೧೮೯೩ರಲ್ಲಿ ಅಮೆರಿಕದ ಷಿಕಾಗೋ ನಗರದಲ್ಲಿ ನಡೆದ ಸರ್ಮಧರ್ಮ ಸಮ್ಮೇಳನದಲ್ಲಿ ಸನಾತನ ಹಿಂದು ಧರ್ಮದ ಸಂದೇಶವನ್ನು ಬಿತ್ತರಿಸಿದವರು ಯಾರು?

ಸ್ವಾಮಿ ವಿವೇಕಾನಂದರು.

ಸ್ವಾಮಿ ವಿವೇಕಾನಂದರ ಗುರುಗಳೇ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು. ಅವರ ಸಂನ್ಯಾಸಿ ಶಿಷ್ಯರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಬೋಧಪ್ರದ ವಿಚಾರಗಳ ಪ್ರಚಾರದಿಂದ ಪ್ರಸಿದ್ಧರಾದರು. ವಿವೇಕಾನಂದರಿಗೆ ಬಹಳ ಅಚ್ಚುಮೆಚ್ಚಾದವರು ಸ್ವಾಮಿ ಅಖಂಡಾನಂದರು.

ಅಖಂಡಾನಂದರ ಸಂನ್ಯಾಸಕ್ಕೆ ಮೊದಲಿನ ಹೆಸರು ’ಗಂಗಾಧರ’ ಎಂದು. ಪ್ರೀತಿಯಿಂದ ವಿವೇಕನಾಂದರು ಗಂಗಾಧರರನ್ನು ’ಗ್ಯಾಂಜಿಸ್’ ಎಂದು ಕರೆಯುತ್ತಿದ್ದರು. ಗಂಗೆಯನ್ನು ಇಂಗ್ಲಿಷ್‌ನಲ್ಲಿ ಗ್ಯಾಂಜಿಸ್ ಎನ್ನುತ್ತಾರೆ. ಗಂಗೆಯು ಪರಮ ಪವಿತ್ರಳು. ಜನರ ಪಾಪತಾಪಗಳನ್ನು ತೊಳೆಯುವ ಶಕ್ತಿಯುಳ್ಳವಳು ಎಂದು ಜನರು ನಂಬುತ್ತಾರೆ. ಗಂಗಾಧರರೂ ಪವಿತ್ರ ಜೀವನವನ್ನು ನಡೆಸಿ ದೇವರ ದಾರಿಯಲ್ಲಿ ನಡೆದವರು. ಇತರರ ದುಃಖ, ಸಂಕಟಗಳನ್ನು ಕಂಡು ಮರುಗಿ ಅವನ್ನು ದೂರ ಮಾಡುವುದಕ್ಕಾಗಿ ನಿರಂತರ ಹೋರಾಡಿದವರು; ತಮ್ಮ ಜೀವನವನ್ನೇ ಆ ಕಾರ್ಯಕ್ಕೆ ಮುಡಿಪಾಗಿಟ್ಟವರು.

ಜನನ-ಬಾಲ್ಯ

ಅವರು ಹುಟ್ಟಿದ್ದು ೧೮೬೪ನೇ ಸೆಪ್ಟೆಂಬರ್ ೩೦ನೇ ತಾರೀಖಿನ ದಿನ. ಕಲ್ಕತದ ಅಹಿರಿತಲ ಎಂಬಲ್ಲಿ. ತಂದೆಯ ಹೆಸರು ಶ್ರೀಮಂತ ಗಂಗೋಪಾಧ್ಯಾಯ. ತಾಯಿ ವಾಮಾಸುಂದರಿ ದೇವಿ. ಸಂಪ್ರದಾಯವಂತರು ಅವರು. ನಿಷ್ಠಾವಂತ ವಿದ್ವಾಂಸರ ಮನೆತನ. ಚಿಕ್ಕಂದಿನಲ್ಲಿ ಅನುಕರಣೆ, ಹಾಸ್ಯ ನಾಟಕಗಳಲ್ಲಿ ಗಂಗಾಧರರಿಗೆ ಅಭಿರುಚಿ. ಎಂಥ ನೋವನ್ನೂ ಸಹಿಸಬಲ್ಲ ಸಹನಶಕ್ತಿ ಆಶ್ಚರ್ಯವೆನಿಸುವ ಮಾನಸಿಕ ಶಕ್ತಿ ಮತ್ತು ಏಕಾಗ್ರತೆ.

ಶಾಲೆಯಲ್ಲಿ ಗಂಗಾಧರರು ಉತ್ತಮ ವಿದ್ಯಾರ್ಥಿ. ಸ್ನೇಹಿತರ ನೋವು, ನರಳಾಟಗಳನ್ನು ಕಂಡು ಮರುಗುವ ಹೃದಯ. ಎಷ್ಟೋ ವೇಳೆ ತಾನು ಧರಿಸಿದ ಬಟ್ಟೆಗಳನ್ನು ತನ್ನ ಬಡ ಗೆಳೆಯರಿಗೆ ದಾನಮಾಡಿದುದುಂಟು. ಗಂಗಾಧರರ ಇನ್ನೊಂದು ವೈಶಿಷ್ಟ್ಯ ದೇವರಲ್ಲಿ ಶ್ರದ್ಧಾಭಕ್ತಿ, ಧಾರ್ಮಿಕ ಕಾರ್ಯಕಲಾಪಗಳಲ್ಲಿ ಆಸಕ್ತಿ. ಉಪನಯನದ ಬಳಿಕ ದಿನವೂ ಗಂಗೆಯಲ್ಲಿ ನಾಲ್ಕಬಾರಿ ಸ್ನಾನ ಮಾಡುವರು. ತಾವೇ ಸ್ವತಃ ಅಡುಗೆ ಮಾಡಿ ಊಟ ಮಾಡುವರು. ಭಗವದ್ಗೀತೆ, ಉಪನಿಷತ್ತು ಮೊದಲಾದ ಧಾರ್ಮಿಕ ಗ್ರಂಥಗಳನ್ನು ನಿತ್ಯವೂ ನಿಯಮಿತ ರೀತಿಯಲ್ಲಿ ಓದುವರು. ಪ್ರಾರ್ಥನೆ, ಜಪ, ಧ್ಯಾನಧಾರಣೆಗಳನ್ನು ತಪ್ಪದೇ ಮಾಡುವರು. ಪ್ರಾಣಾಯಾಮದ ಹುಚ್ಚು ಅವರಿಗೆ. ಗಂಗೆಯಲ್ಲಿ ಮುಳುಗಿ ಕಲ್ಲನ್ನು ಹಿಡಿದುಕೊಂಡು ಉಸಿರುಗಟ್ಟಿ ಕುಳಿತುಕೊಳ್ಳುವುದು ಅವರ ಒಂದು ಹವ್ಯಾಸ. ಸಾಧು-ಸಂತರನ್ನು, ಯೋಗಿ-ಮಹಾತ್ಮರನ್ನು ಕಾಣಲು ಎಷ್ಟು ದೂರ ಹೋಗಲೂ ಅವರು ಸಿದ್ಧರು. ಬಾಲ್ಯದಿಂದಲೇ ಕಠೋರ ನಿಯಮಪಾಲನೆ ಮಾಡುತ್ತಿದ್ದರು.

ಗುರುವಿನ ದರ್ಶನ

ಆ ಕಾಲದಲ್ಲಿ ಕಲ್ಕತ್ತದ ಉತ್ತರದಲ್ಲಿರುವ ದಕ್ಷಿಣೇಶ್ವರ ದೇವಾಲಯದಲ್ಲಿ ಓರ್ವ ಅಪೂರ್ವ ವ್ಯಕ್ತಿ ನೆಲೆಸಿದ್ದರು. ಶಾಲೆ, ಕಾಲೇಜುಗಳಲ್ಲಿ ಓದುವ ಅನೇಕ ಯುವಕರನ್ನು ಮತ್ತು ಭಕ್ತರನ್ನು ಅವರು ತನ್ನೆಡೆಗೆ ಆಕರ್ಷಿಸಿದ್ದರು. ಅವರನ್ನು ಜನರು ಶ್ರೇಷ್ಠ ಗುರುಗಳೆಂದು, ಸಿದ್ದಿಯನ್ನು ಹೊಂದಿದ ಮಹಾಮಹಿಮರೆಂದು, ಪರಮಹಂಸರಂದು, ಅವತಾರ ಪುರುಷರೆಂದು ಕರೆಯುತ್ತಿದ್ದರು. ಅವರೇ ಭಗವಾನ್ ಶ್ರೀ ರಾಮಕೃಷ್ಣರು. ಎಲ್ಲ ಮತಗಳೂ ಭಗವಂತನೆಡೆಗೆ ಹೋಗುವ ವಿವಿಧ ಪಥಗಳು ಎಂದು ಅನುಭವದಿಂದ ಕಂಡುಕೊಂಡವರು; ಮತದ ಹೆಸರಲ್ಲಿ ಜಗಳ ಸಲ್ಲದು ಎಂದವರು. ಆದುದರಿಂದ ತಿಳಿದವರು ಅವರನ್ನು ಸರ್ವಧರ್ಮ ಸಮನ್ವಯಾಚಾರ್ಯರು ಎಂದು ಕರೆಯುತ್ತಿದ್ದರು.

೧೮೮೩ ನೆಯ ಇಸವಿ. ಸೆಕೆಗಾಲದ ಒಂದು ಮಧ್ಯಾಹ್ನ. ತಮ್ಮ ಸ್ನೇಹಿತರಾದ ಹರಿನಾಥರ ಜೊತೆ ಗಂಗಾಧರರು ದಕ್ಷಿಣೇಶ್ವರದ ಮಹಾಗುರುವನ್ನು ನೋಡಲು ಹೊರಟರು. ಶ್ರೀ ರಾಮಕೃಷ್ಣರ ಕೋಣೆಯನ್ನು ಪ್ರವೇಶಿಸಿ ಇಬ್ಬರೂ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು.

ಶ್ರೀರಾಮಕೃಷ್ಣರು ನಗುತ್ತ ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು- ಮೊದಲೇ ಪರಿಚಯವಿದ್ದವರಂತೆ. ಆ ದಿನ ಗಂಗಾಧರರಿಗೆ ಅಲ್ಲಿಯೇ ಅವರ ಜೊತೆ ಇರಲು ಹೇಳಿದರು. ಸಾಯಂಕಾಲ ದಕ್ಷಿಣೇಶ್ವರದ ಎಲ್ಲ ದೇವಮಂದಿರ ಗಳನ್ನೂ ತೋರಿಸಿದರು. ಸಂಜೆಯಾದ ಬಳಿಕ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತ ಶ್ರೀ ರಾಮಕೃಷ್ಣರನ್ನು ಗಂಗಾಧರರು ಕಂಡಾಗ ಅವರು ಗಾಢಧ್ಯಾನದಲ್ಲಿ ಮುಳುಗಿ ಸಮಾಧಿಸ್ಥರಾಗಿದ್ದರು. ಹೊರ ಜಗತ್ತಿನ ಅರಿವೇ ಇರಲಿಲ್ಲ. ಪೂರ್ಣಮನಸ್ಸು ದೇವರಲ್ಲಿ ಲೀನವಾದ ಸ್ಥಿತಿ ಅದು. ಮುಖದಲ್ಲಿ ಮಾತ್ರ ಮಂದಹಾಸ ಮಿನುಗುತ್ತಿತ್ತು. ಗಂಗಾಧರರು ಮರುದಿನ ಮನೆಗೆ ಹಿಂದಿರುವಾಗ “ಇನ್ನೊಮ್ಮೆ ಬಾ” ಎಂದರು ಶ್ರೀ ರಾಮಕೃಷ್ಣರು. ಶ್ರೀ ರಾಮಕೃಷ್ಣರ ’ಇನ್ನೊಮ್ಮೆ ಬಾ’ ಎಂಬ ಪ್ರೀತಿಯ ಕರೆಯನ್ನು ಗಂಗಾಧರರು ಮರೆಯಲಾಗಲಿಲ್ಲ.

ಮನೆಗೆ ಮರಳುತ್ತ ಗಂಗಾಧರರು ಯೋಚಿಸಿದರು; ’ಯಾರಿವರು? ತಂದೆ, ತಾಯಿ, ಸ್ನೇಹಿತರುಗಳ ಎಲ್ಲ ಪ್ರೀತಿಯನ್ನು ಒಂದುಗೂಡಿಸಿದರೂ ಸರಿದೂಗದ ಪ್ರೀತಿಯಿಂದ ನೋಡಿಕೊಂಡರಲ್ಲ! ಎಂಥ ಅದ್ಭುತ ವ್ಯಕ್ತಿ!’

ಗುರುವಿನೊಡನೆ -ದೇವರೆಡೆಗೆ

ಅವರು ಎರಡನೇ ಬಾರಿ ದಕ್ಷಿಣೇಶ್ವರಕ್ಕೆ ಹೋದಾಗ ದೇವಾಲಯದಲ್ಲಿ ಸಂಜೆಯ ಆರತಿ ಮುಗಿದಿತ್ತು. ಶ್ರೀರಾಮ ಕೃಷ್ಣರು ಗಂಗಾಧರರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಅವರನ್ನು ತಮ್ಮ ಕೋಣೆಯಲ್ಲಿ ಚಾಪೆಯ ಮೇಲೆ ಕುಳಿತಿರಲು ಹೇಳಿದರು. ಧ್ಯಾನಮಾಡುವಾಗ ಹೇಗೆ ಸ್ಥಿರವಾಗಿ ಕುಳಿತಿರಬೇಕು ಎಂಬುದನ್ನು ತೋರಿಸಿ ಕೊಟ್ಟರು. ಆ ರಾತ್ರಿಯೇ ಗಂಗಾಧರ ನಾಲಿಗೆಯ ಮೇಲೆ ಮಂತ್ರಾಕ್ಷರಗಳನ್ನು ಬರೆದು ದೀಕ್ಷೆಯನ್ನು ಕೊಟ್ಟರು. ದೀಕ್ಷೆಯನ್ನು ಪಡೆದ ಕೂಡಲೇ ಗಂಗಾಧರರು ಧ್ಯಾನದಲ್ಲಿ ಮುಳುಗಿ ಆವೆರೆಗೆ ಕಂಡಿರದ ಅಪೂರ್ವ ಶಾಂತಿ ಮತ್ತು ಆನಂದವನ್ನು ಅನುಭವಿಸಿದರು. ’ಅತಿ ಪ್ರಾಣಾಯಾಮ ಮಾಡಬೇಡ, ಅದರಿಂದ ಗುಣಪಡಿಸಲಾಗದ ರೋಗವುಂಟಾಗಬಹುದು’ ಎಂದು ಶ್ರೀರಾಮಕೃಷ್ಣರು ಎಚ್ಚರಿಕೆ ನೀಡಿದರು. ದೇವರ ದಾರಿಯಲ್ಲಿ ಬೇಗನೆ ಮುನ್ನಡೆಯ ಬೇಕೆನ್ನುವವರು ಹೆಣ್ಣು ಮತ್ತು ಹಣದ ಆಸೆಯನ್ನು ತೊರೆಯಬೇಕು, ಬ್ರಹ್ಮಚರ್ಯದಲ್ಲಿ ದೃಢನಿಷ್ಠರಾಗಬೇಕು ಎಂದು ಹೇಳಿ ಸಾಧನೆಯ ರಹಸ್ಯವನ್ನು ಬೋಧಿಸಿದರು. ’ಭಗವಂತನನ್ನು ಪಡೆದರೆ ಎಲ್ಲವನ್ನೂ ಪಡೆಯಬಹುದು; ಮೊದಲು ಭಗವಂತನ ಕೃಪೆಯನ್ನು ಹೇಗಾದರೂ ಮಾಡಿ ಪಡೆಯಬೇಕು. ಆ ಬಳಿಕ ದಯೆ, ಪರೋಪಕಾರ, ಜೀವನ ಉದ್ಧಾರ, ಸೇವೆ-ಇವುಗಳನ್ನು ಮಾಡಬಹುದು. ತಾನು ಪವಿತ್ರನಾಗದೇ ಇತರರಿಗೆ ನಿಜವಾದ ಉಪಕಾರ ಮಾಡಲಾಗುವುದಿಲ್ಲ. ಸ್ವಾರ್ಥ, ಅಸೂಯೆ, ಅಹಂಕಾರ, ದ್ವೇಷ-ಇವು ಮನಸ್ಸಿನಲ್ಲಿ ಮನೆಮಾಡಿಕೊಂಡಿರುತ್ತವೆ. ಅವುಗಳನ್ನು ಸುಲಭವಾಗಿ ಬಿಡಲು ಸಾಧ್ಯವಿಲ್ಲ’ ಎಂದರು ಶ್ರೀರಾಮಕೃಷ್ಣರು.

ಇನ್ನೊಂದು ದಿನ ರಾಮಕೃಷ್ಣರು ’ದೇವರನ್ನು ಹೇಗೆ ಪ್ರಾರ್ಥಿಸಬೇಕು ಗೊತ್ತೇ?’ ಎಂದು ಪ್ರಶ್ನಿಸಿ, ಚಿಕ್ಕ ಮಗುವು ತಾಯಿಯನ್ನು ಅಳುತ್ತ ಕರೆಯುವಂತೆ ’ಅಮ್ಮಾ ನನಗೆ ಜ್ಞಾನವನ್ನು ಕೊಡು, ಭಕ್ತಿಯನ್ನು ಕೊಡು, ನನಗೆ ಬೇರೇನೂ ಬೇಡ ತಾಯಿ, ಆದರೆ ನಿನ್ನ ದರ್ಶನವನ್ನು ಮಾತ್ರ ಅನುಗ್ರಹಿಸು’ ಎಂದು ಪ್ರಾರ್ಥಿಸಿದರು. ಹಾಗೆ ಕಂನಿದುಂಬಿ ಪ್ರಾರ್ಥಿಸುತ್ತ ಅವರು ಗಾಢಧ್ಯಾನದಲ್ಲಿ ಮುಳುಗಿ ಸಮಾಧಿಸ್ಥರಾದರು. ಮತ್ತೊಂದು ದಿನ ಶ್ರೀರಾಮಕೃಷ್ಣರು ಗಂಗಾಧರರನ್ನು ಕುರಿತು, “ನೀನಿನ್ನೂ ಚಿಕ್ಕವನು; ಅಷ್ಟೆಲ್ಲ ಮಡಿವಂತಿಕೆ ಏಕೆ? ನರೇಂದ್ರವನ್ನು ನೋಡು. ಅವನು ಚೆನ್ನಾಗಿ ಉಂಡುಉಟ್ಟು ಆನಂದದಿಂದ ಇದ್ದಾನೆ. ಧ್ಯಾನಕ್ಕೆ ಕುಳಿತರೆ ಮೈಮರೆಯುತ್ತಾನೆ. ಎಲ್ಲೆಲ್ಲೂ ದೇವರನ್ನು ಕಾಣುತ್ತಾನೆ. ನೀನು ಅವನನ್ನು ಭೇಟಿ ಮಾಡು” ಎಂದರು.

ಗಂಗಾಧರರು, ಮುಂದೆ  ವಿವೇಕಾನಂದರೆಂದು ಪ್ರಸಿದ್ಧರಾದ ನರೇಂದ್ರನಾಥರನ್ನು ಅವರ ಮನೆಯಲ್ಲಿ ಕಂಡರು. ಪ್ರಥಮ ನೋಟದಿಂದಲೇ ಅವರಿಬ್ಬರಲ್ಲೂ ಪರಸ್ಪರ ಪ್ರೀತಿ ವಿಶ್ವಾಸಗಳು ಮೂಡಿದವು; ದಿನಗಳೆದಂತೆ ಅವರ ಸ್ನೇಹ ಗಾಢವಾಯಿತು.

ನಿಯಮಗಳನ್ನು ಬಿಡಬೇಕೆ?

“ಅಷ್ಟೆಲ್ಲ ಮಡಿವಂತಿಕೆ ಏಕೆ?’ ಎಂದರಲ್ಲ? ಈ ನಿಯಮಗಳ ಪಾಲನೆಯನ್ನು ಬಿಟ್ಟುಬಿಡಬೇಕೆ?’ ಎಂಬ ಸಂದೇಹ ಗಂಗಾಧರರಿಗೆ ಬಂದಿತು. ಈ ಸಂಶಯವನ್ನು ಮನಸ್ಸಿನಲ್ಲಿ ಮೆಲುಕಾಡುತ್ತ ಒಂದು ದಿನ ಶ್ರೀ ರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಹೋದರು. ಕೋಣೆಯನ್ನು ಪ್ರವೇಶಿಸಿ ಶ್ರೀಗುರುವಿಗೆ ನಮಸ್ಕರಿಸಿ ಅಲ್ಲಿಯೇ ಒಂದುಕಡೆ ಕುಳಿತುಕೊಂಡರು.  ಆಗ ಭಕ್ತರೊಬ್ಬರು ಶ್ರೀರಾಮಕೃಷ್ಣರನ್ನು ಹೀಗೆಂದು ಪ್ರಶ್ನಿಸಿದರು: ಮಹಾಶಯರೆ, ನಿಮ್ಮ ಬಳಿ ಇರುವ ಈ ಯುವಕರು ಸಂಸಾರವನ್ನು ತೊರೆದು ಸಂನ್ಯಾಸಿಗಳಾಗಲು ಬರುತ್ತಾರೆಯೆ? ಇದು ಸರಿಯೆ? ಇದಕ್ಕೆ ನಿಮ್ಮ ಪ್ರೋತ್ಸಾಹವೆ?”

ಶ್ರೀರಾಮಕೃಷ್ಣರು ಹೀಗೆಂದರು: “ನೋಡಪ್ಪ, ನೀವು ಈ ಯುವಕರ ಈಗಿನ ಜನ್ಮವನ್ನೇ ನೋಡುತ್ತಿದ್ದೀರಿ. ಹಿಂದಿನ ಜೀವನಗಳ ವಿಚಾರ ತಿಳಿಯಲಾರಿರಿ. ಹಿಂದಿನ ಜೀವನಗಳಲ್ಲಿ ಇವರೆಲ್ಲ ಗೃಹಸ್ಥ ಧರ್ಮವನ್ನು ಮುಗಿಸಿ ಬಿಟ್ಟಿದ್ದಾರೆ…. ಆದುದರಿಂದ ಇಂಥ ಸಾತ್ವಿಕಭಾವ ಉದಯವಾಗಿದೆ. ಕೆಲವರು ಬಾಲ್ಯದಿಂದಲೇ ಎಂಥ ಕಠೋರ ನಿಯಮಗಳನ್ನು ಪಾಲಿಸುತ್ತಾರೆ, ಏನು ಕತೆ! ತಪಸ್ಸು, ತ್ಯಾಗ ಅವರನ್ನು ಆಕರ್ಷಿಸುತ್ತದೆ. ಅಂಥ ಆಸಕ್ತಿಯನ್ನು ಬೆಳೆಸಿಕೊಂಡವರಿಗೆ ನಾನು ಸಹಾಯ ಮಾಡಬೇಡವೇ?”

ಗಂಗಾಧರರ ಸಂಶಯ ದೂರವಾಯಿತು. ಧ್ಯಾನ ಸಿದ್ಧರಾದಂಥ ಸ್ವಾಮಿ ವಿವೇಕಾನಂದರ ಮಾತು ಬೇರೆ. ಸಿದ್ಧಿಯನ್ನು ಪಡೆಯುವವರೆಗೂ ನಿಯಮಪಾಲನೆ ಬಿಡತಕ್ಕದ್ದಲ್ಲ ಎಂದು ಖಚಿತಪಡಿಸಿಕೊಂಡರು.

’ನೀನು ಆದರ್ಶ ಸಂನ್ಯಾಸಿ ಜೀವನ ನಡೆಸುವೆ’

ಗಂಗಾಧರರು ಆಗಾಗ ದಕ್ಷಿಣೇಶ್ವರಕ್ಕೆ ಹೋಗುತ್ತ ತನ್ನ ಗುರುದೇವನನ್ನು ಹತ್ತಿರದಿಂದ ಕಂಡರು. ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಶಕ್ತಿ, ದೇವರ ಸ್ಮರಣೆಯಿಂದಲೆ ಅವರಿಗುಂಟಾಗುವ ಧ್ಯಾನ ಸಮಾಧಿ, ಮಗುವಿನಂಥ ಅವರ ಸರಳತೆ, ಆಶ್ಚರ್ಯವೆನಿಸುವ ತಪಸ್ಸು, ತ್ಯಾಗ, ಸಂಯಮ, ಅಹಂಕಾರಶೂನ್ಯತೆ, ಎಲ್ಲ ಧರ್ಮಗಳಲ್ಲೂ ಸಾರವಾದುದನ್ನು ಕಂಡ ಅವರ ವಿಶಾಲ ದೃಷ್ಟಿ, ಕಠಿಣವಾದ ವಿಷಯಗಳನ್ನು ಸುಲಭ ಮಾತಿನಿಂದ ತಿಳಿಸುವ ಅವರ ಜಾಣ್ಮೆ, ನೋಟದಿಂದಲೇ ಮನುಷ್ಯರ ಮನಸ್ಸಿನಲ್ಲಿ ಅಡಗಿರುವ ರಹಸ್ಯಗಳನ್ನು ತಿಳಿಯುವ ಶಕ್ತಿ, ಅವರ ಅಸಾಮಾನ್ಯ ಪ್ರೇಮ ಮತ್ತು ಕರುಣೆ-ಇವುಗಳನ್ನು ಕಂಡ ಗಂಗಾಧರರು ಎಣೆಯಿಲ್ಲದ ಮಹಾಪುರುಷರ ಹತ್ತಿರ ತಾನಿದ್ದೇನೆಂಬುದನ್ನು ಸ್ಪಷ್ಟವಾಗಿ ಅರಿತರು. ಅವರ ಉಪದೇಶವನ್ನು ಕೇಳುತ್ತ ಕೇಳುತ್ತ ಅವರ ಜೀವನದ ಆದರ್ಶಗಳನ್ನು ಚಿಂತನೆ ಮಾಡುತ್ತ ಧರ್ಮಸೂಕ್ಷ್ಮವನ್ನು ತಿಳಿದುಕೊಂಡರು; ಸಾಧನೆಯ ರಹಸ್ಯವನ್ನು ಅರಿತು ಕೊಂಡರು.

‘ನೀನು ಆದರ್ಶ ಸಂನ್ಯಾಸಿ ಜೀವನ ನಡೆಸುವೆ’

ಆ ದಿನಗಳಲ್ಲೆ ಶ್ರೀರಾಮಕೃಷ್ಣರಿಗೆ ಗಂಟಲು ನೋವು ಕಾಣಿಸಿತು. ಅವರ ಆರೋಗ್ಯ ಕೆಡುತ್ತ ಬಂದಿತು. ಶಿಷ್ಯರೆಲ್ಲರೂ ಅವರ ಸೇವೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದರು. ಈ ಕಾಲದಲ್ಲೆ ತಮ್ಮ ಭಾವೀ ಸಂನ್ಯಾಸಿ ಶಿಷ್ಯರಿಗೆ ತಮ್ಮ ಕೈಯಿಂದಲೇ ಕಾವಿ ಬಟ್ಟೆಗಳನ್ನು ಶ್ರೀರಾಮಕೃಷ್ಣರು ಕೊಟ್ಟರು. ಗಂಗಾಧರರಿಗೆ ಕಾವಿ ಬಟ್ಟೆಯನ್ನು ಕೊಡುತ್ತ, “ಭಯವಿಲ್ಲ-ನೀನು ಆದರ್ಶ ಸಂನ್ಯಾಸೀ ಜೀವನ ನಡೆಸುವೆ” ಎಂದು ಆಶೀರ್ವದಿಸಿದರು. ಈ ಘಟನೆಯ ಕೆಲವು ದಿನಗಳ ಬಳಿಕ ಶ್ರೀರಾಮಕೃಷ್ಣರು ಈ ಜಗತ್ತಿನಿಂದ ಕಣ್ಮರೆಯಾದರು.

೧೮೮೬ನೇ ಆಗಸ್ಟ್‌ತಿಂಗಳಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದ ಬಳಿಕ ಗಂಗಾಧರರು ’ಅಖಂಡಾನಂದ’ರಾದರು. ಭಗವಂತನಿಲ್ಲದ ಸ್ಥಳ ಇಲ್ಲ. ಸರ್ವಭೂತಗಳಲ್ಲೂ ವ್ಯಾಪಿಸಿ ಅಖಂಡನಾಗಿರುವ ಭಗವಂತನಲ್ಲೇ ಯಾರಿಗೆ ಆನಂದವೋ ಅವರೇ ಅಖಂಡಾನಂದರು. ಇದು ಅವರ ಹೆಸರಿನ ಅರ್ಥ. ಆ ಹೆಸರು ಅವರ ಪವಿತ್ರತೆಯ ಸೂಚಕವೂ ಹೌದು.

ಸಾಹಸೀ ಯಾತ್ರಿ-ಸಂಚಾರೀ ಜೀವನ

ಪ್ರಿಯ ಗುರುವಿನ ವಿಯೋಗದಿಂದ ಅಖಂಡಾನಂದರಿಗೆ ಸುತ್ತಲೂ ಕತ್ತಲು ಕವಿದಂತಾಯಿತು. ಇತರ ಶಿಷ್ಯರು ಅಥವಾ ಗುರುಭಾಯಿಗಳು (ಒಬ್ಬನೇ ಗುರುವಿನ ಬಹು ಮಂದಿ ಶಿಷ್ಯರು ಸಹೋದರ ಭಾವದಿಂದ ಪರಸ್ಪರ ಗುರುಭಾಯಿ ಎಂದು ಸಂಭೋಧಿಸುತ್ತಾರೆ.) ವರಾಹ ನಗರದ ಮಠದಲ್ಲಿ ತೀವ್ರ ತಪಸ್ಸು, ಸಾಧನೆ, ಪ್ರಾರ್ಥನೆಗಳಲ್ಲಿ ಮುಳುಗಿದರು. ಅಖಂಡಾನಂದರು ಆಗಾಗ ಮಠಕ್ಕೆ ಹೋಗಿ ಗುರುಬಾಯಿಗಳನ್ನು, ಮುಖ್ಯವಾಗಿ ನರೇಂದ್ರನಾಥರನ್ನು ಕಂಡು ಬರುತ್ತಿದ್ದರು.

ಅಖಂಡಾನಂದರಿಗೆ ಏಕಾಂತದಲ್ಲಿ ಸಾಧನೆ, ತಪಸ್ಸುಗಳನ್ನು ಮಾಡಬೇಕೆಂಬ ಹಂಬಲ. ಹಿಮಾಲಯವು ಶಿವಾಲಯವೂ ಹೌದು. ಋಷಿ-ಮುನಿಗಳ ತಪಸ್ಸಿನ ಸ್ಥಾನವೂ ಹೌದು. ಹಿಮಾಲಯವನ್ನು ಒಮ್ಮೆಯಾದರೂ ನೋಡಬೇಕೆಂಬುದು ಶ್ರೀ ರಾಮಕೃಷ್ಣರ ಉಪದೇಶವಾಗಿತ್ತು. ಅಖಂಡಾನಂದರು, ’ಏಕಮಾತ್ರ ಭಗವಂತ ನನ್ನ ಸಹಾಯಕ. ಆತನನ್ನು ನೆಚ್ಚಿ ಸಮಗ್ರ ಉತ್ತರ ಭಾರತ ಮತ್ತು ಹಿಮಾಲಯವನ್ನು ಸಂಚರಿಸುತ್ತೇನೆ’ ಎಂಬುದಾಗಿ ದೃಢ ನಿಶ್ಚಯ ಮಾಡಿದರು.

ಕೈಯಲ್ಲಿ ಕಾಸನ್ನು ಇಟ್ಟುಕೊಳ್ಳದೆ ನಾಳಿನ ಊಟ ಎಲ್ಲಿ ಎಂಬುದನ್ನು ಯೋಚಿಸದೆ ಹೊರಟರು.

ಅವರೊಬ್ಬ ಮಹಾ ಸಾಹಸಿಯಾದ ಯಾತ್ರಿಕರು. ಕೆಲವೊಮ್ಮೆ ದೂರದೂರದ ತೀರ್ಥಕ್ಷೇತ್ರಗಳಲ್ಲಿ, ಕೆಲವೊಮ್ಮೆ ಮರುಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಭಿಕ್ಷೆಯಿಂದ ಕೆಲವು ದಿನ ಆಹಾರ ಸಿಗುತ್ತಿತ್ತು. ಕೆಲವು ದಿನ ಏನೂ ಇಲ್ಲ. ಕೆಲವೊಮ್ಮೆ ಮರದಡಿಯಲ್ಲಿ ಮಲಗಿದರೆ ಕೆಲವೊಮ್ಮೆ ನದೀತೀರದ ಬಂಡೆಯ ಮೇಲೆ. ಒಮ್ಮೆಯಂತೂ ಟಿಬೆಟಿಗೆ ಹೋಗುವಾಗ ದಾರಿನಡೆದು ಬಳಲಿ ಹಿಮರಾಶಿಯ ಮೇಲೆಯೇ ಮಲಗಿ ಒಂದು ರಾತ್ರಿಯನ್ನು ಕಳೆಯ ಬೇಕಾಯಿತು. ಕೆಲವೊಮ್ಮೆ ಕ್ರೂರಿಗಳಾದ ಡಕಾಯಿತರನ್ನೂ ಎದುರಿಸಬೇಕಿತ್ತು. ಅವರ ಯಾತ್ರೆಯ ಅನುಭವಗಳನ್ನೆಲ್ಲ ಬರೆದಿಟ್ಟಿದ್ದರೆ ಅದೊಂದು ಅದ್ಭುತರಮ್ಯ ಕತೆಯಾಗುತ್ತಿತ್ತು.

ಹಿಮಾಲಯದ ಅಪರೂಪ ದೃಶ್ಯಗಳನ್ನು ಕಂಡಾಗ ಅವರಿಗೆ ಯಾವುದೋ ಬೇರೆಯ ಲೋಕವನ್ನು ಪ್ರವೇಶಿಸಿದಂತಾಯಿತು. ಮುಳುಗುತ್ತಿರುವ ಸೂರ್ಯನ ಕಿರಣಗಳು ಸದಾ ಹಿಮಾವೃತವಾದ ಪರ್ವತಗಳ ಮೇಲೆ ಬಿದ್ದಾಗ ಅವು ಕರಗಿದ ಚಿನ್ನದ ಬಣ್ಣದಿಂದ ಕಂಗೊಳಿಸುವುದನ್ನು ಕಂಡರು. ಗಿರಿರಾಜ ಹಿಮಾಲಯದ ಒಂದು ಭಾಗ ಬೆಳ್ಳೆಯಂತೆ ಥಳಥಳಿಸುತ್ತದೆ. ಇನ್ನೊಂದು ಭಾಗ ಚಿನ್ನದ ಬಣ್ಣದಂತೆ ಶೋಭಿಸುತ್ತದೆ. ಅತ್ಯುನ್ನತ ಹಿಮಪರ್ವತಗಳಿಂದ ಕಲಕಲ ನಾದಗೈಯುತ್ತ ರಭಸದಿಂದ ಗಂಗೆ ಇಳಿದು ಬರುವ ಮೋಡಿಯನ್ನು ಅವರು ತಮ್ಮ ಒಂದು ಗ್ರಂಥದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಹಿಮಾಲಯದ ಮೇಲಣ ಅವರ ಪ್ರೀತಿಯನ್ನು ಕಂಡು ಗುಡ್ಡಗಾಡಿನ ಜನರು ಅವರನ್ನು ’ಹಿಮವಾನ್ ಸಾಧು’ (ಬರಫಾನೀ ಬಾಬಾ) ಎಂದು ಕರೆಯುತ್ತಿದ್ದರು.

ಎಂಥ ಸಹಾನುಭೂತಿ!

ಹಿಮಾಲಯ ಪ್ರಾಂತದಲ್ಲಿ ಸಂಚರಿಸುತ್ತಿದ್ದಾಗಲೆ ಅವರಿಗೆ ಒಮ್ಮೆ ವಿಪರೀತ ಹೊಟ್ಟೆನೋವು ಪ್ರಾರಂಭವಾಯಿತು. ‘ಯಾರಿಗೂ ತೊಂದರೆ ಕೊಡಲಾರೆ. ಜನರಿಂದ ದೂರವಾಗಿ ಗಂಗಾತೀರದ ನಿರ್ಜನ ಪ್ರದೇಶದಲ್ಲಿ ಈ ರೋಗವನ್ನು ಅನುಭವಿಸುತ್ತೇನೆ’’ ಎಂದು ಸಂಕಲ್ಪಿಸಿದರು. ಎರಡು ದಿನಗಳ ಕಳೆದವು. ಅನ್ನಾಹಾರವಿಲ್ಲ. ಅಸಹಾಯ ದುರ್ಬಲ ಸ್ಥಿತಿ. ಜನಸಂಚಾರವೇ ಇಲ್ಲದ ಸ್ಥಳ. ಮೌನವಾಗಿ ನೋವನ್ನು ಸಹಿಸಿಕೊಂಡಿದ್ದರು. ಮೂರನೇ ದಿನ ಹಸಿವಿನಿಂದ ಬಳಲಿ ಶಿಲೆಯೊಂದರ ಮೇಲೆ ಮಲಗಿದ್ದರು ಅಖಂಡಾನಂದರು. ಎಲ್ಲಿಂದಲೋ ಪರ್ವತವಾಸಿ ಯುವಕನೊಬ್ಬ ಅವರ ಸಮೀಪಕ್ಕೆ ಬಂದ. ತನ್ನ ಹಳ್ಳಿಗೆ ಅವರನ್ನು ಕರೆದುಕೊಂಡು ಹೋಗಿ ಪ್ರೀತಿಯಿಂದ ಅವರಿಗೆ ಔಷಧವನ್ನು ಕೊಟ್ಟು ಉಪಚರಿಸಿದ. ಅವರು ಸಂಪೂರ್ಣ ಆರೋಗ್ಯವಂತರಾಗುವವರೆಗೂ ಅವರನ್ನು ಎಲ್ಲಿಗೂ ಹೋಗಗೊಡಲಿಲ್ಲ. ಕೊನೆಗೆ ಅವರು ಹೊರಟುನಿಂತಾಗ ಕಂಬನಿತುಂಬಿ ಅವರನ್ನು ಹಿಂಬಾಲಿಸುತ್ತ ನಡೆದ. ಅವನ ಪ್ರೀತಿ ಮತ್ತು ಸೇವೆಯಿಂದ ಮುಗ್ಧರಾದ ಅಖಂಡಾನಂದರು ಚಳಿಯಿಂದ ರಕ್ಷಿಸಿಕೊಳ್ಳಲು ತಮ್ಮ ಹತ್ತಿರವಿದ್ದ ಒಂದೇ ಒಂದು ಉಣ್ಣೆಯ ಶಾಲವನ್ನು ಅವನಿಗೆ ಕೊಟ್ಟು ಮುಂದಕ್ಕೆ ಪಯಣ ಬೆಳೆಸಿದರು. ಇಂಥ ಸರಳ ಹೃದಯದ ಯುವಕರು ಹಳ್ಳಿಗಳಲ್ಲಿ ಎಷ್ಟೊಂದು ಮಂದಿ ಇಲ್ಲ? ಅವರ ಹಿತಚಿಂತನೆ ಮಾಡಬಲ್ಲ ಎತ್ತರ ಸ್ಥಾನದಲ್ಲಿರುವ ವಿದ್ಯಾವಂತರಾದ ವ್ಯಕ್ತಿಗಳು ಎಷ್ಟು ಮಂದಿ ಇದ್ದಾರೆ ಈ ದೇಶದಲ್ಲಿ ಎಂದು ಅವರಿಗೆ ತೋರಿತು.

ಟಿಬೆಟಿನಲ್ಲಿ

ಅಖಂಡಾನಂದರು ಟಿಬೆಟಿನತ್ತ ಪಯಣ ಬೆಳೆಸಿದರು. ದುರ್ಗಮವಾದ ಪಥದಲ್ಲೇ ಹೊರಟರು. ಹೆಜ್ಜೆಹೆಜ್ಜೆಗೂ ಹಿಂಸ್ರಜಂತುಗಳ ಅಪಾಯವಂತೂ ಇತ್ತು. ಕೆಲವೆಡೆ ಕ್ರೂರ ಪ್ರಾಣಿಗಳಿಗೆ ಆಹಾರವಾಗಿದ್ದ ಮನುಷ್ಯರ ಎಲುಬುಗಳು ಕಾಣಸಿಕ್ಕವು. ಅತ್ಯಂತ ಉನ್ನತ ಪರ್ವತಗಳನ್ನು ಹಾದುಹೋಗಬೇಕಿತ್ತು. ಕೆಲವೆಡೆ ಅಂಬೆಗಾಲಿಕ್ಕುತ್ತ ಸಾಗಬೇಕಿತ್ತು. ಕೆಲವೊಮ್ಮೆ ದಾರಿಯಲ್ಲಿ ದಟ್ಟವಾದ ಮೋಡಮುಸುಕಿ ದಾರಿಗಾಣದೇ ಅತ್ಯಂತ ಜಾಗರೂಕತೆಯಿಂದ ಸಾವಧಾನವಾಗಿ ಮುನ್ನಡೆಯಬೇಕಿತ್ತು. ಪರ್ವತದ ಗುಹೆಗಳಲ್ಲಿ ರಾತ್ರಿಯನ್ನು ಕಳೆದ ದಿನಗಳು ಎಷ್ಟೋ!

ಕೊನೆಗೂ ಟಿಬೆಟನ್ನು ತಲುಪಿದ ಮೇಲೆ ಅಖಂಡಾನಂದರು ದಿನವಿಡೀ ದಾರಿನಡೆದು ಎಲ್ಲೂ ಆಶ್ರಯ, ಜನ ವಸತಿಯನ್ನು ಕಾಣದೆ ಅತ್ಯಂತ ಬಳಲಿಕೆಯಿಂದ ಹಿಮಾವೃತ ಪರ್ವತದ ಮೇಲೆ ಮಲಗಿಕೊಂಡರು. ಮರುದಿನ ಬೆಳಗ್ಗೆ ಬೌದ್ಧ ಸಂನ್ಯಾಸಿಯೊಬ್ಬರು ಆ ಕಡೆ ಹೋಗಿದ್ದಾಗ ಬಳಲಿ ಮೂರ್ಛೆ ಹೋದಂತಿದ್ದ ಅಖಂಡಾನಂದರನ್ನು ತಮ್ಮ ಮಠಕ್ಕೆ ಕರೆದೊಯ್ದರು. ಅಲ್ಲಿ ಅವರಿಗೆ ಶುಶ್ರೂಷೆ, ಉಪಚಾರ ಮಾಡಿದರು. ಮಠದ ಹಿರಿಯ ಬೌದ್ಧ ಸಂನ್ಯಾಸಿಗಳು ಅಖಂಡಾನಂದರು ಪರಿಶುದ್ಧಾತ್ಮರೆಂದೂ ಅಖಂಡ ಬ್ರಹ್ಮಚಾರಿಗಳೆಂದೂ ಮನಗಂಡು ಅವರನ್ನು ಅತ್ಯಂತ ಗೌರವಾದರಗಳಿಂದ ಕಂಡರು. ತುಪ್ಪದ ದೀಪದಿಂದ ಆರತಿ ಬೆಳಗಿದರು. ಕೆಲವೊಂದು ಬೌದ್ಧ ಮಠಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಬೌದ್ಧ ಸಂನ್ಯಾಸಿಗಳು ಪೂಜೆ, ಪಾಠ, ಧ್ಯಾನಗಳಲ್ಲಿ ಮಗ್ನರಾಗಿರುವುದನ್ನು ಅಖಂಡಾನಂದರು ಕಂಡರು. ಟಿಬೆಟ್‌ಜನರ ಧಾರ್ಮಿಕ ಗುರು-ಹಿರಿಯ ಲಾಮಾ ಅವರಿಗೊಂದು ಯೋಗಾಸನವನ್ನು ಹೇಳಿಕೊಟ್ಟನಂತೆ. ಆ ಆಸನವನ್ನು ಹಾಕಿ ಸ್ಥಿರವಾಗಿ ಕುಳಿತರೆ ಎಂಥ ಕಡು ಚಳಿಯಲ್ಲೂ ಬಟ್ಟೆ ಬರೆಗಳನ್ನು ಹೊದೆದುಕೊಳ್ಳದೆ ಚಳಿಯಿಂದ ಪಾರಾಗಲು ಸಾಧ್ಯವಿತ್ತು. ಕೆಲವೇ ದಿನಗಳಲ್ಲಿ ಅವರು ಟಿಬೆಟ್‌ಭಾಷೆಯನ್ನೂ ಕಲಿತರು. ಅಲ್ಲಿನ ಪ್ರಶಾಂತ ವಾತಾವರಣದಲ್ಲಿಧ್ಯಾನ ಸಾಧನೆಯನ್ನು ಮಾಡುತ್ತ ಕೆಲಕಾಲವಿದ್ದರು. ಅಲ್ಲಿಯೂ ಅವಿದ್ಯಾವಂತರಾದ ಬಡಜನರ ಕಷ್ಟವನ್ನು ಕಂಡು ದುಃಖಿತರಾದರು. ಆ ಬಡಜನರಿಗೆ ಅಕ್ಷರವಿದ್ಯೆಯನ್ನು ಕಲಿಸಲು ಪ್ರಯತ್ನಿಸಿ ಬೌದ್ಧ ಸಂನ್ಯಾಸಿಗಳ ಕೋಪಕ್ಕೆ ಪಾತ್ರರಾಗುವಂತಾಯಿತು. ಟಿಬೆಟಿನ ರಾಜಧಾನಿಯಾದ ಲಾಸಾಕ್ಕೆ ಹೋಗಲು ಅವರು ಬಹಳಷ್ಟು ಯತ್ನಿಸಿಯೂ ವಿಫಲರಾದರು. ಕಾರಣ, ಟಿಬೆಟಿನಲ್ಲಿ ಅನೇಕರು ಅವರನ್ನು ಬ್ರಿಟಿಷರ ಗೂಢಚರರೆಂದು ಅಪಪ್ರಚಾರ ಮಾಡತೊಡಗಿದರು. ಪ್ರವಾಸ ಮುಂದುವರಿಸಿ ಅಖಂಡಾನಂದರು ಕಲ್ಕತ್ತಕ್ಕೆ ಹಿಂದಿರುಗಿದರು.

ಸಿಡುಬು ಬಂದ ಹುಡಗನಿಗೆ ಅಖಂಡಾನಂದರು ತಾವೇ ಔಷಧ ಹಚ್ಚುತ್ತಿದ್ದರು

ಹೆಚ್ಚುಕಡಿಮೆ ಮೂರುವರೆ ವರ್ಷಗಳ ಕಾಲ ತಮ್ಮಿಂದ ದೂರವಾಗಿದ್ದ ಅಖಂಡಾನಂದರನ್ನು ಮತ್ತೆ ಕಂಡು ವಿವೇಕಾನಂದರಿಗೂ ಮಠದ ಇತರ ಸಂನ್ಯಾಸಿಗಳಿಗೂ ತುಂಬಾ ಆನಂದವಾಯಿತು. ತಮ್ಮ ಪ್ರೀತಿಯ ’ಗ್ಯಾಂಜಿಸ್’ನ ಯಾತ್ರೆಯ ರೋಮಾಂಚಕಾರಿ ಅನುಭವಗಳನ್ನು ಪತ್ರದಲ್ಲಿ ಸಂಕ್ಷೇಪವಾಗಿ ಓದಿದ್ದ ವಿವೇಕಾನಂದರಿಗೂ ಹಿಮಾಲಯ ಯಾತ್ರೆಯ ಆಸೆ ಉಂಟಾಗಿತ್ತು. ಈಗಂತೂ ಅಖಂಡಾನಂದ ರಿಂದಲೇ ದಿನದಿನವೂ ಟಿಬೆಟಿನ ವಿಚಾರಗಳನ್ನೂ ಯಾತ್ರೆಯ ಅದ್ಭುತರಮ್ಯ ಕತೆಯನ್ನೂ ಹಿಮಾಲಯದ ಅಪೂರ್ವ ಸೌಂದರ್ಯದ ವರ್ಣನೆಯನ್ನೂ ಕೇಳಿ ಅವರ ಉತ್ಸಾಹ ಇಮ್ಮಡಿಸಿತು. ಮಠದಲ್ಲಿ ಕೆಲವು ತಿಂಗಳು ವಿಶ್ರಾಂತಿಯನ್ನು ಪಡೆದು ತಿರುಗಿ ೧೮೯೦ನೇ ಜುಲೈ ತಿಂಗಳು ಅಖಂಡಾನಂದರು ವಿವೇಕಾನಂದರ ಜೊತೆಯಲ್ಲಿ ಹಿಮಾಲಯ ಪ್ರವಾಸವನ್ನು ಕೈಗೊಂಡರು. ಕೆಲವು ಮುಖ್ಯ ಸ್ಥಳಗಳನ್ನು ಸಂದರ್ಶಿಸಿದ ಬಳಿಕ ವಿವೇಕಾನಂದರು ತಾನು ಏಕಾಂಗಿಯಾಗಿ ಪಯಣಿಸುತ್ತೇನೆಂದರು.

ದರಿದ್ರ ದೇವೋಭವ’

ಪಶ್ಚಿಮ ಭಾರತದಲ್ಲಿ ಸಂಚರಿಸುತ್ತಿದ್ದಾಗ ಬಡಜನರ ಸಂಕಷ್ಟಗಳನ್ನು ಕಂಡು ವಿವೇಕಾನಂದರು ಕಣ್ಣೀರು ಸುರಿಸುತ್ತಿದ್ದರೆಂದೂ ಜನರ ಹಸಿವನ್ನು ದೂರಮಾಡುವ ಪ್ರಯತ್ನ ಮಾಡದೇ ಬರಿಯ ಧರ್ಮಪ್ರಚಾರ ವ್ಯರ್ಥವೆಂದರೆಂದೂ ಇತರ ಗುರುಭಾಯಿಗಳು ಅಖಂಡಾನಂದರಿಗೆ ತಮ್ಮ ಮುಖಂಡನ ಹೃದ್ಗತವನ್ನು ತಿಳಿಸಿದರು. ಆದರೆ ಅಖಂಡಾನಂದರು ಆ ವಿಷಯವನ್ನು ಅಷ್ಟೊಂದು ಮನಸ್ಸಿಗೆ ತಂದುಕೊಂಡಿರಲಿಲ್ಲ.

ವಿವೇಕಾನಂದರ ಪ್ರಮುಖ ಶಿಷ್ಯರಲ್ಲೊಬ್ಬರಾದ ಖೇತ್ರಿಯ ಮಹಾರಾಜ ಅಜಿತ್ ಸಿಂಗ್ ಅವರ ಅತಿಥಿಯಾಗಿ ವಿಶ್ರಾಂತಿ ಪಡೆಯುತ್ತಿದ್ದಾಗಲೇ ದೀನದುಃಖಿತರ ಸೇವೆಯ ಸೂಚನೆ ಅವರ ಮನಸ್ಸಿಗೆ ಬಂದಿತು. ಆಹಾರ, ವಸತಿ, ಬಟ್ಟೆಬರೆಗಳ ಅಭಾವದಿಂದ ಪಶುಗಳಂತೆ ಜೀವಿಸುತ್ತಿರುವ ಮನಷ್ಯರ ದಯನೀಯ ಸ್ಥಿತಿಯನ್ನು ಕಣ್ಣಾರೆ ಕಂಡ ಅವರಿಗೆ ತಡೆಯಲಾರದ ದುಃಖವಾಯಿತು. ’ಕೆಲವೇ ಮಂದಿ ಶ್ರೀಮಂತರ ಸುಖಸೌಕರ್ಯಗಳಿಗಾಗಿ ಕೋಟ್ಯಂತರ ಜನರು ಕಠಿಣ ಪರಿಶ್ರಮದಿಂದ ಗಳಿಸಿದ ಹಣ ಅಪವ್ಯಯ ವಾಗುವುದನ್ನು ಕಂಡು ನನ್ನ ಮಾನಸಿಕ ನೆಮ್ಮದಿ, ಶಾಂತಿ -ಸದಾಕಾಲ ದೂರವಾದವು. ಬಲಿಷ್ಠರಾದವರ ಅತ್ಯಾಚಾರಕ್ಕೆ ಒಳಗಾಗಿ ತಮ್ಮ ಪಾಲಿಗೆ ನ್ಯಾಯವಾಗಿ ಸಿಕ್ಕಬೇಕಾದ ಸಂಪತ್ತಿನಿಂದ ವಂಚಿತರಾದ ಸಾಮಾನ್ಯ ಜನರ ಸೇವೆಗಾಗಿ ಈ ಜೀವನವನ್ನು ಮೀಸಲಿಡುವುದೇ ನನ್ನ ಜೀವನದ ಏಕಮಾತ್ರ ಉದ್ದೇಶ ಎಂದು ನಾನು ದೃಢಪಡಿಸಿಕೊಂಡೆ. ದಯೆ, ದಾನಗಳಿಗೆ ಹಿಂದೆ ಹೆಸರು ಪಡೆದ ನಮ್ಮ ತಾಯ್ನಾಡಿನ ಶೋಚನೀಯ ಅವಸ್ಥೆಯನ್ನು ಚಿಂತಿಸುತ್ತ ನನ್ನ ಮನಸ್ಸು ಘೋರ ಅಶಾಂತಿಯಿಂದ ತುಂಬಿತು’ ಎಂದು ಆ ಕಾಲದ ತಮ್ಮ ಮನಸ್ಸಿನ ಕಳವಳವನ್ನು ವರ್ಣಿಸಿದ್ದಾರೆ.

ಅಖಂಡಾನಂದರು ಜನರ ದೈನ್ಯ ದುಃಖಗಳ ಪೂರ್ಣ ವಿವರವನ್ನು ಆಗ ಅಮೆರಿಕದಲ್ಲಿ ಸಂಚರಿಸುತ್ತಿದ್ದ ವಿವೇಕಾನಂದರಿಗೆ ಬರೆದು ತಾನು ಏನು ಮಾಡಬೇಕು ಎಂದು ಆಣತಿಗಾಗಿ ಕಾದರು. ವಿವೇಕಾನಂದರಿಂದ ಉತ್ತರ ಬಂದಿತು. “ಬಡವರ ಸಂಕಷ್ಟಗಳನ್ನು ದೂರಮಾಡುವ ಕೆಲಸ ಮಾಡಲೇ ಬೇಕು. ಖೇತ್ರಿನಗರದ ಪ್ರತಿ ಗುಡಿಸಲಿಗೂ ಹೋಗಿ ಜನರನ್ನು ಕಂಡು ಮಾತನಾಡು. ಕೇವಲ ಧರ್ಮೋಪದೇಶವೇ ಅಲ್ಲ-ಆರೋಗ್ಯ ವಿಚಾರ, ಭೂಗೋಳ, ಕೃಷಿಯ ಉನ್ನತಿ ಮೊದಲಾದ ಸಂಗತಿಗಳನ್ನು ತಿಳಿಸು. ಬೇರೆ ಬೇರೆ ಹಳ್ಳಿಗೂ ಹೋಗಿ ಜನರಲ್ಲಿ ಶಿಕ್ಷಣದ ಕಡೆ ಒಲವುಂಟಾಗುವಂತೆ ಮಾಡು. ’ಮಾತೃದೇವೋಭವ, ಪಿತೃದೇವೋಭವ’ ಎಂದು ನೀನು ಓದಿದ್ದಿ. ನಾನೆನ್ನುತ್ತೇನೆ ’ದರಿದ್ರ ದೇವೋಭವ, ಮೂರ್ಖ ದೇವೋಭವ’- ದರಿದ್ರರು, ಮೂರ್ಖರು, ಅಜ್ಞಾನಿಗಳು-ಇವರು ನಿನ್ನ ದೇವರಾಗಲಿ. ಇವರ ಸೇವೆಯೇ ಪರಮಧರ್ಮ” ಎಂದು ಸ್ವಾಮೀಜಿ ದೀರ್ಘ ಪತ್ರವನ್ನು ಬರೆದು ಕಷ್ಟಸಂಕಷ್ಟ ಗಳಲ್ಲಿರುವವರ ಸೇವೆ ಭಗವಂತನ ಸೇವೆ ಎಂಬುದನ್ನು ತಿಳಿಸಿದರು. ಆ ಪತ್ರವನ್ನು ಓದುತ್ತ ಓದುತ್ತ ಅಖಂಡಾನಂದರು ಜನಸೇವೆಯ ದೃಢ ಸಂಕಲ್ಪವನ್ನು ಮಾಡಿದರು.

’ರಾಜ, ಇಂದು ನನಗೆ ತುಂಬ ದುಃಖವಾಗಿದೆ’

ರಾಜರು, ಶ್ರೀಮಂತರು ಮನಸ್ಸು ಮಾಡಿದರೆ ಬಡಜನರ ಉನ್ನತಿ ಸಾಧ್ಯ ಎಂದು ತಿಳಿದ ಅಖಂಡಾನಂದರು ಅಂಥವರ ಮನಸ್ಸನ್ನು ಬದಲಿಸುವ ಕಾರ್ಯವನ್ನೂ ಕೈಗೊಂಡರು.

ಒಮ್ಮೆ ಖೇತ್ರಿ ರಾಜನ ಜನ್ಮದಿನದ ನಿಮಿತ್ತ ಉತ್ಸವದ ವ್ಯವಸ್ಥೆಯಾಗಿತ್ತು. ರಾಜನು ದರಬಾರಿನಲ್ಲಿ ಸುಸಜ್ಜಿತವಾಗಿ ಮಂತ್ರಿ ಮತ್ತು ಸಭಾಸದರೊಂದಿಗೆ ಕುಳಿತು ಪ್ರಜೆಗಳು ತಂದು ಒಪ್ಪಿಸಿದ ಕಾಣಿಕೆಯನ್ನು ಪಡೆಯುತ್ತಿದ್ದ ದಿನ ಅದು. ದೊಡ್ಡ ಸಂಖ್ಯೆಯಲ್ಲಿ ಜನರು ಅರಮನೆಯ ಸಮೀಪ ಸೇರಿದ್ದರು. ರಾಜ್ಯದ ಆಧಾರ ಸ್ತಂಭಗಳಂತಿದ್ದ ಕೃಷಿಕರು ರಾಜದರ್ಶನಕ್ಕಾಗಿ ಅವರಮನೆಯ ಬಾಗಿಲ ಬಳಿ ಬಂದರೆ ರಾಜಭಟರು ಅವರನ್ನು ಹೊಡೆದೋಡಿಸುತ್ತಿದ್ದರು. ಬಡಕೃಷಿಕರು ತಂದೊಪ್ಪಿಸಿದ ಕಾಣಿಕೆ ರಾಶಿರಾಶಿಯಾಗಿ ಬಿದ್ದುದನ್ನು ಅಖಂಡಾನಂದರು ಕಂಡರು.

ರಾಜನ ದರಬಾರಿಗೆ ಅಖಂಡಾನಂದರು ಹೋದಾಗ, “ರಾಜ, ನನಗೆ ಇಂದು ತುಂಬ ದುಃಖವಾಗಿದೆ” ಎಂದರು. ರಾಜನು ಕಾರಣ ಕೇಳಿದಾಗ ಕಾಣಿಕೆಯನ್ನು ತಂದ ಕೃಷಿಕರನ್ನು ಕುರಿತು ರಾಜಭಟರ ಹೇಯ ವರ್ತನೆಯನ್ನು ಅತ್ಯಂತ ಕರುಣೆಯಿಂದ ಹೇಳುತ್ತ, ’ನೀವು ರಾಜರು ಶ್ರೀರಾಮಚಂದ್ರನ ವಂಶದವರೆಂದು ಹೇಳಿಕೊಂಡು ಹೆಮ್ಮೆಪಡುತ್ತೀರಿ. ಆದರೆ ಶ್ರೀರಾಮಚಂದ್ರನು ಪ್ರಜೆಯೊಬ್ಬನ ಮಾತಿಗೋಸ್ಕರ ತನ್ನ ಪ್ರಾಣಕ್ಕಿಂತಲೂ ಪ್ರಿಯಳಾದ ಸೀತೆಯನ್ನು ಕಾಡಿಗೆ ಕಳುಹಿಸಿದ. ಆದರೆ ನೀವು ಸರಳರೂ ಕಷ್ಟಸಹಿಷ್ಣುಗಳೂ ಬಡವರೂ ಆದ ನಿಮ್ಮ ಪ್ರಜೆಗಳಿಗೆ ವರ್ಷಕ್ಕೊಮ್ಮೆ ನಿಮ್ಮನ್ನು ಕಾಣುವ ಅವಕಾಶವನ್ನೂ ಕೊಡುವುದಿಲ್ಲ. ಇನ್ನು ಅವರನ್ನು ಸಭೆಯಲ್ಲಿ ಕುಳ್ಳಿರಿಸಿ ಕೊಂಡು ದರಬಾರನ್ನು ನಡೆಯಿಸುವುದು ದೂರದ ಮಾತು. ನಾನು ಸಂನ್ಯಾಸಿ. ಜನರ ಈ ದುಃಸ್ಥಿತಿಯನ್ನು ನೋಡು ವಂತಾಯಿತು” ಎಂದು ಹೇಳುತ್ತ ತಡೆಯಲಾರದ ಸಂತಾಪದಿಂದ ಚಿಕ್ಕಬಾಲಕನಂತೆ ಗಳಗಳನೆ ಅತ್ತುಬಿಟ್ಟರು. ರಾಜನೂ ತುಂಬಿದ ಸಭೆಯೂ ಕೆಲಕಾಲ ಸ್ತಂಭಿತರಾದಂತೆ ಕುಳಿತುಬಿಟ್ಟರು. ಸ್ವಲ್ಪ ಹೊತ್ತಿನ ಬಳಿಕ ರಾಜನು, “ಇವೊತ್ತು ನಾನೊಂದು ಮಹಾ ಪಾಠವನ್ನು ಕಲಿತೆ. ನನ್ನ ಭ್ರಮೆ ದೂರವಾಯಿತು. ಮುಂದಿನ ವರ್ಷದಿಂದ ಪ್ರಜೆಗಳನ್ನೂ ಬರಮಾಡಿಕೊಂಡೇ ದರಬಾರನ್ನು ನಡೆಯಿಸುತ್ತೇನೆ; ನಾನೇ ಸ್ವತಃ ಕಾಣಿಕೆಯನ್ನು ಸ್ವೀಕರಿಸುತ್ತೇನೆ” ಎಂದು ಮಾತುಕೊಟ್ಟ.

ದುಃಖಿತರಿಗಾಗಿ ಬಾಳು

ಮಕ್ಕಳೇ! ತನ್ನ ಮಗವು ರೋಗದಿಂದ ನರಳುವುದನ್ನು ಕಂಡು ತಾಯಿಯ ಮನಸ್ಸಿಗೆ ಸಂಕಟವಾಗುವುದಿಲ್ಲವೆ? ಎಷ್ಟೇ ಶ್ರಮವಾದರೂ ಲೆಕ್ಕಿಸದೆ ನಿದ್ರಾಹಾರವನ್ನೂ ಬಿಟ್ಟು ಆಕೆ ಮಗುವಿನ ಆರೋಗ್ಯ ಲಾಭಕ್ಕಾಗಿ ಹೆಣಗುವಳಲ್ಲವೆ? ಮಹಾತ್ಮರ ಹೃದಯದಲ್ಲಿ ಜನರ ಬಗೆಗೆ, ತಮ್ಮ ಮಕ್ಕಳಿಗಾಗಿ ಸಹಸ್ರಾರು ತಾಯಂದಿರಲ್ಲಿರುವ ಪ್ರೀತಿಗಿಂತಲೂ ಹಿರಿದಾದ, ಹೆಚ್ಚಿನ ಪ್ರೀತಿ ತುಂಬಿಕೊಂಡಿರುತ್ತದೆ. ಅವರಿಗೆ ಜಗತ್ತಿನಲ್ಲಿ ತಮಗಾಗಿ ಏನೂ ಬೇಡ-ಯಾವ ಆಸೆಯೂ ಇಲ್ಲ. ದುಃಖಿತರ ದುಃಖ ದೂರವಾಗಬೇಕೆಂಬುದೇ ಅವರ ಏಕಮಾತ್ರ ಆಸೆ. ಆ ಒಂದು ಕಾರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಬಲ್ಲರು. ಅಖಂಡಾನಂದರು ಅಂಥ ವ್ಯಕ್ತಿಗಳಲ್ಲೊಬ್ಬರು. ನಮ್ಮ ಕಾಲಿನ ಕಿರಿಯ ಬೆರಳಿಗೆ ಚಿಕ್ಕ ಮುಳ್ಳೊಂದು ಚುಚ್ಚಿದರೂ ನಮಗೆ ನೋವಿನ ಅನುಭವವಾಗುತ್ತದಲ್ಲವೆ? ದೇಶವನ್ನು, ಜನರನ್ನು ಗಾಢವಾಗಿ ಪ್ರೀತಿಸುವ ಅಂಥ ವ್ಯಕ್ತಿಗಳಿಗೆ ಜಾತಿ, ಮತ, ಕುಲ, ಗೋತ್ರ ಭೇದವಿಲ್ಲ; ದೇಶದ ಯಾವ ಭಾಗದಲ್ಲಿ ಜನರಿಗೆ ಕಷ್ಟವಾದರೂ ಅವರಿಗೆ ನೋವಾಗುತ್ತದೆ. ಜನರು ಆನಂದಿಂದಿದ್ದರೆ ಅವರೂ ಸಂತುಷ್ಟರಾಗುತ್ತಾರೆ.

ಒಂದು ದಿನ ಅಖಂಡಾನಂದರು ರಸ್ತೆಯಲ್ಲಿ ಹೋಗುತ್ತಿದ್ದಾರೆ. ಹರಿಜನ ಬಾಲಕನೊಬ್ಬ ನಿಸ್ಸಹಾಯಕನಾಗಿ ಬಿದ್ದಿದ್ದಾನೆ. ಅವನಿಗೆ ಸಿಡುಬು ರೋಗ. ಅದೊಂದು ಭಯಂಕರವಾದ ಅಂಟುರೋಗ ಎಂದು ಎಲ್ಲರಿಗೂ ಹೆದರಿಕೆ, ಅವನ ನೆಂಟರಿಷ್ಟರೂ ಅವನ ಬಳಿ ಹೋಗರು. ಅಖಂಡಾನಂದರು ಹುಡುಗನನ್ನು ತಮ್ಮ ಆಶ್ರಮಕ್ಕೆ ಕರೆತಂದರು. ಆರೈಕೆ ಮಾಡಿದರು. ಸ್ವತಃ ತಾವೇ ಅವನಿಗೆ ಸ್ನಾನ ಮಾಡಿಸಿ ಹುಣ್ಣಿಗೆ ಔಷಧವನ್ನು ಲೇಪಿಸಿದರು. ಭೀಕರ ಬರಗಾಲದಿಂದ ಬಡಜನರು ಸೊಪ್ಪು, ತರಕಾರಿಗಳನ್ನು ತಿಂದು ಬದುಕುತ್ತಿದ್ದಾರೆಂಬುದನ್ನು ತಿಳಿದಾಗ ತಾವೂ ಅನ್ನ ಊಟ ಮಾಡುವುದನ್ನು ನಿಲ್ಲಿಸಿದರು. ಸೊಪ್ಪು ತರಕಾರಿಗಳನ್ನು ತಿಂದು ಅವರ ಶರೀರವೂ ಎಲುಬಿನ ಗೂಡಾಗಿತ್ತು-ಒಂದೆರಡು ದಿನಗಳಲ್ಲ, ಐದು ತಿಂಗಳ ಕಾಲ. ಪ್ರಯತ್ನಿಸಿದರೂ ಅವರಿಗೆ ಆಹಾರಸೇವನೆ ಸಾಧ್ಯವಾಗುತ್ತಿರಲಿಲ್ಲ. ಸ್ವಾವಲಂಬನೆಯ ಪ್ರತೀಕವಾದ ಖಾದಿಯ ಉತ್ಪಾದನೆಯನ್ನು ಗಾಂಧೀಜಿ ಯೋಚಿಸುವುದಕ್ಕೆ ಮೊದಲೇ ಸುಮಾರು ೧೮೯೮ನೇ ಇಸವಿಯಲ್ಲೇ ಅವರ ಹಳ್ಳಿಯ ಆಶ್ರಮದಲ್ಲಿ ಪ್ರಾರಂಭಿಸಿದ್ದರು. ಹಳ್ಳಿಯ ಮುದುಕಿಯರಿಗೆ ಚರಕವನ್ನು ಕೊಟ್ಟು ಆಶ್ರಮದ ಹೊಲದಲ್ಲಿ ಬೆಳೆದ ಹತ್ತಿಯನ್ನು ಅವರಿಗೆ ತಲುಪಿಸುತ್ತಿದ್ದರು.

ಅವರು ತಯಾರಿಸಿದ ನೂಲಿನಿಂದ ಅನಾಥಾಶ್ರಮದ ಬಾಲಕರೊಂದಿಗೆ ಕುಳಿತು ಬಟ್ಟೆಯನ್ನು ನೇಯುತ್ತಿದ್ದರು. ಕೆಲಸದ ಬಳಿಕ ಸಂಜೆ ದೇವರನ್ನು ಪ್ರಾರ್ಥಿಸುತ್ತ, ’ಹೇ ಭಗವಂತ, ನಾನೊಬ್ಬ ಸಾಮಾನ್ಯ ಸಂನ್ಯಾಸಿ. ಬಂಗಾಳದ ಅಪರಿಚಿತವಾದ, ಮೂಲೆಯಲ್ಲಿರುವ ಹಳ್ಳಿಯೊಂದರಲ್ಲಿ ಕುಳಿತು ದಿನವೆಲ್ಲ ದುಡಿದು ಇಷ್ಟೊಂದು ಬಟ್ಟೆಯನ್ನು ತಯಾರಿಸಿದ್ದೇನೆ. ಎಲ್ಲರೂ ದೇಶದ ದೃಷ್ಟಿಯಿಂದ ದುಡಿಯುವಂತಾಗಲಿ’ ಎನ್ನುತ್ತಿದ್ದರು. ಅಂಥ ರಾಷ್ಟ್ರೀಯ ದೃಷ್ಟಿ ಇದ್ದರಲ್ಲವೇ ಎಲ್ಲ ಯೋಜನೆಗಳೂ ಯಶಸ್ವಿಯಾಗುವುದು?

ಖೇತ್ರಿಯಲ್ಲಿ ಸೇವಾವ್ರತ

ಅಖಂಡಾನಂದರು ಖೇತ್ರಿಯಲ್ಲಿ ಮನೆಮನೆಗೂ ಹೋಗಿ ರಕ್ಷಕರನ್ನು ಕಂಡು ಮಕ್ಕಳಿಗೆ ಓದುಬರಹದ ಅವಶ್ಯಕತೆಯನ್ನು ಮನದಟ್ಟು ಮಾಡಿದರು. ಎಪ್ಪತ್ತು ವಿದ್ಯಾರ್ಥಿಗಳಿರುವ ಪ್ರೌಢಶಾಲೆಯಲ್ಲಿ ಇನ್ನೂರೈವತ್ತು ವಿದ್ಯಾರ್ಥಿಗಳು ಸೇರುವಂತೆ ಮಾಡಿದರು. ಖೇತ್ರಿಯ ಮಹರಾಜನ ಸಹಾಯದಿಂದ ಅಧ್ಯಾಪಕರ ಸಂಖ್ಯೆಯನ್ನೂ ಏರಿಸಿದರು. ರಾಜನ ಅಂತಃಪುರದಲ್ಲಿ ವಿವಿಧ ಕಾರ್ಯಗಳನ್ನೂ ಮಾಡುತ್ತಿದ್ದ ನಿರಕ್ಷರಿಗಳಾದ ಯುವಕರಿಗೆ ವಿದ್ಯಾದಾನದ ವ್ಯವಸ್ಥೆಯನ್ನು ಮಾಡಿಸಿದರು. ಖೇತ್ರಿಯ ಸುತ್ತಮುತ್ತಲಿನ ಹಳ್ಳಿಹಳ್ಳಿಗಳಲ್ಲೂ ಸಂಚರಿಸಿ ಅಲ್ಲಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆದು ಬಡಜನರಿಗೆ ಶಿಕ್ಷಣ ಸೌಕರ್ಯವನ್ನು ಕೊಡಿಸಿದರು. ಪುಸ್ತಕವನ್ನೂ ಕೊಂಡುಕೊಳ್ಳಲಾರದ ಬಡಹುಡುಗರಿಗಾಗಿ ಬೇರೆಯೇ ಆದ ಒಂದು ಸಹಾಯ ನಿಧಿಯನ್ನು ಏರ್ಪಡಿಸಿದರು. ಅವರು ಖೇತ್ರಿಯಲ್ಲಿರುವಾಗಲೇ ಅಲ್ಲಿನ ಸಂಸ್ಕೃತ ಮತ್ತು ವೇದವಿದ್ಯಾಲಯದ ಅಭಿವೃದ್ಧಿಯೂ ಆಯಿತು. ಹಳ್ಳಿಹಳ್ಳಿಗಳಲ್ಲೂ ಸಂಚರಿಸಿ ರೋಗದಿಂದ ನರಳುವವರನ್ನು ಹುಡುಕಿ ರಾಜನ ಆಸ್ಪತ್ರೆಗೆ ಕರೆತಂದು ಅಲ್ಲಿ ಅವರಿಗೆ ಯೋಗ್ಯ ಚಿಕಿತ್ಸೆ ದೊರೆಯುವಂತೆ ಮಾಡುತ್ತಿದ್ದರು. ಕೃಷಿಯ ಉನ್ನತಿಗಾಗಿಯೂ ರಾಜನನ್ನು ಪ್ರೇರೇಪಿಸಿ ಹಳ್ಳಿಯ ಜನರಿಗೆ ಸಹಾಯ ನೀಡಿದರು.

ರಾಜಪುತ್ರಸ್ಥಾನದಲ್ಲಿ ಹಲವಾರು ಸೇವಾಕಾರ್ಯಗಳನ್ನು ಮಾಡಿ, ಉದಯಪುರದಲ್ಲಿ ಆದಿವಾಸಿಗಳ ಸಂಕಟವನ್ನು ಕಂಡು ಅಲ್ಲಿ ಶಿಕ್ಷಣ ಪ್ರಚಾರ ಪ್ರಾರಂಭಿಸಿದರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಉನ್ನತಿಗಾಗಿ ವಿದ್ಯಾವಂತರು ಒಂದು ಗೂಡಿ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವ ಸಂಘಗಳನ್ನು ನಿರ್ಮಿಸಿದರು. ಜನಜಾಗೃತಿಗಾಗಿ ಸಮಾಜದಲ್ಲಿ ವಿದ್ಯಾವಂತರೂ ಧನವಂತರೂ ಹೇಗೆ ದುಡಿಯಬೇಕೆಂಬುದನ್ನು ತಿಳಿಸಿಕೊಟ್ಟರು.

ಬರಗಾಲದ ದಿನಗಳಲ್ಲಿ

ಬಂಗಾಲದ ಮುರ್ಶಿದಾಬಾದಿನಲ್ಲಿ ಒಂದು ದಿನ ಅವರು ಸಂಚಾರಮಾಡುತ್ತಿದ್ದಾಗ ದಾರಿಯ ಪಕ್ಕದಲ್ಲಿ ಕೊಳೆಯಾದ ಬಟ್ಟೆಯನ್ನು ಹಾಕಿಕೊಂಡು ಒಂದು ಮುರಿದು ಹೋದ ಮಣ್ಣಿನ ಗಡಿಗೆಯನ್ನು ಹಿಡಿದುಕೊಂಡು ಅಳುತ್ತಿರುವ ಮುಸ್ಲಿಮ್ ಬಾಲಿಕೆಯನ್ನು ಕಂಡರು. ಅವಳನ್ನು ವಿಚಾರಿಸಿದಾಗ, “ಮನೆಯಲ್ಲಿ, ನೀರುತರಲು ಇದ್ದ ಒಂದೇ ಒಂದು ಮಣ್ಣಿನ ಪಾತ್ರೆ ಒಡೆದುಹೋಗಿದೆ. ಬರೆಗೈಯಿಂದ ಮನೆಗೆ ಹಿಂದುರುಗಿದರೆ ತಾಯಿ ಶಿಕ್ಷಿಸುತ್ತಾಳೆ” ಎಂದು ಅತ್ತಳು. ತಮ್ಮ ಜೇಬಿನಲ್ಲಿದ್ದ ನಾಲ್ಕಾಣೆಯಲ್ಲಿ ಒಂದಾಣೆಯಿಂದ ಆಕೆಗೊಂದು ಕೊಡವನ್ನು ಸ್ವಲ್ಪ ಕಡಲೆಪುರಿ ಯನ್ನೂ ತೆಗೆದುಕೊಟ್ಟರು. ಅಲ್ಲಿಂದ ಹತ್ತು ಹೆಜ್ಜೆ ಹೋಗುವ ಹೊತ್ತಿಗೆ ಹಸಿವಿನಿಂದ ಕಂಗೆಟ್ಟು ನಡೆಯುತ್ತಿರುವ ಎಲುಬುಗೂಡುಗಳಂತಹ ಜನರು ಅವರನ್ನು ಮುತ್ತಿಕೊಂಡು ತಮಗೇನಾದರೂ ತಿನ್ನಲು ಕೊಡಿ ಎಂದು ಯಾಚಿಸಿದರು. ಕೈಯಲ್ಲಿದ್ದ ಉಳಿದ ಹಣವನ್ನು ಅಂಗಡಿಯವನಿಗೆ ಕೊಟ್ಟು ಆ ಜನರಿಗೆ ತಿಂಡಿಯನ್ನು ಹಂಚಿದರು.

ಆ ಹೊತ್ತಿಗೆ ಬಡ ಹೆಂಗಸೊಬ್ಬಳು ಸಾವಿನ ದವಡೆಯಲ್ಲಿ ಸಿಕ್ಕಿದ್ದಾಳೆಂದೂ ಏನಾದರೂ ಸಹಾಯ ಮಾಡಬೇಕೆಂದೂ ಇನ್ನೊಬ್ಬ ಅವರನ್ನು ಮೊರೆಹೊಕ್ಕ. ಪರಿಚಿತ ವ್ಯಕ್ತಿಗಳ ಮೂಲಕ ಕೊಂಚ ಹಣವನ್ನು ಸಂಗ್ರಹಿಸಿ ರೋಗದಿಂದ ನರಳುವ ಅವಳಿಗೆ ಸಹಾಯ ನೀಡಿದರು. ಮಹುಲಾ ಎಂಬ ಊರಲ್ಲಿ ಜನರ ಸಂಕಟವನ್ನು ಕಂಡು ಅವರಿಗೆ ತಡೆಯಲಾರದ ದುಃಖವಾಯಿತು. ಬರಗಾಲದ ರೋಗ-ಶೋಕಗಳ ಕರಾಳ ಮೂರ್ತಿಯನ್ನೇ ಅವರು ಕಂಡರು. ಜನರ ದುಃಖವನ್ನು ಸ್ವಲ್ಪವಾದರೂ ದೂರಮಾಡದೆ ಮುಂದುರಿಯಲಾರೆ ಎಂದು ಅವರು ದೃಢ ನಿಶ್ಚಯವನ್ನೇ ಮಾಡಿದರು. ’ನಾನು ಕೈಯಲ್ಲಿ ಕಾಸಿಲ್ಲದ ಸನ್ಯಾಸಿ. ಹೇಗೆ ಭಗವನ್! ಸಂಕಟಗ್ರಸ್ತರಾದ ಈ ಜನರಿಗೆ ನಾನು ಹೇಗೆ ಸಹಾಯ ಮಾಡಲಿ?’ ಎಂದು ರಾತ್ರಿಯೆಲ್ಲ ಪ್ರಾರ್ಥನೆಯಲ್ಲೇ ಕಳೆದರು. ಅವರಿಗೆ ಭಗವಂತನ ಭರವಸೆಯ ವಾಣಿ ಕೇಳಿಸಿತಂತೆ. ಜನರ ಸಹಾಯವೂ ಬರತೊಡಗಿತು. ಆಗ ಅಮೆರಿಕದಿಂದ ಹಿಂದಿರುಗಿದ ಸ್ವಾಮಿ ವಿವೇಕಾನಂದರು ಅಖಂಡಾನಂದರು ಕೈಗೊಂಡ ಸೇವಾ ಕಾರ್ಯಕ್ಕೆ ಹಣವನ್ನೂ ಸಹಾಯಕರನ್ನೂ ಕಳುಹಿಸಿದರು. ೧೮೯೭ ರ ಮೇ ೧೫ರಂದು ಶ್ರೀ ರಾಮಕೃಷ್ಣ ಸಂಘದ ವ್ಯವಸ್ಥಿತ ಸೇವಾಕಾರ್ಯ ಪ್ರಾರಂಭವಾಯಿತು. ಆಹಾರಧಾನ್ಯ ವಿತರಣೆಯ ಕೆಲಸ ನಡೆಯಿತು. ಅನ್ನದಾನದ ಕಾರ್ಯ ಆರಂಭವಾಯಿತು. ರೋಗಿಗಳ ಶುಶ್ರೂಷೆಯ ಕೆಲಸವೂ ನಡೆಯತೊಡಗಿತು.

ರೋಗಿಗಳ ಸೇವೆ

ಸೆಖೆಗಾಲದ ದಿನಗಳಲ್ಲಿ ಬರಗಾಲದಿಂದ ಕಂಗೆಟ್ಟ ಜನರು ತಿನ್ನಬಾರದ ವಸ್ತುಗಳನ್ನು ತಿಂದು ನಾನಾ ತೆರನಾದ ರೋಗದಿಂದ ನರಳುತ್ತಿದ್ದರು. ಕುಡಿಯಲು ಒಳ್ಳೆಯ ನೀರು ಸಿಕ್ಕುವುದೂ ಕಷ್ಟವಾಗಿದ್ದ ದಿನಗಳು ಅವು. ಎಲ್ಲೆಲ್ಲೂ ಕಾಲರಾ ರೋಗ ಹಬ್ಬಿತ್ತು. ಈ ಭೀಕರ ವಾರ್ತೆ ತಿಳಿದ ಕೂಡಲೆ ಅಖಂಡಾನಂದರು ರೋಗಿಗಳ ಸಮೀಪಕ್ಕೆ ಧಾವಿಸುತ್ತಿದ್ದರು. ಆಹಾರ, ನಿದ್ರೆಗಳನ್ನೂ ತೊರೆದು, ಸಾವಿನ ಭಯವನ್ನು ಲೆಕ್ಕಿಸದೆ ರೋಗಿಗಳ ಸೇವೆಯನ್ನು ಮಾಡುತ್ತಿದ್ದರು. ಔಷಧವನ್ನು ಕೊಡುವುದು ಮಾತ್ರವಲ್ಲ ರೋಗಿಗಳ ಮಲಮೂತ್ರವನ್ನೂ ತಾವೇ ದೂರಕ್ಕೆ ಕೊಂಡೊಯ್ದು ಎಸೆಯುತ್ತಿದ್ದರು. ಹಳ್ಳಿಯ ಕೆಲವು ಮುಖ್ಯಸ್ಥರ ಸಹಾಯದಿಂದ ಗ್ರಾಮ ಗ್ರಾಮಗಳಲ್ಲೂ ಧೂಪ ಮತ್ತು ಗಂಧಕದ ಹೊಗೆಯನ್ನು ಹಾಕಿಸಿದರು. ರೋಗ ನಿವಾರಣೆಯ ಕ್ರಮಗಳನ್ನು ಜನರಿಗೆ ಘೋಷಣೆಗಳ ಮೂಲಕ ತಿಳಿಸಿದರು: ’ಕಾಲರಾ ರೋಗಿಯ ಮಲಮೂತ್ರಗಳನ್ನು ದೂರದ ಹಳ್ಳದಲ್ಲಿ ಹಾಕಿರಿ’, ’ಕುಡಿಯುವ ನೀರಿನ ಶುದ್ಧತೆಯನ್ನು ಕಾಪಾಡಿ’, ’ನೀರನ್ನು ಸೋಸಿ ಕರ್ಪೂರವನ್ನು ಸೇರಿಸಿ ಕುಡಿಯಿರಿ’- ಹೀಗೆ ಬುದ್ಧಿ ಹೇಳಿದರು. ಅಖಂಡಾನಂದರ ನಿರಂತರ ಪರಿಶ್ರಮ ಮತ್ತು ಉತ್ಸಾಹದಿಂದ ಜನರ ಸಹಕಾರ ಹೆಚ್ಚಿತು. ರೋಗದ ಭೀಕರತೆಯೂ ದೂರವಾಯಿತು. ಮಹುಲಾ ಸೇವಾ ಕೇಂದ್ರದಿಂದ ಹಸಿದ ಸಾವಿರಾರು ಜನರಿಗೆ ಅನ್ನಾಹಾರದ ವಿತರಣೆಗೆ ಅಖಂಡಾನಂದರು ವ್ಯವಸ್ಥೆ ಮಾಡಿದರು, ಜೊತೆಗೆ ರೋಗ ನಿವಾರಣೆಗಾಗಿಯೂ ಅಖಂಡಾನಂದರು ಎಡೆಬಿಡದೆ ದುಡಿಯುತ್ತ ಹೋದರು.

ಸಂನ್ಯಾಸಿಗೇಕೆ ಈ ಕೆಲಸ?

ಬರಗಾಲದ ಅನಾಹುತದಿಂದ ಮತ್ತೊಂದು ಸಮಸ್ಯೆ ತಲೆದೋರಿತು. ಅನ್ನದ ಅಭಾವದಿಂದ ಎಷ್ಟೋಮಂದಿ ಸತ್ತು ಹೋದರು. ಅದರಿಂದಾಗಿ ಬಹುಮಂದಿ ಮಕ್ಕಳು ತಂದೆತಾಯಂದಿರನ್ನೂ ರಕ್ಷಕರನ್ನೂ ಕಳೆದುಕೊಂಡು ಅನಾಥರಾದರು. ಅವರ ರಕ್ಷಣೆ ಮತ್ತು ಪೋಷಣೆಯನ್ನು ಮಾಡುವವರಾರು? ಅವರನ್ನು ನೋಡಿಕೊಳ್ಳುವವರಿಲ್ಲದಿದ್ದರೆ ಅವರು ಬೀದಿಪಾಲಾಗುವರಲ್ಲವೆ? ಮಹುಲಾದಲ್ಲೆ ಸ್ವಾಮಿ ಅಖಂಡಾನಂದರು ಅನಾಥ ಹುಡುಗರಿಗಾಗಿ ಆಶ್ರಮವನ್ನು ಸ್ಥಾಪಿಸಿದರು. ಮುಂದೆ ಅದು ಸಾರಘಾಟಿಗೆ ಸ್ಥಾನಾಂತರಿತವಾಯಿತು.

‘ಸರಳರೂ ಕಷ್ಟಸಹಿಷ್ಣುಗಳೂ ಬಡವರೂ ಆದ ನಮ್ಮ ಪ್ರಜೆಗಳಿಗೆ ವರ್ಷಕ್ಕೊಮ್ಮೆ ನಮ್ಮನ್ನು ಕಾಣುವ ಅವಕಾಶವನ್ನೂ ಕೊಡುವುದಿಲ್ಲ’

ಅಖಂಡಾನಂದರು ಆಶ್ರಮಕ್ಕೆ ಧನಸಹಾಯವನ್ನು ಕೋರಿ ತಮ್ಮ ಪರಿಚಿತರಿಗೆ ಪತ್ರ ಬರೆದರು. ಕಾಶಿಯ ಪಂಡಿತರೊಬ್ಬರು, “ನೀವು ಸಾಧುಗಳು, ಎಲ್ಲವನ್ನೂ ಬಿಟ್ಟ ಸಂನ್ಯಾಸಿಗಳು. ನೀವು ಧ್ಯಾನ, ಅಧ್ಯಯನ, ತಪಸ್ಸು, ಸಂಚಾರ – ಇವುಗಳಲ್ಲೇ ಕಾಲ ಕಳೆಯಬೇಕು. ಜನರಿಗೆ ಧರ್ಮೋಪದೇಶ ಮಾಡಬೇಕು. ಸಂಸಾರವನ್ನು ತ್ಯಜಿಸಿದ ನಿಮಗೇಕೆ ಈ ಸೇವಾ ಕಾರ್ಯದ ಹಂಬಲ, ಮಕ್ಕಳ ಜವಾಬ್ದಾರಿ, ಅವುಗಳ ರೋಗಶೋಕದ ಚಿಂತೆ?’ ಎಂದು ಪತ್ರದಲ್ಲಿ ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಅಖಂಡಾನಂದರು ಹೀಗೆಂದು ಉತ್ತರಿಸಿದರು: “ಆತ್ಮಜ್ಞಾನ ಅಥವಾ ದೇವರನ್ನು ಕಾಣುವುದೇ ಜೀವನದ ಗುರಿ ಎಂಬುದನ್ನು ನಾನು ಒಪ್ಪಿದವನು. ಧರ್ಮವನ್ನು ಮೊದಲು ನಮ್ಮ ಮನಸ್ಸು, ಮಾತು, ಕೇರಿಗಳಲ್ಲಿ ಆಚರಿಸಿ ಆಮೇಲೆ ಜನರಿಗೆ ಬೋಧಿಸಬೇಕು. ಉಪದೇಶ ಪಡೆಯುವವರ ಮುಖ್ಯವಾದ ಕೊರತೆಯನ್ನು ದೂರಮಾಡದೇ ಉಪದೇಶ ಯಶಸ್ವಿಯಾಗುವುದಿಲ್ಲ. ದೇಶದ ರಾಜ ಮಹಾರಾಜರು, ಧನಿಕರು, ಜಮೀನುದಾರರು ಜನರ ಸಂಕಷ್ಟಗಳನ್ನು ದೂರಮಾಡಲು ಸ್ವಲ್ಪವಾದರೂ ಶ್ರಮವಹಿಸಿದ್ದರೆ, ಸಂಸಾರವನ್ನು ಬಿಟ್ಟ ಸಂನ್ಯಾಸಿಯೊಬ್ಬ ಜನರ ಹಾರಾಭಾವದಂಥ ಸಂಕಟದ ನಿವಾರಣೆಗೆ ಕಾತರನಾಗಿ ದುಡಿಯಬೇಕಿರಲಿಲ್ಲ. ಆದರೆ ಈ ದೇಶದಲ್ಲಿರುವ ಧನಿಕರು, ಎತ್ತರಸ್ಥಾನದಲ್ಲಿರುವರು, ವಿದ್ಯಾವಂತರೆನ್ನಿಸಿಕೊಂಡವರು ಬಹುಮಂದಿ ತಮ್ಮ ಹೃದಯದ ಸುತ್ತಲೂ ಕಲ್ಲುಗೋಡೆಯನ್ನು ಕಟ್ಟಿ ಕೊಂಡಿದ್ದಾರೆ. ಹೊತ್ತಿನ ತುತ್ತಿಗೂ ಗತಿಯಿಲ್ಲದ ಅಸಹಾಯಕರಾದ ಬಡವರ ಕೂಗು ಅವರಿಗೆ ಕೇಳಿಸುತ್ತಿಲ್ಲ. ವೇದಾಂತ ಬೋಧನೆಯಿಂದ ಹಸಿದವನಿಗೆ ತೃಪ್ತಿ ಬಂದೀತೇ?

“ನಾನು ಬಾಲ್ಯದಿಂದಲೇ ಧರ್ಮದ ದಾರಿಯಲ್ಲಿ ನಡೆಯಲು ದೃಢಸಂಕಲ್ಪ ಮಾಡಿದೆ. ಮಹಾತ್ಮರ ಆಶೀರ್ವಾದವನ್ನು ಪಡೆದೆ. ಹಿಮಾಲಯದ ಗಿರಿಗುಹೆಗಳಲ್ಲಿ ಸಾಧನೆ ಭಜನೆಯನ್ನು ಮಾಡಿದೆ. ಯಾವ ಮನುಷ್ಯರಿಂದ ದೂರವಿದ್ದು ಹಿಮಾಲಯದ ಏಕಾಂತದಲ್ಲಿದ್ದೆನೊ ಅದೇ ಮನುಷ್ಯರನ್ನು ನಾನಿಂದು ನೋಡುವ ದೃಷ್ಟಿ ಬೇರೆಯಾಗಿದೆ. ಮನುಷ್ಯರಲ್ಲಿ ನಾನಿಂದು ದೇವರನ್ನು ಕಾಣುತ್ತಿದ್ದೇನೆ. ಮನುಷ್ಯ ಸಮಾಜದ ಸೇವೆಯೇ ಭಗವಂತನ ಸೇವೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಸರ್ವಜೀವಿಗಳ ಒಳಗೂ ಹೊರಗೂ ವ್ಯಾಪಿಸಿರುವ ಭಗವಂತನ ವಾಣಿ ಮತ್ತೆಮತ್ತೆ ನನ್ನ ಕಿವಿಯಲ್ಲಿ ಮೊರೆಯುತ್ತಿದೆ: ’ಮಗೂ! ಮನುಷ್ಯರೇ- ವೈದಿಕ ಋಷಿ ವೃಂದ; ಮನಷ್ಯರಲ್ಲಿಯೇ ರಾಮಕೃಷ್ಣಾದಿ ಅವತಾರಗಳು. ಅಂಥ ಮನುಷ್ಯರ ಎಂಥ ಶೋಚನೀಯ ಸ್ಥಿತಿ ನೋಡು!’ ಈ ಮಾತನ್ನು ಕೇಳಿದ ನಾನು ಸುಮ್ಮನೆ ಕುಳಿತಿರಲು ಸಾಧ್ಯವೇ? ಈ ಮನುಷ್ಯ ದೇವತೆಯ ಸೇವೆಗಾಗಿ ಈ ಜೀವನವನ್ನು ಕೊಟ್ಟಿರುವೆ. ಮುಂದೆ ಎಷ್ಟು ಜೀವನಗಳನ್ನು ಕೊಡಬೇಕೋ ತಿಳಿಯದು…. ಇನ್ನು ಆತ್ಮಜ್ಞಾನಿಗಳು ನೂರಾರು ಕೆಲಸ ಮಾಡಿಯೂ ಸದಾ ಧ್ಯಾನದ ಸ್ಥಿತಿಯಲ್ಲಿದ್ದವರಷ್ಟೆ ಶಾಂತಚಿತ್ತರಾಗಿರಬಲ್ಲರು. ಇದನ್ನು ಎಲ್ಲರೂ ತಿಳಿಯಲಾರರು. ಅವರಿಗೆ ಮಾತ್ರ ಗೊತ್ತಿರುವ ಸತ್ಯ ಅದು.”

ಆಶ್ರಮದಲ್ಲಿ

ಸಾರಾಗಾಛಿಯ ಆಶ್ರಯದಲ್ಲಿ ಬಹುಮಂದಿ ಅನಾಥ ಬಾಲಕರಿಗೆ ಆಶ್ರಯ ದೊರೆಯಿತು. ಅವರಿಗೆ ಉತ್ತಮ ಶಿಕ್ಷಣ ದೊರೆಯಿತು. ಅವರು ಸ್ವತಂತ್ರರಾಗಿ ಜೀವನ ನಡೆಸಲು ಸಮರ್ಥರಾದರು. ಆಶ್ರಮದಲ್ಲಿ ಸಾಮಾನ್ಯ ಶಿಕ್ಷಣವಲ್ಲದೆ ಜನಸೇವಾಕಾರ್ಯದ ಶಿಕ್ಷಣವೂ ದೊರೆಯುತ್ತಿತ್ತು. ಒಮ್ಮೆ ಆಶ್ರಮದ ಬಾಲಕರು ಸಮೀಪದ ಹಳ್ಳಿಯ ಜನರಿಗೆ ಔಷಧವನ್ನು ವಿತರಣೆ ಮಾಡಿ ಸಹಸ್ರಾರು ಜನರನ್ನು ಸಾವಿನಿಂದ ಉಳಿಸಿದರು. ವಯಸ್ಕರ ಶಿಕ್ಷಣ, ವೃತ್ತಿ ಶಿಕ್ಷಣಗಳಿಗೂ ತಕ್ಕ ವ್ಯವಸ್ಥೆ ಇತ್ತು. ಸೇವಾಕಾರ್ಯವು ಆಶ್ರಮಕ್ಕೇ ಸೀಮಿತವಾಗಿರಲಿಲ್ಲ. ಯಾವುದೇ ಒಂದು ಜಾತಿ, ಒಂದು ಮತಕ್ಕೆ ಸೀಮಿತವಾಗಿರಲಿಲ್ಲ. ಬಿಹಾರದಲ್ಲಿ ಪ್ರವಾಹದ ಹಾವಳಿಯಾದಾಗ ಹತ್ತು ವಾರಗಳ ಕಾಲ ಐವತ್ತಾರು ಗ್ರಾಮಗಳಿಗೆ ಎಲ್ಲ ವಿಧದ ಸಹಾಯವನ್ನು ಸ್ವಾಮಿ ಅಖಂಡಾನಂದರ ನೇತೃತ್ವದಲ್ಲೇ ಮಾಡಲಾಗಿತ್ತು. ದುಃಖಿತರ ಕೂಗು ಎಲ್ಲಿಂದ ಬಂದರೂ ಅವರು ಸದಾ ಸೇವೆಗೆ ಸಿದ್ಧರಾಗಿದ್ದರು. ಬಿಹಾರದ ಮಹಾಭೂಕಂಪದ ವೇಳೆ ಅವರು ಮುದುಕರಾಗಿದ್ದರು, ಆದರೂ ತಾವೇ ಸ್ವತಃ ಸೇವಾಕಾರ್ಯದ ಮೇಲ್ವಿಚಾರಣೆ ಮಾಡುತ್ತಿದ್ದರು. ’ನಲವತ್ತು ವರ್ಷಗಳ ಸೇವೆಯ ಜೀವನ ನಲವತ್ತು ದಿನಗಳಂತೆ ಕಳೆದು ಹೋದವು.’ ಎಂದವರು ಒಮ್ಮೆ ಹೇಳಿದರು. ಅದೆಂಥ ದುಡಿಮೆ! ಎಂಥ ಪರಿಶ್ರಮ! ಮಾಡುವ ಕೆಲಸದಲ್ಲಿ ಎಷ್ಟೊಂದು ತನ್ಮಯತೆ!

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಚಾಲಕರಾಗಿ ’ಗುರೂಜಿ’ ಎಂದು ಪ್ರಸಿದ್ಧರಾದ ಮಾಧವ ಸದಾಶಿವ ಗೋಲ್ವಲ್ಕರ್ ಅವರ ಅಖಂಡಾನಂದರ ಪ್ರೀತಿಯ ಶಿಷ್ಯರು. ಗೋಲ್ವಲ್ಕರ್ ಅಖಂಡಾನಂದರ ಕೊನೆಯ ದಿನಗಳಲ್ಲಿ ಅತ್ಯಂತ ಶ್ರದ್ಧೆ, ಆದರಗಳಿಂದ ಸೇವಾ ಶುಶ್ರೂಷೆಯನ್ನು ಸಾರಗಾಛಿಯ ಅವರ ಆಶ್ರಮದಲ್ಲಿ ಮಾಡಿದ್ದರು.

ಸ್ವಾಮೀಜಿ ತುಂಬ ಹಾಸ್ಯಪ್ರಿಯರು. ಮಕ್ಕಳಂತೆ ಸರಳ ವ್ಯಕ್ತಿಗಳು. ಸಂಭಾಷಣಾಚತುರರು. ದೀರ್ಘಕಾಲದ ತಮ್ಮ ಸಾಹಸಮಯ ಯಾತ್ರೆಯ ಅನುಭವಗಳನ್ನೂ ಆಶ್ಚರ್ಯಕರ ಘಟನೆಗಳನ್ನೂ ಮೋಹಕವಾದ ಮಾತಿನಲ್ಲಿ ಹೇಳಬಲ್ಲವರು. ಬಂಗಾಳಿ ಭಾಷೆಯಲ್ಲಿ ಪ್ರಭಾವಶಾಲಿ ಲೇಖಕರು. ಉತ್ತಮ ವಾಗ್ಮಿಗಳು. ಹಲವಾರು ಭಾಷೆಗಳನ್ನು ಬಲ್ಲವರು. ಅಷ್ಟೊಂದು ಕಾರ್ಯಗಳ ಹಾಗೂ ಸಂಚಾರಿ ಜೀವನದ ನಡುವೆ ಶಾಸ್ತ್ರ ಗ್ರಂಥಗಳನ್ನು ಸಾಂಗವಾಗಿ ಅಧ್ಯಯನ ಮಾಡಿದವರು. ಭಾರತದ ಇತಿಹಾಸ, ಆಯುರ್ವೇದ, ಸಂಸ್ಕೃತ ವ್ಯಾಕರಣ ಅವರ ನೆಚ್ಚಿನ ವಿಷಯಗಳು. ಬಂಗಾಳಿಯಲ್ಲಿ ಅವರ ಎರಡು ಗ್ರಂಥಗಳು ಪ್ರಕಟವಾಗಿವೆ: ಸ್ಮೃತಿ-ಕಥಾ, ಟಿಬೆಟಿನ ಪಥದಲ್ಲಿ ಹಿಮಾಲಯ.

’ನನಗೆ ಇಷ್ಟೇ ಬೇಕು’

ಸ್ವಾಮಿ ಅಖಂಡಾನಂದರು ೧೯೨೪ರಲ್ಲಿ ಶ್ರೀರಾಮಕೃಷ್ಣ ಸಂಘದ ಉಪಾಧ್ಯಕ್ಷರಾದರು. ೧೯೩೪ರಲ್ಲಿ ಸಂಘದ ಅಧ್ಯಕ್ಷರಾದರು. ಆಗ ಅನೇಕ ಜನರಿಗೆ ತ್ಯಾಗ ಮತ್ತು ಸೇವೆಯ ಆದರ್ಶದ ದೀಕ್ಷೆಯನ್ನಿತ್ತರು.

ಅಖಂಡಾನಂದರು ಎಪ್ಪತ್ತೊಂದನೆಯ ವಯಸ್ಸಿನಲ್ಲಿ ೧೯೩೭ ನೇ ಇಸವಿ ೭ನೇ ತಾರೀಖಿನಂದು ಇಹಲೋಕದಿಂದ ಕಣ್ಮರೆಯಾದರು. ದೇಹತ್ಯಾಗಕ್ಕೆ ಒಂದು ತಿಂಗಳ ಮೊದಲು ಅವರು ಮನನ ಮಾಡುತ್ತಿದ್ದ ಶ್ಲೋಕದ ಭಾವಾರ್ಥ ಇದು: ’ನನಗೆ ರಾಜ್ಯ ಬೇಡ, ಸ್ವರ್ಗಬೇಡ, ನಾನು ಕೇವಲ ದುಃಖತಪ್ತ ಜೀವಿಗಳ ಸಂಕಟವನ್ನು ದೂರಮಾಡಲು ಆಶೀಸುತ್ತೇನೆ.’

ಒಂದು ದೀಪ ಉರಿಯುತ್ತದೆ. ಅದು ತನ್ನ ಸುತ್ತಲೂ ಬೆಳಕನ್ನು ಬೀರುತ್ತದೆ. ಕತ್ತಲನ್ನು ದೂರಮಾಡುತ್ತದೆ. ಅಷ್ಟೇ ಅಲ್ಲ. ಆ ಒಂದು ದೀಪದಿಂದ ಇತರ ಹಲವಾರು ದೀಪಗಳೂ ಹೊತ್ತಿಕೊಳ್ಳುತ್ತವೆ. ಅಂತೆಯೆ ಮಹಾತ್ಮರೊಬ್ಬರು ದೇವರ ದಾರಿಯಲ್ಲಿ ನಡೆಯುತ್ತಾರೆ. ಆದರ್ಶ ಜೀವನ ನಡೆಸುತ್ತಾರೆ. ಅವರ ಮಾತು ಕೃತಿಗಳಿಂದ ಜನರ ಸಂದೇಹ, ಗೊಂದಲಗಳ ಕತ್ತಲು ದೂರವಾಗುತ್ತದೆ. ವಿಶ್ವಾಸ, ನಿಸ್ವಾರ್ಥಪ್ರೇಮಗಳ ಬೆಳಕು ಬೆಳಗುತ್ತದೆ.

ಸ್ವಾಮಿ ಅಖಂಡಾನಂದರು ಅಂಥ ಜೀವಜ್ಯೋತಿ.