ಅಲ್ಲಮಪ್ರಭು : ಮಹಾದೇವಿ, ಶಿವನು ಅದೊಂದೆ ವಿಷವನ್ನು ಕುಡಿದದ್ದರ ಸಲುವಾಗಿ ಸಂಪನ್ನನಾದನೇ?

ಅಕ್ಕಮಹಾದೇವಿ : ಅದೊಂದರ ಸಲುವಾಗಿ ಅಲ್ಲಾ, ಶಿವನು ಮಾಡಿದ್ದೇನೆಂದರೆ, ಎಲ್ಲಾ ರೀತಿಯಿಂದಲೂ ಜಗತ್ತಿಗೆ ಕಲ್ಯಾಣವಾಗುವಂತೆ ಮಾಡಿದ್ದಾನೆ.ಅದರಿಂದ ಶಿವನು ಸರ್ವಸಂಪನ್ನನು.

ಅಲ್ಲಮಪ್ರಭು : ಏನು ಹೇಳುತ್ತಿ ?ಶಿವನು ಅಂದರೆ ಲೋಕದ ಕಳ್ಳನಿದ್ದಂತೆ, ಅವನನ್ನು ಸಂಪನ್ನನೆನ್ನುತ್ತೀ, ನಿನಗೆ ಯಾವದೂ ತಿಳಿಯುವುದಿಲ್ಲ ಸುಮ್ಮನಿರು.

ಅಕ್ಕಮಹಾದೇವಿ : ಹೌದು ನಾನು ಹೆಣ್ಣು, ನನಗೆಏನೂ ತಿಳಿಯುವುದಿಲ್ಲಾ ನಿಜ.ಪರಮಾತ್ಮನು ಈ ಲೋಕದ ಕಳ್ಳನೆಂದಿರಲ್ಲಾ ಅವನೇನು ಕಳ್ಳತನ ಮಾಡಿದ.ಅದನ್ನು ಹೇಳಿ ಮುಂದೆ ಮಾತನಾಡಿ ಸ್ವಾಮಿ.

ಅಲ್ಲಮಪ್ರಭು : ಹಾಗಾದರೆ ಶಿವನು ಕಳ್ಳತನ ಮಾಡೇ ಇಲ್ಲ ?

ಅಲ್ಲಮಪ್ರಭು : ಮಾಡಿದನೋ ಇಲ್ಲವೋ ತಾವೇ ಹೇಳಬೇಕು.

ಅಲ್ಲಮಪ್ರಭು : ಹಾಗಾದರೆ ಹೇಳುತ್ತೇನೆ ಕೇಳು.

(ಪದ) ತುಡುಗಾ ಅಲ್ಲದಿದ್ದರೆ ಮತ್ತೆ ಹರಿಹರ ಬ್ರಹ್ಮರು ಕೂಡಿಕೊಂಡು

ಅನುಸೂಯಾನ ಬಳಿಗೆ ಯಾಕೆ ಹೋಗಿದ್ದಾ, ಸಂನ್ಯಾಸಿ ಸೋಗಲಿ
ಯಾಕೆ ಹಾಕಿದ್ದಾ ಭಿಕ್ಷಾ ಬೇಡುವ ನೆಪದಲ್ಲಿ
ಮೂವರು ಕೂಡಿ ಮಸಲತ್ತು ತೆಗೆದರು
ಯಾಕೆ ಯಾಕೆ ಹೋದರು ಹೇಳನೀನ
ಅನುಸೂಯಾನ ಬಳಿಗೆ ಹೋಗಿ ಬತ್ತಲೆಯಾಗಿ
ಭಿಕ್ಷೆ ನೀಡು ಅಂದರೆ ನಾವು ತಗೋತೀವಿ
ಯಾಕಂಥಾ ಪತಿವ್ರತೆಗೆ ಯಾಕೆ ಹಾಗೆ ಮಾಡಿದಾ
ಇದೆಂತಾ ಸಂಭಾವಿತ ಗುಣ ಅಲ್ಲದ ರೀತಿಯಾಕೆ
ಇವರಿಗೆ ಅಂಜಲಿಲ್ಲಾ ಅವಳ ಗಂಡನ ಪಾದತೀರ್ಥವ ತಂದು
ಮೂವರ ಮೇಲೆ ಚುಮುಕಿಸಿದಳು ಆ ಪತಿವ್ರತೆ,
ಮೂವರೂ ಸಣ್ಣ ಕೂಸುಗಳಾಗಿ ಬಿದ್ದರು ಭೂಮಿಯ ಮೇಲೆ
ಅನುಸೂಯಾ ಪತಿವ್ರತೆ ಪ್ರೀತಿಯಿಂದ ಬತ್ತಲೆ ಬಂದಳು
ಬಂದು ಮೂವರೆಗೆ ಮೊಲೆ ಕುಡಿಸಿದಳು ಸತ್ವಶಾಲಿ.

ಮಾತು) ಮಹಾದೇವಿ ಪರಮಾತ್ಮನು ಕಳ್ಳನಲ್ಲ ಅಂದೆಯಲ್ಲಾ
ಹಾಗಾದರೆ ವಿಷ್ಣು, ಬ್ರಹ್ಮರನ್ನು ಕೂಡಿಕೊಂಡು ಅತ್ರಿ ಮಹಾಋಷಿಯ
ಹೆಂಡತಿಯ ಬಳಿಗೆ ಯಾತಕ್ಕೆ ಏನು ಬೇಡಲು ಹೋಗಿದ್ದರು ?

ಅಕ್ಕಮಹಾದೇವಿ : ಭಿಕ್ಷೆ ಬೇಡಲು ಹೋಗಿದ್ದರು ?

ಅಲ್ಲಮಪ್ರಭು : ಭಿಕ್ಷೆ ಬೇಡಲು ಹೋಗಿದ್ದರು ಅನ್ನುತ್ತೀಯಲ್ಲಾ ಹಾಗಾದರೆ ಆಕೆಯು ಭಿಕ್ಷೆ ನೀಡಲು ಬಂದರೆ ಸುಮ್ಮನೆ ತೆಗೆದುಕೊಂಡು ಬರದೇ ಹಾಗೇ ಯಾಕೆ ಬಂದರು ?

ಅಲ್ಲಮಪ್ರಭು : ಏನೆಂದರು ವಿವರಿಸಿ ಸ್ವಾಮಿ ?

ಅಲ್ಲಮಪ್ರಭು : ಹೀಗೆ ನಾವು ಭಿಕ್ಷೆ ತೆಗೆದುಕೊಳ್ಳುವುದಿಲ್ಲ, ಉಟ್ಟಂಥ ಸೀರೆಯನ್ನು ಕಳಚಿ ದಿಗಂಬರೆಯಾಗಿ ಬಂದು ನೀಡಿದರೆ ತೆಗೆದುಕೊಳ್ಳುತ್ತೇವೆ ಅಂದರು.ಪರಿವ್ರತೆಗೆ ಹೀಗೆಂದುದು ನ್ಯಾಯವೇ ?

ಅಕ್ಕಮಹಾದೇವಿ : ಹಾಗೇ ಕರೆದರು ?ಮುಂದೇನಾಯಿತು ಎಂಬುದನ್ನು ವಿಚಾರ ಮಾಡಿದರೆ ಅದುನ್ಯಾಯವೊ ? ಅನ್ಯಾಯವೊ ತಿಳಿಯುವುದು.

ಅಲ್ಲಮಪ್ರಭು : ಮುಂದೆ ನಡೆದುದು ಇಷ್ಟು.ಸಾಧುಗಳು ಈ ರೀತಿ ಅಂದಕೂಡಲೇ ಆ ಅನುಸೂಯಾದೇವಿ ಆಗಲೆಂದು ಗಂಡನ ಪಾದ ತೊಳೆದು ಮೂರೂ ಮಂದಿಯ ಮೇಲೆ ಪನಿವಾರ ಚಿಮುಕಿಸಿದಳು.ಕೂಡಲೇ ಮೂವರೂ ಸಣ್ಣ ಕೂಸುಗಳಾದರು.ಆಗ ಅವಳು ಮೊದಲು ಹೇಳಿದಂತೆ ದಿಗಂಬರೆಯಾಗಿ ಬಂದು ಮೂವರಿಗೂ ಮೊಲೆ ಕುಡಿಸಿ ತನ್ನ ಮಕ್ಕಳನ್ನಾಗಿ ಮಾಡಿಕೊಂಡಳು.ಅಂದಮೇಲೆ ಪರಮಾತ್ಮನು ಸಂಪನ್ನನು ಕಳ್ಳನಲ್ಲ ಎನ್ನುತ್ತೀಯಲ್ಲಾ ಇದು ಕಳ್ಳತನವಲ್ಲವೇ ?

ಅಕ್ಕಮಹಾದೇವಿ : ಇದು ಕಳ್ಳತನವಲ್ಲಾ, ಪರಮಾತ್ಮನು ಹಾಗೆ ಯಾಕೆ ಮಾಡಿದನೆನ್ನುವುದನ್ನು ಹೇಳುತ್ತೇನೆ ಕೇಳಿರಿ.

() ಅನುಸೂಯಾಪತಿವ್ರತೆ ಜಗಕ್ಕೆಲ್ಲ ತಿಳಿದುಬಂತು
ಶಿವನು ಅದಕ ಮಾಡಿದನು ಮಸಲತ್ತು
ಹರಿಹರ ಬ್ರಹ್ಮರು ಕೂಡಿಕೊಂಡು ಆಗ ತುರ್ತು
ಹಾಂಗ ಲೀಲೆಯ ಮಾಡಿ. ಅವಳ ಸತ್ವವ ನೋಡಿ
ಪತಿವ್ರತೆ ಹೆಚ್ಚೆಂದು ತೋರಿಸಿದ ಪ್ರಖ್ಯಾತ
ಮುಂದೆ ಮೂವರೂ ಅನುಸೂಯಾನ ಮಕ್ಕಳಾಗಿ ಹುಟ್ಟಿ
ಬೆಳೆದು ಭೂಮಿಯ ಮೇಲೆ ಲೋಕ ಪ್ರಸಿದ್ಧರಾಗಿ
ಬ್ರಹ್ಮನು ಚಂದ್ರನಾದ, ಹರಿಯು ದತ್ತಾತ್ರೇಯನಾದ
ಶಿವನು ದೂರ್ವಾಸನಾದಾ ಕೇಳಿರಿ ಬುದ್ಧಿಮಾತಾ.

(ಮಾತು) ಮುಂದೆ ಪರಮಾತ್ಮನು ಬ್ರಹ್ಮ, ವಿಷ್ಣು ಕೂಡಿಕೊಂಡು ಅನುಸೂಯಾನ ಬಳಿಗೆ ಯಾಕೆ ಹೋಗಿದ್ದನೆಂದರೆ, ಆಕೆಯ ಪತಿವ್ರತಾ ಧರ್ಮವನ್ನು ರಕ್ಷಣೆ ಮಾಡಿ ಪಾತಿವ್ರತ್ಯವೇ ಹೆಚ್ಚೆಂದು ಲೋಕಕೆಲ್ಲಾ ತಿಳಿಸುವುದರ ಸಲುವಾಗಿ ಅನುಸೂಯಾನ ಕೈಯಲ್ಲಿ ಸಿಕ್ಕು ಹಾಗೆಲೀಲೆಯ ಮಾಡಿ ಮೂವರೂ ಆಕೆಯ ಮಕ್ಕಳಾಗಿ ಹುಟ್ಟಿದರು.ಬ್ರಹ್ಮನು ಚಂದ್ರನಾಗಿಯೂ ವಿಷ್ಣುವು ದತ್ತಾತ್ರೇಯನಾಗಿಯೂ, ಶಿವನು ದೂರ‌್ವಾಸನಾಗಿಯೂ ಹುಟ್ಟಿ ಲೋಕ ಪ್ರಸಿದ್ಧರಾಗಿ ಹೋದರು.ಇದನ್ನು ತಿಳಿಯದೇ ಶಿವನಿಗೆ ದೋಷ ಕೊಡಬಾರದು ಸ್ವಾಮಿ, ಬಂಗಾರ ಚಲೋ ಅಥವಾ ಸುಮಾರ ಎನ್ನುವದನ್ನು ನೀವು ಹೇಗೆ ಪರೀಕ್ಷೆ ಮಾಡುತ್ತೀರಾ ?

ಅಲ್ಲಮಪ್ರಭು : ಒರೆಗಲ್ಲಿಗೆ ಹಚ್ಚಿದರೆ ತಿಳಿಯುತ್ತದೆ.

ಅಕ್ಕಮಹಾದೇವಿ : ಬಂಗಾರವನ್ನು ಹ್ಯಾಗೆ ಒರೆಗಲ್ಲಿನಿಂದ ಪರೀಕ್ಷೆ ಮಾಡುತ್ತೆವೋ, ಅದರಂತೆ ಅನುಸೂಯಾಳಂಥ ಆ ಮಹಾತ್ಮಳನ್ನು ಪರೀಕ್ಷೆ ಮಾಡಬೇಕಾದರೆ ಪರಮಾತ್ಮನು ಅವರಿಗೆ ಕಠಿಣ ಪ್ರಸಂಗ ತಂದು ಅವರನ್ನು ಆ ಒರೆಗಲ್ಲಿಗೆ ತಿಕ್ಕಿ ಪರೀಕ್ಷೆ ಮಾಡುತ್ತಾನೆ.ಇದನ್ನೆಲ್ಲ ನೋಡಿದರೆ ಪರಮಾತ್ಮನು ಎಂದಿಗೂ ಕೆಟ್ಟವನಲ್ಲ.ಅವನು ಲೀಲೆ ಮಾಡುವ ಕಾರಣ ಹಾಗೆ ಮಾಡಿದನು.ಪೂರಾ ಹಕೀಕತ್ತು ತಿಳಿದರೆ ಪರಮಾತ್ಮನ ಕಡೆಗೆ ಎಳ್ಳಷ್ಟೂ ತಪ್ಪು ಹೊರಡುವುದಲ್ಲಾ.ಇದೆಲ್ಲವ ತಿಳಿಯದೇ ಪರಮಾತ್ಮನಿಗೆ ದೋಷ ಕೊಡಬಾರದು.ಯಾಕೆಂದರೆ ವೇದಗಳು ಸಾರುವ ಹಾಗೆ ಯಾವತ್ತೂ ಚರಾಚರಾ ವಸ್ತುಗಳಿಂದ ಸ್ತುತಿ ಮಾಡಿಸಿಕೊಳ್ಳುವಂಥ ಆ ಶಂಭುವನ್ನು ಯಾವನು ನಿಂದೆ ಮಾಡುವನೋ ಅವನು ರೌರವ ನರಕದಲ್ಲಿ ಅನುಭೋಗಿಸುವಂಥ ಕಷ್ಟವನ್ನು ನೂರು ವರುಷ ಹೇಳಿದರೂ ತೀರುವುದಿಲ್ಲಾ.ಅಂತಾ ಕಷ್ಟಕ್ಕೆ ಗುರಿಯಾಗುತ್ತಾನೆ ಎಂಬುದು ಪುರಾಣ ಪ್ರಸಿದ್ಧವಿದೆ.ಇದು ನಿಮಗೆ ಗೊತ್ತಿದ್ದೂ ನೀವು ಹೀಗೆ ಸೋಗು ಹಾಕಿಕೊಂಡು ನನ್ನ ಮುಂದೆ ಸುಳ್ಳು ಹೇಳಿ ನನ್ನನ್ನು ಪರೀಕ್ಷೆ ಮಾಡಲು ಬಂದಿರುವಿರಾ ? ನಿಮ್ಮದೆಲ್ಲಾ ನನಗೆ ತಿಳಿತಿದೆ.

ಅಲ್ಲಮಪ್ರಭು : ದೇವಿ, ನನ್ನದೇನು ನಿನಗೆ ಗೊತ್ತಾಗಿದೆ ?ನಾನು ಯಾರು ? ಭಿಕ್ಷೆ ಬೇಡುವ ಜಂಗಮ. ಸೊಲ್ಲಾಪುರದ ಸಿದ್ಧರಾಮ ಶಿವಯೋಗಿಯ ಹೊಡೆತಕ್ಕೆ ಸಿಕ್ಕು ಓಡಿ ಬಂದು ಒದ್ದಾಡುತ್ತಿರುವವ. ನೀನಾದರೂ ಒಳ್ಳೇಯದು ಮಾಡುತ್ತೀಯೆಂದು ಬಂದರೆ ನೀನೂ ಕಾಳಜಿ ಮಾಡಲಿಲ್ಲ.ನಾನು ಮತ್ತೆಲ್ಲಿಗಾದರೂ ಹೋಗುತ್ತೇನೆ.

(ಹೋಗುವಂತೆ ನಟಿಸುವನು.ಆಗ ಮಹಾದೇವಿ ಅಡ್ಡಬಂದು ಅವನನ್ನು ತಡೆಯುವಳು)

ಅಕ್ಕಮಹಾದೇವಿ : ನಿಮಗೆ ಏನು ಆಗಿದೆ ? ಎಲ್ಲವೂ ಸುಳ್ಳು. ಮುಂದೆ ಮಾಡಿ ಹೇಳಬೇಡಿ.ತಮ್ಮನ್ನು ಪೂಜೆ ಮಾಡುತ್ತೇನೆ. ಪ್ರತ್ಯಕ್ಷವಾಗಿ ನನ್ನನ್ನು ಉದ್ಧಾರಮಾಡಿ, ಹಾಗೇ ಎಲ್ಲಿಗೆ ಹೋಗುತ್ತೀರಿ ?

ಅಲ್ಲಮಪ್ರಭು : ನಾನು ಭಿಕ್ಷೆಗೆ ಅಡ್ಡಾಡುವ ಜಂಗಮ, ನಾನು ಎಲ್ಲಿಗಾದರೂ ಹೋಗುತ್ತೇನೆ ?

ಅಕ್ಕಮಹಾದೇವಿ : ನೀವು ಬಡ ಜಂಗಮರು ಹೌದೇ ಅಲ್ಲವೇ ಎನ್ನುವುದು ನನಗೆ ತಿಳಿದಿದೆ.ಇಂಥ ಸುಳ್ಳು ಯಾಕೆ ನುಡಿಯುತ್ತೀರಿ ?

ಅಲ್ಲಮಪ್ರಭು : ಹೌದು, ನಾನು ಸುಳ್ಳು ಹೇಳುವ ಬಡ ಜಂಗಮನಿದ್ದೇನೆ ನೋಡು.

ಅಕ್ಕಮಹಾದೇವಿ : ಈ ಮೇಲಿನ ವೇಷ ಇಷ್ಟ ಸಾಕು, ನಿಜವಾಗಿ ತಾವು ಜಂಗಮರಲ್ಲಾ.

ಅಲ್ಲಮಪ್ರಭು : ಖರೆ, ನಾನು ಜಂಗಮನು ?ಅಲ್ಲಾ ?

ಅಕ್ಕಮಹಾದೇವಿ : ಅಲ್ಲಾ, ಅಲ್ಲಾ.

ಅಲ್ಲಮಪ್ರಭು : ಹಾಗಾದರ ನಾನು ಯಾರು ?

ಅಕ್ಕಮಹಾದೇವಿ : ನೀವು ಯಾರೆಂದರೆ ಹೇಳುತ್ತೇನೆ ಕೇಳಿರಿ.

(ಪದ) ಪರಬ್ರಹ್ಮ ನಿರಂಜನ ಗುರುದೇವ
ಗುರುದೇವ ಅಲ್ಲಮಪ್ರಭು ನೀನು ॥ಪಲ್ಲವಿ ॥

ಬಲ್ಲೆನು ನಿನ್ನ ಗುಣ ಎನಿತೋ ಅನುಮಾನ
ನೀನೆಲ್ಲ ಜಂಗಮರಿಗೆ ಆಧಾರಭೂತನು
ನಿನಗೆ ಮುಚ್ಚಿದೆ ನಾನು ಅನುಭವಿಯೋ ನೀನು
ಪರಶಿವನೆ ನಿನ್ನ ನಂಬಿದೆ ನಾನಿನ್ನ
ಮಾಡುವ ತವಚರಣ ಹಗಲಿರುಳು ನಿನ್ನ ಧ್ಯಾನ.

(ಮಾತು) ಸ್ವಾಮಿ ನೀವು ಯಾರೆಂದರೆ, ಸಾಕ್ಷಾತ್ ಪರಬ್ರಹ್ಮ, ಪರಶಿವ, ನರರನ್ನು ಉದ್ಧಾರ ಮಾಡುವುದರ ಸಲುವಾಗಿ ಅಲ್ಲಮಪ್ರಭು ಎನ್ನುವ ಹೆಸರಿನಿಂದ ಈ ಲೋಕದಲ್ಲಿ ಪ್ರಸಿದ್ಧರಾಗಿ ಅನೇಕ ಲೀಲೆಗಳನ್ನು ಮಾಡುವಿರಿ.ಅಲ್ಲಮಪ್ರಭು ಸ್ವಾಮಿಗಳೇ ಯಾಕೆ ಇದು ಸುಳ್ಳೆ ?

ಅಲ್ಲಮಪ್ರಭು : (ಅಲ್ಲಮಪ್ರಭು ಸುಮ್ಮನೇ ನಿಂತಿರಬೇಕು)

ಅಕ್ಕಮಹಾದೇವಿ : ಯಾಕೆ ಸುಮ್ಮನಾದಿರಿ? ಮಾತನಾಡಿ. ನೀವು ಅಲ್ಲಮ ಪ್ರಭು ಸ್ವಾಮಿಗಳು ಹೌದೋ, ಅಲ್ಲವೋ ?

ಅಲ್ಲಮಪ್ರಭು : (ಸ್ವಗತ) ಇವಳು ನನ್ನ ಸ್ವರೂಪವನ್ನು ತಿಳಿದು ಗುರುತಿಸಿ ಬಿಟ್ಟಳು. ಇವಳು ಸಾಮಾನ್ಯಳಲ್ಲ.ಸಾಕ್ಷಾತ್ ಪಾರ್ವತಿಯೇ ಮಹಾದೇವಿಯ ಹೆಸರಿನಿಂದ ಈ ಉಡುತಡಿ ಪಟ್ಟಣದೊಳಗೆ ಅವತಾರಮಾಡಿದ್ದಾಳೆ.ಅಂದಮೇಲೆ ನನ್ನನ್ನು ಗುರುತಿಸದೇ ಬಿಡುತ್ತಾಳೆಯೇ ? (ಪ್ರಕಟ) ಶಹಭಾಷ್ ! ಶಹಭಾಷ್ ! ಮಹಾದೇವಿ, ನೀನು ಚುರುಕು ಇರುವಿ.ನಾನೇ ಸದಾಶಿವನು ಅನ್ನುವುದನ್ನು ಎಂಥಾ ಬೇಗನೆ ತಿಳಿದು ಬಿಟ್ಟೆ.ನೀನು ಬಹಳ ಚತುರೆ ಇರುವಿ ನೋಡು.

ಅಕ್ಕಮಹಾದೇವಿ : ಹೌದ್ರೀ, ನಾನು ಮಾತ್ರ ಚತುರೆ, ನೀವು ಚತುರರಲ್ಲವೇ ?

ಅಲ್ಲಮಪ್ರಭು : ಹಾದು ನಾನು ಚತುರ.

ಅಕ್ಕಮಹಾದೇವಿ : ಈಗ ಪ್ರತ್ಯಕ್ಷ ಬಡ ಜಂಗಮರ ವೇಷ ಹಾಕಿಕೊಂಡು ಬಂದು ಬಡ ಜಂಗಮನೆಂದು ಹೇಳದಿರಿ.ಅಂದಮೇಲೆ ನೀವು ಚತುರರೋ, ನಾನು ಚತುರೆಯೋ ನೀವೇ ಹೇಳಿ?

ಅಲ್ಲಮಪ್ರಭು : ಹಾಗಾದರೆ ನಾನೇ ಚತುರ ಅಂದಂಗಾಯಿತು.

ಅಕ್ಕಮಹಾದೇವಿ : ಅಷ್ಟೇ ಅಲ್ಲಾ, ಈ ಲೋಕದ ಚತುರರು ನೀವಿದ್ದೀರಿ.

ಅಲ್ಲಮಪ್ರಭು : ಹಾಗಾದರೆ ನೀನು ನನ್ನನ್ನು ಯಾತಕ್ಕೆ ಸ್ತುತಿ ಮಾಡುತ್ತೀ? ನಮ್ಮಂಥವರನ್ನು ಬೆನ್ನು ಹತ್ತಿ ನೀನು ಲೋಕದಲ್ಲಿ ಚತುರಿ ಆದೀ.ಇನ್ನು ಮೇಲೆ ನನ್ನ ಧ್ಯಾನವನ್ನು ಮಾಡಬೇಡಾ.ನೀನು ಸಂಭಾವಿತಳು.ನಿನ್ನ ಹತ್ತಿರ ನನ್ನಂಥವರು ನಿಲ್ಲಲಾಗದು, ನಾನು ಹೋಗುತ್ತೇನೆ. (ಮಹಾದೇವಿ ತಡೆಯುವಳು).

ಅಕ್ಕಮಹಾದೇವಿ : ಸ್ವಾಮಿ ನನ್ನ ಹುಚ್ಚುತನದಿಂದ ನಿಮ್ಮ ಮಾತಿನ ಕೂಡ ನಾನೂ ಮಾತನಾಡಿದೆ. ಸಿಟ್ಟಾಗಬೇಡಿ.ನಿಮ್ಮನ್ನು ಪೂಜೆ ಮಾಡುತ್ತೇನೆ ನಿಲ್ಲಿರಿ.ಹಾಗೇ ಎಲ್ಲಿಗೆ ಹೋಗುತ್ತೀರಿ?

ಅಲ್ಲಮಪ್ರಭು : ಏನೇ, ನಿನ್ನಿಂದ ಏನೇನೋ ಅನಿಸಿಕೊಂಡು ನಿನ್ನೊಂದಿಗೆ ಪೂಜೆ ಮಾಡಿಸಿಕೊಳ್ಳುತ್ತೆನೆಯೇ?

(ಪದ) ಛೇ ! ಛೇ ! ಸರಿ ಮುಟ್ಟಬೇಡಾ
ನಿಲ್ಲುವದಿಲ್ಲಾ ನಾ ಪೋಗುವೆ ಬಿಡು ಮಾರ್ಗವನು ॥ಪಲ್ಲವಿ ॥ಞ
ನಾ ಪೋಗುವೆನು ಬಿಡು ಮಾರ್ಗವನು

ಅಕ್ಕಮಹಾದೇವಿ : ನಾ ಬಿಡುವುದಿಲ್ಲರಿ ನಿಮ್ಮನ್ನು.

ಅಲ್ಲಮಪ್ರಭು : ಛೇ ಬಿಡು, ಇಲ್ಲಿ ಬಂದು ಎನ್ನ ಮಾನ ಹೋಯಿತು !

ಅಕ್ಕಮಹಾದೇವಿ : ನಂದು ಬಹು ತಪ್ಪಾಯಿತು ಸ್ವಾಮಿ.

ಅಲ್ಲಮಪ್ರಭು : ನಾ ಕೇಳುವುದಿಲ್ಲ ನಿನ್ನ ಮಾತಾ.

ಅಕ್ಕಮಹಾದೇವಿ : ಸಿಟ್ಟು ಸೈರಿಸು ಪ್ರಖ್ಯಾತ, ನಿನ್ನನ್ನು ಕೆಣಕಿ ಅದೇನೊ ಅನರ್ಥವಾಯಿತು.

(ಅಲ್ಲಮಪ್ರಭು ಹೋಗುತ್ತಾನೆ)

ಅಕ್ಕಮಹಾದೇವಿ : (ಗಾಬರಿಯಿಂದ ಆಚೀಚೆ ಹುಡುಕಾಡುವಳು)

(ಸ್ವಗತ) ಓಹೋ, ಮಾತಾಡುತ್ತಮಾತಾಡುತ್ತ ಮಾಯವಾಗಿ ಬಿಟ್ಟರಲ್ಲ.ನಾನು ಸಲಿಗೆಯಿಂದ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದು ಹೋಗಿ ಬಿಟ್ಟರು.ಹೆಂಗಸರಿಗೆ ಬುದ್ಧಿ ಇಲ್ಲಾ ಎನ್ನುವ ಮಾತು ಸುಳ್ಳಲ್ಲ.ನಾನು ಎಂಥ ವಿರಕ್ತಳು.ಮನೆಗೆ ಬಂದ ಮಹಾದೇವನನ್ನು ಕಳೆದುಕೊಂಡು ಬಿಟ್ಟೆ. ಇದಕ್ಕೆ ಇನ್ನೇನು ಮಾಡಲಿ ? (ಆಲೋಚಿಸಿ) ಇನ್ನಾದರೂ ಆ ಪ್ರಭುದೇವರು ಇದ್ದಲ್ಲಿಗೆ ಹೋಗಿ ನಂದು ತಪ್ಪಾಯಿತೆಂದು ಅವರ ಪಾದಕ್ಕೆ ಬಿದ್ದು, ಅವರನ್ನು ಕರಕೊಂಡು ಬಂದು ಪೂಜಾ ಮಾಡಿ ಕಳಿಸಿಕೊಡಬೇಕು.ಇದಕ್ಕೆ ನನಗೆ ಸಹಾಯ ಮಾಡುವವರು ಯಾರು ?(ದೂತಿ ಏನು ಮಾಡುತ್ತಿರುವೆ ? ಬೇಗ ಬಾ).

(ದೂತಿಯ ಆಗಮನ)

ದೂತಿ : ಯಾಕ ಮಗಳ ! ಮಹಾದೇವಿ, ಬಹಳ ಗಡಿಬಿಡಿ ಇದ್ದಂಗ ಕಾಣತೈತಿ, ಏನ ಕಳಕೊಂಡಿಯೇ ತಂಗೀ?

ಅಕ್ಕಮಹಾದೇವಿ : ಕಳಕೊಂಡಲ್ಲೇ ಹಿಂಗ ಚಿಂತಿ ಮಾಡ್ತೇನಿ ನೋಡು.

ದೂತಿ : ಏನ ಕಳಕೊಂಡಿಯೇ ತಂಗಿ ?

ಅಕ್ಕಮಹಾದೇವಿ : ಪರಮಾತ್ಮನನ್ನು ಕಳಕೊಂಡಿದ್ದೇನೆ ಕೇಳವ್ವಾ

(ಪದ) ಹಾದಿಯ ಹೇಳು ದೂತಿ ನನ್ನಗಿನ್ನ
ಹಲಬುವೆ ಈಗ ನಾನು ಸಿಟ್ಟು ಮಾಡಿ
ಗುರುವರನು ಎತ್ತ ಪೋದನು ॥ಪಲ್ಲವಿ ॥

ಸಲುಗಿಯಿಂದ ಆಡಿದೆನು ಪ್ರಭು
ಎಲ್ಲವು ನನ್ನ ಮೈಸೊಕ್ಕು ಮಾಡಿ
ನಾನು ಚತುರನೆಂದು ನಿಂದಾ ಮಾಡಿದೆನು ॥

ಹುಲಿ ಬಣ್ಣಕ್ಕಾಗಿ ನರಿ ಮೈ ಸುಟ್ಟುಕೊಂಡಂತೆ
ಎನಗೆ ಒಲೆಯಲಿಲ್ಲದ್ದು ಒಟ್ಟಗತಿಯು
ಯಾತರದೆನ್ನ ಧ್ಯಾನ ಎನಗೆ ಇಲ್ಲವ್ವಾ ಧ್ಯಾನ
ತಪ್ಪಿಗೆ ಹಚ್ಚಿಯನ್ನ ಹೋದ ಪರಮಾತ್ಮನಾ ॥

(ಮಾತು) ಏನವ್ವಾ, ಸ್ವಾಮಿಯವರು ಒಬ್ಬ ಜಂಗಮನಂತೆ ವೇಷವ ಹಾಕಿಕೊಂಡು ಬಂದಿದ್ದರು. ಅದಕ್ಕೆ ಅವರನ್ನು ಗುರುತು ಹಿಡಿದೆನು.ಅದಕ್ಕೆ ಅವರು ನೀನು ಬಲು ಚತುರೆ ಅಂದರು. ನಾನು ಸಲಿಗೆಯಿಂದ ನೀವು ಲೋಕದ ಚತುರರದ್ದೀರಿ ಅಂದೆನು.ಇಷ್ಟಕ್ಕೆ ಅವರು ಸಿಟ್ಟಿ ಗೆದ್ದು ಹೋಗಿ ಬಿಟ್ಟರು.ಅದಕ್ಕೆ ನೀನು ಏನಾದರೂ ಮಾಡಿ ಅವರನ್ನು ಕರೆದುಕೊಂಡು ಬರಬೇಕು ನೋಡವ್ವಾ ದೂತಿ.

ದೂತಿ : ಹಾಗಾದರೆ ಈಗಲೇ ಅವರನ್ನು ಹುಡುಕಿ ಕರೆದುಕೊಂಡು ಬರುತ್ತೇನೆ.ನನಗೇನು ಕೊಡುತ್ತೀಯವ್ವಾ.

ಅಕ್ಕಮಹಾದೇವಿ : ನೀನು ಬೇಡಿದ್ದು ಕೊಡುತ್ತೇನೆ.

ದೂತಿ : ನನಗೇನೂ ಬ್ಯಾಡವ್ವಾ, ಕರಿಗಡಬು ಮಾಡಿಸಿ ಉಣಿಸಿ ಬಿಡು ತಿಳೀಯಿತೇನು ?

ಅಕ್ಕಮಹಾದೇವಿ : ಉಣಿಸುತ್ತೇನೆ, ಹೋಗವ್ವಾ, ಲಗು ಕರೆದುಕೊಂಡು ಬಾ.

ದೂತಿ : ಅವರು ಎತ್ತ ಹೋದರು ?

ಅಕ್ಕಮಹಾದೇವಿ : ಇದೇ ಮಾರ್ಗವಾಗಿ ಹೋದರು ನೋಡವ್ವಾ.

ದೂತಿ : ಹಾಗಾದರೆ ಈಗಲೇ ಕರೆದುಕೊಂಡು ಬರುತ್ತೇನೆ.

(ದೂತಿ ಹೊಗುತ್ತಾಳೆ)

 

ದೃಶ್ಯ
ದೂತಿ :

(ಪದ)

ಶರಣೆನೆ ಪ್ರೀತಿಯಿಂದಾ ಶಿವಶರಣರೆತ್ತ ಪೋದಾ
ಮಾಡಲಿ ಹ್ಯಾಂಗಸೇವಾ
ಅಲ್ಲೇ ಹೋಗುವರು ಹೌದೇನೋ ಶರಣರು
ಹೋಗಬೇಡಿರಿ ನೀವು, ಬರ‌್ರಿ ನಮ್ಮ ಮನಿತನ.

(ಮಾತು) ಏ ಉದ್ದಂಗಿ ; ಏ ನಿಲುವಂಗೀ ಯಾಕ ಮಾತಾಡ್ತಿಯೋ, ಏನ
ಬಗ್ಗಿ ಕಲ್ಲ ತಗೊಳ್ಳಲೋ,

ಅಲ್ಲಮಪ್ರಭು : ಯಾಕೆ ನಿನಗೆ ಸೊಕ್ಕು ಬಂದಿದೆ, ಬೇಕೇನು ಬಡ್ತಾ ?

ದೂತಿ : ಯಾಕೋ ನನ್ನ ಸೊಕ್ಕು ಕೇಳಾಕ ನೀನೇನ ಸಕ್ರಿ ಗೋದಿ ಕೊಂಡ ಕೊಟ್ಟಿಯೇನ?ಸುಮ್ಮನೇ ನಿಲ್ಲುತ್ತಿಯೋ ಕಲ್ಲಿನಿಂದಾ ಕಾಲು ಮುರಿಯಲೋ ?

ಅಲ್ಲಮಪ್ರಭು : ಯಾಕೇ ನನ್ನಿಂದ ನಿನಗೇನು ಹರಕತ್ತು ಆಗಿದೆ ?

ದೂತಿ : ನನಗೇನ ಹರಕತ್ತಾಗಿಲ್ಲಾ, ಆ ಸುಮತಿ ಮಹಾದೇವಿಗೆ ಹರಕತ್ತಾಗೇದ ಬರ‌್ರಿ.

ಅಲ್ಲಮಪ್ರಭು : ಆಕಿ ನನಗೆ ಕಂಡ ಕಂಡ ಹಾಗೆ ಅಂದಿರುವಳು.ನಾನು ಅಲ್ಲಿಗೆ ಬರುವುದಿಲ್ಲಾ ಹೋಗು.

ದೂತಿ : ನಿಮಗೆ ಅನ್ನಬಾರದ್ದು ಅಂದು, ಮಂಗ್ಯಾನ್ಯಾಂಗ ಆಗಿ ಬುದ್ಧಿ ಬಂತು.ನಿದ್ದಿಗಣ್ಣಾಗ ಹೊಳ್ಯಾಡಾಕ ಹತೈತಿ.ನಿಮ್ಮ ಕಾಲ ಬೀಳತೇನಿ ಬರ‌್ರಿ.

ಅಲ್ಲಮಪ್ರಭು : ಛೇ !ಹುಚ್ಚಿ ಸರಿ ಅತ್ತ ನಾನು ಬರುವುದಿಲ್ಲ.

ದೂತಿ :

(ಪದ)

ಪ್ರಭು ಸ್ವಾಮಿಗಳವರೇ ಎನ್ನ ಆಧಾರವನ್ನು
ಶರಣರೆನಿಸಿಕೊಂಡು ಕರುಣವ ತೋರೆಂದು
ಪರಿಪರಿ ಹಲಬುವೆ ಬರ‌್ರಿ ನಮ್ಮ ಮನೀತನಕ ॥

(ಮಾತು) ಛೇ ! ಹಾಗೆ ಮಾಡಬೇಡಿ.ಆಕೆಯು ಬಹಳ ಆಳಾಕ ಹತ್ತಿದ್ದಾಳೆ.ಆಕೆಯು ಮರುಗುವುದನ್ನು ನೋಡಿ ಸಾಕಾಗಿ ಕರೆಯಲು ಓಡಿ ಬಂದೆ ಬರ‌್ರಿ.

ಅಲ್ಲಮಪ್ರಭು : ಹಾಗಾದರೆ ನಾನು ಬರಲೇಬೇಕೇ ?

ದೂತಿ : ಕರೆಯಲು ಬಂದೇನ್ರಿ, ಇನ್ನೂ ಬರಲೇಬೇಕೆ ಅಂತ ಕೇಳತೀರಲ್ರಿ, ಸರಾಸರಾ ಹೋಗೋಣ ಬರ‌್ರಿ.

ಅಲ್ಲಮಪ್ರಭು : ಹಾಗಾದರೆ ನಡೆ ಹೋಗೋಣ.

ದೃಶ್ಯ
ದೂತಿ : ಮಹಾದೇವಿ ಕರಕೊಂಡು ಬಂದೇನು ನೋಡು.ಚೆಲೋತಂಗ ಕೈ ಹಚ್ಚು.

ಅಕ್ಕಮಹಾದೇವಿ : (ಅಲ್ಲಮಪ್ರಭುವಿಗೆ)

(ಪದ) ಕ್ಷಮಿಸಿರಿ ನೀವು ಇದನ್ನು ತಿಳಿಯದೆ ಅಂದೆ ನಾ
ಅಪರಾಧಗೈದೆನಾ ನಿಮ್ಮ ಪಾದಕ್ಕೆ ಬಿದ್ದು ಬೇಡಿಕೊಂಬೆ ನಾ
ದಯಮಾಡಿ ನೀವೇ ಪರಶಿವನವತಾರ ॥

ಅಕ್ಕಮಹಾದೇವಿ : (ಪದ)

ಬಿಡು ದೇವಿ ನಿನ್ನ ಚಿಂತೆಯೆನ್ನು
ದಯಮಾಡಲು ಬಂದಿರುವೆ ನಾ

ಅಕ್ಕಮಹಾದೇವಿ :

ವರಮುಕ್ತಿಯ ಕೊಡು ಸರ‌್ವೇಶಾ
ಗಡಬಿಡಿಸು ಎನ್ನ ಬಹುಪಾಶಾ.

ಅಲ್ಲಮಪ್ರಭು :

ಜ್ಞಾನಸ್ವರೂಪಳೇ ನೀನಿರುವಿ
ಜಗಉದ್ಧರಿಸಲು ಬಂದಿರುವಿ
ಎಲೇ ಮಹಾದೇವಿ ಅನುಭವಿ
ಸ್ವರೂಪವೇ ಮುಕ್ತಳೆನಿಸುವೆ ॥

(ಮಾತು) ಮಹಾದೇವಿ ನಾನು ಹೋದುದಕ್ಕೆ ನಿಜವಾಗಿಯೂ ಹೋದರೆಂದು ತಿಳಿದಿರುವಿಯೇನು ? ಛೇ ಹುಚ್ಚಿ, ಹಾಗೇನೂ ತಿಳಿದುಕೊಳ್ಳಬೇಡಾ.ನಿನಗೆ ಪ್ರತ್ಯಕ್ಷನಾಗಿ ನನ್ನ ಹಕೀಕತ್ತು ತಿಳಿಸುವ ಸಲುವಾಗಿ ಇಲ್ಲಿಗೆ ಬಂದು ಇಲ್ಲಿಯತನಕ ಇದೆಲ್ಲಾ ಮಾಡಿದೆ.ಸಾಕ್ಷಾತ್ ಸದಾಶಿವನಿರುವೆ.ನೀನು ನನ್ನ ಭಕ್ತಸ್ವರೂಪಳಾದ ಪಾರ್ವತಿದೇವಿಯೇ ಇರುವೆ. ಭಕ್ತರ ಉದ್ಧಾರ ಮಾಡುವ ಸಲುವಾಗಿ ನಾವಿಬ್ಬರೂ ಮನುಷ್ಯ ಸ್ವರೂಪವನ್ನು ತೊಟ್ಟು ಈ ನರಲೋಕಕ್ಕೆ ಬಂದಿರುವೆವು.ಅದರಂತೆನೀನು ಶಿವಭಕ್ತಿ ಪ್ರಚಾರವನ್ನು ಮಾಡಿ, ಅದನ್ನು ಜಗದ ತುಂಬ ಹರಡು ತಿಳಿಯಿತೇ.ನಾನು ಈಗ ಕಲ್ಯಾಣ ಪಟ್ಟಣಕ್ಕೆ ಹೋಗಿ ಚೆನ್ನಬಸವರಾಜ, ಬಸವಣ್ಣ ಇವರಿಗೆ ಪ್ರತ್ಯಕ್ಷನಾಗಿ ಸಿದ್ಧರಾಮಶಿವಯೋಗಿಗೆ ಲಿಂಗಧಾರಣ ಮಾಡಿಸುತ್ತೇನೆ.ನನಗೆ ಹೋಗಲಿಕ್ಕೆ ಅನುಮತಿ ಕೊಡು.

ಅಕ್ಕಮಹಾದೇವಿ : ನಾನು ನಿಮ್ಮೊಂದಿಗೆ ಬರುತ್ತೇನೆ.ನಿಮ್ಮ ಪಾದ ಸೇವೆ ಮಾಡುವುದನ್ನು ಬಿಟ್ಟು ಇಲ್ಲಿ ಯಾಕೆ ಇರಲಿ? ಇನ್ನೇನು ಇರುವುದಿಲ್ಲ ಅಂತ ತಿಳಿದುಬಿಡಿರಿ.

ಅಲ್ಲಮಪ್ರಭು : ದೇವಿ ನೀನು ಇರಲಿಕ್ಕೇ ಬೇಕು.ಇಲ್ಲಿಯೇ ಇದ್ದು ಶಿವಭಕ್ತಿಯ ಪ್ರಭಾವವನ್ನು ಈ ಜಗತ್ತಿನಲ್ಲಿ ತೋರಿಸಿ ಭಕ್ತರನ್ನು ಉದ್ಧಾರ ಮಾಡು.ಅಂದರೆ ಪಾದಸೇವಾ ಮಾಡುವದಕ್ಕಿಂತ ಹೆಚ್ಚಿನ ಆನಂದ ದೊರೆಯುತ್ತದೆ.ಅದಕ್ಕೇ ನೀನು ಈ ಉಡತಡಿ ಪಟ್ಟಣದೊಳಗೆ ಇದ್ದಿರು.ಮತ್ತು ಯಾರು ನಿನಗೆ ಪ್ರತಿಕೂಲರಾಗುತ್ತಾರೋ ಅವರು ನಿನ್ನ ಶಾಪದಿಂದ ಸುಟ್ಟು ಹೋಗಲಿ ತಿಳಿಯಿತೋ ಇನ್ನು ನನಗೆ ಅಪ್ಪಣೆ ಕೊಡು.

ಅಕ್ಕಮಹಾದೇವಿ : ಸ್ವಾಮಿ ನಿಮ್ಮ ಅಪೇಕ್ಷೆಯನ್ನು ನಾನೂ ಎಂದಿಗೂ ಮೀರುವುದಿಲ್ಲ.

ಅಲ್ಲಮಪ್ರಭು : ಶಿವಭಕ್ತಿ, ಶಿವಜ್ಞಾನ, ಶಿವಾಚಾರ ಅನ್ನುವಂತ ಬೀಜವನ್ನು ಬಿತ್ತಲಿಕ್ಕೆ ಹತ್ತಿರುವೆ.ಆಗಆ ಬೀಜ ಹುಟ್ಟಿ, ಮೊಳಕೆಯಾಗಿ ಸಸಿ ದೊಡ್ಡದಾದ ಕೂಡಲೇ ದೃಢಭಾವವೆನ್ನುವಂಥ ಹಣ್ಣು ಆಗುವುದಲ್ಲಾ.ಆ ಹಣ್ಣನ್ನು ಯಾವ ಪುಣ್ಯವಂತರು ಊಟ ಮಾಡುತ್ತಾರೋ ಅಂತ ಪುಣ್ಯವಂತರೆಲ್ಲ ಕೂಡಿಕೊಂಡು, ಶ್ರೀಶೈಲದ ಕದಳೀ ವನದೊಳಗೆಎಲ್ಲರಿಗೂ ಮತ್ತೊಮ್ಮೆ ಉಪದೇಶ ಮಾಡುತ್ತಿರುತ್ತಾರೆ.ಆಗ ನೀನು ಅಲ್ಲಿಗೆ ಬರುವಿ.ಬಂದಾಗ ನಿನಗೆ ನನ್ನ ನಿಜರೂಪ ತೋರಿಸುತ್ತೇನೆ.ನೀನು ಕಾಳಜಿ ಮಾಡಬೇಡಾ.ನನಗೆ ಇನ್ನಾದರೂ ಅಪ್ಪಣೆಯನ್ನು ಕೊಡು.

ಅಕ್ಕಮಹಾದೇವಿ : ಸ್ವಾಮಿ ತಮಗೆ ಪೂಜೆ ಮಾಡುತ್ತೇನೆ. ಸ್ವೀಕರಿಸಬೇಕು.

ಅಲ್ಲಮಪ್ರಭು : ಆಗಲಿ ನಿನ್ನಿಚ್ಛೆ (ಈಗ ಪೂಜೆ ನಡೆಯಬೇಕು).

ಅಕ್ಕಮಹಾದೇವಿ : (ಸ್ತೋತ್ರ)

ಪರವಸ್ತು ಪ್ರಭುವರ ವೇದತೀರ್ಥ
ಪಾಲಿಸು ಪ್ರಖ್ಯಾತ ಕಾಮಿತ ಫಲದಾತ
ಬಹುಪಾಶೇಂದು ತೀರ್ಥ ॥ಪಲ್ಲವಿ ॥

ನಿಮ್ಮನು ಪೂಜಿಸಿ ಆದೆನು ಸುಖವಾಸಿ
ಭುವದೊಳೆನಗಾಗುವಾಭಾಸಿ ತಪ್ಪಿತು ಇಂದಿಗೆ ಭೀತಿ ॥

ಎನ್ನ ಸರಿ ಯಾರೂ ಇಲ್ಲಾ, ಹೊಂದಿದೆ ಗುರುಬಲ
ಕಂಡೆನು ಜ್ಞಾನಶೀಲ ಭಕ್ತಿಮಾರ್ಗದ ಮೂಲ ॥

ಮೇದಿನಿಯೊಳು ಖ್ಯಾತಿ ದೇವಗಿರಿ ಗ್ರಾಮದ
ಬಸವೇಶನ ಕರುಣ ಇರಲಿ ಸಂಪೂರ್ಣ ॥

ಅಲ್ಲಮಪ್ರಭು : ದೇವಿ ಇನ್ನಾದರೂ ನಿನ್ನಾಣೆ ಸಂಪೂರ್ಣವಾಯಿತೋ ?