ಮ್ಯಾಂಜಿಯಮ್, ಪದುಮುಗಂ, ನೋನಿ, ಗ್ಲೋರಿಯೋಸಾ, ಸ್ಟೀವಿಯಾ, ಮಾಕಂದಿ, ಹೀಗೆ ಹಲವು ಸಸ್ಯ ನರ್ತನ ನೋಡಿದ್ದೇವೆ. ಅಷ್ಟೇಕೆ ೧೦-೧೫ ವರ್ಷಕ್ಕೆ ಲಕ್ಷಾಂತರ ಗಳಿಸಬಹುದೆಂದು ನಮ್ಮ ನೆಲದ ೧೦ರೂಪಾಯಿ ಬೆಲೆಯ ಸಾಗವಾನಿ ಸಸಿಯನ್ನೇ  ೧೭೫ರೂಪಾಯಿಗೆ ಮಾರಾಟ ಮಾಡಿ ಹಲವು ರೈತರಿಗೆ ನಾಮ ಹಾಕಿದ ಫಟಿಂಗ ಕಂಪನಿಗಳು ಕಣ್ಣೆದುರಿವೆ. ಹೊಸ ಸಸಿ ತರುವದಕ್ಕೆ ವಿರೋಧವೆಂದು ಈ ಮಾತು ಹೇಳುತ್ತಿಲ್ಲಈವರೆಗಿನ ಬ್ಲೇಡ್ ಕಂಪನಿಗಳ ಮೋಸದ ವರಸೆಗಳನ್ನು ರೈತರು ಅರ್ಥಮಾಡಿಕೊಳ್ಳುವದು ಯಾವಾಗ?

`ಅಗರ್‌ವುಡ್’ ಹಂಗಾಮಿನ ಮಾತು ಶುರುವಾಗಿದೆ. ವೆನಿಲ್ಲಾ ಬಳಿಕ ಎದ್ದ ಮಲೆನಾಡಿನ ತಾಜಾ ಕೃಷಿಸನ್ನಿ ಇದು. ಮರ ನೆಟ್ಟರೆ ಅಪ್ಪಟ ಸುಗಂಧ ಚಿನ್ನ ದೊರೆಯುತ್ತದೆಂಬ ಕನಸು ಬೆಳೆದಿದೆ. ಅಡಿಕೆ ಬೆಲೆ ಬಿದ್ದಿದೆ, ವೆನಿಲ್ಲಾ ಸೊರಗಿದೆ, ಕೂಲಿಕಾರರ ಕೊರತೆಯ ನಡುವೆ  ಮುಳುಗುವವರಿಗೆ ಆಸರೆಯಂತೆ ಮರ ಕಾಣುತ್ತಿದೆ. ೪೫-೫೦ರೂಪಾಯಿಗೆ ಒಂದು ಸಸಿ, ವಿಶೇಷ ಆರೈಕೆಯಿಲ್ಲದೇ ಮರ ಬೆಳೆಯುತ್ತದೆ. ಅಗರ್‌ವುಡ್ ಮರದ ತೈಲಕ್ಕೆ  ಶ್ರೀಗಂಧಕ್ಕಿಂತ  ಹತ್ತು ಪಟ್ಟು ಜಾಸ್ತಿ ಬೆಲೆಯಂತೆ ಎಂಬ ಮಾತಂತೂ ಮಲೆನಾಡಿನ ಮನೆ ಮನೆ ತಲುಪಿದೆ. `ನೆಟ್ಟು ಮರೆತು ಬಿಡೋಣ, ಆ ಮೇಲೆ ನೋಟು ಏಣಿಸೋಣ!’ ಎಂಬ ಶೂನ್ಯ ಸಂಪಾದನೆಯ ಮಂತ್ರ ಶುರುವಾದಂತಿದೆ!. ಕಾಂಡ ಕೊರೆಯುವ ಕೀಟಗಳ ಆರಂಭ,  ಅರಗು ಉತ್ಪಾದಿಸುವ ಶಿಲೀಂದ್ರ , ಶಿಲೀಂದ್ರ ವೃದ್ಧಿಸುವ ಕೃತಕ ವಿಧಾನ, ಮರ ಬೆಳೆಯುವ ಅವಕಾಶ, ಖರೀದಿ ಒಪ್ಪಂದ ಪತ್ರ ಹೀಗೆ ಹತ್ತಾರು ನಿಟ್ಟಿನಲ್ಲಿ  ಮಾತೇ ಮಾತು. ಆದಾಯದ ಲೆಕ್ಕಾಚಾರಗಳಂತೂ ಒಂದೊಂದು ಮರದಿಂದ ೪-೫ಲಕ್ಷಕ್ಕೆ ಒಯ್ದಿವೆ. ಶ್ರೀಮಂತ ಅರಬ್ ದೇಶದವರಿಗೆ ಸುಗಂಧ ಪ್ರೀತಿಯಿರುವವರೆಗೆ  ಅಗರ್‌ಗೆ ಬೆಲೆ ಇದ್ದೇ ಇರುತ್ತದೆಂಬ ವಿಶ್ವಾಸ ಮೂಡಿದೆ!

ಈ ಮರ ಮೂಲತಃ ಸೌತ್‌ಈಸ್ಟ್ ಏಷ್ಯಾದ ನಿತ್ಯ ಹರಿದ್ವರ್ಣ ಸಂಕುಲ. ಹಿಮಾಲಯ,  ಮಲೇಶ್ಯಾ, ಥೈಲ್ಯಾಂಡ್, ಜಪಾನ್‌ವರೆಗೂ ಬೆಳೆದಿದೆ. ನೈಸರ್ಗಿಕ ಮರ ನಾಶವಾದ ಬಳಿಕ ವಾಣಿಜ್ಯ ನೆಡುತೋಪು ಆರಂಭವಾಗಿದೆ. ಸಮುದ್ರ ಮಟ್ಟದಿಂದ ೧೦೦೦ ಮೀಟರ್ ಎತ್ತರ, ೧೨೫-೭೨೫ ಸೆಂಟಿ ಮೀುಟರ್ ಮಳೆ ಸುರಿಯುವ ಪ್ರದೇಶಗಳಲ್ಲಿ  ಮರ ಬೆಳೆಸಬಹುದು. ಸಸಿ ನೆಟ್ಟ ೭ವರ್ಷಕ್ಕೆ ಕಾಂಡಕ್ಕೆ ಶಿಲೀಂದ್ರ ಬೆಳೆಯುವ ತಾಕತ್ತು, ಮರಕ್ಕೆ ಕೃತಕವಾಗಿ ಗಾಯ ಮಾಡಿದಾಗಲೂ ಆ ಭಾಗದಲ್ಲಿ ಶಿಲೀಂದ್ರ ಬೆಳೆದು  ಕಾಂಡದ ಒಳಗೆ ಕಂದು ಬಣ್ಣದ ಉತ್ಕೃಷ್ಟ ಸುಗಂಧಭರಿತ ತುಂಡು ಚಕ್ಕೆಗಳ ಉತ್ಪಾದನೆ. ಇದು ಬಹು ಬೇಡಿಕೆಯ ಅಗರ್‌ವುಡ್!.

ಮ್ಯಾಂಜಿಯಮ್, ಪದುಮುಗಂ, ನೋನಿ, ಗ್ಲೋರಿಯೋಸಾ, ಸ್ಟೀವಿಯಾ, ಮಾಕಂದಿ ಹೀಗೆ ಹಲವು ಸಸ್ಯ ನರ್ತನ ನೋಡಿದ್ದೇವೆ. ಅಷ್ಟೇಕೆ ೧೦-೧೫ ವರ್ಷಕ್ಕೆ ಲಕ್ಷಾಂತರ ಗಳಿಸಬಹುದೆಂದು ನಮ್ಮ ನೆಲದ ೧೦ರೂಪಾಯಿ ಬೆಲೆಯ ಸಾಗವಾನಿ ಸಸಿಯನ್ನೇ  ೧೭೫ರೂಪಾಯಿಗೆ ಮಾರಾಟ ಮಾಡಿ ಹಲವು ರೈತರಿಗೆ ನಾಮ ಹಾಕಿದ ಫಟಿಂಗ ಕಂಪನಿಗಳು ಕಣ್ಣೆದುರಿವೆ. ಹೊಸ ಸಸಿ ತರುವದಕ್ಕೆ ವಿರೋಧವೆಂದು ಈ ಮಾತು ಹೇಳುತ್ತಿಲ್ಲ,  ಈವರೆಗಿನ ಬ್ಲೇಡ್ ಕಂಪನಿಗಳ ಮೋಸದ ವರಸೆಗಳನ್ನು ಸುಶಿಕ್ಷಿತ ರೈತರು ಅರ್ಥಮಾಡಿಕೊಳ್ಳುವದು ಯಾವಾಗ ?. ೩-೪ ವರ್ಷಗಳ ಈಚಿನ ಕೃಷಿ ಅನುಭವ ಬಿಟ್ಟರೆ ಅಗರ್ ಬಗೆಗೆ  ಅಧಿಕೃತವಾಗಿ ಹೇಳುವ ನೆಲದ ಅನುಭವವಿಲ್ಲ. ವಿವರ ಕೇಳಿದರೆ `ಇಂಟರ್‌ನೆಟ್ ನೋಡಿ’ ಎಂಬ ಸಲಹೆ ನೀಡುವವರು ಸಿಗಬಹುದು. ಲಕ್ಷಾಂತರ ವೆಬ್ ಲಿಂಕ್‌ಗಳಂತೂ  ಒಂದು ಮರದ  ಕೆಲವು ಮುಖ ಹೇಳುತ್ತವೆ. ಇವುಗಳಲ್ಲಿ ಸುಳ್ಳು-ಜೊಳ್ಳುಗಳನ್ನು  ಅಳೆದು ಹೇಳುವದು ತೀರ ಕಷ್ಟ.

ಅಗರ್‌ವುಡ್ (Agarwood) ಮರದ ಬಗೆಗೆ  ಸಿದ್ದಗೊಳಿಸಿದ ಬ್ರೋಷರ್ ನೋಡಬೇಕು, ಇದನ್ನು  ತಯಾರಿಸಿದವರ ಜಾಣತನಕ್ಕೆ ತಲೆಬಾಗಬೇಕು. ಅಡಿಕೆಗೆ ಹಳದಿ ಚುಕ್ಕೆ ರೋಗ ಮಲೆನಾಡು, ಬಯಲುಸೀಮೆಗಳಲ್ಲಿ ತೀವ್ರ ಸಮಸ್ಯೆಯೆಂಬುದು  ಗೊತ್ತು! ಇಂತಹ ತೋಟಗಳಲ್ಲಿ ಅಗರ್ ನೆಡುವ ಅವಕಾಶ  ಒತ್ತಿ ಹೇಳಲಾಗಿದೆ. ಅಡಿಕೆ, ಕಾಫಿ ತೋಟಗಳಲ್ಲಿ ನೆಡಬಹುದು, ಮುಖ್ಯ ಬೆಳೆ, ಮಿಶ್ರ ಬೆಳೆ, ಗಡಿಯಂಚಿನ ಸಸಿಯಾಗಿ ಸಹ  ಬೆಳೆಸಬಹುದು. ನೇರಕ್ಕೆ ಬೆಳೆಯುವ ಈ ಮರದ ಗುಣ, ಇದು  ಮುಖ್ಯ ತೋಟಗಾರಿಕಾ ಬೆಳೆಗೆ ಯಾವುದೇ ತೊಂದರೆ ಮಾಡದು ಎಂದು ವಿವರಿಸಲಾಗಿದೆ. ಬಂಜರು ಭೂಮಿಯಲ್ಲಿ ಮುಖ್ಯ ಬೆಳೆಯಾಗಿ ಇದನ್ನು ಬೆಳೆಸಬಹುದು ಎಂದು ಹೇಳುವ ಬ್ರೋಷರ್ ಸಾವಯವ ವಸ್ತು ಚೆನ್ನಾಗಿರುವಲ್ಲಿ ಶಿಲೀಂದ್ರ ಬೆಳೆವಣಿಗೆ ಅನುಕೂಲ ಎಂಬ ಸೈಲೆಂಟ್ ಸತ್ಯ ಹೇಳಿದೆ. ಹೆಚ್ಚು ಕಡಿಮೆ ಕರಾವಳಿ ಅಂಚನ್ನು ಹೊರತುಪಡಿಸಿ ಇಡೀ ರಾಜ್ಯಕ್ಕೂ ಅಗರ್ ಹಸುರಿನ ಕನಸು ಬಿತ್ತಲಾಗಿದೆ. ಬ್ರೋಷರ್‌ಗಳು ಏನೇ ಹೇಳಲಿ, ಅವು ಸಸಿ ಮಾರುವ ಕಂಪನಿಗಳು ಬರೆದ ಜಾಹೀರಾತುಗಳು, ನರ್ಸರಿ ಸಸಿ ಮಾರಾಟದ ಉದ್ದೇಶ ಸಾಧನೆಗೆ ಬಳಸಿದ ಯೋಜಿತ ಪ್ರಚಾರಗಳು ಎಂಬುದನ್ನು  ಗಮನಿಸಬೇಕು.

ಉತ್ತರ ಕನ್ನಡದ ಶಿರಸಿ, ಸಿದ್ದಾಪುರ, ಯಲ್ಲಾಪುರಗಳಲ್ಲಿ ಕಳೆದ ೨೦೦೯ರ ಅಗಸ್ಟ್ ಮಧ್ಯಭಾಗದಲ್ಲಿ  ೧೫.೦೦೦ ಸಸಿಗಳು ನಾಟಿಯಾಗಿವೆ. ನಂಬಲರ್ಹ ಮಾಹಿತಿ ಪ್ರಕಾರ ಈವರೆಗೆ ೩೦.೦೦೦ ಸಸಿಗಳನ್ನು ಜಿಲ್ಲೆಯಲ್ಲಿ  ನೆಡಲಾಗಿದೆ. ಇಲ್ಲಿ ಬಹುತೇಕ ಜನ ನೆಟ್ ನೋಡಿದವರ ಮಾತು ಕೇಳಿ ನೆಟ್ಟವರು, ಇನ್ನಷ್ಟು ಜನ ಗಿಡ ನೆಟ್ಟವರ ಪ್ರೇರಣೆ ಪಡೆದವರು. ಮರ ಬೆಳೆಸಿದರೆ ನಷ್ಟವಾಗುವದಿಲ್ಲ ಎಂಬ ಮಾತಿದೆ, ಆದರೆ ಲಕ್ಷ, ಕೋಟಿಯ ನಿರೀಕ್ಷೆ ನಿಜವಾಗುವದು ಕಷ್ಟ.  ನೆಟ್ಟು ನೋಡಿದವರು ಹೆಚ್ಚಿಲ್ಲದ ಇದನ್ನು ನೆಟ್(net) ನೋಡಿದ ವಿಶ್ವಾಸದಲ್ಲಿ ನೆಡಲು ಉದ್ದೇಶಿಸಿದ್ದರೆ ಪುಟ್ಟ ಸಲಹೆಯಿದೆ. `೫೦ ಅಗರ್ ನೆಟ್ಟವರು ನಿಮ್ಮ ಪಕ್ಕದ ಅರಣ್ಯ ನರ್ಸರಿಗೆ ಹೋಗಿ ೧೦ ಸಾಗವಾನಿ, ಹಲಸಿನ ಸಸಿಗಳನ್ನೂ  ಅಂದೇ ತಂದು ನಾಟಿ ಮಾಡಿರಿ. ಮುಂದೆ ಅಗರ್ ಕೈ ಕೊಟ್ಟರೆ ಇವು ಆಸರೆಯಾಗಬಹುದು, ಒಂದಿಷ್ಟು ಆದಾಯ ನೀಡಬಹುದು !’