ಅಕ್ಕಮಹಾದೇವಿ


ಪ್ರಭುದೇವರು ಅಕ್ಕಮಹಾದೇವಿಯ ಭಕ್ತಿ ವಿರಕ್ತಿಗಳನ್ನು ಲೋಕಕ್ಕೆ ತಿಳಿಸಿಕೊಡವ ಉದ್ದೇಶದಿಂದ ಉಡುತಡಿಗೆ ಬರುತ್ತಾನೆ.ಬಡಜಂಗಮನ ವೇಷದಲ್ಲಿ ಅವಳ ಸತ್ವಪರೀಕ್ಷೆಗೆ ತೊಡಗುತ್ತಾನೆ. ಅಕ್ಕಮಹಾದೇವಿಗೆ ಅವನ ಕಪಟವೇಷ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿ ಅವನೊಂದಿಗೆ ವಾದ ಮಾಡುವಳು.ಬಡಜಂಗಮನು ಶಿವನನ್ನು ನಾನಾ ರೀತಿಯಲ್ಲಿ ನಿಂದಿಸಿದರೆ ಮಹಾದೇವಿಯು ಪುರಾಣದಕಥಾ ಪ್ರಸಂಗಗಳನ್ನು ಹೇಳಿ ಶಿವಪಾರಮ್ಯವನ್ನು ಪ್ರತಿಪಾದಿಸುತ್ತಾಳೆ.ಪ್ರಭು ಕಪಟ ವೇಷಕಳಚಿ ಪ್ರಕಟಗೊಂಡು ಅವಳಿಗೆ ಆಶೀರ್ವಾದ ನೀಡಿ ಮುಂದೆ ಶ್ರೀಶೈಲದಲ್ಲಿ ಮತ್ತೆ ಭೆಟ್ಟಿಯಾಗೋಣವೆಂದು ಹೇಳಿ ಹೋಗುವನು.

ಕೌಶಿಕರಾಜನು ಮಹಾದೇವಿಯ ರೂಪಲಾವಣ್ಯಗಳಿಗೆ ಮನಸೋತು ಅವಳನ್ನು ಮದುವೆಯಾಗಲು ನಿರ್ಧಾರಿಸಿದಾಗ ಅವನ ರಾಣಿ ಚಾರುಮತಿ ಪರಸ್ತ್ರೀ ವ್ಯಾಮೋಹ ಒಳ್ಳೆಯದಲ್ಲವೆಂದು ತನ್ನ ಗಂಡನಿಗೆ ಬುದ್ಧಿ ಹೇಳುವಳು.ಕೌಶಿಕ ಅವಳ ಹಿತವಚನಗಳಿಗೆಕಿವಿಗೊಡಲಿಲ್ಲ.ಮಹಾದೇವಿ ಕೌಶಿಕನ ಅಪೇಕ್ಷೆಯನ್ನು ನಿರಾಕರಿಸಿದಾಗ ಅವನು ಸೈನಿಕರನ್ನು ಕಳಿಸಿ ಬಲಾತ್ಕಾರದಿಂದ ಎಳೆದುತರಿಸುವ ಹೆದರಿಕೆಯೊಡ್ಡುವನು. ಮಹಾದೇವಿ ಅವನಿಗೆ ಬುದ್ಧಿಕಲಿಸಬೇಕೆಂದು ಅರಮನೆಗೆ ಬಂದು ಶಿವಭಕ್ತಿಯೆಂಬ ಬೆಂಕಿಯಲ್ಲಿ ಕಾಮವನ್ನು ಸುಟ್ಟು ಹಾಕಿರುವ ತನ್ನ ಮೇಲಿನ ವ್ಯಾಮೋಹ ಬಿಡಬೇಕೆಂದು ಕೌಶಿಕನಿಗೆ ಬುದ್ಧಿಹೇಳುತ್ತಾಳೆ. ಕೌಶಿಕನು ಇಂಥ ಬುದ್ಧಿವಾದ ಕೇಳುವ ಸ್ಥಿತಿಯಲ್ಲಿಲ್ಲದ ಕೌಶಿಕ ಕಾಮಾತುರನಾಗಿ ಮಹಾದೇವಿಯನ್ನು ಹಿಡಿದುಕೊಳ್ಳಲು ಹೋಗುವನು.ಮಹಾದೇವಿ ಮಾಯವಾಗುವಳು. ಕೌಶಿಕನಿಗೆ ದಿಗ್ಭ್ರಮೆ. ಮತ್ತೆ ಪ್ರತ್ಯಕ್ಷಳಾದ ಮಹಾದೇವಿಯ ಸೀರೆ ಸೆಳೆಯಲು. ಮುಂದಾಗುತ್ತಾನೆ.ಎಷ್ಟು ಸೆಳೆದರೂ ಸೀರೆ ಮುಗಿಯಲೊಲ್ಲದು.ಅವನು ಬಿಡಲೊಲ್ಲ.ಸಿಟ್ಟಿಗೆದ್ದ ಮಹಾದೇವಿ ಶಾಪನೀಡುತ್ತಾಳೆ.ಕೌಶಿಕನ ಮೈಯ್ಯಲ್ಲೆಲ್ಲ ಉರಿ.ತಾಪತಾಳಲಾರದೆಬಿದ್ದು ಹೊರಳಾಡುತ್ತ ತನ್ನನ್ನು ರಕ್ಷಿಸಲು ಮಹಾದೇವಿಯಲ್ಲಿ ಬೇಡಿಕೊಳ್ಳುತ್ತಾನೆ.ಮಹಾದೇವಿಯ ಕರುಣೆಯಿಂದ ಉರಿಯತಾಪ ನಿವಾರಣೆಯಾಗುತ್ತದೆ.ಕೌಶಿಕನು ಪಶ್ಚಾತ್ತಾಪದಿಂದ ನೊಂದು ತನಗೆ ಲಿಂಗದೀಕ್ಷೆ ನೀಡಲು ಒತ್ತಾಯಿಸುತ್ತಾನೆ.ಶ್ರೀಶೈಲದಲ್ಲಿರುವ ಪ್ರಭುಲಿಂಗ ದೀಕ್ಷೆ ನೀಡುತ್ತಾನೆಂದು ತಿಳಿಸಿದಾಗ ಕೌಶಿಕನು ಸನ್ಯಾಸಿಯಾಗಿ ಶ್ರೀಶೈಲಕ್ಕೆ ಹೊರಡುವನು.

ಕೌಶಿಕನ ರಾಣಿ ಚಾರುಮತಿ ಅವನ ಶ್ರೀಶೈಲಯಾತ್ರೆಯನ್ನು ವಿರೋಧಿಸುತ್ತಾಳೆ.ಅವನು ಕರ್ತವ್ಯವಿಮುಖನಾಗಿ ಹೀಗೆ ವೈರಾಗ್ಯತಾಳಿ ಹೋಗುವದು ಸರಿಯಲ್ಲವೆಂದು ವಾದಿಸುವಳು.ಕೌಶಿಕ ಶ್ರೀಶೈಲಕ್ಕೆ ಹೊರಟೇ ಬಿಟ್ಟ.ಚಾರುಮತಿ ಬೇಟೆಯಾಡುವ ರಾಜಕುಮಾರನ ವೇಷದಲ್ಲಿ, ಋಷಿಯ ವೇಶದಲ್ಲಿ ಕೌಶಿಕನಿಗೆ ಭೆಟ್ಟಿಯಾಗಿ ಅವನನ್ನು ಸನ್ಯಾಸತ್ವದಿಂದ ಬಿಡಿಸಲು ವ್ಯರ್ಥ ಪ್ರಯತ್ನ ಮಾಡುವಳು.ಕೊನೆಗೆ ಗಂಡನನ್ನು ತನಗೆ ದಯಪಾಲಿಸಬೇಕೆಂದು ಚೆನ್ನಮಲ್ಲಿಕಾರ್ಜುನನ್ನು ಪ್ರಾರ್ಥಿಸುತ್ತ ಅನ್ನ ನೀರು ಬಿಟ್ಟು ಕಠಿಣ ತಪಸ್ಸನ್ನಾಚರಿಸುವಳು.ಅಲ್ಲಮಪ್ರಭು ಪ್ರತ್ಯಕ್ಷನಾಗಿ ಅವಳ ಆಸೆ ಈಡೇರಿಸುವ ಭರವಸೆ ನೀಡುತ್ತಾನೆ. ಅಕ್ಕಮಹಾದೇವಿಯ ಸೂಚನೆಯಂತೆ ಅಲ್ಲಮನು ಕೌಶಿಕನಿಗೆ ಲಿಂಗದೀಕ್ಷೆ ನೀಡಿ ನೀನು ನಿನ್ನ ರಾಜ್ಯಕ್ಕೆಹೋಗಿ ರಾಣಿಯೊಂದಿಗೆ ಜೀವನ ಮಾಡುತ್ತ ನಿನ್ನ ರಾಜಧರ್ಮದ ಕರ್ತವ್ಯ ನೆರವೇರಿಸು. ಎಂದು ಉಪದೇಶ ಮಾಡುವನು. ಮಹಾದೇವಿ ಮತ್ತು ಅಲ್ಲಮರುಕೌಶಿಕ : ಚಾರುಮತಿಯರ ಪುನರ್ ವಿವಾಹ ನೆರವೇರಿಸಿ ಆಶೀರ್ವಾದಿಸುವರು.ಕೌಶಿಕನು ಅವರಿಬ್ಬರನ್ನು ಭಕ್ತಿಯಿಂದ ಸ್ತುತಿಸುತ್ತಾನೆ.

ವೀರಶೈವ ಕಾವ್ಯ ಪುರಾಣಗಳಲ್ಲಿ ನಿರೂಪಿತವಾಗಿರುವ ಅಕ್ಕಮಹಾದೇವಿಯ ಚರಿತ್ರೆಗೆ ಭಿನ್ನವಾದ ಎಷ್ಟೊ ಅಂಶಗಳು ಈ ಸಣ್ಣಾಟದಲ್ಲಿದೆ.ಗ್ರಾಮೀಣ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಣ್ಣಾಟ ರಚಿಸಲು ಹೊರಟ ಕವಿಗೆ ಇಂಥ ಬದಲಾವಣೆಗಳು ಅನಿವಾರ‌್ಯವೆನಿಸಿದವು.ಇದನ್ನು ಶಿವಾನಂದಕವಿ 1945ರ ಸುಮಾರಿಗೆ ರಚಿಸಿದ್ದಾನೆ. ಪ್ರಸ್ತುತ ಪಠ್ಯ ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮದ ಪ್ರತಿಯಾಗಿರುವುದರಿಂದ ಹಾಡುಗಳಲ್ಲಿ ದೇವಗಿರಿ ಗ್ರಾಮ ದೇವತೆಗಳ ಹೆಸರುಗಳನ್ನು ಅಂಕಿತವಾಗಿ ಬಳಸಿಕೊಳ್ಳಲಾಗಿದೆ. ಜನಪದ ಸಾಹಿತ್ಯದಲ್ಲಿ ಇಂಥ ಪಾಠಾಂತರ ಸಾಮಾನ್ಯ.

ಸ್ತುತಿ
(ಕಥೆಗಾರ ಹಾಗೂ ಹಿಮ್ಮೇಳದವರು)

ಶ್ರೀ ವಿಘ್ನೇಶ್ವರಾಯನಮಃ
ಶ್ರೀ ದುರ್ಗಾದೇವಿನಮಃ
ಶ್ರೀ ಸರಸ್ವತೀನಮಃ
ಶ್ರೀ ಲಕ್ಷ್ಮೀನಮಃ
ಶ್ರೀ ಶಿವಬಸವೇಶ್ವರನಮಃ

ಶ್ರೀ ಮಹೇಶ್ವರಾ ಜನಮನಪ್ರಿಯಕರಾ
ಕಾಮಸಂಹರ ಶಿವಭವಶಂಕರ
ನಿತ್ಯನಿರಂಜನನೇ ಸತ್ಯನಿತ್ಮನೇ
ಸತ್ಯಸುಖವ ಕೊಡು ನಿತ್ಯದಿ ಭಜಿಪೆವು

ಗಿರಿಜಾರಮಣನೆ ದುರಿತನಿವಾರಣನೆ
ಪರತರ ಗುರುವೇ ಕರುಣಿಸು ಬೇಡುವೆ
ಚೆನ್ನಿಗಧಾಮನೆ ಪುಣ್ಯಪುನೀತನೆ
ಭಕ್ತಿಲಿ ಬೇಡುವೆ ಅಭಯವಕೊಡು
ಕಥೆಯಾಡುವೆ ಪಾರುಮಾಡು ವಿಘ್ನನಿವಾರಕನೆ

 

ಪದ
ಶರಣರ ಪಾದ ಯುಗಗಳನು
ನಿತ್ಯದಿ ಭಜಿಸುವೆ ಅವರನ್ನು
ಅವರ ಕರುಣದಿ ಸ್ತುತಿಸುವೆನು
ಅವರ ನಂಬಿ ನಾ ಪೊಗಳುವೆನು
ಉಡುತಡಿ ಮಹಾದೇವಿಯ ಚರಿತೆಯನು
ಸರಸನಾಟಕ ರೂಪದಿಂದಾ ಚಿತ್ರಿಸುವೆನು
ಅಲ್ಲಮಪ್ರಭುವಿನ ಲೀಲೆಯನ ವರ್ಣಿಸುವೆನು
ಶಿವಭಕ್ತಿಯ ಮಹಿಮೆಯ ಪೇಳುವೆನು
ಸಭಾದಲ್ಲಿ ಕುಳಿತಿರುವಂತಾ ಪಂಡಿತರೇ
ಚಿತ್ತವಿಟ್ಟು ಕೇಳಿರಿ ಚಮತ್ಕಾರಾ
ಮುಕ್ತಿಯಆಧಾರ ತತ್ವದ ಸಾರಾ
ಗಂಡುಮೆಟ್ಟು ದೇವಗಿರಿ ಜಾಹಿರಾ
ಅಲ್ಲಿ ಇರುವ ಶ್ರೀ ವಿಘ್ನೇಶ್ವರಾ
ಆತನ ದಯದಿಂದ ನಾ ಕತೆಗಾರ
ರಚಿಸುವೆ ಕಥನ ಮಾಡಿ ಮಜಕೂರಾ

ಅಂಕ : 1
 (ಅಲ್ಲಮಪ್ರಭುವಿನ ಪ್ರವೇಶ)

(ಅಲ್ಲಮಪ್ರಭು ಹಾಡುತ್ತ ರಂಗ ಪ್ರವೇಶ ಮಾಡಬೇಕು)

ಅಲ್ಲಮಪ್ರಭು : (ಪದ) ಜಗವನ್ದುರಿಸಲು ಬಂದೆನು ನಾನೀಗ

ನಿಗಮಾತೀತನು ಗುರು ಬಂದೆನಿಲ್ಲಿಗೆ॥ಪಲ್ಲವಿ ॥

ಶರಣರೆನ್ನಯ ಪ್ರಾಣ ಅವರೊಳೆನ್ನಯ ಕರುಣಾ
ಶರಣರ ನುಡಿಯನು ಹರಿಸುತಲಿ ಗಡಾ ॥
ಪರಿಭವದೊಳು ಬಿದ್ದ ನರರನ್ನು ಮಾಡಿ ಶುದ್ಧ
ಪರತರ ಧ್ಯಾನದಿಂದವರ ನೆನಿಸುತಲೀಗ ॥

(ಮಾತು) ಓಹೋ ! ಈ ಮಾಯಾ ಪ್ರಪಂಚದೊಳಗೆ ಬಿದ್ದು, ಅನಂತ ಕಾಲದಿಂದ ಒದ್ದಾಡುವಂತೆ ಮಾನವರ ಕಷ್ಟವನ್ನು ನೋಡಿ, ಅವರನ್ನು ಉದ್ಧಾರ ಮಾಡುವುದರ ಸಲುವಾಗಿ ಸಾಕ್ಷಾತ್ ಶಿವಸ್ವರೂಪರಾದಂಥ ಶಿವಶರಣರು ಈ ಮೃತ್ಯುಲೋಕದಲ್ಲಿ ಅವತಾರ ಮಾಡಿರುತ್ತಾರೆ.ಅವರ ಸೇವೆ ಮಾಡಿ, ಅವರಿಂದ ಜ್ಞಾನ ಪಡೆದುಕೊಂಡು ಭಕ್ತಿಯಿಂದಮುಕ್ತಿ ಹೊಂದಬೇಕು. ಅನರ್ಥ ಕಾಲ ಕಳೆಯಬಾರದು. ಯಾಕೆಂದರೆ,ಇದು ಅಶಾಶ್ವತವಾದ ಶರೀರವಿರುತ್ತದೆ ಎಂದು ತಿಳಿದುಕೊಂಡು, ಸ್ವಲ್ಪಾದರೂ ನಾಚಿಕೆ ಹಿಡಕೊಂಡು ಹಾದಿ ಹಿಡಿಯಬೇಕು.ಈ ಮನುಷ್ಯ ಜನ್ಮ ಹೇಗೆಂದರೆ ಬಂಗಾರದ ಖಣಿ ಇದ್ದಂತೆ ತಿಳಿಯಿರಿ.ನೆಲದೊಳಗೆ ಬಹು ದೂರದವರೆಗೆ ಇರುವ ದ್ರವ್ಯವನ್ನು ತೆಗೆದುಕೊಳ್ಳಬೇಕಾದರೆ ಅಂಜನವನ್ನು ಹಚ್ಚಿ ಒಬ್ಬ ಯಂತ್ರಗಾರನನ್ನು ಸಹಾಯಕ್ಕೆ ಕರೆದುಕೊಂಡು ಆ ದ್ರವ್ಯವನ್ನು ಹೇಗೆ ತೆಗೆದುಕೊಳ್ಳುತ್ತಿರೋ ಅದರಂತೆ ಜ್ಞಾನವೆನ್ನುವಂಥ ಅಂಜನವನ್ನು ಹಚ್ಚಿ, ಮಾಯೆ ಎನ್ನುವಂಥ ಕತ್ತಲೆಯನ್ನು ಓಡಿಸಿ, ಗುರು ಅನ್ನುವಂಥ ಮಂತ್ರಗಾರನ ಸಹಾಯದಿಂದ ತತ್ವ ಅನ್ನುವಂಥ ಭೂಮಿಯನ್ನು ಅಗೆದು, ನಿಜಾನಂದ ಎನ್ನುವಂತ ದ್ರವ್ಯವನ್ನು ತಕ್ಕೊಂಡು ಊಟ ಮಾಡಬೇಕು.ಅದರಿಂದ ಶಾಶ್ವತ ಸುಖ ಸಿಗುತ್ತದೆ.

ಎಲೈ ಮನುಷ್ಯ ಪ್ರಾಣಿಗಳೇ ಈ ಮನುಷ್ಯ ಜನ್ಮ ಹೋಯಿತೆಂದರೆ ಇನ್ನು ಮುಂದೆ ಸಿಗುವದು ದುರ್ಲಭವು.ಆದ್ದರಿಂದ ಇಂಥ ಅರಿವುಳ್ಳ ಜನ್ಮವು, ಆದಷ್ಟು ಪ್ರಯತ್ನ ಮಾಡಿ ಸಾಧು ಸತ್ಪುರುಷರಾದ ಶಿವ ಶರಣರ ಸೇವೆ ಮಾಡಿ ಅವರಿಂದ ಜ್ಞಾನ ಪಡೆದುಕೊಂಡು ಭಕ್ತಿಯಿಂದ ಮುಕ್ತಿ ಸಂಪಾದಿಸಬೇಕು.ಆದರೆ ನನ್ನ ಶಿಷ್ಯರೇ, ಹೀಗೆ ಮಾಡದೇ, ನನ್ನ ಹೊಲ, ನನ್ನ ಮನೆ, ನನ್ನ ಬದುಕು, ನನ್ನ ಬಾಳುವೆ ಅಂತಾ ಈಹೊಲಸು ಸಂಸಾರದ ಮೇಲೆ ಭ್ರಮೆಗೊಂಡು ಮಾಡಬಾರದ ಪಾಪವನ್ನು ಮಾಡಿ, ಕೇಳಬಾರದ ಕಷ್ಟವನ್ನು ಯಾಕೆ ಅನುಭವಿಸುತ್ತೀರಿ ?ಎಷ್ಟೋ ಪುಣ್ಯ ಮಾಡಿದಲ್ಲಿ ಇಂಥ ಅರಿವುಗಳ ಜನ್ಮ ಸಿಕ್ಕಿದೆ.ಇಂಥಅರಿವುಳ್ಳ ಜನ್ಮದಲ್ಲಿ ಒಣ ಡೌಲು ಮಾಡಿ, ಪಾತರಗಿತ್ತಿಯಂತೆಅತ್ತಿಂದಿತ್ತ ಇತ್ತಿಂದತ್ತ ಹಾರಾಡಿ ಹಾಳಾಗಬೇಡಿರಿ.

ಶಿವ ಶಿವಾ ! ಅಂಥಾ ಶಿವಭಜನೆ ಮಾಡಿ ಮುಕ್ತಿ ಸಾಮ್ರಾಜ್ಯವನ್ನು ಹೊಂದಿ ದಿವ್ಯಾನಂದವನ್ನು ಪಡೆದುಕೊಳ್ಳಿರಿ.

ದೂತಿ : (ಅಲ್ಲಮನನ್ನು ಕಂಡು) ಯಾರಪ್ಪಾ ಅಣ್ಣಾ ನೀನು, ನಿನಗುರ್ತು ಏನಾ ? ಬಂದ ಕಾರಣವೇನು ?

ಮೈಯಲ್ಲಿ ಕ್ಯಾವಿ ಅಂಗಿ
ಕೈಯಲ್ಲಿ ತಂಬಗಿ
ಬಗಲಾಗಿ ಚಿಗರಿಯ ಚರ್ಮಾ
ಕೊರಳಾಗ ರುದ್ರಾಕ್ಷಿಸರಾ
ಹಾಕಿಕೊಂಡು ಇಲ್ಲಾಕ ನಿಂತೀದಿ ?

ಏನೋ ಪಾದ್ರಿಸಾಬಾ ಈ ಮಂದಿಗೆಲ್ಲ ಏನಾರ ಹೇಳಿ, ಎಲ್ಲಾರಿಗೂ ದೀಕ್ಷಾ ಕೊಡಸಬೇಕಂತ ಬಂದೀದೇನ ?ನಿನ್ನೆಡಗಿವಿ ಕಿತ್ತೀತು, ನೆಟ್ಟಗ ಹೇಳು,

ಅಲ್ಲಮಪ್ರಭು : ಏನೇ ? ನಾನು ಆ ಪಾದ್ರಿ ಅಲ್ಲಾ ?

ದೂತಿ : ಹಾಗಾದರೆ ನೀನು ಯಾರು ?

ಅಲ್ಲಮಪ್ರಭು : ನಾನು ಅಲ್ಲಮನು.

ದೂತಿ : ಅಲ್ಲೊ, ಅಲ್ಲಾನೋ, ಮುಲ್ಲಾನೊ ?

ಅಲ್ಲಮಪ್ರಭು : (ಕಿವಿ ಹಿಡಿದು) ಏನೇ ಚೇಷ್ಟೆಯನ್ನು ಮಾಡುತ್ತೀಯಾ ನಾನು ಅಲ್ಲಮಪ್ರಭು ಇದ್ದೇನೆ ನೋಡು.

ದೂತಿ : ತಿಳಿಯಿತು ಬಿಡು, ತಿಳಿಯಿತು ಬಿಡು. (ಕಿವಿ ಬಿಡಿಸಿಕೊಳ್ಳುತ್ತ)

ಅಲ್ಲಮಪ್ರಭು : ಏನು ತಿಳಿಯಿತು ?

ದೂತಿ : ಅಲ್ಲಮಪ್ರಭುಸ್ವಾಮಿ ನಮ್ಮಪ್ಪ ಮಹಾದೇವ ಅನ್ನೋದು ತಿಳಿಯಿತು.

ಅಲ್ಲಮಪ್ರಭು : ದೂತಿ, ಹಾಗಾದರೆ ನಮಸ್ಕಾರ ಮಾಡು.

ದೂತಿ : ಅದೇಕೋ, ನೀನು ನನಗೆ ಗುರುಗಿರು ಏನು ?

ಅಲ್ಲಮಪ್ರಭು : ನಿನಗೊಬ್ಬಳಿಗೇಕೆ ?ಇಡೀ ಜಗತ್ತಿಗೇ ನಾ ಗುರು ಇದ್ದೇನೆ ನೋಡು.

ದೂತಿ : ಅದು ಹೇಗೆ ? ನೀವಾದರೂ ಎಂಥ ಗುರು ?ಏನೇನು ಮಾಡುತ್ತೀರಿ ಹೇಳು, ಕೇಳುತ್ತೇನೆ.

ಅಲ್ಲಮಪ್ರಭು : ದೂತಿ ಹಾಗಾದರೆ ಹೇಳಲಿಕ್ಕೇ ಬೇಕೇನು ?

ದೂತಿ : ಹೇಳಲಿಕ್ಕೇಬೇಕು.

ಅಲ್ಲಮಪ್ರಭು : ಹಾಗಾದರೆ ಹೇಳುತ್ತೇನೆ ಕೇಳು.

(ಪದ) ಅಲ್ಲಮಪ್ರಭುವರನಾನು ನಿತ್ಯನಿರಂಜನನೆ
ಕೇಳವ್ವ ದೂತೆ ತಿಳಿಸುವೆನೆಲ್ಲ ಉಕ್ತಿಯನು ॥ಪಲ್ಲ ॥

ಅಜಹರಿ ರುದ್ರನನ್ನು ಹುಟ್ಟಿಸಿ ಮೂವರನ್ನು
ಜಗದ ಕರ್ತನನ್ನ ಪಾಲಿಸುವೆನು ನಾನು
ಜಗದಾತ್ಮಕನು ನಾನು ಜಗದ ಸೂತ್ರಕನು ನಾನು
ಜಗಮನುದ್ಧರಿಸುವ ಸದ್ಗುರುವು ನಾನು
ಶರಣರ ಲೀಲೆಯ ಮಾಡಿ ಪರೀಕ್ಷೆಯ
ತೊಟ್ಟು ಈ ಲೋಕಕ್ಕೆ ಬಂದೆ ಕರುಣಿಸಲು.

(ಮಾತು) : ಏನೇ, ನಿರಾಕಾರವಾದಂತಾ ನಿರಂಜನ ಪರಬ್ರಹ್ಮ ವಸ್ತು ನಾನೇ ಅಂತಾ ತಿಳಿ.ನಾನು ಅನಾದಿ ಕಾಲದಲ್ಲಿಏನಾದರೊಂದು ಆಟ ಆಡಬೇಕಂತ ಸಂಕಲ್ಪ ಮಾಡಿಕೊಂಡು, ಈ ಜಗತ್ತನ್ನು ನಿರ‌್ಮಾಣ ಮಾಡುವುದು, ಸಲುಹುವುದು, ಸಂಹಾರ ಮಾಡುವುದು ಈ ಮೂರೂ ಕರ್ತರನ್ನು ಈ ಕೆಲಸಕ್ಕೆ ನೇಮಿಸಿ, ನಾನು ಸೂತ್ರಧಾರಕನಾಗಿ ಅನೇಕ ಬ್ರಹ್ಮಾಂಡಗಳನ್ನು ಗೊಂಬೆಗಳಂತೆ ಕುಣಿಸುತ್ತ, ನಾನಾ ಪ್ರಕಾರದ ಆಟವನ್ನುಆಡುತ್ತೇನೆ.ಇದು ಅಲ್ಲದೇ ಈ ಜಗತ್ತಿನ ಮೇಲೆ ಇರತಕ್ಕ ಶಿವಶರಣರ ಸತ್ವಪರೀಕ್ಷೆ ಮಾಡಿ, ಅವರ ಕೀರ್ತಿಯನ್ನು ಈ ಲೋಕದ ತುಂಬ ಹೆಚ್ಚಿಸಬೇಕೆಂದು ಸ್ವತಃ ನಾನೇ ಬೇರೊಂದು ರೂಪಧರಿಸಿಕೊಂಡು ಬಂದು, ಅವರಲ್ಲಿ ಕೂಡಿ ಲೀಲೆಯ ಮಾಡಿ, ಅವರ ಸತ್ವಪರೀಕ್ಷೆ ಮಾಡುತ್ತೇನೆ.ಇದು ಅಲ್ಲದೇ ಸಕಲ ಚರಾಚರವಸ್ತುಗಳಿಗೆಲ್ಲಾ ಆಧಾರ ಭೂತವಾದಂತಾ ನಿರಾಕಾರ, ನಿರ್ವಿಕಲ್ಪ, ನಿರಂಜನ, ನಿರಾಧಾರಿ, ಸಚ್ಚಿದಾನಂದ ಸ್ವರೂಪನಾದ ಪರಾತ್ಪರ ಜಂಗಮವಸ್ತು ನಾನೇ ಅಂತಾ ತಿಳಿ.ನನ್ನನ್ನು ಈ ನರಲೋಕದ ಜನರು ಅಲ್ಲಮಪ್ರಭು ಅಂತಾ ಹೆಸರಿಟ್ಟು ಕರೆಯುತ್ತಾರೆ.

ದೂತಿ : ಏನು ಸ್ವಾಮಿ, ನೀವು ಅಲ್ಲಮಪ್ರಭು ಅನ್ನುವದೊಂದು ತಿಳಿಯಿತು.ಬಾಕಿಯದೇನೂ ತಿಳಿಯಲಿಲ್ಲ, ಜಂಗಮ ಅನ್ನುವದೊಂದು ಸ್ವಲ್ಪ ತಿಳಿದಾಂಗಾಯಿತು.ಈ ಮಾತಿನ ಮೇಲಿಂದ ನೀವು ಜಂಗಮರುಅದಿರಿ ಅನ್ನುವಾಂಗ ಕಾಣತೈತಿ.ನೀವು ಜಂಗಮರು ಹೌದೇನ್ರಪಾ ?

ಅಲ್ಲಮಪ್ರಭು : ಹೌದು, ನಾನು ಜಂಗಮನಿದ್ದೇನೆ ನೋಡು.

ದೂತಿ : ನೀವು ಜಂಗಮರಾದರೆ ಈ ಎಡಗೈಯಾಗ ಜೋಳಿಗೆ ಹಾಕಿಕೊಂಡು ಬಲಗೈಯಾಗ ಬೆತ್ತವನ್ನು ಹಿಡಿದು, ಮನೆಮನೆಗೆ ಭಿಕ್ಷಾ ಅಂತ ಯಾಕ ಹೋಗುತ್ತೀರಪ್ಪಾ ?

ಅಲ್ಲಮಪ್ರಭು : ಏನೇ ದೂತೆ, ಸಂಸಾರ ಎನ್ನುವಂತ ಬಲೆಯೊಳಗೆ ಬಿದ್ದು, ಜ್ಞಾನವೆಲ್ಲವ ಮಣ್ಣುಗೂಡಿಸಿ, ಆಚಾರಗೆಟ್ಟು, ಅನಾಚಾರದಿಂದ ಭಿಕ್ಷೆ ಬೇಡಿ, ಹೊಟ್ಟೆ ತುಂಬಿಕೊಳ್ಳುವಂಥ ಹೀನ ಜಂಗಮನು ನಾನಲ್ಲ.ನಾನು ಎಂಥವನೆಂದರೆ, ಭಕ್ತಿ ಎನ್ನುವಂಥ ಜೋಳಿಗೆಯನ್ನು ಹಾಕಿ, ವೈರಾಗ್ಯ ಎನ್ನುವಂಥ ಬೆತ್ತವನ್ನು ಹಿಡಿದು, ಶಿವನ ಭಕ್ತರ ಹತ್ತಿರ ಹೋಗಿ ಶಿವಜ್ಞಾನ ಎನ್ನುವಂಥ ಭಿಕ್ಷೆ ಬೇಡಿ ತಂದು, ಶಿವಾಮೃತ ಎನ್ನುವಂಥ ದ್ರವ್ಯವನ್ನು ಊಟಾ ಮಾಡುವಂಥ ನಿರಾಭಾರಿ ಜಂಗಮ ನಾನು ಮತ್ತು ಶಿವನ ಭಕ್ತರಾದ ಶಿವಶರಣ : ಶರಣೆಯರ ಸತ್ವಪರೀಕ್ಷೆ ಮಾಡಿ ಅವರಿಗೆ ಸದ್ಗತಿಯನ್ನು ಕರುಣಿಸಿ ಉದ್ಧಾರ ಮಾಡುವಂಥ ಪರಮಗುರು ನಾನಿದ್ದೇನೆ.

ದೂತಿ : ಏನು ? ನೀವು ಶಿವಶರಣರಿಗೆ ಸದ್ಗತಿಯನ್ನು ಕೊಡುವುದರ ಸಲುವಾಗಿ ಬಂದಿರೆನ್ರೀ? ಹಾಗಾದರೆ ಈ ಮೊದಲು ಯಾವ ಯಾವ ಶರಣರ ಉದ್ಧಾರ ಮಾಡೀರಿ ಹೇಳ್ರಿ.

ಅಲ್ಲಮಪ್ರಭು : ದಾಸಿ ಹೇಳುತ್ತೇನೆ ಕೇಳು.

(ಪದ) ಕೇಳವ್ವಾ ದೂತಿ ಹೇಳುವೆನೆಲ್ಲ ವಾರ್ತೆಯನು
ಭಕ್ತಿಯ ಶೀಲವ ಭಕ್ತಿಯ ಮೆಚ್ಚುತ
ಮುಕ್ತಿಯ ಕೊಡುವಂಥ ವೀರರನ್ನ
ಸನಕುನಂದನ ಸನತ್ಕುಮಾರನ
ಮನಸಿಜನನ ಗೆದ್ದ ಪ್ರಭುವರ॥

ಹರಿಹರ ಮೆಲುಹಣ ರೇವಣ ಶಂಕರ
ಮರುಳ ಪಂಡಿತ ಜಕಣಾಚಾರ‌್ಯರ
ಪರಶಿವ ಭಕ್ತಿಯ ನೋಡುತ ಅವರ
ಪರತರ ಮುಕ್ತಿಯ ಕೊಟ್ಟ ಪ್ರಭುವರನಾನು ॥

ಉರಿಗಣ್ಣಿನ ಸಿದ್ಧರಾಮ ಶಿವಯೋಗಿ
ಪೂರಾ ಕಂಡನು ಲಿಂಗದ ಮಹಿಮೆಯ
ಅರಿಕೆಯ ಮಾಡಿ ಕೊಟ್ಟು ತ್ರಿಗುಣ
ರೂಪವನು ಮೆರೆಯುವ ಪ್ರಭುವರ ನಾನು ॥

(ಮಾತು) ಏನೇ,ಹಿಂದೆ ಸನಕುನಂದನ ಸನತ್ಕುಮಾರರೆನ್ನುವಂಥ ಋಷಿಗಳಿಗೆ ಜ್ಞಾನೋಪದೇಶಮಾಡಿ ಸಾಯುಜ್ಯ ಮುಕ್ತಿಯನ್ನು ಕೊಟ್ಟೆನು ಮತ್ತು ಹರಿಹರ, ಮಲುಹಣ, ರೇವಣ, ಶಂಕರಾಚಾರ್ಯ ಇವರಲ್ಲದೇ ಇನ್ನೆಷ್ಟೊ ಜನ ಸದ್ಭಕ್ತರು ನನ್ನನ್ನು ಸ್ತುತಿಸಿ ಕೀರ್ತಿಸಿದ ಕಾರಣ ಅವರೆಲ್ಲರಿಗೂ ಜ್ಞಾನೋಪದೇಶಮಾಡಿ ಮೋಕ್ಷ ಪದವಿಯನ್ನು ಕೊಟ್ಟು ರಕ್ಷಣೆ ಮಾಡಿದೆನು.ದೂತಿ, ಆ ಸೊಲ್ಲಾಪುರದ ಸಿದ್ಧರಾಮ ಶಿವಯೋಗಿ ಇರುವನಲ್ಲಾ, ಅವನು ಶಿವನನ್ನು ಒಲಿಸಿ, ಅವನಿಂದ ಉರಿಗಣ್ಣನ್ನು ಪಡೆದುಕೊಂಡ. ಆ ಗರ್ವದಿಂದ ಯಾರ ದಾಕ್ಷಿಣ್ಯವಿಲ್ಲದೇ ಜ್ಞಾನಹೊಂದಿದ್ದರೆ ತೀರಿತು, ಬಾಕಿ ಕ್ರಿಯಾಜ್ಞಾನ ಸಾಮರಸ್ಯಗಳುಯಾತಕ್ಕೆ ಬೇಕೆಂದು ಲಿಂಗವನ್ನು ಧರಿಸದೇ, ರುದ್ರಾಕ್ಷಿಯನ್ನು ಹಾಕಿಕೊಳ್ಳದೇ, ಹಣೆಯ ಮೇಲೆ ವಿಭೂತಿ ಹಚ್ಚಿಕೊಳ್ಳದೇ ಹಾಗೇ ಕೋಣನ ಹಾಗೆ ಅಲೆದಾಡುತ್ತಿದ್ದ.ಆಗ ಅವನಿಗೆ ನಾನು ಹೋಗಿಭಕ್ತ ಜಂಗಮನಾದ ಮೇಲೆ ಕೊರಳಲ್ಲಿ ಲಿಂಗವಿರಬೇಕೆಂದು ಹೇಳಲು, ಅವನು ಸಿಟ್ಟಿಗೆದ್ದು ನನ್ನನ್ನು ಉರಿಗಣ್ಣಿನಿಂದ ನೋಡಿದ. ದೂತಿ, ಆ ಉರಿಗಣ್ಣು ನನಗೆಲ್ಲಿ ನಾಟಬೇಕು? ಆಗ ಏನೂ ಆಗಲಿಲ್ಲ.ಅವನು ನಾಚಿ ನನ್ನ ಪಾದಕ್ಕೆ ಬಿದ್ದನು.ನಾನು ಅವನಿಗೆ ಉಪದೇಶಮಾಡಿ,ಹಾದಿಗೆ ತಂದು ಕಲ್ಯಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಶೂನ್ಯ ಸಿಂಹಾಸನವನ್ನು ಸ್ಥಾಪಿಸಿ, ಚೆನ್ನಬಸವೇಶ್ವರನ ಕಡೆಯಿಂದ ಲಿಂಗಧಾರಣ ಮಾಡಿಸಿ, ಅಷ್ಟಾವರಣಗಳ ಪ್ರಭಾವ ತಿಳಿಸಿ, ಅವನನ್ನು ಉದ್ಧಾರ ಮಾಡಿದೆನಲ್ಲದೇ, ಈ ಜಗತ್ತನ್ನು ಉದ್ಧಾರ ಮಾಡುವುದರಸಲುವಾಗಿ ನಡಕಟ್ಟಿಕೊಂಡು ನಿಂತಿದ್ದೇನೆ.ಅಂದ ಮೇಲೆ ಯಾರ‌್ಯಾರು ಎಷ್ಟು ಮಂದಿ ಅಂಥಾ ಹೇಳಲಿ ! ಇಂಥಾ ಸಾವಿರಾರು ಮಂದಿಯನ್ನು ಉದ್ಧಾರಮಾಡಿ ಇಲ್ಲಿಗೆ ಬಂದಿದ್ದೇನೆ.

ದೂತಿ : ಹಾಗಾದರೆ ಇಲ್ಲಿಗೆ ಏತಕ್ಕೆ ಬಂದಿರುವಿರಿ ?

ಅಲ್ಲಮಪ್ರಭು : ದಾಸಿ, ಹೇಳುತ್ತೇನೆ ಕೇಳು.

(ಪದ) ಉಡುತಡಿ ಪಟ್ಟಣದೊಳು
ಮಹಾದೇವಿ ಎಂಬುವಳು
ಕೇಳವ್ವ ದೂತಿ ಇರುವಳು ॥ಪಲ್ಲವಿ ॥

ದೇವಿಯು ನೋಡವ್ವ
ಒಬ್ಬ ಶಿವಶರಣೆಯವಳು
ಸಂಸಾರ ನೀಗಿ ಅವಳು
ಕೂಡಿ ವೈರಾಗ್ಯದೊಳು
ನಿತ್ಯ ಶಿವಧ್ಯಾನದೊಳು
ಇರುವಳಾ ಹಗಲಿರುಳು ॥

(ಮಾತು) ಇಲ್ಲಿಗೆ ಏತಕ್ಕೆ ಬಂದೆನೆಂದರೆ ಉಡತಡಿ ಪಟ್ಟಣದೊಳಗೆ ಮಹಾದೇವಿ ಅನ್ನುವಂಥ ಶಿವಭಕ್ತೆಯೊಬ್ಬಳು ಇರುವಳಲ್ಲ ಆಕೆಗಿಷ್ಟು ಭೆಟ್ಟಿಯಾಗಿ, ಆಕೆಯ ಶಿವಭಕ್ತಿಯನ್ನು ಪರೀಕ್ಷಿಸಿ ಆಕೆಯ ಕೀರ್ತಿಯನ್ನು ಸಮಸ್ತ ಜಗತ್ತಿಗೆ ಹರಡಿಸಬೇಕೆಂದು ಇಲ್ಲಿಗೆ ಬಂದಿದ್ದೇನೆ.ಈಗಿಂದೀಗ ಆ ಮಹಾದೇವಿಯ ಹತ್ತಿರ ಹೋಗುತ್ತೇವೆ.

ದೂತಿ : ಯಾಕ್ರಿ ಆಕಿ ನಿನಗೇನಾರ ಆಗಬೇಕೇನು ?ಆಕೀಗೆ ಒಳ್ಳೇ ಕಾಳಜಿ ಮಾಡುತೀರಲ್ಲಾ !

ಅಲ್ಲಮಪ್ರಭು : ಏನೇ, ಆ ಮಹಾದೇವಿಯೇ ಯಾಕೆ ಈ ಭೂಮಿಯ ಮೇಲೆ ಆದಾರೆಲ್ಲಾ ಅವರೆಲ್ಲರೂ ನನ್ನ ಬಳಗದವರು ನೋಡು.

ದೂತಿ : ಅದ್ಯಾಂಗೋ ! ನೀನು ಅದೀಯಲ್ಲಾ ಒಂದು ಚೋಟು, ನಿನ್ನ ಬಳಗ ಇಷ್ಟೆಂದು ಮೇಲೆ, ನಿಮ್ಮ ಅಪ್ಪನ ಬಳಗ ಎಷ್ಟು ಐತೆ ಹೇಳರ ಹೇಳು.

ಅಲ್ಲಮಪ್ರಭು : ಏನೇ, ನನಗೆ ಎಲ್ಲಿಯ ತಂದೆ ತಾಯಿ ! ನಾನೆ ಎಲ್ಲಾ ಲೋಕಕ್ಕೂ ತಾಯಿ ತಂದೆ. ನನ್ನಿಂದ ಈ ಜಗತ್ತು ನಿರ‌್ಮಾಣವಾಗಿದೆ.ಅಂದಮೇಲೆ ನನಗೆಲ್ಲಿ ತಾಯಿ : ತಂದೆ ! ನನಗೆ ಯಾರೂ ಇಲ್ಲಾ ನೋಡು.

ದೂತಿ : ನಿನಗೆ ತಾಯಿ : ತಂದೆ ಯಾರೂ ಇಲ್ಲಾ?

ಅಲ್ಲಮಪ್ರಭು : ನನಗೆ ಯಾರೂ ಇಲ್ಲಾ ದೂತಿ.

ದೂತಿ : ಹಾಗಾದರೆ ನೀವು ಹ್ಯಾಗೆ ಹುಟ್ಟಿದಿರಿ ?

ಅಲ್ಲಮಪ್ರಭು : ಏನೇ, ನಾನು ಪರಮಾತ್ಮ. ನನಗೆ ಹುಟ್ಟು : ಸಾವು ಯಾವುದೂ ಇಲ್ಲಾ.ನಾನು ಶಿವಭಕ್ತರಿಗೆ ಪ್ರತ್ಯಕ್ಷನಾಗಬೇಕಂತ ಇಚ್ಛೆಯಾದಾಗ ನಾನುಬೇಕಾದ ಸ್ವರೂಪಿಯಾಗುತ್ತೇನೆ. ಮತ್ತು ಆ ಕೆಲಸ ತೀರಿದ ಮೇಲೆ ಮಾಯವಾಗುತ್ತೇನೆ.ನನಗೆ ಸಗುಣ : ನಿರ್ಗುಣ ಯಾವದೂ ಇಲ್ಲಾ.ಅಖಂಡ ಸಚ್ಚಿದಾನಂದನೇ ನಾನು ನೋಡು.

ದೂತಿ : ನೀವು ಅಖಂಡ ಅದೀರೇನ್ರಿ ?

ಅಲ್ಲಮಪ್ರಭು : ಹೌದು, ನಾನು ಅಖಂಡವಾಗಿದ್ದೇನೆ.

ದೂತಿ : ಹಾಗಾದರೆ ನೀವು ದೆವ್ವಗಿವ್ವ ಅದೀರೇನ್ರಿ ?

ಅಲ್ಲಮಪ್ರಭು : ಏನೇ ದೂತಿ, ಹಾಗೆಲ್ಲಾ ನನ್ನ ಯೋಗ್ಯತೆ ಇಷ್ಟು ಇದೆಯಂತ ಈ ಲೋಕದ ಜನರಿಗೆ ಅಂತುಹತ್ತುವ ಹಾಗಿಲ್ಲಾ.ಅಂದ ಮೇಲೆ ನಿನ್ನಂಥವಳಿಗೆ ನನ್ನ ಸತ್ವ ಹೇಗೆ ತಿಳಿಯಬೇಕು.ಕೋಣನ ಮುಂದೆ ಕಿನ್ನೂರಿ ಬಾರಿಸಿದರೆ ಕೊಂಬು ಯಾವುದು ಕೊಳಗ ಯಾವುದು ಎನ್ನುವಂತೆ ನಿನಗೆ ಹೇಳುವುದೆಲ್ಲ ತಿಳಿಯುವ ಮಾತಲ್ಲ ಸಾಕು.ಸುಮ್ಮನೆ ಇರು.

ದೂತಿ : ಆಂ ! ಏನಂದೀ, ನಾನು ಕೋಣನ ಹಾಗೆ ಕಾಣಿಸುತ್ತೇನೆಂದು ? ಈ ಜಗತ್ತನ್ನು ಅಲ್ಲಾಡಿಸುವೆನೆಂದು ನನ್ನನ್ನು ಅಳಗಾಡಿಸಲಿಕ್ಕೆ ಬಂದಿರುವೆಯಾ ? ಹಂಗನಿನ್ನ ಬಡಿದು ಹಿಲಾಲಿನ್ಯಾಗ ಹಾಕಿ ಸುಟ್ಟು ಬಿಟ್ಟೇನು ತಿಳೀತಿಲ್ಲೋ ?

ಅಲ್ಲಮಪ್ರಭು : ಏನೇ ಸುಟ್ಟಗೊಂಡ ತಿನ್ನಲಿಕ್ಕೆ ನಾನೇನು ಗೊಂಜಾಳದತೆನೆ ಅಲ್ಲಾ.ಸಾಕು ಸುಮ್ಮನಿರು ನನಗೆ ವೇಳೆಯಾಗುತ್ತದೆ ಹೋಗುತ್ತೇನೆ.

ದೂತಿ : ಇನ್ನಿಷ್ಟು ಕೂಡ್ರಿ ಯಾಕ ಹೋಗುತ್ತೀರಿ ? ಸುಮ್ಮಕ ಊರ ಸುದ್ದಿನೆಲ್ಲ ಮಾತನಾಡಿಕೋತ ಕುಂತಬಿಡೂನು.

ಅಲ್ಲಮಪ್ರಭು : ಛೇ ! ಹುಚ್ಚಿ ! ನಿನ್ನಂತೆ ನಾನೇನು ಹುಚ್ಚನಲ್ಲ ವೇಳೆಯಾಗುತ್ತದೆ ಹೋಗುತ್ತೇನೆ.(ಪದ ಹೇಳುತ್ತ ನಿರ್ಗಮಿಸುವನು).

(ಪದ) ಪೋಗುವೆ ಮಹಾದೇವಿ ಬಳಿಗಿನ್ನ
ತಡೆಯದೇ ಎನ್ನಮನ ನೋಡದೇ ಅವಳನ್ನ
ಭಕ್ತಿಯ ನಿಧಿಯನ್ನು ॥ಪಲ್ಲವಿ ॥

ಭಕ್ತನೆಯನ್ನ ಸರಿ ಭಕ್ತ ಸುಖದ ಹರಿ
ಭಕ್ತನೆಯನ್ನ ದೊರಿ ಭಕ್ತನೆಯನ್ನ ಸರಿ ॥

ಶರಣೆಯ ಕೂಡಿ ಆಡಿ ಪರಿಪರಿ ಲೀಲಾಮಾಡಿ
ವರಭಕ್ತಿಯನು ನೋಡಿ ಬಲು ಹರುಷದಿಂದ ಕೂಡಿ
ದೇವಗಿರಿಯ ಗ್ರಾಮ ದುರ್ಗಾದೇವಿಯ ಪ್ರೇಮ
ನಿತ್ಯವಿರಲಿ ನಮ್ಮ ಮೇಲೆ ಕರುಣ ॥

(ರಂಗದಲ್ಲಿ ಅಕ್ಕಮಹಾದೇವಿಯ ಪ್ರವೇಶ)

ಅಕ್ಕಮಹಾದೇವಿ :

(ಪದ) ಸ್ಮರಹರ ಶಂಕರ ಸ್ಮರಿಸುವೆ ಶ್ರೀಕರಾ
ಪೊರೆಯುವೆ ಭಕ್ತರ ಕರುಣಾಸಾಗರಾ
ಬಳಲುವೆ ಭವದೊಳು ತೊಳಲುವೆ ಕಷ್ಟದೊಳು
ಘಳಲನೇ ಕರುಣಿಸು ನೋಡಲೋ ಮಾಧವಾ
ನಳಿನ ಪಾದವಾ ಭಕ್ತಿಯಿಂದ ಭಜಿಪೆ ಸಲುಹುದೆನ್ನನು ॥

ವರಹುಲಿಚರ‌್ಮಾಂಬರಾ ಧರ‌್ಮದೇವರ
ತಿರುಗುವೆ ತ್ರಿಪುರವಾ ಉರವೇದ ಸತ್ವಾಸುರಾ
ಉರಗ ಭೂಷಣನೇ ಪರಮಪಾವನನೇ
ಕರುಣಿಸು ಎನ್ನನು ಮುದದಿಂದಾ ॥

ಹಾಲಕುಡಿಸಿದಾ ಸಣ್ಣ ಬಾಲಿಯ ನುಂಗಿದ ಜಾಣಾ
ಬಾಲನಕೊಂದು ಲೀಲೆಯ ತೋರಿದಾ
ನನ್ನೀ ಶೀಲವ ಕರುಣಿಸು ಬಾಲೆಯ ರಕ್ಷಿಸು ॥

(ಮಾತು) : ಆಹಾ !! ಪರಮಾತ್ಮನು ಈ ಮೃತ್ಯುಲೋಕದ ಮಾನವರ ಮೇಲೆ ಎಷ್ಟು ಕಾಳಜಿ ಇರುವನು ನೋಡ್ರಿ.ಇವರು ಸಂಸಾರದಲ್ಲಿ ಬಿದ್ದು ಒದ್ದಾಡುವುದನ್ನು ನೋಡಿ ಅಂತಃಕರುಣದಿಂದ ಇವರನ್ನು ಉದ್ಧಾರಮಾಡಬೇಕೆಂದು ಸ್ವತಃ ತಾವೇ ಮಾನವರ ರೂಪ ತೊಟ್ಟು ಗುರು ಅನಿಸಿಕೊಂಡು, ಎಲ್ಲರಿಗೂ ಜ್ಞಾನೋಪದೇಶ ಮಾಡಿ ಭವ ಸಾಗರವನ್ನು ದಾಟಿಸಿ ಮೋಕ್ಷ ಹೊಂದುವಂಥಾ ಹಾದಿ ತಿಳಿಸಿ ಅಷ್ಟಕ್ಕೇ ಬಿಟ್ಟನೇನು ?ಬಿಡಲಿಲ್ಲಾ. ಮತ್ತೆ ಏನು ಮಾಡಿದನೆಂದರೆ ಮುಂದೆ ಬರುವ ಜನರು ಸಹಿತ ಇದರಂತೆ ನಡೆಯಲಿ ಅವರ ಉದ್ಧಾರವಾಗಲೆಂದು ವೇದಶಾಸ್ತ್ರ ಪುರಾಣಗಳನ್ನು ರಚಿಸಿ ಈ ದೇಶದ ತುಂಬ ಹರಿಸಿಬಿಟ್ಟನು. ಇಂಥ ವೇದಶಾಸ್ತ್ರ ಪುರಾಣಗಳನ್ನು ನೋಡಿ ಅದರಲ್ಲಿ ಹೇಳಿದಂತೆ ನಡೆದರೆ ಎಲ್ಲರಿಗೂ ಸದ್ಗತಿಯಾಗುತ್ತದೆ. ಇಂಥ ವೇದಶಾಸ್ತ್ರ ಪುರಾಣಗಳನ್ನು ಮಾಡಿ ಈ ದೇಶದ ತುಂಬೆಲ್ಲ ಹರವಿದರೂ ಅಷ್ಟಕ್ಕೇ ಬಿಟ್ಟನೇನು ?ಬಿಡಲಿಲ್ಲ ಮತ್ತೆ ಏನು ಮಾಡಿದನೆಂದರೆ ಏನೂ ತಿಳಿಯದ ಮೂಢರಿಗೂ ಸಹ ಸರಿಯಾಗಿ ಮುಕ್ತಿಯಾಗಲೆಂದು ತಾನೇ ಈಶ್ವರಲಿಂಗ ಮೂರ್ತಿಯಾಗಿ ಈ ದೇಶದ ತುಂಬೆಲ್ಲ ವಾಸವಾಗಿದ್ದಾನೆ. ಇಂಥ ಈಶ್ವರಲಿಂಗ ಮೂರ್ತಿಯನ್ನು ಯಾರು ಭಕ್ತಿಯಿಂದ ಪೂಜೆ ಮಾಡುತ್ತಾರೋ ಅವರು ನಿಜವಾಗಿಯೂ ಮುಕ್ತಿಯನ್ನು ಹೊಂದುತ್ತಾರೆ. ಇದು ಸುಳ್ಳಲ್ಲ. ಇದು ಸುಳ್ಳು ಅಂದವರು ರೌರವ ನರಕಕ್ಕೆ ಗುರಿಯಾಗುತ್ತಾರೆ ಮತ್ತು ಸಚ್ಚಿದಾನಂದ ಸ್ವರೂಪನಾದ ಈಶ್ವರ ಲಿಂಗಮೂರ್ತಿಗೆ ಕಲ್ಲು ಅನ್ನಬಾರದು.ಯಾಕೆಂದರೆ ಆ ಕಲ್ಲು ದೇವ ಸ್ವರೂಪವಾಗಿರುತ್ತದೆ.ಭಕ್ತಿಯಿಂದ ಪೂಜೆ ಮಾಡಿದರೆ ಅವರಿಗೆ ಸಾಯುಜ್ಯ ಮುಕ್ತಿಯು ಲಭಿಸುತ್ತದೆ.ಅಂದಮೇಲೆ ಅಷ್ಟ ಶಂಭುಲಿಂಗ ಮೂರ್ತಿಯನ್ನು ಪೂಜೆ ಮಾಡಿರಿ.ಪೂಜೆಯ ಫಲದಿಂದ ಸಂಸಾರದಲ್ಲಿ ಸುಖವುಂಟಾಗಿ ಕೊನೆಗೆ ಕೈಲಾಸ ಪದವಿ ಪಡೆದುಕೊಳ್ಳುತ್ತೀರಿ. ಅಂದರೆ ಈ ಮನುಷ್ಯ ಜನ್ಮದಲ್ಲಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ.ಇಂಥ ಶ್ರೇಷ್ಠ ಜನ್ಮವನ್ನು ವ್ಯರ್ಥ ಕಳೆಯಬೇಡಿರಿ.ಸಾಧು ಶಿವ ಶರಣರ ಸೇವೆ ಮಾಡಿ ಜ್ಞಾನ ಸಂಪಾದಿಸಿ ಭಕ್ತಿಯಿಂದಮುಕ್ತಿಯನ್ನು ಹೊಂದಿರಿ ಮತ್ತು ಈ ಶಂಭಂಲಿಂಗನ ಪೂಜೆ ಮಾಡಿರಿ.ನಿಮಗೆಲ್ಲರಿಗೂ ಮೇಲಿಂದ ಮೇಲೆ ಶರಣು ಮಾಡಿ ಕೇಳಿಕೊಳ್ಳುತ್ತೇನೆ. ಅದರಂತೆ ನೀವಾದರೂ ಸನ್ಮಾರ್ಗದಿಂದ ನಡೆದುಕೊಳ್ಳಿರಿ.