ಓಡಿದೆ ನಾ
ಹಗಲಿರುಳೇಣಿಯು ಧುಮುಧುಮುಕಿಳಿದು;
ಓಡಿದೆ ನಾ
ಕೋಟಿ ಕಮಾನಿನ ಕಾಲವ ತುಳಿದು;
ಓಡಿದೆ ನಾ
ನುಗ್ಗುತ್ತಾಶಾ ಮಂಟಪ ತತಿಗೆ
ನಲ್ಮೆಯ ತೆರೆ ಮೇಲಾಡುತ್ತಂ
ಮುಗ್ಗಿ ನಿರಾಶಾ ಶೈಲಕ್ಷಿತಿಗೆ
ನೋವಿನ ನದಿಯೊಳಗಾಳುತ್ತಂ,
ಮನಸಿನ ಗುಹೆಯಾ ಮಾ ಪಾತಾಳದಿ
ಜಟಿಲ ವಿರೂಪದ ಶತಪಥ ಜಾಲದಿ
ದೈತ್ಯಾಕಾರದ ತಿಮಿರ ವಿಕಾರದ
ಭಯ ಭೇತಾಳದ ಬೆನ್ನೇರಿ,
ಓಡಿದೆ ನಾ
ದೇವ ಕಿರಾತನ ಮೃಗಯಾ ಪದದಿಂ
ಯಮ ಗಮನದ ಸ್ವರ್ಗಶ್ವಾಪದದಿಂ
ತೆರವಾಯ್ ಜಿಹ್ವೆಯ ಸರಮಾ ರದದಿಂ
ದೂರಕೆ, ನಿಡೂದೂರಕೆ ಹಾರಿ!


ನಿಶ್ಚಯ ಗತಿಯಿಂ
ದೃಢಹಠ ಮಿತಿಯಿಂ
ವಿದ್ಯುದ್ವೇಗದ ಸ್ವರ್ಗಶ್ವಾನಂ
ಬಂದುದು ಅಟ್ಟಿ,
ಬಂದುದು ಮುಟ್ಟಿ;
ಕೇಳದೊ ಕರ್ಕಶ ಕಂಠಧ್ವಾನಂ;
“ನನ್ನಾ ವೈರಿಗೆ ಪ್ರೇಮಿಗಳಿಲ್ಲ:
ನನ್ನಾ ದ್ರೋಹಿಗೆ ದ್ರೋಹಗಳೆಲ್ಲ!”


ಹೃದಯದ ನಾನಾ ರಮ್ಯ ಗವಾಕ್ಷಕೆ
ಪೀತಾಂಬರವುಡಿಸಿ,
ಮಣಿ ತೋರಣ ತೊಡಿಸಿ,
ದಾನದ ಧರ್ಮದ ಬಿಡಿ ಹೂ ನೆಯ್ದೆ;
ಪತಿತನವೋಲಾಂ ಪ್ರಾರ್ಥನೆ ಗೆಯ್ದೆ;
(ಸ್ವರ್ಗ ಶ್ವಾನ ಪ್ರೇಮವನರಿತೂ
ಸುಮನೋಕೇತುಗೆ ಬೆದರಿದ್ದೆ;
ಬರಲವನನ್ಯಕ್ಕೆಲ್ಲಾ ಶೂನ್ಯಂ
ಎಂದವಿಚಾರದಿ ಹೆದರಿದ್ದೆ.)
ಬಿಚ್ಚಲ್ಕಗಲಕೆ ಗವಾಕ್ಷ ಭಾಗಂ
ಮುಚ್ಚಿತ್ತವನಾಗಮನದ ವೇಗಂ:
ಅಪ್ಪಲಾಶಿಸಿದಂತೆ ಪ್ರೀತಿ
ತಪ್ಪಲಾಶಿಸಲಿಲ್ಲ ಭೀತಿ.


ಜಗದಂಚಿನ ತುದಿಯಾಚಿಗೆ ದಾಟಿದೆ;
ಮುಗಿಲಾಕಾಶದ ಮೋರೆಯ ಮೀಟಿದೆ;
ತಾರಾಲೋಕದ ಸ್ವರ್ಣದ್ವಾರದಿ
ಢಣ್ಣನೆ ನೂಂಕಿದೆನಾಶ್ರಯಕೆ;
ಚಂದ್ರ ಮಂಡಲದ ಚಂದ್ರಶಾಲೆಯಲಿ
ಠಣ್ಣನೆ ಘಂಟೆಯ ಘೋಷಿಸಿದೆ.
ಬೆಳಗಿಗೆ ಬೇಗಂದೆ:
ಸಂಧ್ಯಾ ಸುಂದರ ಕುಸುಮ ದುಕೂಲದಿ
ಮರೆಮಾಡನ್ನಂ ಬೇಗೆಂದೆ.
ಬೈಗಿಗೆ ಹೋಗೆಂದೆ:
ಪ್ರೇಮ ಭಯಂಕರ ರಾಹುವಿನೆನ್ನಂ
ರಕ್ಷಿಸೆ ಬೇಗನೆ ಹೋಗೆಂದೆ.
ಆತನ ದೂತರನಾಶ್ರಯ ಬೇಡಿದೆ
ನಾನಾ ಲೋಭದ್ರೋಹದಲಿ:
ಸ್ವಾಮಿಭಕ್ತರವರೆನ್ನನೆ ವಂಚಿಸಿ
ಮೆರೆದರು ಮೋಸದ ಸೇವೆಯಲಿ,
ದ್ವೇಷಪ್ರೇಮದಲಿ.
ಗಾಳಿಯ ಬೇಡಿದೆ; ಮಿಂಚನು ಕೋರಿದೆ;
ವೇಗದ ಕೇಸರವನೆ ತುಡುಕೇರಿದೆ.
ಬಾನ್ನೀಲಿಯ ಹೆಬ್ಬಯಲನೆ ಅಲೆಯಲಿ,
ಮುಗಿಲಿನ ತೇರಿನಲಿ
ಗುಡುಗಿನ ಸಾರಥಿ ಸಿಡಿಲಿನ ಕುದುರೆಗೆ
ಬಡಿಯಲಿ ಮಿಂಚಿನಲಿ,
ಅಪ್ಪಲಾಶಿಸಿದಂತೆ ಪ್ರೀತಿ
ತಪ್ಪಲಾಶಿಸಿಲಿಲ್ಲ ಭೀತಿ.


ನಿಶ್ಚಯ ಗತಿಯಂ
ದೃಢಹಠ ಮತಿಯಿಂ
ವಿದ್ಯುದ್ವೇಗದ ಸ್ವರ್ಗಶ್ವಾನಂ
ಬಂದುದು ರೇಗಿ
ಬಂದುದು ಕೂಗಿ.
ಕೇಳದೋ ಕರ್ಕಶ ಕಂಠಧ್ವಾನಂ:
“ನನಗಾಶ್ರಯವೀಯದ ನಿನಗೆಲ್ಲಿ
ವಿಶ್ವದೊಳನ್ಯಾಶ್ರಯವಿನ್ನೆಲ್ಲಿ?”


ತೃಪ್ತಿಯನರಸಿದೆನಯ್ಯೋ ವ್ಯರ್ಥಂ
ನರ ಯೌವನ ಮುಖ ರಂಗದಲಿ.
ಆದರದೇನದೋ ಮಿನುಗಿತ್ತದೊ ಆ
ಶಿಶು ನಯನದ ದಿವ್ಯಾಂಗದಲಿ:
ದಿಕ್ಕಿಲ್ಲದೆದೆಗೆ ಮಕ್ಕಳೆ ದಿಕ್ಕು;
ದುಃಖವನಳಿಸುವುದವರದೆ ಹಕ್ಕು
ಎಂದಾ ಕಡೆ ತಿರುಗಿತು ಆಸೆ.
ಮುದ್ದುಗಣ್ಗಳಲಿ ಮೂಡುತ್ತಿತ್ತು,
ಏನೋ ಉತ್ತರವಾಡುತ್ತಿತ್ತು
ಪ್ರತ್ಯುತ್ತರ ಭಾಷೆ:
ಅಯ್ಯೋ ಭೋಂಕನೆ ದುರ್ವಿಧಿ ಬಿತ್ತು;
ಆ ಕಣ್ ಬೆಳಕೊ ಮುಚ್ಚಿತ್ತು!
“ಮರ್ತ್ಯರ ಮಕ್ಕಳೆ, ಹೋದರೆ ಹೋಗಿ.”
ನೊಂದೆಂದೆನು ರೇಗಿ,
“ಪ್ರಕೃತಿಯ ಪುತ್ರರೆ, ನೀವೈತನ್ನಿ;
ತುಟಿಯಂ ತುಟಿಗೊತ್ತುತ್ತೆ ಬನ್ನಿ,
ಮುತ್ತಿಡುತೈತನ್ನಿ.
ಬನ್ನಿರಿ ಎದೆಗೆದೆಯನೋತ್ತಿ,
ತೋಳ್ ಸುತ್ತಿ,
ಕೆದರಲಿ ತುಂಬಿಯ ಮುಂಗುರುಳು;
ಸಿಂಗರಿಸಲಿ ಹೊಸ ಹೂವರಳು;
ತುಂಬಲಿ ನಿಮ್ಮೆದೆಯಂ ಮಕರಂದಂ,
ತುಂಬಲಿ ನಮ್ಮೊಡಲಂ ಪೂವಂದಂ,
ತುಂಬಲಿ ಲೋಕವನಮರಾನಂದಂ!
ತುಂಬಿತು  ಬಯಸಿದವೋಲಂತೆ:
ನನಗೊದಗಿತು ಸುಖಸಂಗದ ಸಂತೆ;
ಪ್ರಕೃತಿಯೆ ತಾನಾದಳು ಸುರಕಾಂತೆ,
ಗಗನ ವದನ ಮಣಿನೀಲೋತ್ಪಲದಿ
ಮುಗಿಲಿಂದಿಂದಿರ ಲೀಲೆಯ ಕಂಡೆ;
ಸಾಗರ ಪರ್ವತ ನದಿವನ ಕುಲದಿ
ಹೃದಯದ ನಾನಾ ರಸಗಳನುಂಡೆ;
ಹಗಲಿನ ಕಡೆಯಲ್ಲಿ
ಮುಳುಗುವ ಸೂರ್ಯನಿಗೋಕುಳಿ ಹೊಯ್ದು,
ಗಗನದ ಗುಡಿಯಲ್ಲಿ
ತಾರೆಯ ಸೊಡರಿನ ಮಾಲೆಯ ನೆಯ್ದು
ಧ್ಯಾನಿಪ ಸಂಧ್ಯಾ ಮೌನದಲಿ
ಮೌನಿಯಾದೆ ನಾ ಧ್ಯಾನದಲಿ.
ಪ್ರಾತಃ ಸುಂದರ ರಾಗಸಮುದ್ರದಿ
ಮಿಂದೆನು ವಿಹಂಗಗಾನದಲಿ,
ನಲಿದೆನು ತರಂಗಸ್ನಾನದಲಿ.
ಪ್ರಕೃತಿಯ ಜೊತೆಯಲಿ ಮರುಗಿದೆ, ನಲಿದೆ,
ಮುದ್ದಾಡಿದೆನೊಡನಾಡಿದೆನೊಲಿದೆ.
ಮರ್ತ್ಯದ ಮುಖವನಮರ್ತ್ಯದ ಮುಖಕೆ
ಚಾಚಿದೆ; ಆ ತ್ರಿದಶಾಮೃತ ಸುಖಕೆ
ಸಂಗಮಿಸಿತು ಈ ಲೋಕಾಶ್ರು,
ಶೋಕದ ಲವಣಾಶ್ರು.
ಸಾಯಂ ವಕ್ಷದ ಜ್ವಾಲಾಹೃದಯಕೆ
ನನ್ನದೆಯನ್ನೋತ್ತಿ
ಬಯಕೆಯ ಕೊರಳೆತ್ತಿ
ಹಾರೈಸಿದೆನೈ ಜ್ಯೋತಿಯ ಉದಯಕೆ.
ಆದರದೇನೀ ಮಾನವ ಹೃದಯಕೆ
ಮೈದೋರಿತೆ ತೃಪ್ತಿ?
ಪ್ರಕೃತಿಯ ಕೆನ್ನೆಗೆ ಸುರಿಸಿದ ಕಣ್ಬನಿ
ಅಯ್ಯೋ ಬರಿವ್ಯರ್ಥ.
ಮಾತಿನ ಪ್ರಶ್ನೆಗೆ ಮೌನವೆ ಉತ್ತರ;
ನಿಃಶಬ್ದಕೆ ಹೇಳೇನರ್ಥ?
ಬಲತಾಯಿಯೊ ಬರಿ ದಾದಿಯೊ ಆಕೆ;
ನನ್ನಾತ್ಮದ ತೃಷೆಗವಳೆದೆ ಸಾಕೆ?
ನೀಲಾಕಾಶದ ಸೆರಗನು ಕೆಲಕೆ
ತಾಯಾದರೆ ನೀನೋಸರಿಸು,
ಓ ಪ್ರಕೃತಿ,
ಅಮೃತದ ಬೆಳ್ದೊರೆಯಂ ಸುರಿಸು.
ಇಲ್ಲಾ,
ಎಂದೆಂದೂ ಇಲೊಮ್ಮೆಯು ಇಲ್ಲ;
ಅವಳೆದೆ ಹಾಲಿಂದೆನ್ನೆದೆಯುರಿತೃಷೆ
ಎಂದೂ ಆರಿಲ್ಲ!


ವಿದ್ಯುದ್ವೇಗದಿ
ದೃಢಹಠರಾಗದಿ
ಹತ್ತಿರ  ಹತ್ತಿರೆ ಬಂದುದು ತಾಗಿ
ಕ್ರೂರ ಕಿರಾತನ
ಕರುಣ ಸುದರ್ಶನ;
ಅದೊ ಕೇಳದೊ ಘೂರ್ಣಿಸುತಿದೆ ಕೂಗಿ:
“ಎಲವೋ ನನಗರ್ಪಿಸದಾ ಶಾಂತಿ
ನಿನಗೈತರ್ಪುದೆ? ಬಿಡೆಲಾ ಭ್ರಾಂತಿ!”


ಶರಣಾದೆನಿದೋ ರಿಕ್ತಾನಾಥಂ;
ಕೊಂದರೆ ಕೊಲಲಿ ಕಠೋರ ಕಿರಾತಂ.
ಹೊತ್ತಾ ಭಾರಕೆ ಕತ್ತರಿಯಾಗಿ
ಮೇಣೆನ್ನಾಸೆಗೆ ಹತ್ತರಿಯಾಗಿ
ನೀನೆನ್ನಂ ಸುಲಿದೆ,
ಸೋಲಿಸಿದೆ;
ನಾನಿದೊ ಶರಣಾದೆ
ಪದತಲದೆ.
ನಿದ್ದೆಯಿನೆದ್ದೆನೆ? ಕನಸಂ ಕಂಡನೆ?
ಮಲಗಿದ್ದಾಗಳೆ ಬತ್ತಲೆಗೊಂದೆನೆ?
ಯೌವನ ಶಕ್ತಿಯ ರಾಗೋನ್ಮಾದದಿ
ಮೇಣವಿವೇಕದ ಭೋಗಾಮೋದದಿ
ಬಾಳ್ಗುಡಿ ತಳಹದಿಯನೆ ಕಿತ್ತು
ಕೊಡಹಿದೆ; ಮೈಮೇಲೆಯೆ ಬಿತ್ತು
ಆ ಗೋಪುರ ಭಾರಂ.
ಮಮ ತಾರುಣ್ಯದ ಭದ್ರಕಾರಂ
ಛಿದ್ರಂ ಬಿದ್ದಿದೆ ಪಾಳಿನ ಮಧ್ಯೆ,
ಬಾಡೆಲ್ವಿನ ನುರಿಮುರಿ ಮುದ್ದೆ:
ಬಾಳಿನ ಹೂವನೆ ನುಂಗಿತೆ ನಿದ್ದೆ?
ಬಿರಿದುದೆ ಆ ಸವಿ ಹೊಂಗನಸು?
ಪೃಥ್ವೀಗೋಲದ ಗೋಲಿಯ ಮಾಡಿ
ಸೂರ್ಯ ಬಿಂಬವನೆ ಗುರಿನೋಡಿ
ಕಲ್ಪನೆಯೆಸೆದಾ ಕ್ರೀಡಾ ವಿದ್ಯೆ,
ಓಕುಳಿಯಾಟದ ರಸಮನಸು?
ಗೋಳಿಡಿದೀ ಗೋಳದ ಭಾರಕ್ಕೆ
ಸಾಲ್ವುದೆ ಆ ಮಿಥ್ಯೆಯ ರೆಕ್ಕೆ?
ಕೆಡೆದುರುಳಿತೊ ಪಾತಾಳಕ್ಕೆ
ಆ ಸ್ವಪ್ನ ಪ್ರಾಣಿ!
ಕೃಪಣವೆ ತವಕೃಪೆ, ಕೃಪಾಣಪಾಣಿ?
ನಿನಗಲ್ಲದ ಸೇವೆ
ನಿನಗೆದೆ ನೋವೆ?
ಪ್ರಾಣದ ಪೊನ್ನಂ ನಿನ್ನುರಿಕಲ್ಪಿ
ಕರಗಿಸಿದಲ್ಲದೆ
ಕರುವಿಡೆ ಸಲ್ಲದೆ,
ಓ ಮಾಯಾ ಶಿಲ್ಪಿ?
ಕಿಸಲಯ ಚಾಂಚಲ್ಯ,
ಹುಡಿಯಲಿ ಲಯವಾಯೆನ್ನಾ ಬಾಲ್ಯ;
ಮದಗಜವದು ನುಗ್ಗೆ
ಸಿಡಿದುದು ಯೌವನದೋಕುಳಿ ಬುಗ್ಗೆ
ಕಣ್ಣೀರಿನ ಕೊಚ್ಚೆ
ಜೀವನ ಪಂಕಜವನು ಮುಚ್ಚೆ
ಬಾಳ್ಗೇಡಿಗೆ ಗತಿ ಮುಂದಿಹುದೆ?
ತಿರುಳಿದೆ ಕಹಿಯಾದರೆ, ಆ ಸಿಪ್ಪೆ?
ಈ ಲೋಕವೆ ಸಪ್ಪೆ;
ಆ ಲೋಕದ ಬದುಕೇನುಪ್ಪಹುದೆ?
ಇಂತಾಂ ಚಿಂತಿಸುತಿದ್ದಂತೆ,
ಕಗ್ಗತ್ತಲೆಗುರಿಬಿದ್ದಂತೆ,
ಬೊಮ್ಮದ ಗುಮ್ಮಟದಾ ಕಡೆಯಿಂದ
ನೀಲ ಅನಂತದ ಕೊತ್ತಳದಿಂದ
ಸಂಶಯವನು ಸೀಳಿ
ಸದ್ದೆಲ್ಲಂ ಮೀರಿ
ಅದೊ ಬಂದುದು ಶಂಖಧ್ವನಿ ಕೇಳಿ,
ಶ್ರದ್ಧೆಯ ತುತ್ತೂರಿ!
ತಿರುಗಿದೆ, ನೋಡಿದೆ, ತೆಕ್ಕನೆ ಕಂಡೆ
ತೂರ್ಯಧ್ವನಿಗೈದಾತನು,
ಕರುಣಾಕೇತುವನು;
ಜ್ಯೋತಿರ್ಜ್ವಾಲಾ ಕೇತನ ಮಾಲಾ
ದೋಲಿತ ದುವ್ಯ ವರೂಥನನು;
ದೈತ್ಯಕಿರಾತಕನು;
ಕೇಸುರಿ ಕೇಸರಿಪೀಠನು,
ವಿದ್ಯುತ್ಖಚಿತ ಕಿರೀಟನನು.
ತಿವಿಯಿತು ತಿಮಿರಕೆ ಆ ಕ್ಷಣಕಾಂತಿ;
ಕ್ಷಣಮಾತ್ರಂ ತೊಲಗಿತು ಕಣ್ ಭ್ರಾಂತಿ;
ಕ್ಷಣದರ್ಶನವಿತ್ತಿತ್ತು ಶಾಂತಿ:
ಜೀವನ ಕರ್ಮವೊ ಜೀವಿಯ ಧರ್ಮವೊ
ಪೈರಾವುದೆ ಕೊಯ್ಲಾಗಲಿ ನಿನಗೆ,
ಮಸಣದ ಬಿತ್ತನೆಗೆ
ನೋವಿನ ಗೊಬ್ಬರ, ಸಾವಿನ ಬಿತ್ತು,
ಹೊಲವುಳುವೊಕ್ಕಲಿಗನೊ ಮೃತ್ಯು!


ಆ ಆನಿವಾರ್ಯಂ
ಮೃಗಯಾತೂರ್ಯಂ
ಭೋರಿಡುತಿದೆ ಸಮ ಸಾಗರ ಘೋಷಂ:
“ಹೊರೆ ಭಾರಾಯ್ತೆ?
ತಿರೆ ಚೂರಾಯ್ತೆ?
ಬತ್ತಿತೆ ನಿನ್ನಾ ವೇಗವೇಶಂ?
ಓಡಿದರೆನ್ನಿಂದೋಟವೆ ನಾಶಂ!
ನನ್ನಿಂದೋಡುವಗೆಲ್ಲಿಯೊ, ಬಡಪಾಯಿ,
ಛಿಃ ಕ್ಷುದ್ರಪ್ರಾಣಿ,
ಗತಿಯೇನೈ ಹಗೆಯಾದರೆ ತಾಯಿ?”
ಜೇಗೈದುದು ಆ ಪಿನಾಕ ವಾಣಿ:
“ಭೀತಿಯಿನೋಡುವನರ್ಹನೆ ಪ್ರೀತಿಗೆ?
ಒಲಿಯುವರಾರೈ ಭೀರು ಕುನೀತಿಗೆ
ನಾನಲ್ಲದೆ ಬೇರೆ?
ನನ್ನಿಂದಲ್ಪತೆಗಾಯ್ತು ಮಹತ್ವಂ
ನಿನ್ನೊಳು ಮೈದೋರೆ.
ನಿನಗೆಲ್ಲಿಯೊ ಆ ಸುಕೃತದ ಸತ್ವಂ?
ಕರ್ಮಕೆ ತಕ್ಕಂತೆಯೆ ಪುಣ್ಯಂ;
ನೀನೆತ್ತಣ ಧನ್ಯಂ? —
ನಾನಲ್ಲದೆ ನಿನಗಾವುದೊ ದಿಕ್ಕು?
ನನಗಲ್ಲದೆ ನಿನ್ನಾತ್ಮದ ಹಕ್ಕು?
ಬಿಡೊ ಸಾಲ್ಗುಂ ಸೊಕ್ಕು!
ಸುಲಿದೆನು ನಿನ್ನಾ ಬಾಳಿನ ಸೊತ್ತಂ;
ವಂಚಿಸಲೆಂದಲ್ಲ.
ಬುತ್ತಿಯ ಕಟ್ಟಿಹೆನೆನ್ನೊಳೆ ಮತ್ತಂ
ಸಾಧಿಸಿ ಪಡೆಯಲಿ ಎಂದದನೆಲ್ಲ.
ಹೋಯ್ತೆಂದುಳುವೆಯೊ? ಬಿಡು ಶಿಶುಬುದ್ಧಿ:
ಕೊನೆಯೊಳಗಾಗುವುದನಿತೂ ಸಿದ್ಧಿ;
ಬಾ ಆ ಕೊನೆಗೆ.
ಮೇಲೇಳಿಗೊ ಕೈಹಿಡಿ, ನಡೆ ಮನೆಗೆ!”

೧೦
ಇರಿಯಿತ್ತೆದೆಯಂ ದಯಾತ್ರಿಶೂಲಂ;
ಬಿರಿಯಿತ್ತೊರ್ಮೆಯೆ ಮಾಯಾಮೂಲಂ.
ಚಿಮ್ಮಿತ್ತಾರಕ್ತಾಮೃತ ನಾಕಂ;
ತೇಲಿತು ತೀರ್ಥದಿ ಲೋಕಂ, ಶೋಕಂ! —
“ನೀನಾಶೀರ್ವಾದಕೆ ನೀಡಿದ ಬಾಹು
ಮಾಡಿದ ಛಾಯೆಯೆ ಆ ರಾಹು?
ಅಥವಾ ನಿನ್ನಯ ಕರುಣೆಯ ಲೀಲೆ
ಆ ಮೃಗಯಾವೇಶದ ಕೇತು?
ದಿವದಿಂ ನರಕಕೆ ಮರ್ತ್ಯದ ಮೇಲೆ
ತವ ದಯೆ ಬೀಸಿದ ವಾತ್ಸಲ್ಯದ ಸೇತು?”
ಒಲಿದಾಲಿಂಗಿಸಿ ಬಳಿ ನಿಂದು
ಸಂತೈಸಿತು ಕೃಪೆ ಇಂತೆಂದು:
“ಅಹುದೈ, ಕಂದ,
ನಾ ನೀ ಅರಸುವ ಆನಂದ!
ಸಂಕಟವಲ್ಲದೆ ಸುಖವೆಲ್ಲಿಂದ
ನೀನಕಟಾ
ಓಡಿದರೆನ್ನಿಂದ?”