ಧ್ಯಾನ ನದಿಯಲಿ ಕಲ್ಪನೆಯಲಿ ನಾವೆಯಲಿ ತೇಲಿ
ದಕ್ಷಿಣೇಶ್ವರಕೈದಿ ನಾ ಬಾಳುತಿರೆ ಮರಳಿ
ಕಳೆದ ಕಾಲದಲಿ, ಚಿಮ್ಮುವುದು ನನ್ನೆದೆಯರಳಿ
ಪೂತ ಸಾನ್ನಿಧ್ಯದಲಿ ರೋಮಾಂಚನವನು ತಾಳಿ!

ಗಗನ ವಿಸ್ತೀರ್ಣತೆಯ ನೀಲ ಮೌನ ಸಮಾಧಿ,
ಪಂಚವಟಿ ವಿಟಪಿವೃಂದದ ವಿಹಂಗಮ ಗಾನ,
ಮಂದ ಮಂದಾಕಿನಿಯ ಗಂಭೀರ ಕಲತಾನ,
ಜಗದಂಬೆಯಾಲಯದಿ ಪರಮಹಂಸನ ಬೋಧಿ!

ನೀನೆನ್ನ ಜೀವನ ಚಿರಂತನಧ್ರುವತಾರೆ,
ಸರ್ವ ರುಚಿ ಭಾವ ಸಂಸ್ಕಾರಗಳ ಸ್ಪರ್ಶಮಣಿ,
ಆಶೆ ಆಕಾಕ್ಷೆ ಆದರ್ಶಗಳ ರತ್ನಖನಿ,
ಹೇ ಸಮನ್ವಯಮೂರ್ತಿ! ನೀನಿಳೆಗೆ ಮೈದೋರೆ
ಮುಕ್ತಿಯರಳಿತು ಧರ್ಮಸೇವಾ ತಪಸ್ಸಿನಲಿ
ಮನುಜ ಗೌರವ ಗಿರಿಯ ಮಾನಸ ಸರಸ್ಸಿನಲಿ!