ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಓ ಭವವಿದೂರ,
ಮಣ್ತನಕೆ ಮರತನಕೆ ಮಿಗತನಗೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿಂದೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!
ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,
ದೇಶದೇಶದಿ ವೇಷವೇಷಾಂತರವನಾಂತು
ವಿಶ್ವ ಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,
ಅವತರಿಸು ಬಾ ಇಲ್ಲಿ ಇಂದೆನ್ನ ಜೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!