ಅಕ್ಕಮಹಾದೇವಿ : ಏನು ಇವನ್ನು ನನಗೆ ತೋರಿಸಲಿಕ್ಕೆ ತಂದಿರುವಿ ಏನು ದೂತಿ ?

ದೂತಿ : ಹೌದು ತೋರಿಸಾಕ ತಂದೇನಿ.ಇಷ್ಟೇ ಅಲ್ಲಾ, ಇವನ್ನು ತೋರಿಸಿದ ಮೇಲೆ ನೀನು ನಮ್ಮ ರಾಜರಿಗೇ….

ಅಕ್ಕಮಹಾದೇವಿ : ಏನಂದಿ ? ನಿಮ್ಮ ರಾಜನಿಗೆ…

ದೂತಿ : ಅವುಗಳನ್ನು ನನ್ನ ಕೈಯಲ್ಲಿ ತಾ ಅಂದ್ರ ಹೇಳತೀನಿ ಮುಂದಿನದು.

ಅಕ್ಕಮಹಾದೇವಿ : ತಗೋ, (ಕೊಟ್ಟು) ಅದೇನು ಹೇಳದ್ದು, ಹೇಳು ಇನ್ನು ಮೇಲೆ….

ದೂತಿ : ನೀನು ಬಹಳ ಖೊಟ್ಟಿ ಆದಿ ಅಂತ ಅಂಜಿಕೆ ಬರತೈತೆ.ನನ್ನನ್ನು ಏನು ಮಾಡುವುದಿಲ್ಲಂತ ಮಾತು ಕೊಟ್ಟರೆ ಹೇಳತೀನಿ.

ಅಕ್ಕಮಹಾದೇವಿ : ನಾನು ನಿನ್ನನ್ನು ಏನೂ ಮಾಡುವುದಿಲ್ಲ ಹೇಳು.

ದೂತಿ : ಹಾಗಾದರ ನನ್ನ ಏನೂ ಮಾಡುವುದಿಲ್ಲ ಹೌದಲ್ಲೋ ?

ಅಕ್ಕಮಹಾದೇವಿ : ಏನೂ ಮಾಡುವುದಿಲ್ಲ ಹೇಳವ್ವ,

(ರಾಜನು ಮರೆಯಲ್ಲಿ ನಿಂತು ಇವರ ಮಾತು ಕೇಳತ್ತಿರಬೇಕು).

ದೂತಿ : ಏನವ್ವ, ಹೆಣ್ಣು ಜನ್ಮ ! ಗಂಡನ್ನ ಮಾಡಿಕೊಂಡು ಗಂಡನಿಂದ ಸುಖ ಉಣ್ಣಬೇಕಂತ ಕೇಳೀದಿಯೋ ಇಲ್ಲವೋ?ಗಂಡನನ್ನು ಮಾಡಿಕೊಳ್ಳುವುದಿಲ್ಲ ಅನ್ನುವ ಹುಚ್ಚುತನವೆಲ್ಲಾ ಬಿಟ್ಟು ಮುತ್ತಿನಂಥ ಒಬ್ಬ ಗಂಡನನ್ನು ಮಾಡಿಕೊಂಡು ಸುಖವಾಗಿರ ಬೇಕವ್ವಾ, ಅದಕ್ಕ ಒಬ್ಬ ಗಂಡನನ್ನು ನೇಮಿಸಿಕೊಂಡು ಬಂದಿದ್ದೇನೆ ಏನಂತಿ?

ಅಕ್ಕಮಹಾದೇವಿ : ಏನವ್ವಾ ನನ್ನನ್ನು ಒಯ್ದು ಆ ಅರಸನೊಂದಿಗೆ ಮದುವೆ ಮಾಡಿದರೆ ಆ ಅರಸು ನಿನಗೇನು ಕೊಡುತ್ತಾನೆ ?

ದೂತಿ : ಹಂಗ ಏನು ಐನೂರು ರೂಪಾಯಿ ಕರಾರು ಮಾಡಿಕೊಂಡು ಬಂದೇನಿ.ಹಂಗ ಬಂದರ ಬಂದೇನವ್ವಾ, ನಾನು ಹುಲಿ ಮಗಳು ಅಂತಾ ತಿಳಿ.

ಅಕ್ಕಮಹಾದೇವಿ : ಏನೇ, ಇಷ್ಟು ರೂಪಾಯಿ ಕೊಟ್ಟರೆ ನೀನು ಏನು ಬೇಕಾದರೂ ಮಾಡುವಾಕಿಯೇನು?

ದೂತಿ : ಹಾಗಾದರೆ ನಿನಗೆ ಎಷ್ಟು ರೂಪಾಯಿ ಕೊಟ್ಟರೆ ಏನು ಬೇಕಾದ್ದು ಮಾಡುವಾಕಿ ?

ಅಕ್ಕಮಹಾದೇವಿ : ನೀನು ಬಹಳ ಯುಕ್ತಿವಂತೆ ಇರುವಿ.ಹೇಳುತ್ತೇನೆ ಕೇಳು.

(ಪದ) ಎಂಥಾ ನಾಚಿಕೆಗೇಡಿ ನಡಿ ಮೊದಲು
ಹೊರಬೀಳೀಗ ಹೊಸ್ತಿಲಬಿಟ್ಟು ಮೊದಲು
ಇಲ್ಲಿ ನಿಂತರೆ ಮುರಿಸುವೆ ನಿನ್ನ ಕಾಲು
ತಿಳೀತೇಳ ನಿಂದೆಲ್ಲಾ ಹೆಂಗಸಲ್ಲ
ಕುಂಟಲತನ ಮಾಡುದಕ್ಕೆ ಬಂದೆ ನೀನಾ
ಮುಂದಿನ ಎಚ್ಚರಿಕೆ ನಿನಗಿಲ್ಲಾ
ತಿಂದು ಸೊಕ್ಕೇರಿ ಇಂಥಾ ಕಲ್ಪನೆ ಮಾಡಿ
ಬಂದೆ ನೀನು ಕೆಟ್ಟ ಹೈರಾಣಿ ॥

ಊರ ಕೆಡಸುವಾಕಿ ಆದಿ ಕೆಟ್ಟ ಮಾರಿ
ನೋಡಬಾರದು ನಿನ್ನಾ ಅರಿಷ್ಟೆ ನಡಿ
ಮೊದಲು ಹೊರಬೀಳೀಗ ಮನೆಬಿಟ್ಟು
ಇಂಥಾದೇಷ್ಟು ಮಾಡಿದೀ ನೀ ಆದಿ ಕೆಟ್ಟು ॥

(ಮಾತು) ಏನೇ ಹುಚ್ಚು ಮುಂಡೇ, ಇಂಥಾದ್ದೆಲ್ಲ ಮಾಡಿ ಎಷ್ಟು ಮಂದೀನ ಹಾಳುಮಾಡಿರುವೆ.ಇಲ್ಲೆ ನಿಂತಿ ಅಂದರೆ ನಿನ್ನ ಕೈ : ಕಾಲು ಮುರಿಸೇನು.ನಮ್ಮ ಮನೆಬಿಟ್ಟು ಮೊದಲು ಹೊರಬೀಳು.(ನೂಕುವಳು).

ದೂತಿ : ಇಷ್ಟೆಲ್ಲಾ ನೂಕಿಸಿಕೊಂಡು,ಇನ್ನು ಮೇಲೆ ನಿನ್ನನ್ನು ಬಿಟ್ಟು ಹಂಗS ಹೋಗುವುದಿಲ್ಲಾ. ನಿನ್ನನ್ನು ಈಗಿಂದೀಗ ಸೈನಿಕರನ್ನು ಹಚ್ಚಿ ಎಳೆದುಕೊಂಡು ಹೋಗುತ್ತೇನೆ.

ಅಕ್ಕಮಹಾದೇವಿ : ಇಂಥಾ ಸೈನಿಕರನ್ನು ನೋಡಿರುವೆನು.ಸುಮ್ಮನೆ ಹೋಗುವಿಯೋ ಇಲ್ಲವೋ?

ದೂತಿ : ಏ ಸೈನಿಕರೇ ಬನ್ನಿ.

1ನೇ ಸೈನಿಕ : ಏನೇ ಬುಡ್ಡಿ ?

ದೂತಿ : ನಾ ಬುಡ್ಡಿ ಅಲ್ಲ ದೂತಿ.ಈ ಮಹಾದೇವಿಯನ್ನು ತುರುಬು ಹಿಡಿದು ರಾಜನ ತನಕ ಎಳೆದುಕೊಂಡು ಬರ‌್ರಿ.

2ನೇ ಸೈನಿಕ : ಅಚ್ಚಾ ! ಅಚ್ಚಾ ! ಬಹುತ ಅಚ್ಚಾ !

1ನೇ ಸೈನಿಕ : ಮಹಾದೇವಿ…. ಮಹಾದೇವಿ….ಮನಿಯೊಳಗೆ ಇರುವಿಯೇನು ?ಹೊರಗೆ ಬರುವಿಯೋ ನಾವೇ ಒಳಗೆ ಬರೋಣವೇ ?ರಾಜರು ನಿನ್ನನ್ನು ಕರೆದುಕೊಂಡು ಬಾ ಅಂತಾ ಹೇಳ್ಯಾರ.ಅದಕ ಲಗು ಬಾ.

ನಿರ್ಮಲಶೆಟ್ಟಿ : ಯಾಕೆ ಸೇವಕರೇ ಇಲ್ಲೇಕೆ ಬಂದಿರುವಿರಿ? ನಡೆಯಿರಿ ನಡೆಯಿರಿ ಸುಮ್ಮನೆ.

ಅಕ್ಕಮಹಾದೇವಿ : ಥೂ ಪಾಪಿಷ್ಟರೇ, ನೀವು ಯಾರು ಸರಿಯಿರಿ, ನಮ್ಮ ಮನೆಯೊಳಗೆ ಬಂದು ಎಷ್ಟು ಪುಂಡಾಟಿಕೆಯನ್ನು ನಡೆಸಿರುವಿರಲ್ಲಾ?ನಿಮ್ಮ ಪರಿಣಾಮ ನೆಟ್ಟಗಾಗಲಿಕ್ಕಿಲ್ಲಾ. ಮುನ್ನೋಡಿ ಓಣಿಯೊಳಗೆ ನಿಂತು ಮಾತಾಡಿರಿ.ನೀವು ಯಾರು ?ನಮ್ಮ ಮನೆಯೊಳಗೆ ಇಂಥಾ ಹುಡುಗಾಟಿಕೆ ನಡಿಸಲಿಕ್ಕೆ ಕಾರಣವೇನು ?

2ನೇ ಸೈನಿಕ : ನಮ್ಮ ರಾಜರು ನಿಮ್ಮನ್ನು ಕರೆದುಕೊಂಡು ಬಾ ಅಂತ ಹೇಳಿದರು? ನಿಮ್ಮನ್ನು ರಾಜರ ಹತ್ತಿರ ಒಯ್ಯಲು ಬಂದಿದೇವಿ.ನಡಿ ನಮ್ಮ ರಾಜರ ಹತ್ತಿರ.

ಅಕ್ಕಮಹಾದೇವಿ : ನನ್ನನ್ನು ಯಾಕೆ ಕರೆದುಕೊಂಡು ಬಾ ಅಂತಾ ಹೇಳಿದರು ?ನಿಮ್ಮ ರಾಜರಿಗೆ ನನ್ನಲ್ಲಿ ಅಗತ್ಯದ ಕೆಲಸವೇನಿದೆ ?

1ನೇ ಸೈನಿಕ : ಅದೆಲ್ಲಾ ನಮಗೇನು ಗೊತ್ತು ?ಅವರು ಕರೆದುಕೊಂಡು ಬಾ ಅಂತಾ ಹೇಳಿದರು.ಅವರು ಹೇಳಿದಂತೆ ನಾವು ಬಂದೆವು.ಸುಮ್ಮನೆ ಬಾ.

ಅಕ್ಕಮಹಾದೇವಿ : ಈಗ ಬರುತ್ತೇನೆ ನಡೆಯಿರಿ.ನಿಮ್ಮ ರಾಜನಿಗೆ ಬಹಳೇ ಸೊಕ್ಕು ಬಂದಂತೆ ಕಾಣುತ್ತದೆ.ಅವನೇನು ಮಾಡುತ್ತಾನೆ.ನೋಡೋಣ, ತಮ್ಮಾ ಶಂಕರಾ, ಆ ಕೌಶಿಕನಿಗೆ ಬುದ್ಧಿ ಕಲಿಸಿ ಬರುತ್ತೇನೆ.ನೀನು ಕಾಳಜಿ ಮಾಡದೇ ಸ್ವಸ್ತ ಮನಿಯೊಳಗೆ ಇರು.ಈಗಲೇ ತಿರುಗಿ ಬರುತ್ತೇನೆ.

ಶಂಕರ : ಛೇ ಅಕ್ಕವ್ವಾ, ನೀನೇನೂ ಹೋಗಬೇಡಾ, ನಾನೇ ಹೋಗಿ ಆ ರಾಜನಿಗೆ ಬುದ್ಧಿ ಕಲಿಸಿ ಬರುತ್ತೇನೆ. ನೀನು ಹೋಗಬೇಡಾ, ತಣ್ಣಗೆ ಮನೆಯಲ್ಲಿರು. (ಸೈನಿಕರನ್ನು ಉದ್ದೇಶಿಸಿ) ಎಲೆ ಸೈನಿಕರೇ ನಡೆಯಿರಿ ನಾನೇ ಬರುತ್ತೇನೆ.ನಡೆಯಿರಿ.ನಿಮ್ಮ ರಾಜನ ಬಂಟತನ ನೋಡುತ್ತೇನೆ.ಅಕ್ಕವ್ವಾ, ನಾನೇ ಹೋಗಿ ಆ ರಾಜನ ಸೊಕ್ಕು ಇಳಿಸಿ ಬರುತ್ತೇನೆ.ನೀನು ಸುಮ್ಮನೆ ಮನೆಯಲ್ಲಿ ಹೋಗಿ ಕೂಡ್ರು.

ಅಕ್ಕಮಹಾದೇವಿ : ಛೇ, ಹುಚ್ಚಾ ಸುಮ್ಮನಿರು, ನಾನೇ ಹೋಗಿ ಆ ರಾಜನ ಗುಂಗು ಇಳಿಸಿ ಬರುತ್ತೇನೆ.ನೀನು ಸುಮ್ಮನೇ ಮನೆಯಲ್ಲಿ ಕುಳಿತಿರು.

ಶಂಕರ : ಎಲೇ ಮಕ್ಕಳಿರಾ, ನಮ್ಮ ಅಕ್ಕಗ ಏನರ ಅಂದರೆ ನಿಮ್ಮ ಟೊಪ್ಪಿಗೆ ಹಾರಂಗ ಬಡಿದೇನು ಹುಷಾರ್!

ದೃಶ್ಯ
(ಮಹಾದೇವಿಯು ರಾಜನ ಅರಮನೆಯನ್ನು ಪ್ರವೇಶಿಸುವುದು)
ಕೌಶಿಕ : ದೂತಿ, ಮಹಾದೇವಿ ಬಂದಳೇನು ?

ದೂತಿ : ಬರಾಕ ಹತ್ತಿದ್ದಾಳೆ, ಸೈನಿಕರು ಕರಕೊಂಡು ಬರಾಕ ಹತ್ತಿದ್ದಾರೆ.

ಕೌಶಿಕ :  ದೂತಿ, ಯಾವ ಕಡೆ ಬರಲಿಕ್ಕೆ ಹತ್ತಿದ್ದಾರೆ ?

ದೂತಿ : ಅದೋ ಅಲ್ಲೆ ನೋಡಿ (ಬೆರಳು ಮಾಡಿ ತೋರಿಸುವಳು)

ಕೌಶಿಕ : ದಾಸಿ ಸುಳ್ಳು ಹೇಳುತ್ತೀಯೇನು ! ನನಗೆ ಕಾಣಿಸುತ್ತಿಲ್ಲಾ.

ದೂತಿ : ಸುಳ್ಯಾಕ್ರೀ, ಅಲ್ಲೇ ಗಿಡದಾಗ ಬರತಾಳ ನೋಡ್ರಿ.

ಕೌಶಿಕ : ದೂತಿ ಎಲ್ಲಿಯೂ ಕಾಣಿಸುವುದಿಲ್ಲಾ, ಸುಳ್ಳು ಹೇಳುತ್ತೀ, ನನ್ನ ಮಾತಿಗೆ ಆ ಮಹಾದೇವಿಯು ಏನು ಅಂದಳು ?

ದೂತಿ : ಮತ್ತೇನಂತಾಳ್ರೀ, ನಾ ಎಲ್ಲಾ ಶಿಸ್ತು ಮಾಡಿಕೊಂಡು ಬಂದೇನ್ರಿ.

ಕೌಶಿಕ : ಹಾಗಾದರೆ ಆ ಮಹಾದೇವಿ ಬಂದ ಕೂಡಲೇ ಗಾಂಧರ್ವ ಲಗ್ನ ಆಗುವುದೊಂದೇ ತಡವೇನು ?

ದೂತಿ : ಎಲ್ಲಾ ಲಗ್ನ ನಿಮ್ಮ ಐಶ್ವರ್ಯದ ಮೇಲೆ ಅಂತ ಎಲ್ಲಾ ಹೇಳ್ಯಾರ ನೋಡಿ.

ಕೌಶಿಕ : ಇಷ್ಟು ಸಿಸ್ತು ಆದರೆ ಬಹಳ ಚಲೋದಾಯಿತು.ಇನ್ನು ಆಕಿ ಬರುವುದರೊಳಗಾಗಿ ಏನೇನು ವ್ಯವಸ್ಥೆ ಮಾಡು ಎಂದು ಹೇಳಿದ್ದಾಳೆ.

ದೂತಿ : ಇನ್ನು ನಾ ಬರುವುದರೊಳಗೇ ಮಂಚದ ಮೇಲೆ ಕುಳಿತು, ಯಾವಾಗ ಬಂದಾಳಂತಾ ದಾರಿ ನೋಡಿ, ಜೀವಾಬಿಡುವ ವ್ಯವಸ್ಥಾ ಮಾಡಲು ಹೇಳ್ಯಾಳ ನೋಡ್ರಿ.

ಕೌಶಿಕ : ಹಾಗಾದರೆ ದೂತಿ ಬಾ ಇಲ್ಲಿ (ಕಿವಿಯಲ್ಲಿ ಹೇಳಬೇಕು).

(ದೂತಿ ತಲೆ ಅಲ್ಲಾಡಿಸುತ್ತ ಅತ್ತ ಹೋಗಲು, ಇತ್ತ ಸೈನಿಕರು ಮಹಾದೇವಿಯನ್ನು ಕರೆದುಕೊಂಡು ಬರಬೇಕು).

2ನೇ ಸೈನಿಕ : ಮಹಾರಾಜರಿಗೆ ನಮಸ್ಕಾರ,

ಕೌಶಿಕ : ಮಹಾದೇವಿಯನ್ನು ಕರೆದುಕೊಂಡು ಬಂದಿರುವಿರೇನು ?

1ನೇ ಸೈನಿಕ : ಕರೆದುಕೊಂಡು ಬಂದಿರುವೆವು.ಇಲ್ಲಿರುವಳು ನೋಡ್ರಿ.

ಕೌಶಿಕ : ಹಾಗಾದರೆ ನೀವು ನಡೆಯಿರಿ. (ಸೊನ್ನೆ ಮಾಡುವನು).

(ಸ್ವಗತ) ಧನ್ಯ ಧನ್ಯ ನಾನೇ ಈ ಲೋಕದಲ್ಲಿ ನಾನೇ ಧನ್ಯನು.
(ಪ್ರಕಟ) ಸುಂದರಿ ಹೇಳುವೆನು ಕೇಳು.

(ಪದ) ಜಾಣಿ ಮೋಹದ ಅರಗಿಣಿ
ಮಾತಾಡೆಯನ್ನ ಮಣಿಮಂಚದ ಮೇಲೆ ರತಿಗೂಡೆ
ಸುಂದರಿ ಸೊಬಗಿನ ವೈಯಾರಿ ಸುಖಬೇಡುವೆನು
ಅದರೊಳು ಮದವೇರಿ ಇಂದು ಮಾಡುವ ಕಾಮ
ಸುಖ ಎಲ್ಲಾ ಸುರಿ ತಿಳಿ ನೀನೀಗ ಒಯ್ಯರಿ ॥

(ಮಾತು) ಹೇ ಸುಂದರಿ, ಮಹಾದೇವಿ, ನನ್ನ ಹತ್ತಿರ ಬಾ, ಅಷ್ಟೇಕೆ ದೂರ ಸರಿದು ನಿಂತಿರುವೆ, ನಾಚಿಕೆಯೇನು? ನಾಚಿಕೆ ಬಿಟ್ಟು ನನ್ನ ಕೂಡ ಪ್ರೀತಿಯಿಂದ ಮಾತಾಡು. ನನ್ನ ರಾಜ್ಯವೆಲ್ಲ ನಿನ್ನದೆ ಆದೆ.ಇಲ್ಲಿ ಮಂಚದ ಮೇಲೆ ತುಸು ಕೂಡು ಬಾ. (ಹಿಡಿಯಲಿಕ್ಕೆ ಹೋಗುವನು, ಮಹಾದೇವಿ ಹಿಂದೆ ಸರಿಯುವಳು).

ಅಕ್ಕಮಹಾದೇವಿ : ಥೂ, ಪಾಪಿಷ್ಟಾ, ದೂರಿ ಸರಿದು ಮಾತಾಡು.ಹೇಳುತ್ತೇನೆ ಕೇಳು.

(ಪದ) ಸರಿ ದುರಾತ್ಮನೆ, ಸರಿ ಕೌಶಿಕನೇ
ಎನ್ನ ಮುಟ್ಟುವುದು ತರವಲ್ಲ
ಸರಿಯತ್ತ ಬರುವಿಯೇಕೆ ಮೈಮೇಲೆ
ನಾಚಿಕೆ ಇಲ್ಲದೇ ಬರುವೆ ನೀಯಾಕ
ಬಾಲಿಯರ ಮೈಮೇಲೆ ಸರಿ ಅತ್ತ
ಅರಸಾಗಿ ಸರಸಾಗಿ ಎಲ್ಲರಿಗೂ ಇರಬೇಕ

ಕೌಶಿಕ :  (ಪದ)

ಯಾತಕ್ಕೆ ಬೊಗಳುವಿ ಬಿಡು ಅದೂ
ಭವಿ ಎನಿಸಿಕೊಂಡಿರುವಿ ಎಲೇ ಮಹಾದೇವಿ
ರಾಜನಿಗೆ ಶೂರನಿಗೆ ಅಂಜದೆ ಆಡುವಿ
ನಿಷ್ಠುರವಾಗಿ ಬಂದಿದೆ ನಿನಗಹಂಕಾರ
ಶಿಕ್ಷೆಯ ಕೊಡುವೆನು ನಿನಗೀಗ
ಮನಬಂದಂತೆ ಆಡಲೇ ನಿನಗೀಗ ॥

ಅಕ್ಕಮಹಾದೇವಿ : ಥೂ ಪಾಪಿಷ್ಟ, ದೂರ ಸರಿದು ನಿಂತು ಮಾತಾಡು.ನನ್ನ ಸಮೀಪಕ್ಕೆ ಬರಬೇಡಾ, ಬಂದರೆ ನಿನ್ನ ಪರಿಣಾಮ ನೆಟ್ಟಗಾಗಿಲಿಕ್ಕಿಲ್ಲ.ನಿನಗೆ ಶಿಕ್ಷೆ ಕೊಡುತ್ತೇನೆ ಅನ್ನುತ್ತೀಯಲ್ಲಾ ನಾನು ಅವತಾರೀ ಹೆಣ್ಣು ಮಗಳಿದ್ದೇನೆ.ಇದನ್ನು ತಿಳಿದು ದೂರ ಸರಿದು ನಿಂತು ಮಾತಾಡು ತಿಳಿಯಿತಿಲ್ಲೋ.

ಕೌಶಿಕ : ವಾಹ್ ! ವಾಹ್ ! ! ವಯ್ಯರಿ, ಇಂಥ ವೈಯ್ಯರತನವನ್ನು ಎಲ್ಲಿಂದ ಕಲಿತುಕೊಂಡು ಬಂದಿರುವೆ? ನನ್ನ ಧೈರ್ಯ ಪರೀಕ್ಷೆ ಮಾಡಬೇಕಂತ ಇಷ್ಟೆಲ್ಲಾ ಮಾಡುವಿಯೇನು ?ನಿನ್ನ ಸೊಬಗು ಎಲ್ಲಾ ಬಿಟ್ಟುಮಂಚದ ಮೇಲೆ ಕುಳಿತುಕೊಂಡು ಕ್ಷೇಮ ವಿಚಾರವನ್ನು ಹೇಳು ಬಾ. ನಿನ್ನದೆಲ್ಲ ವಿಚಾರ ಮಾಡುವುದರ ಸಲುವಾಗಿಯೇ ಕರೆದುಕೊಂಡುಬರಲು ಕಳಿಸಿದ್ದೆ.ಆದುದರಿಂದ ನಿನ್ನ ವಿಚಾರಗಳನ್ನು, ಕ್ಷೇಮವನ್ನು ಹೇಳು ಬಾ.

ಅಕ್ಕಮಹಾದೇವಿ : ನನ್ನ ಕ್ಷೇಮ, ಲಾಭಗಳನ್ನು ತೆಗೆದುಕೊಂಡು ಏನು ಮಾಡುವಿ ?ನಿನಗೆ ನಾನೇನು ಸಂಬಂಧ ? ದೂರ ಸರಿದು ನಿಂತು ಮಾತಾಡು.

ಕೌಶಿಕ : ಎಲೈ ಮಹಾದೇವಿ, ನಾನು ರಾಜನು, ನೀ ನನ್ನ ಪ್ರಜೆಯು, ಅಂದಮೇಲೆ ನಿನ್ನ ಸುಖ : ದುಃಖಗಳನ್ನು ಕೇಳಲು ನಾನು ಬಾಧ್ಯಸ್ಥನಲ್ಲವೇನು ?

ಅಕ್ಕಮಹಾದೇವಿ : ನಿಂದs ನಿನಗ ಟಿಕಾಣಿ ಇಲ್ಲಾ ! ಅಂದ ಮೇಲೆ ನನ್ನ ಸುಖ : ದುಃಖಗಳನ್ನು ತಕ್ಕೊಂಡು ಏನು ಮಾಡುತ್ತಿ?ಈ ಜಗತ್ತನ್ನು ಸಂರಕ್ಷಣೆ ಮಾಡುವಂಥ ಪರಮಾತ್ಮನು ಇರುವನಲ್ಲಾ, ಆತನು ಮಾತ್ರ ಯಾವತ್ತೂ ಪ್ರಾಣಿಗಳ ಸುಖ – ದುಃಖಗಳನ್ನು ನೋಡಿ ಯಾವಾಗಲೂ ಕಾಪಾಡುತ್ತಾನೆ.ಅಂಥವನ ಮುಂದೆ ಹೇಳಿದರೆ ಏನಾದರೂ ಆದೀತು.ನಿನ್ನಂಥವನ ಮುಂದೆ ಹೇಳಿದರೆ ಏನಾಗುವುದು? ಸುಮ್ಮನೆ ಕೂಡು ಹೋಗು.

ಕೌಶಿಕ : ಏನೇ, ನಾನು ಯಾರೆಂಬುದು ವಿಚಾರಿಸದೇ ಮಾತಾಡುತ್ತೀಯಲ್ಲಾ. ಹೀಗೇ ನಾನು ಬಿಡುವುದಿಲ್ಲಾ, ಜೋರಿನಿಂದ ಮಂಚಕ್ಕೆ ಒಯ್ದು ನನ್ನ ಆಶೆಯನ್ನು ಪೂರ್ಣ ಮಾಡಿಕೊಳ್ಳುತ್ತೇನೆ.

ಅಕ್ಕಮಹಾದೇವಿ : (ಪದ)
ತಡೀ ಕೌಶಿಕ ಬಿಡು ಮೈಯಮುಟ್ಟು ಬರುವುದು
ಎಂಥಾದ್ದು ನಿನ್ನ ನಡತಿ ಅರಸಾಗಿ ಎಲ್ಲಿ ಕಲತಿ
ಎಳ್ಳಷ್ಟೂ ಇಲ್ಲೋ ನಿನ್ನಲ್ಲಿ ಸುಗುಣ
ಅರಸಾಗಿ ಯಾತಕ ಹುಟ್ಟಿದೆ ನೀತ್ತ

ಛೇ ದುಷ್ಟ, ಪರಭ್ರಷ್ಟ ವ್ಯಸನವು ಯಾಕಿಷ್ಟಾ
ಮನೆಯೊಳು ಹೆಂಡತಿ ಇಲ್ಲೇನೋ ನಿನಗ
ಭೋಗಿಸು ಅವಳ ಕೂಡ ಸುಳ್ಳೇ ಯಾತಕ
ಬಯಸುವಿ ನೀ ಕೇಡ ॥

ಕೌಶಿಕ : (ಪದ)

ನೀನೇ ಎನ್ನಯ ಪ್ರೀತಿಯ ಮಡದಿ
ರತಿ ಸುಖ ಕೊಡು ಎನಗೆ ಮಡದಿ
ಬಿಡು ಕೋಪವನು ಮತ್ತ ಶಾಪ
ಕೊಡುತ ಎನಗೆ ಬಹು ತಾಪ
ಕೊಡುತ ತುರ್ತಾ ಮಂಚಕೆ ಬಾರೆ
ನಾ ಬೇಡುವೆ ನಿನ್ನೊಳು ಪ್ರೀತಿ ॥

(ಮಾತು) ನೀನು ನನ್ನನೇನು ಮಾಡುತ್ತೀ ? ಇಂಥಾ ಒಣಡೌಲು ಬಿಟ್ಟು ಸುಮ್ಮನೆ ಮಂಚಕ್ಕೇ ಇಲ್ಲವೋ ಹೇಳು ?

ಅಕ್ಕಮಹಾದೇವಿ : ನಾನು ಬರುವುದಿಲ್ಲಾ.

ಕೌಶಿಕ : ನಾನು ಬಿಡುವುದಿಲ್ಲಾ.

ಅಕ್ಕಮಹಾದೇವಿ : ಏನು ಮಾಡುತ್ತಿಯೋ ಮಾಡು ನೋಡೋಣ ?

ಕೌಶಿಕ : (ಪದ)

ನಳಿನಾಕ್ಷಿ ಬಿಡು ಪಂಥ ತರವಲ್ಲ
ನಿನಗ್ಯಾತಕ ಬೇಕು ಒಣಚ್ಯಾಲಾ
ನೋಡೀನಿ ನಿಂದೆಲ್ಲ ಚುಂಬನ ಕೊಡು ಒಂದು
ಸುಂದರಿ ಎನಗೊಂದು ಕಾಮತಾಪಲಿ ಬೆಂದು
ಬಳಲಿದೆ ನಾನಿಂದು ಆಲಂಗಿಸು ಪ್ರಿಯ ಕರುಣಿಸು
ಕಾಮಕ್ರೀಡೆಗೆ ಎನ್ನ ಹೊಂದು ನಿನ್ನಾ ನೋಡಿದ್ದೆನೆಲ್ಲಾ ॥

(ಮಾತು) ಹೇ ನಳಿನಾಕ್ಷಿ, ನೀ ಅಬಲೆಯಾದ ಹೆಣ್ಣು, ನೀ ಈ ರೀತಿ ಹಟ ಹಿಡಿಯುವುದು ತರವಲ್ಲ ನೋಡು.ಕಾಮ ತಾಪದಿಂದ ಬೆಂದು, ಬಳಲಿ, ಬಾಯಾರಿ ನೀರಾಗಿ ನಿಂತಿರುವೇನು.ಆದ್ದರಿಂದ ನನಗೊಂದು ಚುಂಬನವನ್ನು ಕೊಡು. ಈಗಿನ ಸಮಯದಲ್ಲಿ ಚುಂಬನವನ್ನು ಕೊಡದಿದ್ದರೆ, ವ್ಯರ್ಥವಾಗಿ ನನ್ನ ಪ್ರಾಣ ಹೋಗುತ್ತದೆ. ಆದ್ದರಿಂದ ಮಹಾದೇವಿ ಸ್ವಲ್ಪ ದಯಮಾಡು.

ಅಕ್ಕಮಹಾದೇವಿ : (ಪದ)

ಪರಹೆಣ್ಣಿನ ಮ್ಯಾಲೆ ನಿನ್ನ ಮನಸ್ಯಾಕೇ ರಾಜನೇ
ಬಿಡು ಸಾಕು ಕೌಶಿಕನೇ ॥ಪಲ್ಲವಿ ॥

ಕಾಮ ತುಂಬ ಕೆಟ್ಟ ವ್ಯಸನವು
ಶಿವಧ್ಯಾನದಲ್ಲಿ ಹುಟ್ಟುವನು ಪರಮಾತ್ಮನ
ದೃಢಜ್ಞಾನವನ್ನು ಸೇರಿಸುತಲಿ
ಪಾರ್ವತಿಯನ್ನು ಮೋಹಿಸಿದಂತಾ
ದಾನವನನ್ನು ಆಗ ಶಾಪದಿ ಸುಟ್ಟನು
ಕೇಳೋ ರಾಜಾ ನೀನೀಗ ॥

(ಮಾತು) ಏನೇ ಕೌಶಿಕಾ, ಕಾಮ ಸುಖವೆನ್ನುವುದನ್ನು ಶಿವಭಕ್ತಿಯನ್ನುವಂಥ ಬೆಂಕಿಯಲ್ಲಿ ಸುಟ್ಟುಬಿಟ್ಟಿದ್ದೇನೆ.ಮುಂಚೆ ಪಾರ್ವತಿ ದೇವಿಯು ಪರಮಾತ್ಮನ ಸಲುವಾಗಿ ಮನಪ್ಲವ ದೇಶದೊಳಗೆ ತಪಸ್ಸು ಮಾಡುತ್ತಿದ್ದಳು.ಆಗ ಅಲ್ಲಿ ಒಬ್ಬ ರಾಕ್ಷಸನು ಆಕೆಯನ್ನು ನೋಡಿ ನಮಸ್ಕಾರ ಮಾಡಿದಾ, ಮತ್ತು ಆಕೆಯ ಚೆಲುವಿಕೆಯನ್ನು ನೋಡಿ ಆಕೆಯ ಮೇಲೆ ಕಾಮವಿಲಾಸಕ್ಕೆ ಮನಸ್ಸು ಮಾಡಿದಾ. ಅಷ್ಟರಲ್ಲಿಪಾರ್ವತಿಯು ಅದನ್ನು ತಿಳಿದು, ಸಿಟ್ಟಿನಿಂದ ಅವನನ್ನು ಸುಟ್ಟು ಬಿಟ್ಟಳು. ಅಂದ ಮೇಲೆ ಆ ರಾಕ್ಷಸನು ಆ ದೇವಿಯಿಂದ ಹೇಗೆ ಸುಟ್ಟುಕೊಂಡನೋ ಅದರಂತೆ ನೀನು ನನ್ನಿಂದ ಸುಟ್ಟು ಹೋದಿ, ನಿನ್ನ ಕೆಟ್ಟ ವ್ಯಸನವನೆಲ್ಲ ಬಿಟ್ಟು ಬಿಡು.

ಕೌಶಿಕ : ಮಹಾದೇವಿ ಏನಂದಿ ? ಆ ಪಾರ್ವತಿದೇವಿ, ಆ ರಾಕ್ಷಸನನ್ನು ಸುಟ್ಟು ಬೂದಿಮಾಡಿದಂತೆ ನೀನು ನನ್ನನ್ನು ಸುಟ್ಟು ಬಿಡುತ್ತೇನಂದೆಯಲ್ಲಾ ! ನಿನ್ನಂಥ ಅಬಲೆಗೆ ಹೆದರುವೆನೇನು ? ಛೀ ! ಹುಚ್ಚಿ, ಇಂಥಾದ್ದು ಬಿಟ್ಟು ಬಿಡು ಹೇಳುತ್ತೇನೆ ಕೇಳು.

(ಪದ) ಸುರತಕ್ಕೆ ಬಾ ಸಖಿ ತ್ವರಿತದಿ ಅಂಬುಜ ಮುಖಿ
ಚುಂಬನ ಕೊಡು ರಮಣಿ ಕಾಮನ ಅರಗಿಣಿ
ಸವಿಮಾತು ತಿಳಿದು ಬಾ ಕಾಮಿನಿ
ಅರಿಕೆ ನಿನಗಿಲ್ಲೇ ಶೌರ್ಯ ಸ್ಥಿರವಲ್ಲಾ ನೋಡಿದ್ದಿ ನನದೆಲ್ಲಾ ॥

(ಮಾತು) ನೀನು ಏನೋ ಸುಳ್ಳು ಹೇಳಿ ನನ್ನನ್ನು ಮರಿಗೆಡವು ಬೇಡಾ.ನಾನು ನಿನ್ನನೇನೂ ಬಿಡುವುದಿಲ್ಲಾ.ಆ ಕಾರ‌್ಯಕ್ಕೆ ಮಾನಗೇಡಾಗಿ ಬರುವುದೇನು ಒಳ್ಳೇಯದಲ್ಲ.ಸುಮ್ಮನೆ ನನಗೊಂದು ಚುಂಬನಕೊಟ್ಟು ಕಾಮಸುಖಕ್ಕೆ ಅನುಕೂಲಳಾಗು. (ಸಮೀಪಕ್ಕೆ ಹೋಗುವನು)

ಅಕ್ಕಮಹಾದೇವಿ : ಛೇ ದುಷ್ಟಾ ! ದೂರ ನಿಂತು ಮಾತಾಡು.ಮೈ ಮುಟ್ಟ ಬರಬೇಡಾ, ಐಶ್ವರ್ಯದ ಮಬ್ಬಿನಲ್ಲಿ ಕಣ್ಣು ಮುಚ್ಚಿಕೊಂಡು ಅರಿವಿಲ್ಲದೇ ಸೆರೆ ಕುಡಿದ ಮಂಗನಂತೆ ಯಾತಕ್ಕೆ ಜಿಗಿದಾಡುವಿ ? ಹೇಳುತ್ತೇನೆ ಕೇಳು.

(ಪದ) ಈ ದೇಹ ಸ್ಥಿರವಲ್ಲಾ
ಕಡೆಗಿದು ಮಣ್ಣಿನ ಪಾಲಾ ಆಗುವುದು ಸಿದ್ಧಾಂತಾ
ಎಲ್ಲರಿಗೂ ಗೊತ್ತಿದ್ದುದೇ ಮಾತಾ ಒದ್ದಾಡುವುದೇನು ಮರತಾ
ದೇವಗಿರಿ ಬಸವೇಶನ ನೆನೆಸು ಅನುದಿನ
ಕವಿ ಹೇಳ್ಯಾನ ಶಿವಣ್ಣಾ ॥

(ಮಾತು) ಕೌಶಿಕಾ, ಈ ನರಜನ್ಮ ಸಿಗಬೇಕಾದರೆ ಎಷ್ಟೋ ಪುಣ್ಯ ಮಾಡಿ ಬರಬೇಕು.ಆದರೆಇದೂ ಒಂದಿಲ್ಲೊಂದು ದಿನ ಮಣ್ಣು ಪಾಲಾಗುತ್ತದೆ.ಇದು ಇದುವವರೆಗೆ ದಾನ : ಧರ್ಮ ಮಾಡಿ ಸದ್ಧರ್ಮದಿಂದ ನಡೆದು ಹಗಲಿರುಳು ಶಿವಾ ಶಿವಾ ಎನ್ನುತ್ತ ಶಿವಭಜನೆ ಮಾಡಿ ರಾಮಚಂದ್ರನಂತೆ ಕೀರ್ತಿಗಳಿಸು. ಯಾಕೆಂದರೆ ಆ ಕೀರ್ತಿಯು ಸೂರ‌್ಯ, ಚಂದ್ರರಿರುವವರೆಗೂ ಇರುತ್ತದೆ.ಅದಕ್ಕೆ ನಾನು ಹೇಳುತ್ತಲಿರುವೆ ಲಕ್ಷಗೊಟ್ಟು ಕೇಳು ಇನ್ನಾದರೂ.

ಕೌಶಿಕ : ಏನು ಮಹಾದೇವಿ, ನನ್ನ ಮುಂದೆ ಏನಾದರೂ ಸುಳ್ಳು ಹೇಳಿ ದಾಟಲಿಕ್ಕೆ ಪ್ರಯತ್ನ ಮಾಡುತ್ತಿರುವೆಯೇನು? ದಾನ, ಧರ್ಮಯಾತಕ್ಕೆ ಬೇಕು, ಇದೆಲ್ಲ ಬಿಟ್ಟು ನನಗೊಂದು ಚುಂಬನವನ್ನು ಕೊಡು.

ಅಕ್ಕಮಹಾದೇವಿ : ಏನಪ್ಪಾ, ನೀನು ಎಂಥಾ ಹುಚ್ಚನಿರುವೆ ?ನೀನು ನಾಲ್ಕು ಕಾಲಿನ ಪಶುಗಳೊಳಗೆ ಜಮಾ ಆಗಿರುವೆ ನೋಡು ?

ಕೌಶಿಕ : ಏನೇ ನೀನು ನನಗೆ ದನ ಅಂದುಬಿಟ್ಟಿಯಲ್ಲಾ ! ಈಗಿನ ಸಮಯದಲ್ಲಿ ಪಶು ಅಂದರೂ ಅನ್ನು ಸಂಭೋಗಕ್ಕೆ ಮಾತ್ರ ಬಾ.

ಅಕ್ಕಮಹಾದೇವಿ : ಥೂ, ಥೂ ಇಲ್ಲಿಯವರೆಗೆ ಹೇಳಿರುವುದೆಲ್ಲ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಆಯಿತು.ನೀನು ಜಾಣನಲ್ಲ ನೋಡು.

ಕೌಶಿಕ : ನಾನು ಮಾತ್ರ ಜಾಣನಲ್ಲ.ನೀನು ಮಾತ್ರ ಜಾಣೆಯೇ ?

ಅಕ್ಕಮಹಾದೇವಿ : ಹೌದು ಶಿವಭಕ್ತರೆಂದರೆ ಮಹಾಜ್ಞಾನಿಗಳು, ನಮಗೆ ಜಾಣರು ಅಲ್ಲಾ ಅಂತ ಅನ್ನುವವರಾರು ?

ಕೌಶಿಕ : ಶಿವಭಕ್ತರೆಂದರೆ ಮಹಾಜ್ಞಾನಿಗಳೇನು ?

ಅಕ್ಕಮಹಾದೇವಿ : ಹೌದು.

ಕೌಶಿಕ : ನೀವು ಮಹಾಜ್ಞಾನಿಗಳಾದರೆ ಅಲ್ಲದ ಕೆಲಸ ಏಕೆ ಮಾಡುವಿರಿ ?

ಅಕ್ಕಮಹಾದೇವಿ : ಏನು ಮಾಡುತ್ತೇವೆ ?ಶಿವಭಕ್ತರು ಅಲ್ಲದ ಕೆಲಸ ಮಾಡಿದರೆ ಶಿವನು ಹೇಗೆ ಒಲಿದಾನು ? ಇದನ್ನು ತಿಳಿದು ಮಾತನಾಡು.

ಕೌಶಿಕ : ಮಹಾದೇವಿ, ಶಿವಶರಣರು ಅಲ್ಲದ ಕೆಲಸ ಮಾಡುವುದಿಲ್ಲ ಅನುತ್ತೀಯಲ್ಲಾ. ಹಾಗಾದರೆ ಪರಮಾತ್ಮ ಅವರಿಗೆ ಮೆಚ್ಚಿ ಪ್ರಸನ್ನನಾಗುತ್ತಾನೇನು ?

ಅಕ್ಕಮಹಾದೇವಿ : ಹೌದು ಮತ್ತಿನ್ನೇನು ?

ಕೌಶಿಕ : ಹಾಗಾದರೆ ಶರಣರು ಪಾಪಕರ್ಮಗಳನ್ನು ಮಾಡುವುದಿಲ್ಲವೇನು ?

ಅಕ್ಕಮಹಾದೇವಿ : ಎಂದಿಗೂ ಮಾಡುವುದಿಲ್ಲ.

ಕೌಶಿಕ : (ಪದ)

ಮಾಡದಿದ್ದರೆ ಸೌಂದರನಂಬಿ ಅನ್ನುವಂಥ ಶಿವಶರಣ
ಶಿಶುಹತ್ಯಾ ಪಾಪ ಯಾಕೆ ಮಾಡಿದಾ
ತಿಳಿಯಿನ್ನಾದರೂ ಇದು ಎಂಥಾ ಕೃತ್ಯ
ಅವನು ಮಾಡಿದ ಶಿಶುಹತ್ಯ ಪಾಪವಲ್ಲೇನು ?
ಇದು ನೋಡು ನೀ ಎಲ್ಲಾ ತಿಳಿದು
ತನ್ನ ಹೊಟ್ಟೆಯ ಮಗನ್ನ ತಾನು ನೋಡಲಿಲ್ಲಾ
ಕೊಂದು ಒಗೆದಾ ಅಂದಮೇಲೆ ಅವನೆಂಥ ಶಿವಶರಣಾ
ಶರಣರು ಪಾಪ ಮಾಡೋದಿಲ್ಲಾ ಅಂತಾ ಹೇಳ್ತಿ
ಇದು ಎಂಥ ವಿಪರೀತ ಮಗನ ಕೊಲ್ಲುವಂಥ ಪಾಪ
ಮಕ್ಕಳ ಜೋಕೆ ಮಾಡುವಂಥ ಶಕ್ತಿಯಿಲ್ಲದಿದ್ದರೆ
ಮತ್ತೆ ಸುರತ ಯಾಕೆ ಬಯಸಬೇಕು
ಆ ಶರಣಾ ಹಡೆದ ಮೇಲೆ ಸಲುಹಬೇಕು
ಶಿಶುವನ್ನ ಆಗದಿದ್ದರೆ ತಾ ಪರರಿಗೆ ಕೊಡಬೇಕು
ಶಿಶುವ ಕೊಂದು ಆ ಪಾಪಾ ಅವನೇಕೆ ಮಾಡಿದಾ ॥

(ಮಾತು) ಏನೇ, ಶರಣರು ಪಾಪ ಮಾಡುವುದಿಲ್ಲಾ ಅನ್ನುತ್ತೀಯಲ್ಲಾ, ಹಾಗಾದರೆ ಸೌಂದರನಂಬಿ ಎಂಬ ಶರಣನು, ತನ್ನ ಹೆಂಡತಿ ಅವಳಿ ಜವಳಿ ಮಕ್ಕಳನ್ನು ಹಡೆಯಲು ಅವನು ಮೊದಲು ಹುಟ್ಟಿದ ಕೂಸನ್ನು ಇಟ್ಟುಕೊಂಡು, ಹಿಂದೆ ಹಿಟ್ಟಿದ ಕೂಸನ್ನ ಹೊರಗೆ ಒಗೆದು ಬಿಟ್ಟ. ಶಿಶುಹತ್ಯೆ ಮಾಡಿದಾ ಮಹಾಪಾಪ. ಅದು ಹ್ಯಾಗೆಂದರೆ, ನೂರು ಗೋವು ಕೊಂದಷ್ಟು ಪಾಪವು ಒಬ್ಬ ಬ್ರಾಹ್ಮಣನನ್ನು ಕೊಂದರೆ ಬರುತ್ತದೆ.ನೂರು ಬ್ರಾಹ್ಮಣರನ್ನು ಕೊಂದಷ್ಟು ಪಾಪವು ಒಬ್ಬ ಸ್ತ್ರೀಯಳನ್ನು ಕೊಂದರೆ ಬರುತ್ತದೆ.ಇಂದು ನೂರುಮಂದಿ ಸ್ತ್ರೀಯರನ್ನು ಕೊಂದಷ್ಟು ಪಾಪವು ಒಂದು ಶಿಶುವನ್ನು ಕೊಂದರೆ ಬರುತ್ತದೆ.ಈ ಪ್ರಕಾರ ಶಾಸ್ತ್ರವು ಹೇಳುತ್ತದೆ.ಅಂದಮೇಲೆ ಸೌಂದರನೆಂಬ ಶರಣನಿಗೆಇದು ಗೊತ್ತಿದ್ದೂ ಬೇಕೆಂದೇ ಶಿವಹತ್ಯವನ್ನು ಏಕೆ ಮಾಡಿದಾ ? ಶರಣರು ಪಾಪ ಮಾಡುವುದಿಲ್ಲವೆನ್ನುತ್ತೀಯಲ್ಲಾ, ಮತ್ತೆ ಇದು ಪಾಪ ಅಲ್ಲವೇನು ? ನೀನೇ ಹೇಳು.

ಅಕ್ಕಮಹಾದೇವಿ : ಎಲೋ ಅರಸ, ಸೌಂದರನೆಂಬ ಶರಣರು ಆ ಕೂಸನ್ನು ಏಕೆ ಕೊಂದನೆಂದರೆ ನಮ್ಮವೀರಶೈವ ಧರ್ಮದಲ್ಲಿ ಹೀಗೆ ಹೇಳಿದೆ.

ಕೌಶಿಕ : ದೇವಿ ಏನೆಂದು ಹೇಳಿದೆ ?

ಅಕ್ಕಮಹಾದೇವಿ : ಕೌಶಿಕ ಕೇಳು, ಯಾವಾಗ ಕೂಸು ತಾಯಿಯ ಗರ್ಭದಿಂದ ಭೂಮಿಗೆ ಬಂದಿತೋ, ಆಗ ಅರ್ಧ ಶರೀರವು ತಾಯಿಯ ಗರ್ಭದಲ್ಲಿರುವಾಗಲೇ ಆ ಕೂಸಿಗೆ ಲಿಂಗಧಾರಣ ಮಾಡಿಸಬೇಕಂತ ನಿಯಮವಿದೆ.ಆದರೆ ಅದೇ ಪ್ರಕಾರ ಶರಣನು ತನ್ನ ಹೆಂಡತಿ ಒಂದುಕೂಸನ್ನು ಹಡೆಯುವಳೆಂದು ತಿಳಿದು ಒಂದು ಲಿಂಗವನ್ನು ತಯಾರ ಮಾಡಿಕೊಂಡು ಕುಳಿತಿದ್ದ.ಆಗ ಅವನ ಹೆಂಡತಿ ಒಂದರ ನಂತರ ಮತ್ತೊಂದು ಗಳಿಗೆಯ ಮೇಲೆ ಮತ್ತೊಂದು ಕೂಸು ಹಡೆದಳು.ಆಗ ಈ ಎರಡನೇಯ ಕೂಸಿಗೆ ಲಿಂಗವನ್ನು ತಯಾರ ಮಾಡುವುದರೊಳಗಾಗಿ ವೇಳೆ ಮೀರಿತು.ಆಗ ಆ ಕೂಸು ಲಿಂಗವಿಲ್ಲದ ಭವಿಯೆಂದು ಇದು ನಮ್ಮ ಮನೆಯಲ್ಲಿ ಇರಕೂಡದೆಂದು ಹೊರಗೆ ಬಿಸಾಡಿಬಿಟ್ಟ, ಕೇಳಿದೆಯೋ ಅರಸ, ಧರ್ಮದ ಪ್ರಕಾರ ಅವನು ಹಾಗೆ ಮಾಡಿದಾ, ಇದರಲ್ಲಿ ಅವನದೇನು ತಪ್ಪು ? ಧರ್ಮ ಪರಿಪಾಲನೆಗಾಗಿ ತನ್ನ ಹೊಟ್ಟೆಯ ಮಗನೆಂದರೂ ಕೇಳಲಿಲ್ಲ.ಅವನ ವೈರಾಗ್ಯವು ಎಂತಹದು ತಿಳಿಯಿತೀಲ್ಲೋ ?

ಕೌಶಿಕ : ದೇವಿ, ಅವನು ಲಿಂಗವಿಲ್ಲದ ಭವಿಯಂತಾ ಆ ಕೂಸನ್ನು ಮನೆಯೊಳಗೆ ಇಟ್ಟುಕೊಳ್ಳಬಾರದಂತ ಅದನ್ನು ಬಿಸಾಡಿದರೇನು ?

ಅಕ್ಕಮಹಾದೇವಿ : ಹೌದು, ಹೌದು ನೋಡು ಕೌಶಿಕಾ.