು ಪಜೀತಿ ಮಾಡ್ಯಾರು.

ದೂತಿ : ಅದ್ಯಾಕ್ರೀ, ನಿಮ್ಮ ಹೆಂಡತಿಗೆ ಎಷ್ಟು ಹೆದರತೀರಿ? ಆಕಿ ಈದ ಹುಲಿಯಾಗ್ಯಾಳೇನು ? ಹೆಂಡತಿಗೆ ಹೆದರಿ ಎಂಥ ಬಾಳೇವು ಮಾಡತೀರಿ?ನಿಮ್ಮಂಥವರೆಲ್ಲಾ ಇಂಥಾದ್ದು ಮಾಡಿ ಹೆಂಗಸರನ್ನು ಏರಿಸಿ ಕುಳ್ಳಿರಿಸೀರಿ, ನನ್ನ ಬೈದಾಳು ಅನ್ನಾಕ ನಿಮಗ ನಾಚಿಕಿ ಇಲ್ಲವೇನ್ರಿ?

ಕೌಶಿಕ : ಏನೇ, ಇಂಥ ಅಲ್ಲದ ಕೆಲಸಕ್ಕೆ ಅವಳು ಸೇರುವುದಿಲ್ಲಾ.ಅದಿರಲಿ, ಇನ್ನು ಆ ಮಹಾದೇವಿಯನ್ನು ಕರಕೊಂಡು ಬಂದಿಯಾದರೆ ಮುಂದೆ ಅವಳಿಂದ ಏನು ಬಂದರೂ ನೋಡಿಕೊಳ್ಳುತ್ತೇನೆ.ನಾವು ಈಗ ಈ ಕೆಲಸಕ್ಕೆ ಪ್ರಾರಂಭ ಮಾಡಿರುವೆವು.ಇದರ ಸಲುವಾಗಿ ಇಷ್ಟು ಅಂಜಿಕೆ ಹುಟ್ಟಿದೆ ನೋಡು.

ದೂತಿ : (ಸ್ವಗತ) ಏನ ಗಟ್ಟಿ ಗಂಡಸಪಾ ಇವಾ.ಹಂಗರ ಬೇಡಪಾ ಈ ಉಸಾಬರಿ. (ಪ್ರಕಟ) ಹಿಡಿ ನಿನ್ನ ಸಾಮಾನು. ಹಿಂದಿನಿಂದ ನನ್ನ ಕಿಮ್ಮತ್ತು ಕಳದೀರಿ. ಹೇಸಿ ನಿಬ್ಬಣಕ ಹೋಗಬಾರದು, ಹೇಡಿ ಬೆನ್ನ ಕಟ್ಟಬಾರದು ಅಂತಾ ತಿಳಿದಂಗಾಯಿತು.ನಿನ್ನ ಕೂವತ್ತು ತಿಳೀತು.ತಗೋ ಇವನ್ನೆಲ್ಲ (ಎಂದು ಕೊಡಬೇಕು).

ಕೌಶಿಕ : ಛೇ ! ಹಾಗೇನೂ ತಿಳಿಯಬೇಡಾ.ಆ ಮಹಾದೇವಿಯನ್ನು ಕರಕೊಂಡು ಬಂದದ್ದೆ ಹೌದಾದರೆ, ನನ್ನ ಪಟ್ಟದ ಹೆಂಡತಿಯನ್ನು ಹೊರಗೆ ಹಾಕುತ್ತೇನೆ.ಇದಕ್ಕ ಯಾಕ ಕಾಳಜೀ ಮಾಡತೀ? ಸುಮ್ಮನೆ ತಗೊಂಡು ಹೋಗು.

ದೂತಿ : ಏನ್ರೀ, ಮಹಾದೇವಿಯನ್ನು ಕರೆದುಕೊಂಡು ಬಂದರೆ ನಿಮ್ಮ ಪಟ್ಟದ ಹೆಂಡತಿಯನ್ನು ಹೊರಗೆ ಹಾಕುತ್ತೀರಾ ?

ಕೌಶಿಕ : ಹೌದು, ಹೊರಗೆ ಹಾಕುತ್ತೇನೆ ನೋಡು.

ದೂತಿ : ಹಾಂಗ ಬಾಯಿಮಾತ ಹೇಳಿದರೆ ಅಲ್ಲಾ.ಹಾಕಬೇಕು ನೋಡು. ಆಕಿ ಹೊರಗೆ ಹೋಗದಿದ್ದರೆ. ನಾನೊಂದು ಮಸಲತ್ತು ಹೇಳುತ್ತೇನೆ ಕೇಳು.

ಕೌಶಿಕ : ಅದೇನು ಮಸಲತ್ತು ಹೇಳು.

ದೂತಿ : (ಕಿವಿಯಲ್ಲಿ ಹೇಳಿದಂತೆ ಮಾಡಿ) ತಿಳೀತಲ್ಲೋ, ಹಂಗ ಮಾಡಿಬಿಡು.

(ಚಾರುಮತಿಯ ಪ್ರವೇಶ)

ಚಾರುಮತಿ : (ಪದ)

ಏನೇ ಯಾರನ್ನು ಹೊರಗೆ ಹಾಕಿಸುವೆ
ನಾನೇನು ಮಾಡಿದ್ದೆ ನಿನಗೆ ಅಂಥಾದು ॥ಪಲ್ಲವಿ ॥
ಎನ್ನ ಕಾಂತನ ಕಿವಿಯೊಳಗೆ ನೀ ಹೇಳಿದ ಬೇತವನಾ
ಲಗು ಹೇಳಿ ನನ್ನ ಮುಂದೆ ಹೇಳದಿದ್ರ ಹಾಕುವೆ ಕೊಂದಾ
ಲಗು ಹೇಳೀಗ ನೀ ಮತಿವಂತಿ ಹಿಂಗ ಎಷ್ಟೆಷ್ಟು ಮಾಡಿದಿ ಹಿಂದೆ
ಈ ಮಣಿ ಪೀತಾಂಬರ ಸರ ಇವನೆಲ್ಲಿಗೆ ಒಯ್ಯುವಿ ತತ್ಪರ
ನಮ್ಮ ರಾಜರ ಸೀರಿ ಒಯ್ಯುವರ ನಾರಿ
ಹೀಂಗ ಗತಿಗಿಟ್ಟು ಏನೋನು ನೋಡುತಿ ನಾರಿ ॥

(ಮಾತು) ಏನೇ ದಾಸಿ, ಯಾರನ್ನು ಹೊರಗೆ ಹಾಕಿಸುತ್ತೀ, ಏನು ಮಸಲತ್ತು ? ಅದನ್ನು ರಾಜನ ಕಿವಿಯಲ್ಲಿ ಹೇಳಲಿಕ್ಕೆ ಹತ್ತಿರುವಿಯಲ್ಲಾ ! ಇಲ್ಲದ್ದೊಂದು ಹೇಳಿ ಯಾರನ್ನು ಗೊತ್ತಿಗೆ ಹಚ್ಚಬೇಕಂತಾಮಾಡಿರುವಿ?ಈಗ ನನ್ನನ್ನು ಹೊರಗೆ ಹಾಕು ಅಂತಾ ಅವರಿಗೆ ಹೇಳಲಿಕ್ಕೆ ಹತ್ತಿರುವಿಯಲ್ಲಾ ! ಈ ಪೀತಾಂಬರ, ಮುತ್ತಿನಸರ, ಈ ರಾಜನ ಕಿರೀಟ ಇವನೆಲ್ಲ ಎಲ್ಲಿಗೆ ತೆಗೆದುಕೊಂಡು ಹೋಗುವೆ? ಯಾರಿಗೆ ಕೊಡಲಿಕ್ಕೆ ಹೇಳು ಮೊದಲು. ಹೇಳುತ್ತೀಯೋ ಹೊಡೆತಾ ಬೇಕೋ, ಹೇಳು ಮೊದಲು.

(ಚಾರುಮತಿಯು ಕೌಶಿಕ ರಾಜನಿಗೆ) ಯಾಕ್ರೀ, ಇವನ್ನುಯಾರಿಗೆ ಕೊಟ್ಟು ಕಳೆಸಬೇಕಂತ ಮಾಡಿರುವಿರಿ? ರಾಜರು ಅನಿಸಿಕೊಂಡು ಇಂಥ ಹೊಲಸು ದೂತಿಯ ಮಾತು ಕೇಳಬೇಕೆಂದರೆ ನಿಮಗಾದರೂ ನಾಚಿಗೆ ಇಲ್ಲೇನು ?

(ದಾಸಿಯ ಕಡೆ ನೋಡಿ) ದೂತಿ ನೀ ಈಗ ಏನೇನು ಮಸಲತ್ತು ಮಾಡಿರುವಿ ಹೇಳು, ಹೇಳುತ್ತೀಯೋ ತಲೆ ಒಡೆಯಲೋ (ಹೊಡೆಯವಳು).

ದೂತಿ : ಹೊಡೆಯಬೇಡಾ ನಮ್ಮವ್ವಾ, ನಿನ್ನ ಕಾಲಿಗೆ ಬಿದ್ದು ಇಲ್ಲಿ ನಡೆದದ್ದನ್ನೆಲ್ಲಾ ಹೇಳುತ್ತೇನೆ.

ಚಾರುಮತಿ : ಹಾಗಾದರೆ ಹೇಳು ?

ದೂತಿ : ಇವನ್ನೆಲ್ಲ ಒಯ್ದು ಮಹಾದೇವಿಗೆ ಕೊಟ್ಟು, ಆಕೆಯನ್ನು ಕರೆದುಕೊಂಡು ಬಾರೆಂದು ಈ ಸಾಮಾನುಗಳನ್ನು ಕೊಟ್ಟಿದ್ದಾರೆ ರಾಜರು.

ಚಾರುಮತಿ : ಏನೇ ದಾಸಿ, ನನ್ನನ್ನು ಹೊರಗೆ ಹಾಕಂತ ಇವರಿಗೆ ಹೇಳಲಿಕ್ಕೆ ಹತ್ತಿರುವಿಯಲ್ಲಾ ?

ದೂತಿ : ನಾನು ಅಂದಿಲ್ಲವ್ವ, ಅವರೇ ಅಂದರು.

ಚಾರುಮತಿ : ಇನ್ನೊಮ್ಮೆ ಇಂಥ ಕಾರಭಾರ ಮಾಡುತ್ತೀಯೇನು ?

ದೂತಿ : ಇಲ್ಲ ನಮ್ಮವ್ವ, ಇಷ್ಟಕ್ಕ ಕುರಿಕೋಣ ಬಿದ್ದವು. ಇನ್ನ ಯಾತಕ್ಕೆ ಹೋಗಲೇ ನಮ್ಮವ್ವ ?

ಚಾರುಮತಿ : ಇದೊಂದು ಸಾರೆ ಬಿಟ್ಟಿದ್ದೇನೆ.ಇಂಥಾದ್ದು ಎಲ್ಲಿಯಾದರೂ ಮಾಡಿದರೆ ಜೀವಾನಬಿಡಸತೇನಿ, ತಿಳಿಯಿತಿಲ್ಲೋ ?

ದೂತಿ : ಕಡ್ಡೀ, ಕಸರು ಒಂದು ಉಳೀದಂಗ ತಿಳೀತವ್ವಾ.ಇವರ ಮಾತ ಕೇಳಿದರೆ ಆಗುವುದೇನು ?ಹೀಂಗ ಬಡಿಸಿಕೊಳ್ಳುವುದು.

(ಸ್ವ)ಆಕೀ ಬಡಿಯುವಾಗ ಹಂಗ ನಿಂತೈತಿ ನೋಡ ಕೋಣನಂಗ.

ಕೌಶಿಕ : ಏನೇ, ಇವುಗಳನ್ನು ಮುಚ್ಚಿಕೊಂಡು ಹೋಗೆಂದರ, ಇಲ್ಲದ ಶಿಫಾರಸು ಮಾಡಿದಿ.ಇವಳಿಗೇಕೆ ಅಂಜಿಕೆ, ಇನ್ನಾದರೂ ತೆಗೆದುಕೊಂಡು ಹೋಗು.

ಚಾರುಮತಿ : ಎಲ್ಲಿಗೆ ಹೋಗುವುದು ?

ಕೌಶಿಕ : ಅದನ್ನೆಲ್ಲ ಕೇಳಿ ಮಾಡುವುದೇನು ?