-೧-

ಕುಮಾರವ್ಯಾಸ ಭಾರತದ ‘ಸಭಾಪರ್ವ’ದಲ್ಲಿ ಒಂದು ಅತ್ಯಂತ ಜನಪ್ರಿಯವಾದ ಪ್ರಸಂಗ:

ಶಕುನಿ ತಂತ್ರದ ಜೂಜಿನಲ್ಲಿ ಎಲ್ಲವನ್ನೂ ಸೋತು ತಲೆತಗ್ಗಿಸಿ ಕುಳಿತ ಪಾಂಡವರ ಎದುರಿಗೆ, ದುಶ್ಯಾಸನನು ದ್ರೌಪದಿಯನ್ನು ಎಳೆದುತಂದು ನಿಲ್ಲಿಸಿದ್ದಾನೆ; ದುಶ್ಶಾಸನನ ಹಸ್ತಗ್ರಹಣದಿಂದ ಅವಳ ಜಡೆಮುಡಿ ಬಿಚ್ಚಿಹೋಗಿದೆ. ಪಾಂಡವರ ಪಟ್ಟದ ರಾಣಿಗೆ ಹೀಗಾಗಬಹುದೆ? ರಾಜಸೂಯದಲ್ಲಿ ಮಂತ್ರಜಲಾಭಿಷಿಕ್ತವಾದ ಅವಳ ಶ್ರೀಮುಡಿಗೆ ಈ ಪಾಡು ಪ್ರಾಪ್ತವಾಗಬಹುದೆ?- ಎನ್ನುತ್ತಿದ್ದಾರೆ ಸಭಾಸದರು. ತನ್ನನ್ನು ಹೀಗೆ ತುಂಬಿದ ಸಭೆಗೆ ಎಳೆದು ತರಿಸಿದ್ದು ನ್ಯಾಯವಲ್ಲವೆಂದು ಅಬಲೆಯಾದ ದ್ರೌಪದಿ ಎತ್ತಿದ ಆಕ್ಷೇಪಣೆಗೆ, ‘ಯಥಾರ್ಥ ಭಾಷಣ ಭೀತ ಚೇತಸ’ರಿಂದ ತುಂಬಿದ ಸಭೆಯಲ್ಲಿ ಯಾರೂ ಉತ್ತರ ಕೊಡಲಿಲ್ಲ. ಕೌರವನ ಕಡೆಯವನೇ ಆದ ವಿಕರ್ಣನೊಬ್ಬನು ದ್ರೌಪದಿಯ ಪರವಾಗಿ ಆಡಿದ ಮಾತಾಗಲಿ, ದ್ರೌಪದಿಯ ಈ ದುರವಸ್ಥೆಗೆ ಕಾರಣನಾದ ಧರ್ಮರಾಯನ ತೋಳುಗಳನ್ನು ಸುಡುತ್ತೇನೆಂದು ಹಾರಾಡಿ, ಅರ್ಜುನನ ಪ್ರಯತ್ನದಿಂದ ಉಪಶಮನಗೊಂಡ ಭೀಮಸೇನನ ಕೋಪಾಗ್ನಿಯ ಪರಿಣಾಮವಾಗಲಿ, ಕೌರವನ ಮನಸ್ಸನ್ನು ಬದಲಾಯಿಸಲಿಲ್ಲ. ಕೂಡಲೇ ಕೌರವನು ಅಪ್ಪಣೆಮಾಡುತ್ತಾನೆ: ‘ಜೂಜಿನಲ್ಲಿ ಸೋತು ನಮಗೆ ದಾಸರಾಗಿರುವ ಈ ಪಾಂಡವರಿಗೆ ಹಾರ ಕಿರೀಟ ಪದಕಾದಿಗಳಿನ್ನೇಕೆ?’ ಹಾಗೆಯೇ ‘ನಾರಿಗೀ ವಸ್ತ್ರಾಭರಣ ಶೃಂಗಾರವೇಕಿನ್ನು, ತೆಗೆ’- ಎಂದು. ಕೌರವನ ಕಣ್‌ಸನ್ನೆಗೆ ಕಾಯುತ್ತಿದ್ದ ‘ಹೊಗೆಮೊಗದ ಕಿಡಿಗಣ್ಣ ಕೆಮ್ಮೀಸೆಗಳ ಗುಜುರಿನ ಜುಂಜುಕೇಶದ’ ವಿಗಡ ದುಶ್ಯಾಸನ ಎದ್ದನು, ‘ಬಂದು ಹಿಡಿದನು ದ್ರೌಪದಿಯ ಸೆರಗ!’

ದ್ರೌಪದಿ ಕೇಳಿದ ಧರ್ಮಾಧರ್ಮವನ್ನು ಕುರಿತ ಪ್ರಶ್ನೆಗೆ ಕೌರವನು ದುಶ್ಯಾಸನನ ಮೂಲಕ ಕೊಟ್ಟ ಉತ್ತರ ಇದು! ಶೋಕದ ಮಬ್ಬಿನಲ್ಲಿ ಮುಳುಗಿದ ವಿದುರ ಭೀಷ್ಮ ದ್ರೋಣಾದಿಗಳು ಮಮ್ಮಲ ಮರುಗಿದರು; ಪಾಂಡವರು ತಲೆತಗ್ಗಿಸಿ ಮೂಕರಾದರು. ದೀನವಾದ ಕಣ್ಣುಗಳಿಂದ ಸಭೆಯನ್ನು ನೋಡಿ ದ್ರೌಪದಿ ‘ಸೆರಗ ಬಿಡಿಸಿರೆ ತಂದೆಗಳಿರ’ ಎಂದು ಹಲುಬಿದಳು. ಎಲ್ಲರ ನಿಸ್ಸಹಾಯಕ ಮನೋಭಾವವನ್ನು ಕಂಡಳು. ಅವಳಿಗೆ ಅರಿವಾಯಿತು ‘ಪತಿಗಳೆನ್ನನು ಮಾರಿ ಧರ್ಮಸ್ಥಿತಿಯ ಕೊಂಡರು; ಭೀಷ್ಮ ಮೊದಲಾದತಿರಥರು ಪರಹಿತವ ಬಿಸುಟರು ವ್ಯರ್ಥ ಭೀತಿಯಲಿ’ -ಎಂಬ ಸತ್ಯ. ಆಗ ಅವಳ ಕರೆ ಸಹಜವಾಗಿಯೇ ಅನಾಥರಕ್ಷಕನಾದ ಶ್ರೀ ಕೃಷ್ಣನ ದ್ವಾರಕೆಯತ್ತ ಹೊನಲಿಟ್ಟಿತು. ಭಕ್ತ ಪರಾಧೀನನಾದ ಕೃಷ್ಣಪರಮಾತ್ಮನನ್ನು ಬಗೆಬಗೆಯಾಗಿ ಸ್ತುತಿಸಿ ಬೇಡಿಕೊಂಡಳು. ಇತ್ತ ದ್ವಾರಾವತಿಯಲ್ಲಿ ಕೃಷ್ಣನು ರುಕ್ಮಿಣಿ ಸತ್ಯಭಾಮೆಯರೊಂದಿಗೆ ಲೆತ್ತವನ್ನಾಡುತ್ತಿದ್ದನು; ಆದರೂ ಆತ ಹಾಗೆ ಆಟದಲ್ಲಿ ಮಗ್ನವಾದರೂ ‘ಭಕುತರಿಗೆ ತನ್ನನ್ನು ತೆತ್ತು ಬದುಕುವೆನೆಂಬ ಪರಮ ವ್ರತದ ನಿಷ್ಠೆಯನು ಚಿತ್ತದಲಿ ನೆಲೆಗೊಳಿಸಿ’ ಜಾಗ್ರತನಾಗಿದ್ದಾನೆ. ಇತ್ತ ಪರಾಭವದಲ್ಲಿ ಪಾಡಳಿದ ದ್ರೌಪದಿಯ ಕರೆ ಅತ್ತ ಕೃಷ್ಣನ ಎದೆಯನ್ನು ಮುಟ್ಟಿತು; ತಟ್ಟಿತು. ಮುರವೈರಿ ಸತಿಯ ಹುಯ್ಯಲನ್ನು ಕೇಳಿದ. ಪಾಂಡುಪುತ್ರರ ಬಾಳುವೆ ಹೀಗಾಯಿತೇ ಎಂದು ಒಂದು ಕ್ಷಣ ಮರುಗಿದ. ಕೂಡಲೇ ‘ಉಟ್ಟ ಸೀರೆ ಸೆಳೆಯಲು ಬಳಿಕ ಅಕ್ಷಯ ಸೀರೆ ಯಾಗಲಿಯೆಂದ ಗದುಗಿನ ವೀರನಾರಾಯಣ.’ ಕೃಷ್ಣನ ಕೃಪೆಯಿಂದ ದ್ರೌಪದಿಯ ಸೀರೆ ಅಕ್ಷಯವಾಯಿತು! ದುಶ್ಯಾಸನ ಸೋತು ಸೊರಗಿದನು. ಆಗ ಸಭಾಸದರೆಲ್ಲ ಆಶ್ಚರ್ಯದಿಂದ ಜಯಜಯಕಾರ ಮಾಡಿದರು. ದ್ರೌಪದಿ ನಿಜವಾಗಿಯೂ ಮಹಾಸತಿ ಎಂದರು. ‘ಆ ಮುಕುಂದನ ದಿವ್ಯನಾಮ ಪ್ರೇಮರಸಕಿದು ಸಿದ್ಧಿ’ -ಎಂಬ ಸಿದ್ಧಾಂತವನ್ನು ಅಂಗೀಕರಿಸಿದರು. ಹಲವರಿಗೆ ಬೆರಗು, ಹಲವರಿಗೆ ಸ್ವೇದ, ಹಲವರಿಗೆ ಬಾಷ್ಟ, ಹಲವರಿಗೆ ಪುಲಕ, ಹಲವರಿಗೆ ದುಗುಡ -ಹೀಗೆ ಆಸ್ಥಾನ ಸಂಭ್ರಮಾಶ್ಚರ್ಯ ಭಾವಗಳಿಂದ ತರಂಗಿತವಾಯಿತು.

ಪಂಡಿತರಾಗಲಿ,  ಪಾಮರರಾಗಲಿ ಈ ಒಂದು ಪ್ರಸಂಗವನ್ನು ಓದಿದಾಗ, ಅಥವಾ ಗಮಕಿಗಳಿಂದ ಕೇಳಿದಾಗ ಅಲ್ಲಿನ ತೀವ್ರವಾದ ವೇದನೆಯ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಕುರುರಾಜನ ಸಭಾಸದರಂತೆ ಬಹುಶಃ ನಾವೂ ಯಾವ ಮೋಡಿಯಿಂದಲೋ ಏನೊ ಸ್ತಬ್ಧರಾಗಿ ಆ ಪ್ರಸಂಗವನ್ನು ವೀಕ್ಷಿಸುತ್ತೇವೆ. ದ್ರೌಪದಿಯ ದಾರುಣ ದುಃಖದಲ್ಲಿ ಮರುಗುತ್ತೇವೆ; ಅವಳ ಶೋಕಪೂರ್ಣವಾದ ಕೃಷ್ಣಸ್ತುತಿಯಲ್ಲಿ ಪಾಲುಗೊಳ್ಳುತ್ತೇವೆ; ಕೃಷ್ಣನ ಕೃಪೆಯಿಂದ ಸೀರೆ ಅಕ್ಷಯವಾದ ಪವಾಡವನ್ನು ಕಂಡು ಬೆರಗಾಗುತ್ತೇವೆ; ‘ಆ ಮುಕುಂದನ ದಿವ್ಯನಾಮ ಪ್ರೇಮರಸಕಿದು ಸಿದ್ಧಿ’ -ಎಂದ ಹಲವು ವೇದಾಂತಿ ಭಕ್ತರೊಂದಿಗೆ ಅರಿವಿಲ್ಲದೆ ದನಿಗೂಡಿಸುತ್ತೇವೆ; ದ್ರೌಪದಿಯ ಮಾನಸಂರಕ್ಷಣೆಯಿಂದ ಮಹಾವಿಪತ್ತೊಂದನ್ನು ದಾಟಿದ ಸಮಾಧಾನದಿಂದ ಹರ್ಷಿತರಾಗುತ್ತೇವೆ; ಕೃಷ್ಣನ ಕೃಪೆಯ ಬಗೆಗೆ ಕೃತಜ್ಞರಾಗುತ್ತೇವೆ. ಉತ್ತಮ ಸಹೃದಯರಲ್ಲಿ ಇಂತೆಲ್ಲಾ ಭಾವನೆಗಳನ್ನು ತೀವ್ರವಾಗಿ ಪ್ರಚೋದಿಸುವ ಸಾಮರ್ಥ್ಯ ಈ ಪ್ರಸಂಗಕ್ಕೆ ಇರುವುದರಿಂದಲೇ, ಈ ಪ್ರಸಂಗ ಕುಮಾರವ್ಯಾಸ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ- ಎಂದುದು.

ನಾರಣಪ್ಪನ ಕವಿ ಮನೋಧರ್ಮ ಹಾಗೂ ಕಾವ್ಯೋದ್ದೇಶದ ಮೇಲೂ ಈ ಪ್ರಸಂಗ ಸಾಕಷ್ಟು ಬೆಳಕನ್ನು ಬೀರುತ್ತದೆ. ನಾರಣಪ್ಪ ಭಕ್ತಕವಿ. ಕೃಷ್ಣ ಅವನ ಪಾಲಿಗೆ ಗದುಗಿನ ವೀರನಾರಾಯಣನಲ್ಲದೆ ಬೇರೆ ಅಲ್ಲ. ಕೃಷ್ಣನ ಮಹಿಮೆ ಹಾಗೂ ಅಪಾರ ಕರುಣೆ ಇವುಗಳನ್ನು ಚಿತ್ರಿಸಲು ಕವಿಗೆ ಇದೊಂದು ಅಪೂರ್ವವಾದ ಅವಕಾಶವನ್ನೊದಗಿಸುವ ಪ್ರಸಂಗ. ಈ ಪ್ರಸಂಗದಲ್ಲಿ ಬಹು ಮುಖ್ಯವಾದ ಎರಡು ಅಂಶಗಳನ್ನು ನಾವು ಗುರುತಿಸಬಹುದು; ಒಂದು ಭಗವಂತನಾದ ಕೃಷ್ಣನ ಅಪಾರ ಭಕ್ತವತ್ಸಲತೆ; ಎರಡನೆಯದು, ಭಕ್ತಳಾದ ದ್ರೌಪದಿಯ ಅನನ್ಯ ಶ್ರದ್ಧೆಯ ಪ್ರಾರ್ಥನೆ. ಕೃಷ್ಣ, ತಾನು ಏನು ಕೆಲಸ  ಮಾಡುತ್ತಿರಲಿ ಆತನ ಚಿತ್ತದ ಒಂದು ಭಾಗ ಸದಾ ಭಕ್ತರ ಕಡೆಗೆ ತನ್ನ ಅಭಯಹಸ್ತವನ್ನು ಚಾಚಿಯೇ ಇರುತ್ತದೆ. ಆದ್ದರಿಂದಲೇ ಕವಿ ಕೃಷ್ಣನು ಲೆತ್ತವಾಡುವಾಗಲೂ ‘ಭಕುತರಿಗೆ ತನ್ನನ್ನು ತೆತ್ತು ಬದುಕುವೆನೆಂಬ ಪರಮ ವ್ರತದ ನಿಷ್ಠೆಯನು ಚಿತ್ತದಲಿ ನೆಲೆಗೊಳಿಸಿ’ ಆಟಕ್ಕೆ ಕುಳಿತಿದ್ದನೆಂದು ಹೇಳುತ್ತಾನೆ. ಅಷ್ಟೇ ಅಲ್ಲ ‘ಆಳಿನೊಂದಪಮಾನ ಆಳ್ದಂಗೆ’ -ಎಂಬ ಜವಾಬ್ದಾರಿಯನ್ನು ಆತ ಬಲ್ಲ. ಹೀಗಾಗಿ ಭಗವಂತನಿರುವುದು ಭಕ್ತರಿಗಾಗಿ; ಭಕ್ತರಿಂದ. ಇಂತಹ ಭಗವಂತನನ್ನು ತಟ್ಟಿತು ದ್ರೌಪದಿಯ ಕರುಳ ಕರೆ. ಆ ಕರೆಯೇ ಸೊಗಸಾದ ಭಕ್ತಿಪೂರ್ಣವಾದ ಭಾವಗೀತೆಯಾಗಿ ಪ್ರವಹಿಸಿದೆ. ಹಾಗೆ ನೋಡಿದರೆ ಕವಿಯ ಹೃದಯದ ಕರೆಯೇ ದ್ರೌಪದಿಯ ಪಾತ್ರವನ್ನು ನಿಮಿತ್ತವನ್ನಾಗಿಸಿಕೊಂಡು ವೀರನಾರಾಯಣನ ಅಡಿಗಳೆಡೆಗೆ ಹರಿದಂತೆ ತೋರುತ್ತದೆ. ಇಂಥ ಒಂದು ಪ್ರಾರ್ಥನೆಯ ಬಲದಿಂದ ಅಂದು ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರ ಅಕ್ಷಯವಾಯಿತು. ಲೋಕಾತಿಶಯವಾದ ಪವಾಡವೊಂದು ನಡೆಯಿತು. ಭಕ್ತರ ಶ್ರದ್ಧಾಪೂರ್ಣವಾದ ಪ್ರಾರ್ಥನೆಗೆ ಭಗವಂತನು ಓಗೊಡದಿರುವುದಿಲ್ಲ ಎಂಬ ನಿತ್ಯಸತ್ಯಕ್ಕೆ ಈ ಒಂದು ಪ್ರಸಂಗ ಪ್ರತಿಮೆಯಾಯಿತು.

ಈ ಪ್ರಸಂಗ ಇಷ್ಟೊಂದು ಕರುಣಾಪೂರ್ಣವೂ, ಸ್ವಾರಸ್ಯವೂ, ಪವಾಡಮಯವೂ ಆಗಿರುವುದರಿಂದಲೇ ಇದೊಂದು ಜನಪ್ರಿಯವಾದ ಪ್ರಸಂಗವೆಂದುದು. ಆದುದರಿಂದಲೇ ಈ ವಸ್ತುವನ್ನಾಶ್ರಯಿಸಿ ಜನಸಾಮಾನ್ಯರಲ್ಲಿ, ಕತೆಗಳೂ, ಹಾಡುಗಳೂ, ಕೀರ್ತನೆಗಳೂ, ನಾಟಕಗಳೂ, ಹುಟ್ಟಿಕೊಂಡು ಈ ಪ್ರಸಂಗದ ಸ್ವಾರಸ್ಯವನ್ನು ಸಾರಿವೆ.

ಈ ಪ್ರಸಂಗ ತನಗೆ ತಾನೇ ಸ್ವಾರಸ್ಯಕರವಾಗಿದ್ದರೂ, ಹೃದಯಾಕರ್ಷಕವಾಗಿದ್ದರೂ, ಜನಪ್ರಿಯವಾಗಿದ್ದರೂ ಮಹಾಭಾರತದ ಒಟ್ಟು ಕಟ್ಟಡದಲ್ಲಿ ಇಂಥ ಒಂದು ಪ್ರಸಂಗದ ಔಚಿತ್ಯವೇನು ಎಂದು ಹೊರಟ ವಿಮರ್ಶಕಮತಿ ಹಲವಾರು ಕಾರಣಗಳಿಂದ ತತ್ತರಿಸುತ್ತದೆ. ದ್ರೌಪದಿ ಪಂಚಪಾಂಡವರ ಮಡದಿ. ಮಹಾವೀರರಾದ ಪತಿಗಳೈವರ ಮುಂದೆ ವಸ್ತ್ರಾಪಹರಣದಂತಹ ನಾಚಿಕೆಗೇಡಿನ ಪ್ರಸಂಗ ನಡೆಯುತ್ತಿರುವಾಗ ಅವರು ಕೈಕಟ್ಟಿಕೊಂಡು ಸುಮ್ಮನೆ ಕುಳಿತಿದ್ದರೆ? ದ್ರೌಪದಿ ತುಂಬಿದ ಸಭೆಗೆ ಬಂದು, ತೊತ್ತೆಂದು ಸಂಬೋಧಿಸಲ್ಪಟ್ಟಾಗ ‘ಸಹದೇವ, ಬೆಂಕಿಯನ್ನು ತಾರೊ, ದ್ರೌಪದಿಯನ್ನು ಸೋತ ಧರ್ಮರಾಯನ ಕೈಗಳನ್ನು ಸುಡುತ್ತೇನೆ’ -ಎಂದು ಹಾರಾಡಿದ ಭೀಮನೂ ಈಗ ತಣ್ಣಗಾದನೆ? ಭೀಷ್ಮ ದ್ರೋಣರಂಥ ಹಿರಿಯರು ತಮ್ಮ ಮೊಮ್ಮಕ್ಕಳ ಸತಿಗೆ ಆದ ಅವಮಾನವನ್ನು ನೋಡಿಯೂ ಸಭೆಯಲ್ಲಿ ಸುಮ್ಮನೆ ಕುಳಿತರೆ? ಒಂದು ವೇಳೆ ಇಂತಹ ಒಂದು ಅವಮಾನಕರವಾದ ಘಟನೆ ನಡೆದಿದ್ದ ಪಕ್ಷದಲ್ಲಿ, ಅದು ಮಹಾಭಾರತ ಯುಗದ ಸಭ್ಯತೆಗೆ, ಸಂಸ್ಕೃತಿಗೆ, ಕಳಂಕಪ್ರಾಯವಾಗುವುದಿಲ್ಲವೆ? ಈ ಎಲ್ಲ ಪ್ರಶ್ನೆಗಳಿಗೆ, ಕಡೆಗೆ ಕೃಷ್ಣನ ಕೃಪೆಯಿಂದ ವಸ್ತ್ರ ಅಕ್ಷಯವಾಗಿ ಮಾನ ಸಂರಕ್ಷಣೆಯಾಯಿತಲ್ಲ, ಮತ್ತೇತಕ್ಕೆ ಚರ್ಚೆ- ಎಂದು ಸುಲಭವಾಗಿ ನುಸುಳಬಹುದಾದರೂ; ಮಹಾಭಾರತದಲ್ಲಿ ಬಿಡಿಸಲಾಗದ ಎಷ್ಟೋ ಸಮಸ್ಯೆಗಳಿವೆ, ಎಲ್ಲದಕ್ಕೂ ಔಚಿತ್ಯವನ್ನು ಹುಡುಕಿ ಸಮಾಧಾನವನ್ನು ತಂದುಕೊಳ್ಳುವ ಪ್ರಯತ್ನ ಸುಲಭವಲ್ಲ ಎಂದರೂ; ಮಹಾಭಾರತ ಒಂದು ಮಹಾರಣ್ಯವಿದ್ದ ಹಾಗೆ, ಪುರೋದ್ಯಾನದ ಸೌಂದರ್ಯ ಶೋಭೆಯಲ್ಲಿ ಅರಸುವ ಅಚ್ಚುಕಟ್ಟನ್ನು ಮಹಾರಣ್ಯಕ್ಕೆ ಅನ್ವಯಿಸಿ ನೋಡುವುದು ಸಲ್ಲದು ಎಂದು ಹಲವರು ಗದರಿಕೊಂಡರೂ, ಪ್ರಕೃತ ಪ್ರಸಂಗದಲ್ಲಿ ಒಂದು ಪ್ರಶ್ರೆ ಮಾತ್ರ ನಿರುತ್ತರವಾಗಿಯೇ ನಿಲ್ಲುವಂತೆ ತೋರುತ್ತದೆ: ನಿಜ, ಕೃಷ್ಣನ ಕೃಪೆಯಿಂದಲೇನೋ ದ್ರೌಪದಿಯ ಮಾನ ಉಳಿಯಿತು; ಆದರೆ ಇಡೀ ಸಭೆಗೆ ಸಭೆಯೇ ಇಂಥ ಒಂದು ಅವಮಾನಕರವಾದ ಪ್ರಸಂಗದಲ್ಲಿ ಬಾಯಿಮುಚ್ಚಿ ಕುಳಿತಿರುವುದನ್ನೂ, ಪಾಂಡವರೂ, ಭೀಷ್ಮ ದ್ರೋಣಾದಿಗಳೂ ಸುಮ್ಮನಿರುವುದನ್ನೂ ನೋಡಿದರೆ, ಎಲ್ಲರೂ ದ್ರೌಪದಿಯ ಮಾನಸಂರಕ್ಷಣೆಯ ಕೀರ್ತಿಯನ್ನು ಆ ಶ್ರೀಕೃಷ್ಣನಿಗೆ ಕೊಡಲೇಬೇಕೆಂದು ಕಾದು ಕುಳಿತಂತೆ ತೋರುವುದಿಲ್ಲವೆ? ಶ್ರೀಕೃಷ್ಣನ ಮಹಿಮಾ ವಿಶೇಷದ ಪ್ರದರ್ಶನಕ್ಕೆಂದೇ ಎಲ್ಲರೂ ಪೂರ್ವಭಾವಿಯಾಗಿ ಸಿದ್ಧರಾಗಿ ಬಂದಂತೆಯೂ, ಕೃಷ್ಣನ ಮಹಿಮಾ ಪ್ರಕಾಶನಕ್ಕೆ ತಮ್ಮದೇಕೆ ಅಡ್ಡಿ ಎಂದು ಕುಳಿತ ಹಾಗೆಯೂ, ದ್ರೌಪದಿಯ ಮಾನಸಂಕ್ಷಣೆಯಾಗುತ್ತಲೇ ಸಭಿಕರೆಲ್ಲಾ ಆಶ್ಚರ್ಯದಿಂದ ಆ ಮುಕುಂದನ ಲೀಲೆಯನ್ನು ಕಂಡು, ಅದನ್ನು ಹೊಗಳಿ, ನುತಿಸಿದ ಹಾಗೆಯೂ ಕಂಡುಬರುವುದಿಲ್ಲವೆ?

ವಿದ್ವಾಂಸರು, ಈ ಒಂದು ಪ್ರಸಂಗ ಮೂಲಭಾರತದಲ್ಲಿ ಪ್ರಕ್ಷಿಪ್ತ ಎನ್ನುತ್ತಾರೆ. ಹಲವರು ಇಡೀ ಪ್ರಸಂಗವೇ ಪ್ರಕ್ಷಿಪ್ತ ಎಂತಲೂ, ಮತ್ತೆ ಹಲವರು ಅದರಲ್ಲಿ ಬರುವ ಕೃಷ್ಣನಕೃಪೆಯ ಪವಾಡ ಮಾತ್ರ ಪ್ರಕ್ಷಿಪ್ತವೆಂತಲೂ, ಯಾರೋ ಈಚಿನ ಕೃಷ್ಣ ಭಕ್ತರು, ಕೃಷ್ಣನ ಮಹಿಮಾಪ್ರದರ್ಶನಕ್ಕಾಗಿ ತಂದು ಸೇರಿಸಿರಬೇಕೆಂತಲೂ ಅಭಿಪ್ರಾಯಪಡುತ್ತಾರೆ. ನಾರಣಪ್ಪನ ಭಾರತದಲ್ಲಿ ಮಡುಗೊಂಡ ಈ ಪ್ರಸಂಗದ ಮೂಲವನ್ನರಿಯಬೇಕಾದರೆ, ನಾವು ‘ವ್ಯಾಸ ಮುನೀಂದ್ರ ರುಂದ್ರ ವಚನಾಮೃತವಾರ್ಧಿ’ಗೇ ಪ್ರವಾಸ ಹೋಗಬೇಕಾಗುತ್ತದೆ.

-೨-

ಮಹಾಭಾರತದಲ್ಲಿ ಸಭಾಪರ್ವ ಬಹು ಮುಖ್ಯವಾದುದು. ವಾಸ್ತವವಾಗಿ ಸಭಾಪರ್ವದ ಘಟನೆಗಳೇ ಒಂದು ರೀತಿಯಲ್ಲಿ ‘ಮಹಾಭಾರತಕ್ಕಾದಿಯಾಯ್ತು’ ಎನ್ನಬಹುದು. ಪಾಂಡವರು ಮಾಡಿದ ರಾಜಸೂಯಯಾಗ ಕೌರವನ ಅಸೂಯಾಗ್ನಿಯನ್ನು ಕೆರಳಿಸಿದ್ದು ಇಲ್ಲಿ;  ಪಾಂಡವರ ಬಲ, ಸಂಪತ್ತು ಕೌರವನನ್ನು ದಿಗ್‌ಭ್ರಮೆಗೊಳಿಸಿ ಅವನಲ್ಲಿ ಈ ಸಂಪತ್ತನ್ನು ಕವರುವ ಗೃಧ್ರ ಬುದ್ಧಿಯನ್ನು ವೃದ್ಧಿಗೊಳಿಸಿದ್ದು ಇಲ್ಲಿ; ಕೃತಕ ಸಭಾಲೋಕನ ಕಾಲದಲ್ಲಿ, ಅಭಿಮಾನಧನನಾದ ಈ ಧೃತರಾಷ್ಟ್ರಪುತ್ರನ ದುರವಸ್ಥೆಯನ್ನು ಕಂಡು ಪಾಂಚಾಲಿ ನಕ್ಕು ಹಾಸ್ಯಮಾಡಿ, ಮುಂದಿನ ವಸ್ತ್ರಾಪಹರಣದಂತಹ ಪ್ರಸಂಗದ ಕಿಚ್ಚನ್ನು ಕೌರವನಲ್ಲಿ ಹತ್ತಿಸಿದ್ದು ಇಲ್ಲಿ; ರಾಜಸೂಯ ಮಖಧೂಮದಿಂದ ಕಂದಿಕುಂದಿದ ಕೌರವ, ಶಕುನಿತಂತ್ರದ  ನೆರವಿನಿಂದ ಪಾಂಡವರನ್ನು ಬರಮಾಡಿಕೊಂಡು ಜೂಜಾಡಿ ಸೋಲಿಸಿದ್ದು ಇಲ್ಲಿ; ಕಡೆಗೆ ದ್ರೌಪದಿಯ ಶ್ರೀಮುಡಿಯನ್ನು, ಉಟ್ಟಬಟ್ಟೆಯನ್ನು ಸೆಳೆದು ಅವಮಾನ ಮಾಡಿಸಿ, ತನ್ನ ವಿನಾಶದ ಶಾಸನವನ್ನು ಭೀಮಾರ್ಜುನರ ಕೋಪಾಗ್ನಿಲಿಪಿಯಲ್ಲಿ ಬರೆಯಿಸಿದ್ದು ಇಲ್ಲಿ; ಪಾಂಡವರ ವನವಾಸಕ್ಲೇಶದ ಹೆಬ್ಬಾಗಿಲು ತೆರೆದದ್ದು ಇಲ್ಲಿ; ಒಟ್ಟಿನಲ್ಲಿ ಮುಂದಿನ ಕುರುಕ್ಷೇತ್ರದ ರಣರಂಗದ ನಕ್ಷೆಯನ್ನು ಸಿದ್ಧಗೊಳಿಸಿದ್ದು ಸಭಾಪರ್ವದಲ್ಲಿಯೇ. ಈ ಕಾರಣಗಳಿಂದಾಗಿ ಮಹಾಭಾರತದಲ್ಲಿ ಸಭಾಪರ್ವ ಅತ್ಯಂತ ಮುಖ್ಯವಾದುದು.

ದ್ಯೂತ ಪ್ರಸಂಗದಲ್ಲಿ, ದ್ಯೂತದ ಪರಿಣಾಮವಾಗಿ ದ್ರೌಪದಿಯ ವಿಷಯದಲ್ಲಿ ನಡೆದ ಎರಡು ಅನ್ಯಾಯಗಳು, ಅತ್ಯಂತ ಗಮನಾರ್ಹವಾದವು. ಮೊದಲನೆಯದು ಅವಳ ಕೇಶಾಪಕರ್ಷಣ; ಎರಡನೆಯದು, ಅವಳ ವಸ್ತ್ರಾಪಹರಣ. ಪಾಂಡವರೇನೋ ಜೂಜಾಡಿ ಸೋತರು. ಆದರೆ ಅವರು ಸೋತ ಸೋಲಿನ ದುಷ್ಪರಿಣಾಮ ತಕ್ಷಣವೇ ದ್ರೌಪದಿಯ ಮೇಲೆರಗಿತು. ಹಾಗೆ ಅವಳೊಬ್ಬಳ ಪಾಲಿಗೆ ಈ ದೌರ್ಭಾಗ್ಯ ಒದಗಿದ್ದರ ಕಾರಣ ರಾಜ ಸೂಯಯಾಗದ ಸಂದರ್ಭದಲ್ಲೇ ಸೂಚಿತವಾಗಿದೆ. ಕೃತಕ ಸಭಾಲೋಕನ ಕಾಲದಲ್ಲಿ ಜಾರಿಬಿದ್ದ ದುರ‍್ಯೋಧನನನ್ನು ದ್ರೌಪದಿ ಕಂಡು ಸಖೀಜನರೊಂದಿಗೆ ಸೇರಿಕೊಂಡು ನಕ್ಕದ್ದೇ ಇದಕ್ಕೆ ಮೂಲವಾಯಿತು. ರಾಜಸೂಯದಿಂದ ಹಿಂದಿರುಗಿದ ಕೌರವ ತನ್ನ ತಂದೆಯ ಎದುರಿಗೆ ತನಗಾದ ಪರಾಭವಗಳನ್ನು ಹೇಳಿಕೊಳ್ಳುತ್ತಾ-

ತತ್ರ ಮಾಂ ಪ್ರಾಹಸತ್ಕೃಷ್ಣಃ ಪಾರ್ಥೇನ ಸಹ ಸಸ್ವನಮ್
ದ್ರೌಪದೀ ಚ ಸಹ ಸ್ತ್ರೀಭಿರ್ ವ್ಯಥಯಂತೀ ಮನೋ ಮಮ
ಕ್ಲಿನ್ನವಸ್ತ್ರಸ್ಯ ಚ ಜಲೇ ಕಿಂಕರಾ ರಾಜಚೋದಿತಾಃ
ದದುರ್ವಾಸಾಂಸಿ ಮೇ
sನ್ಯಾನಿ ತಚ್ಚ ದುಃಖತರಂ ಮಮ. [೨-೪೬-೩೦,೩೧.]

“ಅಲ್ಲಿ ಪಾರ್ಥನೊಂದಿಗೆ ಕೃಷ್ಣನು ಗಟ್ಟಿಯಾಗಿ ನಕ್ಕನು; ದ್ರೌಪದಿಯು ಕೂಡ ಸಖೀಜನರೊಂದಿಗೆ ನಕ್ಕಳು. ಅದು ನನ್ನ ಮನಸ್ಸಿನಲ್ಲಿ ವ್ಯಥೆಯನ್ನುಂಟುಮಾಡಿದೆ. ಬಟ್ಟೆ ಒದ್ದೆಯಾಗಿ ನೀರಿನಲ್ಲಿ ನಿಂತ ನನಗೆ, ರಾಜಚೋದಿತರಾದ ಕಿಂಕರರು ಬೇರೆ ಬಟ್ಟೆಗಳನ್ನು ತಂದುಕೊಟ್ಟರಲ್ಲ; ಅದು ನನಗೆ ಎಲ್ಲದಕ್ಕಿಂತ ದುಃಖಕರವಾದ ಅವಮಾನ” -ಎನ್ನುತ್ತಾನೆ. ತನ್ನ ದುರವಸ್ಥೆಯನ್ನು ನೋಡಿ ಕೃಷ್ಣ ಪಾರ್ಥರು ನಕ್ಕದ್ದಕ್ಕಿಂತಲೂ, ಸಖೀಜನರೊಂದಿಗೆ ದ್ರೌಪದಿ ಕೂಡ ನಕ್ಕದ್ದು ಆತನ ಮನಸ್ಸನ್ನು ಕೊರೆದಿರಬೇಕು.[1] ಗಂಡಿಗೆ ಗಂಡಿನಿಂದ ಆದ ಅವಮಾನಕ್ಕಿಂತ, ಹೆಣ್ಣಿನಿಂದ ಆದ ಅವಮಾನ ಹೆಚ್ಚು ಆಘಾತಕಾರಕವೆಂದು ತೋರುತ್ತದೆ. ಅದರಲ್ಲೂ ಅಭಿಮಾನಧನನಾದ ಸುಯೋಧನನನ್ನು ಕೇಳಬೇಕೆ? ಇದರ ಜೊತೆಗೆ ಪಾಂಡವರು ತಮ್ಮ ಕಿಂಕರರ ಮೂಲಕ ಇವನಿಗೆ ಬೇರೆಯ ವಸ್ತ್ರಗಳನ್ನು ಕೊಡಿಸಿದ್ದು ಇನ್ನೂ ದುಃಖತರವಾಗಿ ಪರಿಣಮಿಸಿ ಪ್ರತೀಕಾರ ಭೀಷಣಬುದ್ಧಿ ಈ ಪನ್ನಗಪತಾಕನ ಮನದಲ್ಲಿ ಹೆಡೆಯೆತ್ತಿರಬಹುದು.[2] ಈ ಕಾರಣದಿಂದಲೇ ಇರಬೇಕು ಮುಂದೆ ದ್ಯೂತದಲ್ಲಿ ಪಾಂಡವರು ಸೋತ ಒಡನೆಯೇ ಕೌರವನ ಮನಸ್ಸು ನೇರವಾಗಿ ದ್ರೌಪದಿಯನ್ನು ಅವಮಾನಿಸುವ ಕಡೆಗೆ ಪ್ರಬಲವಾಗಿ ಮುಂದುವರಿದಿದೆ. ಹಿಂದೆ ದ್ರೌಪದಿ ನಕ್ಕ ನಗೆ ಇನ್ನೂ ಕೌರವನ ಮನಸ್ಸಿನಲ್ಲಿ ಅನುರಣಿತವಾಗುತ್ತಿತ್ತೆಂದು ತೋರುತ್ತದೆ. ಆದುದರಿಂದಲೇ ದ್ರೌಪದಿಯನ್ನು ಶಕುನಿಯ ಸೂಚನೆಯ ಮೇರೆಗೆ ಧರ್ಮರಾಯನು ಪಣವಾಗಿ ಒಡ್ಡಿ ಸೋತ ಮರುಕ್ಷಣವೇ ದುರ‍್ಯೋಧನನು ದ್ರೌಪದಿಯನ್ನು ಕರೆದುತರಲು ವಿದುರನಿಗೆ ಅಜ್ಞಾಪಿಸುತ್ತಾನೆ.[3] ಪಾಪ, ದ್ರೌಪದಿಗೆ ತಾನು ಹಾಗೆ ನಕ್ಕ ನಗೆ, ಹೀಗೆ ಮುಂದೆ ಪರಾಭವದ ಧಗೆಯಾಗಿ ತನ್ನನ್ನೇ ಸುತ್ತುವುದೆಂಬ ಕಲ್ಪನೆ ಕೂಡ ಇರಲಿಲ್ಲ. ಆ ಒಂದು ನಗೆಯ ನಂತರ ದ್ರೌಪದಿಗೆ ಒದಗಿದ್ದು ಪರಾಭವ- ಕ್ಲೇಶಗಳ ಪರಂಪರೆ. ಬಹುಶಃ ಅನಂತರ ದ್ರೌಪದಿ ಹಿಗ್ಗಿನಿಂದ ನಕ್ಕದ್ದನ್ನು ನಾವು ಕಾಣೆವು. ಕಡೆಗೆ ಭೀಮ ಕೌರವನನ್ನು ತೊಡೆಯೊಡೆದು ಕೆಡಹಿದನಂತರ, ಆ ರಣರಂಗದ ರಕ್ತಚ್ಛಾಯೆಯಲ್ಲಿ ದ್ರೌಪದಿ ಹಸನ್ಮುಖಿಯಾಗಿ ಮುಗುಳುನಗೆ ನಕ್ಕಿರಬಹುದಾದರೂ, ಆ ರೌದ್ರಾವರಣದಲ್ಲಿ ನಮಗೆ ಯಾರ ನಗೆಯೂ ಕಾಣದು. ದ್ರೌಪದಿಯ ಅಟ್ಟಹಾಸ ಹಾಗೂ ಮಂದಹಾಸಗಳ ನಡುವೆ ಎಷ್ಟೊಂದು ಬನ್ನಗಳು, ಪರಾಭವಗಳು, ವನವಾಸಕ್ಲೇಶದ ಮ್ಲಾನ ದಿನಗಳು, ರಣರಂಗದ ರಥಚಕ್ರಧ್ವನಿ ಚೀತ್ಕಾರಗಳು, ರಕ್ತದ ಮಡುಗಳು! ಆ ಎರಡು ನಗೆಗಳ ನಡುವೆ ಉಸಿರುಕಟ್ಟಿಸುವ ಧಗೆಯೇ ತುಂಬಿಹೋಗಿದೆ!

ದ್ರೌಪದಿಗೊದಗಿದ ಪರಾಭವಗಳು ಎರಡು. ಮೊದಲನೆಯದು ಕೇಶಾಪಕರ್ಷಣ: ಎರಡನೆಯದು ವಸ್ತ್ರಾಪಹರಣ. ಮೊದಲನೆಯದಂತೂ ಬಹುದೊಡ್ಡ ಅಪರಾಧ. ಯಾವ ರಾಜಸೂಯಯಾಗದಲ್ಲಿ ಅವಭೃಥಜಲದಿಂದ ಮಂತ್ರಪೂರ್ವಕವಾಗಿ ಸ್ನಾತವಾಗಿತ್ತೋ ಆ ಪಾಂಡವರ ಪಟ್ಟದರಾಣಿಯ ಜಡೆಮುಡಿಯನ್ನು ದುಶ್ಶಾಸನನು ಎಳೆದು ಬಿಚ್ಚಿದ್ದು ದೊಡ್ಡ ಅವಮಾನ.[4] ಮುಖ್ಯವಾಗಿ  ಈ ಒಂದು ಪರಾಭವವೇ ಕವಿಗಳ ಕಣ್ಣನ್ನು ವಿಶೇಷವಾಗಿ ಸೆಳೆದಿರುವುದು; ಕನ್ನಡದ ಆದಿಕವಿ ಪಂಪನಿಗಂತೂ ಸಮಸ್ತ ಮಹಾಭಾರತವೇ ದ್ರೌಪದಿಯ ಕೇಶಪಾಶ ಪ್ರಪಂಚದಲ್ಲಿ  ಅಡಗಿದಂತೆ ತೋರುತ್ತದೆ. ದುಶ್ಶಾಸನನನ್ನು ಕೊಂದನಂತರ ಭೀಮ, ಹದಿಮೂರು ವರ್ಷಗಳ ಕಾಲ ಬಿಚ್ಚಿದ ಆ ಜಡೆಮುಡಿಯನ್ನು ಶತ್ರುರಕ್ತದಿಂದ ಮೀಯಿಸಿ ಕಟ್ಟುತ್ತಾ-

ಇದರೊಳ್ ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ
ಪುದಿದಳ್ಕಾಡಿತ್ತು, ಅಡಂಗಿತ್ತಿದರೊಳೆ ಕುರುರಾಜಾನ್ವಯಂ, ಮತ್ಪ್ರತಾಪ
ಕ್ಕಿದರಿಂದಂ ನೋಡಗುರ್ವುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತು; ಅ-
ಬ್ಜದಳಾಕ್ಷೀ ಪೇಳ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂಚಂ||
[ಪಂ. ಭಾ. ೧೨-೧೫೬]

ಎಂದು ಆ ‘ಕೇಶಪಾಶಪ್ರಪಂಚ’ದ ಮಹತ್ವವನ್ನು ಘೋಷಿಸುತ್ತಾನೆ. ರನ್ನನ ಕಣ್ಣಿಗಂತೂ ದ್ರೌಪದಿಯ ಆ ಬಿಡುಮುಡಿ ‘ಕಾಳಾಹಿ’ಯಂತೆ, ‘ಕುರುಕುಲ, ಜೀವಾಕರ್ಷಣ ಪರಿಣತ ಕಾಳಹಸ್ತ’ದಂತೆ, ‘ಪರಾಭವಜ್ವಲನ ಧೂಮಕೃಷ್ಣ’ದಂತೆ ಕಾಣಿಸುತ್ತದೆ.[5] ಕಡೆಗೆ ಭೀಮ ತನ್ನ ಪ್ರತಿಜ್ಞೆಯನ್ನು ಪೂರೈಸಿದ ಮೇಲೆ ದ್ರೌಪದಿಯ ಜಡೆಮುಡಿಯನ್ನು ಕಟ್ಟುತ್ತಾನೆ. ದುಶ್ಶಾಸನ ಬಂದು ಜಡೆಮುಡಿಯನ್ನೆಳೆದ ಪ್ರಸಂಗವನ್ನು ಕುಮಾರವ್ಯಾಸ ಅದ್ಭುತವಾಗಿ ವರ್ಣಿಸಿದ್ದಾನೆ[6]. ಸಂಸ್ಕೃತ ಕವಿ ಭಾರವಿಯಲ್ಲೂ ದ್ರೌಪದಿಗಾದ ಅವಮಾನದಲ್ಲಿ ಪ್ರಧಾನವಾದುದು ಕೇಶಾಪಕರ್ಷಣೆಯೇ ಎಂಬ ಮಾತಿದೆ.[7] ಭಟ್ಟನಾರಾಯಣನ [ಕ್ರಿ.ಶ. ೮ನೇ ಶತಮಾನ] ಗಮನವೂ ‘ವೇಣೀ ಸಂಹಾರ’ದ ಕಡೆಗೇ. ಹೀಗಾಗಿ ದ್ರೌಪದಿಗೆ ಒದಗಿದ ಪರಾಭವಗಳಲ್ಲಿ ಮೊದಲನೆಯದಾದ ಈ ಕೇಶಾಪಕರ್ಷಣೆ ಸಂಸ್ಕೃತದ ಹಾಗೂ ಕನ್ನಡದ ಕವಿಗಳ ಗಮನವನ್ನು ವಿಶೇಷವಾಗಿ ಸೆಳೆದಂತೆ ತೋರುತ್ತದೆ. ಆದರೆ ಅವಳಿಗೊದಗಿದ ಪರಾಭವದಲ್ಲಿ ಎರಡನೆಯದಾದ ವಸ್ತ್ರಾಪಹರಣದ ಪ್ರಸಂಗ, ಅನುಕ್ರಮದಲ್ಲಿ ದ್ವಿತೀಯವಾದಂತೆ,  ಆ ವಿಷಯವನ್ನೆತ್ತಿಕೊಂಡ ಕವಿಗಳ ನಿರೂಪಣೆಯಲ್ಲೂ ಬಹುಮಟ್ಟಿಗೆ ದ್ವಿತೀಯವಾಗಿಯೇ ನಿಂತಿದೆ. ಇದರ ಮೇಲೆ ವಸ್ತ್ರಾಪಹರಣದ ಪ್ರಸಂಗ ಸಂದಿಗ್ಧವೂ ಕ್ಲೇಶಕಾರಕವೂ ಆದಂತೆ ತೋರುವುದರಿಂದಲೋ ಏನೋ, ಆ ಪ್ರಸಂಗವಷ್ಟನ್ನೇ ಕೇಂದ್ರವಾಗಿರಿಸಿಕೊಂಡಾಗಲಿ, ಆ ಪ್ರಸಂಗಕ್ಕೆ  ಅತಿಯವಾದ ಮಹತ್ವವನ್ನು ಕೊಟ್ಟಾಗಲೀ, ಕುಮಾರವ್ಯಾಸನಿಗಿಂತ ಹಿಂದಿನ ದೊಡ್ಡ ಕವಿಗಳಾರೂ ನಿರೂಪಿಸಿದಂತೆ ತೋರುವುದಿಲ್ಲ. ಹೀಗಾಗಿ ಆ ಪ್ರಸಂಗ ಬಹುಮಟ್ಟಿಗೆ ಸಾಮಾನ್ಯ ಜನರಂಜಕವಾದ ಭೂಮಿಕೆಯಲ್ಲೇ ಪ್ರಚಲಿತವಾಯಿತು. ಈ ಎರಡು ಪ್ರಸಂಗಗಳಲ್ಲಿ, ಮೊದಲನೆಯದು ದುಶ್ಶಾಸನನ ಸಾವಿಗೆ ಕಾರಣವಾಯಿತೆಂದು ಖಚಿತವಾಗಿ  ಹೇಳುವಂತೆ, ಎರಡನೆಯದು ದುರ‍್ಯೋಧನನ ಸಾವಿಗೆ ಕಾರಣವಾಯಿತೆಂದು ಹೇಳಲು ಬಾರದು. ದುರ‍್ಯೋಧನನ ಸಾವಿಗೆ,  ವಸ್ತ್ರಾಪಹರಣ ಕಾರಣವಾಯಿತೆಂದು ಹೇಳುವುದಕ್ಕಿಂತ, ಆತ ಪಾಂಚಾಲಿಗೆ ತನ್ನ ತೊಡೆಯನ್ನು ತೋರಿಸಿದ್ದೇ ಕಾರಣವಾಯಿತೆನ್ನುವುದು ಭಾರತದಲ್ಲೇ ಸ್ಪಷ್ಟವಾಗಿದೆ. ಹೀಗೆ ದುಶ್ಯಾಸನ-ಕೌರವ ಇವರಿಬ್ಬರ ಸಾವಿಗೆ, ವಸ್ತ್ರಾಪಹರಣ ಪ್ರಸಂಗದ ಅತ್ತ ಕಡೆ ಇರುವ ಕೇಶಾಪಕರ್ಷಣ ಪ್ರಸಂಗವನ್ನು, ಪ್ರಧಾನವಾಗಿ ಎಣಿಸುವಷ್ಟು, ವಸ್ತ್ರಾಪಹರಣ ಪ್ರಸಂಗವನ್ನೇ ಬಹುಮುಖ್ಯವಾದ, ಮಿಗಿಲಾದ ಅಪಮಾನವೆಂದೆಣಿಸಿ, ಅದನ್ನೆ ಎತ್ತಿ ಹೇಳಿ ಪಾಂಡವರಾರೂ ಪ್ರತೀಕಾರವನ್ನು ಮಾಡಿದಂತೆ ಕಾಣೆವು. ಇದರ ಜೊತೆಗೆ ಮಹಾಭಾರತದಲ್ಲಿ “ದ್ರೌಪದಿ ತನಗಾದ ಕಷ್ಟವನ್ನು ಬಹುಸಲ ಹೇಳಿಕೊಂಡಿದ್ದಾಳೆ. ಆದರೆ ಬಹುಕಡೆ ತನ್ನ ವಸ್ತ್ರವನ್ನು ದುಶ್ಶಾಸನನು ಸೆಳೆದನು ಎಂಬ ವಿಷಯ ಸೂಚಿತವಾಗುವುದಿಲ್ಲ.”[8] ಅಷ್ಟೇ ಏಕೆ ಮೂಲಭಾರತದಲ್ಲೇ ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ ನಡೆದು ಹೇಗೋ ಪವಾಡದಿಂದ ಅವಳ ಮಾನ ಉಳಿದ ಮರುಕ್ಷಣದಲ್ಲೇ, ‘ದ್ರೌಪದಿಗೆ ಹೀಗೆ ವಸ್ತ್ರಾಪಹಾರವಾಯಿತು, ಸದ್ಯ ಹೇಗೋ ಮಾನ ಉಳಿಯಿತು’ -ಎಂಬರ್ಥದ ಯಾವ ಒಂದು ಮಾತೂ ಯಾರಿಂದಲೂ ಹೊರಡುವುದಿಲ್ಲ! ಹೀಗಾಗಿ ಈ ಪ್ರಸಂಗವೇ “ಮೊತ್ತದಲ್ಲಿ, ದುಶ್ಶಾಸನನು ಈ ಸಂದರ್ಭದಲ್ಲಿ ದ್ರೌಪದಿಯನ್ನು ಎಳೆದು ತಂದು ಅವಳ ವಸ್ತ್ರವನ್ನು ಸೆಳೆದುಹಾಕಿ ಅನ್ಯಾಯ ಮಾಡಿದನೆಂಬ ಭಾಗ ಆಮೇಲಿನ ಕಥೆ ಸೇರಿಸಿದ ಭಾಗವೆಂದು ತೋರುತ್ತದೆ”[9] -ಎನ್ನುವ ಶಂಕೆಯನ್ನು ಹುಟ್ಟಿಸುತ್ತದೆ.

ಈ ಪ್ರಸಂಗ ಪ್ರಕ್ಷಿಪ್ತವಿರಬಹುದೆ ಎಂಬ ಒಂದು ಶಂಕೆ ನಿರಾಧಾರವಾದುದಲ್ಲವಾದರೂ, ಈ ಪ್ರಸಂಗ ಸಂಪೂರ್ಣವಾಗಿ ಪ್ರಕ್ಷಿಪ್ತವೆಂದು ತಳ್ಳಿಬಿಡಲು ಸಾಕಷ್ಟು ಆಧಾರಗಳಿಲ್ಲ. ವಸ್ತ್ರಾಪಹರಣದಂಥ ಪ್ರಸಂಗ ಕೌರವನ ಆಸ್ಥಾನದಲ್ಲಿ ನಡೆಯಲು ಸಾಧ್ಯವಿರಲಿಲ್ಲವೆಂದೂ, ಅದರಿಂದ ನಡೆದಿರಲಾರದು ಎಂಬ ಕಾರಣದಿಂದಾಗಲಿ, ಅದು ಕವಿಗಳಲ್ಲಿ ಗೌಣವಾಗಿ, ಪ್ರಾಸಂಗಿಕವಾಗಿ ಬಂದಿದೆ ಎಂಬ ಕಾರಣದಿಂದಾಗಲಿ, ಅದು ಮಹಾಭಾರತದಲ್ಲಿ ಬಹುಕಡೆ ಸೂಚಿತವಾಗುವುದಿಲ್ಲವೆಂಬ ಕಾರಣದಿಂದಾಗಲಿ, ಆ ಪ್ರಸಂಗ ಪ್ರಕ್ಷಿಪ್ತವೆಂದು ಯಾರೂ ಭಾವಿಸಲಾರರು. ಆದರೆ ಸಮಸ್ತ ಮಹಾಭಾರತವನ್ನು ಪುನಃ ಪರಿಶೀಲಿಸಿ, ಪಾಠಾಂತರಗಳನ್ನು ಶೋಧಿಸಿ ಅಧಿಕೃತವೆಂದು ಒಪ್ಪಿಕೊಂಡು ಪ್ರಕಟಿಸಿರುವ ಪುಣೆಯ ಭಂಡಾರ್ಕರ್ ಸಂಸ್ಥೆಯವರೆ, ಈ ವಸ್ತ್ರಾಪಹರಣದ ಪ್ರಸಂಗ ಮೂಲ ಪಾಠದ್ದೇ ಇರಬೇಕೆಂದು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ವ್ಯಾಸಭಾರತವನ್ನು ಆಧಾರವನ್ನಾಗಿರಿಸಿಕೊಂಡು, ಕೃತಿಗಳನ್ನು ರಚಿಸಿರುವ ಸಂಸ್ಕೃತ ಹಾಗೂ ಕನ್ನಡ ಕವಿಗಳೆಲ್ಲರೂ ಏಕಪ್ರಕಾರವಾಗಿ ಈ ವಸ್ತ್ರಾಪಹರಣ ಪ್ರಸಂಗವನ್ನು ಹೆಸರಿಸಿರುವುದೂ, ಇದು ಪ್ರಕ್ಷಿಪ್ತವಿರಲಾರದೆಂಬ ಸತ್ಯವನ್ನು ಸಾರಿಹೇಳುವಂತೆ ತೋರುತ್ತದೆ. ಆದರೆ ವಸ್ತ್ರಾಪಹರಣ ಸಂದರ್ಭದಲ್ಲಿ, ಪ್ರಕ್ಷಿಪ್ತವೆಂದು ಹೇಳಲಾಗಿರುವ ಅಂಶ, ಶ್ರೀಕೃಷ್ಣನಿಂದ ದ್ರೌಪದಿಯ ಸೀರೆ ಅಕ್ಷಯವಾದ ಪ್ರಸಂಗ -ಎನ್ನುವ ವಿಚಾರದಲ್ಲಿ ಯಾವ ಸಂದೇಹಕ್ಕೂ ಆಸ್ಪದವಿಲ್ಲವೆನ್ನುವುದೇ ಇಲ್ಲಿ ಕಂಡುಬರುವ ಸ್ವಾರಸ್ಯವಾದ ಸಂಗತಿ.[10] ದ್ರೌಪದಿಯ ವಸ್ತ್ರಾಪಹರಣದ ವಿಷಯ ವ್ಯಾಸಭಾರತವನ್ನು ಅನುಸರಿಸಿರುವ ಸಂಸ್ಕೃತ ಮತ್ತು ಕನ್ನಡ ಕವಿಗಳಲ್ಲಿ ಏಕಪ್ರಕಾರವಾಗಿ ಕಂಡುಬರುವಷ್ಟರಮಟ್ಟಿಗೆ, ಕೃಷ್ಣನಿಂದ ಅವಳ ವಸ್ತ್ರ ಅಕ್ಷಯವಾಯಿತೆಂಬ ವಿಚಾರ ಕಂಡುಬರುವುದಿಲ್ಲ. ಅತ್ಯಂತ ಪ್ರಾಚೀನ ನಾಟಕಕಾರನೆಂದು ಹೇಳಲಾದ ಭಾಸಕವಿಯ ದೂತವಾಕ್ಯದಲ್ಲಿ[11] ಕೃಷ್ಣನು ಪಾಂಡವರ ಪರವಾಗಿ ರಾಯಭಾರಿಯಾಗಿ ಬಂದು ಬಾಗಿಲಲ್ಲಿರುವ ಸುದ್ದಿಯನ್ನು ಕೇಳಿ, ದುರ‍್ಯೋಧನನು ಕೃಷ್ಣನ ಬಗೆಗೆ ತನ್ನ ಅವಜ್ಞೆ ಹಾಗೂ ಔದ್ಧತ್ಯವನ್ನು ಪ್ರದರ್ಶಿಸಲೆಂದು ಬಾದರಾಯಣನೆಂಬ ಕಂಚುಕಿಯನ್ನು ಕುರಿತು “ಬಾದರಾಯಣ ದ್ರೌಪದಿಯ ಕೇಶಾಂಬರಾಕರ್ಷಣವನ್ನು ಚಿತ್ರಿಸಿರುವ ಆ ಚಿತ್ರವನ್ನು ತೆಗೆದುಕೊಂಡು ಬಾ, ಎಂದು ಹೇಳಿ, ಅದರಲ್ಲಿ ದೃಷ್ಟಿಯನ್ನು ನೆಟ್ಟು ಕೇಶವನು ಬಂದಾಗ ಎದ್ದು ನಿಲ್ಲುವುದಿಲ್ಲ”[12]– ಎನ್ನುತ್ತಾನೆ. ತದನಂತರ ಆ ಚಿತ್ರಪಟವನ್ನು ತನ್ನ ಮುಂದೆ ತರಿಸಿ ಹರಹಿಕೊಂಡು, ಆ ಚಿತ್ರವನ್ನು ಮೆಚ್ಚುವ ನೆಪದಲ್ಲಿ ಹಿಂದೆ ಪಾಂಚಾಲಿಗಾದ ಪರಾಭವವನ್ನು ನೆನೆದು ಹರ್ಷಪಡುತ್ತಾನೆ. ಈ ಸಂದರ್ಭದಲ್ಲಿ ಭಾಸನು, ಹಿಂದೆ ದ್ರೌಪದಿಗಾದ ಪರಾಭವದ ಪ್ರಸಂಗದ ಒಂದು ಸಮಗ್ರ ಚಿತ್ರವನ್ನೇ ದುರ‍್ಯೋಧನನ ಮುಂದಿರುವ ಚಿತ್ರಪಟದ ಮೂಲಕ ನೀಡಿದ್ದಾನೆ: ದುಶ್ಯಾಸನನು ಹಿಡಿದೆಳೆಯಲು ದ್ರೌಪದಿ ರಾಹುಗ್ರಸ್ತವಾದ ಚಂದ್ರಲೇಖೆಯಂತಿದ್ದಾಳೆ; ಭೀಮನು ಕೋಪದಿಂದ ಕೆರಳಿ ಸಭಾಮಂಟಪದ ಕಂಬವನ್ನು ಕಣ್ಣಲ್ಲೇ ತೂಗಿನೋಡುತ್ತಿದ್ದಾನೆ; ಅರ್ಜುನನು ರೋಷಾವೇಶದಿಂದ ಗಾಂಡೀವಕ್ಕೆ ಹೆದೆಯನ್ನೇರಿಸುತ್ತಿದ್ದಾನೆ; ನಕುಲ ಸಹದೇವರಿಬ್ಬರೂ ಶಸ್ತ್ರವನ್ನು ತುಡುಕಿದ್ದಾರೆ; ಯುಧಿಷ್ಠಿರನು ಅವರೆಲ್ಲರ ಸಮೀಪಕ್ಕೆ ಹೋಗಿ ಸಮಾಧಾನಗೊಳಿಸುತ್ತಿದ್ದಾನೆ; ಶಕುನಿ ದ್ರೌಪದಿಯ ಪಾಡನ್ನು ನೋಡಿ ಗಹಗಹಿಸುತ್ತಿದ್ದಾನೆ; ಆಚಾರ‍್ಯರೂ ಭೀಷ್ಮರೂ ಲಜ್ಜೆಯಿಂದ ಮುಖಕ್ಕೆ ಮುಸುಕು ಹಾಕಿಕೊಂಡು ಕುಳಿತಿದ್ದಾರೆ. ಈ ಎಲ್ಲ ಚಿತ್ರದ ಭಾವವೂ ಸ್ಪಷ್ಟವಾಗುವಂತೆ ಬರೆದ ಚಿತ್ರಪಟವನ್ನು ನೋಡಿ ಕೌರವನಿಗೆ ಸಂತೋಷವಾಯಿತಂತೆ. ಅಂತೂ ಇದು ಕೌರವನಿಗೆ ಬಹು ಹೆಮ್ಮೆಯ ಹಾಗೂ ಸಂತೋಷಪಟ್ಟುಕೊಳ್ಳಬಹುದಾದ ಪ್ರಸಂಗವಾಗಿತ್ತು ಎನ್ನುವುದನ್ನು ಭಾಸಕವಿ ಈ ವರ್ಣನೆಯಿಂದ ಸೂಚಿಸಿದ್ದಾನೆ. ಇಲ್ಲಿ ಕೌರವನ ಮಾತಿನಲ್ಲಿ ಹಿಂದೆ ದ್ರೌಪದಿಗೆ ಅವಮಾನವಾದ ವಿಷಯ ಮಾತ್ರ ಸೂಚಿತವಾಗಿದೆಯೇ ಹೊರತು, ದ್ರೌಪದಿ ಆ ಅವಮಾನದಿಂದ ಪಾರಾದಳೇ, ಪಾರಾಗಿದ್ದರೆ ಯಾವ ರೀತಿಯಲ್ಲಿ- ಎಂಬ ಪ್ರಶ್ನೆಗಳಿಗೆ ಯಾವ ಉತ್ತರವೂ ಇಲ್ಲ. ಭಾರವಿಯಲ್ಲೂ, ದ್ರೌಪದಿಗೆ ಆದದ್ದು ಕೇಶಾಪಕರ್ಷಣೆ ಎನ್ನುವ ವಿಷಯವೂ, ಆ ಸಂದರ್ಭದಲ್ಲಿ ಅವಳನ್ನು ಕಾದದ್ದು ಕೇವಲ ಅವಳ ಭಾಗ್ಯವೇ ಎನ್ನುವ ಮಾತೂ ಸೂಚಿತವಾಗಿದ್ದರೂ, ಅಲ್ಲಿ ಭಾಗ್ಯ ಎಂಬ ಮಾತಿಗೆ, ಅವಳ ‘ಅದೃಷ್ಟ’ ಎಂದು ಮಾತ್ರ ಅರ್ಥವಾಗುತ್ತದೆ.[13] ಭಟ್ಟನಾರಾಯಣನ ‘ವೇಣೀಸಂಹಾರ’ದಲ್ಲಿ ದ್ರೌಪದಿಗಾದ ಪರಾಭವಗಳಲ್ಲಿ, ಕೇಶಾಪಕರ್ಷಣ ಹಾಗೂ ವಸ್ತ್ರಾಪಹರಣ -ಎರಡೂ ನಾಲ್ಕೆ ದು ಕಡೆ ಸೂಚಿತವಾಗಿದ್ದರೂ,[14] ಅವಳ ಮಾನಸಂರಕ್ಷಣೆಯಾದದ್ದು ಹೇಗೆ?, ಅಲ್ಲಿ ಕೃಷ್ಣನ ಕೃಪೆ ಏನಾದರೂ ಒದಗಿ ಬಂದಿತೆ ಎಂಬ ಪ್ರಶ್ನೆಗೆ ಉತ್ತರವೇ ದೊರೆಯುವುದಿಲ್ಲ. ಮುಂದೆ ಕನ್ನಡ ಕವಿಯಾದ ಪಂಪನಿಂದ ಈ ವಿಷಯದ ಮೇಲೆ ಇನ್ನೂ ಸ್ವಾರಸ್ಯವಾದ ಬೆಳಕು ಬಿದ್ದಿದೆ. ‘ಹಿತಮಿತ ಮೃದುವಚನ’ನಾದ ಪಂಪ ಈ ಪ್ರಸಂಗವನ್ನು ಕೆಲವೇ ಮಾತುಗಳಲ್ಲಿ ಕೆತ್ತಿದ್ದಾನೆ: ದುರ‍್ಯೋಧನ ಅಜಾತಶತ್ರುವಿನ ಸರ‍್ವಸ್ವವನ್ನೂ ಗೆದ್ದು, ಗೆದ್ದ ಸಂಪತ್ತೆಲ್ಲಾ ಬಂದಿತು, ದ್ರೌಪದಿ ಒಬ್ಬಳು ಬರಲಿಲ್ಲ ಎಂದು, ಧರ್ಮರಾಯನ ಪ್ರಾಮಾಣಿಕತೆಯಲ್ಲಿ ನಂಬಿಕೆಯಿಟ್ಟು, ‘ತನಗೆ ಲಯಮಿಲ್ಲದುದನರಿದು ಮೇಗಿಲ್ಲದ ಗೊಡ್ಡಾಟಮಾಡಲ್ ಬಗೆದು ಕರ್ಣನ ಲೆಂಕಂ ಪ್ರಾತಿಕಾಮಿಯೆಂಬನುಮಂ ತನ್ನ ತಮ್ಮಂ ದುಶ್ಶಾಸನನುಮಂ ಪೇಳ್ದೊಡೆ, ಅವಂದಿರ್ ಆಗಳೆ ಬೀಡಿಂಗೆವರಿದು ರಜಸ್ವಲೆಯಾಗಿರ್ದೆಂ ಮುಟ್ಟಲಾಗದೆನೆಯುಂ ಒತ್ತಂಬದಿಂದೊಳಗೆ ಪೊಕ್ಕು ಪಾಂಚಾಳಿಯಂ ಕಣ್ಗಿಡೆ ಜಡಿದು ಮುಡಿಯಂ ಪಿಡಿದು ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದು-

ಮನದೊಳ್ ನೊಂದಮರಾಪಗಾಸುತ ಕೃಪದ್ರೋಣಾದಿಗಳ್ ಬೇಡವೇ-
ಡೆನೆಯುಂ ಮಾಣದೆ ತೊಳ್ತೆ ತೊಳ್ತುವೆಸಕೆಯ್ ಪೋ ಪೋಗು ನೀನೆಂದು ಬ-
ಯ್ದೆನಿತಾನುಂ ತೆರದಿಂದಮುಟ್ಟುದುವರಂ ಕೆಯ್ದಂದು ದುಶ್ಯಾಸನಂ
ತನಗಂ ಮೆಲ್ಲನೆ ಮೃತ್ಯುಸಾರೆ ತೆಗೆದಂ ಧಮ್ಮಿಲ್ಲಮಂ
[ಕೃಷ್ಣೆಯಾ] ೭.೫

|| ಅಂತು ಕೃಷ್ಣೆಯ ಕೃಷ್ಣ ಕಬರೀ ಭಾರಮಂ ಮೇಗಿಲ್ಲದೆ ಪಿಡಿದು ತೆಗೆದು
ಕೃಷ್ಣೋರಗನಂ ಪಿಡಿದ ಬೆಳ್ಳಾಳಂತುಮ್ಮನೆಬೆವರುತ್ತಮಿರ್ದ
ದುಶ್ಯಾಸನನುಮಂ….”

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ದುರ‍್ಯೋಧನನ ವರ್ತನೆ. ಅಂದು ಅವನಿಗೆ  ಆದುದು ‘ಮೇಗಿಲ್ಲದ ಗೊಡ್ಡಾಟ’ವಾಡುವ ಚಪಲ. ಅವನ ಈ ಚಾಪಲ್ಯವನ್ನು ಕಾರ‍್ಯರೂಪಕ್ಕೆ ತಂದವನು ತಮ್ಮನಾದ ದುಶ್ಶಾಸನ. ಪಂಪನ ಗಮನ ಇಲ್ಲಿ ಪ್ರಧಾನವಾಗಿ ಕೇಶಾಪಕರ್ಷಣೆಯ ಕಡೆಗೇ. ಆದರೂ ವಸ್ತ್ರಾಪಹರಣ ಪ್ರಸಂಗದ ಕಡೆಗೂ ಅವನ ಗಮನ ಹೋಗದೆ ಇಲ್ಲ.

ಕನ್ನಡ ಭಾರತ ಪರಂಪರೆಗೆ ಎರಡು ಆಕರಗಳಿರುವಂತೆ ತೋರುತ್ತದೆ: ಒಂದು, ಜಿನಸೇನರ ಹರಿವಂಶವನ್ನು ಆಕರವನ್ನಾಗಿಸಿಕೊಂಡು ಮಹಾಭಾರತದ ಕತೆಯನ್ನು ನಾನಾ ಛಂದೋ ರೂಪಗಳಲ್ಲಿ ಬರೆದ ಜೈನ ಕವಿಗಳ ಕಥಾರೀತಿ; ಮತ್ತೊಂದು ಮೂಲಭಾರತವನ್ನೇ ಆಕರವನ್ನಾಗಿಸಿಕೊಂಡು, ತಮಗೆ ತೋರಿದಂತೆ ಉಚಿತವಾದ ಬದಲಾವಣೆಯೊಂದಿಗೆ ವ್ಯಾಸರಿಗೆ ಗೌರವ ತಂದ ಪಂಪ-ಕುಮಾರವ್ಯಾಸರ ಕಥಾರೀತಿ. ಜಿನಭಾರತ ಪರಂಪರೆಯಲ್ಲಂತೂ ಈ ಕೇಶಾಪಕರ್ಷಣೆಯಾಗಲಿ, ವಸ್ತ್ರಾಪಹರಣವಾಗಲಿ, ಚಿತ್ರಿತವಾಗಿಲ್ಲ. ಆದರೆ ಮತದಲ್ಲಿ ಜೈನನಾದರೂ ‘ವ್ಯಾಸಮುನೀಂದ್ರ ರುಂದ್ರ ವಚನಾಮೃತ ವಾರ್ಧಿ’ಯಲ್ಲಿ ಈಜಲು ಹೊರಟ ಪಂಪನ ಪ್ರತಿಭೆಯಿಂದ ನಿರ್ಮಿತವಾದ ಭಾರತದಲ್ಲಿ ಈ ಎರಡು ವಿಷಯಗಳೂ ಬಂದಿವೆ. ಸಾವಿರ ವರ್ಷದ ಹಿಂದೆಯೇ ವ್ಯಾಸಭಾರತವನ್ನು ತನ್ನೆದುರಿಗೆ ಇರಿಸಿಕೊಂಡು, ಆ ಕತೆಯನ್ನು ‘ಮೆಯ್ಗೆಡಲೀಯದೆ’ ತನ್ನ ‘ವಿಕ್ರಮಾರ್ಜುನ ವಿಜಯ’ದ ರೀತಿಗೆ ಉಚಿತವಾದ ಬದಲಾವಣೆಗಳನ್ನು ಮಾಡಿಕೊಂಡನಾದರೂ, ಈ ವಸ್ತ್ರಾಪಹರಣ ಪ್ರಸಂಗವನ್ನು ಹಾಗೆಯೇ ಕೈಬಿಡುವುದು ಆತನಿಗೆ ಕಷ್ಟವಾಗೇನೂ ಇರಲಿಲ್ಲ. ಆದರೆ ಪಂಪ ವ್ಯಾಸಮುನಿಗಳ ಭಾರತವನ್ನು ಬಹುಶ್ರದ್ಧೆಯಿಂದ ಅನುಸರಿಸಿದ್ದಾನೆ. ಆದುದರಿಂದಲೇ ಏನೊ ಸುಲಭವಾಗಿ ಕೈಬಿಡಬಹುದಾ ದಂತಹ ವಸ್ತ್ರಾಪಹರಣ ಪ್ರಸಂಗವನ್ನು ಅವನು ಒಂದೇ ಮಾತಿನಲ್ಲಿ ಉಳಿಸಿಕೊಂಡಿರುವುದು ತುಂಬಾ ಅರ್ಥಪೂರ್ಣವಾಗಿದೆ. ಆದರೆ ಆ ಪ್ರಸಂಗವನ್ನು ಬಿಡದಿದ್ದರೂ, ಒಂದೇ ಮಾತಿನಲ್ಲಿ ಸಂಗ್ರಹಿಸಿದ್ದರೂ, ಒಂದೇ ಮಾತಿನಲ್ಲೇ ಸಾಕಷ್ಟು ಬದಲಾಯಿಸಿಯೂ ಇದ್ದಾನೆ! ದುಶ್ಶಾಸನ ದ್ರೌಪದಿಯನ್ನು ಎಳೆದುತಂದು, ತೊತ್ತೆಂದು ಕರೆದು, ಹೇಗೋ ‘ಉಟ್ಟುದುವರಂ ಕೈದಂದು’, ತದನಂತರ ಅವಳ ಮುಡಿಯನ್ನೆಳೆದು ‘ಕೃಷ್ಣೋರಗನಂ ಪಿಡಿದ ಬೆಳ್ಳಾಳಂತು’ ಬೆವರುತ್ತ ನಿಂತನು ಎಂದು ಪಂಪ ಬರೆಯುತ್ತಾನೆ. ಇಲ್ಲಿ, ದ್ರೌಪದಿಯ ವಸ್ತ್ರಾಪಹರಣವಾಯಿತೆ, ಇಲ್ಲವೆ? ಆಗಿದ್ದರೆ ಆ ಸಂದರ್ಭದಲ್ಲಿ ದ್ರೌಪದಿಯ ಗತಿಯೇನಾಯಿತು? ಸೀರೆ ಅಕ್ಷಯವಾಯಿತೆ? ಅಕ್ಷಯವಾಗಿದ್ದರೆ ಅದಕ್ಕೆ ಏನು ಕಾರಣವಿರಬಹುದು? ಈ ಎಲ್ಲ ಸಮಸ್ಯೆಗಳನ್ನು ಪಂಪ ಒಂದೇ ಮಾತಿನಲ್ಲಿ ನಿವಾರಿಸಿದ್ದಾನೆ. ಪಂಪನ ದುಶ್ಶಾಸನ ‘ಉಟ್ಟುದುವರಂ ಕೈದಂದ’ನೆಂದರೆ ವಸ್ತ್ರಾಪಹರಣವಾಯಿ ತೆಂದಲ್ಲ; ವಸ್ತ್ರಾಪಹರಣದ ಇಚ್ಛೆ, ಪ್ರಯತ್ನ ಎರಡೂ ಇತ್ತೆಂದು ಸ್ಪಷ್ಟವಾಗಿ ತೋರುತ್ತದೆ. ಅದು ಸಫಲವಾಯಿತೋ, ವಿಫಲವಾಯಿತೋ, ಅದು ಅಪ್ರಕೃತ; ಅಂಥ ಒಂದು ಪ್ರಯತ್ನ ನಡೆದದ್ದಂತೂ ಸತ್ಯ- ಎನ್ನುವ ವಿಷಯ ಇಲ್ಲಿ ಸ್ಪಷ್ಟವಾಗಿದೆ. ಕವಿ ಪಂಪನು ಅನುಸರಿಸಿದಂಥ ಭಾರತದ ಪ್ರತಿಯಲ್ಲಿ ವಸ್ತ್ರಾಪಹರಣ ಪ್ರಸಂಗವಿರದಿದ್ದ ಪಕ್ಷದಲ್ಲಿ ಪಂಪನ ದುಶ್ಶಾಸನ ಇಷ್ಟು ದೂರ ‘ಉಟ್ಟುದುವರಂ….’ ಕೈ ತರುತ್ತಲೇ ಇರಲಿಲ್ಲ! ಹಾಗಾದರೆ ಏಕೆ ಪಂಪ ವಸ್ತ್ರಾಪಹರಣವಾಯಿತೆಂದು ಹೇಳದೆ ‘ಉಟ್ಟುದುವರಂ ಕೈದಂದು’, ಕೂಡಲೇ ದುಶ್ಶಾ ಸನನ ಕೈಯನ್ನು ಅವಳ ಮುಡಿಯ ಕಡೆಗೆ ಒಯ್ದ? ದುಶ್ಶಾಸನ ದ್ರೌಪದಿ ಉಟ್ಟುದ್ದರ ತನಕ ತುಂಬಿದ ಸಭೆಯಲ್ಲಿ ಕೈಯನ್ನು ತಂದದ್ದೇ ಹೆಣ್ಣಿನ ವಿಚಾರದಲ್ಲಿ ಸಾಕಷ್ಟು ಅಪಮಾನಕರವಾದ ಸಂಗತಿ ಎಂದು ಪಂಪನ ಸುಸಂಸ್ಕೃತ ಮನಸ್ಸಿಗೆ ಅನ್ನಿಸಿ ಮೂಲದ ವಸ್ತ್ರಾಪಹರಣ ಸಂಗತಿಯನ್ನು ಅಷ್ಟಕ್ಕೇ ಕೈಬಿಡುವಂತೆ ಮಾಡಿರಬಹುದು. ಇದಕ್ಕಿಂತಲೂ ಮಿಗಿಲಾಗಿ, ಪಂಪನಿಗೆ ಮೂಲಭಾರತದಿಂದ ಈ ಪ್ರಸಂಗವನ್ನು ಸಂಗ್ರಹಿಸಿ ಬರೆಯುವ ಹೊತ್ತಿನಲ್ಲಿ, ‘ವಿಕ್ರಮಾರ್ಜುನ ವಿಜಯ’ದ ಈ ದ್ರೌಪದಿ, ‘ಉಭಯ ಕಾಲ ದೇಶ ಪರಿತ್ಯಾಗ’ವುಳ್ಳ ರಸದೃಷ್ಟಿಗೆ ಗೋಚರಿಸುವ ಆ ಮೂಲಭಾರತದ ದ್ರೌಪದಿ ಅಲ್ಲ. ಇವಳು ‘ವಿಕ್ರಮಾರ್ಜುನ ವಿಜಯ’ದ ಕಥಾನಾಯಕನಾದ ಆರ್ಜುನನೊಂದಿಗೆ ಅಭಿನ್ನನಾಗಿರುವ ಅರಿಕೇಸರಿಯ ಧರ್ಮಪತ್ನಿ- ಎಂಬ ಅರಿವು ತಟಕ್ಕನೆ  ಸ್ಫುರಿಸಿರಬೇಕು! ಆದುದರಿಂದಲೇ ಪಂಪನ ದುಶ್ಯಾಸನ ‘ಉಟ್ಟುದುವರಂ..’ ತಂದ ತನ್ನ ಕೈಯನ್ನು ಹಾಗೆಯೆ ಹಿಂತೆಗೆದುಕೊಳ್ಳಬೇಕಾಯಿತೆಂದು ತೋರುತ್ತದೆ. ಒಟ್ಟಿನಲ್ಲಿ ಪಂಪನು  ಅನುಸರಿಸಿದಂಥ ವ್ಯಾಸಭಾರತದ ಪ್ರತಿಗಳಲ್ಲಿ ವಸ್ತ್ರಾಪಹರಣದ ಪ್ರಸಂಗ ಇದ್ದಿತೆಂದು ಸ್ಪಷ್ಟವಾಗಿ  ಗೋಚರಿಸುತ್ತದೆ.

ಪಂಪನ ಸಮೀಪ ಹಾಗೂ ಸಮಕಾಲೀನನಾದ ರನ್ನನ ‘ಸಾಹಸಭೀಮ ವಿಜಯ’ವೂ ಪಂಪನನ್ನೇ ಬಹುಮಟ್ಟಿಗೆ ಸಮರ್ಥಿಸುತ್ತದೆ. ರನ್ನನ ಕಾವ್ಯ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಲ್ಲಿ ನಿರೂಪಿಸುವ ನವೀನ ರೀತಿ. ಮಹಾಭಾರತದ ಕಟ್ಟ ಕಡೆಯ ಘಟ್ಟದ ತುದಿಯಲ್ಲಿ ನಿಂತು ಹಿಂದಿನ ಘಟನೆಗಳನ್ನು ನೆನೆಯುವ ರೀತಿ. ಈ ನೆನಕೆಯಲ್ಲಿ ಪಾಂಡವರ ಬದುಕಿನಲ್ಲಿ ಕೌರವನಿಂದ ಒದಗಿದ ಪರಾಭವದ, ಅನ್ಯಾಯದ ಪ್ರಸಂಗಗಳೇ ಎದ್ದು ಬರುತ್ತವೆ. ಕಥಾನಾಯಕನಾದ ಭೀಮನ ಗಮನ ಪ್ರಧಾನವಾಗಿ ಕೌರವನ ಊರುಭಂಗ-ಕಿರೀಟಭಂಗದ ಕಡೆಗೆ; ಅನಂತರ ಅದರ ಪರ‍್ಯವಸಾನವಾದ ವೇಣೀಸಂಹಾರದ ಕಡೆಗೆ. ಇಡೀ ಕಾವ್ಯದ ತುಂಬ ದ್ರೌಪದಿಯ ‘ಪರಾಭವಜ್ವಲನ ಧೂಮಕೃಷ್ಣ’ವಾದ ಆ ಜಡೆಮುಡಿಯೇ ಭೀಮನ ಕೋಪವನ್ನು ಕೆರಳಿಸುತ್ತಾ ಹರಹಿಕೊಂಡಿವೆ. ಕಾವ್ಯಾರಂಭದಲ್ಲಿಯೇ, ಹಿಂದೆ ದ್ರೌಪದಿಗೆ ಅವಮಾನವಾದ ಸಂದರ್ಭದಲ್ಲಿ-

ಪರವಶದೊಳಿರ್ದರೋ ಮೇ
ಣ್ಪರಾರ್ಜಿತ ಪ್ರಾಣರಾದರೋ ದ್ರೌಪದಿಯಂ
ಪರಿಭವಿಸುವಲ್ಲಿ ನೋಡು
ತ್ತಿರಲಕ್ಕುಮೆ ಪವನಸೂನುಗಂ ಪಾರ್ಥಂಗಂ
[ಗದಾಯುದ್ಧಂ, ೧-೬೫]

ಎಂದು ಭೀಮನು ತನ್ನನ್ನು ತಾನೇ ಹಳಿದುಕೊಳ್ಳುತ್ತಾನೆ. ಹಿಂದೆ ವಾಸ್ತವವಾಗಿ ಆದದ್ದು ಕೇಶಗ್ರಹಣ ಹಾಗೂ ವಸ್ತ್ರಾಪಹರಣ. ಆಗ ಆ ಅವಮಾನವನ್ನು ಕಂಡೂ ತಾವು ಏಕೆ ನಿಸ್ಸಹಾಯಕರಾಗಿ ಕುಳಿತಿದ್ದೆವೋ ಎಂದು ಭೀಮನಿಗೆ ಜಿಗುಪ್ಸಾಪೂರ್ಣವಾದ ವಿಸ್ಮಯ. ಆದರೆ ಆ ಸಂದರ್ಭದಲ್ಲಿ ಕೃಷ್ಣನ ಮಹಿಮೆಯಿಂದ ದ್ರೌಪದಿಯ ಮಾನ ಉಳಿಯಿತೆಂಬ ಮಾತು ರನ್ನನ ಕಾವ್ಯದಲ್ಲಿ ಎಲ್ಲೂ ಬರುವುದಿಲ್ಲ. ಒಂದೆಡೆ ವಸ್ತ್ರಾಪಹರಣ ಪ್ರಸಂಗದ ಚಿತ್ರ ಸಂಜಯನ ಮಾತಿನಲ್ಲಿ ಹೀಗೆ ಸ್ಪಷ್ಟವಾಗಿ ಮೂಡಿದೆ:

ಅತಿಲಜ್ಜಾನ್ವಿತನ್ ಆ ನದೀಜನ್, ಅಧಿಕ ಕ್ರೋಧಾವಹಂ ದ್ರೋಣನ್,
ಉದ್ಧತ ಕೌರವ್ಯ ಕೃತಾಟ್ಟಹಾಸಮ್ ಅಸುಹೃದ್ ವೀರಾವತಾರಮ್,
ಪೃಥಾಸುತರ್ ಆರೋಪಿತ ಚಾಪರ್, ಉದ್ಧತರುಮ್ ಆ ಗಾಂಡೀವಿಯುಂ
ಭೀಮನುಂ ಪತಿಗಳ್ ನೋಳ್ಪಿನಮಾಯ್ತು ನಿನ್ನನುಜನಿಂ
ಕೃಷ್ಣಾಂಬರಾಕರ್ಷಣಂ.
[೩-೨೩]

ಹಿಂದೆ ನಡೆದ ವಸ್ತ್ರಾಪಹರಣ ಪ್ರಸಂಗವನ್ನು ಸಂಜಯನ ಸಾಕ್ಷ್ಯ ಇಲ್ಲಿ ಸಚಿತ್ರವಾಗಿ ಬಣ್ಣಿಸಿದೆ. ಪಂಪನ ಸಮೀಪಕಾಲದವನಾದ ರನ್ನ, ಪಂಪನಂತೆ ‘ಉಟ್ಟುದುವರಂ ಕೈದಂದು’ ಬಿಡಲಿಲ್ಲ. ‘ಕೃಷ್ಣಾಂಬರಾಕರ್ಷಣ’ವೇ ಆಯಿತೆಂದು ಹೇಳಿದ್ದಾನೆ. ಪಂಪನಂತೆ ರನ್ನನೂ ತನ್ನ ಕೃತಿಯನ್ನು ‘ಸಮಸ್ತ ಭಾರತ’ವನ್ನಾಗಿ, ತನ್ನ ಆಶ್ರಯದಾತನಾದ ತೈಲಪನನ್ನು ಭೀಮನಲ್ಲಿ ಅಭಿನ್ನಗೊಳಿಸಿ ಬರೆದಿದ್ದರೂ, ವಸ್ತ್ರಾಪಹರಣ ಪ್ರಸಂಗವನ್ನು ನೇರವಾಗಿ ಹೇಳಬೇಕಾದ ಪಂಪನಿಗೆ ಬಂದ ಧರ್ಮಸಂಕಟ, ಆ ಕತೆಯನ್ನು ಹಿಂದೆ ನಡೆದದ್ದೆಂಬಂತೆ ಹೇಳುವ ಸುರಕ್ಷಿತ ರೀತಿಯನ್ನು ಕೈಕೊಂಡ ರನ್ನನಿಗೆ ಅಷ್ಟಾಗಿ ಬಂದಂತೆ ತೋರುವುದಿಲ್ಲ. ಪಂಪನಲ್ಲಾದರೋ ಭೀಷ್ಮ ದ್ರೋಣಾದಿಗಳು ಮನದಲ್ಲಿ ನೊಂದು ಬೇಡ ಬೇಡ ಎಂದರು; ಆದರೆ ರನ್ನನಲ್ಲಾದರೋ ಭೀಷ್ಮರು ಅತಿ ಲಜ್ಜಿತರಾದರು; ದ್ರೋಣರು ಅಧಿಕ ಕ್ರೋಧಾನ್ವಿತರಾದರು; ಉದ್ಧತರಾದ ಕೌರವರು ಅಟ್ಟಹಾಸ ಮಾಡಿದರು. ಪೃಥಾಸುತರು ಆರೋಪಿತ ಚಾಪರಾದರು; ಉದ್ಧತರಾದ ಕೌರವರೂ ಭೀಮಾರ್ಜುನರೂ ನೋಡ ನೋಡುತ್ತಲೇ ದುಶ್ಶಾಸನನಿಂದ ಆಯಿತು ‘ಕೃಷ್ಣಾಂಬರಾಕರ್ಷಣ’. ಇಲ್ಲಿ ಪ್ರಧಾನವಾಗಿ ಸಂಪೂರ್ಣ ಗಮನವೆಲ್ಲಾ ವಸ್ತ್ರಾಪಹರಣ ಪ್ರಸಂಗಕ್ಕೇ. ಅಷ್ಟೇ ಅಲ್ಲ ಆ ಸಂದರ್ಭದಲ್ಲಿ ಸಭೆಯಲ್ಲಾದ ಕ್ರಿಯೆ ಪ್ರತಿಕ್ರಿಯೆಗಳ ಚಿತ್ರವೂ ವಿಶಿಷ್ಟವಾಗಿಯೇ ತೋರುತ್ತದೆ.[15] ಇಡೀ ಸಭೆಗೆ  ಸಭೆಯೇ ಪ್ರಕ್ಷೋಭವಾದಾಗ, ಪಾಂಡವರ ಪ್ರತಿಭಟನೆಯ ಎದುರಿಗೇ ದುಶ್ಶಾಸನನಿಂದ ಕೃಷ್ಣೆಯ ವಸ್ತ್ರಾಪಹರಣವಾದುದನ್ನು ನೋಡಿದರೆ ಕೌರವನ ಔದ್ಧತ್ಯ ಎಷ್ಟು ಮಿಗಿಲಾಗಿತ್ತೆಂಬುದು ವ್ಯಕ್ತವಾಗುತ್ತದೆ. ಸಂಜಯನ ಈ ಬಣ್ಣನೆಗೆ, ‘ಗದಾಯುದ್ಧ’ ಕಾವ್ಯದಲ್ಲಿಯೇ ದುರ‍್ಯೋಧನನು ಉತ್ತರವೀಯುತ್ತಾ, ‘ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗೆವಲ್ಲಿ ಗಂಡನಾಗನೆ’ [೩-೨೯] ಎಂದು ಹೇಳಿ, ಸಂಜಯನು ನಿರೂಪಿಸಿದ ವಸ್ತ್ರಾಪಹರಣದ ಬಗೆಗೆ ಏನನ್ನೂ ಹೇಳದೆ, ಕೇಶಾಪಕರ್ಷಣದ ಕಡೆಗೇ ನಮ್ಮ ಗಮನ ಸೆಳೆಯುತ್ತಾನೆ. ಮುಂದೆ ವೈಶಂಪಾಯನ ಸರೋವರ ತೀರದಲ್ಲಿ, ಕೌರವನ ಹಿಮ್ಮೆಟ್ಟಿದ ಹೆಜ್ಜೆಗಳನ್ನು ವರ್ಣಿಸುತ್ತಾ ಕವಿ ರನ್ನನೇ ಕೌರವನ ದುರ್ನಯಗಳನ್ನು ಒಂದೊಂದಾಗಿ, ನೆನೆಯುತ್ತಾ ‘ತುರುವಂ ಕಳಿಸುವ, ಕೃಷ್ಣೆಯ ನಿರಿಯಂ ಪಿಡಿದುರ್ಚುವೇಳ್ವ, ಕೊಳನಂ ಪಿಂದುಂ ಪೆರಗಾಗಿ ಪುಗುವ ದುರ್ನಯಮರಿಪವೇ ಕೌರವನ ರಾಜ್ಯದಾಯುವ ಕೇಡಂ’ [೬-೧೪] ಎಂದು ವ್ಯಾಖ್ಯಾನ ಮಾಡುತ್ತಾನೆ. ಕೌರವ- ಭೀಮರ ಗದಾಯುದ್ಧ ಸಂದರ್ಭದಲ್ಲಿ ಭೀಮನು ಕೌರವನನ್ನು ಮೂದಲಿಸುತ್ತಾ ‘ಕೃಷ್ಣಾಂಬರಕೇಶಾಕೃಷ್ಟಿಯಿಂ ಮಾಡಿಸಿದ ಮದಮದೆಲ್ಲಿತ್ತೊ?’ [೭-೧೯] ಎನ್ನುತ್ತಾನೆ. ಕಡೆಗೆ ತನ್ನ ಗದಾಘಾತದಿಂದ ತೊಡೆಯುಡಿದು ನೆಲಕ್ಕೆ ಬಿದ್ದ ಕೌರವನನ್ನು, ಪಾಂಚಾಲಿಗೆ ತೋರಿಸುತ್ತಾ ಭೀಮನು- ‘ನಿಜ ಕಬರೀ ನೀವಿ ಬಂಧಂಗಳಂ ದೋರ್ವದಿಂದಂ ತಮ್ಮನಿಂದಂ ತೆಗೆಯಿಸಿ ನಡೆನೋಡಿದ’ [೭-೫೯] ಆ ದ್ರೋಹನ ಇರವನ್ನು ನೋಡು ಎನ್ನುತ್ತಾನೆ. ಈ ಎಲ್ಲ  ಪರಿಶೀಲನೆಯಿಂದ, ರನ್ನನ ಕಾವ್ಯದಲ್ಲಿ ಕೇಶಾಪಕರ್ಷಣೆಯ ಜತೆಗೆ ‘ವಸ್ತ್ರಾಪಹರಣ’ವೂ ನಡೆಯಿತೆಂಬ ಬಗೆಗೆ ಸಾಕಷ್ಟು ಸಾಕ್ಷ್ಯವಿದೆ; ಆದರೆ ಎಲ್ಲಿಯೂ ವಸ್ತ್ರ ಅಕ್ಷಯವಾದ ಸಂಗತಿಯಾಗಲಿ, ಕೃಷ್ಣನ ಕೃಪೆಯ ವಿಷಯವಾಗಲಿ ಇಲ್ಲ.

ಪಂಪ- ರನ್ನರ ನಂತರ, ಹನ್ನೊಂದನೆ ಶತಮಾನದಲ್ಲಿ ಸೋದರ ಭಾಷೆಯಾದ ತೆಲುಗಿನಲ್ಲಿ ರಚಿತವಾದ ನನ್ನಯ್ಯನ ‘ಆಂಧ್ರ ಮಹಾಭಾರತ’ದಲ್ಲಿ ಈ ಪ್ರಸಂಗವನ್ನು ಕುರಿತು ಸ್ವಾರಸ್ಯವಾದ  ಸಂಗತಿಗಳು ನಿರೂಪಿತವಾಗಿವೆ.[16] ನನ್ನಯ್ಯನಲ್ಲಿ ಬರುವ ಈ ಪ್ರಸಂಗವನ್ನು ಹೀಗೆ ಸಂಗ್ರಹಿಸಬಹುದು: ದ್ರೌಪದಿಯನ್ನು ಧರ್ಮರಾಯ ಸೋತ ಕೂಡಲೇ ಕೌರವ ದ್ರೌಪದಿಯನ್ನು ಕರೆತರಲು ಪ್ರಾತಿಕಾಮಿಯನ್ನು ಕಳುಹಿಸುತ್ತಾನೆ. ಆತ ಅಲ್ಲಿ ಹೋದಾಗ ದ್ರೌಪದಿ ‘ಧರ್ಮರಾಯ ತನ್ನನ್ನು ಮೊದಲು ಸೋತನಂತರ, ಮಡದಿಯಾದ ತನ್ನನ್ನು ಸೋತರೆ ಅದು ಸಮ್ಮತವೆ?’- ಎಂಬ ಪ್ರಶ್ನೆಯನ್ನು ಸಭೆಗೆ ಹೇಳಿ ಕಳುಹಿಸುತ್ತಾಳೆ. ಪ್ರಾತಿಕಾಮಿ ದ್ರೌಪದಿಯ ಪ್ರಶ್ನೆಯನ್ನು ತಂದು ಧರ್ಮರಾಯನಿಗೆ ಹೇಳಲಾಗಿ, ಆತ ಪ್ರತಿವಚನವೀಯದೆ ಸುಮ್ಮನಾಗುತ್ತಾನೆ. ಆಗ ದುರ‍್ಯೋಧನ ಪ್ರತಿಕಾಮಿಗೆ ಹೇಳುತ್ತಾನೆ- ‘ಸುಂದರಿಯಾದ ದ್ರೌಪದಿ ಆ ಪ್ರಶ್ನೆಯನ್ನು ಇಲ್ಲಿಗೇ ಬಂದು ಕೇಳಿ ತಿಳಿದುಕೊಳ್ಳಲಿ’ ಎಂದು. ಆಗ ದ್ರೌಪದಿ ಏಕವಸ್ತ್ರೆಯೂ, ಅಧೋನೀವಿಯೂ ಆಗಿ ಸಭೆಗೆ ಬಂದಳು. ಬಂದು ಕುರುವೃದ್ಧನಾದ ಧೃತರಾಷ್ಟ್ರನ ಸವಿiಪದಲ್ಲಿ ದುಃಖಿತೆಯಾಗಿ ನಿಂತಳು. ಪಾಂಡವರು ಇದನ್ನು ಕಂಡು ಲಜ್ಜಿತರಾಗಿ  ತಲೆ ತಗ್ಗಿಸಿದರು; ದುರ‍್ಯೋಧನನಿಗೆ ಹರ್ಷವಾಯಿತು. ಆಗ ಕೌರವ ದುಶ್ಶಾಸನನನ್ನು ಕರೆದು “ಪ್ರಾತಿಕಾಮಿ ವೃಕೋದರನಿಗೆ ಹೆದರುತ್ತಾನೆ, ನೀನು ದ್ರೌಪದಿಯನ್ನು [ಸಭಾಮಧ್ಯಕ್ಕೆ] ಕರೆದುತಾ” ಎನ್ನುತ್ತಾನೆ. ಆಗ ದ್ರೌಪದಿ ಭಯದಿಂದ ಗಾಂಧಾರಿಯ ಕಡೆ ಹೋಗಲು ಯತ್ನಿಸುತ್ತಾಳೆ. ಆದರೆ ಹಾಗೆ ಮಾಡಲು ಅವಳಿಗೆ ಅವಕಾಶ ಕೊಡದೆ ದುಶ್ಶಾಸನನು ಬಂದು ‘ಇನ್ನೆಲ್ಲಿ ಹೋಗಬಲ್ಲೆ ಬಾ’ ಎಂದು ಎಳೆಯ ತೊಡಗಲು, ಆಕೆ ಹೇಳಿದಳು: ‘ನಾನು ಏಕವಸ್ತ್ರೆ; ರಜಸ್ವಲೆ; ಸಭಾಮಧ್ಯಕ್ಕೆ ಹೇಗೆ ಬರಲಿ?’- ಎಂದು. ಆಗ ಅವನು ‘ನೀನು ಏಕವಸ್ತ್ರೆಯಾದರೇನು, ವಿಗತವಸ್ತ್ರೆಯಾದರೆ ತಾನೇ ಏನು’- ಎನ್ನುತ್ತಾ ಬಲಾತ್ಕಾರವಾಗಿ, ಆ ರಾಜಸೂಯದಲ್ಲಿ ಮಂತ್ರ ಜಲಾಭಿಷೇಚನದಿಂದ ಪವಿತ್ರವಾದ ಮುಡಿಯನ್ನು ಹಿಡಿದೆಳೆದು ಸಭಾಮಧ್ಯಕ್ಕೆ ತಂದು ನಿಲ್ಲಿಸಿದನು. ವಾತಾಹತವಾದ ಪತಾಕೆಯಂತೆ ವಿಕೀರ್ಣಕೇಶಿಯೂ ವಿವರ್ಣವದನೆಯೂ ಆಗಿ, ದುಷ್ಟ ಭೂಯಿಷ್ಠವಾದ ಆ ಸಭೆಗೆ ಬಂದು ಕೋಪಲಜ್ಜಾಪರವಶಳಾಗಿ ಸಭಾಸದರನ್ನು ಉದ್ದೇಶಿಸಿ ಈ ಸಮಸ್ಯೆಯನ್ನು ವಿಚಾರಮಾಡಿ ಎಂದು ಕೇಳಿಕೊಳ್ಳುತ್ತಾಳೆ. ಹಾಗೆಯೇ ಇದು ಉಚಿತವಲ್ಲ ಎಂದು, ಈ ಕುರುಮುಖ್ಯರು ನೋಡುತ್ತಿದ್ದಂತೆಯೇ ದುರ‍್ಮದನಾಗಿ ದುಶ್ಯಾಸನನು ನನ್ನನ್ನು ಹೀಗೆ ಅವಮಾನ ಮಾಡುವುದು ಸರ‍್ವಧರ್ಮವನ್ನೂ ತಿಳಿದ ಈ ಭಾರತವೀರರ ವಂಶಕ್ಕೆ ಅತಿ ನಿಂದ್ಯವಾಯಿತು ಎನ್ನುತ್ತಾ ಭಾಮಿನಿ ಭೀತಿಯಿಂದ ಕೃಷ್ಣನನ್ನು ಸ್ಮರಿಸಿದಳು.[17] ಹೀಗೆ ಜಗತ್ರಯ ವಿಜಯ ಭುಜವೀರ‍್ಯವುಳ್ಳ ನಾಥರಿದ್ದೂ ಅನಾಥಳಂತೆ ಆ ಪಾಂಚಾಲರಾಜಪುತ್ರಿ ಭಯಾರ್ತಳಾಗಿ, ಆರ‍್ತಜನ ಶರಣ್ಯನಾದ, ಜಗನ್ನಾಥ ಜನಾರ್ದನನನ್ನು ಸ್ಮರಿಸುತ್ತಾ ಇರಲು…[18] ಭೀಮಸೇನನು ಕ್ರೋಧೋದ್ದೀಪ್ತನಾಗಿ, ಅಣ್ಣನ ಬಾಹುಗಳನ್ನು ಸುಡುವೆನೆಂದು ಆರ್ಭಟಿಸಿದಾಗ ಅರ್ಜುನ ಅವನನ್ನು ಸಂತೈಸುತ್ತಾನೆ. ಆಗ ದ್ರೌಪದಿಯ ಪರವಾಗಿ ವಿಕರ್ಣನು ವಾದಿಸುತ್ತಾನೆ. ಅದಕ್ಕೆ ಉತ್ತರರೂಪವಾಗಿ ಕರ್ಣನು, ‘ಒಬ್ಬ ಗಂಡನಿಗೆ ಒಬ್ಬಳು ಪತ್ನಿ ಇರಬೇಕಾದದ್ದು ದೈವವಿಹಿತವಾದದ್ದು, ಆದರೆ ಈಕೆಗೆ ಅನೇಕ ಭರ್ತೃಗಳಿರುವುದರಿಂದ, ಈಕೆ ಬಂಧಕಿ; ಆದುದರಿಂದ ಆಕೆಯನ್ನು ವಿಗತವಸ್ತ್ರಳನ್ನಾಗಿ ಮಾಡಿ ಕರೆತಂದರೂ ಧರ‍್ಮವಿರೋಧವಾಗುವುದಿಲ್ಲ’ -ಎನ್ನುತ್ತಾನೆ. ಆಗ ಕೌರವ ಮತ್ತೆ ದುಶ್ಶಾಸನನಿಗೆ ಈ ಪಾಂಡವರ ಮತ್ತು ದ್ರೌಪದಿಯ ವಸ್ತ್ರಗಳನ್ನು ಅಪಹರಿಸು.[19] ಎನ್ನಲು, ಆತ ಬಂದು ‘ಇದು ಮಾಡಬಾರದು ಎಂದು ಮನದಲ್ಲಿ ವಿಚಾರಿಸದೆ ಸದ್ಗರ್ವಿತನಾದ ಆ ದುಶ್ಶಾಸನನು ನೇರವಾಗಿ ದ್ರೌಪದಿ ಕಟ್ಟಿದ ವಸ್ತ್ರವನ್ನು ಸಭೆಯಲ್ಲಿ ಅಶಂಕೆಯಿಲ್ಲದೆ ಸೆಳೆಯಲಾಗಿ, ಅವನು ಸೆಳೆದಂತೆ ಅವಳ ಜಘನ ಮಂಡಲವನ್ನು ದಾಟದೆ, ನಿರಂತರವಾಗಿ ಅದೇ ಬಗೆಯ ವಸ್ತ್ರಗಳು ಕಾಣಿಸಿಕೊಳ್ಳಲು ಸಭ್ಯರೆಲ್ಲರೂ ಹರ್ಷಿತರಾದರು; ದುಶ್ಶಾಸನನು ಹಾಗೆ ಸೆಳೆದುಹಾಕಿದ ವಸ್ತ್ರ ಪರ‍್ವತೋಪಮವಾಗಲು ಆತ ಲಜ್ಜೆಯಿಂದ ಶಕ್ತಿಗುಂದಿ ಸುಮ್ಮನಾದನು.[20]

ಇದು ನನ್ನಯ್ಯನ ಭಾರತದಲ್ಲಿ ಚಿತ್ರಿತವಾಗಿರುವ ವಸ್ತ್ರಾಪಹರಣದ ಪ್ರಸಂಗ. ಈ ಪ್ರಸಂಗದ ಮುಕ್ಕಾಲು ಮೂರುಪಾಲು ಮಾತೆಲ್ಲಾ ಮೂಲ ಭಾರತದ್ದೇ- ‘ಭಾಮಿನಿ ಕೃಷ್ಣನನ್ನು ಸ್ಮರಿಸಿದಳು’ ಎಂಬ ಮಾತು ಹೊರತು. ಅದರಲ್ಲೂ ದ್ರೌಪದಿ ಸಭೆಗೆ ಬಂದುದು ತನ್ನ ಪ್ರಶ್ನೆಗೆ ಉತ್ತರ ಪಡೆಯಲೆಂದು, ವಸ್ತ್ರಾಪಹರಣಕ್ಕಲ್ಲ. ಆದರೆ ಯಾವಾಗ ದುಶ್ಶಾಸನ ‘ನೀನು ಏಕವಸ್ತ್ರೆಯಾದ ರೇನು, ವಿಗತವಸ್ತ್ರಳಾದರೇನು’ -ಎಂಬ ಮಾತುಗಳನ್ನಾಡಿದನೋ, ಮತ್ತು ಕರ್ಣನೂ ಸಹ ‘ಇವಳು ಬಂಧಕಿ, ಇವಳನ್ನು ವಿವಸ್ತ್ರಳನ್ನಾಗಿ ಮಾಡಿ ಕರೆತಂದರೂ ಅಧರ್ಮವಲ್ಲ’ -ಎಂದನೋ, ಆ ಮಾತುಗಳು ಕೌರವನ ಮನದ ಕುಬುದ್ಧಿಯನ್ನು ಸಾಕಷ್ಟು ಪ್ರಚೋದಿಸಿರಬೇಕು. ತನ್ನ ಇಬ್ಬರು ಪ್ರಿಯ ವ್ಯಕ್ತಿಗಳ ಮನದಿಂದ ಬಂದ ಈ ಒಂದು ಸೂಚನೆ, ಬರ ಬರುತ್ತಾ ಆಶಯವೂ ಆಗಿ, ಕೌರವನ ಉದ್ಧತ ತೀರ್ಮಾನವಾಗಿ ಪರಿಣಮಿಸಿ, ದುಶ್ಶಾಸನನ ಮೂಲಕ ಕಾರ್ಯೋನ್ಮುಖವಾದ ರೀತಿ ಚೆನ್ನಾಗಿ ವ್ಯಕ್ತವಾಗಿದೆ ಇಲ್ಲಿ. ಆದರೆ ಈ ಪ್ರಸಂಗಕ್ಕೆ ಭಾಸನಿಂದ ಹಿಡಿದು ಪಂಪ ರನ್ನರ ಕಾಲದವರೆಗೂ ಸೇರದಿದ್ದ ಒಂದು ಮಾತು ಇಲ್ಲಿ ಆಗಲೇ ಪ್ರವೇಶ ಮಾಡಿದೆ. ಪಂಪ ರನ್ನರಲ್ಲಿ ಇಲ್ಲದ ಪವಾಡ, ಹಾಗೂ ಕೃಷ್ಣನ ನೆರಳು ಇಲ್ಲಿ ಆಗಲೇ ಕಾಣಿಸಿಕೊಳ್ಳತೊಡಗಿದೆ. ದ್ರೌಪದಿಯ ವಸ್ತ್ರವೇನೋ ಅಕ್ಷಯವಾಯಿತು, ನಿಜ. ಆದರೆ ನನ್ನಯ್ಯ ದ್ರೌಪದಿ ದುಶ್ಶಾಸನನಿಂದ ಎಳೆಯಲ್ಪಟ್ಟು ಸಭೆಗೆ ಬಂದು ತನ್ನ ಅವಸ್ಥೆಯನ್ನು ಕಂಡುಕೊಂಡು ಭೀತಿಯಿಂದ ಕೃಷ್ಣನನ್ನು, ಆರ‍್ತಜನ ಶರಣ್ಯನಾದ ಜಗನ್ನಾಥ ಜನಾರ್ದನನನ್ನು ಸ್ಮರಿಸಿದಳು ಎಂದು ಹೇಳಿ, ಅನಂತರ ಸಭೆಯಲ್ಲಿ ಹಲಕೆಲವು ಘಟನೆಗಳಾಗಿ ದುಶ್ಯಾಸನನು ದ್ರೌಪದಿಯ ವಸ್ತ್ರವನ್ನು ಸೆಳೆದಾಗ ಸೀರೆ ಅಕ್ಷಯವಾಗಿ ಪರ್ವತೋಪಮವಾಯಿತು- ಎಂದು ವರ್ಣಿಸಿದ್ದಾನೆ. ವಾಸ್ತವವಾಗಿ ಇಲ್ಲಿ, ‘ಭಾಮಿನಿ ಭೀತಿಯಿಂದ ಕೃಷ್ಣನನ್ನು ಸ್ಮರಿಸಿದಳು’ ಎನ್ನುವುದೂ, ‘ಸೀರೆ ಅಕ್ಷಯವಾಗಿ ಪರ್ವ ತೋಪಮವಾಯಿತು’ ಎನ್ನುವುದೂ- ಎರಡೂ ಬೇರೆ ಬೇರೆಯೇ. ಆದರೆ ಆಕೆ ಕೃಷ್ಣನನ್ನು ಸ್ಮರಿಸಿದ್ದರಿಂದ ಅವಳ ಸೀರೆ ಆತನ ಕೃಪೆಯಿಂದ ಅಕ್ಷಯವಾಯಿತೆಂದು ಸಿದ್ಧಾಂತ ಮಾಡಲು ಇಲ್ಲಿ ಆಧಾರವೇ ಇಲ್ಲ. ಭಾಮಿನಿ ಭೀತಿಯಿಂದ ಕೃಷ್ಣನನ್ನು ಸ್ಮರಿಸಿರಬಹುದು; ಕಷ್ಟಕಾಲದಲ್ಲಿ ಹಿತವರನ್ನಾಗಲೀ, ದೇವರನ್ನಾಗಲೀ ಯಾರಾದರೂ ಸ್ಮರಿಸುವುದು ಸಹಜವೇ. ಹಾಗೆ ದ್ರೌಪದಿ ಕೃಷ್ಣನನ್ನು ಸ್ಮರಿಸಿದಳು; ಅಷ್ಟೆ. ಆದರೆ ಸೀರೆ ಅಕ್ಷಯವಾದುದಕ್ಕೆ ದ್ರೌಪದಿಯ ಶೀಲವೇ ಕಾರಣವೋ, ಕೃಷ್ಣ ನಾಮಸ್ಮರಣೆ ಕಾರಣವೋ ಸ್ಪಷ್ಟವಾಗುವುದಿಲ್ಲ. ವಸ್ತ್ರ ಅಕ್ಷಯವಾಯಿತೆಂದದ್ದು ಮೂಲಭಾರತದ ಪ್ರಸಾದ; ಕೃಷ್ಣನಾಮಸ್ಮರಣೆ ಬಂದದ್ದು ಇತ್ತೀಚಿನ ಪ್ರಭಾವ. ಕವಿಯೇನೋ ನೇರವಾಗಿ ಕೃಷ್ಣನ ಕೃಪೆಯಿಂದ ವಸ್ತ್ರ ಅಕ್ಷಯವಾಯಿತೆಂದು ಹೇಳಿದ್ದರೂ, ಈ ಪ್ರಸಂಗದ ಈ ಕಡೆ ಕೃಷ್ಣನ ಹೆಸರೂ, ಆ ಕಡೆ ಸೀರೆ ಅಕ್ಷಯವಾದ ಪವಾಡವೂ ಸೇತುವೆಯಿಲ್ಲದ ಪ್ರವಾಹದ ಎರಡು ದಡಗಳಂತೆ ಬೇರೆಯಾಗಿಯೇ ನಿಂತಿವೆ. ಹಾಗೆ ಈ ಎರಡು ದಡಗಳಿಗೂ ಶ್ರೀಕೃಷ್ಣನ ಕೃಪೆಯ ಸೇತುವೆಗಳನ್ನು ಕಟ್ಟಲು ಮುಂದಿನ ಕವಿಗಳಿಗೆ ಸಾಕಷ್ಟು ಸಿದ್ಧತೆ, ಸೂಚನೆ ಅಲ್ಲಿದೆ!

ಈ ಎರಡು ಪ್ರಸಂಗಗಳನ್ನೂ ಸೇರಿಸಿ ಕೃಷ್ಣನ ಕೃಪೆಯ ಸೇತುವೆಯನ್ನು ಕಟ್ಟಿದವರು ಮುಂದಿನವರು. ವಸ್ತ್ರಾಪಹರಣ ಪ್ರಸಂಗದಲ್ಲಿ, ದ್ರೌಪದಿಯ ಸೀರೆ ಅಕ್ಷಯವಾಯಿತೆಂದು ಮೂಲ ಮಹಾಭಾರತ ಹೇಳುತ್ತದೆ. ಹೀಗಾಗಿ ಸೀರೆ ಅಕ್ಷಯವಾದ ಕೀರ್ತಿ ಯಾರಿಗೆ ಸಲ್ಲಬೇಕೆಂಬ  ಬಗೆಗೆ ‘ಜನತಾಂತರ್ದೃಷ್ಟಿ’ಯಲ್ಲಿ ಸಾಕಷ್ಟು ಚರ್ಚೆಯಾಗಿರಬೇಕು. ಮಹಾಭಾರತದಿಂದ ವಸ್ತುವನ್ನಾರಿಸಿಕೊಂಡು ಕೃತಿರಚನೆ ಮಾಡಿದ ಭಾಸ ಭಟ್ಟನಾರಾಯಣ ಇವರಾಗಲಿ, ಕನ್ನಡ ಕವಿಗಳಾದ ಪಂಪ ರನ್ನರಾಗಲಿ, ತಮ್ಮ ತಮ್ಮ ಕೃತಿಗಳಲ್ಲಿ ವಸ್ತ್ರಾಪಹರಣದ ವಿಷಯವನ್ನು ನಿರೂಪಿಸಿದರೂ, ‘ಅಕ್ಷಯವಸ್ತ್ರ’ದಂಥ ಪವಾಡದ ತಂಟೆಗೇ ಹೋಗದೆ ಕೈ ತೊಳೆದುಕೊಂಡು ಶ್ರೀಮನ್ ಮೌನವಾಗಿಯೇ ನಿಂತರು.[21] ಆದರೆ ನನ್ನಯ್ಯನ ಕಾಲಕ್ಕಾಗಲೇ, ಈ ಕೀರ್ತಿಗೆ ಕೃಷ್ಣನೇ ಏಕೆ ಕಾರಣವಿರಬಾರದು ಎಂಬ ಶಂಕೆ ಮೂಡಿ, ಕೃಷ್ಣನ ಹೆಸರು, ತಾನು ಈ ಪ್ರಸಂಗಕ್ಕೆ ಅಂಟಿಕೊಳ್ಳುವುದೇ ಬೇಡವೇ ಎಂಬ ಸಂಶಯದ ತೂಗುಯ್ಯಾಲೆಯಲ್ಲಿ ಕೊಂಚ ದೂರದಲ್ಲೇ ನಿಂತು ಆಲೋಚಿಸುವಂತೆ ತೋರುತ್ತದೆ! ಆದುದರಿಂದಲೇ ಭಾಮಿನಿ ಭೀತಿಯಿಂದ ಕೃಷ್ಣನನ್ನು ಸ್ಮರಿಸಿದಳು -ಎಂಬ ಮಾತೂ, ಅವಳ ವಸ್ತ್ರ ಅಕ್ಷಯವಾಯಿತು ಎಂಬ ಮಾತೂ ಕೊಂಚ ದೂರದಲ್ಲೇ ನಿಂತುಕೊಂಡಿರುವುದು. ಆದರೆ ಆಂಧ್ರಭಾರತದ ಕೆಲವು ಪ್ರತಿಗಳಲ್ಲಿ ಆಗಲೇ, ಈ ವಸ್ತ್ರಾಪಹರಣ ಪ್ರಸಂಗದ ಆರಂಭದಲ್ಲೇ, ದುಶ್ಶಾಸನ ದ್ರೌಪದಿಯ ಸೀರೆಗೆ ಕೈಹಾಕಲು ಮನದಂದನೆಂಬ ವರ್ಣನೆಯ ನಂತರವೇ, ದ್ರೌಪದಿ ‘ಈ ನಿರ್ದಯನಿಗೆ ನಾನಿನ್ನೇನು ತಾನೇ ಮಾಡಲಿ, ಎನ್ನುತ್ತಾ, ‘ಕೃಷ್ಣ, ದಯಾನಿಧಿ, ಗೋವಿಂದ ನನ್ನನ್ನು ಕಾಪಾಡು’- ಎಂದು ಕೇಳಿಕೊಂಡಳೆಂಬ ಮಾತು ದೊರೆಯುತ್ತದೆ.[22] ಈ ಭಾಗ ಪ್ರಕ್ಷಿಪ್ತವೆಂದು ಸಂಪಾದಕರು ಅಡಿಟಿಪ್ಪಣಿಯಲ್ಲಿ ಆಚ್ಚು ಹಾಕಿದ್ದಾರೆ. ಇದನ್ನು ನೋಡಿದರೆ, ಆಂಧ್ರ ಭಾರತದಲ್ಲಿಯೇ, ಕೊಂಚ ಹಿಂದೆ ಇರುವ ಕೃಷ್ಣನ ಸ್ಮರಣೆಯನ್ನು, ವಸ್ತ್ರಾಪಹರಣ ಪ್ರಸಂಗಕ್ಕೇ ಎಳೆದು ತಂದು ಗಂಟು ಹಾಕುವ ಪ್ರಯತ್ನ ಈಚೆಗೆ ನಡೆದಂತೆ ತೋರುತ್ತದೆ. ಆದರೆ ಹದಿನಾಲ್ಕನೆಯ ಶತಮಾನದ ವಿಲ್ಲಿಪುತ್ತೂರ್ ಅವರ ತಮಿಳು ಭಾರತದಲ್ಲಿ ಆಗಲೇ ಕೃಷ್ಣನ ಕೃಪೆ ಯಾವ ಸಂಕೋಚವೂ ಇಲ್ಲದೆ ತನ್ನ ವರದ ಹಸ್ತದಿಂದ ದ್ರೌಪದಿಗೆ ಅಕ್ಷಯವಸ್ತ್ರ ಪ್ರದಾನದಲ್ಲಿ ತೊಡಗಿದೆ. “ದ್ರೌಪದಿ ಭಗವಂತನನ್ನು ಸ್ತೋತ್ರ ಮಾಡಿದಳು. ಮೇಘಶ್ಯಾಮನು ದ್ರೌಪದಿಯ ಮನದಲ್ಲೇ ಕಾಣಿಸಿಕೊಂಡು, ಇತರರಿಗೆ ಅದೃಶ್ಯನಾಗಿ, ಕರುಣೆಮಾಡಿದನು. ವಸ್ತ್ರ ಅಕ್ಷಯವಾಯಿತು. ಪುಷ್ಪವೃಷ್ಟಿಯೂ ಆಯಿತು”[23] ಎಂದೇ ಕವಿ ಕೃಷ್ಣನ ಮಹಿಮೆಯನ್ನು ವರ್ಣಿಸಿದ್ದಾನೆ. ಸರಿ, ಮುಂದೆ ಕುಮಾರವ್ಯಾಸನ ಮಹಾಭಾರತದಲ್ಲಿ ಶ್ರೀಕೃಷ್ಣ ದ್ವಾರಕೆಯಿಂದ, ಕುಳಿತಲ್ಲಿಂದಲೇ ‘ಅಕ್ಷಯ ವಸ್ತ್ರ’ವನ್ನು ಕರುಣಿಸಿದ ಬಣ್ಣನೆ ದೊರೆಯುತ್ತದೆ. ಅಂತೂ ನನ್ನಯ್ಯನ ಕಾಲದಿಂದ ಈಚೆಗೆ, ಕೃಷ್ಣನ ಕೃಪೆಯ ವಿಷಯ ಸೇರಿಕೊಂಡು, ನಾನಾ ರೂಪಗಳನ್ನು ತಾಳಿ, ಮೂಲಭಾರತದ ಪ್ರತಿಗಳೆಡೆಗೆ ತನ್ನ ಯಾತ್ರೆಯನ್ನು ಕೈಕೊಂಡಂತೆ ತೋರುತ್ತದೆ. ಹೀಗಾಗಿ ಮಹಾಭಾರತದ ದ್ರೌಪದೀ ವಸ್ತ್ರಾಪಹರಣದ ಪ್ರಸಂಗ ಅವತಾರಪುರುಷನಾದ ಶ್ರೀಕೃಷ್ಣನ ಲೀಲೆಯ ಒಂದು ವಿನ್ಯಾಸವಾಗಿ, ಭಕ್ತಮನೋರಂಜಕವಾಗಿ ಪರಿಣಮಿಸಿತು.

-೩-

ತೆಲುಗು ಕವಿ ನನ್ನಯ್ಯನ ಕಾಲದಿಂದ ಈಚೆಗೆ, ತಮಿಳು ಹಾಗೂ ಕನ್ನಡ ಭಾರತಗಳಲ್ಲಿ ಕಂಡುಬರುವ, ವಸ್ತ್ರಾಪಹರಣ ಪ್ರಸಂಗದಲ್ಲಿ ಶ್ರೀಕೃಷ್ಣನು ಪಾಂಚಾಲಿಗೆ ಅಕ್ಷಯವಸ್ತ್ರವನ್ನು ಕರುಣಿಸಿದ ವಿಷಯ, ಬೇರೆ ಬೇರೆಯ ರೂಪಗಳನ್ನು ತಾಳಿಕೊಂಡು ಯಾವಾಗ ಮೂಲಭಾರತವನ್ನು ಸೇರಿಕೊಂಡಿತೋ ಹೇಳಲುಬಾರದು. ತಮಿಳು ಹಾಗೂ ಕನ್ನಡ ಭಾರತದಲ್ಲಿರುವ ಕೃಷ್ಣಸ್ತುತಿಯ ಮತ್ತು ಅಕ್ಷಯವಸ್ತ್ರದ ಪ್ರಸಂಗ ಮೊದಮೊದಲು ಆಯಾ ಕವಿಗಳ ಸ್ವಂತ ಸೃಷ್ಟಿಯೇ ಆಗಿದ್ದು, ಮೂಲಭಾರತದ ಪ್ರಕ್ಷೇಪಗಳಿಗೆ  ಸ್ಫೂರ್ತಿಯಾಯಿತೋ, ಅಥವಾ ಇದಕ್ಕೂ ಮೊದಲೇ ಮೂಲಭಾರತದಲ್ಲಿ ಪ್ರಕ್ಷಿಪ್ತವಾಗಿದ್ದ ಭಾಗಗಳಿಂದ ಈ ಕವಿಗಳು ಪ್ರಭಾವಿತರಾದರೋ, ಇಲ್ಲವೆ ಈ ಎಲ್ಲದಕ್ಕೂ ಆಕರವಾದ, ಸಹೃದಯ ಸೃಷ್ಟಿಯಾದ ಹಲವು ಕತೆಗಳೇನಾದರೂ ಹುಟ್ಟಿಕೊಂಡು ತಮ್ಮಪ್ರಭಾವವನ್ನು ಬೀರಿದುವೋ ಹೇಳುವುದು ಕಷ್ಟ. ಆದರೆ ಆ ಪ್ರಕ್ಷಿಪ್ತಗಳನ್ನು ನಿವಾರಿಸಿ, ವಸ್ತ್ರಾಪಹರಣ ಪ್ರಸಂಗದ ಮೂಲಪಾಠ ವಾಸ್ತವವಾಗಿ ಇಷ್ಟೇ ಇರಬಹುದೆಂದು ಪರಿಷ್ಕರಿಸಿ ಪ್ರಕಟಿಸಿರುವ ಭಾಂಡಾರ್ಕರ್ ಪ್ರಾಚ್ಯ ಸಂಶೋಧನ ಸಂಸ್ಥೆಯ ಪಾಠ ಹೀಗಿದೆ:

ತತೋ ದುಃಶಾಸನೋ ರಾಜನ್ ದ್ರೌಪದ್ಯಾ ವಸನಂ ಬಲಾತ್
ಸಭಾಮಧ್ಯೇ ಸಮಾಕ್ಷಿಪ್ಯ ವ್ಯಪಕ್ರಷ್ಟುಂ ಪ್ರಚಕ್ರಮೇ       (೧-೭೧-೪೦)

ಆಕೃಷ್ಯಮಾಣೇ ವಸನೇ ದೌಪದ್ಯಾಸ್ತು ವಿಶಾಂ ಪತೇ
ತದ್ರೂಪಮಪರಂ ವಸ್ತ್ರಂ ಪ್ರಾದುರಾಸೀತ್ ಅನೇಕಶಃ    (೨-೬೧-೪೧)

ತತೋ ಹಲಹಲಾಶಬ್ದಸ್ತತ್ರಾಸೀತ್ ಘೋರನಿಸ್ವನಃ
ತದದ್ಭುತತಮಂ ಲೋಕೇ ವೀಕ್ಷ್ಯ ಸರ್ವಮಹೀಕ್ಷಿತಾಮ್   (೨-೬೧-೪೨)

“ಅನಂತರ ದುಶ್ಶಾಸನನು ಸಭಾಮಧ್ಯಕ್ಕೆ ದ್ರೌಪದಿಯನ್ನೆಳೆದುತಂದು ಬಲಾತ್ಕಾರವಾಗಿ ಅವಳ ಸೀರೆಯನ್ನು ಸೆಳೆಯಲು ಪ್ರಾರಂಭಿಸಿದನು. ಹಾಗೆ ಅವಳ ವಸ್ತ್ರವನ್ನು ಅವನು ಸೆಳೆದಂತೆಲ್ಲಾ ಅದೇ ಪ್ರಕಾರವಾದ ವಸ್ತ್ರಗಳು ಅನೇಕಾನೇಕವಾಗಿ ಬಂದುವು. ಆಗ ‘ಅದ್ಭುತತಮ’ವಾದ ಆ ದೃಶ್ಯವನ್ನು ನೋಡಿ ಸರ್ವ ಮಹೀಪಾಲರಲ್ಲಿ ಕೋಲಾಹಲ ಉಂಟಾಯಿತು.”

ಇಷ್ಟೊಂದು ಸಂಕ್ಷಿಪ್ತವಾಗಿ, ಸಶಕ್ತವಾಗಿ ಈ ‘ಅದ್ಭುತತಮ’ವಾದ ಪ್ರಸಂಗ ಚಿತ್ರಿತವಾಗಿದೆ. ಆದರೆ ದ್ರೌಪದಿಯ ವಸ್ತ್ರ ಹೀಗೆ ಅಕ್ಷಯವಾದ ಅದ್ಭುತಕ್ಕೆ ದೈವೀ ಕಾರಣವೊಂದನ್ನು ಸ್ಥಾಪಿಸುವ ಸಲುವಾಗಿ, ದ್ರೌಪದಿ ಶ್ರೀಕೃಷ್ಣನನ್ನು ಕುರಿತು ಪ್ರಾರ್ಥಿಸಿದಂತೆಯೂ, ಆತ ಅವಳಿಗೆ ಅಕ್ಷಯವಸ್ತ್ರದಿಂದ ಕೃಪೆಮಾಡಿದಂತೆಯೂ, ಎಷ್ಟೋ ಪ್ರಕ್ಷೇಪ ಪಾಠಗಳು ದೊರೆತಿವೆ. ಸಂಶೋಧನ ಸಮಿತಿಯವರು ಆ ಪಾಠಾಂತರಗಳನ್ನೆಲ್ಲಾ ಅಡಿಟಿಪ್ಪಣಿಯಾಗಿ ಕೊಟ್ಟಿದ್ದಾರೆ. ಬಹುಮಟ್ಟಿಗೆ ದಕ್ಷಿಣದ ಪ್ರತಿಗಳಿಂದ ದೊರಕಿರುವ ಈ ಪ್ರಕ್ಷೇಪ ಭಾಗಗಳು, ವಸ್ತುವಿನಲ್ಲಿ ಏಕರೂಪತೆಯನ್ನು ಹೊಂದಿದ್ದರೂ, ನಿರೂಪಣೆಯಲ್ಲಿ ಬೇರೆ ಬೇರೆಯಾಗಿರುವುದರಿಂದ, ಒಂದರಂತೆ ಮತ್ತೊಂದು ಇಲ್ಲದಿರುವುದರಿಂದ ಇವು ಬೇರೆ ಬೇರೆಯ ಕಾಲದಲ್ಲಿ ಬೇರೆ ಬೇರೆಯವರುಗಳಿಂದ ರಚಿತವಾಗಿ ಪ್ರಕ್ಷಿಪ್ತವಾದುವು ಎನ್ನುವ ವಿಷಯ ಖಚಿತವಾಗುತ್ತದೆ. ಈ ಒಂದು ಪ್ರಸಂಗವನ್ನು ಕುರಿತು ಪ್ರಕ್ಷೇಪಕಾರರ ಬುದ್ಧಿ ಎಷ್ಟು ವೈವಿಧ್ಯಮಯವಾಗಿ ಕೆಲಸಮಾಡಿದೆ ಎನ್ನುವುದು ತುಂಬಾ ಸ್ವಾರಸ್ಯವಾದ ಸಂಗತಿಯಾಗಿದೆ.

ಈ ಪ್ರಕ್ಷೇಪಗಳಲ್ಲಿ ಪ್ರಧಾನವಾದ ಅಂಶ, ಕೃಷ್ಣನನ್ನು ಕುರಿತು ದ್ರೌಪದಿ ಮಾಡಿದ ಪ್ರಾರ್ಥನೆ. ಅವುಗಳೂ ಕೂಡ ಒಂದರಂತೆ ಮತ್ತೊಂದಿಲ್ಲ. ಯಾವಾಗ ದುಶ್ಶಾಸನ ದ್ರೌಪದಿಯ ಸೀರೆಗೆ ಕೈಹಾಕಿ ಸೆಳೆಯಲು ಮೊದಲುಮಾಡಿದನೋ, ಆಗಲೇ ಆ ಸುಸಂದರ್ಭದಲ್ಲೇ ಪ್ರಕ್ಷೇಪಕಾರರಿಗೆ ದ್ರೌಪದಿಯ ಬಾಯಿಂದ ಶ್ರೀಕೃಷ್ಣನ ಪ್ರಾರ್ಥನೆಯನ್ನು ಮಾಡಿಸಲು ಅವಕಾಶ ದೊರೆತಂತಾಯಿತು. ಯಾವಾಗ ‘ತತೋ ದುಃಶಾಸನೋ ರಾಜನ್ ದ್ರೌಪದ್ಯಾವಸನಂ ಬಲಾತ್| ಸಭಾಮಧ್ಯೇ ಸಮಾಕ್ಷಿಪ್ಯ ವ್ಯಪಕ್ರಷ್ಟುಂ ಪ್ರಚಕ್ರಮೇ||’ ಎಂಬ ಮಾತು ಮುಗಿಯಿತೋ, ಅಲ್ಲಿಯೇ ಪ್ರಕ್ಷೇಪ ಕಾರರಿಂದ ದ್ರೌಪದಿಯ ಪ್ರಾರ್ಥನೆ ಮೊದಲಾಯಿತು-

ಅಕೃಷ್ಯಮಾಣೇ ವಸನೇ ದ್ರೌಪದ್ಯಾ ಚಿಂತಿತೋ ಹರಿಃ

ಎಂಬ ಪೀಠಿಕೆಯೊಂದಿಗೆ-

೫೪೩:  ಗೋವಿಂದ ದ್ವಾರಕಾವಾಸಿನ್ ಕೃಷ್ಣ ಗೋಪೀಜನಪ್ರಿಯ
ಕೌರವೈಃ ಪರಿಭೂತಾಂ ಮಾಂ ಕಿಂ ನ ಜಾನಾಸಿ ಕೇಶವ
ಹೇ ನಾಥ ಹೇ ರಮಾನಾಥ ಪ್ರಜಾನಾಥಾರ್ತಿನಾಶನ
ಕೌರವಾರ್ಣವಮಗ್ನಾಂ ಮಾಂ ಉದ್ಧರಸ್ವ ಜನಾರ್ದನ
ಕೃಷ್ಣ ಕೃಷ್ಣ ಮಹಾಯೋಗಿನ್ ವಿಶ್ವಾತ್ಮನ್ ವಿಶ್ವಭಾವನ
ಪ್ರಪನ್ನಾಂ ಪಾಹಿ ಗೋವಿಂದ ಕುರುಮಧ್ಯೇ
sವಸೀದತೀಮ್
ಇತ್ಯನುಸ್ಮೃತ್ಯ ಕೃಷ್ಣಂ ಸಾ ಹರಿಂ ತ್ರಿಭುವನೇಶ್ವರಂ
ಪ್ರಾರುದತ್ ದುಃಖಿತಾ ರಾಜನ್ ಮುಖಮಾಚ್ಛಾದ್ಯ ಭಾಮಿನೀ

ಹೀಗೆಂದು ದುಃಖಿತೆಯಾದ ದ್ರೌಪದಿಯ ಪ್ರಾರ್ಥನೆ ಹರಿದಿದೆ. ಇಂತಹ ಹಲವು ಪ್ರಾರ್ಥನೆಯ ಪಾಠಗಳ ಪಲ್ಲವಿ ಬೇರೆ ಬೇರೆಯ ಸ್ವರಗಳಿಂದ ಇದೇ ಆಗಿದೆ.[24] ಯಾವಾಗ ಮುಖವನ್ನು ಮುಚ್ಚಿಕೊಂಡು ಭಾಮಿನಿ ಹೀಗೆ ಪ್ರಾರ್ಥಿಸಿದಳೋ ಆಗ-

೫೪೩:   ಯಾಜ್ಞಸೇನ್ಯಾ ವಚಃ ಶ್ರುತ್ವಾ ಕೃಷ್ಣೋ ಗಹ್ವರಿತೋsಭವತ್

ತ್ಯಕ್ತ್ವಾ ಶಯ್ಯಾಸನಂ ಪದ್ಭ್ಯಾಂ ಕೃಪಾಲುಃ ಕೃಪಯಾಭ್ಯಗಾತ್

‘ಯಾಜ್ಞ ಸೇನಿಯ ಈ ಮಾತನ್ನು ಕೇಳಿ ಕೃಷ್ಣನು ಕಳವಳಗೊಂಡವನಾಗಿ ಶಯ್ಯಾಸನವನ್ನು ಬಿಟ್ಟು ಎದ್ದು ಕೃಪಾಳುವು ದಯಮಾಡಿಸಿದನು’ ಎಂದರೆ ಕೃಷ್ಣ ದ್ವಾರಕಾವತಿಯಲ್ಲಿ, ಮಲಗಿದ್ದವನೆದ್ದು, ದ್ರೌಪದಿಯಿದ್ದಲ್ಲಿಗೆ ನಡೆದುಕೊಂಡು ಬರುವ ಕೃಪೆಮಾಡಿದನು. ಈ ಪಾಠದ ಪ್ರಕಾರ, ಕೃಷ್ಣನು ಕೌರವನ ಸಭೆಗೇ ಬಂದು ಅಲ್ಲಿ ಕೃಪೆಮಾಡಿದನೋ, ದ್ವಾರಕಿಯಲ್ಲಿದ್ದೇ ಕೃಪೆಮಾಡಿದನೋ ತಿಳಿಯದು. ಒಂದು ವೇಳೆ ಬಂದರೂ ಅದೃಶ್ಯನಾಗಿ ಬಂದ ಎಂದು ಊಹಿಸಬಹುದು. ‘ಗಹ್ವರಿತೋ ಅಭವತ್’ ಎಂದರೆ ‘ಅದೃಶ್ಯನಾಗಿ’ ಎಂದೂ ಅರ್ಥವಾಗುತ್ತದೆ; ಕಳವಳಗೊಂಡವನಾಗಿ ಎಂದೂ ಅರ್ಥವಾಗುತ್ತದೆ. ಶ್ರೀಕೃಷ್ಣನು ಕೃಪೆಮಾಡಿದ ವಿಷಯವನ್ನು ಪ್ರಸ್ತಾಪಿಸುವ ಪಾಠದಲ್ಲಿ-

೫೪೩:  ಕೃಷ್ಣಂಚ ಜಿಷ್ಣುಂ ಚ ಹರಿಂ ನರಂ ಚ
ತ್ರಾಣಾಯ ವಿಕ್ರೋಶತಿ ಯಾಜ್ಞಸೇನೀ||
ತತಸ್ತು ಧರ್ಮೋ
sಂತರಿತೋ ಮಹಾತ್ಮಾ
ಸಮಾವೃಣೋತ್ತಾಂ ವಿವಿಧೈರ್ವಸ್ತ್ರಪೂ ಗೈಃ||

‘ಹೇ ಕೃಷ್ಣ, ಹೇ ಜಿಷ್ಣು, ಹೇ ಹರಿ, ಹೇ ನರ, ಕಾಪಾಡು ಎಂದು  ದ್ರೌಪದಿಯು ಕೂಗಿಕೊಳ್ಳಲಾಗಿ, ಧರ್ಮದೇವತೆಯಾದ ಆ ಮಹಾತ್ಮನು [ಕೃಷ್ಣನು] ಅದೃಶ್ಯನಾಗಿದ್ದುಕೊಂಡು ವಿವಿಧ ವಸ್ತ್ರ ಸಮೂಹಗಳಿಂದ ದ್ರೌಪದಿಯನ್ನು ಮುಚ್ಚಿದನು’ ಎನ್ನುವಲ್ಲಿ ಶ್ರೀಕೃಷ್ಣನು ಅದೃಶ್ಯನಾಗಿದ್ದುಕೊಂಡೇ ಕೃಪೆ ಮಾಡಿದನು ಎಂಬ ವಿಷಯ ಸ್ಪಷ್ಟವಾಗಿದೆ.[25]

ವಿಷಯ ಇಲ್ಲಿಗೇ ನಿಲ್ಲಲಿಲ್ಲ; ಅದರಲ್ಲೂ ಪ್ರಶ್ನೆ-ಉಪಪ್ರಶ್ನೆಗಳನ್ನೆತ್ತಿಕೊಂಡು ಉತ್ತರದ ಮೂಲಕ ರಂಜಿಸಲು ಹೊರಟಿದ್ದಾರೆ ಪ್ರಕ್ಷೇಪಕಾರರು. ದ್ರೌಪದಿ ಕೃಷ್ಣನನ್ನೇ ಏಕೆ ಸ್ಮರಿಸಿರಬಹುದು ಎಂಬ ಪ್ರಶ್ನೆ ಯಾರೋ ಒಬ್ಬರಲ್ಲಿ ಎದ್ದಂತೆ ತೋರುತ್ತದೆ. ಸರಿ, ಉತ್ತರವೂ ಸಿದ್ಧವಾಯಿತು, ದ್ರೌಪದಿಯ ಬಾಯಲ್ಲೇ:

೫೪೩:  ಜ್ಞಾತಂ ಮಯಾ ವಸಿಷ್ಠೇನ ಪುರಾಗೀತಂ ಮಹಾತ್ಮನಾ|
ಮಹತ್ಯಾಪದಿ ಸಂಪ್ರಾಪ್ತೇ ಸ್ಮರ್ತವ್ಯೋ ಭಗವಾನ್ ಹರಿಃ||

‘ಮಹದಾಪತ್ಕಾಲದಲ್ಲಿ ಭಗವಾನ್ ಹರಿಯನ್ನು ಸ್ಮರಿಸತಕ್ಕದ್ದು ಎಂದು ಹಿಂದೆ ಮಹಾತ್ಮರಾದ ವಸಿಷ್ಠರು ಹೇಳಿದ್ದು ಸ್ಮರಣೆಗೆ ಬಂದಿತು’- ದ್ರೌಪದಿ ಹೀಗೆಂದುಕೊಂಡು ಕೃಷ್ಣನನ್ನು ಸ್ಮರಿಸಿದಳೆಂದು ಪ್ರಕ್ಷೇಪಕಾರರ ಭಾವನೆ ಇರಬೇಕು! ಹಾಗಿದ್ದರೆ ಇದೆಷ್ಟು ಕೃತಕ ಎನ್ನುವುದು ಮೇಲುನೋಟಕ್ಕೇ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಮೂಲಭಾರತದಲ್ಲಿ, ದುಶ್ಶಾಸನ ಸೆಳೆದಂತೆಲ್ಲಾ, ಅದೇ ಪ್ರಕಾರವಾದ ಅನೇಕ ವಸ್ತ್ರಗಳು ಕಾಣಿಸಿಕೊಂಡವು [ತದ್ರೂಪಮವಂ ವಸ್ತ್ರಂ ಪ್ರಾದುರಾಸೀತ್ ಅನೇಕಶಃ]- ಎಂಬ ಸಂಗತಿಯನ್ನು ಇನ್ನೂ ರಂಜಿಸಲು ತೊಡಗಿ, ‘ಅನೇಕಶಃ’ ಎಂದರೆ ಎಷ್ಟಿರಬಹುದು ಎಂದು ಲೆಕ್ಕಹಾಕಿ-

೫೫೨: ಅಷ್ಟೋತ್ತರ ಶತಂ ಯಾವದ್ವಸನಂ ಪ್ರಚಕರ್ಷ ಹ

‘ನೂರಾ ಎಂಟು ವಸನಗಳ ತನಕವೂ [ದುಶ್ಯಾಸನನು] ಬಟ್ಟೆಯನ್ನು ಸೆಳೆದನು!’- ಎನ್ನುತ್ತದೆ ಒಂದು ಪಾಠ. ಇದು ಕೆಲಸವಿಲ್ಲದ ಅಲಸಬುದ್ಧಿಯ ಕಾಗುಣಿತ! ದುಶ್ಶಾಸನ ಎಳೆದದ್ದು ನೂರಾ ಎಂಟು ಸೀರೆಗಳು -ಎಂದುಕೊಂಡು ತೃಪ್ತಿಪಟ್ಟುಕೊಂಡ ಈ ಬುದ್ಧಿ, ಈ ನೂರಾ ಎಂಟು ಬಟ್ಟೆಗಳೂ ಒಂದೇ ವರ್ಣದವಿರಲಾರವು, ಮೂಲಭಾರತದ ಕವಿ ಸುಮ್ಮನೆ ಒಂದೇ ಬಗೆಯ ಇನ್ನೊಂದು ವಸ್ತ್ರ [ತದ್ರೂಪಮಪರಂ ವಸ್ತ್ರಂ] ಎಂದುಬಿಟ್ಟ; ಆದರೆ ಭಗವಾನ್ ಕೃಷ್ಣನ ಮಹಿಮೆಗೆ ಆ ಬಟ್ಟೆಗಳನ್ನು ವಿವಿಧ ವರ್ಣರಂಜಿತವನ್ನಾಗಿಸುವುದು ಅಸಾಧ್ಯವೇ- ಎಂಬ ಯೋಚನೆಯಲ್ಲಿ

೫೫೩:  ನಾನಾರಾಗವಿರಾಗಾಣಿ ವಸನಾನ್ಯಥ ವೈ ಪ್ರಭೋ
ಪ್ರಾದುರ್ಭವಂತಿ ಶತಶೋ ಧರ್ಮಸ್ಯ ಪರಿಪಾಲನಾತ್

‘ಬಳಿಕ ಹೇ ಜನಮೇಜಯನೇ, ನಾನಾವರ್ಣಗಳಿಂದ ಕೂಡಿದ ನೂರಾರು ವಸನಗಳುಂಟಾ ಗುತ್ತವೆ, ಅದೂ ಧರ್ಮದ ಪರಿಪಾಲನೆಗಾಗಿ’[26] -ಎಂಬ ವಿವರಣೆಯನ್ನು ನೀಡಿದೆ. ಹೀಗಾಗಿ ಇಲ್ಲಿ ದ್ರೌಪದಿಯ ಸೀರೆಗಳ ಸಂಖ್ಯೆಯೂ ಏರಿದೆ; ಬಣ್ಣವೂ ಏರಿದೆ! ಒಟ್ಟಿನಲ್ಲಿ ವಸ್ತ್ರ ಅಕ್ಷಯವಾದ ‘ಅದ್ಭುತ’ವನ್ನು, ರಮ್ಯವನ್ನಾಗಿಸಲು, ದೈವೀಕೃಪೆಯ ಹಿನ್ನೆಲೆಯೊಂದನ್ನು ಒದಗಿಸುವ ನಮ್ಮ ಪ್ರಕ್ಷಿಪ್ತಕಾರರು ನಡೆಸಿರುವ ಪ್ರಯೋಗಗಳು ಎಷ್ಟೊಂದಿವೆ!

ಇಂಥದೊಂದು ಪ್ರಾರ್ಥನೆ ದ್ರೌಪದಿಯ ಬಾಯಿಂದ ಬಂದಿತೆಂದು ಸಾಧಿಸಲು ಪ್ರಕ್ಷೇಪಕಾರರಿಗೆ ಅಲ್ಲಲ್ಲಿ ಸಾಕಷ್ಟು ಅವಕಾಶಗಳೂ ಒದಗಿವೆ. ಇದರ ಜೊತೆಗೆ ಅವರ ಆತುರವೂ ಎದ್ದು ಕಾಣುತ್ತದೆ. ವಸ್ತ್ರಾಪಹರಣಕ್ಕಿಂತ ಹಿಂದೆಯೇ ಬರುವ ಕೇಶಾಪಕರ್ಷಣದ ಪ್ರಸಂಗದಲ್ಲಿಯೇ ಇದನ್ನು ಗುರುತಿಸಬಹುದು. ಕೃಷ್ಣೆಯ ಕೃಷ್ಣಕೇಶವನ್ನು ಹಿಡಿದೆಳೆದು ದುಶ್ಶಾಸನನು ಸಭೆಗೆ ತರುವ ಸಂದರ್ಭದಲ್ಲಿ ದ್ರೌಪದಿ ಅವನನ್ನು ಕುರಿತು ‘ನಾನು ರಜಸ್ವಲೆ, ಏಕವಸ್ತ್ರೆ, ನನ್ನನ್ನು ಹೀಗೆ ಸಭೆಗೆ ಎಳೆದೊಯ್ಯುವುದು ಸಲ್ಲದೋ ಅನಾರ್ಯ’ -ಎನ್ನುತ್ತಾಳೆ. ಅದಕ್ಕೆ ಉತ್ತರವಾಗಿ ಆತ-

ಕೃಷ್ಣಂ ಚ ಜಿಷ್ಣುಂ ಚ ಹರಿಂ ನರಂ ಚ
ತ್ರಾಣಾಯ ವಿಕ್ರೋಶ ನಯಾಮಿ ಹಿ ತ್ವಾಮ್
[೨-೬೦-೨೬ರ ಉತ್ತರಾರ್ಧ]

‘ಕೃಷ್ಣ, ಜಿಷ್ಣು, ಹರಿ, ನರ -ನೀವೆಲ್ಲಾ ಬಂದು ಕಾಪಾಡಿ ಎಂದು ನೀನು ಅರಚಿಕೋ! ನಾನು ನಿನ್ನನ್ನು ಬಿಡುವುದಿಲ್ಲ.’ ಎನ್ನುತ್ತಾನೆ. ದುಶ್ಶಾಸನ ಕೊಟ್ಟ ಈ ಒಂದು ಸೂಚನೆಯೇ ಸಾಕು ನಮ್ಮ ಪ್ರಕ್ಷೇಪಕಾರರಿಗೆ! ದ್ರೌಪದಿಯ ಬಾಯಿಂದ ಕೃಷ್ಣಸ್ತುತಿಯನ್ನು ಮಾಡಿಸಲು ನಾನು ಮುಂದೆ ತಾನು ಮುಂದೆ ಎಂದು ಬಂದಿದ್ದಾರೆ. ಇದರ ಜೊತೆಗೆ ಮುಂದೆ, ದ್ರೌಪದಿಯೇ ಉದ್ಯೋಗಪರ್ವದಲ್ಲಿ ಶ್ರೀಕೃಷ್ಣನು ಕೌರವನ ಕಡೆಗೆ ಸಂಧಾನಕ್ಕಾಗಿ ಹೊರಟ ಸಮಯದಲ್ಲಿ, ತನಗೆ ಹಿಂದೆ ಕೌರವರಿಂದಾದ ಪರಾಭವಗಳನ್ನು ನೆನೆಯುತ್ತಾ, ಹಿಂದೆ ಆಪತ್ಕಾಲದಲ್ಲಿ-

ನಿರಾಮರ್ಷೇಷ್ವಚೇಷ್ಟೇಷು ಪ್ರೇಕ್ಷಮಾಣೇಷು ಪಾಂಡುಷು
ತ್ರಾಹಿ ಮಾಮಿತಿಗೋವಿಂದ ಮನಸಾ ಕಾಂಕ್ಷಿತೋ
sಸ್ಮಿ ಮೇ||
ಯತ್ರ ಮಾಂ ಭಗವಾನ್ ರಾಜಾ ಶ್ವಶುರೋ ವಾಕ್ಯಮಬ್ರವೀತ್
ವರಂ ವೃಣೀಷ್ವ ಪಾಂಚಾಲಿ ವರಾರ್ಹಸಿ ಮತಾಸಿ ಮೇ
[ಉದ್ಯೋಗ ಪರ್ವ ೫-೮೦-೨೬, ೨೭]

‘ಪಾಂಡವರು ಇದನ್ನೆಲ್ಲಾ ನೋಡುತ್ತಾ ಶಾಂತರಾಗಿ ನಿಶ್ಚೇಷ್ಟರಾಗಿ ಕುಳಿತಿರುವಾಗ, ‘ಗೋವಿಂದಾ ನನ್ನನ್ನು ಕಾಪಾಡು’ ಎಂದು ನಾನು ಮನಸ್ಸಿನಲ್ಲಿಯೇ ಪ್ರಾರ್ಥಿಸಿದೆ. ಆಗ ಮಹಾತ್ಮನಾದ ನನ್ನ ಮಾವನಾದ ಧೃತರಾಷ್ಟ್ರನು ನನ್ನನ್ನು ಏನು ವರ ಬೇಕೋ ಕೇಳಿಕೋ ಎಂದನು’ -ಎನ್ನುತ್ತಾಳೆ. ಈ ಸಂದರ್ಭದಲ್ಲಿ, ದ್ರೌಪದಿ ತಾನು ಹಿಂದೆ ಗೋವಿಂದನನ್ನು ಆ ವಸ್ತ್ರಾಪಹರಣ ಕಾಲದಲ್ಲಿ ಪ್ರಾರ್ಥಿಸಿದ್ದುಂಟು ಎಂದು ಹೇಳಿದ ಮಾತಷ್ಟೇ ಸಾಕು, ಇದು ಪ್ರಕ್ಷೇಪಕಾರರಿಗೆ ಸಾಕಷ್ಟು ಸ್ಫೂರ್ತಿಯನ್ನು ನೀಡಿರಬೇಕು. ಆದರೆ ತೀರ ಆತುರದ ಪ್ರವೃತ್ತಿಯ ಪ್ರಕ್ಷೇಪಕಾರನೊಬ್ಬ ಈ ಸಂದರ್ಭವನ್ನು ಬಿಟ್ಟರೆ ಮತ್ತೆ ಅವಕಾಶ ಸಿಗದು ಎಂಬಂತೆ, ಕೇಶಾಪಕರ್ಷಣೆಯ ಪ್ರಸಂಗದಲ್ಲಿ ಯಾವಾಗ ದುಶ್ಶಾಸನನು ‘ಕೃಷ್ಣ, ಹರಿ, ಜಿಷ್ಣು, ನರ-ಬಂದು ಕಾಪಾಡಿ ಎಂದು ನೀನು ಅರಚಿಕೋ; ನಾನು ನಿನ್ನನ್ನು ಬಿಡುವುದಿಲ್ಲ’ -ಎಂದನೋ, ಆ ಕೂಡಲೇ ದ್ರೌಪದಿಯ ಬಾಯಲ್ಲಿ-

೫೩೫: ಗೋವಿಂದ ದ್ವಾರಕಾವಾಸ ಕೃಷ್ಣ ಗೋಪೀಜನಪ್ರಿಯ
ಕುರುಭಿಃ ಪರಿಭೂತಾಂ ಮಾಂ ಕಿಂ ನ ಜಾನಾಸಿ ಕೇಶವ||
ಮಹಿಷೀ ಪಾಂಡುಪುತ್ರಾಣಾಂ ಅಜಮೀಢಕುಲೇ ವಧೂಃ
ಸಾಹಂ ಕೇಶಗ್ರಹಂ ಪ್ರಾಪ್ತಾ ತ್ವಯಿ ಜೀವತಿ ಕೇಶವ||

ಹೀಗೆಂದು ಪ್ರಾರ್ಥನೆ ಹೊಮ್ಮಿತೆಂದು ತನ್ನ ಕೈಚಳಕವನ್ನು ಸೇರಿಸಿದ್ದಾನೆ. ಇದೇ ಪದ್ಯವೇ ಮುಂದೆ ವಸ್ತ್ರಾಪಹರಣದ ಸಂದರ್ಭದ ಮೊದಲಲ್ಲೇ ಮತ್ತೆ [೫೪೨] ಪುನರಾವೃತ್ತಿಗೊಂಡಿದೆ. ಈ ಪದ್ಯದಲ್ಲಿ ‘ಸಾಹಂ ಕೇಶಗ್ರಹಂ ಪ್ರಾಪ್ತಾ ತ್ವಯಿ ಜೀವತಿ ಕೇಶವ’ -ಎನ್ನುವ ಇಡೀ ವಾಕ್ಯವೇ,

ಸಾಹಂ ಕೇಶಗ್ರಹಂ ಪ್ರಾಪ್ತಾ ಪರಿಕ್ಲಿಷ್ಟಾ ಸಭಾಂ ಗತಾ
ಪಶ್ಯತಾಂ ಪಾಂಡುಪುತ್ರಾಣಾಂ ತ್ವಯಿ ಜೀವತಿ ಕೇಶವ
[ಉದ್ಯೋಗ ಪರ್ವ ೫-೮೦-೨೪]

ಎಂಬುದು ಉದ್ಯೋಗಪರ್ವದಲ್ಲಿ ದ್ರೌಪದಿ ಕೃಷ್ಣನನ್ನು ಕುರಿತು ಹೇಳಿದ ಶ್ಲೋಕದ ಮೊದಲ ಪಾದದ ಪೂರ್ವಾರ್ಧವನ್ನೂ, ಎರಡನೇ ಪಾದದ ಉತ್ತರಾರ್ಧವನ್ನೂ ಪೋಣಿಸಿ ಮಾಡಿದುದು ಎಂದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ಹಿಂದೆ ಉದಾಹರಿಸಿದ-

ಕೃಷ್ಣಂ ಚ ಜಿಷ್ಣುಂ ಚ ಹರಿ ನರಂ ಚ
ತ್ರಾಣಾಯ ವಿಕ್ರೋಶ ನಯಾಮಿ ಹಿ ತ್ವಾಮ್
[ಸಭಾ- ೨-೬೦-೨೬]

ಎಂಬ ಪದ್ಯದ ಸಾಮಗ್ರಿಯನ್ನೇ ಬಳಸಿಕೊಂಡು-

೫೪೪: ಕೃಷ್ಣಂ ಚ ಜಿಷ್ಣು ಚ ಹರಿಂ ನರಂ ಚ
ತ್ರಾಣಾಯ ವಿಕ್ರೋಶತಿ ಯಾಜ್ಞಸೇನೀ|
ತತಸ್ತು ಧಮೋ
sಂತರಿತೋ ಮಹಾತ್ಮಾ
ಸಮಾವೃಣೋತ್ತಾಂ ವಿವಿಧೈರ್ವಸ್ತ್ರಪೂಗೈಃ||

ಎಂದು ವಸ್ತ್ರಾಪಹರಣ ಪ್ರಸಂಗದಲ್ಲಿ [೨-೬೧-೪೦ರ ನಂತರ] ಕೃಷ್ಣ ದ್ರೌಪದಿಗೆ ವಸ್ತ್ರದಾನ ಮಾಡಿದ ರೀತಿಯನ್ನು ಪ್ರಕ್ಷೇಪಕಾರರು ವರ್ಣಿಸಿದ್ದಾರೆ. ಅಂತೆಯೇ ಪ್ರಕ್ಷೇಪ ಭಾಗವೆಂದು ಹಿಂದೆ ಹೇಳಲಾದ ಕೃಷ್ಣಸ್ತುತಿಯೊಂದರಲ್ಲಿ [೫೪೩] ಬರುವ ‘ಕೌರವಾರ್ಣವ ಮಗ್ನಾಂ ಮಾಂ ಉದ್ಧರಸ್ವ ಜನಾರ್ದನ’ -ಎಂಬ ಈ ಮಾತಿನಲ್ಲಿರುವ ಸಮುದ್ರದ ರೂಪಕ ವಾಸ್ತವವಾಗಿ ಮುಂದೆ ಬರುವ ಶ್ಲೋಕವೊಂದರಿಂದ ಪ್ರೇರಿತವಾದಂತೆ ತೋರುತ್ತದೆ. ದ್ರೌಪದಿ ಧೃತರಾಷ್ಟ್ರನಿಂದ ವರವನ್ನು ಪಡೆದು ಪಾಂಡವರನ್ನು ದಾಸ್ಯದಿಂದ ವಿಮೋಚನೆಗೊಳಿಸಿದಾಗ, ಕರ್ಣನು-

ಆಪ್ಲವೇsಂಭಸಿ ಮಗ್ನಾನಾಮ್ ಅಪ್ರತಿಷ್ಠೇ ನಿಮಜ್ಜತಾಮ್
ಪಾಂಚಾಲೀ ಪಾಂಡುಪುತ್ರಾಣಾಮ್ ನೌರೇಷಾ ಪಾರಗಾಭವತ್
[ಸಭಾ- ೨-೬೪-೩]

‘ದಾಟಲಾಗದ ಕಡಲಿನಲ್ಲಿ ಮುಳುಗಿದವರಂತೆ, ಅಪ್ರತಿಷ್ಠೆಯಲ್ಲಿ ಮುಳುಗಿಹೋದ ಪಾಂಡುಪುತ್ರರನ್ನು ದ್ರೌಪದಿ ನೌಕೆಯಂತೆ ಪಾರುಗಾಣಿಸಿದಳು’ -ಎನ್ನುತ್ತಾನೆ. ವಾಸ್ತವವಾಗಿ ಇಲ್ಲಿ ಬಂದಿರುವ ಸಮದ್ರರೂಪಕವೇ ಹಿಂದೆ ಪ್ರಕ್ಷೇಪದಲ್ಲಿ ‘ಕೌರವಾರ್ಣವ’ದಲ್ಲಿ ಪಾಂಡವರೂ ದ್ರೌಪದಿಯೂ ಮುಳುಗಿದ ಪರಿಯನ್ನು ಹೇಳುವ ರೀತಿಯಾಗಿದೆ. ಒಟ್ಟಿನಲ್ಲಿ ಈ ಪ್ರಕ್ಷೇಪಗಳು ಹೇಗೆ ಎಷ್ಟರಮಟ್ಟಿಗೆ ಮೂಲಭಾರತದ ಭಾಷಾಸಾಮಗ್ರಿಯನ್ನೇ ಬಹುಮಟ್ಟಿಗೆ ಬಳಸಿಕೊಂಡು ಆಯಾ ಕಥಾಸಂದರ್ಭಗಳಿಗೆ ಹೊಂದಿಕೊಳ್ಳುವಂತೆ ರಚಿತವಾಗಿ, ಕಥೆಯೊಂದಿಗೆ ತಮ್ಮ ಎಳೆಗಳನ್ನು ಸೇರಿಸಿ ಬೆರೆಯಲು ಪ್ರಯತ್ನಿಸುತ್ತವೆ ಎಂಬುದು ಗಮನಾರ್ಹವಾದ ಸಂಗತಿ. ಎಷ್ಟೋಸಲ “ಈ ಪ್ರಕ್ಷಿಪ್ತಗಳನ್ನು ವಾಸ್ತವವಾಗಿ ಪ್ರಕ್ಷಿಪ್ತಗಳೆಂದು ಸಾಧಿಸಿ ತೋರಿಸುವುದೂ ಕಷ್ಟ. ಮಹಾಕಾವ್ಯದ ಛಂದಸ್ಸು ಅನುಕರಣಸಾಧ್ಯವಾದದ್ದರಿಂದಲೂ, ಇಲ್ಲಿನ ವ್ಯಾಕರಣ ಹೇಗೆಂದರೆ ಹಾಗೆ ಒಗ್ಗಿಕೊಳ್ಳುವುದರಿಂದಲೂ, ಇಲ್ಲಿನ ಶೈಲಿ ಸುಲಭವಾಗಿ ವರ್ಗೀಕರಿಸಲು ಸಾಧ್ಯವಲ್ಲದುದಾಗಿರುವುದರಿಂದಲೂ, ಇಂಥ ಪ್ರಕ್ಷೇಪ ಭಾಗಗಳನ್ನು ಬಹು ಚತುರತೆಯಿಂದಲೂ ಯುಕ್ತಿಯಿಂದಲೂ ಮಾಡಿ ಸೇರಿಸಿರುವುದುಂಟು.”[27] ನಮ್ಮದೇಶದ ಯಾವ ಮಹಾಕೃತಿಗಳಿಗೂ ಆ ಅವಶ್ಯ ಕರ್ಮ ಅಥವಾ ಸಂಸ್ಕಾರ ತಪ್ಪಿದ್ದಲ್ಲ. ಹಾಗೆ ಮಹಾಭಾರತದಲ್ಲೂ ಆಗಿದೆ. ಮಹಾಭಾರತದ ತುಂಬ ಇಂಥ ಎಷ್ಟೋ ಪ್ರಕ್ಷೇಪಗಳಿವೆ “ಹಾಗೆಂದಮಾತ್ರಕ್ಕೆ ಅದು ಆ ಪ್ರಕ್ಷೇಪಗಳನ್ನು ಅಲ್ಲಗಳೆಯುವ ಅಥವಾ ಖಂಡಿಸುವ ಮಾತಲ್ಲ. ಪ್ರಕ್ಷೇಪಗಳ ಈ ಪರಂಪರೆ ನಮ್ಮಲ್ಲಿ ಕ್ರಮಾನುಗತವಾದುದೂ, ಅನಿವಾರ್ಯವಾದುದೂ, ವಿಶಾಲಾರ್ಥದಲ್ಲಿ ನೋಡಿದರೆ ನ್ಯಾಯವಾದುದೂ ಆಗಿದೆ. ಮಹಾಕಾವ್ಯವೊಂದು ಯಾವುದೇ ಪ್ರಗತಿಪರವಾದ ಜನಜೀವನದ ಪ್ರಾಣಶಕ್ತಿಯಾಗಿ ಮುಂದುವರಿಯಬೇಕಾದರೆ, ಅದು ಹೀಗೆ ನಿಧಾನವಾಗಿ ವ್ಯತ್ಯಸ್ತವಾಗುತ್ತಲೇ ಇರಬೇಕು. ಕೃತಿಯೊಂದರಲ್ಲಿ ಈ ಬಗೆಯ ಹಲವು ಭಾಗ ನಷ್ಟವಾಗುವ ಹಲವು ಭಾಗ ಪುಷ್ಟವಾಗುವ ಕ್ರಿಯೆ ನಡೆಯುತ್ತಿರುವುದು. ಆ ಪುಸ್ತಕ ಕೇವಲ ಧೂಳಿಡಿದ ಕಪಾಟಿನಲ್ಲಿ ಕೊಳೆಯುವ ಪುಸ್ತಕವಲ್ಲ, ಅದು ಜೀವನಕ್ಕೆ ಸದಾ ಸ್ಫೂರ್ತಿದಾಯಕವೂ ಆದ ಕೃತಿ- ಎನ್ನುವುದರ ಬಹಿರಂಗ ಸೂಚನೆ ಮಾತ್ರ. ಬಹುಶಃ ಇವು ಮಹಾಭಾರತವನ್ನು, ಇತರ ಎಷ್ಟೋ ಸಹೋದರ ಕೃತಿಗಳಂತೆ ವಿಸ್ಮೃತಿಯ ಕಗ್ಗವಿಯಲ್ಲಿ ಬಿದ್ದುಹೋಗದಂತೆ, ತಡೆದು ಬದುಕಿಸಿರುವ ಸ್ಪರ್ಶಮಣಿಗಳೆನ್ನಬೇಕು.”[28]


[1] ನಾರಣಪ್ಪನಲ್ಲಿ: ‘ಅಂದು ದ್ರೌಪದಿಸಹಿತ ನಾರೀವೃಂದ ಕೈಗಳ ಹೊಯ್ದು ಮಿಗೆ ಗೊಳ್ಳೆಂದು
ನಕ್ಕುದು, ನೊಂದು ತಲೆವಾಗಿದೆನು ಲಜ್ಜೆಯಲಿ’-   [ಸಭಾ. ೧೨-೩೭]
ಪಂಪನಲ್ಲಿ ಇದು ಇಲ್ಲ; ನಾರಣಪ್ಪನದು ಮೂಲದ ಅನುವಾದವೇ ಆಗಿದೆ.

[2] ಮೂಲಭಾರತದಲ್ಲಿ ಈ ಭಾವ ಸೂಚಿತವಾಗಿದೆ. ಆದರೆ ನಾರಣಪ್ಪನಂತೂ
‘ಪಾಂಚಾಲನಂದನೆಯ ನೂಕಿ ಮುಂದಲೆವಿಡಿದು
ತೊತ್ತಿರೊಳಾಕೆಯನು ಕುಳ್ಳಿರಿಸಿದಂದು,
ವಿಶೋಕನಹೆನಾ ದಿವಸದಲಿ ಕೃತಕೃಹತ್ಯ ತಾನೆಂದ’-          [ಸಭಾ. ೧೨-೬೬]

ಎಂದು ವಾಚ್ಯವಾಗಿಯೇ ದುರ‍್ಯೋಧನನ ಮತವನ್ನು ಹೇಳಿಸಿದ್ದಾನೆ.

[3] ಏಹಿ ಕ್ಷತ್ತಃ ದ್ರೌಪದೀಮಾನಯಸ್ವ
ಪ್ರಿಯಾಂ ಭಾರ‍್ಯಾಂ ಸಂಮತಾಂ ಪಾಂಡವಾನಾಂ
ಸಮ್ಮಾರ್ಜತಾಂ ವೇಶ್ಮ ಪರೈತು ಶ್ರೀಘ್ರಂ
ಆನಂದೋನಃ ಸಹ ದಾಸೀಭಿರಸ್ತು     [ಸಭಾ. ೨-೫೯-೧]

‘ಬಾ ವಿದುರ ಪಾಂಡವರ ಪ್ರಿಯಪತ್ನಿ ಎನಿಸಿಕೊಂಡಿರುವ ದ್ರೌಪತಿಯನ್ನು ಕರೆದುಕೊಂಡು ಬಾ. ದಾಸಿಯರ ಮಧ್ಯದಲ್ಲಿದ್ದುಕೊಂಡು ಕಸ ಗುಡಿಸಲಿ; ಅವಳು ಬೇಗ ಬರಲಿ. ನಮ್ಮ ಮನಸ್ಸನ್ನು ದಾಸಿಯರೊಂದಿಗೆ ಆನಂದಪಡಿಸಲಿ’ – ಎನ್ನುತ್ತಾನೆ ದುರ‍್ಯೋಧನ. ಈ ವಿಷಯ ಪಂಪನಲ್ಲಿ ಇಲ್ಲ; ನಾರಣಪ್ಪನಲ್ಲಾದರೋ ಕೌರವ ವಿದುರನನ್ನು ಕುರಿತು:

ವಿದುರ ಬಾ ನಮ್ಮಾಕೆಯಾ ದ್ರೌಪದಿಯ ಕರೆ, ಬೆಸಗೊಂಬ
ತೊತ್ತಿರ ಸದನದಿಚ್ಛೆಯೊ, ರಾಣಿವಾಸದ ಮನೆಯಪೇಕ್ಷಿತವೋ-    [೧೪-೩೬]

ಎನ್ನುತ್ತಾನೆ. ‘ಪ್ರಿಯಾಂ ಭಾರ‍್ಯಾಂ ಸಂಮತಾಂ ಪಾಂಡವಾನಾಂ’ -ಎನ್ನುವ ಅರಿವು ಮೂಲ ಭಾರತದ ದುರ‍್ಯೋಧನನಿಗಿದ್ದರೆ, ನಾರಾಣಪ್ಪನ ದುರ‍್ಯೋಧನ ಅಗಲೇ, ‘ನಮ್ಮಾಕೆ ಆ ದ್ರೌಪದಿ ಎನ್ನುವಷ್ಟು ಮುಂದುವರಿದಿದ್ದಾನೆ!’

[4] ಯೇ ರಾಜಸೂಯಾವಭೃಥೇ ಜಲೇನ
ಮಹಾಕ್ರತೌ ಮಂತರ ಪೂತೇನ ಸಿಕ್ತಾಃ
ತೇ ಪಾಂಡವಾನಾಂ ಪರಿಭೂಯ ವೀರ್ಯಂ
ಬಲಾತ್ಪ್ರಮೃಷ್ಟಾ ಧೃತರಾಷ್ಟ್ರಜೇನ      [೨-೬೦-೨೩]

[5] ಪಂಪನಲ್ಲಿ ‘ಕೇಶಪಾಶ ಪ್ರಪಂಚ’ ಎನ್ನುವ ಮಾತು ಗಮನಾರ್ಹ. ರನ್ನನು, ಭೀಮ ದುರ‍್ಯೋಧನರ ಗದಾಯುದ್ಧ ಸಂದರ್ಭದಲ್ಲಿ ಭೀಮನ ಮಾತಿನಲ್ಲಿ ‘ಇದು ಪಾಂಚಾಲೀ ಪ್ರಪಂಚಕ್ಕೆ’ [೮-೨೨] ಎಂದು ಹೇಳಿಸುವಾಗ, ಪಂಪನಿಂದಲೇ ಪ್ರೇರಿತನಾಗಿದ್ದರೂ, ಪಂಪನ  ಪ್ರಯೋಗದ ಮುಂದೆ ಇದು ತೀರಾ ಸಪ್ಪೆಯಾಗಿದೆ.

[6] ಆ ಮಹೀಶಕ್ರತುವರದೊಳುದ್ದಾಮ ಮುನಿಜನ ರಚಿತ ಮಂತ್ರ-
ಸ್ತೋಮ ಪುಷ್ಕಲ ಪೂತ ಪುಣ್ಯ ಜಲಾಭಿಷೇಚನದ
ಶ್ರೀಮುಡಿಗೆ ಕೈಯಿಕ್ಕಿದನು…..        [೧೪-೬೬]

ಈ ಪದ್ಯ ಹಿಂದೆ ಉದ್ಧರಿಸಿರುವ “ಯೇ ರಾಜಸೂಯಾವಭೃತೇಜಲೇನ| ಮಹಾಕ್ರತೌ ಮಂತ್ರ ಪೂತೇನ ಸಿಕ್ತಾಃ” -ಎಂಬ ಮೂಲಭಾರತ ಪದ್ಯದ ಸತ್ವಾನುವಾದವಾಗಿದೆ.

[7] ದುಃಶ್ಯಾಸನಾಮರ್ಷರಜೋವಿಕೀರ್ಣೈ-
ರೇಭಿರ್ವಿನಾಥೈರಿವ ಭಾಗ್ಯನಾಥೈಃ||
ಕೇಶೆಃ ಕದರ್ಥೀಕೃತವೀರ್ಯಸಾರಃ
ಕಚ್ಚಿತ್ಸ ಏವಾಸಿ ಧನಂಜಯಸ್ತ್ವಮ್||    [ಕಿರಾತಾರ್ಜುನೀಯ, ೩-೪೭]

[8] ಭಾರತ ತೀರ್ಥ: ಮಾಸ್ತಿ ಮೆಕಟೀಶ ಅಯ್ಯಂಗಾರ್, ಪು. ೧೭೩

[9] ಅಲ್ಲೇ…. ಪು. ೧೯೪.

[10] ದುಃಖಾರ್ತರಾದ ಭಕ್ತರ ಮೊರೆಯನ್ನು ಕೇಳಿ ಕೃಷ್ಣನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕೃಪೆಮಾಡಿದನೆಂದು ಹೇಳುವ ಕೆಲವೇ ಕೆಲವು ಪ್ರಸಂಗಗಳಿವೆ ಮಹಾಭಾರತದಲ್ಲಿ. ಅವುಗಳಲ್ಲಿ ಅರಣ್ಯಪರ್ವದ ದೂರ್ವಾಸಾತಿಥ್ಯದ ಮತ್ತು ಸಭಾಪರ್ವದ ಅಕ್ಷಯ ವಸ್ತ್ರದ ಪ್ರಸಂಗ ಗಮನಾರ್ಹವಾದವು. ಆದರೆ ಇವೆರಡೂ ನಿಸ್ಸಂದೇಹವಾಗಿ ಪ್ರಕ್ಷೇಪಗಳು ಎನ್ನುತ್ತಾರೆ. ಸುಕ್ತಂಕರ್ ಅವರು: Aranyaparava, Part II, Introduction, Page XIII.

[11] ಭಾಸಕವಿಯ ಕಾಲದ ವಿಚಾರದಲ್ಲಿ ಹಾಗೂ ಆತ ಬರೆದ ನಾಟಕಗಳ ವಿಚಾರದಲ್ಲಿ ಇಂದಿಗೂ ನಿರ್ದಿಷ್ಟ ನೆಲೆಯನ್ನು ವಿದ್ವಾಂಸರು ತಲುಪಿಲ್ಲವಾದಕಾರಣ, ಇಲ್ಲಿ ಉಲ್ಲೇಖಿಸಿರುವ ಈ ಭಾಗವನ್ನು ಒಂದು ಬಗೆಯ ಶಂಕೆಯಿಂದಲೇ ಇರಿಸಿಕೊಳ್ಳಲಾಗಿದೆ.

[12] ಭಾಸನಾಟಕ ಚಕ್ರ- Ed. C.R. Devadhar, p. 444.

[13] ದುಶ್ಯಾಸನಾಮರ್ಷರಜೋವಿ-                     ‘ಖಳ ದುಶ್ಯಾಸನನೆಳೆಯಲು ಕೆದರಿದ
ಕೀರ್ಣೈರೇಭಿರ‍್ವಿನಾಥೈರಿವ ಭಾಗ್ಯನಾಥೈಃ|          ಕಾವವರಿಲ್ಲದೆ ವಿಧಿ ಕಾಯ್ದು
ಕೇಶೈಃ ಕದರ್ಥೀಕೃತವೀರ್ಯಸಾರಃ               ಕೇಶವೆ ಜರೆದಾ ಕಲಿತನದಾರ್ಪಿನ
ಕಚ್ಚಿತ್ಸ ವಿವಾಸೀ ಧನಂಜಯಸ್ತ್ವಮ್||                  ಅಂದಿನ ಪಾರ್ಥನೆ ನೀನಿಂದು!’
-ಕಿರಾತಾರ್ಜುನೀಯ ೩-೪೭                       [ಡಾ. ಕೃಷ್ಣಮೂರ್ತಿಗಳ ಅನುವಾದ  ೩.೪೭]

[14] ವೇಣೀಸಂಹಾರ ನಾಟಕಂ: ಅನು. ಜಯರಾಯಾಚಾರ‍್ಯ:
೧-೧೦: “ಬಳಿಕಂ ಪಾಂಡುಕುಮಾರರ ಲಲನೆಯ ಪರಿಧಾನಚಿಕುರತತಿಗಳ ಸೆಳೆದಾ ಮಲಿನಾತ್ಮ ಧಾರ್ತರಾಷ್ಟ್ರಾ!”
೧-೨೫:“ತೀವಿ ದುರೋದರಾರಣಿಯೊಳಿತ್ತೊ ಕಚಾಂಬರಾಕರ್ಷಣಂಗಳಿಂದಾವುದು…
೨-೨೩“ವಸ್ತ್ರಮಂ ಕಚಮುಮಂ ಅಂದು ದುಶ್ಯಾಸನಂ ಪಾಣಿಯಿಂ ಸೆಳೆಯಲ್”
೩-ಗದ್ಯ: ದ್ರೌಪದೀ ಕೇಶಾಂಬರಗಳನ್ನು ಸೆಳೆದ ಪರಮ ಪಾತಕಿಯು”
೪-೫೦: “ಎಮ್ಮರಸಿಯ ವಸನ ಕಚಗ್ರಹವಗೆಯ್ದ ಪಾತಕಿ”
೫-೨೮:“ಕ್ರತುಜಾ ಕಚಾಂಬರ ಹರೋತ್ಥಿತ ವಾತಂ”

[15] ರನ್ನನು ಕೊಡುವ ಈ ಕ್ರಿಯೆ- ಪ್ರತಿಕ್ರಿಯೆಗಳ ಚಿತ್ರಣ ಮೂಲಭಾರತ ಹಾಗೂ ಪಂಪನಿಂದ ಭಿನ್ನವಾಗಿದ್ದರೂ ವಾಸ್ತವವಾಗಿ ಭಾಸನ ‘ದೂತವಾಕ್ಯ’ದಲ್ಲಿ ಬರುವ ಈ ಪ್ರಸಂಗದ ವರ್ಣನೆಯನ್ನೇ ಈತ ಸಂಪೂರ್ಣವಾಗಿ ಅನುಸರಿಸಿ ಅನುಕರಿಸಿರುವಂತಿದೆ. ಮೇಲಾಗಿ ರನ್ನನ ಮನೋಧರ್ಮಕ್ಕೆ ಈ ಬಗೆಯ ನಿರೂಪಣೆಯೇ ಒಗ್ಗತಕ್ಕದ್ದು.

[16] ನನ್ನಯ್ಯನ ಮೇಲೆ ಕನ್ನಡ ಕವಿ ಪಂಪನ ಶೈಲಿಯ ಪ್ರಭಾವವಿದೆ ಎಂದೂ, ನನ್ನಯ್ಯನ ಭಾರತ ಮೂಲಭಾರತದ ಪ್ರಾಚೀನ ಪಾಠವನ್ನು ಚಿನ್ನಾಗಿ ಪ್ರತಿನಿಧಿಸುತ್ತದೆ ಎಂದೂ ವಿದ್ವಾಂಸರ ಅಭಿಪ್ರಾಯ.

[17] ಇದಿ ಉಚಿತಂಬುಗಾದನಕ ಯಿಕ್ಕುರುಮುಖ್ಯಲು ಸೂಚುತುಂಡ ದು
ರ‍್ಮದುಡೈ ವೀಡು ನನ್ನುನವಮಾನಿತ ಜೇಸೆಡಿ ಸರ್ವಧರ್ಮ ಸಂ
ವಿದುಲನನ್ನುಯೀ ಭರತ ವೀರುಲ ವಂಶಮುನೇಡಧರ್ಮಸಂ-
ಪದನತಿನಿಂದ್ಯಮಯ್ಯೆನನಿ ಭಾಮಿನಿ ಕೃಷ್ಣದಲಂಚೆ ಭೀತಯೈ
[ಸಭಾಪರ್ವ, II-೨೧೯]

[18] ಅನಾಥಯುಂಬೋಲೆ ಪಾಂಚಾಲ ರಾಜಪುತ್ರಿ ಭಯಾರ‍್ತಯೈ
ಆರ‍್ತಜನ ಶರಣ್ಯುಂಡೈನ ಜಗನ್ನಾಥು ಜನಾರ್ದನುಂ ದಲಂಚುಚು.
[ಅಲ್ಲೇ, ೨೨೦]

[19] ಯಿಪ್ಪಾಂಡಪುಲಯು ದ್ರೌಪದಿಯು ವಸ್ತ್ರಂಬುಲಪಹರಿಂಪು….
[ಅಲ್ಲೇ, ೨೨೬]

[20] ಶ್ರೀಮದಾಂಧ್ರ ಭಾರತಮು: ಸಂ ವಾವಿಳ್ಲ ರಾಮಸ್ವಾಮಿ ಶಾಸ್ತ್ರಿಲು: ಸಭಾ ಪರ್ವ
II ೨೩೧-೨೩೨, (ಪು. ೩೧೬-೩೧೭)

[21] ಕೃಷ್ಣನಿಲ್ಲದ ಕೇವಲ ಅಕ್ಷಯವಸ್ತ್ರದ ಪ್ರಸಂಗ ಮೂಲಪಾಠದ್ದೇ ಎಂದು ಸಿದ್ಧವಾಗಿದ್ದರೂ, ಈ ಕವಿಗಳೆಲ್ಲರೂ ಏಕಪ್ರಕಾರವಾಗಿ ಕೇವಲ ವಸ್ತ್ರಾಪಹರಣದ ವಿಷಯವನ್ನು ಪ್ರಸ್ತಾಪಿಸಿ, ವಸ್ತ್ರ ಅಕ್ಷಯವಾದ ಸಂಗತಿಯ ಬಗೆಗೆ ಮೌನ ತಾಳಿರುವುದು ಸೋಜಿಗವನ್ನುಂಟುಮಾಡುತ್ತದೆ. ಪಂಪ-ರನ್ನರ ನಂತರ, ಬಹುಶಃ ನನ್ನಯ್ಯನ ಸಮಕಾಲೀನನಾದ, ಕ್ಷೇಮೇಂದ್ರನ (ಸು.ಕ್ರಿ.೧೦೫೦) ಸಂಸ್ಕೃತ ‘ಭಾರತ ಮಂಜರಿ’ಯಲ್ಲಿ, ವಸ್ತ್ರಾಪಹರಣ ಪ್ರಸಂಗ ಅಕ್ಷಯವಸ್ತ್ರದ ಘಟನೆಯೊಂದಿಗೆ ವರ್ಣಿತವಾಗಿರುವುದು ಗಮನಾರ್ಹವಾಗಿದೆ. ಕ್ಷೇಮೇಂದ್ರನ ಭಾರತಮಂಜರಿ, ವ್ಯಾಸ ಮಹಾಭಾರತದ ಕಾಶ್ಮೀರಿ ಪಾಠವನ್ನು ಪ್ರತಿನಿಧಿಸುತ್ತದೆ. ಕ್ಷೇಮೇಂದ್ರನಲ್ಲಿ ಈ ಪ್ರಸಂಗದ ವರ್ಣನೆ ಹೀಗಿದೆ:

ಕೇಶಪಾಶಂ ವಿಕೃಷ್ಯಾಸ್ಯಾ ವಾಸೋ ಜಗ್ರಾಹ ಕೌರವಃ|
ಯಥಾ ಯಥಾ ಜಹಾರಾಶು ಸ ತಸ್ಯಾ ರುಚಿರಾಂಬರಂ||
ತಥಾ ತಥಾ ನವನವಂ ಪ್ರಾದುರಾಸೀತ್ತತಸ್ತನೌ|
ತತೋ ನಿವೃತ್ತೇ ಶನಕೈಃ ಶ್ರಾಂತೇ ದುರ್ಯೋಧನಾನುಜೇ||

‘ಕೌರವನು (ದುಶ್ಶಾಸನನು) ದ್ರೌಪದಿಯ ಕೇಶಪಾಶವನ್ನೆಳೆದು ವಸ್ತ್ರವನ್ನು ಸೆಳೆದನು; ಹೇಗೆ ಹೇಗೆ ವೇಗವಾಗಿ ಆತ ಆಕೆಯ ರುಚಿರಾಂಬರವನ್ನು ಸೆಳೆದನೋ, ಹಾಗೆ ಹಾಗೆಯೇ ಆಕೆಯ ತನುವಿನಲ್ಲಿ ವಸ್ತ್ರ ಹೊಸ ಹೊಸದಾಗಿ ಕಾಣಿಸಿಕೊಂಡಿತು. ಬಳಿಕ ಮೆಲ್ಲಮೆಲ್ಲನೆ ದುಶ್ಶಾಸನನು ಶ್ರಾಂತನಾಗಿ ನಿವೃತ್ತಿಹೊಂದಲು…. ಭೂಮಿಪಾಲರಿಂದ ಧಿಕ್ ಶಬ್ದವು ಕೇಳಲ್ಪಟ್ಟಿತು.’

ಭಾರತಮಂಜರೀ, ಸಭಾಪರ್ವ, ದ್ಯೂತಂ, ಪು. ೧೪೫-೪೬, ಪಂ. ೪೦೧-೪೧೨ ಸಂಪಾದಕರು: ಮಹಾಮಹೋಪಾಧ್ಯಾಯ ಪಂಡಿತ ಶಿವದತ್ತ ಮತ್ತು ಕಾಶೀನಾಥ ಪಾಂಡುರಂಗ ಪರಬ್.

[22] ಕೊನ್ನಿ ಪ್ರತುಲೋನುನ್ನ ಯಧಿಕ ಪದ್ಯಮು:

“ಏನಿಂಕಸೇಮಿಸುಯುದುಮೀ ನಿರ‍್ದ ಯುವಂತಕನುಚು ಹೃದಯಮದರಸಮ್ಮಾನಿನಿವಣ ಕುಚು ಕೃಷ್ಣ ದಯಾನಿಧಿ, ಗೋವಿಂದ ಕಾವುಮನು ಚುನ್ನತನ್”

(೨೩೦ ನೆಯ ಪದ್ಯದ ತರುವಾಯ)

ಶ್ರೀಮದಾಂಧ್ರ ಮಹಾಭಾರತಮು: (ಪು. ೩೧೭. ಅಡಿಟಿಪ್ಪಣಿ)

[23] “…ಮರು ಮಲರ್ ಮೆನ್ ಕುಳನ್ ಮಾನಿನ್ ಮನನುಡುಂಗಾವಗೈ ಮನತ್ತೇವಂದು ತೋನ್ರಿ| ಕರಿಯ ಮುಗಿಲ್ ಅನಯಾನುಂ ಪಿರರ್ ಎವರ‍್ಕುಂ ತೆರಿಯಾಮಲ್ ಕರುಣೈ ಸೆಯಿದಾನ್” -ವಿಲ್ಲಿಪುತ್ತೂರ್ ಅವರ‍್ಗಳ್ ಭಾರತಂ. ಸಭಾಪರ್ವ, ಪಂ. ೨೪೮.

ಸಂ. ವಿ. ಎಂ. ಗೋಪಾಲಕೃಷ್ಣಮಾಚಾರ್ಯ.

ಶ್ರೀ ವಿಲ್ಲಿಪುತ್ತೂರ್ ಅವರ ಕಾಲ ಸುಮಾರು ೧೪೩೦ ಎಂದು ಪಂಡಿತರ ಮತ. ನಾರಣಪ್ಪನ ಕಾಲವೂ ಸುಮಾರು ೧೪೦೦ ಎಂದು ಅಂಗೀಕೃತವಾಗಿದೆ. ಹೆಚ್ಚೂ ಕಡಿಮೆ ಈ ಎರಡು ಭಾರತಗಳ ರಚನೆಯ ಕಾಲವೂ ಸಮಕಾಲೀನವಿರಬಹುದೆಂಬ ಊಹೆಗೆ ಅವಕಾಶವಿದೆ. ಕಾಲದಲ್ಲಿ ಒಂದು ವೇಳೆ ವ್ಯತ್ಯಾಸವಿದ್ದರೂ ಕವಿ ಮನೋಧರ್ಮ ಮಾತ್ರ ಒಂದೇ ಎಂಬಂತಿದೆ- ಕೃಷ್ಣಭಕ್ತಿಯ ವಿಚಾರದಲ್ಲಿ. ನಾರಣಪ್ಪ ಶ್ರೀ ಕೃಷ್ಣನ ಮಹಿಮೆಯ ಪ್ರಕಾಶನಕ್ಕೆಂದೇ ಕಾವ್ಯವನ್ನು ಬರೆದಂತೆ ತೋರಿದರೆ,

ಶ್ರೀ ವಿಲ್ಲಿಪುತ್ತೂರ್ ಅವರೂ “ಮಾಧವನ ಚರಿತ್ರೆ ಮಧ್ಯೆ ಮಧ್ಯೆ ಬರುತ್ತದೆ ಎನ್ನುವ ಆಸೆಯಿಂದ ನಾನು ಇದನ್ನು ಬರೆಯಲು ಮೊದಲು ಮಾಡಿದೆನು” -ಎನ್ನುತ್ತಾರೆ. ದ್ರೌಪದೀ ವಸ್ತ್ರಾಪಹರಣ ಪ್ರಸಂಗವಂತೂ ಅಲ್ಪ ಸ್ವಲ್ಪ ವ್ಯತ್ಯಾಸಗಳ ಹೊರತು ಬಲು ಮಟ್ಟಿಗೆ ಕುಮಾರವ್ಯಾಸನ ಭಾರತಲ್ಲಿಯಂತೆಯೇ ಬರುತ್ತದೆ.

[24] ಇನ್ನು ಹಲವು ಪಾಠಗಳು ಹೀಗಿವೆ:

೫೪೫:  ಸಾ ತತ್ಕಾಲೇ ತು ಗೋವಿಂದೇ ವಿನಿವೇಶಿತ ಮಾನಸಾ
ತ್ರಾಹಿ ಮಾಂ ಕೃಷ್ಣ ಕೃಷ್ಣೇತಿ ದುಃಖಾದೇತದುದಾಹೃತಮ್

[ಆ ಕಾಲದಲ್ಲಿ ದ್ರೌಪದಿಯು ಗೋವಿಂದನಲ್ಲಿರಿಸಲ್ಪಟ್ಟ ಮನಸ್ಸುಳ್ಳವಳಾಗಿ ಕೃಷ್ಣ, ಕೃಷ್ಣ ಕಾಪಾಡು ಎಂದು ಹೇಳಿದಳು.

೫೪೬ :  ತ್ವಯಾ ಸಿಂಹೇನ ನಾಥೇನ ರಕ್ಷಮಾಣಾಮನಾಥವತ್||
ಚಕರ್ಷ ವಸನಂ ಪಾಪಃ ಕುರೂಣಾಂ ಸನ್ನಿಧೌ ಮಮ

[ಸಿಂಹಸದೃಶನಾದ ನಾಥನಾದ ನಿನ್ನಿಂದ ರಕ್ಷಿಸಲ್ಪಡತಕ್ಕವಳಾದ ನನ್ನ ವಸ್ತ್ರವನ್ನು  ಪಾಪಿಯು ಕುರುಗಳ ಸನ್ನಿಧಿಯಲ್ಲಿ ಸೆಳೆದನು.]

೫೪೭ :  ಆಕೃಷ್ಯಮಾಣೇ ವಿಲಲಾಪ ಸುದುಃಖಿತಾ
ಗೋವಿಂದೇತಿ ಸಮಾಭಾಷ್ಯ ಕೃಷ್ಣೇತಿಚ ಪುನಃ ಪುನಃ|
ಶಂಖಚಕ್ರಗದಾಪಾಣೇ ದ್ವಾರಕಾನಿ ಯಾಚ್ಯುತ
ಗೋವಿಂದ ಪುಂಡರೀಕಾಕ್ಷ ರಕ್ಷಮಾಂ ಶರಣಾಗತಾಮ್||

[ವಸನವನ್ನೆಳೆಯಲ್ಪಟ್ಟ ಆ ದ್ರೌಪದಿಯು ಸುದುಃಖಿತಳಾಗಿ, ಶಂಖಚಕ್ರಗದಾಪಾಣಿಯೇ, ಗೋವಿಂದ, ಇತ್ಯಾದಿಯಾಗಿ ಪುನಃ ಪುನಃ ತನ್ನನ್ನು ಕಾಪಾಡಬೇಕೆಂದು ಪ್ರಾರ್ಥಿಸಿದಳು.]

೫೪೯ :  ಮನಸಾ ಚಿಂತಯಾಮಾಸ ದೇವಂ ನಾರಾಯಣಂ ಪ್ರಭುಂ|
ಆಪತ್ಸ್ವಭಯದಂ ಕೃಷ್ಣ ಲೋಕಾನಾಂ ಪ್ರಪಿತಾಮಹಂ||

[ಆಪತ್ತಿನಲ್ಲಿ ಅಭಯವನ್ನು ನೀಡುವಂಥಾ, ಲೋಕಕ್ಕೆ ಪ್ರಪಿತಾಮಹನಾದ ನಾರಾಯಣನನ್ನು ಮನಸ್ಸಿನಲ್ಲಿ ಚಿಂತಿಸಿದಳು.]

೫೫೦: ಹಾ ಕೃಷ್ಣ ದ್ವಾರಕಾವಾಸಿನ್ ಕ್ವಾಸಿ ಯಾದವನಂದನ|
ಇಮಾಮವಸ್ಥಾಂ ಸಂಪ್ರಾಪ್ತಾಮನಾಥಾಂ ಕಿಮುಪೇಕ್ಷ್ಯಸೇ||

[ಹಾ ಕೃಷ್ಣ, ದ್ವಾರಕಾವಾಸಿ, ಯದುನಂದನ ಎಲ್ಲಿರುವೆ. ನನಗೆ ಇಂಥಾ ಅವಸ್ಥೆ ಪ್ರಾಪ್ತವಾಯಿತು, ಏಕೆ ಉಪೇಕ್ಷಿಸುವೆ?]

[25] ವಸ್ತ್ರಾಪಹರಣ ಪ್ರಸಂಗದಲ್ಲಿ, ದ್ರೌಪದಿಯ ಪ್ರಾರ್ಥನೆಯ ಹಾಗೂ ಕೃಷ್ಣನು ಕೃಪೆ ಮಾಡಿದ ಪ್ರಕ್ಷೇಪ ಭಾಗಗಳಿಗೂ, ಕನ್ನಡ ಭಾರತದಲ್ಲಿ ಈ ವಿಷಯವನ್ನು ಕುರಿತ ಭಾಗಗಳಿಗೂ ಯಾವ ಸಂಬಂಧವೂ ಇಲ್ಲದಿರುವುದು ಬಹು ಸ್ವಾರಸ್ಯವಾದ ಸಂಗತಿ. “ಕೃಷ್ಣನು ದ್ವಾರಕೆಯಲ್ಲಿ ಮಲಗಿದ್ದನು, ದ್ರೌಪದಿಯ ಕರೆಯನ್ನಾಲಿಸಿ ಕಳವಳದಿಂದ ದಯಮಾಡಿಸಿ ಕೃಪೆಮಾಡಿದನು” ಎಂದು ಸಂಸ್ಕೃತ ಭಾರತದ ಪ್ರಕ್ಷೇಪಗಳು ಹೇಳಿದರೆ, “ಕೃಷ್ಣನು ರುಕ್ಮಿಣಿ ಸತ್ಯಭಾಮೆಯರೊಂದಿಗೆ ಲೆತ್ತವಾಡುತ್ತಿದ್ದನೆಂದೂ, ದ್ರೌಪದಿಯ ಹುಯ್ಯಲನ್ನು ಕೇಳಿ, ಕುಳಿತಲ್ಲಿಂದಲೇ ಸೀರೆ ಅಕ್ಷಯವಾಗಲೆಂದನೆಂದೂ” -ಕುಮಾರವ್ಯಾಸನು ಹೇಳುತ್ತಾನೆ. ಈ ಎರಡೂ ಒಂದಕ್ಕೊಂದಕ್ಕೆ ಸಂಬಂಧವಿಲ್ಲದ ಪ್ರತ್ಯೇಕ ಕಥನಗಳು. ಬಹುಶಃ ಈ ಭಾಗ ಕುಮಾರವ್ಯಾಸನ  ಸ್ವಂತ ಸೃಷ್ಟಿಯೇ ಇರಬೇಕೆನ್ನಲು ಅಡ್ಡಿಯಿಲ್ಲ. ಆದರೆ ಮೂಲಭಾರತದ ಮತ್ತೊಂದು ಪಾಠದಲ್ಲಿ “ಧರ್ಮರೂಪಿಯಾದ ಮಹಾತ್ಮನಾದ ಆ ಕೃಷ್ಣನು ಅದೃಶ್ಯನಾಗಿದ್ದುಕೊಂಡು ದ್ರೌಪದಿಯನ್ನು ವಿವಿಧ ವಸ್ತ್ರಗಳಿಂದ ಮುಚ್ಚಿದನು. [೫೪೪]” ಎಂಬ ಮಾತು, “ನೀಲಮೇಘಶ್ಯಾಮನು ದ್ರೌಪದಿಯ ಮನಸ್ಸಿನಲ್ಲೇ ಕಾಣಿಸಿಕೊಂಡು, ಇತರರಿಗೆ ಅದೃಶ್ಯನಾಗಿ ಕರುಣೆ ಮಾಡಿದನು” -ಎನ್ನುವ ವಿಲ್ಲಿಪುತ್ತೂರ್ ಅವರ ಭಾರತದ ಪಾಠದೊಂದಿಗೆ ಬಹುಮಟ್ಟಿಗೆ ಹೊಂದಿಕೊಳ್ಳುವುದು ಗಮನಿಸಬೇಕಾದ ಸಂಗತಿ. ವಿಲ್ಲಿಪುತ್ತೂರ್ ಅವರಲ್ಲಿ, ಕೃಷ್ಣನು ಅದೃಶ್ಯನಾಗಿದ್ದುದು ಉಳಿದವರ ಪಾಲಿಗೆ, ದ್ರೌಪದಿಯ ಪಾಲಿಗಲ್ಲ ಎಂದು ವಿವರಣೆಯಿದೆ. ಮೂಲಭಾರತದ ಪ್ರಕ್ಷಿಪ್ತ ಪಾಠದಿಂದ, ವಿಲ್ಲಿಪುತ್ತೂರ್ ಅವರ ಪಾಠ ಪ್ರಭಾವಿತವಾಯಿತೋ, ಅಥವಾ ವಿಲ್ಲಿಪುತ್ತೂರ್ ಅವರ ಪಾಠದಿಂದ, ಮೂಲಪಾಠದ ಮೇಲೆ ಪ್ರಭಾವ ಬಿತ್ತೋ ಸಾಧಿಸುವುದು ಕಷ್ಟ. ನಾರಣಪ್ಪನಲ್ಲಿ ಬರುವ ಕೃಷ್ಣಸ್ತುತಿಯೂ ಹಾಗೂ ಕೃಷ್ಣನ ಕೃಪೆಯ ಪ್ರಸಂಗವೂ ನಾರಣಪ್ಪನದೇ ಸ್ವಂತ ಸೃಷ್ಟಿ- ಎನ್ನಿಸುತ್ತದೆ.

[26] “ಅನೇಕ ವರ್ಣಗಳುಳ್ಳ ಸಾವಿರಾರು ಹೊಸ ವಸ್ತ್ರಗಳು ಬೆಳೆದುವು” -ಎಂಬ ಮಾತು ವಿಲ್ಲಿಪುತ್ತೂರ್ ಅವರ ತಮಿಳುಭಾರತದ ಈ ಸಂದರ್ಭದ ಭಾಗದಲ್ಲಿ ಬಂದಿರುವುದೂ ಗಮನಾರ್ಹವಾಗಿದೆ.

[27] Sukthankar Memorial Edition: Edited by P.K Gode, Vol-I, Critical studies in Mahabharatha. V.S. Sukthankar: Prolegamena, Page 126,127,128.

[28] ಅದೇ.