-೪-

ದ್ರೌಪದೀ ವಸ್ತ್ರಾಪಹರಣ ಸಂದರ್ಭದಲ್ಲಿ, ಶ್ರೀಕೃಷ್ಣನ ಕೃಪೆ ಅಕ್ಷಯ ವಸ್ತ್ರವನ್ನು ಕರುಣಿಸಿದ ಈ ಪ್ರಸಂಗ, ವಾಸ್ತವವಾಗಿ ಪ್ರಕ್ಷೇಪಕಾರರ ಕೈವಾಡ ಎನ್ನುವುದನ್ನು ಆಯಾ ಪ್ರಕ್ಷೇಪಗಳೇ ಬಿಚ್ಚಿ ತೋರಿಸುತ್ತವೆ. ಇದರ ಜೊತೆಗೆ ಮಹಾಭಾರತದಲ್ಲಿಬೇರೆ ಬೇರೆಯ ಕಡೆಗಳಲ್ಲಿ ಈ ಪ್ರಸಂಗವನ್ನು ಹೆಸರಿಸುವ ಹಲವು ಸಂದರ್ಭಗಳೂ, ಕೃಷ್ಣನ ಕೃಪೆಯ ಬಗೆಗೆ, ಅದು ಕೇವಲ ಪ್ರಕ್ಷಿಪ್ತವೆಂಬ ವಿಷಯವನ್ನೇ ದೃಢಪಡಿಸುತ್ತವೆ. ಉದಾಹರಣೆಗೆ ಅರಣ್ಯಪರ್ವದ ಈ ಪ್ರಸಂಗವೇ ಸಾಕ್ಷಿ: ಪಾಂಡವರು ಅನುದ್ಯೂತದಲ್ಲಿ ಸೋತು, ತಮ್ಮ ರಾಜ್ಯಕೋಶಗಳನ್ನು ಕೌರವರಿಗೆ ತೆತ್ತು, ಹನ್ನೆರಡುವರ್ಷ ವನವಾಸದ ಹಾಗೂ ಒಂದು ವರ್ಷ ಅಜ್ಞಾತವಾಸದ ನಿಯಮವನ್ನು ಒಪ್ಪಿಕೊಂಡು ಅರಣ್ಯವನ್ನು ಪ್ರವೇಶಿಸಿದ ಮೊದಲ ದಿನಗಳಲ್ಲಿಯೇ, ಕೃಷ್ಣನು ಕಾಡುಪಾಲಾದ ಪಾಂಡವರ ದುರವಸ್ಥೆಯ ಸುದ್ದಿಯನ್ನು ಕೇಳಿ, ಅವರಿದ್ದಲ್ಲಿಗೆ ಬಂದು ಅವರ ಪಾಡಿಗಾಗಿ ವಿಷಾದಿಸುತ್ತಾನೆ. ಆಗ ದ್ರೌಪದಿ ತುಂಬಿದ ಸಭೆಯಲ್ಲಿ, ರಜಸ್ವಲೆಯೂ ಏಕವಸ್ತ್ರೆಯೂ ಆದ ತನ್ನನ್ನು ದುಶ್ಯಾಸನನು ಎಳೆದಾಡಿದ ಪರಿಯನ್ನು ಕೃಷ್ಣನ ಮುಂದೆ ತೋಡಿಕೊಳ್ಳುತ್ತಾಳೆ.[1] ಆದರೆ ಆ ಸಂದರ್ಭದಲ್ಲಿ ತನ್ನ ಸೀರೆ ಅಕ್ಷಯವಾಗಿ ಅದ್ಭುತವೊಂದು ನಡೆದು ತನ್ನ ಮಾನ ಉಳಿಯಿತೆಂದಾಗಲಿ, ಶ್ರೀಕೃಷ್ಣನ ಕೃಪೆ ತನಗೆ ಒದಗಿತೆಂದಾಗಲಿ ಹೇಳುವುದೇ ಇಲ್ಲ! ಒಂದು ವೇಳೆ ಕೃಷ್ಣನ ಕೃಪೆಯಿಂದ ಅವಳಿಗೆ ಅಕ್ಷಯವಸ್ತ್ರ ಪ್ರಾಪ್ತಿಯಾಗಿದ್ದಲ್ಲಿ, ಇಲ್ಲಿ ದ್ರೌಪದಿ ಕೃಷ್ಣನನ್ನು ಕಂಡ ಒಡನೆಯೇ ತನ್ನ ಮಾನಸಂರಕ್ಷಣೆ ಮಾಡಿದ ಈ ಮಹಾನುಭಾವನಿಗೆ ತನ್ನ ಕೃತಜ್ಞತೆಗಳನ್ನು ಸಮರ್ಪಿಸದೆ ಇರುತ್ತಿದ್ದಳೆ? ಅಂಥದೊಂದು ದುರ್ಘಟನೆ ನಡೆದ ಹೊಸತರಲ್ಲೇ, ಕೃಷ್ಣನನ್ನು ಕಂಡಾಗ ದ್ರೌಪದಿ ಇಂಥ ಒಂದು ಉಪಕಾರ ಸ್ಮರಣೆಯ ಮಾತನ್ನು ಹೇಳದೆ ಬಿಟ್ಟಳೆಂದರೆ, ಮಹಾಕವಿಯೊಬ್ಬ ಮನುಷ್ಯಸಹಜವಾದ, ಬಹುಮುಖ್ಯವಾದ ನಡವಳಿಕೆಯೊಂದನ್ನು ಬೇಕೆಂದೇ ಕೈಬಿಟ್ಟಂತೆ ತೋರುವುದಲ್ಲವೆ? ಆದರೆ ಪರಿಸ್ಥಿತಿ ಅದಲ್ಲವೆಂಬುದು, ದ್ರೌಪದಿಯ ಅಳಲನ್ನು ಕೇಳಿ ವ್ಯಥೆಗೊಂಡ ಕೃಷ್ಣನು ಹೇಳುವ ಮಾತಿನಲ್ಲೇ ಸ್ಪಷ್ಟವಾಗಿದೆ. ಕೃಷ್ಣನು ಆಗ ಧರ್ಮರಾಯನನ್ನು ಕುರಿತು “ಮಹಾರಾಜ, ಆ ಕಾಲದಲ್ಲಿ ನಾನು ದ್ವಾರಕೆಯಲ್ಲಿದ್ದಿದ್ದರೆ ನನ್ನನ್ನು ಕರೆಯದಿದ್ದರೂ ಜೂಜು ನಡೆಯುವ ಸ್ಥಳಕ್ಕೆ ಬಂದು, ಅದನ್ನು ತಪ್ಪಿಸುತ್ತಿದ್ದೆ….. ಆದರೆ ಏನು ಮಾಡುವುದು? ಆಗಲೇ ನಾನು ಶಾಲ್ವನ ಊರಾದ ಸೌಭನಗರವನ್ನು ನಾಶಪಡಿಸಲು ಹೋಗಿದ್ದೆ”[2] ಎನ್ನುತ್ತಾನೆ. ಇತ್ತ ಪಾಂಡವರು ಸೋತು, ದ್ರೌಪದಿಯ ವಸ್ತ್ರಾಪಹರಣ ನಡೆದ ಕಾಲಕ್ಕೆ ಕೃಷ್ಣನು ದ್ವಾರಕೆಯಲ್ಲಿ ತಾನು ಇರಲೇ ಇಲ್ಲವೆಂದು, ಈ ಬಗ್ಗೆ ತನಗೇನೂ ತಿಳಿದಿರಲಿಲ್ಲವೆಂದು ಕೃಷ್ಣನೇ ಬಾಯಿ ಬಿಟ್ಟು ಹೇಳಿದ ಮೇಲೆ, ನಮ್ಮ ಪ್ರಕ್ಷೇಪಕಾರರು ವರ್ಣಿಸುವಂತೆ ‘ಕೃಷ್ಣನು ದ್ರೌಪದಿಯ ಕರೆಯನ್ನು ಕೇಳಿ ಕಳವಳಗೊಂಡು ಶಯ್ಯಾಸನದಿಂದ ಎದ್ದು ದ್ರೌಪದಿಯ ಮಾನರಕ್ಷಣೆಗೆ ದಯಮಾಡಿಸಿದನು’- ಎಂಬ ಮಾತೇ ನಿಲ್ಲುವುದಿಲ್ಲ! ಮತ್ತೊಮ್ಮೆ ಉದ್ಯೋಗಪರ್ವದಲ್ಲಿ ಸಂಧಾನಕ್ಕೆ ಹೊರಟ ಕೃಷ್ಣನನ್ನು ಕುರಿತು, ದ್ರೌಪದಿಯು ಹಿಂದಿನ ಪರಾಭವಗಳನ್ನು ನೆನೆಯುತ್ತಾ, ಕೌರವರ ಸಭೆಯಲ್ಲಿ ದುಶ್ಶಾಸನನ ವರ್ತನೆಯನ್ನು ಕಂಡು ಪಾಂಡವರು ಸುಮ್ಮನಿದ್ದಾಗ “ಗೋವಿಂದಾ ನನ್ನನ್ನು ಕಾಪಾಡು” ಎಂದು ತಾನು ಮನಸ್ಸಿನಲ್ಲೇ ಪ್ರಾರ್ಥಿಸಿದುದಾಗಿ ಹೇಳುತ್ತಾಳೆ.[3] ಆದರೆ ಅಲ್ಲಿಯೂ ಕೃಷ್ಣನ ಕೃಪೆಯಿಂದ ವಸ್ತ್ರ ಅಕ್ಷಯವಾಗಿ ಮಾನ ಉಳಿದ ಸಮಾಚಾರವನ್ನು ಹೇಳದೆ ‘ಭಗವಾನ್ ರಾಜ’ನಾದ ಧೃತರಾಷ್ಟ್ರನಿಂದ ತಾವು ದಾಸ್ಯವಿಮೋಚನೆ ಪಡೆದುದನ್ನೇ ಹೇಳುತ್ತಾಳೆ. ಹೀಗೆ ಎಲ್ಲೆಲ್ಲಿ ಈ ಪ್ರಸಂಗದ ವಿಷಯ ಬರುವುದೋ ಅಲ್ಲೆಲ್ಲಾ, ದ್ರೌಪದಿಯಿಂದ ಹಾಗೂ ಕೃಷ್ಣನಿಂದ ಈ ಬಗ್ಗೆ ಪರವಾದ ಅಥವಾ ಸಮರ್ಥನೀಯವಾದ ಯಾವ ಒಂದು ಮಾತೂ ಬಾರದಿರುವುದು ಈ ವಿಷಯದಲ್ಲಿ ನಮ್ಮ ನಿರ್ಧಾರವನ್ನೇ ಖಚಿತಗೊಳಿಸುತ್ತದೆ. ಇದರ ಜೊತೆಗೆ ನನ್ನಯ್ಯನ ಕಾಲದತನಕ, ಎಂದರೆ ಹನ್ನೊಂದನೆಯ ಶತಮಾನದ ತನಕ, ಸಂಸ್ಕೃತ ಹಾಗೂ ಕನ್ನಡದಲ್ಲಿ ಮಹಾಭಾರತದಿಂದ ವಸ್ತುವನ್ನು ತೆಗೆದುಕೊಂಡು ರಚಿತವಾದ ಯಾವ ಕೃತಿಗಳಲ್ಲಿಯೂ ಕೃಷ್ಣನ ಕೃಪೆಯ ಪ್ರಸಂಗವೇ ಕಂಡುಬಾರದಿರುವುದು ಸ್ವಾರಸ್ಯವಾದ ಸಂಗತಿ. ಹನ್ನೊಂದನೆಯ ಶತಮಾನದ ನಂತರ, ಬಹುಶಃ ಜೈನ ಕವಿಗಳ ಪ್ರಾಬಲ್ಯದ ಕಾಲ ಮುಗಿದ ನಂತರ, ಶೈವ- ವೈಷ್ಣವ ಮತಗಳ ಭಕ್ತಿಯ ಹೊನಲು ಕನ್ನಡ ನಾಡಿನಲ್ಲಿ ತುಂಬಿ ಬಂದ ಕಾಲದಲ್ಲಿ, ಕೃಷ್ಣನನ್ನು ಭಗವದವತಾರವೆಂದು ಒಪ್ಪಿಕೊಂಡ ಪಂಥದವರು, ಕೃಷ್ಣನ  ಮಹಿಮೆಯನ್ನು ಸಾರಲು ಇಂಥದೊಂದು ಪ್ರಸಂಗವನ್ನು ಮೂಲಭಾರತದ ಕಥೆಗೆ ಹೊಂದಿಕೊಳ್ಳುವಂತೆ ಸೃಷ್ಟಿಸಿ, ಹಿಂದೆ ಹೇಳಿದಂಥ ಪ್ರಕ್ಷೇಪಗಳ ರಚನೆಗೆ ಪ್ರೇರಣೆಯನ್ನಿತ್ತಿರ ಬಹುದು. ಇಷ್ಟು ಹೊತ್ತಿಗೆ ಶ್ರೀಕೃಷ್ಣನನ್ನು ಕುರಿತ ಹಲವು ಭಾವನೆಗಳ ಸಮನ್ವಯವೂ ಇದಕ್ಕೆ ಕಾರಣವಾಗಿರಬಹುದು. ಏಕೆಂದರೆ ಮಹಾಭಾರತದಲ್ಲಿ ನಾವು ಕಾಣುವ ಕೃಷ್ಣ ಅಂದಿನ ಯುಗದ ಒಬ್ಬ ಪುರುಷಶ್ರೇಷ್ಠ. ಅಂತೆಯೇ ಭಾಗವತದಲ್ಲಿ ನಾವು ಕಾಣುವ ಕೃಷ್ಣ ಅವತಾರಪುರುಷ. ಮಹಾಭಾರತದ ಪರಮಪುರುಷನಾದ ಶ್ರೀಕೃಷ್ಣನಿಗೂ, ಭಾಗವತದ ಗೋಪೀಜನಪ್ರಿಯನಾದ ಪರಮಾತ್ಮ ಕೃಷ್ಣನಿಗೂ ಮೊದಮೊದಲು ಕೇವಲ ವಂಶ ಸಂಬಂಧವಷ್ಟೇ ಇದ್ದದ್ದು, ಕ್ರಮೇಣ ಅಂಶ ಅಂಶದಲ್ಲೂ ಸಂಬಂಧ ಉಂಟೆಂದು ಯಾವಾಗ ಜನಮನದಲ್ಲಿ ಸ್ಥಾಪಿತವಾಯಿತೋ, ಅಂಥ ಒಂದು ಭಾವನೆ[4] ನಾರಣಪ್ಪನ ಕಾಲಕ್ಕಾಗಲೆ ಪ್ರಚಲಿತವಾಗಿ, ಕುಮಾರವ್ಯಾಸನ ಕವಿಪ್ರಜ್ಞೆಯಲ್ಲಿ ದರ್ಶನಸಿದ್ಧವಾದುದರಿಂದ, ಕುಮಾರವ್ಯಾಸ ಭಾರತದಲ್ಲಿ ಶ್ರೀ ಕೃಷ್ಣನ ಪವಾಡ ಸಹಜವಾಗಿ, ರಮ್ಯವಾಗಿ, ತಾನೇ ತಾನಾಗಿ ಮನವನ್ನು ಸೂರೆಗೊಳ್ಳುತ್ತದೆ.

-೫-

ದ್ರೌಪದೀ ವಸ್ತ್ರಾಪಹರಣದ ಪ್ರಸಂಗ ಬಹು ಸೂಕ್ಷ್ಮವಾದ ಹಾಗೂ ಅತ್ಯಂತ ತೊಡಕಾದ ಪ್ರಸಂಗ. ಎಂತಲೇ ಅದನ್ನು ಕುರಿತು ಸಾಕಷ್ಟು ಊಹಾಪೋಹಗಳೂ ಚರ್ಚೆಗಳೂ ನಡೆದಂತೆ ತೋರುತ್ತದೆ. ಪ್ರಕ್ಷೇಪಕಾರರಿಂದ ಹಿಡಿದು ವಿಮರ್ಶಕರ ತನಕ ಈ ಪ್ರಸಂಗಕ್ಕೆ ವಿವರಣೆಯ ನ್ನೊದಗಿಸುವ ಪ್ರಯತ್ನ ನಡೆದಂತೆ ತೋರುತ್ತದೆ. ಇತಿಹಾಸ ಪುರಾಣಗಳು ವೇದಾರ್ಥಗಳನ್ನು ಪ್ರತಿಮಾರೂಪದಲ್ಲಿ ಪ್ರಸಾರಮಾಡಲು ನಿರ್ಮಿತವಾದ ಸಾಧನಗಳು ಎಂದು ಭಾವಿಸುವ ವಿದ್ವಾಂಸರೊಬ್ಬರು, ದ್ರೌಪದೀ ವಸ್ತ್ರಾಪಹರಣ ಪ್ರಸಂಗದ ಪ್ರೇರಣೆ ಋಗ್ವೇದದ ಹತ್ತನೆಯ ಮಂಡಲದ ಮೂರನೇ ಅಧ್ಯಾಯದ ೩೩ನೇ ಸೂಕ್ತದಲ್ಲಿದೆ ಎನ್ನುತ್ತಾರೆ. ಹಾಗೆಯೇ ಪಂಚ ಪಾಂಡವರನ್ನು ಪಂಚಗ್ರಹಗಳಿಗೆ ಹೋಲಿಸಿ, “ಪಂಚಗ್ರಹಗಳು ಸೂರ್ಯಕಿರಣದಿಂದಲೇ ಪ್ರಕಾಶಿಸುತ್ತಾ ಸರ‍್ವದಾ ಸುತ್ತುತ್ತಿರುವರು. ಅವರೈದು ಜನಗಳಿಗೂ ಸೂರ್ಯಕಿರಣ ರೂಪವಾದ ದ್ರೌಪದಿಯೊಬ್ಬಳೇ ಪತ್ನೀರೂಪಳಾಗಿರುವಳು. ಈ ಪಂಚಗ್ರಹಗಳಿಗೆ ಪಂಚ ಜನಾಃ ಪಂಚಕ್ಷಿತಯಃ ಪಂಚವಿಪ್ರಾಃ ಪಂಚಋತ್ವಿಜಃ- ಎಂಬುದಾಗಿ ಅನೇಕ ನಾಮಗಳು ವೇದದಲ್ಲಿರುವುವು. ಗ್ರಹಗಳಿಗೆ ಕಿರಣವೇ ವಸ್ತ್ರವೆಂತಲೂ, ಕಿರಣ ಹಾನಿಯೇ ನಗ್ನತೆಯೆಂತಲೂ ವರ್ಣಿಸಲ್ಪಡುವುದು. ಖಗೋಲದಲ್ಲಿ ಗ್ರಹಗಳು ಸರ್ವದಾ ಸುತ್ತುತ್ತಿರುವುದೇ ಅವರು ಮಾಡುತ್ತಿರುವ ಜೂಜು. ಈ ಜೂಜಿಗೆ ಆಜಿ ಎಂದು ನಾಮಧೇಯವು. ಗ್ರಹಗಳಲ್ಲಿ ಚಂದ್ರ ಸೂರ್ಯರು ಗ್ರಹಣಕ್ಕೆ ಗುರಿಯಾಗುವರು. ಉಳಿದ ಐದು ಗ್ರಹಗಳು ಸೂರ್ಯಚಂದ್ರರಿಂದ ಅಸ್ತರಾಗುವರು. ಗ್ರಹಗಳು ಅಸ್ತರಾದಾಗ ಅವರು ಕಾಂತಿಹೀನರಾಗುವರು. ಆ ಸಮಯದಲ್ಲಿ ಅವರ ಪತ್ನಿಗೆ ನಗ್ನತೆ ಯುಂಟಾಯಿತೆಂದು ವೇದದಲ್ಲಿ ವರ್ಣನೆಯು ಕಂಡುಬರುವುದು. ಇಂತಹ  ನಗ್ನತೆಯು ಋಗ್ವೇದದ ಹತ್ತನೆಯ ಮಂಡಲದ ೩೩ನೇ ಸೂಕ್ತದಲ್ಲಿ ವರ್ಣಿಸಲ್ಪಟ್ಟಿರುವುದು. ಆ ವರ್ಣನೆಯು ದ್ರೌಪದೀ ವಸ್ತ್ರಾಪಹರಣದ ಕತೆಗೆ ಮೂಲವೆಂದು ತೋರುವುದು”[5] -ಎಂದು ಡಾ. ಶ್ಯಾಮ ಶಾಸ್ತ್ರಿಗಳು ಹೇಳುತ್ತಾರೆ. ಇಲ್ಲಿ ಋಗ್ವೇದದಲ್ಲಿ ಕಂಡುಬರುವ ಈ ಸೂಕ್ತದಲ್ಲಿ ಕವಷ ಸಂಜ್ಞನೆನ್ನುವವನು, ತ್ರಸದಸ್ಸುವಿನ ಪುತ್ರನೂ ಅತಿಶಯವಾಗಿ ದಾನ ಮಾಡುವವನೂ ಆದ ಕುರುಶ್ರವಣನೆಂಬ ರಾಜನಿಂದ ಋತ್ವಿಕ್ಕುಗಳಿಗಾಗಿ ಧನವನ್ನು ಯಾಚಿಸುವ ಪ್ರಸಂಗ ವರ್ಣಿತವಾಗಿದೆ. ಇಲ್ಲಿ ಬರುವ ಜನಾಃ, ದುಶ್ಯಾಸುಃ, ನಗ್ನತೆ, ಕುರುಶ್ರವಣರಾಜ- ಈ ಶಬ್ದಗಳು ಮಹಾಭಾರತದ ದ್ರೌಪದೀ ವಸ್ತ್ರಾಪಹರಣದ ಕಥಾಸೂಚಕಗಳಾಗಿರಬಹುದೆಂದು ಲೇಖಕರು ಊಹಿಸಿದ್ದಾರೆ. ಆದರೆ ಈ ಖಗೋಳ ವಿಜ್ಞಾನದ ವಿವರಣೆಯಿಂದ ವೇದದ ಈ ಋಕ್ಕಿಗೂ ದ್ರೌಪದೀ ವಸ್ತ್ರಾಪಹರಣಕ್ಕೂ ಸಂಬಂಧವಿರುವುದೋ ಇಲ್ಲವೋ ತಿಳಿಯದಾದರೂ, ಈ ಎರಡಕ್ಕೂ ಇರಬಹುದಾದ ಸಾದೃಶ್ಯಶ್ರೀಯನ್ನು ಗುರುತಿಸಿದ ಶ್ರೀ ಶಾಸ್ತ್ರಿಗಳ ಕಲ್ಪನೆ ಸುಂದರವಾಗಿದೆಯೆಂದು ಒಪ್ಪಬಹುದು. ಮಹಾಭಾರತ ಸಮಸ್ತಕ್ಕೂ ಒಂದು ಬಗೆಯ ತಾತ್ವಿಕ  ವಿವರಣೆಯನ್ನು ಕೊಡಲು ಹೊರಟು, ಮಹಾಭಾರತದ ಪ್ರತಿಯೊಂದು ಪಾತ್ರವೂ ಭರತಖಂಡದ ಮತಧರ್ಮಗಳ ಒಂದೊಂದು ತತ್ವಕ್ಕೆ ಪ್ರತಿಮೆ ಎಂದು ಭಾವಿಸಿ, ದ್ರೌಪದೀ ವಸ್ತ್ರಾಪಹರಣದ ಪ್ರಸಂಗ ‘ಯಜ್ಞ ಮತ್ತು ಭಗವದ್ಭಾವನೆ’ಯ ಪ್ರತಿಮೆ ಎಂದು ಶ್ರೀ ಎಸ್.ವಿ. ಥಾಡನಿಯವರು ಸಾಧಿಸಲು ಪ್ರಯತ್ನಪಟ್ಟಿದ್ದಾರೆ.[6] ರಾಮಾಯಣಕ್ಕೆ ಒಂದು ಆಧ್ಯಾತ್ಮಿಕ ವಿವರಣೆಯನ್ನು ಕೊಟ್ಟ ಆಧ್ಯಾತ್ಮ ರಾಮಾಯಣದಂತೆ, ಇದು ಮಹಾಭಾರತಕ್ಕೂ ಆಧ್ಯಾತ್ಮಿಕ ವಿವರಣೆಯನ್ನು ನೀಡುವ ಪ್ರಯತ್ನ. ಈ ಪ್ರಯತ್ನದಿಂದ ತಾತ್ವಿಕ ಜ್ಞಾನಕ್ಕೆ ಏನು ಲಾಭವಾಗಿದೆಯೋ ನಮಗೆ ತಿಳಿಯುವುದಿಲ್ಲವಾದರೂ, ಕಾವ್ಯವನ್ನೋದಿ ಅನಂದಿಸುವ ಸಹೃದಯರಿಗೆ ಇದು ಕೇವಲ ಚಮತ್ಕಾರ ಮಾತ್ರವೆಂದು ತೋರದೆ ಇರದು. ಇನ್ನು ಭಕ್ತಿಯ ದೃಷ್ಟಿಯಿಂದ ನೋಡುವುದಾದರೆ ವಸ್ತ್ರಾಪಹರಣ ಪ್ರಸಂಗ ಭಕ್ತನ ಶ್ರದ್ಧೆಯ ಕರೆಗೆ ಓಗೊಟ್ಟ ಭಗವಂತನ ಲೀಲೆಗಳಲ್ಲೊಂದಾಗಿ ತೋರುತ್ತದೆ. ಒಟ್ಟಿನಲ್ಲಿ ಈ ಪ್ರಸಂಗ ಇಷ್ಟೊಂದು ವಿವಿಧ ದೃಷ್ಟಿಯ ಜನರ ಗಮನವನ್ನು ಸೆಳೆದಿದೆ ಎನ್ನುವುದು ಗಮನಾರ್ಹವಾದ ಸಂಗತಿಯಾಗಿದೆ.

ಏನು ವಿವರಣೆ ಕೊಡಲು ಪ್ರಯತ್ನಿಸಿದರೂ ಈ ಸಂದರ್ಭದಲ್ಲಿ ಕಟುವಾದ ಸತ್ಯವೊಂದು ಹೀಗೆ ಈ ವಿವರಗಳ ಹಿಂದೆ ಮರೆಮಾಡಲ್ಪಟ್ಟಿದೆಯೇನೋ ಎಂಬ ಒಂದು ಶಂಕೆ ಮೂಡುತ್ತದೆ. ವಾಸ್ತವವಾಗಿ ದ್ರೌಪದಿಗೆ ವಸ್ತ್ರಾಪಹರಣವೇ ಆಗಿರಬೇಕು- ಎನ್ನುವುದೇ ಆ ಶಂಕೆ![7] ಆದರೆ ಮೂಲಭಾರತ ವಸ್ತ್ರ ಅಕ್ಷಯವಾಯಿತೆಂದು ಹೇಳಿ ಅದನ್ನು ಸುಮ್ಮನೆ ‘ಅದ್ಭುತತಮಂ’ ಎಂದು ವ್ಯಾಖ್ಯಾನಿಸುತ್ತದೆ. ಆದರೆ, ಏಕೆ ಭಾಸ, ಭಟ್ಟನಾರಾಯಣ, ರನ್ನ -ಈ ಕವಿಗಳು ವಸ್ತ್ರಾಪಹರಣವಾಯಿತೆಂದು ಒಕ್ಕೊರಲಿನಿಂದ ಹೇಳಿದರೂ, ಕೃಷ್ಣನ ಕೃಪೆಯನ್ನಾಗಲಿ, ಅದರಿಂದ ವಸ್ತ್ರ ಅಕ್ಷಯವಾದ ವಿಚಾರವನ್ನಾಗಲೀ, ಹೇಳಲಿಲ್ಲ? ಮೂಲಭಾರತದಲ್ಲೂ ಸಹ ಆ ಘಟನೆ ನಡೆದ ಮರುಕ್ಷಣವೇ, ವಸ್ತ್ರ ಅಕ್ಷಯವಾದ ಅದ್ಭುತವನ್ನು ಕುರಿತು ಅದೊಂದು ಭಗವತ್ಕೃಪೆ ಎಂಬಂತಹ ಯಾವ ಮಾತೂ ಕಾಣುವುದಿಲ್ಲ. ಮುಂದೆ ಮಹಾಭಾರತದಲ್ಲಿ, ಕವಿಯಾಗಲಿ, ಆತನ ಪಾತ್ರಗಳಾಗಲಿ ವಸ್ತ್ರ ಅಕ್ಷಯವಾದ ‘ಅದ್ಭುತ’ದ ಬಗೆಗೆ ಯಾವ ದೈವೀಕೃಪೆಯ ವಿಷಯವನ್ನೂ ಹೇಳುವುದಿಲ್ಲವಲ್ಲ? ಕೃಷ್ಣನ ಕೃಪೆಯೊಂದಿಗೆ ಹೊಂದಿಕೊಂಡ ‘ಅಕ್ಷಯವಸ್ತ್ರ’ದ ಅದ್ಭುತ, ಕೃಷ್ಣನ ಕೃಪೆಯಂತೆಯೇ ಪ್ರಕ್ಷಿಪ್ತವಿರಬಹುದಲ್ಲ? ಕೃಷ್ಣನ ಕೃಪೆ ಪ್ರಕ್ಷಿಪ್ತವೆಂದು ಅದನ್ನು ತೆಗೆದುಹಾಕಿದಂತೆ, ವಸ್ತ್ರ ಅಕ್ಷಯವಾದ ವಿಷಯವೂ ಪ್ರಕ್ಷಿಪ್ತವೆಂದು ತೆಗೆದುಹಾಕಿದರೆ, ವಸ್ತ್ರಾಪಹರಣವಾಯಿತೆಂದೇ ಹೇಳಬೇಕಲ್ಲ? ನಮ್ಮ ಮಟ್ಟಿಗೆ ಹೇಳುವುದಾದರೆ ಹಾಗೆ ಆಗಿದ್ದಿರಲೂಬಹುದು. ಆದರೆ ಹಾಗೆಂದು ಚಿತ್ರಿತವಾಗಿದ್ದಿದ್ದರೆ, ಭಾರತೀಯ ಸಹೃದಯರ ನೈತಿಕ ದೃಷ್ಟಿ ಸಹಿಸುವುದಾದರೂ ಹೇಗೆ? ಆದ್ದರಿಂದ ಅಕ್ಷಯವಸ್ತ್ರದ ಪ್ರಸಂಗ ಬಂದು ದ್ರೌಪದಿಯ ಮಾನವನ್ನು ಉಳಿಸಿತು. ಈ ಭಾಗ ಪ್ರಕ್ಷೇಪವಲ್ಲವೆಂದು ಪಾಠನಿರ್ಣಯಕಾರರು ಒಪ್ಪಿಕೊಳ್ಳುವಷ್ಟರಮಟ್ಟಿಗೆ ತನ್ನನ್ನು ತಾನು ಬೆಸೆದುಕೊಂಡಿತು. ಕೃಷ್ಣನ ಕೃಪೆಯ ಪ್ರಸಂಗ ಪ್ರಕ್ಷಿಪ್ತವೆಂದರೂ ತಡೆದೀತು; ಆದರೆ ಅಕ್ಷಯವಸ್ತ್ರದ ಪ್ರಸಂಗವೂ ಪ್ರಕ್ಷಿಪ್ತವೆಂದರೆ ತಡೆಯಲಾರದು ಭಾರತೀಯ ಸಹೃದಯಮತಿ. ಕೃಷ್ಣನ ಕೃಪೆ ಹೋದರೆ ಹೋಗಲಿ, ಸದ್ಯ ದ್ರೌಪದಿಯ ಮಾನ ಹೀಗಾದರೂ ಉಳಿದರೆ ಸಾಕು -ಎನ್ನಿಸಿರಬೇಕು. ಸರಿ; ದ್ರೌಪದಿಯ ಮಾನ ಉಳಿಯಿತು ವಸ್ತ್ರ ಅಕ್ಷಯವಾದದ್ದರಿಂದ. ಮಹಾಭಾರತ ಅದನ್ನು ‘ಅದ್ಭುತತಮಂ’ ಎಂದು ವ್ಯಾಖ್ಯಾನಿಸಿತು. ಹೀಗಾಗಿ ವಿಮರ್ಶಕರಿಗೆ ಎರಡೇ ದಾರಿ: ಇಡೀ ವಸ್ತ್ರಾಪಹರಣ ಪ್ರಸಂಗವೇ ಇರಲಿಲ್ಲ ಎನ್ನಬೇಕು; ಇತ್ತು ಎನ್ನುವುದಾದರೆ, ದ್ರೌಪದಿಯ ವಸ್ತ್ರ ಅಕ್ಷಯವಾಯಿತು ಎನ್ನಬೇಕು!

ಆದುದರಿಂದ ಈ ಸಮಸ್ಯೆಯ ಪರಿಶೀಲನೆಗೆ ಮೂರು ಮಾರ್ಗಗಳಿರುವಂತೆ ತೋರುತ್ತದೆ:

೧.   ವಸ್ತ್ರಾಪಹರಣ ಪ್ರಸಂಗ ವಾಸ್ತವವಾಗಿ ಇರಲೇ ಇಲ್ಲ; ಅದೇನಿದ್ದರೂ ಇತ್ತೀಚಿನವರ ಪ್ರಕ್ಷೇಪ.

೨.   ಅದು ಸಂಪೂರ್ಣ ಪ್ರಕ್ಷೇಪವಲ್ಲ: ಅದು ಮೊದಮೊದಲು ಇದ್ದ ರೂಪ ಬೇರೆ, ಕ್ರಮೇಣ ಮಾರ್ಪಾಡಾಗಿ ಈಗಿರುವ ರೂಪಕ್ಕೆ ಬಂದಿದೆ.

೩.   ವಸ್ತ್ರಾಪಹರಣ ಪ್ರಸಂಗವನ್ನು ಕವಿ ಚಿತ್ರಿಸಿರುವಂತೆಯೇ ಒಪ್ಪಿಕೊಂಡು ವಸ್ತುನಿಷ್ಠ ದೃಷ್ಟಿಯಿಂದ ಪರಿಶೀಲಿಸುವುದು.

ವಸ್ತ್ರಾಪಹರಣ ಪ್ರಸಂಗವೇ ಪ್ರಕ್ಷಿಪ್ತವೆಂದು ತಳ್ಳಿಹಾಕಲು ಆಧಾರವೇ ಇಲ್ಲ. ಏಕೆಂದರೆ ವಸ್ತ್ರಾಪಹರಣವಾಯಿತೆಂಬ ವಿಷಯಕ್ಕೆ, ಮಹಾಭಾರತವನ್ನು ಆಧಾರವನ್ನಾಗಿರಿಸಿ ರಚಿತವಾದ ಸಂಸ್ಕೃತ ಹಾಗೂ ಕನ್ನಡ ಕವಿಗಳ ಕೃತಿಗಳಲ್ಲಿ ಏಕಪ್ರಕಾರವಾಗಿ ಸಾಕಷ್ಟು ಸಾಕ್ಷ್ಯವಿದೆ. ಭಂಡಾರ್ಕರ್ ಸಂಶೋಧನ ಸಮಿತಿಯವರು ಪರಿಷ್ಕರಿಸಿ ಪ್ರಕಟಿಸಿರುವ ಭಾರತದಲ್ಲಿ ಇದು ಮೂಲಪಾಠವೇ ಇರಬೇಕೆಂದು ಅಂಗೀಕೃತವಾಗಿದೆ. ಈ ಕಾರಣದಿಂದ ವಸ್ತ್ರಾಪಹರಣ ಪ್ರಸಂಗವೇ ಇಡಿಯಾಗಿ ಪ್ರಕ್ಷಿಪ್ತವೆಂದು ಒಪ್ಪಲಾಗುವುದಿಲ್ಲ.

ಎರಡನೆಯ ಮತ: ಈ ಪ್ರಸಂಗ ಮೊದಲು ಇದ್ದ ರೂಪ ಬೇರೆ, ಅದರಲ್ಲಿ ಕಾಲ ಕಾಲಕ್ಕೆ ಮಾರ್ಪಾಡುಗಳಾಗಿ ಈಗ ಹೀಗಿರುವ ರೂಪಕ್ಕೆ ಬಂದಿದೆ ಎನ್ನುವುದು. ಶ್ರೀಯುತ ಕೆ. ವೆಂಕಟಾಚಲಂ ಐಯ್ಯರ್ ಅವರು ಈ ಬಗ್ಗೆ ಹೇಳುತ್ತಾ “ಪಾಂಡವರು ತಮ್ಮ ಉತ್ತರೀಯಗಳನ್ನು ತೆಗೆದೆಸೆದಾಗ, ಕೌರವನ ಪರವಾಗಿ ದುಶ್ಶಾಸನ ದ್ರೌಪದಿಯ ಅವಕುಂಠನವನ್ನು ಕಿತ್ತೆಸೆದಿರ ಬಹುದು. ಹೀಗೆಂದು ಮೊದಮೊದಲ ಮಹಾಭಾರತದ ಪ್ರತಿಗಳಲ್ಲಿದ್ದುದು ಬರಬರುತ್ತಾ  ವಸ್ತ್ರಾಪಹರಣದ ಪ್ರಸಂಗವಾಗಿ, ಅನಂತರ ಅದು ಅಕ್ಷಯವಾದ ಕತೆಯಾಗಿ, ಅದಾದಮೇಲೆ ಕೃಷ್ಣನ ಪವಾಡವಾಗಿ ಮಾರ್ಪಟ್ಟಿರಬಹುದು”[8] ಎನ್ನುತ್ತಾರೆ. ಇದಕ್ಕೆ ಸಮರ್ಥನೆಯಾಗಿ ಅವರು, “ದುಶ್ಶಾಸನನು ದ್ರೌಪದಿಯನ್ನು ಸಭೆಗೆ ಎಳೆದು ತಂದನೆನ್ನುವ ವಿಚಾರವೇ ಸಂಶಯಾಸ್ಪದವಾಗಿದೆ; ಅಂತೆಯೇ ಮುಂದೆ, ಅವಳು ಏಕವಸ್ತ್ರೆಯಾಗಿದ್ದಳು, ಅದಕ್ಕೆ ಕಾರಣ ಆಕೆ ರಜಸ್ವಲೆಯಾಗಿದ್ದಳು- ಎಂಬ ಅಂಶ, ಆಕೆಯ ಅವಕುಂಠನವನ್ನು ಸೆಳೆಯಲಿಲ್ಲ, ಸೆಳೆದದ್ದು ಉಟ್ಟ ಏಕವಸ್ತ್ರವನ್ನೇ- ಎಂಬ ವಿಷಯವನ್ನು ಸ್ಥಾಪಿಸಲು ಬಂದು ಸೇರಿಕೊಂಡ ಭಾಗ”[9] ಎನ್ನುತ್ತಾರೆ. ಆದರೆ ದ್ರೌಪದಿ ಉಟ್ಟದ್ದು ಏಕವಸ್ತ್ರವನ್ನೇ, ಆಕೆ ಅಂದು ರಜಸ್ವಲೆಯಾಗಿದ್ದಳು -ಎಂಬ ವಿಷಯ ಮಹಾಭಾರತದಲ್ಲೇ ಹಲವು ಸಲ ಬರುತ್ತದೆ. ಅಂತೆಯೇ ಪಂಪ ನಾರಣಪ್ಪ ಇವರಲ್ಲಿಯೂ  ಈ ವಿಷಯಕ್ಕೆ ಸಮರ್ಥನೆ ಇದೆ.[10] ಆದರೆ ದ್ರೌಪದಿಯನ್ನು ದುಶ್ಶಾಸನ ಸಭೆಗೆ ಎಳೆದುತಂದ ವಿಚಾರದ ಬಗೆಗೆ ಶ್ರೀ ಐಯ್ಯರ್ ಅವರು ವ್ಯಕ್ತಪಡಿಸಿರುವ ಸಂದೇಹ ಸಕಾರಣವಾಗಿದೆ. ಏಕೆಂದರೆ ಮೂಲಭಾರತದ ಈ ಪ್ರಸಂಗದಲ್ಲೆ ಎರಡು ಬೇರೆ ಬೇರೆ ಪಾಠಗಳ ಜೋಡಣೆ ಇರುವಂತೆ ತೋರುತ್ತದೆ. ಒಂದರಲ್ಲಿ, ಮೊದಲು ಪ್ರಾತಿಕಾಮಿಯನ್ನು ಕೌರವ ದ್ರೌಪದಿಯನ್ನು ಕರೆತರಲು ಕಳುಹಿಸುತ್ತಾನೆ; ಆದರೆ ದ್ರೌಪದಿ ತಾನು ಬರಲೊಪ್ಪದೆ, ಧರ್ಮರಾಯನು ತನ್ನನ್ನು ತಾನೆ ಮೊದಲು ಸೋತು ಅನಂತರ ತನ್ನನ್ನು (ದ್ರೌಪದಿಯನ್ನು) ಸೋತುದು ಹೇಗೆ ಎಂಬ ಪ್ರಶ್ನೆಯನ್ನು ಹೇಳಿ ಕಳುಹಿಸುತ್ತಾಳೆ. ಪ್ರಾತಿಕಾಮಿಯ ಪ್ರಯತ್ನ ಮತ್ತೂ ಒಂದು ಸಲ ಸಫಲವಾಗದಿದ್ದಾಗ, ಯುಧಿಷ್ಠಿರನು ದ್ರೌಪದಿಗೆ ಸಮ್ಮತನಾದ ದೂತನೊಬ್ಬನನ್ನು ಕಳುಹಿಸಿದನು; ಆಗ ದ್ರೌಪದಿ ಸಭೆಗೆ ಬಂದಳು- ಎಂದಿದೆ. ಅದಾದನಂತರ,  ಮತ್ತೆ ದುರ‍್ಯೋಧನ ಪ್ರಾತಿಕಾಮಿಯನ್ನು ಕುರಿತು ‘ದ್ರೌಪದಿಯನ್ನು ಎಳೆದು ತಂದು ನಿಲ್ಲಿಸು’ ಎಂದು ಹೇಳಿದ ಹಾಗೂ [೨-೬೦-೧೬], ಆ ಕಾರ‍್ಯಕ್ಕೆ ಪ್ರಾತಿಕಾಮಿ ಹಿಂಜರಿದಾಗ ದುರ‍್ಯೋಧನ ದ್ರೌಪದಿಯನ್ನೆಳೆದುತರಲು ತಮ್ಮನಿಗೆ ಆಜ್ಞಾಪಿಸಿದ ಹಾಗೂ [೨-೬೧-೧೬], ಅನಂತರ ದುಶ್ಶಾಸನನು ಅವಳನ್ನು ಹಿಡಿದು ಎಳೆದುತಂದಂತೆಯೂ- ಇನ್ನೊಂದು ಪಾಠವಿದೆ.[11] ಈ ಬಗ್ಗೆ  ಎಜರ್‌ಟನ್ ಅವರು ಹೇಳುತ್ತಾ “ಸ್ಪಷ್ಟವಾಗಿ ಇಲ್ಲಿ ಎರಡು ಪಾಠಗಳಿವೆ… ಬಹುಶಃ ಮೂಲ ಕರ್ತೃವೇ, ನಮಗೆ ದೊರೆತಿರುವ ಎಲ್ಲಾ ಪ್ರತಿಗಳಲ್ಲಿಯೂ ದೊರೆಯುವ ಈ ಎರಡು ಭಾಗಗಳನ್ನು ಸೇರಿಸಲು ಪ್ರಯತ್ನಿಸಿದ್ದಾನೆ. ಆದರೆ ಈ ಪ್ರಯತ್ನ ಅಷ್ಟೇನೂ ಯಶಸ್ವಿಯಾಗಿಲ್ಲ”[12] -ಎನ್ನುತ್ತಾರೆ. ಆದರೆ ಪಂಪ, ನನ್ನಯ್ಯ, ನಾರಣಪ್ಪ ಇವರಲ್ಲಿ ಈ ಎರಡು ಭಾಗಗಳ ಯಶಸ್ವಿಯಾದ ಸಂಯೋಜನೆ ನಡೆದಿದೆ.[13] ಮೂಲಭಾರತದಲ್ಲಂತೂ ಈ ವಿಷಯ ಸಂದೇಹಾಸ್ಪದವಾಗಿದೆ. ಆದರೆ, ದ್ರೌಪದಿ ತಾನಾಗಿಯೇ ಬಂದಳೋ, ದುಶ್ಶಾಸನನಿಂದ ಎಳೆದುತರಲ್ಪಟ್ಟಳೋ ಎಂಬ ವಿಷಯ ಅವಳ ವಸ್ತ್ರಾಪಹಾರವಾಗಲಿಲ್ಲ ಎಂಬ ವಿಷಯಕ್ಕೇನೂ ಪೋಷಕವಾಗುವುದಿಲ್ಲ. ಹಾಗೆ ನೋಡಿದರೆ, ವಸ್ತ್ರಾಪಹಾರವೇ ಆಗಿರಬಹುದು, ಅನಂತರ ಅಕ್ಷಯವಸ್ತ್ರದ ವಿಷಯ ಸೇರಿಕೊಂಡಿರಬಹುದು; ಅಥವಾ ವಸ್ತ್ರಾಪಹರಣ ಪ್ರಯತ್ನಮಾತ್ರವಿದ್ದಿರಬಹುದು, -ಪಂಪಭಾರತದಲ್ಲಿ ನಿರೂಪಿಸಿರುವಂತೆ- ಅಂಥ ಪ್ರಯತ್ನ ಅಷ್ಟಕ್ಕೆ ನಿಂತಿರಬಹುದು; ಇಲ್ಲವೇ, ವಸ್ತ್ರಾಪಹರಣ ಪ್ರಸಂಗದಲ್ಲಿ ದ್ರೌಪದಿಯ ಚಾರಿತ್ರದಿಂದ ಆ ಪ್ರಯತ್ನ ವಿಫಲವಾಗಿರಬಹುದು. ಒಂದು ಮಹಾಕೃತಿಯಲ್ಲಿ ಹೀಗಿದ್ದಿರಬಹುದು, ಹೀಗಿದ್ದದ್ದು ಹೀಗಾಗಿರಬಹುದು ಎಂದು ಒಂದು ಪ್ರಸಂಗದ ಬೆಳುವಣಿಗೆಯನ್ನು ಊಹಿಸಬಹುದೇ ಹೊರತು, ಅದರ ಮೂಲರೂಪವನ್ನು ಖಚಿತವಾಗಿ ಯಾರೂ ಹೇಳಲಾರರು. ಆದುದರಿಂದ ಸದ್ಯಕ್ಕೆ, ವಿದ್ವಾಂಸರ ಪರಿಶ್ರಮದಿಂದ, ಪರಿಷ್ಕರಣದಿಂದ ಮೂಲಪಾಠವೆಂದು ಅಂಗೀಕೃತವಾಗಿರುವ ಭಾಗವನ್ನು, ಅದರ ಸೊಗಸನ್ನು ನಾವು ಪರಿಶೀಲಿಸುವುದು ಒಳ್ಳಿತು.

ಈಗ ಅಂಗೀಕೃತವಾಗಿರುವ ಭಾಗವಷ್ಟನ್ನೇ ನೋಡಿದರೆ, ವಸ್ತ್ರಾಪಹರಣ ಪ್ರಸಂಗ ತುಂಬ ಸಂಗ್ರಹವಾಗಿ, ಸಶಕ್ತವಾಗಿ, ಸುಂದರವಾಗಿ ಬಂದಿದೆ. ಕೇವಲ ಆರು ಪಂಕ್ತಿಗಳಲ್ಲಿ ಆ ಪ್ರಸಂಗವನ್ನು ಚಿತ್ರಿಸಿ, ಅದರ ಪರಿಣಾಮವಾಗಿ ಭೀಮನ ಕೋಪ ಮಸಗಿದ ಪರಿಯನ್ನೂ, ಅವನ ಪ್ರಚಂಡ ಪ್ರತಿಜ್ಞೆಯನ್ನೂ ಕವಿ ಮುಂದೆ ಚಿತ್ರಿಸಿದ್ದಾನೆ. ಈ ಭಾಗದ ಪ್ರಕಾರ ‘ದುಶ್ಶಾಸನನು ದ್ರೌಪದಿಯನ್ನು ಸಭಾಮಧ್ಯಕ್ಕೆ ಎಳೆದುತಂದು ಅವಳ ಸೀರೆಯನ್ನು ಸೆಳೆಯಲು ಉಪಕ್ರಮಿಸಿದನು; ಆಗ ಅವನು ಎಳೆದಂತೆಲ್ಲಾ ಅದೇ ಪ್ರಕಾರವಾದ ವಸ್ತ್ರಗಳ ಪರಂಪರೆ ಅನೇಕವಾಯಿತು. ಆ ‘ಅದ್ಭುತತಮ’ವಾದ ದೃಶ್ಯವನ್ನು ನೋಡಿ ನೆರೆದ ರಾಜರಲ್ಲಿ ಮಹಾ ಕೋಲಾಹಲ ಉಂಟಾಯಿತು. ಈ ಸಂಗತಿಯ ಸತ್ಯ ಇಷ್ಟೆ: ದ್ರೌಪದಿಯ ವಸ್ತ್ರಾಪಹರಣ ನಡೆಯಿತು, ಆದರೆ ಅದು ಸಫಲವಾಗಲಿಲ್ಲ- ಎಂದು ಮಾತ್ರ. ಹಾಗೆ ವಿಫಲವಾದದ್ದೂ ಒಂದು ಪವಾಡದಂತೆ ಅದ್ಭುತ. ಕವಿ ಆ ಪ್ರಯತ್ನ ವಿಫಲವಾಯಿತೆನ್ನುವ ಸತ್ಯವನ್ನು ವಸ್ತ್ರ ಅಕ್ಷಯವಾಯಿತು ಎಂದು ಹೇಳಿದ್ದಾನೆಂದು ನಾವು ಭಾವಿಸಬಹುದು; ಅಥವಾ ಮಾನುಷಬುದ್ಧಿ ತಿಳಿಯಲಾಗದ, ಅಳೆಯಲಾಗದ ಅಂಥ ಒಂದು ಪವಾಡವೆ ನಡೆಯಿತೆಂದು ಭಾವಿಸಲೂ ಹಿಂಜರಿಯಬೇಕಾಗಿಲ್ಲ. ಏಕೆಂದರೆ ಮಹಾಭಾರತ ಎಷ್ಟೇ ಲೌಕಿಕವಾದರೂ, ಅದೊಂದು ಅದ್ಭುತವಾದ ಲೋಕವೇ. ಮಹಾಭಾರತದ ತುಂಬ ಇಂಥ ಎಷ್ಟೋ ಅದ್ಭುತಗಳಿವೆ; ಅವುಗಳಲ್ಲಿ ಇದೂ ಒಂದು. ಆದರೆ ಪವಾಡವೆಂದರೆ ಏನೋ ಎಂತೋ ಎಂದು ಶಂಕಿಸುವ, ಪ್ರತಿಯೊಂದನ್ನೂ ಬುದ್ಧಿಯ ತರ್ಕಕ್ಕೆ ಒಪ್ಪಿಗೆಯಾಗುವಂತೆ ಹೇಳಬೇಕೆನ್ನುವ ವಿಮರ್ಶನಮತಿ ಒಮ್ಮೊಮ್ಮೆ ಬೇರೆಯ ಲೌಕಿಕ ವಿವರಣೆಯನ್ನು ಕೊಡಲು ಯತ್ನಿಸುವುದೂ ಉಂಟು. ಹೀಗಾಗಿ “ದುಶ್ಶಾಸನ  ವಸ್ತ್ರವನ್ನು ಸೆಳೆದಂತೆ, ಸೋತು ಬಿದ್ದಂತೆ ಕತೆಯಿದೆ. ವಸ್ತ್ರ ಅಕ್ಷಯವಾಯಿತು ಎಂಬ ವಾಕ್ಯವಿದೆ. ಈ ಸಂಗತಿ ನಡೆದದ್ದೇ ಆದರೆ ಇದರ ಅರ್ಥ ಇಷ್ಟೇ ಇರಬೇಕು. ಅವನು ಅದೆಷ್ಟು ಸೆಳೆದರೂ ವಸ್ತ್ರವನ್ನು ತೆಗೆಯಲಾಗಲಿಲ್ಲ. ಏತರಿಂದಲೋ ನಾವು ಊಹಿಸಬೇಕಾದದ್ದಿಲ್ಲ. ಊಹಿಸಬೇಕೆಂದು ಯಾರಾದರೂ ಬಯಸುವುದಾದರೆ, ತನ್ನ ಮರ್ಯಾದೆಯ ರಕ್ಷಣೆಗಾಗಿ ದ್ರೌಪದಿ ಅದನ್ನು ಹಿಡಿದಿದ್ದ ಪಟ್ಟು ಅಷ್ಟು ಗಟ್ಟಿಯಾಗಿತ್ತು, ಎನ್ನಬಹುದು”[14] -ಎಂಬ ವಿವರಣೆಯೂ ದೊರೆಯುತ್ತದೆ. ಈ ವಿವರಣೆಯಲ್ಲಿರುವ ಊಹೆ ಬಹಳ ವಿಚಿತ್ರವಾಗಿದೆ. ದ್ರೌಪದಿಯ ವಸ್ತ್ರ ಅಕ್ಷಯವಾಯಿತೆಂಬ ಅದ್ಭುತವನ್ನು ಒಪ್ಪಲಾಗದ ನಾವು, ಅವಳ ವಸ್ತ್ರಾಪಹರಣ ವಿಫಲವಾದ ಪ್ರಸಂಗವನ್ನು, ಭೀಮ ಪತ್ನಿಯ ಬಾಹುಬಲದ ಅಳತೆಗೋಲೆಂದು ವಿವರಿಸುವುದು ಅಷ್ಟು ಹಿತವಾಗಿ ತೋರುವುದಿಲ್ಲ. ಮೂಲಭಾರತವೇ ಈ ಪ್ರಸಂಗವನ್ನು ಕೇವಲ ‘ಅದ್ಭುತ’ವಲ್ಲ; ‘ಅದ್ಭುತತಮ’ -ಎನ್ನುತ್ತದೆ. ಹಾಗೆಂದರೆ ಅರ್ಥವೇನು? “ಇದರ ಅರ್ಥ ಇಷ್ಟೇ ಇರಬೇಕು. ಅವನು ಅದೆಷ್ಟು ಸೆಳೆದರೂ ವಸ್ತ್ರವನ್ನು ತೆಗೆಯಲಾಗಲಿಲ್ಲ.”[15] ಆ ಪ್ರಯತ್ನ ವಿಫಲವಾಯಿತೆಂಬ ಸತ್ಯವನ್ನು ಕಾವ್ಯ ಅಕ್ಷಯವಾಯಿತು, ಅದೇ ಬಗೆಯ ಅನೇಕ ವಸ್ತ್ರಗಳು ಬಂದುವು-ಎನ್ನುತ್ತದೆ. ಹಾಗೆ ವಿಫಲವಾದದ್ದರ ಕಾರಣವನ್ನು ‘ದ್ರೌಪದಿ ಹಿಡಿದ ಪಟ್ಟು ಅಷ್ಟು ಗಟ್ಟಿಯಾಗಿತ್ತು’- ಎಂದು ದ್ರೌಪದಿಯ ಬಾಹುಬಲಕ್ಕೆ ಆರೋಪಿಸುವ ಬದಲು, ಹಾಗೆ ಆದದ್ದು ಅವಳ ಆತ್ಮಶಕ್ತಿಯ ಅಥವಾ ಶೀಲದ ಬಲದಿಂದ ಎಂದು ಭಾವಿಸುವುದು ಹೆಚ್ಚು ಸಮಂಜಸ. ಅವಳ ಧರ್ಮವೋ, ಲೋಕವನ್ನು ನಡೆಸುವ ಧರ್ಮವೋ, ಹಾಗೆ ದ್ರೌಪದಿ ಅವಮಾನಿತಳಾಗುವುದನ್ನು ತಡೆಯಿತು ಎನ್ನಬಹುದು.[16]

ಮೂಲಭಾರತದಲ್ಲಿ, ದ್ರೌಪದಿಯ ವಸ್ತ್ರಾಪಹರಣ ಪ್ರಯತ್ನ ವಿಫಲವಾಯಿತೆಂಬ ಸತ್ಯ, ಯಾವಾಗ ಅಕ್ಷಯವಾಯಿತೆಂಬ ಈ ಪವಾಡದ ಪ್ರತಿಮೆಯಲ್ಲಿ ಸೂಚಿತವಾಯಿತೋ, ಅದರಿಂದ ಸಮಾಧಾನಪಡದೆ, ಅದನ್ನು ಹಿಗ್ಗಿಸುವುದರಲ್ಲಿ, ಅದಕ್ಕೊಂದು ತರ್ಕಬದ್ಧತೆಯನ್ನು ನೀಡುವುದರಲ್ಲಿ ಪ್ರಕ್ಷೇಪಪ್ರಜ್ಞೆ ತೊಡಗಿದಂತೆ ಕಾಣುತ್ತದೆ. ದುಶ್ಶಾಸನ ದ್ರೌಪದಿಯ ಸೀರೆಯನ್ನು ಸೆಳೆದಂತೆ, ಅದೇ ಬಗೆಯ ಅನೇಕ ವಸ್ತ್ರಗಳು ಕಾಣಿಸಿಕೊಂಡ ಅದ್ಭುತವನ್ನು ಕುರಿತು ಪ್ರಕ್ಷೇಪಕಾರರಲ್ಲಿ ಸಾಕಷ್ಟು ಕುತೂಹಲ ಮೂಡಿರಬಹುದು. ಸೀರೆಯೇನೋ ಅಕ್ಷಯವಾಯಿತು; ಅದು ‘ಅದ್ಭುತತಮ’ ಎಂದು ಮಹಾಭಾರತ ಹೇಳಿತು. ಆದರೆ ಈ ಪವಾಡದ ಹಿಂದೆ ಯಾವ ಶಕ್ತಿ ಕೆಲಸ ಮಾಡಿರಬಹುದು? ದ್ರೌಪದಿಯ ಶೀಲವೆ? ದೈವೀಕೃಪೆಯೆ? ಈ ಪ್ರಶ್ನೆಗೆ ಮಹಾ ಭಾರತ ಮೌನವಾಗಿದೆಯಲ್ಲ? ಈ ಪ್ರಶ್ನೆಗಳುದ್ಭವಿಸಿ, ಹಾಗೆ ಸೀರೆ ಅಕ್ಷಯವಾದ ಪವಾಡದ ಮಹಿಮೆಯನ್ನು, ಮರ್ತ್ಯಳಾದ ದ್ರೌಪದಿಯ ಚಾರಿತ್ರಕ್ಕೆ ಮಾತ್ರ ಕೊಡಲೊಪ್ಪದೆ, ದೇವರ  ಕೃಪೆಗೆ ಸಲ್ಲಿಸಿರುವಂತೆ ತೋರುತ್ತದೆ. ಹೀಗಾಗಿ ಪಾಂಡವರ ಪ್ರಾಣನಾದ ಶ್ರೀಕೃಷ್ಣನನ್ನು ದ್ರೌಪದಿ ನೆನೆದಳೆಂದೂ, ಭಗವಾನ್ ಕೃಷ್ಣನು ಸೀರೆಯನ್ನು ಅಕ್ಷಯಮಾಡುವ ಕೃಪೆದೋರಿದನೆಂದೂ, ಮಹಾಭಾರತದ ಅದ್ಭುತವನ್ನು ರಮ್ಯವನ್ನಾಗಿ ವಿಸ್ತರಿಸಿತು ಪ್ರಕ್ಷೇಪ ಪ್ರಜ್ಞೆ[17] ಅಲ್ಲಿ ಸಭೆಯಲ್ಲಿ ದುಶ್ಶಾಸನ ಸೀರೆಯನ್ನು ಸೆಳೆದಾಗ ಅವಳು ಕೃಷ್ಣನನ್ನು ಬಗೆಬಗೆಯಾಗಿ ಪ್ರಾರ್ಥಿಸಿದಳು. ಆಗ ಶ್ರೀಕೃಷ್ಣನು ಭಕ್ತಳ ವಾಣಿಗೆ ಓಗೊಟ್ಟು ಅವಳಿಗೆ ಅಕ್ಷಯವಸ್ತ್ರವನ್ನು ಕರುಣಿಸಿದನು. ಈ ಒಂದು ಸಂಗತಿ ಪ್ರಕ್ಷಿಪ್ತವಾದರೂ ಬಹು ಸ್ವಾರಸ್ಯವಾದ ಹಲವು ಅಂಶಗಳು ಇದರಲ್ಲಿವೆ. ಒಂದು ವೇಳೆ ಈ ಪವಾಡದ ಮಹಿಮೆಗೆ ಕೇವಲ ದ್ರೌಪದಿಯ ಶೀಲವೇ ಕಾರಣ ಎಂದು ಪ್ರಕ್ಷೇಪಕಾರರು ವಿವರಿಸಿದ್ದ ಪಕ್ಷದಲ್ಲಿ, ಅದು ಮಾನವ ಚಾರಿತ್ರದ ಮಹಿಮೆಯಷ್ಟನ್ನೆ ಹೇಳಿದಂತಾಗುತ್ತಿತ್ತು. ಹಾಗೆ ಹೇಳಿದ್ದರೆ ಅದೂ ದೊಡ್ಡ ವಿಚಾರವೇ. ಆದರೆ ಅಷ್ಟನ್ನೇ ಹೇಳದೆ ಈ ಮಹಿಮೆಗೆ ಕೃಷ್ಣನನ್ನು ಏಕೆ ಕಾರಣವನ್ನಾಗಿ ಎಣಿಸಿತು? ಇಡೀ ಪ್ರಸಂಗದ ಅದ್ಭುತದ ಜವಾಬ್ದಾರಿಯನ್ನು ದ್ರೌಪದಿಯ ಶೀಲದ ಮಹತ್ವ ಹೊರಲಾರದು ಎಂಬ ಶಂಕೆಯಿಂದ ಪ್ರಕ್ಷೇಪ ಪ್ರಜ್ಞೆ ಆ ಪವಾಡದ ಮಹಿಮೆಯನ್ನು ಕೃಷ್ಣನಿಗೆ ಸಲ್ಲಿಸಿತು ಎಂದಲ್ಲ; ಮಾನವ ಶಕ್ತಿಗಿಂತ ದೈವಕೃಪೆ ಹಿರಿದಾದುದು ಎಂಬ ಭಾವನೆಯಿಂದ ಹೀಗೆ ಮಾಡಿತು. ಈ ಮಹಿಮೆಯನ್ನು ಕೃಷ್ಣನಿಗೆ ಸಲ್ಲಿಸುವುದರ ಮೂಲಕ, ಮಾನುಷ್ಯದ ಮಹಿಮೆಯ ಬೆಲೆಯನ್ನು ತಗ್ಗಿಸದೆ, ದೈವದ ಮಹಿಮೆಯ ಬೆಲೆಯನ್ನು ಎತ್ತಿಹಿಡಿದಿದ್ದಾರೆ ಪ್ರಕ್ಷೇಪಕಾರರು. ಏಕೆಂದರೆ ಭಾರತೀಯರ ಪ್ರಕಾರ ಮನುಷ್ಯತ್ವದ ಮಹಿಮೆಗೆ ಬೆಲೆ ಇರುವುದು ಅದು ಎಷ್ಟರ ಮಟ್ಟಿಗೆ ತನ್ನನ್ನು ದೈವೀಶಕ್ತಿಗೆ ಸಮರ್ಪಿಸಿಕೊಳ್ಳುವುದೊ, ಮತ್ತು ಆ ಕೃಪೆಯನ್ನು ತನ್ನೆಡೆಗೆ ಎಳೆದುಕೊಳ್ಳುವುದೊ, ಆ  ಶ್ರದ್ಧೆಯ ಶಕ್ತಿಯಲ್ಲಿ. ದ್ರೌಪದಿ ಇಂತಹ ಆರ್ತ ಸ್ಥಿತಿಯಲ್ಲಿ ಕೃಷ್ಣನಿಗೆ ಮೊರೆಯಿಟ್ಟಾಗ, ಅವಳ ಅಂತರಂಗದ ಆ ಪ್ರಾರ್ಥನೆಯ ಕರೆ ದೂರದ ದ್ವಾರಕೆಯಲ್ಲಿದ್ದ ಕೃಷ್ಣನ ಕೃಪೆಯನ್ನು ತನ್ನೆಡೆಗೆ ಎಳೆದುಕೊಳ್ಳುವಷ್ಟು ಶಕ್ತವಾಗಿತ್ತೆಂಬುದೇ ಭಕ್ತಜನಪ್ರಿಯವಾದ ಸಂಗತಿ. ಈ ವಿಚಾರದಲ್ಲಿ, ಈ ಕಾವ್ಯಗಳಲ್ಲಿ ಕಾಣದ, ಆದರೆ ಜನಜನಿತವಾದ ಇನ್ನೂ ಒಂದು ಅಲಿಖಿತ (?) ಪ್ರಕ್ಷೇಪವನ್ನು ನಾವು ಕೇಳಿದ್ದೇವೆ: ದ್ರೌಪದಿ, ದುಶ್ಶಾಸನ ಸೀರೆಯನ್ನು ಸೆಳೆಯುವ ಕಾಲದಲ್ಲಿ ಇತ್ತ ತನ್ನ ಸೀರೆಯ ನಿರಿಯನ್ನು ಬಲವಾಗಿ ಹಿಡಿದುಕೊಂಡಳು, ಅತ್ತ ದ್ವಾರಕಾವಾಸಿಯಾದ ಕೃಷ್ಣನನ್ನು ಕುರಿತು ಪ್ರಾರ್ಥಿಸಿದಳು. ಎಲ್ಲಿಯತನಕ ಅವಳಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳಬಲ್ಲೆನೆಂಬ ಭಾವನೆ ಇತ್ತೋ, ಮತ್ತು ಅಂತಹ ಒಂದು ಭಾವನೆಯಿಂದ ಸೀರೆಯನ್ನು ಬಿಗಿಯಾಗಿ ಹಿಡಿದುಕೊಂಡಳೋ, ಅಲ್ಲಿಯತನಕ ಅಕ್ಷಯವಸ್ತ್ರದ ಕೃಪೆ ಅವಳಿಗೆ ಲಭಿಸಲಿಲ್ಲ. ಆದರೆ ಯಾವಾಗ ಅವಳು ತನ್ನನ್ನು ತಾನು ಕಾಪಾಡಿಕೊಳ್ಳಬಲ್ಲೆನೆಂಬ ಕಿಂಚಿತ್ ಅಹಂಕಾರವನ್ನೂ ತೊರೆದು, ಸೀರೆಯ ನಿರಿಯನ್ನು ಕೈಬಿಟ್ಟು, ಸಂಪೂರ‍್ಣ ಸಮರ್ಪಣ ಭಾವದಿಂದ ದೇವರಲ್ಲಿ  ಮೊರೆಯಿಟ್ಟಳೋ, ಆಗ ಅವಳ ಸೀರೆ ಕೃಷ್ಣನ ಕೃಪೆಯಿಂದ ಅಕ್ಷಯವಾಯಿತು. ಇದು ಈ ಪ್ರಸಂಗವನ್ನು ಕುರಿತು- ಪ್ರಕ್ಷೇಪ ಪ್ರಜ್ಞೆ ಇನ್ನೂ ಕೆಲಸ ಮಾಡುತ್ತಿರುವ ಪರಿ.[18] ಶ್ರದ್ಧೆ-ಸಮರ್ಪಣ ಭಾವಗಳ ದೃಷ್ಟಿಯಿಂದ ಈ ಹೊಸ ಕತೆ ತುಂಬ ಅರ್ಥವತ್ತಾಗಿದೆ. ಯಾವ ದೇಶದಲ್ಲಿ ಕಲಾಪ್ರಜ್ಞೆ ಧರ್ಮದಿಂದ ಜಾಗೃತಗೊಂಡಿತೋ, ಎಲ್ಲಿ ಧರ್ಮವೂ ಕಾವ್ಯ ಧರ್ಮವೂ ಬೇರೆಯಲ್ಲವೆಂಬ ನಂಬುಗೆ ಬದುಕನ್ನು ತುಂಬಿದೆಯೋ ಅಂಥ ದೇಶದಲ್ಲಿ ಶ್ರೀಕೃಷ್ಣನ ಕೃಪೆಯಿಂದ ವಸ್ತ್ರ ಅಕ್ಷಯವಾಯಿತೆಂಬ ವಿಚಾರವನ್ನು ಯಾವ ಸಂಕೋಚವೂ ಇಲ್ಲದೆ ಓದಿ ಸುಖಿಸುತ್ತೇವೆ. ಅದರಿಂದ ಕಾವ್ಯ ಕೇವಲ ಸತ್ಯ ಮತ್ತು ಸುಂದರ ಮಾತ್ರವಾಗದೆ ಶಿವವೂ ಆಯಿತೆಂದು ಭಾವಿಸುತ್ತೇವೆ. ಆದುದರಿಂದಲೇ ನಾರಣಪ್ಪನ ಭಾರತದಲ್ಲಿ ಈ ಪ್ರಸಂಗ ಅತ್ಯಂತ ಕಾವ್ಯಮಯವಾಗಿ ಪರಿಣಮಿಸಿದೆ. ಆದರೆ ಮೂಲಭಾರತದಲ್ಲಿ ಪ್ರಕ್ಷೇಪವೆಂದು ಭಾವಿಸಲಾಗಿರುವ ಕೃಷ್ಣನ ಕೃಪೆಯ ವಿಷಯವಿಲ್ಲದೆಯೂ, ವಸ್ತ್ರಾಪಹರಣದ ಪ್ರಸಂಗ ಕಾವ್ಯದೃಷ್ಟಿಯಿಂದ ಅತ್ಯಂತ  ಸೊಗಸಾಗಿದೆ ಎಂದು ಒಪ್ಪಬಹುದು.[19]

-೬-

ವಸ್ತ್ರಾಪಹರಣ ಸಂದರ್ಭದಲ್ಲಿ, ವಸ್ತ್ರ ಅಕ್ಷಯವಾಗಿ ದ್ರೌಪದಿಯ ಮಾನವೇನೋ ಉಳಿಯಿತು; ನಿಜ. ಆದರೆ ಆ ಯುಗದ ಸಭ್ಯತೆಯ ಹಾಗೂ ಈ ದೃಶ್ಯವನ್ನು ಕುರಿತು ವೀಕ್ಷಿಸಿದ, ಇದನ್ನು ಕಾರ‍್ಯರೂಪಕ್ಕೆ ತಂದವರ, ಮಾನ ಉಳಿಯಿತೆಂದು ಹೇಳಲಾಗುವುದಿಲ್ಲ. ವಾಸ್ತವವಾಗಿ ಇದೊಂದು ಅಸಭ್ಯವಾದ ಘಟನೆಯೇ. ತಮ್ಮವಂಶದ ಕುಲಸ್ತ್ರೀಯನ್ನು ತುಂಬಿದ ಸಭೆಯಲ್ಲಿ ಹೀಗೆ ನಡೆಸಿಕೊಂಡದ್ದು ಕಳಂಕಪ್ರಾಯವೇ. ಮೊದಮೊದಲು ದುರ‍್ಯೋಧನನ ಮನಸ್ಸಿನಲ್ಲಿ ಹೀಗೆ ದ್ರೌಪದಿಯ ವಸ್ತ್ರಾಪಹಾರ ಮಾಡುವ ಕಲ್ಪನೆಯೂ ಇರಲಿಲ್ಲ; ಅವನ ಪಾಲಿಗೆ ಅವಳು ಸೋತು ವಶವಾದ ದಾಸಿ. ತನ್ನ ದಾಸಿಯರೊಂದಿಗೆ ಅವಳು ಅರಮನೆಯನ್ನು ಗುಡಿಸುವುದು ತನಗೆ ಆನಂದ ಎಂದು ಆತ ಭಾವಿಸುತ್ತಾನೆ.[20] ಆದರೆ, ಕರ್ಣ ದುಶ್ಶಾಸನರ ಪಾಲಿಗೆ ಅವಳು, ಗೆದ್ದವರು ಹೇಗೆ ಬೇಕಾದರೂ ಹಾಗೆ ನಡೆಸಿಕೊಳ್ಳಬಹುದಾದ ದಾಸಿ: ಕರ್ಣನಿಗೆ ಹಲವರನ್ನು ಉಪಚರಿಸಿದ ಬಂಧಕಿ; ಆದ್ದರಿಂದ ಅವರಿಬ್ಬರ ಮತದಲ್ಲೂ ಅವಳು ಏಕವಸ್ತ್ರೆಯಾದರೇನು, ವಿವಸ್ತ್ರೆಯಾದರೇನು- ಅವಮಾನವಲ್ಲ.[21] ಅವರ ಮನದಲ್ಲಿ ಬೆಳೆದ ‘ವಿವಸ್ತ್ರೆಯಾದರೇನು’ ಎಂಬ ಆಲೋಚನೆ, ಕೌರವನ ಮೌನದ ಸಮ್ಮತಿಯಿಂದ ಪುಟಗೊಂಡು ದುಶ್ಶಾಸನನಿಂದ ಕಾರ‍್ಯರೂಪಕ್ಕಿಳಿದೇಬಿಟ್ಟಿತು. ಇಂಥದೊಂದು ಅಸಭ್ಯಘಟನೆ ನಡೆಯುತ್ತಿರುವಾಗ ಎಲ್ಲರೂ ಸುಮ್ಮನೆ ಕುಳಿತುಕೊಂಡಿರಲಿಲ್ಲ; ಆದರೆ ಇದನ್ನು ಯಾರೂ ಮೊದಲಲ್ಲೇ ತಡೆಯಲಾಗಲಿಲ್ಲ. ಕೌರವರಲ್ಲಿ ಒಬ್ಬನಾದ ವಿಕರ್ಣನೇ ದ್ರೌಪದಿಯ ಪರವಾಗಿ ಮಾತನಾಡಿ “ಈ ತುಂಬಿದ ಸಭೆಯಲ್ಲಿ ಧರ್ಮವನ್ನು ಹೇಳುವವರು ಯಾರೂ ಇಲ್ಲವಾಯಿತೇ.”[22] -ಎಂದು ಕೊರಗುತ್ತಾನೆ. ಪರಿಸ್ಥಿತಿಯೂ ಹಾಗೇ ಇತ್ತು. ಧರ್ಮ ಯಾವುದು ಎನ್ನುವುದನ್ನು ಹೇಳಬೇಕಾಗಿದ್ದ ಭೀಷ್ಮ ದ್ರೋಣರಂಥವರೇ ತಳಮಳದ ಕಡಲಲ್ಲಿ ಮುಳುಗಿಹೋದರು. “ತಾಯಿ, ಧರ್ಮದ ಗತಿ ಬಹುಸೂಕ್ಷ್ಮ; ಇದನ್ನು ಹೀಗೇ ಎಂದು ನಿರ್ಣಯಿಸಲು ನಾನು ಅಶಕ್ತನಾಗಿದ್ದೇನೆ” -ಎಂದು ಭೀಷ್ಮರು ದ್ರೌಪದಿಗೆ ಹೇಳುತ್ತಾರೆ.[23] ಇನ್ನು ತಾವಾಗಿಯೇ ಜೂಜಿಗಿಳಿದು, ಸೋತು ತಲೆತಗ್ಗಿಸಿದ ಪಾಂಡವರು ಮಾಡುವುದೇನು? ‘ದ್ರೌಪದಿಯನ್ನು ಒಡ್ಡಿ ಸೋತು ಅವಳನ್ನು ಈ ಗತಿಗೆ ತಂದ ಅಗ್ರಜನಾದ ಧರ್ಮರಾಯನ ತೋಳುಗಳನ್ನು ಸುಡುತ್ತೇನೆ’- ಎಂದು ಭೀಮನ ಕೋಪದ ಜ್ವಾಲಾಮುಖಿ ಕೆರಳಿತು;[24] ಆದರೇನು, ದ್ರೌಪದಿಯ ಅವಮಾನವಾಗುವುದು ತಪ್ಪಲಿಲ್ಲ.

‘ಜೂಜಿನಲ್ಲಿ ಸೋತು’ ಅವಮಾನಿತರಾದವರನ್ನು ಗೆದ್ದವರು ಹೇಗಾದರೂ ನಡೆಸಿ ಕೊಳ್ಳಬಹುದು’ -ಎನ್ನುವುದು ಒಂದು ನಿಯಮವಿರಬಹುದು. ಆದರೆ ದ್ರೌಪದಿಯನ್ನು ಹೀಗೆ ನಡೆಸಿಕೊಂಡದ್ದು ದುಶ್ಶಾಸನ ಬುದ್ಧಿಗೆ ಮಾತ್ರ ಸರಿ ತೋರೀತು. ದಾಸಿಯರನ್ನು ಕೂಡ ಹೀಗೆ ನಡೆಸಿಕೊಳ್ಳಬಾರದು; ಮನುಷ್ಯಗೌರವದ ಬೆಲೆಯನ್ನರಿತವರು ಅದರಲ್ಲೂ ತಮ್ಮ ವಂಶದ ಕುಲಸ್ತ್ರೀಯಾದ, ಅತ್ತಿಗೆಯಾದ ದ್ರೌಪದಿಯನ್ನು ಕೌರವರು ಹೀಗೆ ನಡೆಸಿಕೊಂಡದ್ದು ಪೈಶಾಚಿಕ ನೀತಿ ಎನ್ನುವುದರಲ್ಲಿ ಸಂಶಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಭೀಷ್ಮಾದಿಗಳೂ ವಿವೇಕ ಹೇಳುವ, ಕಡೆಗೆ ಪ್ರತಿಭಟಿಸುವ ಕೆಚ್ಚನ್ನು ತಾಳದೆ ಸುಮ್ಮನೆ ಕೂತರಲ್ಲ? ನಿಜವಾಗಿಯೂ ದೊಡ್ಡವರಾದ ಅವರು ಪ್ರತಿಭಟಿಸಬೇಕಾಗಿತ್ತು ಎಂದು ನಾವು ಹೇಳಬಹುದು. ಆದರೆ ಎಂತಹ ಶಿಷ್ಟ ಶಕ್ತಿಗಳೂ ಇಂಥ ದುಷ್ಟಶಕ್ತಿಗಳ ವಿಜೃಂಭಣೆಯಲ್ಲಿ ಸ್ತಬ್ಧವಾಗಿ, ವಿಷಾದಹತವಾಗುವುದು ಆಶ್ಚರ್ಯವೇನಲ್ಲ. ಮುಂಗಾರು ಮಳೆ ಹೊಯ್ಯುತ್ತಿರುವಾಗ ಹೊನಲು ಉಕ್ಕೇರಿದಾಗ ಯಾವ ಯಂತ್ರ  ವಿಜ್ಞಾನಿಯೂ ಅಣೆಕಟ್ಟನ್ನು ನಿರ್ಮಿಸಲು ಹೊರಡುವುದಿಲ್ಲ. ಧರ್ಮರಾಯನಂಥ ವಿವೇಕಿಯೇ ಚಾಪಲ್ಯದಿಂದ ಜೂಜಿಗಿಳಿದು, ದ್ರೌಪದಿಯನ್ನೊಡ್ಡಿ ಸೋತಿರುವಾಗ ಪಾಂಡವರೈವರು ತಮ್ಮ ಸತಿಯ ಪರಾಭವವನ್ನು ಕಂಡೂ ಕಿಂಕರ್ತವ್ಯಮೂಢರಾಗಿರುವಾಗ, ಹಿರಿಯರಾದ ತಮ್ಮ ಯಾರ ಮಾತನ್ನೂ ಕೇಳದೆ ಜೂಜಾಡಿ ಈ ಗತಿಗೆ ತಂದುಕೊಂಡವರ ಪರವಾಗಿ ಭೀಷ್ಮಾದಿಗಳು ಆಗ ಧರ್ಮಾಧರ್ಮಗಳನ್ನು ನಿರ್ಣಯಿಸಿ ಹೇಳಲಿಲ್ಲವೆಂದು ನಾವು ಆಕ್ಷೇಪಿಸುವುದು ಯಾವ ನ್ಯಾಯ? ಇದರ ಮೇಲೆ ಭೀಷ್ಮಾದಿಗಳು ಕೌರವನ ಜೋಳದ ಪಾಳಿಗೆ ಕಟ್ಟುಬಿದ್ದವರು; ದುರ‍್ಯೋಧನನ ಪ್ರಜೆಗಳು. ಹೀಗಾಗಿ ಭೀಷ್ಮಾದಿಗಳು ದ್ರೌಪದಿಗಾದ ಅವಮಾನವನ್ನು ತಡೆಯಲಾಗದಿದ್ದುದು ಪೌರುಷಾಭಾವದಿಂದಲ್ಲ, ವಿಧಿವಶದಿಂದ -ಎನ್ನಬೇಕು. ಆದರೆ ಅಂದಿನ ಹಿರಿಯರು ಮಾನವತ್ವದ ಗೌರವದ ದೃಷ್ಟಿಯಿಂದಲಾದರೂ ಹೊಡೆದಾಡಬೇಕಾಗಿತ್ತು ಎನ್ನುವುದು, ಇಷ್ಟು ದೂರ ನಿಂತು, ಅಂದಿನ ದೂರ ದ್ವಾಪರಯುಗದ ಪ್ರಸಂಗವನ್ನು, ಇಂದು ವಿವೇಚಿಸುವ ನಮ್ಮ ದೃಷ್ಟಿಯಲ್ಲಿರಬಹುದಾದ ದೋಷದ ಪರಿಣಾಮವೆನ್ನಬಹುದು. ಏಕೆಂದರೆ ಅಂದಿನ ಮೌಲ್ಯಗಳ ದೃಷ್ಟಿಯಿಂದ ಅಂಥದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಭೀಷ್ಮಾದಿಗಳು ತಮಗೆ ತತ್ಕಾಲದಲ್ಲಿ ಸರಿ ಎಂದು ತೋರಿದಂತೆ ನಡೆದುಕೊಂಡರು; ದುರ‍್ಯೋಧನಾದಿಗಳು ತಮ್ಮ ದುರ್ವರ್ತನೆಯ ದುರಂತ ಫಲವನ್ನು ಅನುಭವಿಸಿ ಹೋದರು. ಆ ಸಂದರ್ಭದಲ್ಲಿ ಕಂಡುಬರುವ ದೊಡ್ಡವರ ನಡವಳಿಕೆಯನ್ನು ಇಂದಿನ ಯುಗದ ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯಗಳ ಮೂಲ ಮಾನದಿಂದ ಅಳೆದು ‘ತಪ್ಪು-ಸರಿ’ಗಳ ನಿರ್ಣಯವನ್ನು ಕೊಡುವ ಸಾಹಸ ಸಾಧುವಲ್ಲ, ಸಾಧ್ಯವೂ ಅಲ್ಲ.

ಒಟ್ಟಿನಲ್ಲಿ ಇಡೀ ಪ್ರಸಂಗವನ್ನು ನಾವು ಕಾವ್ಯದ ದೃಷ್ಟಿಯಿಂದ ನೋಡಿದರೆ, ದ್ರೌಪದೀ ವಸ್ತ್ರಾಪಹರಣದ ಸಂದರ್ಭ ಸೃಜಿಸಿದ ಪರಿಣಾಮತರಂಗಗಳೂ ಅದ್ಭುತವಾಗಿವೆ. ಈ ಸಂದರ್ಭ ಪ್ರಚಂಡ ಶಕ್ತಿಗಳ ಸಂಘರ್ಷಣೆಯಂತೆ ತೋರುತ್ತದೆ. ಜೂಜಿನ ದಾಳಗಳ ಉರುಳಾಟದಲ್ಲಿ ಎಷ್ಟೊಂದು ಜನರ ಮಾನ-ಗೌರವಗಳೇ ಉರುಳಿ ಹೋದವು! ದುಶ್ಶಾಸನನಿಂದ ಆದ ದ್ರೌಪದಿಯ ಕೇಶಾಪಕರ್ಷಣ; ದ್ರೌಪದಿಯ ದೀನಾರ್ತ ಪರಿಸ್ಥಿತಿ; ಸೋತು ತಲೆತಗ್ಗಿಸಿದ ಪಾಂಡವರ ತಳಮಳ; ಭೀಮನ ಕೋಪಾಗ್ನಿಯ ಬಿರುಬು; ಭೀಷ್ಮಾದಿಗಳ ಧರ್ಮಸಂಕಟದ ಮಬ್ಬು; ವಿದುರ ವಿಕರ್ಣರ ಸಾತ್ವಿಕ ವಾಣಿಯ ಕ್ಷೀಣಕಾಂತಿ; ಕರ್ಣ ಶಕುನಿ ಕೌರವರ ಅಟ್ಟಹಾಸದ ಹೊಗೆ; ದ್ರೌಪದಿಯ ಚಾರಿತ್ರದಿಂದ ಆದ ಅಕ್ಷಯವಸ್ತ್ರದ ಪವಾಡದಿಂದ ಮೂಡಿದ ಅದ್ಭುತದ ಮಿಂಚು; ಕಡೆಗೆ ಭೀಮಾರ್ಜುನರ ಪ್ರಚಂಡ ಪ್ರತಿಜ್ಞೆಯ ಮೊಳಗು- ಎಷ್ಟೊಂದು ಭಾವ ತುಮುಲಗಳ, ಘಟನೆಗಳ ಪರಂಪರೆಯನ್ನು ಕವಿಪ್ರತಿಭೆ ಇಲ್ಲಿ ಚಿತ್ರಿಸಿದೆ! ಎಷ್ಟು ದೊಡ್ಡಪಟ; ಎಷ್ಟು ವಿವಿಧ ವರ್ಣದ ಚಿತ್ರಗಳು! ಇದೊಂದು ದಿವ್ಯ ಪ್ರತಿಭೆಯ ಶಕ್ತಿಪೂರ್ಣಸೃಷ್ಟಿ ಎನ್ನಲು ಸಭಾಪರ್ವದ ಈ ಒಂದು ಪ್ರಸಂಗ ಜ್ವಲಂತ ಸಾಕ್ಷಿಯಾಗಿದೆ.

ಪರಿಶೀಲನ (೧೯೬೭)

ಗ್ರಂಥಋಣ

೧.     The Mahabharta – Edited by Sri V.S. Sukthankar, Sabhaparvam Vol I and II, Aranyaparvan Vol. I and II, Udyogaparvam Vol I

೨.     Sukthankar Memorial Edition- P.K. Gode. Vol. I.

೩.     Notes of a Study of the Preliminary Chapters of the Mahabharata-

K. Venkatachallam Iyer.

೪.     The Mystery of Mahabharata -N.V. Thadani.

೫.     Studies in Epics and Puranas of India – A.D. Pusalkar.

೬.     Bhasa Nataka Chakram – Edited by C.R. Devadhar.

೭. Bharata Katha Manjari- Edited by Mahamahopadhyaya, Pandit Sivadatta and Kasinatha Panduranga Parab.

೮.     Kiratarjuneeya – Edited by Prof. S.V. Dixit, M.A.

೯.     ಕಿರಾತಾರ್ಜುನೀಯ- ಅನು: ಡಾ|| ಕೆ. ಕೃಷ್ಣಮೂರ್ತಿ.

೧೦.   ವೇಣೀಸಂಹಾರ ನಾಟಕಂ- ಅನು: ಟಿ. ಜಯರಾಯಾಚಾರ್ಯ.

೧೧.   ಶ್ರೀಮದ್ರಾಂಧ್ರಭಾರತಮು- ಸಂ: ವಾವಿಳ್ಲ ರಾಮಸ್ವಾಮಿ ಶಾಸ್ತ್ರಿಲು

೧೨.   ಶ್ರೀ ವಿಲ್ಲಿಪುತ್ತೂರ್ ಅವರ‍್ಗಳ್ ಭಾರತಂ- ಸಂ: ವಿ.ಎಂ. ಗೋಪಾಲಕೃಷ್ಣಮಾಚಾರ್ಯ.

೧೩.   ಸಂಸ್ಕೃತ ನಾಟಕಗಳು -ಶ್ರೀ ಎ.ಆರ್. ಕೃಷ್ಣಶಾಸ್ತ್ರಿ

೧೪.   ಹರಿದಾಸ ಕೀರ್ತನ ತರಂಗಿಣಿ- ಭಾಗ-೩, ಸಂ: ಸಂಬೋಧ ಎಂ. ರಾಮರಾವ್.

೧೫.   ಭಾರತ ತೀರ್ಥ -ಶ್ರೀಮಾಸ್ತಿ ವೆಂಕಟೇಶ ಅಯ್ಯಂಗಾರ್.

೧೬.   ಜಯಕರ್ನಾಟಕ-ಸಂಪುಟ-೧೨, ಸಂಚಿಕೆ ೨೦, ಡಿಸೆಂಬರ್ ೧೯೪೨.

೧೭.   ಪಂಪಭಾರತ-

೧೮.   ಕುಮಾರವ್ಯಾಸ ಭಾರತ- ಸಂ : ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್

೧೯.   ಗದಾಯುದ್ಧ- ಸಂ : ಎಂ.ವಿ. ರಾಮಾನುಜ ಅಯ್ಯಂಗಾರ್

೨೦.   ಸಾಳ್ವಭಾರತ- (ಮೈಸೂರು ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿರುವ [k. 69] ಹಸ್ತಲಿಖಿತ ಪ್ರತಿ.)

೨೧.   ಕರ್ಣಪಾರನ್ಯ ನೇಮಿನಾಥ ಪುರಾಣ

೨೨.   ಜಿನಭಾರತ-ಬ್ರಹ್ಮಣಾಂಕ.

* * *


[1] ಸ್ತ್ರೀ ಧರ್ಮಿಣೀ ವೇಪಮಾನಾ ರುಧಿರೇಣ ಸಮುಕ್ಷಿತಾ|
ಏಕವಸ್ತ್ರಾ ವಿಕೃಷ್ಟಾಸ್ಮಿ ದುಃಖಿತಾ ಕುರು ಸಂಸದಿ||
ರಾಜಮಧ್ಯೇ ಸಭಾಯಾಂತು ರಜಸಾಭಿಸಮೀರಿತಾಮ್|
ದೃಷ್ಟಾ ಚ ಮಾಂ ಧಾರ್ತರಾಷ್ಟ್ರಾ: ಪ್ರಹಸನ್ ಪಾಪಚೇತಸಃ||
ದಾಸೀಭಾವೇನ ಭೋಕ್ತುಂ ಮಾಮೀಷುಸ್ತೇ ಮಧುಸೂದನ|
ಜೀವತ್ಸು ಪಾಂಡುಪುತ್ರೇಷು ಪಾಂಚಾಲೇಷ್ವಥ ವೃಷ್ಣಿಷು||
[ಅರಣ್ಯಪರ್ವ; ೧,೩-೧೩-೫೪,೫೫,೫೬]

[2] ಶಾಲ್ವಸ್ಯ ನಗರಂ ಸೌಭಂ ಗತೋiಹಂ ಭರತರ್ಷಭ|
ವಿನಿಹಂತುಂ ನರಶ್ರೇಷ್ಠ ತತ್ರ ಮೇ ಶೃಣು ಕಾರಣಮ್||
[ಅರಣ್ಯಪರ್ವ: ೩-೧೫-೩]. [ಹಾಗೆಯೇ ೩-೧೪; ೧ ರಿಂದ ೧೭ ನೋಡಿ].

[3] ನಿರಾಮರ್ಷೇಷ್ವಚೇಷ್ಟೇಷು ಪ್ರೇಕ್ಷಮಾಣೇಷು ಪಾಂಡುಷು|
ತ್ರಾಹಿ ಮಾಮಿತಿ ಗೋವಿಂದ ಮನಸಾ ಕಾಂಕ್ಷಿತೋiಸ್ಮಿಮೇ||
ಯತ್ರ ಮಾಂ ಭಗವಾನ್ ರಾಜಾ ಶ್ವಶುರೋ ವಾಕ್ಯ ಮಬ್ರವೀತ್|
ವರಂ ವೃಣೀಷ್ವ ಪಾಂಚಾಲಿ ವರಾರ್ಹಸಿ ಮತಾಸಿ ಮೇ||
[ಉದ್ಯೋಗಪರ್ವ: ೫-೮೦-೨೬, ೨೭]

[4] ಶ್ರೀಕೃಷ್ಣನ ಐತಿಹಾಸಿಕತೆಯನ್ನು ಕುರಿತು ಶ್ರೀ ಎ.ಡಿ. ಪುಸಲ್ಕರ್ ಅವರು ಹೇಳಿರುವ ಈ ಮಾತುಗಳು ಗಮನಾರ್ಹವಾಗಿವೆ: “Krishna, therefore, was originally a real man as evidenced by the pre-epic literature and the earliest part of the Mahabharatha itself.” (p. 56 )

”….. It cannot, however, be said that the Mahabharatha is entirely silent as to the early life of Krishna, as there are some references to his early life in Gokul. ” (p. 58).

”….The  activities of Krishna before and during the Bharata war as recorded in the Mahabharatha, no doubt represent him as a human politician par excellence though the Mahabaratha at places attempts to identify him with the god of gods.” (p. 60)

”…. The earliest inscriptional and sculptural data indicating the ascription of divinity to Krishna dates about second century B.C. (p.65) -Studies in Epics and Puranas of India- A.D. Pusalkar, Chapter V- The Historicity of Krishna.

[5] ವೇದರಹಸ್ಯ: ಪಂಡಿತರಾಜ ವಿದ್ಯಾಲಂಕಾರ ಮಹಾಮಹೋಪಾಧ್ಯಾಯ ಡಾ. ಆರ್. ಶ್ಯಾಮಶಾಸ್ತ್ರಿಗಳು: “ಜಯಕರ್ನಾಟಕ” -ಡಿಸೆಂಬರ್ ೧೯೪೨. [ಸಂಪುಟ ೨೦- ಸಂಚಿಕೆ ೧೨]

[6] As the idea of ‘wearing cloths’ is associated with God, he who believes in him cannot be ‘unrobed’. Again in idea of God is born of sacrifice, and as Draupadi is an embodiment of sacrifice. She remembers Krishna the supreme creator of the universe, and cannot be ‘unrobed.’

[7] ಈ ಒಂದು ಅಂಶಕ್ಕೆ ನಾನು ಪೂಜ್ಯ ತೀ.ನಂ.ಶ್ರೀ. ಅವರಿಗೆ ಋಣಿಯಾಗಿದ್ದೇನೆ.

[8] Notes of a study of the preliminary chapters of the Mahabharatha- K. Venkatachallam Iyer: p. 182-183; 184.

[9] ಅಲ್ಲೇ.

[10] ತೆಲುಗು ಭಾರತದಲ್ಲಿ ಮಾತ್ರ ದ್ರೌಪದಿ ರಜಸ್ವಲೆಯಾಗಿದ್ದಳೆಂಬ ವಿಷಯವಿಲ್ಲ. “ಏಕವಸ್ತ್ರೆಯು ಅಧೋನೀವಿಯು” ಎಂದಿದೆ. ಮಹಾಭಾರತ ಸಂಪಾದಕ ಪರಿಣತರು ‘ಅಧೋನೀವಿ’ ಎಂಬುದು ರಜಸ್ವಲೆಯಾಗಿದ್ದಳೆಂಬ ವಿಷಯವನ್ನು ಸೂಚಿಸುತ್ತದೆ ಎನ್ನುತ್ತಾರೆ-

K. Venkatachallam Iyer: Notes of a study of the preliminary chapters of the Mahabharatha: p. 196.

[11] ಈ ಭಾಗದ ವಿಷಯ ಭಂಡಾರ್ಕರ್ ಪ್ರಾಚ್ಯ ಸಂಶೋಧನಾ ಸಮಿತಿಯವರಿಂದ ಪರಿಷ್ಕೃತವಾದ ಭಾರತದಲ್ಲಿ; ೨-೬೧-೧೪ ರಿಂದ ೨-೬೦-೨೩.

[12] ಮಹಾಭಾರತದ ಸಭಾಪರ್ವಕ್ಕೆ ಬರೆದ ಮುನ್ನುಡಿಯಲ್ಲಿ- Franklin Edgerton; Page XXXX-XXXII.

[13] ‘ಅಂತು ದುರ‍್ಯೋಧನನಜಾತಶತ್ರುವಿನ ಸರ‍್ವಸ್ವಮೆಲ್ಲಮಂ ಗೆಲ್ದು ಗೆಲ್ದ ಕಸವರಮೆಲ್ಲಂ ಬಂದುದು ಪಾಂಚಾಳರಾಜತನೂಜೆಯೊರ್ವಳ್ ಬಂದಳಿಲ್ಲಾಕೆಯಂ ತನ್ನಿಮೆಂದು…. ಪ್ರಾತಿಕಾಮಿ ಯೆಂಬನುಮಂ ತನ್ನ ತಮ್ಮ ದುಶ್ಯಾಸನನುಮಂ ಪೇಳ್ದೊಡೆ ಅವಂದಿರಾಗಳೆ ಬೀಡಿಂಗೆ ವಂದು ರಜಸ್ವಲೆಯಾಗಿರ್ದೆಂ ಮುಟ್ಟಲಾಗದೆನೆಯುಂ ಒತ್ತಂಬದಿಂದೊಳಗಂ ಪೊಕ್ಕು ಪಾಂಚಾಳಿಯಂ ಕಣ್ಗಿಡೆ ಜಡಿದು ಮುಡಿಯಂ ಪಿಡಿದು ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದು….’

[ಪಂಪಭಾರತ: ೭- ವಚನ. ೪, ೫ನೆ ಪದ್ಯದ ನಡುವೆ: ಪು. ೧೭೦]

ಇಲ್ಲಿ ಮೂಲದಲ್ಲಿ ಬರುವ ಧರ್ಮರಾಯನ ದೂತನನ್ನು ನಿವಾರಿಸಿರುವುದೂ, ಪ್ರಾತಿಕಾಮಿ ಹಾಗೂ ದುಶ್ಶಾಸನರೀರ್ವರನ್ನೂ ಕಳುಹಿಸುವುದೂ, ಮೂಲದ ಎರಡು ಪ್ರಸಂಗಗಳ ಯಶಸ್ವಿಯಾದ ಸಂಯೋಜನೆಯೂ, ಪರಿವರ್ತನೆಯೂ ಆಗಿದೆ.

-ನನ್ನಯ್ಯನಲ್ಲಿ ಧರ್ಮರಾಯ ದೂತನನ್ನು ಕಳುಹಿಸಿದ ಪ್ರಸಂಗವೇ ಇಲ್ಲ. ಹೀಗಾಗಿ ಅಲ್ಲಿ ಸಮಸ್ಯೆಯೇ ಏಳುವುದಿಲ್ಲ.

-ನಾರಣಪ್ಪನಲ್ಲಿ, ಮೊದಲು ಪ್ರಾತಿಕಾಮಿ ಹೋಗಿಬಂದು ದ್ರೌಪದಿಯ ಪ್ರಶ್ನೆಯನ್ನು ಬಿನ್ನವಿಸಿದಾಗ, ಕೌರವ ನೇರವಾಗಿ ದ್ರೌಪದಿಯನ್ನೆಳೆದು ತರಲು ದುಶ್ಶಾಸನನನ್ನೇ ಕಳುಹಿಸುತ್ತಾನೆ. ಅನಂತರ ದುಶ್ಶಾಸನನು ಎಳೆದುತರುತ್ತಾನೆ.

-ವಿಲ್ಲಿಪುತ್ತೂರ್ ಅವರಲ್ಲಿ ಸಂಪೂರ್ಣವಾಗಿ ನಾರಣಪ್ಪನ ಭಾರತದ ಪ್ರಸಂಗವೇ ಪುನರುಕ್ತವಾದಂತಿದೆ.

[14] ಭಾರತತೀರ್ಥ: ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುಟ ೧೯೪

[15] ಭಾರತತೀರ್ಥ: ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುಟ ೧೯೪

[16] ”It is apparently implied (though not stated) that cosmic justice automatically, or ”magically” if you like, prevented the chaste and noble Draupadi from being stripped in public.” Edgerton, Introduction, P. XXIX.

[17] ಒಂದು ಕಡೆ ಮಹಾ ಕವಿಪ್ರಜ್ಞೆ ಕಾವ್ಯವನ್ನು ಕಟ್ಟುತ್ತಿರುವಂತೆಯೇ, ಅದೇ ಕಾವ್ಯವಸ್ತುವನ್ನು ಕುರಿತು ಆ ಮೊದಲೇ ಪ್ರಕ್ಷೇಪ ಪ್ರಜ್ಞೆ ನಿರ್ಮಿಸಿದ ಹಲವು ಪ್ರಸಂಗಗಳನ್ನು ಅಳವಡಿಸಿಕೊಂಡು ಪ್ರಯೋಜನ ಪಡೆಯುತ್ತದೆ. ಇನ್ನು ಹಲವು ವೇಳೆ ಮಹಾಕವಿಯ ಕಾವ್ಯ ನಿರ್ಮಾಣವಾದಮೇಲೂ ಈ ಪ್ರಕ್ಷೇಪ ಪ್ರಜ್ಞೆ, ಅವಕಾಶ ಸಿಕ್ಕೆಡೆಯಲ್ಲಿ ತನ್ನ ಕೈಚಳಕವನ್ನು ಸೇರಿಸುತ್ತದೆ. ಅಲ್ಲಿನ ಶೂನ್ಯವನ್ನು ಹಲವು ಸಲ ಭರ್ತಿ ಮಾಡುವುದುಂಟು, ಅಲ್ಲಿನ ಸಮಸ್ಯೆಗಳಿಗೆ ಉತ್ತರವನ್ನು ಸೇರಿಸುವುದುಂಟು; ಎಷ್ಟೋ ಸಲ ತನಗಾಗದ ಮತವೊಂದರ ಖಂಡನ ಮಂಡನಗಳೂ, ಅಥವಾ ತಾನು ಒಪ್ಪಿಕೊಂಡ ವಾದ ನೀತಿಬೋಧೆಗಳೂ ಪ್ರಕ್ಷೇಪಕಾರರಿಂದ ಮಹಾಕಾವ್ಯದಲ್ಲಿ ಬಂದು ಮನೆ ಮಾಡಲೂಬಹುದು. ಎಷ್ಟೋ ಸಲ ಮೂಲದ ಧ್ವನಿಪೂರ್ಣ ಮೌನ ಈ ಪ್ರಕ್ಷೇಪಗಳ ಪೂರಣದಿಂದ ವಾಚ್ಯವಾಗುವುದೂ ಉಂಟು; ಎಲ್ಲೋ ಒಮ್ಮೊಮ್ಮೆ ಕವಿ ಕಾಣದ್ದನ್ನು ಈ ಪ್ರಕ್ಷೇಪಕಾರ ಕಂಡರಿಸಿ ಸೇರಿಸಿ ಸೊಗಸನ್ನು ತರಬಹುದು. ಅಂತೂ ಮಹಾಕವಿಪ್ರಜ್ಞೆಯ ಜೊತೆಯಲ್ಲಿಯೇ ಈ ಪ್ರಕ್ಷೇಪಪ್ರಜ್ಞೆಯೂ ಸಹಯಾತ್ರಿಯಾಗಿ ಹಿಂಬಾಲಿಸಿ ಬಂದು ಸಮಯ ದೊರೆತಾಗ ಮಹಾಕವಿ ಕೃತಿಯಲ್ಲಿ ಮನೆಮಾಡಿ ಕೂತುಬಿಡುತ್ತದೆ!

[18] ಪುರಂದರದಾಸರದೆಂದು ಹೇಳಲಾದ ‘ದ್ರೌಪದಿಯ ವಸ್ತ್ರಾಪಹರಣ’ದಲ್ಲಿ, “ಸೆಳೆಯುತಿರ್ದನು ಖಳನು ಬೆಳೆಯುತಿರ್ದವು ಸೀರೆ| ಪೊಳೆವ ಪೊಂಬಟ್ಟೆ ನಾನಾ ವಿಚಿತ್ರದ ಬಣ್ಣ| ಹೊಳಲು ತುಂಬುವ ತೆರದಿ ಸೆಳೆಸೆಳೆದು ಬಳಲಿ ಇಳೆಯೊಳಗೊರಗಿದ|” -ಎಂಬ ಪದ್ಯ ಮುಗಿದ ಮೇಲೆ “ಸಿಟ್ಟಿನಲಿ ದ್ರೌಪದಿಯು ಕಣ್ದೆರೆದು ನೋಡಲಾ| ಬೆಟ್ಟದಂತೊಟ್ಟಿರ್ದ ವಸ್ತ್ರರಾಸಿಗಳೆಲ್ಲ| ಸುಟ್ಟಗ್ನಿ ಹೊರಸೂಸಿ ನೆಟ್ಟನಾ ರಾಜಗೃಹ ಥಟ್ಟನಾಹುತಿಗೊಂಡಿತು| ಕೊಟ್ಟಳೈ ಶಾಪವನು  ಕುರುಪತಿಗೆ ಕಮಲಮುಖಿ| ಕಟ್ಟಾಳು ಭೀಮಸೇನನ ಗದೆಯು ರಣದಲ್ಲಿ| ಕುಟ್ಟಿಬಿಸುಡಲಿ ನಿನ್ನ ತೊಡೆಗಳೆರಡನು ಎಂದು ಇಟ್ಟ ನುಡಿ ತಪ್ಪಲುಂಟೆ||” ಎಂಬ ಪದ್ಯ ಬರುತ್ತದೆ.

ಹರಿದಾಸ ಕೀರ್ತನ ತರಂಗಿಣಿ: ಸುಬೋಧ ಎಂ. ರಾಮರಾವ್, ದ್ರೌಪದೀ ವಸ್ತ್ರಾಪಹರಣ (ಭಾಗ II, ಪು. ೧೬೪, ಕೀ. ೧೦-೧೧).

[19] However edifying from the religious stand point the prayer to Krishna and his intervention may be, from the purely secular and artistic stand point I believe- most people- at least when they get used to it, and if they can detach themselves from familiar memories (which no one quite likes to giveup at first)- will find that original version is finer than any of the ‘doctored’ ones.

-Edgerton, Introduction to Sabhaparva, P.XXIX.

[20] ಸಂಮಾರ್ಜತಾಂ ವೇಶ್ಮ ಪರೈತು ಶೀಘ್ರ-
ಮಾನಂದೋ ನಃ ಸಹ ದಾಸೀಭಿರಸ್ತು -೨-೫೯-೧ (ಉತ್ತರಾರ್ಧ)

[21] ದುಶ್ಯಾಸನ ಹೇಳಿದ್ದು-

ರಜಸ್ವಲಾ ವಾ ಭವ ಯಾಜ್ಞಸೇನಿ
ಏಕಾಂಬರಾ ವಾಪ್ಯಥ ವಾ ವಿವಸ್ತ್ರಾ|
ದ್ಯೂತೇ ಜಿತಾ ಚಾಸಿ ಕೃತಾಸಿ ದಾಸಿ
ದಾಸೀಷು ಕಾಮಶ್ಚ ಯಥೋಪಜೋಹಮ್|| ೨-೬೦-೨೭.

ಕರ್ಣ ಹೇಳಿದ್ದು:

ಏಕೋ ಭರ್ತಾ ಸ್ತ್ರೀಯಾ ದೇವ್ಯೆರ್ವಿಹಿತಃ ಕುರುನಂದನ|
ಇಯಂ ತ್ವನೇಕವಶಗಾ ಬಂಧಕೀತಿ ವಿನಿಶ್ಚಿತಾ||
ಅಸ್ಯಾಃ ಸಭಾಮಾನಯನಂ ನ ಚಿತ್ರಮಿತಿ ಮೇ ಮತಿಃ|
ಏಕಾಂಬರಧರತ್ವಂ ವಾಪ್ಯಥವಾಪಿ ವಿವಸ್ತ್ರತಾ||    -೨-೬೧-೩೫-೩೬

ಕರ್ಣ: ಪಾಂಡವಾನಾಂ ಚ ವಾಸಾಂಸಿ ದ್ರೌಪದ್ಯಾಶ್ಚಾಪ್ಯುಪಾಹರ         ೨-೬೧-೩೮.

[22] ೨-೬೧-೧೦ ರಿಂದ ೨-೬೧-೨೪ರ ತನಕ: ಸಭಾಪರ್ವದಲ್ಲಿ.

[23] ನ ಧರ್ಮಸೌಕ್ಷ್ಮ್ಯಾತ್ಸುಭಗೇ ವಿವಕ್ತುಂ
ಶಕ್ನೋಮಿತೇ ಪ್ರಶ್ನಮಿದಂ ಯಥಾವತ್            -೨-೬೦-೪೦.

[24] ಅಸ್ಯಾಃ ಕೃತೇ ಮನ್ಯುರಯಂ ತ್ವಯಿ ರಾಜನ್ನಿಪಾತ್ಯತೇ
ಬಾಹೂ ತೇ ಸಂಪ್ರಧಕ್ಷ್ಯಾಮಿ ಸಹದೇವಾಗ್ನಿಮಾನಯ         -೨-೬೧-೬