ಆಕ್ರಮಿಸು ಬಂದೆನ್ನ ಅಲ್ಪತ್ವಮಂ,
ಓ ಅನಂತ,
ಬಾಳರಳಿ ಬರ್ದುಕುರುಳಿ ಸಿದ್ಧಿಸುವವೋಲ್
ನಿರ್ದಿಗಂತ!
ಏಳು ಕಡಲುಗಳೆದ್ದು ಗಿರಿಶಿಖರವೇಳನೂ
ಅವ್ವಳಿಸುವೋಲ್,
ಏಳು ಶಿಖರಗಳೆರಗಿ ಕಡಲೇರಳರಾಳವೂ
ತಳಮಳಿಸುವೋಲ್;
ಆಕ್ರಮಿಸು ಬಂದೆನ್ನ ಅಲ್ಪತ್ವಮಂ,
ಓ ಅನಂತ. —

ಪಾತಾಳದಿಂದಂಬರಕೆ ಹೆಡೆಯೆತ್ತುವೋಲ್
ಅಗ್ನಿಶೇಷ.
ಕೋಟಿವಿದ್ಯುಜ್ಜಿಹ್ವೆಗಳ್ ತಿವಿಯೆ ತವಿವಂತೆವೋಲ್
ತಿಮಿರದೋಷ,
ಪಾವೊಡವೆ, ಬೆಂಕೆಗಣ್, ಗಂಗೆಮುಡಿ, ಓ ಬಾರ,
ವ್ಯೋಮಕೇಶ! —
ಆಕ್ರಮಿಸು ಬಂದೆನ್ನ ಅಲ್ಪತ್ವಮಂ
ಓ ಅನಂತ.