ಒಂದಲ್ಲ ಒಂದುದಿನ ನೀನೆಲ್ಲ ತೊರೆವೆ;
ಒಂದೆದೆಯೊಳೆಮ್ಮನದೊಳೆನ್ನೆದೆಗೆ ಬರುವೆ!

ನೂರು ಆವೇಶಗಳು, ನೂರಾರು ವೇಷಗಳು,
ರೋಷಸಂತೋಷಗಳು ಎಲ್ಲ ಕೊನೆಮುಟ್ಟಿ,
ಜೀವನೋದ್ಯಾನದಲಿ ಕುಸುಮ ವೃಂದದ ಕಾಂತಿ
ಮಸುಳಾಗಿ ಮೃತ್ಯು ಬರೆ ಬಾಗಿಲನು ತಟ್ಟಿ;

ಇಂದು ನಿನ್ನಯ ಕಣ್ಣ ಸೆಳೆವ ಕಣ್ಣುಗಳೆಲ್ಲ,
ಇಂದು ಕೆಂದುಟಿಗಳನು ಕರೆವ ಕೆನ್ನೆಗಳು,
ಇಂದಿನ ಯಶೋಲೋಭ, ಇಂದಿನ ಮಹತ್ಕಾಂಕ್ಷೆ,
ಅಂದೆಲ್ಲ ನಿನಗಹವು ಬರಿಯ ಸೊನ್ನೆಗಳು,

ಅಂದು ನನ್ನೊಬ್ಬನನೆ ನೆನೆವ ನಿನ್ನೆದೆಯಲ್ಲಿ
ಬೇಳಕುಹೊಳೆ ಹರಿಯುವುದು ಕತ್ತೆಲೆಯ ಕೊಚ್ಚಿ:
ಜಗವೆಲ್ಲ ಜಾರುವುದು; ಒಲ್ಮೆ ಮೈದೋರುವುದು;
ಬಾಳ್ವೊನಲು ಹರಿವುದೆನ್ನನೆ ನಚ್ಚಿ ನೆಚ್ಚಿ!