ನನಗೆ ಅವಸರವಿಲ್ಲ, ಮತ್ತೆ ಬೇಸರವಿಲ್ಲ:
ಬೇಗ ಬರಲಿಲ್ಲೆಂದು ನೋವಿದ್ದರೂ
ಕೋಪವೂ ಇಲ್ಲ, ಔದಾಸೀನ್ಯವೂ ಇಲ್ಲ;
ಕಾಯುವೆನು ನೀನೆದೆಗೆ ಬರುವನ್ನೆಗಂ!

ಕೊನೆಯಿಲ್ಲದೆನ್ನಯ ನಿರೀಕ್ಷಣೆಯ ನಯನದಲಿ
ಹನಿ ತುಂಬಿ ಕಂಪಿಸುತ್ತಿಹುದಾದರೂ
ಬಗೆಯಲ್ಲಿ ಹೊಗೆಯಿಲ್ಲ; ಹಗೆತನದ ಸೋಂಕಿಲ್ಲ;
ಕಾಯುವೆನು ನೀನೆದೆಗೆ ಬರುವನ್ನೆಗಂ:

ದೇಶವಿನಿತನು ಬಿಡದೆ ಕಾಲವೆಲ್ಲವನಲೆದು,
ಮಾಡುವಾಟವೆನೆಲ್ಲ ಮಾಡಿ ಯಾಡಿ
ಮೈ ಸೊರಗಿ ಬೇಸತ್ತು, ಸಾಕಾಗಿ ಸೋತು ನೀ
ಕಾತರದಿ ಹಾತೊರೆದು ಬರುವನ್ನೆಗಂ,
ಕಾಯುವೆನು ನನ್ನೆದೆಗೆ ಬರುವನ್ನೆಗಂ!