ನಕ್ಷತ್ರಗಳಿಂದ ಕಂಗೊಳಿಸುವ ಆಕಾಶವನ್ನು ನೋಡುತ್ತಿದ್ದರೆ – ನೋಡುತ್ತಲೇ ಇರಬೇಕು ಎನ್ನಿಸುತ್ತದೆ, ಅಲ್ಲವೆ? ಎಷ್ಟು ನಕ್ಷತ್ರಗಳನ್ನು ನಾವೇ ಗುರುತಿಸಬಹುದು! ಸಪ್ತರ್ಷಿಮಂಡಲ, ಧ್ರುವನಕ್ಷತ್ರ, ಕೃತ್ತಿಕಾಮಾಲೆ, ತ್ರಿಶಂಕು ಇವನ್ನು ಸುಲಭವಾಗಿ ಗುರುತು ಹಿಡಿಯಬಹುದು. ಇವನ್ನು ನೋಡುತ್ತಿರುವಂತೆ ಒಂದೊಂದು ನಕ್ಷತ್ರದಲ್ಲಿಯೂ ಒಬ್ಬೊಬ್ಬ ಮಹಾತ್ಮರು ಕುಳಿತಿದ್ದಾರೇನೋ ಎನ್ನಿಸುತ್ತದೆ. ತಮ್ಮ ಕಥೆ ವಿಚಾರಗಳನ್ನು ಹೇಳುತ್ತಿರುವರೇನೋ ಎಂದು ತೋರುತ್ತದೆ. ದಕ್ಷಿಣ ಆಕಾಶದಲ್ಲಿ ಅಗಸ್ತ್ಯ ನಕ್ಷತ್ರಕ್ಕೆ ಎಷ್ಟು ತೇಜಸ್ಸು! ಅದನ್ನು ಕಂಡಾಗ ‘ಎಷ್ಟು ಅವರ ಮಹಿಮೆ!’ ಎನ್ನಿಸುತ್ತದೆ, ಅವರ ಮಂಗಳಮಯವಾದ ಜೀವನ ಚರಿತ್ರೆ ನೆನಪಾಗುತ್ತದೆ.

ಪುರಾಣಗಳಲ್ಲಿ ಇವರನ್ನು ಕುರಿತು ಅನೇಕ ಕಥೆಗಳಿವೆ. ಒಂದೊಂದೂ ಇವರ ದಿಟ್ಟತನ, ಇತರರಿಗೆ ಉಪಾಕಾರ ಮಾಡುವ ಕರುಣೆ-ಇವನ್ನು ಸಾರಿ ಹೇಳುತ್ತವೆ.

ವಸಿಷ್ಠ, ವಿಶ್ವಾಮಿತ್ರರಂತೆ ಇವರೂ ಹಿರಿಯ ಋಷಿಗಳು. ಪುರಾಣಗಳಲ್ಲಿ ಇವರನ್ನು ‘ಕುಳ್ಳಮುನಿ’ ಎಂದು ವರ್ಣಿಸಲಾಗಿದೆ. ಆಕಾರದಲ್ಲಿ ಇವರು ಕುಬ್ಜರು! ಆದರೆ “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎನ್ನುವಂತೆ ಇವರಿಂದ ಲೋಕಕ್ಕೆ ಆಗಿರುವ ಉಪಕಾರಗಳು ಅಪಾರ.

ಅಗ್ನಿದೇವನೇ ಅಗಸ್ತ್ಯನಾಗಿ

ಈ ಅಗಸ್ತ್ಯ ಮಹರ್ಷಿಗಳ ಅವತಾರಕಾರಣವೂ ಒಂದು ಕುತೂಹಲವಾದ ಕಥೆಯೇ ಸರಿ!

ದೇವತೆಗಳಿಗೂ, ರಾಕ್ಷಸರಿಗೂ ಎಂದೆಂದಿಗೂ ತೀರದ ವೈರ; ಯಾವಾಗಲೂ ಮುಗಿಯದ ಯುದ್ಧ. ಒಮ್ಮೆ ದೇವೇಂದ್ರನು ಅಗ್ನಿ ವಾಯುಗಳನ್ನು ಕರೆದು “ನೀವು ರಾಕ್ಷಸರನ್ನು ಬೆನ್ನಟ್ಟಿಹೋಗಿ, ಅವರನ್ನು ನಿರ್ಣಾಮ ಮಾಡಿ ಬನ್ನಿರಿ”  ಎಂದು ಅಪ್ಪಣೆ ಮಾಡಿದನು. ಅವರಿಬ್ಬರೂ ರಾಕ್ಷಸರನ್ನು ಹಿಂಬಾಲಿಸಿದರು. ಇವರ ಹಾವಳಿಯನ್ನು ತಡೆಯಲಾರದೆ ಅನೇಕ ಅಸುರರು ಸತ್ತರು. ಅಳಿದುಳಿದ ಕೆಲವರು ಸಮುದ್ರದೊಳಗೆ ಅವಿತರು. “ಅಸರರು ಸಮುದ್ರವನ್ನು ಹೊಕ್ಕಿದ್ದಾರೆ; ಹೇಡಿಗಳಾದ ಅವರಿಂದ ತೊಂದರೆ ಆಗಲಾರದು ” ಎಂದುಕೊಂಡು ಅಗ್ನಿ ವಾಯುಗಳು ಹಿಂತಿರುಗಿದರು!

ದೇವೇಂದ್ರನಿಗೆ ಇದು ತಿಳಿಯಿತು. ಅಗ್ನಿ, ವಾಯುಗಳು ಕೆಲವು ರಾಕ್ಷಸರನ್ನು ಉಳಿಸಿದ್ದಾರೆಂದು ಅವನಿಗೆ ವಿಪರೀತ ಕೋಪ ಬಂದಿತು. ತಕ್ಷಣವೇ ಅವರನ್ನು ಕರೆಸಿ “ನಾನು ಹೇಳಿದ ಕೆಲಸವನ್ನು ಏಕೆ ಪೂರ್ತಿಗೊಳಿಸಲಿಲ್ಲ? ಈಗಲೂ ಸಮುದ್ರವನ್ನೆಲ್ಲಾ ಕಲಕಿ, ಅಡಗಿರುವ ರಾಕ್ಷಸರನ್ನು ಹುಡುಕಿ ನಿಶ್ಶೇಷವಾಗಿ ನಾಶಮಾಡಿ ಬನ್ನಿರಿ . ಸಮುದ್ರವು ಬತ್ತಿಹೋದರೂ ಸರಿಯೆ!” ಎಂದು ಆಜ್ಞೆ ಮಾಡಿದನು.

ಅಗ್ನಿ, ವಾಯುಗಳು ಹಿಂದೆಮುಂದೆ ನೋಡಿದರು. “ದೇವೇಂದ್ರ! ಸಮುದ್ರದಲ್ಲಿ ಅನೇಕ ಪ್ರಾಣಿಗಳು ವಾಸವಾಗಿವೆ. ಅವುಗಳಿಂದ ಯಾರಿಗೂ ಯಾವ ವಿಧವಾದ ತೊಂದರೆಯೂ ಇಲ್ಲ. ನಾವು ಸಾಗರವನ್ನು ಶೋಷಿಸಿದರೆ ಅವುಗಳು ನಾಶವಾಗುವುವಲ್ಲ, ಅನ್ಯಾಯವಲ್ಲವೆ?” ಎಂದು ಕೇಳಿದರು.

ದುಷ್ಟರು ಅಳಿದರೆ ಲೋಕಕ್ಕೆ ಕ್ಷೇಮ. ದುಷ್ಟರ ನಾಶಕ್ಕೆ ಎಲ್ಲರೂ ಪ್ರಯತ್ನಿಸಬೇಕು. ತಿಳಿದೂ ತಿಳಿದೂ, ದುಷ್ಟರಿಗೆ ಆಶ್ರಯ ಕೊಡುವವನು ಶಿಕ್ಷೆಗೆ ಅರ್ಹನಲ್ಲವೆ? ಇದರಲ್ಲಿ ಧರ್ಮ, ಅಧರ್ಮಗಳ ಪ್ರಶ್ನೆ ಏಕೆ?. ಕೋಪಗೊಂಡ ಇಂದ್ರನು ಇಬ್ಬರಿಗೂ ಶಾಪ ಕೊಟ್ಟನು; “ನೀವು ನಿಮ್ಮ ಕರ್ತವ್ಯವನ್ನು ಮರೆತು, ಧರ್ಮಬೋಧನೆಗೆ ಬಂದಿರಲ್ಲವೆ? ಈಗಲೇ ಭೂಲೋಕದಲ್ಲಿ ಹುಟ್ಟಿರು! ಧರ್ಮದ ಚರ್ಚೆಗೆ ಅದೇ ಸರಿಯಾದ ಸ್ಥಳ.” ಮತ್ತೆ ಅಗ್ನಿಯನ್ನು ಕುರಿತು “ಸಮುದ್ರವನ್ನು ನೀನೇ ಕುಡಿಯುವಂತಾಗಲಿ!” ಎಂದು ಹೇಳಿದನು.

ಅಗ್ನಿ ವಾಯುಗಳು ಭೂಲೋಕದಲ್ಲಿ ಅಗಸ್ತ್ಯ ಮತ್ತು ವಸಿಷ್ಠರಾಗಿ ಜನ್ಮತಾಳಿದರು. ಇಂದ್ರನ ಶಾಪವು ಭೂಲೋಕಕ್ಕೆ ವರವಾಯಿತು!

ಅಗಸ್ತ್ಯರ ತಂದೆ ಮಿತ್ರಾವರುಣ ಋಷಿ; ತಾಯಿ ದೇವ ಲೋಕದ ಅಪ್ಸರೆ ಊರ್ವಶಿ. ಅಗಸ್ತ್ಯರಿಗೆ ಕುಂಭ ಸಂಭವ,. ಮೈತ್ರಾವರುಣಿ ಎಂಬ ಹೆಸರುಗಳು ಸಹ ಉಂಟು. ಇವರು ತೇಜಸ್ವಿಗಳಾಗಿ ಬೆಳೆದು ಮಹಿಮಾವಂತರೆನಿಸಿಕೊಂಡರು.

ಭೂಮಿಯನ್ನು ಸ್ಥಿರವಾಗಿ ನಿಲ್ಲಿಸಿದ ಮಹಾತಪಸ್ವಿ

ಪರಮೇಶ್ವರನ ವಿವಾಹ, ಪಾರ್ವತಿಯ ತೌರುಮನೆಯಾದ ಹಿಮಾಲಯ ಪರ್ವತದ ಮೇಲೆ! ಅಗಸ್ತ್ಯರಿಗೂ ಆಹ್ವಾನ ಬಂದಿತು. ಸಕಲ ದೇವಾದಿದೇವತೆಗಳೂ, ಯಕ್ಷ, ರಕ್ಷಸ, ಕಿನ್ನರ, ಕಿಂಪುರುಷರು ಅಲ್ಲಿ ಬಂದು ನೆರೆದರು.  ಇಡೀ ಭೂಮಂಡಲದ ರಾಜಾಧಿರಾಜರುಗಳೂ, ಸಮಸ್ತ ಋಷಿಗಳೂ ಸೇರಿದರು.

ಇದ್ದಕ್ಕಿದ್ದಂತೆ ಲೋಕವೇ ಅಲುಗಾಡತೊಡಗಿತು! ಪ್ರಪಂಚವೆಲ್ಲವೂ ಉಯ್ಯಾಲೆಯಂತೆ ತೂಗಲಾರಂಭಿಸಿತು; ಪರ್ವತಗಳು ಕುಸಿಯತೊಡಗಿದವು; ಸಮುದ್ರವೆಲ್ಲ ಅಲ್ಲೋಲಕಲ್ಲೋಲವಾಯಿತು. ‘ಪ್ರಳಯವೇ ಸಂಭವಿಸಿ ಬಿಟ್ಟಿತೋ’ ಎಂದು ಎಲ್ಲರಿಗೂ ಒಂದೇ ಭಯ, ಆತಂಕ. ಸಕಲ ದೇವತೆಗಳೂ ಪರಮೇಶ್ವರನ ಮೊರೆಹೊಕ್ಕರು. “ದೇವಾಧಿದೇವ, ಈ ಕಷ್ಟದಿಂದ ಪಾರುಮಾಡು” ಎಂದು ಸ್ತೋತ್ರ ಮಾಡಿದರು. ಶಂಕರನ್ನು ಶಾಂತಿಯಿಂದ “ಗಿರಿಜಾ ಕಲ್ಯಾಣವನ್ನು  ನೋಡುವುದಕ್ಕಾಗಿ ಇಲ್ಲಿಗೆ ಬಂದಿರಿ; ಎಲ್ಲರೂ ಈ ಒಂದೇ ಸ್ಥಳದಲ್ಲಿ ಸೇರಿದ್ದೀರಿ; ಪ್ರಪಂಚದ ಭಾರವೆಲ್ಲ ಉತ್ತರದ ಈ ಹಿಮಾಲಯದ ಮೇಲೆ ಬಿದ್ದು ಬಿಟ್ಟಿದೆ. ಈ ಭಾರವನ್ನು ಸರಿತೂಗುವುದಕ್ಕೆ ಮತ್ತೊಂದು ಭಾರವು ದಕ್ಷಿಣ ದಿಕ್ಕಿನಲ್ಲಿ ಬೇಕು. ಹಾಗಾದರೆ ಭೂಮಿ ಸ್ಥಿರವಾಗಿ ನಿಲ್ಲುತ್ತದೆ, ಪರಿಸ್ಥಿತಿ ಶಾಂತವಾಗುತ್ತದೆ. ಈ ಕೆಲಸ ಅಗಸ್ತ್ಯರೊಬ್ಬರಿಂದ ಮಾತ್ರ ಸಾಧ್ಯ” ಎಂದು ಹೇಳಿದ. ಆ ಮುನಿವರರನ್ನು ಕರೆದು “ನೀವು ಈಗಲೇ ದಕ್ಷಿಣ ದಿಕ್ಕಿಗೆ ಹೋಗಬೇಕಾಗಿದೆ. ನಿಮ್ಮ ತಪಸ್ಸಿಗೆ ಸಾಮರ್ಥ್ಯದಿಂದ ಈ ಲೋಕವನ್ನು ಮತ್ತೆ ಪೂರ್ವದ ಸ್ಥಿತಿಗೆ ತನ್ನಿರಿ” ಎಂದು ಅಪ್ಪಣೆ ಮಾಡಿದ.

ಅಗಸ್ತ್ಯರಿಗೆ ಬಹಳ ದುಃಖವಾಯಿತು. ಉಮಾ ಮಹೇಶ್ವರರ ವಿವಾಹ ವೈಭವವನ್ನು ನೋಡಲು ಬಹು ಭಕ್ತಿಯಿಂದ ಬಂದಿದ್ದವರು ಅವರು! ಆದರೆ ಆ ಮಂಗಳಕರವಾದ ಧೃಶ್ಯವನ್ನು ನೋಡಿ ಆನಂದ ಅನುಭವಿಸಲು ಸಾಧ್ಯವಾಗಲಿಲ್ಲ!

ಅಗಸ್ತ್ಯರ ಮನಸ್ಸಿನ ಬೇಸರ ಮಹೇಶ್ವರನಿಗೆ ತಿಳಿಯಿತು. “ಮಹರ್ಷಿಗಳೇ, ಕರ್ತವ್ಯ ಮೊದಲು! ನಿಮ್ಮಿಂದ ಲೋಕಕ್ಕೆ ಮಂಗಳವಾಗಲಿ.  ನೀವು ನಮ್ಮ ವಿವಾಹವನ್ನು ನೋಡಬೇಕಷ್ಟೆ! ನಮ್ಮನ್ನು ಯಾವಾಗ ನೆನೆಯುವಿರೋ ಆಗ ನಾನೂ ಪಾರ್ವತಿಯೂ ಸಹ ಮದುಮಕ್ಕಳಂತೆಯೇ ನಿಮಗೆ ಪ್ರತ್ಯಕ್ಷ ದರ್ಶನ ಕೊಡುತ್ತೇವೆ. ಇನ್ನೇಕೆ ಚಿಂತೆ? ಹೋಗಿ ಬನ್ನಿ” ಎಂದು ಅನುಗ್ರಹಿಸಿದನು ಆನಂದದಿಂದ ಅಗಸ್ತ್ಯರು ‘ಧನ್ಯೋಸ್ಮಿ’ ಎಂದು ಪಾರ್ವತೀ ಪರಮೇಶ್ವರರಿಗೆ ನಮಸ್ಕರಿಸಿದರು, ಅಲ್ಲಿಂದ ಹೊರಟು ಬಂದರು.

ಹೀಗೆ ಅಗಸ್ತ್ಯರು ದಕ್ಷಿಣ ದಿಕ್ಕಿಗೆ ಹೋದರು. ಅಲ್ಲಿನ ಪರ್ವತವೊಂದರ ಮೇಲೆ ತಪಸ್ಸು ಮಾಡಿದರು. ಅವರ ಮಹಿಮೆಯಿಂದ ಈ ಲೋಕ ಮೊದಲಿನ ಸ್ಥಿತಿಗೆ ಬಂದಿತು.

ಪಾರ್ವತೀ ಪರಮೇಶ್ವರರ ವಿವಾಹವು ವೈಭವವಾಗಿ ನೆರವೇರಿತು. ಲೋಕವೆಲ್ಲ ಆನಂದಿಸಿತು; ಅಗಸ್ತ್ಯರನ್ನು ಕೊಂಡಾಡಿತು.

ಗಜೇಂದ್ರ ಮೋಕ್ಷ

ಪೂರ್ವಕಾಲದಲ್ಲಿ ಪಾಂಡ್ಯದೇಶವನ್ನು ಇಂದ್ರದ್ಯುಮ್ನನೆಂಬ ರಾಜನು ಆಳುತ್ತಿದ್ದನು. ಅವನು ವಿಷ್ಣುವಿನ ಪರಮ ಭಕ್ತಿ. ಪ್ರತಿದಿನವೂ ದೇವರ ಪೂಜೆಯನ್ನು ಮಾಡಿ ಅನಂತರವೇ ಬೇರೆ ಕೆಲಸಗಳಲ್ಲಿ ತೊಡಗುವನು. ಒಂದು ದಿನ ರಾಜನು ಪೂಜೆಯಲ್ಲಿ ನಿರತನಾಗಿದ್ದಾಗ ಅಗಸ್ತ್ಯ ಋಷಿ ಅರಮನೆಗೆ ಬಂದರು. ಬಾಗಿಲು ಕಾಯುವ ಸೇವಕನಿಗೆ “ನಾನು ಇಂದ್ರದ್ಯುಮ್ನನನ್ನು ಕಾಣಲು ಬಂದಿದ್ದೇನೆ, ತಿಳಿಸು” ಎಂದು ಹೇಳಿ ಕಳುಹಿಸಿದರು. ಅರಸನು ದೇವರ ಪೂಜೆಯನ್ನು ಅರ್ಧದಲ್ಲಿ ಬಿಟ್ಟು ಬರುವಂತಿರಲಿಲ್ಲ. ಆದ್ದರಿಂದ ಸೇವಕನನ್ನು ಕುರಿತು “ಮಹರ್ಷಿಯನ್ನು ಮರ್ಯಾದೆಯಿಂದ ಒಳಗೆ ಕರೆತಂದು ಒಳ್ಳೆಯ ಪೀಠದಲ್ಲಿ ಕುಳ್ಳಿರಿಸು. ಬೇಗನೆ ಬಂದು ಬಿಡುತ್ತೇನೆ” ಎಂದು ಹೇಳಿ ಕಳುಹಿಸಿದನು. ರಾಜನೇ ಬಂದು ತಮ್ಮನನ್ನು ಎದುರುಗೊಳ್ಳುತ್ತಾನೆ ಎಂದು ಯೋಚಿಸಿದ್ದರು ಋಷಿಗಳು ಹಿಂತಿರುಗಿ ಬಂದ ಸೇವಕನನ್ನು ಕಂಡು ಅವರಿಗೆ ಕೋಪ ಬಂದಿತು. ರಾಜನ ಅಹಂಕಾರವನ್ನು ಇಳಿಸಬೇಕೆಂದು “ಅರಸನೇ , ನಮ್ಮನ್ನು ಗೌರವಿಸದೇ ಇದ್ದುದಕ್ಕೆ ನಿನಗೆ ಆನೆಯ ಜನ್ಮ ಬರಲಿ” ಎಂದ ಶಾಪ ಕೊಟ್ಟು ಹೊರಡಲು ಸಿದ್ಧರಾದರು.

ಅರಸನ ಪೂಜೆ ಮುಗಿದಿತ್ತು. ಅವನ್ನು ಓಡೋಡಿ ಬಂದನು; ವಿಷಯವು ತಿಳಿಯಿತು. ಅವನು “ತಪ್ಪಾಯಿತು” ಎಂದು ಅಗಸ್ತ್ಯರಿಗೆ ಸಂದರ್ಭವನ್ನು ತಿಳಿಸಿದನು. ಅವರಿಗೆ ಇದು ರಾಜನ ತಪ್ಪಲ್ಲವೆಂದು ತಿಳಿಯಿತು; ಅವನ ಮೇಲೆ ಮರುಕವುಂಟಾಯಿತು. ಆದರೆ ಕೊಟ್ಟ ಶಾಪವನ್ನೂ ಬಿಟ್ಟ ಬಾಣವನ್ನೂ ಹಿಂತೆಗೆದುಕೊಳ್ಳಲು ಬರುವುದಿಲ್ಲ. ಆದರೂ “ಇಂದ್ರದ್ಯುಮ್ನ ನಿನಗೆ ವಿಷ್ಣುವಿನ ಚಕ್ರವು ಸೂಕಿದಾಗ ಶಾಪ ವಿಮೋಚನೆ ಆಗುತ್ತದೆ” ಎಂದು ಪರಿಹಾರವನ್ನು ಸೂಚಿಸಿದರು.

ದೊರೆಗ ಆನೆ ಜನ್ಮ ಬಂದಿತು. ಆ ಆನೆಯು ಜೊತೆಯ ಆನೆಗಳೊಡನೆ ಅರಣ್ಯದಲ್ಲಿ ಸಂಚರಿಸ ತೊಡಗಿತು. ಕಾಲಕ್ರಮದಲ್ಲಿ ಗಜರಾಜನಾಯಿತು. ಒಂದು ದಿನ ಆನೆಗಳಿಗೆ ನೀರಡಿಕೆಯಾಯಿತು. ಅವು ನೀರು ಕುಡಿಯಲು ಒಂದು ಕೊಳಕ್ಕೆ ಬಂದವು. ಅವುಗಳ ರಾಜನೇ ಮುಂದಾಳು. ಆನೆಗಳು ನೀರಿಗಿಳಿದವು. ಸಂತೋಷದಿಂದ ನೀರು ಕುಡಿದವು.

ಇದಕ್ಕಿದ್ದಂತೆ, ನೀರಿನಲ್ಲಿದ್ದ ಒಂದು ಭಾರಿ ಮೊಸಳೆ ಗಜರಾಜನ ಕಾಲನ್ನು ಹಿಡಿದುಬಿಟ್ಟಿತು. ಅದನ್ನು ನೀರಿಗೆ ಎಳೆಯಲು ಪ್ರಾರಂಭಿಸಿತು. ಆನೆಯು ಅದರೊಡನೆ ಹೋರಾಡತೊಡಗಿತು. ಆದರೆ ಮೊಸಳೆಯು ಏನು ಮಾಡಿದರೂ ಬಿಡಲಿಲ್ಲ. ಜೊತೆಯ ಆನೆಗಳೂ ತಮ್ಮ ರಾಜನ ಸಹಾಯಕ್ಕೆ ಬಂದವು. ಅದನ್ನು ಹಿಡಿದು ಮೇಲೆಳೆಯತೊಡಗಿದವು. ಮೊಸಳೆಯೋ ಭಾರಿ ಮೊಸಳೇ. ಅದರ ಹಿಡಿತ ಇವಗಳ ಎಳೆತವನ್ನು ಮೀರಿಸಿತು. ಆನೆಗಳು ನಿರಾಸೆಯಿಂದ ‘ನಿನ್ನನ್ನು ದೇವರೇ ಕಾಪಾಡಬೇಕು” ಎಂದು ಹೇಳಿ, ಬಿಟ್ಟುಹೋದವು. ಗಜರಾಜ ಹೆಜ್ಜೆ ಹೆಜ್ಜೆಯಾಗಿ ನೀರಿಗಿಳಿಯಲು ಪ್ರಾರಂಭವಾಯಿತು. ಅದಕ್ಕೆ ದಿಕ್ಕು ತೋರಲಿಲ್ಲ. ದೇವರನ್ನೇ ನೆನೆಯಿತು. “ಯಾರ ಸಹಾಯವೂ ಇಲ್ಲದವರಿಗೆ ನೀನೇ ಗತಿ” ಎಂದು ಹಲವು ವಿಧಗಳಿಂದ ಶ್ರೀಹರಿಯನ್ನು ಕರೆಯಿತು.

ವೈಕುಂಠದಲ್ಲಿದ್ದ ಮಹಾವಿಷ್ಣುವಿಗೆ ಭಕ್ತನ ಆರ್ತ ಧ್ವನಿ ಕೇಳಿಸಿತು. ತನ್ನ ಭಕ್ತರಿಗೆ ಒಂದಿಷ್ಟು ಕಷ್ಟ ಬಂದರೂ ಭಗವಂತನು ಸಹಿಸುವನೆ? ತಕ್ಷಣವೇ ಗರುಡನ ಮೇಲೇರಿ ಗಜೇಂದ್ರನಿದ್ದ ಕೊಳದ ಬಳಿಗೆ ಬಂದು ಚಕ್ರಾಯುಧವನ್ನು ತೆಗೆದು ಮೊಸಳೆಯ ಮೇಲೆ ಪ್ರಯೋಗಿಸಿದನು.

ಕೋಟಿ ಸೂರ್ಯರ ಬೆಳಕಿನಿಂದ ಮೆರೆಯುತ್ತಾ ಆ ಸುದರ್ಶನ ಚಕ್ರವು ಗಿರಗಿರನೆ ತಿರುಗುತ್ತಾ ಹೋಯಿತು. ಮೊಸಳೆಯ ಬಾಯನ್ನು ಸರಸರನೆ ಕತ್ತರಿಸಿತು. ಕರುಣಾಮಯನಾದ ಪರಮಾತ್ಮನು ಆನೆಯನ್ನು ಮೇಲಕ್ಕೆ ಕರೆದುಕೊಂಡನು. ಆನೆಯು ಭಕ್ತಿಯಿಂದ ಅರ್ಪಿಸಿದ ಕಮಲದ ಹೂವನ್ನು ಪ್ರೀತಿಯಿಂದ ಸ್ವೀಕರಿಸಿದನು. ಶಾಪ ವಿಮೋಚನೆ ಆಯಿತು.

ಸರ್ಪ, ಸರ್ಪ’ – ‘ಸರ್ಪವಾಗು

ನಹುಷ ಚಕ್ರವರ್ತಿ ಚಂದ್ರವಂಶದ ಮಹಾಧರ್ಮಾತ್ಮ ರಾಜ. ಅವನು ನೂರು ‘ಅಶ್ವಮೇಧ’ ಯಾಗಗಳನ್ನು ಮಾಡಿ ಅದರ ಫಲವಾಗಿ ಇಂದ್ರಪದವಿಯನ್ನು ಪಡೆದನು. ಇವನು ಸ್ವರ್ಗಕ್ಕೆ ಹೋಗಿ, ಹಳೆಯ ಇಂದ್ರನನ್ನು ಸಿಂಹಾಸನದಿಂದ ಇಳಿಸಿ, ತಾನು ಅದರ ಮೇಲೆ ಕುಳಿತ. ಆಗ ದೇವಲೋಕಕ್ಕೆಲ್ಲ ತಾನೇ ಅಧಿಪತಿ ಎನ್ನುವ ಗರ್ವ ತುಂಬಿತು. ಇತರ ದೇವತೆಗಳೊಡನೆ ಹಳೆಯ ಇಂದ್ರನೂ, ಶಚೀದೇವಿಯೂ ತನ್ನ ಸೇವೆ ಮಾಡಬೇಕು ಎಂದು ಅವನ ಇಷ್ಟ.

ಹೊಸ ಇಂದ್ರನಿಗೆ ವಿಧೇಯರಾಗಿ ನಡೆಯಲು ಹಳೆಯ ಇಂದ್ರನಿಗೆ, ಶಚೀದೇವಿಗೆ ಇಷ್ಟವಿಲ್ಲ. ಆದರೆ ನಹುಷನು ಈಗ ಇಂದ್ರ, ಅವನ ಅಪ್ಪಣೆಯನ್ನು ಮೀರುವ ಹಾಗಿಲ್ಲ.

ಏನು ಮಾಡುವುದು?

ಕಡೆಗೆ ಅವರು ಒಂದು ಉಪಾಯವನ್ನು ಹೂಡಿದರು. ನಹುಷನು ಋಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಕುಳಿತು ಬಂದರೆ, ತಾನು ಅವನ ಅಡಿಯಾಳಾಗುತ್ತೇನೆಂದು ಶಚೀ ದೇವಿ ತಿಳಿಸಿದಳು. ಮಹರ್ಷಿಗಳು ಪಲ್ಲಕ್ಕಿ ಹೊರುವುದು! ಎಂತಹ ಆಭಾಸ! ಆದರೆ ನಹುಷನಿಗೆ ಅಧಿಕಾರ ಮದದಿಂದ ತಾನು ಮಾಡುತ್ತಿರುವ ಕೆಲಸ ಸರಿಯೇ, ತಪ್ಪೇ? ಎನ್ನುವುದನ್ನು ತಿಳಿಯಲು ಸಾಧ್ಯವಾಗಲಿಲ್ಲ. ಮಹರ್ಷಿಗಳು, ತಪಸ್ವಿಗಳು ಎಂದು ಯೋಚಿಸದೆ ಅವರಿಗೆ ಹೇಳಿ ಕಳುಹಿಸಿದ. “ನಾನು ಶಚೀದೇವಿಯ ಅರಮನೆಗೆ ಹೋಗುತ್ತೇನೆ, ನನ್ನ ಪಲ್ಲಕ್ಕಿಯನ್ನು ನೀವು ಹೊತ್ತು ಕರೆದುಕೊಂಡು ಹೋಗಬೇಕು” ಎಂದ. ಎಷ್ಟೇ ಆಗಲಿ, ದೇವೇಂದ್ರ ಅಲ್ಲಿವೆ? ಋಷಿಗಳು ಒಪ್ಪಿದರು. ನಹುಷ ಪಲ್ಲಕ್ಕಿಯಲ್ಲಿ ಕುಳಿತನು. ಋಷಿಗಳು ಹೆಗಲ ಮೇಲೆ ಪಲ್ಲಕ್ಕಿ ಹೊತ್ತು ಹೊರಟರು. ಅವರಲ್ಲಿ ಅಗಸ್ತ್ಯರೂ ಒಬ್ಬರು.

ಅಗಸ್ತ್ಯರು ಕುಳ್ಳಾಗಿದ್ದುದರಿಂದ ಪಲ್ಲಕ್ಕಿಯು ಒಂದು ಕಡೆಗೆ ವಾಲುತ್ತಿತ್ತು. ಅದರಿಂದ ಕೋಪಗೊಂಡ ನಹುಷನು “ಸರ್ಪ್, ಸರ್ಪ”

[ – ಎಂಧರೆ ‘ಬೇಗ, ಬೇಗ’ – ಎಂದು ಕಾಲನ್ನು ಝಡಿಸಿದನು. ಕಾಲು ಅಗಸ್ತ್ಯರಿಗೆ ಸೋಕಿತು. ಅಪಮಾನಿತರಾದ ಅಗಸ್ತ್ಯರು “ನಹುಷ! ಇಂದ್ರ ಪದವಿಯು ನಿನಗೆ ವಿಪರೀತ ಗರ್ವವನ್ನು ಮೂಡಿಸಿತು. ನೀನು ಸರ್ಪವಾಗು’’ ಎಂದು ಶಪಿಸಿದರು.

ನೆತ್ತಿಗೇರಿದ್ದ ನಹುಷೇಂದ್ರನ ಪಿತ್ತ ಸರ್ರ‍ನೆ ಕೆಳಕ್ಕಿಳಿಯಿತು! ಅವನು ಪಲ್ಲಕ್ಕಿಯಿಂದ ಧುಮುಕಿದ, ಅಗಸ್ತ್ಯರ ಕಾಲನ್ನು ಹಿಡಿದ, “ತಪ್ಪಾಯಿತು, ಕ್ಷಮಿಸಿ” ಎಂದು ಗೋಳಿಟ್ಟ ದಯಾಮಯರಾದ ಅಗಸ್ತ್ಯರು “ಮುಂದೆ ನಿನ್ನ ವಂಶದವರಿಂದಲೇ ನಿನಗೆ ಸದ್ಗತಿ ದೊರೆಯುತ್ತದೆ” ಎಂದು ಅನುಗ್ರಹಿಸಿದರು.

ನಹುಷನಿಗೆ ಅಜಗರ, ಎಂದರೆ ಹೆಬ್ಬಾವಿನ, ರೂಪ ಬಂದಿತು. ಸ್ವರ್ಗದಿಂದ ಭೂಮಿಗೆ ಬಿದ್ದ. ಒಂದು ಕಾಡಿನಲ್ಲಿ ಸಂಚರಿಸುತ್ತಿದ್ದ ಹೀಗೆ ಎಷ್ಟೋ ಕಾಲ ಕಳೆಯಿತು. ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿ ಸೌಗಂಧಿಕಾ ಪುಷ್ಪ ಎಂಬ ಹೂವು ಬೇಕು ಎಂದು ಆಸೆಪಟ್ಟಳು. ಅದನ್ನು ಭೀಮನು ತರಲು ಹೋದ. ಅಜಗರ ಅವನನ್ನು ಸುತ್ತಿಕೊಂಡಿತು. ಭೀಮನನ್ನು ಬಿಡಿಸಲು ಧರ್ಮ ರಾಜನೇ ಬರಬೇಕಾಯಿತು. ಧರ್ಮರಾಜನು ಅಜಗರವು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ಕೊಟ್ಟನು. ಭೀಮನ ಬಿಡುಗಡೆಯಾಯಿತು; ನಹುಷನಿಗೆ ಸದ್ಗತಿ ದೊರೆಯಿತು.

ಹೀಗೆ ಅಹಂಕಾರಿಗಳನ್ನು ಶಿಕ್ಷಿಸುವುದರಲ್ಲಿ, ‘ತಪ್ಪಾಯಿತು’ ಎಂದು ಬೇಡಿದವರಿಗೆ ಕರುಣೆ ತೋರಿಸುವುದರಲ್ಲಿ ಮಹಾಮಹಿಮರು ಅಗಸ್ತ್ಯರು.

ಲೋಪಾಮುದ್ರೆಗೆ ಒಡವೆಗಳ ಆಸೆ

ಒಮ್ಮೆ ಅಗಸ್ತ್ಯರಿಗೆ ತಾವು ಮದುವೆ ಆಗಬೇಕು ಎಂದು ತೋರಿತು. ತಾವು ಮದುವೆಯಾಗಲು ತಕ್ಕ ಕನ್ಯೆಯನ್ನು ಹುಡುಕಿಕೊಂಡು ಹೊರಟರು. ವಿದರ್ಭರಾಜನಿಗೆ ಲೋಪಾಮುದ್ರೆಯೆಂಬ ಮಗಳಿದ್ದಳು. ಅಗಸ್ತ್ಯರು ಆ ರಾಜನನ್ನು ಕಂಡು, “ರಾಜ, ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡು” ಎಂದು ಕೇಳಿದರು.

ಲೋಪಾಮುದ್ರೆಯು ಅಗಸ್ತ್ಯರನ್ನು ಮದುವೆಯಾಗಲು ಒಪ್ಪಿಕೊಂಡಳು. ಅವಳ ಮದುವೆಯಾಯಿತು. ಆವಳ ಅಗಸ್ತ್ಯರ ಆಶ್ರಮವನ್ನು ಸೇರಿದಳು. ಅವರು ಹೇಳಿದಂತೆ ಕೇಳುತ್ತ, ಯಾವುದಕ್ಕೂ ಪ್ರತಿಮಾತಾಡದೆ ಸಂಸಾರ ಮಾಡುತ್ತಿದ್ದಳು. ಅಗಸ್ತ್ಯರಿಗೂ ಅವಳ ವಿಧೇಯತೆಯನ್ನು ಕಂಡು ಬಹಳ ಆನಂದವಾಯಿತು.

ಒಂದು ಸಲ ಅವಳಿಗೆ ರೇಷ್ಮೆ ವಸ್ತ್ರಗಳನ್ನೂ, ಆಭರಣಗಳನ್ನೂ ಧರಿಸಲು ಬಹಳ ಆಸೆಯಾಯಿತು. ಅರಮನೆಯಲ್ಲಿ ತೊಡುತ್ತಿದ್ದ ಒಡವೆ – ವಸ್ತ್ರಗಳ ನೆನಪು ಬಂದಿತು. ಅವಳು ಗಂಡನಿಗೆ ಅತಿ ವಿನಯದಿಂದ, “ನನಗೆ ಒಡವೆ – ವಸ್ತ್ರಗಳನ್ನು ತೊಡಬೇಕೆಂದು ಆಸೆ. ದಯವಿಟ್ಟು ತಂದುಕೊಡಿ” ಎಂದು ಕೇಳಿದಳು. ಅದಕ್ಕೆ ಅಗಸ್ತ್ಯರು ಅವಳನ್ನು ಸಮಾಧಾನಪಡಿಸುತ್ತಾ “ಲೋಪಾಮುದ್ರೆ, ನಾನೊಬ್ಬ ತಪಸ್ವಿ. ಒಡವೆಗಳನ್ನು ಎಲ್ಲಿಂದ ತಂದು ಕೊಡಲಿ?” ಎಂದು ಕೇಳಿದರು. ಲೋಪಾ ಮುದ್ರೆಯು “ನೀವು ಸಾಮಾನ್ಯ ಋಷಿಗಳೆ? ಮನಸ್ಸು ಮಾಡಿದರೆ ನಿಮ್ಮ ತಪಸ್ಸಿನ ಪ್ರಭಾವದಿಂದ ಎಲ್ಲವನ್ನೂ ಕ್ಷಣಮಾತ್ರದಲ್ಲಿ ಸೃಷ್ಟಿಮಾಡಬಲ್ಲಿರಿ!” ಎಂದು ಹೇಳಿದಳು.

ಲೋಪಾಮುದ್ರೆಯ ಮುಗ್ಧ ಆಲೋಚನೆಗೆ ಅಗಸ್ತ್ಯರಿಗೆ ನಗು ಬಂದಿತು. ಅವರು ಮೃದುವಾಗಿ “ಲೋಪಾಮುದ್ರೆ, ನೀನು ಹೇಳುವುದು ಸರಿಯೆ. ಆದರೂ ತಪಸ್ಸು ಮಾಡುವುದು ನಮ್ಮ ಪ್ರಯೋಜನಕ್ಕೆ ಸುಖಕ್ಕೆ ಅಲ್ಲ. ಅದನ್ನು ಕೈಗೊಳ್ಳುವುದು ಇತರರಿಗೆ ಸಹಾಯಮಾಡುವುದಕ್ಕೆ, ಲೋಕಕ್ಕೆ ಒಳ್ಳೆಯದನ್ನು ಮಾಡುವುದಕ್ಕೆ. ತಪಸ್ಸನ್ನು ನಮ್ಮ ಸಂತೋಷಕ್ಕೂ ತೃಪ್ತಿಗು ಉಪಯೋಗಿಸಿಕೊಂಡರೆ ಅದರ ಸಾಮರ್ಥ್ಯ ಮತ್ತು ಪ್ರಭಾವಗಳು ಕಡಿಮೆ ಆಗುತ್ತವೆ. ಆದರೂ ನೀನು ಚಿಂತಿಸಬೇಡ; ಬೇರೆ ವಿಧದಲ್ಲಿ ನಿನಗೆ ಒಡವೆ ವಸ್ತ್ರಗಳನ್ನು ತಂದು ಕೊಡಲು ಪ್ರಯತ್ನಿಸುತ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟರು.

ಅಗಸ್ತ್ಯರಿಗೆ ಲೋಪಾಮುದ್ರೆಯ ವಿಷಯದಲ್ಲಿ ಕನಿಕರವಾಯಿತು. ಲೋಪಾಮುದ್ರೆಯು ಇದುವರೆಗೂ ತನ್ನನ್ನು ‘ಅದು ಬೇಕು, ಇದು ಬೇಕು’ ಎಂಬುದಾಗಿ ಏನನ್ನೂ ಕೇಳಿಲ್ಲ. ಅವಳು ರಾಜಪುತ್ರಿ; ಆದ್ದರಿಂದ ಅವಳು ಆಸೆಪಟ್ಟಿರುವುದು ಸಹಜ; ಅವಳ ಮನಸ್ಸಿಗೆ ತೃಪ್ತಿಯನ್ನುಂಟುಮಾಡಬೇಕಾದುದು ತನ್ನ ಕರ್ತವ್ಯ ಎಂಧು ಯೋಚಿಸಿದರು. ಒಡವೆ ವಸ್ತ್ರಗಳನ್ನು ಎಲ್ಲಿಮದ ತರುವುದು ಎಂಬುದು ಮುಂದಿನ ಪ್ರಶ್ನೆ. ಮಹಾರಾಜರು, ಚಕ್ರವರ್ತಿಗಳ ಹತ್ತಿರಕ್ಕೆ ಹೋಗಿ ಆಭರಣಗಳನ್ನು ಬೇಡಿದರು. ಮಹರ್ಷಿಯೊಬ್ಬರು ತಮ್ಮಲ್ಲಿಗೆ ಬಂದು ಬೇಡುವುದು ತಮ್ಮ ಪೂರ್ವಪುಣ್ಯ ಎಂದು ಅನೇಕ ರಾಜರು ಅಗಸ್ತ್ಯರಿಗೆ ಆಭರಣಗಳನ್ನು ಕೊಟ್ಟರು. ಹೀಗೆ ಅಗಸ್ತ್ಯರು ಶ್ರುತರ್ವ, ಬ್ರಧ್ನಶ್ವ, ತ್ರಸದಸ್ಯು ಎಂದು ರಾಜರುಗಳು ಬಳಿಯೂ ಹೋಗಿ ಕೇಳಿದರು. ಅವರೂ ಸಂತೋಷದಿಂದ ಒಡವೆಗಳನ್ನು ಕೊಟ್ಟರು. ಅನಂತರ, “ಬಾದಾಮಿಯ ರಾಕ್ಷಸ ರಾಜರಾದ ಇಲ್ವಲ ಮತ್ತು ವಾತಾಪಿ ಎಂಬವರ ಬಳಿ ಬೇಕಾದಷ್ಟು ಐಶ್ವರ್ಯವಿದೆ, ಅವರನ್ನೂ ಕೇಳಬಹುದು” ಎಂದು ಹೇಳಿದರು. ಅಗಸ್ತ್ಯ ಮಹರ್ಷಿ ಬಾದಾಮಿಗೆ ಬಂದರು. ಇಲ್ವಲ, ವಾತಾಪಿಯರಿದ್ದ ಸ್ಥಳ ಈಗ ಕನ್ನಡನಾಡಿನಲ್ಲಿರುವ ಬಾದಾಮಿ ಎಂಬ ಊರು.

ವಾತಾಪಿ ಜೀಣೋಭವ

ಇಲ್ವಲ, ವಾತಾಪಿಯರದೇ ಒಂದು ಸ್ವಾರಸ್ಯದ ಕಥೆಯಾಯಿತು. ಅವರಿಗೆ ಋಷಿಗಳನ್ನು ಕಂಡರೆ ಆಗದು. ಅವರಿಬ್ಬರೂ ಮಾಯಾವಿಗಳು; ಕಪಟಿಗಳು. ಆ ಪ್ರಾಂತದ ಸುತ್ತಮುತ್ತಣ ಋಷಿಗಳನ್ನೆಲ್ಲಾ ತಮ್ಮ ಮಾಯಾವಿದ್ಯೆಯ ಪ್ರಭಾವದಿಂದ ಕೊಂದುಹಾಕಿದ್ದರು. ಈ ವಿಚಾರವೆಲ್ಲ ಅಗಸ್ತ್ಯರಿಗೆ ತಿಳಿಯದೆ ಇರಲಿಲ್ಲ. ಆದರೆ ಅವರಿಗೆ ಈ ರಾಕ್ಷಸರೆಂದರೆ ಹೆದರಿಕೆ ಇರಲಿಲ್ಲ. “ಏನು ಮಾಡುತ್ತಾರೆ ನೋಡೋಣ; ಅವರು ಕೆಟ್ಟತನದಿಂದ ನಡೆದುಕೊಂಡರೆ ಅವರನ್ನೆ ಕೊಂದುಹಾಕಿದರೆ ಎಲ್ಲರಿಗೂ ಉಪಕಾರ” ಎಂದುಕೊಂಡೇ ಬಂದರು.

ಇಲ್ವಲ, ವಾತಾಪಿಯರು ಋಷಿಗಳನ್ನು ಕೊಲ್ಲುವುದಕ್ಕೆ ಒಂದು ಉಪಾಯ ಹೂಡುತ್ತಿದ್ದರು. ಇಬ್ಬರಿಗೂ ಮಾಯಾವಿದ್ಯೆ ಬರುತ್ತಿತ್ತು. ಇತರರಿಗೆ ಅಸಾಧ್ಯ ಎಂದು ಕಾಣುವುದನ್ನು ಅವರು ಮಾಡಿಬಿಡುತ್ತಿದ್ದರು. ಅವರು ಋಷಿಗಳಲ್ಲಿಗೆ ಬಹು ವಿನಯದಿಂದ ಹೋಗಿ, ‘ನಮ್ಮ ಮನೆಗೆ ದಯಮಾಡಿಸಬೇಕು. ಊಟ ಮಾಡಿ ನಮ್ಮನ್ನು ಧನ್ಯರನ್ನಾಗಿ ಮಾಡಬೇಕು,’ ಎಂದು ಆಹ್ವಾನಿಸುತ್ತಿದ್ದರು. ಋಷಿಗಳು ಒಪ್ಪುತ್ತಿದ್ದರು. ಇಲ್ವಲನು ವಾತಾಪಿಯನ್ನು ತನ್ನ ಮಂತ್ರದ ಪ್ರಭಾವದಿಂದ ಮೇಕೆಯನ್ನಾಗಿ ಮಾಡುತ್ತಿದ್ದನು. ಅದನ್ನು ಕೊಂಡು, ಅದರ ಮಾಂಸದಿಂದ ಭಕ್ಷ್ಯಗಳನ್ನು ತಯಾರಿಸಿ, ಅವುಗಳನ್ನು ಬಂದು ಅತಿಥಿಗಳಿಗೆ ಬಡಿಸುತ್ತಿದ್ದನು. ಕಪಟವರಿಯದ ಋಷಿಗಳು ಬಡಿಸಿದುದನ್ನು ತಿನ್ನುವರು. ಊಟವಾದ ನಂತರ ಇಲ್ವಲನು, ‘ವಾತಾಪಿ ಹೊರಗೆ ಬಾ’ ಎಂದು ಕರೆಯುವನು. ಋಷಿಯ ಹೊಟ್ಟೆಯನ್ನು ಸೇರಿರುವ ವಾತಾಪಿ ತಕ್ಷಣ ಅವನ ಹೊಟ್ಟೆಯನ್ನು ಸೀಳಿಕೊಂಡು ಹೊರಕ್ಕೆ ಬರುವನು! ಅತಿಥಿಯಾಗಿ ಬಂದ ಋಷಿ ಸದ್ದಿಲ್ಲದೆ, ನಿಮಿಷಮಾತ್ರದಲ್ಲಿ ಯಮಲೋಕಕ್ಕೆ ಅತಿಥಿಯಾಗಿ ಬಿಡುತ್ತಿದ್ದನು!

‘ಕಾವೇರಿ, ಹೊರಟು ಹೋದೆಯಾ?’ ಎಂದು ಹಂಬಲಿಸುತ್ತಿದ್ದ ಅಗಸ್ತ್ಯರಿಗೆ ಗಣೇಶನು ಪ್ರತ್ಯಕ್ಷನಾದನು.

ಈಗ ಇಲ್ವಲ, ವಾತಾಪಿಯರಿಗೆ ತಾವು ಕರೆಯದೆಯೇ ಋಷಿಯೊಬ್ಬರು ತಮ್ಮ ಬಳಿಗೆ ಬಂದಿರುವುದು ಪರಮ ಸಂತೋಷವೇ ಆಯಿತು. ಅವರು ಅಗಸ್ತ್ಯರನ್ನು ಮರ್ಯಾದೆಯಿಂದ ಕರೆದುಕೊಂಡುಹೋಗಿ ಯೋಗ್ಯ ಉಪಚಾರಗಳನ್ನು ಮಾಡಿ ಬಂದ ಕಾರಣವನ್ನು ಕೇಳಿದರು.

ಅಗಸ್ತ್ಯರು, “ಅಯ್ಯ, ನಿಮ್ಮ ಸತ್ಕಾರದಿಂದ ನನಗೆ ಬಹಳ ಸಂತೋಷವಾಯಿತು. ನೀವು ಅಪಾರ ಸಂಪತ್ತಿರುವವರು. ನನಗೆ ಒಳ್ಳೆಯ ಒಡವೆಗಳು ಬೇಕು. ನಿಮ್ಮಲ್ಲಿರುವ ಒಡವೆಗಳಲ್ಲಿ ಕೆಲವನ್ನು ಕೊಡಿ ಎಂದು ದಾನ ಕೇಳುವುದಕ್ಕೆ ಬಂದೆ” ಎಂದರು.

ರಾಕ್ಷಸರಿಬ್ಬರೂ ಅತಿವಿನಯದಿಂದ, “ತಾವು ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕು; ತಮ್ಮಂತಹ ಮಹರ್ಷಿಗಳು ನಮ್ಮನ್ನು ಹುಡುಕಿಕೊಂಡು ಬಂದಿರುವುದು ದೊಡ್ಡ ಭಾಗ್ಯವೇ ಸರಿ. ತಾವು ಕೇಳಿದುದನ್ನೆಲ್ಲಾ ಕೊಡುತ್ತೇವೆ” ಎಂದು ಪ್ರಾರ್ಥಿಸಿದರು.

ಅಡಿಗೆ ಸಿದ್ಧವಾಯಿತು. ಇಲ್ವಲನು ಭೋಜನಕ್ಕೆ ಅಗಸ್ತ್ಯರನ್ನು ಕರೆದನು. ಅವರು ಏನೂ ತಿಳಿಯದವರಂತೆ “ವಾತಾಪಿಯೆಲ್ಲಿ ಕಾಣಿಸುವುದಿಲ್ಲವಲ್ಲ?” ಎಂದು ಕೇಳಿದರು. ಇಲ್ವಲನು “ಅವನು ಅವಸರದ ಕೆಲಸದ ಮೇಲೆ ಹೋಗಿರುವನು; ತಾವು ಮಹರ್ಷಿಗಳು, ಏಕೆ ಕಾಯಬೇಕು? ಭೋಜನಮಾಡಿ; ಇನ್ನೇನು ಬಂದು ಬಿಡುವನು” ಎಂದ. ಅಗಸ್ತ್ಯರು “ಹೌದು! ಇನ್ನೇನು ಬಂದು ಬಿಡುವನು” ಎಂದು ನಗುತ್ತಾ ಹೇಳಿದರು. ಅಗಸ್ತ್ಯರ ಹೊಟ್ಟೆಯನ್ನು ಸೀಳಿಕೊಂಡು ವಾತಾಪಿ ಬರುವನೆಂದು ಇಲ್ವಲನ ಅರ್ಥ; ಇಲ್ವಲನ ಮಾತಿನ ವ್ಯಂಗ್ಯ ಅಗಸ್ತ್ಯರಿಗೆ ತಿಳಿಯಿತು; ಆದರೆ ಅಗಸ್ತ್ಯರ ಮಾತಿನ ಅರ್ಥ ಇಲ್ವಲನಿಗೆ ಆಗಲಿಲ್ಲ.

ಅಗಸ್ತ್ಯರು ಸಂತೋಷವಾಗಿ ಭೋಜನವನ್ನು ಮುಗಿಸಿದರು. ಅನಂತರ ಇಲ್ವಲನನ್ನು ಕುರಿತು. “ಇಂತಹ ಭೋಜನವನ್ನು ನಾನು ಇದುವರೆಗೂ ಉಂಡಿರಲಿಲ್ಲ; ಇಷ್ಟು ಆದರವಾಗಿ ಸತ್ಕಾರ ಮಾಡುವವರನ್ನೂ ಕಂಡಿರಲಿಲ್ಲ” ಎಂದು ಹೇಳುತ್ತಾ ಹೊಟ್ಟೆಯ ಮೇಲೆ ಕೈಯ್ಯಾಡಿಸುತ್ತಾ “ತೃಪ್ತಿಯಾಯಿತು, ತೃಪ್ತಿಯಾಯಿತು, ವಾತಾಪಿ ಜೀರ್ಣೋಭವ” ಎಂದು ಒಂದು ಸಲ ತೇಗಿದರು.

ಇದನ್ನೆಲ್ಲಾ ನೋಡುತ್ತಿದ್ದ ಇಲ್ವಲನಿಗೆ ಹೆದರಿಕೆಯಾಯಿತು. ಅವನು “ವಾತಾಪಿ ಹೊರಗೆ ಬಾ” ಎಂದು ವಾಡಿಕೆಯಂತೆ ತಮ್ಮನನ್ನು ಕರೆದನು. ಯಾರೂ ಬರಲಿಲ್ಲ. ಮತ್ತೊಮ್ಮೆ ಕರೆದ, ಮಗದೊಮ್ಮೆ ಕರೆದ. ಉಹುಂ, ಪ್ರಯೋಜನವಿಲ್ಲ! ಅಗಸ್ತ್ಯರ ಹೊಟ್ಟೆಯಲ್ಲಿ ಯಾವಾಗಲೋ ಜೀರ್ಣವಾಗಿಬಿಟ್ಟಿದ್ದನು ವತಾಪಿ! ಇನ್ನೆಲ್ಲಿ ಹೊರಗೆ ಬರಲು ಸಾಧ್ಯ!

ಇಲ್ವನಿಗೆ ದುಃಖ ತಡೆಯಲಾಗಲಿಲ್ಲ. ಅಗಸ್ತ್ಯರ ಮೇಲೆ ಬೀಳಲು ಹೋದನು. ಅಗಸ್ತ್ಯರು, ಕೋಪದಿಂದ ಮೇಲೆರಗಿ ಬಂದ ಇಲ್ವಲನನ್ನೂ ತಮ್ಮ ತಪಸ್ಸಿನ ಬಲದಿಂದ ಕೊಂದುಹಾಕಿದರು. ತರುವಾಯ ಅಣ್ಣತಮ್ಮಂದಿರು ಕೊಡಿಸಿಟ್ಟಿದ್ದ ಐಶ್ವರ್ಯದಲ್ಲಿ ತಮಗೆ ಬೇಕಾದಷ್ಟು ಒಡವೆ ವಸ್ತ್ರಗಳನ್ನು ತೆಗೆದುಕೊಂಡು ತಮ್ಮ ಆಶ್ರಮಕ್ಕೆ ಹಿಂತಿರುಗಿದರು.

ಅಗಸ್ತ್ಯರ ಹೆಸರು ಪ್ರಪಂಚವನ್ನೆಲ್ಲಾ ಬೆಳಗಿತು! ಇಂದಿಗೂ “ವಾತಾಪಿ ಜೀರ್ಣೋಭವ” ಎನ್ನುವುದು ಪ್ರಖ್ಯಾತವಾದ ಮನೆಮಾತಾಗಿ ಪರಿಣಮಿಸಿದೆ, ಅಗಸ್ತ್ಯರ ಮಹಿಮೆಯನ್ನು ನೆನಪಿಗೆ ತರುತ್ತದೆ.

ಪರ್ವತ ತಲೆಬಾಗಿತು

ಒಂದು ಸಲ ಮೇರುಪರ್ವತ, ವಿಂಧ್ಯಪರ್ವತಗಳ ನಡುವೆ ವಿರಸ ಬಂದಿತು! ಮೇರುಪರ್ವತವನ್ನು ಪ್ರತಿ ದಿನವೂ ಸೂರ್ಯನು ಸುತ್ತುಹಾಕುವನು.

“ಮೇರುಪರ್ವತವನ್ನು ಮಾತ್ರ ಸೂರ್ಯ ಸುತ್ತುತ್ತಾನೆ. ತನ್ನನ್ನೂ ಸುತ್ತುವುದಿಲ್ಲವೇಕೆ?” ಎನ್ನಿಸಿತು ವಿಂಧ್ಯಪರ್ವತಕ್ಕೆ ಮೇರುಪರ್ವತದ ಮೇಲೆ ಅಸೂಯೆಯೂ, ಸೂರ್ಯನ ಮೇಲೆ ಕೋಪವೂ ಉಂಟಾಯಿತು. ಅದು ಸೂರ್ಯನನ್ನು ನೋಡಿ, “ನನ್ನನ್ನೂ ಪ್ರದಕ್ಷಿಣೆ ಮಾಡು” ಎಂದು ಕೇಳಿಕೊಂಡಿತು. ಸೂರ್ಯನು ಅಲಕ್ಷ್ಯದಿಂದ ಅದರ ಕಡೆ ನೋಡದೆಯೇ “ಅದು ಆಗದ ಮಾತು” ಎಂದನು. ನಿನ್ನ ಗರ್ವವನ್ನು ಮುರಿಯುತ್ತೇನೆ; ನೋಡುತ್ತಿರು” ಎಂದು ಹೇಳಿ ಎತ್ತರವಾಗಿ ಬೆಳೆಯಿತು. ಎಲ್ಲರೂ ಬೆರಗಾಗಿ ನೋಡುತ್ತಿರುವಂತೆಯೇ ಅದು ಬೆಳೆಯಿತು, ಬೆಳೆಯಿತು, ಬೆಳದೇ ಬೆಳೆಯಿತು. ಅದರ ಶಿಖರ ಆಕಾಶಕ್ಕೆ ತಾಕಿತು. ಅದು ಸೂರ್ಯನು ಸಂಚಾರ ಮಾಡುವ ದಾರಿಗೆ ಅಡ್ಡಿಯಾಗಿ ನಿಂತಿತು. ಸೂರ್ಯನು “ಹೀಗೆ ಮಾಡುವುದು ಸರಿಯಲ್ಲ” ಎಂದು ಎಷ್ಟೋ ವಿಧವಾಗಿ ಹೇಳಿದನು. ವಿಂಧ್ಯ ಕೇಳಲಿಲ್ಲ. ದೇವತೆಗಳೆಲ್ಲ ಎಷ್ಟೋ ಹೇಳಿದನು. ವಿಂಧ್ಯ ಕೇಳಲಿಲ್ಲ . ದೇವತೆಗಳೆಲ್ಲ ಎಷ್ಟೋ ಹೇಳಿದರು; ಯಾರ ಮಾತಿಗೂ ವಿಂಧ್ಯ ಕಿವಿಗೊಡಲಿಲ್ಲ. ಎಲ್ಲರಿಗೂ ವಿಂಧ್ಯದ ಮೊಂಡು ಹಟವನ್ನು ಕಂಡು ಬಹಳ ಬೇಸರವಾಯಿತು.

ಸೂರ್ಯನ ಚಲನೆ ನಿಂತಿದ್ದರಿಂದ ಜಗತ್ತು ಯಾವಾಗಲೂ ಕತ್ತಲೆಯಲ್ಲಿಯೇ ಉಳಿಯಬೇಕಾಯಿತು.

ಏನು ಮಾಡಬೇಕೆಂದು ಯಾರಿಗೂ ತಿಳಿಯಲಿಲ್ಲ. ದೇವತೆಗಳೆಲ್ಲಾ ಬ್ರಹ್ಮನ ಮೊರೆಹೊಕ್ಕರು. ಬ್ರಹ್ಮನು “ಈ ಸಮಸ್ಯೆಯನ್ನು ಪರಿಹಾರ ಮಾಡಲು ಅಗಸ್ತ್ಯರೊಬ್ಬರಿಂದಲೇ ಸಾಧ್ಯ” ಎಂದು ಹೇಳಿದನು. ದೇವತೆಗಳ ಸಮೂಹ ಅಗಸ್ತ್ಯರನ್ನು ಆಶ್ರಯಿಸಿತು. ಅಗಸ್ತ್ಯರು ಅವರಿಗೆ “ನಾನು ನೋಡಿಕೊಳ್ಳುತ್ತೇನೆ, ನೀವು ಚಿಂತಿಸಬೇಡಿ”  ಎಂದು ಅಭಯವನ್ನು ಕೊಟ್ಟು ವಿಂಧ್ಯ ಪರ್ವತದ ಕಡೆ ನಡೆದರು.

ವಿಂಧ್ಯಪರ್ವತಕ್ಕೆ ಅಗಸ್ತ್ಯರ ಮಹಿಮೆಗಳೆಲ್ಲ ಚೆನ್ನಾಗಿ ಗೊತ್ತು. ಅವನ ಮುಂದೆ ತನ್ನ ದರ್ಪ ಅಗ್ನಿಯು ತಾಗಿದ ಹುಲ್ಲಿನಂತೆ ಎಂಬುದೂ ತಿಳಿದ ವಿಚಾರ. “ಉಪಾಯದಿಂದಲೇ ಕೆಲಸವನ್ನು ಸಾಧಿಸಬೇಕು;  ಹೇಗಾದರೂ ಅಗಸ್ತ್ಯರ ಕೋಪವನ್ನು ಶಾಂತಗೊಳಿಸಬೇಕು. ಅವರ ವಿಶ್ವಾಸ ಗಳಿಸಿದರೆ ನನ್ನ ಕೆಲಸ ನಡೆದಂತೆಯೇ” ಎಂದುಕೊಂಡು ಅಗಸ್ತ್ಯರನ್ನು ಸತ್ಕರಿಸಲು ಏರ್ಪಾಟು ಮಾಡಿತು. ಅಗಸ್ತ್ಯರು ಕೋಪದಿಂದ ಸರಸರನೆ ಬರುತ್ತಿದ್ದರು. ಮಹರ್ಷಿಗಳನ್ನು ವಿಂಧ್ಯ ವಿನಯದಿಂದ ಎದುರುಗೊಂಡಿತು! ತನ್ನ ಆತಿಥ್ಯವನ್ನು ಸ್ವೀಕರಿಸಬೇಕೆಂದು ಬೇಡಿಕೊಂಡಿತು; ತನಗೆ ಆಶೀರ್ವದಿಸಬೇಕೆಂದು ಅಗಸ್ತ್ಯರ ಮುಂದೆ ತಲೆಬಾಗಿ ನಮಸ್ಕರಿಸಿತು.

ತನ್ನ ಮುಂದೆ ವಿಶ್ವಾಸದಿಂದ ನಡುಬಗ್ಗಿ ಕುಳಿತಿರುವ ವಿಂಧ್ಯವನ್ನು ನೋಡಿ ಅಗಸ್ತ್ಯರಿಗೆ “ಅಯ್ಯೋ ಪಾಪ” ಎನ್ನಿಸಿತು. ಆದರೂ ಲೋಕದ ಹಿತದೃಷ್ಟಿ ಮುಖ್ಯ! ಆದ್ದರಿಂದ ಅವರು ಅದಕ್ಕೆ “ನೋಡು ವಿಂಧ್ಯ , ನಾನು ಅಗತ್ಯವಾದ ಕೆಲಸದ ಮೇಲೆ ದಕ್ಷಿಣಕ್ಕೆ ಹೋಗಬೇಕಾಗಿದೆ. ನನ್ನ ಕೆಲಸವನ್ನು ಮುಗಿಸಿಕೊಂಡು ಬರುವಾಗ ನಿನ್ನ ಆತಿಥ್ಯವನ್ನು ಸ್ವೀಕರಿಸುತ್ತೇನೆ; ಅಲ್ಲಿಯವರೆಗೂ ನೀನು ಹೀಗೆಯೇ ಇರು” ಎಂದು ಹೇಳಿ, ಅದರಿಂದ ಉತ್ತರವನ್ನು ಎದುರು ನೋಡದೆ ಹೊರಟು ಬಿಟ್ಟರು!

ವಿಂಧ್ಯ ಪರ್ವತಕ್ಕೆ ತನ್ನ ತಪ್ಪಿನ ಅರಿವಾಯಿತು. ಆದರೆ ಋಷಿಯ ಮಾತನ್ನು ಮೀರುವಂತಿಲ್ಲ. “ಅಗಸ್ತ್ಯರು ಎಂದು ಬರುವರೋ” ಎಂದು ಕಾದು ಕುಳಿತಿತು.

ಆದರೆ ದಕ್ಷಿಣಕ್ಕೆ ತೆರಳಿದ ಅಗಸ್ತ್ಯರಿಗೆ ವಿಪರೀತ ಕೆಲಸಕಾರ್ಯಗಳು. ಅವರು ಅಲ್ಲಿಂದ ಹಿಂತಿರುಗಲು ಸಾಧ್ಯವೇ ಆಗಲಿಲ್ಲ. ವಿಂಧ್ಯ ಎಂದೆಂದಿಗೂ ತಲೆ ತಗ್ಗಿಸಿಯೇ ಉಳಿಯುವಂತಾಯಿತು! ಲೋಕಕ್ಕೆ ಬಂದಿದ್ದ ಕಷ್ಟ ಸುಲಭವಾಗಿ ಪರಿಹಾರವಾಯಿತು.

ಸಮುದ್ರವೇ ಆಪೋಶನ

ದಕ್ಷಿಣದಲ್ಲಿ ಅಗಸ್ತ್ಯರು ಒಂದು ಕಡೆ ನಿಲ್ಲಲಾಗಲಿಲ್ಲ! ಎಲ್ಲೆಲ್ಲೂ ಅರಣ್ಯ. ಎಲ್ಲೆಲ್ಲೂ ರಾಕ್ಷಸರ ಹಾವಳಿ. ಕಾಡಿನಲ್ಲಿ ನೆಲಸಿದ್ದ ಋಷಿಗಳೆಲ್ಲರೂ ಅಸುರ ಬಾಧೆಯಿಂದ ತತ್ತರಿಸುತ್ತಿದ್ದರು; ಬೇಟೆಯ ಮೃಗಗಳಂತೆ ಅಸುರರು ಕೈಗೆ ಸಿಕ್ಕವರನ್ನು ಕತ್ತರಿಸುತ್ತಿದ್ದರು. ಋಷಿಗಳಿಗೆ ಬಂದ ದುರವಸ್ಥೆಯೇ ದೇವತೆಗಳಿಗೂ ಸಹ! ದೇವತೆಗಳು ರಾತ್ರಿಯ ಹೊತ್ತು ಯುದ್ಧ ಮಾಡುವುದಿಲ್ಲವೆಂದು ತಿಳಿದುಕೊಂಡ ‘ಕಾಲಕೇಯ’ ಎಂಬ ರಾಕ್ಷಸರು ರಾತ್ರಿಯ ಹೊತ್ತು ತಮ್ಮ ಪ್ರಭಾವವನ್ನು ಬೀರುತ್ತಿದ್ದರು; ಬೆಳಗಿನ ಸಮಯ ಸಮುದ್ರದೊಳಗೆ ಅವಿತು ಕೂರುತ್ತಿದ್ದರು. ಹೀಗಾಗಿ ಇವರನ್ನು ನಿಗ್ರಹಿಸುವ ಸಮಸ್ಯೆ ದೇವತೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿಬಿಟ್ಟಿತು. ದೇವತೆಗಳೆಲ್ಲ ವಿಷ್ಣುವಿನಲ್ಲಿ ಮೊರೆಯಿಟ್ಟರು. ವಿಷ್ಣವೂ “ಅಗಸ್ತ್ಯರಿಗೇ ಇದರ ಪರಿಹಾರ ಗೊತ್ತು” ಎಂದು ಹೇಳಿದ.

ದೇವತೆಗಳೆಲ್ಲ ಕಲೆತು ಅಗಸ್ತ್ಯರಲ್ಲಿಗೆ ಬಂದು, ಕಾಲಕೇಯರಿಂದ ಲೋಕಕ್ಕೆ ಒದಗುತ್ತಿರುವ ಕಷ್ಟವನ್ನು ನಿವೇದಿಸಿಕೊಂಡರು. ಅವರ ಮಾತೆಲ್ಲವನ್ನೂ ಅಗಸ್ತ್ಯರು ಕೇಳಿದರು. ಅವರಿಗೆ ಅಭಯವನ್ನು ಕೊಡುತ್ತಾ “ಹೇಗೂ ನೀವು ರಾಕ್ಷಸರೊಂದಿಗೆ ಯುದ್ಧ ಮಾಡಲು ಸನ್ನದ್ಧರಾಗಿ ಬಂದಿರುವಿರಿ. ನಾನು ಸಮುದ್ರವನ್ನು ಕುಡಿಯುತ್ತೇನೆ. ನೀರಿಲ್ಲದ ಸಾಗರದಲ್ಲಿ ಅವರು ಅಡಗಿ ಕೂತಿರಲಾಗುವುದಿಲ್ಲ . ನಿಮ್ಮ ಎದುರಿಗೆ ಬರಲೇಬೇಕಾಗುತ್ತದೆ. ಅವರನ್ನು ಯುದ್ಧಮಾಡಿ ನಿಗ್ರಹಿಸಿರಿ” ಎಂದು ಸೂಚಿಸಿದರು. ಅಗಸ್ತ್ಯರ ಆಲೋಚನೆಯನ್ನು ಮೆಚ್ಚಿಕೊಂಡು ದೇವತೆಗಳು “ಹಾಗೆಯೇ ಆಗಲಿ” ಎಂದು ಒಪ್ಪಿಕೊಂಡರು.

ಅಗಸ್ತ್ಯರು ಸಮುದ್ರದ ಬಳಿಗೆ ಹೋಗಿ ಅದರ ನೀರೆಲ್ಲವನ್ನೂ ಆಪೋಶನದಲ್ಲಿ ಕುಡಿದುಬಿಟ್ಟರು! ಅಡಿಗಿ ಕುಳಿತಿದ್ದ ದೈತ್ಯರೆಲ್ಲರೂ ದೇವತೆಗಳಿಗೆ ಕಾಣಿಸಿಕೊಂಡರು. ಗಾಳಿಗೆ ಸಿಕ್ಕಿದ ತರಗೆಲೆಗಳಂತೆ ದೇವತೆಗಳ ಶಸ್ತ್ರಾಸ್ತ್ರದ ಹೊಡೆತಕ್ಕೆ ತಾರಾಡಿ, ತೂರಾಡಿ ಹೋದರು; ನಿಶ್ಯೇಷವಾಗಿ ನಾಶವಾದರು. ಪ್ರಪಂಚಕ್ಕೆ ಕ್ಷೇಮವನ್ನುಂಟು ಮಾಡಿದ ಅಗಸ್ತ್ಯರನ್ನು ಎಲ್ಲರೂ ಸ್ತೋತ್ರ ಮಾಡಿದರು. ಬತ್ತಿಹೋಗಿದ್ದ ಸಾಗರವನ್ನು ಎಲ್ಲರೂ ಸ್ತೋತ್ರ ಮಾಡಿದರು. ಬತ್ತಿಹೋಗಿದ ಸಾಗರವನ್ನು ಮತ್ತೆ ನೀರನಿಂದ ತುಂಬಿದರು ಅಗಸ್ತ್ಯರಯ, ತಮ್ಮ ತಪಸ್ಸಾಮರ್ಥ್ಯದಿಂದ!

ಅಗಸ್ತ್ಯರು ಸಮುದ್ರದ ನೀರನ್ನೆಲ್ಲ ಕುಡಿದುಬಿಟ್ಟರು.

ಲೋಕಕ್ಕೆ ತಾಯಿ ಕಾವೇರಿ

 

ಕಾವೇರಿ ಎಂದರೆ ಕನ್ನಡ ನಾಡಿನ ಜನಕ್ಕೆ ಎಷ್ಟೊಂದು ಸಂತೋಷ! ನಮ್ಮ ಕೊಡಗಿನಲ್ಲಿ ಹುಟ್ಟಿ ಹರಿಯುವ ಈ ತಾಯಿ ಕನ್ನಡ ನಾಡಿನ ಆಚೆಯೂ ಜನರಿಗೆ ಅನ್ನ ಕೊಡುತ್ತಾಳೆ, ಪ್ರಾಣಿಗಳಿಗೆ ಮೇವು ಕೊಡುತ್ತಾಳೆ, ಎಲ್ಲ ಪ್ರಾಣಿಗಳಿಗೆ ಕುಡಿಯಲು ನೀರು ಕೊಡುತ್ತಾಳೆ. ಕಾವೇರಿಯಿಂದಲೇ ನಮ್ಮ ಕನ್ನಡ ನಾಡಿನ ಎಷ್ಟೋ ಪಟ್ಟಣಗಳಿಗೆ, ಹಳ್ಳಿಗಳಿಗೆ ವಿದ್ಯುಚ್ಛಕ್ತಿ, ಬೆಳಕು, ಕೈಗಾರಿಕೆಗಳಿಗೆ ಶಕ್ತಿ.

ಹೊಟ್ಟೆಗೆ ಆಹರ, ಕಣ್ಣಿಗೆ ಬೆಳಕು, ರಾಜ್ಯಕ್ಕೆ ಸಂಪತ್ತು, ಮನಸ್ಸಿಗೆ ಹಬ್ಬ; ತಾಯಿ ಕಾವೇರಿಯಿಂದ.

ನಮ್ಮ ಕಾವೇರಿ ಅಗಸ್ತ್ಯರ ಹೆಂಡತಿ. ಜನಕ್ಕೆ ಒಳ್ಳೆಯದಾಗಲಿ ಎಂದು ಅವಳು ನೀರಾಗಿ ಹರಿದಳು, ಅಗಸ್ತ್ಯರು ‘ಜನಕ್ಕೆ ಒಳ್ಳೆಯದಾಗುವುದು ಮುಖ್ಯ’ ಎಂದು ಒಪ್ಪಿದರು. ಎಂದು ಸ್ವಾರಸ್ಯವಾದ ಕಥೆ ಇದೆ.

ಅಗಸ್ತ್ಯ  – ಕಾವೇರಿಯರ ಕಥೆ ಎಲ್ಲ ಕಡೆ ಒಂದೇ ರೀತಿಯಲ್ಲಿಲ್ಲ. ಅಲ್ಲಲ್ಲಿ ಕೆಲವು ವ್ಯತ್ಯಾಸಗಳು ಕಾಣುವುದುಂಟು. ಆದರೆ ಮುಖ್ಯವಾದ ಸಂಗತಿ ಕವೇರ ಋಷಿಗಳು ಮಗಳು ಕಾವೇರಿಯಾದಳು, ಮಹಾತಪಸ್ವಿ ಅಗಸ್ತ್ಯರ ಕೈ ಹಿಡಿದಳು, ಜನ ಬದುಕಲಿ ಎಂದು ನದಿಯ ರೂಪವಾಗಿ ಹರಿದಳು ಎಂಬುದು.

ಕವೇರ ಯಾರು?

ಸಹ್ಯಾದ್ರಿಯ ಸಾಲಿನಲ್ಲಿ ಬ್ರಹ್ಮಗಿರಿ ಎನ್ನುವುದು ದೊಡ್ಡ ಬೆಟ್ಟ. ಅಲ್ಲಿ ಕವೇರ ಎಂಬ ರಾಜ. ಇವನು ತಪಸ್ಸು ಮಾಡಿ ಋಷಿಯಾದ. ಒಂದು ಆಶ್ರಮವನ್ನು ಕಟ್ಟಿಕೊಂಡು ತಪಸ್ಸಿನಲ್ಲಿ ನಿರತನಾಗಿದ್ದನು. ಅವನಿಗೆ ಲೋಕಕ್ಕೆ ಯಾವುದಾದರೂ ರೀತಿ ಉಪಕಾರ ಮಾಡಿ ಪುಣ್ಯಗಳಿಸುವ ಹಂಬಲ! ಅವನ ದೀರ್ಘಕಾಲದ ತಪಸ್ಸಿಗೆ ಪ್ರಸನ್ನನಾದ ಈಶ್ವರನು ಅವನ ಪ್ರಾರ್ಥನೆಯನ್ನು ಲಾಲಿಸಿ ‘ಕಾವೇರಿ’ ಎಂಬ ಮಗಳನ್ನು ಅನುಗ್ರಹಿಸಿದನು. “ಕಾವೇರಿಯಿಂದ ನಿನ್ನ ಹಂಬಲ ನೀಗುತ್ತದೆ” ಎಂದು ವರವನ್ನು ಕೊಟ್ಟನು. ಕಾವೇರಿಯು ದೊಡ್ಡವಳಾದಳು. ಕವೇರ ಮುನಿಯು ಲೋಕಕ್ಕೆ ಉಪಕಾರ ಮಾಡುವ ತನ್ನ ಹಂಬಲವನ್ನು ಮಗಳಿಗೆ ಹೇಳಿದನು. ಅದನ್ನು ಕೇಳುತ್ತ ಕೇಳುತ್ತ ಕಾವೇರಿಗೂ, “ನನ್ನಿಂದ ಲೋಕಕ್ಕೆ ಎಂದೆಂದೂ ಉಪಕಾರವಾಗುವ ಹಾಗಿದ್ದರೆ ಎಷ್ಟ ಚೆನ್ನ! ಜನ್ಮರ್ಸಾಕ!” ಎನ್ನಿಸತೊಡಗಿತು.

ಹೀಗಿರುವಲ್ಲಿ ಆ ಪ್ರಾಂತ್ಯಕ್ಕೆ ಅಗಸ್ತ್ಯ ಮಹರ್ಷಿಗಳು ಆಗಮಿಸಿದರು. ಅಲ್ಲಿ ನೆಲೆಸಿದ್ದ ಋಷಿಗಳೆಲ್ಲರೂ ಅವರನ್ನು ಸತ್ಕರಿಸಿ ಗೌರವಿಸಿದರು. ಕವೇರನೂ ತನ್ನ ಆಶ್ರಮಕ್ಕೆ ಅವರನ್ನು ಬರಮಾಡಿಕೊಂಡು ಉಪಚರಿಸಿದನು. ಅಗಸ್ತ್ಯರನ್ನು ನೋಡಿದ ಅವನಿಗೆ ಒಂದು ಆಲೋಚನೆ ಉಂಟಾಯಿತು. “ಕಾವೇರಿಗೆ ಹೇಗೂ ಮದುವೆಯಾಗ ಬೇಕು. ಒಂದು ವೇಳೆ ಅವಳನ್ನು ಅಗಸ್ತ್ಯರಿಗೆ ಕೊಟ್ಟು ಮದುವೆ ಮಾಡಿದರೆ, ಅವರು ಲೋಕಕ್ಕೆ ಮಾಡುವ ಉಪಕಾರಗಳಲ್ಲಿ ಕಾವೇರಿಯೂ ಪಾಲುಗೊಳ್ಳಬಹುದು” ಎನ್ನಿಸಿತು. ಈ ವಿಷಯವನ್ನು ಕಾವೇರಿಗೂ ತಿಳಿಸಿದನು. ಅವಳಿಗೂ ಅಗಸ್ತ್ಯರ ಮಹಿಮೆಗಳು ತಿಳಿದಿದ್ದವು. ಈ ವಿಚಾರದಿಂದ ಬಹಳ ಸಂತೋಷವೇ ಆಯಿತು.

ಕವೇರ ಮುನಿಯು ಅಗಸ್ತ್ಯರಿಗೆ ತನ್ನ ಮಗಳನ್ನು ಧಾರೆ ಎರೆದು ಕೊಟ್ಟು “ಧನ್ಯನಾದೆ” ಎಂದು ತೃಪ್ತಿ ಪಟ್ಟನು. ಕಾವೇರಿ ಅಗಸ್ತ್ಯರ ಸೇವೆ ಮಾಡಿಕೊಂಡು ಸುಖವಾಗಿದ್ದಳು. ಅಗಸ್ತ್ಯರೂ ಬ್ರಹ್ಮಗಿರಿಯಲ್ಲಿಯೇ ಆಶ್ರಮವನ್ನು ರಚಿಸಿ ಜಪ, ತಪಗಳಲ್ಲಿ ನಿರತರಾಗಿದ್ದರು.

ಆದರೂ ಕಾವೇರಿಗೆ ಯಾವಾಗಲೂ ಚಿಂತೆ ಕಾಡುತ್ತಿತ್ತು! ‘ನನ್ನಿಂದ ಜನರಿಗೆ ಉಪಕಾರವಾಗಬೇಕು’ ಎಂಬುದೇ ಅವಳ ಹಂಬಲ. ಈ ವಿಷಯವನ್ನು ಅಗಸ್ತ್ಯರ ಮುಂದೆ ಪ್ರಸ್ತಾಪಿಸುವಳು. ಅವರ ಸಲಹೆಯನ್ನು ಕೇಳುವಳು. ಅವರು ಕಾವೇರಿಗೆ “ಎಲ್ಲದಕ್ಕೂ ಕಾಲ ಬರುತ್ತದೆ” ಎಂದು ಸಮಾಧಾನ ನುಡಿಯುತ್ತಿದ್ದರು.

ಇದೇ ಕಾಲಕ್ಕೆ ಸರಿಯಾಗಿ ದಕ್ಷಿಣದಲ್ಲಿ ಶೂರಪದ್ಮನೆಂಬ ರಾಕ್ಷಸನು ಮಹಾಪ್ರಬಲನಾಗಿದ್ದನು. ಅವನಿಗೆ ಇಂದ್ರನ ಮೇಲೆ ಕೋಪ. ಮನುಷ್ಯರು ದೇವ್ತೆಗಳನ್ನು ಪೂಜಿಸುತ್ತಾರೆ ಎಂದು ಮನುಷ್ಯರ ಮೇಲೆ ಕೋಪ. ಅಗವರೆಲ್ಲ ನಾಶಹೊಂದಲೆಂದು, ಭೂಮಿಗೆ ಮಳೆಯು ಬೀಳದಂತೆ ತನ್ನ ಮಂತ್ರಶಕ್ತಿಯಿಂದ ತಡೆ ಹಾಕಿದ್ದನು. ಜನರೆಲ್ಲ ಮಳೆ- ಬೆಳೆ ಗಾಳಿಗಳಿಲ್ಲದೆ ತೊಂದರೆ ಪಡುತ್ತಿದ್ದರು. ನೆಲವೆಲ್ಲ ಒಣಗಿ ಬಿರುಕು ಬಿಟ್ಟಿತು. ಪಶುಪಕ್ಷಿಗಳಿಗೆ ತಿನ್ನಲು ಮೇವಿಲ್ಲ. ಕುಡಿಯಲು ನೀರಿಲ್ಲ. ಅವುಗಳ ಸಂಕಟ ಹೇಳತೀರದು. ಎಲ್ಲೆಲ್ಲೂ ಹಾಹಾಕಾರ; ಹಸಿವು ನೀರಡಿಕೆಗಳ ಪರಿಸ್ಥಿತಿ ಭೀಕರ. ಅಗಸ್ತ್ಯರ ಪತ್ನಿ ಕಾವೇರಿಗೆ ಮೊದಲಿನಿಂದ ಇತರರಿಗೆ ಉಪಕಾರ ಮಾಡ ಬೇಕೆಂಬ ಆಸೆ; ಈಗಲಂತೂ ಹೀಗೆ ನರಳುತ್ತಿರುವ ಜನರಿಗೆ, ಪಶು ಪಕ್ಷಿಗಳಿಗೆ ಹೇಗೆ ಸಹಾಯಮಾಡಬೇಕೆನ್ನುವ ಕಾತುರ! “ಈಗಲಾದರೂ ನನ್ನ ಇಷ್ಟವನ್ನು ನೆರವೇರಿಸಿ ಕೊಡಿರಿ” ಎಂದು ಎಲ್ಲಾ ದೇವರುಗಳಿಗೂ ಕೈ ಮುಗಿಯುವಳು.

ಕಡೆಗೂ ಕಾವೇರಿಯ ಪ್ರಾರ್ಥನೆ ಫಲಿಸುವ ಕಾಲ ಸನ್ನಿಹಿತವಾಯಿತು!

ಒಂದು ದಿನ ಬೆಳಗಿನ ಝಾವ. ಅಗಸ್ತ್ಯರು ಸ್ನಾನ ಮಾಡಲು ಹೊರಡಬೇಕು. ಆಶ್ರಮದಲ್ಲಿ ಕಾವೇರಿ ಒಬ್ಬಳೇ. ಮೈಮನಸ್ಸು ಸರಿಯಿಲ್ಲದೆ, ನಿತ್ಯದಂತೆ ಅವಳು ಅವರೊಡನೆ ಹೊರಡಲು ಆಗಲಿಲ್ಲ. ಅವಳನ್ನು ಬಿಟ್ಟು ಹೇಗೆ ಹೊರಡುವುದು? ಅಗಸ್ತ್ಯರಿಗೆ ಒಂದು ಆಲೋಚನೆ ಹೊಳೆಯಿತು. ತಮ್ಮ ಮಂತ್ರಪ್ರಭಾವದಿಂದ ಕಾವೇರಿಯನ್ನು ನೀರನ್ನಾಗಿ ಮಾಡಿದರು; ಕಮಂಡಲದೊಳಗೆ ತುಂಬಿ ಅದನ್ನು ತಮ್ಮೊಡನೆ ತೆಗೆದುಕೊಂಡು ಹೋದರಿಉ; ತಾವು ಸ್ನಾನಮಾಡುವ ಕೊಳದ ಮಗ್ಗುಲಿನಲ್ಲಿದ್ದ ಬಂಡೆಯೊಂದರ ಮೇಲೆ ಕಮಂಡಲವನ್ನಿರಿಸಿ ಸ್ನಾನ ಮಾಡಲು ಕೊಳಕ್ಕಿಳಿದರು.

ಕಾವೇರಿಯಿಂದ ಕ್ಷಾಮ ಹೋಗಿ, ಜನಕ್ಕೆ ಉಪಕಾರವಾಗಬೇಕು ಎಂದು ದೇವತೆಗಳು ತೀರ್ಮಾನ ಮಾಡಿದ್ದರು. ಅಗಸ್ತ್ಯರಯ ಕಮಕಂಡಲವನ್ನು ಇಟ್ಟು ಹೋಗುವುದನ್ನೇ ಕಾಯುತ್ತಿದ್ದರು.

ಇಂದ್ರನು ವಿನಾಯಕನಿಗೆ ಪ್ರಾರ್ಥನೆ ಮಾಡಿದ: “ವಿನಾಯಕ, ಇದೇ ಸಮಯ; ಕಾವೇರಿಯನ್ನು ಅಗಸ್ತ್ಯರ ಕಮಂಡಲದಿಂದ ಬಿಡುಗಡೆ ಮಾಡು. ವಿಘ್ನಗಳನ್ನು ಹೋಗಲಾಡಿಸುವ ಮಹಾಶಕ್ತಿ ನಿನ್ನದೆ ಅಲ್ಲವೆ?”

“ಆಗಲಿ” ಎಂದು ವಿನಾಯಕ.

ಒಂದು ಕಾಗೆಯ ರೂಪ ಧರಿಸಿದ. ಕಮಂಡಲವನನು ಉರುಳಿಸಿಬಿಟ್ಟ.

ಬುಳಬುಳನೆ ನೀರು ಹೊರಕ್ಕೆ ಹರಿಯಿತು.

ನೀರಿಲ್ಲದೆ ತಪಿಸುತ್ತಿದ್ದ ಭೂಮಿಗೆ ನೀರಿನ ಸ್ಪರ್ಶವಾಗಿ ನಲಿಯಿತು.

ಏನೂ ತಿಳಿಯದ ಅಗಸ್ತ್ಯರು ಸ್ನಾನ ಮುಗಿಸಿ ಬಂದು ಕಂಡದ್ದೇನು! ಕಮಂಡಲದಿಂದ ಬಿಡುಗಡೆ ಹೊಂದಿದ ಕಾವೇರಿ ಅಲೆಅಲೆಯಾಗಿ, ನೊರೆನೊರೆಯಾಗಿ, ಸುಳಿ ಸುಳಿಯಾಗಿ, ನಲಿನಲಿಯುತ್ತ ಪ್ರವಹಿಸಿ ಹೋಗುತ್ತಿದ್ದಾಳೆ. ಅಗಸ್ತ್ಯರಿಗೆ ಏನೂ ತೋರಲಿಲ್ಲ. ಅವರು ದುಃಖಿಸುತ್ತಾ, “ಕಾವೇರಿ, ಕಾವೇರಿ, ನನ್ನನ್ನು ಬಿಟ್ಟು ಹೊರಟು ಹೋದೆಯಾ” ಎಂದು ಕೂಗುತ್ತಾ ಅಲ್ಲೆಲ್ಲಾ ಅಲೆದಾಡಿದರು. ಕಾವೇರಿ ಅವರ ಕೈಗೆ ಸಿಕ್ಕಲಿಲ್ಲ!

ಗಣೇಶನು ಪ್ರತ್ಯಕ್ಷನಾದನು. ದೇವತೆಗಳೆಲ್ಲರೂ ಬಂದರು. “ಅಗಸ್ತ್ಯರೇ, ಚಿಂತಿಸಬೇಡಿರಿ. ನಿಮ್ಮ ಅನುಗ್ರಹದಿಂದ ಕಾವೇರಿ ಎಂದೆಂದಿಗೂ ನದಿಯಾಗಿ ಲೋಕಕ್ಕೆ ಉಪಕಾರ ಮಾಡಲು ಹೊರಟಿದ್ದಾಳೆ. ಅವಳೂ, ಅವಳ ತಂದೆಯೂ ಈ ರೀತಿ ಜನ್ಮ ಸಫಲವಾಗಲೆಂದು ಹಗಲಿರುಳೂ ಹಾತೊರೆಯುತ್ತಿದ್ದರು. ನೀವು ಯಾವಾಗ ಅವಳನ್ನು ನೀರನ್ನಾಗಿ ಪರಿವರ್ತಿಸಿದಿರೋ ಆಗಲೇ ಅವಳ ಇಷ್ಟಾರ್ಥ ನೆರವೇರಿದಂತಾಯಿತು. ಇನ್ನು ದೇಶದವರಿಗೆ ಧನ-ಧಾನ್ಯ ಸಮಪತ್ತುಗಳನ್ನು ನೀಡಲಿ. ಕೋಟಿ ಕೋಟಿ ಜನರನ್ನು ಕಾಪಾಡಲಿ. ಎಲ್ಲರ ಪಾಪವನ್ನೂ ಪರಿಹರಿಸುವ ಪುಣ್ಯವಾಹಿನಿಯಾಗಲಿ” ಎಂದು ಅಗಸ್ತ್ಯರನ್ನು ಬೇಡಿದರು. ಕಾವೇರಿಯೂ ಸಹ ತಮ್ಮ ಮುಂದೆ ನಮಸ್ಕರಿಸುತ್ತಾ “ನಾನೂ ನಿಮ್ಮನ್ನು ಹೇಳದೆ ನದಿಯಾಗಿ ಹೊರಟು ಬಿಟ್ಟೆ ಕ್ಷಮಿಸಿರಿ” ಎಂದು ಕೇಳತ್ತ ಬೇಡುತ್ತಿರುವಳಂತೆ ತೋರಿತು.

“ಹೌದು, ಕಾವೇರಿ ಎಷ್ಟೊಂದು ಜೀವಗಳನ್ನು ಕಾಪಾಡುತ್ತಿದ್ದಾಳೆ! ಲೋಕಕ್ಕೆ ತಾಯಿಯಾಗಿದ್ದಾಳೆ. ನನ್ನಿಂದ ಹಲ ಬಗೆಯ ಉಪಕಾರವಾಯಿತು; ಇನ್ನು ಇವಳಿಂದಲೂ ಈ ರೀತಿಯ ಉಪಕಾರವಾಗಲಿ” ಎಂದು ತೃಪ್ತಿಗೊಂಡ ಅಗಸ್ತ್ಯರು, “ಆಗಲಿ, ತಥಾಸ್ತು” ಎಂದು ಕಾವೇರಿಯನ್ನು ಆಶೀರ್ವದಿಸಿ, ದೇವತೆಗಳನ್ನು ಬೀಳ್ಕೊಟ್ಟರು. ಕಾವೇರಿ ದಕ್ಷಿಣ ಗಂಗೆಯಾಗಿ ಮೆರೆದಳು!

ಶ್ರೀರಾಮಚಂದ್ರನಿಗೆ ಮಾರ್ಗದರ್ಶಿ

ಅಗಸ್ತ್ಯ ಮಹರ್ಷಿಗಳು ದಂಡಕಾರಣ್ಯದಲ್ಲಿ ಅನೇಕ ಋಷಿಗಳ ಮಧ್ಯೆ ವಾಸಮಾಡುತ್ತಿದ್ದರು. ಗುರುಕುಲವನ್ನು ನಡೆಸಿ ಅನೇಕ ಶಿಷ್ಯರಿಗೆ ವಿದ್ಯೆ ಹೇಳಿಕೊಡುತ್ತಿದ್ದರು.

ಶ್ರೀರಾಮನು ಹದಿನಾಲ್ಕು ವರ್ಷಗಳ ಕಾಲ ಕಾಡಿನಲ್ಲಿ ವಾಸಮಾಡಬೇಕಾಯಿತು. ಹೆಂಡತಿ ಸೀತೆ, ತಮ್ಮ ಲಕ್ಷ್ಮಣ ಇವರನ್ನು ಕರೆದುಕೊಂಡು ಬಂದನು. ಹಲವರು ಋಷಿಗಳು ಅವರನ್ನು ತುಂಬ ಪ್ರೀತಿಯಿಂದ ಬರಮಾಡಿ ಕೊಂಡರು. ಅಲ್ಲಿಂದ ಶ್ರೀರಾಮ, ಸೀತೆ, ಲಕ್ಷ್ಮಣರು ಅಗಸ್ತ್ಯರು ಆಶ್ರಮಕ್ಕೆ ಬಂದರು. ರಾಮನು ಬರುತ್ತಾನೆ ಎಂಬುದನ್ನು ಬಹಳ ಮುಂಚೆಯೇ ತಮ್ಮ ತಪಃಶ್ಯಕ್ತಿಯಿಂದ ಅಗಸ್ತ್ಯರ ತಿಳಿದಿದ್ದರು. ಬಂದ ಅತಿಥಿಗಳನ್ನು ಗೌರವದಿಂದ, ಆದರಿಸಿ ಉಪಚರಿಸಿದರು. ರಾಮನಿಗೆ ವೈಷ್ಣವಧನಸ್ಸನ್ನೂ, ಅಕ್ಷಯ ತೂಣೀರವೆಂಬ ಬತ್ತಳಿಕೆಯನ್ನೂ ಕೊಟ್ಟರು. ಈ ಬತ್ತಳಿಕೆ ಯಾವಾಗಲೂ ಬಾಣಗಳಿಂದ ತುಂಬಿರುತ್ತಿತ್ತು. ಜೊತೆಗೆ ಅನೇಕ ದಿವ್ಯಾಸ್ತ್ರಗಳನ್ನೂ ಅನುಗ್ರಹಿಸಿದರು. ಅವರ ಅಪ್ಪಣೆಯಂತೆ ರಾಮ, ಲಕ್ಷ್ಮಣ, ಸೀತೆಯರು ಗೋದಾವರಿಯ ತೀರದಲ್ಲಿ ಪರ್ಣ ಶಾಲೆಯನ್ನು ರಚಿಸಿಕೊಂಡು ವಾಸ ಮಾಡಲು ತೆರಳಿದರು.

ಮುಂದೆ ರಾಮ-ರಾವಣ ಯುದ್ಧವನ್ನು ನೋಡಲು ನೆರೆದಿದ್ದ ಋಷಿಗಳಲ್ಲಿ ಅಗಸ್ತ್ಯರೂ ಒಬ್ಬರು. ರಾವಣನೂ ಮಹಾಪರಾಕ್ರಮಿ. ಶ್ರೀರಾಮಚಂದ್ರನಿಗೆ ರಾವಣನನ್ನು ಹೇಗೆ ಕೊಲ್ಲುವುದು ಎಂದು ಸಮಸ್ಯೆಯಾಯಿತು. ಆಗ ಅಗಸ್ತ್ಯ ಮಹರ್ಷಿಯು ಪರಮಪವಿತ್ರವಾದ “ಆದಿತ್ಯ ಹೃದಯ” ಎಂಬ ಸೂರ್ಯಮಂತ್ರವನ್ನು ಅವನಿಗೆ ಉಪದೇಶಿಸಿದರು. ಆ ಮಂತ್ರದ ಉಪಾಸನೆಯಿಂದ ಶ್ರೀರಾಮನು ಬಲ ಮತ್ತು ತೇಜಸ್ಸುಗಳನ್ನು ಸಂಪಾದಿಸಿದ, ಅನಂತರ ರಾವಣನ ಸಂಹಾರ ಮಾಡಿದ. ಲೋಕದಲಿ ಸುಖ-ಶಾಂತಿಗಳು ನೆಲಸಿದವು.

ಶ್ರೀರಾಮಚಂದ್ರ ಅಯೋಧ್ಯೆಯನ್ನು ಸೇರಿ ಲೋಕವನ್ನು ಆಳತೊಡಗಿದನು. ಅವನು ರಾವಣನನ್ನು ಕೊಂದು ಲೋಕದ ಚಿಂತೆಯನ್ನು ಪರಿಹರಿಸಿದ್ದ; ಆದರೂ ಅವನಿಗೆ ಅನೇಕ ಬಗೆಯ ಚಿಂತೆ ಆವರಿಸಿತು. ಹೀಗಿರುವಾಗ ಋಷಿಗಳ ಸಮೂಹವು ಅಗಸ್ತ್ಯರನನು ಮುಂದಿಟ್ಟುಕೊಂಡು ಶ್ರೀರಾಮನ ಸಂದರ್ಶನಕ್ಕೆ ಬಂದರು. ರಾಮನ ದುಃಖವನ್ನು ನೋಡಿದ ಅಗಸ್ತ್ಯರಿಗೆ ಕಾರಣ ತಿಳಿಯಿತು. ಬ್ರಹ್ಮನ ಮೊಮ್ಮಗನಾದ ರಾವಣನ ವಧೆಯಿಂದ ರಾಮನಿಗೆ ಆವರಿಸಿರುವ ಬ್ರಹ್ಮಹತ್ಯಾ ದೋಷವನ್ನು ತಮ್ಮ ಜ್ಞಾನದೃಷ್ಟಿಯಿಂದ ಅರಿತರು. ಇದರ ಪರಿಹಾರಕ್ಕಾಗಿ ‘ಅಶ್ವಮೇಧಯಾಗ’ವನ್ನು ನಡೆಸುವಂತೆ ತಿಳಿಸಿದರು.

ಅಗಸ್ತ್ಯರು ಪರಮ ಪವಿತ್ರವಾದ ‘ಆದಿತ್ಯ ಹೃದಯ’ ಮಂತ್ರವನ್ನು ಶ್ರೀರಾಮನಿಗೆ ಉಪದೇಶಿಸಿದರು.

ಇಂತಹ ಹಲವಾರು ಕೆಲಸಗಳಿಂಧ ಅಗಸ್ತ್ಯರು ಲೋಕಕ್ಕೆ ಪೂಜ್ಯರಾದರು. ಈಶ್ವರ ಮತ್ತು ಷಣ್ಮಖರ ಪರಮಭಕ್ತರಾದ ಇವರು ಅವರುಗಳ ಆಜ್ಞೆಯಂತೆ ತಮಿಳು ಭಾಷೆಯನ್ನು ಲೋಕದಲ್ಲಿ ಪ್ರಚಾರ ಮಾಡಿದರೆಂದು ಪ್ರಖ್ಯಾತವಾಗಿದೆ. “ತಮಿಳಿನ ತಂದೆ” ಎಂದು ಇವರನ್ನು ತಮಿಳು ದೇಶದ ಜನರು ಗೌರವಿಸುತ್ತಾರೆ. ಅಲ್ಲಲ್ಲೇ ಇವರು ಸ್ಥಾಪಿಸಿದ ಶಿವಲಿಂಗಗಳು ಇಂದಿಗೂ ಅಗಸ್ತ್ಯೇಶ್ವರನೆಂದು ಪ್ರಖ್ಯಾತವಾಗಿದೆ. ಅಗಸ್ತ್ಯ ತೀರ್ಥವೆನ್ನುವ ಕೊಳವು ದಕ್ಷಿಣ ದೇಶದಲ್ಲಿದೆ. ಇವರು ದಕ್ಷಿಣ ದೇಶಕ್ಕೆ ಬಂದ ಮೊದಲನೆಯ ಋಷಿಗಳಾದ್ದರಿಂದ ದಕ್ಷಿಣ ದಿಕ್ಕನ್ನು ಅಗಸ್ತ್ಯರ ಹೆಸರಿನಿಂದಲೂ ಕರೆಯುತ್ತಾರೆ. ಸಂಗೀತ ಕಲೆಯಲ್ಲಿ ಅದ್ವಿತೀಯರೆನಿಸಿದ ಇವರು ತಮ್ಮೊಡನೆ ವೀಣೆಯಲ್ಲಿ ಸ್ಪರ್ಧಿಸಿದ ರಾವಣೇಶ್ವರನನ್ನೂ ಸೋಲಿಸಿದರೆಂದು ಕಥೆಯುಂಟು. ಅವರು ಅನೇಕ ಶಿಷ್ಯರನ್ನು ಲೋಕಕ್ಕೆ ಕೊಟ್ಟರು; ವೇದಮಂತ್ರಗಳನ್ನು ರಚಿಸಿದರು; “ಗೃಹ್ಯಸೂತ್ರ”ವೆಂಬ ಶಾಸ್ತ್ರನಿರ್ಣಯ ಗ್ರಂಥವನ್ನು ಬರೆದರು; ಸುಪ್ರಸಿದ್ಧ ಲಲಿತಾ ಸಹಸ್ರನಾಮವನ್ನು ಪ್ರಚಾರಿಕ್ಕೆ ತಂದ ಕೀರ್ತಿ ಅಗಸ್ತ್ಯ ಲೋಪಾಮುದ್ರೆಯರದು.

ಅಗಸ್ತ್ಯರ ವಿಷಯವಾಗಿ ಹೇಳುವ ಎಲ್ಲ ಕಥೆಗಳಲ್ಲಿ ಎದ್ದು ಕಾಣುವುದು ಧೀರ ಮನಸ್ಸು ಅಲ್ಲವೆ? ಪರ್ವತವೇನು, ಸಾಗರವೇನು, ಎಲ್ಲವನ್ನೂ ಗೆಲ್ಲುವ ವಿಶ್ವಾಸ ಈ ಧೀರ ತಪಸ್ವಿಯದು. ಪರ್ವತ, ಸಾಗರ, ನದಿ-ಯಾವುದೇ ಆಗಲಿ, ಲೋಕಕ್ಕೆ ಉಪಕಾರಿಯಾಗಬೇಕು. ಮನುಷ್ಯರಾಗಲಿ, ರಾಕ್ಷಸರಾಗಲಿ ಲೋಕಕ್ಕೆ ಅಪಕಾರ ಮಾಡಿದರೆ ಶಿಕ್ಷೆಯೇ! ತಮ್ಮ ತಪಸ್ಸಿನಿಂದ ತಾವು ಒಬ್ಬರೇ ಎಲ್ಲ ದೇವತೆಗಳ ತೂಕಕ್ಕೆ ಸಮನಾಗಿ ತೂಗಿದರು, ಪರ್ವತ ಇವರಿಗೆ ತಲೆ ಬಾಗಿತು, ಸಮುದ್ರ ಇವರ ಅಂಗೈಯಲ್ಲಿ ಗುಟುಕು ನೀರಾಯಿತು- ಹೀಗೆ ಇವರ ವಿಷಯವಾಗಿ ಕೇಳುವ ಒಂದೊಂದು ಕಥೆಯೂ ಮನುಷ್ಯನ ಧೀರ ಚೇತನದ ಕಥೆ.

ಇವರ ಈ ಎಲ್ಲಾ ಕಾರ್ಯಗಳಿಂದ ಪ್ರೀತಿಗೊಂಡ ಭಗವಂತನು ಲೋಕದಲ್ಲಿ ಇವರ ಹೆಸರು ಶಾಶ್ವತವಾಗಿ ನೆಲಸಲಿ, ಇವರು ತಮ್ಮಿಂದ ಉದ್ಧಾರವಾದ ಈ ಲೋಕವನ್ನು ಸದಾ ಸರ್ವದಾ ನೋಡುತ್ತಾ ಸಂತೋಷಿಸುತ್ತಿರಲಿ ಎನ್ನುವ ಉದ್ದೇಶದಿಂದಲೇ, ಇವರನ್ನು ನಕ್ಷತ್ರವನ್ನಾಗಿ ಮಾರ್ಪಡಿಸಿದ್ದಾನೆ ಎಂದು ಜನ ಭಕ್ತಿಯಿಂದ ಭಾವಿಸುವುದರಲ್ಲಿ ಆಶ್ಚರ್ಯವಿಲ್ಲ.

ಇಂತಹ ಹಿರಿಯರ ಆಶೀರ್ವಾದ ನಮಗೆ ಎಂದೆಂದಿಗು ಲಭ್ಯವಿರಲಿ; ರಕ್ಷೆಯಾಗಿರಲಿ!