ಕೌಶಿಕ : ಮಹಾದೇವಿ ಎಂಥಾ ಹುಚ್ಚುತನವು.ಒಂದು ಗೋಲಗುಂಡಿನ ಪ್ರಕಾರದ ಕಲ್ಲನ್ನು ಲಿಂಗ ಎಂದು ಕೊರಳಲ್ಲಿ ಕಟ್ಟಿಕೊಂಡರೆ ಏನಾಗುತ್ತದೆ ?

ಅಕ್ಕಮಹಾದೇವಿ : ಎಲೋ ರಾಜಾ, ಕಲ್ಲು ಅನ್ನಬೇಡಾ, ಇಷ್ಟಲಿಂಗ ಮಹತ್ವವನ್ನು ನಿಮ್ಮಂಥ ಭವಿಗಳಿಗೇನು ಗೊತ್ತು ? ಕೇಳು, ಲಿಂಗದಲ್ಲಿ ಮೂರು ಲೋಕಗಳು ಅಡಗಿವೆ.ಯಾವತ್ತೂ ಚರಾಚರ ಪ್ರಾಣಿಗಳೆಲ್ಲಾ ಲಿಂಗದಲ್ಲಿಯೇ ಹೊರತು ಬೇರೆ ಅಸ್ತಿತ್ವವಿಲ್ಲಾ. ಈ ಪ್ರಕಾರ ಲಿಂಗ ಪುರಾಣದಲ್ಲಿ ಹೇಳಿದೆ.ಅಂದಮೇಲೆ ಮೂರು ಲೋಕವನ್ನೆಲ್ಲಾ ತನ್ನ ಉದರದಲ್ಲಿ ಇಂಚಿಟ್ಟುಕೊಂಡಂತ ಇಷ್ಟಲಿಂಗಕ್ಕೆ ಕಲ್ಲು ಅನ್ನುತ್ತೀಯಲ್ಲಾ, ಹಾಗೆ ಅನ್ನಬಾರದು. ಯಾಕೆಂದರೆ ನಿಂದೆ ಮಾಡಿದಂತೆ ಆಗುತ್ತದೆ. ಆ ಪಾಪ ನಿನ್ನನ್ನು ಎಂದೂ ಬಿಡುವುದಿಲ್ಲಾ, ನೋಡಿಕೊಂಡು ಮಾತನಾಡು ಅರಸನೇ.

ಕೌಶಿಕ : ದೇವಿ ಅಲ್ಲದ್ದು ಏಕೆ ಹೇಳುತ್ತೀ ? ಆಡೋ ಹುಡುಗರ ಮುಂದೆ ಹೇಳು, ಅವರು ನಿಜ ಎಂದು ನಂಬುತ್ತಾರೆ.ಏನೇ ಗೋಲಿಗುಂಡಿನೊಳಗೆ ಮೂರು ಲೋಕ ಅದಾವು. ಅಂತ. ಇದಕ್ಕ ಯಾರಾದರೂ ಹೌದು ಅಂದಾರೇನು ? ಶರಣರ ಹತ್ತಿರ ಎಳ್ಳಷ್ಟೂ ಹುರುಳಿಲ್ಲಾ ನೋಡು.

ಅಕ್ಕಮಹಾದೇವಿ : ಛೀ ಏನಂದಿರಿ, ಶರಣರೆಂದರೆ ಯಾರಂತ ತಿಳಿದಿರುವಿರಿ.ಈ ಭೂಮಿಯನ್ನು ಪುಡಿ ಮಾಡಬೇಕೆಂದರೆ ಮಾಡ್ಯಾರ. ಪೂರ್ವಕ್ಕೆ ಹುಟ್ಟುವ ಸೂರ‌್ಯನನ್ನು ಪಶ್ಚಿಮಕ್ಕೆಯಾದರೂ ಹುಟ್ಟಿಸಬಹುದು.ಸಿಟ್ಟಿಗೆದ್ದು ನೋಡಿದರೆ ನಕ್ಷತ್ರಗಳೇ ಎದುರು ಬರಬಹುದು.ಇಂಥ ಮಹಾತ್ಮರಿಗೆ ಸತ್ವವಿಲ್ಲ ಅನ್ನುವೆಯಲ್ಲಾ ?ನಿನಗೇನು ತಿಳಿದಿದೆ ಶಿವಶರಣರೆಂದರೆ ಶಿವನಕಿಂಥ ಹೆಚ್ಚಿನವರಂತಾ ತಿಳಿದು ಬಿಡು.

ಕೌಶಿಕ : ಏನೇ ಅಂದಾಗ್ಯೂ ಶಿವಶರಣರ ಶಿವನಕಿಂತ ಹೆಚ್ಚಿನವರೆಂತಾದರೆ ಅವರು ಏನು ಮಾಡ್ಯಾರ ಹೇಳರ ಹೇಳು ?

ಅಕ್ಕಮಹಾದೇವಿ : ಎಲವೋ ಅರಸನೇ ಶಿವಶರಣರ ಹತ್ತಿರ ಸತ್ಯ ಇಲ್ಲ ಅಂದಾಂಗ ಆಯಿತಲ್ಲಾ.

ಕೌಶಿಕ : ಹೌದು ಸತ್ಯ ಇಲ್ಲಾ.

ಅಕ್ಕಮಹಾದೇವಿ : ಏನು ? ಶಿವಶರಣರ ಹತ್ತಿರ ಸತ್ಯವಿಲ್ಲವೇ ?

ಕೌಶಿಕ : ಎಳ್ಳಷ್ಟೂ ಇಲ್ಲಾ ನೋಡು.

ಅಕ್ಕಮಹಾದೇವಿ : (ಪದ)

ಎಳ್ಳಷ್ಟೂ ಇಲ್ಲದಿದ್ದರೆ ಮುಸುಡೆ ಚೌಡಯ್ಯನೆಂಬ ಶರಣನು
ಗೊಂಬಿಯನ್ನು ಮನುಷ್ಯನನ್ನಾಗಿ ಮಾಡಿದ ಸತ್ವ ಎಲ್ಲಿಂದ ಬಂತು
ಅವನಿಗೆ ಶಿವಶರಣರಿಗೆ ಸತ್ವ ಇಲ್ಲೆಂತ ಅಡುವಿಯಲ್ಲಾ
ಮೂಲದ ತಿಳಿಯದೆ ಭೂಪಾ ಎಳ್ಳಷ್ಟೂ ಗೊತ್ತಿಲ್ಲಾ ನಿನಗೆ
ಭವಿಗಳೆಲ್ಲಾ ಕೂಡಿ ಒಂದೇ ಒಂದು ಬೇತು ಶರಣನನ್ನು
ಮಾನಗೇಡಿ ಮಾಡಲಿಕ್ಕೆ ತಂತ್ರವನ್ನು ಮಾಡಿದರು
ಮನುಷ್ಯಾಕೃತಿಯ ಗೊಂಬಿಯನ್ನು ಗೋಣಿಯ ಚೀಲದಲ್ಲಿ
ಅರಳೆಯ ತುಂಬಿ ಮೇಲೆ ಬಣ್ಣವನ್ನು ಹಚ್ಚಿ ತಂದರು ಮನುಷ್ಯನಂತೆ ॥

(ಮಾತು) ಕೌಶಿಕಾ, ಶಿವಭಕ್ತರ ಹತ್ತಿರ ಎಳ್ಳಷ್ಟೂ ಸತ್ಯ ಇಲ್ಲಾ ಅನ್ನುತ್ತೀಯಲ್ಲಾ, ಆ ಮುಸುಡೆ ಅನ್ನುವಂತ ಪಟ್ಟಣದೊಳಗೆ ಎಲ್ಲಾ ಭವಿಗಳು ಕೂಡಿ ಶಿವಶರಣನಾದ ಚೌಡಯ್ಯನಿಗೆ ಚೇಷ್ಟೆ ಮಾಡಬೇಕೆಂದು ಒಂದು ಅಕಲು ಮಾಡಿದರು.ಅದೇನು ಅಂದರೆ, ಒಂದು ಗೋಣಿ ಚೀಲದೊಳಗೆ ಅರಳೆಯನ್ನು ತುಂಬಿ, ಅದನ್ನು ಮನುಷ್ಯಾಕೃತಿ ಮಾಡಿ, ವಿಭೂತಿ, ರುದ್ರಾಕ್ಷಿಧಾರಣ ಮಾಡಿಸಿ, ಅದನ್ನು ಒಯ್ದು ಒಂದು ಹಾಳು ಗುಡಿಯೊಳಗೆ ಕೆಡವಿ, ಓಹೋ ಒಬ್ಬ ಬಡ ಜಂಗಮನು ಸತ್ತಿರುವನು. ಇವನಿಗೆ ಯಾರೂ ದಿಕ್ಕಿಲ್ಲ.ನಮ್ಮಲ್ಲಿಯ ಶಿವಶರಣರು ಹಣವಿದ್ದರೆ ಮಾತ್ರ ಹೆಣ ಎಬ್ಬಿಸಿಕೊಂಡು, ಆ ಹೆಣವನ್ನು ಮಣ್ಣುಗಾಣಿಸುತ್ತಿದ್ದರು.ಇವರ ಹತ್ತಿರ ಏನೂ ಇಲ್ಲಾ ಅಂತ ತಿಳಿದು ಅವನ ಆ ಹೆಣದ ಸಮೀಪಕ್ಕೆ ಯಾರೂ ಬರಲಿಲ್ಲಾ ಎಂದು ಶಿವಶರಣರನ್ನು ಬೈಯುತ್ತ, ಪಾಪ ಇವನನ್ನು ಯಾರೂ ಮಣ್ಣುಗಾಣಿಸುವವರಿಲ್ಲಾ ಎಂದು ಒಂದು ವಿಮಾನ ಮಾಡಿ, ಅದರೊಳಗೆ ಕೂಡಿಸಿ, ನಾಲ್ಕು ಮಂದಿ ಜಂಗಮರನ್ನು ಬೆದರಿಸಿ ಕರೆದುಕೊಂಡು ಬಂದು, ಅವರ ಮೇಲೆ ಹೊರೆಸಿಕೊಂಡು ಶಿವಶರಣರನ್ನು ಬೈಯುತ್ತ ನಡೆದರು.ಆಗ ಚೌಡಯ್ಯನೆಂಬ ಶರಣನು ಇದು ಭವಿಗಳ ಕೃತಿ ಅಂತಾ ತಿಳಿದು, ಆವಾಗ ಶಿವಭಕ್ತರಿಗೆ ಅಪಹಾಸ್ಯ ಮಾಡುವುದರ ಸಲುವಾಗಿ ಭವಿಗಳು ಹೀಗೆ ಸಂಚನ್ನು ಮಾಡಿದ್ದಾರೆ. ಅದಕ್ಕೆ ಶಿವಭಕ್ತಿಯ ಪ್ರಭಾವವನ್ನು ತೋರಿಸಬೇಕೆಂದು ಹಾಗೆ ಒಂದು ಹತಾರವನ್ನು ತೆಗೆದುಕೊಂಡು ಆ ಗೋಣಿ ಚೀಲದೊಳಗಿನ ಗೊಂಬಿಗೆ ಮಾತಾಡಿಸಿದರು.

ಕೌಶಿಕ : ಏನೆಂದು ಮಾತಾಡಿಸಿದರು ಮಹಾದೇವಿ ?

ಅಕ್ಕಮಹಾದೇವಿ : ಎಲೈ ನೀನು ಯಾತಕ್ಕೆ ಸುಮ್ಮನೆ ಕುಳಿತಿರುವೆ, ಎದ್ದು ಬಾ ಎಂದು ಅದಕ್ಕೆ ಆ ಹತಾರವನ್ನು ಮುಟ್ಟಿಸಿದರು.ಕೂಡಲೇ ಅದು ನಿಜವಾದ ಮನುಷ್ಯನಾಗಿ ಬಂದು ಶರಣರ ಪಾದಕ್ಕೆ ನಮಸ್ಕಾರ ಮಾಡಿತು.ಅದಕ್ಕೆ ಚೌಡಯ್ಯನು ಚಿರಂಜೀವಿಯಾಗು ಎಂದು ಆಶೀರ್ವಾದ ಮಾಡಿ ಶಿಷ್ಯನನ್ನಾಗಿ ಮಾಡಿಕೊಂಡನು.ರಾಜಾ, ಶಿವಶರಣರಿಗೆ ಸತ್ಯವಿಲ್ಲೆಂದು ಅನ್ನುತ್ತೀಯಲ್ಲಾ.ಹಾಗಾದರೆ ಆ ಗೋಣಿಚೀಲದ ಅರಳೆಯ ಗೊಂಬೆಯು ನಿಜವಾದ ಮನುಷ್ಯನಾಗಬೇಕಾದರೆ, ಅವನ ಹತ್ತಿರ ಎಂಥಾ ಸತ್ಯ ಇದ್ದಾಂಗಾಯಿತು.ಇದನ್ನು ವಿಚಾರಿಸಿ ಮುಂದೆ ಮಾತನಾಡು.

ಕೌಶಿಕ : ಏನೇ, ನೀನು ಎಂಥಾ ಬೆರಕಿ ಇರುವಿ, ನಾನು ಬೇಕಾದ್ದು ಹೇಳಿದರೂ ಅದನ್ನೆಲ್ಲಾ ಸುಳ್ಳುಮಾಡಿ ನಿಂದೇ ನಿಜ ಎನ್ನುವಂತೆ ಮಾಡುವಿಯಲ್ಲಾ, ಇಂಥಾ ಬಾಯಿ ಬಡುಕುತನ ಎಲ್ಲಿ ಕಲಿತು ಬಂದಿರುವಿ, ನಿನ್ನಂಥಾ ಸುಳ್ಳು ಹೇಳುವವರನ್ನು ನಾನು ಎಲ್ಲಿಯೂ ಕಂಡಿಲ್ಲಾ ನೋಡು.

ಅಕ್ಕಮಹಾದೇವಿ : ಎಲೈ ಅರಸನೇ, ನಾನು ಸುಳ್ಳು ಹೇಳುವವಳಲ್ಲಾ, ಸುಳ್ಳು ಹೇಳುವವರನ್ನು ಹಾಳು ಮಾಡುವಂಥ ಸಂನ್ಯಾಸಿ ಇದ್ದೇನೆ.

ಕೌಶಿಕ : ಏನೇ ಒಯ್ಯರಿ, ನೀನು ಹಾಗೆ ಹೇಳಿಕೊಂತ ನಿಂತರೆ ನೀನು ಬೆಳತನಕ ಹೇಳಿದರೂ, ಇನ್ನು ಮೇಲೆ ಅದೇನೂ ಕಾರಣವಲ್ಲಾ, ಇದೆಲ್ಲಾ ಬಿಟ್ಟು ನನಗೊಂದು ಚುಂಬನವನ್ನು ಕೊಟ್ಟು ಕಾಮಸುಖಕ್ಕೆ ಅನುಕೂಲಳಾಗು ಬಾ.

ಅಕ್ಕಮಹಾದೇವಿ : ಛೀ ! ದುಷ್ಟಾ, ಸರಿದು ನಿಂತು ಮಾತನಾಡು, ನನ್ನ ಮೈ ಮುಟ್ಟು ಬಂದರೆ ಸುಟ್ಟು ಬೂದಿಯಾಗುವೆ, ನಾನು ಸಂನ್ಯಾಸಿ ಇದ್ದೇನೆ.ಇಂಥಾ ಹುಡುಗಾಟಿಕೆಯನ್ನು ಬಿಟ್ಟು ಬಿಡು.ಯಾಕೆ ನಿನಗೆ ಯಾವದೂ ತಿಳಿಯುವುದಿಲ್ಲಾ? ನಿನ್ನ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ, ಸ್ವಲ್ಪ ತಿಳಿದು ನೋಡು.

ಕೌಶಿಕ : ಏನೇ ನೀನು ಸನ್ಯಾಸಿಯಾದರೆ ನನಗೇನು ? ನಾನು ಸನ್ಯಾಸಿ ಅಂತ ಪೌರುಷ ಹೇಳುತ್ತೀ ಯಾಕೆ? ನನ್ನನ್ನು ಏನು ಮಾಡುತ್ತೀ? ಸುಮ್ಮನೆ ಇಂಥ ವೈರವನ್ನು ಬಿಟ್ಟುಬಿಡು

 (ಪದ)

ನೀ ಬೇಗಬಾ ಮಹಾದೇವಿ ನೀನೀಗ ಸುರತರ ಅನುಭಾವಿ
ಸೈರಿಸಲಾರೆನು ಈ ಸಮಯ ಮಾರನ ಬಾಧೆಯು ಕೊಲ್ಲುವುದೆನ್ನ
ನಿನಗೆ ವರನಾಗಿರುವೆ ನಾ ಗಡ ಹರುಷದಿ ನೀ ಸ್ಮರಣೆಯಕೊಟ್ಟು
ಎನ್ನ ಪರಿಹರಿಸೆನ್ನನು ಹರಷಗೊಳಿಸು ನೀ ಪ್ರಿಯತಮೆ ॥

(ಮಾತು) ದೇವಿ, ನನಗೆ ಕಾಮತಾಪವು ಮಿತಿಮೀರಿದೆ, ಜೀವ ಉಳಿಯದಂತೆ ಆಗಿದೆ.ನಿನಗೆ ಶಿರಬಾಗಿಬೇಡಿಕೊಳ್ಳುವೆ, ಬಂದು ಧೃಡಾಲಿಂಗವನ್ನು ಕೊಡು. (ಮೈ ಮುಟ್ಟ ಹೋಗಬೇಕು).

ಅಕ್ಕಮಹಾದೇವಿ : (ಹಿಂದೆ ಸರಿದು) ಥೂ ಮೂರ್ಖಾ ! ಸರ್ಪನ ತಲೆಯೊಳಗಿನ ರತ್ನವು ಏನು ಮಾಡಿದರೂ ಸಿಕ್ಕುವುದಿಲ್ಲ. ಇನ್ನೊಮ್ಮೆ ಮೈಮುಟ್ಟ ಬಂದರೆ ಶಾಪವೆಂಬ ಖಡ್ಗದಿಂದ ನಿನ್ನ ಕೈಗಳನ್ನು ಕತ್ತರಿಸಿ ಬಿಟ್ಟೇನು ! ತಿಳಿಯಿತೇ ? ನನ್ನಂಥ ಶಿವಭಕ್ತಳ ಮೇಲೆ ಕೈ ಮಾಡಿದರೆ ನಿನಗೆ ಏನೋ ಕೆಡುಗಾಲ ಬಂದಿರುತ್ತದೆ.ಸುಳ್ಳೇ ಯಾತಕ್ಕೆ ಕೆಡುವಿ.ಶಿವಶರಣರ ಸೇವೆ ಮಾಡಿ. ಅದರಿಂದ ಅಷ್ಟಾವರಣದ ತತ್ವವ ತಿಳಿದುಕೊಂಡು, ಶಿವದೀಕ್ಷೆ ಹೊಂದಿ ಶಿವಭಕ್ತನಾಗು.ಶಿವಭಕ್ತಿಯ ಪ್ರಭಾವದ ಮುಂದೆ ಈ ಮೂರುಲೋಕದಲ್ಲಿ ಯಾವುದೂ ಇಲ್ಲಾ.ಆದುದರಿಂದ ವಿಭೂತಿ, ರುದ್ರಾಕ್ಷಿ ಹಾಗೂ ಲಿಂಗಧಾರಣ ಮಾಡಿಕೋ ಯಾಕೆ ಅರಸ ಸುಮ್ಮನಾದಿ ?

ಕೌಶಿಕ : ಏನೇ, ಹೇಳುತ್ತೇನ ಕೇಳು.

(ಪದ) ಇಂಥ ಬೋಧವ ನಾನು ಕೇಳುವೆನೇನೇ
ಎಂಥಾ ಹುಚ್ಚುತನ ಹೇಳಿದೆ ನೀ
ಹರಭಕ್ತನಾಗೆಂದು ಅರಸನ ಮರುಳ ಮಾಡಿ
ಪರಿಪರಿ ಬೋಧವ ನೀ ಎನಗೆ ಮಾಡಿ ॥

ಕಲ್ಲ ಕೊರಳಲ್ಲಿ ಕಟ್ಟು ಅನ್ನುವೆ
ಮೆಲ್ಲಮೆಲ್ಲನೆ ವಿಪರೀತ ಹೇಳುವೆ
ಸಲ್ಲದಿದು ರಾಜನಿಗೆ ದೇವಿ ನಾ ಒಲ್ಲೆನು
ನಿನ್ನದೆಲ್ಲ ಅನುಭಾವದ ಪುರಾಣ ॥

ಅಕ್ಕಮಹಾದೇವಿ : (ಪದ)

ಕೊರಳೊಳಗೆ ಲಿಂಗವ ಕಟ್ಟಿಸುವೆ
ವರಭಸ್ಮವ ನಿನಗೆ ಹಚ್ಚಿಸುವೆ
ಹರಭಕ್ತನನ್ನಾಗಿ ಮಾಡಿ ಬಿಡುವೆ
ನರಪಾಪಿ ನಿನ್ನ ಸೊಕ್ಕನ್ನು ನಾ ಮುರಿವೆ ॥

ಕೌಶಿಕ : ಏನೇ ನಾನೆಂಥ ಮಹಾರಾಜಾ, ನನ್ನಂಥವನಿಗೆ ಲಿಂಗಧಾರಣ ಮಾಡಿ, ಕೊರಳಲ್ಲಿ ಕಲ್ಲು ಕಟ್ಟಿ, ಮೈತುಂಬ ಬೂದಿಯ ಬಡಿಸಿ, ನನ್ನನ್ನು ಬೂದಿ ಬಡಕನನ್ನಾಗಿ ಮಾಡಬೇಕಂತಾ ಮಾಡಿರುವಿಯೇನು ? ಇನ್ನೊಮ್ಮೆ ಲಿಂಗಧಾರಣ ಮಾಡು, ವಿಭೂತಿ ಹಚ್ಚಿಕೊಳ್ಳು, ಹಾಂಗS ಹೀಂಗS ಅಂದರೆ ನಿನ್ನ ನಾಲಿಗೆ ಕಿತ್ತು ಬಿಡುವೆ.ನಾನು ಯಾರೆಂಬುದನ್ನು ತಿಳಿದುಕೊಂಡು ಮಾತನಾಡು, ತಿಳಿಯಿತಿಲ್ಲೋ ?

ಅಕ್ಕಮಹಾದೇವಿ : ನೀನು ಯಾರೆಂಬುದು ನನಗೇ ಮೊದಲೇ ತಿಳಿದಿದೆ.ಶಿವಭಕ್ತನಾಗುವಿಯೋ ಇಲ್ಲವೀ ಅಷ್ಟು ಹೇಳು?

ಕೌಶಿಕ : ನಾನು ಆಗುವುದಿಲ್ಲ ನೋಡು.

ಅಕ್ಕಮಹಾದೇವಿ : ನಾನು ನಿನ್ನನ್ನು ಶಿವಭಕ್ತನಾಗಿ ಮಾಡದೇ ಬಿಡುವುದಿಲ್ಲಾ ನೋಡು.

ಕೌಶಿಕ : ನಾನು ಆಗದಿದ್ದರೆ ನೀನೇನು ಮಾಡುತ್ತೀ ?

ಅಕ್ಕಮಹಾದೇವಿ : ನೀನೇ ನನ್ನನ್ನು ಶಿವಭಕ್ತನನ್ನಾಗಿ ಮಾಡು ಅಂತಾ ಗಂಟು ಬಿದ್ದಿರಬೇಕು ಹಾಗೆ ಮಾಡುತ್ತೇನೆ ನೋಡು.

ಕೌಶಿಕ : ಏನೇ ನನ್ನ ಪ್ರಾಣಹೋದರೂ ಶಿವಭಕ್ತನಾಗುವುದಿಲ್ಲ ನೋಡು.

ಅಕ್ಕಮಹಾದೇವಿ : ನನ್ನ ಪ್ರಾಣಹೋದರೂ ನಿನ್ನನ್ನು ಶಿವಭಕ್ತನನ್ನಾಗಿ ಮಾಡದೇ ಬಿಡುವುದಿಲ್ಲ.

ಕೌಶಿಕ : ಏನೇ ನಾನು ಶಿವಭಕ್ತನಾದರೆ ಕ್ಷತ್ರಿಯ ಮಹಾರಾಜನೇ ಅಲ್ಲಾ ನೋಡು.

ಅಕ್ಕಮಹಾದೇವಿ : ನಿನ್ನನ್ನು ಶಿವಭಕ್ತನನ್ನಾಗಿ ಮಾಡದಿದ್ದರೆ ನಾನು ಶಿವಭಕ್ತಳೇ ಅಲ್ಲಾ ನೋಡು.

ಕೌಶಿಕ : ದುಷ್ಟೇ ನನ್ನ ಕೂಡ ಚೇಷ್ಟೆ ಮಾಡುತ್ತೀಯಾ ! ನನ್ನ ರಾಜ್ಯದೊಳಗೆ ನಿನ್ನನ್ನು ಇರಗೊಡಲಿಕ್ಕಿಲ್ಲ ಎಚ್ಚರದಿಂದ ಮಾತನಾಡು.

ಅಕ್ಕಮಹಾದೇವಿ : ನಿನ್ನ ರಾಜ್ಯ ಎಲ್ಲಿಯದು ?ಅದನೆಲ್ಲ ಬಿಟ್ಟುಕೊಟ್ಟು ಹೋಗುವಂತೆ ಮಾಡುತ್ತೇನೆ ನೋಡು.

ಕೌಶಿಕ : ನಿಜವೇನು ?

ಅಕ್ಕಮಹಾದೇವಿ : ನಿಜವಾಗಿಯೂ, ಇಷ್ಟೇ ಅಲ್ಲ, ನಿನ್ನನ್ನು ಉಡುತಡಿ ಪಟ್ಟಣದೊಳಗೆ ಭಿಕ್ಷೆಯ ಬೇಡಲಿಕ್ಕೆ ಹಚ್ಚದಿದ್ದರೆ ನಾನು ಉಟ್ಟಂತ ಸೀರೆಗೆ ನೆರಿಗೆಯೇ ಇಲ್ಲಾ ಅಂತಾ ತಿಳಿದು ಬಿಡು.

ಕೌಶಿಕ :  ಛೇ ದುಷ್ಟೆ ! ಸಲಿಗೆ ಕೊಟ್ಟಿರುವೆನೆಂದು ಇಷ್ಟೆಲ್ಲಾ ಮಾತನಾಡುವಿಯೇನು ?ಈಗೀಂದೀಗ ನಿನ್ನನ್ನು ಏನು ಮಾಡುತ್ತೇನೆ ನೋಡು. (ಹಿಡಿಯಲು ಹೋಗುವನು)

(ಮಹಾದೇವಿ ಮಾಯವಾಗುವಳು)

(ಪದ) ಏನೀಗ ನಾ ಗೈಯುವೆ ಮಾನಾಪಹಾರವಿದೆ
ನಾನೀ ವಿಚಾರದೊಳೇನಿಂದು ಪೇಳ್ವೆ ತರುಣಿ
ಮಹಾದೇವಿಯ ಕೇಳಿದೆನೋ ನಾನಯ್ಯೋ
ಕುಮತಿಯ ನಾನಾಗಿ ಕೊರಗುವೆ ಮನದಿ
ಶೋಕಾಕುಲ ನಾದೆನು ಕಾಯಯ್ಯೋ ॥

(ಮಾತು) [ಸ್ವಗತ] ಓಹೋ ! ಮಹಾದೇವಿ ಮಾಯವಾಗಿ ಬಿಟ್ಟಳಲ್ಲ ! ಇದೇನು ಚಮತ್ಕಾರವಾಗಿದೆ. ನಾನು ಅವಳ ಕೂಡ ಸಂಭೋಗದ ಸಲುವಾಗು ಬೇಕಾದಷ್ಟು ಹೆಣಗಿದರೂ ಆಖೈರಕ್ಕೆ ಗುಪ್ಪಾಗಿ ಬಿಟ್ಟಳಲ್ಲ. ನಾನು ಅವಳಿಗೆ ಸುಮಾರಾಗುವ ಪ್ರಸಂಗ ಬಂದಿತೆಲ್ಲಾ. ಇದಕ್ಕೇನು ಮಾಡಲಿ ? (ವಿಚಾರ ಮಾಡಿ) ಎಲ್ಲಿಯಾದರೂ ಹೋಗಿದ್ದಾಳು ! ಆಕೆಯನ್ನು ಈಗೀಂದೀಗ ಶೋಧ ಮಾಡಿ ಬಿಡುತ್ತೇನೆ. (ಸುತ್ತಮುತ್ತ ಹುಡುಕಬೇಕು.ಅಷ್ಟರಲ್ಲಿ ದೂತಿಯ ಪ್ರವೇಶ).

ದೂತಿ : ಏನ್ರೀ ರಾಜರೇ, ಏನ ಕಳಕೊಂಡೀರಿ, ಬಲು ಹುಡಿಕ್ಯಾಡ್ತೀರಿ ?

ಕೌಶಿಕ :  ದಾಸಿ ಏನು ಹೇಳಲಿ, ಹೇಳುತ್ತೇನೆ ಕೇಳು,

(ಪದ) ಮಾಯವಾಗಿ ಹೋದಳೇ ಮಹಾದೇವಿ
ಕೇಳ ಬಾರೇ ಮಾನಗೇಡಿ ಆದೆನು
ಅವಳ ಸಲುವಾಗಿ ನಿಂತೇನೋ ಮಂಗನಾಗಿ
ದೇವಿ ಇಲ್ಲದೆ ನಾನು ಸೈರಿಸಲಾರೆನು
ಹೋಯಿತೆನ್ನ ಪ್ರಾಣ ರಕ್ಷಿಸಲಿಕ್ಕೆ ಎನ್ನ ತರಲಾರೆ ಅವಳನ್ನ
ನೀ ಶೋಧಿಸಿ ಎಲ್ಲಿರುವಳೋ ಆ ಜಾಣಿ ನಿಂತೆನೋ ಮಂಗನಾಗಿ
ಆ ಮನೋಹರಿಯಳ ಮಂಜುಳ ನುಡಿಗಳ ಶೋಧಿಸಿ
ಮಾಡೋ ದಯ ಬಿಡುವುದಿಲ್ಲ ಬಾ ಆ ದೇವಿ
ಮಾಯವಾಗಿ ಪೋದೆ ನೀನು ನಿಂತೆನೋ ಮಂಗನಾಗಿ ॥

(ಮಾತು) ಹೇ ಪ್ರಿಯೆ, ಕೋಮಲಾಂಗಿ ಮಹಾದೇವಿ ಮಾಯವಾಗಿ ಎತ್ತಪೋದೆ ? ನಿನ್ನ ಮುಖ ಕಮಲವನ್ನು ಯಾವಾಗ ನೋಡನೇ ಸುಂದರಿ, ನಿನ್ನ ಚಂದ್ರನಂತಾ ಮುಖವನ್ನು ತೋರಿಸು.

(ಅರೆಬರೆ ಮೂರ್ಛೆ ಹೋಗುವನು)

ದೂತಿ : ಯಾಕ್ರೀ ರಾಜರ ಹಿಂಗ್ಯಾಕ್ರೀ ?

ಕೌಶಿಕ :  (ಸಾವರಿಸಿಕೊಂಡು) ಆ…. ಏನಂದಿ ?

ದೂತಿ : ಹಿಂಗ್ಯಾಕ್ರೀ ನಿಮಗ ಹುಚ್ಚು ಹತೈತೇನು ?

ಕೌಶಿಕ : ಹುಚ್ಚು ಹತ್ತದೇನು ಮಾಡೀತು.ದಾರಿಯಲ್ಲಿ ಬರುವಾಗ ಒಬ್ಬ ಬಡವನಿಗೆ ನಿಧಿ ದೊರೆತು ಆಗೀಂದಾಗ್ಗೆ ಗಪ್ಪಾದರೆ ಹೇಗೆ ಆಗುತ್ತದೆಯೋ ಅದರಂತೆ ಆ ಮಹಾದೇವಿಯು ಹುಚ್ಚು ಹಚ್ಚಿ ಬಿಟ್ಟಿರುವಳು.ಆದ್ದರಿಂದ ಆಕೆಯನ್ನು ನೀನು ಕರೆದುಕೊಂಡು ಬರಬೇಕು ನೋಡು.

ದೂತಿ : ಎಲ್ಲಿ ಹುಡುಕಬೇಡಿರಿ ಆಕೀನ್ನ ?

ಕೌಶಿಕ : ದಾಸಿ, ಆ ಮಹಾದೇವಿ ಎಲ್ಲಿ ಮಾಯವಾದಳು ನೋಡು.

ದೂತಿ : ಹಾಗಾದರೆ ಈ ನೆಲವನ್ನು ಅಗೆದು ನೋಡಲೇನು ಮಾರಾಯಾ ?

ಕೌಶಿಕ : ದೂತಿ, ಚೇಷ್ಟೆ ಮಾಡಬೇಡಾ, ನನಗೆಸಮಾಧಾನವಿಲ್ಲ.ಆ ಮಹಾದೇವಿಯು ಹೇಗೆ ಮಾಯವಾದಳು ನೋಡು.

ದೂತಿ : ಅಂಥಾಕೀಗೆ ಒಂದೇ ಸಮನೆ ಯಾಕರ ಗಂಟುಬಿದ್ದಿರಿ? ಆಕಿ ನಿಮ್ಮ ಜೀವ ಇಡಲಿಕ್ಕಿಲ್ಲ.ಆಕೆಯ ಉಸಾಬರಿ ಬಿಟ್ಟು ಬಿಡಿರಿ.

ಕೌಶಿಕ : (ಪದ)

ಹ್ಯಾಂಗ ಬಿಡತಿವ್ವ ಅಂಥ ಚೆಲುವಿನ
ದಿವ್ಯ ಪುತ್ಥಳಿಯನ್ನು ಮಹಾದೇವಿ ಬಿಟ್ಟರೆ
ಎನ್ನಯ ಪ್ರಾಣ ಈಗ ಉಳಿಯದು ಕೇಳು ಇದು ಸತ್ಯ ॥

(ಮಾತು) ಆ ಮಹಾದೇವಿಯ ಗೊಡವೆ ಬಿಡು ಅಂದ್ರೆ ನನ್ನ ಜೀವ ಉಳಿಯುವುದಿಲ್ಲಾ.ಅವಳ ಸಲುವಾಗಿ ಸತ್ತರೂ ಚಿಂತೆ ಇಲ್ಲಾ, ಹೋಗು ಹುಡಕು.

ದೂತಿ : ಕೇಳಿ ಕೇಳಿ ಸಾಕಾಯಿತು.ಹೋಗುತ್ತೇನೆ ಬಿಡಪ್ಪಾ.

(ಮಹಾದೇವಿಯನ್ನು ಕರೆದುಕೊಂಡು ಬರುವಳು)

ನೋಡ್ರೀ ಕರೆದುಕೊಂಡು ಬಂದೇನ್ರಿ.

ಕೌಶಿಕ : ಸುಂದರಿ ಮಹಾದೇವಿ, ನನ್ನ ಬಿಟ್ಟು ಎಲ್ಲಿ ಮಾಯವಾಗಿದ್ದೆ, ನೀನು ಒಂದು ಕ್ಷಣ ಇಲ್ಲದಿದ್ದರೆ ನನ್ನ ಜೀವ ಹೋಗುತ್ತದೆ. ಆದ್ದರಿಂದ ಎನಗೊಂದು ಚುಂಬನ ಕೊಟ್ಟು ಕಾಮ ಸುಖಕ್ಕೆ ಅನುಕೂಲಳಾಗು.

(ಮುಟ್ಟಲು ಹೋಗುವನು)

ಅಕ್ಕಮಹಾದೇವಿ : ಛೀ ! ಮೂಢಾ ! ಹಲ್ಲು ಉಚ್ಚ್ಯಾವು, ನೋಡಿ ಎಚ್ಚರದಿಂದ ಮಾತಾಡು, ದೂರ ಸರಿದು ನಿಲ್ಲು.

ಕೌಶಿಕ : ಛೀ, ಏನೇ ಇಷ್ಟಾದರೂ ನನಗೆ ಹುಡುಗಾಟಿಕೆ ಮಾಡುವುದು ಬಿಡಲೊಲ್ಲೆಯಾ, ಈಗೀಂದೀಗ ನಿನ್ನನ್ನು ಮಾನಗೇಡಿಯನ್ನಾಗಿ ಮಾಡಿಬಿಡುತ್ತೇನೆ ನೋಡು.

ಅಕ್ಕಮಹಾದೇವಿ : ಛೀ ಮೂರ್ಖಾ, ನನ್ನನ್ನು ಮಾನಗೇಡಿ ಮಾಡುವಿಯಾ, ನಿನ್ನದು ಏನು ಮಾಡುತ್ತೇನೆ.

ಕೌಶಿಕ : ನನ್ನದೇನು ಮಾಡುವುದು. ಈಗೀಂದೀಗ ನಿನ್ನನ್ನು ನೋಡು ಏನು ಮಾಡುತ್ತೇನೆ.

(ಪದ) ನಿನ್ನ ಸೀರೆಯ ಸೆಳೆಯುವೆ ನಾನು
ಮಾನಹಾನಿಯ ಮಾಡುವೆ ನಿನ್ನ
ನಿನ್ನ ದಿಗಂಬರಳಾಗಿ ಮಾಡಿ ಘನಪಾತಕಿ
ನಿನ್ನ ಸೂರಿ ಬಿನ್ನವಿಲ್ಲದೆ ಬಿಡುವೆನು
ಕೂಡಿ ಎನ್ನಾಸೆಯ ಪೂರ್ತಿ ಮಾಡಿ ॥

ನರಪಾಲನ ಸತ್ವವ ತೋರಿಸುವೆ
ಜಿಗಿದಾಡಿದಿ ಫಲ ತೀರಿಸುವೆ
ಹರಭಕ್ತಿ ನಿನ್ನಲಿ ನೋಡೆ
ಪರಿಪರಿಯಿಂದಲಿ ನಿನ್ನ ಕಾಡ್ವೆ ॥

ಮೇದಿನಿಯೊಳಗೆ ಸನ್ನುತ ದೇವಗಿರಿಯ
ದೇವಗೆ ಉಚಿತ ಕರ್ಮರಾಗುವುದು
ಸತ್ಯ ಬಿನ್ನವಿಲ್ಲದೆ ನಡಿಸುವೆ ಪಂಥ ॥

(ರಾಜನು ಮಹಾದೇವಿಯ ಸೀರೆ ಹಿಡಿದು ಸೆಳೆಯುವನು. ಎಷ್ಟು ಸೀತೆ ಸೆಳೆದರೂ ಅದು ಮುಗಿಯುವುದಿಲ್ಲ).

ಕೌಶಿಕ : (ಕೌತುಕದಿಂದ) ಓಹೋ ! ಇದೇನು ? ಇವಳ ಸೀರೆಯನ್ನು ಎಷ್ಟು ಸೆಳೆದರೂ, ಒಂದರ ಹಿಂದೆ ಮತ್ತೊಂದು ಹೆಚ್ಚಾಗಲಿಕ್ಕೆ ಹತ್ತಿತಲ್ಲಾ.ಇದು ಏನು ಹುಚ್ಚಾಟವು?ಏನು ಭೂತದಾಟವು ! ಏನೋ ಶಿವಭಕ್ತೆಯ ಮಂಗಾಟವೋ? ಇದು ಯಾವುದೋ ನನಗೆ ತಿಳಿಯಲೊಲ್ಲದು.ಇರಲಿ ! ಇವಳ ಸೀರೆಯು ಇನ್ನೆಷ್ಟು ಇರುವುದೋ ನೋಡಿ ಬಿಡುತ್ತೇನೆ.(ಎಂದು ಮತ್ತೆ ಸೀರೆಗೆ ಕೈ ಹಾಕುವನು).

ಅಕ್ಕಮಹಾದೇವಿ : (ಅವಳು ಹಿಂದೆ ಸರಿದು ನಿಂತು) ಥೂ ಪಾಪಿ ! ಚಾಂಡಾಲಾ ಇನ್ನೊಮ್ಮೆ ಮುಟ್ಟಿದರೆನೋಡು ಪಜೀತಿ.

ಕೌಶಿಕ : ನೋಡುತ್ತೇನೆ ನಿಲ್ಲು. (ಮತ್ತೆ ದುಡುಕುವನು)
(ಪದ) ದುರುಳ ನಾರಿಯೇ ನೀ ಕೇಳೇ
ಸಾರಿ ಹೇಳುವೆ ನಾನು ಭರದಿಂದ
ಶೌರ್ಯಗೈಯುತ ನಾನು ಸೀರೆಯನು ಸೆಳೆಯುವೆನು ॥

ಅಕ್ಕಮಹಾದೇವಿ : ಪಾಪಿಷ್ಠಾ ನನ್ನಂಥಾ ಶಿವಭಕ್ತಳ ಮೇಲೆ ಕೈ ಮಾಡುತ್ತೀಯಲ್ಲಾ.ನನ್ನ ಶಿವಭಕ್ತಿಯಲ್ಲಿ ಏನಾದರೂ ಕೊರತೆ ಇದ್ದರೆ ಈಗ ನಿನ್ನ ದೇಹದಲ್ಲಿ ಅಗ್ನಿ ಜ್ವಾಲೆಯು ಹೆಚ್ಚಾಗಲಿ.ಮೂರ್ಖಾಯಾರ ಆಟ ಏನಾಗುತ್ತದೆ ನೋಡಿಕೋ (ಎಂದು ಶಾಪ ಕೊಡುವಳು).

ಕೌಶಿಕ : ಹಾಯ್ ! ಹಾಯ್ ! ಬಸವೇಶ್ವರಾ ಎನ್ನ ಒಡಲಿಲ್ಲ ಉರಿಯು ಹೆಚ್ಚಾಯಿತು, ಏನು ಮಾಡಲಿ ದೇವಾ (ದುಃಖದಿಂದ ಬೀಳುವನು) ಅಯ್ಯೋ ಎನ್ನ ಒಡಲೊಳಗೆ ದಾವಾಗ್ನಿಯು ಉತ್ಪನ್ನವಾಯಿತು.ಶಿವ ಶಿವಾ ತಾಳಲಾರೆನು. ನಾರಾಯಣಾ, ಮುಕುಂದಾ ನನ್ನನ್ನು ಸಂರಕ್ಷಣೆ ಮಾಡು ದೇವಾ, ತಾಪವು ಮಿತಿಮೀರಿ ಹೋಯಿತು.ಅಯ್ಯೋ ದೇವಾ ಹೇಗೆ ಮಾಡಲಿ ! ಹಾಯ್ ದೇವಾ, ಹಾಯ್ ದೇವರೆ ನೀನಾದರೂ ಬಂದು ನನ್ನ ಪ್ರಾಣ ಉಳಿಸು.

(ಪದ) ಅಯ್ಯೋ ಸಾಯುವೆ ನಾನೇ ಅನರ್ಥಾ
ಈಗ ತುರ್ತಾ ನಾನು ಕೆಟ್ಟೆ ಮಾಡಿ ಹೀಂಗ ಶರ್ತಾ
ಪಾಲಿಸೋ ಜಗದ ಕರ್ತಾ ಮೃತ್ಯುವಿಗೀಗ
ತುತ್ತಾಗಿರುವೆನು ಉರಿಯು ಕೊಲ್ಲುವದೆನ್ನ
ಅಯ್ಯೋ ಶಿವನೆ ಎನ್ನ ಪೊರಿಯೋ ನೀನೇ
ನಿನ್ನ ನಂಬಿದೆ ನಾ ನಿನ್ನ
ಉರಿವ ಜ್ವಾಲೆಗಳೆಲ್ಲಾ ಹಚ್ಚಿ ಮೈಯೊಳಗೆಲ್ಲಾ
ಸುಡುವುದು ನಿಂದೆಲ್ಲಾ ನಿಂತಿತು ಹಂಬಲ
ಜೀವಾ ಬಿಡುವೆನು ಸುಟ್ಟು ಹೋಗುವೆನು
ಅಯ್ಯೋ ಸೈರಿಸಲಾರೆನು ಇನ್ನು ನಾನು ॥

(ಮಾತು) ಹಾಯ್ ! ಹಾಯ್ ! ಮುರಮರ್ದನಾ ಗರುಡಗಮನಾ ನೀನು ಮುಂಚೆ ಪ್ರಲ್ಹಾದನನ್ನು ಉರಿಯುವ ಬೆಂಕಿಯೊಳಗಿಂದ ಹೇಗೆ ಪಾರು ಮಾಡಿದೆಯೋ ಅದರಂತೆ ನನ್ನನ್ನೂ ಪಾರು ಮಾಡು. ಯಾರಾದರೂ ಬಂದು ನನ್ನನ್ನೂ ಪಾರು ಮಾಡು. ಯಾರಾದರೂ ಬಂದು ನನ್ನನ್ನು ಉಳಿಸಿಕೊಳ್ಳಿರಿ ಉಳಿಸಿಕೊಳ್ಳಿರಿ (ಎಂದು ಹೊರಳಾಡುವನು. ಅಷ್ಟರಲ್ಲಿ ದೂತಿ ಬರುವಳು).

ದೂತಿ : ಓಹೋ ರಾಜರಿಗೆ ಏನೋ ಆಗೈತಿ, ಒದ್ದಾಡಲಿಕ್ಕೆ ಹತ್ತಿದ್ದಾರೆ.ಅಲಲಾ ಆಕಿ ಬೆರಕಿ ಮಾದೇವಿ, ಇವನಿಗೇನೋ ಗಾಲಮೇಲ ಮಾಡಿ ಹೋಗ್ಯಾಳ. (ಕೌಶಿಕನನ್ನು ನೋಡಿ) ಛೇ ನಮ್ಮ ರಾಜಾ ಸತ್ತು ಹೊರಳಾಡುವಂತಾಯಿತು.(ಗಾಳಿ ಬೀಸುವಳು, ಕಿವಿಯೊಳಗೆ ಊದುವಳು. ಚೈತನ್ಯ ಬರುವುದು).

ಕೌಶಿಕ : ದಾಸಿ, ದೂತಿ ನಾನು ಸಾಯುತ್ತೇನೆ.ನೀವೆಲ್ಲ ಇನ್ನು ಮೇಲೆ ನನ್ನ ಆಶೆಯನ್ನು ಬಿಟ್ಟು ಬಿಡಿರಿ.ಅಯ್ಯೋ ನನಗೆ ಸಂಕಟ ಹೆಚ್ಚಾಯಿತು.ದೂತಿ ಹೇಗಾದರೂ ಮಾಡಿ ನನ್ನನ್ನು ಉಳಿಸಿಕೊಳ್ಳಿ.

ದೂತಿ : ಹಾಗಾದರೆ ನಿಮಗೆ ಯಾರು ಏನು ಮಾಡಿದರು ಹೇಳ್ರಿ ?

ಕೌಶಿಕ : ದೂತಿ, ಆ ಮಹಾದೇವಿಯು ನನಗೆ ಸಿಟ್ಟಿನಿಂದ ಸುಟ್ಟು ಹೋಗು ಅಂತಾ ಶಾಪ ಕೊಟ್ಟು ಹೋದಳು.ಆದ್ದರಿಂದ ಹೀಗೆ ಆಗಿರುವುದು.ಅಯ್ಯೋ ಶಿವಾ ಶಿವಾ ಈ ಕಷ್ಟದಿಂದ ನನ್ನನ್ನು ಪಾರುಮಾಡು. ಹಾಯ್ ಶಂಕರಾ, ದೇವಾ, ದಯಾಸಾಗರಾ (ಎಂದು ದುಃಖಮಾಡುತ್ತ ಕೆಳಗೆ ಬೀಳುವನು).

ದೂತಿ : ಏನ್ರೀ, ಆ ಸಂನ್ಯಾಸಿ ಹೆಸರು ತೆಗಿಬ್ಯಾಡಾಂತ ನಾನು ಅಂದು ಕೇಳದೇ ತಗದು ಈಗ ಒದ್ದಾಡಲಿಕ್ಕೆ ಹತ್ತಿರುವಿರಿ.ನಾನು ಹೇಳಿದ ಮಾತು ಆಕಿ ಕೇಳೂದಿಲ್ಲಾ.ಇನ್ನೇನು ಮಾಡಬೇಕು ನಾನು.ಆ ಮಹಾದೇವಿಯ ಕಾಲಿಗೆ ಬಿದ್ದು ಕ್ಷಮೆ ಬೇಡಿದರೆ ಇಲ್ಲಿಗೆ ಬರುತ್ತಾಳೆ. ಆಕೆಯೇ ನಿನ್ನ ಪಾರು ಮಾಡುತ್ತಾಳೆ.

ಕೌಶಿಕ : (ಪದ)

ಕರಕೊಂಡು ಬಾರವ್ವ ನೀ ಹೋಗಿ
ನಿನ ಪಾದಕ ಎರಗುವೆ ಶಿರಬಾಗಿ
ಹುಚ್ಚುತನದಿಂದ ಕೆಣಕಿ ಕೆಟ್ಟೆನವ್ವಾ
ಮಾದೇವಿ ಸತ್ವ ತಿಳಿಯದಾಯಿತವ್ವಾ
ದೇವಿಯಿಂದಲೇ ಈಗ ಪರಿಹಾರವ್ವಾ ॥

(ಮಾತು) ದಾಸಿ ಏನಾದರೂ ಮಾಡಿ ಆ ಮಹಾದೇವಿಯನ್ನು ಕರೆದುಕೊಂಡು ಬಂದರೆ ಆಕೆಯಿಂದ ನಾನು ಉದ್ಧಾರವಾಗುತ್ತೇನೆ.ಇಲ್ಲದಿದ್ದರೆ ನಾನು ಉಳಿಯುವುದಿಲ್ಲಾ. ಅದಕ್ಕೆ ಹೇಗಾದರೂ ಮಾಡಿ ಮಹಾದೇವಿಯನ್ನು ಕರೆದುಕೊಂಡು ಬಾ ಹೋಗು.

ದೂತಿ : ಆಕಿ ಹಂಗ ಬರುವುದಿಲ್ಲಾ, ನಾನು ಹೇಳಿದ ಹಾಗೆ ಕೇಳುತ್ತೇನೆ ಅಂತಾ ವಚನ ಕೊಟ್ಟರೆ ಬರುತ್ತಾಳೆ. ಇಲ್ಲದಿದ್ದರೆ ಬರುವುದಿಲ್ಲಾ. ಇದಕ್ಕೆ ಹ್ಯಾಗೆ ಮಾಡುತ್ತೀರಿ ?

ಕೌಶಿಕ : ದೂತಿ, ನಾನು ಆಕೆ ಹೇಳಿದ ಹಾಗೆ ಕೇಳುತ್ತೇನೆ.ಇಂದಿಗೆ ಆ ಮಹಾದೇವಿ ನನ್ನ ತಾಯಿ. ಆಕೆಯೇ ನನ್ನ ಗುರುವು. ಆಕೆ ಹೇಳಿದಂತೆನಾನು ಕೇಳುತ್ತೇನೆ.ಅದಕ್ಕೆ ಬೇಗ ಕರೆದುಕೊಂಡು ಬಾ ಹೋಗು.

ದೂತಿ : ಹಾಗಾದರೆ ನಾನು ಹೋಗುತ್ತೇನೆ. (ಹೋಗುವಳು)

ದೃಶ್ಯ
(ದೂತಿ ಮಹಾದೇವಿಯ ಬಳಿಗೆ ಬಂದು)
ದೂತಿ : ಅವ್ವಾ ಮಾದೇವಿಯೇ, ಮಹಾದೇವಿಯೇ, ನೀನು ಏನು ಮಾಡುತ್ತಲಿರುವೆ?

ಅಕ್ಕಮಹಾದೇವಿ : (ಪದ)

ಪಾಪಿಯೇ ಸರಿ ಸರಿ ತಾಳು ತಾಳೆಲೋ ಉರಿನಿನ್ನ ಸಾಹಸವೆಲ್ಲಿ ಹೋದೀತೋ ನಿನ್ನಾಸೆಯ ಹಾಳಾದೀತೋ
ಬುದ್ಧಿಯು ಬಂದಿತೆ ಒದ್ದಾಡು ಕಷ್ಟವ ಬಿಡುಭಕ್ತಿಯ ಮಹಿಮೆಯ ನೋಡು ಮೂರ್ಖನೇ ಹೊರಳಾಡು ॥

(ಮಾತು) ಛೇ ದುಷ್ಟಾ ! ನನ್ನ ಜೀವ ಹೋದರೂ ಚಿಂತೆಯಿಲ್ಲಾ ಎಂದು ಮೈ ಮೇಲೆ ಏರಿ ಬರುತ್ತಿದ್ದಿಯಲ್ಲಾ.ಈಗ ಹಿಂದಕ್ಕೆ ಯಾಕೆ ಸರಿಯುತ್ತೀ ?ಹಾಗೇ ಒದ್ದಾಡುತ್ತ ಸತ್ತುಹೋಗು.

ಕೌಶಿಕ : ಮಾತೊ ಶ್ರೀ ! ಈ ಪಾಪಿಷ್ಟನ ತಪ್ಪನ್ನು ಕ್ಷಮಾ ಮಾಡಿಕೊಂಡು ಈ ಸಂಕಟದಿಂದ ಪಾರುಮಾಡು. (ಕೈ ಮುಗಿಯುವನು) ನಿನಗೆ ಶಿರಬಾಗಿ ಬೇಡಿಕೊಳ್ಳುತ್ತೇನೆ.ನನ್ನ ಹೊಟ್ಟೆಯೊಳಗೆ ಆಗುವ ಸಂಕಟದಿಂದ ಪಾರುಮಾಡು. ನಿವಾರಣಮಾಡು, ಹಾಯ್ !ಸಾಯುವೆನು, ಸಾಯುವೆನು, ತಾಯಿ ಮಹಾದೇವಿ ರಕ್ಷಿಸು ರಕ್ಷಿಸು.

ಅಕ್ಕಮಹಾದೇವಿ : ಥೂ ಪಾಪಿಷ್ಟಾ ! ನನ್ನ ಸಮೀಪಕ್ಕೆ ಬರಬೇಡಾ, ಹೀಗೆ ಒದ್ದಾಡುತ್ತ ಇರು.ರಕ್ಷಿಸು, ರಕ್ಷಿಸು ಅಂದರೆ ನಾನು ನಿನ್ನನ್ನು ಹೇಗೆ ರಕ್ಷಿಸಲಿ ! ನೀನು ನನಗೆ ಮಂಚದ ಮೇಲೆ ಬಂದು ಕಾಮಸುಖವನ್ನು ಕೊಡು ಎಂದು ಅನ್ನುತ್ತಿದ್ದೆಯಲ್ಲಾ ! ಆ ಕಾಮಸುಖದ ಸವಿಯನ್ನು ನೋಡು.ಮತ್ತೆ ಆ ಕಾಮಸುಖದ ಹಣ್ಣು ಎಷ್ಟು ಸಿಹಿಯಿರುವುದು ನೋಡು, ಇನ್ನು ಕಾಮಸುಖದ ಫಲವನ್ನು ಊಟ ಮಾಡು. ಇಷ್ಟಕ್ಕೆ ಸಾಕಾಯಿತು.

ಕೌಶಿಕ : ಮಾತೋ ಶ್ರೀ, ನಾನು ಅಜ್ಞಾನ ಮದದಿಂದ ಮಾಡಿದ ತಪ್ಪುಗಳನ್ನು ಸಿಟ್ಟಿಗೆ ಹಿಡಿಯಬೇಡಾ.ನಿನಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುವೆನು.ನನ್ನ ತಪ್ಪನ್ನು ಕ್ಷಮಾ ಮಾಡು.ನನ್ನನ್ನು ಈ ಸಂಕಟದಿಂದ ಪಾರು ಮಾಡಿದರೆ ಪುಣ್ಯ ಕಟ್ಟಿಕೊಂಡತಾಗುತ್ತದೆ. (ನಮಸ್ಕರಿಸುವನು).

ಅಕ್ಕಮಹಾದೇವಿ : ಅರಸನೇ ಬುದ್ಧಿ ಬಂದಿತೇ ?

ಕೌಶಿಕ : ಮಾತೊ ಶ್ರೀ ಇಂಥಾ ಅನ್ಯಾಯವನ್ನು ಎಂದಿಗೂ ಮಾಡುವದಿಲ್ಲಾ ?ಮೊದಲು ನನ್ನನ್ನು ಉದ್ಧಾರಮಾಡು.

ಅಕ್ಕಮಹಾದೇವಿ : ಹಾಗಾದರೆ ನಾನು ಹೇಳಿದಂತೆ ಕೇಳಿದರೆ ನಿನ್ನನ್ನು ಉದ್ಧಾರ ಮಾಡುತ್ತೇನೆ.ಇಲ್ಲದಿದ್ದರೆ ಮಾಡುವುದಿಲ್ಲಾ ನೋಡು ?