ನಗರದ ಬಡಮಕ್ಕಳಿಗೆ ಆಹಾರ ಒದಗಿಸುವ ಇಸ್ಕಾನ್ ದೇವಾಲಯದ ಮಹತ್ವಾಕಾಂಕ್ಷೆಯ ಯೋಜನೆ ಅಕ್ಷಯ ಪಾತ್ರೆ.
ಹಲವಾರು ಯುವಕರು ಈ ಯೋಜನೆಯಡಿ ಶ್ರದ್ಧೆಯಿಂದ ಕೆಲಸ ನಿರ್ವಹಿಸುತ್ತಿದ್ದು ಪ್ರತಿ ದಿನ ಮಧ್ಯಾಹ್ನ ಅವಕಾಶ ವಂಚಿತ ಸರ್ಕಾರಿ ಶಾಲೆಯ ಮತ್ತು ಕಾರ್ಪೊರೇಷನ್ ಶಾಲೆಯ ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಅವರ ಆಶಾದಾಯಕ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಅಕ್ಷಯ ಪಾತ್ರೆ ಯೋಜನೆ ನೆರವಾಗಿದೆ. ಜಾತಿ, ಧರ್ಮ ಮೀರಿ ಮಕ್ಕಳಲ್ಲಿ ದೇವರನ್ನು ಕಾಣುವ ಹಾಗೂ ಆ ಮೂಲಕ ಬಡ ಮಕ್ಕಳಿಗೆ ನೆರವಾಗುವ ಈ ಯೋಜನೆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ಮತ್ತು ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಮೊದಲು ೧೫೦೦ ಮಕ್ಕಳಿಗೆ ಪ್ರತಿದಿನ ಊಟ ನೀಡುವ ಕಾರ್ಯಕ್ರಮದಿಂದ ಪ್ರಾರಂಭವಾದ ಈ ಯೋಜನೆಯು ಪ್ರತಿ ದಿನ ಸುಮಾರು ೫೦, ೧೦೦ ವಿದ್ಯಾರ್ಥಿಗಳಿಗೆ ಅಕ್ಷಯಪಾತ್ರೆ ಸೇವಾ ಸೌಲಭ್ಯ ಒದಗಿಸುವ ಗುರಿ ಮುಟ್ಟಿದೆ.
ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯ, ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಶಾಲಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮುಂತಾದ ಚಟುವಟಿಕೆಗಳನ್ನು ಅಕ್ಷಯ ಫೌಂಡೇಷನ್ ನಡೆಸುತ್ತಿದೆ.
ಇಸ್ಕಾನ್ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಮಧು ಪಂಡಿತ ದಾಸರ ನೇತೃತ್ವದಲ್ಲಿ ಇಸ್ಕಾನ್ ದೇವಾಲಯದ ಭಕ್ತರು ಈ ಅಕ್ಷಯ ಪಾತ್ರೆ ಯೋಜನೆಯ ಕಾರ್ಯಚಟುವಟಿಕೆಗಳಿಗೆ ಕಾರಣರಾಗಿದ್ದಾರೆ. ಪ್ರತಿದಿನ ಮಧ್ಯಾಹ್ನ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ರಾಷ್ಟ್ರದ ಅಕ್ಷರಸ್ಥರ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಂಸ್ಥೆ ಅಕ್ಷಯ ಪಾತ್ರೆ ಫೌಂಡೇಷನ್.
Categories
ಅಕ್ಷಯ ಪಾತ್ರೆ ಫೌಂಡೇಷನ್
