ಸೂತ್ರಧಾರಿಣಿ ನೀನು; ಪಾತ್ರಚಾರಿಯು ನಾನು
ಯಾವ ಪತ್ರವನಿತ್ತರೇನು ನೀನೆನಗೆ?
ನಿನ್ನ ಅಧ್ಯಕ್ಷತೆಯ ಈ ನಿನ್ನ ಲೀಲೆಯಲಿ
ಪರಮಪುರುಷಾರ್ಥರೂಪಿಣಿ ನೀನೆ ಕೊನೆಗೆ!

ಚವರಿವಿಡಿದರೆ ಮೇಲೆ? ಪೊರೆಕೆವಿಡಿದರೆ ಕೀಳೆ?
ಮಾಳ್ಪ ಕೆಲಸಗಳೆಲ್ಲ ನೈವೇದ್ಯವಾಗೆ!
ರಸಭೇಧವಿಹುದೆ ಸುಖದುಃಖಗಳಿಗಾಟದಲಿ
ಜೀವ ಭಾವವೆ ಸಚ್ಚಿದಾನಂದವಾಗೆ?

ಸಚ್ಚಿದಾನಂದರೂಪಿಣಿ ನೀಂ, ಜಗದ್ಧಾತ್ರಿ,
ಮೆಚ್ಚುವಂದದಿ ನಾಂ ನಡೆಯೆ ಪಾತ್ರಚಾರಿ
ಹೆಚ್ಚು ಕಡಿಮೆಯ ಹೆಮ್ಮೆ ದೈನ್ಯದ ವಿಭೇದವದು
ಹುಚ್ಚು ಬೆಮೆಯಲ್ತೆ, ಓ ಋತುಸೂತ್ರಧಾರಿ!