Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅಕ್ಕ

‘ಅಕ್ಕ’ ಎಂದೇ ಪ್ರಸಿದ್ಧವಾಗಿರುವ  “ ಅಮೆರಿಕದ ಕನ್ನಡ ಕೂಟಗಳ ಆಗರ” (Association of Kannada Kootas of America) ವಿದೇಶದಲ್ಲಿ ಕನ್ನಡ ಸಂಸ್ಕೃತಿಯ ಪ್ರಸಾರಕ್ಕೆ ಕಂಕಣ ತೊಟ್ಟಿರುವ ಸಂಸ್ಥೆ.

ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶದ ಕನ್ನಡಿಗರು ಸಂಯುಕ್ತವಾಗಿ ೧೯೯೮ರಲ್ಲಿ ಸ್ಥಾಪಿಸಿದ ಈ ಸಂಸ್ಥೆ ಆರಂಭಗೊಂಡ ಅನತಿ ಕಾಲದಲ್ಲೇ ಹಿರಿದನ್ನು ಸಾಧಿಸಿದ ಗರಿಮೆಯನ್ನು ತನ್ನದಾಗಿಸಿಕೊಂಡಿದೆ. ೧೯೯೮ರಲ್ಲಿ ಫೀನಿಕ್ಸ್‌ ನಗರದಲ್ಲಿ ನಡೆದ ಕನ್ನಡಿಗರ ಸಮ್ಮೇಳನ ಹಾಗೂ ಅನಂತರ ಹೂಸ್ಟನ್‌ನಲ್ಲಿ ನಡೆದ ‘ವಿಶ್ವಸಹಸ್ರಮಾನ ಸಮ್ಮೇಳನಗಳು’ ಈ ಸಂಸ್ಥೆಯ ಕ್ರಿಯಾಶೀಲತೆ ಹಾಗೂ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಹೊರರಾಷ್ಟ್ರದ ಕನ್ನಡಿಗರಿಗೆ ಹಾಗೂ ನೆರೆಹೊರೆಯ ಕನ್ನಡೇತರರಿಗೆ ಪರಿಚಯಿಸುವ ನಿಟ್ಟಿನಲ್ಲಿ, ಹಲವು ಅತ್ಯುತ್ತಮ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದು ದಾಖಲನೀಯ.

ಅಮೆರಿಕದ ವಿವಿಧ ಭಾಗಗಳಲ್ಲಿರುವ ಕನ್ನಡಿಗರನ್ನು ಒಂದೆಡೆಗೆ ತಂದು ಸೂಕ್ತ ವೇದಿಕೆ ನೀಡಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದು; ಕರ್ನಾಟಕದ ಸಾಹಿತಿ ಕಲಾವಿದರನ್ನು ಗೌರವಿಸುವುದು, ಕರ್ನಾಟಕಕ್ಕೆ ಭೇಟಿ ನೀಡುವ ಅಮೆರಿಕದಲ್ಲಿರುವ ಕನ್ನಡಿಗರಿಗೆ ಸೂಕ್ತ ಅವಕಾಶ, ಸಲಹೆ ಹಾಗೂ ಮಾರ್ಗದರ್ಶನ ನೀಡುವುದು; ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯಕ್ಕೆ ಅನುವು ಮಾಡಿಕೊಡುವುದು ‘ಅಕ್ಕ’ ಸಂಸ್ಥೆಯ ಹಿರಿಯಾಸೆಯಾಗಿದೆ. ಕರ್ನಾಟಕದ ಗುಡ್ಡಗಾಡುಗಳಲ್ಲಿ ವಾಸವಾಗಿರುವ ಕನ್ನಡಿಗರ ಅಭಿವೃದ್ಧಿಯ ಉದ್ದೇಶದಿಂದ ಅವರ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಈ ಸಂಸ್ಥೆಯ ಸಾಮಾಜಿಕ ಕಳಕಳಿಗೆ ನಿದರ್ಶನವಾಗಿದೆ.

ಶ್ರೀ ಜಯಸ್ವಾಮಿ, ಶ್ರೀ ಕುಮಾರಸ್ವಾಮಿ, ಶ್ರೀ ಸೀತಾವಿ ರಾಮಯ್ಯ ಮುಂತಾದವರ ಆಸಕ್ತಿಯ ಫಲವಾದ ಅಕ್ಕ ಕನ್ನಡ ನಾಡಿನ ಭಾಷೆ ಹಾಗೂ ಸಂಸ್ಕೃತಿಯ ಪುರೋಭಿವೃದ್ಧಿಗೆ ಶ್ರಮಿಸುತ್ತಿರುವ, ಜವಾಬ್ದಾರಿಯುತ ಸಂಸ್ಥೆಯಾಗಿದೆ.