ಹೊಡೆದರೆ ಹೆಬ್ಬುಲಿಯನ್ನೆ ಹೊಡೆಯುತ್ತೇ-
ನೆಂದು ಹಗಲೂರಾತ್ರಿ ಹೆಗಲಿನ ಮೇಲೆ
ಹೊತ್ತು ಕೋವಿಯನ್ನು ಸುತ್ತೀ ಸುತ್ತೀ ಸುಸ್ತಾಗಿ
ಕಗ್ಗಾಡಿನಲ್ಲೊಂದು ಕಡೆ ಕೂತಿದ್ದಾನೆ

ಹಳೆಯ ಗುರಿಕಾರ. ಎಲ್ಲೋ ಉರಿವ ಸೂ-
ರ್ಯನ ಕಿರಣ ಎಲೆ ಎಲೆಯ ಜರಡಿ-
ಯಲ್ಲಿಳಿದು, ಬನಗತ್ತಲೆಯ ಮನದಲ್ಲಿ
ಬಿಡಿಸುತಿದೆ ನೆಳಲ ಚಿತ್ತಾರ. ಚಿಲಿ

ಪಿಲಿ ಹಕ್ಕಿ ಮರ ಮರದಲ್ಲಿ, ಆಗಾಗ ಜೀ-
ರುಂಡೆಗಳ ಕರಕರ ಕೊರೆತ. ಕಣ್ಣೆದುರು
ನಿರ್ಭಯವಾಗಿ ಧಾವಿಸುವ ಚುಕ್ಕೆ ಚುಕ್ಕೆಯ
ಚಿಗುರೆಗಳ ಜಿಗಿತ. ಹಂದಿಗಳ ಡುರುಕು

ಹತ್ತಿರದಲ್ಲೇ. ತನ್ನ ಸಪರಿವಾರಸಮೇತ
ಜಾತ್ರೆಗೆ ಹೊರಟ ಕಾಡು ಕೋಳಿಯ ಗತ್ತು
ಕಣ್ಣೆದುರಿಗೇ. ಕಾಡುವುದಿಲ್ಲ ಯಾವುದೂ ಈ
ನಮ್ಮ ಗುರಿಕಾರನಿಗೆ ಹೆಬ್ಬುಲಿಯ ಹೊರತು!

ಯಾರಿಗೆ ಬೇಕೀ ಅನಾಯಾಸವಾಗಿ ದಕ್ಕುವ
ಜುಜುಬಿ? ಬಾ ನನ್ನ ದೊಡ್ಡ ಪಟ್ಟೆಯ
ಹುಲಿಯೆ, ಕಾಡಿನ ದೊರೆಯೆ, ನನ್ನೆದೆಯ
ಕರೆಯೇ. ನಿನ್ನ ಕಣಿವೆಯ ಬಾಯ-

ನ್ನೊಮ್ಮೆ ತೆರೆದು ಮೊಳಗಲಿ ಕಾಡೆಲ್ಲ ಕಂ-
ಪಿಸುವಂತೆ ನಿನ್ನಬ್ಬರದ ಗುಡುಗು.
ಈ ಮಹಾರಣ್ಯ ಸಮುದ್ರದಲ್ಲಿ ನೀನೇ
ನನ್ನನ್ನು ಪಾರುಗಾಣಿಸುವ ಹಡಗು.