ಕೌಶಿಕ : ತಾಯಿ ಇಷ್ಟೇ ಆಯಿತೇನು ? ಇಷ್ಟಲಿಂಗವನ್ನು ದಯಪಾಲಿಸಿ, ಗುರುಮಂತ್ರವನ್ನು ಉಪದೇಶ ಮಾಡು ತಾಯೇ.

ಅಕ್ಕಮಹಾದೇವಿ : ಕೌಶಿಕಾ ಮಂತ್ರೋಪದೇಶವ ಮಾಡಿ, ಇಷ್ಟಲಿಂಗವನ್ನು ಧಾರಣ ಮಾಡುವಂಥಾ ಶಿವಸ್ವರೂಪರಾದಂತಾ ಜಗದ್ಗುರು ಇಲ್ಲಾ. ಮಹಾಪ್ರಭು ಸ್ವಾಮಿಗಳು ಈ ಶ್ರೀಶೈಲದೊಳಗೆ ಇದ್ದಾರೆ. ಅಲ್ಲಿಗೆ ಹೋಗೋಣ ನಡೆ, ಅಂದರೆ ಅವರ ಕಡೆಯಿಂದ ನಿನಗೆ ಶಿವ ದೀಕ್ಷೆಯನ್ನು ಕೊಡಿಸುತ್ತೇನೆ. ನೀನು ಇನ್ನು ಮೇಲೆ ತಡಮಾಡಬೇಡಾ. ಈಗಿಂದೀಗಲೇ ಹೋಗೋಣ ನಡೆ.

ಕೌಶಿಕ : (ಪದ)

ನಡಿಯವ್ವಾ ಬೇಗದಿ ಬರುವೆನಾ ಹರುಷದಿ
ಎನ್ನ ಕರುಣದಿ ನೋಡುತಿದಿ ನಾನೇ ಪುಣ್ಯಶಾಲಿ ಇನ್ನ
ನಾ ನಂಬಿದೆ ನಿನ್ನನ ಭೂಮಿಯೊಳಗ ಪ್ರಸಿದ್ಧ
ಲಕ್ಷ್ಮೇಶ್ವರ ಶುದ್ಧ ಭಕ್ತರ ಇಟ್ಟ ಪದ ಬಸವೇಶನೊಳು
ಕರುಣಿಸು ಮಾತ್ರ ಅನುಮಾನ ಅವನಿಗೆ ಮಾಡು ಕರುಣಸಾಗರ ॥

(ಮಾತು) ಅವ್ವಾ, ನನ್ನನ್ನು ಉದ್ಧಾರ ಮಾಡುವುದರ ಸಲುವಾಗಿ, ಸ್ವತಃ ನಿಂತು ಬಿಟ್ಟಿರುವಿ. ಅಂದಮೇಲೆ ನಿನ್ನಂಥಾ ಮಹಾತ್ಮಳ ಮಾತಿಗೆ ನಾನು ಒಲ್ಲೆನೆಂದು ಅಂದೇನೇಯೇ ? ಶ್ರೀಶೈಲ ಪರ್ವತಕ್ಕೆ ಹೋಗಿ ನನ್ನನ್ನು ವೀರಶೈವನನ್ನಾಗಿ ಮಾಡಿ, ಅವರ ಪಾದ ಸೇವೆಯ ಮಾಡಲು ಹಚ್ಚು. ಹೇ ಜನನಿ, ಕಲ್ಯಾಣಿ, ನಿನ್ನ ಉಪಕಾರವನ್ನು ಜನ್ಮಜನ್ಮಾಂತರದಲ್ಲಿ ಹೊಗಳಿದರೂ ತೀರದಷ್ಟು ಆಯಿತು. ಇರಲಿ ತಾಯಿ, ನನ್ನಂಥಾ ಪಾಮರನನ್ನು ಉದ್ದಾರ ಮಾಡಲಿಕ್ಕೆ ಬಂದಂತಾ ನಿಮ್ಮಂಥಾ ಜ್ಞಾನಿಗಳ ಪ್ರಭಾವವು ನಮಗೆಲ್ಲಿ ತಿಳಿಯಬೇಕು. ತಾಯೇ, ತಡಮಾಡಿದರೆ ಉಪಯೋಗವಿಲ್ಲಾ, ಈಗೀಂದೀಗ ಶ್ರೀಶೈಲ ಪರ್ವತಕ್ಕೆ ಹೋಗೋಣ ನಡೆಯಿರಿ.

ಅಕ್ಕಮಹಾದೇವಿ : ಹಾಗಾದರೆ ಈಗೀಂದೀಗ ಶ್ರೀಶೈಲ ಪರ್ವತಕ್ಕೆ ಹೋಗೋಣ ನಡೆ. ನಾನು ನಮ್ಮ ತಂದೆಗೆ ಭೆಟ್ಟಿಯಾಗಿ ಅಪ್ಪಣೆಯನ್ನು ತೆಗೆದುಕೊಂಡು ಬರುತ್ತೇನೆ. ನೀನು ಮಾತ್ರ ಬೇಗನೇ ಬಾ ತಿಳಿಯಿತೇ?

ದೃಶ್ಯ

(ಸಂನ್ಯಾಸಿ ವೇಷದಲ್ಲಿ ಕೌಶಿಕನ ಪ್ರವೇಶ)

ಕೌಶಿಕ : (ಪದ)

ಶಿವಧೋ. ಹರಧೋ ಪರಿಪಾಲಿಸೆನ್ನನ್ನು ಶಂಭೋ ॥ಪಲ್ಲ ॥
ಕೈಲಾಸ ಲಕ್ಷ್ಮೇಶ್ವರ ವಾಸ ಕರುಣಿಸೋ ನೀ ಬಸವೇಶಾ
ಗಡ ಬೇಧಿಸೋ ಎನ್ನ ಭವಪಾಶಾ ಮುಕ್ತಿಯ ಕೊಡು ಸರ‌್ವೇಶಾ ॥

(ಮಾತು ಭಿಕ್ಷಾಂದೇಹಿ ! ಭಿಕ್ಷಾಂದೇಹಿ !! ಭಿಕ್ಷಾಂದೇಹಿ !!!)

ದೂತಿ : ಯಾರವರು ಹೊರಗೆ ಬಂದವರು ? ಯಾರು ?

ಕೌಶಿಕ : ಯಾಕೆ, ದೂತಿ ಕೌಶಿಕ ರಾಜನಲ್ಲವೇ ನಾನು !

ದೂತಿ : ಅಯ್ಯ, ಕೌಶಿಕಾ ಮಹಾರಾಜರೇನು ? ಹಿಂಗ್ಯಾಕ್ರೀ ನಿಮಗೇನು ಹುಚ್ಚು ಹಿಡಿದಿದೆಯೇನು?

ಕೌಶಿಕ : ದೂತಿ, ನನ್ನ ಆಶೆಯನ್ನು ಬಿಟ್ಟು ಬಿಡು.

ದೂತಿ : ಅದ್ಯಾಕ್ರೀ, ನಿಮ್ಮ ಅಶೆ ಬಿಡುವುದು ?

ಕೌಶಿಕ : ಯಾಕೆ ಅನ್ನುವುದೇನು ? ಆಶೆ ತೀರಿತು ಇನ್ನು ಮೇಲೆ ನಾನು ಮನೆಗೆ ಬರುವುದಿಲ್ಲಾ. ನಾನು ಮಹಾದೇವಿಯೊಂದಿಗೆ ಶ್ರೀಶೈಲಕ್ಕೆ ಹೋಗುವೆ.

ದೂತಿ : ಹೋಗಬೇಡಾ ನಿಲ್ಲಿರಿ. ಒಳಗೆ ಹೋಗಿ ಬರುತ್ತೇನೆ.

ಕೌಶಿಕ : ಅದೇಕೆ ಹೋಗಬಾರದು ದೂತಿ ?

ದೂತಿ : ಅದ್ಯಾಕೆ ಹೋಗಬಾರದೆನ್ನುವುದನ್ನು ಹೇಳುತ್ತೇನೆ ಸ್ವಲ್ಪು ನಿಲ್ಲಿರಿ
(ಒಳಗೆ ಹೋಗಿ ಚಾರುಮತಿಯನ್ನು ಕರೆದುಕೊಂಡು ಬರುವಳು).

ಚಾರುಮತಿ : (ಪದ)

ಸರಿಯೇನು ಕಾಂತನೇ ನಿನಗಿದು ವೇಷ
ಯಾತರದು ನಿನ್ನ ಅಭಿಲಾಷಾ ಪಾಶಾ
ಛೀ ಎಂಥದೋ ನಿನ್ನ ಕೆಲಸ ॥ಪಲ್ಲ ॥

ರಾಜ ಚಿನ್ಹಗಳೆಲ್ಲ ತೆಗೆದು ಯಾತಕ್ಕೆ ಧರಿಸಿಯೋ ಈ ವೇಷ
ಬುದ್ದಿಯೇ ನಿಂತು ಹೋಯಿತೇ ಇಂದು
ಮಾಡುವುದಿನ್ನೇನು ನೀನು ಎಲ್ಲಿಂದಾ ಹುಡುಗಾಟಿಕೆಯನು
ಬಿಡು ಬಿಡು ಇಂದು ಗಡ ಇರು ಮನೆಯೊಳಗೆ
ಬಂದು ಸಡಗರದಿಂದಾ ನಡೆಯಿಂದು ॥

ಕೌಶಿಕ : (ಪದ)

ಮನೆಯು ಬೇಡಾ ಬದುಕು ಬೇಡಾ
ನಿನ್ನ ಕೂಡುವುದು ಬೇಡಾ ಸಂಸಾರವನ್ನು
ಬಿಟ್ಟೆನು ನಾನು ಹೊಂದಿ ವೈರಾಗ್ಯವನ್ನು
ಆದೆನೋ ಧನ್ಯ ಶಿವಶರಣರ ವಚನಾಮೃತವನ್ನು
ಕುಡಿದು ನಿಜಧಿಯೊಳು ನಾ ಹೋಗುವೆನು ॥

ಚಾರುಮತಿ : (ಪದ)

ಕಪನಿ ಅಂಗಿ ಕಮಂಡಲವು ರುದ್ರಾಕ್ಷಿಸರ
ಹಣೆಯೊಳಗೆ ಭಸ್ಮ ನಿಮಗ್ಯಾತಕ ರಾಯಾ
ರಾಜರು ನೀವು ಇದು ನಿಮಗೆಲ್ಲ ಹುಚ್ಚುತನವು
ಛೀ ಪ್ರಿಯಕಾಂತಾ ಸದ್ಗುಣ ಕಾಂತಾ
ಬಿಡುಪಂಥವ ಸಂನ್ಯಾಸಿಗಳಿಗೆಲ್ಲಿದೆ ಹಿತವು ॥

(ಮಾತು) ಹೇ ಪ್ರಾಣಾ ಮನೋಹರ, ನೀವು ಮಹಾರಾಜರಾಗಿ ಇಂಥಾ ಸಂನ್ಯಾಸಿ ವೇಷವನ್ನು ಹಾಕಿಕೊಂಡ ಮೇಲೆ ನಿಮ್ಮ ಜ್ಞಾನವು ಎತ್ತ ಹೋಗಿರುವುದು. ಹೀಗೆ ಮಾಡಿದರೆ ಎರಡನೇ ರಾಜರು ನಗಲಿಕ್ಕಲ್ಲವೇ. ಈ ಪೋಷಾಕುಗಳನ್ನು ತೆಗೆದು. ಒಳಗೆ ಹೋಗಿ, ರಾಜ ಪೋಷಾಕುಗಳನ್ನು ಹಾಕಿಕೊಳ್ಳಿರಿ ಮತ್ತು ಹಾಗೆ ಹೀಗೆ ಆದರೆ ನಿಮನ್ನೇನು ನಾನು ಬಿಡುವುದಿಲ್ಲಾ ಅಂತಾ ತಿಳಿದು ನೋಡಿರಿ.

ಕೌಶಿಕ : (ಮೌನವಾಗಿರುವನು).

ಚಾರುಮತಿ : ಯಾಕ್ರೀ ಮಾತನಾಡುವುದಿಲ್ಲಾ. ನಾನು ಒಂದೇ ಸಮನೆ ಒದರಿಕೊಂಡದ್ದು ಅರಿವೇ ಇಲ್ಲವೇನ್ರೀ ?

ಕೌಶಿಕ : ಏನೇ ನಾನು ಅನ್ನುವುದೇನು. ಸಂಸಾರವನ್ನು ಬಿಟ್ಟು ನಾನು ಸಂನ್ಯಾಸಿ ಆಗಿರುವೆನು. ಗುರುವಾಕ್ಯದಂತೆ ನಾನು ಹೋಗುತ್ತೇನೆ.

(ಹೋಗ ಹತ್ತುವನು. ಅವಳು ಮುಂದೆ ಬಂದು ತಡೆಯುವಳು).

ಚಾರುಮತಿ : ನನ್ನನ್ನು ಬಿಟ್ಟು ನೀವು ಎಲ್ಲಿಗೆ ಹೋಗುತ್ತೀರಿ ?

ಕೌಶಿಕ : ಛೇ ದುಷ್ಟೇ ಸರಿ, ದೂರ ಸರಿದು ನಿಂತು ಮಾತನಾಡು.

ಚಾರುಮತಿ : ಸ್ವಾಮಿ, ಈಗ ಎಲ್ಲಿಗೆ ಹೋಗಿತ್ತೀರಿ ? ನಿಲ್ಲಿರಿ ನಿಲ್ಲಿರಿ. ದೂತಿ ಬೇಗ ಬಾ. ಇವರ ಕೈಯೊಳಗಿನ ಸಾಮಾನುಗಳನ್ನೆಲ್ಲ ತೆಗೆದುಕೊಂಡು ಗಟ್ಟಿಯಾಗಿ ಹಿಡಿ ಬಿಡಬೇಡಾ.

ಕೌಶಿಕ : (ಪದ)

ಛೇ ದುರಾತ್ಮಳೇ ಮುಟ್ಟಬೇಡಾ ನನ್ನ
ನಾನೆಷ್ಟು ಹೇಳಲಿಯಿನ್ನ ತರ್ಕಮಾಡಬೇಡ ಇನ್ನ ॥ಪಲ್ಲ ॥

ಸಂನ್ಯಾಸಿಯಾದೆನು ಭಕ್ತನಾದೆನು ಬಿಡು ನೀ ಎನ್ನ
ಆಶೆಯನು ನರಜನ್ಮವನು ರಾಜ್ಯವು ಬೇಡಾ
ಕೋಶವು ಬೇಡಾ ಬಿಟ್ಟೆನು ಸಂಸಾರವನ್ನ
ಇದೆಲ್ಲ ಆಶೆಯನ್ನು ಬಿಟ್ಟೆನು ನಡಿನೀನು ॥1 ॥

ಕಮಂಡಲ ತಾ ಕೃಷ್ಣಾಜಿನ ತಾ
ಆಡಮಾಡಬೇಡ ಎನ್ನೊಳು
ಅಲ್ಲದ ಮಾತಾ ಎನ್ನಾಶೆಯನ್ನು ಬಿಟ್ಟು ಬಿಡು ನೀನಾ
ಸೇವಿಸಿ ಅ ಶಿವಶರಣರನ್ನು ತಾತಾ ಇವನ್ನೆಲ್ಲ ಸುಮ್ಮನೆ
ಬಿಡು ಬಿಡು ನೀ, ನಾ ಹೋಗುವೆನು
ನನ್ನ ತಡವಿದರವರನ್ನ ಕೊಲ್ಲುವೆನು ॥2 ॥

ದೃಶ್ಯ

(ದೂತಿ, ಮಹಾರಾಜರು ಹೋಗುವರು, ಹಿಡಿಯಬನ್ನಿ ಎಂದು ಚಾರುಮತಿ ಕೂಗುವಳು)

ಚಾರುಮತಿ : (ದುಃಖದಿಂದ) ಅಕಟಕಟಾ ದೇವಾ ಮಲ್ಲಿಕಾರ್ಜುನಾ ಘಾತವಾಯಿತು.

(ಪದ) ಪ್ರಿಯ ಹೋದ ಎನ್ನೊಳು ಮೋಸ ಮಾಡಿ
ಕೋಪದಿ ಎನ್ನ ನೋಡಿ ನಿಷ್ಠುರ ಮಾತಾಡಿ
ತಪ್ಪಿಸಿ ಹೋದ ನೋಡಿ ॥ಪಲ್ಲ ॥

ವೈರಾಗ್ಯ ಹೊಂದಿ ತಾನು ಸಂಸಾರ ನೀಗಿ ತಾನು
ವಿಷಯ ಸುಖಗಳನ್ನು ಕೇಳುವನೆಂದು ನುಡಿದನು ॥1 ॥

ಗುರುಸೇವಾ ಮಾಡುವೆ ಜ್ಞಾನವ ಪಡೆಯುವೆ
ಮುಕ್ತಿಯ ಹೊಂದುವೆನೆಂದು ಪೋದನು ॥2 ॥

ಖ್ಯಾತಿಯೊಳು ಪ್ರಖ್ಯಾತಿ ದೇವಗಿರಿಯ ಗ್ರಾಮ
ಬಸವೇಶನು ಘಾತ ಮಾಡಿದಾ ಸತ್ಯ ॥3 ॥

(ಮಾತು) ಅವ್ವಾ ದಾಸಿ ಪ್ರಾಣಪ್ರಿಯರು ಎತ್ತಹೋದರು. ಇನ್ನೇನು ಮಾಡಲಿ. ಪ್ರಾಣ ಪ್ರಿಯರನ್ನು ಬಿಟ್ಟು ಇನ್ನು ಹ್ಯಾಗೆ ಇರಲಿ? ಇನ್ನು ಮೇಲೆ ನಾನು ಪ್ರಾಣವನ್ನು ಇಡುವುದಿಲ್ಲಾ. ನನ್ನ ಆಶೆ ಬಿಟ್ಟು ಹೋಗವ್ವಾ ದೂತಿ.

ದೂತಿ : ಏನು ನಿಮಗೂ ಹುಚ್ಚು ಹತ್ತಿತೇನು ? ಅದು ನೋಡಿದರೆ ಬಾವಾ ಆಗಿ ಹೋಯಿತು. ನೀ ನೋಡಿದರೆ ಜೀವಾ ಕೊಡಲೆಂದು ಹೊರಟೀದಿ ಎದ್ದುಬಾ ಒಳಗೆ.

ಚಾರುಮತಿ : ನಾನು ಒಳಗೆ ಬರುವುದಿಲ್ಲ ದೂತಿ.

ದೂತಿ : ನಿಮ್ಮಂತವರು ನಮ್ಮ ಕೈಯೊಳಗೆ ಇರೋತನಕ ನೀವು ಯಾಕೆ ಚಿಂತೆ ಮಾಡುತ್ತೀ ರಾಣಿ ?

ಚಾರುಮತಿ : ದೂತಿ ನನ್ನ ಪ್ರಾಣಕಾಂತನನ್ನು ಕರೆದುಕೊಂಡು ಬಂದ ಮೇಲೆ ಒಳಗೆ ಬರುತ್ತೇನೆ.

ದೂತಿ : ನಿನ್ನ ಹಿತಕ್ಕೆ ಹೇಳುತ್ತೇನೆ ಒಳಗೆ ಬಾ.

ಚಾರುಮತಿ : ಏನದು ಹೇಳು ?

ದೂತಿ : ಅವರು ಮರಳಿ ಬರುವ ಹಾಗೆ ಒಂದು ಬೇತು ಹೇಳುತ್ತೇನೆ ಹಂಗ ಮಾಡು.

ಚಾರುಮತಿ : ಅದೇನು ಬೇತು ಹೇಳು ದೂತಿ ?

ದೂತಿ : ನಾನು ಹೇಳ್ತೀನಿ ನೀಮಾಡು.

ಚಾರುಮತಿ : ಮಾಡುತ್ತೇನೆ ನೊಡವ್ವಾ.

ದೂತಿ : ನೋಡ ಮತ್ತ, ನನ್ ಕಡೆಯಿಂದ ಆ ಕೆಲಸ ಆಗತೈತಿ. ನಿಮ್ಮಂತವರ ಕಡೆಯಿಂದ ಅಗೋದಿಲ್ಲಾ ಅದಕ್ಕ ಹೇಳ್ತೀನಿ.

ಚಾರುಮತಿ : ದೂತಿ. ನನ್ನ ಹಿತಕ್ಕಾಗಿಯೇ ಹೇಳುತ್ತಿ, ನಾನು ಯಾಕೆ ಮಾಡಬಾರದು ?

ದೂತಿ : ಏನೆಂದರೆ, ರಾಜ ಮಹಾದೇವಿಯನ್ನು ಬೆನ್ನುಹತ್ತಿ ಶ್ರೀಶೈಲಕ್ಕೆ ಹೋಗುತ್ತಾನೆ. ಅಲ್ಲಿ ಯಾವನೋ ಒಬ್ಬ ಸಾಧು ಅದಾನಂತ. ಅವನ ಸೇವಾ ಮಾಡುತ್ತೇನೆಂದಿದ್ದಾನೆ. ಅವರು ತಿರುಗಿ ಬರುವುದು ಕಠಿಣ ಅದೀತು ನೋಡು. ನಡಿ, ನಾವಾಗಿ ಹೋಗಿ ಬಾಯಿಬಡಕತನ ಮಾಡಿ ಅವನ ಮನಸ್ಸು ಒಡೆಸಿ. ಕರೆದುಕೊಂಡು ಬಂದರೆ ನೆಟ್ಟಗಾಗುತ್ತದೆ ನೋಡು.

ಚಾರುಮತಿ : ದೂತಿ ಅವರ ಮನಸ್ಸು ಒಡೆಸುವಂಥಾ ಜಾಣರು ಯಾರಿರುವರು ?

ದೂತಿ : ಯಾರೂ ಇಲ್ಲಾ. ನಿನ್ನ ಕಡೆಯಿಂದ ಆಗುತ್ತದೆ. ನೀನು ಶಾಸ್ತ್ರ ಪುರಾಣಗಳನ್ನೆಲ್ಲಾ ಬಲ್ಲವಳು. ನಿನ್ನ ಕಡೆಯಿಂದ ಆಗುತ್ತದೆ.

ಚಾರುಮತಿ : ದೂತಿ ನನ್ನ ಪ್ರಯತ್ನವೆಲ್ಲಾ ವ್ಯರ್ಥವಾಗಿ ಹೋಗಿರುವುದು.

ದೂತಿ : ನಾ ಹೇಳಿದಾಂಗ ಕೇಳಾರ ಕೇಳು. ಒಂದು ಬೇತು ಹೇಳುತ್ತೇನೆ.

ಚಾರುಮತಿ : ಅದೇನು ಬೇತು ಹೇಳವ್ವಾ.

ದೂತಿ : ಅದೇನೆಂದರೆ (ಕಿವಿಯಲ್ಲಿ ಹೇಳಬೇಕು).

ಚಾರುಮತಿ : ದೂತಿ, ಹಾಗೆ ಮಾಡಿದರೆ ಜನರು ನಗಲಿಕ್ಕಿಲ್ಲವೇ ?

ದೂತಿ : ನಗಲಿಕ್ಕೆ ಯಾರಿಗೆ ಗೊತ್ತಾಗುತ್ತದೆ ?

ಚಾರುಮತಿ : ಹಾಗಾದರೆ ಇದು ನಿನ್ನ ಮನಸ್ಸಿಗೆ ಬರುತ್ತದೆಯೇನು ?

ದೂತಿ : ನನ್ನ ಮನಸ್ಸಿಗೆ ಬಂದಲ್ಲೆ ಹೇಳುತ್ತೇನೆ ?

ಚಾರುಮತಿ : ಹಾಗಾದರೆ ತೆಗೆದುಕೊಂಡು ಬಾ. (ದೂತಿ ರಾಜಪೋಷಾಕು ತರುವಳು) ದೂತಿ ಇವುಗಳನ್ನು ಧರಿಸಲೇ ?

ದೂತಿ : ಹೌದು ಅವುಗಳನ್ನು ಧರಿಸಿಕೊಳ್ಳಿರಿ.

ಚಾರುಮತಿ : (ಪದ)

ನಾ ಧರಿಸುವೆ ಡ್ರೆಸ್ ಸ್ಥಿತಿಗ್ಹತ್ತಲಿ ಎನ್ನಯ ಕೆಲಸ ॥ಪಲ್ಲ ॥

ಈ ಜರತಾರಿ ಕೋಟನ್ನು ತೊಡುವೆ
ಈ ಮುತ್ತಿನ ಹಾರವ ಧರಿಸುವೆ
ರಾಜ್ಯಭೂಷಣ ತೊಡುವೆ ನನಗೆ ಬಂದಿತು ರಾಜನ ಕಿರೀಟ ॥1 ॥

ಬಹು ಚೆಂದಾಗಿ ತೋರುವುದೆನಗೆ ನಿಜವಾಗಿ ಪುರುಷಳಾಗುವ
ಪ್ರಸಂಗ ಎನಗೆ ಈಗ ಬಂದಿತು ಈ ಚೆಲುವೆಗೆ ॥2 ॥

ದೇವಗಿರಿಯ ದೇವನು ತಾನು ಎನಗೆ ಪಾಲಿಸಲಿ ಪತಿಯನ್ನ
ನಾ ಭಜಿಸುವೆ ನಿತ್ಯ ಅವರನ್ನ ಈಗ ಪ್ರಸಂಗವಾಗುತಲಿನ್ನು ॥3 ॥

(ಮಾತು) ದೂತಿ ನೀನು ಹೇಳಿದ ಪ್ರಕಾರ ರಾಜ ಪೋಷಾಕುಗಳನ್ನೆಲ್ಲಾ ಧರಿಸಿದ್ದೇನೆ. ಅವರು ದೂರ ಹೋಗುತ್ತಾರೆ. ಅವರಿಗಿಂತಲೂ ನಾನು ಮುಂದಾಗಿ ಹೋಗಿ, ಆ ಘೋರಾರಣ್ಯದಲ್ಲಿ ಬೇಟೆಯಾಡುವ ಹಾಗೆ ಅಡ್ಡಾಡುತ್ತ ಇರುತ್ತೇನೆ. ಪ್ರಾಣಕಾಂತನು ಬರುವನು. ಬಂದ ಕೂಡಲೇ ನನ್ನ ಕುಶಲತ್ವವನ್ನು ತೋರಿಸುತ್ತೇನೆ. ನಾನು ಮರಳಿ ಬರುವತನಕ ಎಚ್ಚರದಿಂದಿರು ತಿಳಿಯಿತಿಲ್ಲೋ. ನಾನು ಹೋಗುತ್ತೇನೆ. ಅಪ್ಪಣೆ ಕೊಡು.

ದೂತಿ : ಅಪ್ಪಣೆ ಹೋಗಿಬರ‌್ರಿ. (ಇಬ್ಬರೂ ಹೋಗುವರು).

 

ದೃಶ್ಯ

(ಚಂದ್ರಸೇನನ ವೇಷದ ಚಾರುಮತಿಯ ಆಗಮನ)

ಚಂದ್ರಸೇನ : (ಪದ)

ನಿಲ್ಲವೋ ವ್ಯಾಘ್ರನೇ ಪಾಪಿಯೇ ಕೊಲ್ಲುವೆ ನಿನ್ನ
ಬಿಲ್ಲು ಬಾಣದಿ ಗುರಿಯಿಂದ ಹೊಡೆದು ನಿನ್ನ ॥ಪಲ್ಲ ॥

ಸದಾ ಪ್ರಾಣಿಗಳನ್ನು ನೀ ಮುಂದೆ ನಾ ಮಾಡುವೆ
ಲೀಲೆಯ ಕೊಂದು ಈಗೆಲ್ಲಿ ದಾಟುವೇ ನೀನು
ನಿನ್ನ ಪ್ರಾಣವ ತೆಗೆಯಲು ಬಂದೆನು ನಿನಗೆ ಬಂತು ಕಾಲಾ ॥1 ॥

ತೋರುದಲ್ಲಾ ನಿಲ್ಲು ನಿನ್ನತಾಣ ನಿನ್ನ ಸ್ವಾರ್ಥದಕಾನನ
ಈ ಕಾನನದಲ್ಲಿ ಗಂಭೀರ ನೀನೊಬ್ಬನೇ ಆಗಿ ಉಗ್ರಸಿಡಿಲಿನಂತೆ
ಗರ್ಜಿಸುವೆ ವೀರನೆಂದೆಸಿದ ನಿನ್ನನ್ನು ಜಯಿಸಿಕೊಳ್ಳುವೆ ವೀರಾ ॥2 ॥

(ಚಾರುಮತಿ ಬೇಟೆಯಾಡುತ್ತ ಕಾನನದಲ್ಲಿ ಬರುವಳು).

(ಮಾತು : ಕೌಶಿಕನಿಗೆ) ನೀವು ಯಾರು ? ಇಂಥಾ ಭಯಂಕರ ಕಾಡಿನಲ್ಲಿ ಯಾತಕ್ಕೆ ಬಂದಿರುವಿರಿ? ಹುಲಿ ಸಿಂಹ ಕಾಡು ಮೃಗಗಳ ಅಂಜಿಕೆಯು ಇಲ್ಲದೆ ನೀವು ಜೀವದಿಂದಾ ಮುಕ್ತರಾಗಬೇಕೆಂದು ಬಂದಂತೆ ಕಾಣುತ್ತದೆ. (ಗಾಬರಿಯಾಗಿ ನೋಡಿ) ಓಹೋ ನೀನು ಉಡುತಡಿ ಪಟ್ಟಣದ ಕೌಶಿಕ ಮಹಾರಾಜರಲ್ಲವೇ ?

ಕೌಶಿಕ : ಹೌದು

ಚಂದ್ರಸೇನ : (ಪದ)

ಇದು ಏನು ಸೋಗು ಕೌಶಿಕಾ ಏನು ನಿಜ ಮೂರ್ಖ
ಧರಿಸಿದಿ ಪೋಷಾಕಾ ನಿನಗೇನು ಚಿಂತಿ ದುಃಖ ॥ಪಲ್ಲ ॥

ಸಂನ್ಯಾಸಿಯಾಗುವಿಯೇನು ಬಂದಿತು ಗೊಂದಲ
ರಾಜ್ಯವೆಲ್ಲವು ಹಾಳು ಆದೀತೇನು ಹೇಳು
ನೀನು ನಿನ್ನ ಚರಿತವು ಏನು
ಯೋಗಿ ಆಗಲು ಕಾರಣವೇನು ॥1 ॥

ಕೌಶಿಕ :  (ಪದ)

ಜ್ಞಾನವ ಪಡೆಯಲು ಗುರುಸೇವಾ ಮಾಡಲು
ವಿರತಿ ಹೊಂದಿದೆ ಕೇಳು ಸಂಸಾರ ಮಾಡಿ ಹಾಳಾ
ಕೇಳು ನೀನು ಎನ್ನ ವಾರ್ತೆಯನಾ
ನಿನಗೇನು ಹೇಳುವೆ ನಾನು ॥

ಚಂದ್ರಸೇನ : ಕೌಶಿಕಾ ಏನೆಂದಿ ? ಆತ್ಮಶುದ್ಧಿಗಾಗಿ, ಜ್ಞಾನಸಂಪಾದನೆಗಾಗಿ ವೈರಾಗ್ಯ ಹೊಂದಿ, ಗುರುಸೇವೆ ಮಾಡಬೇಕೆಂದು ಸಂನ್ಯಾಸಿಯಾಗಿರುವೆ ಏನು? ಇದೇನು ಸಂನ್ಯಾಸಿಗೆ ಹುಚ್ಚು ಹಿಡಿಯಿತೇನು ? ಇಂಥ ರಾಜಕುಲದಲ್ಲಿ ಕೀರ್ತಿಯನ್ನು ಪಡೆಯದೇ ಬಾವಾ ಆಗಿ ಮೈತುಂಬ ಬೂದಿ ಬಡಿದುಕೊಳ್ಳುದಕ್ಕಿಂತ ನಿಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕು. ಮೂರ್ಖಾ, ನಿನಗೆ ನಾಚಿಕೆ ಇಲ್ಲವೇ ? ನನಗೆ ಮೋರೆಯನ್ನು ತೋರಿಸಬೇಡಾ ಅತ್ತ ನಡೆ.

ಕೌಶಿಕ : ಬಹಳ ನೆಟ್ಟಗೆ ಮಾಡಿದಿರಿ. ಇರಲಿ ನೀವು ಯಾರು ? ಮತ್ತೆ ಯಾವ ದೇಶದ ಅರಸರು? ಇಲ್ಲಿ ಯಾತಕ್ಕೆ ಬಂದಿರುವಿರಿ ? ಮೊದಲು ನಿಮ್ಮ ಪರಿಚಯವನ್ನು ಹೇಳಿರಿ.

ಚಂದ್ರಸೇನ : ನಾನು ಯಾರೆಂದರೆ, ಆಂಧ್ರದೇಶದ ಸರ‌್ವಚಾಮರನಾದ ವೀರಕೇತುವಿನ ಮಗ. ನನ್ನ ಹೆಸರು ಚಂದ್ರಸೇನನು ತಿಳಿಯಿತಿಲ್ಲೋ. ಇಲ್ಲಿ ಮಲಯಾಳ ದೇಶದ ಸಾದುಪಾಲ ಅರಸನು ಇರುವನಲ್ಲಾ ಅವನು ನನಗೆ ಮಾವನಾಗಬೇಕು. ನಾನು ಸಹಜವಾಗಿ ಇಲ್ಲಿಗೆ ಬಂದು ಒಂದು ತಿಂಗಳಾಯಿತು. ಈ ಅರಣ್ಯದಲ್ಲಿ ಬೇಟೆಯಾಡುವುದರ ಸಲುವಾಗಿ ಬಂದಿರುತ್ತೇನೆ ತಿಳಿಯಿರಿ.

ಕೌಶಿಕ : ಆಹಾ ! ಚಂದ್ರಸೇನಾ ನನ್ನ ಗುರುತನ್ನು ಯಾತರಮೇಲಿಂದ ಹಿಡಿದೆ. ನಮ್ಮ ನಿಮ್ಮ ಪರಿಚಯ ಈ ಮೊದಲು ಇಲ್ಲವೆಂದ ಮೇಲೆ ನನ್ನ ಗುರುತು ನಿಮಗೆ ಹೇಗೆ ಆಯಿತು.

ಚಂದ್ರಸೇನ : ಹಾಗಾದನೆ ನೀವು ಹಿಂದಕ್ಕೆ ಸೌರಾಷ್ಟ್ರ ಸೋಮನಾಥನ ದರ್ಶನಕ್ಕೆ ಬಂದಾಗ್ಗೆ, ಆಗ ನಾವು ನೀವು ಮಂತ್ರಿ ಜನರನ್ನು ಕೂಡಿಕೊಂಡು ಬಂದಿದ್ದೆವು. ಆಗ ನಾವು ನೀವು ಕೂಡಿಕೊಂಡು ಎಂಟು ದಿವಸ ಇದ್ದೆವು. ಅದರಿಂದಲೇ ನಿಮ್ಮ ಗುರುತು ಹಿಡಿದೆನು.

ಕೌಶಿಕ : ಓಹೋ ಆಗ ನೀನು ಸಣ್ಣವನಿದ್ದಿ. ಈಗ ಪ್ರಾಯಕ್ಕೆ ಬಂದು ರೂಪ ಬದಲಾಗಿ ಗುರ್ತು ಹತ್ತಲೊಲ್ಲದು. ನೀವೆಲ್ಲರೂ ಕ್ಷೇಮವೇ ?

ಚಂದ್ರಸೇನ : ನಮ್ಮದೆಲ್ಲ ಕ್ಷೇಮವೇ ಸರಿ. ನಿಮ್ಮ ವಿಪರೀತಿ ಸ್ಥಿತಿಯನ್ನು ನೋಡಿ ನಾನು ಹುಚ್ಚನಾಗಿ ಬಿಟ್ಟೆನು. ನಿನ್ನ ಕೆಲಸವು, ಈ ನನ್ನ ಮನಸ್ಸಿಗೆ ಎಳ್ಳಷ್ಟೂ ಸಹ ಬರುವುದಿಲ್ಲ ನೋಡು.

ಕೌಶಿಕ : ಹ್ಯಾಗೆ ಬಂದೀತು. ಸಂಸಾರಿಕರಿಗೆ ಮತ್ತು ವಿರಕ್ತರಿಗೆ ಎಷ್ಟು ಅಂತರ ಇದೆ. ಸಂಸಾರಿಕರಿಗೆ ಸಂನ್ಯಾಸಿಗಳು ಎಳ್ಳಷ್ಟೂ ಚೆನ್ನಾಗಿ ಕಾಣುವುದಿಲ್ಲ. ಕಾಗೆಗಳ ಅಭ್ಯಾಸವಾದಂತೆ ಮಾವಿನ ಹಣ್ಣಿಗೆ ಆಸೆ ಮಾಡುವುದಿಲ್ಲ. ಬಾಕೀ ಬೇರೆ ಬೇವಿನ ಹಣ್ಣಿಗೆ ಎರಗುವವು ನೋಡು.

ಚಂದ್ರಸೇನ : ಕೌಶಿಕ ಏನಂದೀ ? ಇದರ ಅರ್ಥವೇನು ? ಕಾಗೆಯು ಮಾವಿನ ಹಣ್ಣಿಗೆ ಎರಗುವುದಿಲ್ಲ. ಬರೇ ಬೇವಿನಹಣ್ಣಿಗೆ ಎರಗುತ್ತದೆ. ಈ ಪ್ರಕಾರ ಅನ್ನುವೆಯಾ ? ಇದರೊಳಗೆ ಬೇವಿನ ಹಣ್ಣು ಯಾವುದು ? ಮಾವಿನ ಹಣ್ಣು ಯಾವುದು ?

ಕೌಶಿಕ : ಮಾವಿನಹಣ್ಣು ಎಂದರೆ ವೈರಾಗ್ಯ ಸುಖ. ಬೇವಿನಹಣ್ಣು ಎಂದರೆ ಸಂಸಾರ ಸುಖ, ಈ ಮನುಷ್ಯನೇ ಕಾಗೆ. ಕಾಗೆ ಬೇವಿನಹಣ್ಣಿಗೆ ಹ್ಯಾಗೆ ಬೀಳುತ್ತದೆಯೋ, ಅದರಂತೆ ಈ ಮನುಷ್ಯನು ಕೇವಲ ಸಂಸಾರ ಸುಖಕ್ಕೇ ಬೀಳುತ್ತಾನೆ. ಈ ಹೊಲಸು ಸಂಸಾರವು ಶ್ರೇಷ್ಠವೆಂದು ತಿಳಿದು, ಅದರೊಳಗೆ ಬಿದ್ದು ಒದ್ದಾಡಿ. ಹಾಳಾಗಿ ಹೋಗುತ್ತಾರೆ. ಇದನ್ನೆಲ್ಲ ತಿಳಿದು ಸಂಸಾರವು ಬ್ಯಾಡಾಗಿ ಸಂನ್ಯಾಸಿ ಆಗಿರುವೆ ನೊಡು.

ಚಂದ್ರಸೇನ : ಏನಂದೀ ಕೌಶಿಕಾ, ? ಎಂತಹ ಹುಚ್ಚ ನೀನು, ನಿನ್ನ ಮಾತಿನ ಮೇಲಿಂದ ಸಂಸಾರದಲ್ಲಿ ಮುಕ್ತಿಯಿಲ್ಲ ಅನ್ನುವ ಹಾಗೆ ಆಯಿತಲ್ಲಾ.

ಕೌಶಿಕ : ಹೌದು ನೋಡು.

ಚಂದ್ರಸೇನ : ಹಾಗಾದರೆ ಈ ಪ್ರಪಂಚದಿಂದ ಪರಮಾರ್ಥವಿಲ್ಲವೇ ?

ಕೌಶಿಕ : ಇಲ್ಲ ಇಲ್ಲ !

ಚಂದ್ರಸೇನ : ಇಲ್ಲ !

ಕೌಶಿಕ : ಇಲ್ಲ.

ಚಂದ್ರಸೇನ : (ಪದ)

ಇಲ್ಲದಿದ್ರ ಅಜಾತಶತ್ರು ಹ್ಯಾಂಗ ಮುಕ್ತಿ ಹೊಂದಿದನು
ಪ್ರಪಂಚದೊಳಗೆ ಇದ್ದ ಅವನು ಜನ್ಮಾತ್ರ
ಬೇಕಾದಾಗ ಸಂಸಾರ ಮಾಡುತ್ತಿದ್ದನಂತೆ
ಸಂಸಾರ ಮಾಡಿ ಅವನು ಕೀರ್ತಿ ಪಡೆದನು
ಪ್ರಪಂಚದಿಂದ ಮುಕ್ತಿ ಅವನಿಗೆ ಹ್ಯಾಗಾದೀತು ಹೇಳು ಮುಕ್ತಿ ॥1 ॥

ಸಂಸಾರದಿಂದ ಎಲ್ಲಾ ಸುಖ ಸಂಸಾರದಿಂದ ಮುಕ್ತಿಸುಖ
ಸಂಸಾರದೊಂದಿಗಿನ ಸಖ್ಯ ಲೋಕದಲ್ಲಿ ಸಂಸಾರ ಬಿಟ್ಟು ಸುಖವಿಲ್ಲ ಕೇಳಪ್ಪಾ
ಹೇಳಿರುವ ಮುಖ್ಯ ಸಂನ್ಯಾಸತ್ವದಲ್ಲಿ ಸೌಖ್ಯ ಬಹಳ ಇದ್ದರೆ
ಯತಿಗಳಲ್ಲಿ ಇರುತ್ತಿದ್ದರು, ಸಂಸಾರದಲ್ಲಿ ಹೆಂಡರನ್ನು
ಮದುವೆ ಮಾಡುವುದು, ಹೆಂಡರಿಲ್ಲದ ಬರೆ ಋಷಿಗಳುಂಟೋ
ಮುಂದೆ ಹೇಳು ಚೆಂದಿಂದಲಿ ಅನುಭವದಿಂದ ॥2 ॥

(ಮಾತು) ಏನು ಕೌಶಿಕಾ, ಸಂಸಾರದಿಂದ ಪಾರಮಾರ್ಥ ಇಲ್ಲವೆಂದು ಅನುಭವವೆಲ್ಲ ನಿನಗೇನು ತಿಳಿದಿರುತ್ತದೆ? ಅಜಾತಶತುೃ ಮೊದಲಾದ ಅರಸರು ಹೆಂಡರು ಕೂಡ ಪ್ರಪಂಚ ಮಾಡಿಯೂ ಪಾರಮಾರ್ಥವನ್ನು ಯಾಕೆ ಪಡೆದರು? ಸಂನ್ಯಾಸತ್ವದಲ್ಲಿ ಸುಖವಿದ್ದರೆ ಮುಂದೆ ವಿರಕ್ತರಾದಂಥ ಋಷಿಗಳು ಹೆಂಡರನ್ನಾಳಿ, ಹೆಂಡರ ಕೂಡ ಸಂಸಾರ ಮಾಡಿ ತಪೋಬಲದಿಂದ ಮೋಕ್ಷ ಹೊಂದಿದರೆಂದು, ಹೀಗೆ ಎಲ್ಲ ಶಾಸ್ತ್ರಗಳಲ್ಲಿ ಹೇಳಿರುತ್ತದೆ. ಈ ಸಂನ್ಯಾಸಿ ವೇಷವನ್ನು ಬಿಟ್ಟು ಸುಮ್ಮನೆ ಮನೆಗೆ ಹೋಗಿ ನಿನ್ನ ಹೆಂಡಿರ ಕೂಡ ಪ್ರಪಂಚ ಮಾಡುತ್ತಾ ರಾಜ್ಯವನ್ನು ಆಳು. ನಿನ್ನ ಹೆಂಡತಿಯು ಮಹಾ ಪತಿವೃತೆ ಇರುವಳೆಂದು ಈ ಜಗತ್ತಿನ ತುಂಬೆಲ್ಲ ಪ್ರಸಿದ್ಧವಾಗಿರುತ್ತದೆ. ಅಂತಾಕಿಯನ್ನು ಬಿಟ್ಟು ಬಾವಾ ಆಗಿ, ಬೂದಿ ಬಡಿದುಕೊಳ್ಳಲಿಕ್ಕೆ ನಿನಗೆ ಯಾರು ಉಪದೇಶ ಮಾಡಿದರು? ಕೌಶಿಕಾ, ನನ್ನ ಮಾತು ಕೇಳು. ಸುಮ್ಮನೆ ಮನೆಗೆ ಹೋಗುತ್ತೀಯೋ ಇಲ್ಲೋ ಹೇಳು ?

ಕೌಶಿಕ :  ಚಂದ್ರಸೇನಾ, ನೀನು ಎಷ್ಟೇ ಹೇಳಿದರೂ ನಾನು ಕೇಳುವುದಿಲ್ಲ ನೊಡು.

ಚಂದ್ರಸೇನ : ಅದೇಕೆ ಕೇಳುವುದಿಲ್ಲ. ನಾನು ನಿಮಗೆ ಕೆಡಕು ಹೇಳುವೆನೇನು ? ಬಾವಾ ಆಗು ಅಂತ ಉಪದೇಶ ಮಾಡಿದವರ‌್ಯಾರು ಅನ್ನುವುದನ್ನು ಹೇಳು.

ಕೌಶಿಕ ಚಂದ್ರಸೇನಾ ನೀನು ನನ್ನನ್ನು ತೇಟ್ ಹುಚ್ಚನನ್ನಾಗಿ ಮಾಡಿ ಬಿಟ್ಟಿರುವೆಯಲ್ಲಾ. ಪ್ರಸಿದ್ಧ ಜ್ಞಾನಿಗಳಿಂದ ಉಪದೇಶ ತಕ್ಕೊಂಡು ವಿರಕ್ತನಾಗಿದ್ದೇನೆ. ನನಗೆ ಯಾತಕ್ಕೆ ಅನ್ನುವಿ ಸುಮ್ಮನೇ ಇರು.

ಚಂದ್ರಸೇನ : ಎಲೋ ನೀನು ಮಹಾಜ್ಞಾನಿಗಳಿಂದ ಉಪದೇಶ ತೆಗೆದುಕೊಂಡಿರುವೆ ಏನು ?

ಕೌಶಿಕ ಹೌದು ಮಹಾಜ್ಞಾನಿಗಳಿಂದ ಉಪದೇಶ ತೆಗೆದುಕೊಂಡಿರುತ್ತೇನೆ.

ಚಂದ್ರಸೇನ : ಅದೆಂಥಾ ಜ್ಞಾನಿಗಳೋ ನಿನಗೆ ಉಪದೇಶ ಮಾಡಿರುವವರು ? ಹಾಗಾದರೆ ಆ ಜ್ಞಾನಿಗಳು ಯಾರು ಅನ್ನುವುದನ್ನು ಹೇಳು.

ಕೌಶಿಕ ಯಾರೆಂದರೆ, ನಮ್ಮ ಉಡುತಡಿ ಪಟ್ಟಣದೊಳಗೆ ಮಹಾದೇವಿ ಎನ್ನುವಂಥ ಒಬ್ಬ ವಿರಕ್ತಳು ಶಿವಜ್ಞಾನ ಸಂಪನ್ನಳಾಗಿ ಶಿವಸಾಮ್ರಾಜ್ಯವನ್ನಾಳುತ್ತಿರುವಳು. ಆ ತಾಯಿಯೇ ಉಪದೇಶವನ್ನು ಕೊಟ್ಟು ನನ್ನನ್ನು ಕರುಣಿಸಿರುವಳು ನೋಡು.

ಚಂದ್ರಸೇನ : ಕೌಶಿಕಾ, ನಿನಗೆ ಉಪದೇಶ ಮಾಡಿರುವವಳು ಆ ಮಹಾದೇವಿಯೇ ?

ಕೌಶಿಕ ಹೌದು.

ಚಂದ್ರಸೇನ : ಅಂದಮೇಲೆ ತೀರಿಹೋಯಿತು ಕೇಳುವುದೇನು ?

ಕೌಶಿಕ ಚಂದ್ರಸೇನಾ ಅದೇಕೆ ಹಾಗೆನ್ನುವೆ. ಹೇಳು.