ಚಾರುಮತಿ : (ಪದ)

ಪರನಾರಿ ವ್ಯಸನವ ಬಿಡು ಬಿಡು ಪ್ರಿಯಾ
ನಾಚಿಕೆ ಇಲ್ಲೇನು ನಿನಗೆ ತುಸು
ನಾಚಿಕೆ ನಾಚಿಕೆ ಇಲ್ಲೇನೋ ನಿನಗ ॥ಪಲ್ಲವಿ ॥

ಅರಸನಾಗಿರುವ ಜನರೊಳು ಮೆರೆಯುವೆ
ದುರುಳ ಕಾರ್ಯವ ಮಾಡುತಲಿರುವೆ
ಊರ ತರುಣಿಯ ಕಾಣುತಲಿ
ಪರತರ ಧರ್ಮವ ನೀಗುತಲಿ
ಸರಿಯೇನು ಈ ಪಾಪದ ಮನವ
ಸೆರಗೊಡ್ಡಿ ಬೇಡುವೆ ರಮಣಾ
ಛೇ ಬಿಡು ಬಿಡು ನಿನ್ನ ವ್ಯಸನಾ ॥

ಕೌಶಿಕ : (ಪದ)

ಬಿಡವೇನಾ ಹೆಣ್ಣಿನ್ನ ಚೆಲ್ವ ಮಡದಿಯೇ
ಬಿಡದೀ ಎನ್ನ ಜೀವಾ ತಡೆಯಲು ನಾ
ತಡಮಾಡದೆ ಕೊಡುವೆನು ರಾಜ್ಯವನಾ
ತಡೆಯಲು ನಿನ್ನ ಹೊಡೆದಟ್ಟುವೆ ಗಡ

ಚಾರುಮತಿ : ಓಹೋ ! ರಾಜಕುಲದಲ್ಲಿ ಹುಟ್ಟಿ ಇಂಥ ಪಾಪದ ಕೆಲಸಕ್ಕೆ ಕೈ ಹಾಕುವದಕ್ಕೆ ನಿಮಗೆ ನಾಚಿಕೆ ಬರುವುದಿಲ್ಲವೆ ? ನೀವು ರಾಜರು. ಹೆಂಗಸನ್ನು ನೋಡುತ್ತ ಅವರ ಬೆನ್ನು ಹತ್ತಿ ರೀತಿ ನಡತೆ ಧರ್ಮ ಬಿಟ್ಟುಕೊಟ್ಟು ನಡೆಯಲಿಕ್ಕೆ ಹತ್ತಿದರ.ನಿಮ್ಮ ಮಾತು ಕೇಳಲಾಗದು ಅಂತಾ ಪ್ರಜೆಗಳೆಲ್ಲರೂ ಒಟ್ಟುಗೂಡಿ ನಿಮ್ಮನ್ನು ದೂಡಿ ಬಿಟ್ಟರೆ ನಿಮ್ಮ ಕಿಮ್ಮತ್ತು ಉಳಿದೀತೇನು ? ಎಂಥಾ ರಾಜ, ಅಂಥಾ ಪ್ರಜೆ. ಅಂದರೆ ರಾಜರಂತೆ ಪ್ರಜೆಗಳು ಅಂಬುವ ನ್ಯಾಯದಂತೆ ನೀವು ಯಾವಾಗಲೂ ಪ್ರಜೆಗಳಿಗೆ ಕೆಡಕು ಮಾಡಲಿಕ್ಕೆ ಹತ್ತಿರುವಿರಿ.ಇದನ್ನೆಲ್ಲಾವಿಚಾರಸದೇ ಈ ಕೆಲಸಕ್ಕೆ ಕೈ ಹಾಕಿದ್ದೀರಿ. ಇದು ಅಲ್ಲದೇ ಪರ ಸ್ತ್ರೀಯರನ್ನು ಕೆಣಕಿದರೆ ನಿಮ್ಮ ಪರಿಣಾಮವೇನಾದೀತು ಎಂಬುದನ್ನು ವಿಚಾರ ಮಾಡಿಕೊಂಡು ಇಂಥ ಹುಡುಗಾಟಿಕೆಯನ್ನು ಬಿಟ್ಟು ಬಿಡಿ.

ಕೌಶಿಕ : ಏನೇ, ನಾನು ಮೊದಲೇ ಎಲ್ಲಾ ವಿಚಾರಿಸಿಕೊಂಡು ಆ ಮಹಾದೇವಿಯನ್ನು ಕೇಳುವುದಕ್ಕೆ ಕೈ ಹಾಕಿರುವೆನು.ಪ್ರಜೆರೆಲ್ಲಾ ಯಾರು ?ನನ್ನನ್ನೇನು ಮಾಡುತ್ತಾರೆ ? ಸಿಂಹನ ಮುಂದೆ ನಾಯಿಗಳ ಆಟವೇನಾದರೂ ನಡೆಯುತ್ತದೇನು ?ನಾನು ಅಂಥ ಸಮರ್ಥನು.ಇಲ್ಲದಿದ್ದರೆ ಪ್ರಜೆರೆಲ್ಲ ನನ್ನ ಕಾಯಿದೆ ಪ್ರಕಾರ ಹೇಗೆ ನಡೆದಾರು ! ಇಂಥಾದ್ದನ್ನೆಲ್ಲಾ ನನ್ನ ಮುಂದೆ ಹೇಳಬೇಡಾ. ಆ ಮಹಾದೇವಿಯನ್ನು ಬಿಡುವುದಿಲ್ಲಾಂತಪಂಥ ಮಾಡಿದ್ದೇನೆ.ನೋಡು, ನಿನ್ನ ಕೆಲಸವೆಷ್ಟಿರುವುದೋ ಅಷ್ಟು ಮಾಡಿಕೊಂಡಿರು, ಹೋಗು, ಇಲ್ಲವಾದರೆ ನಿನ್ನ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ನೋಡು.

ಚಾರುಮತಿ : (ಪದ)

ಛೇ ! ಏನಿದು ನಿಮಗಿದು ಪಂಥಾ
ಬಿಡದಿರು ಮಾರ್ಗವನು ನೀ ಕಾಂತಾ ॥ಪಲ್ಲವಿ ॥

ಪರನಾರಿಯ ತಡವುದು ಪಾಪ
ವರಮೋಕ್ಷಕ್ಕೆ ಮಾಡ್ವದು ಲೋಪ
ನರಜನ್ಮವಿದು ಅಪರೂಪ
ಅರವಿರಲಿ ನಿಮಗಿದು ಭೂಪಾ
ಜ್ಞಾನವೆಂಬ ಬೆಂಕಿಯನಿಟ್ಟು
ನಾನೆಂಬ ಹಂಬಲ ಸುಟ್ಟು
ನೀ ಇಂಥಾ ದುರ್ವ್ಯಸನವ ಬಿಟ್ಟು
ತಿಳಿದು ನೀ ಮುಕ್ತಿಯ ಮುಟ್ಟು ॥

(ಮಾತು) ಪ್ರಾಣ ಪ್ರಿಯಾ, ಅಲ್ಲದ ಕೆಲಸಕ್ಕೆ ಕೈ ಹಾಕಿ ಕೆಟ್ಟು ಹೋಗಬೇಡಾ.ಇದು ಹಿತ, ಇದು ಅಹಿತ ಎನ್ನುವುದನ್ನು ವಿಚಾರ ಮಾಡಬೇಕು. ಎರಡನೇ ಹೆಂಗಸರಿಗೆ ನೀನು ನನಗೆ ಹೆಂಡತಿಯಾಗೆಂದು ಕರೆದರೆ, ಆ ಹೆಂಗಸರು ನಿಮಗೆ ಶಾಪಕೊಟ್ಟರು ?ಆ ಶಾಪದಿಂದ ನಿಮಗೆ ಕೇಡಾಗಿ ಮುಂದೆ ನರಕಕ್ಕೆ ಗುರಿಯಾಗುವಿರಿ.ಈಗ ದೀಪವನ್ನು ಬಡಿಯುವ ಪತಂಗವು, ದೀಪವನ್ನು ಹಣ್ಣೆಂದು ಭಾವಿಸಿ, ತಿನ್ನಲು ಹೋಗಿ, ಸುಟ್ಟು ಸಾಯುವಂತೆ ನಿಮ್ಮ ಸ್ಥಿತಿಯಾದೀತು.ಇದನ್ನು ವಿಚಾರಮಾಡಿ ಕಾಲಕ್ಷೇಪ ಮಾಡಿರಿ.

ಕೌಶಿಕ : ಏನೇ, ದೀಪಕ್ಕೆ ಬಿದ್ದು ಸುಟ್ಟುಕೊಂಡು ಸಾಯುವಂತ ಕ್ಷುಲ್ಲಕ ಹುಳುವು ನಾನಲ್ಲ.ಅಪರೂಪವಾದ ಮಾನವ ಜನ್ಮಕ್ಕೆ ಬಂದಿರುವೆನು. ಆ ಮಹಾದೇವಿಯನ್ನು ತಂದು ಲಗ್ನ ಮಾಡಿಕೊಳ್ಳುತ್ತೇನೆ. ನೀನು ಸುಮ್ಮನೇ ಹತ್ತೆಂಟು ವಿಚಾರ ಹೇಳಬೇಡಾ.ನನ್ನ ಮೇಲೆ ನಿನ್ನ ಅಧಿಕಾರವಿಲ್ಲ.ಸುಮ್ಮನೆ ಹೋಗು ಅಲ್ಲದಿದ್ದರೆ ನಿನ್ನ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ನೋಡು.

ಚಾರುಮತಿ : ನೀನು ನನ್ನನ್ನೇನು ಮಾಡುತ್ತೀರಿ ?ನಿನ್ನ ಪರಿಣಾಮವು ನೆಟ್ಟಗಾಗುವುದಿಲ್ಲ ಅನ್ನಲಿಕ್ಕೆ ನಾನೇನೂ ಸಾಮಾನ್ಯ ಹೆಂಗಸಲ್ಲ.ನಿಮ್ಮ ಸರಿಸಮಾನಸ್ಕಂದರಾದ ರಾಜ ಮನೆತನದವಳಿರುತ್ತೇನೆ.ಇದೂ ಅಲ್ಲದೇ ಮಹಾದೇವಿಯನ್ನು ತರುತ್ತೇನೆ ತರುತ್ತೇನೆ ಅಂತಾ ಈ ರಾಜ್ಯದ ಸಂಪತ್ತನೆಲ್ಲಾ ಆಕೆಗೆ ಕೊಟ್ಟು ಹಾಳು ಮಾಡಲಿಕ್ಕೆ ಹತ್ತಿದರೆ, ನಿಮ್ಮನ್ನು ಹಾಗೆ ಬಿಡುವುದಿಲ್ಲಾಂತ ತಿಳಿದು ಬಿಡ್ರೀ.

ಕೌಶಿಕ : (ಪದ)
ನೀ ನನ್ನನು ಏನು ಮಾಡುವೆ ಕಾಂತೆ
ಆ ನಾರಿಯ ನಾ ತರುವುದು ಸತ್ಯ ॥ಪಲ್ಲವಿ ॥

ನಿನ್ನ ಮಾತಿಗೆ ಅಂಜುವೆನೇನು
ಎನ್ನ ಕಾರ್ಯವ ಮರೆಯುವೆನೇನು
ಎನ್ನ ರಾಜ್ಯವ ಕೊಡುವೆನು
ನನ್ನನ್ನು ಕೇಳುವರ‌್ಯಾರಲೆ ರಮಣಿ ॥

ಬಿಡಲಾರೆ ಮಹಾದೇವಿಯನ್ನ ರಮಣಿ
ತಡೆಯದೀಗ ಎನ್ನ ಪ್ರಾಣಾ
ಕಡು ಸಿಟ್ಟಾಗಿ ನುಡಿಯುವೆ ನೀನು
ಹೊಡೆದಟ್ಟುವೆ ತಿಳಿಯಲೆ ಕಾಂತೆ ॥

(ಮಾತು) ಏನೇ, ಮಹಾದೇವಿಯನ್ನು ಕರೆದುಕೊಂಡು ಬಂದರೆ ನಿನ್ನ ಮೇಲಿನ ಪ್ರೇಮ ಹೋದೀತೆಂದು ಹೊಟ್ಟೆಕಿಚ್ಚು ಮಾಡುವಿಯೇನು? ಹೌದೋ, ಅಲ್ಲವೋ ?ಕಂಡಂಗ ಮಾತಾಡಿ ನೀನು ನನಗೆ ಹೆದರಿಕೆ ಹಾಕಿದರೆ ನಾನೇನೂ ಹೆದರುವವನಲ್ಲ ಮತ್ತು ನೀನು ನನಗೆ ವಿಘ್ನವಾದರೆ, ನಿನ್ನನ್ನು ಮೊದಲು ರಾಜ್ಯ ಬಿಟ್ಟು ಹೊರಗೆ ಹಾಕಿ ಮುಂದೆ ನಿನಗೆ ತಿಳಿಯದಂತೆ ಮಾಡುತ್ತೇನೆ ನೋಡು.

ಚಾರುಮತಿ : ಆಗಲಿ ನಿಮ್ಮ ಮನಸ್ಸಿನೊಳಗೆ ಹಾಗಿದ್ದರೆ, ನನ್ನನ್ನು ಮೊದಲು ರಾಜ್ಯ ಬಿಟ್ಟು ಹೊರಗೆ ಹಾಕಿ.ಆಮೇಲೆ ನಿಮಗೆ ಬೇಕಾದಂತೆ ಮಾಡುವಂತ್ರೀ, ಹೇಳುತ್ತೇನೆ ಕೇಳ್ರೀ.

(ಪದ) ತರವಲ್ಲ ಬಿಡು ನಿಡು ಪರಹೆಣ್ಣಿನ ಫಲಾ
ಪರಿಪರಿ ಹೇಳುವೆನಿಷ್ಟು ನಿಮಗರಿವು ಹುಟ್ಟಲಿ ಶ್ರೇಷ್ಠಾ ॥ಪಲ್ಲವಿ ॥

ಪರಸತಿಗಾಗಿ ರಾವಣ ಕೀಚಕ ಧರೆಯೋಳುರುಳಿದ
ಚರಿತವ ಕೇಳಿ ಮರೆಯದೇ ನೀ ಕಲಿಯದೇ ನೀ
ಅರುಹೂವೆ ತಿಳಿದು ನೀ ನಿನ್ನೊಳು
ನರಜನ್ಮವಿದು ಜ್ಞಾನದ ಖಣಿ
ಇದು ಪುರುಷನೇ ಸುಳ್ಳಲ್ಲ ಬಿಡು
ಪರಸತಿಯ ಹಂಬಲ ಬಿಡು ॥

ಕೌಶಿಕ : (ಪದ)

ಮೀರಿದ ಸುಂದರಿ ಆ ಮಹಾದೇವಿ
ತಾಳೆನು ತಾಳೆ ತಾಳೆನು ತಾನು ॥ಪಲ್ಲವಿ ॥

ಚಾರುಮತಿ ಬಿಡು ಚಿಂತಿ
ಆ ನಾರಿಯ ತರುವುದು ಖಾತ್ರಿ
ಧರಣೀ ಪತಿನಾ ಸುಖಿಸುವೆ ನಿನ್ನೊಳು
ಸೈರಿಸು ನೀ ಕಮಲಾಕ್ಷಿ
ಶಿರಹರಿಸುವೆನು ಹರಣಾಕ್ಷಿ ॥

ಚಾರುಮತಿ : ಪ್ರಾಣನಾಥಾ, ದುಷ್ಟರನ್ನು ಸಂಹಾರ ಮಾಡಿ ಶಿಷ್ಟರನ್ನು ಕಾಪಾಡಿ ಧರ್ಮದ ರಕ್ಷಣೆ ಮಾಡುವುದರ ಸಲುವಾಗಿ ನಿಮ್ಮ ಕ್ಷತ್ರಿಯಕುಲವು ನಾಲ್ಕು ವರ್ಣಗಳಲ್ಲಿಯೇ ಪ್ರಸಿದ್ಧವಾಗಿದೆ.ಅದಕ್ಕೆ ಮಾನ ಹೋದ ಮೇಲೆ ಜೀವದಿಂದ ಏಕೆ ಇರಬೇಕು ?

ಮನುಷ್ಯನಾದ ಮೇಲೆ ಪ್ರಾಣ ಹೋದರೂ ಚಿಂತಿಯಿಲ್ಲ, ಮಾನ ಕಳೆದುಕೊಳ್ಳ ಬಾರದು, ಯಾಕೆಂದರೆ ಈ ಶರೀರವು ಕ್ಷಣಿಕವಾದುದು, ಮಾನವು ಸೂರ್ಯ, ಚಂದ್ರಾದಿಗಳು ಇರುವವರೆಗೂ ಇರುತ್ತದೆ. ಆದ್ದರಿಂದ ಪ್ರಾಣ ಹೋದರೂ ಚಿಂತೆಯಿಲ್ಲ. ಮಾನ ಕಾಯ್ದುಕೊಳ್ಳಬೇಕೆಂದು ಪಂಡಿತರು ಹೇಳುತ್ತಾರೆ.ಆ ಮಹಾದೇವಿಯ ಉಸಾಬರಿ ಇಂದಿಗೆ ಬಿಟ್ಟು ಬಿಡ್ರಿ.

ಕೌಶಿಕ : ಆ ಮಹಾದೇವಿಯ ಸಲುವಾಗಿ ಕೆಟ್ಟು ರಾಜ್ಯ ಭ್ರಷ್ಟನಾಗಿ ಮಾನ ಕಳೆದುಕೊಳ್ಳುವುದು ನನ್ನ ಅದೃಷ್ಟದೊಳಗಿದ್ದರೆ ಹಾಗೇ ಆಗಲಿ. ನಾನು ಆ ಮಹಾದೇವಿಯ ಉಸಾಬರಿ ಬಿಟ್ಟು ಮನೆಯೊಳಗೆ ಸುಮ್ಮನೆ ಕುಳಿತರೂ ಸಹಿತ ಆಗುವಂಥದು ಆಗದೇನು ಮಾಡೀತು? ನೀನು ಹೆಚ್ಚಿಗೆ ಹೇಳಬೇಡಾ ಸುಮ್ಮನೆ ಹೋಗು. ಇಲ್ಲದಿದ್ದರೆ ನಿನ್ನ ಕೈಕಾಲಿಗೆ ಸಂಕೋಲೆಯನ್ನು ಹಾಕಿಸಿಬಿಡುತ್ತೇನೆ ಅಂತಾ ತಿಳಿ.

ಚಾರುಮತಿ : ಅಷ್ಟಾದರೆ ಬಹಳ ಚಲೋ ಆಯಿತು.ಹಾಗೇ ಮಾಡಿರಿ. ಮೊದಲು ನನ್ನನ್ನು ತುರಂಗದೊಳಗೆ ಹಾಕಿಸಿ, ಆ ಮಹಾದೇವಿಯನ್ನು ಕರೆದುಕೊಂಡು ಬರುವಂತವರಾಗಿ.

ಕೌಶಿಕ : ಹೌದು, ಕರೆದುಕೊಂಡು ಬರುತ್ತೇನೆ.

ಚಾರುಮತಿ : ಆಕೆಯನ್ನು ತಂದು ಏನು ಮಾಡುತ್ತೀರಿ ?

ಕೌಶಿಕ : ಆಕೆಯನ್ನು ಲಗ್ನ ಮಾಡಿಕೊಳ್ಳುತ್ತೇನೆ.

ಚಾರುಮತಿ : ಆ ಮಹಾದೇವಿ ವೀರಶೈವಳು, ನೀವು ಕ್ಷತ್ರಿಯ ವಂಶದವರು, ನಿಮ್ಮನ್ನು ಆಕೆ ಮದುವೆ ಆಗಲು ಒಪ್ಪುವಳೇನ್ರೀ?

ಕೌಶಿಕ :  ಒಪ್ಪದೇ ಬಿಡುವಳೇ? ಒಪ್ಪದಿದ್ದರೆ ಜೋರಿನಿಂದ ವಶಮಾಡಿಕೊಳ್ಳುತ್ತೇನೆ.

ಚಾರುಮತಿ : ಜೋರಿನಿಂದ ವಶಮಾಡಿಕೊಳ್ಳಲು ಆಕೆಯೇನು ಸಾಮಾನ್ಯ ಹಣ್ಣಲ್ಲ.ಕೇವಲ ಸಂನ್ಯಾಸಿ ಇರುತ್ತಾಳೆ, ಕಣ್ಣು ಮುಚ್ಚಿ ಕಣ್ಣು ತೆರೆಯುವದರೊಳಗೆ ನಿಮ್ಮನ್ನು, ನಿಮ್ಮ ರಾಜ್ಯವನ್ನು ಶಾಪವೆಂಬ ಬೆಂಕಿಯಿಂದ ಸುಟ್ಟು ಬೂದಿ ಮಾಡಿಬಿಟ್ಟಾಳು.ಐಶ್ವರ್ಯ, ಕಾಮದ ಮದದೊಳಗೆ ಕಣ್ಣು ಮುಚ್ಚಿಕೊಂಡು ಅಡ್ಡಾಡಿಬೇಡಿರಿ, ದುಡುಕಬೇಡಿರಿ, ಸ್ವಲ್ಪ ತಿಳಿದು ಆಕೆಯ ಗೊಡವಿಗೆ ಹೋಗದೆ ಸುಮ್ಮನೆ ಇದ್ದು ಬಿಡ್ರಿ.

ಕೌಶಿಕ : ಹುಲಿಯ ಸಾಮರ್ಥ್ಯ ಇಲಿಗಳಿಗೆ ಬಂದೀತೇನು ?ಅದರಂತೆ ಶಾಪ ಕೊಡುವ ಶಕ್ತಿ ನಿಮ್ಮಂಥ ಹೆಂಗಸರಿಗೆ ಎಲ್ಲಿಂದ ಬರಬೇಕು? ಇಂಥ ಜಾಣ ಮಾತುಗಳನ್ನು ಬಿಡು.ನನ್ನ ಮುಂದೆ ನಡೆಯುವುದಿಲ್ಲಾಂತ ತಿಳಿದು ಬಿಡು.

ಚಾರುಮತಿ : ಏನ್ರೀ, ಹೆಂಗಸರಿಗೆ ಶಾಪ ಕೊಡುವ ಶಕ್ತಿ ಇಲ್ಲಾ ಅಂತೀರ‌್ಯಾ ?

ಕೌಶಿಕ : ಇಲ್ಲವೇ ಇಲ್ಲಾ.

ಚಾರುಮತಿ : ಏನ್ರೀ, ಎಂಥೆಂಥಾ ಗಂಡಸರೂ ಹೆಂಗಸರ ಶಾಪದಿಂದ ಹಾಳಾಗಿ ಹೋಗಿದ್ದಾರೆ.ನೋಡಿಕೊಂಡು ಮಾತಾಡ್ರಿ.

ಕೌಶಿಕ :  ಏನೇ, ಹೆಂಗಸರ ಶಾಪದಿಂದ ಯಾರಿಗೇನು ಆಗಿಲ್ಲಾ.ಸುಮ್ಮನೆ ಸುಳ್ಳು ಹೇಳಬೇಡಾ.

ಚಾರುಮತಿ : ಏನ್ರೀ ಹೆಂಗಸರ ಶಾಪದಿಂದ ಯಾರಿಗೇನೂ ಆಗಿಲ್ಲಾ ?

ಕೌಶಿಕ : ಯಾರಿಗೇನೂ ಆಗಿಲ್ಲಾ.

ಚಾರುಮತಿ : ಹಾಗಾದರೆ ಹೇಳುತ್ತೇನೆ ಕೇಳ್ರಿ.

(ಪದ) ಯಾರಿಗೇನೂ ಆಗದಿದ್ದರೆ ದಮಯಂತಿ ಶಾಪದಿಂದಾ
ಬೇಡನೊಬ್ಬ ಸುಟ್ಟು ಬೂದಿಯಾಕಾದಾ ನಿಮಿಷದೊಳಗೆ
ಇದ್ದು ಇಲ್ಲದಾದ ಗಂಡಸು ಆಗಿದ್ದವವನೂ ಭಸ್ಮವಾದನು
ಹೇಳಿರಿ ಎಲ್ಲಾ ತಿಳಿದು ಮಾಡುವುದ್ಯಾಕೆ ಸುಳ್ಳೇವಾದಾ ॥

ಹೆಂಗಸರ ಶಾಪದೊಳಗೆ ಜೀವ ಇಲ್ಲಾಂತ ಅವಾ
ದಮಯಂತಿ ಕೂಡ ಯಾಕ ವಾದಿಸಿದಾ
ಕಾಮನ ಕೂಡು ಅಂತಾ ಕಾಡಿದಾ
ಬುದ್ಧಿಯ ಕೇಳದಾದ ದಾರಿಯ ಬಿಡದಾದ
ತಿಳಿಯಲಿಲ್ಲ ಅವಗ ಕೆಟ್ಟ ಪ್ರಾಯದ ಅಬ್ಬರದಿಂದಾ ॥

ಘನಪತಿವೃತೆ ಅವಳು ನಳರಾಜನ ಹೆಂಡತಿಯು
ಭೂಮಿಯ ಮ್ಯಾಲೆ ಖ್ಯಾತಿ ಪಡೆದಂಥಾ ಯುವತಿಯು
ಅಂತಾಕಿಗೇನು ಕಾಲ ಬಂದಿತು ಅಂತ ವನವಾಸದಲಿ ಕೆಟ್ಟ
ಆಕೆಯ ಮೇಲೆ ಮಾಡಿದ ಮೋಸವನು ಅದರಿಂದ ಅವ ಸುಟ್ಟು ಬೂದಿಯಾದಾ ॥

(ಮಾತು) ಏನ್ರೀ, ಹೆಂಗಸರ ಶಾಪದಿಂದಾ ಯಾರಿಗೇನೂ ಆಗಿಲ್ಲಾ ಅಂತೀರಿ, ನಳರಾಜನ ಹೆಂಡತಿ ದಮಯಂತಿಗೆ ವನವಾಸ ಬಂದಾಗ ಆಕೆಗೆ ಒಬ್ಬ ಬೇಡರವನು ಗಂಟುಬಿದ್ದು, ಕಾಮಸುಖ ಕೊಡು ಅಂತಾ ಬಹಳ ಕಾಡಿದನು. ಆಗ ಆಕೆಯು ಬೇಕಾದಷ್ಟು ಬುದ್ಧಿವಾದ ಹೇಳಿದರೂ ಕೇಳದೆ ಮೈಮುಟ್ಟಲು ಹೋದನು.ಆಗ ಆಕೆಯು ತನ್ನ ಪತಿವೃತಾ ಧರ್ಮಕ್ಕೆ ಭಂಗ ಬರುತ್ತದೆಂದು ತಿಳಿದು ಸಿಟ್ಟಿಗೆದ್ದು, ನೀನು ಸುಟ್ಟು ಬೂದಿಯಾಗು ಎಂದು ಶಾಪಕೊಟ್ಟಳು.ಆಗ ಶಾಪದಿಂದ ಅವನು ಸುಟ್ಟು ಬೂದಿಯಾದನು.ಅಂದಮೇಲೆ ಹೆಂಗಸರ ಶಾಪದಿಂದ ಯಾರಿಗೇನು ಆಗಿಲ್ಲಾ.ಹಾಗಾದರೆ ಅವನು ಸುಟ್ಟು ಬೂದಿಯಾಕಾದ? ಇದನ್ನುಹೇಳಿ ಮುಂದೆ ಮಾತಾಡ್ರೀ.

ಕೌಶಿಕ : ಏನೇ, ಆ ದಮಯಂತಿ ಅಂದ್ರೆ ಸಾಮಾನ್ಯ ಹೆಣ್ಣಲ್ಲ.ಆಕೆ ಅನಸೂಯಾ, ಅರುಂಧತಿ, ಲೋಪಾಮುದ್ರೆಯರಂತೆ ಪತಿವೃತೆಯಿದ್ದಳು. ಆಕೆಯ ಶಾಪದಿಂದಾ ಆ ಬೇಡನು ಸುಟ್ಟು ಬೂದಿಯಾದನು.ಅವರಂತೆ ಕಲಿಯುಗದಲ್ಲಿ ಹೆಂಗಸರು ಯಾರೂ ಅಂಥವರಿಲ್ಲಾಂತ ತಿಳಿದು ಬಿಡು.

ಚಾರುಮತಿ : ಏನ್ರೀ, ಕಲಿಯುಗದಲ್ಲಿ ಅಂತಾ ಮಹತ್ವದವರು ಯಾರೂ ಇಲ್ಲೇನ್ರೀ ?

ಕೌಶಿಕ :  ಯಾರೂ ಎಲ್ಲ ನೋಡು.

ಚಾರುಮತಿ : ಆಕೆಯು ನರಮನುಷ್ಯಳು. ಬಹಳ ಚೆಲುವಿ, ಸುರೇಂದ್ರ ಹೆಂಗಸು ಇರುವಳು ನೋಡು.

ಚಾರುಮತಿ : ಛೇ, ಆಕೆ ನರಮನುಷ್ಯಳಲ್ಲಾ ಹೇಳುತ್ತೇನೆ ಕೇಳಿರಿ.

(ಪದ) ಪಾಪಿಗಳನ್ನು ಸುಟ್ಟು ಬೂದಿ ಮಾಡುವಂಥ
ದಾವಾಗ್ನಿ ಮಹಾದೇವಿ ಕೇಳಿರುವಳು ಮಹಾ ಅನುಭಾವಿ
ಆ ಸಂನ್ಯಾಸಿ ಮಾಡಲು ಕೋಪ ನಿನ್ನ ವಂಶವು ಉಳಿಯಲು ಬೂದಿ
ಸಾಧು ಸಜ್ಜನರಿಗೆ ಕೈದೀಪಾ, ಕೆಟ್ಟ ಜನರಿಗೆ ಕೊಡುವಳು ಲೋಪಾ
ಮೂರು ಲೋಕ ಸುಡುವಂಥ ಶಾಪಾ
ಮತಿವಂತಿ ಇರುವಳು ಭೂಪಾ ॥

(ಮಾತು) ಏನ್ರೀ, ಆ ಮಹಾದೇವಿಯ ಸಿಟ್ಟಿಗೆದ್ದರೆ, ಮೂರು ಲೋಕವನ್ನು ಸುಟ್ಟು ಬೂದಿ ಮಾಡುವಂಥ ಮನಸುಳ್ಳವಳಿರುವಳು. ಅಂಥಾಕಿಗೆ ನೀವು ನರಮನುಷ್ಯಳೆಂದು ತಿಳಿದು ಆಕೆಯನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕಂತ ಬೇತ ಮಾಡಿರುವಿರಲ್ಲಾ, ನಿಮ್ಮ ಪರಿಣಾಮವೇನಾದೀತು ?ಬೆಂಕಿಗೆ ಮುದ್ದು ಕೊಡಹೋದರೆ ಸುಡದೆ ಬಿಟ್ಟೀತೇ ? ನೀವು ಆಕೆಯ ಹತ್ತಿರ ಹೋದಿರೆಂದರೆ ನಿಮ್ಮ ಜೀವ ಉಳಿಯುವುದಿಲ್ಲ, ಆಕೆಯ ಶಾಪದಿಂದ ಸುಟ್ಟು ಬೂದಿಯಾಗಿ ಹಾರಿ ಹೋಗುತ್ತೀರಿ,ಆದ್ದರಿಂದ ಆಕೆಯ ಉಸಾಬರಿ ಬಿಟ್ಟು ರಾಜ್ಯಭಾರ ಮಾಡಿಕೊಂಡು ತಣ್ಣಗಿರ‌್ರಿ.

ಕೌಶಿಕ : ಏನೇ, ಆಕೆಯನ್ನು ತರುವುದನ್ನು ಬಿಡಿಸಬೇಕಂತ ನನ್ನ ಮುಂದೆ ಹತ್ತೆಂಟು ಸುಳ್ಳು ಸುದ್ದಿ ಹೇಳಬೇಡಾ, ಆ ಮಹಾದೇವಿಯ ಸಲುವಾಗಿ ನಾನು ಸತ್ತುಹೋದರೂ ಚಿಂತೆಯಿಲ್ಲಾ. ಸಾಯುವುದು ಒಮ್ಮೆ, ಹಗಲೆಲ್ಲ ಬೇರೆ ಸಾಯುವುದಿಲ್ಲ.ಆ ಮಹಾದೇವಿಯನ್ನು ಕೂಡದೇ ಬಿಡುವುದಿಲ್ಲಾ ಅಂತಾ ತಿಳಿದು ಬಿಡು, ಮತ್ತೆ ಹೇಳುತ್ತೇನೆ ಕೇಳು.

(ಪದ) ಸುಮ್ಮನೆ ಹೋಗ ನನ ಕಾಂತೇ
ಹೇಳುವೆ ಬಿಡು ನಿನ್ನ ಒಣಭ್ರಾಂತು ॥ಪಲ್ಲವಿ ॥

ದೇವಿಯ ಕೂಡಿ ನಾ ಘನಸುಖವ ಪಡೆಯುವೆನು ಛೇ ದುಷ್ಟೆ
ಚೆಲುವು ಯಾತಕ್ಕೆ ನಿನಗೆಷ್ಟು ಹೋಗು ನೀ ಅರಿಷ್ಟೆ
ಮನಸ್ಸಿಗೆ ಬಂದಂತೆ ನೀ ಆಡುತ್ತೀ ನೀ ಮತ್ತೆ ॥

ಚಾರುಮತಿ : (ಪದ)

ಇನ್ನೆಷ್ಟು ಹೇಳಲಿ ನಾನು
ಕೆಟ್ಟು ಹೋಗುವಿ ನೀ ಇನ್ನು
ಪದಭ್ರಷ್ಟನಾಗುವಿ ಇನ್ನು
ನಾನು ಅಂದದ್ದು ಏನು
ಪರಿನಾರಿಯ ಬಿಡು ಅಂದೇನು ॥

ಕೌಶಿಕ : (ಪದ)

ಹೋಗಲೇ ಕೆಟ್ಟ ವೈರೀ ನೀ
ಯಾತಕೆ ಹಲಬುವಿ ನೀನು
ಈ ಪರಿ ಮರುಗುತ ನೀ ಮನದೊಳು
ದೇವಿಗೆ ನಿನ್ನನ್ನು ದಾಸಿಯ ಮಾಡುವೆನು
ನಿನಗೇನೋ ಕೆಡಗಾಲ ಬಂದಿರುವುದು
ನೀ ತಿಳಿ ಮಾರಿ ದೇವಗಿರಿ ಬಸವೇಶನೆ ಬಲ್ಲ
ಸಾಕಿನ್ನು ನಡಿ ನಿನ್ನ ದಬ್ಬುವೆನು ನೋಡಲೆ ನಿನ್ನ
ಮಾನವನು ಕಳೆಯುವೆನು ನಾ ನಿನ್ನ ॥

(ಮಾತು) ಛೇ ! ದುಷ್ಟೇ, ಆ ಮಹಾದೇವಿಯನ್ನು ತರುವೆನೆಂಬ ಹೊಟ್ಟೆ ಕಿಚ್ಚೆನಿಂದ ಕಂಡ ಕಂಡ ಹಾಗೆ ಮಾತಾಡುತ್ತೀಯಲ್ಲಾ.ಯಾಕೆ ನಿನಗೆ ಹೇಗೆ ಕಾಣುವೆನು ?ಸುಮ್ಮನೆ ಹೋಗು ಅಂತಾ ಅಂದರೆ ಸ್ವಲ್ಪಾದರೂ ದಾದ ಮಾಡಲೊಲ್ಲಿ.ಈಗೇನು ಹೋಗುತ್ತೀಯೋ ಚೆಂದು ಹಿಡಿದು ನೂಕಲೇ ನಿನ್ನ, ನನ್ನ ಮುಂದೆ ನಿಲ್ಲಬೇಡಾ.

(ನೂಕುವನು). ಏ ದೂತಿ.

ದೂತಿ : ಏನ್ರೆಪಾ.

ಕೌಶಿಕ : ಇನ್ನಾದರೂ ಹೋಗಿ ಬಾ.ಆ ಪೀತಾಂಬರ, ಮುತ್ತಿನ ಸರವನ್ನು ಕೊಡುವೆನು ತಗೋ, ಈ ಕೆಲಸ ಮಾಡಿಕೊಂಡು ಬಾ ತಿಳಿಯಿತಿಲ್ಲೋ ದೂತಿ.

ದೂತಿ : ಹೂನ್ರೇಪಾ (ಹೋಗುವಳು).

ಅಂಕ : 3
(ಮಹಾದೇವಿಯ ಮನೆಗೆ ದೂತಿಯ ಪ್ರವೇಶ)

ದೂತಿ : (ಪ್ರವೇಶ ಮಾಡುತ್ತ) [ಸ್ವಗತ] ಏನ್ರವ್ವಾ, ನಮ್ಮ ರಾಜನಿಗೆ ಹುಚ್ಚು ಇನ್ನೂ ಬಿಟ್ಟಿಲ್ಲಾ.ಆ ಮಹಾದೇವಿಗಂದ್ರ ಬೇಡಿದ್ದು ಕೊಡತಾನ.ಈಗ ರಾಜ್ಯವನ್ನು ಬೇಡಿದರೂ ಸೈ ಕೊಡತಾನ. ಹೆಂಗಸು ಮಾಯೆ, ಗಂಡಸು ನಾಯಿ ಅಂತಾರಲ್ಲಾ ಅದೇನೂ ಸುಳ್ಳಲ್ಲ.ಆ ಮಹಾದೇವಿಯನ್ನು ಯಾವಾಗ ನೋಡೇನೋ ಅಂತಾ ಆಕೆಯನ್ನು ಕರೆದುಕೊಂಡು ಬಾ ಅಂತ ಒಂದೇ ಸಮನ ಗಂಟು ಬಿದ್ದಾನ.ಈ ಸಾಮಾನುಗಳನ್ನೆಲ್ಲ ಕೊಟ್ಟಾನ.ಇದರಾಗ ನಾನು ಕುಂಟಲಿತನದ ಕಸಬು ಮಾಡದಿದ್ರ ತೀರಿಹೋತಲ್ಲ.ಇದರಾಗ ಅರ್ಧಗಪ್ಪ ಮಾಡಿದೆ ನಂದ್ರ ಸಾಯೋತನಕ ಬೇಕಾದಾಂಗ ಕುಂತು ಉಣ್ಣಬಹುದು.ಇನ್ನೇನೈತಿ ?ರಾಜಾಗಂತೂ ಹೊಡತಾ ಹಾಕಿದೆ.ಆ ಮಹಾದೇವಿಗೆನೋಡಿ ಮಳ್ಳಮಾಡಿ ಕಬೂಲಿ ಮಾಡಿಸಿದೆ ಅಂದ್ರ ತೀರಿ ಹೋಯಿತು.ಮಹಾದೇವಿ ಮನೀತನಕಾ ಹೋಗತೇನಿ.(ಪ್ರಕಟ) ಮಹಾದೇವಿ… ಮಹಾದೇವಿ… ಮನಿಯೊಳಗೆ ಇರುವಿಯೇನು ?

ಅಕ್ಕಮಹಾದೇವಿ : ಯಾರವರು ? ಇದ್ದೇನೆ ಬರ‌್ರಿ.

ದೂತಿ : ನಾನು ಊರಾನ ಬಡವಿ ಬಂದಿದ್ದೇನವ್ವಾ.

ಅಕ್ಕಮಹಾದೇವಿ : ಛೀ ! ಏನ ಬಾರವ್ವ ರಾಜ್ಯ ಕಾರಭಾರ ನಿನ್ನದೆ ಅದೆ.ಅಂದಮೇಲೆ ನೀ ಹ್ಯಾಂಗ ಬಡವಿ? ಇನ್ನು ನಾವು ಬಡವರವ್ವಾ !

ದೂತಿ : ನಾ ಎಂಥಾ ರಾಜ್ಯ ವಾಡೇದಾಗ ಅಡ್ಡಾಡುವಾಕಿ ?ನನಗೆ ದಾಸಿ ದಾಸಿ ಅಂತಾರ, ಹೇಳಿದವರ ಮಾತು ಕೇಳೊ ಕೆಲಸ ನನ್ನದು.ನಿನ್ನ ಬಾಯಿಮಾತು ಖರೇ ಆಗಲೆವ್ವಾ.ಆಗೇ ಬಿಟ್ಟೆತೆ. ರಾಜಾನೂ ನಮ್ಮವನೇ, ಅದ್ರ ರಾಜ್ಯಾ ಸಹಿತ ನಮ್ಮದಾತು ಹೌದಲ್ಲೊ ?ನೀ ಹೇಳಿದಾಂಗ, ನನಗ ಸಾವುಕಾರಕಿ ಬಂದು ಜಂಭ ಹೆಚ್ಚಾಗಿ ನಿನಗೀಟು ಕೊಡಬೇಕಂತ ಬಂದೇನಿ.ಇನ್ನೇನು ನಿನ್ನ ನಸೀಬು ತೆರೆಯಿತು ಅಂತಾ ತಿಳಿದು ಬಿಡು.

ಅಕ್ಕಮಹಾದೇವಿ : ಅದೇನವ್ವಾ, ಮತ್ತS ಹಂಗ ಅಂದ್ರ ನನಗೇನು ತಿಳಿಯಬೇಕು ?

ಅಕ್ಕಮಹಾದೇವಿ : ತಿಳಿದೇನ ಮಾಡೀತು ! ನಿನ್ನ ಬಡವನ ನೋಡಿ ನೋಡಿ ನನ್ನಜೀವ ಮರುಗಿ ನಿನ್ನನ್ನು ಸಾವುಕಾರ್ತಿ ಮಾಡಬೇಕಂತಾ ಬಂದೇನಿ ನೋಡು.

ಅಕ್ಕಮಹಾದೇವಿ : ನೋಡು, ಪಂಡಿತರು ಹೇಳುತಾರ, ನನ್ನ ಹಣೆಯಲ್ಲಿ ಎಷ್ಟು ಬರೆದಿದಿಯೋ ಅಷ್ಟೇ, ಕಾಡಿನಲ್ಲಿದ್ದರೂ ಅಷ್ಟೇ.ಸುವರ್ಣಾಮಯವಾದ ಮೇರುವಿನಲ್ಲಿದ್ದರೂ ಅಷ್ಟೇ. ಈಗ ಒಂದು ಹರವಿಯನ್ನು ತೆಗೆದುಕೊಂಡು ಬಾವಿಯಲ್ಲಿ ಮುಳುಗಿಸಿದರೂ ಅಷ್ಟೇ.ಸಮುದ್ರದಲ್ಲಿ ಮುಳುಗಿಸಿದರೂ ಅಷ್ಟೇ.ಅದರಂತೆ ನನ್ನ ನಸೀಬು ಇದ್ದಂತೆ ಆದೀತು.ಅದಕ್ಕೆ ನೀನೇನು ಮಾಡುತ್ತೀ ?

ದೂತಿ : ಏನೆ, ನೀ ಇಷ್ಟಕ್ಕ ಎಷ್ಟು ಶಾಸ್ತ್ರ ಹೇಳದಿ ?ನನಗೆ ನಿನ್ನನ್ನು ಸಾವುಕಾರ್ತಿ ಮಾಡಲು ಆಗಾಕಿಲ್ಲ ?

ಅಕ್ಕಮಹಾದೇವಿ : ಏನವ್ವ ಮನುಷ್ಯರ ಕಡೆಯಿಂದ ಹ್ಯಾಗೆ ಆದೀತು ?ದೇವರು ಮಾಡಿದರೆ ಆದೀತು!

ದೂತಿ : ದೇವರು ಏನ ಮಾಡತಾನ.ಗುಡಿಯಾಗ ಕುಂತು ಬಿಟ್ಟಾನ, ಹತ್ತು ಸಾವಿರ ಕೊಡಲ್ಲಿ ಇಪ್ಪತ್ತು ಸಾವಿರ ಕೊಟ್ರ ನೀನೇ ಎಲ್ಲಾ ಆಗುವಿ ನೋಡು.

ಅಕ್ಕಮಹಾದೇವಿ : ಹಾಗಾದರೆ ಕೊಟ್ಟರೆ ಕೊಡವ್ವಾ.

ದೂತಿ : ತಗೋಳವ್ವ ಇವನ್ನ (ಕೌಶಿಕನು ಕಳಿಸಿದ ಚಿನ್ನದ ಪೋಷಾಕು ಕೊಡುವಳು).ಇದೇನು ಹತ್ತು ಸಾವಿರ ಏನು ಇಪ್ಪತ್ತು ಸಾವಿರ ಆದಾವು ನೋಡು.

ಅಕ್ಕಮಹಾದೇವಿ : ದೂತಿ, ಇವನ್ನೆಲ್ಲಾ ಎಲ್ಲಿಂದ ತಂದೆ ?

ದೂತಿ : ಯಾಕವ್ವ ಇದು ನಮ್ಮ ಮನಿಯಾಗ ಇರಬಾರದೇನು ?

ಅಕ್ಕಮಹಾದೇವಿ : ಅಲ್ಲವ್ವ ಇವು ರಾಜರಿಗೆ ಸಲ್ಲತಕ್ಕಂಥಾ ಪೋಷಾಕುಗಳು.ಇವು ನಿಮ್ಮ ಮನೆಯಲ್ಲಿ ಹೇಗೆ ಬಂದಾವು ?

ದೂತಿ : ಅದೆಲ್ಲಾ ಹಕೀಕತ್ತು ನಿನಗ್ಯಾತಕ್ಕ ಬೇಕು.ಬೇಕಾದರೆ ತಗೋ, ಬೇಡವಾದರೆ ಬಿಡು.ನಮ್ಮ ಬದುಕು ನಮಗೇನೂ ಬೇಸರವಿಲ್ಲಾ ನಾನು ಹೋಗುತ್ತೇನೆ.

ಅಕ್ಕಮಹಾದೇವಿ : ಹಾಗಾದರೆ ಹೋಗವ್ವಾ.

ದೂತಿ : ನಿನಗೇನು ಹುಚ್ಚು ಹಿಡಿದೈತೇನವ್ವಾ, ಕರೆದು ಹೆಣ್ಣು ಕೊಟ್ರ ಅಳಿಯಾಗ ಮಲರೋಗ ಅಂತ ಹಂಗ ಮಾಡಬೇಡಾ. ತೆಗೆದುಕೋ ಸುಮ್ಮನೇ.

ಅಕ್ಕಮಹಾದೇವಿ : (ಪದ)

ಬೇಡವ್ವ ನಮಗಿಂಥ ಒಡವಿ ವೈಯಾರ
ಇದು ಯಾಕ ಜರತರ ಶಿವಶರಣರು ಕೊಟ್ಟಾರ ಬಹಿಷ್ಕಾರ
ಹೊನ್ನು, ಹೆಣ್ಣು ಕಣ್ಣಿಗೆ ಬಹು ಸುಂದರ
ದೇಶಕ್ಕೆ ಮೆರೆಯುವ ದೇವಗಿರಿ ಗ್ರಾಮ ಪೂರಾ
ಬಸವಣ್ಣನ ದಯೆ ಇರುವುದು ನಮಗೆ ಪೂರಾ

ಇವೇನೂ ನನಗೆ ಬೇಡಾ. ಇವನ್ನು ಅರಸನು ನೋಡಿದನೆಂದರೆ, ತುಡುಗುಮಾಡಿ ತಂದಿರುವಿ ಅಂತಾ ನಮ್ಮನ್ನು ತುರಂಗಕ್ಕೆ ಹಾಕಿಸ್ಯಾನು.ಇವೇನೂ ಬೇಡ ನನಗೆ.

ದೂತಿ : ಯಾರು ತುರಂಗದಾಗ ಹಾಕಿಸುತ್ತಾರೆಂದು ಹೇಳಿದಿ ?

ಅಕ್ಕಮಹಾದೇವಿ : ಈ ಊರ ಅರಸು.

ದೂತಿ : ಅವನs ಕೊಟ್ಟು ಕಳಿಸ್ಯಾನ ನೋಡವ್ವ

ಅಕ್ಕಮಹಾದೇವಿ : ರಾಜನು ಕೊಟ್ಟು ಕಳಿಸಿರುವನೇನು ?

ದೂತಿ : ಹೌದವ್ವ.

ಅಕ್ಕಮಹಾದೇವಿ : ನನಗ್ಯಾಕೆ ಇವೆಲ್ಲ ?

ದೂತಿ : ಅದೆಲ್ಲಾ ನನಗೇನು ಗೊತ್ತವ್ವ.

ಅಕ್ಕಮಹಾದೇವಿ : ಹಾಗಾದರೆ ತಾರವ್ವ (ತೆಗೆದುಕೊಂಡು) ಹೋಗವ್ವ ಇನ್ನು.

ದೂತಿ : ಹಾಗೇ ಹೋಗುವುದಿಲ್ಲವ್ವ.

ಅಕ್ಕಮಹಾದೇವಿ : ಮತ್ತೆ ಹೇಗೆ ಹೋಗಬೇಕಂತಿ ?

ದೂತಿ : ಮುಂದೇ

ಅಕ್ಕಮಹಾದೇವಿ : ಮುಂದೇನವ್ವಾ.

ದೂತಿ : ಇವು ಯಾತಕ್ಕೆ ಬಂದಾವಂತಾ ತಿಳಿದಿ.

ಅಕ್ಕಮಹಾದೇವಿ : ಇವು ಯಾತಕ್ಕೆ ಬಂದಿರುವವು.

ದೂತಿ : ವಿಚಾರ ಮಾಡಿನೋಡು, ನೀನು ಸಂನ್ಯಾಸಿ ಅದೀದಿ.

ಅಕ್ಕಮಹಾದೇವಿ : (ವಿಚಾರ ಮಾಡಿ) ಏನೇ, ಈಗ ತಿಳಿಯಿತು ಬಿಡು, ಅರಸನು ಇವನ್ನು ಯಾತಕ್ಕೆ ಕೊಟ್ಟು ಕಳಿಸಿರುವನೆಂದರೆ, ನಾನು ಸಂನ್ಯಾಸಿ ಇದ್ದೇನೆ.ಇವನ್ನು ಸುಟ್ಟು ಬೂದಿಮಾಡಿ ಪ್ರೀತಿಯಿಂದ ಹಚ್ಚಿಕೊಳ್ಳಲಿಕ್ಕೆ ಕಳಿಸಿದ್ದಾನೆ.ಅದಕ್ಕೆ ನಾನು ಈಗೀಂದೀಗ ಇವನ್ನು ಅಗ್ನಿಗೆ ಆಹುತಿ ಕೊಡುತ್ತೇನೆ.ನೀನು ಇನ್ನು ಹೋಗು.

ದೂತಿ : ಏನಂದಿ ! ಇವನೆಲ್ಲ ಸುಡುತ್ತೀಯಾ ?

ಅಕ್ಕಮಹಾದೇವಿ : ಹೌದು ಇವನೆಲ್ಲ ಸುಡುತ್ತೇನೆ.

ದೂತಿ : ನಿಮ್ಮಪ್ಪರ ಇಂಥಾವು ನೋಡಿದ್ದನೇನು ?ರಾಜರು ಏನು ಹೇಳಿಕಳಿಸಿದರೆಂದರೆ, ಇವನೆಲ್ಲಾ ತಗೊಂಡು ನನ್ನ ಲಗ್ನವಾಗಂತ ಹೇಳಿ ಕಳಿಸ್ಯಾನ.ನಿನ್ನ ಹುಚ್ಚತನ ಎಲ್ಲಾ ಬಿಟ್ಟು ಬಿಡು. ನನ್ನ ಕೊಡ ಬಾ ಹೋಗೋನ.

ಅಕ್ಕಮಹಾದೇವಿ : ಛೀ ! ಹುಚ್ಚಿ, ಹಾಗೆಲ್ಲಾ ನಾನು ಗಂಡನನ್ನು ಮಾಡಿಕೊಳಳುವದಿಲ್ಲಾಂತ ನಿಮ್ಮ ರಾಜನಿಗೆ ಗೊತ್ತದೆ. ಇವನ್ನು ಸುಟ್ಟು ಬೂದಿಮಾಡಿ ಹಚ್ಚಿಕೊಳ್ಳಲೆಂದು ಕಳಸ್ಯಾನ.ಅದು ನಿನಗೆ ಹೇಗೆ ಗೊತ್ತಾಗಬೇಕು ?

(ಪದ) ಸುಟ್ಟು ಬೂದಿ ಮಾಡುವೆನೆಲ್ಲಾ
ಬಿಟ್ಟು ಹೋಗು ಇವನ್ನೆಲ್ಲಾ
ಪರಿಶುದ್ಧವಾದಂತಾ ಭಸ್ಮವ ಮಾಡಿ ಧರಿಸುವೆ
ಶಿವಸ್ತುತಿಯನು ಮಾಡಿ ಮರಗುವ
ಇದನೆಲ್ಲ ನೋಡಿ ಮರೆಯಾಗಿನ್ನು ನಿಲ್ಲದೆ ಓಡಿ ॥

ದೂತಿ : (ಪದ)

ಇಂಥ ಭೂಷಣವನ್ನು ಸುಡುವುದೆಂದರೆ
ಇಂಥ ಹುಚ್ಚಾಟತನವ ಮಾಡುವರೇ
ರುಗುವೆ ಇದನೆಲ್ಲ ನೋಡಿ
ಕೊಟ್ಟು ಬಿಡು ನನಗೆ

ಅಕ್ಕಮಹಾದೇವಿ : (ಪದ)

ಕೊಟ್ಟು ಬೇಡುವುದೆಂಥಾ ನಿನ್ನ ನಡತೆ
ಸುಟ್ಟು ಹೋದರೆ ನಿನಗ್ಯಾಕೆ ಚಿಂತೆ
ಬಿಟ್ಟು ಬಿಡೆನ್ನ ಈ ರೀತಿ
ಕೆಟ್ಟವಾದೀತು ನಡಿಯಿನ್ನು ದೂತಿ ॥

ದೂತಿ : ಏನೇ, ಹಾಂಗ : ಹೀಂಗ ಮಾಡಬೇಕಾದರೆ ನನ್ನ ಸಾಮಾನು ತಾ ತಗೊಂಡು ಹೋಗುತ್ತೇನೆ.

ಅಕ್ಕಮಹಾದೇವಿ : ನೀನು ಸುಮ್ಮನೆ ಹೋದರೆ ನಿನ್ನ ಗತಿ ನೆಟ್ಟಗಾಯಿತು.ಇಲ್ಲದಿದ್ದರೆ ನೆಟ್ಟಗಾಗಲಿಕ್ಕಿಲ್ಲ.ಯಾಕೆ ಏನಂದಿ? ಹೋಗುವಿಯೋ ಇಲ್ಲವೋ.ಇದನ್ನು ಕೊಡು ಅಂತಾ ನಾನೇನಾದರೂ ನಿಮ್ಮ ಮನಿಗೆ ಬಂದಿದ್ದೇನೇನು ?ನನಗೆ ಯಾತಕ್ಕೆಂದು ಕೊಟ್ಟು, ಇದನ್ನು ಕೊಟ್ಟ ಮೇಲೆ ಇದರ ಆಶೆ ನಿನಗ್ಯಾತಕ್ಕ ? ಇವು ಯಾವಾಗ ನನ್ನ ಸ್ವಾಧೀನ ಆದವೋ ಆಗ ತೀರಿತು.ನಾ ಸುಡುತ್ತೇನೆ.ಬೇಕಾದ್ದು ಮಾಡುತ್ತೇನೆ.ನೀನು ಇಲ್ಲಿ ನಿಲ್ಲಬೇಡಾ ಮನಿಗೆ ಹೋಗು.

ದೂತಿ : ನೀನು ಹೇಳುವುದಕ್ಕಿಂತಾ ಮೊದಲೇ ಹೋಗುತ್ತೇನೆ.ನೀನು ಇವನ್ನು ಸುಡುತ್ತೇನೆಂದೆಯಲ್ಲ.ಪಕ್ಕನೇ ಸುಟ್ಟುಗಿಟ್ಟಾಳು ಅಂತ ನಿಂತಿದ್ದೇನೆ.ಇವನ್ನು ಸುಡುವುದಿಲ್ಲಂತ ವಚನಕೊಡು.ಆಗ ಇಲ್ಲಿ ನಿಂತರೆ ಹೇಳುವಿಯಂತೆ.

ಅಕ್ಕಮಹಾದೇವಿ : ಹಾಗಾದರೆ ಈ ಉರಿಯೊಳಗೆ ಹಾಕಿ ಬಿಡುತ್ತೇನೆ.ನಿಲ್ಲು (ಎಂದು ಸುಡಲು ಹೋಗುವಳು)

ದೂತಿ : ಛೇ, ಬಿಡವ್ವ ಸುಡಬೇಡಾ, ಹಂಗ ನಿನಗ ತೋರಿಸಲಿಕ್ಕೆ ತಂದೇನಿ. ಆ ಹೊಲಸು ರಾಜಾ ಹೇಳಿದ್ದಕ್ಕೆ ತಂದೇನಿ.ಸುಡಬೇಡಾ, ತಾತಾ ನನ್ನ ಸಾಮಾನು.